ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ನವೆಂಬರ್ 10, 2010

ಮೂಢ ಉವಾಚ -23: ಗೆಲುವು

ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು ಹಿಂದಕ್ಕೆ ಇಡದೆ|
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸುವುದು ಕಾಣು ಮೂಢ||


ಕಷ್ಟನಷ್ಟಗಳೆರಗಿ ಕಾಡಿ ದೂಡಲುಬಹುದು
ಆಸೆ ಆಮಿಷಗಳು ದಾರಿ ತಪ್ಪಿಸಬಹುದು|
ಮೈಮರೆತು ಜಾರದೆ ನಿರಾಶೆಗೆಡೆಗೊಡದೆ
ಅಡಿಯ ಮುಂದಿಡಲು ಗೆಲುವೆ ಮೂಢ||


ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ
ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ?|
ವೀರನಿಗೆ ಅವಕಾಶ ಹೇಡಿಗದು ನೆಪವು
ನಿಲುವು ಸರಿಯಿರಲು ಗೆಲುವೆ ಮೂಢ||


ಅನುಭವದ ನೆಲೆಯಲ್ಲಿ ಬುದ್ಧಿಯ ಒರೆಯಲ್ಲಿ
ಆತ್ಮವಿಶ್ವಾಸವದು ತುಂಬಿ ತುಳುಕಿರಲು|
ಅಪಾಯವೆದುರಿಸುವ ಗಟ್ಟಿತನವಿರಲು
ನಾಯಕನು ಉದಯಿಸುವ ಕಾಣು ಮೂಢ||
********************
-ಕವಿನಾಗರಾಜ್.

ಮೂಢ ಉವಾಚ -22

                    ಭಯ
ಕೆಡುಕಾಗುವ ಭಯ ಕೆಡುಕ ತಡೆದೀತು
ರೋಗದ ಭಯ ಚಪಲತೆಯ ತಡೆದೀತು|
ಶಿಕ್ಷೆಯ ಭಯವದು ವ್ಯವಸ್ಥೆ ಉಳಿಸೀತು
ಗುಣ ರಕ್ಷಕ ಭಯಕೆ ಜಯವಿರಲಿ ಮೂಢ||


ನರಕದ ಭಯ ಉಳಿಸೀತು ಸ್ವರ್ಗವ
ಭಯವಿರೆ ಮಾನವ ಇಲ್ಲದಿರೆ ದಾನವ|
ಭಯದಿಂ ವ್ಯಷ್ಟಿ ಸಮಷ್ಟಿಗೆ ಕ್ಷೇಮಭಾವ
ಲೋಕಹಿತ ಕಾರಕವು ಭಯವೆ ಮೂಢ||

               ಗೊಂದಲ
ಮನದಲ್ಲಿ ಒಂದು ಹೇಳುವುದು ಮತ್ತೊಂದು
ಹೇಳಿದ್ದು ಒಂದು ಮಾಡುವುದು ಮತ್ತೊಂದು|
ಒಂದನಿನ್ನೊಂದು ನುಂಗಿರಲು ಗೊಂದಲವು
ನೆಮ್ಮದಿಯ ನುಂಗುವುದು ಮೂಢ||

                ನಿಜವೈರಿ
ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು
ಉಸಿರು ನಿಲ್ಲುವವರೆಗೆ ಕಾಡುವವನಿವನು|
ಧೃಢಚಿತ್ತ ಸಮಚಿತ್ತಗಳಾಯುಧವ ಮಾಡಿ
ಒಳವೈರಿಯನು ಅಟ್ಟಿಬಿಡು ಮೂಢ||

****************
-ಕವಿನಾಗರಾಜ್.

ಸೋಮವಾರ, ನವೆಂಬರ್ 8, 2010

ಸೇವಾಪುರಾಣ22: ಗುಲ್ಬರ್ಗ ತೋರಿಸಿದರು-7 : ತುರ್ತು ಪರಿಸ್ಥಿತಿಯ ಕೊನೆಯ ದಿನಗಳು

ತುರ್ತು ಪರಿಸ್ಥಿತಿಯ ಕೊನೆಯ ದಿನಗಳು
     ತುರ್ತು ಪರಿಸ್ಥಿತಿ ವಿರುದ್ಧದ ಪ್ರತಿಭಟನೆಯ ಕಾವು ಹೆಚ್ಚಾದಂತೆ ಕೇಂದ್ರ ಸರ್ಕಾರದ ನಾಯಕರು ತುರ್ತು ಪರಿಸ್ಥಿತಿ ಹಿಂತೆಗೆದುಕೊಂಡು ಲೋಕಸಭೆಗೆ ಚುನಾವಣೆ ಘೋಷಿಸಬೇಕಾಯಿತು. ಆರೆಸ್ಸೆಸ್ ಸೇರಿದಂತೆ ವಿವಿಧ ಸಂಘಟನೆಗಳ ವಿರುದ್ಧ ಹೇರಿದ್ದ ನಿಷೇಧ ರದ್ದಾಯಿತು. ಕಮ್ಯುನಿಷ್ಟರನ್ನು ಹೊರುಪಡಿಸಿ ಭಿನ್ನಮತೀಯ ಕಾಂಗ್ರಸ್ಸಿಗರೂ ಒಳಗೊಂಡಂತೆ ಎಲ್ಲಾ ಪ್ರಮುಖ ಪ್ರತಿಪಕ್ಷಗಳೂ ಒಗ್ಗೂಡಿ ಜನತಾಪಕ್ಷ ಎಂಬ ಹೊಸ ರಾಜಕೀಯ ಪಕ್ಷ ರಚಿಸಿಕೊಂಡು ಕಾಂಗ್ರೆಸ್ ವಿರುದ್ಧ ಚುನಾವಣೆಗೆ ಸಡ್ಡು ಹೊಡೆದವು. ಪ್ರಥಮ ಬಾರಿಗೆ ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರ ಪಡೆದು ಸ್ವಾತಂತ್ರ್ಯಾನಂತರದ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಯಿತು. ಇಡೀ ಕರ್ನಾಟಕದಲ್ಲಿ ಜನತಾಪಕ್ಷದಿಂದ ಇಬ್ಬರು ಮಾತ್ರ ಆಯ್ಕೆಯಾಗಿದ್ದು, ಹಾಸನದಿಂದ ಎಸ್. ನಂಜೇಶಗೌಡ ಆಯ್ಕೆಯಾಗಿದ್ದರು. ಉಳಿದ ಎಲ್ಲಾ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು. ನಾನು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗನಾಗಿರದಿದ್ದರೂ ಪರಿಸ್ಥಿತಿಯ ಕಾರಣದಿಂದ ಕಾಂಗ್ರೆಸ್ ಪಕ್ಷದ ಸೋಲನ್ನು ಬಯಸಿದ್ದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯದ ಗಂಧ-ಗಾಳಿ ಗೊತ್ತಿಲ್ಲದ, ಯಾರು ಅಭ್ಯರ್ಥಿ ಎಂಬುದೂ ಸಹ ಗೊತ್ತಿಲ್ಲದಿದ್ದ ನನ್ನ ತಾಯಿಯವರು ನಮ್ಮ ಮನೆಯ ಬೀದಿಯಲ್ಲಿದ್ದ ಎಲ್ಲಾ ಮನೆಗಳಿಗೆ ಅವರೊಬ್ಬರೇ ಹೋಗಿ 'ದಯವಿಟ್ಟು ಇಂದಿರಾಗಾಂಧಿಗೆ ಓಟು ಹಾಕಬೇಡಿ, ನನ್ನ ಮಗನಿಗೆ ತೊಂದರೆ ಕೊಟ್ಟಂತೆ ನಿಮ್ಮ ಮಕ್ಕಳಿಗೂ ತೊಂದರೆ ಕೊಡುತ್ತಾಳೆ' ಎಂದು ಕೈಮುಗಿದು ಕಣ್ಣೀರು ಹಾಕಿಕೊಂಡು ಹೇಳಿಬರುತ್ತಿದ್ದರು. ಹಾಸನದಿಂದ ಅಂಚೆ ಮತಪತ್ರ ತರಿಸಿಕೊಂಡು ನಾನೂ ನನ್ನ ಮತ ಚಲಾಯಿಸಿದ್ದೆ. ಸುಮಾರು 1000 ಮತಗಳ ಅಲ್ಪ ಬಹುಮತದಿಂದ ಹಾಸನದಲ್ಲಿ ಜನತಾಪಕ್ಷದ ಅಭ್ಯರ್ಥಿ ಜಯಗಳಿಸಿದ್ದು ನನಗೆ ಖುಷಿ ತಂದಿತ್ತು. ಅಂಚೆ ಮತಪ್ರಗಳೇ ಅವರಿಗೆ ಗೆಲುವು ತಂದಿತ್ತದ್ದು ವಿಶೇಷವಾಗಿತ್ತು.
ಚುನಾವಣೆ ಕೆಲಸ
     ಚುನಾವಣೆ ಕಾರ್ಯದಲ್ಲಿ ಕಂದಾಯ ಇಲಾಖೆ ಹಿಂದಿನಿಂದಲೂ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ. ಒಬ್ಬ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ನನಗೂ ಚುನಾವಣೆ ಸಂಬಂಧದ ಬಿಡುವಿಲ್ಲದ ಕೆಲಸವಿತ್ತು. ಚುನಾವಣೆಯ ಹಿಂದಿನ ದಿನ ಎಲ್ಲಾ ಮತಗಟ್ಟೆ ಸಿಬ್ಬಂದಿಗಳನ್ನು ಅಗತ್ಯದ ಸಲಕರಣೆಗಳೊಂದಿಗೆ ಮತಗಟ್ಟೆಗಳಿಗೆ ಸಾಗಹಾಕುವ ವೇಳೆಗೆ ನಮಗೆ ಸಾಕೋಸಾಕಾಗಿತ್ತು. ಅಂದು ಮಧ್ಯಾಹ್ನ ಸುಮಾರು 4-30ರ ವೇಳೆಗೆ ಇಟ್ಕಲ್ ಗ್ರಾಮದ ಮತಗಟ್ಟೆಯ ಪ್ರಿಸೈಡಿಂಗ್ ಅಧಿಕಾರಿಯಾಗಿ ಹೋಗಿದ್ದ ಒಬ್ಬರು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ಮತಗಟ್ಟೆ ಮುಂದೆ ನಿಂತಿದ್ದ ಸಮಯದಲ್ಲಿ ಯಾರೋ ಅಪರಿಚಿತರು ಬಂದು ಚೂರಿ ಹಾಕಿ ಕೊಲೆ ಮಾಡಿದ ಸುದ್ದಿ ಬಂದಿತು. ಇಟ್ಕಲ್ ಎಂಬುದು ಆಂಧ್ರ ಗಡಿಯಲ್ಲಿ ಇದ್ದ ಒಂದು ಹಳ್ಳಿ. ಅವರ ಬದಲಿಗೆ ಪ್ರಿಸೈಡಿಂಗ್ ಅಧಿಕಾರಿಯಾಗಿ ಹೋಗಲು ಮೀಸಲು ಸಿಬ್ಬಂದಿಯವರು ಯಾರೂ ಸಿದ್ಧರಿರಲಿಲ್ಲ. ಆಗ ಅಸಿಸ್ಟೆಂಟ್ ಕಮಿಷನರರು ನನ್ನನ್ನು ಕರೆಸಿ ನಾನು ಅಲ್ಲಿಗೆ ಹೋಗಬೇಕೆಂದೂ ಏನೂ ಗಲಾಟೆಯಾಗದಂತೆ ಪೋಲಿಸ್ ವ್ಯವಸ್ಥೆ ಮಾಡುವುದಾಗಿ ಹೇಳಿದರು. ನಾನು ಒಪ್ಪಿ ಹೋದೆ. ಸುಗಮ ಚುನಾವಣೆಗಾಗಿ ಆ ಮತಗಟ್ಟೆಗೆ ಎಲ್ಲರೂ ಹೆಚ್ಚಿನ ಗಮನ ಕೊಟ್ಟಿದ್ದರಿಂದ ಮತ್ತು ಬಲವಾದ ಪೋಲಿಸ್ ಬಂದೋಬಸ್ತು ಇದ್ದುದರಿಂದ ಶಾಂತಯುತವಾಗಿ ಮತದಾನವಾಗಿ ಆ ಮತಗಟ್ಟೆಯಲ್ಲಿ ಸುಮಾರು ಶೇ. 45ರಷ್ಟು ಮತದಾನವಾಗಿತ್ತು.
ಮರಳಿ ಹಾಸನಕ್ಕೆ
     ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ನಂತರ ಎಲ್ಲಾ ರಾಜಕೀಯ ಪ್ರೇರಿತ ಮೊಕದ್ದಮೆಗಳನ್ನೆಲ್ಲಾ ಹಿಂತೆಗೆದುಕೊಳ್ಳಲು ಆದೇಶ ಮಾಡಲಾಯಿತು. ನನ್ನ ವಿರುದ್ಧದ 13 ಮೊಕದ್ದಮೆಗಳ ಪೈಕಿ 6 ನನ್ನಂತೆ ಇತ್ಯರ್ಥವಾಗಿತ್ತು. ಆರೆಸ್ಸೆಸ್ ಮೇಲಿನ ನಿಷೇಧ ಹಿಂತೆಗೆದುಕೊಂಡಿದ್ದರಿಂದ ನ್ಯಾಯಾಲಯದಲ್ಲಿ ವಿವಿಧ ಹಂತಗಳಲ್ಲಿದ್ದ 7 ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಲು ಅನುಮತಿ ಕೋರಿ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದುದನ್ನು ಒಪ್ಪಿ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ದಿನಾಂಕ 23-04-1977ರಲ್ಲಿ ಅನುಮತಿಸಿತು. ಹೀಗಾಗಿ ನಾನು ಸಂಪೂರ್ಣ ಆರೋಪಮುಕ್ತನಾದೆ. ಹೀಗಾಗಿ ನಾನು ಪುನಃ ಹಾಸನಕ್ಕೆ ಮರಳಿ ವರ್ಗಾಯಿಸಲು ಸರ್ಕಾರಕ್ಕೆ ಮನವಿ ಮಾಡಿಕೊಂಡೆ. ನನ್ನ ಮನವಿಯನ್ನು ಒಪ್ಪಿ ಸರ್ಕಾರದಿಂದ ಹಾಸನ ಯೂನಿಟ್ ಗೆ ವರ್ಗಾಯಿಸಿದ ಆದೇಶ ದಿನಾಂಕ 03-09-1977ರಲ್ಲಿ ಬಂದಿತು. ಇದೇ ಸಮಯದಲ್ಲಿ, ನಾನು ಚೆನ್ನಾಗಿ ಕೆಲಸ ಮಾಡುತ್ತಿದ್ದರಿಂದ ನನ್ನನ್ನು ಸೇಡಂ ತಾಲೂಕು ಕಛೇರಿಗೆ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ವರ್ಗಾಯಿಸುವಂತೆ ಅಸಿಸ್ಟೆಂಟ್ ಕಮಿಷನರರು ಮಾಡಿದ ಶಿಫಾರಸಿನ ಮೇರೆಗೆ ಜಿಲ್ಲಾಧಿಕಾರಿಯವರಿಂದ ಅದೇ ರೀತಿ ವರ್ಗಾಯಿಸಿದ ಆದೇಶ ಸಹ ಬಂದಿತು. ಸರ್ಕಾರದ ಆದೇಶಕ್ಕೆ ಮಾನ್ಯತೆ ನೀಡಿ ನನ್ನನ್ನು ದಿನಾಂಕ 01-10-1977ರಲ್ಲಿ ಅಲ್ಲಿನ ಕರ್ತವ್ಯದಿಂದ ಬಿಡುಗಡೆಗೊಳಿಸಿದರು. ನಾನು ಹಾಸನ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ 03-10-1977ರಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡೆ. ಸೇಡಂನಿಂದ ವಾಪಸು ಬರುವಾಗ ತಹಸೀಲ್ದಾರ್ ಶ್ರೀ ಬಿ.ವಿ.ಸ್ವಾಮಿಯವರು ನನ್ನೊಂದಿಗೆ ಶೋರಾಪುರದವರೆಗೆ ಬಂದು (ಸೇಡಂನಿಂದ ಶೋರಾಪುರಕ್ಕೆ ಸುಮಾರು ನಾಲ್ಕು ಗಂಟೆ ಪ್ರಯಾಣ) ಅಲ್ಲಿನ ಹೋಟೆಲಿನಲ್ಲಿ ಊಟ ಹಾಕಿಸಿ  ಶುಭ ಹಾರೈಸಿ ಬೀಳ್ಕೊಟ್ಟಿದ್ದು ನಾನು ಮರೆಯಲಾರೆ. ಅವರು ನನ್ನ ತಂದೆಯವರಿಗೆ 01-05-1979ರಲ್ಲಿ ಬರೆದ ಪತ್ರದಲ್ಲಿ ಹೀಗೆ ಬರೆದಿದ್ದರು: 
     “ . . . I had the pleasure of working with your son  at Sedam for a very short period. There are no words in English language to describe your son’s efficiency, honesty, loyalty to his superiors, straightforwardness, promptness and sympathy towards poor people. In fact, I would have been very glad if he had been continued here till my transfer from this place. But that was not be. I have no doubt that with all the good qualities your son possesses, he would be a first class citizen of our country. …. ”
     ಈ ಪತ್ರವನ್ನು ನಾನು ಈಗಲೂ ನನ್ನ 'ಪ್ರಶಸ್ತಿ ಪತ್ರ'ವೆಂಬಂತೆ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಇವರ ಮತ್ತು ಇಂತಹವರ ಆಶಯಗಳೇ ನನ್ನನ್ನು ಹಾದಿ ತಪ್ಪದಂತೆ ಕಾವಲು ಕಾಯುತ್ತಿರುವುದು!
    
                                                                                   ..ಮುಂದುವರೆಯುವುದು.

ಶನಿವಾರ, ನವೆಂಬರ್ 6, 2010

ಮೂಢ ಉವಾಚ -21: ಭಯ

ಭಯದ ಮಹಿಮೆಯನರಿಯದವರಾರಿಹರು?
ಭಯವಿಲ್ಲದಾ ಜೀವಿಯದಾವದಿರಬಹುದು?|
ನಿಶಾಭಯ ಏಕಾಂತಭಯ ಅಭದ್ರತೆಯ ಭಯ
ಭಯದಿಂದ ಮೂಡಿಹನೆ ಭಗವಂತ ಮೂಢ||

ಭೋಗಿಯಾದವಗೆ ರೋಗಿಯಾಗುವ ಭಯ
ರೋಗಿಯಾದವಗೆ ಸಾವು ಬಂದೆರಗುವ ಭಯ|
ಅಭಿಮಾನಧನನಿಗೆ ಮಾನಹಾನಿಯ ಭಯ
ಭಯದ ಕಲ್ಪನೆಯೇ ಭಯಾನಕವು ಮೂಢ||

ಸತ್ಕುಲಜಾತನಿಗೆ ಹೆಸರು ಕೆಡುವ ಭಯ
ಧನವಿರಲು ಚೋರಭಯ ಮೇಣ್ ರಾಜಭಯ|
ಸಜ್ಜನರಿಂಗೆ ಕುಜನರು ಕಾಡುವ ಭಯ
ಭಯ ಭಯ ಭಯಮಯವೀ ಲೋಕ ಮೂಢ||

ಸಿರಿವಂತನಿಗೆ ದಾರಿದ್ರ್ಯ ಬಂದೀತೆಂಬ ಭಯ
ಬಲಶಾಲಿಯಾದವಗೆ ಶತ್ರು ಸಂಚಿನ ಭಯ|
ಮೇಲೇರಿದವಗೆ ಕೆಳಗೆ ಬಿದ್ದೇನೆಂಬ ಭಯ
ಭಯಮುಕ್ತನವನೊಬ್ಬನೇ ವಿರಾಗಿ ಮೂಢ||
*************
-ಕವಿನಾಗರಾಜ್.

ಮಂಗಳವಾರ, ನವೆಂಬರ್ 2, 2010

ಸೇವಾಪುರಾಣ21: ಗುಲ್ಬರ್ಗ ತೋರಿಸಿದರು-6: ಭುಗಿಲೆದ್ದ ಸಿಟ್ಟು

ಭುಗಿಲೆದ್ದ ಸಿಟ್ಟು
     ನನ್ನ ತಂಗಿಯ ಮದುವೆಗೆ ತಹಸೀಲ್ದಾರರು ರಜೆ ಕೊಡದೆ ಸತಾಯಿಸಿದ್ದ ಮತ್ತು ಜಿಲ್ಲಾಧಿಕಾರಿಯವರ ಮಾನವೀಯತೆ ಕುರಿತು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಿದ್ದೆ. ಈ ಘಟನೆ ನಡೆದ ಸುಮಾರು ಒಂದು ತಿಂಗಳ ನಂತರ ತಹಸೀಲ್ದಾರರು ನನ್ನನ್ನು ಛೇಂಬರಿಗೆ ಕರೆಸಿ 4-5 ನಮೂನೆ ಲಗ್ನಪತ್ರಿಕೆಗಳನ್ನು ತೋರಿಸಿ ಯಾವುದು ಚೆನ್ನಾಗಿದೆ ಎಂದು ಆರಿಸಲು ಹೇಳಿದರು. ನಾನು ಒಂದನ್ನು ಆರಿಸಿದೆ. ಬಹುಷಃ ಅವರಿಗೂ ಅದೇ ಚೆನ್ನಾಗಿದೆ ಅನ್ನಿಸಿದ್ದಿರಬಹುದು. ತಮ್ಮ ಮಗಳ ಲಗ್ನ ಪತ್ರಿಕೆಯ ಕರಡನ್ನು ಕೊಟ್ಟು ಆರಿಸಿದ ಮಾದರಿಯಲ್ಲಿ 500 ಲಗ್ನಪತ್ರಿಕೆಗಳನ್ನು ಮುದ್ರಿಸಿಕೊಂಡು ತರಲು ನನಗೆ ತಿಳಿಸಿದರು. ನನ್ನ ತಂಗಿಯ ಮದುವೆಗೆ ರಜೆ ಕೊಡದಿದ್ದ ಅವರು ತಮ್ಮ ಮಗಳ ಮದುವೆಯ ಲಗ್ನಪತ್ರಿಕೆಗಳನ್ನು ಮುದ್ರಿಸಿ ತರಲು ನನಗೆ ಹೇಳಿದ್ದು ನನ್ನಲ್ಲಿ ಅದುಮಿಟ್ಟಿದ್ದ ಸಿಟ್ಟು ಭುಗಿಲೇಳಲು ಕಾರಣವಾಯಿತು. ಅವರ ಮೇಜಿನ ಮೇಲೆ ಇದ್ದ ತ್ರಿಭುಜಾಕೃತಿಯ ಮರದ ಅವರ ನಾಮಫಲಕವನ್ನು ತೆಗೆದುಕೊಂಡು ಅವರಿಗೆ ಬಾರಿಸಲು ಮೇಲೆತ್ತಿದೆ. ಅದೇ ಸಮಯಕ್ಕೆ ಛೇಂಬರಿನ ಒಳಗೆ ಬಂದಿದ್ದ ಸಹೋದ್ಯೋಗಿಯೊಬ್ಬರು ಹಿಂದಿನಿಂದ ಕೂಡಲೇ ಆ ನಾಮಫಲಕವನ್ನು ಹಿಡಿದುಕೊಳ್ಳದೇ ಹೋಗಿದ್ದರೆ ತಹಸೀಲ್ದಾರರಿಗೆ ಬಲವಾದ ಪೆಟ್ಟೇ ಬಿದ್ದಿರುತ್ತಿತ್ತು. ನಾನು ಸಿಟ್ಟಿನಿಂದ ಬುಸುಗುಡುತ್ತಾ ತಹಸೀಲ್ದಾರರಿಗೆ ಬಯ್ಯುತ್ತಿದ್ದೆ. ಗದ್ದಲ ಕೇಳಿ ಉಳಿದ ಸಿಬ್ಬಂದಿ ಮತ್ತು ಜನರು ಗುಂಪುಕೂಡಿದರು. ಅಜಾನುಬಾಹು ತಹಸೀಲ್ದಾರರು ದಿಗ್ಭ್ರಮೆ ಮತ್ತು ಗಾಬರಿಯಿಂದ ಕುರ್ಚಿಯಲ್ಲಿ ಕುಸಿದು ಕುಳಿತು ನೋಡುತ್ತಿದ್ದರು. ನಮ್ಮ ಕಛೇರಿಯ ಎದುರಿಗೇ ಅಸಿಸ್ಟೆಂಟ್ ಕಮಿಷನರರ ಕಛೇರಿಯಿದ್ದು ಅವರಿಗೂ ವಿಷಯ ತಿಳಿದು ನನಗೆ ಕರೆಕಳುಹಿಸಿದರು. ಉಪವಿಭಾಗಾಧಿಕಾರಿ ಶ್ರೀ ಅಷ್ಟಮೂರ್ತಿಯವರು ನನ್ನನ್ನು ಉದ್ದೇಶಿಸಿ "ಅಯ್ಯೋ ಮುಠ್ಠಾಳ, ನಿನಗೇನಾದರೂ ತಲೆ ಕೆಟ್ಟಿದೆಯಾ?  ತಹಸೀಲ್ದಾರರಿಗೆ ಹೊಡೆದಿದ್ದರೆ ಮತ್ತೆ ಜೈಲಿಗೆ ಹೋಗುತ್ತಿದ್ದೆಯಲ್ಲೋ! ನಿನಗೇನಾದರೂ ತೊಂದರೆಯಾದರೆ ನನಗೆ ಬಂದು ಹೇಳು, ದುಡುಕಬೇಡ" ಎಂದು ಬುದ್ಧಿ ಹೇಳಿ ಕಳಿಸಿದರು. ತಹಸೀಲ್ದಾರರನ್ನೂ ಕರೆಯಿಸಿ ಅವರಿಗೆ ಪ್ರತ್ಯೇಕವಾಗಿ ಕಿವಿಮಾತು ಹೇಳಿದ್ದರು.

     ಮೇಲೆ ತಿಳಿಸಿದ ಘಟನೆ ನಡೆದ ಕೆಲವು ದಿನಗಳಲ್ಲೇ ತಹಸೀಲ್ದಾರರಿಗೆ ಬೇರೆ ಸ್ಥಳಕ್ಕೆ ವರ್ಗವಾಯಿತು. ಅವರು ಮನೆಯ ಸಾಮಾನುಗಳನ್ನು ಒಂದು ಲಾರಿಯಲ್ಲಿ ತುಂಬಿಸಿ ಸಾಗಿಸಲು ವ್ಯವಸ್ಥೆ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಆ ಮಾರ್ಗವಾಗಿ ವಾಕಿಂಗ್ ಹೋಗುತ್ತಿದ್ದವನು ಹಾಗೆಯೇ ಸುಮ್ಮನೆ ಗಮನಿಸಿದಾಗಿ ಕೆಲವು ಕಛೇರಿಯ ಪೀಠೋಪಕರಣಗಳನ್ನು ಸಹ ಲಾರಿಯಲ್ಲಿ ಇಟ್ಟಿದ್ದುದನ್ನು ನೋಡಿದೆ. ನಾನು ಇದನ್ನು ಆಕ್ಷೇಪಿಸಿದಾಗ ತಹಸೀಲ್ದಾರರು ಮರುಮಾತಾಡದೆ ಅವನ್ನು ಕೆಳಗಿಳಿಸಿ ಕಛೇರಿಗೆ ಕಳಿಸಿಕೊಟ್ಟರು. ನಂತರ ಶ್ರೀ ಬಿ.ವಿ. ಸ್ವಾಮಿ ಎಂಬುವವರು ತಹಸೀಲ್ದಾರರಾಗಿ ಬಂದರು. ಅವರು ಆ ಸ್ಥಾನಕ್ಕೆ ಬರುವ ಮುನ್ನ ಗುಲ್ಬರ್ಗ ವಿಭಾಗಾಧಿಕಾರಿಯವರ ಆಪ್ತ ಸಹಾಯಕರಾಗಿದ್ದು ಬಡ್ತಿ ಹೊಂದಿ ಬಂದವರಾಗಿದ್ದರು. ಅವರು ಲಂಚ ತೆಗೆದುಕೊಳ್ಳುವವರಾಗಿರಲಿಲ್ಲ. ಹೀಗಾಗಿ ಅವರಿಗೂ ನನಗೂ ಹೊಂದಾಣಿಕೆಯಾಗುತ್ತಿತ್ತು. ಅವರೂ ನನ್ನನ್ನು ಸ್ನೇಹಿತನಂತೇ ಕಾಣುತ್ತಿದ್ದರು. ಸಾಯಂಕಾಲದ ಹೊತ್ತು ವಾಕಿಂಗ್ ಹೋಗುವಾಗ ನನ್ನ ಜೊತೆ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡುತ್ತಾ ಬರುತ್ತಿದ್ದರು. ಅವರ ನಡವಳಿಕೆಯಿಂದ ನನಗೂ ಕೆಲಸ ಮಾಡಲು ಉತ್ಸಾಹ ಬರುತ್ತಿತ್ತು. ಒಮ್ಮೆ ಗುಲ್ಬರ್ಗದ ಅವರ ಮನೆಗೂ ನನ್ನನ್ನು ಕರೆದುಕೊಂಡು ಹೋಗಿ ಊಟ ಹಾಕಿಸಿದ್ದರು. (ಅವರು ನಿವೃತ್ತರಾಗಿ ಬಹಳ ವರ್ಷಗಳೇ ಆಗಿದ್ದು ನಿವೃತ್ತಿ ನಂತರದಲ್ಲಿ ಹಾಸನದಲ್ಲಿ ನೆಲೆಸಿದ್ದರು. ಹೆಂಡತಿ ಚಿಕ್ಕ ವಯಸ್ಸಿನಲ್ಲೇ ತೀರಿಹೋಗಿದ್ದು ಮಗ ದೂರದಲ್ಲೆಲ್ಲೋ ಕೆಲಸದಲ್ಲಿದ್ದು ಅವರು ಒಂಟಿಯಾಗಿದ್ದರು.) ಅವರ ಜೊತೆ ಕೆಲವು ತಿಂಗಳುಗಳಷ್ಟೇ ಕೆಲಸ ಮಾಡಿದ್ದರೂ ಅವರು ನನ್ನನ್ನು ಮರೆತಿರಲಿಲ್ಲ. ಕಂಡಾಗಲೆಲ್ಲಾ ಆಡಳಿತದಲ್ಲಿನ ಅವ್ಯವಸ್ಥೆ, ಹೊಲಸು ರಾಜಕೀಯದ ಬಗ್ಗೆ ಕಳವಳಿಸುತ್ತಿದ್ದರು. ನನ್ನ ಕೆಲಸದ ರೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದಷ್ಟೇ ಅಲ್ಲದೆ ಎಷ್ಟೇ ಕಷ್ಟವಾದರೂ ಅದೇ ರೀತಿ ಮುಂದುವರೆಯಲು ಪ್ರೋತ್ಸಾಹಿಸುತ್ತಿದ್ದರು. ಕಳೆದೆರಡು ವರ್ಷಗಳಿಂದ ಅವರ ಭೇಟಿಯಾಗಿಲ್ಲ, ಅವರು ಎಲ್ಲಿದ್ದಾರೋ ತಿಳಿದಿಲ್ಲ. ಎಲ್ಲಾದರೂ ಇರಲಿ, ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ.

ಮಂಗಳವಾರ, ಅಕ್ಟೋಬರ್ 26, 2010

ಸೇವಾಪುರಾಣ20: ಗುಲ್ಬರ್ಗ ತೋರಿಸಿದರು-5 : 20 ಅಂಶಗಳ ಕಾರ್ಯಕ್ರಮಗಳ ಭರಾಟೆ

ಅಮಲ್ದಾರರ ಇಂಗ್ಲಿಷ್!
     ಸೇಡಂನ ತಹಸೀಲ್ದಾರರು ಎಸ್ಸೆಸ್ಸೆಲ್ಸಿ ಸಹ ತೇರ್ಗಡೆಯಾಗಿರಲಿಲ್ಲ. ಹೈದರಾಬಾದ್ ಕರ್ನಾಟಕದ ಪ್ರದೇಶ ಕರ್ನಾಟಕದೊಂದಿಗೆ ವಿಲೀನವಾದಾಗ ಅಲ್ಲಿನ ನೌಕರರ ಸೇವೆ ಸಹ ಕರ್ನಾಟಕ ಸರ್ಕಾರದ ಸೇವೆಯೊಂದಿಗೆ ವಿಲೀನಗೊಂಡಿತ್ತು. ಆ ಸಂದರ್ಭದಲ್ಲಿ ಹಲವು ನೌಕರರಿಗೆ ಅನುಕೂಲವಾಗಿ ಬಡ್ತಿಗಳೂ ಸಿಕ್ಕಿದ್ದವು. ನಮ್ಮ ತಹಸೀಲ್ದಾರರೂ ಸಹ ಆ ರೀತಿ ಬಡ್ತಿ ಪಡೆದವರಾಗಿದ್ದರು. ತಹಸೀಲ್ದಾರರಾದ ಮೇಲೆ ಇಂಗ್ಲಿಷಿನಲ್ಲಿ ಮಾತನಾಡಲು, ಬರೆಯಲು ಪ್ರಯತ್ನಿಸುತ್ತಿದ್ದರು. ಆಗ ಕಛೇರಿಯ ವ್ಯವಹಾರಗಳು ಇಂಗ್ಲಿಷಿನಲ್ಲಿಯೂ ನಡೆಯುತ್ತಿತ್ತು. ಈಗಿನಷ್ಟು ಪ್ರಮಾಣದಲ್ಲಿ ಕನ್ನಡ ಬಳಕೆಯಾಗದೇ ಇದ್ದುದೂ ಸಹ ಇದಕ್ಕೆ ಕಾರಣವಾಗಿತ್ತು. ಅವರು ಅಭಾಸಕರವಾಗಿ ಇಂಗ್ಲಿಷ್ ಬಳಸುತ್ತಿದ್ದುದನ್ನು ಕಂಡು ಇತರರು ಒಳಗೊಳಗೇ ನಗುತ್ತಿದ್ದರೂ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ಅವರು ತಾವು ಚೆನ್ನಾಗಿಯೇ ಇಂಗ್ಲಿಷ್ ಮಾತನಾಡುತ್ತಿದ್ದೇನೆಂದು ಭಾವಿಸಿದ್ದರು. 'After coming to Sedam, I improved English' ಎಂದು ಆಗಾಗ್ಯೆ ಹೆಮ್ಮೆಯಿಂದ ಹೇಳುತ್ತಿದ್ದರು.

20 ಅಂಶಗಳ ಕಾರ್ಯಕ್ರಮಗಳ ಭರಾಟೆ
     ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮದ ಪ್ರಚಾರದ ಭರಾಟೆ ಆಗ ಉತ್ತುಂಗ ಸ್ಥಿತಿಯಲ್ಲಿತ್ತು. ಇಂದಿರಾಗಾಂಧಿಯವರು ಬಡವರ ಬಂಧು ಎಂದು ತೋರಿಸಲು ಮತ್ತು ತುರ್ತು ಪರಿಸ್ಥಿತಿ ದೌರ್ಜನ್ಯಗಳನ್ನು ಮರೆಮಾಚಲು ಇದನ್ನು ಅಸ್ತ್ರವಾಗಿ  ಬಳಸುತ್ತಿದ್ದರು. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುರವರು ಭಾಗವಹಿಸಿದ ಒಂದು ಬೃಹತ್ ಸಭೆ ಗುಲ್ಬರ್ಗದಲ್ಲಿಯೂ ಜನವರಿ, 1977ರಲ್ಲಿ ಏರ್ಪಾಡಾಗಿತ್ತು. ಎಲ್ಲಾ ತಾಲ್ಲೂಕುಗಳಿಂದಲೂ ಜನರನ್ನು, ವಿವಿಧ ಯೋಜನೆಗಳ ಫಲಾನುಭವಿಗಳನ್ನು ಲಾರಿಗಳಲ್ಲಿ ಕರೆತರಲು ಸೂಚನೆ ಕೊಟ್ಟಿದ್ದರು. ನನಗೆ ಸೇಡಂನಿಂದ 6 ಲಾರಿಗಳಲ್ಲಿ ಜನರನ್ನು ಮತ್ತು ಫಲಾನುಭವಿಗಳನ್ನು ಕರೆದೊಯ್ಯಲು ತಹಸೀಲ್ದಾರರು ಆದೇಶಿಸಿದ್ದರು. ನನಗೆ ಆಗುವುದಿಲ್ಲವೆಂದೂ ಫಲಾನುಭವಿಗಳಾದ 10 ಜನರನ್ನು ಮಾತ್ರ ಕರೆದೊಯ್ಯುವುದಾಗಿ ತಿಳಿಸಿದೆ. ತಹಸೀಲ್ದಾರರೇ ಇತರ ಸಿಬ್ಬಂದಿ ನೆರವಿನಿಂದ 3 ಲಾರಿಗಳನ್ನು ಕಳಿಸಲು ಏರ್ಪಾಡು ಮಾಡಿದರು. ನಾನೂ ಅಂತಹ ಒಂದು ಲಾರಿಯಲ್ಲಿ 10 ಫಲಾನುಭವಿಗಳೊಂದಿಗೆ ಗುಲ್ಬರ್ಗಕ್ಕೆ ಹೋಗಿದ್ದೆ. ಲಾರಿಗಳಲ್ಲಿ ಸಭೆ, ಸಮಾರಂಭಗಳಿಗೆ ಜನರನ್ನು ಆಯೋಜಕರು ಮತ್ತು ಅವರ ಪರ ಕೆಲಸ ಮಾಡುವವರು ಕರೆದೊಯ್ಯುವ ಪರಿಪಾಠ ಪ್ರಾರಂಭವಾಗಿದ್ದು ಆಕಾಲದಲ್ಲಿಯೇ. ಈಗ ಅದು ಅನಿವಾರ್ಯವಾಗಿದೆ ಮತ್ತು ಬೃಹತ್ತಾಗಿ ಬೆಳೆದಿದೆ.

ತಂಗಿಯ ಮದುವೆಗೆ ರಜ ಕೊಡಲಿಲ್ಲ
     ನಾನು ಸೇಡಂಗೆ ಹೋಗಿ ಕೆಲವು ತಿಂಗಳುಗಳಾಗಿದ್ದವು. ಹಾಸನದ ಶ್ರೀ ಶಂಕರಮಠದಲ್ಲಿ ದಿನಾಂಕ 06-02-1977ರಲ್ಲಿ ನನ್ನ ತಂಗಿಯ ಮದುವೆಗೆ ಏರ್ಪಾಡಾಗಿತ್ತು. ಹಿರಿಯ ಮಗನಾಗಿ ಮದುವೆ ಕೆಲಸಕಾರ್ಯಗಳಿಗಾಗಿ ಓಡಾಡಬೇಕಾಗಿದ್ದು ನನ್ನ ಕರ್ತವ್ಯವಾಗಿತ್ತು. ಅದಕ್ಕಾಗಿ 15 ದಿನಗಳ ರಜೆ ಕೋರಿದರೆ ತಹಸೀಲ್ದಾರರು ವಿನಾಕಾರಣ ನನ್ನ ಮನವಿ ತಿರಸ್ಕರಿಸಿದರು. ನಾನು ಗುಲ್ಬರ್ಗಕ್ಕೆ ಲಾರಿಯಲ್ಲಿ ಜನರನ್ನು ಕರೆದೊಯ್ಯಲು ಸಹಕರಿಸದಿದ್ದುದಕ್ಕೆ ಅವರಿಗೆ ನನ್ನ ಮೇಲೆ ಸಿಟ್ಟು ಬಂದಿದ್ದಿರಬಹದು.  ನಾನು ಯಾವುದೇ ಬಾಕಿ ಕೆಲಸಗಳನ್ನು ಉಳಿಸಿಕೊಂಡಿರಲಿಲ್ಲ. ತುರ್ತು ಕೆಲಸಗಳೂ ಇರಲಿಲ್ಲ. ಮರುದಿನ 14 ದಿನಗಳ ರಜೆ ಅರ್ಜಿ ಸಲ್ಲಿಸಿದರೆ ಅದನ್ನೂ ತಹಸೀಲ್ದಾರರು ತಿರಸ್ಕರಿಸಿದರು. ಖುದ್ದು ಮನವಿಗೂ ಬೆಲೆ ಕೊಡಲಿಲ್ಲ. ನಂತರದಲ್ಲಿ 13,12,10, 9,8,7,6 ದಿನಗಳಿಗೆ ರಜೆ ಕೋರಿ ಸಲ್ಲಿಸಿದ ರಜೆ ಅರ್ಜಿಗಳಿಗೂ ಅದೇ ಗತಿಯಾಯಿತು. ನನ್ನ ಹಾಸನದ ಆರೆಸ್ಸೆಸ್ ಮಿತ್ರರಿಗೆ ವಿಷಯ ತಿಳಿದು ಅವರುಗಳು ನನ್ನ ತಂದೆಯವರನ್ನು ಕಂಡು ತಾವು ಯಾವುದೇ ಕೆಲಸ ಮಾಡಲು ಸಿದ್ಧವಿರುವುದಾಗಿಯೂ ತಮ್ಮ ಸಹಾಯ ಪಡೆಯಬಹುದೆಂದೂ ಹೇಳಿದ್ದರು. ನನ್ನ ತಂದೆ ಅವರ ಸಹಾಯ ಪಡೆಯಲು ಇಷ್ಟಪಡಲಿಲ್ಲ. ತುರ್ತುಪರಿಸ್ಥಿತಿ ಇನ್ನೂ ಜಾರಿಯಲ್ಲಿದ್ದುದು ಕಾರಣವಿರಬಹುದು. ನನಗೆ ಅತ್ಯಂತ ಬೇಸರವಾಗಿತ್ತು. ಸೇಡಂನಿಂದ ಹಾಸನಕ್ಕೆ ಹೋಗಲು 2 ದಿನ, ಬರಲು 2ದಿನ ಬೇಕಿದ್ದು 5 ದಿನಗಳು ಸಾಂದರ್ಭಿಕ ರಜೆ ಹಾಕಿ ಹೊರಟುಬಿಟ್ಟೆ. ತಂಗಿಯ ಮದುವೆಗೆ ನೆಂಟನ ಹಾಗೆ ಬಂದು ಹೋಗಬೇಕಾಗಿ ಬಂದದ್ದಕ್ಕೆ ನನಗೆ ನನ್ನ ಮೇಲೇ ಜಿಗುಪ್ಸೆಯಾಗಿತ್ತು. ಅಲ್ಲಿಗೆ ಬಂದಾಗಲೂ ಮಫ್ತಿ ಪೋಲಿಸರ ಕಾಟ ತಪ್ಪಲಿಲ್ಲ. ಕಣ್ಣಿಗೆ ಕಂಡ ಇಬ್ಬರು ಮಫ್ತಿ ಪೋಲಿಸರಿಗೆ ಸಮಯಾಸಮಯದ ಅರಿವಿಲ್ಲದೆ ಬಂದ ಅವರ ನಡವಳಿಕೆ ಬಗ್ಗೆ ಚೆನ್ನಾಗಿ ಛೀಮಾರಿ ಹಾಕಿ ಊಟ ಮಾಡಿಕೊಂಡು ಹೋಗುವಂತೆ ತಿಳಿಸಿದ್ದೆ. 'ತಪ್ಪು ತಿಳಿಯಬಾರದೆಂದೂ, ಮದುವೆಗೆ ಬರಬಹುದಾದ ಆರೆಸ್ಸೆಸ್ ನಾಯಕರನ್ನು ಗಮನಿಸುವ ಬಗ್ಗೆ ಮೇಲಾಧಿಕಾರಿಗಳ ಸೂಚನೆಯಂತೆ ಬಂದಿದ್ದಾಗಿಯೂ' ಬೇಸರ ಮಾಡಿಕೊಳ್ಳಬಾರದೆಂದೂ ಅವರು ತಿಳಿಸಿದ್ದರು.

ಜಿಲ್ಲಾಧಿಕಾರಿಯವರ ಮಾನವೀಯತೆ
     ರಜೆ ಮುಗಿಸಿ ವಾಪಸು ಬಂದರೆ ಜಿಲ್ಲಾಧಿಕಾರಿಯವರ ಕಾರಣ ಕೇಳುವ ನೋಟೀಸು ನನಗಾಗಿ ಕಾಯುತ್ತಿತ್ತು. ತಹಸೀಲ್ದಾರರು ನಾನು ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಾಗಿದ್ದೆನೆಂದು ಜಿಲ್ಲಾಧಿಕಾರಿಯವರಿಗೆ ಅರೆಸರ್ಕಾರಿ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಯವರನ್ನು ಖುದ್ದಾಗಿ ಕಂಡು ವಿವರಣೆ ಕೊಡಬಯಸಿ ಅದಕ್ಕಾಗಿ ಅನುಮತಿಸಲು ಲಿಖಿತ ಮನವಿ ನೀಡಿದುದನ್ನೂ ತಹಸೀಲ್ದಾರರು ತಿರಸ್ಕರಿಸಿದರು. ಅಂತಹ ಸಮಯದಲ್ಲೂ ತಹಸೀಲ್ದಾರರು ನನ್ನ ರಜಾ ಅರ್ಜಿಗಳ ಮೇಲೆ ಇಂಗ್ಲಿಷಿನಲ್ಲಿ ಬರೆದಿದ್ದ ಷರಾಗಳನ್ನು ಕಂಡು ನಗು ಬರುತ್ತಿತ್ತು. ನಾನು 5 ದಿನಗಳ ಸಾಂದರ್ಭಿಕ ರಜೆ ಕೋರಿದ್ದ ಅರ್ಜಿ ಮೇಲೆ 'Put up the applicant. Where is he? Who is give permission to left the headqarters? Report D.C. Direct d.o.letter' ಎಂದು ಬರೆದಿದ್ದರು. ನಾನು ತಹಸೀಲ್ದಾರರು ತಿರಸ್ಕರಿಸಿದ್ದ ರಜೆ ಅರ್ಜಿಗಳನ್ನೆಲ್ಲವನ್ನೂ ತೆಗೆದುಕೊಂಡು ಜಿಲ್ಲಾಧಿಕಾರಿಯವರನ್ನು ಕಾಣಲು ಗುಲ್ಬರ್ಗಕ್ಕೆ ಮರುದಿನ ಹೊರಟೆ. ಅಂದು ಬೆಳಿಗ್ಗೆ ಜಿಲ್ಲಾಧಿಕಾರಿಯವರು ಕಛೇರಿಯಲ್ಲಿದ್ದರೂ ನನಗೆ ಭೇಟಿ ಮಾಡಲು ಅವಕಾಶ ಕೊಡಲಿಲ್ಲ. ನಾನು ಅಲ್ಲೇ ಕಾದಿದ್ದು ಮಧ್ಯಾಹ್ನ ಅವರ ಛೇಂಬರಿನ ಬಾಗಿಲಿನ ಬಳಿ ದಫೇದಾರ ಇಲ್ಲದ ಸಮಯ ಸಾಧಿಸಿ ಒಳಗೆ ಹೋಗಿ ಜಿಲ್ಲಾಧಿಕಾರಿಯವರಿಗೆ ನಮಸ್ಕರಿಸಿದೆ. ಆಗ ಮುನಿಸ್ವಾಮಿ ಎಂಬುವವರು ಜಿಲ್ಲಾಧಿಕಾರಿಯಾಗಿದ್ದರು. (ನಂತರದ ದಿನಗಳಲ್ಲಿ ಅವರು ಮೈಸೂರು ವಿಭಾಗಾಧಿಕಾರಿಯವರೂ ಆಗಿದ್ದರು. ಯಾವುದೋ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡು ಇಹಯಾತ್ರೆ ಮುಗಿಸಿದರು.) ಅವರು ನನ್ನನ್ನು ದುರುಗುಟ್ಟಿ ನೋಡಿದರು. ಕಾರಣ ಕೇಳಿದ ನೋಟೀಸಿಗೆ ಉತ್ತರ ಕೊಡಲು ಬಂದಿದ್ದೇನೆಂದು ಹೇಳಿದ್ದಕ್ಕೆ 'ಗೆಟ್ ಔಟ್' ಎಂದರು. ನಾನು ಪಟ್ಟು ಬಿಡದೆ ಕೇವಲ ಐದು ನಿಮಿಷಗಳ ಕಾಲಾವಕಾಶ ಕೋರಿದೆ. ಎಲ್ಲಾ ವಿಷಯ ವಿವರಿಸಿದೆ. ತಹಸೀಲ್ದಾರರು ತಿರಸ್ಕರಿಸಿದ್ದ ಎಲ್ಲಾ ರಜೆ ಅರ್ಜಿಗಳನ್ನೂ ಅವರ ಮುಂದಿಟ್ಟೆ. ತಂಗಿಯ ಮದುವೆಗೆ ಓಡಾಡಲಾರದ ನನ್ನ ಅಸಹಾಯಕತೆ ಹೇಳಿಕೊಳ್ಳುವಾಗ ಗಂಟಲುಬ್ಬಿ ಕಣ್ಣಂಚಿನಲ್ಲಿ ನೀರು ತುಳುಕಿತ್ತು. ವಿಷಯ ಅರ್ಥವಾದ ಜಿಲ್ಲಾಧಿಕಾರಿಯವರು ತಮ್ಮ ಕುರ್ಚಿಯಿಂದ ಎದ್ದುಬಂದು ನನ್ನನ್ನು ಬಲವಂತವಾಗಿ ಕುಳ್ಳಿರಿಸಿದರು. ಹೃದಯಪೂರ್ವಕವಾಗಿ ನನಗಾದ ತೊಂದರೆ ಬಗ್ಗೆ ನನ್ನ ಕ್ಷಮೆ ಕೇಳಿ ದೊಡ್ಡತನ ದರು. ದಫೇದಾರರನ್ನು ಕರೆದು ಚಹಾ ತರಿಸಿ ನನಗೆ ಕುಡಿಯುವಂತೆ ಕೋರಿದರು. ಆಪ್ತ ಸಹಾಯಕರನ್ನು ಕರೆಸಿ 'ಇದು ವಿನಾಕಾರಣ ತೊಂದರೆ ನೀಡಿದ ಸ್ಪಷ್ಟ ಪ್ರಕರಣವಾಗಿದ್ದು, ತಹಸೀಲ್ದಾರರ ವರ್ತನೆಗಾಗಿ ಅವರಿಗೆ ಎಚ್ಚರಿಕೆ' ನೀಡುವ ಬಗ್ಗೆ ಒಂದು ಪತ್ರವನ್ನು ಉಕ್ತಲೇಖನ ನೀಡಿದರು. ಪತ್ರ ಸಿದ್ಧವಾಗುವವರೆಗೆ ನನ್ನನ್ನು ಅಲ್ಲೇ ಕುಳ್ಳಿರಿಸಿ ನಂತರ ತಹಸೀಲ್ದಾರರಿಗೆ ಕೊಡಬೇಕಾದ ಪತ್ರದ ಪ್ರತಿಯನ್ನು ನನ್ನ ಕೈಲೇ ಕೊಟ್ಟು ಕಳಿಸಿದರು. ಪತ್ರದ ಪ್ರತಿಯನ್ನು ಜಿಲ್ಲೆಯ ಎಲ್ಲಾ ಕಂದಾಯಾಧಿಕಾರಿಗಳಿಗೂ ಮಾಹಿತಿಗಾಗಿ ಕಳಿಸಿದ್ದರು. ಅವರಿಗೆ ವಂದಿಸಿ ಹೊರಬಂದೆ.
(ಕಾಲಘಟ್ಟ: 1977).                                                                                 ..ಮುಂದುವರೆಯುವುದು.

ಬುಧವಾರ, ಅಕ್ಟೋಬರ್ 20, 2010

ಮೊರೆ

     'ವೇದುಸುಧೆ' ಅಂತರ್ಜಾಲ ತಾಣದ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನನ್ನ ಈ ರಚನೆಯನ್ನು ಶ್ರೀಮತಿ ಲಲಿತಾ ರಮೇಶರವರು ಸುಶ್ರಾವ್ಯವಾಗಿ ಹಾಡಿದ್ದರು. ನೀವೂ ಕೇಳಿ:



ಸರಿಸಿಬಿಡು ಮೂಢಮನ ಆವರಿತ ಪೊರೆಯಾ
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|
ರೂಢಿರಾಡಿಯಡಿ ಸಿಲುಕಿ ತೊಳಲಾಡುತಿಹೆ ನಾನು
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಬಲ್ಲಿದರ ನುಡಿಕೇಳಿ ನೇರಮಾರ್ಗದಿ ನಡೆದೆ
ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ |
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ|
ಹುಲುಮನುಜ ನಾನಾಗಿ ಭಾವಬಂಧಿಯು ನಾನು
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||
**********************
-ಕವಿನಾಗರಾಜ್.
http://vimeo.com/19814385