ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಏಪ್ರಿಲ್ 28, 2015

ಪ್ರಾಣ ಅರ್ಥಾತ್ ಜೀವ




ತನ್ನಿಷ್ಟ ಬಂದಂತೆ ನಯನ ನೋಡುವುದೆ?
ತನ್ನಿಚ್ಛೆಯಂತೆ ಕೈಕಾಲು ಆಡುವುವೆ? |
ತನುವಿನೊಳಗಿಹ ಅವನಿಚ್ಛೆಯೇ ಪರಮ
ಅವನಿರುವವರೆಗೆ ಆಟವೋ ಮೂಢ ||       
     ಜೀವ ಎಂದರೇನೆಂದು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಪ್ರಾಣ ಎಂದು ಕರೆಯಲ್ಪಡುವ ಜೀವ ಎಂಬ ಪದವನ್ನು ಬಹಳ ಸಲ ಪ್ರಯೋಗಿಸುತ್ತೇವೆ, ಆದರೆ ಅದು ಏನು ಎಂಬುವುದನ್ನು ನಮಗೆ ವಿವರಿಸಲಾಗುವುದಿಲ್ಲ. ನಮ್ಮ ದೈನಂದಿನ ಚಟುವಟಿಕೆಗಳಿಗೆ ಜೀವ ಎಂದ ಗುರುತಿಸುವುದು ನಮ್ಮ ತಪ್ಪು ಗ್ರಹಿಕೆ. ಈ ಜೀವ ನಿಗೂಢವಾದುದು. ಜೀವ ಅಥವ ಪ್ರಾಣ ಅನ್ನುವುದು ನಿಜವಾದ ನಾವು! ಅದು ಉಸಿರಾಡುವ ಕ್ರಿಯೆಯಲ್ಲ, ಆದರೆ ಜೀವತತ್ತ್ವವೇ ಆಗಿದ್ದು ಅದಿಲ್ಲದಿದ್ದರೆ ಸ್ವಪ್ರಜ್ಞೆಯಾಗಲೀ, ಯಾವುದೇ ಚಟುವಟಿಕೆಯಾಗಲೀ ಸಾಧ್ಯವೇ ಇಲ್ಲ. ಈ ನಮ್ಮ ಜೀವ ಅನ್ನುವುದು ಅನಂತದ ಮತ್ತು ಅಂತ್ಯದ ಗಡಿರೇಖೆ ಎಂದುಕೊಂಡರೆ ನಮ್ಮ ವ್ಯಕ್ತಿತ್ವದ ಅಸ್ತಿತ್ವಕ್ಕೆ ಕಾರಣವಾದ ಜೀವ ಅನಂತವನ್ನು ಅಂತದೊಂದಿಗೆ ಸಂಕುಚಿಸಿದಂತೆ ಅಥವ ಅಂತವು ಅನಂತದೆಡೆಗೆ ಧಾವಿಸುವ ಪ್ರಾರಂಭಿಕ ರೀತಿಯಂತೆ ಭಾವಿಸಿದರೆ ಉಂಟಾಗುವ ಭಾವನೆ ಅನಿರ್ವಚನೀಯ. ಈ ಕೂಡುವ ಸ್ಥಳ ಇದೆಯಲ್ಲಾ, ಅದೇ ಜೀವ! ಅದು ಅಂತವನ್ನೂ ಪ್ರತಿನಿಧಿಸುತ್ತದೆ, ಅನಂತವನ್ನೂ ಪ್ರತಿನಿಧಿಸುತ್ತದೆ. ಹಾಗಾಗಿ ಈ ಜೀವವನ್ನು ನಿಗೂಢ ಎಂದಿರುವುದು! ಅದು ವ್ಯಕ್ತಿಗತವೂ ಅಲ್ಲ, ಇಡೀ ವಿಶ್ವದ್ದೂ ಅಲ್ಲ. ಅದೇನೆಂದು ನಮಗೆ ಗೊತ್ತಿಲ್ಲ, ಅದನ್ನು ವಿವರಿಸಲೂ ನಮಗೆ ಆಗದು. ಆದರೂ ಅದೇನೇ ಇರಲಿ, ಈ ಜೀವ ಅಥವ ಪ್ರಾಣ ಅನ್ನುವುದು ಇತರ ಎಲ್ಲಕ್ಕಿಂತಲೂ ಹಿರಿದಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನೇ ಜೀವದ ಮಹತ್ವ ಎನ್ನುವುದು. ಈ ಜೀವ ಅನ್ನುವುದು ಕೇವಲ ಜೈವಿಕ ಚಟುವಟಿಕೆಯಲ್ಲ, ಜೈವಿಕ ಕೆಲಸವಲ್ಲ, ವೈಯಕ್ತಿಕ ಅಥವ ಸಾಮಾಜಿಕ ಜೀವನವಲ್ಲ, ಆದರೆ ಅದಕ್ಕೂ ಹಿರಿದದ್ದಾಗಿದೆ.
     'ಅವರು ನಮ್ಮ ತಂದೆ', 'ಇವರು ನಮ್ಮ ತಾಯಿ', 'ಇವನು ನನ್ನ ಅಣ್ಣ/ತಮ್ಮ' 'ಇವಳು ನನ್ನ ಅಕ್ಕ/ತಂಗಿ' ಎಂದೆಲ್ಲಾ ಹೇಳುತ್ತೇವಲ್ಲಾ ಹೀಗಂದರೆ ಏನು? ಅವರುಗಳ ಶರೀರವನ್ನು ನಾವು ತಂದೆ, ತಾಯಿ, ಅಣ್ಣ, ತಮ್ಮ, ಇತ್ಯಾದಿ ಭಾವಿಸುತ್ತೇವೆಯೇ? ಅವರುಗಳಲ್ಲಿ ಇರುವ ಏನೋ ಒಂದನ್ನು ನಾವು ತಂದೆ, ತಾಯಿ, ಇತ್ಯಾದಿಯಾಗಿ ಕಾಣುತ್ತೇವೆ. ನಾವು ಯಾರು ಎಂಬುದನ್ನು ನಮಗೇ ಹೇಳುವುದು ಕಷ್ಟ, ಇನ್ನು ಇತರರ ಮಾತೇನು? ಹಾಗಾಗಿ ಉಪನಿಷತ್ತು ಹೇಳುತ್ತದೆ: 'ಪ್ರಾಣವೇ ತಂದೆ, ಪ್ರಾಣವೇ ತಾಯಿ, ಪ್ರಾಣವೇ ಸೋದರ, ಪ್ರಾಣವೇ ಉಸಿರು, ಪ್ರಾಣವೇ ಗುರು, ಪ್ರಾಣವೇ ಬ್ರಹ್ಮ!' ಒಂದು ಚಕ್ರದ ಕೀಲುಗಳು ಹೇಗೆ ಅದರ ಮಧ್ಯಭಾಗದಲ್ಲಿ ಜೋಡಿಸಲ್ಪಟ್ಟಿವೆಯೋ, ಹಾಗೆ ಪ್ರತಿಯೊಂದು ಸಂಗತಿಯೂ ಸಹ ಜೀವತತ್ತ್ವಕ್ಕೆ ಪೋಣಿಸಲ್ಪಟ್ಟಿವೆ. ಈ ಪ್ರಪಂಚದಲ್ಲಿ ಯಾವುದೇ ಮೌಲ್ಯವಿರುವ, ಅರ್ಥವಿರುವ ಸಂಗತಿ ಅನ್ನುವುದು ಏನಾದರೂ ಇದ್ದರೆ ಅದು ಪ್ರಾಣ ಹೊರತುಪಡಿಸಿ ಮತ್ತಾವುದೂ ಅಲ್ಲ. ಪ್ರಾಣವಿರದಿದ್ದರೆ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ನಮ್ಮ ಪ್ರಾಮುಖ್ಯತೆ ನಾವು ಬದುಕಿರುವವರೆಗೆ ಮಾತ್ರ. ಬದುಕಿರುವವರೆಗೆ ಮಾತ್ರ ನಮಗೆ ಬೆಲೆ. ನಮ್ಮಲ್ಲಿ ಪ್ರಾಣವಿರದಾಗ ನಾವು ಯಾರು? ನಾವು ಏನೂ ಅಲ್ಲ. ನಾವು ಬದುಕಿದ್ದಾಗ ನಾವು ನಮ್ಮ ಶರೀರವನ್ನು 'ನಾವು' ಎಂದು ಅಂದುಕೊಂಡಿರುತ್ತೇವಲ್ಲಾ ಅದು ವಾಸ್ತವವಾಗಿ 'ನಾವು' ಆಗಿರುವುದಿಲ್ಲ. ಆ 'ನಾವು' ಅನ್ನುವುದು ವಾಸ್ತವವಾಗಿ 'ಪ್ರಾಣ'ವೇ ಆಗಿದೆ.
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ|| 
     ಯಾರಾದರೂ ತನ್ನ ತಂದೆ ಅಥವ ತಾಯಿಗೆ ಕೆಟ್ಟದಾಗಿ ಮಾತನಾಡಿದರೆ, "ಎಂತಹ ಕೃತಘ್ನ ಅವನು! ತನ್ನ ತಂದೆಗೇ/ತಾಯಿಗೇ ಅಸಂಬದ್ಧವಾಗಿ ಮಾತನಾಡುತ್ತಾನೆ" ಎಂದೆನ್ನುತ್ತಾರೆ. ತಂದೆ-ತಾಯಿಗಳಿಗೆ, ಹಿರಿಯರಿಗೆ, ವಿದ್ವಜ್ಜನರಿಗೆ ಗೌರವ ಕೊಡುವುದು ನಮ್ಮ ಸಂಪ್ರದಾಯದಲ್ಲೇ ಬಂದಿದೆ. ಅಂತಹವರನ್ನು ಅಗೌರವಿಸಿ ಮಾತನಾಡಿದರೆ ತಿಳಿದವರು ಹಾಗೆ ಮಾಡದಿರಲು ಎಚ್ಚರಿಸುತ್ತಾರೆ. ಈ ಪ್ರಪಂಚದಲ್ಲಿ ನಾವು ಮಾನವತೆಗೆ, ಸಾಮಾಜಿಕ ಜೀವನಕ್ಕೆ ಬೆಲೆ ಕೊಡುತ್ತೇವೆ. ಇದಕ್ಕೆ ವಿರುದ್ಧವಾಗಿ ಹೋಗುವವರನ್ನು, ಹಿರಿಯರನ್ನು ಧಿಕ್ಕರಿಸುವವರನ್ನು ನಾವು ಶಪಿಸುತ್ತೇವಲ್ಲವೇ? 'ನೋಡು, ಜನರನ್ನು ನೋಯಿಸಬೇಡ' ಎಂದು ಉಪದೇಶಿಸುತ್ತೇವೆ. ಈ 'ಜನರು' ಅಂದರೆ ಯಾರು? 'ನೋಯಿಸುವುದು' ಅಂದರೆ ಏನು? ಜನರು ಅಂದರೆ ಖಂಡಿತ ಶರೀರಗಳಂತೂ ಅಲ್ಲ! ಅಸಭ್ಯ ವ್ಯಕ್ತಿಯಿಂದ ಯಾರಿಗಾದರೂ ನೋವಾಗುತ್ತದೆ ಎಂದರೆ ಅವನ ಪ್ರಾಣತತ್ತ್ವಕ್ಕೆ ಘಾಸಿಯಾಗಿದೆ ಎಂದರ್ಥ. ಬಿಡಿಸಿ ಹೇಳಬೇಕೆಂದರೆ ವ್ಯಕ್ತಿಯೆಂದರೆ ಆತನು ಹೊಂದಿರುವ ಸುಂದರ ಶರೀರವಲ್ಲ, ಅವನಲ್ಲಿರುವ 'ಪ್ರಾಣ'ವೇ ಹೊರತು ಬೇರೆ ಅಲ್ಲ. ಯಾರಾದರೂ ಮನಸ್ಸಿಗೆ ಘಾಸಿಯಾಗುವಂತೆ ಮಾತನಾಡಿದರೆ, 'ಅಯ್ಯೋ, ಸುಮ್ಮನಿರು, ನನ್ನ ಪ್ರಾಣ ಹಿಂಡಬೇಡ' ಎನ್ನುತ್ತೇವೆ. ತಂದೆ, ತಾಯಿ, ಹಿರಿಯರನ್ನು ಅಗೌರವಿಸಿದರೆ ಅವರುಗಳು ಹೊಂದಿರುವ ಶರೀರವನ್ನು ಅಗೌರವಿಸಿದಂತೆ ಅಲ್ಲ, ಅವರಲ್ಲಿರುವ ಪ್ರಾಣತತ್ತ್ವವನ್ನು ಅಗೌರವಿಸಿದಂತೆ! ಅವರುಗಳ ಶರೀರಗಳಲ್ಲಿರುವ ಆ ಪ್ರಾಣತತ್ವ ಹೊರಟುಹೋದಾಗ ಏನಾಗುತ್ತದೆ? ಎಲ್ಲವೂ ಬದಲಾಗಿಬಿಡುತ್ತದೆ. ತಂದೆ ಎಂದು ಗೌರವಿಸಲ್ಪಡುತ್ತಿದ್ದ ವ್ಯಕ್ತಿ ಸತ್ತರೆ ಅವನ ಮಗ ತಂದೆಯ ದೇಹವನ್ನು ಚಿತೆಯಲ್ಲಿರಿಸಿ ಸುಡುತ್ತಾನೆ ಅಥವ ತನ್ನ ಸಂಪ್ರದಾಯದಂತೆ ಹೂಳುವುದೋ ಮತ್ತೇನನ್ನೋ ಮಾಡುತ್ತಾನೆ. ಆಗ ಯಾರಾದರೂ, 'ಅವನು ತಂದೆಯನ್ನೇ ಸುಡುತ್ತಿದ್ದಾನೆ/ಹೂಳುತ್ತಿದ್ದಾನೆ' ಎಂದು ಆಕ್ಷೇಪಿಸುತ್ತಾರೇನು? ಕೆಲವೇ ಘಂಟೆಗಳ ಹಿಂದೆ ಬದುಕಿದ್ದಾಗ ಇದ್ದ ಮಹತ್ವ ಸತ್ತ ಕೂಡಲೇ ಇಲ್ಲವಾಗುತ್ತದೆ. ಅದು ನಮ್ಮ ಪ್ರೀತಿಪಾತ್ರರಾದ ಯಾರೇ ಆಗಬಹುದು, ಗುರು ಆಗಬಹುದು, ಸಾಮಾಜಿಕ ನಾಯಕನಾಗಿರಬಹುದು, ಚಕ್ರವರ್ತಿಯೇ ಇರಬಹುದು. ಅದರಲ್ಲಿ ಏನೂ ವ್ಯತ್ಯಾಸವಾಗದು. ಅವರನ್ನು ಸುಡುವುದೋ, ಹೂಳುವುದೋ, ಮತ್ತೊಂದೇನನ್ನೋ ಮಾಡುತ್ತೇವೆ. ಜನ ಏನೆನ್ನುತ್ತಾರೆ? "ಉತ್ತಮ ರೀತಿಯಲ್ಲಿ ಸಂಸ್ಕಾರ ಮಾಡಿ ಒಳ್ಳೆಯ ಕೆಲಸ ಮಾಡಿದೆ" ಅನ್ನುತ್ತಾರೆ! ಬದುಕಿದ್ದಾಗ ಹೀಗೆ ಮಾಡಿದರೆ? ಕೊಲೆ ಅನ್ನುತ್ತಾರೆ, ಹೀನಕೃತ್ಯ ಅನ್ನುತ್ತಾರೆ! ವ್ಯತ್ಯಾಸ ಗೊತ್ತಾಯಿತಲ್ಲವೇ? ನಾವು ಗೌರವಿಸುವುದು, ಗೌರವಿಸಬೇಕಿರುವುದು ಶರೀರಗಳನ್ನಲ್ಲ, ಶರೀರದೊಳಗಿನ ಪ್ರಾಣತತ್ವಗಳನ್ನು! 'ಅಯ್ಯೋ, ನಮ್ಮ ತಂದೆ ಹೋಗಿಬಿಟ್ಟರು' ಎಂದು ಶೋಕಿಸುತ್ತೇವೆ. ಎಲ್ಲಿಗೆ ಹೋದರು? ತಂದೆ ಅನ್ನುವುದು ಅವರು ಹೊಂದಿದ್ದ ಶರೀರವಲ್ಲ, ಆ ಶರೀರದೊಳಗಿನ ಪ್ರಾಣತತ್ವ ಎಂಬ ಅರಿವು ಮೂಡಿದಾಗ, ಆ ಪ್ರಾಣತತ್ವಕ್ಕೆ ಸಾವಿಲ್ಲ ಎಂದುಕೊಂಡಾಗ ನಮ್ಮ ಚಿಂತನಾಧಾಟಿಯೇ, ಜೀವನವನ್ನು ನೋಡುವ ರೀತಿಯೇ ಬದಲಾಗಿಬಿಡುತ್ತದೆ. ಮನಸ್ಸು ಸದ್ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತದೆ.
ಕಾಣದದು ನಯನ  ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? || 
     ಇಡೀ ಜೀವನವೆನ್ನುವುದು ಈ ರಹಸ್ಯಮಯ ಪ್ರಾಣವೇ ಆಗಿದ್ದು, ಅದು ಹಲವು ಹೆಸರುಗಳಲ್ಲಿ, ಹಲವು ಪ್ರಾಕಾರಗಳಲ್ಲಿ ಗೋಚರವಾಗುತ್ತದೆ. ನಾವು ಈ ಹಲವು ವಿಧಗಳನ್ನು ನಮ್ಮ ಕಣ್ಣುಗಳು ಕಾಣುವ ರೀತಿಯಲ್ಲೇ ಭಾವಿಸಿ ಮೋಸ ಹೋಗುತ್ತೇವೆ. ಜೀವಚೈತನ್ಯವಿರುವ ಎಲ್ಲದರಲ್ಲೂ ಈ ಶ್ರೇಷ್ಠ ಪ್ರಾಣತತ್ವವನ್ನು ಕಾಣಬಹುದು. ಸಸ್ಯಗಳಲ್ಲಿ ಕೆಲವು ಪ್ರಮಾಣದಲ್ಲಿ, ಪ್ರಾಣಿಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ಮತ್ತು ಮನುಷ್ಯರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಾಣತತ್ವ ಕಂಡುಬರುತ್ತದೆ. ಈ ಹೆಚ್ಚಿನದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದು ಇನ್ನೂ ಮೇಲ್ಪಟ್ಟವರಲ್ಲಿ ಕಂಡುಬರಲೇಬೇಕು. ನಾವು ನಿಜವಾಗಿಯೂ ಎಲ್ಲಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾದ ಹಂತದಲ್ಲಿ ಬಂದು ನಿಂತಿದ್ದೇವೆ. ನಾವು ಯಾವುದರ ಬಗ್ಗೆ ಚರ್ಚಿಸುತ್ತಿದ್ದೇವೆಯೋ ಅದರ ಬಗ್ಗೆ ಸಹ ನಮಗೆ ಪೂರ್ಣ ಜ್ಞಾನವಿಲ್ಲ. ಈ ಪ್ರಾಣತತ್ವದ ಬಗ್ಗೆ ಯಾರಿಗೆ ಅರಿವಿದೆಯೋ, ಯಾರು ಈ ರಹಸ್ಯಾತ್ಮಕ ಪ್ರಾಣತತ್ವವು ಎಲ್ಲಕ್ಕಿಂತಲೂ ಹಿರಿದೆಂಬ ವಿಚಾರದಲ್ಲಿ ಹೆಚ್ಚು ತಿಳುವಳಿಕೆ ಹೊಂದಿರುತ್ತಾರೋ ಅವರನ್ನು ಜ್ಞಾನದ ಒಡೆಯರೆನ್ನಬಹುದು. ಅಂತಹವರ ಉದ್ಗಾರಗಳು ಸಾಮಾನ್ಯವಾಗಿ ಸತ್ಯವಾದುದಾಗಿರುತ್ತವೆ.
     ಜೀವದ ಬಗ್ಗೆ, ಜೀವತತ್ವದ ಬಗ್ಗೆ ಜ್ಞಾನ ಹೊಂದಿರುವವರು ನಿಜಕ್ಕೂ ಶ್ರೇಷ್ಠ ಜ್ಞಾನಿಗಳಾಗಿರುತ್ತಾರೆ. ಏಕೆಂದರೆ ಈ ಜ್ಞಾನ ನಮ್ಮಂತಹ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗಲಾರದು. ಅಂತಹ ಜ್ಞಾನ ನಿಜಕ್ಕೂ ಅತೀಂದ್ರಿಯದ್ದಾಗಿರುತ್ತದೆ. ಅಂತಹವರು ಆಡುವ ಮಾತುಗಳು ಸತ್ಯದಿಂದ ತುಂಬಿ ತುಳುಕುತ್ತಿರುತ್ತವೆ. ಅವರು ಹೇಳುವ ಮಾತುಗಳು ಸತ್ಯವಾಗುತ್ತವೆ, ಹೇಳಿದಂತೆ ನಡೆಯುತ್ತವೆ, ಏಕೆಂದರೆ ಅವರು ಹೊಂದಿರುವ ಜ್ಞಾನ ಅಂತಹುದಾಗಿರುತ್ತದೆ. ಅವಧೂತರುಗಳು, ಮಹಾಮಹಿಮರ ವಿಚಾರದಲ್ಲಿ ಇಂತಹ ಅನುಭವ ಕಂಡಿರುವ ನೂರಾರು ನಿದರ್ಶನಗಳಿವೆ. ಅವರು ಆಡುವ ಕೆಲವು ಮಾತುಗಳು ಸಾಮಾನ್ಯರಿಗೆ ಅರ್ಥವಾಗದಾದಾಗ, "ಸ್ವಾಮಿ, ನಿಮ್ಮ ಮಾತು ನಮಗೆ ಅರ್ಥವಾಗಲಿಲ್ಲ" ಎಂದರೆ ಅವರಿಂದ ಬರಬಹುದಾದ ಉತ್ತರ, "ಅರ್ಥ ಕಟ್ಟಿಕೊಂಡು ನಿನಗೇನಾಗಬೇಕು? ಇದು ನಿನಗೆ ಅರ್ಥವಾಗಲೂಬಾರದು". ನಿಜ, ಇಂತಹ ಸಂಗತಿಗಳು ನಾವೇ ಅರ್ಥ ಮಾಡಿಕೊಳ್ಳುವ ಹಂತಕ್ಕೆ ನಾವು ಏರಿದಾಗ ಮಾತ್ರ ನಮಗೆ ಅರ್ಥವಾಗಬಹುದು. ನಾವು ಅಂತರಂಗದಲ್ಲಿ ಬೆಳೆಯುತ್ತಾ ಹೋದಂತೆ ಸತ್ಯದ ಹತ್ತಿರ ಹತ್ತಿರಕ್ಕೆ ತಲುಪುತ್ತಾ ಹೋಗುತ್ತೇವೆ.
ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ || 
-ಕ.ವೆಂ.ನಾಗರಾಜ್.
**************
ದಿನಾಂಕ 6.04.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಏಪ್ರಿಲ್ 9, 2015

'ಬದುಕುವ' ಆಸೆ!


ಬಂಡಿಗೊಡೆಯನು ನೀನೆ ಪಯಣಿಗನು ನೀನೆ
ಅವನ ಕರುಣೆಯಿದು ಅಹುದಹುದು ತಾನೆ |
ಗುರಿಯ ಅರಿವಿರಲು ಸಾರ್ಥಕವು ಪಯಣ
ಗುರಿಯಿರದ ಪಯಣ ವ್ಯರ್ಥ ಮೂಢ ||
     ನಮ್ಮ ಅಸ್ತಿತ್ವ ಎಷ್ಟು ಮಹತ್ವದ್ದಾಗಿದೆ, ನಮ್ಮ ಅಸ್ತಿತ್ವವಿದ್ದರೆ ಎಲ್ಲವೂ ಇರುತ್ತದೆ, ಇಲ್ಲದಿದ್ದರೆ ಏನೂ ಇರುವುದಿಲ್ಲವೆಂಬ ಚಮತ್ಕಾರಿಕ ಸಂಗತಿಯ ಬಗ್ಗೆ ಹಿಂದಿನ ಲೇಖನದಲ್ಲಿ ಚರ್ಚಿಸಿದೆವು. ಈ ಅಸ್ತಿತ್ವಕ್ಕಿಂತಲೂ ಮಹತ್ವವಾಧ ಸಂಗತಿ ಇದ್ದು, ಅದು ನಮ್ಮ ಅಸ್ತಿತ್ವಕ್ಕೆ ಮೂಲಕಾರಣವಾಗಿದೆ. ತರ್ಕದ ಎಳೆಯನ್ನು ಬಿಡಿಸುತ್ತಾ ಹೋದಂತೆ ನಮಗೆ ಸತ್ಯದ ಅರಿವಾಗುತ್ತಾ ಹೋಗುತ್ತದೆ. ವೇದಗಳು ಹೇಳುವುದೂ ಇದನ್ನೇ! ಸತ್ಯವನ್ನು ಕಂಡುಕೊಳ್ಳಿರಿ, ಸತ್ಯವನ್ನು ಆವಿಷ್ಕರಿಸಿರಿ, ಅಸತ್ಯವೆಂದು ಕಂಡುದನ್ನು ಕಿತ್ತೆಸೆಯಿರಿ. (ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || -ಋಕ್.೧.೮೬.೯) ಯಾವುದನ್ನೂ ಕಣ್ಣು ಮುಚ್ಚಿ ಒಪ್ಪಬೇಕಿಲ್ಲ, ಯಾರೋ ಹೇಳಿದರೆಂದು ಕೇಳಬೇಕಿಲ್ಲ, ಕೇಳಿರಿ, ತಿಳಿಯಿರಿ, ವಿಚಾರ ಮಾಡಿರಿ, ಚರ್ಚಿಸಿರಿ, ಅಂತರಂಗಕ್ಕೆ ಒಪ್ಪಿಗೆಯಾದರೆ ಸ್ವೀಕರಿಸಿ, ಸತ್ಯವನ್ನು ನೀವೇ ಕಂಡುಕೊಳ್ಳಿ ಎಂಬ ಮಾತು ವೈಚಾರಿಕ ಪ್ರಜ್ಞೆ ಇರಬೇಕೆಂಬುದನ್ನು ಒತ್ತಿ ಹೇಳುತ್ತದೆ.
     ಈ ಅಸ್ತಿತ್ವ ಅನ್ನುವುದು ತನ್ನಿಂದ ತಾನೇ ಪರಿಪೂರ್ಣವಲ್ಲ. ಅಸ್ತಿತ್ವದಲ್ಲಿರುವ ಬಯಕೆ ಅದಕ್ಕೂ ಮೊದಲು ಇರುವುದಾಗಿದ್ದು ಅಸ್ತಿತ್ವ ಅದನ್ನು ಅವಲಂಬಿಸಿದೆ. ನಾವು ಒಂದು ವಿಧದ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ನಮ್ಮೊಳಗೆ ಅದೇನೋ ಇದೆ, ಅದು ಈ ನಿರೀಕ್ಷೆಯ ಬಲದಿಂದ ನಮ್ಮನ್ನು ಬಂಧಿಸಿರುತ್ತದೆ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ 'ಆಸೆ'ಯೇ ನಮ್ಮನ್ನು ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ 'ಆಸೆ'!
     ನಮ್ಮ ಅಸ್ತಿತ್ವಕ್ಕೆ, ಬದುಕಿಗೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಅಂತರ್ಗತ ಪ್ರಜ್ಞೆಯಿಂದ ಎಂಬುದನ್ನು ನಾವು ಗಮನಿಸಬೇಕು. ಆತ್ಮಾವಲೋಕನ ಮಾಡಿಕೊಂಡರೆ ತಿಳಿದೀತು, ಈ ಪ್ರಪಂಚದಲ್ಲಿ ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ ಎಂಬುದು ಸತ್ಯವಲ್ಲವೇ? ಈ ಆಸೆ ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ. ಈ ಗುಣದ ಕಾರಣವನ್ನು ತರ್ಕದ ಮೂಲಕ ತಿಳಿಯುವುದು ಸಾಧ್ಯವಿದೆಯೆಂದು ಅನ್ನಿಸುವುದಿಲ್ಲ. ಇದು ತರ್ಕಾತೀತವಾದ ವಿಸ್ಮಯವೆನ್ನಬಹುದು.
     ಸಾಯಲು ಇಚ್ಛಿಸುವವರು ಯಾರಾದರೂ ಇದ್ದಾರೆಯೇ? ಸಾಯಬಯಸುವ ಯಾವುದೇ ಜೀವಿ -ಅದು ಮಾನವನಿರಬಹುದು, ಪ್ರಾಣಿಯಿರಬಹುದು, ಕ್ರಿಮಿ-ಕೀಟವಿರಬಹುದು, ಗಿಡ-ಮರಗಳಿರಬಹುದು- ಇದೆಯೇ? ಆತ್ಮಹತ್ಯೆ ಮಾಡಿಕೊಳ್ಳುವವರು ಇರುತ್ತಾರೆ ಎಂದು ನೀವು ಹೇಳಬಹುದು. ಅವರು ಸಾಯುವುದೂ, ಸಾಯಬಯಸುವುದೂ 'ಬದುಕಲಿಕ್ಕಾಗಿಯೇ' ಎಂದು ನನ್ನ ಉತ್ತರವಿದೆ. ಎಷ್ಟು ದೀರ್ಘಕಾಲದವರೆಗೆ ಬದುಕಲು ಸಾಧ್ಯವೋ ಅಷ್ಟೂ ಕಾಲ ಜನರು ಬದುಕಿರಬಯಸುತ್ತಾರೆ. 'ದೀರ್ಘಾಯುಷ್ಮಾನ್ ಭವ' ಎಂದು ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡುತ್ತಾರೆ. 'ದೇವರೇ, ನನಗೆ (ನಮಗೆ ಎಂದು ನಮ್ಮ ಕುಟುಂಬದವರನ್ನೂ ಸೇರಿಸುತ್ತೇವೆ) ದೀರ್ಘಾಯಸ್ಸು, ಆರೋಗ್ಯ, ಸಂಪತ್ತು ಕೊಡು' ಎಂದು ಪ್ರಾರ್ಥನೆಯನ್ನೂ ಮಾಡುತ್ತೇವೆ. ಈ ದೀರ್ಘಾಯಸ್ಸು ಅಂದರೆ ಏನಿರಬಹುದು? ಅದು ಬಹುಷಃ ನಾವು ಭಾವಿಸಿರುವಂತೆ ಈಗ ಹೊಂದಿರುವ ಶರೀರವನ್ನೇ ಧರಿಸಿ ಇರುವ ಬಯಕೆಯಂತೂ ಇರಲಾರದು. ನಾವು ಗೊತ್ತಿಲ್ಲದಂತೆಯೇ, ನಮಗೇ ಅದು ಏನೆಂದು ನಮ್ಮ ಮನಸ್ಸಿಗೇ ಸ್ಪಷ್ಟವಿರದ ಸಂಗತಿಯ ಬಗ್ಗೆ ಪ್ರಾರ್ಥಿಸುತ್ತೇವೆ. ನಾವು ನಮ್ಮ ಕಲ್ಪನೆಗೂ ಮೀರಿದಂತಹ ಅದೇನೋ ಬಯಸುತ್ತೇವೆ. ಈ ದೀರ್ಘಾಯಸ್ಸು ಅಂದರೆ ಈಗಿನ ಶರೀರದಲ್ಲಿಯೇ ಬಹುಕಾಲ ಇರುವುದೇ? ಅದು ಬಾಲ್ಯಕಾಲದ ಶರೀರವೇ, ಯುವಾವಸ್ಥೆಯ ಶರೀರವೇ, ಮಧ್ಯವಯಸ್ಸಿನ ಶರೀರವೇ, ಪ್ರೌಢಾವಸ್ಥೆಯ ಶರೀರವೇ ಅಥವ ವೃದ್ಧಾಪ್ಯದ ಶರೀರವೇ? ಯಾವುದು ಎಂದು ನಾವು ಖಚಿತವಾಗಿ ಹೇಳಲಾರೆವು ಮತ್ತು ಅದೇ ಸ್ಥಿತಿಯಲ್ಲಿ ಬಹುಕಾಲ ಇರಲಾರೆವು ಎಂಬ ಅರಿವೂ ನಮಗೆ ಇರುತ್ತದೆ. ಆದರೂ ನಮಗೆ ದೀರ್ಘಾಯಸ್ಸು ಬೇಕು!
ಆತ್ಮನೇ ತಾನೆಂಬ ಅರಿವು ಮರೆಯಾಗಿ
ತನು-ಮನವೇ ತಾವೆಂದು ಭ್ರಮಿತರಾಗಿರಲು|
ತುಂಬಿದಜ್ಞಾನದಿಂ ಜನಿಸುವುದು ಕಾಮ
ಕಾಮಫಲಿತಕಾಗಿ ಕರ್ಮಗೈವರು ಮೂಢ||
     ನಮ್ಮ ಒಳಾಂತರಂಗದಲ್ಲಿ ಅಡಗಿದ ಬಯಕೆಯೆಂದರೆ ನಮ್ಮ ಅಸ್ತಿತ್ವದ ಮಹತ್ವವನ್ನು ಚಿರವಾಗಿ ಇರುವಂತೆ ಮಾಡುವುದೇ ಆಗಿದೆ! ವಿಚಾರ ಮಾಡಿದರೆ, ಶರೀರದ ಮೂಲಕ ನಾವು ಹೊಂದಿರುವ ಅಸ್ತಿತ್ವವನ್ನೇ ನಮ್ಮ ಅಸ್ತಿತ್ವ ಎಂದು ತಪ್ಪಾಗಿ ಗುರುತಿಸಿಕೊಂಡರೂ, ಶಾರೀರಿಕ ಅಸ್ತಿತ್ವಕ್ಕೂ ಮೀರಿ ಮುಂದುವರೆಯುವ ಸೂಕ್ಷ್ಮ ತುಡಿತವಿರುವುದನ್ನು ಕಂಡುಕೊಳ್ಳಬಹುದು. ಈ ಕಾರಣದಿಂದಲೇ ನಾವು ಹೆಚ್ಚು ಹೆಚ್ಚು ಬಯಸುತ್ತಾ ಹೋಗುವುದು, ಹೆಚ್ಚು ಹೆಚ್ಚು ಸಂಗ್ರಹಿಸುತ್ತಾ ಹೋಗುವುದು ಮತ್ತು ನಮ್ಮ ಅಸ್ತಿತ್ವವನ್ನು ಬಾಹ್ಯವಾಗಿ ವಿಸ್ತರಿಸಿಕೊಳ್ಳುತ್ತಾ ಹೋಗುವುದು! ಇದನ್ನು ಅನುಭವಿಸುವ ಸಲುವಾಗಿಯೇ ದೀರ್ಘಾಯಸ್ಸು ಕೋರುವುದು! ನಮ್ಮ ಪ್ರಾಪ್ತಿ(ಸಾಮ್ರಾಜ್ಯ ಅಂದುಕೊಳ್ಳೋಣ)ಯನ್ನು ಮತ್ತು ಸಮಯವನ್ನು ಹೆಚ್ಚಿಸಿಕೊಳ್ಳಬಯಸುವುದೇ ನಮ್ಮ ಆಸೆಯಾಗಿದೆ. ಇದಕ್ಕಾಗಿಯೇ ನಮ್ಮ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇವೆ. ನಾವು ಈಗಿರುವುದಕ್ಕಿಂತಲೂ ಹೆಚ್ಚಿನದನ್ನು ಎಲ್ಲಾ ಸಾಧ್ಯ ಮಾರ್ಗಗಳಿಂದ ಪಡೆಯಬಯಸುತ್ತೇವೆ. ಅದು ಎಷ್ಟರಮಟ್ಟಿಗೆ ಎಂದರೆ, ಈಗಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ನಾಡಿದ್ದು, ಹೀಗೆಯೇ ಮುಂದುವರೆದು ಅನಂತಕಾಲದವರೆಗೆ ಇಡೀ ವಿಶ್ವವೇ ನಮ್ಮದಾಗಬೇಕೆಂಬವರೆಗೆ ಈ ಅಸೆ ಅನ್ನುವುದು ಅಪ್ರಜ್ಞಾತ್ಮಕವಾಗಿ ನಮ್ಮಲ್ಲಿ ಸುಪ್ತವಾಗಿರುತ್ತದೆ. ಆದರೆ ತಿಳುವಳಿಕೆಯ ಕೊರತೆಯಿಂದ ಈ ಶರೀರದಲ್ಲಿಯೇ ದೀರ್ಘವಾಗಿ ಇರಬೇಕೆಂಬ ಆಸೆ ನಮ್ಮದು ಎಂದು ಅಂದುಕೊಂಡುಬಿಡುತ್ತೇವೆ. ಚತುರ್ವಿಧ ಪುರುಷಾರ್ಥಗಳಲ್ಲಿ ಈ ಕಾಮ/ಆಸೆಗೂ ಪ್ರಧಾನ ಸ್ಥಾನವಿರುವುದನ್ನು ಗಮನಿಸಬಹುದು. ಸಣ್ಣ ಸಣ್ಣ ಅಸೆಗಳನ್ನು ಬಿಟ್ಟು ಅತ್ಯಂತ ಗರಿಷ್ಠವಾದುದನ್ನು ಪಡೆಯಲು ನೆರವಾಗುವ ದೊಡ್ಡ ಆಸೆಯೇ ಪುರುಷಾರ್ಥ ಸಾಧನೆಗೆ ನೆರವಾಗುವ ಕಾಮವಾಗಿದೆ.
ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||
     ಬದುಕುವ ಆಸೆ ಅನ್ನುವುದು ನಮ್ಮ ಅಸ್ತಿತ್ವಕ್ಕೆ ಆಧಾರ ಎಂದು ಮೇಲಿನ ತರ್ಕದಿಂದ ತಿಳಿಯುತ್ತದೆ. ಆದರೆ ಈ ಬದುಕುವುದು ಅಂದರೆ ಏನು, ಬದುಕಿನ ಗುರಿ ಏನು ಎಂಬುದಕ್ಕೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಸ್ವರ್ಗ ಅಥವ ಮೋಕ್ಷ ಪ್ರಾಪ್ತಿಗಾಗಿ ಬದುಕುವುದು ಅನ್ನುತ್ತಾರೆ. ಹುಟ್ಟುವುದು ಆಕಸ್ಮಿಕವಾದರೂ ಸಾಯುವುದು ಖಚಿತ ಎನ್ನುವವರೂ ಇದ್ದಾರೆ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಗುರಿಯಾಗಿರಲಿಕ್ಕಿಲ್ಲ. ಹುಟ್ಟುವುದಕ್ಕಿಂತ ಮುಂಚೆ ಮತ್ತು ಸತ್ತ ನಂತರದಲ್ಲಿ ನಾವು ಈಗ ಹೊಂದಿರುವ ರೂಪದಲ್ಲಿ ಇರುವುದಿಲ್ಲ. ಆದ್ದರಿಂದ ಸಾವು ಅಂತಿಮವಲ್ಲ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಬದುಕಿನ ಗುರಿಯಾಗಿದ್ದರೆ ನಾವು ಹುಟ್ಟುತ್ತಲೇ ಇರುತ್ತಿರಲಿಲ್ಲ. ಹುಟ್ಟಿರುವುದರಿಂದ ನಾವು ಗುರಿಯನ್ನು ತಲುಪಿಲ್ಲವೆಂದು ಹೇಳಬೇಕೆ? ಸ್ವಾಮಿ ದಯಾನಂದರು ಹೇಳುತ್ತಾರೆ: 'ಬದುಕುವುದೇ ಬದುಕಿನ ಗುರಿ. ಬದುಕುವುದಕ್ಕಾಗಿ ಬದುಕಬೇಕು, ಇದನ್ನು ಬಿಟ್ಟು ಮತ್ತೇನೂ ಇಲ್ಲ.' ಎಷ್ಟು ಸತ್ಯ!
     ಬದುಕುವ ಆಸೆ ನಮ್ಮನ್ನು ಬದುಕಿಸಿದೆ. ಒಂದು ಗುರಿಯನ್ನು ತಲುಪಲು ನಾವು ಬಯಸಿದರೆ ಅದು ಕಷ್ಟಸಾಧ್ಯವೇನಲ್ಲ. ಯಾವುದೇ ಬಯಕೆ ಈಡೇರಲಾರದಂತಹುದೇನೂ ಅಲ್ಲ. ಅದನ್ನು ಸಾಧಿಸಲು ಸತತ ಪ್ರಯತ್ನ ಮಾಡಬೇಕಷ್ಟೆ. ಕೆಳಹಂತದ ಗುರಿಗಳು, ಆಸೆಗಳು, ಬಯಕೆಗಳನ್ನು ಬಿಟ್ಟು ಉನ್ನತವಾದ ಗುರಿಯೆಡೆಗೆ ನಮ್ಮ ಲಕ್ಷ್ಯವಿದ್ದರೆ ನಮ್ಮ ಶಾರೀರಿಕ ಅಸ್ತಿತ್ವವನ್ನು ಮೀರಿ ನಮ್ಮ ನೈಜ ಅಸ್ತಿತ್ವ ಮುನ್ನಡೆಯುತ್ತದೆ. ಇದನ್ನೇ 'ಬದುಕುವುದು' ಅನ್ನಬಹುದು.
ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ ||
-ಕ.ವೆಂ.ನಾಗರಾಜ್.
**************
ದಿನಾಂಕ 30.03.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶನಿವಾರ, ಏಪ್ರಿಲ್ 4, 2015

ಸ್ವಂತ ಅಸ್ತಿತ್ವ


     "ಹಾಂ? ಏನೆಂದಿರಿ? ಆಕಾಶಕ್ಕಿಂತಲೂ ಮಿಗಿಲಾದುದು ಇದೆಯೇ? ಆಕಾಶ ಸರ್ವವ್ಯಾಪಿ. ಅದು ಎಷ್ಟು ವಿಶಾಲವಾದುದು, ಹಿರಿದಾದುದು ಎಂಬುದೇ ತಿಳಿಯದಿರುವಾಗ, ಅದನ್ನು ವಿವರಿಸಲು ಸಾಧ್ಯವೇ ಇಲ್ಲ ಎಂಬಂತಿರುವಾಗ ಅದಕ್ಕಿಂತಲೂ ಮಿಗಿಲಾದುದು ಇದೆಯೇ? ನಿಮಗೆಲ್ಲೋ ತಲೆ ಕೆಟ್ಟಿರಬೇಕು" ಎಂಬ ಪ್ರತಿಕ್ರಿಯೆ ಆಕಾಶಕ್ಕಿಂತಲೂ ಹೆಚ್ಚಿನದು ಇದೆ ಎಂದು ಹೇಳಿದಾಗ ಬರಬಹುದಾದ ಸಾಮಾನ್ಯ ಪ್ರತಿಕ್ರಿಯೆ. ಅದು 'ಸ್ವಂತ ಅಸ್ತಿತ್ವ' ಎಂದು ಹೇಳಿದಾಗ 'ನಿಜಕ್ಕೂ ಇವನಿಗೆ ತಲೆ ಕೆಟ್ಟಿದೆ ಅಥವ ನಮ್ಮ ತಲೆ ಕೆಡಿಸುತ್ತಿದ್ದಾನೆ' ಎಂತಲೂ ಭಾವಿಸಬಹುದು. ಈ ನಮ್ಮ ಅಸ್ತಿತ್ವ ಹೇಗೆ ದೊಡ್ಡದು ಎಂಬ ಬಗ್ಗೆ ವಿಚಾರ ಮಾಡೋಣ.
ತನ್ನ ತಾನರಿಯೆ ಗುರುಕೃಪೆಯು ಬೇಕು
ಅರಿತುದನು ವಿಚಾರ ಮಾಡುತಿರಬೇಕು|
ವಿಚಾರ ಮಥನದ ಫಲವೆ ನಿತ್ಯ ಸತ್ಯ
ವೇದವಿದಿತ ಸತ್ಯ ತತ್ವವಿದು ಮೂಢ||
     ಈ ಆಕಾಶ ದೊಡ್ಡದು ಎಂಬ ಅರಿವು ನಮಗೆ ಬರಬೇಕಾದರೆ ನಮಗೆ ನಮ್ಮ ಅಸ್ತಿತ್ವದ ಬಗ್ಗೆ ಅರಿವು ಇರಬೇಕು. ಅಸ್ತಿತ್ವದ ಅರಿವು ಮೊದಲು ಬರುತ್ತದೆ, ನಂತರ ಹೊರಗಿನ ಆಕಾಶದ ಅರಿವು! ನಾವು ಮೊದಲು ಇದ್ದರೆ ತಾನೇ ಆಕಾಶ ಅನ್ನುವುದು ಇರುವುದು! ಆದ್ದರಿಂದ, ವಿಶಾಲ ಆಕಾಶದ ಕುರಿತು ತಿಳಿಯಬೇಕಾದರೆ ನಮ್ಮ ಅಸ್ತ್ತಿತ್ವದ ಅರಿವು ನಿರ್ಧಾರಕ ಅಂಶವಾಗುತ್ತದೆ. 'ಸ್ಮರ' ಎಂತಲೂ ಹೇಳಲಾಗುವ ಈ ನಮ್ಮ ಅಸ್ತಿತ್ವ ನಮ್ಮ ಅರಿವಿಗೆ, ತಿಳುವಳಿಕೆಗೆ ಸಮನಾಗಿರುತ್ತದೆ. ನೋಡಿ, ನಾವೇ ಇಲ್ಲದಿದ್ದರೆ, ಆಕಾಶ ಇದೆಯೋ ಇಲ್ಲವೋ ಅನ್ನುವ ಪ್ರಶ್ನೆಯೇ ಬರುವುದಿಲ್ಲ. ಯಾರಾದರೂ ತಮ್ಮ ಅಸ್ತಿತ್ವದ ಅರಿವನ್ನು ಕಳೆದುಕೊಂಡರೆ, ಅರ್ಥಾತ್ ತಾವು ಯಾರು ಎಂಬುದರ ಅರಿವೇ ಇಲ್ಲದಿದ್ದರೆ, ಅಂತಹವರಿಗೆ ಆಕಾಶದ ಕುರಿತು ಜಿಜ್ಞಾಸೆಯಾಗಲೀ, ಹೇಳುವುದಾಗಲೀ, ಕೇಳುವುದಾಗಲೀ, ಯೋಚಿಸುವುದಾಗಲೀ ಸಾಧ್ಯವಿರುವುದಿಲ್ಲ ಮತ್ತು ಅರ್ಥ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸ್ವಪ್ರಜ್ಞೆ ಇಲ್ಲದಿದ್ದರೆ ಯಾವುದೇ ಉಪಯುಕ್ತವಾದ ಕ್ರಿಯೆಗಳಾಗಲೀ, ಕೆಲಸಗಳಾಗಲೀ ಅಸಾಧ್ಯವಾಗುತ್ತದೆ. ನಮ್ಮ ಅಸ್ತಿತ್ವದ ಬಗ್ಗೆ ನಮಗೇ ಅರಿವಿಲ್ಲದಿದ್ದರೆ, ಆಕಾಶದ ಬಗ್ಗೆಯಾಗಲೀ ಅಥವ ಇನ್ನು ಯಾವುದರ ಬಗ್ಗೆಯಾಗಲೀ ತಿಳಿಯಬಯಸುವುದರಲ್ಲಿ ಏನು ಪ್ರಯೋಜನವಿದೆ? ಎಲ್ಲೆಲ್ಲಿ ಸ್ವಪ್ರಜ್ಞೆ ಜಾಗೃತವಾಗಿರುತ್ತದೋ, 'ನಮ್ಮತನ' ಅನ್ನುವುದು ಹಾಜರಿರುತ್ತದೆಯೋ ಅಲ್ಲಿ ಎಲ್ಲಾ ವಿಧವಾದ ಜ್ಞಾನ ಲಭಿಸುತ್ತಾ ಹೋಗುತ್ತದೆ. ಅಲ್ಲಿ ಯೋಚಿಸುವ ಪ್ರಕ್ರಿಯೆ ಇರುತ್ತದೆ, ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತದೆ, ಕೇಳುವ, ತಿಳಿಯುವ ಕೆಲಸ ಆಗುತ್ತದೆ ಮತ್ತು ಹಲವು ರೀತಿಗಳಲ್ಲಿ ಜ್ಞಾನಾರ್ಜನೆ ಮಾಡುವ ಆಸಕ್ತಿ ಮೂಡುತ್ತದೆ. ಜೀವನದಲ್ಲಿನ ನಮ್ಮ ಎಲ್ಲಾ ಚಟುವಟಿಕೆಗಳು, ಕ್ರಿಯೆಗಳು ನಮ್ಮ ಸ್ವಂತ ಅಸ್ತಿತ್ವದ ಅರಿವಿನ ಫಲಗಳಾಗಿವೆ. ಇದು ಇಲ್ಲದಿದ್ದರೆ ಇಡೀ ಜಗತ್ತೇ ಶೂನ್ಯ!
     ನಾವು ಧ್ಯಾನಿಸುವಾಗ ಯಾವುದು ಅತ್ಯಂತ ದೊಡ್ಡದೋ ಆ ಕುರಿತು ಧ್ಯಾನಿಸುವುದು ಸೂಕ್ತವೆಂದು ಹಿಂದೆಯೇ ತಿಳಿದುಕೊಂಡಿದ್ದೇವೆ. ನಮ್ಮ ತಿಳುವಳಿಕೆಗೆ ಮೀರಿದ ಕಾಲ್ಪನಿಕ ಸಂಗತಿಗಳನ್ನು ಗುರಿಯಾಗಿರಿಸಿ ಮಾಡುವ ಧ್ಯಾನದಿಂದ ಚಂಚಲ ಮನಸ್ಸಿನ ಹತೋಟಿ ಕಷ್ಟವೆಂಬುದೂ ನಮಗೆ ತಿಳಿದಿದೆ. ಆಕಾಶ ಎಲ್ಲಕ್ಕಿಂತ ದೊಡ್ಡದೆಂದುಕೊಂಡರೆ, ಆಕಾಶದ ಅಗಾಧತೆ ಕುರಿತು ಧ್ಯಾನಿಸುವುದು ಮನೋನಿಯಂತ್ರಣಕ್ಕೆ ಸಹಕಾರಿ. ಅದಕ್ಕಿಂತಲೂ ಸ್ವಂತ ಅಸ್ತಿತ್ವದ ಅರಿವು ಹಿರಿದು ಎಂದು ಮನನ ಮಾಡಿಕೊಂಡರೆ ನಮ್ಮ ಮನಸ್ಸನ್ನು ಆ ಕಡೆಗೆ ಹೊರಳಿಸಬೇಕು. ನಾವು ನಿಧಾನವಾಗಿ, ಹಂತ ಹಂತವಾಗಿ ಅರಿವಿನ ಹಂತವನ್ನು ಏರಿಸಿಕೊಳ್ಳುತ್ತಾ ಹೋಗುತ್ತಿದ್ದೇವೆ ಎಂಬುದು ನಮಗೇ ಅರಿವಾಗುತ್ತಾ ಹೋಗುತ್ತದೆ. ನಾವು ಈ ರೀತಿಯಾಗಿ ಏರುತ್ತಾ ಹೋದಂತೆ ಇನ್ನೂ ಎತ್ತರದ ಸಂಗತಿಗಳ ಅರಿವು ನಮಗೆ ಆಗುತ್ತಾ ಹೋಗುತ್ತದೆ. ಸ್ವಂತ ಅಸ್ತಿತ್ವದ ಪ್ರಜ್ಞೆ ಹೊಂದಿರುವ ವ್ಯಕ್ತಿಗೆ ಪ್ರತಿಯೊಂದು ವಸ್ತು ಅಥವ ಸಂಗತಿಯ ಅಥವ ಆಕಾಶದ ಕುರಿತೇ ಆಗಲಿ ಅ ಅರಿವಿನ ಫಲ ಸ್ವಪ್ರಜ್ಞೆಯ ಬಲದಿಂದಲೇ ಲಭಿಸಿದುದು ಎಂದು ತಿಳಿಯುತ್ತದೆ ಮತ್ತು ಅವನು ಅಷ್ಟರ ಮಟ್ಟಿಗೆ ಅವನು ಸ್ವಂತ ಅಸ್ತಿತ್ವದ ಮಹತ್ವ ತಿಳಿದವನಾಗುತ್ತಾನೆ.
ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||
     ಧ್ಯಾನದ ಕ್ರಿಯೆಯಲ್ಲಿ ಸ್ವಂತ ಅಸ್ತಿತ್ವದ ಮಹಿಮೆ ತಿಳಿದುಕೊಳ್ಳುವುದು ಒಂದು ಅದ್ಭುತ ತಿರುವು ಮೂಡಿಸುತ್ತದೆ. ಸಾಮಾನ್ಯವಾಗಿ, ನಾವು ಧ್ಯಾನಿಸುವಾಗ ಹೊರಗಿನ ವಸ್ತುಗಳು, ಸಂಗತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಧ್ಯಾನಿಸುತ್ತೇವೆ, ದಿಗಂತದೆಡೆಗೆ ದೃಷ್ಟಿ ಹಾಯಿಸುತ್ತೇವೆ. ಆದರೆ, ಧ್ಯಾನಿಸುವ ಆ ವಸ್ತುಗಳು, ಸಂಗತಿಗಳು, ಗುರಿಗಳು ನಮ್ಮ ಸ್ವಂತ ಅಸ್ತಿತ್ವದೊಂದಿಗೆ ಥಳಕು ಹಾಕಿಕೊಂಡಿದೆಯೆಂಬುದನ್ನು ಅರಿಯಲು ಮರೆತುಬಿಡುತ್ತೇವೆ. ವಸ್ತು/ಸಂಗತಿಯ ಪ್ರಜ್ಞೆ ಮತ್ತು ಪ್ರಜ್ಞೆಯ ವಸ್ತುವಿನ ಸಂಬಂಧಗಳು ಅರಿವಿನಿಂದ ಮರೆಯಾಗಿ ಅಂತಹ ವಸ್ತುಗಳು, ಸಂಗತಿಗಳು, ಗುರಿಗಳು ಹೊರಗೆ ಇರುತ್ತವೆ, ಸ್ವತಂತ್ರವಾಗಿರುತ್ತವೆ, ನಮ್ಮ ಅಸ್ತಿತ್ವಕ್ಕೂ ಅದು ಹೊರತಾಗಿದೆ ಎಂದುಕೊಂಡುಬಿಡುತ್ತೇವೆ. ಇದು ಸತ್ಯವಾಗಿರಲಾರದು. ನಮ್ಮ ಅಸ್ತಿತ್ವಕ್ಕೂ ಅಂತಹ ಸಂಗತಿಗಳಿಗೂ ಪರಸ್ಪರ ಸಂಬಂಧವಿದ್ದೇ ಇರುತ್ತದೆ. ಸಾಮಾನ್ಯರು ಅಸಾಮಾನ್ಯ ಸಂಗತಿಗಳಿಗೂ ತಮಗೂ ಪ್ರತ್ಯೇಕತೆಯಿದೆಯೆಂದು ಭಾವಿಸುತ್ತಾರೆ. ಅವುಗಳನ್ನು ಅವಲಂಬಿಸುತ್ತಾರೆ ಮತ್ತು ಅವುಗಳ ಸಹಾಯ, ಆಧಾರ ತಮಗೆ ಅಗತ್ಯವೆಂದು ಅದಕ್ಕೆ ಜೋತುಬೀಳುತ್ತಾರೆ. ಅಂತಹ ಅಸಾಮಾನ್ಯ ಸಂಗತಿಗಳಿಗೆ ತಾವೇ ಆಧಾರವಾಗಿರುವುದನ್ನು ಮರೆಯುತ್ತಾರೆ. ನಾವು ಇದ್ದರೆ ದೇವರು ಇರುತ್ತಾನೆ ಅಲ್ಲವೇ? ನಾವೇ ಇಲ್ಲದಿದ್ದರೆ ಏನೂ ಇರುವುದಿಲ್ಲವೆಂಬ ಅರಿವು ಮೂಡಿದರೆ ನಾವು ನಮ್ಮ ಧ್ಯಾನದ ಗುರಿಯನ್ನು ಹೊರಗಿನ ಸಂಗತಿಗಳಿಂದ ಒಳಗಿನ ಕಡೆಗೆ ತಿರುಗಿಸುತ್ತೇವೆ. ಹೀಗೆ ಮಾಡಲು ಸಾಧ್ಯವಾದರೆ ನಿಜಕ್ಕೂ ಇದು ಅದ್ಭುತ ಸಾಧನೆಯೆನಿಸುತ್ತದೆ.
ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ
ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ |
ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ
ಮಾಯಾ ಶಕ್ತಿಗೆದುರುಂಟೆ ಮೂಢ ||
     ಒಂದು ಸಿನೆಮಾ ಹೇಗಿರುತ್ತದೆಯೆಂಬುದನ್ನು  ಅದರ ಟ್ರೈಲರ್ ನೋಡಿ ತಿಳಿಯಬಹುದು. ಹಾಗೆಯೇ ಸ್ವಂತ ಅಸ್ತಿತ್ವದ ಮಹತ್ವವನ್ನು ತಿಳಿಯಲು ಗಾಢನಿದ್ದೆಯಲ್ಲಿ ನಮ್ಮ ಸ್ಥಿತಿ ಹೇಗಿರುತ್ತದೆಯೆಂಬುದನ್ನು ಕಲ್ಪಿಸಿಕೊಂಡರೆ ಸಾಕು. ಗಾಢ ನಿದ್ದೆಯಲ್ಲಿದ್ದಾಗ ನಮಗೆ ನಮ್ಮ ಅರಿವೇ ಇರುವುದಿಲ್ಲ. ಇನ್ನು ದೇವರು, ಜಗತ್ತು, ಆಕಾಶ ಮುಂತಾದವುಗಳು ಸಹ ಇವೆಯೋ, ಇಲ್ಲವೋ ಎಂಬುದರ ಯೋಚನೆ ಸಹ ಬರುವುದಿಲ್ಲ. ಆ ಸಮಯದಲ್ಲಿ ಸುಖ-ದುಃಖ, ಲಾಭ-ನಷ್ಟ, ನೋವು-ನಲಿವುಗಳ ಸುಳಿವೂ ಇರುವುದಿಲ್ಲ. ಯಾವ ಜಂಜಾಟವೂ ಇರುವುದೇ ಇಲ್ಲ. ನಿದ್ದೆಯಿಂದ ಎಚ್ಚರವಾದ ತಕ್ಷಣದಲ್ಲಿ 'ನಾನು' ಎದ್ದುಬಿಡುತ್ತದೆ! ಸುತ್ತಮುತ್ತಲ ಪ್ರಪಂಚವೂ ಎದ್ದುಬಿಡುತ್ತದೆ! 'ನಾನು' ಏಳದಿದ್ದರೆ ಯಾವುದರ ಅಸ್ತಿತ್ವವೂ ಇರುವುದೇ ಇಲ್ಲ. ಇದು ಅಸ್ತಿತ್ವದ ವಿಸ್ಮಯಕಾರಿ ಗುಣ. ನಮ್ಮ ತಡಕಾಟ, ಹುಡುಕಾಟಗಳು ಬಹುತೇಕ ಹೊರಗೆ ಇರುತ್ತವೆ. ಏನು ಹುಡುಕುತ್ತಿದ್ದೇವೆಯೋ ಅದು ಹೊರಗಿಲ್ಲ, ನಮ್ಮೊಳಗೇ ಇದೆ ಎಂಬ ಅರಿವು ಮೂಡತೊಡಗಿದಾಗ ಸ್ವಲ್ಪ ಸ್ವಲ್ಪವಾಗಿ ಬೆಳಕು ಮೂಡತೊಡಗುತ್ತದೆ.
ಬಿಟ್ಟುಬಿಡುವನು ಸಾಧಕನು ತೊರೆಯುವನು
ಹೊರಮನದ ಕೋರಿಕೆಯನಲ್ಲಗಳೆಯುವನು |
ಅಂತರಂಗದ ಕರೆಯನನುಸರಿಸಿ ಬಾಳುವನು
ಸಮಚಿತ್ತದಲಿ ಸಾಗುವನು ಮೂಢ ||
     ಅಂತರಂಗದ ಕರೆಗೆ ಓಗೊಟ್ಟರೆ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ: "ನಾವು ಇದ್ದರೆ ಎಲ್ಲವೂ ಇರುತ್ತದೆ; ನಾವು ಇಲ್ಲದಿದ್ದರೆ ಏನೂ ಇರುವುದಿಲ್ಲ. ಇದು ನಮ್ಮ ಅಸ್ತಿತ್ವದ ಮಹತ್ವ!"
-ಕ.ವೆಂ.ನಾಗರಾಜ್.
*************
ದಿನಾಂಕ 23.03.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಮಾರ್ಚ್ 31, 2015

ಪಂಚಶಕ್ತಿಗಳ ಮಹತ್ವ - ೪: ಆಕಾಶವೋ? ದೇವರ ಪ್ರತಿನಿಧಿಯೋ?


     ಹೀಗೆ ಊಹಿಸಿಕೊಳ್ಳೋಣ: ಒಂದೊಮ್ಮೆ ಭೂಮಿ ನೀರಿನಲ್ಲಿ ಮುಳುಗಿ ಕರಗಿಹೋದರೆ? ನೀರು ಬೆಂಕಿಯಿಂದ ಒಣಗಿ ಆವಿಯಾದರೆ? ಬೆಂಕಿಯನ್ನು ಗಾಳಿ ನಂದಿಸಿದರೆ? ಗಾಳಿ ಆಕಾಶದಲ್ಲಿ ಐಕ್ಯವಾದರೆ? ಕೊನೆಯಲ್ಲಿ ಉಳಿಯುವುದು ಆಕಾಶ ಮಾತ್ರ, ಆಕಾಶ, ಆಕಾಶ, ಎಲ್ಲೆಲ್ಲೂ ಆಕಾಶ, ಅಷ್ಟೆ! ಪ್ರಳಯ ಎಂಬ ಕಲ್ಪನೆ ಸಹ ಇದನ್ನೇ ಹೇಳುತ್ತದೆ. ಅಂತಿಮವಾಗಿ ಉಳಿಯುವ ಆಕಾಶ ಮಾತ್ರ ಕಾಣುವ ಸತ್ಯ, ಅತ್ಯಂತ ಗ್ರಾಹ್ಯ ಸಂಗತಿ, ಎಲ್ಲವನ್ನೂ ಒಳಗೊಳ್ಳಬಲ್ಲ, ಸೇರಿಸಿಕೊಳ್ಳಬಲ್ಲ, ಎಲ್ಲೆಲ್ಲೂ ಇರುವಂತಹ ವಿಶಾಲ ಶಕ್ತಿಯಾಗಿರುತ್ತದೆ. ಹೀಗಾಗಿ ಇದು ಸರ್ವವ್ಯಾಪಿ, ಸರ್ವಶಕ್ತ ಪರಮಾತ್ಮನನ್ನು ಹೋಲುತ್ತದೆ.
     ಆಕಾಶದ ಮಹತ್ವ ಅರಿವಾಗುವುದು ಅದು ಇರುವುದರಿಂದಲೇ! ಎಲ್ಲದರ ಅಸ್ತಿತ್ವಕ್ಕೆ ಅವಕಾಶವಾಗಿರುವುದು ಆಕಾಶದಿಂದಲೇ. ಪ್ರತಿಯೊಂದೂ ಪರಿಣಾಮಸ್ವರೂಪವಾಗಿ ಆಕಾಶದಿಂದಲೇ ಬರುತ್ತದೆ. ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಗುಡುಗು, ಸಿಡಿಲು, ಇಂತಹದು ಇದೆ, ಇಂತಹದು ಇಲ್ಲವೆನ್ನುವಂತಿಲ್ಲದೆ ಪ್ರತಿಯೊಂದಕ್ಕೂ ಅವಕಾಶ (ಇದನ್ನು ಶೂನ್ಯವೆನ್ನೋಣವೇ? ಖಾಲಿ ಸ್ಥಳವೆನ್ನೋಣವೇ? ಇದಕ್ಕೂ ಆಕಾಶ ಬೇಕಲ್ಲಾ!!) ಮಾಡಿಕೊಟ್ಟಿರುವುದು ಆಕಾಶವೇ. ಇರಲು ಜಾಗವಿರದಿರುತ್ತಿದ್ದರೆ ನಾವು ಎಲ್ಲಿರುತ್ತಿದ್ದೆವು? ನಮ್ಮ ಸುಖ-ದುಃಖಗಳು ಎಲ್ಲಿರುತ್ತಿದ್ದವು? ಆಕಾಶವಿರದಿದ್ದರೆ ಯಾವುದೇ ವಸ್ತುಗಳು ಇರುತ್ತಿರಲಿಲ್ಲ, ಸುಖ-ದುಃಖಗಳ ಅನುಭವವೂ ನಮಗೆ ಇರುತ್ತಿರಲಿಲ್ಲ. ಜೀವನದಲ್ಲಿ ನಾವು ಅನುಭವಿಸುವ ನವರಸಗಳಿಗೂ, ತೃಪ್ತಿ, ಅತೃಪ್ತಿಗಳಿಗೂ ಆಕಾಶ ಕಾರಣವೆಂದರೆ ಅತಿಶಯೋಕ್ತಿಯಾಗಲಾರದು. ಭೂಮಿಯಿಂದ ಬೆಳೆಯುವ ಗಿಡ-ಮರಗಳಿಗೂ ಬೆಳೆಯಲು ಆಕಾಶವಿರುವುದರಿಂದಲೇ ಸಾಧ್ಯವಾಗಿದೆ. ಆಕಾಶದ ಕುರಿತು ಎಷ್ಟು ಹೆಚ್ಚು ವಿವರಣೆ ನೀಡಿದರೂ ಅದು ಕಡಿಮೆಯೇ ಆಗುತ್ತದೆ, ಏನೋ ಕೊರತೆ ಇದ್ದೇ ಇರುತ್ತದೆ. ಅದನ್ನು ವಿವರಿಸುವುದು ಕಷ್ಟ. ನಮ್ಮ ಮೆದುಳು ಗ್ರಹಿಸಬಹುದಾದ ಅತ್ಯಂತ ಕೊನೆಯ ಸಂಗತಿ ಎಂದರೆ ಆಕಾಶ ಮಾತ್ರ. ಅದರ ಆಚೆಗೆ ಮೆದುಳು ಚಿಂತಿಸಲು ಸಾಧ್ಯವಿದೆಯೇ? ಚಿಂತಿಸಿ ಅದು ಹೀಗೆ ಎಂದು ಹೇಳಲು ಸಾಧ್ಯವಿದೆಯೇ?
ಆಗಸದ ಬಣ್ಣವದು ತೋರುವಂತಿಹುದೇನು
ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು |
ಅರಿತವರು ಯಾರಿಹರು ಗಗನದ ನಿಜಬಣ್ಣ
ದೇವನೆಂತಿಹನೆಂದು ಗೊತ್ತಿಹುದೆ ಮೂಢ? ||
     ಆಕಾಶ ಅಂದರೇನು? ಗೊತ್ತಿಲ್ಲ. ಆಕಾಶ ಎಷ್ಟು ದೊಡ್ಡದು? ಗೊತ್ತಿಲ್ಲ. ಆಕಾಶ ಹೇಗಿದೆ? ಗೊತ್ತಿಲ್ಲ. ಚಂದ್ರ ಎಲ್ಲಿದ್ದಾನೆ? ಆಕಾಶದಲ್ಲಿದ್ದಾನೆ. ಭೂಮಿ ಎಲ್ಲಿದೆ? ಅದೂ ಆಕಾಶದಲ್ಲಿದೆ. ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂ ಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಅಂದರೆ ನಾವೂ ಆಕಾಶದಲ್ಲೇ ಇದ್ದೇವೆ. ಆಕಾಶ ನಮ್ಮನ್ನು ಹೊಂದಿಕೊಂಡೇ ಇದೆ! ನಾವಷ್ಟೇ ಏಕೆ, ಎಲ್ಲಾ ಚರಾಚರ, ಜೀವ, ನಿರ್ಜೀವ ವಸ್ತುಗಳನ್ನೂ ಆಕಾಶ ಆವರಿಸಿದೆ. ಅಂದರೆ ಆಕಾಶ ಸರ್ವವ್ಯಾಪಿ. ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ -ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ- ಕೂಡಿದ್ದುದಾಗಿದ್ದು, ಆಕಾಶ ನಮ್ಮೊಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ. ನಾವು ಆಕಾಶವನ್ನು ಕಾಣದಿರಬಹುದು. ಆದರೆ ಆಕಾಶ ಸದಾ ನಮ್ಮನ್ನು ನೋಡುತ್ತಿರುತ್ತದೆ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ?  ಪರಮಾತ್ಮನನ್ನು ವರ್ಣಿಸುವಾಗ ಅವನು ಸರ್ವವ್ಯಾಪಿ, ಅವನಿಲ್ಲದ ಸ್ಥಳವೇ ಇಲ್ಲ, ಅವನು ಒಳಗೂ ಇದ್ದಾನೆ, ಹೊರಗೂ ಇದ್ದಾನೆ, ಎಲ್ಲೆಲ್ಲೂ ಇದ್ದಾನೆ, ಇತ್ಯಾದಿ ಹೇಳುವುದನ್ನು ಕೇಳಿದ್ದೇವೆ. ಅವನ ಗಮನಕ್ಕೆ ಬಾರದಂತೆ ಏನೂ ಜರುಗಲು ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇವೆ. ಈ ವಿಶ್ವ ಬ್ರಹ್ಮಾಂಡವನ್ನು ನಿಯಂತ್ರಿಸುವ ವಿರಾಟ್ ಶಕ್ತಿಯ ಕುರಿತು ವೇದದಲ್ಲಿ ಹೀಗೆ ಹೇಳಿದೆ: ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ | ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹುತಃ || (ಯಜು. ೪೦.೫.) ಅದು ವಿಶ್ವಕ್ಕೆ ಗತಿ ನೀಡುತ್ತದೆ, ಅದು ಸ್ವತಃ ಚಲಿಸುವುದಿಲ್ಲ, ಅದು ದೂರದಲ್ಲಿದೆ, ಅದೇ ಹತ್ತಿರದಲ್ಲಿಯೂ ಇದೆ. ಅದು ಇದೆಲ್ಲದರ ಒಳಗೂ ಇದೆ, ಇದೆಲ್ಲದರ ಹೊರಗೂ ಇದೆ ಎಂಬುದು ಇದರ ಅರ್ಥ. ಈ ಎಲ್ಲಾ ಗುಣಗಳು ಆಕಾಶಕ್ಕೆ ಇರುವುದರಿಂದ ಆಕಾಶವನ್ನು ಕಣ್ಣಿಲ್ಲದೇ ಕಾಣಬಲ್ಲ 'ದೇವರ ಕಣ್ಣು' ಎನ್ನೋಣವೇ?
     ಆಕಾಶ ಇಂತಹ ಸ್ಥಳದಲ್ಲಿ ಇದೆ, ಇಂತಹ ಸ್ಥಳದಲ್ಲಿ ಇರುವುದಿಲ್ಲವೆಂದು ಹೇಳಲಾಗುವುದಿಲ್ಲ. ಜೀವಿಗಳು ವಾಸವಿರಲು ಸಾಧ್ಯವೇ ಇರದ ಸ್ಥಳದಲ್ಲೂ ಅದಿದೆ, ಧಗಧಗಿಸುವ ಅಗ್ನಿಯ ಜೊತೆಗೂ ಇದೆ, ಭೋರ್ಗರೆಯುವ ಸಮುದ್ರ, ಸಾಗರಗಳಿರುವಲ್ಲೂ ಇದೆ. ಆಕಾಶವನ್ನು ಬೆಂಕಿ ಸುಡಲಾರದು, ನೀರು ತೋಯಿಸಲಾರದು, ಅದನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು, ಅದನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಂಡದ ಸೃಷ್ಟಿಯ ಜೊತೆಗೂ ಅದು ಇರುತ್ತದೆ, ಪ್ರಳಯ, ವಿನಾಶ ಕಾಲದಲ್ಲೂ ಅದು ಇರುತ್ತದೆ. ಅದಕ್ಕೆ ಪ್ರಾರಂಭವಿಲ್ಲ, ಕೊನೆಯಿಲ್ಲ, ಅರ್ಥಾತ್ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಪರಮಾತ್ಮನನ್ನೂ ಹೀಗೆಯೇ ಇದ್ದಾನೆ ಅನ್ನುತ್ತೇವೆ. ದೇವರ ವಿಶ್ವರೂಪ ದರ್ಶನವೆಂದರೆ ಆಕಾಶವೇ ಅಲ್ಲವೇ? ಒಳಗಣ್ಣಿದ್ದು ತೆರೆದು ನೋಡಬಲ್ಲವರು ಈ ವಿಶ್ವರೂಪವನ್ನು ಅವರ ಶಕ್ತ್ಯಾನುಸಾರ ಕಂಡಾರು. ನಿಜವಾಗಿ ದೇವರ ಪ್ರತಿನಿಧಿ ಎಂದು ಆಕಾಶವನ್ನು ಹೆಸರಿಸಬಹುದೇ ಹೊರತು, ಯಾವುದೇ ವ್ಯಕ್ತಿ ಅಥವ ಜೀವಿಯನ್ನು ಇಂತಹ ಅಗಾಧ ಶಕ್ತಿಯ ಪ್ರತಿನಿಧಿ ಎಂದು ಹೇಳುವುದು, ದೇವರ ಮಗ ಅನ್ನುವುದು, ದೇವರ ರೂಪದಲ್ಲಿ ಕಾಣುವುದು ಸಮಂಜಸವೆನಿಸುವುದಿಲ್ಲ. ಎಲ್ಲರಲ್ಲೂ 'ಅವನ' ಅಂಶವಿರುವುದರಿಂದ ಆ ವಿಶಾಲಾರ್ಥದಲ್ಲಿ ತೆಗೆದುಕೊಳ್ಳಬಹುದೇ ಹೊರತು, ಯಾರನ್ನೇ ಆಗಲಿ ದೇವರಂತೆ ಭಾವಿಸುವುದು ಸೂಕ್ತವಲ್ಲ. ನಾಶವಿರದ ಭಗವಂತನನ್ನು ನಾಶವಾಗಬಹುದಾದ ಸಂಗತಿಗಳಲ್ಲಿ ಗುರುತಿಸುವುದು ಎಷ್ಟರ ಮಟ್ಟಿಗೆ ಸರಿಯಾದೀತು? ಬೇಕಾದರೆ ದೇವಮಾನವರು, ಮಹಿಮಾವಂತರು, ವಿಶೇಷ ಶಕ್ತಿಯುಳ್ಳವರು, ಹೀಗೆ ಭಾವಿಸಬಹುದು.
ತಿಳಿದವರು ಯಾರಿಹರು ಆಗಸದ ನಿಜಬಣ್ಣ
ತುಂಬುವರು ಯಾರಿಹರು ಆಗಸದ ಶೂನ್ಯ |
ಆಗಸದ ನಿಜತತ್ವ ಅರಿತವರು ಯಾರು?
ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ ||
     ಆಕಾಶವನ್ನು ಕಾಣಲಾಗುವುದಿಲ್ಲ, ಆದುದರಿಂದ ಅದನ್ನು ನಂಬುವುದಿಲ್ಲ, ಆಕಾಶವೇ ಇಲ್ಲವೆಂದರೆ ಆಕಾಶ ಇಲ್ಲವಾಗುತ್ತದೆಯೇ? ಆಕಾಶದ ಗುಣ ಹೇಗಿದೆ? ಅದಕ್ಕೆ ಗುಣವೇ ಇಲ್ಲ, ನಿರ್ಗುಣ. ಅದಕ್ಕೆ ಮಮಕಾರವೂ ಇಲ್ಲ, ಅಹಂಕಾರವೂ ಇಲ್ಲ. ಭೇದ-ಭಾವ ಮಾಡುವುದೇ ಇಲ್ಲ. ಜಾತಿ, ಮತ, ಪಂಥಗಳ ಕಟ್ಟಿಲ್ಲ. ಆ ದೇಶ, ಈ ದೇಶ ಅನ್ನುವುದು ಇಲ್ಲ. ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ, ಮುಂದೆಯೂ ಹೀಗೆಯೇ ಇರುತ್ತದೆ. ಇದು ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭೌಮಿಕ ಸತ್ಯ. ಕೆಟ್ಟವರು, ಒಳ್ಳೆಯವರು, ಜೀವಿ, ನಿರ್ಜೀವಿ ಎಂದು ಎಣಿಸುವುದೇ ಇಲ್ಲ. ಯಾರು ಏನೇ ಮಾಡಿದರೂ ಅಡ್ಡಿಪಡಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಎಲ್ಲಾ ಆಗು-ಹೋಗುಗಳಿಗೆ, ಕ್ರಿಯೆಗಳಿಗೆ ಅದು ಕೇವಲ ಸಾಕ್ಷಿಯಾಗಿರುತ್ತದೆ. ಖಾಲಿ ಆಕಾಶವನ್ನು ಯಾವುದರಿಂದಲಾದರೂ ತುಂಬಿ ಭರ್ತಿ ಮಾಡಲು ಸಾಧ್ಯವಿದೆಯೇ? ಇಲ್ಲ, ಎಷ್ಟು ತುಂಬಿದರೂ, ಏನನ್ನು ತುಂಬಿದರೂ ಅದು ಭರ್ತಿಯಾಗುವುದೇ ಇಲ್ಲ. ಹಾಗೆಯೇ ನಾವು ಆಕಾಶವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಹೊರಟರೂ ಅದು ಆಕಾಶವಾಗಿಯೇ, ಗೂಢವಾಗಿಯೇ ಉಳಿಯುತ್ತದೆ. ಆಕಾಶ ನಮ್ಮನ್ನು ಅರಗಿಸಿಕೊಳ್ಳುತ್ತದೆ. ನಾವು ಆಕಾಶವನ್ನಲ್ಲ. ಆಕಾಶ ನಮ್ಮ ಅಹಂ, ಮನಸ್ಸು, ಯೋಚನೆಗಳು, ಚಿಂತನೆಗಳು, ಜ್ಞಾನ, ಅಜ್ಞಾನ, ಎಲ್ಲವನ್ನೂ, ಎಲ್ಲಾ ಅಂದರೆ ಎಲ್ಲವನ್ನೂ, ನುಂಗಿ ನೀರು ಕುಡಿಯಬಲ್ಲುದು, ಅರ್ಥಾತ್ ಅರಗಿಸಿಕೊಳ್ಳಬಲ್ಲದು. ಪರಮಾತ್ಮ 'ನಿರ್ಮಮೋ ನಿರಹಂಕಾರಃ' ಎಂಬುದನ್ನು ತೋರ್ಪಡಿಸಿಕೊಂಡಿರುವುದು ಆಕಾಶದಿಂದಲೇ. ಆಕಾಶವನ್ನು ತೃಪ್ತಿ ಪಡಿಸಲು ಯಾವ ಪೂಜೆ ಮಾಡಬೇಕು? ಯಾವ ಪ್ರಾಣಿಯ ಬಲಿ ಕೊಡಬೇಕು? ಯಾವ ನೈವೇದ್ಯ ಇಡಬೇಕು? ಏನೂ ಮಾಡಬೇಕಿಲ್ಲ. 'ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟದ್ದಕ್ಕೆ ಕೆಟ್ಟದ್ದು' ಎಂಬುದು ಜ್ಞಾನಿಗಳು, ಸಾಧಕರು ಹೇಳುವ ಮಾತು. ಪುನರ್ಜನ್ಮವನ್ನು ನಂಬದವರೂ ಸಹ ದೇವರು ಒಂದು 'ನಿರ್ಣಾಯಕ ದಿನ'ದಂದು ಎಲ್ಲಾ ಜೀವಿಗಳಿಗೆ ಅವರ ಕರ್ಮಕ್ಕನುಸಾರವಾಗಿ ಫಲ ಕೊಡುತ್ತಾನೆಂದು ನಂಬುತ್ತಾರೆ. ಪುನರ್ಜನ್ಮವನ್ನು ನಂಬುವವರಿಗೆ ಪೂರ್ವಾರ್ಜಿತ ಕರ್ಮದ ಅನುಸಾರ ಮುಂದಿನ ಜನ್ಮವೆಂದು ಹೇಳುತ್ತಾರೆ. ಒಟ್ಟಿನಲ್ಲಿ ನಾವು 'ಒಳ್ಳೆಯ' ರೀತಿ ಬಾಳಬೇಕೆಂಬುದು ನೀತಿ. ಹಾಗೆ ಮಾಡಲು ಏನು ಅಡ್ಡಿ? ಆಕಾಶವನ್ನು ಕೃತಕ ಭಯ, ಭಕ್ತಿಗಳಿಂದ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ದೇವರನ್ನೂ ಭಯ-ಭಕ್ತಿಗಳಿಂದ ತೃಪ್ತಿಪಡಿಸಿ ನಮ್ಮ ಇಚ್ಛೆ ಈಡೇರಿಸಿಕೊಳ್ಳುವೆವೆಂಬುದು ಭ್ರಮೆ ಎಂದು ಆಕಾಶ ಸಾರುತ್ತಿದೆ. ನಮ್ಮ ಕಷ್ಟ-ನಷ್ಟಗಳಿಗೆ, ಒಳಿತು-ಕೆಡಕುಗಳಿಗೆ ದೇವರು ಕಾರಣನಲ್ಲ, ನಾವೇ ಎಂಬುದು 'ಆಕಾಶ' ತನ್ನ ಇರುವಿಕೆಯ ರೀತಿಯಿಂದ ಹೇಳುತ್ತಿದೆ.
     ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಗಳನ್ನು ಮೇಲೆತ್ತಿ 'ದೇವರೇ ಕಾಪಾಡಪ್ಪಾ' ಅನ್ನುತ್ತೇವೆ. ಅಂದರೆ ದೇವರು 'ಮೇಲೆ' ಇದ್ದಾನೆ ಎಂದು ಅಂದುಕೊಳ್ಳುತ್ತೇವೆ, ಆಕಾಶವನ್ನೂ 'ಮೇಲೆ' ಇದೆ ಎಂದು ಭಾವಿಸಿದಂತೆ! ಆಕಾಶವನ್ನು ಬೆಟ್ಟ-ಗುಡ್ಡಗಳ ಮೇಲೆ, ರಾತ್ರಿಯಲ್ಲಿ ಮಿನುಗುವ ಚಂದ್ರ-ತಾರೆಗಳ ಹಿನ್ನೆಲೆಯಲ್ಲಿ ಕಾಣುವ ಸುಂದರ ದೃಷ್ಯಗಳ ರೀತಿಯಲ್ಲಿ ಕಾಣುವ ನಾವು ದೇವರೂ ವೈಕುಂಠ, ಕೈಲಾಸ, ಇತ್ಯಾದಿ ಬೇರೆಯೇ ಲೋಕಗಳಲ್ಲಿದ್ದಾನೆಂದು ಭಾವಿಸುತ್ತೇವೆ. ಕಾಶಿ, ಬದರಿ, ಅಯೋಧ್ಯೆ, ಕನ್ಯಾಕುಮಾರಿ, ಮೆಕ್ಕಾ, ಜೆರುಸಲೇಮ್, ಇತ್ಯಾದಿ ಸ್ಥಳಗಳು ದೇವರು ಇರುವ ವಿಶೇಷ ಸ್ಥಳಗಳೆಂದುಕೊಳ್ಳುತ್ತೇವೆ. ಆಕಾಶವನ್ನು ಮೇಲೆ ಮಾತ್ರ ಇದೆ ಎಂದು ಅಂದುಕೊಳ್ಳುವ ನಾವು ಅದು ನಮ್ಮೊಡನೆಯೇ ಇದೆ ಎಷ್ಟು ಜನ ಭಾವಿಸುತ್ತೇವೆ? ಕೈಗೆ ಸಿಗಲಾರದ ವಸ್ತುವನ್ನು 'ಗಗನಕುಸುಮ'ವೆಂದು ವರ್ಣಿಸುತ್ತೇವೆ. ಆದರೆ, ಸದಾ ನಮ್ಮನ್ನು ಹೊಂದಿಕೊಂಡೇ ಇರುವ, ಆವರಿಸಿರುವ ಆಕಾಶವನ್ನು ಗಮನಿಸದ ನಾವುಗಳೇ ನಿಜವಾದ ಗಗನಕುಸುಮಗಳು. ಅಶನ, ವಸನ, ವಸತಿಗಳನ್ನು ಕರಣಿಸುವ ಭೂಮಿ ನಮ್ಮ ತಾಯಿಯಾದರೆ, ಸದಾ ನಮ್ಮೊಡನಿದ್ದು ನಮ್ಮನ್ನು ಗಮನಿಸುವ ಆಕಾಶ ನಮ್ಮ ತಂದೆ! ನಮ್ಮೊಂದಿಗಿದ್ದರೂ ತನ್ನ ಇರುವನ್ನು ಪ್ರಕಟಿಸದ, ನಮ್ಮ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸದ, ಜಗತ್ತನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿರುವ ಆಗಸಕ್ಕಿಂತ ಹೆಚ್ಚು ವಾತ್ಸಲ್ಯಮಯಿ ತಂದೆ ಬೇರೆ ಯಾರಾದರೂ ಇರಲು ಸಾಧ್ಯವೇ?
     ನಾಟಕದಲ್ಲಿ ವಿವಿಧ ಪಾತ್ರಧಾರಿಗಳು ನಾಟಕ ಆಡುವಾಗ ಪಾತ್ರಗಳೇ ಆಗಿ ಅನುಭವಿಸಿ ಆಡಿದರೂ ನಾಟಕ ಮುಗಿದ ನಂತರ ವಾಸ್ತವ ವ್ಯಕ್ತಿಗಳಾಗುತ್ತಾರೆ. ಆದರೆ ನಿಜ ಜೀವನ ನಾಟಕದಲ್ಲಿ? ಈ ನಾಟಕರಂಗದ ಅದ್ಭುತ ಪರದೆ ಆಕಾಶ! ಈ ಪರದೆಯ ಮುಂದೆ ನಾವು-ನೀವೆಲ್ಲರೂ ಪಾತ್ರಧಾರಿಗಳೇ. ನಮ್ಮ ಪಾತ್ರಗಳನ್ನು ನಾವು ಎಷ್ಟು ತನ್ಮಯರಾಗಿ ನಿರ್ವಹಿಸುತ್ತೇವೆಂದರೆ ನಾವು ಆ ಪಾತ್ರಗಳೇ ಆಗಿಬಿಡುತ್ತೇವೆ. ನಾವು ನಿಜವಾಗಿ 'ಯಾರು' ಎಂದು ತಲೆಕೆಡಿಸಿಕೊಳ್ಳುವುದೇ ಇಲ್ಲ, ಮತ್ತು ಪಾತ್ರವಲ್ಲದೆ ನಾವು ಬೇರೆ ಎಂದು ಅಂದುಕೊಳ್ಳುವುದೇ ಇಲ್ಲ.  ಈ ಜೀವನ ನಾಟಕದಲ್ಲಿ ನಮ್ಮದು ಕೆಲ ಸೀಮಿತ ಅವಧಿಗೆ ಬಂದು ಹೋಗುವ ಪಾತ್ರವಾಗಿದ್ದರೂ ನಾವು ಶಾಶ್ವತರೆಂದು ಅಂದುಕೊಂಡು, ನಮ್ಮ ಇರುವಿಕೆಯನ್ನು ಶಾಶ್ವತಗೊಳಿಸಲು, ನಮ್ಮತನವನ್ನು ಅಚ್ಚೊತ್ತಲು ಜೀವನ ಪೂರ್ತಿ ತೊಡಗಿಕೊಳ್ಳುತ್ತೇವೆ!
     ಒಂದು ಮೂಲವಸ್ತು ಯಾವ ಕಾಲಕ್ಕೂ ನಾಶವಾಗುವುದಿಲ್ಲವೆಂದು ರೂಪಾಂತರ ಮಾತ್ರ ಹೊಂದುವುದೆಂದು ವಿಜ್ಞಾನ ಹೇಳುತ್ತದೆ. ನಮ್ಮ ದೇಹ ಪಂಚಭೂತಗಳಿಂದ ಆಗಿದ್ದು ಆ ದೇಹಕ್ಕೆ ಅರ್ಥ ಕೊಡುವ ಒಂದು ಶಕ್ತಿ ಜೀವಾತ್ಮ. ಸತ್ತ ನಂತರದಲ್ಲಿ ದೇಹ ಪಂಚಭೂತಗಳಲ್ಲಿ ಸೇರಿ ಹೋಗುತ್ತದೆ. ಜೀವಾತ್ಮ? ಅದಕ್ಕೆ ನಾಶವಿಲ್ಲ. ನಂತರದಲ್ಲಿ ಅದು ಹೊಸ ಶರೀರವನ್ನು ಕಂಡುಕೊಳ್ಳುತ್ತದೆ ಎಂದು ತಿಳಿದವರು ಹೇಳುತ್ತಾರೆ. ವೈಜ್ಞಾನಿಕವಾಗಿ ಚಿಂತಿಸಿದರೂ ಪಂಚಭೂತಗಳಿಗೆ ಸೇರದ ಜೀವಾತ್ಮ ಯಾವುದಾದರೂ ರೂಪದಲ್ಲಿ ಇರಲೇಬೇಕಲ್ಲವೆ? ಈ ಎಲ್ಲಾ ಕ್ರಿಯೆಗಳಿಗೆ ಸಾಕ್ಷಿಯಾಗುವುದು ಆಕಾಶವೊಂದೇ! ಇದ್ದದ್ದು ಆಕಾಶದಲ್ಲಿ, ಹೋದದ್ದು ಆಕಾಶದಲ್ಲಿ, ಬರುವುದೂ ಆಕಾಶದಲ್ಲಿ! ಇದನ್ನು ವೈಜ್ಞಾನಿಕ ಆಸ್ತಿಕವಾದವೆನ್ನಬಹುದು.
-ಕ.ವೆಂ.ನಾಗರಾಜ್.
*************
16.03.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಮಾರ್ಚ್ 27, 2015

ಪಂಚಶಕ್ತಿಗಳ ಮಹತ್ವ - ಭಾಗ ೩: ವಾಯು


     ಪಂಚಭೂತಗಳಲ್ಲಿ ಒಂದಾದ ವಾಯು ಒಂದು ಪ್ರಧಾನ ಶಕ್ತಿಯಾಗಿದೆ. ಜೀವಿಗಳು ಜೀವ ಧರಿಸಲು ಸಾಧ್ಯವಾಗಿರುವುದು ಈ ವಾಯುವಿನಿಂದಾಗಿಯೇ! ಹೀಗಾಗಿ ವಾಯುವು ಭೂಮಿ, ಜಲ, ಅಗ್ನಿಗಳಿಗಿಂತಲೂ ಮೇಲಿನ ಸಂಗತಿಯಾಗಿದೆ. ಸಾಮಾನ್ಯವಾಗಿ ಗಾಳಿ ಎನ್ನುವ ಇದನ್ನು ವಾತ, ಪವನ, ಪ್ರಾಣ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ. ವಾಯು ಎಷ್ಟು ಮುಖ್ಯ ಎಂಬುದಕ್ಕೆ ಒಂದು ಕಥೆ ಹೇಳುತ್ತಾರೆ. ಒಮ್ಮೆ ದೇಹದ ಅಂಗಗಳು, ಇಂದ್ರಿಯಗಳನ್ನು ನಿಯಂತ್ರಿಸುವ ದೇವರುಗಳಲ್ಲಿ ಯಾರು ಹೆಚ್ಚು ಎಂಬ ಬಗ್ಗೆ ಸ್ಪರ್ಧೆ ಉಂಟಾಯಿತಂತೆ. ಒಂದರ ನಂತರ ಒಂದರಂತೆ ಅವರುಗಳು ದೇಹವನ್ನು ಬಿಟ್ಟು ಹೋಗಿ ಪರಿಣಾಮ ವೀಕ್ಷಿಸಿದರಂತೆ. ಒಬ್ಬೊಬ್ಬ ದೇವರೂ ದೇಹ ಬಿಟ್ಟಾಗಲೂ ಅದರ ಪರಿಣಾಮವಾಗಿ ಏರುಪೇರುಗಳಾಗುತ್ತಿದ್ದವಂತೆ. ಉದಾಹರಣೆಗೆ ಕಣ್ಣು ಕಾಣಿಸದಿರುವುದು, ಕಿವಿ ಕೇಳಿಸದಿರುವುದು, ಇತ್ಯಾದಿ. ಕೊನೆಯಲ್ಲಿ ವಾಯುದೇವ ಬಿಟ್ಟು ಹೊರಡಲು ಅನುವಾಗುತ್ತಿದ್ದಂತೆ ಇತರ ಎಲ್ಲಾ ದೇವರುಗಳಿಗೂ ಬಲವಂತವಾಗಿ ಹೊರದೂಡಲ್ಪಡುವ ಅನುಭವ ಉಂಟಾಯಿತಂತೆ. ವಾಯು ಇದ್ದರೆ ಮಾತ್ರ ತಮ್ಮ ಅಸ್ತಿತ್ವ, ಇಲ್ಲದಿದ್ದರೆ ತಮಗೆ ಅಸ್ತಿತ್ವ ಇಲ್ಲ ಎಂಬುದನ್ನು ಮನಗಂಡ ಅವರುಗಳು ವಾಯುವೇ ಪ್ರಧಾನ ಎಂಬುದನ್ನು ಒಪ್ಪಿಕೊಂಡರಂತೆ. ಇದು ಕಥೆಯಾದರೂ ಇದರಲ್ಲಿ ಸತ್ಯವಿದೆ, ಸತ್ವವಿದೆ.
     ಮನುಷ್ಯನ ಹುಟ್ಟು ಮತ್ತು ಸಾವು ಎರಡೂ ಉಸಿರಿನ ಮೇಲೆ ನಿಂತಿದೆ. ಹುಟ್ಟುವ ಕ್ಷಣದಿಂದಲೇ ಆರಂಭವಾಗುವ ಉಸಿರಾಟ ಸಾವಿನವರೆಗೂ ನಿರಂತರವಾಗಿ ಮುಂದುವರೆಯುತ್ತದೆ. ಉಸಿರು ನಿಂತಾಗ ಜೀವವೂ ನಿಲ್ಲುತ್ತದೆ. ಒಬ್ಬ ಮನುಷ್ಯ ಒಂದು ನಿಮಿಷಕ್ಕೆ 30 ಸಲ ಉಸಿರಾಡುತ್ತಾನೆ ಎಂದಿಟ್ಟುಕೊಂಡರೆ ಮತ್ತು ಅವನು 100ವರ್ಷ ಬದುಕುತ್ತಾನೆ ಎಂದುಕೊಂಡರೆ ಅವನ ಜೀವಿತಾವಧಿಯಲ್ಲಿ ಒಟ್ಟು 30x60x24x365x100 ಸಲ ಉಸಿರಾಡುತ್ತಾನೆ! ಒಂದೊಂದು ಸಲ ಉಸಿರಾಡಿದಾಗಲೂ ಅಷ್ಟರ ಮಟ್ಟಿಗೆ ನಾವು ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ. ಈ ಉಸಿರು ಯಾವಾಗ ಪ್ರಾರಂಭವಾಗುತ್ತದೆ, ಯಾವಾಗ ನಿಲ್ಲುತ್ತದೆ, ಯಾರಿಗೆ ಗೊತ್ತು? ಈ ಉಸಿರಿನ ನಿಯಂತ್ರಣ ಯಾರದ್ದು? ಉಸಿರಾಡುವ ನಮ್ಮದಂತೂ ಇರಲಾರದು. ಏಕೆಂದರೆ ನಾವು ನಿದ್ದೆ ಮಾಡುತ್ತಿರುವಾಗಲೂ, ನಮಗೆ ಎಚ್ಚರವಿಲ್ಲದೆ ಇರುವಾಗಲೂ ನಾವು ಉಸಿರಾಡುತ್ತಲೇ ಇರುತ್ತೇವೆ! ನಮ್ಮ ನಿಯಂತ್ರಣವಿದ್ದಿದ್ದರೆ ನಾವು ಉಸಿರಾಡುವುದನ್ನು ನಿಲ್ಲಿಸುತ್ತಲೇ ಇರುತ್ತಿರಲಿಲ್ಲ. ಏಕೆಂದರೆ, ಸಾಯುವುದಕ್ಕೆ ಯಾರು ಇಷ್ಟ ಪಡುತ್ತಾರೆ?
     ಆ ದೇವರು ನಮ್ಮಲ್ಲಿ ನಾವು ಸಾಯುವುದೇ ಇಲ್ಲವೆಂಬಂತೆ ಭಾವಿಸುವ ಅದು ಯಾವ ಭ್ರಾಮಕ ಅಂಶವನ್ನು ಸೇರಿಸಿದ್ದಾನೋ ಗೊತ್ತಿಲ್ಲ. ಈ ಭಾವನೆ ಇರುವುದರಿಂದಲೇ ನಾವು ಸರಿಯಾಗಿ ಬದುಕುತ್ತಿಲ್ಲ. ಕೊನೆಯ ಪಕ್ಷ ನಾವು ಯಾವಾಗ ಸಾಯುತ್ತೇವೆ ಎಂಬುದಾದರೂ ಗೊತ್ತಿದ್ದಿದ್ದರೆ ಸ್ವಲ್ಪ ಕಾಲವಾದರೂ ಸರಿಯಾಗಿ ಬದುಕುತ್ತೇವೇನೋ! ಬದುಕಿಯೇ ಇರುತ್ತೇವೆಂಬ ಭ್ರಮೆಯಲ್ಲಿ ಜನರು ಸಾಯುತ್ತಾ ಬದುಕಿದ್ದಾರೆ. ಮತಾಂಧರಾಗಿ ಜನರ ಮಾರಣ ಹೋಮ ಮಾಡುತ್ತಿರುವವರು ಇರುವಲ್ಲಿ, ಹಣಕ್ಕಾಗಿ, ಆಸ್ತಿಗಾಗಿ ಕುಟುಂಬದವರನ್ನೇ ಕೊಲ್ಲುವ ಮನೋಭಾವವಿರುವವರಲ್ಲಿ, ಹಣಕ್ಕಾಗಿ, ಅಧಿಕಾರಕ್ಕಾಗಿ, ಹೆಸರಿಗಾಗಿ ಏನೂ ಮಾಡಲು ಹೇಸದವರು ಇರುವಲ್ಲಿ ಸಾವು ಗಹಗಹಿಸಿ ನಗುತ್ತಿದೆ. ಸಾಯುತ್ತಿದ್ದೇವೆ, ಸಾಯುತ್ತೇವೆ ಎಂಬ ಅರಿವು ನಮಗೆ ಉಂಟಾದರೆ ನಾವು ಬದುಕುತ್ತೇವೆ. ಇಲ್ಲದಿದ್ದರೆ ಸಾಯುತ್ತಾ ಬದುಕುತ್ತೇವೆ. ಸಾಯುತ್ತಾ ಬದುಕುವುದಕ್ಕಿಂತ ಬದುಕಿ ಸಾಯುವುದು ಉತ್ತಮವಲ್ಲವೇ?
     ಉಸಿರು ಹೇಗೆ ನಮ್ಮ ಜೀವನಾಧಾರವಾಗಿದೆಯೋ ಹಾಗೆಯೇ ನಮ್ಮನ್ನು, ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲೂ ಸಹಕಾರಿಯಾಗಿದೆ. ಕೋಪ ಬಂದಾಗ ಭುಸುಗುಡುತ್ತಾ ವೇಗವಾಗಿ ಉಸಿರಾಡುತ್ತೇವೆ. ಶೋಕದಲ್ಲಿದ್ದಾಗ, ಸಂತೋಷದಲ್ಲಿದ್ದಾಗ, ಶಾಂತವಾಗಿದ್ದಾಗ ಉಸಿರಾಡುವ ರೀತಿಗಳೇ ಬೇರೆಯಾಗಿರುತ್ತವೆ. ಶಾಂತವಾಗಿರುವಾಗ ಉಸಿರಾಟ ಬಹಳ ನಿಧಾನವಾಗಿರುತ್ತದೆ. ಆದ್ದರಿಂದ ಕೋಪ ಬಂದಾಗ, ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಸ್ವಲ್ಪ ಹೊತ್ತು ನಿಧಾನವಾಗಿ ಮತ್ತು ದೀರ್ಘವಾಗಿ ಉಸಿರಾಟ ಮಾಡಿದರೆ ಮನಸ್ಸು ತಹಬಂದಿಗೆ ಬರುತ್ತದೆ. ಪ್ರಾಣಾಯಾಮ ಮನಸ್ಸನ್ನು ಶಾಂತಗೊಳಿಸಲು ಸಹಕಾರಿಯಾದ ಕ್ರಮವಾಗಿದೆ. ಪ್ರಾಣಾಯಾಮದಲ್ಲಿ ಉಸಿರನ್ನು ಹೊರಬಿಡುವುದಕ್ಕೆ ರೇಚಕ, ಸಾಧ್ಯವಾದಷ್ಟು ಉಸಿರನ್ನು ಹೊರಗೇ ತಡೆಹಿಡಿದಿಡುವುದಕ್ಕೆ ಬಾಹ್ಯ ಕುಂಭಕ, ಉಸಿರನ್ನು ಒಳಗೆ ತೆಗೆದುಕೊಳ್ಳುವುದಕ್ಕೆ ಪೂರಕ, ಸಾಧ್ಯವಾದಷ್ಟು ಉಸಿರನ್ನು ಒಳಗೇ ತಡೆಹಿಡಿದಿಡುವುದಕ್ಕೆ ಅಭ್ಯಂತರ ಕುಂಭಕ ಎನ್ನುತ್ತಾರೆ. ಈ ನಾಲ್ಕೂ ಸೇರಿದರೆ ಒಂದು ಪ್ರಾಣಾಯಾಮ ಎನ್ನುತ್ತಾರೆ. ವಿವಿಧ ರೀತಿಯ ಪ್ರಾಣಾಯಾಮಗಳಿದ್ದು ಅದರಿಂದ ದೇಹದ ಕಾಯಿಲೆಗಳ ಉಪಶಮನಕ್ಕೆ ಸಹಕಾರಿಯಾಗುವಂತಹವೂ ಇವೆ. ತಿಳಿದವರಿಂದ ಕಲಿತು ಪ್ರಾಣಾಯಾಮದ ಅಭ್ಯಾಸ ಮಾಡುವುದು ಒಳಿತು. ಸರಿಯಾದ ವಿದ್ಯೆ ಕಲಿಸುವವರು ಸಿಗದಿದ್ದರೆ ಅಥವ ಕಲಿಯಲು ಸಾಧ್ಯವಾಗದಿದ್ದರೆ ದೀರ್ಘ ಶ್ವಾಸೋಚ್ಛ್ವಾಸಗಳೇ ಸಾಕಾಗುತ್ತದೆ. ದೀರ್ಘ ಉಸಿರಾಟ ದೀರ್ಘ ಆಯಸ್ಸಿನ ರಹಸ್ಯವೆಂದು ಹೇಳುತ್ತಾರೆ. ದೀರ್ಘಕಾಲ ಬದುಕುವ ಆಮೆ ಬಹಳ ನಿಧಾನವಾಗಿ ಉಸಿರಾಡುತ್ತದೆ. ಪ್ರಾಣಾಯಾಮದ ಮಂತ್ರಗಳಿವು:
ಓಂ ಭೂಃ| ಓಂ ಭುವಃ| ಓಂ ಸ್ವಃ| ಓಂ ಮಹಃ| ಓಂ ಜನಃ| ಓಂ ತಪಃ| ಓಂ ಸತ್ಯಂ|
     ಸರ್ವರಕ್ಷಕ ದೇವ ಸದ್ರೂಪನು, ಸರ್ವವ್ಯಾಪಿ ದೇವ ಚಿದ್ರೂಪನು, ಸರ್ವಪ್ರದ ದೇವ ಆನಂದಸ್ವರೂಪನು, ಸರ್ವಾಚ್ಛಾದಕ ದೇವ ಮಹತ್ತಮನು, ಸರ್ವ ಪ್ರಾಪ್ಯ ದೇವ ಜಗಜ್ಜನಕನು, ಜ್ಞಾನಸ್ವರೂಪ ದೇವ ತಪಃಸ್ವರೂಪನು, ಸಹನಶೀಲನು, ಅನಾದಿ ಅನಂತ ಸತ್ಯಸ್ವರೂಪನು ಎಂಬುದು ಈ ಮಂತ್ರದ ಅರ್ಥವಾಗಿದೆ.
     ಯಜ್ಞ ಮಾಡುವಾಗ, ಅಗ್ನಿಹೋತ್ರ, ಹೋಮ-ಹವನಗಳನ್ನು ಮಾಡುವಾಗ ಸಾಮಾನ್ಯವಾಗಿ ಈ ಮಂತ್ರವನ್ನೂ ಉಚ್ಛರಿಸಲಾಗುತ್ತದೆ:
ಓಂ ಭೂರ್ಭುವಃ ಸ್ವರಗ್ನಿ ವಾಯ್ವಾದಿತ್ಯೇಭ್ಯಃ ಸ್ವಾಹಾ| ಇದಮಗ್ನಿ ವಾಯ್ವಾದಿತ್ಯೇಭ್ಯಃ ಇದಂ ನ ಮಮ|| (ತೈತ್ತರೀಯ ಅರಣ್ಯಕ.೧೦.೩.)
     ಆ ಸಚ್ಚಿದಾನಂದ ಸ್ವರೂಪನಾದ ಪ್ರಭುವಿನ ನಾಯಕತ್ವ, ಪ್ರಾಣಾಧಾರಕತ್ವ, ಅಖಂಡತ್ವಗಳ ಅನುಭೂತಿಗಾಗಿ ಈ ಆತ್ಮನಿವೇದನೆ. ಇದು ಆ ದೇವನ ನೇತೃತ್ವ, ಪ್ರಾಣಪ್ರದತ್ವ ಮತ್ತು ಅಖಂಡತ್ವದ ಸಾಕ್ಷಾತ್ಕಾರಕ್ಕಾಗಿಯೇ ಹೊರತು ನನ್ನ ಸ್ವಾರ್ಥಕ್ಕಲ್ಲ ಎಂಬುದು ಈ ಮಂತ್ರದ ಅರ್ಥ. ಯಜ್ಞದ ಸಂದರ್ಭದಲ್ಲಿ ಅರ್ಪಿಸಲಾಗುವ ಔಷಧೀಯ ಗುಣಗಳುಳ್ಳ ಹವಿಸ್ಸು, ಸಮಿತ್ತುಗಳನ್ನು ಅಗ್ನಿ ಅರಗಿಸಿದರೆ, ವಾಯುವು ಅದನ್ನು ಸರ್ವರಿಗೂ ತಲುಪಿಸುವ ಕೆಲಸ ಮಾಡುತ್ತಾನೆ.
     ವೈಜ್ಞಾನಿಕವಾಗಿಯೂ ಸಹ ವಾತಾವರಣವೆಂದು ಕರೆಯಲಾಗುವ ವಾಯುವಿನ ಮಹತ್ವ ವಿವರಿಸಿದ್ದಾರೆ. ಈ ಅಂಶಗಳ ಕುರಿತು ವಿವರಿಸುತ್ತಾ ಹೋಗುವುದು ಈ ಲೇಖನದ ಉದ್ದೇಶವಲ್ಲವಾದ್ದರಿಂದ ಅದನ್ನು ವಿಸ್ತರಿಸುವುದಿಲ್ಲ. ವಾಯು ಒಂದು ಮಹತ್ವವಾದ ಶಕ್ತಿ ಎಂಬುದನ್ನು ಬಿಂಬಿಸುವುದಷ್ಟೇ ಈ ಲೇಖನದ ಉದ್ದೇಶವಾಗಿದೆ. ಜೀವನಾಧಾರವಾದ ವಾಯುವಿನ ಬಗ್ಗೆ ನಾವು ಕೃತಜ್ಞರಾಗಿರಬೇಕಿದೆ. ಹೇಗೆ ಎಂಬುದನ್ನು ಮುಂದೆ ನೋಡೋಣ.
     ಪ್ರತಿ ಮಾನವ ಮಾನವನೆನಿಸಿಕೊಳ್ಳಬೇಕಾದರೆ ಜೀವಿತಕಾಲದಲ್ಲಿ ಮೂರು ಋಣಗಳನ್ನು ತೀರಿಸಬೇಕಿರುತ್ತದೆ - ದೇವಋಣ, ಪಿತೃಋಣ ಮತ್ತು ಆಚಾರ್ಯಋಣ. ಪಿತೃಋಣ ಮತ್ತು ಆಚಾರ್ಯಋಣಗಳ ಬಗ್ಗೆ ಚರ್ಚಿಸುವುದು ಈ ವಿಷಯಕ್ಕೆ ಪೂರಕವಾಗುವುದಿಲ್ಲವಾದುದರಿಂದ ಇಲ್ಲಿ ಚರ್ಚಿಸುವುದು ಅನಗತ್ಯವಾಗುತ್ತದೆ. ಇನ್ನು ದೇವಋಣವನ್ನು ತೀರಿಸುವುದು ಹೇಗೆ? ದೇವರ ಧ್ಯಾನ ಮಾಡುತ್ತಾ ಕೂರುವುದೇ? ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗಿ ಪೂಜೆ ಸಲ್ಲಿಸುವುದೇ? ಇದಾವುದೂ ಅಲ್ಲ. ನಮ್ಮ ಶರೀರ ಪಂಚಭೂತಗಳಿಂದ ಕೂಡಿದ್ದು ಅಂತ್ಯದಲ್ಲಿ ಸೇರುವುದು ಪಂಚಭೂತಗಳಲ್ಲಿಯೇ! ನಮಗೆ ದೇವರ ಅನುಭವವಾಗಬೇಕೆಂದರೆ ಪಂಚಭೂತಗಳ ಸಹಾಯದಿಂದ, ಪಂಚಭೂತಗಳ ರೂಪದಲ್ಲಿಯೇ ಆಗಬೇಕು. ಈ ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶಗಳ ಪ್ರತಿ ನಮಗೆ ಜವಾಬ್ದಾರಿಯಿದೆ. ಅದೆಂದರೆ ಅವುಗಳನ್ನು ಹಾನಿ ಮಾಡದೆ ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗಳೂ 'ಜೀವಿಸಲು' ಅನುಕೂಲ ಮಾಡಿಕೊಡುವುದು!
     ಪ್ರಸ್ತುತ ವಾಯುವಿನ ಬಗ್ಗೆ ಮಾತನಾಡುತ್ತಿರುವುದರಿಂದ ವಾಯುವನ್ನು ಶುದ್ಧವಾಗಿಡುವಲ್ಲಿ ನಮ್ಮ ಕರ್ತವ್ಯವನ್ನು ನಿರ್ವಹಿಸುವ ಬಗ್ಗೆ ಗಮನಿಸೋಣ. ಇಂದು ವಾಯುಮಾಲಿನ್ಯದಿಂದ ಜಗತ್ತು ತಲ್ಲಣಿಸುತ್ತಿದೆ. ವಾಯುಮಾಲಿನ್ಯದಿಂದಾಗಿ ನೂರಾರು ರೀತಿಯ ಕಾಯಿಲೆಗಳು, ಸಾವು ಸಂಭವಿಸುವುದು, ಇತರ ಜೀವ ಜಗತ್ತುಗಳಿಗೂ ಆಪತ್ತು, ತಿನ್ನುವ ಆಹಾರ ಕಲುಷಿತವಾಗುವುದು, ಬೆಳೆಗಳು ರೋಗಗ್ರಸ್ಥವಾಗುವುದು, ಇತ್ಯಾದಿ ಗಂಭೀರ ಸಮಸ್ಯೆಗಳು ಉಂಟಾಗುತ್ತಿವೆ. ಭೋಪಾಲ್ ವಿಷಾನಿಲ ದುರಂತದಿಂದ ಸಾವಿರಾರು ಜನರು ಮೃತರಾದುದು, ಬದುಕಿರುವವರು ಶೇಷ ಜೀವನ ಪೂರ್ತಿ ವಾಸಿಯಾಗದ ಕಾಯಿಲೆಗಳಿಂದ ನರಳುತ್ತಿರುವುದು ನಮ್ಮ ಕಣ್ಣ ಮುಂದಿನ ಜ್ವಲಂತ ಉದಾಹರಣೆಯಾಗಿದೆ. ಫ್ಯಾಕ್ಟರಿಗಳಿಂದ ಹೊರಹೊಮ್ಮುವ ವಿಷಾನಿಲಗಳು, ವಾಹನಗಳ ಹೊಗೆ, ಅಣುವಿಕಿರಣ ಹೊಮ್ಮಿಸುವ ಮಿಲಿಟರಿ ಉಪಕರಣಗಳು, ಅಸಮರ್ಪಕ ತ್ಯಾಜ್ಯ ವಿಲೇವಾರಿ, ರಾಸಾಯನಿಕ ಅಸ್ತ್ರ-ಶಸ್ತ್ರಗಳು ಇತ್ಯಾದಿಗಳು ಮಾನವ ಕಾರಣದಿಂದಾಗಿ ಆಗುವ ಮಾಲಿನ್ಯಗಳಿಗೆ ಉದಾಹರಣೆಯಾಗಿ ಕೊಡಬಹುದು. ಮನೆಯ ಒಳಗೆ ಸರಿಯಾಗಿ ಗಾಳಿ, ಬೆಳಕು ಚಲಿಸಲು ಅವಕಾಶವಿಲ್ಲದಿದ್ದರೆ ಸಹ ಅಲ್ಲಿ ದೂಷಿತ ವಾತಾವರಣ ಸೃಷ್ಟಿಯಾಗುವುದೆಂಬುದನ್ನು ಗಮನಿಸಬೇಕು. ವಾಯುಮಾಲಿನ್ಯದಿಂದಾಗಿ ಹೃದ್ರೋಗಗಳು, ಕ್ಯಾನ್ಸರ್, ಆಸ್ತಮಾ ಮುಂತಾದ ರೋಗಗಳಲ್ಲದೆ ಮಕ್ಕಳು ಹುಟ್ಟುವಾಗಲೇ ಸಾಯುವ ಸಂಭವನೀಯತೆಯೂ ಇರುತ್ತದೆ.
     ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಜನಪರ ಕಾಳಜಿಯುಳ್ಳ ಜನರು ಮತ್ತು ಸಂಘ-ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ತಂದು ಯೋಜಿತ ರೀತಿಯಲ್ಲಿ ನಗರಗಳ ನಿರ್ಮಾಣ, ವಾಹನಗಳ ನಿಯಂತ್ರಣ, ವೈಜ್ಞಾನಿಕ ರೀತಿಯ ತ್ಯಾಜ್ಯ ವಿಲೇವಾರಿ, ವಾಯುಶುದ್ಧೀಕರಣದ ಕುರಿತು ಕ್ರಮಗಳನ್ನು ಅನುಸರಿಸುವಂತೆ ಮಾಡಬೇಕಿದೆ. ಭಾರತದಲ್ಲಿ ದೆಹಲಿ, ಕೊಲ್ಕತ್ತ, ಕಾನ್ಪುರ, ಲಕ್ನೌಗಳು ಅತ್ಯಂತ ಕಲುಷಿತ ನಗರಗಳೆಂದು ಹೆಸರಿಸಲ್ಪಟ್ಟಿವೆ. ಉದ್ಯಾನನಗರಿಯೆಂದು ಒಮ್ಮೆ ಹೆಸರಾಗಿದ್ದ ಬೆಂಗಳೂರನ್ನು ಇಂದು ಕಾಂಕ್ರೀಟ್ ನಗರಿ ಮಾತ್ರವಲ್ಲ ಕೊಳಚೆನಗರಿ ಎಂತಲೂ ಹೆಸರಿಸಬಹುದೇನೋ! ಇನ್ನು ವೈಯಕ್ತಿಕವಾಗಿ ನಾವುಗಳು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಮಾಲಿನ್ಯ ಉಂಟುಮಾಡುವವರನ್ನು ತಡೆಯುವ ಕೆಲಸವನ್ನೂ ಮಾಡಿದರೆ ಇದು ಖಂಡಿತವಾಗಿ ದೇವಋಣವನ್ನು ತೀರಿಸಿದಂತೆ ಆಗುತ್ತದೆ. ಈ ವೇದಮಂತ್ರ ಹೀಗೆ ಹೇಳುತ್ತದೆ:
ಯಸ್ಯ ಸೂರ್ಯಶ್ಚಕ್ಷುಶ್ಚಂದ್ರಮಾಶ್ಚ ಪುನರ್ಣವಃ| ಅಗ್ನಿಂ ಯಶ್ಚಕ್ರ ಅಸ್ಯಂ ತಸ್ಮೈ ಜ್ಯೇಷ್ಠಾಯ ಬ್ರಹ್ಮಣೇ ನಮಃ|| ಯಸ್ಯ ವಾತಃ ಪ್ರಾಣಾಪಾನೌ ಚಕ್ಷುರಂಗಿರಸೋ ಭವನ್| ದಿಶೋ ಯಶ್ಚಕ್ರೇ ಪ್ರಜ್ಞಾನೀಸ್ತಸ್ಯ ಜ್ಯೇಷ್ಠಾಯ ಬ್ರಹ್ಮಣೇ ನಮಃ|| (ಅಥರ್ವ.೧೦.೭.೩೨-೩೪)
     ಅರ್ಥ: 'ಸಕಲ ಜೀವಿಗಳಿಗೆ ಆಶ್ರಯವಾದ ಭೂಮಿ ಯಾರ ಪಾದಗಳಂತಿರುವುದೋ, ವಿಶಾಲ ಅಂತರಿಕ್ಷವು ಯಾರ ಉದರಸಮಾನವಾಗಿರುವುದೋ, ಉನ್ನತವಾದ ದ್ಯುಲೋಕವು ಯಾರ ಶಿರದಂತೆ ಇರುವುದೋ, ಪ್ರಕಾಶಮಾನವಾದ ಸೂರ್ಯ-ಚಂದ್ರರು ಯಾರ ಕಣ್ಣುಗಳಂತಿರುವುದೋ, ಉಜ್ವಲವಾಗಿ ಬೆಳಗುವ ಅಗ್ನಿಯು ಯಾರ ಮುಖದಂತಿರುವುದೋ, ಸರ್ವವ್ಯಾಪಿ, ಗತಿಶೀಲ ವಾಯು ಯಾರ ಪ್ರಾಣಾಪಾನಗಳಂತಿರುವುದೋ, ಪ್ರಕಾಶಮಾನ ಕಿರಣಗಳ ಸಮೂಹ ಯಾರ ಕಣ್ಣಿನ ಬೆಳಕಿನಂತಿರುವುದೋ, ಜ್ಞಾನ ಸಾಧಕ ದಿಕ್ಕುಗಳು ಯಾರ ಕರ್ಣಗಳಿಂತಿರುವುದೋ ಆ ಬ್ರಹ್ಮಾಂಡಸ್ವರೂಪಿ ಶರೀರಧಾರಿಯಾದ, ವಸ್ತುತಃ ಅಶರೀರನಾದ ಸರ್ವಶ್ರೇಷ್ಠ ಪರಮಾತ್ಮನಿಗೆ ನಮ್ಮ ಅತ್ಯಂತ ನಮ್ರತೆಯ ಭಕ್ತ್ಯಾದರಗಳ ನಮನಗಳು.' ಪಂಚಭೂತಗಳ ರೂಪದಲ್ಲಿ ಭಗವಂತನನ್ನು ಕಾಣಲು ಈ ಮಂತ್ರ ನಮ್ಮನ್ನು ಪ್ರೇರಿಸುವುದಿಲ್ಲವೇ?
-ಕ.ವೆಂ.ನಾಗರಾಜ್.
**************
ದಿನಾಂಕ  9-03-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಬುಧವಾರ, ಮಾರ್ಚ್ 25, 2015

ಪಂಚ ಶಕ್ತಿಗಳ ಮಹತ್ವ: ಭಾಗ-೨: ಅಗ್ನಿ


     ಪಂಚಭೂತಗಳಲ್ಲಿ ಭೂಮಿಗಿಂತ ಜಲ ಮೇಲಿನದೆಂದು ಹಿಂದಿನ ಲೇಖನದಲ್ಲಿ ತಿಳಿದೆವು. ಇದಕ್ಕಿಂತಲೂ ಉನ್ನತವಾದುದು ಅಗ್ನಿಯಾಗಿದೆ. ಸಾಧನಾಪಥದ ಅರಿವಿನ ಸೋಪಾನಗಳಾದ ಜ್ಞಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ಸ್ಮರಣಶಕ್ತಿ, ಧ್ಯಾನ, ಧ್ಯಾನ ಏಕೆ ಮತ್ತು ಹೇಗೆ ಎಂಬ ಅರಿವು, ದೈಹಿಕ ಮತ್ತು ಮಾನಸಿಕ ಶಕ್ತಿ, ಆಹಾರ, ನೆಲ ಮತ್ತು ಜಲಗಳಿಗಿಂತ ಅಗ್ನಿತತ್ತ್ವ ಹೇಗೆ ಮೇಲಿನದೆಂಬ ಬಗ್ಗೆ ವಿಮರ್ಶಿಸೋಣ. ಸೂಕ್ಷ್ಮ ತತ್ತ್ವಗಳು ಸ್ಥೂಲ ತತ್ತ್ವಗಳಿಗಿಂತ ಹೆಚ್ಚು ವ್ಯಾಪಿಸಬಲ್ಲವಾದುದಾಗಿವೆ.
     ಅಗ್ನಿತತ್ತ್ವ ಸೃಷ್ಟಿಕಾರಕ, ಸ್ಥಿತಿಕಾರಕ ಮತ್ತು ಲಯಕಾರಕ ಪರಮಾತ್ಮನ ಗುಣಗಳನ್ನು ಹೊಂದಿದೆ. ಸೂರ್ಯ ನಮಗೆ ಬೆಳಕು ಮತ್ತು ಶಾಖ ನೀಡುವವನಾಗಿದ್ದಾನೆ. ಬಿಸಿಲಿನ ಧಗೆ ಜಾಸ್ತಿಯಾದಾಗ, "ಓಹ್, ಬಿಸಿಲು ಬಹಳ ಪ್ರಖರವಾಗಿದೆ, ತಡೆದುಕೊಳ್ಳಲಾಗದಷ್ಟು ಸೆಖೆ ಇದೆ, ಮಳೆ ಬರಬಹುದು" ಎಂದು ನಾವು ಮಾತನಾಡಿಕೊಳ್ಳುತ್ತೇವೆ. ಇದರ ಅರ್ಥ ಇಷ್ಟೆ, ಶಾಖ ಹೆಚ್ಚಾದಾಗ ಮಳೆ ಬರುತ್ತದೆ, ನೀರು ಅಗ್ನಿಯ ಕಾರಣದಿಂದ, ಅದರ ನಂತರದಲ್ಲಿ ಬರುತ್ತದೆ. ಮಳೆ ಹೇಗೆ ಬರುತ್ತದೆ ಎಂಬುದು ಸಾಮಾನ್ಯ ಜ್ಞಾನದ ಅರಿವಿರುವವರಿಗೆ ತಿಳಿದೇ ಇರುತ್ತದೆ. ನದಿ, ಕೆರೆ, ಕಟ್ಟೆಗಳು, ಸಾಗರಗಳಲ್ಲಿನ ನೀರು ಶಾಖದಿಂದಾಗಿ ಆವಿಯಾಗಿ ವಾತಾವರಣದಲ್ಲಿ ಸೇರಿ ನೀರಿನ ಸಣ್ಣ ಕಣಗಳಾಗಿ ಸಂಗ್ರಹವಾಗುತ್ತವೆ. ಇವುಗಳು ಮೋಡದ ರೂಪದಲ್ಲಿ ಸಂಗ್ರಹವಾಗುತ್ತವೆ. ಹೆಚ್ಚಿನ ಕಣಗಳ ದಟ್ಟ ಸಂಗ್ರಹವಾದಾಗ ಮೋಡಗಳು ಕಪ್ಪಾಗಿ ಭಾರವಾಗುತ್ತಾ ಹೋಗುತ್ತವೆ. ನೀರಿನ ಸಣ್ಣ ಕಣಗಳು ಪರಸ್ಪರ ಡಿಕ್ಕಿ ಹೊಡೆದಾಗ ಒಟ್ಟುಗೂಡಿ ದೊಡ್ಡ ಕಣಗಳಾಗುತ್ತಾ ಹೋಗುತ್ತವೆ. ಗುಡುಗು, ಸಿಡಿಲುಗಳೂ ಸಹ ಈ ಸಂದರ್ಭದಲ್ಲಿ ಕಾಣಬರುತ್ತವೆ. ಸಾಂದ್ರತೆ ಹೆಚ್ಚಾಗಿ ಗಾಳಿಗಿಂತ ಭಾರವಾದಾಗ ಅದು ಮಳೆಯಾಗಿ ಕೆಳಗೆ ಬೀಳುತ್ತದೆ. ಈ ಚಕ್ರ ನಿರಂತರವಾಗಿ ನಡೆಯುತ್ತಿರುತ್ತದೆ. ಈ ಬಗ್ಗೆ ಹೆಚ್ಚು ವಿವರಿಸಹೋಗದೆ ಸಂಕ್ಷಿಪ್ತವಾಗಿ ತಿಳಿದು ಮುಂದುವರೆಯೋಣ. ಸ್ವಾರ್ಥಕ್ಕಾಗಿ ಜಲಮೂಲಗಳನ್ನು ಮುಚ್ಚುತ್ತಿರುವ, ಕಾಡುಗಳನ್ನು, ಬೆಟ್ಟಗುಡ್ಡಗಳನ್ನು ನಾಶ ಮಾಡುತ್ತಿರುವ ಮಾನವ ಈ ಚಕ್ರ ಸುಗಮವಾಗಿ ತಿರುಗಲು ಅಡ್ಡಿಯಾಗಿದ್ದಾನೆ. ಇದರಿಂದಾಗಿ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದಿರುವುದು ಅಥವ ಅತಿಯಾಗಿ ಮಳೆಯಾಗುವುದು ಮುಂತಾದ ಅತಿರೇಕಗಳನ್ನು ಕಾಣುತ್ತಿದ್ದೇವೆ.
     ಸೂರ್ಯಕಿರಣಗಳು ಭೂಮಿಯ ನಿವಾಸಿಗಳಿಗೆ ಪ್ರಮುಖವಾದ ಶಾಖದ ಮತ್ತು ಬೆಳಕಿನ ಮೂಲಗಳಾಗಿವೆ ಎಂದು ಮೊದಲೇ ಹೇಳಿಯಾಗಿದೆ. ಸೂರ್ಯ ಸೌರ ಮಂಡಲದ ಪ್ರಧಾನವಾದ ಮತ್ತು ಕೇಂದ್ರದಲ್ಲಿರುವ ಬೃಹತ್ ನಕ್ಷತ್ರವಾಗಿದೆ. ಭೂಮಿಯ ವ್ಯಾಸದ ಸುಮಾರು ೧೦೯ರಷ್ಟು ದೊಡ್ಡದಾದ ಸೂರ್ಯ, ಭೂಮಿಯ ಸುಮಾರು ೩೩೦,೦೦೦ದಷ್ಟು ತೂಕವುಳ್ಳದ್ದಾಗಿದೆ. ಇದು ಸೌರಮಂಡಲದ ಒಟ್ಟು ತೂಕದ ಶೇ.೯೯.೮೬ರಷ್ಟಿದೆ. ಈಗಿನ ಸೂರ್ಯ ಸುಮಾರು ೪.೫೬೭ ಬಿಲಿಯನ್ ವರ್ಷಗಳ ಹಿಂದೆ ಉಗಮಗೊಂಡವನಾಗಿದ್ದಾನೆ. ಇನ್ನೂ ಸುಮಾರು ೪ ಬಿಲಿಯನ್ ವರ್ಷಗಳವರೆಗೆ ಈ ಸೂರ್ಯ ಇರುತ್ತಾನೆನ್ನಲಾಗಿದೆ. ಶೇ.೭೩.೪೬ರಷ್ಟು ಜಲಜನಕ, ಶೇ.೨೪.೮೫ರಷ್ಟು ಹೀಲಿಯಮ್ ಹೊಂದಿರುವ ಸೂರ್ಯ ಉಳಿದ ಶೇ.೧.೬೯ರಷ್ಟು ಪ್ರಮಾಣದಲ್ಲಿ ಆಮ್ಲಜನಕ, ಇಂಗಾಲ, ಕಬ್ಬಿಣ, ನಿಯಾನ್, ಸಾರಜನಕ, ಸಿಲಿಕಾನ್, ಮೆಗ್ನೀಷಿಯಮ್ ಮತ್ತು ಗಂಧಕಗಳನ್ನು ಹೊಂದಿದೆ. ಈ ವಿವರಗಳ ಮೂಲ http://en.wikipedia.org/wiki/Sun ಆಗಿದ್ದು, ಇನ್ನೂ ಕುತೂಹಲಕಾರಿ ವಿಷಯಗಳನ್ನು ಇಲ್ಲಿ ತಿಳಿಯಬಹುದು. ಲೇಖನಕ್ಕೆ ಪೂರಕವಾಗಿ ಕೆಲವೊಂದು ಮಾಹಿತಿಯನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಿದೆ. ಆಗಸದಲ್ಲಿ ಅತಿ ಪ್ರಕಾಶಮಾನವಾದ ನಕ್ಷತ್ರವೆಂದರೆ ಸೂರ್ಯವೇ ಆಗಿದೆ. ಸೂರ್ಯನನ್ನು ದೇವತೆಯೆಂದು ಆರಾಧಿಸುವುದನ್ನು ಕಾಣಬಹುದು. ಭೂಮಿಯ ಮೇಲೆ ಸೂರ್ಯನ ಪ್ರಭಾವ ಗಣನೀಯವಾಗಿದ್ದು, ಸೂರ್ಯನ ಸುತ್ತ ಒಂದು ಸುತ್ತು ಸುತ್ತಲು ಭೂಮಿ ತೆಗೆದುಕೊಳ್ಳುವ ಕಾಲವನ್ನು ಒಂದು ವರ್ಷವೆನ್ನುತ್ತಾರೆ. ಈ ಕಾಲಗಣನೆಯೇ ಇಂದು ಬಳಕೆಯಲ್ಲಿರುವುದಾಗಿದೆ. ವಾರದ ಮೊದಲ ದಿನವನ್ನು ರವಿವಾರವೆಂದು ಹೆಸರಿಸಲಾಗಿದೆ. ಒಟ್ಟಾರೆಯಾಗಿ ಸೂರ್ಯ ಜೀವಿಗಳಿಗೆ ಶಕ್ತಿ, ಬೆಳಕು, ಜೀವನಾಧಾರ ಸಂಗತಿಯಾಗಿದ್ದಾನೆ.      ಈ ಬೃಹತ್ ಬ್ರಹ್ಮಾಂಡದಲ್ಲಿ ನಮ್ಮ ಭೂಮಿ ಇರುವುದೊಂದೇ ಸೂರ್ಯ ಮಂಡಲ ಅಲ್ಲ. ಅದೆಷ್ಟು ಅಸಂಖ್ಯ ಸೂರ್ಯಗಳು, ಭೂಮಿಗಳು ಇರುವ ಸೂರ್ಯಮಂಡಲವಿದೆಯೋ ಗೊತ್ತಿಲ್ಲ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಈಗಾಗಲೇ ಸುಮಾರು ೫೦೦ ಸೂರ್ಯಮಂಡಲಗಳಿರುವುದನ್ನು ಖಚಿತಪಡಿಸಿದ್ದಾರೆ. ವರ್ಷಕ್ಕೊಂದರಂತೆ ಹೊಸ ಹೊಸ ಸೂರ್ಯಮಂಡಲಗಳು ಪತ್ತೆಯಾಗುತ್ತಿವೆ.
     "ಓಂ ಸೂರ್ಯೋ ಜ್ಯೋತಿರ್ಜ್ಯೋತಿಃ ಸೂರ್ಯಃ ಸ್ವಾಹಾ||" (ಯಜು.೩.೯.೧.) -ಸೂರ್ಯ ಜ್ಯೋತಿರ್ಯುಕ್ತನಾಗಿದ್ದಾನೆ. ಆದರೆ ಜ್ಯೋತಿರ್ಮಯ ಪ್ರಭುವು ಸೂರ್ಯನಿಗೂ ಸೂರ್ಯನಾಗಿದ್ದಾನೆ. ಇದು ಸತ್ಯ ಎಂಬುದು ಇದರ ಅರ್ಥ. ವೇದಗಳು ಪರಮಾತ್ಮನನ್ನು ಅಗ್ನಿ ಎಂತಲೂ ಸಂಬೋಧಿಸಿರುವುದನ್ನು ಕಾಣಬಹುದು. ಇಲ್ಲಿ ಅಗ್ನಿ ಎಂದರೆ ಜ್ಯೋತಿರ್ಮಯ ಎಂದರ್ಥ. ಋಗ್ವೇದದ ಮೊದಲ ಮಂತ್ರದ ಮೊದಲ ಪದವೇ ಅಗ್ನಿ ಆಗಿದೆ. ಅದು ಹೀಗಿದೆ:
ಅಗ್ನಿಮೀಳೇ ಪುರೋಹಿತಂ ಯಜ್ಷಸ್ಯ ದೇವಮೃತ್ವಿಜಮ್ | ಹೋತಾರಂ ರತ್ನಧಾತಮಮ್ || (ಋಕ್.೧.೧.೧.) (ಸರ್ವಹಿತಕಾರಿ, ಪೂಜ್ಯತಮ, ಜ್ಞಾನಸ್ವರೂಪ, ಜ್ಞಾನದಾತ, ಸರ್ವಪ್ರಥಮ, ಸರ್ವೋಪರಿಸ್ಥಿತ ಪರಮಾತ್ಮನನ್ನು ಸ್ತುತಿಸುತ್ತೇನೆ. ಅವನು ಬ್ರಹ್ಮಾಂಡರೂಪಿ ಯಜ್ಞದ ಪ್ರಕಾಶಕ, ಪ್ರವರ್ತಕ, ಸಮಯಾನುಸಾರ ಎಲ್ಲವನ್ನೂ ಪ್ರಾಪ್ತಗೊಳಿಸುವವನು,, ಸೃಷ್ಟಿ, ಸ್ಥಿತಿ, ಲಯಕರ್ತನು, ಪ್ರಸನ್ನತೆಯನ್ನುಂಟುಮಾಡುವ ರತ್ನಾದಿಗಳನ್ನು, ಉತ್ಕೃಷ್ಟ ಅನ್ನ, ಜಲ, ಫಲ ಪುಷ್ಪಾದಿಗಳನ್ನು ಕರುಣಿಸುವವನೂ ಆಗಿದ್ದಾನೆ.) ಪ್ರಾತಃಕಾಲದಲ್ಲಿ ಆಸ್ತಿಕರು ಉಚ್ಛರಿಸುವ ಈ ಮಂತ್ರವನ್ನು ಗಮನಿಸಿ:
ಓಂ ಪ್ರಾತರ್ಜಿತಂ ಭಗಮುಗ್ರಂ ಹುವೇಮ ವಯಂ ಪುತ್ರಮದಿತೇರ್ಯೋ ವಿಧರ್ತಾ |
ಆಧ್ರಶ್ಚಿದ್ ಯಂ ಮನ್ಯಮನಸ್ತುರಶ್ಚಿದ್ ರಾಜಾ ಚಿದ್ ಯಂ ಭಗಂ ಭಕ್ಷೀತ್ಯಾಹಃ || (ಋಕ್.೭.೪೧.೨)
    'ನಿತ್ಯವಿಜಯಿಯೂ, ಅತಿ ತೇಜಸ್ವಿಯೂ, ಸೂರ್ಯಾದಿ ಪ್ರಕಾಶಪುಂಜಗಳ ನಿತ್ಯಧಾರಕನೂ, ಸರ್ವಜ್ಞನೂ, ಪಾತಕಿಗಳನ್ನು ದಂಡಿಸುವವನೂ ಆದ ದೇವದೇವನ ದಿವ್ಯ ಪ್ರಕಾಶವನ್ನು ನಾವು ಪ್ರಾತಃಕಾಲ ಧರಿಸೋಣ' ಎಂಬುದು ಇದರ ಅರ್ಥ. ಅಗ್ರಣಿಯಾಗಿರುವುದರಿಂದ, ಸದಾ ಜಾಗೃತವಾಗಿರುವುದರಿಂದ, ಜ್ಞಾನದಾಯಕನಾಗಿರುವುದರಿಂದ ಅಗ್ನಿಯನ್ನು ಆತ್ಮಕ್ಕೂ ಹೋಲಿಸುತ್ತಾರೆ. ಜ್ಞಾನಜ್ಯೋತಿ ಬೆಳಗಲಿ ಎಂಬ ಪದಪ್ರಯೋಗ ಗಮನಿಸಬಹುದು. ಯಜ್ಞದಲ್ಲಿ ಅಗ್ನಿಗೆ ಪ್ರಧಾನ ಪಾತ್ರವಿದೆ. ಇಲ್ಲಿ ಯಜ್ಞವೆಂದರೆ ಕೇವಲ ಹವನ, ಹೋಮಗಳಲ್ಲ. ಯಜ್ಞವೆಂದರೆ ಶ್ರೇಷ್ಠತಮವಾದ ಕರ್ಮಗಳು. ಈ ಅರ್ಥದಲ್ಲಿ ಒಳ್ಳೆಯ ರೀತಿಯಲ್ಲಿ ಸಹಜೀವಿಗಳ ಹಿತ ಗಮನದಲ್ಲಿರಿಸಿ ಬಾಳುವುದೇ ಯಜ್ಞವೆನಿಸುತ್ತದೆ. ಅಗ್ನಿಗೆ ಅರ್ಪಿಸುವ ವಸ್ತುಗಳನ್ನು ಅರಗಿಸಿ, ವಿಭಜಿಸಿ ಅದರ ಗುಣವನ್ನು ಎಲ್ಲೆಡೆಗೆ ಹರಡುವ ಶಕ್ತಿ ಇದೆ. ಆದ್ದರಿಂದ ಯಜ್ಞದಲ್ಲಿ ಅರ್ಪಿಸುವ ಹವಿಸ್ಸುಗಳು ಸುತ್ತಮತ್ತಲಿನ ವಾತಾವರಣವನ್ನು ಶುದ್ಧಗೊಳಿಸುವಂತಹದಾಗಿರಬೇಕು, ಆಹ್ಲಾದಕರ ವಾತಾವರಣ ನಿರ್ಮಿಸುವಂತಿರಬೇಕು. ಹವಿಸ್ಸು, ಸಮಿತ್ತು, ಪದಾರ್ಥಗಳನ್ನು ಅಗ್ನಿಗೆ ಅರ್ಪಿಸುವಾಗ 'ಇದಂ ನ ಮಮ' ಎಂಬ ಮಂತ್ರ ಉಚ್ಛರಿಸಲಾಗುತ್ತದೆ. ಇದರ ಅರ್ಥ, ಈ ಕಾರ್ಯ 'ನನಗಾಗಿ ಅಲ್ಲ', ಸಕಲರ ಹಿತಕ್ಕಾಗಿ ಎಂಬುದು ಸೂಚ್ಯಾರ್ಥವಾಗಿದೆ. ಅಗ್ನಿ ಜೀವರು ಮತ್ತು ದೇವರ ನಡುವಣ ಕೊಂಡಿಯಾಗಿದೆ.
     ಐದು ವಿಧದ ಅಗ್ನಿಯನ್ನು ಗುರುತಿಸುತ್ತಾರೆ - ಕಾಲಾಗ್ನಿ (ಸಮಯ), ಕ್ಷುದ್ಧಾಗ್ನಿ (ಹಸಿವು), ಶೀತಾಗ್ನಿ (ಶೀತಲ), ಕೋಪಾಗ್ನಿ (ಕೋಪ) ಮತ್ತು ಜ್ಞಾನಾಗ್ನಿ(ಜ್ಞಾನ). ನಮ್ಮ ಜೀವನದಲ್ಲಿ ಅನುಭವಕ್ಕೆ ಬರುವ ನವರಸಗಳೂ ಅಗ್ನಿಯ ಪ್ರತಿರೂಪವಾಗಿರುತ್ತವೆ. ಕಾಮಾಗ್ನಿ, ವಿರಹಾಗ್ನಿ, ಮೋಹಾಗ್ನಿ ಮುಂತಾದ ಪದಬಳಕೆಯನ್ನು ಗಮನಿಸಬಹುದು. ಬೆಂಕಿ ಉಗುಳುವ ಮಾತುಗಳು, ಕಣ್ಣಿನಲ್ಲೇ ಸುಡುವ ನೋಟ, ಹೊಟ್ಟೆಯುರಿ (ಮತ್ಸರ) ಮುಂತಾದವುಗಳೂ ಸಹ ಅಗ್ನಿಯ ಜೊತೆಗೂಡಿರುವುದನ್ನು ಕಾಣಬಹುದು. ಅಂದರೆ ಅಗ್ನಿ ನಮ್ಮತನವನ್ನು ಪ್ರತಿನಿಧಿಸುವ ಸಂಗತಿಯಾಗಿದೆ.
     ಅಗ್ನಿ ನೀರಿನಿಂದ ಉದಯಿಸುತ್ತದೆ ಮತ್ತು ನೀರಿನಲ್ಲಿ ವಾಸಿಸುತ್ತದೆ ಎಂದು ಋಗ್ವೇದದಲ್ಲಿ ಉಲ್ಲೇಖ ಬರುತ್ತದೆ. ವಿಷಯದ ಆಳಕ್ಕೆ ಹೋದರೆ ಇದರ ಅರ್ಥ ನಮಗೆ ತಿಳಿಯಬಹುದು. ನೀರು ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾಗಿದೆ. ಜಲಜನಕ ಶೀಘ್ರವಾಗಿ ದಹಿಸುವ ಅನಿಲವಾಗಿದ್ದು, ಆಮ್ಲಜನಕ ದಹನಕ್ಕೆ ಸಹಕಾರಿಯಾಗಿರುತ್ತದೆ ಅಲ್ಲವೇ? ಪ್ರತಿ ಶುಭ, ಅಶುಭ ಕಾರ್ಯಗಳಿಗೆ ಅಗ್ನಿ ಸಾಕ್ಷಿಯಾಗಿರುತ್ತದೆ. ಅಂತ್ಯ ಸಂಸ್ಕಾರದ ಕ್ರಿಯೆಯಲ್ಲಿ ಶವದಹನಕ್ಕೂ ಅಗ್ನಿ ಬೇಕು. ವೈವಾಹಿಕ ಜೀವನಕ್ಕೆ ಕಾಲಿಡುವಾಗಲೂ ಅಗ್ನಿಸಾಕ್ಷಿಯಾಗಿ ಕೈ ಹಿಡಿಯುವುದು ಎನ್ನುವರಲ್ಲವೇ? ಅಗ್ನಿ ಪಾವಿತ್ರ್ಯದ ಸಂಕೇತವೂ ಆಗಿದೆ, ಪರಮಾತ್ಮನಂತೆ ದಾರಿ ತೋರುವ ಗುಣವನ್ನೂ ಹೊಂದಿದೆ. ಈ ವೇದಮಂತ್ರ ಗಮನಿಸೋಣ:
ಓಂ ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ || (ಯಜು.೪೦.೧೬.)
     ಅರ್ಥ: ಓ ಜ್ಯೋತಿರ್ಮಯ ಪರಮಾತ್ಮನೇ, ಮುಂದೆ ಹೋಗುವ ಎಲ್ಲಾ ಮಾರ್ಗಗಳನ್ನೂ ತಿಳಿದವನು ನೀನಾಗಿದ್ದೀಯೆ. ನಮ್ಮನ್ನು ಐಶ್ವರ್ಯಪ್ರಾಪ್ತಿಗಾಗಿ (ಐಶ್ವರ್ಯ ಎಂದರೆ ಕೇವಲ ಧನಸಂಪತ್ತಲ್ಲ) ಸನ್ಮಾರ್ಗದಲ್ಲಿ ನಮ್ಮನ್ನು ಮುನ್ನಡೆಸು. ನಮ್ಮ ಕುಟಿಲತೆಯೆಂಬ ಪಾಪವನ್ನು ತೊಡೆದು ಹಾಕು. ನಮ್ಮ ಕಲ್ಯಾಣಕ್ಕಾಗಿ ನಿನಗೆ ನಮಸ್ಕಾರಗಳನ್ನು ಅರ್ಪಿಸುವೆವು ಎಂಬುದು ಇದರ ಅರ್ಥವಾಗಿದೆ. ಇದರ ಭಾವಾನುವಾದವನ್ನು ಹೀಗೆ ಮಾಡಬಹುದು:
ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಪ್ರಭು ವಂದನೆ ||
-ಕ.ವೆಂ.ನಾಗರಾಜ್.
**************
ದಿನಾಂಕ  02.03.2015ರ ಜನಮಿತ್ರದ 'ಚಿಂತನ ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಮಾರ್ಚ್ 8, 2015

ಪಂಚ ಶಕ್ತಿಗಳ ಮಹತ್ವ - ೧


 ೧.ಭೂಮಿ
     ಒಂದು ಸಂಗತಿ ಹಿರಿದೆಂದುಕೊಂಡರೆ ಅದಕ್ಕಿಂತ ಹಿರಿದಾದುದು ಗೋಚರಿಸುತ್ತಾಹೋಗುತ್ತದೆ. ವಿವೇಚನಾಶಕ್ತಿ ಇರುವ ಮಾನವನಿಗೆ ಜ್ಞಾನ ದೊಡ್ಡದು. ಈ ಜ್ಞಾನಕ್ಕೆ ಮೂಲವಾದ ವಾಕ್ಕು ಜ್ಞಾನಕ್ಕಿಂತ ಹಿರಿದು. ವಾಕ್ಕಿಗಿಂತ ಮನಸ್ಸು, ಮನಸ್ಸಿಗಿಂತ ಇಚ್ಛಾಶಕ್ತಿ, ಇಚ್ಛಾಶಕ್ತಿಗಿಂತ ಸ್ಮರಣಶಕ್ತಿ, ಸ್ಮರಣಶಕ್ತಿಗಿಂತ ಮನೋಕೇಂದ್ರೀಕರಣ (ಧ್ಯಾನ), ಧ್ಯಾನಕ್ಕಿಂತ ಧ್ಯಾನ ಏಕೆ ಮತ್ತು ಹೇಗೆ ಎಂಬ ಅರಿವು ಮಿಗಿಲೆಂಬುದನ್ನು ಅರಿತಿದ್ದೇವೆ. ದೈಹಿಕ ಮತ್ತು ಮಾನಸಿಕ ಬಲವಿಲ್ಲದಿದ್ದರೆ ಮೇಲಿನದೆಲ್ಲವೂ ಅರ್ಥ ಕಳೆದುಕೊಳ್ಳುತ್ತದೆ. ಆದ್ದರಿಂದ ಬಲವೇ ಮಿಗಿಲು. ಬಲ ಬರಲು 'ಅನ್ನ' ಅಗತ್ಯವಾದ್ದರಿಂದ 'ಅನ್ನ' ಅದಕ್ಕಿಂತಲೂ ಮಿಗಿಲು. ಈ 'ಅನ್ನ'ಕ್ಕಿಂತ ಹೆಚ್ಚಿನದಾದುದು ಪಂಚಭೂತಗಳೆಂದು ಕರೆಯಲ್ಪಡುವ ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶಗಳು! ಏಕೆಂದರೆ, ಅನ್ನದ ಉತ್ಪತ್ತಿಗೆ ಇವು ಅಗತ್ಯವಾಗಿವೆ. ಜೀವಿಗಳು ಸಹ ಪಂಚಭೂತಗಳ ಆವಿಷ್ಕಾರವಾಗಿವೆ; ಪಂಚಭೂತಗಳ ಸೂಕ್ತ ಸಂಯೋಜನೆಯೊಂದಿಗೆ ಜೀವ ಚೈತನ್ಯ ಸೇರಿಕೊಂಡು ಜೀವಿಗಳು ಎನ್ನಿಸಿಕೊಳ್ಳುತ್ತವೆ. ಈ ಪಂಚಭೂತಗಳೂ ಸಹ ಒಂದಕ್ಕಿಂತ ಮತ್ತೊಂದು ಮಿಗಿಲಾಗಿದೆ. ಒಂದೊಂದಾಗಿ ನೋಡೋಣ.
     'ಅನ್ನ' ಎಂಬ ಪದ ಬಹು ವಿಶಾಲ ಅರ್ಥವಿರುವಂತಹದು ಎಂಬುದನ್ನು ಹಿಂದಿನ ಲೇಖನದಲ್ಲಿ ತಿಳಿದುಕೊಂಡೆವು. ಅನ್ನ ಎಂಬುದು ಕೇವಲ ನಾವು ಸೇವಿಸುವ ಆಹಾರ ಮಾತ್ರ ಅಲ್ಲ, ಅದು ಜೀವಜಗತ್ತಿನ ಪೋಷಣೆಗೆ ನೆರವಾಗುವಂತಹ ಯಾವುದೇ ಸಂಗತಿ ಅಥವ ವಸ್ತು ಅನ್ನವೆನಿಸುತ್ತದೆ. ಅದು ಇಡೀ ವಿಶ್ವದ ಚೈತನ್ಯದ ಮೂಲವಾಗಿದೆ. ಒಂದು ಅರ್ಥದಲ್ಲಿ ಇಡೀ ಭೂಮಿಯೂ ಸಹ ಆನ್ನವನ್ನು ಪ್ರತಿನಿಧಿಸುತ್ತದೆ, ಏಕೆಂದರೆ ಭೂಮಿ ಜೀವ ಜಗತ್ತಿಗೆ ಆಧಾರಪ್ರಾಯವಾಗಿದೆ.
     ಈ ಭೂಮಿ ರಚನೆಯಾದುದಾದರೂ ಹೇಗೆ? ವ್ಶೆಜ್ಞಾನಿಕವಾಗಿ ಹೇಳುವುದಾದರೆ ಸುಖಾಸುಮ್ಮನೆ ಶೂನ್ಯದಿಂದ ಯಾವುದೇ ಸೃಷ್ಟಿ ಸಾಧ್ಯವೇ ಇಲ್ಲ. ಇರುವುದನ್ನು ರೂಪಾಂತರ ಮಾಡಿ ಇನ್ನೊಂದು ರೂಪಕ್ಕೆ ತರಬಹುದಷ್ಟೇ. ದೇವರು ಈ ಜಗತ್ತಿನ ಜನಕನೆಂದು ಧರ್ಮಗ್ರಂಥಗಳು ಹೇಳುತ್ತವೆ. ಆದರೆ ಯಾವುದರಿಂದ ಸೃಷ್ಟಿಸಿದ? ಏಕೆ ಸೃಷ್ಟಿಸಿದ? ಹೇಗೆ ಸೃಷ್ಟಿಸಿದ?  ತರ್ಕಬದ್ಧವಾಗಿ ನೋಡಿದರೆ ಈ ಜಡಜಗತ್ತಿನ ಸೃಷ್ಟಿ ಶೂನ್ಯದಿಂದಂತೂ ಆಗಿರಲಾರದು. ದೇವರ ಸೃಷ್ಟಿ, ಶೂನ್ಯದಿಂದ ಸೃಷ್ಟಿಸಿದ ಎಂಬುದನ್ನು ವಾದದ ಸಲುವಾಗಿ ಒಪ್ಪಿಕೊಂಡರೂ, ಪ್ರಶ್ನೆ ಉದ್ಭವಿಸುತ್ತದೆ. ದೇವರು ಶೂನ್ಯದಿಂದ ಏನು ಬೇಕಾದರೂ ಸೃಷ್ಟಿಸಬಹುದಾದರೆ ಇನ್ನೊಬ್ಬ ತನ್ನಷ್ಟೇ ಅಥವ ತನಗಿಂತ ಬಲಿಷ್ಠ ದೇವರನ್ನು ಸೃಷ್ಟಿಸಬಲ್ಲನೇ ಎಂದರೆ ಉತ್ತರ ಕೊಡುವುದು ಕಷ್ಟ. ಒಂದು ಕಟ್ಟಡವನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೆ ನಿರ್ಮಿಸಲು ಸಾಧ್ಯವಿದೆಯೇ? ಅದಕ್ಕೆ ಇಟ್ಟಿಗೆ, ಕಲ್ಲು, ಸಿಮೆಂಟು, ಮರಳು, ಕಬ್ಬಿಣ, ಮುಂತಾದವು ಇರಲೇಬೇಕು. ಕಟ್ಟಡದಲ್ಲಿರುವ ವಸ್ತುಗಳು ಮೊದಲೂ ಇದ್ದವು, ಈಗಲೂ ಇದ್ದಾವೆ, ಆದರೆ ಬೇರೆ ಬೇರೆ ರೂಪಗಳಲ್ಲಿ! ಕಟ್ಟಡ ಬಿದ್ದು ಹೋದರೂ, ನಾಶವಾದರೂ, ಅದರಲ್ಲಿ ಬಳಕೆಯಾದ ವಸ್ತುಗಳು ಮುಂದೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವಾಗಲೂ ಇರುತ್ತವೆ. ಹೀಗೆಯೇ ಈ ಜಗತ್ತೂ ಸಹ ಮೊದಲೂ ಇತ್ತು, ಈಗಲೂ ಇದೆ, ಮುಂದೂ ಇರುತ್ತದೆ, ಆದರೆ ಬೇರೆ ರೂಪಾಂತರಗಳಲ್ಲಿ ಎನ್ನವುದು ಹೆಚ್ಚು ಸಮಂಜಸ ವಾದವಾಗುತ್ತದೆ. ಶೂನ್ಯದಿಂದ ಏನೂ ಸೃಷ್ಟಿಸಲು ಸಾಧ್ಯವಿಲ್ಲವೆನ್ನುವುದನ್ನು ಒಪ್ಪುವುದಾದರೆ, ಜಡ ಪ್ರಕೃತಿಯಿಲ್ಲದಿದ್ದರೆ ಸ್ವತಃ ದೇವರೂ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು ಒಪ್ಪಲೇಬೇಕಾಗುತ್ತದೆ. ಹಾಗಾಗಿ ಈ ಜಗತ್ತು ಮೊದಲಿನಿಂದಲೂ ಇತ್ತು, ಮುಂದೂ ಇರುತ್ತದೆ, ಎಂದೆಂದೂ ಇರುತ್ತದೆ, ಅದು ಜೀವ ಹಾಗೂ ದೇವರಂತೆ ಅನಂತ, ಶಾಶ್ವತ ಎಂದು ತಿಳಿಯಬೇಕಾಗುತ್ತದೆ.
     ಇಂತಹ ಶಾಶ್ವತವಾದ ಜಗತ್ತಿನ ರಚನೆಯ ವಿಚಾರದಲ್ಲಿ ಋಗ್ವೇದ ಬೆಳಕು ಚೆಲ್ಲಿರುವುದು ಹೀಗೆ:
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ || (ಋಕ್. ೧೦.೧೨೯.೧)
     ಸೃಷ್ಟಿಯ ಮುನ್ನ ಶೂನ್ಯವಿರಲಿಲ್ಲ, ಈ ಲೋಕವಿರಲಿಲ್ಲ ಮತ್ತು ಆಕಾಶವೂ ಇರಲಿಲ್ಲ. ಆದರೆ ಎಲ್ಲವನ್ನೂ ಆವರಿಸುವ ಗಂಭೀರ ಮತ್ತು ಗಹನವಾದ ಯಾವುದೋ ಒಂದು ತತ್ವ ಅಥವ ಪದಾರ್ಥ ದೇವರ ಆಶ್ರಯದಲ್ಲಿತ್ತು ಎಂದು ಈ ಮಂತ್ರದ ಅರ್ಥವಾಗಿದ್ದು, ಜಡ ಪ್ರಕೃತಿಯ ಮೂಲ ಅಸ್ತಿತ್ವದ ಬಗ್ಗೆ ಹೇಳುತ್ತದೆ.
ಇನ್ನೊಂದು ಮಂತ್ರ ಹೇಳುತ್ತದೆ:
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ || (ಋಕ್. ೧೦.೧೨೯.೨)
    ಸಾವು ಇರಲಿಲ್ಲ, ಹಾಗಾಗಿ ಅಮರತ್ವವಿರಲಿಲ್ಲ, ರಾತ್ರಿ, ಹಗಲುಗಳು ಇರಲಿಲ್ಲ. ಆ ಒಂದು ತತ್ವ ಮಾತ್ರ ತನ್ನ ಬಲದಿಂದ ಗಾಳಿಯಿಲ್ಲದಿದ್ದರೂ ಪ್ರಾಣದಾಯಿಯಾಗಿತ್ತು, ಅದನ್ನು ಬಿಟ್ಟು ಬೇರೇನೂ ಇರಲಿಲ್ಲ ಎಂದು ಈ ಮಂತ್ರದ ಅರ್ಥ. ಪ್ರಳಯ, ಇತ್ಯಾದಿ ಕಾರಣಗಳಿಂದ ಜೀವಜಗತ್ತಿನ ಸರ್ವನಾಶವಾದರೆ ಜಗತ್ತಿನ ಸ್ಥಿತಿ ಹೀಗೆಯೇ ಇದ್ದಿರಬಹುದೇನೋ! ಆ ಸ್ಥಿತಿ ಹೇಗಿರಬಹುದು ಎಂದು ತಿಳಿಸುವ ಇನ್ನೊಂದು ಮಂತ್ರವಿದು:
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್ || (ಋಕ್.೧೦.೧೨೯.೩)
     ಈ ಮೊದಲು ಇವೆಲ್ಲವೂ ರೂಪ ಲಕ್ಷಣಗಳಿಲ್ಲದೆ, ರಹಸ್ಯಮಯ ಅಂಧಕಾರದಲ್ಲಿ ದ್ರವರೂಪದಲ್ಲಿ (ಹರಿಯುವ ರೀತಿಯಲ್ಲಿ) ಇದ್ದಿತು. ದೇವನ ಕೃಪೆಯಿಂದ ಅದು ಒಂದಾಯಿತು, ಅರ್ಥಾತ್ ಹೊಸ ಸೃಷ್ಟಿಯಾಯಿತು. ಅಥರ್ವವೇದದ ಮಂತ್ರ ಹೇಳುತ್ತದೆ:
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ || (ಅಥರ್ವ. ೧೦.೮.೩೦)
     ಅನಾದಿ ಕಾಲದಿಂದಲೇ ಇರುವ ಈ ಪ್ರಕೃತಿ ಸನಾತನವಾಗಿದ್ದು, ಎಲ್ಲಕ್ಕಿಂತಲೂ ಮೊದಲು ಇದ್ದುದಾಗಿದ್ದು, ದೇವರ ಇಚ್ಛೆಯಂತೆ ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ, ಪ್ರತಿ ಜೀವಿಯ ಮೂಲಕವೂ ವ್ಯಕ್ತವಾಗುತ್ತದೆ. ಈ ಮಂತ್ರ ಜೀವಿಗಳ ಅಸ್ತಿತ್ವದ ಬಗ್ಗೆಯೂ ಬೆಳಕು ಚೆಲ್ಲಿದೆ. ಸೃಷ್ಟಿ, ಸ್ಥಿತಿ. ಲಯಗಳು ಜಗದ ನಿಯಮ. ಸೃಷ್ಟಿಯಾಗುತ್ತಿರುತ್ತದೆ, ಇರುತ್ತದೆ, ನಾಶವಾಗುತ್ತದೆ - ಈ ಚಕ್ರ ನಿರಂತರವಾಗಿ ಸುತ್ತುತ್ತಿರುತ್ತದೆ. ಇನ್ನು ಜೀವಿಗಳ ಅಸ್ತಿತ್ವಕ್ಕೂ ಪ್ರಕೃತಿ ಇರಲೇಬೇಕು. ಇಂತಹ ಘನತತ್ತ್ವವಾದ ಭೂಮಿ/ಪೃಥ್ವಿ/ನೆಲವನ್ನು ನಾವು 'ತಾಯಿ' ಎನ್ನುತ್ತೇವೆ. ಈ ತಾಯಿಯನ್ನು ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆಯ ಸೃಷ್ಟಿಯಿಂದ ಗೌರವಿಸುವುದು, ಉಳಿಸುವುದು, ಸಂರಕ್ಷಿಸುವುದು ಮಕ್ಕಳಾದ ನಮ್ಮ ಕರ್ತವ್ಯವಾಗಿದೆ.
     ನೋಡುವ ಕಣ್ಣುಗಳಿದ್ದರೆ, ಕೇಳುವ ಕಿವಿಗಳಿದ್ದರೆ ಅತ್ಯಂತ ಕ್ಷಮಾಶೀಲ ಧರಿತ್ರಿ ತನ್ನ ಮೇಲೆ ಮಾನವನಿಂದ  ಆದ, ಆಗುತ್ತಿರುವ ಅತ್ಯಾಚಾರಗಳಿಗಾಗಿ ರೋದಿಸುತ್ತಿರುವುದು ಕಾಣುತ್ತದೆ, ಕೇಳುತ್ತದೆ. ಆದರೆ ಆ ರೋದನ ತನಗಾಗಿ ಅಲ್ಲ, ತನ್ನನ್ನು ಆಶ್ರಯಿಸಿರುವ ಜೀವಸಂಕುಲಕ್ಕಾಗಿ ಎಂಬುದನ್ನು ಸಾಧಕ ಮಾತ್ರ ಅರಿಯಬಲ್ಲ!

೨. ಜಲ
     'ನೆಲ'ಕ್ಕಿಂತ ಜಲ ಮೇಲಿನದಾಗಿದೆ. ಘನವಾದ ಯಾವುದೇ ವಸ್ತುವು ಮೂಲತಃ ದ್ರವ ಸ್ಥಿತಿಯಲ್ಲಿದ್ದುದಾಗಿದ್ದು, ಭೂಮಿ ಸಹ ದ್ರವಮೂಲದಿಂದ ಉಗಮವಾದದ್ದಾಗಿದೆ. ಕೇವಲ ಭೂಮಿಯಲ್ಲ, ವಿಶ್ವದ ಯಾವುದೇ ಘನರೂಪದ ಕಾಯವಾಗಲೀ, ವಸ್ತುವಾಗಲೀ ಮೊದಲು ದ್ರವರೂಪದಲ್ಲಿ ಇದ್ದುದಾಗಿದೆ. ಈ ದ್ರವರೂಪದಲ್ಲಿದ್ದ ವಸ್ತು ಅದಕ್ಕೂ ಮೊದಲು ಅನಿಲರೂಪದಲ್ಲಿದ್ದಿತ್ತು. ಹೀಗಾಗಿ 'ಜಲ' ಎಂಬ ಪದದಲ್ಲಿ ಸಂಬೋಧಿಸಬಹುದಾದ ಈ ಸಂಗತಿ ಭೂಮಿಗಿಂತ ಮೇಲಿನದಾಗಿದೆ. ಸೃಷ್ಟಿಯ ರಚನೆಗೆ ಮೂಲ ದ್ರವರೂಪದ ವಸ್ತುವೆಂದು ಹೇಳುತ್ತಾರೆ. (ಮೇಲೆ ಉಲ್ಲೇಖಿಸಿರುವ ಮಂತ್ರಗಳನ್ನು ಗಮನಿಸಬಹುದು.)
     ಜಲತತ್ತ್ವವಿಲ್ಲದಿರುತ್ತಿದ್ದರೆ ಜೀವನ ದುಸ್ತರವಾಗುತ್ತಿತ್ತು. ಮಳೆ ಇರದಿದ್ದಿದ್ದರೆ ಬೆಳೆ ಇರುತ್ತಿರಲಿಲ್ಲ. ನೆಲ ಒಣಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿತ್ತು. ಮಳೆ ಇಲ್ಲದಿದ್ದರೆ ನೆಲ ಆಹಾರ ಉತ್ಪಾದಿಸುವ ಶಕ್ತಿ ಕಳೆದುಕೊಳ್ಳುತ್ತಿತ್ತು. ನೆಲದ ಘನತತ್ತ್ವ ಮತ್ತು ಜಲತತ್ತ್ವಗಳ ಸಂಯೋಗ 'ಅನ್ನತತ್ತ್ವ'ದ ಉಗಮಕ್ಕೆ ಅಗತ್ಯ. ಮಳೆ ಬರದಿದ್ದರೆ ಕ್ಷಾಮ ಆವರಿಸಿ ಎಲ್ಲೆಲ್ಲೂ ಆಹಾರದ ಕೊರತೆಯಿಂದ ಜೀವಜಗತ್ತು ತಲ್ಲಣಿಸುತ್ತದೆ. ಮಳೆ ಬಂದರೆ ಪಶು, ಪಕ್ಷಿಗಳು ಸೇರಿದಂತೆ ಎಲ್ಲಾ ಜೀವಗಳಿಗೂ ತಂಪಾಗುತ್ತದೆ, ಪ್ರಕೃತಿ ಸಂತಸದಿಂದ ನಳನಳಿಸುತ್ತದೆ. 'ಅನ್ನ'ದ ಕುರಿತ ಲೇಖನದಲ್ಲಿ ಹೇಳಿದ ಎಲ್ಲಾ ಸಂಗತಿಗಳೂ ಜಲಕ್ಕೂ ಅನ್ವಯಿಸುತ್ತದೆ. ಪ್ರಪಂಚದ ನಾಗರಿಕತೆಗಳು ಬೆಳೆದದ್ದು, ಉಳಿದದ್ದು ನದಿ ತಟಗಳಲ್ಲಿಯೇ ಎಂಬುದು ಗಮನಾರ್ಹ. ಎಲ್ಲಿ ಜಲದ ಅಭಾವ ಇರುತ್ತದೋ ಅಲ್ಲಿ ಬದುಕು ದುಸ್ತರವಾಗುತ್ತದೆ. ಭೂಮಿಯಲ್ಲಿ ಲಭ್ಯವಿರುವ ಒಟ್ಟು ನೀರಿನ ಪ್ರಮಾಣದಲ್ಲಿ ಕೇವಲ ಶೇ.೧ರಿಂದ೨ರಷ್ಟು ಮಾತ್ರ ಉಪಯೋಗಕ್ಕೆ ಯೋಗ್ಯವೆಂದು ಹೇಳಲಾಗಿದೆ. ಉಳಿದ ನೀರೆಲ್ಲವೂ ಸಾಗರಗಳಲ್ಲಿರುವಂತಹ ಉಪ್ಪು ನೀರಾಗಿದೆ ಅಥವ ಹೆಪ್ಪುಗಟ್ಟಿದ, ಉಪಯೋಗಿಸಲಾಗದ ನೀರಾಗಿದೆ. ಜನಸಂಖ್ಯೆ ಹೆಚ್ಚಾದಂತೆ ನೀರಿನ ಬಳಕೆ ಸಹ ಹೆಚ್ಚಾಗುತ್ತಿದೆ. ಆದ್ದರಿಂದ ನೀರಿನ ಬಳಕೆಯನ್ನು ಎಚ್ಚರದಿಂದ, ಜಾಣತನದಿಂದ ಮಾಡಬೇಕಿದೆ. ಆದರೆ, ವಾಸ್ತವವಾಗಿ ನಾವು ಮಾಡುತ್ತಿರುವುದೇನು? ಉಪಯೋಗಿಸಬಹುದಾದ ನೀರಿನ ಜಲಮೂಲಗಳಾದ ಕೆರೆ, ಕಟ್ಟೆಗಳನ್ನು ಮುಚ್ಚುತ್ತಿದ್ದೇವೆ, ಅತಿಕ್ರಮಿಸುತ್ತಿದ್ದೇವೆ, ನಾಶಪಡಿಸುತ್ತಿದ್ದೇವೆ. ಕೊಳವೆ ಬಾವಿಗಳನ್ನು ವಿವೇಚನೆಯಿಲ್ಲದೆ ತೋಡುತ್ತಾ ಅಂತರ್ಜಲದ ಮಟ್ಟವನ್ನು ತಗ್ಗಿಸುತ್ತಿದ್ದೇವೆ. ಹೀಗೇ ಆದರೆ ಮುಂದೊಮ್ಮೆ ಪ್ರಕೃತಿಯ ಸಮತೋಲನ ತಪ್ಪಿ ಅನಾಹುತಗಳಾಗುವುದು ಶತಃಸ್ಸಿದ್ಧ. ಮನುಕುಲದ ಉಳಿವಿಗಾಗಿ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು:
ನೀರನ್ನು ಉಳಿಸಿದರೆ ಭವಿಷ್ಯವನ್ನು ಉಳಿಸಿದಂತೆ!
ನೀರನ್ನು ರಕ್ಷಿಸಿದರೆ, ನೀರು ನಮ್ಮನ್ನು ರಕ್ಷಿಸುತ್ತದೆ!
-ಕ.ವೆಂ.ನಾಗರಾಜ್.
**************
ದಿನಾಂಕ 23.2.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: