ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಅಕ್ಟೋಬರ್ 20, 2018

ಮೂಢ ನಂಬಿಕೆ


     ಹಲವು ವರ್ಷಗಳ ಹಿಂದಿನ ಸಂಗತಿ. ಹಳೇಬೀಡಿನ ತುಂಬು ಕುಟುಂಬದ ಪ್ರಧಾನ ವ್ಯಕ್ತಿಯಾದ ನಮ್ಮ ತಾಯಿ ಲಕ್ಷ್ಮಮ್ಮನವರು ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಗೆಯೊಂದು ಅವರ ತಲೆಯ ಮೇಲೆ ಕುಳಿತುಹೋಗಿತ್ತು. ತಾಯಿಯವರಿಗೆ ಗಾಬರಿಯಾಗಿ ಒಳಕ್ಕೆ ಓಡಿ ಬಂದವರು ಸ್ವಲ್ಪ ಹೊತ್ತು ಕುಳಿತು ಸುಧಾರಿಸಿಕೊಂಡರು. ನಮ್ಮ ಊರಿನ ಪ್ರಮುಖ ಪುರೋಹಿತರು ಮತ್ತು ಜ್ಯೋತಿಷಿಗಳ ಬಳಿಗೆ ಹೋಗಿ ವಿಚಾರಿಸಿದರೆ 'ಕಾಗೆ ತಲೆಯ ಮೇಲೆ ಕುಳಿತರೆ ಮರಣದ ಸೂಚನೆ' ಎಂದುಬಿಟ್ಟರು. ಮೊದಲೇ ಆತಂಕಿತರಾಗಿದ್ದ ನಮ್ಮ ತಾಯಿಗೆ ಜ್ವರ ಬಂದಿತು. ಇದಾಗಿ ಏಳೆಂಟು ದಿನಗಳಾಗಿರಬಹುದು. ಹಲ್ಲಿಯೊಂದು ಸಹ ಅವರ ತಲೆಯ ಮೇಲೆ ಬಿದ್ದುಬಿಟ್ಟಿತು. ಮೊದಲೇ ಹೆದರಿದ್ದ ಅವರು ಇನ್ನೂ ಹೆದರಿಬಿಟ್ಟರು. ನಮ್ಮ ಜೋಯಿಸರು ಪಂಚಾಂಗ ಹರಡಿಕೊಂಡು ತಲೆ ಆಡಿಸಿ ಹೇಳಿದರು: "ಇನ್ನು ಆರು ತಿಂಗಳಲ್ಲಿ ಮರಣ". ನಮ್ಮ ತಾಯಿ ಕುಸಿದುಹೋಗಿ ಹಾಸಿಗೆ ಹಿಡಿದುಬಿಟ್ಟರು. ಕೆಲವು ದಿನಗಳಲ್ಲಿ ಹಾಸಿಗೆ ಬಿಟ್ಟು ಏಳಲೂ ಆಗದಷ್ಟು ನಿಶ್ಶಕ್ತಿ ಅವರನ್ನು ಆವರಿಸಿತು. ಅವರಿಗೆ ತಾವು ಸಾಯುವುದು ಖಂಡಿತ ಅನ್ನಿಸಿಬಿಟ್ಟಿತ್ತು. ನಾನು ಬೇಲೂರಿನ ನನ್ನ ಸ್ನೇಹಿತನೊಬ್ಬನಿಗೆ ವಿಷಯ ತಿಳಿಸಿ ಹೇಗೆಲ್ಲಾ ಧೈರ್ಯ ಹೇಳಬೇಕೆಂದು ಹೇಳಿಕೊಟ್ಟು ಮನೆಗೆ ಕರೆದುಕೊಂಡು ಬಂದೆ. ಅವನೂ ಕಚ್ಚೆಪಂಚೆ, ಸಿಲ್ಕ್ ಜುಬ್ಬಾ ಧರಿಸಿ ಢಾಳಾಗಿ ವಿಭೂತಿ ಪಟ್ಟೆ, ಕುಂಕುಮ ಹಚ್ಚಿಕೊಂಡು ಬಂದಿದ್ದ. ಅಮ್ಮನಿಗೆ, "ಇವರು ಪ್ರಸಿದ್ಧ ಜ್ಯೋತಿಷಿ. ನಾಲ್ಕು ವರ್ಷ ಕೇರಳದಲ್ಲಿ ಅಧ್ಯಯನ ಮಾಡಿದ್ದಾರೆ. ಇವರನ್ನೂ ಭವಿಷ್ಯ ಕೇಳೋಣ ಅಂತ ಕರಕೊಂಡು ಬಂದಿದೀನಿ" ಎಂದು ಹೇಳಿ ನನ್ನ ಸ್ನೇಹಿತನಿಗೆ ಮುಂದುವರೆಸುವಂತೆ ಸೂಚನೆ ಕೊಟ್ಟೆ. ಆಗಿನ ಸಂಭಾಷಣೆ:
ಸ್ನೇಹಿತ: ಅಮ್ಮಾ, ಕಾಗೆ ತಲೆಯ ಮೇಲೆ ಕುಳಿತದ್ದು ಎಂದು? ಎಷ್ಟು ಹೊತ್ತಿಗೆ?
ಅಮ್ಮ: ಶನಿವಾರ, ಬೆಳಿಗ್ಗೆ ೮ ಗಂಟೆ ಇರಬಹುದು.
ಸ್ನೇಹಿತ: (ಕಣ್ಣುಮುಚ್ಚಿ ಏನೋ ಮಣಮಣಿಸಿ, ನಂತರ ಕವಡೆಗಳನ್ನು ಹಾಕಿ ಎಣಿಸಿ, ಗುಣಿಸಿದಂತೆ ಮಾಡಿ) ಶನಿವಾರ. ಹೂಂ. ಶನಿದೇವರ ವಾರ. ಶನಿಯ ವಾಹನ ಕಾಕರಾಜ ನಿಮ್ಮ ತಲೆಯ ಮೇಲೆ ಕುಳಿತು ಆಶೀರ್ವಾದ ಮಾಡಿದ್ದಾನೆ. ನಿಮಗೆ ಅಭಯ ನೀಡಿದ್ದಾನೆ. ಸಂತೋಷಪಡಿ.
ಅಮ್ಮ: ಆದರೆ ತಲೆ ಮೇಲೆ ಹಲ್ಲಿ ಬಿದ್ದಿತ್ತಲ್ಲಾ?
ಸ್ನೇಹಿತ: ಆಮೇಲೆ ಏನಾಯಿತು?
ಅಮ್ಮ: ಪರಕೆಯಲ್ಲಿ ಹಲ್ಲಿಗೆ ಹೊಡೆದೆ. ಅದು ಸತ್ತುಹೋಯಿತು. ಹೊರಗೆ ಹಾಕಿದೆ.
ಸ್ನೇಹಿತ: (ಜೋಳಿಗೆಯ ಚೀಲದಿಂದ ಪಂಚಾಂಗ ತೆಗೆದು ನೋಡಿ ಏನೋ ಲೆಕ್ಕಾಚಾರ ಹಾಕಿದಂತೆ ಮಾಡಿ): ಸರಿಯಾಗಿಯೇ ಇದೆ. ಹಲ್ಲಿ ಬಿದ್ದರೆ ಮರಣ. ಹಲ್ಲಿ ತಲೆ ಮೇಲೆ ಬಿತ್ತು. ಸತ್ತು ಹೋಯಿತು. ನಿಮಗೆ ಶನಿದೇವನ ಆಶೀರ್ವಾದ ಗಟ್ಟಿಯಾಗಿದೆ. ನಿಮಗೆ ಪೂರ್ಣ ಆಯಸ್ಸಿದೆ. ನಿಮ್ಮ ತಲೆ ಮೇಲೆ ಕಲ್ಲು ಎತ್ತಿ ಹಾಕಿದರೂ ನಿಮಗೆ ಸಾವಿಲ್ಲ. ತಾಯಿ, ಪುಣ್ಯವಂತರು ನೀವು. ಹೋಗಿ ದೇವರಿಗೆ ದೀಪ ಹಚ್ಚಿ ನಮಸ್ಕಾರ ಮಾಡಿಬನ್ನಿ.
     ನಂತರದಲ್ಲಿ ಖುಷಿಯಿಂದ ಹಾಸಿಗೆಯಿಂದ ಎದ್ದ ಅಮ್ಮ ಕೈಕಾಲು ತೊಳೆದುಕೊಂಡು ದೇವರ ಮುಂದೆ ದೀಪ ಹಚ್ಚಿದ್ದರು. ಗೆಲುವಾಗಿದ್ದರು. ನನ್ನಿಂದಲೇ ಐವತ್ತು ರೂಪಾಯಿ (ಆಗ ಆ ಹಣ ದೊಡ್ಡ ಮೊತ್ತವೇ ಆಗಿತ್ತು.) ದಕ್ಷಿಣೆ ಹಣವನ್ನು ತಾಂಬೂಲದೊಂದಿಗೆ ಅವನಿಗೆ ಕೊಡಿಸಿದ್ದರು. ಅವನನ್ನು ಬಸ್ಸು ಹತ್ತಿಸಿ ಬರಲು ಅವನೊಂದಿಗೆ ಹೋದಾಗ ಅವನು ಹೇಳಿದ್ದು: "ಈ ಸುಳ್ಳು ಜ್ಯೋತಿಷ್ಯ ಹೇಳಿದ್ದು ಎಷ್ಟು ಸರೀನೋ ಗೊತ್ತಿಲ್ಲ. ನಿನಗೋಸ್ಕರ ಬಂದೆ. ಬಂದದ್ದಕ್ಕೂ ಲಾಭ ಅಯಿತು ಬಿಡು". "ಜ್ಯೋತಿಷ್ಯ ಸುಳ್ಳೋ, ನಿಜಾನೋ ನನಗೆ ಮುಖ್ಯ ಅಲ್ಲ. ಅಮ್ಮ ಗೆಲುವಾದಳಲ್ಲ, ಅದು ಮುಖ್ಯ" ಎಂದು ನಾನು ಹೇಳುತ್ತಿದ್ದಾಗ ಬೇಲೂರು ಬಸ್ಸು ಬಂದಿತ್ತು. ಅವನನ್ನು ಕಳಿಸಿ ಮನೆಗೆ ಬಂದರೆ ಅಮ್ಮ ಅದಾಗಲೇ ಹಾಸಿಗೆ ಮಡಿಸಿಟ್ಟಾಗಿತ್ತು. ಕೆಲವೇ ದಿನಗಳಲ್ಲಿ ಮೊದಲಿನಂತೆ ಉತ್ಸಾಹ ಅವರಲ್ಲಿ ಮನೆ ಮಾಡಿತ್ತು. ಈ ಘಟನೆ ನಡೆದ ನಂತರದಲ್ಲೂ ಮುಂದಿನ ೨೫ ವರ್ಷಗಳವರೆಗೆ ನಮ್ಮಮ್ಮ ಬದುಕಿದ್ದರು. 
-ಹೆಚ್.ಎಸ್. ಪುಟ್ಟರಾಜು, ಜಾವಗಲ್.
***
ಮಾಹಿತಿಗೆ: ಇದು ಡಿಸೆಂಬರ್, 2014ರ ಕವಿಕಿರಣ ಸಂಚಿಕೆಯಲ್ಲಿ ಪ್ರಕಟಿತ ಲೇಖನ. ಪುಟ್ಟರಾಜು ಹೇಳಿದ್ದ ವಿಚಾರವನ್ನು ಲೇಖನವಾಗಿಸಿ ಪ್ರಕಟಿಸಿದೆ.

3 ಕಾಮೆಂಟ್‌ಗಳು:

  1. ಜ್ಯೋತಿಶಾಸ್ತ್ರ ಸರಿಯಾಗಿ ಓದಿದವರು, ಅಭ್ಯಾಸಮಾಡಿದವರು.. ಅದರಲ್ಲಿ ನಂಬಿಕೆ ಇತ್ತು ಒಳಿತನ್ನೇ ಹೇಳುವವರು ಎಂದೂ ಧನಾತ್ಮಕ ಅಂಶಗಳನ್ನು ಹೇಳುವುದಿಲ್ಲ.. ಬದಲಿಗೆ ಅದಕ್ಕೆ ಒದಗಿಬಹುದಾದ ಪರಿಹಾರಗಳನ್ನು ಹೇಳಿ ಮನೋಸ್ಥೈರ್ಯ ತುಂಬುತ್ತಾರೆ.. ಬುಡುಬುಡಿಕೆ ವ್ಯಕ್ತಿಗಳು ಮಾತ್ರ ಈ ಬರಹದಲ್ಲಿ ಕಂಡ ಹಾಗೆ ಮನೋಧೈರ್ಯವನ್ನು ಕುಗ್ಗಿಸುವ ಮಾತನ್ನು ಆಡುತ್ತಾರೆ..

    ಇದಕ್ಕೆ ಉತ್ತಮ ಉದಾಹರಣೆ ನಾನೇ.. ಕಳೆದ ವರ್ಷ ನೆಡೆದ ಕಾರು ಅಪಘಾತದಲ್ಲಿ ನನ್ನ ಕುಟುಂಬಕ್ಕೆ ಬಾರಿ ಪೆಟ್ಟಾಯಿತು.. ನಾ ಬದುಕೋಲ್ಲ ಅಂತ ಅಪಘಾತ ನೋಡಿದವರು ಹೇಳಿದರು.. ಆದರೆ ನನ್ನ ಗುರು ಹೇಳಿದ್ದು.. ನಾ ಬದುಕುತ್ತೇನೆ.. ಹುಷಾರಾಗುತ್ತೇನೆ ಎಂದು.. ಅದು ಹಾಗೆ ಆಯಿತು..ನನ್ನ ಮಡದಿಯ ಬಗ್ಗೆ ಕೇಳಿದರೂ ನನ್ನ ಕುಟುಂಬದವರು ಕೇಳಿದರೂ ಏನೂ ಹೇಳಲಿಲ್ಲ.. ಅಪಘಾತದಲ್ಲಿ ಆದ internal ಗಾಯಗಳಿಂದ ಮತ್ತು ಆಘಾತದಿಂದ ಆಕೆ ಉಳಿಯಲಿಲ್ಲ..

    ನಾವು ಕಲಿತ ವಿದ್ಯೆ ಇರುವುದು ಜೀವ ಉಳಿಸಲಿಕ್ಕೆ ಮತ್ತು ಧೈರ್ಯ ತುಂಬೋದಕ್ಕೆ.. ಸುಂದರ ಬರಹ ಸರ್

    ಪ್ರತ್ಯುತ್ತರಅಳಿಸಿ