ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಫೆಬ್ರವರಿ 10, 2014

'ನಾನಿದ್ದೂ ನನ್ನದೇನಿಲ್ಲ' - ಬೆಳಗೆರೆ ಕೃಷ್ಣಶಾಸ್ತ್ರಿಗಳಿಗೆ ಒಂದು ಅಪೂರ್ವ ಶ್ರದ್ಧಾಂಜಲಿ

     ಶ್ರೀಪಾದ ಪೂಜಾರರ 'ನಾನಿದ್ದೂ ನನ್ನದೇನಿಲ್ಲ' ಕೃತಿ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಕುರಿತ ನೆನಪುಗಳನ್ನು ಪೋಣಿಸುತ್ತಾ ಅವರ ಧೀಮಂತ ವ್ಯಕ್ತಿತ್ವವನ್ನು ಕಣ್ಣ ಮುಂದೆ ನಿಲ್ಲಿಸುವ ಒಂದು ಉತ್ತಮ ಪ್ರಯತ್ನವಾಗಿದೆ. ೨೩-೦೩-೨೦೧೩ರಲ್ಲಿ ತಮ್ಮ ೯೭ನೆಯ ವಯಸ್ಸಿನಲ್ಲಿ ಕಣ್ಮರೆಯಾದ ಅಪೂರ್ವ ಚೇತನಕ್ಕೆ ಸಲ್ಲಿಸಿದ ಅನುಪಮ ಶ್ರದ್ಧಾಂಜಲಿಯಾಗಿದೆ. ಬೆಂಗಳೂರಿನ ಕಾಮಧೇನು ಪ್ರಕಾಶನದಿಂದ ಪ್ರಥಮವಾಗಿ ಮೇ, ೨೦೧೩ರಲ್ಲಿ ಪ್ರಕಾಶಿತವಾದ ೨೧೬ ಪುಟಗಳ ಈ ಕೃತಿ ಕೇವಲ ೭ ತಿಂಗಳುಗಳಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿದೆಯೆಂದರೆ "ಶೇಷವೇ ಸರಿ. ಬೆಳಗೆರೆ ಕೃಷ್ಣಶಾಸ್ತ್ರಿಗಳ ವ್ಯಕ್ತಿತ್ವ ಜನರ ಮೇಲೆ ಬೀರಿದ್ದ ಪ್ರಭಾವದಿಂದ ಇದು ಸಾಧ್ಯವಾಗಿದೆಯೆಂದರೆ ಉತ್ಪ್ರೇಕ್ಷೆಯಾಗಲಾರದು. ಹೆಗ್ಗೆರೆಯ ಶ್ರೀ ನಾಗರಾಜು ಮತ್ತು ಶ್ರೀಮತಿ ಗಾಯತ್ರಿ ನಾಗರಾಜು ದಂಪತಿಗಳು ಶಿವಮೊಗ್ಗದ ತಮ್ಮ ನೂತನ ಮನೆ 'ನಂದನ'ದ ಗೃಹಪ್ರವೇಶದ ಸಂದರ್ಭದಲ್ಲಿ ಈ ಪುಸ್ತಕವನ್ನು ಸಮಾರಂಭಕ್ಕೆ ಆಗಮಿಸಿದ್ದ ಬಂಧು-ಮಿತ್ರರುಗಳಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದರು. ಅವರ ಅಳಿಯ ಶಿವಮೊಗ್ಗದ ಡಾ. ವೆಂಕಟಕೃಷ್ಣರವರಿಂದ ನನಗೆ ಈ ಪುಸ್ತಕದ ಪ್ರತಿ ತಲುಪಿದ್ದು, ಓದಲು ಪ್ರಾರಂಭಿಸಿದಾಗ ಸುಲಲಿತವಾಗಿ ಓದಿಸಿಕೊಂಡುಹೋದ ಪುಸ್ತಕವಿದು. ಕೃಷ್ಣಶಾಸ್ತ್ರಿಗಳ 'ಯೇಗ್ದಾಗೆಲ್ಲಾ ಐತೆ' ಓದಿದವರ ಮೇಲೆ ಮುಕುಂದೂರು ಸ್ವಾಮಿಗಳ ಬಗ್ಗೆ ಗೌರವ ಮತ್ತು ಅವರ ಒಡನಾಡಿಯಾಗಿದ್ದ ಕೃಷ್ಣಶಾಸ್ತ್ರಿಗಳ ಬಗ್ಗೆ ಅಭಿಮಾನ ಮೂಡದೇ ಇರಲು ಸಾಧ್ಯವೇ ಇಲ್ಲ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶರು ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಹೇಳಿದಂತೆ ಕೃಷ್ಣಶಾಸ್ತ್ರಿಗಳು 'ಎಲೆಯ ಮರೆಯ ಅಲರು'.
     ಕೃಷ್ಣಶಾಸ್ತ್ರಿಗಳ ಕುರಿತ ನೆನಪುಗಳ ಎಳೆಗಳನ್ನು ಕೂಡಿಸುತ್ತಾ ಅವರ ವ್ಯಕ್ತಿತ್ವದ ಅನಾವರಣ ಮಾಡುವ ಲೇಖಕರ ರೀತಿ ಕೃಷ್ಣಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಪರಿಚಯ ಮಾಡಿದ ರೀತಿಗೆ ಹೋಲುತ್ತದೆ. 'ಯೇಗ್ದಾಗೆಲ್ಲಾ ಐತೆ' ಪುಸ್ತಕ ಓದಿ ಪ್ರಭಾವಿತರಾಗಿದ್ದ ಲೇಖಕರು ತಮಗೆ ಕೃಷ್ಣಶಾಸ್ತ್ರಿಗಳ ಪರಿಚಯ ಹೇಗೆ ಪ್ರಾರಂಭವಾಯಿತೆಂದು ವಿವರಿಸುವುದರೊಂದಿಗೆ ನೆನಪುಗಳ ಸರಮಾಲೆ ಆರಂಭವಾಗುತ್ತದೆ. ಮೊದಲ ಭೇಟಿಯಲ್ಲಿ ತಾವು ಭಾವಿಸಿದ್ದ ರೀತಿಯಲ್ಲಿ ಕಂಡು ಬರದಿದ್ದ ಈ ಬಿಳಿಬಟ್ಟೆಯ ವ್ಯಕ್ತಿಯ ಬಗ್ಗೆ ನಿರಾಶರಾಗಿದ್ದ ಅವರು ಕ್ರಮೇಣ ಶಾಸ್ತ್ರಿಗಳ ಒಳವ್ಯಕ್ತಿತ್ವದ ಅನುಭವ ಪಡೆದಾಗ ಧನ್ಯತೆಯ ಭಾವಕ್ಕೆ ಬದಲಾದುದನ್ನು ವಿವರಿಸಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ತೀವ್ರ ಹೃದ್ರೋಗದಿಂದ ಬಳಲಿ ಐ.ಸಿ.ಯು. ನಲ್ಲಿ ಇದ್ದಾಗ ಅವರ ಕೈಗೆ ಹಾಕಿದ್ದ ಡ್ರಿಪ್ಸ್ ಅಲ್ಲಾಡದಂತೆ ಇರಲು ಕೈಯನ್ನು ಹಿಡಿದು ಲೇಖಕರು ಕುಳಿತಿದ್ದಾಗ ಒಬ್ಬರು ಬಂದು 'ನಾನು ಸ್ವಲ್ಪ ಹೊತ್ತು ಅವರ ಕೈ ಹಿಡಿದುಕೊಳ್ಳಲೇ' ಎಂದು ಕೋರಿ ಅವಕಾಶ ಪಡೆದಿದ್ದರು. ಶಾಸ್ತ್ರಿಗಳು ಕಣ್ಣು ತೆರೆದು ಅವರನ್ನು ನೋಡಿ ಮುಗುಳ್ನಕ್ಕು ಮತ್ತೆ ಕಣ್ಣು ಮುಚ್ಚಿ ಮಲಗಿದರು. ಅರ್ಧ ಗಂಟೆಯ ನಂತರ ಲೇಖಕ ಬಂದಾಗ ಇನ್ನೂ ಸ್ವಲ್ಪ ಹೊತ್ತು ಇರುವುದಾಗಿ ಹೇಳಿದ್ದ ಅವರು ಸುಮಾರು ಒಂದೂವರೆ ಗಂಟೆಗಳ ಕಾಲ ಹಾಗೆ ಕುಳಿತಿದ್ದರು. ಆ ವ್ಯಕ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್.ಪಿ. ಆಗಿದ್ದ ಐ.ಪಿ.ಎಸ್. ಅಧಿಕಾರಿ ಶ್ರೀ ರಾಮಕೃಷ್ಣರವರು. ಓರ್ವ ಸಾಮಾನ್ಯ ಶಿಕ್ಷಕರಾಗಿದ್ದವರು ಯಾವ ಮಟ್ಟಕ್ಕೆ ಬೆಳೆದಿದ್ದರು ಎಂಬುದನ್ನು ಸೂಚಿಸುವ ಒಂದು ಸಣ್ಣ ಘಟನೆಯಿದು.
     ಈ ಬಿಳಿಬಟ್ಟೆಯ ಸಂನ್ಯಾಸಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ಈ ಚಟುವಟಿಕೆಗಳ ಸಂದರ್ಭದ ಘಟನೆಗಳು ಒಂದಕ್ಕಿಂತಾ ಒಂದು ರೋಚಕವಾಗಿವೆ. ತಂದೆ ಸಂಸ್ಕೃತ ವಿದ್ವಾಂಸರಾಗಿದ್ದ ಚಂದ್ರಶೇಖರ ಶಾಸ್ತ್ರಿಗಳ ಗಾಢ ಪ್ರಭಾವ ಕೃಷ್ಣಶಾಸ್ತ್ರಿಗಳ ಮೇಲೆ ಆಗಿದೆ. ಜಾತಿ, ಮತ, ವರ್ಗ, ವರ್ಣ ಮುಂತಾದುವುಗಳಿಂದ ಗಾವುದ ದೂರವಿದ್ದ ಶಾಸ್ತ್ರಿಗಳ ಅಂತರಂಗ ಅವರ ಕೃತಿಗಳಲ್ಲಿ, ನಾಟಕಗಳಲ್ಲಿ, ನಡೆನುಡಿಗಳಲ್ಲಿ ಎದ್ದು ಕಾಣುವಂತಹದು. ಮುಕುಂದೂರು ಸ್ವಾಮಿಗಳ ಬಗ್ಗೆ ಮತ್ತು ರಮಣರ ಬಗ್ಗೆ ಹೇಳುವಾಗಲೆಲ್ಲಾ ಭಾವುಕರಾಗುತ್ತಿದ್ದವರು. ಅವರ ಬದುಕೇ ಒಂದು ತೆರೆದ ಪುಸ್ತಕ. 'ಮಕ್ಕಳಿಗೆ ಎರಡಕ್ಷರ ಕಲಿಸು, ನಾಲ್ಕು ತುತ್ತು ಅನ್ನ ಹಾಕು' ಎಂಬ ತಂದೆಯ ಮರಣಕಾಲದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿದ ಶಾಸ್ತ್ರಿಗಳು, ಈ ಸಾಧನೆ ಮಾಡುವಾಗ ಪಟ್ಟ ಕಷ್ಟ-ನಷ್ಟಗಳು, ಶ್ರಮ, ಸಾಫಲ್ಯ ಇವುಗಳನ್ನು ತೆರೆದಿಡುವಲ್ಲಿ ಪುಸ್ತಕ ಯಶಸ್ವಿಯಾಗಿದೆ. ೧೯೬೬ರಲ್ಲಿ ಹೀಗೆ ಪ್ರಾರಂಭವಾದದ್ದು ಬೆಳಗೆರೆಯ 'ಶ್ರೀ ಶಾರದಾ ಮಂದಿರ ವಿದ್ಯಾಸಂಸ್ಥೆ'. ತಮ್ಮ ವಿರೋಧಿಗಳಿಂದಲೂ ಮನ್ನಣೆ ಗಳಿಸಿದ ಕುರಿತ ಪ್ರಸಂಗಗಳು ಆಶ್ಚರ್ಯ ಮೂಡಿಸುತ್ತವೆ. ತಮ್ಮ ನೇರ ಮತ್ತು ದಿಟ್ಟ ನಡೆ ಮತ್ತು ಮಾತುಗಳಿಂದ ಸಾಕಷ್ಟು ವಿರೋಧಿಗಳನ್ನೂ ಹೊಂದಿದ್ದ ಅವರಿಗೆ ಜೀವ ಬೆದರಿಕೆ ಇದ್ದುದನ್ನು ಕಂಡ ಜಿಲ್ಲಾ ಪೋಲಿಸ್ ಅಧಿಕಾರಿ ಶ್ರೀ ಕೆ.ಆರ್. ಶ್ರೀನಿವಾಸನ್ ಅವರು ಶಾಸ್ತ್ರಿಗಳಿಗೆ ತಮ್ಮ ಗುಡಿಸಲ ವಾಸ ಬಿಟ್ಟು ವಾಸಸ್ಥಳವನ್ನು ಬದಲಾಯಿಸಲು ಹೇಳಿದ್ದರೂ ಅವರು ಕೇಳಲಿಲ್ಲ. ಅವರ ಮಾತಿಗೆ ಬೆಲೆ ಕೊಡದಿದ್ದಾಗ ಆ ಅಧಿಕಾರಿ ಕೆರಳಿ, 'ಇದರ ಪರಿಣಾಮ ನೆಟ್ಟಗಿರುವುದಿಲ್ಲ. ನೀವು ಕಂಬಿ ಎಣಿಸಬೇಕಾಗುತ್ತದೆ' ಎಂದು ಬೆದರಿಸಿದ್ದರು. ಶಾಸ್ತ್ರಿಗಳು, 'ಸತ್ಯ ಎಂಬುದೊಂದಿದ್ದು ಅದು ಸತ್ತು ಹೋದರೆ ಕಂಬಿ ಎಣಿಸಲು ತಯಾರಾಗಿದ್ದೇನೆ ಬಿಡಿ ಸಾರ್' ಎಂದಿದ್ದರು. ಧಡಕ್ಕನೆ ಎದ್ದು ಮನೆಯ ಒಳಗೆ ಹೋದ ಅಧಿಕಾರಿ ತಮ್ಮನ್ನು ಬಂಧಿಸಲು ಬೇಡಿ ತರಲು ಹೋಗಿದ್ದಾರೆ ಎಂದು ಶಾಸ್ತ್ರಿಗಳು ಅಂದುಕೊಂಡಿದ್ದರೆ, ಅಧಿಕಾರಿ ಬರುತ್ತಾ ಎರಡು ಲೋಟ ಕಾಫಿ ಹಿಡಿದುಕೊಂಡು ಬಂದಿದ್ದರು. ಶಾಸ್ತ್ರಿಯವರ ಮೇಲಿನ ಅಭಿಮಾನದಿಂದ ಒರಟಾಗಿ ನಡೆದುಕೊಂಡಿದ್ದಾಗಿಯೂ ತಿಳಿಸಿ ಕ್ಷಮಿಸಲು ಕೇಳುವುದರೊಂದಿಗೆ ಜಾಗರೂಕರಾಗಿ ಇರಲು ಕೇಳಿಕೊಂಡಿದ್ದರು. ಇಂತಹ ನೆನಪುಗಳ ಮೂಟೆಯನ್ನೇ ಈ ಪುಸ್ತಕ ಹೊಂದಿದೆ. 
     ಹೆಸರು ಬೆಳಗೆರೆ ಕೃಷ್ಣಶಾಸ್ತ್ರಿಯಾದರೂ ಒಂದು ಅಹಿತಕರ ಘಟನೆಯಿಂದ ಬೆಳಗೆರೆಯಿಂದ ಉಟ್ಟ ಬಟ್ಟೆಯಲ್ಲೇ ಹೊರಬಂದಿದ್ದ ಅವರು ತಮ್ಮ ಜಮೀನಿನಲ್ಲೇ ಒಂದು ಬಾಗಿಲಿಲ್ಲದ ಗುಡಿಸಲು ಕಟ್ಟಿಕೊಂಡು ಜೀವನದ ಬಹುಭಾಗ, ಸುಮಾರು ೪೫ ವರ್ಷಗಳನ್ನು ಅಲ್ಲಿ ಕಳೆದಿದ್ದರು. ವಿದ್ಯಾಮಂದಿರ ಮತ್ತು ಹಾಸ್ಟೆಲನ್ನು ಪೋಷಿಸುತ್ತಿದ್ದ ಜಮೀನಿನಲ್ಲೇ ವಾಸವಿದ್ದು ಇಪ್ಪತ್ತನಾಲ್ಕು ಗಂಟೆಗಳೂ ಜಾಗೃತನಾಗಿದ್ದ ಶಿಕ್ಷಕರಾಗಿದ್ದ ಅವರ ಬದುಕಿನ ರೀತಿಯನ್ನು ರೂಪಿಸಿಬಿಟ್ಟಿದ್ದವರು ರಮಣರು, ಮುಕುಂದೂರು ಸ್ವಾಮಿಗಳು ಮತ್ತು ಗಾಂಧೀಜಿ ಎಂದರೆ ಅತಿಶಯೋಕ್ತಿಯಲ್ಲವೆಂಬುದನ್ನು ಲೇಖಕರು ಚೆನ್ನಾಗಿ ನಿರೂಪಿಸಿದ್ದಾರೆ. 'ತಂದೆ ಚಂದ್ರಶೇಖರ ಶಾಸ್ತ್ರಿಗಳಿಗೆ ಗುಡಿಸಲೇ ಇರಲಿಲ್ಲ, ಮಗನ ಗುಡಿಸಲಿಗೆ ಬಾಗಿಲೇ ಇರಲಿಲ್ಲ' - ಎಂಬುದನ್ನು ಹೇಳುತ್ತಾ ಅನಿಕೇತನರಾದ ತಂದೆ, ನಿಕೇತನವಿದ್ದರೂ ಅದನ್ನು ಬಯಲಾಗಿಸಿದ ಮಗನ ಬಗ್ಗೆ ಕೃಷ್ಣಮೂರ್ತಿ ಹನೂರರು ಚಂದ್ರಶೇಖರ ಶಾಸ್ತ್ರಿಗಳ ಪುತ್ಥಳಿ ಬಿಡುಗಡೆ ಮಾಡುವಾಗ ಹೇಳಿದ ಮಾತಿನ ಉಲ್ಲೇಖ ಗಮನ ಸೆಳೆಯುತ್ತದೆ. ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಪತ್ನಿವಿಯೋಗವಾದಾಗ ಪುನರ್ವಿವಾಹದ ಪ್ರಸ್ತಾಪ ಬರಬಾರದೆಂದು ಗಟ್ಟಿಯಾಗಿದ್ದ ತಮ್ಮ ಹಲ್ಲುಗಳನ್ನು ಕೀಳಿಸಿಕೊಂಡು ಅಕಾಲವೃದ್ಧಾಪ್ಯ ಆವಾಹಿಸಿಕೊಂಡಿದ್ದ ಶಾಸ್ತ್ರಿಗಳ ವಿಲಕ್ಷಣ ನಡೆ ಗರಬಡಿಸುತ್ತದೆ. ತಂಗಿ ಪಾರ್ವತಮ್ಮನ ಒತ್ತಾಯದಿಂದ ಕಟ್ಟಿಕೊಂಡಿದ್ದ ಹಲ್ಲಿನ ಸೆಟ್ಟನ್ನೂ ವೇದಾವತಿ ನದಿಗೆ ಅರ್ಪಿಸಿ ಕೈ ತೊಳೆದುಕೊಂಡಿದ್ದ ಅವರ ಚರ್ಯೆ ಬೆರಗು ಮೂಡಿಸುತ್ತದೆ. ಕಾಮನಿಗ್ರಹಕ್ಕೆ ಇದು ಅವರು ಕಂಡುಕೊಂಡಿದ್ದ ರೀತಿಯೇ, ಹರಯದಲ್ಲೂ ಕಾಮ ಅವರನ್ನು ಕಾಡಿರಲಿಲ್ಲವೇ ಎಂಬ ಲೇಖಕರ ಪ್ರಶ್ನೆಗೆ ಶಾಸ್ತ್ರಿಗಳು ಕೊಟ್ಟಿದ್ದ ಉತ್ತರವೆಂದರೆ, 'ಹರೆಯದಲ್ಲೂ ಕಾಮ ನನ್ನನ್ನು ಕಾಡಲಿಲ್ಲ. ರಮಣರ ದರ್ಶನವಾದ ನಂತರ ಮನಸ್ಸು ಆ ಕಡೆ ಎಳೆಯಲೇ ಇಲ್ಲ' ಎಂಬುದು! ತಮ್ಮ ಎದುರಿಗೆ ಬಂದ ಹಾಲುಹಲ್ಲು ಬಿದ್ದ ಪುಟ್ಟಮಕ್ಕಳನ್ನು ಕಂಡಾಗ ಶಾಸ್ತ್ರಿಗಳು ತಮಾಷೆ ಮಾಡುತ್ತಿದ್ದರಂತೆ, "ನೋಡು, ನಿನಗೆ ಮತ್ತೆ ಹಲ್ಲು ಹುಟ್ಟಿಬಂದು ದೊಡ್ಡವನಾಗುತ್ತೀಯ. ನನಗೆ ಹಲ್ಲು ಬರುವುದೇ ಇಲ್ಲ. ನಾನು ಮಗುವಾಗಿಯೇ ಇರುತ್ತೇನೆ". ಸ್ತ್ರೀಯರ ಕುರಿತ ಇವರ ಭಾವನೆ ಅರ್ಥ ಮಾಡಿಕೊಳ್ಳಬೇಕೆಂದರೆ ಇನ್ನೊಂದು ಘಟನೆ ಉಲ್ಲೇಖಿಸಬೇಕು. ಚಿತ್ರದುರ್ಗದ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಉಷಾಲತಾ ಅವರಿಗೆ ಭದ್ರಾವತಿಗೆ ವರ್ಗವಾದ ಸಂದರ್ಭದಲ್ಲಿ ನಡೆದ ಬೀಳ್ಕೊಡುಗೆ ಸಂದರ್ಭದಲ್ಲಿ ಶಾಸ್ತ್ರಿಗಳೂ ಇಚ್ಛೆಪಟ್ಟು ಹೋದಾಗ ಅವರನ್ನು ಗೌರವದಿಂದ ವೇದಿಕೆಯಲ್ಲಿ ಕೂರಿಸಿದ್ದರು. ಉಷಾಲತಾ ಅವರಿಗೆ ಶಾಸ್ತ್ರಿಗಳ ಬಗ್ಗೆ ಗೌರವ ಮತ್ತು ಆತ್ಮೀಯತೆಯ ಸಂಬಂಧವಿತ್ತು. ಅಂದು ಮಾತನಾಡಿದವರೆಲ್ಲರೂ ಶಾಸ್ತ್ರಿಗಳು ಉಷಾಲತಾ ಅವರ ಪಿತೃಸಮಾನರೆಂದು ಹೇಳಿದ್ದರು. ಶಾಸ್ತ್ರಿಗಳ ಮಾತನಾಡುವ ಸರದಿ ಬಂದಾಗ ಅವರು ಹೇಳಿದ್ದರು, "ಮಾತನಾಡಿದವರೆಲ್ಲರೂ ಒಂದು ತಪ್ಪು ಮಾಡಿದ್ದಾರೆ. ಉಷಾಲತಾ ನನ್ನ ಮಗಳ ಸಮಾನ ಎಂದಿದ್ದಾರೆ. ಅದು ತಪ್ಪು. ಅವರು ನನ್ನ ತಾಯಿ".
     ಎಸ್.ಎಲ್. ಭೈರಪ್ಪನವರಿಗೆ ಸರಸ್ವತೀ ಸಮ್ಮಾನ್ ಪ್ರಶಸ್ತಿ ಬಂದಾಗ ಅವರನ್ನು ಅಭಿನಂದಿಸಲು ತುಡಿದವರು ಶಾಸ್ತ್ರಿಗಳು. ಭೈರಪ್ಪನವರು 'ಹಿರಿಯರು ತೊಂದರೆ ತೆಗೆದುಕೊಳ್ಳಬಾರದೆಂದೂ, ತಾವೇ ಬರುವುದಾಗಿಯೂ' ತಿಳಿಸಿದರೂ ಅವರನ್ನು ಕಾಣಲು ಮೈಸೂರಿಗೇ ಹೋಗಿದ್ದರು. ಭೈರಪ್ಪನವರೂ ಶಾಸ್ತ್ರಿಗಳ ಬಗ್ಗೆ ಗೌರವಭಾವನೆ ಹೊಂದಿದ್ದು ಎರಡೆರಡು ಸಲ ಶಾಸ್ತ್ರಿಗಳ ಗುಡಿಸಲಿಗೆ ಬಂದು, ಅಲ್ಲೇ ಕೆಲವು ದಿನಗಳು ಕಳೆದಿದ್ದರು. ಅನಗತ್ಯ ಮಾತುಗಳಿಗಿಂತ ಮೌನದ ಮಹತ್ವ ಸಾರುವ ಭೈರಪ್ಪನವರ ಗೃಹಭಂಗ ಕಾದಂಬರಿಯಲ್ಲಿ ಬರುವ ಮಹದೇವಯ್ಯನವರು ನಿಜವಾಗಲೂ ಇದ್ದವರು. ಮಹದೇವಯ್ಯನವರು ಆಗಾಗ ಹೇಳುತ್ತಿದ್ದ ಮಾತು, "ಉತ್ಸವ ದೇವರು ಊರಾಡಿದಷ್ಟೂ ಮೂಲ ದೇವರ ಮಹಿಮೆ ಕಡಿಮೆ ಆಗುತ್ತೆ". (ಭೈರಪ್ಪನವರು ತಮ್ಮ ನಾಭಿಂದ ಕುತ್ತಿಗೆಯವರೆಗೆ ಕೈಯಾಡಿಸಿ ಅದನ್ನು ಮೂಲದೇವರು ಎಂಬಂತೆ ಸಂಕೇತಿಸಿದ್ದರಂತೆ). ಅನೇಕ ಹಿರಿಯರು, ಜಸ್ಟಿಸ್ ಎಂ.ಎನ್.ವೆಂಕಟಾಚಲಯ್ಯ, ನಿಟ್ಟೂರರು, ಕರೀಂಖಾನರು, ಹಿರಿಯ ಅಧಿಕಾರಿಗಳು, ಸಾಹಿತಿಗಳು, ಮಠಾಧಿಪತಿಗಳು ಇವರೊಡನೆ ಆತ್ಮೀಯ ಮತ್ತು ಗೌರವಭಾವನೆಯ ಸಂಬಂಧ ಹೊಂದಿದ್ದು ಅವರುಗಳ ಭೇಟಿಯ ಕ್ಷಣಗಳ ವಿವರಗಳು ದೊಡ್ಡವರ ದೊಡ್ಡತನದ ದರ್ಶನ ಮಾಡಿಸುತ್ತವೆ. ಶಾಸ್ತ್ರಿಗಳ ನಡೆ ನುಡಿಗಳು ಅವರ ಕಲ್ಪನೆಯ ವಿದ್ಯಾಮಂದಿರದ ಕಟ್ಟಡಗಳು, ಹಾಸ್ಟೆಲುಗಳು, ಮಕ್ಕಳ ಊಟದ ವ್ಯವಸ್ಥೆಗೆ ಹಣ ಹೊಂದಿಸಲು ನೆರವಾದ ಕುರಿತ ವಿವರಗಳು ಗಮನ ಸೆಳೆಯುತ್ತವೆ. ವಿಶೇಷವಾಗಿ ಅವರ 'ಯೇಗ್ದಾಗೆಲ್ಲಾ ಐತೆ' ಪುಸ್ತಕದ ಪ್ರಭಾವ ಸಹಾಯಕವಾಗಿ ಎದ್ದು ಕಾಣುತ್ತಿದ್ದ ಅಂಶವೆಂದರೆ ತಪ್ಪಲ್ಲ. ನಿಗದಿತವಾಗಿ ಧನಸಹಾಯ ಮಾಡುವವರ ದೊಡ್ಡ ಸಮೂಹವೇ ಅವರ ಬೆನ್ನಿಗಿತ್ತು.
     ಶಾಸ್ತ್ರಿಗಳು ತಮ್ಮ ಇಳಿವಯಸ್ಸಿನಲ್ಲಿ ಶಸ್ತ್ರಕ್ರಿಯೆ ನಂತರದಲ್ಲಿ ತಂಗಿಯ ಮಗ ರವಿ ಬೆಳಗೆರೆಯ ಮನೆಯಲ್ಲಿ ಇರಲು ಪ್ರಾರಂಭಿಸಿದ್ದು ಹಲವರಿಗೆ ಇಷ್ಟವಾಗಿರಲಿಲ್ಲ. ಶಾಸ್ತ್ರಿಗಳ ಮನೋಭಾವಕ್ಕೂ ರವಿ ಬೆಳಗೆರೆಯವರ ಸ್ವಭಾವಕ್ಕೂ ಅಜಗಜಾಂತರ ವೈರುಧ್ಯವಿದ್ದುದೇ ಇದಕ್ಕೆ ಕಾರಣ. "ಶಾಸ್ತ್ರಿಗಳು ರವಿ ಬೆಳಗೆರೆಯ ಮನೆಯಲ್ಲಿ ಇದ್ದಾರೆಯೇ?" ಎಂದು ಆಶ್ಚರ್ಯ ಪಡುವ, ಆಕ್ಷೇಪಿಸುವ ಮಂದಿಗೆ ಕೊರತೆಯಿರಲಿಲ್ಲ. ರವಿ ಬೆಳಗೆರೆ ಮತ್ತು ಶಾಸ್ತ್ರಿಗಳ ಅಂತರ್ವೈಯುಕ್ತಿಕ ಸಂಬಂಧ ಕುರಿತು ಒಂದು ಅಧ್ಯಾಯವೇ ಇದೆ. ಈ ಬಗ್ಗೆ ಪುಸ್ತಕ ಓದಿಯೇ ತಿಳಿಯುವುದು ಒಳ್ಳೆಯದು. ಒಂದಂತೂ ನಿಜ, ಶಾಸ್ತ್ರಿಗಳ ಆಯಸ್ಸು ಹತ್ತು ವರ್ಷ ಹೆಚ್ಚಾಗಲು ಅವರು ರವಿಯವರ ಮನೆಯಲ್ಲಿದ್ದುದೇ ಕಾರಣವೆಂದು ಲೇಖಕರ ಮತ್ತು ಅವರನ್ನು ಅರಿತವರ ಖಚಿತ ಅಭಿಪ್ರಾಯ. ಅಂತ್ಯಕಾಲ ಸಮೀಪಿಸಿದ್ದ ದಿನದಲ್ಲಿ ಒಂದು ದಿನ ಲೇಖಕರಿಂದ ಡಿವಿಜಿಯವರ 'ವನಸುಮ' ಪದ್ಯವನ್ನು ಓದಿಸಿ ಹೇಳಿಸಿ, ರವಿಯವರಿಗೆ ಆ ಪದ್ಯದ ಪ್ರತಿ ಕೊಡುತ್ತಾ, "ನೋಡಪ್ಪಾ, ಹೆಚ್ಚಿಗೆ ಏನೂ ಹೇಳುವುದಿಲ್ಲ. ಇದರಂತೆ ಬಾಳಬೇಕು ನೀನು" ಎಂದಿದ್ದರು. ರವಿ ಭಾವುಕರಾಗಿ, "ನಿನ್ನ ಕಾಲ ಬಳಿ ಜಾಗ ಕೊಡು, ನನಗೆ ಇನ್ನೇನೂ ಬೇಡ" ಎಂದು ಕಣ್ಣೀರು ಸುರಿಸಿದ್ದರು.
     ಗಾಂಧೀಜಿಯವರ ಸತ್ಯ, ಅಹಿಂಸೆ, ಆಸ್ತೇಯ, ಇತ್ಯಾದಿ ಏಕಾದಶವ್ರತಗಳು ಶಾಸ್ತ್ರಿಯವರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. ಇವುಗಳಿಗೆ ಪೂರಕವಾಗಿ ಅವರ ಜೀವನದ ವಿವಿಧ ಘಟನೆಗಳನ್ನು ಪೋಣಿಸಿ ನಿರೂಪಿಸಿರುವುದು ಮನಸ್ಸಿಗೆ ಹಿತವೆನಿಸುತ್ತವೆ. ಜಾತಿ, ವರ್ಗ, ವರ್ಣಬೇಧ ಮಾಡದ ಶಾಸ್ತ್ರಿಯವರ ಬಗ್ಗೆ ತಿಳಿಸಿರುವ ಈ ಘಟನೆ ಅವರ ಬಗ್ಗೆ ಪೂಜ್ಯಭಾವ ಮೂಡಿಸುತ್ತದೆ. ಮೀರಾಸಾಬಿಹಳ್ಳಿಯಲ್ಲಿ ಶಾಸ್ತ್ರಿಯವರು ಶಿಕ್ಷಕರಾಗಿದ್ದಾಗ ಅವರ ಜೊತೆ ಶಿಕ್ಷಕರಾಗಿದ್ದ ಮಾದಯ್ಯ ಒಬ್ಬ ದಲಿತ ವರ್ಗಕ್ಕೆ ಸೇರಿದವರು. ಅವರು ನಿವೃತ್ತರಾದ ನಂತರದಲ್ಲಿ ಅವರಿಗೆ ಸೌಖ್ಯವಿಲ್ಲವೆಂದು ತಿಳಿದು ಶಾಸ್ತ್ರಿಗಳು ಅವರನ್ನು ಕಾಣಲು ಅವರಿದ್ದ ಹಳ್ಳಿಗೆ ಹೋದರು. ಸಂತೋಷಪಟ್ಟ ಮಾದಯ್ಯ ಸಂಕೋಚದಿಂದ ತಮಗೆ ಒಂದು ಆಸೆಯಿದೆಯೆಂದು ಹೇಳಿದಾಗ ಶಾಸ್ತ್ರಿಯವರು 'ಹೇಳಿ ಮಾದಯ್ಯ, ಯಾಕೆ ಸಂಕೋಚ' ಎಂದಿದ್ದರು. ಶಾಸ್ತ್ರಿಯವರೊಂದಿಗೆ ಊಟ ಮಾಡುವ ಆಸೆ ವ್ಯಕ್ತಪಡಿಸಿದಾಗ. ಜಾತೀಯತೆ ತೋರದಿದ್ದ ತಮ್ಮನ್ನು ಕೇಳಲು ಸಂಕೋಚವೇಕೆಂದು ಅರ್ಥವಾಗದ ಶಾಸ್ತ್ರಿಯವರು 'ಅದಕ್ಕೇನಂತೆ? ತಾಯಿ, ಅಡುಗೆ ಮಾಡಿ. ನಾನು ಇಲ್ಲೇ ಊಟ ಮಾಡುತ್ತೇನೆ' ಎಂದಿದ್ದರು. ತೀವ್ರ ಅಸ್ವಸ್ಥರಾಗಿದ್ದ ಮಾದಯ್ಯನವರಿಗೆ ಶಾಸ್ತ್ರಿಯವರೇ ಕಲಸಿ ಅವರಿಗೆ ಪ್ರೀತಿಯಿಂದ ಊಟ ಮಾಡಿಸಿ, ತಾವೂ ಊಟ ಮಾಡಿ ಅವರ ಸಂತೃಪ್ತಿಗೆ ಕಾರಣರಾಗಿದ್ದರು. ಮುಂದೆ ನಾಲ್ಕೇ ದಿನದಲ್ಲಿ ಮಾದಯ್ಯನವರು ತೀರಿಹೋದರೆಂದು ಸುದ್ದಿ ಬಂದು ಶಾಸ್ತ್ರಿಯವರು ಮತ್ತೆ ಅವರ ಮನೆಗೆ ಹೋದರು. ಮಾದಯ್ಯನವರ ಮಡದಿ, "ನಿಮ್ಮ ಕೈಯಿಂದ ಊಟ ಮಾಡಿದ್ದೇ ಕೊನೆ ಸಾರ್. 'ದೇವರ ಕೈಯಲ್ಲಿಯೇ ಪ್ರಸಾದ ಸ್ವೀಕರಿಸಿದ ಮೇಲೆ ಮತ್ತೆ ಊಟ ಮಾಡಲೇ?' ಎಂದು ನಂತರ ಊಟ ಮಾಡದೇ ಶಾಂತಿಯಿಂದ ಹೋಗಿಬಿಟ್ಟರು ಸಾರ್" ಎಂದು ಹೇಳಿದ್ದರು. ಈ ಆತ್ಮಬಂಧ ವಿವರಿಸಲು ಸಾಧ್ಯವಿದೆಯೇ?
     ಲೇಖಕರು ಅಭಿಪ್ರಾಯ ಪಡುವಂತೆ ಆಚರಿಸುವ ತತ್ವಗಳಿಂದ ವ್ಯಕ್ತಿ ದೊಡ್ಡವನಾಗುವುದಿಲ್ಲ. ಉನ್ನತ ವ್ಯಕ್ತಿಗಳಲ್ಲಿ ತತ್ವಗಳು ಪ್ರಕಾಶಿಸುತ್ತವೆ. ಒಟ್ಟಾರೆಯಾಗಿ, 'ನಾನಿದ್ದೂ ನನ್ನದೇನಿಲ್ಲ' ಕೃತಿಯು ಅವರ ಕುರಿತ ನೆನಪುಗಳ, ಘಟನೆಗಳ ಮೂಲಕ ಕೃಷ್ಣಶಾಸ್ತ್ರಿಗಳ ಗುಣಗಳ ಅನಾವರಣ ಮಾಡುವಲ್ಲಿ ಸಾಫಲ್ಯತೆ ಪಡೆದಿದೆ. ಓದಬೇಕಾದ ಪುಸ್ತಕವಿದು.
-ಕ.ವೆಂ.ನಾಗರಾಜ್.

ಬುಧವಾರ, ಫೆಬ್ರವರಿ 5, 2014

ಹಣೆ ಬರಹಕ್ಕೆ ಹೊಣೆ ಯಾರು?

     'ಹಣೆ ಬರಹಕ್ಕೆ ಹೊಣೆ ಯಾರು? ಬಂದದ್ದನ್ನು ಅನುಭವಿಸಲೇಬೇಕು', 'ಎಲ್ಲಾ ವಿಧಿಲಿಖಿತ, ನಾವೇನು ಮಾಡೋಕಾಗುತ್ತೆ?' - ಇಂತಹ ಮಾತುಗಳನ್ನು ಸಾಮಾನ್ಯವಾಗಿ ಕೇಳುತ್ತಲೇ ಇರುತ್ತೇವಲ್ಲವೇ? ಇದಕ್ಕೆ ವಿಧಿ, ಅದೃಷ್ಟ, ಕರ್ಮ, ಕಿಸ್ಮತ್, ಮುಂತಾದ  ಹೆಸರುಗಳನ್ನೂ ಕೊಡುತ್ತೇವೆ.  ಯಾವುದೇ ವ್ಯಕ್ತಿ ಅನಿವಾರ್ಯವಾಗಿ ಎದುರಿಸಲೇಬೇಕಾಗುತ್ತದೆ, ಅದನ್ನು ಬದಲಾಯಿಸಲಾಗದು, ಅನುಭವಿಸಲೇಬೇಕು ಎಂಬ ಸಂಗತಿಯನ್ನು ವಿಧಿ, ಹಣೆಬರಹ ಎನ್ನಬಹುದು. ಅಂತಹ ಹಣೆಬರಹಗಳು ನಮ್ಮ ಜೀವನವನ್ನು ನಿರ್ದೇಶಿಸುತ್ತವೆ. ನಾವು ಹೇಗೆ ಜೀವಿಸಬೇಕೆಂಬುದನ್ನು ನಾವು ನಿರ್ಧರಿಸಬಲ್ಲೆವು, ಆದರೆ ಎಂದು ಹುಟ್ಟಬೇಕು, ಎಲ್ಲಿ ಹುಟ್ಟಬೇಕು ಎಂಬುದನ್ನು ನಿರ್ಧರಿಸಲಾರೆವು. ನಮ್ಮ ಅಪ್ಪ-ಅಮ್ಮ ಯಾರಾಗಬೇಕು ಎಂಬುದೂ ನಮ್ಮ ಕೈಯಲ್ಲಿಲ್ಲ. ನಮ್ಮ ಕುಟುಂಬದವರನ್ನು ನಾವು ಪ್ರೀತಿಸಬಹುದು ಅಥವ ದ್ವೇಷಿಸಬಹುದು, ಆದರೆ ನಮ್ಮ ಕುಟುಂಬವನ್ನು ಆರಿಸಿಕೊಳ್ಳಲಾರೆವು. ಎಂತಹ ವಿಚಿತ್ರ! ನಾವು ನಮ್ಮ ಸ್ನೇಹಿತರು, ಪ್ರೀತಿಪಾತ್ರರನ್ನು ಆಯ್ಕೆ ಮಾಡಿಕೊಳ್ಳಬಹುದು, ಅದರೆ ಅವರು ಅವರು ನಮ್ಮನ್ನು ಅರಿಸಿಕೊಳ್ಳುವಂತೆ ಬಲವಂತ ಮಾಡಲಾರೆವು. ಎಂತಹ ಚಿಕಿತ್ಸೆ ಬೇಕೆಂದು ಆರಿಸಿಕೊಳ್ಳಬಹುದು, ಎಂತಹ ಕಾಯಿಲೆ ಬೇಕೆಂದು ಆರಿಸಿಕೊಳ್ಳಬಹುದೇ? ನಾನು ಪ್ರಯಾಣ ಮಾಡುವ ರಸ್ತೆಯನ್ನು ಆರಿಸಿಕೊಳ್ಳಬಹುದು, ಆದರೆ ಆ ರಸ್ತೆ ಎಲ್ಲಿ ತಲುಪಬೇಕೆಂದು ನಿರ್ಧರಿಸಲಾಗದು. ಎಲ್ಲಾ ಬರೀ ಗೊಂದಲವೇ! ನಾವು ಎಂದೂ ಸಾಯಬಾರದು ಎಂದುಕೊಂಡರೆ ಸಾಧ್ಯವೇ? ಒಬ್ಬ ಅದೃಷ್ಟವಂತ ಒಂದೇ ಪ್ರಯತ್ನದಲ್ಲಿ ಅಸಾಧ್ಯವಾದುದನ್ನು ಸಾಧಿಸಿಬಿಡಬಹುದು; ಆದರೆ ದುರದೃಷ್ಟವಂತ ಅದೇ ಕೆಲಸವನ್ನು ನೂರು ಸಲ ನೂರು ವಿಧದಲ್ಲಿ ಮಾಡಲು ಪ್ರಯತ್ನಿಸಿ ವಿಫಲನಾಗಿಬಿಡಬಹುದು. ಹಾಗಾದರೆ ಇದನ್ನು ಹಣೆಬರಹ ಎನ್ನಬಹುದೇ? ಇಂತಹ ನೂರಾರು ಸಂದಿಗ್ಧಗಳು, ಸನ್ನಿವೇಶಗಳು ಮನುಷ್ಯನನ್ನು ಗೊಂದಲಕ್ಕೆ ಈಡು ಮಾಡುವುದಂತೂ ನಿರ್ವಿವಾದ. ಮೈಸೂರು ಸಂಸ್ಥಾನವನ್ನು ಕೈವಶ ಮಾಡಿಕೊಂಡು, ಕೆಳದಿ ಸಂಸ್ಥಾನವನ್ನೂ ನುಂಗಿ ನೀರು ಕುಡಿದಿದ್ದ ಹೈದರಾಲಿ ನಿರಕ್ಷರಕುಕ್ಷಿ. ಪತ್ರಗಳಿಗೆ ಸಹಿ ಮಾಡಬೇಕಾದಾಗ ಹೆಬ್ಬೆರಳಿನ ಗುರುತು ಹಾಕುತ್ತಿದ್ದ. ಆಗ ಅದನ್ನು ಆಶ್ಚರ್ಯದಿಂದ ನೋಡುತ್ತಿದ್ದವರಿಗೆ ಹೈದರಾಲಿ, "ಅಲ್ಲೇಕೆ ನೋಡುತ್ತೀರಿ? ಇಲ್ಲಿ ನೋಡಿ" ಎಂದು ತನ್ನ ಹಣೆ ಮುಟ್ಟಿ ತೋರಿಸುತ್ತಿದ್ದ.
     ಹಣೆಬರಹ, ವಿಧಿಲಿಖಿತ ಮುಂತಾದುವಕ್ಕೆ ಅರ್ಥ ಬರಬೇಕೆಂದರೆ ಸನಾತನ ಧರ್ಮೀಯರು ನಂಬುವಂತೆ ಪುನರ್ಜನ್ಮ ಮತ್ತು ಕರ್ಮಫಲವಿರಬೇಕು ಅನ್ನಿಸುತ್ತದೆ. ಇಲ್ಲದಿದ್ದರೆ ಯಾವುದೇ ಒಂದು ಜೀವಿ ಬಡತನದ ಮನೆಯಲ್ಲಿ ಏಕೆ ಜನಿಸಬೇಕು, ಹದ್ದು, ಗೂಬೆಯಾಗಿ ಏಕೆ ಹುಟ್ಟಬೇಕು, ತನ್ನ ಯಾವುದೇ ತಪ್ಪಿಲ್ಲದೆ ಅಂಗವಿಕಲವಾಗಿ ಹುಟ್ಟಬೇಕು ಅಥವ ಶ್ರೀಮಂತರ ಮನೆಯಲ್ಲಿ ಬಾಳುವಂತಾಗಬೇಕು? ಕ್ರೈಸ್ತರು, ಮಹಮದೀಯರು ಪುನರ್ಜನ್ಮ ನಂಬುವುದಿಲ್ಲ. ಹಾಗಾದರೆ ಹುಟ್ಟುವಾಗಲೇ ಬರುವ ಇಂತಹ ವೈಪರೀತ್ಯಗಳಿಗೆ ಏನು ಕಾರಣ ಕೊಡಬೇಕು? ಸತ್ತ ಮೇಲೆ ಒಂದು ನಿಶ್ಚಿತ ದಿನದಂದು ಮಾತ್ರವೇ ತನ್ನ ಪಾಪ/ಪುಣ್ಯಗಳಿಗೆ ತಕ್ಕಂತೆ ಫಲ ಅನುಭವಿಸುವುದಾದರೆ, ಪುನರ್ಜನ್ಮವಿಲ್ಲವೆಂದಾದರೆ, ಹುಟ್ಟುತ್ತಲೇ ಈ ರೀತಿಯ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿಗೆ ವಿವರಣೆ ಕೊಡುವುದು ಕಷ್ಟವಾಗುತ್ತದೆ. ಯಾವುದೇ ಕಾರಣವಿಲ್ಲದೆ, ತಮ್ಮ ಯಾವುದೇ ತಪ್ಪಿಲ್ಲದೆ ಕೆಲವರನ್ನು ಸುಖಿಗಳನ್ನಾಗಿ, ಕೆಲವರನ್ನು ದುಃಖಿಗಳನ್ನಾಗಿ ಹುಟ್ಟಿಸಿದರೆ ದೇವರು ನಿಷ್ಕರುಣಿ ಅಥವ ಪಕ್ಷಪಾತಿ ಎನ್ನಬೇಕಾಗುತ್ತದೆ. ಅಲ್ಲದೆ ಅಂತಹ ಸಂದರ್ಭದಲ್ಲಿ ಜೀವಿಗಳು ಮಾಡುವ ಕೆಟ್ಟ ಮತ್ತು ಒಳ್ಳೆಯ ಕೆಲಸಗಳಿಗೆ ದೇವರೇ ಹೊಣೆಗಾರನಾಗಬೇಕಾಗುತ್ತದೆ. ಹಾಗೆ ಇರಲಾರದು! ಅಲ್ಲದಿದ್ದರೆ ಈ ಸ್ಥಿತಿಗೆ ಕಾರಣವೇನಿರಬಹುದು? ಇದಕ್ಕೆ ಕೊಡಬಹುದಾದ ಮತ್ತು ಒಪ್ಪಬಹುದಾದ ವಿವರಣೆಯೆಂದರೆ ಜೀವಿಯು ತಾನು ಮಾಡಿದ ಕರ್ಮಫಲವಾಗಿ ಈ ರೀತಿ ಆಗುತ್ತದೆಂಬುದು! ಒಬ್ಬರೇ ತಂದೆ-ತಾಯಿಗಳಿಗೆ ಹುಟ್ಟಿದ ಮಕ್ಕಳೆಲ್ಲರೂ ಒಂದೇ ಗುಣ, ಸ್ವಭಾವದವರು, ಸಾಮರ್ಥ್ಯ, ಅಭಿರುಚಿಯುಳ್ಳವರಾಗಿರುವುದಿಲ್ಲ ಅಲ್ಲವೇ? ಹಿಂದಿನ ಕುಸಂಸ್ಕಾರ, ಸುಸಂಸ್ಕಾರಗಳ ಫಲವಿರುವುದಿಲ್ಲ, ಪುನರ್ಜನ್ಮವಿಲ್ಲ ಎಂದಾಗಿದ್ದರೆ ಎಲ್ಲರೂ ಸಮಾನ ವ್ಯಕ್ತಿತ್ವ ಹೊಂದಿದವರಾಗಿರುತ್ತಿದ್ದರು.
ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ ||
     ಪ್ರತಿ ಜೀವಿಯೂ ಹಿಂದೆ ಮಾಡಿದ ಒಳ್ಳೆಯ, ಕೆಟ್ಟ ಕೆಲಸಗಳಿಗನುಗುಣವಾಗಿ ಕಟ್ಟಿಕೊಂಡು ಬಂದ ಬುತ್ತಿಯ ಗಂಟನ್ನು ಹೊತ್ತುಕೊಂಡೇ ಬರುತ್ತಾರೆ ಎಂಬುದನ್ನು ಒಪ್ಪಿಕೊಂಡರೆ ಮಾತ್ರ ದೇವರು ಕ್ರೂರಿಯಲ್ಲ, ಪಕ್ಷಪಾತಿಯಲ್ಲ, ಅನ್ಯಾಯಗಾರನಲ್ಲ ಎನ್ನಬಹುದು. ಅಥರ್ವವೇದದ ಒಂದು ಮಂತ್ರ ಹೀಗೆ ಹೇಳುತ್ತದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)
     ಈ ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ, ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಸಹಕಾರಿಗಳ ಸಹಾಯದಿಂದ ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ, ಕರ್ಮಫಲವಿಪಾಕ ಅದನ್ನು ಪಾಕ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಈ ಮಂತ್ರದ ಅರ್ಥ. 'ಮಾಡಿದ್ದುಣ್ಣೋ ಮಹರಾಯ'! ತಾನು ಮಾಡಿದ ಪಾಪವನ್ನು ಇತರರ ಹೆಗಲಿಗೆ ಹೊರಿಸಿ ಪಾರಾಗಬಹುದೆಂದಾಗಲೀ, ಯಾವುದೇ ಪೂಜಾರಿ, ಪಾದ್ರಿ, ಮೌಲ್ವಿಗಳ ಮಧ್ಯಸ್ತಿಕೆಂದ ಪುಣ್ಯ ಗಳಿಸಬಹುದೆಂದಾಗಲೀ, ಮುಕ್ತಿ ಹೊಂದಬಹುದೆಂಬುದಾಗಲೀ, ತಪ್ಪುಕಾಣಿಕೆ ಒಪ್ಪಿಸಿ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಬಹುದೆಂದಾಗಲೀ ಇಲ್ಲವೇ ಇಲ್ಲ. ಮಾಡಿದ್ದನ್ನು ಅನುಭವಿಸಲೇಬೇಕು. ನಮ್ಮ ಹಣೆಬರಹಕ್ಕೆ ಹೊಣೆಗಾರರು ನಾವೇ!
     ಭಗವದ್ಗೀತೆಯ ಒಂದು ಅಧ್ಯಾಯವೇ ಕರ್ಮಯೋಗಕ್ಕೆ ಮೀಸಲಾಗಿದೆ. ಯಾರೂ ಕರ್ಮ ಮಾಡದೇ ಇರಲಾರರು, ಸದ್ವಿಚಾರಗಳಿಂದ ಒಡಗೂಡಿದ ಕರ್ಮವೇ ಮೋಕ್ಷಕ್ಕೊಯ್ಯಬಲ್ಲದು ಎಂಬುದು ಇದರ ಸಾರ. ಒಳ್ಳೆಯ ಕೆಲಸಗಳಿಂದ ಒಳ್ಳೆಯದಾಗುತ್ತದೆ ಎಂಬುದು ಇದರ ನೀತಿ. ನಾವು ಬದುಕಬೇಕೆಂದರೆ ಅದಕ್ಕಾಗಿ ಪ್ರತಿ ಕ್ಷಣವೂ ಸಾಯಬೇಕು. ನಾವು ಬಿಡುವ ಪ್ರತಿ ಉಸಿರೂ ನಮ್ಮನ್ನು ಸಾವಿನ ಸಮೀಪಕ್ಕೆ ಒಯ್ಯುತ್ತಿರುತ್ತದೆ. ಬದುಕು ಮತ್ತು ಸಾವು ಎನ್ನುವುದು ಒಂದೇ ವಸ್ತುವಿನ ಬೇರೆ ಬೇರೆ ಮುಖಗಳಷ್ಟೆ. ಸಮುದ್ರದ ಅಲೆಗಳಂತೆ ಒಮ್ಮೆ ಮೇಲೆ ಏಳುತ್ತದೆ, ಒಮ್ಮೆ ಕೆಳಗೆ ಬೀಳುತ್ತದೆ. ಬದುಕು ಮತ್ತು ಸಾವು ಎರಡೂ ಸೇರಿದರೆ ಮಾತ್ರ ಒಂದು ಪೂರ್ಣವಾದ ಸಂಗತಿ, ಇಲ್ಲದಿದ್ದರೆ ಅದು ಅಪೂರ್ಣ.
ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು |
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ ||
     ನಾವು ಈಗ ಏನಾಗಿದ್ದೇವೋ ಅದಕ್ಕೆ ನಾವೇ ಕಾರಣರು ಎಂದಾದಾಗ ದೇವರನ್ನಾಗಲೀ, ಇತರರನ್ನಾಗಲೀ ಏಕೆ ದೂಷಿಸಬೇಕು? ಸಾವಧಾನದಿಂದ, ಪೂರ್ವಾಗ್ರಹ ಪೀಡಿತರಾಗದೆ ಯೋಚಿಸಿದರೆ ಈ ಸತ್ಯದ ಅರಿವು ಆಗಲು ಸಾಧ್ಯ. ನಮ್ಮ ತಪ್ಪುಗಳಿಗೆ ಹೊಣೆಗಾರರು ನಾವೇ ಎಂಬುದು ನಾವು ಕಲಿಯಬೇಕಾದ ಮೊದಲ ಪಾಠ. ಯಾರನ್ನೂ ಹೊಗಳುವಂತಿಲ್ಲ, ಯಾರನ್ನೂ ತೆಗಳುವಂತಿಲ್ಲ. ತಿಳಿಯೋಣ, ಕೆಲವೊಮ್ಮೆ ನಮ್ಮ ದುರದೃಷ್ಟ ಮತ್ತು ಸೋಲುಗಳೇ ನಾವು ಉನ್ನತವಾದುದನ್ನು ಸಾಧಿಸಬೇಕೆಂಬ ಛಲ ಮೂಡಿಸುತ್ತದೆ. ಹಿಂದೆ ಮಾಡಿದ ಕೆಲಸಗಳ ಫಲವೇ ಇಂದು ನಾವು ಏನಾಗಿದ್ದೇವೆಯೋ ಅದು ಎನ್ನುವುದಾದರೆ, ಮುಂದೆ ನಾವು ಏನಾಗಬೇಕು ಎಂದು ನಿರ್ಧರಿಸಿ ಅದರಂತೆ ನಮ್ಮ ಈಗಿನ ಕೆಲಸಗಳಿಂದ ಸಾಧಿಸಬಹುದು ಎಂಬುದನ್ನೂ ಒಪ್ಪಬೇಕು. ಮಾಡಬೇಕಿರುವುದೆಂದರೆ ಅದನ್ನು ಹೇಗೆ ಸಾಧಿಸಬೇಕು ಎಂಬುದನ್ನು ಅರಿತು ಮುಂದುವರೆಯುವುದಷ್ಟೆ. ನಮ್ಮ ಭವಿಷ್ಯದ ಶಿಲ್ಪಿಗಳು ನಾವೇ ಆಗಿದ್ದು, ಯಶಸ್ಸಿಗೆ ಬೇಕಾದ ಎಲ್ಲಾ ಸಲಕರಣೆಗಳೂ ನಮ್ಮೊಳಗೇ ಇವೆ. 'ಇದು ನನ್ನ ಹಣೆಯ ಬರಹ ಎಂದು ಹೇಳುವವನು ಹೇಡಿ ಮತ್ತು ಮೂರ್ಖ' ಎಂದು ಸಂಸ್ಕೃತದ ಒಂದು ಗಾದೆ ಹೇಳುತ್ತದೆ. ಬಲಶಾಲಿ ವ್ಯಕ್ತಿ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುತ್ತಾನೆ. ಸಾಮಾನ್ಯವಾಗಿ ದುರ್ಬಲ ಮನಸ್ಕರು, ಅಶಕ್ತರು ಮಾತ್ರ ತಮ್ಮ ಹಣೆಯಬರಹದ ಬಗ್ಗೆ ಚಿಂತಿಸಿ ಜ್ಯೋತಿಷಿಗಳ ಮೊರೆ ಹೋಗುವುದನ್ನು ಕಾಣುತ್ತೇವೆ. ಅಂತಹವರು ತಮ್ಮ ಹಣೆಬರಹವನ್ನು ಇತರರಿಂದ ಬರೆಸಿಕೊಳ್ಳುವ ಬಲಿಪಶುಗಳಾಗುತ್ತಾರೆಂದರೆ ಕಠಿಣವಾದ ಮಾತಾಗಬಹುದು. ಹಣೆಬರಹ, ವಿಧಿಲಿಖಿತ ಮುಂತಾದ ಪದಗಳು ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಂಗತಿಯ ಜರುಗುವಿಕೆಗೆ ತಾವೇ ಕಾರಣರೆಂಬುದನ್ನು ಅರಗಿಸಿಕೊಳ್ಳಲಾಗದವರು ಹೇಳಬಹುದಾದ ಪದಗಳು! ನಾವು ಏನನ್ನು ಬಿತ್ತುತ್ತೇವೋ ಅದನ್ನೇ ಬೆಳೆಯುತ್ತೇವೆ, ಇದೇ ಸತ್ಯ. ನಮ್ಮ ಹಣೆಯಬರಹವನ್ನು ಬರೆಯುವವರು, ನಿರ್ಧರಿಸುವವರು ನಾವೇ ಎಂಬುದನ್ನು ಅರಿತಾಗ ಮಾತ್ರ ನಾವು ಸರಿಯಾದ ದಾರಿಯಲ್ಲಿ ನಡೆಯುವ ಮನಸ್ಸು ಮಾಡುತ್ತೇವೆ.
ನಿನಗೆ ನೀನೆ ಬಂಧು ನಿನಗೆ ನೀನೆ ಶತ್ರು
ಪರರು ಮಾಡುವುದೇನು ನಿನದೆ ತಪ್ಪಿರಲು |
ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರು
ನಿನ್ನುದ್ಧಾರ ನಿನ್ನಿಂದಲೇ ಮೂಢ ||
     ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾರಣವಿರುತ್ತದೆ. ಅದರಲ್ಲಿನ ಸತ್ಯ, ವಾಸ್ತವತೆ ಅರಿತು ತಪ್ಪು ತಿದ್ದಿಕೊಂಡು ಮುನ್ನಡೆದರೆ ಹಣೆಬರಹವನ್ನು ಬದಲಾಯಿಸಬಹುದು. ತಮಾಷೆಯ ವಿಷಯವೆಂದರೆ ಗೆದ್ದವರು ತಮ್ಮ ಗೆಲುವಿಗೆ ಹಣೆಬರಹ ಕಾರಣವೆನ್ನುವುದಿಲ್ಲ, ಸೋತವರು ಮಾತ್ರ ಸೋಲಿಗೆ ನೆಪವಾಗಿ ಹಣೆಬರಹವೆಂದುಬಿಡುತ್ತಾರೆ. ಬಲಶಾಲಿಗಳನ್ನು ಹಣೆಬರಹ ಇಷ್ಟಪಡುತ್ತದೆ.


-ಕ.ವೆಂ.ನಾಗರಾಜ್

ಮಂಗಳವಾರ, ಜನವರಿ 28, 2014

ಸಹನೆಯ ಕಟ್ಟೆ ಒಡೆಯದಿರಲಿ

     "ಬೇಡಾ, ಕೆಣಕಬೇಡ, ತಲೆ ಕೆಟ್ಟರೆ ನಾನು ಮನುಷ್ಯ ಆಗಿರಲ್ಲ", "ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಪರಿಣಾಮ ನೆಟ್ಟಗಿರಲ್ಲ" -  ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಈ ಮಾತುಗಳ ಅಂತರಾರ್ಥ 'ಇದುವರೆಗೆ ಸಹಿಸಿಕೊಂಡಿದ್ದೇನೆ, ಇನ್ನು ಸಹಿಸಿಕೊಳ್ಳಲಾಗುವುದಿಲ್ಲ' ಎಂಬುದೇ ಆಗಿದೆ. ಸಹನೆಯ ಮಹತ್ವ ಕಾಣಬರುವುದು ಇಲ್ಲಿಯೇ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ 'ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು'! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ.
ಅತ್ತ ಮುಖ ಇತ್ತ ಮುಖ ಎತ್ತೆತ್ತಲೋ ಮುಖ
ಏಕಮುಖ ಬಹುಮುಖ ಸುಮುಖ ಕುಮುಖ|
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ||
   
     ಸಹನೆಯ ಮಹತ್ವವನ್ನು ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ದಾರ್ಶನಿಕವಾಗಿ ಅನೇಕ ಮಗ್ಗಲುಗಳಲ್ಲಿ ವಿಶ್ಲೇಷಿಸಬಹುದು. ವಿಜ್ಞಾನದ ಆವಿಷ್ಕಾರಗಳು ವಿಜ್ಞಾನಿಗಳ ಸಹನಾಸಹಿತವಾದ ಶ್ರಮದ ಫಲವೇ ಆಗಿದೆ. ಪ್ರಯೋಗಗಳನ್ನು ಮಾಡುತ್ತಾ ಮಾಡುತ್ತಾ, ವಿಫಲರಾದರೂ ಪ್ರಯತ್ನ ಮುಂದುವರೆಸಿ ಯಶಸ್ವಿಯಾದವರ ಪಟ್ಟಿ ದೊಡ್ಡದಿದೆ. ಥಾಮಸ್ ಆಲ್ವಾ ಎಡಿಸನ್ ಹೇಳಿದ್ದಂತೆ ಒಂದು ಸಾವಿರ ಪ್ರಯೋಗಗಳು ವಿಫಲವಾದರೂ, ಆ ಒಂದು ಸಾವಿರ ವಿಫಲ ಪ್ರಯೋಗಗಳಿಂದ ಆ ರೀತಿ ಮಾಡಿದರೆ ಪ್ರಯೋಜನವಾಗುವುದಿಲ್ಲ ಎಂಬ ಸಂಗತಿ ಗೊತ್ತಾಗುವುದೂ ದೊಡ್ಡ ಸಂಗತಿಯೇ ಅಲ್ಲವೇ? ಛಲ ಬಿಡದ ತ್ರಿವಿಕ್ರಮರೆನಿಸಿಕೊಳ್ಳಲು ಸಹನೆ ಇರಲೇಬೇಕು. ಒಂದು ಕಾಗದವನ್ನೋ, ವಸ್ತುವನ್ನೋ ಇಟ್ಟುಕೊಂಡು ಅದರಲ್ಲಿ ಏನೋ ಮಾಡಬೇಕೆಂದು ಪ್ರಯತ್ನಿಸುವ ಪುಟ್ಟ ಮಗುವನ್ನು ಗಮನಿಸಿ. ಅದು ತದೇಕಚಿತ್ತದಿಂದ ಏನನ್ನೋ ಮಾಡುತ್ತಿರುತ್ತದೆ. ತನ್ನ ಮನಸ್ಸಿನಂತೆ ಆಗದಿದ್ದರೆ ಸಿಟ್ಟು ಮಾಡಿಕೊಂಡು ಅದನ್ನು ಎಸೆಯುತ್ತದೆ. ಆದರೆ ಅಲ್ಲಿಗೇ ನಿಲ್ಲಿಸುವುದಿಲ್ಲ, ಮತ್ತೆ ಅದನ್ನು ತೆಗೆದುಕೊಂಡು ಪ್ರಯತ್ನ ಮುಂದುವರೆಸುತ್ತದೆ. ಯಾರಾದರೂ ಹಿರಿಯರು ಅದಕ್ಕೆ ಸಹಾಯ ಮಾಡುತ್ತಾ, ಹೇಳಿಕೊಡುತ್ತಾ ಇದ್ದು, ಮಗು ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ಆಗ ಅದು ಪಡುವ ಸಂತೋಷವನ್ನು ಕಂಡವರಿಗೂ ಸಂತೋಷವಾಗುತ್ತದೆ. ಹೀಗೆ ಸಹನೆ ಮೊಳಕೆಯೊಡೆಯುತ್ತದೆ. ಯಾವುದೇ ಸಾಧನೆಗೆ ಸಹನೆ ಬೇಕೇಬೇಕು. ಅಟ್ಟ ಹತ್ತಲಾಗದವನು ಬೆಟ್ಟ ಹತ್ತಲಾರ. ಯಾವುದೇ ದೊಡ್ಡ ಸಾಧನೆ ಕಾರ್ಯರೂಪಕ್ಕೆ ಬರುವುದು ಯಾರೂ ಗಮನಿಸದ ಒಂದು ಮೊದಲಿನ ಸಣ್ಣ ಹೆಜ್ಜೆಯಿಂದಲೇ ಎಂಬುದನ್ನು ನೆನಪಿಡೋಣ.
     ಧಾರ್ಮಿಕವಾಗಿಯೂ ಸಹನೆ ಅತ್ಯಂತ ಪ್ರಧಾನವಾಗಿ ಬೋಧಿಸಲ್ಪಟ್ಟ ವಿಷಯವಾಗಿದೆ. ದೇವರಿಗೆ ಹತ್ತಿರವಾಗಲು ಇರಬೇಕಾದ ರೀತಿ ನೀತಿಗಳನ್ನು ಸ್ಪಷ್ಟಪಡಿಸುವ ಧಾರ್ಮಿಕ ಸಂಪ್ರದಾಯಗಳು, ಕಟ್ಟಳೆಗಳು ಸಹನೆಗೆ ಪ್ರಾಧಾನ್ಯತೆ ನೀಡಿವೆಯೆಂದರೆ ತಪ್ಪಲ್ಲ. ಸನಾತನ ಕಾಲದಲ್ಲಿ ಮೋಕ್ಷ ಸಂಪಾದನೆಗಾಗಿ ತಪಸ್ಸು, ಧ್ಯಾನಗಳಲ್ಲಿ ತೊಡಗಿರುತ್ತಿದ್ದ ಸಾಧು-ಸಂತ-ಸಂನ್ಯಾಸಿಗಳು ಸಹನೆಯ ಪ್ರತೀಕರಾಗಿದ್ದರು. 'ನೀನೂ ಜೀವಿಸು, ಇತರರನ್ನೂ ಜೀವಿಸಲು ಬಿಡು' ಎಂಬ ಮಹಾವೀರನ ಬೋಧನೆಯಲ್ಲಿ ಕಾಣುವುದೂ ಸಹನೆಯ ನೀತಿಪಾಠವೇ. ಏಸುಕ್ರಿಸ್ತ ತನ್ನವರಿಗಾಗಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಸಹಿಸಿದ್ದವನು. 'ತಾಳ್ಮೆಯಿಂದಿರುವ ವ್ಯಕ್ತಿ ಯೋಧನಿಗಿಂತಲೂ ಶ್ರೇಷ್ಠ, ರಾಜ್ಯವನ್ನು ಗೆದ್ದವನಿಗಿಂತ ತನ್ನ ಭಾವನೆಗಳನ್ನು ನಿಯಂತ್ರಿಸಿ ಗೆದ್ದವನೇ ಶ್ರೇಷ್ಠ' ಎಂದು ಹೀಬ್ರೂ ಗಾದೆಯಿದೆ. ಒಬ್ಬ ಶ್ರೇಷ್ಠ ಮಹಮದೀಯ ಅಲ್ಲಾಹುವಿಗೆ ಸಮೀಪನಾಗಿರಬೇಕೆಂದರೆ ಶ್ರೇಷ್ಠ ರೀತಿಯಲ್ಲಿ ಜೀವಿಸಬೇಕು, ಅರ್ಥಾತ್ ಸಹನಾಮುಯಾಗಿರಬೇಕು. ಪರಿಪೂರ್ಣತೆಯ ಸಾಧನೆಗೆ ತಾಳ್ಮೆ ಅತ್ಯಂತ ಅಗತ್ಯವೆಂದು ಬೌದ್ಧ ಧರ್ಮ ಪ್ರತಿಪಾದಿಸುತ್ತದೆ.
     ಸನಾತನ ಧರ್ಮವಂತೂ ಸಹಿಷ್ಣುತೆಗ ಪ್ರಾಧಾನ್ಯತೆ ನೀಡಿದ ಧರ್ಮವಾಗಿದೆ. ಇದರಲ್ಲಿ ಸಹಿಷ್ಣುತೆಗೆ ೧೦ ಪರೀಕ್ಷೆಗಳಿವೆ. ಅವೆಂದರೆ:
೧. ಅಹಿಂಸೆ (ಯಾರನ್ನೂ ದೈಹಿಕವಾಗಿ, ಮಾನಸಿಕವಾಗಿ, ಬರವಣಿಗೆಯ ಮೂಲಕವಾಗಲೀ, ಮಾತಿನ ಮೂಲಕವಾಗಲೀ, ಇನ್ನು ಯಾವುದೇ ರೀತಿಯಲ್ಲಾಗಲೀ ನೋಯಿಸದಿರುವುದು.)
೨. ಸತ್ಯ,
೩. ಅಸ್ತೇಯ (ಇತರರ ವಸ್ತುಗಳನ್ನು ಭೌತಿಕವಾಗಿಯಾಗಲೀ, ಮಾನಸಿಕವಾಗಿಯಾಗಲಿ ಕದಿಯದಿರುವುದು),
೪. ಬ್ರಹ್ಮಚರ್ಯ (ಮದುವೆಯಾಗದೆ ಇರುವುದು ಎಂಬ ಅರ್ಥ ಮಾತ್ರವಲ್ಲದೆ, ಬ್ರಹ್ಮ=ಆಧ್ಯಾತ್ಮಿಕ ವಿಚಾರದಲ್ಲಿ ಸಂಚರಿಸುವುದು ಎಂಬ ಅರ್ಥವೂ ಇದೆ)
೫. ದಯೆ,
೬. ಮೋಸ ಮಾಡದಿರುವುದು,
೭. ಕ್ಷಮಾಗುಣ,
೮. ಧೃತಿ (ಯಾವುದೇ ಸಂದರ್ಭದಲ್ಲಿ, ಹಾನಿ, ನಷ್ಟ, ಅವಮಾನ, ಇತ್ಯಾದಿ ಸಂದರ್ಭಗಳಲ್ಲಿ ಧೃಢಚಿತ್ತತೆ)
೯. ಮಿತಾಹಾರ (ಅಗತ್ಯವಿರುವಷ್ಟೇ ಆಹಾರ ಸೇವನೆ) ಮತ್ತು
೧೦. ಶೌಚ (ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧವಾಗಿರುವುದು).
     ಮೇಲಿನ ೧೦ ಸಂಗತಿಗಳನ್ನು ಪಾಲಿಸುವವರಿಗೆ ಸಹನಾಶಕ್ತಿ ತಾನಾಗಿ ಒಲಿದು ಬರದೇ ಇರಲಾರದು.
     ಇಷ್ಟಾದರೂ ಮತೀಯ, ಧಾರ್ಮಿಕ ಅಸಹನೆಗಳು ಇಂದು ವಿಶ್ವದ ಬೃಹತ್ ಸಮಸ್ಯೆಯಾಗಿರುವುದಕ್ಕೆ ಕಾರಣ ಧರ್ಮಗಳದ್ದಲ್ಲ, ಅದನ್ನು ತಪ್ಪಾಗಿ ತಿಳಿದು ಅನುಸರಿಸುವ ಮತಾಂಧ ಅನುಯಾಯಿಗಳದು. ಎಲ್ಲಾ ಧರ್ಮಗಳ ಹಿರಿಯರೆನಿಸಿಕೊಂಡವರು ವಿಶ್ವಶಾಂತಿಯ ದೃಷ್ಟಿಯಿಂದ ಪರಸ್ಪರ ಸಮಾಲೋಚಿಸಿ ತಮ್ಮ ಅನುಯಾಯಿಗಳಿಗೆ ಸುಯೋಗ್ಯ ಮಾರ್ಗದರ್ಶನ ನೀಡದಿದ್ದರೆ ವಿನಾಶದ ಹಾದಿ ಖಂಡಿತವೆಂದರೆ ಅತಿಶಯೋಕ್ತಿಯಲ್ಲ. ಸಹನೆಯಿದ್ದಲ್ಲಿ ಸಮಸ್ಯೆಗಳಿಗೆ ಸ್ಥಳವಿರುವುದಿಲ್ಲ.
     ಸಹನೆ ಅನ್ನುವುದು ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿ ಇಡುವಂತಹ ನಿಯಂತ್ರಕ ಶಕ್ತಿ ಎಂಬುದನ್ನು ಅರಿತೆವು. ಸಹನೆ ಸಜ್ಜನರ ಆಸ್ತಿಯಾಗಿದ್ದು, ಉತ್ತಮ ಫಲಗಳನ್ನು ಕೊಡುತ್ತದೆ ಎಂಬುದೂ ಅನುಭವದ ಮಾತು. ಸಹನೆಯ ವಿರುದ್ಧ ಗುಣವಾದ ಅಸಹನೆಗೂ ಹಲವು ಮಗ್ಗಲುಗಳಿವೆ. ಸಹನೆಯ ಕಟ್ಟೆ ಒಡೆದಾಗ ಉಂಟಾಗುವ ಅಸಹನೆಯ ಪರಿಣಾಮ ಮಾತ್ರ ಘೋರವಾಗಿರುತ್ತದೆ. ಮಿತಿಯಾಗಿದ್ದಾಗ ವಿಷವೂ ಅಮೃತವಾಗಬಹುದು, ಅತಿಯಾದರೆ ಅಮೃತವೂ ವಿಷವಾಗಬಹುದು. ಅವರು ಮುಂದಿದ್ದಾರೆ, ನಾವು ಹಿಂದಿದ್ದೇವೆ ಎಂಬ ಕಾರಣದಿಂದ ಉಂಟಾಗುವ ಅಸಹನೆ ಹತೋಟಿಯಲ್ಲಿದ್ದರೆ ನಾವೂ ಮುಂದುವರೆಯಲು ಅದು ಪ್ರೇರಿಸಬಹುದು. ಮಿತಿ ಮೀರಿದರೆ ಅದು ಮುಂದಿರುವವರ ವಿರುದ್ಧದ ದ್ವೇಷವಾಗಿಯೂ ಪರಿವರ್ತಿತವಾಗಬಹುದು. ಇದು ಬಂಧು-ಬಳಗಗಳಲ್ಲಿ, ವೃತ್ತಿ ವಲಯಗಳಲ್ಲಿ, ಜಾತಿ-ಜಾತಿಗಳ ನಡುವೆ ಸಾಮಾನ್ಯವಾಗಿ ಕಾಣಬರುವಂತಹದು. ಸಂಘರ್ಷವಲ್ಲ, ವೈಚಾರಿಕ ಜಾಗೃತಿ ಮಾತ್ರ ಇದಕ್ಕೆ ಪರಿಹಾರ ಕೊಡಬಲ್ಲದು.
     ನಿರಂತರವಾದ ಕಿರುಕುಳ, ಯಾವುದೋ ಒಂದು ಕಾರಣದಿಂದಾದ ವೈಮನಸ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸತತವಾಗಿ ಮಾಡುವ ದ್ವೇಷ, ಇತ್ಯಾದಿಗಳು ಸಹನೆಯ ಕಟ್ಟೆ ಒಡೆಯಲು ಸಾಕಾಗುತ್ತದೆ. ಎಲಾಸ್ಟಿಕ್ಕಿನ ಎಳೆಯನ್ನು ಒಂದು ಹಂತದವರೆವಿಗೂ ತುಂಡಾಗದಂತೆ ಎಳೆಯಬಹುದು. ಆದರೆ ಅದರ ಧಾರಣಾಶಕ್ತಿ ಮೀರಿ ಎಳೆದರೆ ತುಂಡಾಗುತ್ತದೆ. ಮನುಷ್ಯರ ನಡುವಣ ವ್ಯವಹಾರವೂ ಹೀಗೆಯೇ. ಒಂದು ಹಂತದವರೆಗೆ ಸಹಿಸುತ್ತಾರೆ. ಇನ್ನು ಸಹಿಸಲು ಸಾಧ್ಯವೇ ಇಲ್ಲವೆಂದಾದಾಗ ಸ್ಫೋಟಕ ವಾತಾವರಣ ಉಂಟಾಗುತ್ತದೆ. ಆಗ ಮನಸ್ಸಿನ ನಿಯಂತ್ರಣ ಮೀರಿ ಸಹನೆಯ ಮುಖವಾಡ ಕಳಚುತ್ತದೆ, ಕ್ರೋಧಾಸುರ ಆವಾಹನೆಗೊಳ್ಳುತ್ತಾನೆ. ವಿವೇಕರಹಿತವಾದ ಆ ಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು, ಕೊಲೆ ಆಗಬಹುದು, ಆತ್ಮಹತ್ಯೆ ಮಾಡಿಕೊಳ್ಳಬಹುದು, ದೀರ್ಘಕಾಲದ ಸಂಬಂಧಗಳ ಇತಿಶ್ರೀ ಆಗಬಹುದು. ಏನೇ ಆದರೂ ಪರಿಣಾಮ ಮಾತ್ರ ಸಂಬಂಧಿಸಿದ ಯಾರಿಗೂ ಹಿತವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಸಿಟ್ಟಿಗೊಳಗಾದ ವ್ಯಕ್ತಿ ರಾಕ್ಷಸನಂತೆಯೇ ವರ್ತಿಸುತ್ತಾನೆ. ಅವನ ಸ್ಥಿತಿ ಹೇಗಿರುತ್ತದೆಂದರೆ:

ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||

ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ|
ತಡೆಯಬಂದವರ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||
     ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತರಾದಾಗ ಬರುವುದಿಲ್ಲ ಎಂಬುದು ಸಹನೆಯ ಕಟ್ಟೆ ಒಡೆದವರಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಅಸಹನೆಯ ಮುದ್ದು ಕೂಸುಗಳಾದ ಕೋಪ, ಮತ್ಸರ ಮತ್ತು ದ್ವೇಷಗಳು ವಿವೇಚನೆ ಮಾಡುವ ಶಕ್ತಿಯನ್ನು ನುಂಗಿಬಿಡುತ್ತವೆ.  ವಿವೇಚನಾಶಕ್ತಿ ನಾಶವಾಗಿರುವ ಆ ಸ್ಥಿತಿಯಲ್ಲಿ ಅನಾಹುತ ನಡೆದುಹೋಗುತ್ತದೆ. ಅದರ ದೀರ್ಘಕಾಲದ ಪರಿಣಾಮವನ್ನು ಸಂಬಂಧಿಸಿದವರಲ್ಲದೆ ಅವರ ಕುಟುಂಬದವರೂ ಎದುರಿಸಬೇಕಾಗುತ್ತದೆ.
     ಸಾಮೂಹಿಕವಾಗಿ ಉಂಟಾಗುವ ಅಸಹನೆ ಅರಾಜಕತೆ, ಅಶಾಂತಿಗೆ ಕಾರಣವಾಗುತ್ತದೆ. ಸಾಮೂಹಿಕ ಅಸಹನೆ, ಅಶಾಂತಿಗೆ ಇಂದಿನ ರಾಜಕೀಯ ವ್ಯವಸ್ಥೆ, ವಿವಿಧ ಮಾಧ್ಯಮಗಳು ಗಣನೀಯ ಪಾಲು ನೀಡುತ್ತಿವೆ. ಇದಕ್ಕೆ ಪರಿಹಾರವಿಲ್ಲವೇ ಅಂದರೆ ಖಂಡಿತಾ ಇದೆ. ಕಾಯಿಲೆ ಬಂದ ಮೇಲಿನ ಚಿಕಿತ್ಸೆಗಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದೇ ಅತ್ಯುತ್ತಮವಾದ ಪರಿಹಾರ. ಸಹನೆ ಕಾಯ್ದುಕೊಳ್ಳಲು ಪೂರಕವಾದ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳಬೇಕು. ನಮ್ಮ ಸ್ನೇಹಿತರು, ಪರಿಸರಗಳ ವಿಚಾರದಲ್ಲಿ ಜಾಗೃತರಾಗಿರಬೇಕು. ಹುಳುಕು ಹುಡುಕುವವರು ವಿಷ ಕಕ್ಕುತ್ತಾರೆ, ಒಳಿತು ಕಾಣುವವರು ಅಮೃತ ಸುರಿಸುತ್ತಾರೆ ಎಂಬುದು ಅನುಭವಿಗಳ ನುಡಿ. ಎಲ್ಲೆಲ್ಲೂ ಕೆಟ್ಟದನ್ನು ಕಾಣುವ ದೃಷ್ಟಿಕೋನ ಬದಲಾಯಿಸಿಕೊಂಡು ಒಳಿತನ್ನು ಅರಸುವ ಮನೋಭಾವ ಮೂಡಿದರೆ, ಲೇಖನದಲ್ಲಿ ತಿಳಿಸಿರುವ ಸಹಿಷ್ಣುತೆಗೆ ಪೂರಕವಾದ ೧೦ ಅಂಶಗಳ ಪಾಲನೆ ಮಾಡುವ ಪ್ರವೃತ್ತಿ ರೂಢಿಸಿಕೊಂಡರೆ ನಾವು ಖಂಡಿತಾ ಸಹನಶೀಲರಾಗುತ್ತೇವೆ. ಸಮಯಕ್ಕೆ ತನ್ನದೇ ಆದ ರಹಸ್ಯಗಳಿರುತ್ತವೆ. ಅದು ತನ್ನ ರಹಸ್ಯಗಳನ್ನು ಬಿಟ್ಟುಕೊಡುವವರೆಗೆ ಕಾಯುವುದೇ ಸಹನೆ! ತಾಳ್ಮೆ ಕಹಿಯಾಗಿರುತ್ತದೆ, ಆದರೆ ಅದರ ಫಲ ಸಿಹಿಯಾಗಿರುತ್ತದೆ. ಸಹನೆ ಎಂದಿಗೂ ದುರ್ಬಲರ ಅನಿವಾರ್ಯತೆಯಲ್ಲ, ಅದು ಬಲಶಾಲಿಗಳ ಆಯುಧ. ಸಹನೆ ಸಹಬಾಳ್ವೆಗೆ ಒತ್ತು ಕೊಡುತ್ತದೆ. ಅಸಹನೆಯ ಮೂಲ ಸ್ವಾರ್ಥಪರ ಚಿಂತನೆ. ಕೇವಲ ಸ್ವಕೇಂದ್ರಿತ ಚಿಂತನೆ ಮತ್ತು ವಿಚಾರಗಳು ಇತರರನ್ನು ದ್ವೇಷಿಸುವಂತೆ, ಸಹಿಸಿಕೊಳ್ಳದಿರುವಂತೆ ಮಾಡುತ್ತವೆ. ಸಹನೆ ಗುಣವಲ್ಲ, ಅದೊಂದು ಸಾಧನೆ. ಸಹನೆ ನಮ್ಮ ಸಂಪತ್ತೆನಿಸಲು ಅಸಹನೆಯ ಮೊಳಕೆ ನಮ್ಮೊಳಗೆ ಚಿಗುರದಂತೆ ಎಚ್ಚರವಿರಬೇಕು.
ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು
ಉಸಿರು ನಿಲ್ಲುವವರೆಗೆ ಕಾಡುವವನಿವನು |
ಧೃಢಚಿತ್ತ ಸಮಚಿತ್ತಗಳಾಯುಧವ ಮಾಡಿ
ಒಳವೈರಿಯನು ಅಟ್ಟಿಬಿಡು ಮೂಢ ||
      "ಸಹನೆ ಚಾರಿತ್ರ್ಯವನ್ನು ನಿರ್ಮಿಸುತ್ತದೆ; ಚಾರಿತ್ರ್ಯವಂತರು ಚರಿತ್ರೆಯ ವಿಷಯವಾಗುತ್ತಾರೆ, ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ."
-ಕ.ವೆಂ.ನಾಗರಾಜ್.

ಬುಧವಾರ, ಜನವರಿ 1, 2014

ಸೆಟೆದು ನಿಂತ ಸಹ್ಯಾದ್ರಿಯ ಹುಲಿ ದೊಂಡಿಯವಾಘ


    ಇತಿಹಾಸದ ಪುಟಗಳಲ್ಲಿ ಹುದುಗಿಹೋಗಿರುವ ಅಸಂಖ್ಯ ವೀರ, ಧೀರ, ಶೂರರಿದ್ದಾರೆ. ಅವರುಗಳಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರಗಳು ಮತ್ತು ಇತಿಹಾಸಕಾರರು ವಿಫಲರಾಗಿದ್ದಾರೆಯೇನೋ ಎಂಬ ಭಾವ ಅಂತಹ ಶೂರರನ್ನು ಪರಿಚಯಿಸದ, ಶಾಲಾಪಠ್ಯಗಳಲ್ಲಿ ವಿವರಿಸದ ಸಂಗತಿಗಳಿಂದ ಅನ್ನಿಸುತ್ತದೆ. ಇತಿಹಾಸವೆಂದರೆ 'ಅದು ಹಾಗೆ ಇತ್ತು' ಎಂದು ವಾಸ್ತವತೆ ತಿಳಿಸುವ ಮತ್ತು ಆ ಮೂಲಕ ಹೇಗಿರಬೇಕು ಎಂದು ತಿಳುವಳಿಕೆ ಪಡೆಯಲು ನೆರವಾಗುವ ಗ್ರಂಥವೆನಿಸಬೇಕು. ಆದರೆ ಇತಿಹಾಸಕಾರರು ತಮ್ಮ ದೇಶದ ಹಿನ್ನೆಲೆ, ಜಾತಿ, ಧರ್ಮದ ಹಿನ್ನೆಲೆ ಇತ್ಯಾದಿಗಳ ಪಕ್ಷಪಾತಿಗಳಾಗಿ ನೈಜ ಸಂಗತಿಗಳಿಗೆ ಅಪಚಾರವೆಸಗಿರುವ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಜಾತ್ಯಾತೀತತೆಯ ಲೇಪ ಕೊಡುವ ಸಲುವಾಗಿ ವಾಸ್ತವ ಸಂಗತಿಗಳನ್ನು ಮರೆಮಾಚುವ ಕೆಲಸ ಇತಿಹಾಸಕ್ಕೆ ಮಾಡುವ ಅಪಚಾರವಾಗುತ್ತದೆ ಎಂಬುದನ್ನು ಎಷ್ಟು ಬೇಗ ಮನಗಾಣುತ್ತೇವೆಯೋ ಅಷ್ಟೂ ದೇಶಕ್ಕೆ ಒಳ್ಳೆಯದು. ಸ್ವಾಭಿಮಾನಿಯಾಗಿ ಸತ್ತರೂ ಸರಿಯೇ, ಮತಾಂತರಗೊಳ್ಳಲಾರೆ ಎಂದು ಸುಮಾರು ಐದು ವರ್ಷಗಳ ಕಾಲ ಟಿಪ್ಪುವಿನ ಸೆರೆಮನೆಯಲ್ಲಿ ಚಿತ್ರಹಿಂಸೆ ಅನುಭವಿಸಿದ, ಟಿಪ್ಪು ಮರಣಾನಂತರ ಬಿಡುಗಡೆಯಾಗಿ ತನ್ನದೇ ಆದ ಪಡೆಯೊಂದನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದ ಒಬ್ಬ ವೀರಾಗ್ರಣಿ ಕನ್ನಡಿಗನನ್ನು ಸ್ಮರಿಸುವ ಸಲುವಾಗಿ ಈ ಲೇಖನ ಪ್ರಸ್ತುತ ಪಡಿಸಿದೆ. ಆ ಧೀರ ಕನ್ನಡಿಗನ ಹೆಸರು ದೊಂಡಿಯಾವಾಘ.  
     ಮೂಲ ವಿಷಯಕ್ಕೆ ಬರುವ ಮುನ್ನ ಮೊದಲೇ ಹೇಳಿದ್ದಂತೆ ಹೈದರ್ ಮತ್ತು ಟಿಪ್ಪೂರ ಕಾಲದಲ್ಲಿ ಬಂದಿಗಳ ಸ್ಥಿತಿಯನ್ನು ತಿಳಿಸುವ ಸಲುವಾಗಿ ಜೇಮ್ಸ್ ಸ್ಕರಿ ಎಂಬ ಬ್ರಿಟಿಷ್ ಕೈದಿಯೊಬ್ಬನ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ. ಜೇಮ್ಸ್ ಸ್ಕರಿಯ ತಂದೆ ಒಬ್ಬ ಬ್ರಿಟಿಷ್ ಸೈನಿಕನಾಗಿದ್ದು, ಸ್ಕರಿ ಚಿಕ್ಕಂದಿನಲ್ಲೇ ಗನ್ ಪೌಡರ್ ಸಾಗಾಟದ ಕೆಲಸ ಮಾಡುತ್ತಿದ್ದು ಅದಕ್ಕಾಗಿ ಸಮುದ್ರಯಾನ ಮಾಡಬೇಕಾಗುತ್ತಿತ್ತು. ಹೀಗೆ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ತನ್ನ ೧೪ನೆಯ ವಯಸ್ಸಿನಲ್ಲೇ ಸೈಂಟ್ ಹೆಲೆನಾ ಎಂಬ ದ್ವೀಪದಲ್ಲಿ ಫ್ರೆಂಚರಿಂದ ಹಡಗಿನಲ್ಲಿದ್ದ ಇತರ 14ಸಿಬ್ಬಂದಿಗಳೊಂದಿಗೆ ಕ್ರಿ.ಶ. 1780ರಲ್ಲಿ ಬಂಧಿಸಲ್ಪಟ್ಟ. ಈ 15 ಜನರನ್ನು ಫ್ರೆಂಚ್ ಅಡ್ಮಿರಲ್ ಸಫ್ರೆನ್ ಹೈದರಾಲಿಯ ವಶಕ್ಕೆ ಒಪ್ಪಿಸಿದ. ಇವರುಗಳನ್ನು ಮೊದಲು ಬೆಂಗಳೂರಿನ ಜೈಲಿಗೆ, ನಂತರ ಶ್ರೀರಂಗಪಟ್ಟಣದ ಸೆರೆಮನೆಗೆ ಸಾಗಿಸಲಾಯಿತು. ಸೆರೆಯಾದ ಕೂಡಲೇ ಕಾಲುಗಳಿಗೆ ಬಲವಾದ ಕಬ್ಬಿಣದ ಸರಪಳಿಗಳನ್ನು ಹಾಕಿ, ಕೈಗಳಿಗೂ ಕಬ್ಬಿಣದ ಕೋಳಗಳನ್ನು ಹಾಕಿ ಸೆರೆಮನೆ ತಲುಪುವವರಗೆ ಹಲವಾರು ದಿನಗಳ ಕಾಲ ನಡೆಸಿಕೊಂಡೇ ಹೋಗಲಾಗಿತ್ತು. ಟಿಪ್ಪು ಇವರೆಲ್ಲರನ್ನೂ ಬಲವಂತವಾಗಿ ಇಸ್ಲಾಮ್ ಮತಕ್ಕೆ ಮತಾಂತರಿಸಿ, ಜೇಮ್ಸ್ ಸ್ಕರಿಗೆ ಮುಸ್ಲಿಮ್ ಹೆಸರಾದ ಶಂಶೇರ್ ಖಾನ್ ಎಂದು ಹೊಸ ಹೆಸರು ಕೊಟ್ಟು ಬಲವಂತವಾಗಿ ತನ್ನ ಸೇನೆಯಲ್ಲಿ ಕೆಲಸ ಮಾಡಿಸಿದ್ದ. ಟಿಪ್ಪು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸೋತಾಗ ಆದ ಒಪ್ಪಂದದಂತೆ 1792ರಲ್ಲಿ ಇವನ ಬಿಡುಗಡೆಯಾಯಿತು. ಬಿಡುಗಡೆಯ ನಂತರದಲ್ಲಿ ಇವನ ಸ್ಥಿತಿ ಹೇಗಿತ್ತೆಂದರೆ ಆತನಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳುವುದೇ ಕಷ್ಟವಾಗಿತ್ತಂತೆ. ಚಾಕು, ಫೋರ್ಕುಗಳನ್ನು ಉಪಯೋಗಿಸುವುದೇ ಮರೆತುಹೋಗಿತ್ತಂತೆ. ಈತನ ಬಿಳಿಯ ಚರ್ಮ ಕಪ್ಪಾಗಿ ನೀಗ್ರೋನಂತೆ ಕಾಣಿಸುತ್ತಿದ್ದ ಇವನ ರೂಪ ಇವನು ಪಟ್ಟ ಪಾಡನ್ನು ಎತ್ತಿ ತೋರಿಸುತ್ತಿತ್ತು. ಟಿಪ್ಪುವಿನ ಸೆರೆಮನೆಗಳಲ್ಲಿ ಬಂದಿಗಳನ್ನು ಕೋಳಗಳಲ್ಲಿ ಬಂಧಿಸಿಡುತ್ತಿದ್ದರು. ಕತ್ತಿನವರೆವಿಗೂ ಬರುವಂತೆ ನೀರು ತುಂಬಿಸಿದ ಸ್ಥಳಗಳಲ್ಲಿಟ್ಟು ಹಿಂಸಿಸುತ್ತಿದ್ದರು. ಕೈದಿಗಳಿಗೆ ನೀಡುತ್ತಿದ್ದ ಆಹಾರದ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆ ಹೇಳದಿರುವುದೇ ಸರಿ. ಬಂಧಿಸಲ್ಪಟ್ಟರೂ ಸೆರೆಮನೆಯಲ್ಲಿರಿಸುವಷ್ಟು ಗುರುತರ ಅಪರಾಧ ಮಾಡದವರ ಕಿವಿ, ಮೂಗು ಅಥವ ತುಟಿಗಳನ್ನು ಕತ್ತರಿಸಿ ಬಿಟ್ಟುಬಿಡುತ್ತಿದ್ದರು. ಕೈದಿಗಳನ್ನು ಮತ್ತು ಅಪರಾಧಿಗಳನ್ನು ನಂದಿ ಬೆಟ್ಟದಿಂದ ಪ್ರಪಾತಕ್ಕೆ ತಳ್ಳಿ ಸಾಯಿಸುತ್ತಿದ್ದ ಸ್ಥಳಕ್ಕೆ 'ಟಿಪ್ಪೂ ಡ್ರಾಪ್' ಎಂದು ಹೆಸರಿದ್ದು, ಆ ಹೆಸರು ಇಂದಿಗೂ ಉಳಿದಿರುವುದು ಟಿಪ್ಪು ದಯಾಮಯಿ ಎಂದು ಹೇಳುವವರಿಗೆ ಅರಗಿಸಿಕೊಳ್ಳುವುದು ಕಷ್ಟವಾದೀತು.
     ಈಗ ಪ್ರಧಾನ ವಿಷಯಕ್ಕೆ ಬರುತ್ತೇನೆ.      18ನೆಯ ಶತಮಾನದ ಮಧ್ಯಭಾಗದಲ್ಲಿ ಕನ್ನಡಿಗ ಪ್ರಮುಖ ಅರಸೊತ್ತಿಗೆಗಳು ಹೈದರಾಲಿಯ ವಶಕ್ಕೆ ಒಳಗಾದವು. ಮೈಸೂರು ಅರಸರ ದೌರ್ಬಲ್ಯ ಹೈದರಾಲಿಯ ಪ್ರಾಬಲ್ಯಕ್ಕೆ ಕಾರಣವಾಗಿ ಆತನ ಅಧೀನಕ್ಕೆ ಬಂದಿತ್ತು. ಇನ್ನೊಂದು ಪ್ರಮುಖ ಕೆಳದಿ ಸಂಸ್ಥಾನವನ್ನು ಅಲ್ಲಿನ ರಾಜಪರಿವಾರದಲ್ಲಿನ ವೈಮನಸ್ಯ, ಹಿತಶತ್ರುಗಳ ಪಿತೂರಿಯ ಲಾಭ ಪಡೆದು, ನೆರೆಯ ಚಿತ್ರದುರ್ಗದ ಮದಕರಿನಾಯಕನ ಸಹಾಯದೊಂದಿಗೆ ಹೈದರಾಲಿ ಕುತಂತ್ರದಿಂದ ವಶಪಡಿಸಿಕೊಂಡು ಭೀಕರ ರಕ್ತಸಿಕ್ತ ಅಂತ್ಯ ಕಾಣಿಸಿದ ಸಂದರ್ಭವದು. ಹಿಂದಿನ ಶಿವಮೊಗ್ಗ ಜಿಲ್ಲೆಗೆ ಸೇರಿದ್ದ, ಪ್ರಸ್ತುತ ದಾವಣಗೆರೆ ಜಿಲ್ಲೆಗೆ ಸೇರಿರುವ ಚನ್ನಗಿರಿಯಲ್ಲಿ ಹುಟ್ಟಿದ ದೊಂಡಿಯಾವಾಘ ಆ ಸಂದರ್ಭದಲ್ಲಿ ಇನ್ನೂ ಎಳೆಯ ಬಾಲಕನಾಗಿದ್ದ. ತರುಣನಾದಾಗ ಕೆಳದಿ ಅರಸೊತ್ತಿಗೆ ಇದ್ದಿದ್ದರೆ ಆತ ಕೆಳದಿಯ ಸೈನ್ಯದಲ್ಲಿ ಒಬ್ಬ ಪ್ರಚಂಡನೆನಿಸುತ್ತಿದ್ದ. ಆದರೆ ಚನ್ನಗಿರಿ ಸಹ ಟಿಪ್ಪುವಿನ ಆಳ್ವಿಕೆಗೆ ಸೇರಿದ್ದರಿಂದ ಸಹಜವಾಗಿ ಆತ ಕ್ರಿ.ಶ. 1794ರಲ್ಲಿ ಟಿಪ್ಪುವಿನ ಸೈನ್ಯಕ್ಕೆ ಸೈನಿಕನಾಗಿ ಸೇರಿದ. ಹೆಸರಿಗೆ ತಕ್ಕಂತೆ ಹುಲಿಯಂತೆಯೇ ಧೈರ್ಯಶಾಲಿಯಾಗಿದ್ದ ಆತನ ಪರಾಕ್ರಮ, ಶೌರ್ಯಗಳನ್ನು ಗಮನಿಸಿದ ಟಿಪ್ಪು ಅವನ ಮನವೊಲಿಸಿ ಇಸ್ಲಾಮಿಗೆ ಮತಾಂತರಿಸಲು ಪ್ರಯತ್ನಿಸಿದ. ಬಡ್ತಿ ನೀಡಿ, ಸಂಬಳ ಹೆಚ್ಚಿಸುವ ಪ್ರಲೋಭನೆ ಒಡ್ಡಿದರೂ ಮತಾಂತರಕ್ಕೆ ಒಪ್ಪದ ದೊಂಢಿಯನನ್ನು ಬಲವಂತವಾಗಿ ಮುಸ್ಲಿಮನನ್ನಾಗಿ ಮತಾಂತರಿಸಲಾಯಿತು. ಅದನ್ನೂ ಧಿಕ್ಕರಿಸುವ ಧಾರ್ಷ್ಟ್ಯ ತೋರಿಸಿದ್ದಕ್ಕೆ ಪ್ರತಿಯಾಗಿ ಟಿಪ್ಪು ಅವನನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿರಿಸಿದ. ಈ ರೀತಿ ಬಂಧಿಯಾಗಿದ್ದ ದೊಂಢಿಯ ತಪ್ಪಿಸಿಕೊಳ್ಳಲು ಅವಕಾಶವಾಗಲೇ ಇಲ್ಲ. ಅವನನ್ನು ಗಲ್ಲಿಗೇರಿಸಲು ಆದೇಶವಾಗಿದ್ದರೂ, ಆತ ಮುಸ್ಲಿಮನಾಗಲು ಒಪ್ಪಬಹುದೆಂಬ ಕಾರಣದಿಂದ ಶಿಕ್ಷೆಯನ್ನು ಜಾರಿಗೊಳಿಸುವುದನ್ನು ಮುಂದೂಡಲಾಗಿತ್ತೆನ್ನಲಾಗಿದೆ. 
     ಟಿಪ್ಪು ಪತನಾನಂತರದಲ್ಲಿ ಶ್ರೀರಂಗಪಟ್ಟಣದ ಸೆರೆಮನೆಯಿಂದ ತಪ್ಪಿಸಿಕೊಂಡು ಹೊರಬಂದ ದೊಂಢಿಯ ಬಿದನೂರಿಗೆ ಬಂದು ಮೊದಲು ಮಾಡಿದ ಕೆಲಸವೆಂದರೆ ಸ್ವಾಭಿಮಾನಿ ತರುಣರನ್ನು ಸಂಘಟಿಸಿ ತನ್ನದೇ ಆದ ಒಂದು ಸೈನ್ಯವನ್ನು ಕಟ್ಟಿದ್ದು. ಹೈದರ್ ಮತ್ತು ಟಿಪ್ಪುರಿಂದ ನೊಂದವರು, ಸೈನ್ಯದಿಂದ ಹೊರಬಿದ್ದವರು, ಪರಕೀಯರಾದ ಬ್ರಿಟಿಷರ ಆಳ್ವಿಕೆಯನ್ನು ಕೊನೆಗೊಳಿಸಬೇಕೆಂಬ ಛಲವಿದ್ದ ಸಮೂಹವನ್ನು ಒಗ್ಗೂಡಿಸಿ ಕಟ್ಟಿದ ಆ ಸೈನ್ಯ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಲಾರಂಭಿಸಿತು. ಬಿದನೂರು - ಶಿಕಾರಿಪುರ ಪ್ರದೇಶದಿಂದ 1800ರ ಸುಮಾರಿನಲ್ಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿಯ ಬಾವುಟ ಹಾರಿಸಿದ ಇವನೊಂದಿಗೆ ಸುತ್ತಮುತ್ತಲಿನ ಪಾಳೆಯಗಾರರು ಕೈಜೋಡಿಸಿದ್ದರು. ಕುತಂತ್ರಗಳಿಂದಲೇ ಸಾಮ್ರಾಜ್ಯ ವಿಸ್ತರಣೆ ಮಾಡುತ್ತಿದ್ದ ಶತ್ರುಗಳನ್ನು ಎದುರಿಸಲು ಅವರ ಮಾರ್ಗವನ್ನೇ ಅನುಸರಿಸಬೇಕೆಂಬುದನ್ನು ಹಿಂದಿನ ಅನುಭವಗಳಿಂದ ಪಾಠ ಕಲಿತಿದ್ದ ದೊಂಡಿಯ ತನ್ನ ಪಡೆಗೆ ಗೆರಿಲ್ಲಾ ಮಾದರಿಯ ಯುದ್ಧತಂತ್ರಗಳಲ್ಲಿ ತರಬೇತಿ ನೀಡಿ ಸಜ್ಜುಗೊಳಿಸಿದ. ಕರಾವಳಿ ಪ್ರದೇಶದಲ್ಲಿ ಜಮಾಲಾಬಾದ್‌ನಿಂದ ಸೋದೆಯವರೆಗೆ ಮತ್ತು ಘಟ್ಟ ಪ್ರದೇಶದ ಮೇಲೆ ಬೆಳಗಾಮ್, ರಾಯಚೂರಿನವರೆಗೆ ಸಹ ಆತನ ಕ್ರಾಂತಿಯ ವ್ಯಾಪ್ತಿ ವಿಸ್ತರಿಸಿತ್ತು. ಧೊಂಡಿಯ ವಾಘನನ್ನು ಮಣಿಸುವುದು ಆಂಗ್ಲರಿಗೆ ಸುಲಭವಾಗಿರಲಿಲ್ಲ. ಗೆರಿಲ್ಲಾ ಮಾದರಿಯಲ್ಲಿ ಹೊಂಚುಹಾಕಿ ಆಂಗ್ಲ ಸೈನಿಕರ ಮೇಲೆ ದಾಳಿ ಮಾಡಿ ಸಾಕಷ್ಟು ಕಷ್ಟ-ನಷ್ಟ ಉಂಟುಮಾಡಿ ಅವರು ಎಚ್ಚೆತ್ತು ತಿರುಗಿ ಬೀಳುವ ವೇಳೆಗೆ ಕಣ್ಮರೆಯಾಗುತ್ತಿದ್ದ ಅವನನ್ನು ಹಿಡಿಯುವುದು ಸುಲಭವಾಗಿರಲಿಲ್ಲ. 
     ಬ್ರಿಟಿಷ್ ಸೇನಾ ತುಕಡಿಗಳ ಮೇಲೆ ಆಯಕಟ್ಟಿನ ಸ್ಥಳಗಳಲ್ಲಿ ಹೊಂಚು ಹಾಕಿ ಅನಿರೀಕ್ಷಿತ ದಾಳಿ ನಡೆಸಿ ಅಪಾರ ಹಾನಿ ಉಂಟು ಮಾಡುತ್ತಿದ್ದುದಲ್ಲದೆ ಅವರ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುತ್ತಿದ್ದುದನ್ನು ತಪ್ಪಿಸಲು ಆಂಗ್ಲರು ಹೆಣಗಾಡಬೇಕಾಯಿತು. ಅವನನ್ನು ಹಿಡಿಯುವ ಸಲುವಾಗಿಯೇ ಲಾರ್ಡ್ ವೆಲ್ಲೆಸ್ಲಿ  ಸೈನಿಕರ ಒಂದು ಪ್ರತ್ಯೇಕ ತಂಡವನ್ನೇ ನಿಯೋಜಿಸಿದ್ದ. ಒಂದೊಮ್ಮೆ ಈ ರೀತಿಯ ಹೋರಾಟ ಮಾಡಿದ ಸಂದರ್ಭದಲ್ಲಿ, ಇಂತಹ ದಾಳಿಯ ಬಗ್ಗೆ ಎಚ್ಚರದಿಂದಿದ್ದ ಆಂಗ್ಲ ಸೈನಿಕರಿಂದ ತಪ್ಪಿಸಿಕೊಳ್ಳಲು ಹರಿಯುತ್ತಿದ್ದ ದೊಡ್ಡ ಹಳ್ಳವನ್ನು ತನ್ನ ಕುದುರೆಯನ್ನು ಹುರಿದುಂಬಿಸಿ ಹಾರಿಸಿ ತಪ್ಪಿಸಿಕೊಂಡಿದ್ದ ಧೀರನವನು. ಇಂತಹುದೇ ಮತ್ತೊಂದು ಸಂದರ್ಭದಲ್ಲಿ ಆಂಗ್ಲರ ಪ್ರತಿದಾಳಿಯಿಂದ ತಪ್ಪಿಸಿಕೊಂಡು, ಶಿಕಾರಿಪುರದ ಹುಚ್ಚರಾಯಸ್ವಾಮಿ (ಭ್ರಾಂತೇಶ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಆಂಜನೇಯ) ದೇವಾಲಯದಲ್ಲಿ ಅಡಗಿ ರಕ್ಷಣೆ ಪಡೆದಿದ್ದ. ತನ್ನನ್ನು  ರಕ್ಷಿಸಿದ್ದಕ್ಕೆ ಕೃತಜ್ಞತೆಯಾಗಿ ತನ್ನ ಖಡ್ಗವನ್ನು ದೇವರಿಗೆ ಸಮರ್ಪಿಸಿದ್ದ ಧೊಂಡಿಯ ವಾಘ. ಈ ಖಡ್ಗ ಈಗಲೂ ಆ ದೇವಸ್ಥಾನದಲ್ಲಿದ್ದು, ಆಸಕ್ತರು ನೋಡಬಹುದಾಗಿದೆ. ಬ್ರಿಟಿಷರು ಅನೇಕ ರಾತ್ರಿಗಳನ್ನು ನಿದ್ರೆ ಮಾಡದೆ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದ್ದವನು ಈ ಶೂರ. ಗವರ್ನರ್ ಜನರಲ್ ಆಗಿದ್ದ ಮಾರ್ಕಿಸ್ ವೆಲ್ಲೆಸ್ಲಿ ದೊಂಡಿಯವಾಘನನ್ನು ಸೆರೆ ಹಿಡಿದ ತಕ್ಷಣದಲ್ಲಿ ಹತ್ತಿರದ ಮೊದಲ ಮರಕ್ಕೆ ಅವನನ್ನು ನೇಣು ಹಾಕಬೇಕೆಂದು ಆದೇಶಿಸಿದ್ದುದು, ಅವನು ಸಿಕ್ಕರೂ ಮತ್ತೆಲ್ಲಿ ತಪ್ಪಿಸಿಕೊಂಡು ಹೋದಾನೋ ಎಂಬ ಅಂಜಿಕೆಯಿಂದ! 
    ಪ್ರತಿ ವಿಜಯದಶಮಿಯಂದು ಹುಚ್ಚರಾಯಸ್ವಾಮಿ ದೇವಾಲಯದಲ್ಲಿರುವ ಧೊಂಡಿಯವಾಘನ ಖಡ್ಗದಿಂದಲೇ ಬನ್ನಿ ಕಡಿಯುವ ಸೌಭಾಗ್ಯ ಶಿಕಾರಿಪುರದ ತಾಲ್ಲೂಕು ದಂಡಾಧಿಕಾರಿಯಾದವರಿಗೆ ಸಿಗುತ್ತದೆ. ಎರಡು ವರ್ಷಗಳು ಈ ಖಡ್ಗವನ್ನು ಹಿಡಿಯುವ ಮತ್ತು ಬನ್ನಿ ಕಡಿಯುವ ಪುಣ್ಯ ನನಗೆ ಸಿಕ್ಕಿತ್ತು. ಬ್ರಿಟಿಷರನ್ನು ನಡುಗಿಸಿದ ಧೊಂಡಿಯವಾಘನ ಖಡ್ಗವನ್ನು ನಾನು ಹಿಡಿದು ಬಾಳೆಯ ಕಂದನ್ನು ಕಡಿಯುವಾಗ ಹೆಮ್ಮೆಯಿಂದ ಉಬ್ಬಿದ್ದು ಸುಳ್ಳಲ್ಲ. ಅನ್ಯಾಯಿಗಳನ್ನು, ಸಮಾಜಘಾತಕರನ್ನು ಹೀಗೆಯೇ ನಿವಾರಿಸಬೇಕೆಂದು ಅನ್ನಿಸಿದ್ದ ಆ ಕ್ಷಣಗಳನ್ನು ನೆನೆಸಿಕೊಂಡು ಈಗಲೂ ಪುಲಕಿತನಾಗುತ್ತಿರುತ್ತೇನೆ.
      ಉಭಯ ಲೋಕಾಧೀಶ್ವರ(ಎರಡು ಲೋಕಗಳ ಒಡೆಯ) ಎಂಬ ಬಿರುದು ಸಂಪಾದಿಸಿದ್ದ ದೊಂಢಿಯವಾಘ್ ಹುಲಿಯಂತೆಯೇ (ವಾಘ್=ಹುಲಿ) ಹೋರಾಡುತ್ತಿದ್ದ. ಅವನನ್ನು ಶಿವಮೊಗ್ಗದ ಸಮೀಪ ಬ್ರಿಟಿಷರು ಸುತ್ತುವರೆದಾಗ ಆತ ಅಲ್ಲಿಂದ ತಪ್ಪಿಸಿಕೊಂಡು ಉತ್ತರ ಕರ್ನಾಟಕ ತಲುಪಿದ. ಆಗ ಅವನು ಮರಾಠಾ ಸೇನಾಪತಿ ಗೋಖಲೆಯಿಂದಲೂ ಪ್ರತಿರೋಧ ಎದುರಿಸಬೇಕಾಯಿತು. ಅಲ್ಲಿಂದಲೂ ತಪ್ಪಿಸಿಕೊಂಡು ಜೂನ್, 1800ರಲ್ಲಿ ತುಂಗಭದ್ರಾ - ಮಲಪ್ರಭಾ ನದಿಗಳ ನಡುವಿನ ಪ್ರದೇಶಕ್ಕೆ ಬಂದ ಇವನು ನಂತರದಲ್ಲಿ ಹೊಂಚು ಹಾಕಿ 10,000 ಕುದುರೆ ಸವಾರರು, 5000 ಕಾಲ್ದಳ, 8 ಫಿರಂಗಿಗಳನ್ನು ಹೊಂದಿದ್ದ ಪ್ರಬಲ ಮರಾಠಾ ಸರದಾರ ಗೋಖಲೆಯನ್ನು ಎದುರಿಸಿ ಕೊಂದುಹಾಕಿದ್ದು ಆತನ ಧೈರ್ಯದ ಪ್ರತೀಕವೇ ಸರಿ.
    ಬೇಹುಗಾರರನ್ನು ನೇಮಿಸಿ ದೊಂಢಿಯವಾಘನ ಚಲನವಲನಗಳನ್ನು ಗಮನಿಸುತ್ತಿದ್ದ ಲಾರ್ಡ್ ವೆಲ್ಲೆಸ್ಲಿ ಅವನನ್ನು ಮಲಪ್ರಭಾ ಬಲದಂಡೆಯ ಸಮೀಪಕ್ಕೂ ಬಂದು ಬೆನ್ನಟ್ಟಿದಾಗ ತನ್ನ ಸಾಮಗ್ರಿಗಳು, ಆನೆಗಳು, ಕುದುರೆಗಳನ್ನು ಬಿಟ್ಟು ಪುನಃ ತಪ್ಪಿಸಿಕೊಂಡು ಶಿರಹಟ್ಟಿಗೆ ಬಂದ. ನಿಜಾಮನ ಸೀಮೆ ತಲುಪಿದ ಇವನನ್ನು ಅಲ್ಲಿಯೂ ಬೆನ್ನಟ್ಟಿದ ಆಂಗ್ಲರು ಕೋಣಗಲ್ಲು ಎಂಬಲ್ಲಿ 10-09-1800ರಂದು ಸುತ್ತುಗಟ್ಟಿದಾಗ ವೀರಾವೇಶದಿಂದ ಚಕ್ರವ್ಯೂಹದಲ್ಲಿ ಸಿಲುಕಿದ್ದ ಅಭಿಮನ್ಯುವಿನಂತೆ ನಿಜವಾದ 'ಮಾಡು ಇಲ್ಲವೇ ಮಡಿ' ಎಂಬ ಹೋರಾಟ ನಡೆಸಿದ ಧೊಂಡಿಯವಾಘ ವೀರಮರಣ ಹೊಂದಿದ. ಅವಕಾಶ ಸಿಕ್ಕಿದ್ದರೆ ಧೊಂಡಿಯವಾಘ ಎರಡನೆಯ ಹ್ಶೆದರಾಲಿ ಆಗುತ್ತಿದ್ದ ಎಂಬುದು ಪ್ರಸಿದ್ಧ ಇತಿಹಾಸಕಾರ ಎಡ್ವರ್ಡ್ ಥಾರ್‍ನ್‌ಟನ್ನನ ಉದ್ಗಾರ! ಇವನಿಗೆ ಇತಿಹಾಸಕಾರರು ಕೊಡಬೇಕಾದ ಪ್ರಾಮುಖ್ಯತೆ ಕೊಟ್ಟಿಲ್ಲವೆಂದು ಉದ್ಗರಿಸಿದವರು ಶ್ರೀ ಡಿ.ಸಿ. ಬಕ್ಷಿಯವರು. ವೆಲ್ಲೆಸ್ಲಿ ತನ್ನ ಹೋರಾಟದ ಕುರಿತು ದಾಖಲಿಸಿರುವ ವಿವರಗಳಲ್ಲಿ ಧೊಂಡಿಯನ ವಿರುದ್ಧ ಸಾಧಿಸಿದ ಗೆಲುವಿಗೆ ಹೆಚ್ಚಿನ ಪ್ರಾಮುಖ್ಯ ಕೊಟ್ಟಿದ್ದಾನೆ; ಅದೊಂದು ಅದ್ಭುತ ಸಾಧನೆಯೆಂದಿದ್ದಾನೆ. ಆದರೆ ನಮ್ಮವರು ಧೊಂಡಿಯನ ಸಾಧನೆ ಗುರುತಿಸುವಲ್ಲಿ ಎಡವಿದ್ದಾರೆ ಎನ್ನದೆ ವಿಧಿಯಿಲ್ಲ. ದೇಶಕ್ಕಾಗಿ ಹೋರಾಡಿ ಗಲ್ಲಿಗೇರಿದ ಸಂಗೊಳ್ಳಿ ರಾಯಣ್ಣನಂತೆಯೇ ಅಪ್ರತಿಮ ರೀತಿಯಲ್ಲಿ ಬಲಿದಾನ ಮಾಡಿದ ದೊಂಢಿಯವಾಘನಿಗೆ ರಾಯಣ್ಣನಿಗೆ ಸಿಕ್ಕಷ್ಟು ಮಾನ್ಯತೆ ಸಿಗದಿರುವುದು, ಇವನ ಹೋರಾಟವನ್ನು ಸರ್ಕಾರಗಳು ಗುರುತಿಸದಿರುವುದು ನಿಜಕ್ಕೂ ಅನ್ಯಾಯವೇ ಸರಿ. ಕುಟಿಲತೆಗೆ ಹೆಸರಾದ ಬ್ರಿಟಿಷರು ಕೇವಲ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹದಿಂದ ಮಾತ್ರ ಬೆದರಿ ದೇಶ ಬಿಟ್ಟು ಹೋದರು ಎಂಬಂತೆ ಬಿಂಬಿಸಲಾಗುತ್ತಿರುವುದು ಸರಿಯಲ್ಲ. ಧೊಂಡಿಯವಾಘನಂತಹ ಅಸಂಖ್ಯಾತ ಹೋರಾಟಗಾರರ ಪಾಲು ಮಹತ್ವದ್ದಾಗಿದ್ದು  ಅವರೆಲ್ಲರ ಸಾಮೂಹಿಕ ಹೋರಾಟದ ಫಲವೇ ಸ್ವಾತಂತ್ರ್ಯವೆಂಬುದನ್ನು ಮರೆತರೆ ಅದು ಕೃತಘ್ನತೆಯಾಗುತ್ತದೆ. ಅಂತಹವರನ್ನು ಗುರುತಿಸಿ ಗೌರವಿಸುವುದು, ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. 
     ಇಂದು ನಮ್ಮ ದೇಶವನ್ನಾಳುತ್ತಿರುವ ಜನಪ್ರತಿನಿಧಿಗಳೆನಿಸಿಕೊಂಡವರಲ್ಲಿ ಬಹುತೇಕರು ಭಂಡರು, ಪುಂಡರು. ಅವರು ಬಗ್ಗುವುದು ದಂಡಕ್ಕೆ ಮಾತ್ರ. ಹೀಗಿರುವಾಗ, ಯಾವುದೇ ರೀತಿಯ ಅನ್ಯಾಯದ ವಿರುದ್ಧ ಯಾರೇ ಹೋರಾಡಲಿ, ಅವರೊಡನೆ ಕೈಜೋಡಿಸದಿದ್ದರೂ ಪರವಾಗಿಲ್ಲ, ಅವರನ್ನು ಸಮರ್ಥಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ಮಾಡಲು ನಾವು ಮನಸ್ಸು ಮಾಡಬಹುದಲ್ಲವೇ? ಸಜ್ಜನ ಶಕ್ತಿ ರೂಪುಗೊಳ್ಳುವುದು ಇಂತಹ ಮನೋಭೂಮಿಕೆಯಿಂದಲೇ. ಇಂತಹ ಕೆಲಸಗಳೇ ನಾವು ದೊಂಡಿಯವಾಘನಂತಹವರ ಬಲಿದಾನಕ್ಕೆ ತೋರಬಹುದಾದ ಗೌರವ.
-ಕ.ವೆಂ.ನಾಗರಾಜ್.

ಆಧಾರ: 
1. ಜ್ಞಾನಗಂಗೋತ್ರಿ -ಕಿರಿಯರ ವಿಶ್ವಕೋಶ-ಸಂಪುಟ-೭
2. International Referred Research Journal,June,2011,ISSN-0975-3486, RNI: RAJBIL 2009/30097, VOL-II *ISSUE 21
3. Shimogainfo.net/index.php/component/content/article/12-historical-places/1379-shikaripur.html

5. ಚಿತ್ರ ಕೃಪೆ: ರಾಷ್ಟ್ರಗೌರವ ಸಂರಕ್ಷಣಾ ಪರಿಷತ್, ಬೆಂಗಳೂರು.
**************************************************
ದಿ. 10.9.2014ರಂದು ದೊಂಡಿಯವಾಘನ ಬಲಿದಾನದ ದಿವಸದ ನೆನಪಿನಲ್ಲಿ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ:

11.9.2014ರ ಜನಹಿತ ಪತ್ರಿಕೆಯಲ್ಲಿ ಪ್ರಕಟಿತ:


ಶನಿವಾರ, ಡಿಸೆಂಬರ್ 21, 2013

ಹೈದರಾಲಿಯಿಂದ ಅಂತ್ಯವಾದ ಕನ್ನಡದ ಹೆಮ್ಮೆಯ ಕೆಳದಿ ಸಂಸ್ಥಾನ


     ೧೫ನೆಯ ಶತಮಾನದ ಕೊನೆಯ ಭಾಗದಲ್ಲಿ ಚೌಡಪ್ಪನಾಯಕನಿಂದ ಸ್ಥಾಪಿತವಾದ ಕೆಳದಿ ಸಂಸ್ಥಾನ ಪ್ರಾರಂಭದಲ್ಲಿ ವಿಜಯನಗರದ ಅರಸರ ಸಾಮಂತ ಸಂಸ್ಥಾನವಾಗಿದ್ದು, ವಿಜಯನಗರ ಸಾಮ್ರಾಜ್ಯದ ಪತನಾನಂತರದಲ್ಲೂ ಸ್ವತಂತ್ರವಾಗಿ ಎರಡು ಶತಮಾನಗಳ ಕಾಲ ವಿಜೃಂಭಿಸಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಕರಾಗಿ, ಕಲೆ, ಸಾಹಿತ್ಯ, ಧಾರ್ಮಿಕ ವಿಚಾರಗಳ ಪೋಷಕರಾಗಿದ್ದಲ್ಲದೆ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದ್ದು ಜನಸಾಮಾನ್ಯರ ಮಟ್ಟಿಗೆ ನೆಮ್ಮದಿಯ ರಾಜ್ಯವೆನಿಸಿತ್ತು. ಒಂದು ಕಾಲದಲ್ಲಿ ಮೈಸೂರು ಸಂಸ್ಥಾನಕ್ಕಿಂತಲೂ ಅಧಿಕ ವಿಸ್ತಾರವನ್ನು ಹೊಂದಿದ್ದಾಗಿದ್ದು ಸಂಪದ್ಭರಿತ ಸಂಸ್ಥಾನವಾಗಿತ್ತು. ಸದಾಶಿವನಾಯಕ, ಸಂಕಣ್ಣನಾಯಕ, ವೆಂಕಟಪ್ಪನಾಯಕ, ಶಿವಪ್ಪನಾಯಕ, ಭದ್ರಪ್ಪನಾಯಕ, ಚೆನ್ನಮ್ಮಾಜಿ, ಬಸವಪ್ಪನಾಯಕ ಮುಂತಾದ ವೀರಾಗ್ರಣಿಗಳು ಆಳಿದ ಈ ಸಂಸ್ಥಾನದ ಅರಸುಮನೆತನದಲ್ಲಿ ಕೊನೆಯದಾಗಿ ಆಳಿದವಳು ರಾಣಿ ವೀರಮ್ಮಾಜಿ. ಹೈದರಾಲಿ ಮೈಸೂರು ಸಂಸ್ಥಾನದ ಸೈನ್ಯದಲ್ಲಿ ಕೆಲಸಕ್ಕೆ ಸೇರಿ ಕ್ರಮೇಣ ಬಲ ವೃದ್ಧಿಸಿಕೊಂಡು ೧೮ನೆಯ ಶತಮಾನದ ಮಧ್ಯಭಾಗದಲ್ಲಿ ಮೈಸೂರು ಸಂಸ್ಥಾನವನ್ನೇ ತನ್ನ ಕೈವಶ ಮಾಡಿಕೊಂಡ ಬಗ್ಗೆ ಹಿಂದಿನ ಲೇಖನದಲ್ಲಿ ವಿವರಿಸಿದೆ. ನಂತರದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಯ ಕಾರ್ಯಾಚರಣೆ ಕೈಗೊಂಡು ಕೆಳದಿ ಸಂಸ್ಥಾನದ ಪತನದಲ್ಲಿ ಯಶಸ್ವಿಯಾಗಿದ್ದು ಇತಿಹಾಸ. ಕನ್ನಡನಾಡಿನ ಎರಡು ಹೆಮ್ಮೆಯ ಸಂಸ್ಥಾನಗಳಾಗಿದ್ದ ಮೈಸೂರು ಮತ್ತು ಕೆಳದಿಯ ಅರಸೊತ್ತಿಗೆ ಹೀಗೆ ಅಂತ್ಯಗೊಂಡವು.
    ಕ್ರಿ.ಶ. ೧೭೩೯ರಿಂದ ೧೭೫೫ರವರೆವಿಗೆ ಕೆಳದಿಯ ಅರಸನಾಗಿದ್ದ ಬಸವಪ್ಪನಾಯಕ ಮತ್ತು ಆತನ ರಾಣಿ ವೀರಮ್ಮಾಜಿಗೆ ಪುತ್ರ ಸಂತಾನವಿಲ್ಲದಿದ್ದರಿಂದ ನಿರ್ವಾಣಯ್ಯ ಅನ್ನುವವರ ಮೊಮ್ಮಗನೂ, ಗುರುವಪ್ಪ ಅನ್ನುವವರ ಮಗನೂ ಆದ ಚನ್ನಪ್ಪ ಅನ್ನುವವನನ್ನು ದತ್ತು ತೆಗೆದುಕೊಂಡು ಆತನಿಗೆ ಚೆನ್ನಬಸವಪ್ಪನಾಯಕನೆಂದು ಹೆಸರಿಟ್ಟು ಯುವರಾಜನನ್ನಾಗಿ ಮಾಡಿಕೊಂಡರು. ಬಸವಪ್ಪನಾಯಕ ಮೃತನಾದ ನಂತರದಲ್ಲಿ, ಪಟ್ಟಾಭಿಷಿಕ್ತನಾದ ಚೆನ್ನಬಸವಪ್ಪನಾಯಕ ತಾಯಿ ವೀರಮ್ಮಾಜಿಯ ಮಾರ್ಗದರ್ಶನದಲ್ಲಿ ವಿವೇಕದಿಂದ, ಬುದ್ಧಿಚಾತುರ್ಯದಿಂದ ರಾಜ್ಯಭಾರ ಮಾಡುತ್ತಿದ್ದನು. ಈ ಚೆನ್ನಬಸವಪ್ಪ ತನ್ನ ಕಾಲದಲ್ಲಿ ಇಕ್ಕೇರಿಯ ಮೇಲೆ ದಾಳಿ ಮಾಡಿದ್ದ ನಾನಾಜಿರಾಯನ ಪ್ರೇರಣೆಯಿಂದ ದಾಳಿ ಮಾಡಿದ್ದ ಮಾಧೋಜಿ ಪುರಂಧರನ ಮತ್ತು ತದನಂತರದಲ್ಲಿ ಗೋಪಾಲರಾಯನ ಸೈನ್ಯವನ್ನು ಸಂಧಿನಿಗ್ರಹದ ಮೂಲಕ ನಿವಾರಿಸಿಕೊಂಡಿದ್ದನು. ಬೇಲೂರಿನ ಅರಸ ಕೃಷ್ಣಪ್ಪನಾಯಕ ಕೊಡಗರ ದೊರೆ ವೀರರಾಜನಿಂದ ರಾಜ್ಯಭ್ರಷ್ಠನಾಗಿ ಚೆನ್ನಬಸವಪ್ಪನಾಯಕನ ಮೊರೆ ಹೋದಾಗ, ಮೊರೆ ಬಂದವರನ್ನು ರಕ್ಷಿಸುವ ರಾಜಧರ್ಮದಂತೆ ತನ್ನ ಸೈನ್ಯವನ್ನು ಕಳಿಸಿ ಕೊಡಗರ ಸೈನ್ಯವನ್ನು ಹಿಮ್ಮೆಟ್ಟಿಸಿ, ಕೊಡಗರ ದೊರೆಯನ್ನು ಸಾಮ, ದಾನ, ಬೇಧಗಳಿಂದ ಒಡಂಬಡಿಸಿ ಕೃಷ್ಣಪ್ಪನನ್ನು ಮತ್ತೆ ಬೇಲೂರಿನ ಒಡೆಯನನ್ನಾಗಿಸಿದನೆಂದು ಲಿಂಗಣ್ಣಕವಿಯ ಐತಿಹಾಸಿಕ ಕೃತಿ 'ಕೆಳದಿನೃಪ ವಿಜಯ'ದಲ್ಲಿ ಉಲ್ಲೇಖಿತವಾಗಿದೆ. ಈ ಚೆನ್ನಬಸವಪ್ಪನಾಯಕ ರೋಗಬಾಧೆಯಿಂದ ಕ್ರಿ.ಶ.೧೭೫೭ರಲ್ಲಿ ತೀರಿಕೊಂಡ ನಂತರದಲ್ಲಿ ವೀರಮ್ಮಾಜಿಯು ತನ್ನ ಸೋದರಮಾವನ ಕಿರಿಯ ಮಗನನ್ನು ದತ್ತು ತೆಗೆದುಕೊಂಡು, ಸೋಮಶೇಖರನಾಯಕನೆಂದು ಹೆಸರಿಸಿ ಆತನಿಗೆ ಪಟ್ಟಾಭಿಷೇಕ ಮಾಡಿಸಿದಳು. ಆತ ಚಿಕ್ಕವನಾದ್ದರಿಂದ ವಾಸ್ತವವಾಗಿ ವೀರಮ್ಮಾಜಿಯೇ ರಾಜ್ಯಾಡಳಿತದ ಸೂತ್ರವನ್ನು ಹಿಡಿದಿದ್ದಳು. ಚೆನ್ನಬಸವಪ್ಪನಾಯಕನ ಅಂತ್ಯದ ಕುರಿತು ಆತ ರೋಗಬಾಧೆಯಿಂದ ತನ್ನ ೧೪ನೆಯ ವಯಸ್ಸಿನಲ್ಲೇ ಮೃತನಾದನೆಂದು ಕೆಳದಿ ಸಂಸ್ಥಾನದ ಇತಿಹಾಸವನ್ನು ಎಳೆ ಎಳೆಯಾಗಿ ವಿವರಿಸುವ ಕೆಳದಿನೃಪ ವಿಜಯದಲ್ಲಿ ಈ ರೀತಿ ಹೇಳಿದೆ:
ಇರುತಿರುತುಂ ತದ್ಧರಣೀ
ಶ್ವರನುರುವಿಧಿವಶದೆ ತಾಂ ಚತುರ್ದಶವರ್ಷಾಂ
ತರದೊಳ್ ಪರಿಣಯಮಿಲ್ಲದೆ
ನೆರೆ ರೋಗಾರ್ತಿಯೊಳ್ ಶಿವನೊಳೈಕ್ಕಂಬಡೆದಂ || (ಕೆ.ನೃ.ವಿ. ೧೧.೫೨)
     ಆದರೆ ಕೆಲವು ಇತಿಹಾಸಕಾರರು (ಡಿ ಲಾ ಟೂರ್, ರೋಬ್ಸನ್, ಕಿರ್ಮಾನಿ, ವಿಲ್ಕ್ಸ್) ಚೆನ್ನಬಸವನಾಯಕನನ್ನು ರಾಣಿ ವೀರಮ್ಮಾಜಿಯೇ ಕೊಲ್ಲಿಸಿದಳೆಂದು ಹೇಳುತ್ತಾರೆ. ಆದರೆ ಹೇಗೋ ಸಾವಿನಿಂದ ಚೆನ್ನಬಸವನಾಯಕ ಪಾರಾದನೆಂದು, ಆತನಿಗೆ ಅಧಿಕಾರ ಮರಳಿಸುವ ನೆಪದಲ್ಲಿ ಕೆಳದಿ ರಾಜ್ಯವನ್ನು ಕೈವಶ ಮಾಡಿಕೊಳ್ಳಲು ಚಿತ್ರದುರ್ಗದ ಮದಕರಿನಾಯಕ ಪ್ರಯತ್ನಿಸಿ ವಿಫಲನಾದನೆಂದು, ನಂತರ ಇದೇ ರೀತಿಯ ಪ್ರಯತ್ನವನ್ನು ಹೈದರಾಲಿ ಮಾಡಿದನೆಂದು ಇವರುಗಳು ಬರೆಯುತ್ತಾರೆ. ಹೈದರ್ ನಾಮಾದ ಪ್ರಕಾರ ಚಿತ್ರದುರ್ಗದ ಮದಕರಿನಾಯಕ ಹೈದರಾಲಿಗೆ ಚೆನ್ನಬಸವನಾಯಕನ ವೃತ್ತಾಂತ ತಿಳಿಸಿ ಒಂದು ರಹಸ್ಯ ಕಾರ್ಯತಂತ್ರ ರೂಪಿಸಿದರು. ಅದರಂತೆ ಚೆನ್ನಬಸವಪ್ಪನಾಯಕನಿಗೆ ಕೆಳದಿಯ ರಾಜ್ಯದ ಅಧಿಕಾರ ಮರಳಿ ಕೊಡಿಸುವ ನೆಪದಲ್ಲಿ ನಕಲಿ ಚೆನ್ನಬಸವಪ್ಪನಾಯಕನನ್ನು ಮುಂದಿಟ್ಟುಕೊಂಡು ಮದಕರಿನಾಯಕ ಮತ್ತು ಹೈದರಾಲಿ ಬಿದನೂರು ಕೋಟೆಯೆಡೆಗೆ ಧಾವಿಸಿದರೆಂದು ಹೇಳಲಾಗಿದೆ. ಇದರಲ್ಲಿ ಚೆನ್ನಬಸವನಾಯಕನನ್ನು false Raja’  ಎಂದೇ ಉಲ್ಲೇಖಿಸಲಾಗಿದೆ. (ಹೈ.ನಾ. ೨೬-೨೭).
     ಡಿ ಲಾ ಟೂರ್ ಪ್ರಕಾರ ರಾಣಿ ವೀರಮ್ಮಾಜಿಯ ಮಗನೇ ಹೈದರಾಲಿಯನ್ನು ಆತನ ಬಿಸ್ನಗರ (ಬಸವಾಪಟ್ಟಣ) ಕೋಟೆಯಲ್ಲಿ ಭೇಟಿ ಮಾಡಿ ತಾನು ಈಗ ಪ್ರಾಪ್ರ ವಯಸ್ಸಿಗೆ ಬಂದರೂ ತನಗೆ ರಾಜ್ಯಾಧಿಕಾರ ಕೊಡದೇ ರಾಣಿಯೇ ಆಡಳಿತ ನಡೆಸುತ್ತಿರುವ ಬಗ್ಗೆ ದೂರಿ ಅಧಿಕಾರ ಪಡೆಯಲು ಸಹಕರಿಸಲು ಕೋರುತ್ತಾನೆ. ಹೈದರಾಲಿ ರಾಣಿ ವೀರಮ್ಮಾಜಿಗೆ ಪತ್ರ ಬರೆದು ತನ್ನ ಮುಂದೆ ಹಾಜರಾಗಿ ವಿವರಣೆ ಕೊಡಲು ಹೇಳುತ್ತಾನೆ. ರಾಣಿ ವೀರಮ್ಮಾಜಿ ತಾನೇ ರಾಣಿಯಾಗಿದ್ದು ತನ್ನ ಮೇಲೆ ಹಕ್ಕು ಚಲಾಯಿಸಲು ಇತರರಿಗೆ ಅಧಿಕಾರವಿಲ್ಲವೆಂದು ಉತ್ತರಿಸುತ್ತಾಳೆ. ಯುದ್ಧ ಸಂಭವಿಸುತ್ತದೆ. (೧.೮೧-೮೨).
     ರೋಬ್ಸನ್ ಹೇಳುವಂತೆ, ಮದಕರಿನಾಯಕನಿಂದ ಚೆನ್ನಬಸವನಾಯಕನ ವೃತ್ತಾಂತ ತಿಳಿದ ಹೈದರಾಲಿಗೆ ಬಿದನೂರು ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವೆಂದು ಕಂಡಿತು. ಮದಕರಿನಾಯಕ, ಹೈದರಾಲಿ ಮತ್ತು ಚೆನ್ನಬಸವನಾಯಕರ ನಡುವೆ ರಹಸ್ಯ ಒಪ್ಪಂದವೇರ್ಪಟ್ಟು, ಅದರಂತೆ ಚೆನ್ನಬಸವನಾಯಕನಿಗೆ ಕೆಳದಿ ರಾಜ್ಯಾಧಿಕಾರ ಕೊಡಿಸುವುದಕ್ಕೆ ಪ್ರತಿಯಾಗಿ ೪೦ ಲಕ್ಷ ರೂ.ಗಳನ್ನು ಆತ ಕೊಡಬೇಕೆಂದು ನಿಗದಿಯಾಯಿತು. ಚೆನ್ನಬಸವನಾಯಕ ಮರುಮಾತಿಲ್ಲದೆ ಒಪ್ಪಿ, ನಂತರ ಯುದ್ಧ ಸಂಭವಿಸಿತು.
     ಕಿರ್ಮಾನಿಯ ಪ್ರಕಾರ ರಾಣಿ ವೀರಮ್ಮಾಜಿ ವಿಷಯಾಸಕ್ತೆಯಾಗಿದ್ದು, ಇದರಿಂದ ರಾಜ್ಯದಲ್ಲಿ ಅರಾಜಕತೆಯ ವಾತಾವರಣ ಉಂಟಾಗಿತ್ತು. ಹೈದರಾಲಿ ತನ್ನ ಗೂಢಚಾರರಿಂದ ಮಾಹಿತಿ ಸಂಗ್ರಹಿಸಿದ್ದಲ್ಲದೆ, ಮದಕರಿನಾಯಕನ ಮಾಹಿತಿಯಂತೆ ಚೆನ್ನಬಸವನಾಯಕ ಬದುಕಿದ್ದಾನೆಂಬ ಸಂಗತಿಗೆ ಒತ್ತು ಕೊಟ್ಟು ಅವನಿಗೆ ರಾಜ್ಯಾಧಿಕಾರ ವಹಿಸಿಕೊಡುವ ನೆಪದಲ್ಲಿ ಕೆಳದಿ ರಾಜ್ಯವನ್ನು ಕೈವಶಮಾಡಿಕೊಳ್ಳಲು ನಿರ್ಧರಿಸಿದ.


     ಹೈದರಾಲಿ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದ ಚಾಣಾಕ್ಷ. ತನ್ನ ಗೂಢಚಾರರಿಂದ ಕೆಳದಿಯಲ್ಲಿನ ರಾಜಪರಿವಾರದಲ್ಲಿನ ಭಿನ್ನಮತಗಳು, ಒಳಮಸಲತ್ತುಗಳ ವಿವರ ಸಂಗ್ರಹಿಸಿದ್ದಲ್ಲದೆ, ಕೆಳದಿ ಅರಸರಿಂದ ಪರಾಜಿತನಾಗಿದ್ದ ಚಿತ್ರದುರ್ಗದ ಮದಕರಿನಾಯಕನ ನೆರವಿನೊಂದಿಗೆ, ಚೆನ್ನಬಸವನಾಯಕ ಬದುಕಿದ್ದಾನೆಂದು ಸುದ್ದಿ ಹಬ್ಬಿಸಿ ಮಾರುವೇಷದ ಚೆನ್ನಬಸವನಾಯಕನನ್ನು ಮುಂದಿರಿಸಿಕೊಂಡು ಬಿದನೂರು ಕೋಟೆಯ ಮೇಲೆ ದಾಳಿ ಮಾಡಿದ. ರಾಜಮನೆತನಕ್ಕೆ ಕೇಡು ಬಯಸಿದ್ದ ಮಂತ್ರಿ ಲಿಂಗಣ್ಣ ಕುಂಸಿಯ ಸೆರೆಮನೆಯಲ್ಲಿದ್ದು, ಆತನ ಕಾರಸ್ಥಾನಗಳೂ ಹೈದರನ ನೆರವಿಗೆ ಬಂದಿತು. ವಿಲ್ಕ್ಸ್ ಪ್ರಕಾರ ಹೈದರನ ಸೈನ್ಯದಲ್ಲಿ ೬೦೦೦೦ ಪದಾತಿಗಳು ಮತ್ತು ಅಶ್ವದಳ, ೩೦೦ ಆನೆಗಳು, ಫ್ರೆಂಚ್ ಅಧಕಾರಿಗಳನ್ನೊಳಗೊಂಡಂತೆ ಒಂದು ಪ್ರೆಂಚ್ ಸೈನ್ಯದ ತುಕಡಿಯಿತ್ತು. ಯುದ್ಧದಿಂದ ಜನಸಾಮಾನ್ಯರಿಗೆ ಆಗುವ ತೊಂದರೆ ತಪ್ಪಿಸಲು ವೀರಮ್ಮಾಜಿ ಹೈದರನಿಗೆ ವರ್ಷಕ್ಕೆ ಒಂದು ಲಕ್ಷ ಪಗೋಡ ಕೊಡುವುದಾಗಿ ಹೇಳಿ ಸಂಧಿಗೆ ಆಹ್ವಾನಿಸಿದಳು. ಆದರೆ ಹೈದರ್ ವೀರಮ್ಮಾಜಿ ತನಗೆ ಶರಣಾದಲ್ಲಿ ಆಕೆಯನ್ನು ಶ್ರೀರಂಗಪಟ್ಟಣದ ಕೋಟೆಯಲ್ಲಿ ಹಿರಿಯ ಸ್ಥಾನ ನೀಡಿ ಗೌರವದಿಂದ ಬಾಳಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದು ಆಕೆಯ ಸ್ವಾಭಿಮಾನವನ್ನು ಕೆಣಕಿತು. ಯುದ್ಧಕ್ಕೆ ನಿರ್ಧರಿಸಿದ ಆಕೆಗೆ ಸವಣೂರಿನ ಹಕೀಂ ಖಾನನ ೨೦೦೦ ಅಶ್ವಗಳು ಮತ್ತು ೪೦೦೦ ಪದಾತಿ ದಳದ ನೆರವೂ ಸಿಕ್ಕಿತು. ವೀರಾವೇಶದಿಂದ ಕಾದಾಡಿದ ಅಕೆ ಹೈದರನನ್ನು ಸೋಲಿಸಿ ಹಿಮ್ಮೆಟ್ಟಿಸಿದಳು. ಯುದ್ಧದಲ್ಲಿ ನೇರವಾಗಿ ಗೆಲ್ಲಲು ಅಸಾಧ್ಯವೆಂದು ಮನಗಂಡ ಹೈದರಾಲಿ ಪೀರ್ ಜಾದೇರ ಮೂಲಕ, ರಾಜದ್ರೋಹಿಗಳ ನೆರವಿನಿಂದ ವೀರಮ್ಮಾಜಿಯನ್ನು ಮೋಸದಿಂದ ಸೆರೆ ಹಿಡಿದದ್ದರಿಂದ ಕೆಳದಿ ಸಾಮ್ರಾಜ್ಯ ಅಂತ್ಯ ಕಾಣುವಂತಾಯಿತು. ಕುಂಸಿಯಲ್ಲಿ ಸೆರೆಯಾಳಾಗಿದ್ದ ಮಂತ್ರಿ ಲಿಂಗಣ್ಣ ಬಿದನೂರು ಕೋಟೆಯ ರಹಸ್ಯ ಮಾರ್ಗವನ್ನು ಹೈದರನಿಗೆ ತಿಳಿಸಿದ್ದನೆಂದು ಹೇಳುತ್ತಾರೆ. ಕೆಳದಿಯ ಡಾ. ಗುಂಡಾಜೋಯಿಸರು ೮೦ ವಿವಿಧ ಆಕರ ಗ್ರಂಥಗಳನ್ನು ಪರಿಶೀಲಿಸಿ ಬರೆದ 'ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ' ಎಂಬ ಅಧ್ಯಯನಾರ್ಹ ಪುಸ್ತಕ ಈ ವಿಚಾರದಲ್ಲಿ ಅಮೂಲ್ಯ ಮಾಹಿತಿಗಳನ್ನು  ಕ್ರೋಢೀಕರಿಸಿರುವುದು ಇತಿಹಾಸಾಸಕ್ತರಿಗೆ ಅನುಕೂಲವಾಗಿದೆ.
     ವೀರಮ್ಮಾಜಿ ಸೆರೆ ಸಿಕ್ಕ ನಂತರದಲ್ಲಿ ರಾಜನಿಷ್ಠ ಪ್ರಜೆಗಳು ಅಲ್ಲಲ್ಲಿ ಹೈದರನ ವಿರುದ್ಧ ದಂಗೆಯೆದ್ದಾಗ ಹೈದರ್ ದಂಗೆಯನ್ನಡಗಿಸಲು ವರ್ತಿಸಿದ ರೀತಿಯ ಬಗ್ಗೆ ರೋಬ್ಸನ್ ಹೇಳಿರುವುದು ಹೀಗೆ: He put to death one thousand of the principal inhabitants of Biddenoor, in the most cruel, inhuman  method he could invent; their mangled limbs were suspended on every tree in the environs of the city. His blood thirsty rage not being satisfied with the above cruelties, he ordered the chief  persons of every town or village of whom he had the least suspicion, to be butchered in like manner; besides many others, for the most trivial offences had their noses or ears cut off. . .”  ಇಂತಹ ಸ್ಥಿತಿಯಲ್ಲಿ ಸೆರೆ ಸಿಕ್ಕ ವೀರಮ್ಮಾಜಿಯನ್ನು ಹೇಗೆಲ್ಲಾ ಅವಮಾನಿತಗೊಳಿಸಲಾಯಿತೆಂದು ಊಹಿಸುವುದು ಕಷ್ಟವಾಗಲಾರದು. ಆಕೆ ಎಷ್ಟು ದೈಹಿಕ, ಮಾನಸಿಕ ಹಿಂಸೆಗಳನ್ನು ಅನುಭವಿಸಿರಬಹುದು, ಜರ್ಜರಿತಳಾಗಿರಬಹುದು, ಮೂಕವಾಗಿ ರೋದಿಸಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದು ಅಶಕ್ಯವೇ ಸರಿ.
     ಬಿದನೂರು ಕೋಟೆಯನ್ನು ಕುಟಿಲತನದಿಂದ ವಶಪಡಿಸಿಕೊಂಡ ಹೈದರ್ ಸುಮಾರು ೬೩೦ ಕೋಟಿ  ಗದ್ಯಾಣಗಳನ್ನು ದೋಚಿದನೆಂದು ಇತಿಹಾಸ ಹೇಳುತ್ತದೆ. ಕೆಳದಿ ಎಷ್ಟು ಸಂಪದ್ಭರಿತವಾಗಿತ್ತೆಂಬುದು ಇದರಿಂದ ಗೊತ್ತಾಗುತ್ತದೆ. ಬಿದನೂರು ವಶವಾದ ನಂತರ ಆ ನಗರಕ್ಕೆ 'ಹೈದರ್ ನಗರ'ವೆಂದು ಮರುನಾಮಕರಣ ಮಾಡಿದ ಹೈದರ್ ಅದನ್ನು ತನ್ನ ಸೈನಿಕನೆಲೆಯಾಗಿಸಿಕೊಂಡನು. (ಮ.ಕೆ.ಸಾ.-ಪು.೮). ಟಿಪ್ಪು ಹತನಾದ ನಂತರದಲ್ಲಿ ಆ ಹೈದರ್ ನಗರ ಪುನಃ ಬಿದನೂರಾಯಿತು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿಗೆ ಸೇರಿದ ಈ ಬಿದನೂರನ್ನು ನಗರ ಎಂತಲೂ ಈಗ ಕರೆಯುತ್ತಿದ್ದು, ಹೊಸನಗರದಿಂದ ಸುಮಾರು ೧೨ ಕಿ.ಮೀ. ದೂರದಲ್ಲಿದೆ. ಈಗ ಅವಶೇಷವಾಗಿ ಉಳಿದಿರುವ ಕೋಟೆ ವೀಕ್ಷಣೀಯ ಸ್ಥಳವಾಗಿದ್ದು, ಒಂದೊಮ್ಮೆ ಹೇಗಿದ್ದಿರಬಹುದೆಂಬ ಕಲ್ಪನೆ ಕೊಡುತ್ತದೆ. ಕೋಟೆಯ ಕುರಿತು ಹೆಚ್ಚಿನ ವಿವರಣೆಯನ್ನು ಲೇಖನ ವಿಸ್ತಾರವಾಗುವ ಕಾರಣದಿಂದ ಇಲ್ಲಿ ಮುಂದುವರೆಸುವುದಿಲ್ಲ. ಬಿದನೂರು ಕೋಟೆಯ ಅವಶೇಷದ ಕೆಲವು ಚಿತ್ರಗಳನ್ನು ಗಮನಿಸಿ. (ಸುಮಾರು ೫-೬ ವರ್ಷಗಳ ಹಿಂದೆ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದಾಗ ತೆಗೆದಿದ್ದ ಫೋಟೋಗಳಿವು).
     ಹೈದರನಿಂದ ಶಿರಾ ಮತ್ತು ಮಧುಗಿರಿಗಳನ್ನು ಪೇಶ್ವೆಯವರು ವಶಪಡಿಸಿಕೊಂಡ ನಂತರದಲ್ಲಿ ಮಧುಗಿರಿಯಲ್ಲಿ ಬಂದೀಖಾನೆಯಲ್ಲಿದ್ದ ಕೆಳದಿ ರಾಣಿ ವೀರಮ್ಮಾಜಿ ಮತ್ತು ಯುವರಾಜನನ್ನು ಗೌರವಾದರಗಳಿಂದ ಬಿಡುಗಡೆಗೊಳಿಸಿದರೆಂದು ೨೩-೭-೧೭೬೭ರ ದಿನಾಂಕದ ದಾಖಲೆಯಿದೆ. ಈ ದಾಖಲೆಯಲ್ಲಿ ಕೆಳದಿಯ King and Queen’ ಎಂದು ಉಲ್ಲೇಖಿಸಲಾಗಿದೆ. ಮರಾಠರು ಕೆಳದಿಯ ಮೇಲೆ ಹಿಂದೆ ಪದೇ ಪದೇ ದಂಡೆತ್ತಿ ಬರುತ್ತಿದ್ದರೂ, ಅವರನ್ನು ಶತ್ರುಗಳಾಗಿ ಕಂಡಿದ್ದರೂ, ಸ್ತ್ರೀಯರನ್ನೂ, ಅಸಹಾಯಕರನ್ನೂ ಗೌರವದಿಂದ ಕಾಣುವ ಭಾರತೀಯ ಸಂಸ್ಕೃತಿಯ ಪರಿಪಾಲಕರಂತೆ ವೀರಮ್ಮಾಜಿಯನ್ನು ಗೌರವದಿಂದ ಕಂಡಿದ್ದು ಶ್ಲಾಘನೀಯವಾಗಿದೆ. ನಂತರದಲ್ಲಿ ವೀರಮ್ಮಾಜಿ ಪೂನಾಕ್ಕೆ ಹೋಗುವ ಮಾರ್ಗದಲ್ಲಿ ಬಳ್ಳಾರಿ ಜಿಲ್ಲೆಯ ಉಜನಿ ಎಂಬ ಗ್ರಾಮದಲ್ಲಿ ಅನಾಥಳಂತೆ ಇಹಲೋಕ ತ್ಯಜಿಸಿದಾಗ ವಿಷಯ ತಿಳಿದ ಗ್ರಾಮಸ್ಥರೇ ಆಕೆಯ ಅಂತ್ಯ ಸಂಸ್ಕಾರ ನಡೆಸಿ ಉಜನಿ ಮಠದ ಆವರಣದಲ್ಲಿ ಸಮಾಧಿ ಮಾಡಿದರು. ಈ ರೀತಿಯಲ್ಲಿ ಎರಡೂವರೆ ಶತಮಾನಗಳ ಕಾಲ ವೈಭವದಿಂದ ಬಾಳಿದ ಕೆಳದಿ ಸಂಸ್ಥಾನ ಮಣ್ಣುಪಾಲಾಯಿತು.
-ಕ.ವೆಂ.ನಾಗರಾಜ್.

ಆಧಾರ:
1. ಕವಿ ಲಿಂಗಣ್ಣನ ಕೆಳದಿನೃಪ ವಿಜಯ
4. The History of Hyder Shah, Alias Hyder Ali Kan Bahadur: Or, New Memoirs ...  By M. M. D. L. T. (Maistre de La Tour)
5. ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ (ಲೇ. ಕೆಳದಿ ಗುಂಡಾಜೋಯಿಸ್)
6. ಮರೆಯಲಾಗದ ಕೆಳದಿ ಸಾಮ್ರಾಜ್ಯ (ಲೇ. ಡಾ. ವೆಂಕಟೇಶ ಜೋಯಿಸ್)
7. The glorious Keladi (Dr. Gundajois)
8. Shimoga District Gazetteer
9. Life of Hyder Ali (Robson Captain Francis)

ಗುರುವಾರ, ಡಿಸೆಂಬರ್ 19, 2013

ಸತ್ಯದ ಸುತ್ತ ಒಂದು ಸುತ್ತು

     'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಮತ್ತೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' - ಇದು ನ್ಯಾಯಾಲಯಗಳಲ್ಲಿ ಸಾಕ್ಷ್ಯ ಹೇಳುವವರಿಂದ ಮಾಡಿಸಲಾಗುವ ಪ್ರಮಾಣವಚನ. ಆದರೆ ಆ ರೀತಿ ಪ್ರಮಾಣ ಮಾಡಿದವರೆಲ್ಲರೂ ಸತ್ಯ ಹೇಳುತ್ತಾರೋ ಇಲ್ಲವೋ ಗೊತ್ತಿಲ್ಲ. ಇರಲಿ ಬಿಡಿ. ಅಷ್ಟಕ್ಕೂ ಈ ಸತ್ಯ ಎಂದರೆ ಏನು? ಸತ್ಯಕ್ಕೆ ಸಾಮಾನ್ಯ ಅರ್ಥ ಕೊಡಬೇಕೆಂದರೆ ವಾಸ್ತವ ಸಂಗತಿಗೆ ಅನುಗುಣವಾಗಿರುವುದು, ಒಂದು ಆದರ್ಶ ಅಥವ ಮಾನದಂಡ ಅಥವ ಮೂಲವಿಚಾರಕ್ಕೆ ಅನುರೂಪವಾಗಿರುವುದು ಎನ್ನಬಹುದು. ಸತ್ಯ ಎಂದು ತಿಳಿದಿರುವುದಕ್ಕೆ ವಿರುದ್ಧವಾದುದನ್ನು ಸುಳ್ಳು ಎನ್ನಬಹುದು. ಸತ್ಯದ ನಡಿಗೆ ನಿಧಾನ. ಸತ್ಯ ಒಂದು ಹೆಜ್ಜೆ ಮುಂದಿಡುವಷ್ಟರಲ್ಲಿ, ಸುಳ್ಳು ಪ್ರಪಂಚವನ್ನು ಒಂದು ಸುತ್ತು ಸುತ್ತಿ ಬಂದುಬಿಡಬಹುದು. ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಗೊಬೆಲ್ಸ್ ಸಿದ್ಧಾಂತ. ಆದರೆ, ಸುಳ್ಳನ್ನು ಸತ್ಯವೆಂದು ನಂಬಿಸಬಹುದಷ್ಟೆ ಹೊರತು, ನಿಜವಾದ ಸತ್ಯ ಸತ್ಯವಾಗಿಯೇ ಉಳಿದಿರುತ್ತದೆ ಎಂಬುದೇ ಸತ್ಯ!
     ಗುಣಗಳ ತಾಯಿಯೆನ್ನಲಾಗುವ ಸತ್ಯವನ್ನು ವಿವಿಧ ಹಿನ್ನೆಲೆಗಳಲ್ಲಿ ಚರ್ಚಿಸಲಾಗುತ್ತಿದೆ, ವಿಮರ್ಶಿಸಲಾಗುತ್ತಿದೆ. ಅದು ತತ್ವದರ್ಶನವಾಗಬಹುದು, ಧಾರ್ಮಿಕವಾಗಬಹುದು, ವೈಜ್ಞಾನಿಕವಾಗಿ ಆಗಬಹುದು ಅಥವ ದಿನನಿತ್ಯದ ಜೀವನದ ಅನುಭವಗಳಾಗಬಹುದು. ಸತ್ಯದ ವಿವಿಧ ಮಗ್ಗಲುಗಳು ವಿದ್ವಾಂಸರ, ದಾರ್ಶನಿಕರ, ಧಾರ್ಮಿಕ ಪಂಡಿತರ ಚರ್ಚೆಯ ವಿಷಯವಾಗಿದೆ. ಸತ್ಯ ಯಾವುದು, ಅದನ್ನು ಕಾಣುವುದು ಹೇಗೆ ಎಂಬ ಬಗ್ಗೆ ಸಹ ತಿಳಿದವರು ಉಪದೇಶಿಸುವುದನ್ನು ಕಾಣುತ್ತೇವೆ. ಜೀವನದ ಉದ್ದೇಶವೇ ಸತ್ಯದ ಹುಡುಕಾಟ ಎನ್ನುವುದನ್ನೂ ಕೇಳಿದ್ದೇವೆ. ಒಟ್ಟಾರೆಯಾಗಿ ಈ ಸತ್ಯ ಅನ್ನುವುದು ಪರೀಕ್ಷೆಗೆ ಒಳಪಟ್ಟಷ್ಟು ಇತರ ಸಂಗತಿಗಳು ಒಳಪಟ್ಟಿರಲಾರವು. ವಿಚಿತ್ರವೆಂದರೆ, ನಿಜವಾದ ಸತ್ಯ ಸತ್ಯವಾಗಿಯೇ ಇರುತ್ತದೆ, ಅದನ್ನು ಸುಳ್ಳಾಗಿ ಅರ್ಥೈಸಿದರೂ ಅರ್ಥೈಸಿದವರಿಗೆ ಅದರ ಲಾಭ/ನಷ್ಟಗಳೇ ಹೊರತು ಸತ್ಯಕ್ಕೆ ಅದರಿಂದ ಏನೂ ಬಾಧಕವಿಲ್ಲ. ಎಂತಹ ವಿಚಿತ್ರ ಸತ್ಯವಿದು! ಒಂದು ಉದಾಹರಣೆ ನೋಡೋಣ. ಬೆಂಕಿ ಸುಡುತ್ತದೆ, ಏಕೆಂದರೆ ತನ್ನ ಸಂಪರ್ಕಕ್ಕೆ ಬಂದುದನ್ನು ಸುಡುವುದೇ ಅದರ ಗುಣ. ಒಂದು ದೇಶದಲ್ಲಿ ಮಾತ್ರ ಸುಡುತ್ತದೆ, ಇನ್ನೊಂದು ದೇಶದಲ್ಲಿ ಸುಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಎಲ್ಲೆಡೆಯಲ್ಲೂ ಅದೇ ಗುಣವಿರುತ್ತದೆ. 'ಇಲ್ಲ, ಬೆಂಕಿ ಸುಡುವುದಿಲ್ಲ, ಸುಡಬಾರದು' ಎಂದು ಎಷ್ಟೇ ಪ್ರಖರವಾಗಿ ವಾದ ಮಾಡಿದರೂ ಬೆಂಕಿಯ ಸುಡುವ ಗುಣ ಬದಲಾಗದು. 'ಬೆಂಕಿ ಇನ್ನು ಮುಂದೆ ನಮ್ಮ ದೇಶದಲ್ಲಿ ಸುಡಬಾರದು' ಎಂದು ಒಂದು ದೇಶದ ಜನರೆಲ್ಲರೂ ಒಟ್ಟಾಗಿ ನಿರ್ಧರಿಸಿದರೂ, ಸರ್ಕಾರ ಆದೇಶ ಮಾಡಿದರೂ ಬೆಂಕಿ ಸುಡದೇ ಇರುತ್ತದೆಯೇ? ಹೀಗಾಗಿ ಬೆಂಕಿ ಸುಡುತ್ತದೆ ಎಂಬುದು ಪ್ರತ್ಯಕ್ಷವಾಗಿ, ಪ್ರಮಾಣವಾಗಿ ಕಂಡು ಬರುವ, ಅನುಭವಕ್ಕೆ ಸಿಗುವ, ಯಾವುದೇ ಕಾರಣಕ್ಕೂ ಬದಲಾಗದ ಸತ್ಯ. ಬೆಂಕಿಯ ವಿಷಯದಲ್ಲಿ ಹೇಳಿದಂತೆ 'ಇದೇ ಸತ್ಯ' ಎಂದು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹೇಳಲಾಗದಿರುವುದು ಸಮಸ್ಯೆಗಳ ಉದ್ಭವಕ್ಕೆ ಕಾರಣ ಎಂಬುದೂ ಸಹ ಸತ್ಯವೇ!
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ನಿಜವರಿತು ನಡೆವ ಹಿರಿಯ ಮೂಢ ||
     ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನು ನಿರ್ಧರಿಸಲು ಯಾವುದಾದರೂ ಮಾನದಂಡವಿರಬೇಕು. ಅಂತಹ ಮಾನದಂಡ ಯಾವುದು? ಇನ್ನೊಂದು ಸಮಸ್ಯೆಯೂ ಇಲ್ಲಿ ಬರುತ್ತದೆ. ಒಬ್ಬರು ಒಪ್ಪಿದ್ದನ್ನು ಇನ್ನೊಬ್ಬರು ಒಪ್ಪದಿರಬಹುದು. ಆಳವಾಗಿ ವಿಶ್ಲೇಷಿಸಿದರೆ ಇಂತಹ ಹಲವಾರು ಮಾನದಂಡಗಳು ಯಾವುದೋ ಒಬ್ಬ ಪ್ರಚಂಡ ಬುದ್ಧಿಮತ್ತೆಯುಳ್ಳ ವ್ಯಕ್ತಿಯ ಅಥವ ಸಮೂಹದ ಮಥನ-ಮಂಥನಗಳಿಂದ ಒಡಮೂಡಿದ್ದಾಗಿರುತ್ತದೆ ಎಂಬುದನ್ನು ಗುರುತಿಸುವುದು ಕಷ್ಟವಲ್ಲ. ಮಾನವನಿರ್ಮಿತ ಮಾನದಂಡಗಳು ಸದಾಕಾಲಕ್ಕೆ ನಿಲ್ಲಲಾರವು ಅಥವ ಬದಲಾವಣೆಗಳಿಗೆ ಈಡಾಗುತ್ತಲೇ ಇರುತ್ತವೆ. ಈ ವಿಶಾಲ ಬ್ರಹ್ಮಾಂಡ, ಜೀವವೈವಿಧ್ಯ ಮತ್ತು ದೇವರುಗಳಿಗೆ ಕುರಿತಂತೆ ಇದೇ ಸತ್ಯವೆಂದು ನಿಖರವಾಗಿ ಹೇಳುವುದು ಕಷ್ಟವೇ ಸರಿ. ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ತಾರ್ಕಿಕವಾಗಿ ಪುಟ್ಟ ಮೆದುಳಿನ ಮನುಷ್ಯ ಇವುಗಳ ಕುರಿತು ತಿಳಿಯಲು ಪ್ರಯತ್ನಿಸುತ್ತಲೇ ಇದ್ದಾನೆ. ಪೂರ್ಣ ಸತ್ಯವೆನ್ನುವುದು ಇನ್ನೂ ಗೊತ್ತಾಗಬೇಕಿದೆ. ವೈಜ್ಞಾನಿಕವಾಗಿಯೂ ಸಹ ಬೃಹತ್ ಬ್ರಹ್ಮಾಂಡದ ವಿಸ್ತಾರ, ವಿಸ್ಮಯಗಳನ್ನು ತಿಳಿಯಲಾಗಿಲ್ಲ. ಹೀಗಿರಬಹುದು ಎಂಬ ಕಲ್ಪನೆ ಮಾತ್ರ ಮಾಡಬಹುದು. ಧಾರ್ಮಿಕವಾಗಿ ಸಹ ಜಗತ್ತು, ಜೀವ, ದೇವರನ್ನು ಸಂಪೂರ್ಣ ಸ್ಪಷ್ಟವಾಗಿ ಅರಿಯಲಾಗಿಲ್ಲವೆಂದೇ ಹೇಳಬೇಕು. ವಿವಿಧ ಧರ್ಮಗಳು, ಪಂಥಗಳು, ಪಂಗಡಗಳು ವಿವಿಧ ರೀತಿಗಳಲ್ಲಿ ಇವುಗಳನ್ನು ವಿಶ್ಲೇಷಿಸುತ್ತಿರುವುದೇ ಇದಕ್ಕೆ ಉದಾಹರಣೆ.
     ಎಲ್ಲಿ ವೈಚಾರಿಕ ಸ್ವಾತಂತ್ರ್ಯಕ್ಕೆ ಅವಕಾಶವಿರುವುದಿಲ್ಲವೋ ಅಲ್ಲಿ ಸತ್ಯಾನ್ವೇಷಣೆ ಕಷ್ಟ. ಸತ್ಯವನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡುವುದಾದರೆ, ಧಾರ್ಮಿಕ ವಿಚಾರಗಳು ಜಗತ್ತು, ಜೀವ ಮತ್ತು ದೇವರ ಬಗ್ಗೆ ಕೆಲವು ಸಿದ್ಧಾಂತಗಳನ್ನು ಹೊಂದಿದ್ದು ಮಾನವನ ಧರ್ಮ ಎಂದರೆ ಏನು, ಅವನ ದೈನಂದಿನ ನಡವಳಿಕೆಗಳು ಹೇಗಿರಬೇಕು, ಯಾವ ಸಂಪ್ರದಾಯಗಳನ್ನು ಪಾಲಿಸಬೇಕು ಎಂದು ಹೇಳುತ್ತವೆ. ಈ ವಿಚಾರಗಳು ಮತ್ತು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯಗಳ ಪೈಕಿ ಕೆಲವು ಅರ್ಥಹೀನವೆನಿಸಿದರೂ, ಅಸಂಬದ್ಧವೆನಿಸಿದರೂ ಪಾಲಿಸಿಕೊಂಡು ಬರುತ್ತಿರುವವರೇ ಜಾಸ್ತಿ. ಇದೇನೇ ಇರಲಿ, 'ಇದು ನಿಜವಾದ ಧರ್ಮ, ನಾವು ನಂಬಿರುವ ದೇವರೇ ನಿಜವಾದ ದೇವರು. ಇದನ್ನು ಎಲ್ಲರೂ ಒಪ್ಪಲೇಬೇಕು, ಪಾಲಿಸಲೇಬೇಕು' ಎನ್ನುವವರ ವಾದ, ಒತ್ತಾಯದಿಂದ ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರುವುದಾಗುತ್ತದೆ. ಭಿನ್ನಾಭಿಪ್ರಾಯ, ಸಮಸ್ಯೆ, ಸಂಘರ್ಷ, ಕ್ರಾಂತಿಗಳಿಗೆ ಮೂಲ ಕಾರಣಗಳು ಇವೇ ಅಗಿವೆ. 'ಋಷಿ ಮೂಲ, ನದಿ ಮೂಲಗಳನ್ನು ಹುಡುಕಬಾರದು' ಎಂಬ ಸವಕಲಾದರೂ, ಪ್ರಚಲಿತವಾದ ಮಾತಿನಲ್ಲಿ ಏಕೆ ಎಂಬ ಪ್ರಶ್ನೆಗೆ ಉತ್ತರ ಹೇಳಲಾಗದಂತಹ ಸಂಪ್ರದಾಯಗಳನ್ನು ಪ್ರಶ್ನಿಸಬಾರದು ಎಂಬ ಧ್ವನಿ ಹೊರಡುತ್ತದೆಯಲ್ಲವೇ? ವೈಚಾರಿಕತೆಗೆ ಅಡ್ಡಿಯಾದಾಗ ಸತ್ಯ ಕಾಣದಾಗುತ್ತದೆ. ನಿಜ, ಮಾನವನಿಗಿರುವ ಇತಿಮಿತಿಗಳಲ್ಲಿ ಎಲ್ಲವನ್ನೂ ಒರೆಗೆ ಹಚ್ಚಲಾಗುವುದಿಲ್ಲ, ಇದು ಹೀಗೆಯೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಇದುವರೆವಿಗೆ ಹಿಂದಿನವರು ಹೇಳಿದ, ಒಪ್ಪಿದ ಸಂಗತಿಗಳನ್ನು ಅನುಭವದೊಂದಿಗೆ ಸೇರಿಸಿಕೊಂಡು ಆತ್ಮ ಒಪ್ಪಿದ ರೀತಿಯಲ್ಲಿ ನಡೆಯುವುದು ಸರಿಯಾದ ಮಾರ್ಗ. ಆತ್ಮ ಒಪ್ಪುವ ರೀತಿಯಲ್ಲಿ ನಡೆಯುವುದಕ್ಕೂ ಒಂದು ಮಾನದಂಡವಿರಲೇಬೇಕು, ಅದೇ ಸತ್ಯ. ಆತ್ಮ ಒಪ್ಪುವ ರೀತಿ ಯಾವುದೆಂದು ತಿಳಿಯಲು ಮಾಡುವ ಪ್ರಯತ್ನವೇ ಸತ್ಯಾನ್ವೇಷಣೆ. ಶ್ರವಣ, ಮನನ, ಮಥನಗಳೊಂದಿಗೆ ಅನುಭವ ಸೇರಿದರೆ ಸತ್ಯಕ್ಕೆ ಹತ್ತಿರವಾದ ಸಂಗತಿ ಗೋಚರವಾದೀತು.
     'ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ' ಎಂಬ ಮಾತು ಸತ್ಯ ಹೇಳುವುದು ಮತ್ತು ಕೇಳುವುದು ಎಷ್ಟು ಕಷ್ಟ ಎಂಬುದನ್ನು ತೋರಿಸುತ್ತದೆ. ನಿಜ, ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವೇ ಸರಿ. ಒಬ್ಬ ಕಳ್ಳ ಅಕಾಸ್ಮಾತ್ತಾಗಿ ಒಬ್ಬ ಪಂಡಿತರ ಉಪನ್ಯಾಸ ಕೇಳಿ ಪ್ರಭಾವಿತನಾದನಂತೆ. ಉಪನ್ಯಾಸದ ನಂತರ ಪಂಡಿತರಲ್ಲಿ ತನ್ನ ಕಷ್ಟ ಹೇಳಿಕೊಂಡ, "ಹೇಳಿ ಕೇಳಿ ನಾನೊಬ್ಬ ಕಳ್ಳ. ನಾನು ಸತ್ಯ ಹೇಳುವುದು ಹೇಗೆ?" ಪಂಡಿತರು ಹೇಳಿದರು, "ಏನೂ ಯೋಚನೆ ಮಾಡಬೇಡ, ಸತ್ಯವನ್ನೇ ಹೇಳು". ಒಂದು ದಿನ ಆತ ರಾತ್ರಿ ಹನ್ನೊಂದು ಘಂಟೆಯ ವೇಳೆಗೆ ಕಳ್ಳತನಕ್ಕೆಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿ ಬೀಟ್ ಪೋಲಿಸಿನವನು  'ಎಲ್ಲಿಗೆ ಹೋಗುತ್ತಿದ್ದೀಯ?' ಎಂದು ವಿಚಾರಿಸಿದ. ಕಳ್ಳ ಒಂದು ನಿಮಿಷ ಯೋಚಿಸಿ ಸತ್ಯ ಹೇಳಿಬಿಟ್ಟ, "ಕಳ್ಳತನ ಮಾಡಕ್ಕೆ ಹೋಗ್ತಾ ಇದೀನಿ". ಪೋಲಿಸಪ್ಪ, "ತಮಾಷೆ ಮಾಡಬೇಡ, ಹೋಗು ಲೇಟಾಗಿದೆ, ಬೇಗ ಮನೆ ಸೇರಿಕೋ" ಎಂದು ನಗುತ್ತಾ ಕಳಿಸಿಕೊಟ್ಟ. ಇದು ತಮಾಷೆಗಾಗಿ ಹೇಳಿದ ಪ್ರಸಂಗವಷ್ಟೇ ಹೊರತು, ಇಂತಹ ಸತ್ಯ ಚಲಾವಣೆಯಾಗಲಾರದು. ಖ್ಯಾತ ಪತ್ರಕರ್ತ ಹಂಟರ್ ಮಾತು ಇಲ್ಲಿ ಪ್ರಸ್ತುತವೆನಿಸುತ್ತದೆ: "ಕಳೆದ ಹತ್ತು ವರ್ಷಗಳಲ್ಲಿ ನನಗೆ ಗೊತ್ತಿರುವ ಎಲ್ಲಾ ಸತ್ಯಗಳ ಕುರಿತು ನಾನೇನಾದರೂ ಬರೆದಿದ್ದರೆ, ಸುಮಾರು ೬೦೦ ಜನರು, ನಾನೂ ಸೇರಿದಂತೆ, ಜೈಲಿನಲ್ಲಿ ಕೊಳೆಯಬೇಕಾಗುತ್ತಿತ್ತು. ವೃತ್ತಿಪರ ಪತ್ರಿಕೋದ್ಯಮದಲ್ಲಿ ಪರಿಪೂರ್ಣ ಸತ್ಯ ಅತ್ಯಂತ ವಿರಳ ಮತ್ತು ಅಪಾಯಕಾರಿ ವಸ್ತು!"
     'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್' (ಸತ್ಯವನ್ನೇ ಹೇಳು, ಪ್ರಿಯವಾದದ್ದನ್ನು ಹೇಳು, ಅಪ್ರಿಯವಾದ ಸತ್ಯ ಹೇಳಬೇಡ) ಎಂಬ ಮಾತನ್ನು ತಿಳಿದವರು ಹೇಳುತ್ತಾರೆ.  ಇದು ಸಮಯ, ಸಂದರ್ಭಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಬೇಕಾದ ಸತ್ಯ. ಇಲ್ಲಿ ಸಾಮಾನ್ಯ ಹಿತ ಪ್ರಧಾನವಾಗುತ್ತದೆ. ಇದಕ್ಕೆ ಉದಾಹರಣೆ ಕೊಡಬೇಕೆಂದರೆ, ಒಬ್ಬ ಪ್ರಾಣಭಯದಿಂದ ನಿಮ್ಮ ಮನೆಯಲ್ಲಿ ರಕ್ಷಣೆ ಪಡೆದಿದ್ದಾನೆಂದು ಇಟ್ಟುಕೊಳ್ಳಿ. ಅವನನ್ನು ಕೊಲೆ ಮಾಡುವ ಉದ್ದೇಶ ಹೊಂದಿದ ವ್ಯಕ್ತಿ ನಿಮ್ಮನ್ನು ಆ ವ್ಯಕ್ತಿ ಮನೆಯಲ್ಲಿದ್ದಾನೆಯೇ ಎಂದು ಕೇಳಿದರೆ, ಸತ್ಯವನ್ನು ಮಾತ್ರ ಹೇಳುತ್ತೇನೆಂಬ ಹೆಮ್ಮೆಯಿಂದ ನೀವು 'ಹೌದು' ಎಂದು ಉತ್ತರಿಸಿದರೆ ಒಬ್ಬ ವ್ಯಕ್ತಿಯ ಹತ್ಯೆಗೆ ಕಾರಣರಾಗುತ್ತೀರಿ. ಇದು ಸತ್ಯದ ಇನ್ನೊಂದು ಮುಖ!
     ಸತ್ಯ ಹೇಳಲು ಧೈರ್ಯವಿರಬೇಕು. ಅದು ತಿಳಿದಷ್ಟು ಸರಳವಲ್ಲ. ಮೌಲ್ಯಗಳು ಇರುವಲ್ಲಿ ಸತ್ಯಕ್ಕೆ ಬೆಲೆ ಇರುತ್ತದೆ. ಅದು ಇಲ್ಲದಲ್ಲಿ ಸತ್ಯ ಅನಾಥವಾಗುತ್ತದೆ. ಹಾಗೆಂದು ಸತ್ಯ ಹೇಳುವುದು ತಪ್ಪೇ ಎಂದರೆ ತಪ್ಪಲ್ಲ. ಮೌಲ್ಯಯುತ ಸಮಾಜವನ್ನು ಬಯಸುವುದಿಲ್ಲವೆನ್ನುವುದಾದರೆ ಸತ್ಯವನ್ನು ದೂರಕ್ಕೆ ಇಟ್ಟರಾಯಿತು. ಆದರೆ, ವೈಯಕ್ತಿಕವಾಗಿ ಪ್ರತಿಯೊಬ್ಬರೂ ಸಮಾಜ ಒಳ್ಳೆಯ ರೀತಿಯಲ್ಲಿ ಇರಬೇಕು, ಅನ್ಯಾಯ, ಮೋಸ ಆಗಬಾರದು ಎಂದು ಬಯಸುತ್ತಾರೆ. ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ದೇಶ ಇಂತಹ ಸ್ಥಿತಿಗೆ ಬಂದಿದೆ ಎಂದು ದೂರುವುದು ಸಾಮಾನ್ಯ. "ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ?" ಎಂದರೆ ಸಿಗಬಹುದಾದ ಉತ್ತರವೆಂದರೆ, "ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ? ಅವರದಾದರೋ ದೊಡ್ಡ ತಪ್ಪುಗಳು. ನಮ್ಮದಾದರೋ ಪರಿಸ್ಥಿತಿಯ ಒತ್ತಡದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು" ಎಂಬುದೇ! ಈ ಸಣ್ಣ ಪುಟ್ಟ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯವಾಗುತ್ತವೆ, ಇವೇ ಮುಂದೆ ಸಾಮಾಜಿಕ ನ್ಯಾಯ, ಮೌಲ್ಯ, ಸತ್ಯ, ಮುಂತಾದ ಬಗ್ಗೆ ಮಾತನಾಡದಂತೆ ಕಟ್ಟಿಹಾಕುತ್ತವೆ. ಒಂದಂತೂ ಸತ್ಯ, ಇತಿಹಾಸ ನಿರ್ಮಾಣ ಮಾಡುವವರು ಬಹುಸಂಖ್ಯಾತರಾದ ಸ್ವಾರ್ಥಿಗಳಲ್ಲ, ಅಲ್ಪಸಂಖ್ಯಾತರಾದ, ಸತ್ಯಕ್ಕೆ ಬೆಲೆ ಕೊಡುವ ಅಲ್ಪ ಸಂಖ್ಯಾತರೇ ಎಂಬುದನ್ನು ಮರೆಯಬಾರದು. ಈ ಜಗತ್ತಿನಲ್ಲಿ ಕೋಟ್ಯಾಂತರ ಜನರಿದ್ದಾರೆ, ಎಲ್ಲರನ್ನೂ ನಾವು ನೆನೆಸಿಕೊಳ್ಳುತ್ತೇವೆಯೇ? ಹೊರಗಿನವರು ಬೇಡ, ನಮ್ಮ ಕುಟುಂಬದ ೩-೪ ತಲೆಮಾರುಗಳ ಹಿಂದಿನವರ ಹೆಸರುಗಳೇ ನಮಗೆ ನೆನಪಿರುವುದಿಲ್ಲ. ಆದರೆ. ರಾಮ, ಕೃಷ್ಣ, ಹರಿಶ್ಚಂದ್ರ, ವಿವೇಕಾನಂದ ಮುಂತಾದವರು ಸತ್ತು ಎಷ್ಟೋ ವರ್ಷಗಳಾದರೂ ಇಂದೂ ಜನಮಾನಸದಲ್ಲಿ ಜೀವಂತವಿದ್ದಾರೆ. ಏಕೆ? ಏಕೆಂದರೆ, ಅವರುಗಳು ಸತ್ಯಕ್ಕೆ ಬೆಲೆ ಕೊಟ್ಟರು, ಇತರರಿಗಾಗಿ ಬಾಳಿದರು. ಇತರರಿಗಾಗಿ ಬಾಳುವವರು ಮಹಾಪುರುಷರೆನಿಸುತ್ತಾರೆ. ಇದು ಸತ್ಯಕ್ಕೆ, ಸತ್ಯವಿಚಾರಕ್ಕೆ ಇರುವ ಮಹತ್ವ ತೋರಿಸುತ್ತದೆಯಲ್ಲವೇ? ಕೇವಲ ತಿಂದು, ಕುಡಿದು ಒಂದು ದಿನ ಕಂತೆ ಒಗೆದು, ಇಂತಹವನು ಒಬ್ಬನಿದ್ದ ಎಂದು ಯಾರೂ ನೆನೆಸಿಕೊಳ್ಳದಂತೆ ಕಣ್ಮರೆಯಾಗಬೇಕೇ ಅಥವ ಬದುಕಿದ್ದಾಗ ಏನನ್ನಾದರೂ ಸಾಧಿಸಿ ಹೆಜ್ಜೆ ಗುರುತು ಬಿಟ್ಟುಹೋಗಬೇಕೇ ಎಂಬುದು ನಮಗೇ ಬಿಟ್ಟಿದ್ದು.
     ಸತ್ಯ ಹೇಳುವುದಕ್ಕೆ ಆತ್ಮವಿಶ್ವಾಸ ಇದ್ದರೆ ಸಾಕು. ಆದರೆ ಸುಳ್ಳು ಹೇಳಲು ಮಹಾನ್ ನೆನಪಿನ ಶಕ್ತಿಯ ಜೊತೆಗೆ ಅದನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆಯೂ ಇರಬೇಕು. ಇಲ್ಲದಿದ್ದರೆ ಹೇಳಿದ ಸುಳ್ಳನ್ನು ಅರಗಿಸಿಕೊಳ್ಳಲು ಆಗದೇ ಹೋಗಬಹುದು. ಹೃದಯ, ಆತ್ಮಗಳು ನಮ್ಮ ಪ್ರತಿಯೊಂದೂ ನಾವು ಮಾಡುವ ಕೆಲಸಗಳ ಹಿಂದೆ ಇರದಿದ್ದರೆ, ನಮ್ಮ ಬಾಯಿಯಿಂದ ಹೊರಡುವ ಮಾತುಗಳು ಖಾಲಿ ಖಾಲಿಯಾಗಿರುತ್ತವೆ ಮತ್ತು ಕಾರ್ಯಗಳೂ ಅರ್ಥಹೀನವಾಗಿರುತ್ತವೆ. ಸತ್ಯಕ್ಕೆ ಗೌರವ, ಬೆಲೆ ಕೊಡದವರನ್ನು ಯಾರೂ ನಂಬಲಾರರು. ಆದರೆ ಆತ್ಮ, ಹೃದಯಗಳು ಸಾಥ್ ನೀಡುವ ಕೆಲಸಗಳು ಸತ್ಯ, ಸತ್ವ ಮತ್ತು ಆತ್ಮವಿಶ್ವಾಸದಿಂದ ಕೂಡಿರುತ್ತವೆ ಮತ್ತು ಇದರ ಪ್ರತಿಫಲವೇ ದೊರಕುವ ಸಂತೋಷ! ನಿರಾಯುಧವಾದ ಸತ್ಯ ಮತ್ತು ಷರತ್ತಿಲ್ಲದ ಪ್ರೀತಿಗಳ ಮಾತುಗಳದೇ ವಾಸ್ತವದಲ್ಲಿ ಕೊನೆಯ ಮಾತಾಗಿರುತ್ತದೆ. ಸತ್ಯಕ್ಕೆ ತಾತ್ಕಾಲಿಕವಾದ ಸೋಲುಂಟಾದರೂ, ಗೆಲುವಿನಿಂದ ಬೀಗಬಹುದಾದ ಸುಳ್ಳಿಗಿಂತಲೂ ಅದು ಹೆಚ್ಚು ಶಕ್ತಿಶಾಲಿಯಾದುದು. ವಿವೇಕಾನಂದರು ಹೇಳಿದಂತೆ, 'ಇತರರ ಅಭಿಪ್ರಾಯಗಳು, ಸಿದ್ಧಾಂತಗಳು ನಮ್ಮ ಒಳಗಿನ ಧ್ವನಿಯನ್ನು ಅದುಮಲು ಅವಕಾಶ ಕೊಡದಿರೋಣ'. ನಮ್ಮ ಅಂತರಂಗದ ದ್ವನಿಯನ್ನು ಆಲಿಸಿ, ಅದು ಹೇಳಿದಂತೆ ಕೇಳಿದರೆ, ಅದು ಕರೆದೊಯ್ಯುವುದು ಸತ್ಯಪಥದಲ್ಲೇ ಎಂಬ ಅರಿವು ಜಾಗೃತಗೊಳ್ಳಬೇಕಿದೆ. ಆಗ ಮಾತ್ರ 'ಸತ್ಯಮೇವ ಜಯತೇ' ಎಂಬ ಘೋಷವಾಕ್ಯ ಸಾರ್ಥಕ್ಯ ಕಾಣುತ್ತದೆ, 'ಸತ್ಯಮ್ ವದ ಧರ್ಮಮ್ ಚರ' (ಸತ್ಯವನ್ನೇ ಹೇಳು, ಧರ್ಮದಲ್ಲಿ ನಡೆ) ಎಂಬ ಸನಾತನವಾಣಿ ಅರ್ಥ ಕಂಡುಕೊಳ್ಳುತ್ತದೆ.
ಕೊನೆಯದಾಗಿ ಒಂದು ಮಾತು:
ಸತ್ಯವನ್ನು ಬಗ್ಗಿಸಬಹುದು, ತಿರುಚಬಹುದು, ದುರುಪಯೋಗಪಡಿಸಿಕೊಳ್ಳಬಹುದು. ಆದರೆ ಸತ್ಯವನ್ನು ದೇವರೂ ಬದಲಾಯಿಸಲಾರ!
-ಕ.ವೆಂ. ನಾಗರಾಜ್.

ಮಂಗಳವಾರ, ಡಿಸೆಂಬರ್ 10, 2013

ಮಕ್ಕಳ ಜನ್ಮ ದಿನ - ಹೀಗೊಂದು ಬದಲಾವಣೆ ಬರಲಿ

          ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು.

ಜನ್ಮದಿನಮಿದಂ ಅಯಿ ಪ್ರಿಯ ಸಖೇ
ಶಂ ತನೋತು ತೇ ಸರ್ವದಾ ಮುದಂ

ಪ್ರಾರ್ಥಯಾಮಹೇ ಭವ ಶತಾಯುಷೀ
ಈಶ್ವರಸ್ಸದಾ ತ್ವಾಂ ರಕ್ಷತು

ಪುಣ್ಯಕರ್ಮಣಾ ಕೀರ್ತಿಮರ್ಜಯ
ಜೀವನಂ ತವ ಭವತು ಸಾರ್ಥಕಂ
     'ಹ್ಯಾಪಿ ಬರ್ತ್ ಡೇ ಟು ಯೂ' ಎಂದು ಹಾಡುವ ಅಂಧಾನುಕರಣೆ ಬೆಳೆಸಿಕೊಂಡಿರುವ ನಾವು ಮಕ್ಕಳಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಮೇಣದ ಬತ್ತಿಗಳನ್ನು ಹಚ್ಚಿ ಕೇಕಿನ ಮೇಲೆ ಇಟ್ಟು ಉಫ್ ಎಂದು ಆರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಆಲೋಚಿಸಬೇಡವೇ? ಮೇಣದ ಬತ್ತಿಗಳನ್ನು ಆರಿಸುವುದರ ಸಂಕೇತ ಬಹುಷಃ ಇಷ್ಟು ವರ್ಷ ಕಳೆಯಿತು ಎಂದಿರಬಹುದೇ? ಬದಲಾಗಿ ಮಕ್ಕಳಿಗೆ ತೈಲದ ಅಭ್ಯಂಜನ ಮಾಡಿಸಿ ಹೊಸ ಬಟ್ಟೆ ಹಾಕಿ ಶೃಂಗರಿಸಿ ಹಬ್ಬದ ಅಡಿಗೆ ಮಾಡಿ ಮನೆ ಮಂದಿ ಸಂಭ್ರಮಿಸಬಹುದಲ್ಲವೇ?  ಜ್ಯೋತಿ ಆರಿಸುವ ಬದಲಿಗೆ ಮಗುವಿನ ಕೈಯಲ್ಲೇ ದೀಪ ಬೆಳಗಿಸಬಹುದು. ನೆಂಟರಿಷ್ಟರು, ಸ್ನೇಹಿತರು, ಓರಗೆಯ ಮಕ್ಕಳನ್ನು ಆಹ್ವಾನಿಸಿ ಸಾಯಂಕಾಲದಲ್ಲಿ ಮಗುವಿಗೆ ಆರತಿ ಮಾಡಿ ಸಿಹಿ ಹಂಚಬಹುದು. ಹ್ಯಾಪಿ ಬರ್ತ್ ಡೇ ಹಾಡುವ ಬದಲಿಗೆ ಸಂಸ್ಕೃತದ ಮೇಲೆ ತಿಳಿಸಿದ ಹಾಡನ್ನಾಗಲೀ ಅಥವ ಕನ್ನಡದ ಈ ಕೆಳಕಂಡ ಹಾಡನ್ನಾಗಲೀ ಹಾಡಬಹುದಲ್ಲವೇ?  (ಮೇಲಿನ ಹಾಡಿನ ಸ್ಫೂರ್ತಿಯಿಂದ ಇದನ್ನು ರಚಿಸಿದೆ).
ಪುಟ್ಟ ಗೌರಿಗೆ . . ಜನ್ಮದಿನವಿದು|
ಬಾಳ ತೇರಿಗೆ . . ನವ್ಯ ನಡೆಯಿದು ||

ದೇವ ಕಾಯಲಿ . . ಆಯು ನೀಡಲಿ|
ಜನರು ಹರಸಲಿ . . ಬಾಳು ಬೆಳಗಲಿ ||

ಸತ್ಯಧರ್ಮದಿ . . ಸಕಲಸಂಪದ|
ಶಾಂತಿ ನೆಮ್ಮದಿ . . ಸುಖವ ನೀಪಡಿ ||

ಪುಟ್ಟ ಗೌರಿಗೆ . . ಜನ್ಮದಿನವಿದು|
ಬಾಳ ತೇರಿಗೆ . . ನವ್ಯ ನಡೆಯಿದು ||
     (ಪುಟ್ಟ ಗೌರಿ ಎಂಬ ಸ್ಥಳದಲ್ಲಿ ಸಂಬಂಧಿಸಿದ ಮಗುವಿನ ಹೆಸರು ಸೇರಿಸಿ ಹಾಡಬಹುದು).
     ಈ ಸಂಭ್ರಮವನ್ನು ಬಡ ಮತ್ತು ಅನಾಥ ಮಕ್ಕಳಿಗೆ ಊಟೋಪಚಾರ ಮಾಡುವ ಮೂಲಕ ಅಥವಾ ಉತ್ತಮವಾದ ಸಮಾಜಕಾರ್ಯದಲ್ಲಿ ತೊಡಗಿರುವ ಸೇವಾ ಸಂಸ್ಥೆಗೆ ಧನ ಸಹಾಯ ಮಾಡುವ ಮೂಲಕವೂ ಆಚರಿಸಬಹುದು. ಮಗುವಿನ ಕೈಯಲ್ಲೇ ಇದನ್ನು ಮಾಡಿಸಿದರೆ ಮಗುವಿಗೆ ಸತ್ ಸಂಸ್ಕಾರ ನೀಡಿದಂತೆಯೂ ಆಗುವುದು. ಸಹೃದಯರು ಈ ಬಗ್ಗೆ ಚಿಂತಿಸಿ ಕಾರ್ಯ ಪ್ರವೃತ್ತರಾಗಬಹುದಲ್ಲವೇ?
************
-ಕ.ವೆಂ.ನಾಗರಾಜ್.