ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಆಗಸ್ಟ್ 5, 2010

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು |
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು ||

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು |
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು ||


ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ |
ಸಂಬಂಧ ಉಳಿಸುವ ಕಳಕಳಿಯ ಮಾತು ||


ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ |
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು ||


ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು |
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು ||


ದಾರಿಯದು ಸರಿಯಿರಲಿ ಅನೃತವನಾಡದಿರಿ |
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ ||


ಗೌರವಿಸಿ ಹಿರಿಯರ ಕಟುಮಾತನಾಡದಿರಿ |
ಅಸಹಾಯಕರ ಶಾಪ ತಂದೀತು ಪರಿತಾಪ |


ದೇವರನು ಅರಸದಿರಿ ಗುಡಿಗೋಪುರಗಳಲ್ಲಿ |
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ ||


ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು |
ಹೃದಯಗಳ ಜೋಡಿಸಿರಿ ಆಗುವುದು ಮನೆಯು ||


ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ? |
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ ||
-ಕ.ವೆಂ.ನಾಗರಾಜ್.

1 ಕಾಮೆಂಟ್‌:

  1. ಪ್ರಸನ್ನ.ಎಸ್.ಪಿ
    12AUG2010 8:58
    ತುಂಬಾ ಅರ್ಥಪೂರ್ಣವಾಗಿದೆ ಕವಿಗಳೇ,
    -ಪ್ರಸನ್ನ.ಎಸ್.ಪಿ

    Kavinagaraj
    12AUG2010 2:29
    ವಂದನೆ, ಪ್ರಸನ್ನ.

    ಹರೀಶ್ ಆತ್ರೇಯ
    12AUG2010 9:20
    ಆತ್ಮೀಯ
    ಹಿತ ನುಡಿಗಳು ಮುಟ್ಟಿತು ಮನಸಿಗೆ. ಎಷ್ಟೋ ಜನ ಮಕ್ಕಳು ತಮ್ಮ ಹಿರಿಯರ ಮಾತುಗಳಿಗೆ ವಿರುದ್ಧ ಧ್ವನಿ ತೆಗೆಯೋದೇ ತಮ್ಮ ಬುದ್ಧಿವ೦ತಿಕೆಯ ಪ್ರದರ್ಶನ ಅ೦ದುಕೊ೦ಡಿದಾರೆ, ’ನಿ೦ಗೊತ್ತಿಲ್ಲ ಸುಮ್ನಿರಪ್ಪ ಏನೇನೋ ಮಾತಾಡ್ತೀಯ’ ಅನ್ನೋ ಮಾತುಗಳು ಅವರಿಗೆ ಸರಳವಾಗಿ ಬ೦ದುಬಿಡುತ್ತೆ ಕೆಲವೊಮ್ಮೆ ಅದು ಹಿರಿಯರಿಗೆ ನೋವಾಗಿ ಕಾಡುತ್ತೆ. ಮಾನಸಿಕವಾಗಿ ಸೂಕ್ಷ್ಮರಾಗ್ತಾ ಬರ್ತಾ ಇರ್ತಾರೆ ಅಪ್ಪ ಅಮ್ಮ೦ದಿರು. ಅವರನ್ನ ಎಲ್ಲರೆದುರಿಗೆ ’ನಿ೦ಗೊತ್ತಿಲ್ಲ’ ಅನ್ನೋದರ ಬದಲು ನಿಧಾನವಾಗಿ ತಿಳಿಯದ ವಿಷಯಗಳನ್ನ ಹೇಳಿದ್ರೆ ಸ೦ತೋಷ. ಅಪ್ಪ ಅಮ್ಮ ’ನಾವಾಡೋ ಏಲ್ಲಾ ಮಾತುಗಳನ್ನ ಈಸಿಯಾಗಿ ತಗೊ೦ತಾರೆ ನಾನ್ಹಾಗೆ ಮಾತಾಡೋದ್ರಿ೦ದ ಅವರಿಗೆ ಏನೂ ನೋವಾಗಲ್ಲ ಅನ್ನೋ’ ಭಾವ ಮಕ್ಕಳ (ಹದಿನೈದರ ಮೇಲ್ಪಟ್ಟ) ಮನಸಿನಲ್ಲಿ ಕೂತುಬಿಟ್ಟಿದೆ.
    ’ನ೦ಗೆಲ್ಲಾ ಗೊತ್ತಿದೆ ನೀನೇನೂ ಸ್ಪೆಶಲ್ ಆಗಿ ಹೇಳ್ಬೇಕಾಗಿಲ್ಲ’ ಅನ್ನೋದೂ ಅವರಲ್ಲಿದೆ. ನಿಮ್ಮ ಕವನ ಓದಿ ಅದರ೦ತೆ ನಡೆದ್ರೆ ಎಲ್ರಿಗೂ ಸ೦ತೋಷ
    ಹರಿ

    Kavinagaraj
    12AUG2010 2:33
    ಹರಿ, ಚೇತೋಹಾರಿಯಾದ ಪ್ರತಿಕ್ರಿಯೆಗೆ ಧನ್ಯವಾದ. ನೀವು ಭಾವಿಸಿದಂತಹ ಸೂಕ್ಷ್ಮ ಮನಸ್ಸೇ ಇದನ್ನು ಬರೆಯಲು ಪ್ರಚೋದಿಸಿರುವುದು.

    ಪ್ರತ್ಯುತ್ತರಅಳಿಸಿ