ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಡಿಸೆಂಬರ್ 25, 2015

ಅವರವರ ಭಾವಕೆ . . . . ಅವರವರ ಭಕುತಿಗೆ . . .


ಭಕ್ತಿಯೆಂಬುದು ಕೇಳು ಒಳಗಿರುವ ಭಾವ
ಅಂತರಂಗದೊಳಿರುವ ಪ್ರೇಮಪ್ರವಾಹ |
ಮನವ ಮುದಗೊಳಿಪ ಆನಂದಭಾವ
ಭಕ್ತಿಯಲೆ ಆನಂದ ಭಕ್ತನಿಗೆ ಮೂಢ ||
     ಮಾನವನಿಗೂ ಪಶು-ಪಕ್ಷಿ-ಕ್ರಿಮಿ-ಕೀಟಗಳಿಗೂ ಒಂದು ಮೂಲಭೂತ ವ್ಯತ್ಯಾಸ ಗಮನಿಸಬಹುದಾದುದೆಂದರೆ ಮಾನವನಿಗೆ ಇರುವ ವಿವೇಚನೆ ಮಾಡುವ ಶಕ್ತಿ. ಆತ ಮಾಡಬಲ್ಲ, ಮಾಡದಿರಲೂ ಬಲ್ಲ, ಬೇರೆಯದನ್ನೇ ಮಾಡಬಲ್ಲ. ಆತ ಕೇವಲ ಸ್ವಾಭಾವಿಕ ಜ್ಞಾನದಿಂದ ತೃಪ್ತನಾಗುವುದಿಲ್ಲ. ಏಕೆಂದರೆ ಅವನ ಮನಸ್ಸು "ಏಕೆ?, ಹೇಗೆ?" ಎಂಬ ಪ್ರಶ್ನೆಗಳನ್ನು ಕೇಳುವ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ. ಮಾನವನ ಪರಿಪೂರ್ಣ ವಿಕಾಸಕ್ಕೆ ಇಂದ್ರಿಯ ಗಮ್ಯವಾದ ಭೌತಿಕ ವಿಷಯಗಳ ಜ್ಞಾನದೊಂದಿಗೆ, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ, ಇತ್ಯಾದಿಗಳ ಕುರಿತು ಜಿಜ್ಞಾಸೆ ಸಹ ಇರಬೇಕಾಗುತ್ತದೆ. ಹೆಚ್ಚು ಹೆಚ್ಚು ಅಂತರ್ಮುಖಿಗಳಾದಾಗ, ಶ್ರವಣ, ಮನನ, ಮಥನ, ಮಂಥನಗಳನ್ನು ನಡೆಸಿದಷ್ಟೂ ಅವನ ತಿಳಿವಳಿಕೆ ಹೆಚ್ಚುತ್ತಾ ಹೋಗುತ್ತದೆ. ಎಷ್ಟೋ ಸಂಗತಿಗಳನ್ನು ಅರಿಯಲಾಗುವುದಿಲ್ಲ, ಆದರೆ ಅನುಭವಿಸಬಹುದಾಗಿದೆ. ನಮಗೆ ಗೊತ್ತಿಲ್ಲದ ಸಂಗತಿಗಳನ್ನು ಗೊತ್ತು ಮಾಡಿಕೊಳ್ಳುವುದು ಗುರಿ ಎಂದಿಟ್ಟುಕೊಂಡರೆ, ಅದನ್ನು ತಲುಪಲು ಪಡೆದುಕೊಳ್ಳುವ ಸಹಾಯವನ್ನು ಸಾಧನ ಮತ್ತು ಗುರಿ ತಲುಪಿದರೆ ಸಾಧನೆ ಎನ್ನಬಹುದು. ಈ ಪ್ರಯತ್ನದಲ್ಲಿರುವವರು ಸಾಧಕರು. ಗುರಿ ತಲುಪಿದಾಗ ಆಗುವ ಆನಂದವನ್ನು ಮೋಕ್ಷ ಅನ್ನಬಹುದು ಅಥವ ಬೇರೆ ಯಾವುದೇ ಪದದಿಂದ ಗುರುತಿಸಬಹುದು. ಇಂತಹ ಸಾಧ್ಯ(ಗುರಿ), ಸಾಧನೆ, ಸಾಧನ, ಸಾಧಕರ ಮಧ್ಯದಲ್ಲಿ ಉದ್ಭವವಾಗುವುದೇ ಭಕ್ತಿ! ಬ್ರಹ್ಮಾಂಡವನ್ನು, ಅಖಿಲ ಜಗತ್ತನ್ನು ನಿಯಂತ್ರಿಸುವ ಶಕ್ತಿಯನ್ನು ಪರಮಾತ್ಮ ಅಥವ ವಿಶ್ವ ಚೇತನ ಎಂದಿಟ್ಟುಕೊಂಡರೆ ಆ ಶಕ್ತಿಯನ್ನು ಅರಿಯುವ ಪ್ರಯತ್ನವನ್ನು ಭಕ್ತ ಮಾಡುತ್ತಾನೆ. ಆ ಪ್ರಯತ್ನವನ್ನೇ ಭಕ್ತಿ ಎನ್ನಬಹುದು. ಆ ಭಕ್ತಿ ಭಕ್ತನ ಶಕ್ತ್ಯಾನುಸಾರ ಇರುತ್ತದೆ.
     ಭಕ್ತಿಯಲ್ಲಿ ಕೃತಜ್ಞತೆ, ಪ್ರೀತಿ, ಭಯ, ಕೋಪ, ವಾತ್ಸಲ್ಯ, ಬೇಸರ, ಮಮತೆ, ರೋಷ, ಅನುನಯ, ಆನಂದ, ದುಃಖ, ಇತ್ಯಾದಿ ಭಾವಗಳನ್ನು ಕಾಣಬಹುದು. ಈ ಅಖಂಡ ಜಗತ್ತನ್ನು ಸೃಷ್ಟಿಸಿ ಅದನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಭಗವಂತನನ್ನು ಕೃತಜ್ಞತಾ ಭಾವದಿಂದ ಸ್ಮರಿಸಬಹುದು. ಅವನ ಕರುಣೆಯನ್ನು ನೆನೆದು ಅವನನ್ನು ಪ್ರೀತಿಸಬಹುದು. ಇಷ್ಟೊಂದು ಅಗಾಧ ಶಕ್ತಿಯನ್ನು, ಸೃಷ್ಟಿಯ ಬೃಹತ್ತತೆಯನ್ನು ಕಂಡು ಬೆರಗಾಗಿ ಭಯ ಪಡಲೂಬಹುದು, ಇತರರಿಗೆ ಕೊಟ್ಟ ಅವಕಾಶವನ್ನು ತನಗೆ ಕೊಡದ ಬಗ್ಗೆ ಕೋಪಿಸಿಕೊಳ್ಳಲೂಬಹುದು, ಅವನನ್ನು ಓಲೈಸಿ ಒಳಿತನ್ನು ಬೇಡಲೂಬಹುದು,. . . . ., ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇಂತಹ ಭಾವಗಳು ಭಕ್ತರ ಮನೋಭಾವವನ್ನು -ಅವರವರ ಭಕುತಿಗೆ- ಅವಲಂಬಿಸಿರುತ್ತದೆ. ಭಕ್ತರಲ್ಲಿ ನಾಲ್ಕು ರೀತಿಯ ಭಕ್ತರಿದ್ದಾರೆಂದು ಭಗವದ್ಗೀತೆ ಹೇಳುತ್ತದೆ - ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿ. ತನಗೆ ಇರುವ ತೊಂದರೆಯನ್ನು ಪರಿಹರಿಸಲು ಪ್ರಾರ್ಥಿಸುವವನು ಆರ್ತ, ಸಂಪತ್ತು, ಐಶ್ವರ್ಯ, ಇತ್ಯಾದಿ ಅನುಕೂಲಗಳನ್ನು ಬಯಸುವವನು ಅರ್ಥಾರ್ಥಿ, ಜ್ಞಾನ ಬಯಸುವವನು ಜಿಜ್ಞಾಸು ಮತ್ತು ಪ್ರತಿಯಾಗಿ ಏನನ್ನೂ ಬಯಸದೆ, ಅವನನ್ನು ಹೊಂದುವ ಪ್ರಯತ್ನದಲ್ಲೇ ಆನಂದ ಕಾಣುವವನು ಜ್ಞಾನಿ. ನಾರದ ಭಕ್ತಿ ಸೂತ್ರದಲ್ಲಿ ಭಕ್ತಿಯ ವಿವಿಧ ಮಜಲುಗಳನ್ನು ಹೇಳಲಾಗಿದೆ. ಶ್ರವಣಾಸಕ್ತಿ, ಅವನನ್ನು ಭಜಿಸುವ ಕೀರ್ತನಾಸಕ್ತಿ, ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸಖ್ಯಾಸಕ್ತಿ, ಆತ್ಮನಿವೇದನೆ, ಸಖ್ಯಭಾವ, ವಾತ್ಸಲ್ಯಭಾವ, ತನ್ಮಯಭಾವ, ವಿರಹಭಾವ, ಇತ್ಯಾದಿಗಳನ್ನು ಅಲ್ಲಿ ವಿವರಿಸಿದೆ. ಲೋಕದ ಕಣ್ಣಿನಲ್ಲಿ ಹುಚ್ಚರಂತೆ ಕಂಡು ಬರುವ ಕೆಲವು ಅವಧೂತರು, ಸಾಧು-ಸಂತರ ಭಕ್ತಿಯನ್ನು ವಿವರಿಸಲು ಸಾಧ್ಯವೇ? ರಾಮಕೃಷ್ಣ ಪರಮ ಹಂಸರನ್ನೂ ಹುಚ್ಚರೆಂದು ಜರಿದವರಿಗೇನೂ ಕಡಿಮೆರಲಿಲ್ಲ.
ಜಗದೊಡೆಯ ಪರಮಾತ್ಮನಲಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ |
ಗುರುವಿನಲಿ ಶ್ರದ್ಧೆ ಸುಜನ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ ||
     ಗ್ರಾಮಗಳ ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡಿ ಪ್ರಸಾದ ಕೇಳಿ ಕುಳಿತ ಭಕ್ತ/ಭಕ್ತೆಯರನ್ನು ಗಮನಿಸಿದ್ದೀರಾ? ಕೆಲವರು "ಏಕಪ್ಪಾ/ ಏಕಮ್ಮಾ ಇಷ್ಟೊಂದು ಸತಾಯಿಸುತ್ತಿಯಾ? ಆಗುವುದಾದರೆ ಪ್ರಸಾದ ಕೊಡು, ಆಗಲ್ಲಾ ಅಂತಲಾದರೂ ಹೇಳಿಬಿಡು" ಅಂತ ವಿಗ್ರಹದೊಂದಿಗೆ ಸಂಭಾಷಣೆಯನ್ನೂ ಮಾಡುತ್ತಿರುತ್ತಾರೆ. ಬರಬಾರದ ಕಷ್ಟ-ನಷ್ಟಗಳಾದಾಗ, 'ಈ ದೇವರು ಅನ್ನುವವನು ಇದ್ದಿದ್ದರೆ ನನಗೆ ಹೀಗೆ ತೊಂದರೆ ಕೊಡುತ್ತಿರಲಿಲ್ಲ. ಇನ್ನು ಅವನನ್ನು ಪೂಜೆ ಮಾಡುವುದಿಲ್ಲ' ಎಂದು ಹೇಳುವವರನ್ನೂ ನಾವು ಕಾಣುತ್ತಿರುತ್ತೇವೆ. ನಾವು ಮಾಡುವ ಕರ್ಮಗಳಿಗೆ ನಾವೇ ಹೊಣೆ, ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ನಮ್ಮ ಕರ್ಮಫಲಗಳನ್ನು ನಾವೇ ಅನುಭವಿಸಬೇಕು ಎಂದು ತಿಳಿದು ನಡೆಯುವ ನಿರ್ಲಿಪ್ತ ಭಕ್ತರನ್ನೂ ಕಾಣುತ್ತೇವೆ. ಕೆಡುಕನ್ನು ಯಾರಿಗೂ ಬಯಸದೆ, ಸಾಧ್ಯವಾದಷ್ಟೂ ಎಲ್ಲರ ಹಿತ/ಒಳಿತನ್ನೇ ಬಯಸುವ, ಪ್ರತಿಫಲ ಬಯಸದ ಭಕ್ತರ ಭಕ್ತಿ ಶ್ರೇಷ್ಠವಾದುದು ಎಂಬುದರಲ್ಲಿ ಎರಡು ಮಾತಿರಲಿಕ್ಕಿಲ್ಲ.
     ಭಕ್ತಿಯ ಒಂದು ದೊಡ್ಡ ಅನುಕೂಲವೆಂದರೆ ಅದು ಇರುವುದರಲ್ಲಿ ಅತಿ ಸುಲಭವಾದ ಮತ್ತು ಅತ್ಯಂತ ಸಹಜವಾದ ದಿವ್ಯತ್ವವನ್ನು ತಲುಪುವ ಮಾರ್ಗ; ಅದರ ದೊಡ್ಡ ಅನಾನುಕೂಲವೆಂದರೆ ಅದು ಕೆಳಸ್ತರದಲ್ಲಿ ಹೆಚ್ಚಿನ ಸಮಯ ಹುದುಗಿದ ಹುಚ್ಚಾಟಗಳಿಗೆ ದಾರಿ ಮಾಡಿಕೊಡುತ್ತದೆ. ವಿವಿಧ ಧರ್ಮಗಳ ಮತಾಂಧರು ಭಕ್ತಿಯ ಕೆಳಸ್ತರದ ಹಂತದಿಂದ ಬಂದವರಾಗಿದ್ದಾರೆ. ಪ್ರೀತಿಯ ವಸ್ತುವಿಗೆ ಏಕನಿಷ್ಠೆ ಇರಬೇಕು, ಅದಿಲ್ಲದಿದ್ದರೆ ನಿಜವಾದ ಪ್ರೀತಿ ಬೆಳೆಯಲಾರದು ಎಂಬುದು ನಿಜ. ಆದರೆ ಅದು ಹೆಚ್ಚಿನ ಸಂದರ್ಭಗಳಲ್ಲಿ ಇತರ ಎಲ್ಲವನ್ನೂ ತಿರಸ್ಕರಿಸುವ ಕಾರಣವಾಗುತ್ತದೆ. ಪ್ರತಿ ಧರ್ಮದ ಎಲ್ಲಾ ದುರ್ಬಲ ಮತ್ತು ಅವಿಕಸಿತ ಮನಸ್ಸುಗಳು ತಮ್ಮ ಆದರ್ಶವನ್ನು ಪ್ರೀತಿಸುವ ಒಂದೇ ರೀತಿಯನ್ನು ಹೊಂದಿರುತ್ತವೆ, ಅದೆಂದರೆ, ಇತರ ಎಲ್ಲಾ ಆದರ್ಶಗಳನ್ನು ದ್ವೇಷಿಸುವುದು. ತನ್ನ ದೇವರನ್ನು, ಆದರ್ಶಧ್ಯೇಯವನ್ನು ಉತ್ಕಟವಾಗಿ ಪ್ರೀತಿಸುವ, ತನ್ನ ಧರ್ಮದ ಆದರ್ಶಗಳಿಗೆ ಅಷ್ಟೊಂದು ಅಂಟಿಕೊಂಡಿರುವ ಅದೇ ವ್ಯಕ್ತಿ ಹೇಗೆ ಬೇರೆ ಯಾವುದೇ ಧರ್ಮದ, ಆದರ್ಶದ ಕುರಿತು ನೋಡಿದರೆ ಅಥವ ಕೇಳಿದರೆ ಏಕೆ ಕೆರಳುತ್ತಾನೆ ಎಂಬುದಕ್ಕೆ ಕಾರಣ ಇಲ್ಲಿದೆ.
-ಕ.ವೆಂ.ನಾಗರಾಜ್.
***************
ದಿನಾಂಕ ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ