ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಜುಲೈ 24, 2011

ಮೂಢ ಉವಾಚ - 61

ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ
ಶಾಶ್ವತವದೊಂದೆ ಸಚ್ಚಿದಾನಂದ ಭಾವ |
ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ
ಭದ್ರಪದವೊಲಿಯುವುದು ಮೂಢ ||

ಸತ್ಯಧರ್ಮಕೆ ಹೆಸರು ಕೋದಂಡರಾಮ
ನೀತಿಪಾಲನೆಗೆ ಹಿಡಿದನಾಯುಧ ಶ್ಯಾಮ |
ಮನುಕುಲಕೆ ದಾರಿದೀವಿಗೆಯು ರಾಮ
ಬೆಳಕು ಕಂಡೆಡೆಯಲ್ಲಿ ಸಾಗು ನೀ ಮೂಢ ||


ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ
ಪರಮಪದಕಿಹುದು ನೂರಾರು ದಾರಿ |
ದಾರಿ ಹಲವಿರಲು ಗುರಿಯದು ಒಂದೆ
ಮನ ತೋರ್ವ ದಾರಿಯಲಿ ಸಾಗು ಮೂಢ ||


ಬೆಳಕಿರುವ ತಾಣದಲಿ ತಮವು ಇದ್ದೀತೆ
ಅರಿವಿರುವೆಡೆಯಲ್ಲಿ ಅಜ್ಞಾನ ಸುಳಿದೀತೆ |
ಅರಿವು ಬರಲಾಗಿ ತರತಮವು ಮಾಯ
ಅಭೇದಭಾವಿ ಅಮರನಲ್ಲವೆ ಮೂಢ ||
***************
-ಕ.ವೆಂ.ನಾಗರಾಜ್.

ಬುಧವಾರ, ಜುಲೈ 20, 2011

ಬಾಲ್ಯದ ನೆನಪುಗಳು

     ಎದುರಿಗಿದ್ದ ಕನ್ನಡಿಯಲ್ಲಿ ನನ್ನ ಮುಖ ನಾನು ನೋಡಿಕೊಂಡೆ. ನೋಡುತ್ತಿದ್ದ ಹಾಗೆ ನನ್ನ ಹಳೆಯ ಮುಖಗಳು ನೆನಪಿಗೆ ಬಂದವು. ಚಿಕ್ಕ ಮಗುವಿದ್ದಾಗ ಮಗುವಿಗೆ ದೃಷ್ಟಿಯಾಗದಿರಲಿ ಎಂದು ಕೆನ್ನೆಯ ಮೇಲೆ ದೃಷ್ಟಿಬೊಟ್ಟು ಇಡುತ್ತಿದ್ದ ಕಾಲದಲ್ಲಿ ತೆಗೆದಿದ್ದ ಫೋಟೋದಲ್ಲಿ ನಾನು ದುಂಡು ದುಂಡಗಿದ್ದೆ. ಬಿಳಿಯ ಸಫಾರಿ ಶೈಲಿಯ ಹೊಸ ಅಂಗಿ, ಚಡ್ಡಿ, ಕೈಗೆ ಫೋಟೋ ತೆಗೆಸುವ ಸಲುವಾಗಿ ಹಾಕಿದ್ದ ಸ್ಟೀಲ್ ಚೈನಿನ ವಾಚು (ಬಹುಷಃ ನಮ್ಮಪ್ಪನದೇ ಇರಬೇಕು), ನೀಟಾಗಿ ತಲೆ ಬಾಚಿ ಎರಡು ಜುಟ್ಟು ಹಾಕಿ ಮುಡಿಸಿದ ಹೂವು, ಹಣೆಯಲ್ಲಿ ದುಂಡಗೆ ಇಟ್ಟಿದ್ದ ಸಾದು, ಕ್ಯಾಮರಾ ಕಡೆಗೆ ದಿಟ್ಟಿಸಿದ್ದ ಕಣ್ಣುಗಳು, ಒಟ್ಟಾರೆಯಾಗಿ ನನ್ನ ಕಣ್ಣಿಗೆ ಸುಂದರವಾಗೇ ಕಾಣುತ್ತಿದೆ.

08-05-1953ರಲ್ಲಿ ತೆಗೆದಿದ್ದ ಫೋಟೋ - ಒಂದೂವರೆ ವರ್ಷದವನಿದ್ದಾಗ
      ಪ್ರಾಥಮಿಕ ಶಾಲಾದಿನಗಳಲ್ಲಿ ಶಾಲೆಯಲ್ಲಿ ಬುದ್ಧಿವಂತನೆಂದು ಕರೆಸಿಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಕ್ಲಾಸಿಗೆ ಮಾನಿಟರ್ ಆಗುತ್ತಿದ್ದರಿಂದ ನೋಡಲು ಸುಂದರವಾಗಿದ್ದಿರಬಹುದು. ಮೇಷ್ಟ್ರು, ಮೇಡಮ್ಮುಗಳಿಗೆ ವಿಧೇಯನಾಗಿರುತ್ತಿದ್ದರಿಂದಲೂ ಮಾನಿಟರ್ ಮಾಡುತ್ತಿದ್ದರೇನೋ! ಆ ಕಾಲದಲ್ಲಿ ಚಿಕ್ಕ ಹುಡುಗರಾದ ನಾವು ಬಾಹ್ಯ ಸುಂದರತೆಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲವೆಂಬುದು ಸತ್ಯ ಸಂಗತಿ. ಆಟ ಆಡಿ ಕುಣಿದು ಕುಪ್ಪಳಿಸಿ ಮೈ,ಕೈ, ಬಟ್ಟೆಯೆಲ್ಲಾ ಕೊಳೆ ಮಾಡಿಕೊಂಡು ಮನೆಗೆ ಬಂದಾಗ ಅಮ್ಮ ಶುಚಿಗೊಳಿಸಿ ಬೇರೆ ಬಟ್ಟೆ ಹಾಕುತ್ತಿದ್ದಳು. ಆಗ ಈಗಿನಂತೆ ಸರಿಯಾದ ಅಳತೆಯ ಅಂಗಿ-ಚಡ್ಡಿಗಳನ್ನು ಹೊಲೆಸುತ್ತಿರಲಿಲ್ಲ. ಬೆಳೆಯುವ ವಯಸ್ಸೆಂದು ಸ್ವಲ್ಪ ದೊಡ್ಡ ಅಳತೆಯ ಬಟ್ಟೆಯನ್ನೇ ತರುತ್ತಿದ್ದರು. ಹೆಚ್ಚು ಸಮಯ ಬಾಳಿಕೆ ಬರಲಿ ಎಂಬ ಕಾರಣವೂ ಇತ್ತು. ಚಡ್ಡಿ ಬೀಳದಿರಲಿ ಎಂದು >< ಆಕಾರದ ಲಾಡಿಗಳು (ಹಿಂಭಾಗದಿಂದ ಭುಜದ ಮೇಲೆ ಹಾದು ಬಂದು ಮುಂಭಾಗದಲ್ಲಿನ ಲೂಪ್ ಅಥವ ಗುಂಡಿಗಳಿಗೆ ಸೇರಿಸುವ) ಇರುತ್ತಿದ್ದವು. ಅದು ಆಗ ಫ್ಯಾಷನ್ ಅನ್ನಿಸಿಕೊಳ್ಳುತ್ತಿತ್ತು. ತಲೆಯ ಕೂದಲು ಬೇಗ ಬೆಳೆದುಬಿಡುತ್ತದೆ ಎಂದು ವರ್ಷದ ಯಾವುದೇ ಕಾಲದಲ್ಲಿ ಸಮ್ಮರ್ ಕಟ್ ಮಾಡಿಸುತ್ತಿದ್ದರು. ತಿಂಗಳಲ್ಲಿ ೧೦-೧೫ ದಿನ ದಿನಗಳು ತಲೆ ಬಾಚುವ ಪ್ರಮೇಯವೇ ಬರುತ್ತಿರಲಿಲ್ಲ. ಆಗ ರೆಡಿಮೇಡ್ ಬಟ್ಟೆಗಳನ್ನು ಮೂಟೆಯ ಗಂಟಿನಲ್ಲಿ ಕಟ್ಟಿ ಹೊತ್ತು ಬೀದಿಯಲ್ಲಿ ಮಾರಲು ಬರುತ್ತಿದ್ದರು. ಒಂದು ರೂಪಾಯಿಗೆ ಒಂದು ಅಂಗಿ ಸಿಗುತ್ತಿತ್ತು. ಸಾಮಾನ್ಯವಾಗಿ ತೆಗೆದುಕೊಡುತ್ತಿದ್ದ ಅರ್ಧ ತೋಳಿನ ಬಣ್ಣ ಬಣ್ಣದ ಅಂಗಿ ಮತ್ತು ಚಡ್ಡಿಗಳನ್ನು ಸಂಭ್ರಮದಿಂದ ಧರಿಸಿ ಖುಷಿ ಪಡುತ್ತಿದ್ದೆವು. ಇನ್ನೊಂದು ವಿಷಯವೆಂದರೆ ಆಗ ಈಗಿನಂತೆ ಖಾಸಗಿ ಶಾಲೆಗಳು ಇರುತ್ತಿರಲಿಲ್ಲ. ಶ್ರೀಮಂತರು, ಬಡವರು ಎಲ್ಲರೂ ಸರ್ಕಾರಿ ಕನ್ನಡ ಶಾಲೆಗಳಿಗೇ ಮಕ್ಕಳನ್ನು ಕಳಿಸುತ್ತಿದ್ದರು. ೫ನೆಯ ತರಗತಿಯಿಂದ ಎ,ಬಿ,ಸಿ,ಡಿ ಕಲಿಸಲಾಗುತ್ತಿತ್ತು. ಶ್ರೀಮಂತರ ಮಕ್ಕಳು ಠಾಕು-ಠೀಕಾಗಿ ಬರುತ್ತಿದ್ದರೆ ಬಡ ಮಕ್ಕಳು ಹರಕಲು ಬಟ್ಟೆ ಹಾಕಿಕೊಂಡು, ಹರುಕು ಚೀಲದಲ್ಲಿ ಸ್ಲೇಟು-ಬಳಪ ತರುತ್ತಿದ್ದರು. ಮಧ್ಯಮ ವರ್ಗಕ್ಕೆ ಸೇರಿದ ನಮ್ಮಂತಹವರು ಎರಡು ವರ್ಗಗಳ ಮಕ್ಕಳಿಗೂ ಹೊಂದುತ್ತಿದ್ದೆವು.

06-10-1959ರಲ್ಲಿ 8ವರ್ಷದವನಿದ್ದಾಗ ತೆಗೆದ ಫೋಟೋ
     ನಮ್ಮಪ್ಪ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ವರ್ಗಾವಣೆಯಾದಾಗಲೆಲ್ಲಾ ಗಂಟು ಮೂಟೆ ಕಟ್ಟಿಕೊಂಡು ವರ್ಗಾವಣೆಯಾದ ಊರಿಗೆ ಹೋಗುತ್ತಿದ್ದೆವು. ಹಾಗಾಗಿ ನನ್ನ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಚಿಕ್ಕಮಗಳೂರಿನಲ್ಲಿ, ಮಾಧ್ಯಮಿಕ ಶಾಲೆ ಭದ್ರಾವತಿಯಲ್ಲಿ, ಹೈಸ್ಕೂಲು ಚಿತ್ರದುರ್ಗದಲ್ಲಿ, ಪಿ.ಯು.ಸಿ. ಚಿಕ್ಕಮಗಳೂರಿನಲ್ಲಿ ಆಯಿತು. ನಂತರದಲ್ಲಿ ಅವರಿಗೆ ನರಸಿಂಹರಾಜಪುರಕ್ಕೆ ವರ್ಗವಾದ್ದರಿಂದ ಮತ್ತು ಅಲ್ಲಿ ಕಾಲೇಜು ಇರದಿದ್ದರಿಂದ ಹಾಸನದಲ್ಲಿ ಒಂದು ಬಾಡಿಗೆ ಕೋಣೆಯಲ್ಲಿದ್ದು ಬಿ.ಎಸ್.ಸಿ.ಡಿಗ್ರಿ ಮುಗಿಸಿದೆ. ಹೈಸ್ಕೂಲಿನಲ್ಲಿ ಓದುವಾಗಲೂ ಚಡ್ಡಿ ಧರಿಸುತ್ತಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮನಾಗಿ ತೇರ್ಗಡೆಯಾದಾಗ ಚಿತ್ರದುರ್ಗದ ಪುರಸಭೆಯವರು (ನಾನು ಓದಿದ್ದು ಮುನಿಸಿಪಲ್ ಹೈಸ್ಕೂಲಿನಲ್ಲಿ) ನನಗೆ ಹಾರ ಹಾಕಿ ೫೦ ರೂಪಾಯಿ ಬಹುಮಾನ ಕೊಟ್ಟಿದ್ದರು. ಹೈಸ್ಕೂಲಿನಲ್ಲಿ ಶಾಲಾ ಪ್ರತಿನಿಧಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾನು ನನ್ನ ಪ್ರತಿಸ್ಪರ್ಧಿ ಅಶೋಕನಿಗಿಂತ ಕೇವಲ ಒಂದು ಮತ ಹೆಚ್ಚು ಪಡೆದು ಆಯ್ಕೆಯಾಗಿದ್ದೆ. ನನಗೆ ೫೦ ಮತಗಳು, ಅಶೋಕನಿಗೆ ೪೯ ಮತಗಳು ಬಂದಿದ್ದವು. ೧೨ ಮತಗಳು ಇಬ್ಬರಿಗೂ ಒಟ್ಟಿಗೆ ಹಾಕಲ್ಪಟ್ಟಿದ್ದರಿಂದ ಕುಲಗೆಟ್ಟಿದ್ದವು. ವಿಶೇಷವೆಂದರೆ ನಾನು ನನ್ನ ಮತವನ್ನು ಅಶೋಕನಿಗೆ ಮತ್ತು ಅಶೋಕ ತನ್ನ ಮತವನ್ನು ನನಗೆ ಹಾಕಿದ್ದ! ಆಗ ಕ್ರೀಡಾಮನೋಭಾವ ಹೊಂದಿದ್ದ ನಾವುಗಳು ಚುನಾವಣೆ ನಂತರವೂ ಸ್ನೇಹಿತರಾಗೇ ಇದ್ದೆವು. ಈಗ ಅವನು ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಗೊತ್ತಿಲ್ಲ, ಚಿತ್ರದುರ್ಗ ಬಿಟ್ಟನಂತರ ಪರಸ್ಪರ ಇಬ್ಬರಿಗೂ ಸಂಪರ್ಕವೇ ಆಗಲಿಲ್ಲ.
1965ರಲ್ಲಿ 14 ವರ್ಷದವನಿದ್ದಾಗ ಹೈಸ್ಕೂಲಿನಲ್ಲಿ 'ತ್ರಿಬ್ಬಲ್ ತಾಳಿ' ನಾಟಕವಾಡಿದಾಗ ತೆಗೆದದ್ದು; ಕುರ್ಚಿಯಲ್ಲಿ ಕುಳಿತ ಮೊದಲನೆಯವನು ಅಶೋಕ; ನಾನು ಯಾರು ಊಹಿಸಿ.


ಮಂಗಳವಾರ, ಜುಲೈ 19, 2011

ಮೂಢ ಉವಾಚ - 60

ಸತ್ಯ ಮಿಥ್ಯಗಳರಿತವರು ಹೇಳಿಹರು
ಕಾಣುವುದು ಅಸತ್ಯ ಕಾಣದಿರುವುದೆ ಸತ್ಯ |
ಕಾಣಿಪುದ ಕಾರಣವೆ ಕಾಣದಿಹ ಸತ್ಯ
ಕಾಣದುದ ಕಾಣುವುದೆ ಜ್ಞಾನ ಮೂಢ ||


ಮನಶುದ್ಧಿಯಿಲ್ಲದಿರೆ ವೇದಾಂತದಿಂದೇನು
ಗುರುಭಕ್ತಿಯಿಲ್ಲದಿರೆ ವಿವೇಕ ಬಹುದೇನು |
ಸುಜನರೊಡನಾಡದಿರೆ ಶುದ್ದಮನವೆಲ್ಲಿಯದು
ಸರಿಯಿರದ ದಾರಿಯಲಿ ಗುರಿ ದೂರ ಮೂಢ ||


ತನ್ನ ತಾನರಿಯೆ ಗುರುಕೃಪೆಯು ಬೇಕು
ಅರಿತುದನು ವಿಚಾರ ಮಾಡುತಿರಬೇಕು |
ವಿಚಾರ ಮಥನದ ಫಲವೆ ನಿತ್ಯ ಸತ್ಯ
ವೇದವಿದಿತ ಸತ್ಯ ತತ್ವವಿದು ಮೂಢ ||


ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ
ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ |
ಸುಜನವಾಣಿ ಗುರುವಾಣಿ ಕೇಳುವವ ಧನ್ಯ
ಕೇಳು ಕೇಳು ಕೇಳು ನೀ ಕೇಳು ಮೂಢ ||
**************
-ಕ.ವೆಂ.ನಾಗರಾಜ್.

ಭಾನುವಾರ, ಜುಲೈ 17, 2011

'ಐ ಡೋಂಟ್ ವಾಂಟ್ ಟು ಡೈ'


     ಐದು ವರ್ಷದ ಮಗಳು ಅಂದು ಶಾಲೆಯಿಂದ ಮರಳಿ ಬಂದಾಗ ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಗಂಭೀರಳಾಗಿದ್ದಳು. ಮಗಳ ಯೂನಿಫಾರಮ್ ಕಳಚಿ ಬೇರೆ ಬಟ್ಟೆ ಹಾಕುತ್ತಿದ್ದ ತಾಯಿಗೆ ಮಗು ಹೇಳಿತು:
"ಮಮ್ಮಿ, ನನ್ನ ಫ್ರೆಂಡ್ ಪಿಂಕಿ ತಾತ ಸತ್ತು ಹೋದರಂತೆ".
"ಹೌದಾ ಪುಟ್ಟಾ, ಪಾಪ".
"ಮಮ್ಮಿ, ಎಲ್ರೂ ಸಾಯ್ತಾರಾ?"
"ಹೌದು ಪುಟ್ಟಿ, ವಯಸ್ಸಾದ ಮೇಲೆ ಎಲ್ರೂ ಸಾಯ್ತಾರೆ."
"ನನ್ ತಾತಾನೂ ಸಾಯ್ತಾರಾ?"
     ಅಮ್ಮನಿಗೆ ತಕ್ಷಣ ಉತ್ತರಿಸಲಾಗಲಿಲ್ಲ. ತನ್ನ ತಂದೆಯ ಸಾವಿನ ಬಗ್ಗೆ ಮಗು ಕೇಳಿದಾಗ ತಕ್ಷಣ ಏನು ಉತ್ತರಿಸಿಯಾಳು? ಸಾವರಿಸಿಕೊಂಡು ಹೇಳಿದಳು:
"ಇನ್ನೂ ತುಂಬಾ ವರ್ಷ ಪುಟ್ಟೂ. ಹಂಡ್ರಡ್ ವರ್ಷ ಆದ ಮೇಲೆ ಎಲ್ರೂ ಸಾಯ್ತಾರೆ. ಈ ವಿಷಯ ಎಲ್ಲಾ ಮಾತಾಡಬಾರದು. ಹೋಗ್ಲಿ ಬಿಡು, ಸ್ಕೂಲಲ್ಲಿ ಇವತ್ತು ಏನು ಹೇಳಿಕೊಟ್ರು?"
     ಮಗು ಪಟ್ಟು ಬಿಡದೆ ಕೇಳಿತು:
'ಮಮ್ಮಿ, ನಾನೂ ಸಾಯ್ತೀನಾ?"
     ಮಗುವಿನ ಬಾಯಿಯ ಮೇಲೆ ಕೈಮುಚ್ಚಿ ತಾಯಿ ಅವಳನ್ನು ಅಪ್ಪಿಕೊಂಡು ಹೇಳಿದಳು:
"ನಾನು ಆಗಲೇ ಹೇಳಲಿಲ್ಲವಾ? ಹೀಗೆಲ್ಲಾ ಮಾತಾಡಬೇಡ. ನಿನಗಿನ್ನೂ ಐದೇ ವರ್ಷ. ಒಳ್ಳೆಯವರು ಸಾಯುವುದಿಲ್ಲ. ಆ ವಿಷಯ ಇನ್ನು ಸಾಕು. ನಡಿ, ಕೈಕಾಲು ಮುಖ ತೊಳೆಸುತ್ತೀನಿ. ಊಟ ಮಾಡುವಂತೆ."
"ಹಾಗಾದ್ರೆ ಸತ್ತೋರೆಲ್ಲಾ ಬ್ಯಾಡ್ ಬಾಯ್ಸಾ?"
     ತಾಯಿ ಏನು ಉತ್ತರಿಸಿಯಾಳು? ಸುಮ್ಮನೆ ಮಗುವನ್ನು ಬಚ್ಚಲಮನೆಗೆ ಕರೆದುಕೊಂಡು ಹೋಗಿ ಮುಖ ತೊಳೆಸಿದಳು. ಬೇರೆ ಬೇರೆ ವಿಷಯ ಮಾತನಾಡಿ ಗಮನ ಬೇರೆಡೆಗೆ ಸೆಳೆಯಲು ಅಮ್ಮನ ಪ್ರಯತ್ನ ಸಾಗಿತ್ತು. ಮಗುವಿನ ಮುಖವನ್ನು ಟವೆಲಿನಿಂದ ಒರೆಸುತ್ತಿದ್ದಾಗ ಮಗು ಮುಂದುವರೆಸಿತು:
"ಮಮ್ಮಿ, ಪ್ಲೀಸ್, ಐ ಡೋಂಟ್ ವಾಂಟ್ ಟು ಡೈ."
     ಮಗುವಿನಲ್ಲಿ ಅಮ್ಮ ಏನಾದರೂ ಮಾಡಲೆಂಬ ನಿರೀಕ್ಷೆಯಿತ್ತು, ಏನಾದರೂ ಮಾಡಬಹುದೆಂಬ ಭರವಸೆಗಾಗಿ ಕಾದಿತ್ತು. ಮಗಳ ಮಾತು ಕೇಳಿ ಅವಾಕ್ಕಾದ ಅಮ್ಮನ ಕಣ್ಣಂಚಿನಲ್ಲಿ ನೀರು ತುಳುಕಿತು. ಮಗುವನ್ನು ಅಪ್ಪಿ ಬಿಗಿಯಾಗಿ ಹಿಡಿದುಕೊಂಡಳು.
"ಇಲ್ಲಾ ಕಂದಾ, ನೀನು ಸಾಯುವುದಿಲ್ಲ. ನಿನ್ನನ್ನು ನಾನು ಸಾಯಲು ಬಿಡುವುದಿಲ್ಲ. ನೀನು ಸಾಯುವುದೇ ಇಲ್ಲ. ಏಕೆಂದರೆ ನೀನು ಒಳ್ಳೆಯವಳು. ನೀನು ತುಂಬಾ, ತುಂಬಾ, ತುಂಬಾ ಗುಡ್ ಗರ್ಲ್."
     ಹೀಗೆ ಹೇಳುತ್ತಾ ಮಗುವನ್ನು ಮುದ್ದಿಸಿದಾಗ ಮಗುವಿಗೆ ಸಮಾಧಾನವಾಗಿತ್ತು, ಸಂತೋಷವಾಗಿತ್ತು. ಸ್ಕೂಲಿನ ಅಂದಿನ ಆಟ ಪಾಠದ ಬಗ್ಗೆ ಕಣಿ ಹೇಳಲು ಶುರು ಮಾಡಿತು.
(ಚಿತ್ರ ಕೃಪೆ: ಅಂತರ್ಜಾಲದಿಂದ)
**********************
-ಕ.ವೆಂ.ನಾಗರಾಜ್.

ಶನಿವಾರ, ಜುಲೈ 16, 2011

ಮೂಢ ಉವಾಚ - 59

ಜೀವನ್ಮುಕ್ತ

ಅಹಮಿಕೆಯ ಅಂತ್ಯವದು ಅರಿವಿನ ಶಿಖರ
ವಿಷಯವಾಸನೆಯ ಕೊನೆ ವಿರಾಗ ಪ್ರಖರ |
ಭೂತವದು ಕಾಡದು ಭವಿಷ್ಯದ ಭಯವಿಲ್ಲ
ಜೀವನ್ಮುಕ್ತನವ ನಿರ್ವಿಕಾರಿ ಮೂಢ ||

ಸುಖ-ದುಃಖ
ಸುಖವನಾಳೆ ಭೋಗಿ ಮನವನಾಳೆ ಯೋಗಿ
ಸುಖವನುಂಡೂ ದುಃಖಪಡುವವನೆ ಭೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ಸುಖ ಬಯಸದಿರೆ ದುಃಖವೆಲ್ಲಿ ಮೂಢ ||

ಸಮಸ್ಯೆ
ತೊಡರು ಬಹುದೆಂದು ಓಡದಿರು ದೂರ
ಓಡಿದರೆ ಸೋತಂತೆ ಸಿಗದು ಪರಿಹಾರ |
ಸಮಸ್ಯೆಯ ಜೊತೆಯಲಿರುವವನೆ ಧೀರ
ಒಗಟಿನೊಳಗಿಹುದು ಉತ್ತರವು ಮೂಢ ||


ಗುರು
ಗುರುಹಿರಿಯರನನುಸರಿಸಿ ಜನರು ಸಾಗುವರು
ಗುರುವು ಸರಿಯೆನಲು ಜನರಿಗದು ಸರಿಯು |
ಗುರುವಿಗಿಹುದು ಗುರುತರದ ಹೊಣೆಯು
ಎಡವದಲೆ ನಡೆಯಬೇಕವನು ಮೂಢ ||
**************
-ಕ.ವೆಂ.ನಾಗರಾಜ್.

ಗುರುವಾರ, ಜುಲೈ 14, 2011

ಉತ್ತರ ಸಿಕ್ಕಿತು!

    
     ಅವನ ಪಾಡಿಗೆ ಅವನು ಸುಮ್ಮನೆ ಹೋಗುತ್ತಿದ್ದಾಗ ಎದುರಿಗೆ ಪ್ರಶ್ನೆಯೊಂದು ಅಡ್ಡ ಬಂದಿತು. ಅದನ್ನು ನಿರ್ಲಕ್ಷಿಸಿ ಪಕ್ಕಕ್ಕೆ ಸರಿಸಿ ಹೋಗಲು ಪ್ರಯತ್ನಿಸಿದರೆ ಅದೂ ಪಕ್ಕಕ್ಕೆ ಬಂದು ಉತ್ತರ ಹೇಳಲು ಆಗ್ರಹಿಸಿತು. ಅದನ್ನು ದೂಡಿದಷ್ಟೂ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತಿತ್ತು. ಉತ್ತರ ಹೇಳದೆ ಬಿಡುಗಡೆಯಿಲ್ಲವೆಂದು ಅವನಿಗೆ ಮನದಟ್ಟಾಯಿತು. ಅವನಿಗೆ ಉತ್ತರ ಗೊತ್ತಿರಲಿಲ್ಲ. ಅವನು ಉತ್ತರ ಹುಡುಕಲು ಪ್ರಾರಂಭಿಸಿದ. ಪ್ರಶ್ನೆಯೂ ಅವನನ್ನು ನೆರಳಿನಂತೆ ಹಿಂಬಾಲಿಸುತ್ತಲೇ ಇತ್ತು. ಉತ್ತರ ಕಂಡು ಹಿಡಿಯಲು ಅವನು ಹಲವಾರು ವರ್ಷಗಳ ಕಾಲ ಊರೂರು ಅಲೆದ, ಕಾಡು-ಮೇಡುಗಳನ್ನು ಸುತ್ತಿದ. ಎಲ್ಲರನ್ನೂ ವಿಚಾರಿಸಿದ. ಉತ್ತರ ಸಿಗುತ್ತಿರಲಿಲ್ಲ. ಚರ್ಚು, ಮಸೀದಿ, ಮಠ, ಮಂದಿರಗಳಿಗೆ ಭೇಟಿ ಕೊಟ್ಟ. ಉಹುಂ, ಉತ್ತರ ಸಿಗಲಿಲ್ಲ. ಮೌಲ್ವಿ, ಮುಲ್ಲಾ, ಪಾದ್ರಿ, ಅರ್ಚಕರು, ವಿದ್ವಾಂಸರುಗಳು, ಗುರುಗಳು, ಸಾಧು, ಸಂತರನ್ನು ಕಂಡು ಪ್ರಾರ್ಥಿಸಿದ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು. ಕೆಲವರು ತಾವು ಹೇಳಿದ ದಾರಿಯಲ್ಲಿ ಹೋದರೆ ಮಾತ್ರ ಉತ್ತರ ಸಿಗುತ್ತದೆ, ಇಲ್ಲದಿದ್ದರೆ ಸಿಗಲು ಸಾಧ್ಯವೇ ಇಲ್ಲ ಎಂದರು. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು. ಅವರು ಹೇಳುವುದನ್ನು ಕೇಳುತ್ತಿದ್ದರೆ ಅದು ಸರಿಯಿರಬಹುದು ಎನ್ನಿಸುತ್ತಿತ್ತು. ಇನ್ನೊಬ್ಬರು ಹೇಳುವುದನ್ನು ಕೇಳಿದಾಗ ಇದೂ ಸರಿಯಿರಬಹುದು ಎನ್ನಿಸುತ್ತಿತ್ತು, ಆದರೆ ಸ್ಪಷ್ಟ ಉತ್ತರ ಸಿಗದೆ ಗೊಂದಲವಾಗಿಬಿಡುತ್ತಿತ್ತು. ಪ್ರಶ್ನೆ ಅವನನ್ನು ನೋಡಿ ಗಹಗಹಿಸಿ ನಗುತ್ತಿತ್ತು. ಕೊನೆಗೆ ಸುಸ್ತಾಗಿ ಒಂದೆಡೆ ಕುಳಿತು ಕಣ್ಣು ಮುಚ್ಚಿ ಯಾವ ಉತ್ತರ ಸರಿ ಎಂದು ಆಲೋಚಿಸತೊಡಗಿದ. ಪ್ರಶ್ನೆಯೂ ಆದಿಶೇಷನಂತೆ ಅವನ ಬೆನ್ನ ಹಿಂದೆಯೇ ಕುಳಿತಿತ್ತು. ಸಿಕ್ಕ ಎಲ್ಲಾ ಉತ್ತರಗಳನ್ನು ಮನಸ್ಸಿನಲ್ಲೇ ವಿಮರ್ಶಿಸತೊಡಗಿದ, ಅಳೆದು ತೂಗಿ ನೋಡತೊಡಗಿದ. ಹೀಗೆ ಆಲೋಚಿಸುತ್ತಾ, ಆಲೋಚಿಸುತ್ತಾ ಅವನು ಒಳಗೆ, ಒಳಗೆ, ತನ್ನ ಒಳಗೆ, ತನ್ನ ಅಂತರಂಗದ ಒಳಗೇ ಸಾಗತೊಡಗಿದ. ಹಾಗೆಯೇ ಸಾಗುತ್ತಿದ್ದಾಗ ಅವನಿಗೆ ಕ್ಷೀಣ ಬೆಳಕೊಂದು ಕಂಡಿತು. ಅದನ್ನು ಅನುಸರಿಸಿ ಮುಂದೆ ಮುಂದೆ ಹೋಗತೊಡಗಿದ. ಕ್ರಮೇಣ ಬೆಳಕು ದೊಡ್ಡದಾಗುತ್ತಾ ಹೋಯಿತು. ಕೊನೆಗೊಮ್ಮೆ ಉಜ್ವಲ ಪ್ರಕಾಶ ಕಂಡಿತು. ಅವನಿಗೆ ತಾನು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟಿತ್ತು. ಅದುವರೆಗೆ ಉತ್ತರ ಇದ್ದ ಸ್ಥಳ ಬಿಟ್ಟು ಆತ ಬೇರೆಲ್ಲಾ ಕಡೆ ಹುಡುಕಿದ್ದ. ಉತ್ತರ ಸಿಕ್ಕಿದ ಸಂತೋಷದಿಂದ ಪ್ರಶ್ನೆಗೆ ಉತ್ತರ ಹೇಳಲು ಹೊರಪ್ರಪಂಚಕ್ಕೆ ಬಂದರೆ, ಅಲ್ಲಿ ಪ್ರಶ್ನೆಯೇ ಕಾಣುತ್ತಿರಲಿಲ್ಲ. ಅದು ಕಣ್ಣಿಗೆ ಕಾಣದಷ್ಟು ಸಣ್ಣದಾಗಿ ಉತ್ತರದೊಳಗೆ ಐಕ್ಯವಾಗಿಬಿಟ್ಟಿತ್ತು!
(ಚಿತ್ರಕೃಪೆ: ಅಂತರ್ಜಾಲ).
*****************

ಮಂಗಳವಾರ, ಜುಲೈ 5, 2011

ಮೂಢ ಉವಾಚ - 58

ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸನ್ಯಾಸಿ ಮೂಢ ||


ಬಿಟ್ಟುಬಿಡುವನು ಸಾಧಕನು ತೊರೆಯುವನು
ಹೊರಮನದ ಕೋರಿಕೆಯನಲ್ಲಗಳೆಯುವನು |
ಅಂತರಂಗದ ಕರೆಯನುಸರಿಸಿ ಬಾಳುವನು
ಸಮಚಿತ್ತದಲಿ ಸಾಗುವನು ಮೂಢ ||


ತಪನಿರತಗಾಸಕ್ತಿ ಕಾಮಿತಫಲದಲಿ
ಪಂಡಿತನಿಗಾಸಕ್ತಿ ಹಿರಿಮೆಗರಿಮೆಯಲಿ |
ಕರ್ಮಿಗಿಹುದಾಸಕ್ತಿ ಬರುವ ಫಲದಲಿ
ಯೋಗಿಗಾಸಕ್ತಿ ಪರಮಪದದಲ್ಲಿ ಮೂಢ ||


ಫಲವ ಬಯಸದೆ ಮಾಡುವನು ಕರ್ಮ
ಸಮಚಿತ್ತದೆಸಗಿದ ಮಮರಹಿತ ಕರ್ಮ |
ರಾಗ ರೋಷಗಳ ಸೋಂಕಿರದ ಕರ್ಮ
ಕರ್ಮಯೋಗಿಯ ಮರ್ಮವಿದುವೆ ಮೂಢ ||
******************
-ಕ.ವೆಂ.ನಾಗರಾಜ್.