ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ಪುಸ್ತಕ ಬಿಡುಗಡೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪುಸ್ತಕ ಬಿಡುಗಡೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಸೆಪ್ಟೆಂಬರ್ 10, 2016

ನಾ ಕಂಡ ಸಿಎಸ್ಕೆ


     ಹಿರಿಯರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ನಮ್ಮ ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಕರಾಗಿ, ಪೋಷಕರಾಗಿ ಹಿರಿಯಣ್ಣನಂತೆ ಹರಿದುಂಬಿಸುತ್ತಲೇ ಬಂದಿದ್ದಾರೆ. ವೇದಭಾರತಿಗೂ ಅವರೇ ಪೋಷಕರು. ನಮ್ಮ ಕೆಳದಿ ಕವಿಮನೆತನದವರ ಕುಟುಂಬ ಸಮಾವೇಶಕ್ಕೆ ಅವರ ಶಾಲೆಯ ಆವರಣ ಬಿಟ್ಟುಕೊಟ್ಟಿದ್ದರು, ಅಗತ್ಯದ ಸಹಕಾರವನ್ನೂ ನೀಡಿದ್ದವರು. ನನ್ನ ಆದರ್ಶದ ಬೆನ್ನು ಹತ್ತಿ . . ಪುಸ್ತಕದ ಬಿಡುಗಡೆಯೂ ಅವರ ಶಾಲಾ ಸಭಾಂಗಣದಲ್ಲೇ ನಡೆದಿತ್ತು. ಪುಸ್ತಕದ ಬೆನ್ನುಡಿ ಬರೆದು ನನ್ನ ಬೆನ್ನು ತಟ್ಟಿದವರು. ಆ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರೆಲ್ಲರನ್ನೂ ಸೇರಿಸಿ ಸಮಾವೇಶ ನಡೆಸಲು ಪ್ರೇರಿಸಿದ್ದಲ್ಲದೆ ಅಂದಿನ ಊಟೋಪಚಾರದ ಹೊಣೆಯನ್ನೂ ವಹಿಸಿಕೊಂಡಿದ್ದವರು. ಹಾಸನದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದವರನ್ನು ಸನ್ಮಾನಿಸಿದವರು. ಇವರು ನೂರಾರು ಜನರಿಗೆ ಪ್ರೋತ್ಸಾಹ, ಸಹಕಾರ ನೀಡಿದವರು. ದಿನಾಂಕ ೨೭.೦೮.೨೦೧೬ರಂದು ಇವರ ಅಭಿಮಾನಿ ಬಳಗದವರು ಹಾಸನದ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ ಸಪ್ತಪದಿ ಸಭಾಂಗಣದಲ್ಲಿ ಇವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ತುಂಬಿ ತುಳುಕಿದ್ದ ಸಭೆಯಲ್ಲಿ ಎಲ್ಲರೂ ಅವರನ್ನು ಹಾಡಿಹೊಗಳಿದವರೇ. ಅದರಲ್ಲಿ ಉತ್ಪ್ರೇಕ್ಷೆಯಾಗಲೀ, ತೋರಿಕೆಯಾಗಲೀ ಇರದೆ ನೈಜ ಅಭಿಮಾನ ಪ್ರಕಟವಾಗಿತ್ತು. ಸ್ವಾಮಿ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಾದ ಪೂರ್ವಕ ಸಂದೇಶ ನೀಡಿದರು. ಆ ಸಂದರ್ಭದಲ್ಲಿ  ನಾ ಕಂಡ ಸಿಎಸ್ಕೆ ಎಂಬ ಅಭಿನಂದನಾ ಗ್ರಂಥದ ಬಿಡುಗಡೆಯಾಯಿತು. ಅಭಿನಂದನಾ ಗ್ರಂಥದ ಲೇಖನಗಳ ಸಂಗ್ರಹ, ಪ್ರಸ್ತುತಿ, ಪ್ರಕಟಣೆ, ಸಮಾರಂಭದ ಆಯೋಜನೆಯ ಪ್ರಮುಖ ರೂವಾರಿ ಬಾಲಾಜಿ ಪ್ರಿಂಟರ್ಸಿನ ಮಾಲಿಕ ಮಿತ್ರ ಶ್ರೀ ಎಂ.ಜೆ. ಪಾಂಡುರಂಗರವರು. ೩೮ ಲೇಖನಗಳಿರುವ ಈ ಗ್ರಂಥದಲ್ಲಿ ನನ್ನ ಲೇಖನವೂ ಇದ್ದು, ಅದನ್ನು ಇಲ್ಲಿ ಪ್ರಕಟಿಸಿರುವೆ. ಅನಾರೋಗ್ಯದ ನಡುವೆಯೂ ಮರುದಿನ ವೇದಭಾರತಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ನನ್ನ "ಸಾಧನಾ ಸೋಪಾನಗಳು" ಪುಸ್ತಕದ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಹರಸಿದ್ದರು ಸಿಎಸ್ಕೆ. ಅವರಿಗೆ ನಾನು ಆಭಾರಿ.

ಸಮಷ್ಟಿ ಹಿತಚಿಂತಕ ಸಿ.ಎಸ್. ಕೃಷ್ಣಸ್ವಾಮಿ
     ದುದ್ದ ರಸ್ತೆಯ ದುರವಸ್ಥೆಯಿಂದ ದಶಕಗಳಿಂದ ಜನರು ಬಸವಳಿದು ಹೈರಾಣಾಗಿದ್ದಾಗ, ರಾಜಕೀಯ ಮೇಲಾಟಗಳು, ಅಧಿಕಾರಿಗಳ ಅಸಡ್ಡೆಯಿಂದ ಪರಿಹಾರ ಮರೀಚಿಕೆಯೆಂದು ಕಂಡುಬಂದಾಗ ಈ ವ್ಯಕ್ತಿ ಹೋರಾಟದ ಮುಂಚೂಣಿಗೆ ಬಂದು ಜನರನ್ನು ಕೂಡಿಸಿ ಪ್ರತಿಭಟನೆ ಮಾಡುತ್ತಾರೆ, ರಸ್ತೆ ತಡೆ ಚಳುವಳಿ ಮಾಡುತ್ತಾರೆ, ಉರಿಬಿಸಿಲಿನಲ್ಲೇ ಧರಣಿ ಕೂರುತ್ತಾರೆ. ೮೭ ವರ್ಷಗಳ ಈ ವಾಮನಮೂರ್ತಿಯ ಛಲ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಕೋಟ್ಯಾಂತರ ರೂ. ವೆಚ್ಚದಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಸಾಹಿತ್ಯಿಕ ಚಟುವಟಿಕೆಗಳ ಅಭಿವೃದ್ಧಿ ಚಿಂತನೆಗೆ ಉಪಯೋಗಿಸುವ ಬದಲು, ಹಾಸನ ಜಿಲ್ಲೆಯವರೇ ಆದ ಮಹಾನ್ ಸಾಹಿತಿ ಎಸ್.ಎಲ್. ಭೈರಪ್ಪನವರನ್ನು ದೂಷಿಸಲು ಗೌರಿಲಂಕೇಶ್ ಮತ್ತಿತರರು ದುರುಪಯೋಗಪಡಿಸಿಕೊಂಡದ್ದನ್ನು ವಿರೋಧಿಸಿ ಜನರನ್ನು ಸಂಘಟಿಸಿ ಪ್ರತಿಭಟನೆಯ ನೇತೃತ್ವ ವಹಿಸುತ್ತಾರೆ. ಹಾಸನದ ಹೊಸ ಬಸ್ ನಿಲ್ದಾಣದ ಹತ್ತಿರದ ರೈಲು ಹಳಿಗಳ ಮೇಲೆ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯಿಸುವ ಸಲುವಾಗಿ ಚರ್ಚಿಸೋಣ ಬನ್ನಿ ಎಂದು ಹಲವರಿಗೆ ದೂರವಾಣಿ ಮೂಲಕ ಆಹ್ವಾನಿಸುತ್ತಾರೆ. ಇವರು ಮತ್ಯಾರೂ ಅಲ್ಲ, ಎಲ್ಲರೂ ಗುರುಗಳು ಎಂದು ಆತ್ಮೀಯವಾಗಿ ಸಂಬೋಧಿಸುವ ಸಿ.ಎಸ್. ಕೃಷ್ಣಸ್ವಾಮಿಯವರು! ಇಲ್ಲಿ ಉಲ್ಲೇಖಿಸಿರುವುದು ಕೇವಲ ಉದಾಹರಣೆಗಳಷ್ಟೆ. ಇಂತಹ ಅದೆಷ್ಟು ಜನಪರ ಹೋರಾಟಗಳನ್ನು ಇವರು ನಡೆಸಿದ್ದಾರೋ ಲೆಕ್ಕವಿಟ್ಟವರಿಲ್ಲ.
     ಇವರ ವಯಸ್ಸಿನ ಇತರ ಹಿರಿಯರನ್ನು ಗಮನಿಸಿದರೆ ಇವರ ಹಿರಿಮೆ ಗೊತ್ತಾಗುತ್ತದೆ. ಇತರ ವಯೋವೃದ್ಧರು ಕಾಯಿಲೆ, ಕಸಾಲೆಗಳಿಂದ ಬಸವಳಿದು, ಸಂಸಾರ ತಾಪತ್ರಯಗಳಿಂದ ನೊಂದು ಬೆಂದು ಮೂಲೆ ಹಿಡಿದಿರುವವರೇ ಹೆಚ್ಚಾಗಿ ಕಂಡುಬರುತ್ತಾರೆ. ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೂ ಇತರರನ್ನು ಆಶ್ರಯಿಸುವ ಸ್ಥಿತಿ ಅವರದಾಗಿರುತ್ತದೆ. ಆದರೆ ಸಿಎಸ್ಕೆಯವರು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಕೊಂಡೇ ಇರುವುದು ವಿಶೇಷ. ಇವರು ಮನೆಯಲ್ಲಿರಲಿ, ಎಲ್ಲೇ ಇರಲಿ, ಒಬ್ಬರಲ್ಲಾ ಒಬ್ಬರು, ಸಂಘ-ಸಂಸ್ಥೆಗಳವರು ಏನಾದರೂ ವಿಷಯದ ಬಗ್ಗೆ ಇವರೊಡನೆ ಚರ್ಚಿಸುತ್ತಿರುವುದು, ಸಲಹೆ, ಸಹಕಾರ ಪಡೆಯುವುದು ಸಾಮಾನ್ಯ ಸಂಗತಿಯಾಗಿದೆ. ಸಾವಿರಾರು ವಿದ್ಯಾರ್ಥಿಗಳು ಓದುತ್ತಿರುವ ಶ್ರೀ ರಾಮಕೃಷ್ಣ ವಿದ್ಯಾಲಯದ ಸ್ಥಾಪಕ ಮತ್ತು ಮುಖ್ಯಸ್ಥರಾಗಿ ಅದರ ಎಲ್ಲಾ ಆಗು-ಹೋಗುಗಳನ್ನು ನೋಡಿಕೊಳ್ಳುವುದರ ಜೊತೆಗೆ ಹತ್ತು-ಹಲವಾರು ಸಂಘ-ಸಂಸ್ಥೆಗಳ ಮುಖ್ಯಸ್ಥರು, ಮಾರ್ಗದರ್ಶಕರಾಗಿರುವುದು ಹೆಗ್ಗಳಿಕೆಯೇ ಸರಿ. ತಮಗೆ ಒಳ್ಳೆಯದೆಂದು, ಸರಿ ಎಂದು ಕಂಡು ಬರುವ ಸಂಗತಿಗಳೆಲ್ಲದಕ್ಕೂ ಇವರು ಹಿಂದೆ ಮುಂದೆ ನೋಡದೆ ಸಹಕಾರ ಕೊಡುತ್ತಾರೆ, ನಾನಿದ್ದೇನೆ, ಮುಂದುವರೆಯಿರಿ ಎಂದು ಹುರಿದುಂಬಿಸುತ್ತಾರೆ. ಇವರ ಈ ಸ್ವಭಾವವನ್ನು ದುರುಪಯೋಗಪಡಿಸಿಕೊಂಡವರೂ ಇರುವುದು ವಿಷಾದದ ಸಂಗತಿ. ಸಾಮಾನ್ಯ ಜನರ ಹಿತದ ಪ್ರಶ್ನೆಗಳು ಎದುರಾದಾಗ ಇವರು ಮೈಕೊಡವಿಕೊಂಡು ಎದ್ದುನಿಂತುಬಿಡುತ್ತಾರೆ, ಇತರರನ್ನೂ ಪ್ರೇರೇಪಿಸಿ ಹೋರಾಟಕ್ಕೆ ಅಣಿ ಮಾಡಿಬಿಡುತ್ತಾರೆ. ಇಂತಹವರು ಇದೀಗ ಅನಾರೋಗ್ಯದಿಂದ ನರಳಿ ಚಿಕಿತ್ಸೆ ಪಡೆಯತ್ತಿದ್ದರೂ ಜಿಲ್ಲೆಯ, ಶಾಲೆಯ ಚಟುವಟಿಕೆಗಳ ಕುರಿತೇ ಅವರ ಮನ ತುಡಿಯುತ್ತಿರುತ್ತದೆ. ತಮ್ಮ ಕಷ್ಟಗಳಿಗಿಂತ ಬಂದವರ ಕಷ್ಟ-ಸುಖಗಳನ್ನು ಕಿವಿಗೊಟ್ಟು ಕೇಳುವ ಮತ್ತು ಸ್ಪಂದಿಸುವ ಇವರ ಗುಣ ಇವರನ್ನು ದೊಡ್ಡವರನ್ನಾಗಿಸಿದೆಯೆಂದರೆ ತಪ್ಪಲ್ಲ.
     ಹಲವು ದಶಕಗಳಿಂದ ಇವರ ಮನೆ ಹಾಸನ ಜಿಲ್ಲೆಗೆ ಆಗಮಿಸುವ ಹಲವಾರು ಸಾಧು-ಸಂತರುಗಳಿಗೆ ಆಶ್ರಯ ನೀಡಿದೆ. ಅವರುಗಳು ಬಂದು ಹೋಗುವವರೆಗೆ ಅವರ ಊಟ-ಉಪಚಾರ-ವಸತಿಗಳು ಅಚ್ಚುಕಟ್ಟಾಗಿರುವಂತೆ ವ್ಯವಸ್ಥೆಗೆ ಆಧಾರವಾಗಿರುವ ಇವರು ಅವರುಗಳನ್ನು ಹತ್ತಿರದಿಂದ ಗಮನಿಸಿದ್ದಾರೆ. ಅನೇಕರ ಸ್ವಭಾವ, ನಡವಳಿಕೆಗಳ ಬಗ್ಗೆ ಇವರಿಗೆ ಬೇಸರವಿದೆ. ಆದರೂ ಇವರ ಕೈಂಕರ್ಯಕ್ಕೆ ಬಾಧಕ ಬಂದಿಲ್ಲ. ಅನೇಕ ಸಂಘ-ಸಂಸ್ಥೆಗಳು, ಸಂಘಟನೆಗಳಿಗೆ ಇವರು ಆಧಾರಪ್ರಾಯರಾಗಿದ್ದಾರೆ, ಪೋಷಕರಾಗಿದ್ದಾರೆ. ಒಂದು ಸುಂದರವಾದ ಕಟ್ಟಡವನ್ನು ಕಂಡವರು ಅದರ ಅಂದ-ಚೆಂದಗಳಿಗೆ ಮಾರು ಹೋಗುತ್ತಾರೆ. ಆದರೆ ಆ ಕಟ್ಟಡದ ಆಧಾರವಾದ ಅಡಿಪಾಯ ಮಾತ್ರ ಹೊರಗಣ್ಣುಗಳಿಗೆ ಕಾಣುವುದೇ ಇಲ್ಲ. ಇಂದು ಉಚ್ಛ್ರಾಯ ಸ್ಥಿತಿಯಲ್ಲಿರುವ ಹಲವಾರು ಸಂಸ್ಥೆಗಳು, ಸಂಘಟನೆಗಳ ಕಥೆಯೂ ಇದೇ ಆಗಿದೆ. ಇವುಗಳ ಇಂದಿನ ಸ್ಥಿತಿಗೆ ಸಿಎಸ್ಕೆಯಂತಹವರ ಅಡಿಪಾಯದ ರೀತಿಯ ಸಹಕಾರ, ಪ್ರೋತ್ಸಾಹಗಳು ಕಾರಣವೆಂಬುದನ್ನು ಮರೆಯಬಾರದು. ಸಂಸ್ಥೆಗಳು ಪ್ರಾರಂಭವಾಗಿದ್ದಾಗ ಇದ್ದ ಕಾರ್ಯಕರ್ತರುಗಳ ಜಾಗದಲ್ಲಿ ಹೊಸಬರ ಪ್ರವೇಶವಾಗಿರುವುದು, ಅವರುಗಳಿಗೆ ಹಿರಿಯರ ಕಾರ್ಯದ ಅರಿವು ಇಲ್ಲದಿರುವುದೂ ಒಂದು ಕಾರಣವಿರಬಹುದು. ಇಂದಿನ ರಾಜಕೀಯದಲ್ಲಿ ಯೋಗ್ಯರುಗಳಿಗೆ ಮುಂದೆ ಬರಲು ಅವಕಾಶ ಸೀಮಿತವಾಗಿರುವುದರ ಕುರಿತು ಅವರಿಗೆ ವಿಷಾದವಿದೆ. 
     ಹಾಸನದ ವೇದಭಾರತೀ ಸಂಸ್ಥೆ ನಾಲ್ಕು ವರ್ಷಗಳ ಹಿಂದೆ ಇವರ ಅಧ್ಯಕ್ಷತೆಯಲ್ಲೇ ಉದ್ಘಾಟಿಸಲ್ಪಟ್ಟಿತು. ಯಾವುದೇ ಜಾತಿ, ಮತ, ಪಂಥ, ಲಿಂಗ ಬೇಧವಿಲ್ಲದೆ ವೇದವನ್ನು ಕಲಿಯಬಯಸುವ ಎಲ್ಲರಿಗೂ ವೇದಾಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟಿರುವ ವೇದಭಾರತಿ ಜೊತೆಜೊತೆಗೆ ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದೆ. ಕಳೆದ ವರ್ಷದಿಂದ ಪ್ರತಿನಿತ್ಯ ಅಗ್ನಿಹೋತ್ರವನ್ನೂ ಸಾಮೂಹಿಕವಾಗಿ ಮಾಡಲಾಗುತ್ತಿದ್ದು, ಇದನ್ನು ರಾಜ್ಯದ ಹಲವೆಡೆ ಜನಪ್ರಿಯಗೊಳಿಸುವ ಕಾರ್ಯ ಸಹ ಆಗುತ್ತಿದೆ. ವೇದಭಾರತಿಯ ಎಲ್ಲಾ ಚಟುವಟಿಕೆಗಳಿಗೆ ಪೋಷಕರಲ್ಲೊಬ್ಬರಾಗಿ ಎಲ್ಲಾ ರೀತಿಯ ಸಹಕಾರವನ್ನು ಸಿಎಸ್ಕೆಯವರು ನೀಡುತ್ತಿರುವುದಕ್ಕೆ ವೇದಭಾರತಿಯ ಕಾರ್ಯಕರ್ತರು ಆಭಾರಿಯಾಗಿದ್ದಾರೆ. ವೇದಭಾರತಿಯ ಯಾವುದೇ ಚಟುವಟಿಕೆಗಳಿಗೆ ಅವರ ಶಾಲಾ ಆವರಣ ಮತ್ತು ಸೌಲಭ್ಯಗಳನ್ನು ಉಚಿತವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದೇ ಅಲ್ಲದೆ ಆರ್ಥಿಕ ಸಹಾಯವನ್ನೂ ಅಗತ್ಯ ಸಂದರ್ಭಗಳಲ್ಲಿ ಮಾಡಿರುತ್ತಾರೆ. ಇವರ ಈ ರೀತಿಯ ಅವರ ಸಹಕಾರ ಕೇವಲ ವೇದಭಾರತಿಗೆ ಅಲ್ಲದೆ ಯಾವುದೇ ಒಳ್ಳೆಯ ಕಾರ್ಯಗಳಿಗೆ ಇರುವುದು ಅವರ ದೊಡ್ಡತನವಾಗಿದೆ. ನಮ್ಮ ಕೆಳದಿ ಕವಿಮನೆತನದ ವಾರ್ಷಿಕ ಸಮಾವೇಶವನ್ನು ಇವರ ಶಾಲಾ ಆವರಣದಲ್ಲೇ ನಡೆಸಲು ಮುಕ್ತ ಅವಕಾಶ ಕಲ್ಪಿಸಿ ಸಹಕರಿಸಿದ್ದು ಒಂದು ಉದಾಹರಣೆಯಷ್ಟೇ.
     ೧೯೭೫-೭೭ರ ತುರ್ತು ಪರಿಸ್ಥಿತಿ ಕಾಲದ ನನ್ನ ಅನುಭವಗಳ ಮತ್ತು ಹೋರಾಟದಲ್ಲಿ ಹಾಸನ ಜಿಲ್ಲೆಯ ಪಾತ್ರ ಕುರಿತ ನನ್ನ ಪುಸ್ತಕ  ಆದರ್ಶದ ಬೆನ್ನು ಹತ್ತಿ . . ಕರಡನ್ನು ಮುದ್ರಣಕ್ಕೆ ಕೊಡುವ ಮುನ್ನ ಅವರಿಗೆ ತೋರಿಸಿ ಆಶೀರ್ವಾದಪೂರ್ವಕವಾಗಿ ಕೆಲವು ನುಡಿಗಳನ್ನು ದಾಖಲಿಸಲು ವಿನಂತಿಸಿದ್ದೆ. ಪುಸ್ತಕ ಓದಿದ ಅವರು ನನಗೆ ಕರೆಕಳುಹಿಸಿ ನನ್ನನ್ನು ಅಪ್ಪಿಕೊಂಡು ಆಶೀರ್ವದಿಸಿದ್ದ ಘಳಿಗೆ ಮರೆಯಲಾರೆ. ಅದರಲ್ಲಿ ಕೃತಕತೆಯ ಲವಲೇಶವೂ ಇರಲಿಲ್ಲ. ರಕ್ಷಾಪುಟದಲ್ಲಿ ಅವರ ಅಭಿಪ್ರಾಯದೊಂದಿಗೆ ಪುಸ್ತಕ ಬಿಡುಗಡೆಯಾಯಿತು. ಬಿಡುಗಡೆಯ ಸಮಾರಂಭದಲ್ಲೇ ೩೦೦ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ಪುಸ್ತಕ ಬಿಡುಗಡೆಯಾದ ರೀತಿಯೂ ವಿಭಿನ್ನವೇ! ಸಂಘದ ಅಖಿಲ ಭಾರತ ಮಟ್ಟ ಶ್ರೀ ಸು. ರಾಮಣ್ಣನವರ ಮತ್ತು ಶ್ರೀ ಸಿಎಸ್ಕೆಯವರ ಆಶಯದಂತೆ ಹಾಸನ ಜಿಲ್ಲೆಯ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಬಂಧನಕ್ಕೊಳಗಾಗಿದ್ದವರ ಸಮಾವೇಶ ಏರ್ಪಾಡಾಗಿ, ಅವರುಗಳ ಸ್ಮರಣೆ, ಸನ್ಮಾನಗಳ ನಡುವೆ ಪುಸ್ತಕ ಬಿಡುಗಡೆಯಾದದ್ದು ವಿಶೇಷ. ಅದೂ ಸಹ ಇವರ ಶಾಲೆಯ ಆವರಣದಲ್ಲಿಯೇ! ಸಮಾರಂಭದ ಅಧ್ಯಕ್ಷತೆ ವಹಿಸಿ ಬೆನ್ನು ತಟ್ಟಿದ್ದ ಇವರ ಗುಣವನ್ನು ಸ್ಮರಿಸಲೇಬೇಕು.  
     ಆರೋಗ್ಯದ ಸಮಸ್ಯೆ, ವಯಾಧಿಕ್ಯದ ಕಾರಣಗಳಿಂದಾಗಿ ಅಡೆತಡೆಗಳಿದ್ದರೂ ಸಮಷ್ಟಿ ಹಿತದ ಪ್ರಶ್ನೆಗಳು ಬಂದರೆ ಎಲ್ಲವನ್ನೂ ಮರೆತು ಕಿರಿಯರನ್ನೂ ನಾಚಿಸುವಂತೆ ಮುಂದೆ ನಿಂತು ಮಾರ್ಗದರ್ಶನ ಮಾಡುವ ಸಿಎಸ್ಕೆಯವರು ದೀರ್ಘಾಯುಷಿಗಳಾಗಿ, ಆರೋಗ್ಯವಂತರಾಗಲಿ, ಜನಮಾನಸದಲ್ಲಿ ಸದಾ ಉಳಿಯಲಿ ಎಂಬುದು ನನ್ನ ಪ್ರಾರ್ಥನೆಯಾಗಿದೆ.
-ಕ.ವೆಂ.ನಾಗರಾಜ್.
*****************

ಕೆಳದಿ ಕವಿಮನೆತನದವರ ಕುಟುಂಬ ಸಮಾವೇಶದಲ್ಲಿ ಸಿಎಸ್ಕೆ
ನನ್ನ "ಆದರ್ಶದ ಬೆನ್ನು ಹತ್ತಿ . . ." ಪುಸ್ತಕಕ್ಕೆ ಬೆನ್ನುಡಿ ಬರೆದು ಬೆನ್ನು ತಟ್ಟಿದ ಸಿಎಸ್ಕೆ
ತುರ್ತು ಪರಿಸ್ಥಿತಿಯ ಮೆಲುಕು - ಸತ್ಯಾಗ್ರಹಿಗಳಿಗೆ ಸನ್ಮಾನ ಆಯೋಜಿಸಿದ್ದ ಸಿಎಸ್ಕೆ - (10.08.2015)
ನನ್ನ "ಸಾಧನಾ ಸೋಪಾನಗಳು" ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ 
ಪುಸ್ತಕ ಬಿಡುಗಡೆ ಮಾಡಿದ ಸಿಎಸ್ಕೆ(28.08.2016)





ಮಂಗಳವಾರ, ಡಿಸೆಂಬರ್ 18, 2012

ಸಂತಸದ ಕ್ಷಣದಲ್ಲಿ ಹೊರಬಂದ ಮಾತುಗಳು


      ದಿನಾಂಕ 29-11-2012ರಂದು ನಡೆದ "ಆದರ್ಶದ ಬೆನ್ನು ಹತ್ತಿ. . " ಪುಸ್ತಕದ ಬಿಡುಗಡೆ ಕಾರ್ಯಕ್ರಮ ನನಗೆ ತೃಪ್ತಿ ಮತ್ತು ಸಂತೋಷ ನೀಡಿದೆ. ನನ್ನ ಹಿಂದಿನ "ಕವಿ ಸುಬ್ರಹ್ಮಣ್ಯಯ್ಯ" ಮತ್ತು "ಮೂಢ ಉವಾಚ"ದ ಬಿಡುಗಡೆ ಸಂದರ್ಭಗಳಲ್ಲಿ ಇಂತಹ ಅನುಭವ ನನಗಾಗಿರಲಿಲ್ಲ. ಸನ್ಮಾನ್ಯ ಶ್ರೀ ಸು. ರಾಮಣ್ಣನವರ ಪ್ರೇರಣೆ, ಕಳಕಳಿ ಅದ್ಭುತ ಕೆಲಸ ಮಾಡಿಸಿದೆ. ಮಿತ್ರ ಹರಿಹರಪುರ ಶ್ರೀಧರ ಪ್ರತಿ ಹಂತದಲ್ಲಿ ನನ್ನೊಡನೆ ಸಹಕರಿಸಿದ್ದಾರೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಸಂತ್ರಸ್ತರಾಗಿದ್ದವರು, ಹೋರಾಡಿದ್ದವರು ಆ ಸಂದರ್ಭದಲ್ಲಿ ಸೇರಿದ್ದು ಅವಿಸ್ಮರಣೀಯವಾಗಿತ್ತು. ಒಬ್ಬ ಲೇಖಕನಾಗಿ ಅಂದಿನ ಸಮಾರಂಭದಲ್ಲಿ ನನ್ನಿಂದ ಹೊರಬಂದಿದ್ದ ಮಾತುಗಳಿವು:
      ನಾನೊಬ್ಬ ಭಾವಜೀವಿ. ನನಗೆ ಬಹಳ ಸಂತೋಷವಾಗಿದೆ. ಮನದ ಭಾವನೆಗಳನ್ನು ಹೊರಹಾಕುವ ಮಾಧ್ಯಮಗಳಲ್ಲಿ ಒಂದಾದ ಬರವಣಿಗೆಗೆ ಇತ್ತೀಚಿನ ಕೆಲವು ವರ್ಷಗಳಿಂದ ನಾನು ತೊಡಗಿಕೊಂಡಿದ್ದೇನೆ. ಒಳಗೇ ಇದ್ದ ಭಾವನೆಗಳ ಒತ್ತಡದಿಂದ ಪಾರಾಗಲು ನನಗೆ ನೆರವಾಗಿರುವುದೇ ಈ ಬರವಣಿಗೆ. ಕಲ್ಪನೆಯ ವಸ್ತುಗಳು, ಸಂಗತಿಗಳು ನನ್ನ ಬರಹದ ವಸ್ತುಗಳಲ್ಲ. ಈ ಜೀವನದ ಶಾಲೆ ನನಗೆ ಕಲಿಸಿದ ಅನೇಕ ರೀತಿಯ ಪಾಠಗಳೇ ನನ್ನ ಬರಹದ ಮೂಲ ವಸ್ತುಗಳಾಗಿವೆ. ಸುಮಾರು 350-400 ರಷ್ಟು ಬಿಡಿ ಲೇಖನಗಳು, ಕವನಗಳು ನನ್ನ ಸ್ವಂತದ ಕವಿಮನ, ವೇದಜೀವನ ಅಂತರ್ಜಾಲ ತಾಣಗಳಲ್ಲಿ, ಕರ್ನಾಟಕದ ಕನ್ನಡದ ಅತಿ ದೊಡ್ಡ ಸಮುದಾಯ ತಾಣವಾದ ಸಂಪದದಲ್ಲಿ ಪ್ರಕಟವಾಗಿದೆ. ಇವನ್ನು ಯಾವುದೇ ಪತ್ರಿಕೆಗಳಿಗೆ, ಮ್ಯಾಗಝೈನುಗಳಿಗೆ ಪ್ರಕಟಿಸಲು ಕೋರಿ ಕಳಿಸಿಲ್ಲ. ಈ ತಾಣಗಳಲ್ಲಿ ನನ್ನ ಸೇವಾಕಾಲದ ಅನುಭವಗಳನ್ನು ಕಂತುಗಳಲ್ಲಿ ಸೇವಾಪುರಾಣ ಎಂಬ ರ್ಶೀಕೆಯಲ್ಲಿ ಪ್ರಕಟಿಸಲು ಪ್ರಾರಂಭಿಸಿದಾಗ ಸಿಕ್ಕ ಓದುಗರ ಪ್ರತಿಕ್ರಿಯೆಗಳು, ಮೆಚ್ಚುಗೆಗಳು ನನ್ನನ್ನು ಹೆಚ್ಚು ಬರೆಯಲು ಪ್ರೋತ್ಸಾಹ ಕೊಟ್ಟಿತು. ಇದು ಇನ್ನೂ ಮುಗಿದಿಲ್ಲ. ಈ ಸೇವಾಪುರಾಣ ಮಾಲಿಕೆಯಲ್ಲಿ ತುರ್ತು ಪರಿಸ್ಥಿತಿ ಕಾಲದ ನನ್ನ ಅನುಭವಗಳನ್ನು 'ಸರಳುಗಳ ಹಿಂದಿನ ಲೋಕ' ಎಂಬ ಶೀರ್ಷಿಕೆಯಲ್ಲಿ ದಾಖಲಿಸಿದ್ದೆ. ಈ ಭಾಗದ ಲೇಖನಗಳಿಗೆ ಸಿಕ್ಕ ಪ್ರೋತ್ಸಾಹ ನಿಜಕ್ಕೂ ಆಶ್ಚರ್ಯಕರವಾಗಿತ್ತು. ಹೆಚ್ಚಿನವರು ಇದನ್ನು ಪುಸ್ತಕ ರೂಪದಲ್ಲಿ ಹೊರತರಲು ಒತ್ತಾಯಿಸಿದ್ದರು. ಅದಕ್ಕೆ ಈಗ ಸಮಯ ಬಂದಿದೆ. ಸರಳುಗಳ ಹಿಂದಿನ ಲೋಕ ಎಂಬುದರ ಬದಲಿಗೆ ಮಿತ್ರ ಶ್ರೀಧರ್ ಸೂಚಿಸಿದ 'ಆದರ್ಶದ ಬೆನ್ನು ಹತ್ತಿ . ." ಎಂಬ ರ್ಶೀಕೆಯಲ್ಲಿ ಪ್ರಕಟವಾಗಿದೆ. ಸನ್ಮಾನ್ಯ ಶ್ರೀ ಸು.ರಾಮಣ್ಣನವರು ಹಿಂದೊಮ್ಮೆ ಹಾಸನಕ್ಕೆ ಬಂದಿದ್ದಾಗ ಅವರಿಗೆ ಈ ವಿಷಯ ತಿಳಿಸಿ, ತುರ್ತು ಪರಿಸ್ಥಿತಿ ಕಾಲದ ಅನುಭವಗಳ ಕರಡನ್ನು ಅವರಿಗೆ ಕಳಿಸಿಕೊಟ್ಟು, ಪ್ರಕಟಿಸಲು ಯೋಗ್ಯವೆಂದು ಅನ್ನಿಸಿದರೆ ಮಾತ್ರ ಮುನ್ನುಡಿ ಬರೆದುಕೊಡಬೇಕೆಂದು ಕೋರಿದ್ದೆ. ಅವರು ಮುನ್ನುಡಿ ಬರೆದು ಮೆಚ್ಚುಗೆಯ ಮಾತನ್ನಾಡಿದ್ದರಿಂದ ಧೈರ್ಯ ಮಾಡಿ ಪ್ರಕಟಿಸಿರುವೆ. ಒಬ್ಬರು ಅಖಿಲ ಭಾರತ ಮಟ್ಟದ ಹಿರಿಯ ಪ್ರಚಾರಕರಾದ ಅವರು ಆಗಾಗ್ಗೆ ಈ ಬಗ್ಗೆ ವಿಚಾರಿಸುತ್ತಿದ್ದುದಲ್ಲದೆ, ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದ್ದು ನನಗೆ ಅವರ ಬಗ್ಗೆ ಗೌರವ ನೂರ್ಮಡಿಯಾಗಿದೆ. ಅವರಿಗೆ ನನ್ನ ಹೃದಯದಾಳದ ಕೃತಜ್ಞತೆಗಳು.
     ಈ ಪುಸ್ತಕದಲ್ಲಿ ನನ್ನ ಅನುಭವಗಳ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿದ್ದ ಜನರ ಮನೋಭಾವ ಹೇಗಿತ್ತು ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ. ರಾಜಕಾರಣಿಗಳ, ಅಧಿಕಾರಿಗಳ ಭ್ರಷ್ಠತೆ ದೇಶವನ್ನು ಹೇಗೆ ಅಧೋಗತಿಗೆ ಒಯ್ಯುತ್ತದೆ ಎಂಬುದರ ಅರಿವು ಮೂಡಿಸುವ ಯತ್ನವನ್ನೂ ಮಾಡಿದ್ದೇನೆ. ಇಡೀ ದೇಶದಲ್ಲಿ ನಡೆದಂತೆ ಕರ್ನಾಟಕದಲ್ಲೂ, ಹಾಸನದಲ್ಲೂ ನಡೆದ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ಇತಿಹಾಸವನ್ನು ಜನರು ಮರೆತುಬಿಡಬಾರದು. ಈ ಜಿಲ್ಲೆಯಲ್ಲಿ 13 ಜನರು ಮೀಸಾ ಪ್ರಕಾರ ಬಂಧಿಗಳಾಗಿದ್ದು ಆ ಪೈಕಿ 7 ಜನರು ನಮ್ಮೊಂದಿಗೆ ಈಗ ಇಲ್ಲ. ಉಳಿದಿರುವ 6 ಜನರ ಪೈಕಿ ಅತಿ ಹಿರಿಯರೆಂದರೆ ಅರಸಿಕೆರೆಯ ಶ್ರೀ ದುರ್ಗಪ್ಪಶೆಟ್ಟರು ಮತ್ತು ಶ್ರೀ ಶ್ರೀನಿವಾಸಮೂರ್ತಿಗಳು. ಇನ್ನೂ ಮೀಸೆಯೇ ಬರದಿರುವ ಆಗಿನ್ನೂ 18-19 ವರ್ಷದ ತರುಣರಾಗಿದ್ದ ಪಾರಸಮಲ್ ಮತ್ತು ಪಟ್ಟಾಭಿರಾಮ ಸಹ ಮೀಸಾದಲ್ಲಿ ಬಂಧಿಗಳಾಗಿದ್ದವರು. ಬಹುಷಃ ಪಾರಸಮಲ್ ಕರ್ನಾಟಕದ ಮೀಸಾ ಬಂದಿಗಳ ಪೈಕಿ ಅತಿ ಕಿರಿಯ ವ್ಯಕ್ತಿ ಅನ್ನುವುದು ವಿಶೇಷ. ಸುಮಾರು 300 ಜನರು ಭಾರತ ರಕ್ಷಣಾ ಕಾಯದೆ ಪ್ರಕಾರ ಬಂದಿಗಳಾಗಿದ್ದರು. ಕ್ರಿಮಿನಲ್ ಪ್ರೊಸೀಜರ್ ಕೋಡಿನ ವಿವಿಧ ಕಲಮುಗಳ ಪ್ರಕಾರ ಸಾವಿರಾರು ಜನರ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಈ ಪುಸ್ತಕದಲ್ಲಿ ನನ್ನ ಅನುಭವಗಳನ್ನು ಇಲ್ಲಿ ಹೇಳಿಕೊಂಡಿರುವುದು ನಿಮಿತ್ತ ಮಾತ್ರ. ನನ್ನೊಡನೆ ಸಹಬಂದಿಗಳಾಗಿದ್ದ ನೂರಾರು ಮಿತ್ರರುಗಳು ಅನುಭವಿಸಿದ ಕಷ್ಟ-ನಷ್ಟಗಳು, ನೋವುಗಳ ಮುಂದೆ ನನ್ನದು ಏನೂ ಅಲ್ಲವೇ ಅಲ್ಲ. ನಿಜ ಹೇಳಬೇಕೆಂದರೆ ಅವರುಗಳ ತ್ಯಾಗ-ಬಲಿದಾನಗಳೇ ನನ್ನಂತಹವರು ನಂಬಿದ ಮಾರ್ಗವನ್ನು ಬಿಡದಿರಲು ಪ್ರೇರಿಸಿದ್ದು ಮತ್ತು ಹತಾಶೆಗೆ ಒಳಗಾಗದಂತೆ ಕಾಯ್ದಿದ್ದು. ಅವರೆಲ್ಲರಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ತಂದೆ-ತಾಯಿ, ಅಜ್ಜಿ, ನನ್ನ ಬಂಧುಗಳು ಆ ಸಂದರ್ಭದಲ್ಲಿ ತೋರಿಸಿದ ಅಕ್ಕರೆ, ವಿಶ್ವಾಸಗಳನ್ನು ನಾನು ನೆನೆಯಲೇ ಬೇಕು. ನನ್ನೊಡನೆ ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳೂ ಸಹ ಮಾತನಾಡಲೂ ಹೆದರುತ್ತಿದ್ದರು. ನನ್ನನ್ನು ಮಾತನಾಡಿಸಿದರೆ ಅವರಿಗೆ ಎಲ್ಲಿ ತೊಂದರೆಯಾಗುತ್ತೋ ಅನ್ನುವ ಭಯ ಅವರಿಗೆ. ಹಾಗಾಗಿ ಆಗ ನನಗೆ ಸ್ನೇಹಿತರಾಗಿದ್ದವರೆಂದರೆ ಗ್ರಂಥಾಲಯದ ಪುಸ್ತಕಗಳು ಮಾತ್ರ. ಆದರೆ ಇಬ್ಬರು ಮಹನೀಯರನ್ನು ನಾನು ನೆನೆಯಲೇಬೇಕು. ನನ್ನ ಮಾತುಗಳನ್ನು ಆಗ ಸಾವಧಾನವಾಗಿ ಕೇಳುತ್ತಿದ್ದವರೆಂದರೆ ಖಾದಿ ಭಂಡಾರದ ನರಸಿಂಹಮೂರ್ತಿಗಳು ಮತ್ತು ಸೈಂಟ್ ಜೋಸೆಫ್ ಸ್ಕೂಲ್ ಎದುರಿಗೆ ಟೈಲರ್ ಅಂಗಡಿ ಇಟ್ಟುಕೊಂಡಿದ್ದ ಜನಾರ್ಧನ ಅಯ್ಯಂಗಾರರು ಮಾತ್ರ. ನನ್ನ ಒಳಗೇ ಹೂತು ಹೋಗುತ್ತಿದ್ದ ಮಾತುಗಳಿಗೆ ಔಟ್ ಲೆಟ್ ಆಗಿದ್ದ  ಅವರುಗಳು ಈಗ ಇಲ್ಲ. ತುರ್ತು ಪರಿಸ್ಥಿತಿ ಜಾರಿಗೆ ಬಂದಾಗ ನಾನು ಆಗಿನ್ನೂ ಸರ್ಕಾರಿ ಕೆಲಸಕ್ಕೆ ಸೇರಿ 2 ವರ್ಷಗಳಾಗಿತ್ತಷ್ಟೆ. ಆರೆಸ್ಸೆಸ್ಸಿನ ಕಾರ್ಯಕರ್ತ ಎಂಬ ಕಾರಣಕ್ಕಾಗಿ ನನ್ನ ಮೇಲೆ 13 ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಿದ್ದರು. ಬೇರೆ ಬೇರೆ ಕೇಸುಗಳು ಸೇರಿ ಒಟ್ಟು 6  ತಿಂಗಳುಗಳ ಕಾಲ ಹಾಸನದ ಜೈಲಿನಲ್ಲಿದ್ದೆ. ಒಂದೂವರೆ ವರ್ಷದ ಕಾಲ ಸೇವೆಯಿಂದ ಅಮಾನತ್ತು ಮಾಡಲಾಗಿತ್ತು. ವಿಚಾರಣೆ ಕಾಯ್ದಿರಿಸಿ ನನ್ನನ್ನು ದೂರದ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿಗೆ ವರ್ಗ ಮಾಡಿದ್ದರು. ಆ ಸಂದರ್ಭದಲ್ಲಿ ಅಂದರೆ 37 ವರ್ಷಗಳ ಹಿಂದೆ ಸೇಡಂನಲ್ಲಿ ನನಗೆ ತಹಸೀಲ್ದಾರರಾಗಿದ್ದ ಶ್ರೀ ಬಿ.ವಿ.ಸ್ವಾಮಿಯವರು ಈಗ ಹಾಸನದಲ್ಲೇ ಇದ್ದಾರೆ. ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದ ಅವರು ನನಗೆ ನೈತಿಕ ಬೆಂಬಲ ನೀಡಿದ್ದವರು. ಅವರಿಗೂ ಕೃತಜ್ಞ.
     ಈ ಪುಸ್ತಕದ ಬಿಡುಗಡೆಗೆ ಮತ್ತು ಜೆಲ್ಲೆಯ ಹೋರಾಟಗಾರರನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಹರಿಹರಪುರ ಶ್ರೀಧರ್, ಪಾರಸಮಲ್, ಶಾಸ್ತ್ರಿ, ಅರಸಿಕೆರೆಯ ಸತ್ಯನಾರಾಯಣ, ಬೇಲೂರಿನ ರವಿ, ರಾಜು, ಹೊಳೆನರಸಿಪುರದ ಭಗವಾನ್, ಶಂಕರಾಚಾರಿ, ಅರಕಲಗೂಡಿನ ಹಿರಿಯಣ್ಣ, ಸಕಲೇಶಪುರದ ಸತ್ಯನಾರಾಯಣ ಗುಪ್ತ, ಹೀಗೆ ಹತ್ತು ಹಲವಾರು ಜನರು ಕೈಗೂಡಿಸಿದ್ದಾರೆ. ಮಿತ್ರ ಶ್ರೀಧರ್ ಪ್ರತಿ ಹಂತದಲ್ಲಿ ನನ್ನೊಡನೆ ಇದ್ದು ಅಮೂಲ್ಯ ಸಹಕಾರ ನೀಡಿದ್ದಾರೆ. ಹೆಸರು ಹೇಳಿದವರು ಮಾತ್ರ ಈ ಕೆಲಸ ಮಾಡಿದ್ದಾರೆ ಅಂದುಕೊಳ್ಳಬಾರದು. ಸಂಘದ ಎಲ್ಲ ಕಾರ್ಯಕರ್ತರೂ ತಮ್ಮ ಸಹಕಾರ ನೀಡಿದ್ದಾರೆ. ನಾನು ಎಲ್ಲರ ಹೆಸರನ್ನು ಹೇಳಿಲ್ಲ ಅಂತ ಯಾರೂ ತಪ್ಪು ತಿಳಿಯಬಾರದು. ಮಾನ್ಯ ರಾಮಣ್ಣನವರು ಸ್ವತಃ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಈ ಬಗ್ಗೆ ಎಲ್ಲರಿಗೂ ತಿಳಿಸಿದ್ದಲ್ಲದೆ, ದೂರವಾಣಿ ಮೂಲಕ ಸಹ ಜಿಲ್ಲೆಯ ಹಲವಾರು ಕಾರ್ಯಕರ್ತರಿಗೆ ನೆನಪಿಸಿದ್ದು, ಅವರ ಕಾಳಜಿ, ಕಳಕಳಿ ಬಗ್ಗೆ ನಾನು ಮೂಕನಾಗಿದ್ದೇನೆ. ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಸ್ಥಳದ ಜೊತೆಗೆ ಧನದ ಸಹಕಾರವನ್ನೂ ನೀಡಿದ್ದಾರೆ. ಪ್ರಕಾಶ ಯಾಜಿ, ನಾಗಭೂಷಣ, ರಾಜು, ಶಾಮಸುಂದರ್, ರಾಮಸ್ವಾಮಿ, ಪುಸ್ತಕವನ್ನು ಅಂದವಾಗಿ ಮುದ್ರಿಸಿಕೊಟ್ಟ ಬಾಲಾಜಿ ಪ್ರಿಂಟರ್ಸ್ ಪಾಂಡುರಂಗ, ಮೈಕ್ ಕುಮಾರಸ್ವಾಮಿ, ಪತ್ರಕರ್ತ ಪ್ರಭಾಕರ್ ಮುಂತಾದವರ ಸಹಕಾರಕ್ಕೆ ನನ್ನ ವಂದನೆಗಳನ್ನು ಸಲ್ಲಿಸುವುದು ನನ್ನ ಕರ್ತವ್ಯ. ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಚಾರ ನೀಡಿದ ಎಲ್ಲ ಪತ್ರಕರ್ತರಿಗೂ ನನ್ನ ವಂದನೆಗಳು. ನನ್ನ ಸಹಜ ಮರೆವಿನಿಂದ ಯಾರನ್ನಾದರೂ ಹೆಸರಿಸದೆ ಬಿಟ್ಟಿದ್ದರೆ ಅದು ಉದ್ದೇಶ ಪೂರ್ವಕ ಅಲ್ಲ, ಯಾರೂ ತಪ್ಪು ತಿಳಿಯದೆ ದೊಡ್ಡ ಮನಸ್ಸು ಮಾಡಬೇಕು. ಪ್ರತ್ಯಕ್ಞ, ಪರೋಕ್ಷ ಸಹಕಾರ ನೀಡಿದ ಎಲ್ಲಾ ಮಹನೀಯರಿಗೂ ನನ್ನ ಕೃತಜ್ಞತೆಗಳು.
     ಈ ಜಿಲ್ಲೆಯ ಎಲ್ಲಾ ಹೋರಾಟಗಾರರು ತಮ್ಮ ತಮ್ಮ ಅನುಭವಗಳನ್ನು ದಾಖಲಿಸಿ, ಅವುಗಳೆಲ್ಲವನ್ನೂ ಸಂಗ್ರಹಿಸಿ ಜಿಲ್ಲೆಯ ಹೋರಾಟದ ಸಮಗ್ರ ಚಿತ್ರಣ ಹೊರತರಬೇಕು, ಆ ಮೂಲಕ ಅದು ಇತಿಹಾಸದ ಕಾಲಗರ್ಭದಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು ಎಂಬುದು ನನ್ನ ಬಯಕೆ. ಈಗಾಗಲೇ ಹೆಚ್ಚಿನವರು ಸ್ವರ್ಗಸ್ಥರಾಗಿದ್ದಾರೆ. ಉಳಿದಿರುವವರೂ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಆದ್ದರಿಂದ ಈ ಕೆಲಸ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆಗಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ಆಸಕ್ತರು ಕೈಜೋಡಿಸಿದರೆ ಇದು ಕಷ್ಟವೇನಲ್ಲ. ಸಂಘದ ಜಿಲ್ಲೆಯ ಕಾರ್ಯಕರ್ತರು ಈ ಬಗ್ಗೆ ಗಮನಿಸುವುದು ಸಂಘದ ಕಾರ್ಯದೃಷ್ಟಿಯಿಂದ ಅಪೇಕ್ಷಣೀಯ. ಈಗಿನವರಿಗೆ ಇದು ಖಂಡಿತಾ ಪ್ರೇರಣೆ ನೀಡುತ್ತದೆ. ಈ ಕಾರ್ಯಕ್ಕೆ ನನ್ನ ಯಾವುದೇ ರೀತಿಯ ಸಹಕಾರ ಕೊಡಲು ನಾನು ಸಿದ್ಧನಿದ್ದೇನೆ. ನನ್ನ ಈ ಪುಸ್ತಕದ ಬಿಡುಗಡೆ ಇದಕ್ಕೆ ನಾಂದಿಯಾಗಲಿ ಎಂದು ಹಾರೈಸುತ್ತೇನೆ. 
-ಕ.ವೆಂ.ನಾಗರಾಜ್.

ಶನಿವಾರ, ಡಿಸೆಂಬರ್ 1, 2012

"ಆದರ್ಶದ ಬೆನ್ನು ಹತ್ತಿ . ." ಕೃತಿ ಲೋಕಾರ್ಪಣೆ

     1975-77ರ ತುರ್ತು ಪರಿಸ್ಥಿತಿಯ ಕಾಲದಲ್ಲಿ ಜನಸಾಮಾನ್ಯರ ಪರಿಸ್ಥಿತಿ ಹೇಗಿತ್ತು, ಜನರ, ಅಧಿಕಾರಸ್ಥರ ಮನೋಸ್ಥಿತಿ ಹೇಗಿತ್ತು, ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಹತ್ತಿಕ್ಕಿದ್ದ ಆ ಕಾಲದಲ್ಲಿ ಅದನ್ನು ವಿರೋಧಿಸಿದವರನ್ನು ಹೇಗೆ ದಮನಿಸಲಾಗುತ್ತಿತ್ತು ಎಂಬುದರ ಕಿರುದರ್ಶನ ಮಾಡುವ ಕ.ವೆಂ.ನಾಗರಾಜರ ಕೃತಿ "ಆದರ್ಶದ ಬೆನ್ನು ಹತ್ತಿ . ."ಯ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 29-11-2012ರಂದು ವಿಭಿನ್ನವಾಗಿ ಆಯೋಜಿಸಲಾಗಿತ್ತು. ಕೃತಿ ಬಿಡುಗಡೆಯ ಪೂರ್ವಭಾವಿಯಾಗಿ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಸತ್ಯಾಗ್ರಹ ಮಾಡಿದ್ದ, ಮೀಸಾ, ಭಾರತ ರಕ್ಷಣಾ ಕಾಯದೆಯನ್ವಯ ಬಂಧಿತರಾಗಿದ್ದವರ ಸಮಾವೇಶ ಏರ್ಪಡಿಸಿದ್ದು ವಿಶೇಷವೇ ಸರಿ. ಸುಮಾರು 80 ಸತ್ಯಾಗ್ರಹಿಗಳು ಸೇರಿದ್ದು, ಅಂದಿನ ತಮ್ಮ ಅನುಭವಗಳನ್ನು ಹಂಚಿಕೊಂಡದ್ದು ನೆರೆದಿದ್ದವರಿಗೆ ಒಂದು ವಿಶೇಷ ಅನುಭವ ಉಂಟು ಮಾಡಿತು.
     ಈ ಸಮಾವೇಶದ ನಂತರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅಂದು 'ಮೀಸಾ' ಕಾಯದೆಯನ್ವಯ ಬಂಧಿತರಾಗಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿಯವರು ಕೃತಿ ಬಿಡುಗಡೆ ಮಾಡಿ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಕೃತಿಗಳು ಯುವಕರಿಗೆ ಮಾರ್ಗದರ್ಶನ ನೀಡಲು ಸಹಕಾರಿ ಮತ್ತು ಅಗತ್ಯವೆಂದರು. ಲೇಖಕ ನಾಗರಾಜ್ ಮಾತನಾಡುತ್ತಾ ತಮ್ಮ ಸೇವಾಕಾಲದ ಅನುಭವಗಳನ್ನು ಅಂತರ್ಜಾಲ ತಾಣಗಳಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದಾಗ ತುರ್ತು ಪರಿಸ್ಥಿತಿ ಕಾಲದ ತಮ್ಮ ಅನುಭವಗಳಿಗೆ ಬಂದ ಅನೇಕ ಪ್ರತಿಕ್ರಿಯೆಗಳು ಪುಸ್ತಕ ಪ್ರಕಟಣೆಗೆ ಪ್ರೇರಿಸಿತೆಂದು ಹೇಳಿದರು. ಜಿಲ್ಲೆಯ ಎಲ್ಲಾ ಹೋರಾಟಗಾರರು ನಡೆಸಿದ ಹೋರಾಟದ ಸಮಗ್ರ ಚಿತ್ರಣವಿರುವ ಕೃತಿ ರಚಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದ ಅವರು ಈ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ಕೊಡಲು ಸಿದ್ದವೆಂದು ತಿಳಿಸಿದರು.
     ತುರ್ತು ಪರಿಸ್ಥಿತಿ ವಿರೋಧಿಸಿ ಕರ್ನಾಟಕದಲ್ಲಿ ನಡೆದ ಐತಿಹಾಸಿಕ ಆಂದೋಲನದ ಕುರಿತು ಮಾತನಾಡಿದ ಪ್ರಧಾನ ಭಾಷಣಕಾರರಾದ ರಾ. ಸ್ವ. ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಈ ಕೃತಿ ಯುವಜನರಿಗೆ ಪ್ರೇರಣೆ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದು ತಿಳಿಸಿದರಲ್ಲದೆ, ಇಂದಿನ ಕಲುಷಿತ ವಾತಾವರಣದಲ್ಲಿ ಭ್ರಷ್ಠ ವ್ಯವಸ್ಥೆ ವಿರುದ್ಧ ಜಾಗೃತರಾಗಿರಬೇಕೆಂದು ಕರೆ ನೀಡಿದರು. 'ಮೀಸಾ' ಕಾಯದೆಯನ್ವಯ ಬಂಧಿತರಾಗಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿ, ಶ್ರೀ ಕೆ.ಆರ್. ಶ್ರೀನಿವಾಸ ಮೂರ್ತಿ, ಹಾಸನದ ಶ್ರೀ ಪಾರಸಮಲ್ ಮತ್ತು ಸಕಲೇಶಪುರದ ಶ್ರೀ ಸತ್ಯನಾರಾಯಣ ಗುಪ್ತರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಪ್ರೇರಕರಾಗಿದ್ದ ಶ್ರೀ ಸು. ರಾಮಣ್ಣನವರನ್ನು ಗೌರವಿಸಲಾಯಿತು. ಲೇಖಕ ಶ್ರೀ ಕ.ವೆಂ.ನಾಗರಾಜರನ್ನು ಅಭಿನಂದಿಸಲಾಯಿತು. ಶ್ರೀ ಹರಿಹರಪುರ ಶ್ರೀಧರ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೆ ಧನ್ಯವಾದ ಸಮರ್ಪಿಸಿದರು.









ಅಪೂರ್ವ ಸಮ್ಮಿಲನ ಹಾಗೂ "ಆದರ್ಶದ ಬೆನ್ನು ಹತ್ತಿ . ." ಕೃತಿ ಲೋಕಾರ್ಪಣೆ

"ಹಾಂ! ನೀನಿನ್ನೂ ಬದುಕಿದ್ದೀಯೇನೋ?"
"ನೀನೂ ಇದೀಯೇನೋ?"
      36-37 ವರ್ಷಗಳ ನಂತರದಲ್ಲಿ ಪ್ರಥಮತಃ ಭೇಟಿಯಾದ ವೃದ್ಧರಿಬ್ಬರ ನಡುವಣ ಉದ್ಗಾರಗಳಿವು. ಇದೇ ರೀತಿಯ ಅನುಭವ ಅಲ್ಲಿದ್ದ ಇನ್ನೂ ಹಲವರದು. ಕೆಲವರು ಭಾವಾತಿರೇಕದಿಂದ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಕೆಲವರ ಕಣ್ಣಿನಲ್ಲಿ ಆನಂದಾಶ್ರುಗಳು ತುಳುಕಿದವು. ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ಇಂತಹ ಭಾವನೋತ್ತುಂಗದ ಕ್ಷಣಗಳಿಗೆ ಸಾಕ್ಷಿಯಾದದ್ದು ಹಾಸನದಲ್ಲಿ 29-11-2012ರಲ್ಲಿ ನಡೆದ 1975-77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರ, ತುರಂಗವಾಸ ಅನುಭವಿಸಿದವರ ಸಮಾವೇಶದಲ್ಲಿ. ಸುಮಾರು 80 ಹೋರಾಟಗಾರರು ಉಪಸ್ಥಿತರಿದ್ದ ಆ ಸಮಾವೇಶವನ್ನು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುವ ನನ್ನ ಕೃತಿ "ಆದರ್ಶದ ಬೆನ್ನು ಹತ್ತಿ . ."ಯ ಬಿಡುಗಡೆಯ ಪೂರ್ವಭಾವಿಯಾಗಿ ಯೋಜಿಸಲಾಗಿತ್ತು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗೆ ಗ್ರಹಣ ಹಿಡಿದಿದ್ದ, ಪತ್ರಿಕಾ ಸೆನ್ಸಾರ್ ಜಾರಿಯಲ್ಲಿದ್ದ, ದೇಶ ಕ್ರಮೇಣ ಸರ್ವಾಧಿಕಾರದೆಡೆಗೆ ಜಾರುತ್ತಿದ್ದ ಸಂದರ್ಭದಲ್ಲಿ ದೇಶದಲ್ಲಿ ಪುನಃ ಪ್ರಜಾಪ್ರಭುತ್ವ ಸ್ಥಾಪನೆಗೆ ಅನುವು ಮಾಡಿಕೊಟ್ಟದ್ದು ರಾ.ಸ್ವ.ಸಂಘ ಮುಂಚೂಣಿಯಲ್ಲಿ ನಿಂತು ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ನಡೆಸಿದ ಅಭೂತಪೂರ್ವ ಆಂದೋಲನ. ಆ ಐತಿಹಾಸಿಕ ಆಂದೋಲನದ ವಿವರ 1970ರ ದಶಕದ ನಂತರದಲ್ಲಿ ಜನಿಸಿದವರಿಗೆ ಇರಲಾರದು. ಅಂದು ಕಷ್ಟ-ನಷ್ಟಗಳನ್ನು ಸಹಿಸಿ ನೋವನುಂಡವರ ತ್ಯಾಗ, ಬಲಿದಾನಗಳಿಂದ ಉಳಿದ ದೇಶದ ಪ್ರಜಾಸತ್ತೆಯನ್ನು ಇಂದಿನ ರಾಜಕಾರಣಿಗಳು ನೈತಿಕ ಅಧೋಗತಿಗೆ ಒಯ್ಯುತ್ತಿರುವುದನ್ನು ಕಂಡು ಅಂದಿನ ಹೋರಾಟಗಾರರು ಮರುಗದೇ ಇರಲಾರರು. ಭ್ರಷ್ಠಾಚಾರದ ವಿರುದ್ಧ, ಸರ್ವಾಧಿಕಾರದ ವಿರುದ್ಧ ಸೆಣಸಿದವರ ಅಂದಿನವರ ಮನೋಭಾವ ಇಂದಿನ ತರುಣರಿಗೆ ಮೂಡದಿದ್ದರೆ ಪರಿಸ್ಥಿತಿಯ ಸುಧಾರಣೆಯಾಗುವುದು ದುಸ್ತರವೇ ಸರಿ.
     ಹಾಸನ ಜಿಲ್ಲೆಯಲ್ಲಿ 13 ಜನರು ಆಂತರಿಕ ಭದ್ರತಾ ಶಾಸನದ ಅನ್ವಯ (ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲದೆ 2 ವರ್ಷಗಳ ಕಾಲ ಯಾರನ್ನೇ ಅಗಲಿ ಬಂಧಿಸಲು ಅವಕಾಶ ಕೊಟ್ಟಿದ್ದ ಕಾಯದೆ) ಬಂದಿಗಳಾಗಿದ್ದರು. ಸರಿಯಾಗಿ ಮೀಸೆಯೇ ಮೂಡಿರದಿದ್ದ ಆಗ 18-19 ವರ್ಷದ ತರುಣರಾದ ಹಾಸನದ ಪಾರಸಮಲ್ ಮತ್ತು ಅರಕಲಗೂಡಿನ ಪಟ್ಟಾಭಿರಾಮರೂ ಅವರಲ್ಲಿ ಸೇರಿದ್ದರು. ಆ ಪೈಕಿ 7 ಜನರು ಈಗ ದಿವಂಗತರು. ಸಂಘದ ಜಿಲ್ಲಾ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರಕೈ ಸಹ ಮೀಸಾ ಬಂದಿಯಾಗಿದ್ದು, ಆಗ ಅನುಭವಿಸಿದ ಹಿಂಸೆಯ ಕಾರಣದಿಂದ ಕೆಲವು ವರ್ಷಗಳ ನಂತರದಲ್ಲಿ 30-32ರ ಕಿರಿಯ ವಯಸ್ಸಿನಲ್ಲೇ ಮತಿವಿಕಲ್ಪತೆಗೆ ಒಳಗಾಗಿ ಮೃತಪಟ್ಟವರು. 300ಕ್ಕೂ ಹೆಚ್ಚು ಜನರನ್ನು ಭಾರತ ರಕ್ಷಣಾ ಕಾಯದೆಯ ಅನ್ವಯ ಬಂಧಿಸಿದ್ದರು. ದಂಡ ಪ್ರಕ್ರಿಯಾ ಸಂಹಿತೆಯ ಪ್ರಕಾರ ಮೊಕದ್ದಮೆಗಳನ್ನು ಸಾವಿರಾರು ಜನರ ಮೇಲೆ ಹೂಡಿದ್ದರು. ಕೊನೆ ಕೊನೆಗೆ ಜೈಲುಗಳಲ್ಲಿ ಬಂದಿಗಳನ್ನು ಇಡಲು ಸಾಧ್ಯವಾಗದಾದಾಗ ಸತ್ಯಾಗ್ರಹಿಗಳನ್ನು ಬಂಧಿಸಿ, ಹೊಡೆದು, ಬಡಿದು ವಾಹನಗಳಲ್ಲಿ ಕರೆದೊಯ್ದು ದೂರದ ಸ್ಥಳಗಳಲ್ಲಿ ಬಿಟ್ಟು ಬರುತ್ತಿದ್ದ ಸಂದರ್ಭಗಳೂ ಬಂದಿದ್ದವು. ಅಂತಿಮವಾಗಿ ಜನತೆಯದೇ ಜಯವಾಯಿತು. ಜಿಲ್ಲೆಯಲ್ಲಿ ಅಂತಹ ಪ್ರೇರಣಾದಾಯಿ ಹೋರಾಟ ಮಾಡಿದವರನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಮಾಡಲು ನಿರ್ಧರಿಸಿ ಮಿತ್ರ ಹರಿಹರಪುರ ಶ್ರೀಧರ ಮತ್ತು ನಾನು ಜಿಲ್ಲೆಯಲ್ಲಿ ಪ್ರವಾಸ ಮಾಡಿದೆವು. ಉತ್ತಮ ಸ್ಪಂದನ ಸಿಕ್ಕಿತು. ಅಂದು ಹೋರಾಡಿದ್ದ ಹಲವರು ಸ್ವರ್ಗವಾಸಿಗಳಾಗಿದ್ದರು. ಹಲವರು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ತಿಳಿಯಲಿಲ್ಲ. ಹಲವರು ವೃದ್ಧಾಪ್ಯದ ಕಾರಣದ ಸಹಜ ಅನಾರೋಗ್ಯ ಕಾರಣದಿಂದ ಪ್ರಯಾಣ ಮಾಡಲು ಕಷ್ಟವಿರುವ ಸ್ಥಿತಿಯಲ್ಲಿದ್ದರು. ಕೆಲವರಿಗೆ ಅನಿವಾರ್ಯ ಕಾರಣಗಳಿಂದ ಅಂದು ಬರಲು ಕಷ್ಟವಿತ್ತು. ಹಾಗಾಗಿ ನಮ್ಮ ಪ್ರಯತ್ನದ ಮಿತಿಯಲ್ಲಿ ಮಾಡಿದ ಪ್ರಯತ್ನಕ್ಕೆ ಅಂದು ಹಾಜರಿದ್ದ 80 ವೃದ್ಧತರುಣರು ಉಪಸ್ಥಿತರಿದ್ದುದು ಯಶಸ್ಸು ಸಿಕ್ಕಿತ್ತೆಂದೇ ಹೇಳಬಹುದು. ಕಾರ್ಯಕ್ರಮಕ್ಕೆ ಬರಲಾಗದಿದ್ದ ಹಲವರು ಅನೇಕ ಸಲ ದೂರವಾಣಿ ಮಾಡುತ್ತಾ, ಅದಕ್ಕಾಗಿ ಪೇಚಾಡಿಕೊಂಡು ಕಾರ್ಯಕ್ರಮದ ವಿವರ ಪಡೆಯುತ್ತಿದ್ದುದು ಅವರ ಕಳಕಳಿ ತೋರಿಸುತ್ತಿತ್ತು.
     ಜೈಲಿನಲ್ಲಿ ಬಂದಿಗಳು ಹೇಳಿಕೊಳ್ಳುತ್ತಿದ್ದ 'ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲೇಳಲಿ' ಎಂಬ ಸಮೂಹಗೀತೆಯನ್ನು ಎಲ್ಲರೂ ಒಕ್ಕೊರಳಿನಿಂದ ಎದೆ ಸೆಟೆಸಿ, ಚಪ್ಪಾಳೆ ಹಾಕುತ್ತಾ ಹೇಳಿದರು. ಬಂದಿದ್ದವರೆಲ್ಲರು ತಮ್ಮ ತಮ್ಮ ಅನುಭವಗಳ ಬುತ್ತಿಯನ್ನು ತೆರೆಯುತ್ತಿದ್ದಂತೆ ಕಾಲ 37 ವರ್ಷಗಳ ಹಿಂದಕ್ಕೆ ಸರಿದಿತ್ತು. ಅನುಭವಗಳನ್ನು ಹೇಳಿಕೊಳ್ಳುವಾಗ ಅವರ ಕಣ್ಣುಗಳಲ್ಲಿನ ಮಿಂಚು, ಮುಖದಲ್ಲಿ ವ್ಯಕ್ತವಾಗುತ್ತಿದ್ದ ಆನಂದ, ಸಾರ್ಥಕ್ಯ ಭಾವವನ್ನು ಹೊರಸೂಸುತ್ತಿತ್ತು. ಅವರ ತಾರುಣ್ಯ ಮರುಕಳಿಸಿತ್ತು. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ರಾತ್ರಿ ಧ್ವಜಸ್ಥಂಭದ ಮೇಲೆ ಕಪ್ಪು ಧ್ವಜ ಹಾರಿಸಿ ಕೆಳಗೆ ಇಳಿದು ಬರುವಾಗ ಕಂಬಕ್ಕೆ ಗ್ರೀಸು ಹಚ್ಚಿ ಕೆಳಗೆ ಇಳಿದಿದ್ದ ಮತ್ತು ಆ ಕಾರಣಕ್ಕಾಗಿ ಪೋಲಿಸರ ಆತಿಥ್ಯ ಪಡೆದಿದ್ದ ಅರಕಲಗೂಡಿನ ಅನಂತ, ಹೊಳೆನರಸಿಪುರದ ಸಂತೆಯಲ್ಲಿ ಅಂದು ಪ್ರಸಾರ ಮಾಡುತ್ತಿದ್ದ ಭೂಗತ ಪತ್ರಿಕೆ 'ಕಹಳೆ'ಯನ್ನು ಟಾಂ ಟಾಂ ಹೊಡೆಯುತ್ತಾ ಹಂಚಿಸಿದ್ದಕ್ಕಾಗಿ ಪೋಲಿಸರಿಂದ ಹೊಡೆತ ತಿಂದಿದ್ದ ಭಗವಾನ್ ಮತ್ತು ಅವನ ಮಿತ್ರರು, ಸತ್ಯಾಗ್ರಹ ಮಾಡಿ ಬಂದಿಗಳಾಗಿದ್ದವರು, ಜೈಲಿನಲ್ಲಿ 10 ತಿಂಗಳುಗಳಿಗೂ ಹೆಚ್ಚು ಕಾಲವಿದ್ದು ಬಿಡುಗಡೆಯಾದ ನಂತರ ಮನೆಗೆ ಹೋಗದೆ ಮತ್ತೆ ಹೋರಾಟದ ಕೆಲಸಕ್ಕೆ ಆದ್ಯತೆ ನೀಡಿದ್ದ ಬೇಲೂರಿನ ರವಿ ಮತ್ತು ಗೆಳೆಯರು, ಅರಸಿಕೆರೆಯಲ್ಲಿ ನಡೆದ ರಂಗು ರಂಗಿನ ಸತ್ಯಾಗ್ರಹದ ವಿವರಗಳು, ಅನುಭವಿಸಿದ ಚಿತ್ರಹಿಂಸೆಗಳನ್ನು ತೆರೆದಿಟ್ಟ ರಾಮಚಂದ್ರ, ಗೋವಿಂದರಾಜು, ಬಸವರಾಜು, ಸತ್ಯನಾರಾಯಣ ಮುಂತಾದವರು, ಸಕಲೇಶಪುರದ ಸತ್ಯನಾರಾಯಣಗುಪ್ತ ನೀಡಿದ ರೋಚಕ ಮಾಹಿತಿಗಳು, ಹಾಸನದ ಪಾರಸಮಲ್, ನಾಗರಾಜ್, ಚಂದ್ರಶೇಖರ್, ಜಯಪ್ರಕಾಶ್ ಮುಂತಾದವರ ಅನುಭವಗಳು ನೆರೆದಿದ್ದವರನ್ನು ವಿಸ್ಮಿತಗೊಳಿಸಿದ್ದು ಸತ್ಯ. 
     ನಮ್ಮ ನಡುವೆ ಈಗ ಇಲ್ಲದ, ಸ್ವರ್ಗಸ್ಥರಾದವರ ಹೆಸರುಗಳನ್ನು ಹೇಳಲು ಬಂದವರನ್ನು ಕೋರಿದಾಗ ಸುಮಾರು 40 ಜನರ ಹೆಸರುಗಳು ಕೇಳಿಬಂದವು. ಅವರುಗಳು ಮಾಡಿದ ಕೆಲಸಗಳು ಮನಃಪಟಲದ ಮೇಲೆ ಮೂಡಿದವು. ಅಗಲಿದ ಆ ಎಲ್ಲಾ ಧೀರರಿಗೆ ಶ್ರದ್ಧಾಂಜಲಿಯಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಎಲ್ಲರ ಮಾತುಗಳನ್ನು ಕೇಳಿದ ನಂತರ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಮಾತನಾಡಿ ಸಂಕಟದ ಕಾಲದಲ್ಲಿ ನಿಸ್ವಾರ್ಥ ಭಾವದಿಂದ ಮಾಡಿದವರ ತ್ಯಾಗ, ಬಲಿದಾನಗಳು ಎಂದಿಗೂ ಮಾರ್ಗದರ್ಶಿಯಾಗಿ ಉಳಿಯುತ್ತದೆ ಎಂದರಲ್ಲದೆ, ಇಂದಿನ ರಾಜಕೀಯ ಪರಿಸ್ಥಿತಿಯಿಂದಾಗಿ ಧೃತಿಗೆಡದೆ ದೇಶಹಿತವನ್ನು ಮುಂದಿರಿಸಿಕೊಂಡು ಕೆಲಸ ಮಾಡಲು ಮತ್ತು ಯುವಕರಿಗೆ ಪ್ರೇರಿಸಲು ಕೇಳಿಕೊಂಡರು. ಹಿರಿಯರಾದ ಶ್ರೀ ಕೆ.ಎನ್. ದುರ್ಗಪ್ಪಶ್ರೇಷ್ಠಿಯವರು "ಆದರ್ಶದ ಬೆನ್ನು ಹತ್ತಿ . ." ಕೃತಿಯನ್ನು ಬಿಡುಗಡೆ ಮಾಡಿ ಶುಭ ಕೋರಿದರು.
     ಹಿಂದೆ ಮೀಸಾ ಬಂದಿಗಳಾಗಿದ್ದು, ಈಗ ನಮ್ಮ ನಡುವೆ ಇರುವ ಜಿಲ್ಲೆಯ 6 ಜನರ ಪೈಕಿ ಸಮಾವೇಶದಲ್ಲಿ ಹಾಜರಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿ, ಶ್ರೀ ಕೆ. ಆರ್. ಶ್ರೀನಿವಾಸ ಮೂರ್ತಿ, ಹಾಸನದ ಪಾರಸಮಲ್ ಮತ್ತು ಸಕಲೇಶಪುರದ ಶ್ರೀ ಸತ್ಯನಾರಾಯಣ ಗುಪ್ತರನ್ನು ಸನ್ಮಾನಿಸಲಾಯಿತು. ಮಾರ್ಗದರ್ಶಿ ಭಾಷಣ ಮಾಡಿದ ಮತ್ತು ಕಾರ್ಯಕ್ರಮಕ್ಕೆ ಪ್ರೇರೇಪಣೆ ನೀಡಿದ್ದ ಶ್ರೀ ಸು. ರಾಮಣ್ಣನವರನ್ನು ಗೌರವಿಸಲಾಯಿತು. 'ಆದರ್ಶದ ಬೆನ್ನು ಹತ್ತಿ . .' ಕೃತಿಯ ಲೇಖಕರನ್ನು ಅಭಿನಂದಿಸಲಾಯಿತು. ಹರಿಹರಪುರ ಶ್ರೀಧರ್ ಸಹಕರಿಸಿದ ಎಲ್ಲರಿಗೆ ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮ ಬಂದಿದ್ದವರಿಗೆ ಸಂತೋಷ ನೀಡಿದ್ದರೆ, ಆಯೋಜಿಸಿದವರಿಗೆ ಧನ್ಯತಾಭಾವ ಮೂಡಿಸಿತ್ತು.

ಸಮಾವೇಶದ ಕೆಲವು ದೃಷ್ಯಗಳಿವು: