ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಅಕ್ಟೋಬರ್ 30, 2011

ಕೆಳದಿ ಕವಿಮನೆತನ: ಬೆಂಗಳೂರು ಸಮಾವೇಶದಲ್ಲಿಟ್ಟ ಗಟ್ಟಿ ಹೆಜ್ಜೆಗಳು

     ಕವಿಮನೆತನದ ಹಿಂದಿನವರ ಸಾಧನೆಗಳನ್ನು ನೆನೆಯುವ, ಅವರ ಹಿರಿಮೆ-ಗರಿಮೆ ಸಾರುವ, ಅವರ ಕೃತಿಗಳನ್ನು ಪರಿಚಯಿಸುವ, ಆ ಮೂಲಕ ಇಂದಿನ ಪೀಳಿಗೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಪ್ರಾರಂಭಗೊಂಡ ಸಮಾವೇಶಕ್ಕೆ ಪೂರಕವಾಗಿ ಬೆಂಗಳೂರಿನ ಜೆ.ಪಿ.ನಗರದ ೨ನೆಯ ಹಂತದಲ್ಲಿರುವ ಮಾ ಆನಂದಮಯಿ ಆಶ್ರಮದ ಸಭಾಭವನದಲ್ಲಿ ದಿನಾಂಕ ೨೮-೧೨-೨೦೦೮ರಂದು ನಡೆದ ಕವಿಮನೆತನದ ಹಾಗೂ ಬಂಧು-ಬಳಗದವರ ಮೂರನೆಯ ಸಮಾವೇಶದಲ್ಲಿ ಈ ದಿಸೆಯಲ್ಲಿ ಕೆಲವು ಗಟ್ಟಿ ಹೆಜ್ಜೆಗಳನ್ನು ಇರಿಸಲಾಯಿತು. ವೇದಿಕೆಯಲ್ಲಿ ಡಾ. ಕೆಳದಿ ಕೃಷ್ಣಜೋಯಿಸ್, ಶ್ರೀಯುತರಾದ ಕವಿ ವೆಂಕಟಸುಬ್ಬರಾಯರು, ಸಾ.ಕ.ಕೃಷ್ಣಮೂರ್ತಿ, ಸಮಾವೇಶದ ಆಯೋಜಕರಾದ ಶ್ರೀಮತಿ ಮತ್ತು ಶ್ರೀ ಎಮ್.ಎಸ್.ನಾಗೇಂದ್ರ ಹಾಗೂ ಶ್ರೀಮತಿ ಪದ್ಮಾವತಮ್ಮ ಸುಬ್ಬರಾಯರು ಉಪಸ್ಥಿತರಿದ್ದರು. ಸಾಂಪ್ರದಾಯಿಕವಾಗಿ ಜ್ಯೋತಿ ಬೆಳಗುವುದು, ವೇದಘೋಷ, ಪ್ರಾರ್ಥನೆಗಳ ನಂತರ ಹಿಂದಿನ ವರ್ಷ ನಿಧನರಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 
ಕವಿಕಿರಣ ಮೂಡಿತು!
     ಶ್ರೀ ಕವಿನಾಗರಾಜರ ಸಂಪಾದಕತ್ವ ಮತ್ತು ಶ್ರೀ ಕವಿಸುರೇಶರ ಸಹಸಂಪಾದಕತ್ವದ ಕವಿಮನೆತನದ ಪತ್ರಿಕೆ ಕವಿಕಿರಣದ ಪ್ರಥಮ ಸಂಚಿಕೆಯನ್ನು ೯೪ ವರ್ಷದ ವಯೋವೃದ್ಧ, ಜ್ಞಾನವೃದ್ಧರಾದ ಶ್ರೀ ಹೆಬ್ಬೈಲು ಕೃಷ್ಣಮೂರ್ತಿಯವರು ಬಿಡುಗಡೆಗೊಳಿಸಿ ಶುಭ ಕೋರಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕವಿನಾಗರಾಜ್ ಕವಿಕಿರಣ ಪತ್ರಿಕೆಯ ಧ್ಯೇಯೋದ್ದೇಶಗಳನ್ನು ವಿವರಿಸುತ್ತಾ ಪತ್ರಿಕೆಯು ಕೇವಲ ಕವಿಮನೆತನದವರಿಗಾಗಿ ಆಗಿರದೆ ಅಪೂರ್ವ ಮತ್ತು ಮಹತ್ವದ ವಿಷಯಗಳನ್ನು ಒಳಗೊಂಡಿರುವುದರಿಂದ ಎಲ್ಲಾ ಇತಿಹಾಸಾಸಕ್ತರು, ಅಭ್ಯಾಸಿಗಳಿಗೆ ಪ್ರಯೋಜನಕಾರಿಯಾಗಿರುವುದಲ್ಲದೆ, ಸಜ್ಜನಶಕ್ತಿಯ ಜಾಗರಣೆಯ ಉದ್ದೇಶ ಹೊಂದಿದೆಯೆಂದರು. ಹಿಂದಿನವರ ಕೃತಿಗಳು, ಸಾಧನೆಗಳನ್ನು ಪರಿಚಯಿಸುವುದರೊಂದಿಗೆ ಮನೆತನದವರಲ್ಲಿ ಹುದುಗಿರುವ ಪ್ರತಿಭೆಯನ್ನು ಪ್ರೇರಿಸಿ ಹೊರತರುವಲ್ಲಿ ಸಹಕಾರಿಯಾಗುವುದೆಂದರು. 

ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ ಪುಸ್ತಕದ ಬಿಡುಗಡೆ:
     ಕವಿಮನೆತನದ ಏಳನೆಯ ಪೀಳಿಗೆಗೆ ಸೇರಿದ ನನ್ನ ಅಜ್ಜ ಶ್ರೀ ಕವಿಸುಬ್ರಹ್ಮಣ್ಯಯ್ಯನವರ ಜೀವನ, ಸಾಧನೆಗಳ ಕುರಿತು ಬೆಳಕು ಚೆಲ್ಲುವ ಕೃತಿ ಕವಿ ಸುಬ್ರಹ್ಮಣ್ಯಯ್ಯ ಪುಸ್ತಕ ಬಿಡುಗಡೆಯಾಯಿತು. ವಿಶೇಷವೆಂದರೆ ಈ ಪುಸ್ತಕದ ಕರ್ತೃ ನಾನಾಗಿದ್ದರೆ, ಬಿಡುಗಡೆ ಮಾಡಿದವರು ನನ್ನ ತಂದೆ ಶ್ರೀ ಕವಿವೆಂಕಟಸುಬ್ಬರಾಯರು. ಈ ಪುಸ್ತಕದ ಪ್ರಕಟಣೆಯ ಪೂರ್ಣ ಖರ್ಚುವೆಚ್ಚಗಳನ್ನು ಭರಿಸಿದವರು ನನ್ನ ಮಕ್ಕಳು ಬಿಂದು ಮತ್ತು ವಿನಯರವರು. ಸಮಾವೇಶದಲ್ಲಿ ಬಂದಿದ್ದ ಎಲ್ಲರಿಗೆ ಮತ್ತು ಬಾರದಿದ್ದ ಎಲ್ಲಾ ಬಂಧುಗಳಿಗೆ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. 


ಕವಿ ಕುಟುಂಬಗಳವರ ಮತ್ತು ಬಂಧು-ಬಳಗದವರ ವಿಳಾಸ, ದೂರವಾಣಿ ವಿವರಗಳ ಕೈಪಿಡಿ ಬಿಡುಗಡೆ:
     ಸಹೋದರ ಕವಿಸುರೇಶ ಶ್ರಮಪಟ್ಟು ವಿವರ ಸಂಗ್ರಹಿಸಿ ಸ್ವಂತ ವೆಚ್ಚದಲ್ಲಿ ಪ್ರಕಟಿಸಿದ ಕವಿ ಕುಟುಂಬಗಳವರ ಮತ್ತು ಬಂಧು-ಬಳಗದವರ ವಿಳಾಸ, ದೂರವಾಣಿ ವಿವರಗಳ ಕೈಪಿಡಿಯನ್ನು ಬಿಡುಗಡೆ ಮಾಡಿದ ಡಾ. ಕೆಳದಿ ಕೃಷ್ಣಜೋಯಿಸರು ಸುರೇಶರ ಈ ಕೆಲಸ ಅನುಕರಣೀಯವೆಂದರು. ಎಲ್ಲಾ ಬಂಧು-ಬಳಗದವರಿಗೆ ಈ ಕೈಪಿಡಿಯನ್ನು ಉಚಿತವಾಗಿ ಕೊಡಲಾಯಿತು. ಪರಸ್ಪರರ ಸಂವಹನೆಗೆ, ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುವ ಈ ಕೈಪಿಡಿ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. 
ಇನ್ನೊಂದು ಹೊಸ ಮೇಲ್ಪಂಕ್ತಿ:
     ಬೆಂಗಳೂರಿನ ಶ್ರೀ ಶ್ರೀಕಂಠ ಮತ್ತು ಕುಟುಂಬದವರು ಹಾಜರಿದ್ದ ಎಲ್ಲಾ ಮಹಿಳಾ ಸದಸ್ಯರುಗಳಿಗೆ ಅರಿಶಿನ-ಕುಂಕುಮ, ಬಳೆ, ರವಿಕೆಕಣಗಳನ್ನು ವಿತರಿಸಿದರು.
     ಎಂದಿನಂತೆ ಗಾಯನ, ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ತಮವಾಗಿ ಸಮಾವೇಶ ನಡೆಸಲು ಸಹಕರಿಸಿ ಒಳ್ಳೆಯ ಊಟೋಪಚಾರದ ವ್ಯವಸ್ಥೆ ಮಾಡಿದ್ದ ಆಯೋಜಕರಿಗೆ ಅಭಿವಂದನೆ ಸಲ್ಲಿಸಿ, ಒಳ್ಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ತೆರಳುವುದರೊಂದಿಗೆ ಸಾರ್ಥಕ ಸಮಾವೇಶ ಸಂಪನ್ನಗೊಂಡಿತ್ತು. 
ವಿಸ್ತೃತ ಮಾಹಿತಿ ಮತ್ತು ಹೆಚ್ಚಿನ ಚಿತ್ರಗಳನ್ನು ವೀಕ್ಷಿಸಲು: keladikavimanetana.blogspot.com/2011/04/28-12-2008.html
******
-ಕ.ವೆಂ.ನಾಗರಾಜ್.




















ಬುಧವಾರ, ಅಕ್ಟೋಬರ್ 26, 2011

ಮರೆಯಲಾರೆ ಕರಿಯ ನಿನ್ನ!


     ಪುತ್ತೂರು ತಾಲ್ಲೂಕು ಕಡಬವನ್ನು ತಾಲ್ಲೂಕು ಎಂದು ಘೋಷಿಸದಿದ್ದರೂ ಪೂರ್ವಭಾವಿಯಾಗಿ ವಿಶೇಷ ತಹಸೀಲ್ದಾರರ ಹುದ್ದೆ ಮಂಜೂರು ಮಾಡಿ ಆದೇಶವಾದಾಗ ಪ್ರಥಮ ವಿಶೇಷ ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ್ದ ನಾನು ಕಡಬದಲ್ಲಿ ಸೂಕ್ತ ವಸತಿ ಸಿಗದಿದ್ದರಿಂದ ೨೦ ಕಿ.ಮೀ. ದೂರದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ವಸತಿಗೃಹವೊಂದರಲ್ಲಿ ನನಗೆ ಉಳಿದುಕೊಳ್ಳಲು ಅವಕಾಶವಾಗಿತ್ತು. ಸುಬ್ರಹ್ಮಣ್ಯ ಸಹ ಉದ್ದೇಶಿತ ಕಡಬ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಗ್ರಾಮವಾಗಿತ್ತು. ಆ ಸಂದರ್ಭದ ನೆನಪೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. 
     ಇದು ಸುಮಾರು ೧೦-೧೨ ವರ್ಷಗಳ ಹಿಂದಿನ ಘಟನೆ. ಪ್ರತಿದಿನ ಬೆಳಿಗ್ಗೆ ೫-೩೦ರ ವೇಳೆಗೆ ಎದ್ದು ಸುಮಾರು ೩-೪ ಕಿ.ಮೀ. ದೂರ ವಾಕಿಂಗ್ ಹೋಗುವ ಅಭ್ಯಾಸವಿಟ್ಟುಕೊಂಡಿದ್ದೆ. ಹೆಚ್ಚಿನವರ ದಿನದ ಚಟುವಟಿಕೆಗಳು ಪ್ರಾರಂಭಗೊಳ್ಳುವ, ನಿಶ್ಶಬ್ದ ವಾತಾವರಣ ಮರೆಯಾಗಿ ಗಿಜಿಬಿಜಿಗಳು, ಚಿಲಿಪಿಲಿಗಳು, ಶಬ್ದ ಸಾಮ್ರಾಜ್ಯ ರಾರಾಜಿಸಲು ಪ್ರಾರಂಭವಾಗುತ್ತಿದ್ದ ಆ ಸಮಯದಲ್ಲಿ ಸುಬ್ರಹ್ಮಣ್ಯನ ಭಕ್ತರು ಕುಮಾರಧಾರಾ ನದಿಗೆ ಮೀಯಲು ಹೋಗುತ್ತಿದ್ದವರು, ಮಿಂದು ಬರುತ್ತಿದ್ದವರು, ಇನ್ನೂ ನಿದ್ದೆಗಣ್ಣು ಹರಿದಿರದೆ ಕುಕ್ಕರುಗಾಲಿನಲ್ಲಿ ಕುಳಿತು ಬೀಡಿ ಸೇದುತ್ತಾ ಕುಳಿತವರು, ಹೋಟೆಲುಗಳಲ್ಲಿ ಟೀ, ಕಾಫಿಗಳನ್ನು ಹೀರುತ್ತಾ ಇದ್ದವರು, ಬಿಡಾಡಿ ನಾಯಿಗಳು, ಬಿಂಕದಿಂದ ಕೊಕ್ಕೊಕ್ಕೋ ಎನ್ನುವ ಕೋಳಿಗಳು, ಒಳ್ಳೆಯ ಗಾಳಿ ಸೇವಿಸಲು ಹೊರಟವರನ್ನು ಅಣಕಿಸುವಂತೆ ಹಿಂದೆ ಮುಂದೆ ಬೀಡಿ, ಸಿಗರೇಟು ಸೇದುತ್ತಾ ಹೊಗೆ ಕುಡಿಸುವವರು, (ಅವರುಗಳು ಕಂಡಾಗ ಅವರನ್ನು ದಾಟಿ ಹೋಗಲು ನನ್ನ ಹೆಜ್ಜೆಗಳು ಬಿರುಸಾಗಿ ಚಲಿಸುತ್ತಿದ್ದವು), ಮುಂದಿನ ಪ್ರಯಾಣಕ್ಕೆ ವಾಹನಗಳನ್ನು ಶುಚಿಗೊಳಿಸಿ ಸಿದ್ಧಪಡಿಸುವವರು, ಸುತ್ತಮುತ್ತಲಿನ ಆಹ್ಲಾದಕರ ಹಸಿರು ಪರಿಸರ, ಇತ್ಯಾದಿ  ಗಮನಿಸುತ್ತಾ ನನ್ನ ವಾಕಿಂಗ್ ಸಾಗುತ್ತಿತ್ತು. ಪ್ರಾರಂಭದ ದಿನಗಳಲ್ಲಿ ಇದೆಲ್ಲಾ ವಿಶೇಷವಾಗಿ ಕಂಡಿತ್ತಾದರೂ ಕ್ರಮೇಣ ಹೊಂದಿಕೆಯಾಯಿತು. 
     ಒಮ್ಮೆ ನಾನು ವಾಕಿಂಗ್ ಹೋಗುವಾಗ ನನ್ನ ಹಿಂದೆ ಒಂದು ಕರಿಯ ಬಡಕಲು ನಾಯಿಮರಿ, ಮರಿಯೆಂದರೆ ಚಿಕ್ಕದೇನಲ್ಲ, ಸ್ವಲ್ಪ ದೊಡ್ಡದೇ, ನನ್ನ ಹಿಂದೆ ಬಾಲವಾಡಿಸಿಕೊಂಡು ಬರುತ್ತಿತ್ತು. ಇದು ನಾಯಿಮರಿಗಳ ಸ್ವಭಾವವಾದ್ದರಿಂದ ನಾನು ಅದಕ್ಕೆ ವಿಶೇಷ ಗಮನ ಕೊಡಲಿಲ್ಲ. ಆದರೆ ಆರೀತಿ ಹಿಂಬಾಲಿಸುವುದು ಹಲವು ದಿನಗಳವರೆಗೆ ಮುಂದುವರೆದಾಗ ಸಹಜವಾಗಿ ಅದರ ಕಡೆಗೆ ನಾನು ಗಮನಿಸತೊಡಗಿದೆ. ಇತರ ನಾಯಿಗಳು ಅದನ್ನು ಕಂಡು ಬೊಗಳಿ ಕಚ್ಚಲು ಬರುತ್ತಿದ್ದಾಗ ನಾನು ಅವುಗಳನ್ನು ಓಡಿಸುತ್ತಿದ್ದೆ. ಅದೂ ಸಹ ತನ್ನನ್ನು ರಕ್ಷಿಸಬೇಕೆಂಬಂತೆ ನನ್ನನ್ನು ದೀನನೋಟದಿಂದ ನೋಡುತ್ತಿತ್ತು. ಪ್ರಾರಂಭದಲ್ಲಿ ಸ್ವಲ್ಪದೂರ ಮಾತ್ರ ಬರುತ್ತಿದ್ದ ನಾಯಿಮರಿ ನಾನು ವಾಪಸು ಬರುವುದನ್ನು ಕಾಯುತ್ತಾ ಇದ್ದಿದ್ದು ವಾಪಸು ಬಂದಾಗ ಪುನಃ ನಾನು ವಸತಿಗೃಹಕ್ಕೆ ಹೋಗುವವರೆಗೂ ಹಿಂಬಾಲಿಸುತ್ತಿತ್ತು. ಆ ನಾಯಿಮರಿ ವಾಕಿಂಗ್ ಹೋಗುತ್ತಿದ್ದ, ರಸ್ತೆಯಲ್ಲಿ ಓಡಾಡುತ್ತಿದ್ದ ಇತರರ ಹಿಂದೆ ಹೋಗುತ್ತಿರದೇ ಇದ್ದುದು ನನಗೆ ಆಶ್ಚರ್ಯ ತಂದಿತ್ತು. ಯಾವಾಗ ಇತರ ನಾಯಿಗಳಿಂದ ಅದಕ್ಕೆ ನನ್ನಿಂದ ರಕ್ಷಣೆ ಸಿಗತೊಡಗಿತೋ ಅದು ನಂತರದಲ್ಲಿ ನನ್ನ ಹಿಂದೆ ವಾಕಿಂಗ್ ಮುಗಿಸುವವರೆಗೂ ಬರತೊಡಗಿತು. ನನಗೂ ಅದು ಅಭ್ಯಾಸವಾಗಿ ವಾಕಿಂಗ್ ಪ್ರಾರಂಭಿಸಿದ ೮-೧೦ ಹೆಜ್ಜೆ ನಡೆದರೂ ಅದು ಕಣ್ಣಿಗೆ ಬೀಳದಿದ್ದರೆ ಇರುಸುಮುರುಸಾಗುತ್ತಿತ್ತು. ಅಷ್ಟರಲ್ಲಿ ಯಾವ ಚರಂಡಿಯ ಒಳಗಿನಿಂದಲೋ, ಅಂಗಡಿಯ ಬದಿಯಿಂದಲೋ, ಯಾವುದೋ ವಾಹನದ ಕೆಳಗಿನಿಂದಲೋ ಹಾರಿ ಬಂದು ಅರಳಿದ ಕಣ್ಣುಗಳನ್ನು ಬಿಡುತ್ತಾ ನನ್ನ ಜೊತೆ ವಾಕಿಂಗಿಗೆ ಜೊತೆಗೂಡುತ್ತಿತ್ತು. ಕಪ್ಪಗಿದ್ದರಿಂದ ಅದಕ್ಕೆ ಕರಿಯ ಎಂದು ಹೆಸರು ಇಟ್ಟಿದ್ದೆ. ಒಂದು ಬೆಳಿಗ್ಗೆ ಅದು ಕಾಣದಿದ್ದಾಗ ನಾನು 'ಕರಿಯ, ಕರಿಯ. . . ಯ' ಎಂದು ಕರೆದಾಗ ಅದು ಹಾರಿಬಂದು ನನ್ನ ಮುಂದೆ ನುಲಿದಾಡಿತ್ತು. ಒಮ್ಮೆ ಮಾತ್ರ ಅದಕ್ಕೆ ಅಂಗಡಿಯಿಂದ ಬನ್ ಒಂದನ್ನು ಖರೀದಿಸಿ ಹಾಕಿದ್ದೆ. ಸಂತೋಷದಿಂದ ತಿಂದಿತ್ತು. ವಾಕಿಂಗ್ ಹೊರಟಾಗ ಅದನ್ನು ಬಾಯಲ್ಲಿ ಕಚ್ಚಿ ಹಿಡಿದೇ ಹೊರಟಾಗ ನಾನು ನಿಂತು, ಅದು ತಿನ್ನುವುದನ್ನು ಮುಗಿಸಿದ ಮೇಲೆ ಹೊರಟೆ. ಅದನ್ನು ಬಿಟ್ಟರೆ ಅದಕ್ಕೆ ಮತ್ತೆಂದೂ ನಾನು ಯಾವ ಆಹಾರವನ್ನೂ ಕೊಟ್ಟಿರಲಿಲ್ಲ. ಕೊಡಬೇಕಿತ್ತೆಂದು ಒಂದು ರೀತಿಯ ಅಪರಾಧೀಭಾವ ನನ್ನನ್ನು ಆಗಾಗ್ಗೆ ಕಾಡುತ್ತಿರುತ್ತದೆ. ಸುಮಾರು ಮೂರು ತಿಂಗಳು ಇದೇ ರೀತಿಯ ಜೊತೆಜೊತೆಯ ವಾಕಿಂಗ್ ನಡೆದಿರಬೇಕು. ಒಂದು ದಿನ ಅದು ಎಂದಿನಂತೆ ನನ್ನ ಜೊತೆಗೆ ಬರದಿದ್ದಾಗ 'ಕರಿಯ, ಕರಿಯ' ಎಂದು ಕರೆದೆ. ಐದು ನಿಮಿಷ ಅಲ್ಲೇ ಕಾದಿದ್ದರೂ ಅದು ಬರದಿದ್ದಾಗ ಮುಂದೆ ಹೊರಟೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಅದು ಕಣ್ಣಿಗೆ ಬಿತ್ತು, ಆದರೆ ಜೀವಂತವಾಗಿ ಅಲ್ಲ, ಮಾಂಸದ ಮುದ್ದೆಯಾಗಿ, ಭೀಕರವಾಗಿ. ಯಾವುದೋ ವಾಹನ ಅದರ ಮೇಲೆ ಹರಿದುಹೋಗಿತ್ತು. ನನಗೆ ಬಹಳ ದುಃಖವಾಯಿತು. ವಾಕಿಂಗ್ ಮುಂದುವರೆಸದೆ ಮನೆಗೆ ವಾಪಸು ಬಂದು ಕುಳಿತೆ. ಆ ದಿನವೆಲ್ಲಾ ಮನಸ್ಸು ಸರಿಯಿರಲಿಲ್ಲ. ಇದು ನಡೆದು ೧೦ ವರ್ಷಗಳ ಮೇಲಾದರೂ ಕರಿಯನ ನೆನಪು ಈಗಲೂ ಮನಃಪಟಲದಲ್ಲಿ ಅಳಿಸದೇ ಉಳಿದಿದೆ. ಯಾವ ಜನ್ಮದ ಋಣಾನುಬಂಧವೋ ನಾನರಿಯೆ, ಪ್ರೀತಿಯ ಕರಿಯಾ, ನಾನಿನ್ನ ಮರೆಯಲಾರೆ!


**************

ಶನಿವಾರ, ಅಕ್ಟೋಬರ್ 22, 2011

ಕಡಬ ತಾಲ್ಲೂಕು ಆದೀತೇ?

     10-12 ವರ್ಷಗಳ ಹಿಂದಿನ ಮಾತು.  ಕಡಬ ಪುತ್ತೂರು ತಾಲ್ಲೂಕಿನ ಒಂದು ಹೋಬಳಿ. ಕಡಬವನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂದು ಜನರ ಹೋರಾಟ ತೀವ್ರಗೊಂಡಾಗ ಹೋರಾಟದ ಕಾವನ್ನು ಕಡಿಮೆಗೊಳಿಸಲು ರಾಜಕಾರಣಿಗಳು ಮಾಡಿದ ಕುತಂತ್ರವೆಂದರೆ ತಹಸೀಲ್ದಾರರ ಎಲ್ಲಾ ಅಧಿಕಾರಗಳನ್ನು ನೀಡಿ ಕಡಬಕ್ಕೆ ವಿಶೇಷ ತಹಸೀಲ್ದಾರರ ನೇಮಕ ಮಾಡಿದ್ದು. ನಾನೇ ಅಲ್ಲಿಗೆ ಪ್ರಥಮ ವಿಶೇಷ ತಹಸೀಲ್ದಾರನಾಗಿ ಹೋದವನು. ಇದನ್ನು ರಾಜಕಾರಣಿಗಳ ಕುತಂತ್ರವೆಂದು ಏಕೆ ಹೇಳಿದೆನೆಂದರೆ ಕಡಬವನ್ನು ತಾಲ್ಲೂಕು ಕೇಂದ್ರವೆಂದು ಘೋಷಿಸಲು ಕಷ್ಟವೇನಿರಲಿಲ್ಲ. ಮಾಜಿ ಮುಖ್ಯಮಂತ್ರಿಯವರಾದ ಶ್ರೀ ವೀರಪ್ಪ ಮೊಯಿಲಿಯವರಿದ್ದರು. ಅವರೇ ಮಂಗಳೂರು ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ವಿಚಾರಿಸಿ ನನ್ನನ್ನು ಕಡಬಕ್ಕೆ ನೇಮಿಸಲು ಶಿಫಾರಸು ಮಾಡಿದ್ದವರು. ಶ್ರೀ ಸದಾನಂದ ಗೌಡರು ಆಗ ಪುತ್ತೂರಿನ ಶಾಸಕರಾಗಿದ್ದರು. ಈಗ ಅವರೇ ಮುಖ್ಯಮಂತ್ರಿಗಳು. ಶ್ರೀಮತಿ ಶೋಭಾ ಕರಂದ್ಲಾಜೆಯವರೂ ಪುತ್ತೂರು ತಾಲ್ಲೂಕಿನವರು. ಶ್ರೀ ಯಡಿಯೂರಪ್ಪನವರು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದಾಗ ಈ ವಿಷಯದಲ್ಲಿ ಪ್ರಭಾವ ಬೀರಲು ಸಾಧ್ಯವಿತ್ತು. ಘಟಾನುಘಟಿ ನಾಯಕರುಗಳಿದ್ದರೂ ಕಡಬ ತಾಲ್ಲೂಕಾಗಲಿಲ್ಲ, ಅಥವಾ ಮಾಡಲು ಬಿಡಲಿಲ್ಲ. ಮಾಡಲು ಇಷ್ಟವಿಲ್ಲದಿದ್ದರೆ ಸ್ಪಷ್ಟ ನಿರ್ಧಾರ ತಳೆದು ಜನರನ್ನು ಒಪ್ಪಿಸಲು ಪ್ರಯತ್ನಿಸಬಹುದಿತ್ತು. ಆ ಕೆಲಸವನ್ನೂ ಮಾಡಲಿಲ್ಲ. ಜನರೂ ತಣ್ಣಗಾಗಿರುವಂತೆ ತೋರುತ್ತದೆ. ದಶಕಗಳ ಹೋರಾಟದ ಬಿಸಿಯನ್ನು ರಾಜಕಾರಣಿಗಳು ತಣ್ಣಗಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಣ್ಣಾ ಹಜಾರೆಯವರ ಹೋರಾಟದ ದಿಕ್ಕನ್ನೂ ಸಹ ತಪ್ಪಿಸುವಲ್ಲಿ ಕೊಳಕು ರಾಜಕಾರಣಿಗಳು ಯಶಸ್ವಿಯಾದಾರೇನೋ! ಸೌಮ್ಯ, ಶಾಂತಿಯುತ ಹೋರಾಟಕ್ಕೆ ಬೆಲೆ ಸಿಗುವ ಸಾಧ್ಯತೆ ಕಡಿಮೆ.

ಬುಧವಾರ, ಅಕ್ಟೋಬರ್ 19, 2011

ಮೂಢ ಉವಾಚ - 77


ಮರಣಕಿಂತಲು ಘೋರ ಮುಪ್ಪೆಂಬ ಶಾಪ
ದೇಹ ದುರ್ಬಲವು ರೋಗ ರುಜಿನಗಳ ಕೂಪ |
ಅನ್ಯರನು ನೆಚ್ಚುವ ದೈನ್ಯತೆಯೆ ತಾಪ
ನರರ ಮಸ್ತಕದ ಲಿಖಿತವಿದು ಮೂಢ ||


ಎದೆಯಲ್ಲಿ ದುಃಖ ಮಡುಗಟ್ಟಿದಾಕ್ರೋಷ
ಬರಡು ಮನದಲಿ ತೋರಿಕೆಯ ಸಂತೋಷ |
ಹೀನ ದೈನ್ಯತೆಯ ಆಶ್ರಯದ ಪಾಶ
ಮೂದಲಿಕೆ ತಪ್ಪದು ಮುದಿತನದಿ ಮೂಢ ||


ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು |
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ ||


ಸಂಸಾರ ವೃಕ್ಷಕೆ ಅಜ್ಞಾನವೇ ಬೇರು
ಆತ್ಮಬುದ್ಧಿಯು ಮೊಳಕೆ ಆಸಕ್ತಿ ಚಿಗುರು |
ಕರ್ಮವದು ನೀರು ಸಹವಾಸ ಗೊಬ್ಬರವು
ತಕ್ಕಂತೆ ಸಿಕ್ಕೀತು ಫಲವು ಮೂಢ ||
^^^^^^^^^^^^^^^
-ಕ.ವೆಂ.ನಾಗರಾಜ್.

ಮಂಗಳವಾರ, ಅಕ್ಟೋಬರ್ 18, 2011

ಸಮ್ಮರ್ ಕ್ಯಾಂಪಿನಲ್ಲಿ ಫ್ಯಾಶನ್ ಶೋ

     ಕಳೆದ ಬೇಸಿಗೆಯ ರಜೆಯಲ್ಲಿ ನನ್ನ ಮೊಮ್ಮಗಳು ಅಕ್ಷಯ ಸಮ್ಮರ್ ಕ್ಯಾಂಪಿನಲ್ಲಿ ಭಾಗವಹಿಸಿದ್ದಳು. ಕೊನೆಯ ದಿನ ಅವರು ಕಲಿತ ಆಟ-ಪಾಟ, ಹಾಡು, ಡ್ಯಾನ್ಸು, ಇತ್ಯಾದಿಗಳ ಪ್ರದರ್ಶನವೂ ಇತ್ತು. ಫ್ಯಾಶನ್ ಶೋ ಸಹ ಇತ್ತು. ಮೊಮ್ಮಗಳು ಅದರಲ್ಲಿ ಕಾಣಿಸಿದ್ದು ಹೀಗೆ:


ಸೋಮವಾರ, ಅಕ್ಟೋಬರ್ 17, 2011

ಕೆಳದಿ ಕವಿಮನೆತನ: ಕೆಳದಿಯಲ್ಲಿ ಕಳೆಗಟ್ಟಿದ ಸಮಾವೇಶ

"ಬರೆಯಹೊರಟಿಹೆವು ಸಾಮರಸ್ಯಕೆ ಭಾಷ್ಯ
ಸುದೀರ್ಘ ಹಾದಿಯಿದು ದೂರವಿದೆ ಗಮ್ಯ"


     ಶಿವಮೊಗ್ಗದಲ್ಲಿ ನಡೆದ ಸಮಾವೇಶ ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದರೆ ಕೆಳದಿಯಲ್ಲಿ ೨೫-೧೨-೨೦೦೭ರಂದು ನಡೆದ ಎರಡನೆಯ ಸಮಾವೇಶ ಸಹ ಅನೇಕ ಒಳ್ಳೆಯ ಕ್ಷಣಗಳಿಗೆ ಸಾಕ್ಷಿಯಾಯಿತು. ಕೆಳದಿಯಲ್ಲಿರುವ ಅರ್ಚಕ  ಶ್ರೀ ಕವಿರಾಮಮೂರ್ತಿ ಮತ್ತು ಸಹೋದರರು ಆಯೋಜಕರಾಗಿದ್ದ ಈ ಸಮಾವೇಶ ಕೆಳದಿಯ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದು ಅವಿಸ್ಮರಣೀಯ ಅನುಭವವನ್ನು ಭಾಗವಹಿಸಿದ ಎಲ್ಲ ಬಂಧುಗಳಿಗೆ ನೀಡಿತು. ನಡೆದ ಕಾರ್ಯಕ್ರಮಗಳ ಸಂಕ್ಷಿಪ್ತ ಮಾಹಿತಿ ಮತ್ತು ಚಿತ್ರಗಳನ್ನು ತಮ್ಮೊಡನೆ ಹಂಚಿಕೊಳ್ಳಬಯಸಿ ಮುಂದಿಟ್ಟಿರುವೆ:
೧. ಜ್ಯೋತಿ ಬೆಳಗುವುದರೊಂದಿಗೆ ಶುಭಾರಂಭ;
೨. ಶ್ರದ್ಧಾಂಜಲಿ: ಹಿಂದಿನ ಸಾಲಿನಲ್ಲಿ ನಿಧನರಾದ ಶ್ರೀ ರಾಮಾಜೋಯಿಸ್, ನಿವೃತ್ತ ತಹಸೀಲ್ದಾರರು ಮತ್ತು ಸಾಹಿತಿ ಶ್ರೀಮತಿ ರತ್ನಮ್ಮ ಬ.ನ.ಸುಂದರರಾವ್ (ಶ್ರೀ ದಿ. ಸಾ.ಕ. ಲಿಂಗಣ್ಣಯ್ಯನವರ ಮಗಳು, ಖ್ಯಾತ ಸಾಹಿತಿ ದಿ. ಶ್ರೀ ಬ.ನ. ಸುಂದರರಾವ್ ರವರ ಪತ್ನಿ) ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
೩. ಪುಸ್ತಕ ಬಿಡುಗಡೆ: ಕವಿ ಮನೆತನದ ಹಿರಿಯ ಸಾಧಕ ಸಾಗರದ ಕವಿ ಲಿಂಗಣ್ಣಯ್ಯರ ಜೀವನ ಚರಿತ್ರೆಯನ್ನು ಆಂಗ್ಲ ಭಾಷೆಯಲ್ಲಿ ಶ್ರೀ ಕವಿ ವೆಂ. ಸುರೇಶರವರು ರಚಿಸಿದ್ದು 'ಕರ್ಮಯೋಗಿ ಕಲಾವಲ್ಲಭ ಎಸ್.ಕೆ. ಲಿಂಗಣ್ಣಯ್ಯ' ಎಂಬ ಹೆಸರಿನ ಈ ಪುಸ್ತಕದ ಬಿಡುಗಡೆಯಾಗಿ, ಬಂದಿದ್ದ ಎಲ್ಲಾ ಬಂಧುಗಳಿಗೆ ಉಚಿತವಾಗಿ ಕೊಡಲಾಯಿತು.  
೪. ಸ್ವರಚಿತ ಕವನಗಳನ್ನು ರಚಿಸಿ ಹಾಡಿದ ಅನೇಕ ಬಂಧುಗಳು ಸಮಾವೇಶಕ್ಕೆ ಅರ್ಥ ನೀಡಿದರು.
೫. ಶ್ರೀ ಕ.ವೆಂ. ನಾಗರಾಜರ ಸಂಪಾದಕತ್ವ ಮತ್ತು ಶ್ರೀ ಕವಿ ಸುರೇಶರ ಸಹ ಸಂಪಾದಕತ್ವದಲ್ಲಿ  ಕವಿ ಕುಟುಂಬದ ಪತ್ರಿಕೆಯೊಂದನ್ನು ಹೊರತರಲು ನಿರ್ಧರಿಸಲಾಯಿತು.
     ಉತ್ತಮ ಉಪಾಹಾರ, ಭೋಜನಗಳ ವ್ಯವಸ್ಥೆ ಮಾಡಲಾಗಿತ್ತು. ಕೊನೆಯಲ್ಲಿ ಮಧುರ ನೆನಪುಗಳೊಂದಿಗೆ ಬಂಧುಗಳು ತಮ್ಮ ತಮ್ಮ ಸ್ಥಳಗಳಿಗೆ ತೆರಳಿದರು. 










*************
ಈ ತಾಣದಲ್ಲಿ ಇದು 200ನೆಯ ಬರಹ!
(ವಿಸ್ತೃತ ಮಾಹಿತಿ ಮತ್ತು ಹೆಚ್ಚಿನ ಚಿತ್ರಗಳನ್ನು ಇಲ್ಲಿ  ವೀಕ್ಷಿಸಬಹುದು: http://keladikavimanetana.blogspot.com/2010/12/blog-post.html)

ಮೂಢ ಉವಾಚ - 76


ದೇಹ ದೇವರಾಗಿ ಭೋಗ ಪೂಜೆಯಾಗಿ
ಇಂದ್ರಿಯದಾಸನಾಗಿ ವಿಷಯದ ಬೇಟೆಯಲಿ |
ಹುಲು ತೃಪ್ತಿ ಗುರಿಯಾಗಿ ಅರಿಗೆ ಶರಣಾಗಿ
ಕೂಪದಲಿ ಬಿದ್ದರೇಳುವರೆ ಮೂಢ || 


ವಾಸನೆಯು ಬಿರುಗಾಳಿ ವಿಚಾರ ತರಗೆಲೆಯು
ಆಸೆ ನಗುವುದು ವಿಚಾರ ಸೋಲುವುದು |
ಜಾರುವುದರಿತರೂ ನಾಶವಾಗದು ಚಪಲ
ಸಕಲ ಸಂಕಟಕೆ ಮೂಲವಿದು ಮೂಢ ||


ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ
ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು |
ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ
ಅಣೋರಣೀಯನ ಮಹತಿಯಿದು ಮೂಢ ||


ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ಹಿರಿಯ ನಿಜವರಿತು ನಡೆವ ಮೂಢ ||
**************
-ಕ.ವೆಂ.ನಾಗರಾಜ್.