ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜನವರಿ 15, 2016

ಕಳೆಯುವುದು ಸಮಯವಲ್ಲ, ಜೀವನ!


ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ
ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು |
ಕಳೆಯಿತೆಂದರೆ ಒಮ್ಮೆ ಸಿಕ್ಕದದು ಜಾಣ
ಕಾಲದ ಮಹತಿಯಿದು ಕಾಣು ಮೂಢ ||
     'ನಿನ್ನೆ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತು ಗೊತ್ತಾ? ನೀನು ಯಾಕೋ ಬರಲಿಲ್ಲ?' ಎಂಬ ಪ್ರಶ್ನೆಗೆ ಅವನು ಉತ್ತರಿಸಿದ್ದ, 'ಏನ್ ಮಾಡಲೋ? ನನಗಂತೂ ಒಂದ್ ನಿಮಿಷಾನೂ ಪುರುಸೊತ್ತೇ ಇರಲ್ಲ.' ಆದರೆ ನಿಜವಾದ ಸಂಗತಿಯೆಂದರೆ ಕಾರ್ಯಕ್ರಮ ನಡೆದ ಸಮಯದಲ್ಲಿ ಆತ ತನ್ನ ಗೆಳೆಯನೊಂದಿಗೆ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಹಾಗಾಗಿ ಅವನಿಗೆ ಪುರುಸೊತ್ತಿರಲಿಲ್ಲ. ಅಷ್ಟಕ್ಕೂ ಈ 'ಪುರುಸೊತ್ತು' ಅಂದರೆ ಏನು? ಏನಾದರೂ ಮಾಡಲು ಅಗತ್ಯವಾದ ಸಮಯ ಅಷ್ಟೇ. ನಾವು ಸಮಯದೊಂದಿಗೇ  ಇರುತ್ತೇವೆ, ಆದರೂ ನಮಗೆ ಸಮಯವಿರುವುದಿಲ್ಲ! ಈ ಸಮಯ ಒಬ್ಬರಿಗೆ ಒಂದೊಂದು ತರಹ ಇರುತ್ತದೆಯೇ? ಒಬ್ಬರಿಗೆ 24 ಗಂಟೆ, ಇನ್ನೊಬ್ಬರಿಗೆ 20 ಗಂಟೆಯಂತೆ ಇರುತ್ತದೆಯೇ? ಎಲ್ಲರಿಗೂ ಇರುವುದು ಇಪ್ಪನಾಲ್ಕೇ ಗಂಟೆಗಳು! ವಿವೇಕಾನಂದ, ಬುದ್ಧ, ಬಸವಣ್ಣ, ಮಹಾವೀರ, ಮಹಾತ್ಮ ಗಾಂಧಿ, ಗೋಳ್ವಾಲ್ಕರ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಆಶ್ಫಾಕ್ ಉಲ್ಲಾ ಮುಂತಾದವರಿಗೆ ಇದ್ದದ್ದು, ಈಗ ನಮ್ಮ ನಡುವೆಯೇ ಇರುವ ಸಿದ್ಧಗಂಗಾ ಶ್ರೀಗಳು, ಪಂ. ಸುಧಾಕರ ಚತುರ್‍ವೇದಿಯವರು, ನರೇಂದ್ರ ಮೋದಿ ಮುಂತಾದವರಿಗೂ ಇರುವುದು ಇತರ ನಮ್ಮ ನಿಮ್ಮೆಲ್ಲರಿಗೂ ಇರುವಷ್ಟೇ ಸಮಯ! ಸಮಯ ನಿಜವಾದ ಸಮತಾವಾದಿ. ಅದು ಶ್ರೀಮಂತರಿಗೆ, ಬಡವರಿಗೆ, ಆ ಜಾತಿಯವರಿಗೆ, ಈ ಜಾತಿಯವರಿಗೆ, ದಲಿತರಿಗೆ, ಬಲಿತರಿಗೆ, ಕರಿಯರಿಗೆ, ಬಿಳಿಯರಿಗೆ, ದಡ್ಡರಿಗೆ, ಜಾಣರಿಗೆ, ಚಿಕ್ಕವರಿಗೆ, ದೊಡ್ಡವರಿಗೆ, ಗಂಡಸರಿಗೆ, ಹೆಂಗಸರಿಗೆ, ಇತ್ಯಾದಿ ಯಾವುದೇ ಭೇದ ಮಾಡದೇ ಎಲ್ಲರಿಗೂ ಒಂದೇ ರೀತಿಯ ಸಮಯ ಕೊಡುತ್ತದೆ.
     ಒಬ್ಬ ಯಶಸ್ವಿ ವ್ಯಕ್ತಿಗೆ, ಮಾಡಲು ಬೇಕಾದಷ್ಟು ಕೆಲಸಗಳು ಇದ್ದವರಿಗೆ ಸಮಯ ಸಿಗುತ್ತದೆ. ಆದರೆ ಸೋಮಾರಿಗಳಿಗೆ ಸಿಗುವುದಿಲ್ಲ. ಚಟುವಟಿಕೆಯಿಂದ ಕೂಡಿದ ವ್ಯಕ್ತಿ ಎಲ್ಲಾ ಕೆಲಸಗಳಿಗೂ ಪುರುಸೊತ್ತು ಮಾಡಿಕೊಳ್ಳುತ್ತಾನೆ, ಸಿಗುವ ಸಣ್ಣ ಅವಕಾಶವನ್ನೂ ಉಪಯೋಗಿಸಿಕೊಳ್ಳುತ್ತಾನೆ. ಅದು ಯಶಸ್ವಿಯ ಗುಣ, ಸಾಧಕನ ಲಕ್ಷಣ. ಪುರುಸೊತ್ತಿಲ್ಲ ಅನ್ನುವವರು ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಗೊತ್ತು ಗುರಿಯಿಲ್ಲದೆ ಹೇಗೋ ಕೆಲಸ ಮಾಡುವವರಾಗಿರುತ್ತಾರೆ. ಸಾಧಕರಿಗೂ, ಸಾಮಾನ್ಯರಿಗೂ ಇರುವ ವ್ಯತಾಸ ಉಪಯೋಗಿಸಿಕೊಳ್ಳುವ ಸಮಯದ ರೀತಿಯಲ್ಲಿದೆ. ಸಮಯ ಎಲ್ಲರಿಗೂ ಉಚಿತವಾಗಿ ಸಿಗುತ್ತದೆ, ಯಾರೂ ಹಣ ಕೊಡಬೇಕಿಲ್ಲ. ಹಾಗೆಂದು ಅದಕ್ಕೆ ಬೆಲೆಯಿಲ್ಲ ಎಂದಲ್ಲ. ಅದು ಅಮೂಲ್ಯವಾದುದು. ಅದನ್ನು ಕೊಳ್ಳಲಾಗುವುದಿಲ್ಲ. ಅದನ್ನು ನಾವು ಇಟ್ಟುಕೊಳ್ಳಬಹುದು, ಖರ್ಚು ಮಾಡಬಹುದು. ಆದರೆ ಒಮ್ಮೆ ಕಳೆದುಕೊಂಡರೆ ಅದನ್ನು ಪುನಃ ಪಡೆಯಲಾಗುವುದೇ ಇಲ್ಲ!
     'ಹೇಗೋ ಜೀವನ ನಡೆಸಿದರಾಯಿತು' ಅನ್ನುವವರು ಸಮಯದ ಬಗ್ಗೆ ಮಹತ್ವ ಕೊಡಲಾರರು. 'ಹುಟ್ಟಿದ, ಇದ್ದ, ಒಂದು ದಿನ ಸತ್ತ' ಎಂಬ ರೀತಿಯಲ್ಲಿ ಬಾಳಿದವರನ್ನು ಸಮಾಜವಿರಲಿ, ಅವರ ಕುಟುಂಬಸ್ಥರೇ ಕಾಲಾನಂತರದಲ್ಲಿ ಮರೆತುಬಿಡುತ್ತಾರೆ. ನೂರು ವರ್ಷಗಳು ಪೂರ್ಣವಾಗಿ ಬಾಳುವವರ ಸಂಖ್ಯೆ ಕಡಿಮೆ. ಸರಾಸರಿ 80ರಿಂದ90 ವರ್ಷದವರೆಗೆ ಬದುಕುತ್ತಾರೆ ಎಂದಿಟ್ಟುಕೊಳ್ಳೋಣ. ಇದರಲ್ಲಿ ಸುಮಾರು ಮೂರನೆಯ ಒಂದು ಭಾಗದಷ್ಟು, ಕೆಲವರಿಗೆ ಅದಕ್ಕೂ ಹೆಚ್ಚು,  ಅವಧಿ ನಿದ್ದೆಯಲ್ಲಿ ಕಳೆದುಹೋಗುತ್ತದೆ. ಬಾಲ್ಯ ಮತ್ತು ಮುಪ್ಪಿನ ಅವಧಿಯಲ್ಲಿ ಸುಮಾರು ಮೂರನೆಯ ಒಂದು ಭಾಗ ಕಳೆಯುತ್ತದೆ. ಉಳಿಯುವ ಮೂರನೆಯ ಒಂದರಷ್ಟು ಭಾಗದಲ್ಲಿ ಸಂಸಾರದ ಜಂಜಾಟ, ಕಾಯಿಲೆ-ಕಸಾಲೆಗಳು, ಇನ್ನಿತರ ಸಂಗತಿಗಳಿಗೆ ಸಮಯ ಕೊಡಬೇಕು. ಇಷ್ಟೆಲ್ಲಾ ಆಗಿ ಉಳಿಯುವ ಅವಧಿಯಲ್ಲಿ ಏನಾದರೂ ಸಾಧನೆ ಮಾಡುವುದಾದರೆ ಮಾಡಬೇಕು ಎಂದರೆ ಸಮಯದ ಮಹತ್ವದ ಅರಿವು ಆಗುತ್ತದೆ. ಇಷ್ಟಾಗಿಯೂ ಸಾಧನೆ ಮಾಡುವವರಿದ್ದಾರೆ ಎಂದರೆ ಅವರು ಸಮಯದ ಸದ್ವಿನಿಯೋಗ ಮಾಡಿಕೊಳ್ಳುವವರು, ಸಮಯದ ಮಹತ್ವ ಅರಿತವರೇ ಸರಿ. ನಿಜವಾಗಿಯೂ ಸಮಯದ ಅಭಾವವಿಲ್ಲ. ಇರುವುದು ಸಮಯವನ್ನು ಉಪಯೋಗಿಸಿಕೊಳ್ಳುವ ಜಾಣತನದ ಅಭಾವ ಅಷ್ಟೆ. ಹೆಚ್ಚಿನ ಸಮಯ ಹಳೆಯ ಕಷ್ಟ-ನಷ್ಟಗಳ ಕುರಿತು ಚಿಂತಿಸುವುದರಲ್ಲಿ, ಹಗಲು ಕನಸು ಕಾಣುವಲ್ಲಿ ಕಳೆದುಹೋಗುತ್ತದೆ. ಸಮಯದ ಒಂದೊಂದು ಕ್ಷಣವೂ ಅಂತಿಮವೇ, ಏಕೆಂದರೆ ಆ ಕ್ಷಣಗಳು ಮತ್ತೆ ಸಿಗುವುದೇ ಇಲ್ಲ. ನಿಜವಾದ ಸಂಗತಿಯೆಂದರೆ ಸಮಯ ವ್ಯರ್ಥವಾಗುವುದಿಲ್ಲ, ವ್ಯರ್ಥವಾಗುವುದು ನಮ್ಮ ಜೀವನ, ಇರುವ ಸಮಯವನ್ನು ಉಪಯೋಗಿಸಿಕೊಳ್ಳದಿದ್ದರೆ!
     'ಹೊತ್ತೇ ಹೋಗುವುದಿಲ್ಲ' ಎನ್ನುವವರು, 'ಟೈಮ್ ಕಳೆಯಲು' ಏನಾದರೂ ಮಾಡಬೇಕಲ್ಲಾ ಅನ್ನುವವರು, ಇಸ್ಪೀಟು ಆಡುವವರು, ಪಾರ್ಕಿನ ಕಟ್ಟೆಗಳು, ಬೆಂಚುಗಳಲ್ಲಿ ಕುಳಿತು ಹರಟುವವರು, ಇತರರ ವಿಚಾರಗಳಲ್ಲಿ ಮೂಗು ತೂರಿಸುವವರು, ಮುಂತಾದವರು ನಮ್ಮ ನಡುವೆ ಕಂಡುಬರುತ್ತಾರೆ. ಇವರಿಗೆ 'ಮಾಡಬೇಕಾದ' ಕೆಲಸಗಳಿಗೆ ಮಾತ್ರ ಪುರುಸೊತ್ತು ಸಿಗುವುದಿಲ್ಲ. ಸಮಯ ಕಳೆಯುವವರಿಗೆ ವಾಸ್ತವವಾಗಿ ಸಮಯವೇ ಅವರನ್ನು ಕಳೆಯುತ್ತಿದೆ ಎಂಬುದರ ಅರಿವಾಗುವುದಿಲ್ಲ. ಟೈಮ್ ಪಾಸ್ ಅಲ್ಲ, ಲೈಫ್ ಲಾಸ್! ಇದರಿಂದಾಗಿ ಸ್ವತಃ ತೊಂದರೆಗಳನ್ನೂ ಅನುಭವಿಸುತ್ತಾರೆ. ಆದರೆ ಆಗ 'ಕಾಲ ಮಿಂಚಿದ ಮೇಲೆ ಚಿಂತಿಸಿದಂತೆ' ಆಗಿರುತ್ತದೆ. 'ನಮ್ಮ ಟೈಮೇ ಸರಿಯಿಲ್ಲ' ಎಂದು ಉದ್ಗರಿಸುತ್ತಾರೆ. ಸರಿಯಿಲ್ಲದಿರುವುದು ಟೈಮೋ. ಅವರೋ? ಇಲ್ಲಿ ಇನ್ನೊಂದು ಅಪಾಯವೂ ಇದೆ. ದುಡಿದು ಉಣ್ಣುವವರು ಸಮಯವನ್ನು ಗೌರವಿಸುವವರಾದರೆ, 'ದುಡಿಯದೇ' ಉಣ್ಣಬಯಸುವವರಲ್ಲಿ ಕೆಲವರಾದರೂ ಶ್ರಮಪಡದೇ ಹಣ ಗಳಿಸಲು ಕಳ್ಳತನ, ದರೋಡೆ, ವಂಚನೆ, ಇತ್ಯಾದಿಗಳಲ್ಲಿ ತೊಡಗಿ ಸಮಾಜಕಂಟಕರೂ ಆಗುವವರಿರುತ್ತಾರೆ.
     ಸಮಯ ಅದ್ಭುತ ಸಂಜೀವಿನಿ ಇದ್ದಂತೆ. ಅದು ನೋವನ್ನು ಮರೆಸುತ್ತದೆ, ಸತ್ಯವನ್ನು ಹೊರತರುತ್ತದೆ, ಪಾಪಿಗಳನ್ನು ಶಿಕ್ಷಿಸುತ್ತದೆ, ನ್ಯಾಯ ನೀಡುತ್ತದೆ. ಅದು ಕಿಲಾಡಿ ಕೂಡಾ! ಕಾಯುವವರಿಗೆ ದೀರ್ಘವಾಗಿರುತ್ತದೆ, ಭಯಪಡುವವರ ಹತ್ತಿರ ಧಾವಿಸುತ್ತದೆ, ಶೋಕಿಸುವವರಿಗೆ, ಚಿಂತಿಸುವವರಿಗೆ ಅತಿ ಉದ್ದವಾಗಿರುತ್ತದೆ, ಸಂತೋಷಪಡುವವರಿಗೆ ಚಿಕ್ಕದಾಗಿರುತ್ತದೆ, ಆದರೆ ಅದನ್ನು ಪ್ರೀತಿಸುವವರಿಗೆ ಮಾತ್ರ ಶಾಶ್ವತವಾಗಿರುತ್ತದೆ. ಸಂತೋಷವಾಗಿರುವುದಕ್ಕೆ ಸಮಯ ಕಂಡುಕೊಳ್ಳದಿದ್ದರೆ, ದುಃಖ ಪಡುವುದಕ್ಕೆ ಸಮಯ ಬಂದುಬಿಡುತ್ತದೆ.      'ಕಾಲಾಯ ತಸ್ಮೈ ನಮಃ'. ಕನಸು ನನಸಾಗಬೇಕಾದರೆ ಅದಕ್ಕಾಗಿ ನಿಶ್ಚಿತ ಸಮಯವನ್ನು ಕೊಡಲೇಬೇಕು.
     ನಮ್ಮ ಏಳಿಗೆಯಲ್ಲಿ, ಅಭಿವೃದ್ಧಿಯಲ್ಲಿ ಸುತ್ತಲಿನ ಸಮಾಜದ ಕೊಡುಗೆ ಅಪಾರವಾಗಿದೆ. ಸಮಾಜದ ಋಣ ತೀರಿಸಲು ಸಮಾಜಕ್ಕಾಗಿಯೂ ದಿನದ ಸ್ವಲ್ಪ ಕಾಲವನ್ನಾದರೂ ಮೀಸಲಿಡುವುದು ನಮ್ಮ ಕರ್ತವ್ಯವಾಗಬೇಕು. ದಿನನಿತ್ಯದ ಕೆಲಸಗಳು, ನಿದ್ದೆ, ಮನೆಕೆಲಸಗಳು, ವ್ಯಾಯಾಮ, ಅಧ್ಯಯನ, ಧ್ಯಾನ, ಇತ್ಯಾದಿಗಳಿಗೆ ನಿಗದಿತ ಸಮಯವನ್ನು ಧಾರಾಳವಾಗಿ ಕೊಟ್ಟರೂ, ದಿನಕ್ಕೆ ಒಂದೆರಡು ಗಂಟೆಗಳನ್ನಾದರೂ ಸಮಾಜ, ದೇಶ, ಧರ್ಮ ಸಂಬಂಧಿತ ಕೆಲಸಗಳಿಗೆ ಸಮಯಾವಕಾಶ ಮಾಡಿಕೊಳ್ಳುವುದು ಕಷ್ಟವೇನಲ್ಲ. ಕಷ್ಟ ಸಮಯದ ಅಭಾವದ್ದಲ್ಲ, ಸೋಮಾರಿ ಮನಸ್ಸಿನದು. ಸ್ವಂತ ಕೆಲಸಗಳಿಗಲ್ಲದೆ ಸಮಾಜ, ದೇಶಕ್ಕಾಗಿ, ಜನಸೇವೆಗಾಗಿ ಸಮಯವನ್ನು ಮೀಸಲಾಗಿಡುವವರೇ ದೊಡ್ಡವರು. ಮನಸ್ಸು ಮಾಡಿದರೆ ನಾವೂ ದೊಡ್ಡವರಾಗಬಹುದು! ನಮಗೂ ಸಮಯವಿದೆ!!
-ಕ.ವೆಂ.ನಾಗರಾಜ್.
***************
ದಿನಾಂಕ 14.12.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌: