ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಜನವರಿ 7, 2016

ಏನಿದು ಅಸಹಿಷ್ಣುತೆ . . .?


     ಭಾರತದಲ್ಲಿ ಈಗ ಅಸಹಿಷ್ಣುತೆಯ ಬಗ್ಗೆ ದೊಡ್ಡ ಗುಲ್ಲೆದ್ದಿದೆ. ಇದನ್ನು  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಗಂಭೀರವಾದ ಸಮಸ್ಯೆಯೆಂಬಂತೆ ಕೆಲವು ಮಾಧ್ಯಮಗಳು ಮತ್ತು ಸಾಹಿತಿ, ಕಲಾವಿದರುಗಳು ಬಿಂಬಿಸುತ್ತಿರುವದಲ್ಲದೆ ಹಲವರು ತಾವು ಪಡೆದಿದ್ದ ಪ್ರಶಸ್ತಿಗಳನ್ನು ಹಿಂತಿರುಗಿಸುವುದರ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪ್ರವೃತ್ತಿಯನ್ನು ಬಲವಾಗಿ ಖಂಡಿಸುವವರ ಸಂಖ್ಯೆಯೂ ಗಣನೀಯವಾಗಿದೆ. ಪ್ರಶಸ್ತಿ ಹಿಂತಿರುಗಿಸಿದ ಸಾಹಿತಿಗಳು ಬರೆದ ಪುಸ್ತಕಗಳನ್ನು ಅವರಿಗೇ ಹಿಂತಿರುಗಿಸುವ ಚಳುವಳಿಯೂ ಆರಂಭವಾಗಿದೆ. ಒಂದಂತೂ ನಿಜ, ಪ್ರಪಂಚದ ಇತರ ದೇಶಗಳತ್ತ ಕಣ್ಣು ಹಾಯಿಸಿದರೆ ಕಾಣುವುದೇನೆಂದರೆ ಭಾರತದಂತಹ ಸಹಿಷ್ಣುತೆ ಮೈಗೂಡಿಸಿಕೊಂಡಿರುವ ದೇಶ ಮತ್ತೊಂದು ಇಲ್ಲವೆಂಬುದು! ಆದರೂ ಹೀಗೇಕೆ ಎಂಬುದಕ್ಕೆ ಪರ-ವಿರೋಧದ ಹೇಳಿಕೆಗಳು, ಲೇಖನಗಳು ಸಾಕಷ್ಟು ಬೆಳಕು ಕಂಡಿವೆ. ಈ ಕೊಂಡಿಗೆ ಮತ್ತೊಂದು ಲೇಖನದ ಸೇರ್ಪಡೆ ಮಾಡದೆ ಮೂಲ ವಿಷಯವಾದ ಅಸಹಿಷ್ಣುತೆ ಎಂದರೇನು ಎಂಬ ಕುರಿತು ಇಲ್ಲಿ ತಡಕಾಡಿರುವೆ.
     ಅಸಹಿಷ್ಣುತೆ ಕುರಿತು ಮಾತನಾಡುವ ಮುನ್ನ ಸಹಿಷ್ಣುತೆಯ ಬಗ್ಗೆ ತಿಳಿದುಕೊಳ್ಳಬೇಕು. ಸಹಿಸಿಕೊಳ್ಳಲಾಗದಿದ್ದಾಗ ಅಸಹನೆ ಜನಿಸುತ್ತದೆ. ಸಹನೆ ಸಜ್ಜನರ ಆಸ್ತಿ ಮತ್ತು ಅವರ ಆಯುಧವೂ ಕೂಡಾ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ 'ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು'! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ. ಸಮಾಜದ ಹಿತಕ್ಕೆ ಇದು ಅಗತ್ಯವಾದುದಾಗಿದೆ.
     ಅಸಹನೆ ದುರ್ಬಲತೆಯ ದ್ಯೋತಕ ಮತ್ತು ಇತರರಿಗಿಂತ ಕೀಳು ಎಂಬ ಮನೋಭಾವವನ್ನು ಬಿಂಬಿಸುತ್ತದೆ. ಅಸಹಿಷ್ಣುಗಳು ಬಹುಬೇಗ ಪ್ರಚೋದನೆಗೆ ಒಳಗಾಗುತ್ತಾರೆ. ಅವರು ಒತ್ತಡವನ್ನು ಸಹಿಸರು. ತಾಳ್ಮೆ ಕಳೆದುಕೊಂಡು ಉದ್ರಿಕ್ತರಾಗುತ್ತಾರೆ, ವಿವೇಕ ಮರೆಯಾಗಿ ತಮ್ಮ ಒಳಗಿನ ಅಸಹನೆಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಹೊರಗೆಡವುತ್ತಾರೆ ಮತ್ತು ಇದರಿಂದಾಗಿ ಇತರರ ಎದುರಿಗೆ ಹಗುರವಾಗಿಬಿಡುತ್ತಾರೆ. ವಿಚಿತ್ರವೆಂದರೆ ಅಸಹಿಷ್ಣುಗಳು ಮತ್ತು ಸಣ್ಣ ಮನಸ್ಸಿನ ವ್ಯಕ್ತಿಗಳೇ ತಮ್ಮ ಸಹನಾಶೀಲತೆ ಮತ್ತು ವಿಶಾಲ ಮನೋಭಾವದ ಬಗ್ಗೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ! ಹಿಂದಿನ ಸರ್ಕಾರದಲ್ಲಿ ಮಂತ್ರಿಯಾಗಿದ್ದವರೊಬ್ಬರು ನೆರೆಯ ಶತ್ರುದೇಶಕ್ಕೆ ಹೋಗಿ ಅಲ್ಲಿನ ಟಿವಿ ಸಂದರ್ಶನದಲ್ಲಿ ಮಾತನಾಡುತ್ತಾ ಈಗಿನ ಸರ್ಕಾರವನ್ನು ಕಿತ್ತೊಗೆಯಬೇಕು ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ನಾಚಿಕೆಯಿಲ್ಲದೆ ಹೇಳಿಬಿಡುತ್ತಾರೆ. ಇದು ಅವರ ಅಧಿಕಾರದ ಹಪಾಹಪಿ ಮತ್ತು ಅಸಹಿಷ್ಣುತೆ ಪರಾಕಾಷ್ಠೆಯ ಮಟ್ಟ ತಲುಪಿರುವುದನ್ನು ತೋರಿಸುತ್ತದೆ. ಸ್ವಂತ ದೇಶದ ಜನರಿಂದ ಚುನಾಯಿತವಾದ ಸರ್ಕಾರದ ಪದಚ್ಯುತಿಗೆ ಶತ್ರುದೇಶದ ಸಹಾಯ ಬಯಸುವ ಮನಸ್ಥಿತಿಯಿಂದ ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದೇನೆಂದೂ ಅವರಿಗೆ ಅನ್ನಿಸದು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಅಸಹಿಷ್ಣುತೆ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿತ್ತೆಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳ್ಳಬೇಕಿದೆ. ಇತಿಹಾಸದಿಂದ ಪಾಠ ಕಲಿಯದಿದ್ದರೆ ನಾವು ಮೂರ್ಖರೇ ಸರಿ.
     ಮತೀಯ ಅಥವ ಧಾರ್ಮಿಕ ಅಸಹಿಷ್ಣುತೆ ಇಂದು ಜಾಗತಿಕ ಭಯೋತ್ಪಾದನೆಯ ರೂಪದಲ್ಲಿ ಕಾಡುತ್ತಿದೆ. ಧರ್ಮ ಅಥವ ಮತದ ಹೆಸರಿನಲ್ಲಿ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ. ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳುತ್ತಿದೆ. ಎಳೆಯ ಕಂದಮ್ಮಗಳನ್ನೂ ನಿರ್ದಯದಿಂದ ಹೊಸಕಿಹಾಕುತ್ತಿರುವ ವಿಡಿಯೋಗಳು ಅಂತರ್ಜಾಲ ತಾಣಗಳಲ್ಲಿ ಹರಿದಾಡುತ್ತವೆ. ಅದನ್ನು ಬೆಂಬಲಿಸುವ ವಿಕೃತರ ಸಂಖ್ಯೆಯೂ ಗಾಬರಿ ಹುಟ್ಟಿಸುವಂತಿದೆ. ಉಗ್ರರು ಯಾವಾಗ ಎಲ್ಲಿ ಜೀವಗಳ ಬಲಿ ತೆಗೆದುಕೊಳ್ಳುತ್ತಾರೆ ಎಂಬುದು ಪ್ರಜ್ಞಾವಂತರ ಆತಂಕವಾಗಿದೆ. ೪೦ ದೇಶಗಳಿಂದ ಉಗ್ರರಿಗೆ ಹಣ ಮತ್ತು ಶಸ್ತ್ರಾಸ್ತ್ರಗಳ ಸರಬರಾಜಾಗುತ್ತಿದೆಯಂತೆ. ನಮ್ಮ ದೇಶದಲ್ಲೂ ಉಗ್ರರಿಗೆ ಬೆಂಬಲವಾಗಿ ನಿಲ್ಲುವ, ಸಹಾಯ ಮಾಡುವ ಜನರಿಗೆ ಕೊರತೆಯಿಲ್ಲ. ವಿವಿಧ ರಾಜಕೀಯ ಪಕ್ಷಗಳೂ ವೋಟಿನ ಸಲುವಾಗಿ ಮಾಡುವ ಮತೀಯ ಓಲೈಕೆ ಭಯೋತ್ಪಾದನೆಗೆ ಪರೋಕ್ಷವಾಗಿ ಸಹಕಾರಿಯಾಗಿದೆ. ಜನನಾಯಕರುಗಳಿಗೆ ದೇಶ ಮತ್ತು ಜನಸಾಮಾನ್ಯರ ಹಿತ ಮುಖ್ಯವೆನ್ನುವ ಪರಿಸ್ಥಿತಿ ಬಂದರೆ ಮಾತ್ರ ಸುಧಾರಣೆ ಕಾಣಬಹುದು. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುವ ರಾಜಕಾರಣಿಗಳೇ ಇಂದು ಹೆಚ್ಚಾಗಿರುವುದು ಸುಳ್ಳಲ್ಲ. ಸಹಿಷ್ಣುತೆ ಒಮ್ಮುಖದ ದಾರಿಯಾದರೆ ಅದು ಸಾಂಸ್ಕೃತಿಕ ಆತ್ಮಹತ್ಯೆಯಾಗುತ್ತದೆ. ಹಿಂದೂ ಧರ್ಮದ ಆಚರಣೆಗಳು, ಸಂಪ್ರದಾಯಗಳನ್ನು ಟೀಕಿಸಿದರೆ ಸಹಿಸಿಕೊಳ್ಳಬೇಕು ಎಂದು ಬಯಸುವವರು ಇದೇ ನೀತಿಯನ್ನು ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಅನ್ವಯಿಸುವರೇ ಎಂದರೆ ಅದಕ್ಕೆ ಉತ್ತರ ಸಿಗದು. ಇಂತಹ ತಾರತಮ್ಯವೂ ಅಸಹಿಷ್ಣುತೆಗೆ ಪ್ರಚೋದನೆಯಾಗುತ್ತದೆ.
     ಜಾತಿ ಆಧಾರಿತ ರಾಜಕೀಯ ಸಂವಿಧಾನದ ಜಾತ್ಯಾತೀತತೆಗೆ ಕೊಡಲಿಪೆಟ್ಟು ಹಾಕುತ್ತಿದೆ. ಜಾತಿ ಆಧಾರದಲ್ಲಿ ಹಿಂದುಳಿದಿರುವಿಕೆ ಮತ್ತು ಮುಂದುವರೆದಿರುವಿಕೆಯನ್ನು ಗುರುತಿಸುವುದು ಅವೈಜ್ಞಾನಿಕ ಮತ್ತು ಅಮಾನವೀಯ. ಇದನ್ನು ರಾಜಕೀಯ ಅಧಿಕಾರ ಗಳಿಕೆಗೆ ಬಳಸುವ ರಾಜಕಾರಣಿಗಳು ಜಾತೀಯತೆಯನ್ನು ಪೋಷಿಸುತ್ತಿವೆ. ಪ್ರತಿಭಾ ಪಲಾಯನ, ಜಾತಿ-ಜಾತಿಗಳಲ್ಲಿ ವೈಮನಸ್ಯ, ಸಂಘರ್ಷಗಳು, ಅಸಹಿಷ್ಣುತೆ ಈ ಜಾತಿ ರಾಜಕೀಯದ ಫಲಗಳಾಗಿವೆ. ಸಹಿಷ್ಣುತೆ ಭಾರತೀಯರ ರಕ್ತದಲ್ಲಿ ಬಂದ ಗುಣವಾಗಿದೆ. ಅದನ್ನು ಕುಟಿಲ ರಾಜಕಾರಣಿಗಳು, ಅವಕಾಶವಾದಿ ಸಾಹಿತಿಗಳು, ಕಲಾವಿದರುಗಳು ಹಾಳು ಮಾಡದಿರುವಂತೆ ಜಾಗೃತರಾಗಿರುವುದು ಇಂದಿನ ಅಗತ್ಯವಾಗಿದೆ. ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ, ಸರ್ವಾಧಿಕಾರಿಗಳ ಆಳ್ವಿಕೆಯಲ್ಲಿರುವ ದೇಶಗಳಲ್ಲಿ, ಇಸ್ಲಾಮ್ ಧರ್ಮೀಯ ರಾಷ್ಟ್ರಗಳಲ್ಲಿ ಭಿನ್ನ ವಿಚಾರಗಳನ್ನು ಹೊಂದಿರುವವರನ್ನು ಹಿಂಸಿಸಲಾಗುತ್ತ್ತದೆ, ಬಲವಂತವಾಗಿ ವಿರುದ್ಧ ವಿಚಾರ ಒಪ್ಪುವಂತೆ ಮಾಡಲಾಗುತ್ತದೆ, ಗಡೀಪಾರು ಮಾಡಲಾಗುತ್ತದೆ, ಅವಮಾನಿಸಲಾಗುತ್ತದೆ, ಕೊಲ್ಲಲಾಗುತ್ತದೆ ಎಂಬುದಕ್ಕೆ ಹೇರಳ ಉದಾಹರಣೆಗಳು ಸಿಗುತ್ತವೆ. ಹೀಗಿರುವಾಗ ಭಾರತದ ಉದಾತ್ತತೆಯಾದ ಸಹಿಷ್ಣುತಾ ಗುಣವನ್ನು ಗುರುತಿಸೋಣ, ಗೌರವಿಸೋಣ, ಉಳಿಸೋಣ.
ಸಹಿಷ್ಣುತೆಯೆಂದರೆ ನೀವು ನಿಮಗೆ ಏನು ಬೇಕೆನ್ನುತ್ತೀರೋ, ಯಾವ ಹಕ್ಕು ಇರಬೇಕೆನ್ನುತ್ತೀರೋ ಅವು ಇತರರಿಗೂ ಇರಬೇಕೆನ್ನುವುದು! ನಿಮಗೆ ಮಾತ್ರ ಇರಲಿ ಇತರರಿಗೆ ಬೇಡ ಅನ್ನುವುದೇ ಅಸಹಿಷ್ಣುತೆ!
-ಕ.ವೆಂ.ನಾಗರಾಜ್.
****************
ದಿನಾಂಕ 16.11.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಸೋಮವಾರ, ಜನವರಿ 4, 2016

ಆಕ್ಷೇಪಿಸುವುದೇಕೆ? ಒಪ್ಪಿಕೊಂಡುಬಿಡೋಣ!


     ಹಕ್ಕಿಗಳು ಆಗಸದಲ್ಲಿ ಸ್ವಚ್ಛಂದವಾಗಿ ಹಾರುವುದನ್ನು ಕಂಡಾಗ, ಜುಳು ಜುಳು ನಿನಾದ ಮಾಡುತ್ತಾ ನದಿ ಹರಿಯುವುದನ್ನು ಕಂಡಾಗ, ಸುಂದರ ಗುಡ್ಡ-ಬೆಟ್ಟಗಳು, ಹಸಿರು ತುಂಬಿದ ವನರಾಜಿಯನ್ನು ಕಂಡಾಗ, ರಾತ್ರಿಯ ಸಮಯದಲ್ಲಿ ಬೆಳಗುವ ಚಂದ್ರ, ಹೊಳೆಯುವ ನಕ್ಷತ್ರಗಳನ್ನು ಕಂಡಾಗ ನಮಗೆ ಏನು ಅನ್ನಿಸುತ್ತದೆ? ನಮಗೆ ಆ ಕುರಿತು ಆಕ್ಷೇಪಣೆ ಮಾಡಬೇಕೆನ್ನಿಸುತ್ತೆಯೇ? ಹಕ್ಕಿ ಹಾಗೆ ಹಾರಬಾರದಿತ್ತು, ಹೀಗೆ ಹಾರಬೇಕಿತ್ತು, ನದಿ ಇನ್ನೂ ರಭಸವಾಗಿ ಹರಿಯಬೇಕಿತ್ತು, ದಿಕ್ಕು ಬದಲಾಯಿಸಿ ಹರಿಯಬೇಕಿತ್ತು, ಕಾಡಿನಲ್ಲಿ ಏನೇನೋ ಕಾಡುಗಿಡಮರಗಳು ಬೆಳೆಯುವ ಬದಲು ಕೇವಲ ಮಾವು, ಸಂಪಿಗೆಯಂತಹ ಮರಗಳೇ ಬೆಳೆಯಬೇಕಿತ್ತು, ಚಂದ್ರ ಯಾವಾಗಲೂ ಪೂರ್ಣ ರೀತಿಯಲ್ಲೇ ಇರಬೇಕಿತ್ತು ಎಂದು ಮುಂತಾಗಿ ಅನ್ನುತ್ತೇವೆಯೇ? ಇಲ್ಲ, ಅವು ಹೇಗಿವೆಯೋ ಹಾಗೆ ಅವನ್ನು ಒಪ್ಪಿಕೊಳ್ಳುತ್ತೇವೆ ಅಲ್ಲವೇ? ಅಂತಹ ಯಾವುದೇ ಆಕ್ಷೇಪಣೆಗಳು ಇಲ್ಲದ್ದರಿಂದಲೇ ಅವುಗಳನ್ನು ಕಂಡು ಮನಸ್ಸು ಸಂತೋಷಗೊಳ್ಳುತ್ತದೆ. ನಮ್ಮ ಸಂತೋಷದ ಮೂಲ ಇಲ್ಲಿದೆ, ಬದಲಾಯಿಸಲಾಗದುದನ್ನು ಬದಲಾಯಿಸಲು ಹೆಣಗಾಡದೆ ಇರುವುದನ್ನು ಇರುವಂತೆಯೇ ಒಪ್ಪಿಕೊಳ್ಳುವುದರಲ್ಲಿದೆ, ಅದರೊಂದಿಗೆ ಹೊಂದಿಕೊಳ್ಳುವುದರಲ್ಲಿದೆ.
     ಭಿನ್ನತೆ ಜಗದ ನಿಯಮವಾಗಿದೆ. ಭಿನ್ನತೆಯ ಕಾರಣದಿಂದಲೇ ಜಗತ್ತು ಅಸ್ತಿತ್ವದಲ್ಲಿದೆ. ಭಿನ್ನತೆಯಿರುವುದರಿಂದಲೇ ಜಗತ್ತಿನಲ್ಲಿ ಸ್ವಾರಸ್ಯವಿದೆ, ನವರಸಗಳಿಗೆ ಆಸ್ಪದವಿದೆ. ಎಲ್ಲವೂ ಒಂದೇ ರೀತಿಯಲ್ಲಿ ಇದ್ದರೆ ಅಲ್ಲಿ ಸುಖವೂ ಇರುವದಿಲ್ಲ, ದುಃಖವೂ ಇರುವುದಿಲ್ಲ, ಜಗತ್ತಿನ ಅಗತ್ಯವೂ ಇರುವುದಿಲ್ಲ. ನಿಧಾನವಾಗಿ ಯೋಚಿಸಿದರೆ ಇದರ ಸತ್ಯ ಅರಿವಾಗುತ್ತದೆ ಮತ್ತು ಇದನ್ನು ಅಕ್ಷೇಪಿಸದೆ ಒಪ್ಪಿಕೊಳ್ಳಬೇಕಾಗುತ್ತದೆ. ಎಲ್ಲರೂ ಒಂದೇ ರೀತಿಯಲ್ಲಿ ಬುದ್ಧಿವಂತರು ಅಥವ ದಡ್ಡರು, ಬಲಶಾಲಿಗಳು ಅಥವ ಕೃಷಕಾಯರು, ಆರೋಗ್ಯವಂತರು ಅಥವ ರೋಗಿಗಳು, ಶ್ರೀಮಂತರು ಅಥವ ಬಡವರು,  ಸುಂದರರು ಅಥವ ಕುರೂಪಿಗಳು, ಕೆಟ್ಟವರು ಅಥವ ಒಳ್ಳೆಯವರು ಆಗಿರಲು ಸಾಧ್ಯವೇ? ಇದೇ ಪ್ರಪಂಚ! ಇಂತಹ ಪ್ರಪಂಚದಲ್ಲಿ ಹೇಗಿರಬೇಕು ಎಂದು ವಿವೇಚಿಸಿ ನಡೆಯುವುದು ಸೂಕ್ತ.
     ಆಕ್ಷೇಪಣೆ ಮಾಡುವುದಾದರೂ ಏಕೆ? ಎಲ್ಲರೂ ತಮ್ಮಂತೆಯೇ ಇರಬೇಕು, ತಮ್ಮ ವಿಚಾರವನ್ನೇ ಒಪ್ಪಬೇಕು, ತಮಗೆ ಅನುಕೂಲವಾಗಿರಬೇಕು ಎಂಬ ಅಂತರ್ಗತ ಅನಿಸಿಕೆಯೇ ಆಕ್ಷೇಪಿಸಲು ಮೂಲಕಾರಣ. ಇನ್ನೊಬ್ಬರ ವಿಚಾರಗಳನ್ನು ಒಪ್ಪದ ಮನೋಭಾವ ಇದಕ್ಕೆ ಪುಷ್ಟಿ ಕೊಡುತ್ತದೆ. ಈ ವಿಚಾರದಲ್ಲಿ ತಮ್ಮ ಮತ್ತು ಇತರರ ನಡುವೆ ಒಮ್ಮತ ಮೂಡದಿದ್ದಲ್ಲಿ ಅಲ್ಲಿ ಅಶಾಂತಿ ಮೂಡುತ್ತದೆ. ಪರಿಣಾಮವಾಗಿ ಸಂತೋಷಕ್ಕೆ ಅಲ್ಲಿ ಸ್ಥಾನ ಇರುವುದಿಲ್ಲ. ಇಲ್ಲಿ ಒಂದು ಪ್ರಯೋಗ ಮಾಡಿ ನೋಡಿ. ನಮ್ಮ ನಡವಳಿಕೆಗಳನ್ನು ಒಪ್ಪದವರು ನಮ್ಮ ಕುರಿತು ಟೀಕೆ, ಟಿಪ್ಪಣಿಗಳನ್ನು ಮಾಡಿದರೆ ವಿಚಲಿತಗೊಳ್ಳದೆ ಸ್ವೀಕರಿಸೋಣ. ನಾವೇನೂ ಬದಲಾಗಬೇಕಿಲ್ಲ, ನಮ್ಮ ಅಂತರಂಗ ಹೇಳಿದಂತೆ ಕೇಳಿ ಮುಂದುವರೆದರಾಯಿತು. ಇದರಿಂದ ನಮಗೂ ಅವರ ಕುರಿತು ವಿಮರ್ಶಿಸಲು ಸ್ವಾತಂತ್ರ್ಯ ಸಿಗುತ್ತದೆ. ಅವರೂ ಅದನ್ನು ಆಕ್ಷೇಪಿಸುವುದಿಲ್ಲ ಮತ್ತು ಅವರ ನಡವಳಿಕೆಗಳು ನಮ್ಮ ಮೇಲೆ ಏನೂ ಪ್ರಭಾವ ಬೀರಲಾರವು. ನಮ್ಮ ಹಲವು ಹಳೆಯ ಸಮಸ್ಯೆಗಳನ್ನು ಅವಲೋಕಿಸಿದರೆ ಗೋಚರವಾಗುವ ಸಂಗತಿಗಳು ಆಶ್ಚರ್ಯಕರವಾಗಿರುತ್ತವೆ. ಅಂತಹ ಕೆಟ್ಟ ಘಟನೆಗಳ ನೆನಪುಗಳು ಸಮಸ್ಯೆಗಳ ಬಗ್ಗೆ ನಾವೋ, ಇತರರೋ ನೀಡಿದ ಪ್ರತಿಕ್ರಿಯೆಗಳೇ ಆಗಿರುತ್ತವೆ! ಅಂತಹ ಪ್ರತಿಕ್ರಿಯೆಗಳನ್ನು ನೀಡಿರದಿದ್ದರೆ? ಕಹಿ ನೆನಪುಗಳು ಸಂಗ್ರಹಗೊಳ್ಳುತ್ತಲೇ ಇರುತ್ತಿರಲಿಲ್ಲ.
     ಒಂದೇ ಕುಟುಂಬದ ಸದಸ್ಯರುಗಳೂ, ಒಂದೇ ಸಂಘ-ಸಂಸ್ಥೆಯ ಸದಸ್ಯರುಗಳೂ, ಆತ್ಮೀಯರೆಂದು ಭಾವಿಸುವ ಸ್ನೇಹಿತರ ವಲಯದಲ್ಲೂ ಪರಸ್ಪರ ಹೊಂದಾಣಿಕೆ ಆಗದ ಅನೇಕ ಸಂಗತಿಗಳು ಇರುತ್ತವೆ. ಆದರೂ ಇವರುಗಳು ಹೊಂದಿಕೊಂಡು ಹೋಗುವುದಕ್ಕೆ ಹೆಚ್ಚಿನ ಸಂಗತಿಗಳು ಪರಸ್ಪರರಿಗೆ ಒಪ್ಪಿಗೆಯಾಗುವುದೇ ಕಾರಣ. ನಾವು ಇತರರೊಂದಿಗೆ ಹೊಂದಿಕೊಂಡುಹೋಗುತ್ತೇವೆಂದರೆ ಅವರ ನ್ಯೂನತೆಗಳನ್ನು ನಾವು ಸಹಿಸಿಕೊಳ್ಳುತ್ತೇವೆ ಎಂದು ಅರ್ಥ. ಹಾಗೆಯೇ, ಇತರರು ನಮ್ಮೊಂದಿಗೆ ವಿಶ್ವಾಸವಾಗಿರುತ್ತಾರೆಂದರೆ ಅವರು ನಮ್ಮ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ ಎಂದು ಅರ್ಥ.
     ಎಲ್ಲರೂ ಅವರಿದ್ದ ಹಾಗೆಯೇ ಇರಲಿ ಅಂದರೆ ಜಗತ್ತು ಕಳ್ಳಕಾಕರು, ಲೂಟಿಕೋರರು, ದುಷ್ಟರ ಆವಾಸವಾಗುತ್ತದೆ. ಜಗತ್ತಿನ ಒಳ್ಳೆಯವರ ಗತಿ ಏನು, ಧರ್ಮ, ಸತ್ಯ, ನ್ಯಾಯ, ಶಾಂತಿ, ಇತ್ಯಾದಿಗಳ ಗತಿ ಏನು ಅಂತೀರಾ? ದುಷ್ಟ ಶಿಕ್ಷಣ, ಶಿಷ್ಟ ರಕ್ಷಣಕಾರ್ಯಕ್ಕಾಗಿ ಸಜ್ಜನರು ಪ್ರಯತ್ನಿಸುತ್ತಲೇ ಇರಬೇಕು. ಇದು ನಿರಂತರವಾಗಿ ನಡೆಯಬೇಕಾದ ಕಾರ್ಯ. ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಿತ್ರರೊಬ್ಬರು ಒಮ್ಮೊಮ್ಮೆ ಹತಾಶೆಯಿಂದ ಹೇಳುತ್ತಿರುತ್ತಾರೆ: 'ಇಷ್ಟು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಏನು ಪ್ರಯೋಜನ ಆಗಿದೆ? ನಮ್ಮ ಜನರನ್ನು ತಿದ್ದುವುದು ಕಷ್ಟ.' ಬದಲಾಗಲಿಲ್ಲವೆಂದು ಧೃತಿಗೆಡಬೇಕಿಲ್ಲ. ನಿರಂತರ ಪ್ರಯತ್ನದ ಫಲ ನಿರೀಕ್ಷಿತ ಎಡೆಯಿಂದಲ್ಲವಾದರೂ ಬೇರೆ ಒಂದಲ್ಲಾ ಒಂದು ರೀತಿಯಲ್ಲಿ ಬಂದೇಬರುತ್ತದೆ. ಪಂಚತಂತ್ರದಲ್ಲಿ ಒಂದು ನೀತಿವಾಕ್ಯವಿದೆ: ಸರ್ಪಾನಾಂ ಚ ಕಲಾನಾಂ ಚ ಸರ್ವೇಷಾಂ ದುಷ್ಟಚೇತಸಾಂ | ಅಭಿಪ್ರಾಯಾಃ ನ ಸಿಧ್ಯಂತಿ ತೇನ ವರ್ತತೇ ಇದಂ ಜಗತ್ || -'ಸರ್ಪಗಳು, ಕುಟಿಲರು ಯಾವಾಗಲೂ ದುಷ್ಟಕಾರ್ಯಗಳಲ್ಲೇ ತೊಡಗಿರುತ್ತಾರೆ. ಆದರೆ ಅವರ ಇಚ್ಛೆಗಳು ಈಡೇರಲಾರವು, ಜಗತ್ತು ಹೀಗೆಯೇ ನಡೆಯುತ್ತಿರುತ್ತದೆ!'- ಎಂಬುದು ಇದರ ಅರ್ಥ. ರಾಮ-ರಾವಣರುಗಳು, ಕೃಷ್ಣ-ಕಂಸರುಗಳು ಸದಾ ಕಾಲ ಇದ್ದೇ ಇರುತ್ತಾರೆ, ಈಗಲೂ ಇದ್ದಾರೆ. ಅನೇಕ ಸಾಧು-ಸಂತರುಗಳು, ದಾರ್ಶನಿಕರು ಕಾಲಕಾಲಕ್ಕೆ ಸಮಾಜ ಒಳ್ಳೆಯ ರೀತಿಯಲ್ಲಿ ಸಾಗಲು ಮಾರ್ಗದರ್ಶನ ಮಾಡುತ್ತಲೇ ಬಂದಿದ್ದಾರೆ. ಇಂದಿಗೂ ಸಹ ಸಮಾಜ, ದೇಶ, ಧರ್ಮಗಳಿಗಾಗಿ ಸ್ವಂತದ ಸುಖ-ಸಂತೋಷಗಳನ್ನು ಬದಿಗೊತ್ತಿ ಪೂರ್ಣ ಜೀವನವನ್ನು ಮುಡುಪಿಟ್ಟ ಸಹಸ್ರ ಸಹಸ್ರ ಜನರಿದ್ದಾರೆ. ಇಂತಹವರ ಪ್ರಯತ್ನಗಳೇ ಸಮಾಜವನ್ನು ಇನ್ನೂ ಬದುಕಿಸಿರುವುದು! ಇಂತಹ ಸಾಧಕರುಗಳು ಸಮಾಜ ಬದಲಾಗಲಿಲ್ಲವೆಂದು ಹತಾಶೆಗೊಳಗಾಗುವುದಿಲ್ಲ, ಆಕ್ಷೇಪಿಸುವುದೂ ಇಲ್ಲ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಲೇ ಹೋಗುತ್ತಾರೆ. ಇವರ ಕಾರ್ಯದ ಫಲ ಸಾಮಾನ್ಯರಿಗೆ ಸಿಕ್ಕೇ ಸಿಗುತ್ತದೆ.
     ಮತ್ತೆ ಮೂಲ ವಿಷಯಕ್ಕೆ ಬರುತ್ತೇನೆ. ಆಕ್ಷೇಪಣೆ ಮಾಡುವುದರಿಂದ ಪ್ರಯೋಜನ ಕಡಿಮೆ. ಜಗತ್ತು ಹೇಗಿದೆಯೋ, ಜನರು ಹೇಗಿದ್ದಾರೋ ಹಾಗೆ ಅವರನ್ನು ಪ್ರಥಮತಃ ಒಪ್ಪಿಕೊಳ್ಳಬೇಕು. ನಂತರದಲ್ಲಿ ಸಮಾಜ, ದೇಶದ ಹಿತದೃಷ್ಟಿಯಿಂದ ಆಗಬೇಕಾದ ಬದಲಾವಣೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಸಾಗಬೇಕು. ಸಮಾನ ಮನಸ್ಕರನ್ನು ಒಟ್ಟುಗೂಡಿಸುವ ಕೆಲಸ ಸಾಗಬೇಕು. ಆಗ ಸಜ್ಜನಶಕ್ತಿ ಜಾಗೃತಗೊಳ್ಳುತ್ತದೆ. ದುಷ್ಟಶಕ್ತಿಗಳು ತಾವಾಗಿ ಮೂಲೆ ಸೇರುತ್ತವೆ. ಆಕ್ಷೇಪಣೆ ಮಾಡಿದರೆ ತಾನೇ ಅಶಾಂತಿ ಉಂಟಾಗುವುದು! ಮುಳ್ಳು ಚುಚ್ಚುತ್ತದೆಯೆಂದು ನೆಲಕ್ಕೆಲ್ಲಾ ಚರ್ಮ ಹಾಸುವ ಬದಲು ನಮ್ಮ ಕಾಲುಗಳಿಗೆ ನಾವು ಪಾದರಕ್ಷೆ ಧರಿಸಿದರೆ ಸಾಕು. ನಾವು ಬದಲಾದರೆ ಜಗತ್ತೂ ಬದಲಾಗುತ್ತದೆ.
-ಕ.ವೆಂ.ನಾಗರಾಜ್.
***************
ದಿನಾಂಕ 16.11.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಡಿಸೆಂಬರ್ 25, 2015

ಅವರವರ ಭಾವಕೆ . . . . ಅವರವರ ಭಕುತಿಗೆ . . .


ಭಕ್ತಿಯೆಂಬುದು ಕೇಳು ಒಳಗಿರುವ ಭಾವ
ಅಂತರಂಗದೊಳಿರುವ ಪ್ರೇಮಪ್ರವಾಹ |
ಮನವ ಮುದಗೊಳಿಪ ಆನಂದಭಾವ
ಭಕ್ತಿಯಲೆ ಆನಂದ ಭಕ್ತನಿಗೆ ಮೂಢ ||
     ಮಾನವನಿಗೂ ಪಶು-ಪಕ್ಷಿ-ಕ್ರಿಮಿ-ಕೀಟಗಳಿಗೂ ಒಂದು ಮೂಲಭೂತ ವ್ಯತ್ಯಾಸ ಗಮನಿಸಬಹುದಾದುದೆಂದರೆ ಮಾನವನಿಗೆ ಇರುವ ವಿವೇಚನೆ ಮಾಡುವ ಶಕ್ತಿ. ಆತ ಮಾಡಬಲ್ಲ, ಮಾಡದಿರಲೂ ಬಲ್ಲ, ಬೇರೆಯದನ್ನೇ ಮಾಡಬಲ್ಲ. ಆತ ಕೇವಲ ಸ್ವಾಭಾವಿಕ ಜ್ಞಾನದಿಂದ ತೃಪ್ತನಾಗುವುದಿಲ್ಲ. ಏಕೆಂದರೆ ಅವನ ಮನಸ್ಸು "ಏಕೆ?, ಹೇಗೆ?" ಎಂಬ ಪ್ರಶ್ನೆಗಳನ್ನು ಕೇಳುವ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ. ಮಾನವನ ಪರಿಪೂರ್ಣ ವಿಕಾಸಕ್ಕೆ ಇಂದ್ರಿಯ ಗಮ್ಯವಾದ ಭೌತಿಕ ವಿಷಯಗಳ ಜ್ಞಾನದೊಂದಿಗೆ, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ, ಇತ್ಯಾದಿಗಳ ಕುರಿತು ಜಿಜ್ಞಾಸೆ ಸಹ ಇರಬೇಕಾಗುತ್ತದೆ. ಹೆಚ್ಚು ಹೆಚ್ಚು ಅಂತರ್ಮುಖಿಗಳಾದಾಗ, ಶ್ರವಣ, ಮನನ, ಮಥನ, ಮಂಥನಗಳನ್ನು ನಡೆಸಿದಷ್ಟೂ ಅವನ ತಿಳಿವಳಿಕೆ ಹೆಚ್ಚುತ್ತಾ ಹೋಗುತ್ತದೆ. ಎಷ್ಟೋ ಸಂಗತಿಗಳನ್ನು ಅರಿಯಲಾಗುವುದಿಲ್ಲ, ಆದರೆ ಅನುಭವಿಸಬಹುದಾಗಿದೆ. ನಮಗೆ ಗೊತ್ತಿಲ್ಲದ ಸಂಗತಿಗಳನ್ನು ಗೊತ್ತು ಮಾಡಿಕೊಳ್ಳುವುದು ಗುರಿ ಎಂದಿಟ್ಟುಕೊಂಡರೆ, ಅದನ್ನು ತಲುಪಲು ಪಡೆದುಕೊಳ್ಳುವ ಸಹಾಯವನ್ನು ಸಾಧನ ಮತ್ತು ಗುರಿ ತಲುಪಿದರೆ ಸಾಧನೆ ಎನ್ನಬಹುದು. ಈ ಪ್ರಯತ್ನದಲ್ಲಿರುವವರು ಸಾಧಕರು. ಗುರಿ ತಲುಪಿದಾಗ ಆಗುವ ಆನಂದವನ್ನು ಮೋಕ್ಷ ಅನ್ನಬಹುದು ಅಥವ ಬೇರೆ ಯಾವುದೇ ಪದದಿಂದ ಗುರುತಿಸಬಹುದು. ಇಂತಹ ಸಾಧ್ಯ(ಗುರಿ), ಸಾಧನೆ, ಸಾಧನ, ಸಾಧಕರ ಮಧ್ಯದಲ್ಲಿ ಉದ್ಭವವಾಗುವುದೇ ಭಕ್ತಿ! ಬ್ರಹ್ಮಾಂಡವನ್ನು, ಅಖಿಲ ಜಗತ್ತನ್ನು ನಿಯಂತ್ರಿಸುವ ಶಕ್ತಿಯನ್ನು ಪರಮಾತ್ಮ ಅಥವ ವಿಶ್ವ ಚೇತನ ಎಂದಿಟ್ಟುಕೊಂಡರೆ ಆ ಶಕ್ತಿಯನ್ನು ಅರಿಯುವ ಪ್ರಯತ್ನವನ್ನು ಭಕ್ತ ಮಾಡುತ್ತಾನೆ. ಆ ಪ್ರಯತ್ನವನ್ನೇ ಭಕ್ತಿ ಎನ್ನಬಹುದು. ಆ ಭಕ್ತಿ ಭಕ್ತನ ಶಕ್ತ್ಯಾನುಸಾರ ಇರುತ್ತದೆ.
     ಭಕ್ತಿಯಲ್ಲಿ ಕೃತಜ್ಞತೆ, ಪ್ರೀತಿ, ಭಯ, ಕೋಪ, ವಾತ್ಸಲ್ಯ, ಬೇಸರ, ಮಮತೆ, ರೋಷ, ಅನುನಯ, ಆನಂದ, ದುಃಖ, ಇತ್ಯಾದಿ ಭಾವಗಳನ್ನು ಕಾಣಬಹುದು. ಈ ಅಖಂಡ ಜಗತ್ತನ್ನು ಸೃಷ್ಟಿಸಿ ಅದನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಭಗವಂತನನ್ನು ಕೃತಜ್ಞತಾ ಭಾವದಿಂದ ಸ್ಮರಿಸಬಹುದು. ಅವನ ಕರುಣೆಯನ್ನು ನೆನೆದು ಅವನನ್ನು ಪ್ರೀತಿಸಬಹುದು. ಇಷ್ಟೊಂದು ಅಗಾಧ ಶಕ್ತಿಯನ್ನು, ಸೃಷ್ಟಿಯ ಬೃಹತ್ತತೆಯನ್ನು ಕಂಡು ಬೆರಗಾಗಿ ಭಯ ಪಡಲೂಬಹುದು, ಇತರರಿಗೆ ಕೊಟ್ಟ ಅವಕಾಶವನ್ನು ತನಗೆ ಕೊಡದ ಬಗ್ಗೆ ಕೋಪಿಸಿಕೊಳ್ಳಲೂಬಹುದು, ಅವನನ್ನು ಓಲೈಸಿ ಒಳಿತನ್ನು ಬೇಡಲೂಬಹುದು,. . . . ., ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇಂತಹ ಭಾವಗಳು ಭಕ್ತರ ಮನೋಭಾವವನ್ನು -ಅವರವರ ಭಕುತಿಗೆ- ಅವಲಂಬಿಸಿರುತ್ತದೆ. ಭಕ್ತರಲ್ಲಿ ನಾಲ್ಕು ರೀತಿಯ ಭಕ್ತರಿದ್ದಾರೆಂದು ಭಗವದ್ಗೀತೆ ಹೇಳುತ್ತದೆ - ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿ. ತನಗೆ ಇರುವ ತೊಂದರೆಯನ್ನು ಪರಿಹರಿಸಲು ಪ್ರಾರ್ಥಿಸುವವನು ಆರ್ತ, ಸಂಪತ್ತು, ಐಶ್ವರ್ಯ, ಇತ್ಯಾದಿ ಅನುಕೂಲಗಳನ್ನು ಬಯಸುವವನು ಅರ್ಥಾರ್ಥಿ, ಜ್ಞಾನ ಬಯಸುವವನು ಜಿಜ್ಞಾಸು ಮತ್ತು ಪ್ರತಿಯಾಗಿ ಏನನ್ನೂ ಬಯಸದೆ, ಅವನನ್ನು ಹೊಂದುವ ಪ್ರಯತ್ನದಲ್ಲೇ ಆನಂದ ಕಾಣುವವನು ಜ್ಞಾನಿ. ನಾರದ ಭಕ್ತಿ ಸೂತ್ರದಲ್ಲಿ ಭಕ್ತಿಯ ವಿವಿಧ ಮಜಲುಗಳನ್ನು ಹೇಳಲಾಗಿದೆ. ಶ್ರವಣಾಸಕ್ತಿ, ಅವನನ್ನು ಭಜಿಸುವ ಕೀರ್ತನಾಸಕ್ತಿ, ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸಖ್ಯಾಸಕ್ತಿ, ಆತ್ಮನಿವೇದನೆ, ಸಖ್ಯಭಾವ, ವಾತ್ಸಲ್ಯಭಾವ, ತನ್ಮಯಭಾವ, ವಿರಹಭಾವ, ಇತ್ಯಾದಿಗಳನ್ನು ಅಲ್ಲಿ ವಿವರಿಸಿದೆ. ಲೋಕದ ಕಣ್ಣಿನಲ್ಲಿ ಹುಚ್ಚರಂತೆ ಕಂಡು ಬರುವ ಕೆಲವು ಅವಧೂತರು, ಸಾಧು-ಸಂತರ ಭಕ್ತಿಯನ್ನು ವಿವರಿಸಲು ಸಾಧ್ಯವೇ? ರಾಮಕೃಷ್ಣ ಪರಮ ಹಂಸರನ್ನೂ ಹುಚ್ಚರೆಂದು ಜರಿದವರಿಗೇನೂ ಕಡಿಮೆರಲಿಲ್ಲ.
ಜಗದೊಡೆಯ ಪರಮಾತ್ಮನಲಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ |
ಗುರುವಿನಲಿ ಶ್ರದ್ಧೆ ಸುಜನ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ ||
     ಗ್ರಾಮಗಳ ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡಿ ಪ್ರಸಾದ ಕೇಳಿ ಕುಳಿತ ಭಕ್ತ/ಭಕ್ತೆಯರನ್ನು ಗಮನಿಸಿದ್ದೀರಾ? ಕೆಲವರು "ಏಕಪ್ಪಾ/ ಏಕಮ್ಮಾ ಇಷ್ಟೊಂದು ಸತಾಯಿಸುತ್ತಿಯಾ? ಆಗುವುದಾದರೆ ಪ್ರಸಾದ ಕೊಡು, ಆಗಲ್ಲಾ ಅಂತಲಾದರೂ ಹೇಳಿಬಿಡು" ಅಂತ ವಿಗ್ರಹದೊಂದಿಗೆ ಸಂಭಾಷಣೆಯನ್ನೂ ಮಾಡುತ್ತಿರುತ್ತಾರೆ. ಬರಬಾರದ ಕಷ್ಟ-ನಷ್ಟಗಳಾದಾಗ, 'ಈ ದೇವರು ಅನ್ನುವವನು ಇದ್ದಿದ್ದರೆ ನನಗೆ ಹೀಗೆ ತೊಂದರೆ ಕೊಡುತ್ತಿರಲಿಲ್ಲ. ಇನ್ನು ಅವನನ್ನು ಪೂಜೆ ಮಾಡುವುದಿಲ್ಲ' ಎಂದು ಹೇಳುವವರನ್ನೂ ನಾವು ಕಾಣುತ್ತಿರುತ್ತೇವೆ. ನಾವು ಮಾಡುವ ಕರ್ಮಗಳಿಗೆ ನಾವೇ ಹೊಣೆ, ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ನಮ್ಮ ಕರ್ಮಫಲಗಳನ್ನು ನಾವೇ ಅನುಭವಿಸಬೇಕು ಎಂದು ತಿಳಿದು ನಡೆಯುವ ನಿರ್ಲಿಪ್ತ ಭಕ್ತರನ್ನೂ ಕಾಣುತ್ತೇವೆ. ಕೆಡುಕನ್ನು ಯಾರಿಗೂ ಬಯಸದೆ, ಸಾಧ್ಯವಾದಷ್ಟೂ ಎಲ್ಲರ ಹಿತ/ಒಳಿತನ್ನೇ ಬಯಸುವ, ಪ್ರತಿಫಲ ಬಯಸದ ಭಕ್ತರ ಭಕ್ತಿ ಶ್ರೇಷ್ಠವಾದುದು ಎಂಬುದರಲ್ಲಿ ಎರಡು ಮಾತಿರಲಿಕ್ಕಿಲ್ಲ.
     ಭಕ್ತಿಯ ಒಂದು ದೊಡ್ಡ ಅನುಕೂಲವೆಂದರೆ ಅದು ಇರುವುದರಲ್ಲಿ ಅತಿ ಸುಲಭವಾದ ಮತ್ತು ಅತ್ಯಂತ ಸಹಜವಾದ ದಿವ್ಯತ್ವವನ್ನು ತಲುಪುವ ಮಾರ್ಗ; ಅದರ ದೊಡ್ಡ ಅನಾನುಕೂಲವೆಂದರೆ ಅದು ಕೆಳಸ್ತರದಲ್ಲಿ ಹೆಚ್ಚಿನ ಸಮಯ ಹುದುಗಿದ ಹುಚ್ಚಾಟಗಳಿಗೆ ದಾರಿ ಮಾಡಿಕೊಡುತ್ತದೆ. ವಿವಿಧ ಧರ್ಮಗಳ ಮತಾಂಧರು ಭಕ್ತಿಯ ಕೆಳಸ್ತರದ ಹಂತದಿಂದ ಬಂದವರಾಗಿದ್ದಾರೆ. ಪ್ರೀತಿಯ ವಸ್ತುವಿಗೆ ಏಕನಿಷ್ಠೆ ಇರಬೇಕು, ಅದಿಲ್ಲದಿದ್ದರೆ ನಿಜವಾದ ಪ್ರೀತಿ ಬೆಳೆಯಲಾರದು ಎಂಬುದು ನಿಜ. ಆದರೆ ಅದು ಹೆಚ್ಚಿನ ಸಂದರ್ಭಗಳಲ್ಲಿ ಇತರ ಎಲ್ಲವನ್ನೂ ತಿರಸ್ಕರಿಸುವ ಕಾರಣವಾಗುತ್ತದೆ. ಪ್ರತಿ ಧರ್ಮದ ಎಲ್ಲಾ ದುರ್ಬಲ ಮತ್ತು ಅವಿಕಸಿತ ಮನಸ್ಸುಗಳು ತಮ್ಮ ಆದರ್ಶವನ್ನು ಪ್ರೀತಿಸುವ ಒಂದೇ ರೀತಿಯನ್ನು ಹೊಂದಿರುತ್ತವೆ, ಅದೆಂದರೆ, ಇತರ ಎಲ್ಲಾ ಆದರ್ಶಗಳನ್ನು ದ್ವೇಷಿಸುವುದು. ತನ್ನ ದೇವರನ್ನು, ಆದರ್ಶಧ್ಯೇಯವನ್ನು ಉತ್ಕಟವಾಗಿ ಪ್ರೀತಿಸುವ, ತನ್ನ ಧರ್ಮದ ಆದರ್ಶಗಳಿಗೆ ಅಷ್ಟೊಂದು ಅಂಟಿಕೊಂಡಿರುವ ಅದೇ ವ್ಯಕ್ತಿ ಹೇಗೆ ಬೇರೆ ಯಾವುದೇ ಧರ್ಮದ, ಆದರ್ಶದ ಕುರಿತು ನೋಡಿದರೆ ಅಥವ ಕೇಳಿದರೆ ಏಕೆ ಕೆರಳುತ್ತಾನೆ ಎಂಬುದಕ್ಕೆ ಕಾರಣ ಇಲ್ಲಿದೆ.
-ಕ.ವೆಂ.ನಾಗರಾಜ್.
***************
ದಿನಾಂಕ ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: 

ಬುಧವಾರ, ಡಿಸೆಂಬರ್ 23, 2015

ಸಾಧನೆಯ ಹಾದಿ - 2


ನುಡಿದಂತೆ ನಡೆದು ಮಾದರಿಯು ತಾನಾಗೆ
ಪರರ ಮನವರಿತು ನಡೆವ ಕರುಣೆಯಿರಲಾಗೆ |
ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು
ನಾಯಕನು ಉದಯಿಸುವ ಕಾಣು ಮೂಢ ||
     ಈ ಘಟನೆಯ ಬಗ್ಗೆ ನೀವೂ ಕೇಳಿರಬಹುದು ಅಥವ ಓದಿರಬಹುದು. ಒಮ್ಮೆ ರಾಮಕೃಷ್ಣ ಪರಮಹಂಸರ ಹತ್ತಿರ ಒಬ್ಬ ತಾಯಿ ತನ್ನ ಮಗನನ್ನು ಕರೆದುಕೊಂಡು ಬಂದು, "ಪೂಜ್ಯರೇ, ನನ್ನ ಮಗನಿಗೆ ಜಿಲೇಬಿ ತಿನ್ನುವ ಚಪಲ ಜಾಸ್ತಿ. ಎಷ್ಟು ಕೊಟ್ಟರೂ ತಿನ್ನುತ್ತಾನೆ, ಮತ್ತೆ ಮತ್ತೆ ಕೇಳುತ್ತಾನೆ. ಅಷ್ಟೊಂದು ತಿಂದರೆ ಅವನ ಆರೋಗ್ಯ ಏನಾಗಬೇಕು? ನೀವು ಸ್ವಲ್ಪ ಬುದ್ಧಿ ಹೇಳಿ ಪೂಜ್ಯರೇ" ಎಂದು ಕೇಳಿಕೊಳ್ಳುತ್ತಾಳೆ. ರಾಮಕೃಷ್ಣರು ಆ ತಾಯಿಗೆ ಒಂದು ವಾರ ಬಿಟ್ಟು ಬರಲು ಹೇಳುತ್ತಾರೆ. ಒಂದು ವಾರದ ನಂತರದಲ್ಲಿ ಮತ್ತೆ ಕೆಲವು ದಿನಗಳು ಬಿಟ್ಟು ಬರಲು ಹೇಳುತ್ತಾರೆ. ಇದು ನಾಲ್ಕು-ಐದು ಸಲ ಮುಂದುವರೆಯುತ್ತದೆ. ಕೊನೆಗೆ ಒಂದು ದಿನ ರಾಮಕೃಷ್ಣರು ಮಗುವನ್ನು ಹತ್ತಿರ ಕರೆದು ಪ್ರೀತಿಯಿಂದ ತಲೆ ನೇವರಿಸುತ್ತಾ, "ಮಗು ತುಂಬಾ ಜಿಲೇಬಿ ತಿನ್ನುವುದು ಒಳ್ಳೆಯದಲ್ಲ. ಅಪರೂಪಕ್ಕೆ ಸ್ವಲ್ಪ ತಿನ್ನು. ಜಾಸ್ತಿ ತಿನ್ನಬೇಡ" ಎನ್ನುತ್ತಾರೆ. ಮಗುವಿಗೆ ಅವರು ಹೇಳಿದ ರೀತಿ ಒಪ್ಪಿಗೆಯಾಗುತ್ತದೆ. ಅದರಂತೆ ಪಾಲಿಸುತ್ತದೆ ಕೂಡಾ! ಆ ತಾಯಿಗೆ ಆಶ್ಚರ್ಯವಾಗುತ್ತದೆ. ಈ ಮಾತನ್ನು ಅವರು ಮೊದಲ ದಿನವೇ ಹೇಳಬಹುದಿತ್ತಲ್ಲಾ ಎಂದು ಮನಸ್ಸಿನಲ್ಲಿ ಅಂದುಕೊಂಡರೂ ಆಗ  ವಿಚಾರಿಸದೆ ಇನ್ನೊಂದು ದಿನ ತಾನೊಬ್ಬಳೇ ಬಂದಾಗ ಈ ಪ್ರಶ್ನೆ ಕೇಳಿಯೇಬಿಡುತ್ತಾಳೆ. ರಾಮಕೃಷ್ಣರು ನಗುತ್ತಾ ಹೇಳುತ್ತಾರೆ, "ತಾಯಿ, ನನಗೂ ಜಿಲೇಬಿ ಅಂದರೆ ಬಹಳ ಇಷ್ಟ. ಅದನ್ನು ತಿನ್ನಬೇಕೆಂಬ ಚಪಲದಿಂದ ಬಿಡಿಸಿಕೊಳ್ಳಲು ನನಗೆ ಅಷ್ಟು ಸಮಯ ಬೇಕಾಯಿತು." ದೊಡ್ಡವರ ರೀತಿಯೇ ಹಾಗೆ! ಇನ್ನೊಬ್ಬರಿಗೆ ಹೇಳುವ ಮುನ್ನ ಅದನ್ನು ತಾವು ಅನುಸರಿಸಿರಬೇಕು. ಅವರ ಅಂತರಂಗ ಮತ್ತು ಬಹಿರಂಗಗಳಲ್ಲಿ ಭಿನ್ನತೆ ಇಲ್ಲ. ಹೇಳುವುದೊಂದು ಮಾಡುವುದು ಮತ್ತೊಂದು ಅನ್ನುವುದು ಇಲ್ಲವೇ ಇಲ್ಲ. ಅಂತಹವರ ಮಾತಿನಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿ ಹೊರಗಿನದಲ್ಲ. ಒಳಗಿನಿಂದ ಬಂದುದು. ಆ ಮಾತುಗಳನ್ನು ಕೇಳಿದವರು ಮಂತ್ರಮುಗ್ಧರಂತೆ ಅನುಸರಿಸುವುದಕ್ಕೆ ಇರುವ ವಿಶೇಷ ಕಾರಣವೇ ಇದಾಗಿದೆ.
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸಾಧಕನು ಮೂಢ ||
     ಆದಿ ಶಂಕರಾಚಾರ್ಯ ವಿರಚಿತ ಸಾಧನಾಪಂಚಕ ಒಬ್ಬ ಸಾಧಕ ಹೇಗೆ ಇರಬೇಕೆಂಬುದನ್ನು ತಿಳಿಸುವ ಒಂದು ಅಪೂರ್ವ ರಚನೆ. ನಿತ್ಯ ವೇದಾಧ್ಯಯನ, ಮಾಡುವ ಕೆಲಸಗಳನ್ನು ಭಗವಂತನ ಆರಾಧನೆ ಎಂದು ಭಾವಿಸಿ ಮಾಡುವುದು, ಅಂತರಂಗದ ಕೊಳೆಯನ್ನು ತೊಡೆದು ಹಾಕುವುದು, ಮೋಹದ ಸಂಕೋಲೆಯಿಂದ ಹೊರಬರುವುದು, ಜ್ಞಾನಿಗಳ ಸತ್ಸಂಗ, ಯೋಗ್ಯ ಗುರುಗಳ ಆಶ್ರಯ, ವಿತಂಡ ವಾದಗಳಿಂದ ದೂರವಿರುವುದು, ಸಮಚಿತ್ತ ಹೊಂದುವುದು, ಇತ್ಯಾದಿಗಳು ಸಾಧಕನಿಗೆ ಇರಬೇಕೆಂದು ಅದು ಹೇಳುತ್ತದೆ.
ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||
     'ಅಬ್ಬಬ್ಬಾ, ಸಾಧಕರಾಗುವುದು ಇಷ್ಟೊಂದು ಕಷ್ಟವೇ! ಇನ್ನೂ ಏನಾದರೂ ಇದೆಯೋ?' ಎಂಬ ಪ್ರಶ್ನೆ ಮೂಡುತ್ತದೆ. 'ಹೌದು, ಇನ್ನೂ ಇದೆ' ಎಂಬುದು ಸಾಧಕರ ನಡೆ-ನುಡಿಗಳನ್ನು ಕಂಡವರಿಗೆ ಅರಿವಾಗದೇ ಇರದು. ಅವರು 'ತಾನೇ ಸರಿ, ತನ್ನದೇ ಸರಿ' ಅನ್ನುವುದಿಲ್ಲ. ಒಂದು ಪುಟ್ಟ ಮಗುವೂ ಏನನ್ನೋ ಹೇಳುತ್ತಿದ್ದರೂ ಅದನ್ನೂ ಬೆರಗಾಗಿ ಕಣ್ಣರಳಿಸಿ ಕೇಳುವ ಆ ತನ್ಮಯತೆ ಸಾಧಕರಿಗಲ್ಲದೆ ಬೇರೆ ಯಾರಿಗೆ ಬಂದೀತು! ಎಲ್ಲವನ್ನೂ 'ಕೇಳುವ' ಆ ಗುಣ ಅನನ್ಯ. ಅವರು ಮೇಲು, ಇವರು ಕೀಳು, ಅವನು ಬಡವ, ಇವನು ಶ್ರೀಮಂತ, ಇತ್ಯಾದಿ ತಾರತಮ್ಯ ಮಾಡುವುದಿಲ್ಲ. ಎಂತಹ ಸ್ಥಿತಿಯಲ್ಲೂ ಆನಂದ ಕಾಣುವ ಗುಣ, ಆಸೆ, ಆಮಿಷಗಳಿಂದ ಮೈಮರೆತು ದಾರಿ ತಪ್ಪದ ನಡತೆ, ಅಪಾಯವನ್ನೆದುರಿಸುವ ಗಟ್ಟಿತನ, ಹೀನ-ದೀನರ ಸೇವೆಯನ್ನು ದೇವರ ಪೂಜೆಯೆಂದು ಭಾವಿಸುವ ಉದಾತ್ತತೆ, ಸರಳತೆ, ನಿಷ್ಕಾಮ ಕರ್ಮ, ಅಚಲ ವಿಶ್ವಾಸ, ಹೊರಮನದ ಕೋರಿಕೆಗಳನ್ನು ಅಲ್ಲಗಳೆದು ಒಳಮನದ ಕರೆಯನ್ನು ಆಲಿಸಿ ಅದರಂತೆ ಜೀವಿಸುವ ಕಲೆ ಸಾಧಕರ ಅಮೂಲ್ಯ ಸಂಪತ್ತು. ಇಷ್ಟೆಲ್ಲಾ ಇದ್ದ ಮೇಲೆ, ಅವರು ದೇವರೇ ಸರಿ, ಸಾಮಾನ್ಯ ಮನುಷ್ಯರಲ್ಲವೇ ಅಲ್ಲ, ಸಾಮಾನ್ಯರು ಹೀಗಿರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿ ಅವರನ್ನು ಆರಾಧಿಸಲು ಪ್ರಾರಂಭಿಸಿಬಿಡುತ್ತೇವೆ. ಇಂದು ಅನೇಕ ಸಾಧು-ಸಂತ-ಮಹಾಂತರ ಗುಡಿಗಳನ್ನು ಕಟ್ಟಿ ನಿತ್ಯ ಪೂಜೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೆ ಪೂಜಿಸುವವರದೇ ಒಂದು ಪಂಥವಾಗಿ ಬಿಡುತ್ತದೆ. ಹೊಸ ಹೊಸ ರೀತಿ-ನೀತಿಗಳು, ಕಟ್ಟಳೆಗಳು, ಸಂಪ್ರದಾಯಗಳು ರೂಢಿಗೆ ಬಂದುಬಿಡುತ್ತವೆ. ಅವರನ್ನು ಆರಾಧಿಸುವುದು ತಪ್ಪೇ, ಪೂಜಿಸಬಾರದೇ ಎಂದು ಸಿಟ್ಟಾಗದಿರಿ. ನಮಗೆ ಯೋಗ್ಯ ಮಾರ್ಗದರ್ಶನ ಮಾಡಿದವರನ್ನು, ಮಾಡುವವರನ್ನು ಆರಾಧಿಸುವುದು ತಪ್ಪಲ್ಲವೇ ಅಲ್ಲ. ಅದರೆ ಅದರಲ್ಲಿ ಒಂದು ಅಪಾಯವಿದೆ. ಅಂತಹ 'ಪೂಜ್ಯ'ರುಗಳನ್ನು 'ಹೊರಗೆ' ಇಟ್ಟುಬಿಡುವುದೇ ಆ ಅಪಾಯ. ಸಾಷ್ಟಾಂಗ ನಮಸ್ಕಾರ ಮಾಡಿ, ಆರತಿ ಬೆಳಗಿ, ತೀರ್ಥ-ಪ್ರಸಾದಗಳನ್ನು ಪಡೆದು ಕೃತಕೃತ್ಯರಾದೆವೆಂದು ಅಂದುಕೊಂಡುಬಿಡುತ್ತೇವೆ. ವಿಚಾರ ಮಾಡೋಣ. ಹೃದಯ ಮಂದಿರಗಳಲ್ಲಿ ಅವರನ್ನು ಪ್ರತಿಷ್ಠಾಪಿಸಿ ಮಾಡುವ ಪೂಜೆಯೇ ನಿಜವಾದ ಪೂಜೆ. ಅವರು ತೋರಿದ ಹಾದಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸಬಹುದಾದ ಯೋಗ್ಯ ಗುರುಕಾಣಿಕೆ. ಹಾಗೆ ನಡೆದು ಮಾಡುವ ಸಾಧನೆಯೇ ಪೂಜಾಫಲ ಎಂಬುದನ್ನು ಅರಿಯೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 2.11.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶನಿವಾರ, ಡಿಸೆಂಬರ್ 12, 2015

ಸಾಧನೆಯ ಹಾದಿ - 1



ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸದಿಹುದೆ ಮೂಢ ||
     ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು, ಸರಿ-ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಾಳುತ್ತಾರೆ. ಆದರೆ ಹೀಗೆಯೇ ಜೀವಿಸಬೇಕೆಂದುಕೊಂಡವರಿಗೆ ಅಡ್ಡಿ, ಅಡಚಣೆಗಳು, ಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಆದರೆ ಅವರು ಅವೆಲ್ಲವನ್ನೂ ಎದುರಿಸಿ, ಅಗತ್ಯ ಬಿದ್ದರೆ ಪ್ರಾಣವನ್ನೂ ಪಣಕ್ಕಿಟ್ಟು ತಾವಂದುಕೊಂಡಂತೆಯೇ ಬದುಕುತ್ತಾರೆ. ಹಾಗೆ ಯಶಸ್ವಿಯಾಗಿ ಬದುಕುವವರನ್ನು ಸಾಧಕರೆನ್ನುತ್ತಾರೆ. ಅಂತಹ ಸಾಧಕರನ್ನು ಜಗತ್ತು ಗೌರವಿಸುತ್ತದೆ. ಹೇಗೋ ಬದುಕುವವರೂ ಸಹ  ಸಾಧಕರನ್ನು ಮೆಚ್ಚುಗೆಯಿಂದ, ಗೌರವದಿಂದ ಕಾಣುತ್ತಾರೆ. ಸಾಧಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದೂ ಅಪರೂಪವಲ್ಲ. ಆದರೆ, ಸಾಧಕರ ಸಾಧನೆಯ ಹಿಂದಿನ ದಿವ್ಯ ಸಂದೇಶವನ್ನು ಎಲ್ಲರೂ ಮರೆತುಬಿಡುತ್ತೇವೆ. ಅದೆಂದರೆ, 'ಅಂತಹ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು' ಎಂಬುದೇ! ಸಾಧನೆ ಮಾಡಲು ಹಿಂಜರಿಯುವ ಸಾಮಾನ್ಯರಿಗೆ, 'ಅವರು ದೇವಾಂಶ ಸಂಭೂತರು, ಮಹಾಮಹಿಮರು. ಅವರೆಲ್ಲಿ, ನಾವೆಲ್ಲಿ', 'ಉಂಟೇ, ಉಂಟೇ, ಏನು ಹೇಳುತ್ತಿದ್ದೀರಿ? ಅವರೊಡನೆ ನಮ್ಮನ್ನು ಹೋಲಿಸುವುದೇ!' ಎಂಬಂತಹ ಕುಂಟು ನೆಪಗಳೂ ನೆರವಿಗೆ ಬರುತ್ತದೆ. ಆದರೆ ನಿಜವಾದ ಕಾರಣವೆಂದರೆ, ಅವರಿಗೆ ಕಷ್ಟಪಡುವುದು ಬೇಕಿರುವುದಿಲ್ಲ ಮತ್ತು ಮೌಲ್ಯಗಳು, ನೀತಿ-ನಿಯಮಗಳು ಎಂದುಕೊಂಡು ಬೇಕಿಲ್ಲದ ತೊಂದರೆಗಳನ್ನು ಮೈಮೇಲೆ ಏಕೆ ಎಳೆದುಕೊಳ್ಳಬೇಕು ಎಂಬ ಮನೋಭಾವ. ಹೇಗೋ ಜೀವಿಸುವವರಿಗೆ ಸ್ವಾರ್ಥ ಪ್ರಮುಖವಾಗಿರುತ್ತದೆ. ಅದಕ್ಕಾಗಿ ಸಮಾಜದ ಹಿತ ಅವರಿಗೆ ಗೌಣವೆನಿಸುತ್ತದೆ. ಈ ಮನೋಭಾವವೇ ಸಮಾಜ ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮೂಲವೆಂಬುದು ಆಳವಾಗಿ ಚಿಂತಿಸಿದರೆ ಅರ್ಥವಾದೀತು. ಒಂದಂತೂ ಸತ್ಯ, ನೀತಿ-ನಿಯಮ, ಮೌಲ್ಯಗಳಿಗೆ ಬೆಲೆ ಕೊಡುವವರ, ಅದಕ್ಕಾಗಿ ಸ್ವಂತದ ಹಿತ ತ್ಯಾಗ ಮಾಡುವ ಸಾಧಕರಿಂದ ಸಮಾಜ ಲಾಭ ಪಡೆಯುತ್ತದೆ. ಈ ಕಾರಣಕ್ಕಾಗಿಯೇ ಸಮಾಜ ಸಾಧಕರನ್ನು ಗೌರವದಿಂದ ಕಾಣುತ್ತದೆ, ಕಾಣಲೇಬೇಕು.
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||
     ಸಾಧಕರು ಇದ್ದಕ್ಕಿದ್ದಂತೆ ಮೂಡಿಬರುವುದಿಲ್ಲ. ಅವಿರತ ಶ್ರಮ ಅವರ ಸಾಧನೆಯ ಬೆನ್ನಿಗಿರುತ್ತದೆ. 'ಸರ್ವಜ್ಞನೆಂಬುವನು ಗರ್ವದಿಂದಾದವನೆ, ಹಲವಂ ಬಲ್ಲವರಿಂದ ಕಲಿತು . . ವಿದ್ಯೆಯ ಪರ್ವತವೆ ಆದ ಸರ್ವಜ್ಞ' ಎಂಬ ತ್ರಿಪದಿ ಸರ್ವಜ್ಞನ ಸಾಧನೆಯ ಹಾದಿಯ ಕಿರುನೋಟ ಬೀರುತ್ತದೆ. ಸಾಧಕರ ಜೀವನವನ್ನು ಅವಲೋಕಿಸಿದರೆ ಕಂಡು ಬರುವ ವಿಚಾರಗಳು ಸಾಧನೆಯ ಹಾದಿಯಲ್ಲಿರುವವರ ಕಣ್ತೆರೆಸುವಂತಹವು. ತನ್ನನ್ನು ತಾನು ಅರಿತುಕೊಳ್ಳುವುದು ಸಾಧನಾಪಥದ ಮೊದಲ ಹೆಜ್ಜೆಯಾದರೆ, ಸತತ ಪರಿಶ್ರಮ, ಬರುವ ಕಷ್ಟಗಳು, ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿ, ಯಾವುದೇ ಸಂದರ್ಭಗಳಲ್ಲಿ ನಂಬಿದ ತತ್ವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಸಾಮಾನ್ಯವಾಗಿ ಸಾಧಕರಲ್ಲಿ ಕಂಡು ಬರುವ ಗುಣಗಳು. ಸೋಲುಗಳು, ಎಡರು-ತೊಡರುಗಳು ಅವರ ಧೃತಿಗೆಡಿಸುವ ಬದಲಾಗಿ ಜಗತ್ತನ್ನು ಅರಿಯುವ ಅವರ ಹಸಿವನ್ನು, ಪಟ್ಟು ಬಿಡದೆ ಮತ್ತೆ ಮುಂದುವರೆಯುವ ಛಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸಹಜವೆಂಬಂತೆ ಸಾಧಕ ದುಷ್ಕರ್ಮಗಳಿಂದ ದೂರವಿದ್ದು, ಸತ್ಕರ್ಮಗಳನ್ನು ಮಾಡುತ್ತಾ ಹೋಗುತ್ತಾನೆ.
ಮೊಂಡುವಾದಗಳಿಲ್ಲ ಗರ್ವ ಮೊದಲೇ ಇಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ |
ಸೋಲು ಗೆಲವುಗಳ ಸಮದಿ ಕಾಣಲುಬಲ್ಲ
ಧೀರನವನೆ ನಿಜನಾಯಕನು ಮೂಢ ||
     'ಅಲ್ಪ ವಿದ್ಯಾವಂತ ಮಹಾಗರ್ವಿ, ಮಹಾವಿದ್ಯಾವಂತ ಘನಪಂಡಿತ' ಎಂಬ ಲೋಕೋಕ್ತಿಗೆ ತಕ್ಕಂತೆ ಸಾಧಕನಿಗೆ ತಾನೇ ದೊಡ್ಡವನು, ಎಲ್ಲವನ್ನೂ ತಿಳಿದವನು ಎಂಬ ದರ್ಪ,  ಅಹಂಕಾರವಿರುವುದಿಲ್ಲ. ತನ್ನ ಮಾತನ್ನು ಇತರರು ಕೇಳದಿದ್ದರೆ, ಅವಗಣಿಸಿದರೆ ಆತನಿಗೆ ಸಿಟ್ಟು ಬರುವುದಿಲ್ಲ. ಮೆಚ್ಚಿ ಹೊಗಳಿದರೂ ಅವನಿಗೆ ಲೆಕ್ಕಕ್ಕಿಲ್ಲ. ಇತರರು ಏನೆಂದುಕೊಂಡಾರೋ ಎಂಬ ಅಳುಕು, ಅಂಜಿಕೆ, ಲಜ್ಜೆಗಳಿಲ್ಲದೆ ನಿರ್ಲಿಪ್ತತೆಯಿಂದ ತನ್ನ ಕಾರ್ಯ ತಾನು ಮಾಡುತ್ತಿರುತ್ತಾನೆ. ಅವನಿಗೆ ಬಿಸಿಲು, ಮಳೆ, ಚಳಿ, ಗಾಳಿ, ಇತ್ಯಾದಿ ವೈಪರೀತ್ಯಗಳು ಅಡ್ಡಿಯೆನಿಸುವುದಿಲ್ಲ. ಕಾರ್ಯಕ್ಕೆ ಬೇಕಾದ ಅವಶ್ಯಕತೆಗಳು ಸಮೃದ್ಧಿಯಾಗಿರಲಿ, ಕೊರತೆಯಿರಲಿ ಬಾಧಕವೆನಿಸದು. ಒಬ್ಬ ಯಶಸ್ವಿ ವ್ಯಕ್ತಿ ತನ್ನ ಸಾಮರ್ಥ್ಯವನ್ನು ಅರಿತು ಕೆಲಸವನ್ನು ಕೈಗೆತ್ತಿಕೊಳ್ಳುತ್ತಾನೆ. ಅದನ್ನು ವ್ಯವಸ್ಥಿತವಾಗಿ ಮಾಡುತ್ತಾನೆ. ಹಾಗೆ ಮಾಡುವಾಗ ಯಾವುದೊಂದನ್ನೂ ಸಣ್ಣದೆಂಬ ಭಾವನೆಯಿಂದ ಕಡೆಗಣಿಸುವುದಿಲ್ಲ. ಮಾಡಬಲ್ಲೆನೆಂಬ ಧೃಢ ವಿಶ್ವಾಸವಿದ್ದು, ಹಿಡಿದ ಕೆಲಸವನ್ನು ಮಧ್ಯೆ ನಿಲ್ಲಿಸುವುದಿಲ್ಲ. ವ್ಯರ್ಥವಾಗಿ ಕಾಲಹರಣ ಮಾಡುವುದಿಲ್ಲ. ಚಂಚಲತೆಯಿಂದ ದೂರವಿದ್ದು, ಕೆಲಸವನ್ನು ವಿಚಲಿತಗೊಳಿಸುವ ಸಂಗತಿಗಳಿಂದ ದೂರವಿದ್ದುಬಿಡುತ್ತಾನೆ. ಸಿಗಲು ಸಾಧ್ಯವಿಲ್ಲವೆಂಬುದನ್ನು ಬಯಸದೆ, ಕಳೆದುಹೋದದ್ದರ ಬಗ್ಗೆ ಚಿಂತಿಸದೆ, ಆತಂಕದ ಸ್ಥಿತಿಯಲ್ಲೂ ಧೃತಿ ಕಳೆದುಕೊಳ್ಳದಿರುವವನು ನಾಯಕನೆನಿಸಿಕೊಳ್ಳುತ್ತಾನೆ.
ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ  ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ ||
     ಸಾಮಾನ್ಯರಲ್ಲಿ ಕಾಣುವ ಮತ್ಸರ ಸಾಧಕರಿಂದ ದೂರವಿರುತ್ತದೆ. ಈ ಮತ್ಸರ ಸಾಮಾನ್ಯರಿರಲಿ, ಅಪ್ರತಿಮರೆನಿಸಿಕೊಂಡವರನ್ನೂ ಕಾಡುತ್ತದೆ. ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ, ಸಾಹಿತಿಗಳಲ್ಲಿ, ವೈಚಾರಿಕವಾಗಿ ಪ್ರಬುದ್ಧರೆನಿಸಿದವರಲ್ಲಿ, ಅಷ್ಟೇ ಏಕೆ ಜೀವನದ ಎಲ್ಲಾ ರಂಗಗಳಲ್ಲಿ ತಾನು ಎಲ್ಲರಿಗಿಂತ ಶ್ರೇಷ್ಠರೆನಿಸಬೇಕು, ತನಗಿಂತ ಹೆಚ್ಚು ಗೌರವ ಇತರರಿಗೆ ಸಿಗಬಾರದು ಎನ್ನುವ ಹಪಾಹಪಿತನ ಒಂದಲ್ಲಾ ಒಂದು ಹಂತದಲ್ಲಿ ತನ್ನ ಅವತಾರವನ್ನು ತೋರಿಸಿಬಿಡುತ್ತದೆ. ಕನ್ನಡದ ಉನ್ನತ ಪ್ರಶಸ್ತಿಯನ್ನು ಪಡೆದವರೊಬ್ಬರು ತಾನು ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ತವಕದಿಂದ ವೈಚಾರಿಕ ಪ್ರಜ್ಞೆಯನ್ನೇ ಕಳೆದುಕೊಂಡು ಅಪದ್ಧವಾಗಿ ಮಾತನಾಡುವುದನ್ನು ಕಂಡಿದ್ದೇವೆ. ಆದರೆ ನಿಜವಾದ ಸಾಧಕ ನಾನತ್ವದಿಂದ ದೂರವೇ ಉಳಿದಿರುತ್ತಾನೆ. ಶ್ರೇಷ್ಠ ವಿಚಾರವನ್ನು ಚೆನ್ನಾಗಿ ಮಂಡಿಸುವವರನ್ನು, ಶ್ರೇಯಸ್ಕರವಾದ ಕಾರ್ಯವನ್ನು ಯಾರೇ ಮಾಡಿದರೂ ಕಂಡು ಸಂತೋಷಿಸಿ ಅವರ ಬೆನ್ನು ತಟ್ಟುತ್ತಾನೆಯೇ ಹೊರತು ಕರುಬುವುದಿಲ್ಲ. ಸಾಧಕರಿಗೆ ಸಿಗುವ ಜನಮನ್ನಣೆಯನ್ನು ಕಂಡು ಕರುಬುವವರು ಸಾಧಕರಿಗೆ ಕೇಡು ಬಗೆಯಲು ಪ್ರಯತ್ನಿಸಿದರೂ, ಅದನ್ನು ನಿರ್ಲಕ್ಷಿಸುವ ಅಸಾಮಾನ್ಯ ಗುಣ ಸಾಧಕರಿಗೆ ಮಾತ್ರ ಒಲಿದಿರುತ್ತದೆ.
-ಕ.ವೆಂ.ನಾಗರಾಜ್.
*****************
ದಿನಾಂಕ 26.10.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಡಿಸೆಂಬರ್ 2, 2015

ತಪ್ಪು ನಮ್ಮಲ್ಲಿಯೇ ಇದೆ!


     'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನನ್ನು ಬಲಿಪಶು ಮಾಡಿದ್ದಾರೆ. ಅವನದ್ದೇನೂ ತಪ್ಪಿಲ್ಲ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ ಸಹವಾಸದಿಂದ ಹಾಳಾದಳು', 'ಅವನು ಶ್ರೀರಾಮಚಂದ್ರ. ಆದರೆ ಆ ಮಿಟಕಲಾಡಿ ಅವನನ್ನು ಬಲೆಗೆ ಹಾಕಿಕೊಂಡಿದ್ದಾಳೆ', 'ಮೊದಲು ಇವನು ಹೀಗಿರಲಿಲ್ಲ, ಪೋಲಿ ಪಟಾಲಮ್ ಸೇರಿ ಕೆಟ್ಟುಹೋದ' - ಇಂತಹ ಮಾತುಗಳು ಕಿವಿಗೆ ಬೀಳುತ್ತಿರುತ್ತವೆ. ಇದರಲ್ಲಿ ಹೊರಹೊಮ್ಮುವ ಅಂಶವೆಂದರೆ ತಪ್ಪು ನಮ್ಮವರದಲ್ಲ, ಬೇರೆಯವರದು. ಇದು ಇಲ್ಲಿಗೇ ನಿಲ್ಲುವುದಿಲ್ಲ. ನಮ್ಮ ತಪ್ಪುಗಳು, ಸೋಲುಗಳು, ಕೆಟ್ಟ ಸಂಗತಿಗಳಿಗೆಲ್ಲಾ ಕಾರಣ ನಾವಲ್ಲ, ಬೇರೆಯವರೇ ಎಂದು ವಾದಿಸುತ್ತೇವೆ. ಆದರೆ, ಯಶಸ್ಸುಗಳಿಗೆ, ಒಳ್ಳೆಯ ಸಂಗತಿಗಳಿಗೆಲ್ಲಾ ನಾವು ಮಾತ್ರ ಕಾರಣರು ಎಂದು ನಂಬುತ್ತೇವೆ.
     ವಿವೇಚನೆ ಮಾಡೋಣ, ಯಾರಾದರೂ ಇನ್ನೊಬ್ಬರ ಕಾರಣದಿಂದ ನಿಜವಾಗಿಯೂ ಹಾಳಾಗುತ್ತಾರೆಯೇ? ಇತರರಿಂದ ನಮಗೆ ತೊಂದರೆಯಾಗಬಹುದು, ಕೇಡಾಗಬಹುದು. ಆದರೆ ಆ ತೊಂದರೆಯಲ್ಲಿ ನಮ್ಮ ಪಾಲೂ ಇರುತ್ತದೆ. ಒಂದು ಉದಾಹರಣೆ ನೋಡೋಣ. ಮಾವಿನಮರ ಮತ್ತು ಬೇವಿನಮರ ಅಕ್ಕ ಪಕ್ಕದಲ್ಲಿ ಇವೆಯೆಂದು ಭಾವಿಸೋಣ. ಬೇವಿನಮರದ ಪಕ್ಕದಲ್ಲಿರುವ ಮಾವಿನಮರದ ಹಣ್ಣುಗಳು ಕಹಿಯಾಗಿರುವುವೇ? ಮಾವಿನಮರದ ಪ್ರಭಾವದಿಂದ ಬೇವಿನ ಕಹಿಯಲ್ಲಿ ವ್ಯತ್ಯಾಸವಾಗುವುದೇ? ಒಂದು ವೇಳೆ ಮಾವಿನಮರ ಇದ್ದ ಸ್ಥಳದಲ್ಲಿ ಬೇವಿನಮರ ಮತ್ತು ಬೇವಿನಮರ ಇದ್ದ ಸ್ಥಳದಲ್ಲಿ ಮಾವಿನಮರ ಇದ್ದಿದ್ದರೆ? ಆಗಲೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ಎರಡು ಮರಗಳು ಇರುವ ಭೂಮಿಯ ಗುಣ ಒಂದೇ ಆದರೂ ಮಾವಿನಮರ ಭೂಮಿಯಲ್ಲಿ ತನಗೆ ಬೇಕಾದ ಸಾರವನ್ನು ಮಾತ್ರ ಹೀರಿಕೊಳ್ಳುತ್ತದೆ. ಬೇವಿನಮರವೂ ಅಷ್ಟೆ. ಮಾವು ಮತ್ತು ಬೇವಿನ ಮರಗಳಿಗೆ ವಿಭಿನ್ನ ಫಲಗಳನ್ನು ನೀಡುವ ಆಯ್ಕೆಯಿಲ್ಲ. ಮನುಷ್ಯನ ವಿಷಯದಲ್ಲಿ ಈ ತತ್ವ ಅನ್ವಯಿಸಿ ನೋಡೋಣ. ವಿವೇಚನೆ ಮಾಡುವ ಶಕ್ತಿರುವ ಮನುಷ್ಯ ವಿಚಿತ್ರ ಜೀವಿ, ಅದ್ಭುತ ಜೀವಿ. ಅವನಲ್ಲಿ ಒಳ್ಳೆಯ ಮತ್ತು ಕೆಟ್ಟ ಅಂಶಗಳೆರಡೂ ಇರುತ್ತವೆ. ಮರದ ಬೇರುಗಳು ಹೇಗೆ ನೀರಿನ ಸೆಲೆಯಿರುವ ಕಡೆಗೆ ಚಾಚಿ ಮುನ್ನಡೆಯುವುವೋ ಅದೇ ರೀತಿ ಒಳ್ಳೆಯ ಅಂಶ ಪ್ರಧಾನವಾಗಿರುವ ವ್ಯಕ್ತಿ ಅಂತಹವರದೇ ಸಹವಾಸ ಇಷ್ಟಪಡುತ್ತಾನೆ. ಒಂದುವೇಳೆ ಅವನು ಕೆಟ್ಟವರ ನಡುವೆಯೇ ಬಾಳಬೇಕಾದ ಪರಿಸ್ಥಿತಿಯಿದ್ದರೆ ಅವನಲ್ಲಿನ ಕೆಟ್ಟ ಅಂಶಗಳಿಗೆ ಪ್ರಚೋದನೆ ದೊರೆತು, ಕೆಟ್ಟವನೆನಿಸಿಕೊಂಡರೂ ಸಹ ಅವನು 'ಕೆಟ್ಟವರಲ್ಲಿ ಒಳ್ಳೆಯವನು' ಅನ್ನಿಸಿಕೊಳ್ಳಬಹುದು. ಅದೇ ರೀತಿ ಕೆಟ್ಟ ಅಂಶಗಳು ಪ್ರಧಾನವಾಗಿರುವ ವ್ಯಕ್ತಿ ಒಳ್ಳೆಯವರ ನಡುವೆ ಇರಬೇಕಾದ ಅನಿವಾರ್ಯತೆ ಬಂದರೆ ಅವನ ಒಳ್ಳೆಯತನಕ್ಕೆ ಪ್ರಚೋದನೆ ಸಿಕ್ಕಿ ಒಳ್ಳೆಯವನೆನಿಸಿದರೂ, ಆಗಾಗ್ಗೆ ಅವನ ಕೆಟ್ಟತನ ಪ್ರಕಟವಾಗದೇ ಇರದು.
     ಹಾಗಾದರೆ ಕೆಟ್ಟವರು ಕೆಟ್ಟವರಾಗೇ ಇರುತ್ತಾರೆಯೇ? ಒಳ್ಳೆಯವರು ಒಳ್ಳೆಯವರಾಗೇ ಇರುತ್ತಾರೆಯೇ? ಎಂಬ ಪ್ರಶ್ನೆಗೆ ಕಾಲ ನೀಡಿರುವ ಉತ್ತರವೆಂದರೆ 'ಇಲ್ಲ, ಹಾಗಿಲ್ಲ' ಎಂಬುದೇ. ಪರಿಸ್ಥಿತಿಯ ಶಿಶುವಾಗಿ ಮುಸ್ಲಿಮನಾದ ಕಾಳಿಚರಣ ಮಾತೃಧರ್ಮಕ್ಕೆ ಮರಳಲು ಬಯಸಿದಾಗ ಅದನ್ನು ಒಪ್ಪದ ಅಂಧ ಸಂಪ್ರದಾಯವಾದಿಗಳು ಅದನ್ನು ವಿರೋಧಿಸಿದರು. ಅವರ ವಿರುದ್ಧ ಕೆರಳಿ ನಿಂತ ಅವನು ಕಾಲಾಪಹಾಡ್ ಆಗಿ ಖಡ್ಗ ಹಿರಿದು ಅಸಂಖ್ಯಾತ ಹಿಂದೂಗಳನ್ನು ಮುಸ್ಲಿಮರನ್ನಾಗಿ ಮಾಡಿದ ಇತಿಹಾಸ ಕಣ್ಣ ಮುಂದಿದೆ. ಅಂತಹ ತಪ್ಪುಗಳ ಫಲವೇ ಈಗಿನ ಕಾಶ್ಮೀರ ಸಮಸ್ಯೆ, ಉಗ್ರಗಾಮಿಗಳ ಸಮಸ್ಯೆ. ಬೇಡನಾಗಿ ಬೇಟೆಯಾಡಿ ಜೀವಿಸುತ್ತಿದ್ದ ವಾಲ್ಮೀಕಿ ಸಂತನಾಗಿ ಪರಿವರ್ತಿತನಾಗಿ ಅದ್ಭುತ ರಾಮಾಯಣ ರಚಿಸಿದ್ದನ್ನೂ ನಾವು ಅರಿತಿದ್ದೇವೆ. ಒಳ್ಳೆಯತನಕ್ಕೆ ಮತ್ತು ಕೆಟ್ಟತನಕ್ಕೆ ಜಾತಿ, ಮತ, ಪಂಥಗಳ ಭೇದವಿಲ್ಲ.
     ನಮ್ಮ ಮನೋಭಾವ ಹೇಗಿದೆ? ಯಾರನ್ನಾದರೂ ಕುರಿತು 'ಅವನು ಎಷ್ಟು ಒಳ್ಳೆಯವನು' ಎಂದರೆ ಅದನ್ನು ತಕ್ಷಣ ಒಪ್ಪಿಕೊಳ್ಳುವುದಿಲ್ಲ. 'ನನಗೆ ಗೊತ್ತಿಲ್ಲವೇ ಅವನ ಬೇಳೆಕಾಳು' ಎಂದು ಮೂಗು ಮುರಿಯುತ್ತೇವೆ ಅಥವ ಅವನ ಒಳ್ಳೆಯತನಕ್ಕೆ ಸಾಕ್ಷಿ ಬಯಸುತ್ತೇವೆ. ಅದೇ 'ಕೆಟ್ಟವನು' ಅಂದರೆ ಹಿಂದೆ ಮುಂದೆ ನೋಡದೆ ಒಪ್ಪಿಬಿಡುತ್ತೇವೆ! ನಮ್ಮ ಮತ್ತು ನಮ್ಮವರ ತಪ್ಪುಗಳು ನಮಗೆ ಗೌಣವಾಗಿ ಕಾಣುತ್ತವೆ. ಇತರರ ಸಣ್ಣ ತಪ್ಪುಗಳೂ ಬೃಹದಾಕಾರ ತಳೆಯುತ್ತವೆ. ನಿಜವಾದ ದೋಷ ಇಲ್ಲಿದೆ. ನಾವು ತಪ್ಪುಗಳನ್ನು, ಲೋಪಗಳನ್ನು 'ಹೊರಗೆ' ಹುಡುಕುತ್ತೇವೆ, ಕಾಣುತ್ತೇವೆ. ನಿಜವಾದ ತಪ್ಪು, ನಿಜವಾದ ಲೋಪ 'ಒಳಗೆ' ಇದೆ! ಆ 'ಒಳಗಿನ' ತಪ್ಪನ್ನು ಅರಿಯುವ, ತಿದ್ದಿಕೊಳ್ಳುವ ಪ್ರಯತ್ನ ಮಾಡಲು ಪ್ರಾರಂಭಿಸಿದಾಗ ನಾವು ನಿಜವಾದ ಮನುಷ್ಯರಾಗುತ್ತಾ ಹೋಗುತ್ತೇವೆ. ಸಮಸ್ಯೆ ಬರುವುದು ಇಲ್ಲೇ. ಏಕೆಂದರೆ ಒಳ್ಳೆಯವರಾಗುವುದು ಎಂದರೆ ಮೇಲೇರುತ್ತಾ ಹೋಗುವುದು. ಇದು ಕಠಿಣವಾದ ಹಾದಿ. ಮೇಲೇರುವುದು ಕಷ್ಟ, ಆದರೆ ಕೆಳಕ್ಕೆ ಬೀಳುವುದು? ಹಾಗೆಂದು ಇದ್ದಲ್ಲೇ ಇದ್ದರೆ ನಾವು ನಿಜವಾದ ಮನುಷ್ಯರೆನಿಸಿಕೊಳ್ಳುವುದಾದರೂ ಹೇಗೆ?
     ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ನಮ್ಮ ದೇಶ ಈ ಸ್ಥಿತಿಗೆ ಬಂದಿದೆ ಎಂದು ದೂರುತ್ತೇವೆ. 'ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ?' ಅಂದರೆ ಸಿಗಬಹುದಾದ ಉತ್ತರ, 'ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ?' ಎಂಬುದೇ. ಅವರದು ದೊಡ್ಡ ತಪ್ಪುಗಳು, ನಮ್ಮದಾದರೋ ಪರಿಸ್ಥಿತಿಯ ಕಾರಣದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು ಎಂದು ಸಮರ್ಥಿಸಿಕೊಳ್ಳುತ್ತೇವೆ. ಈ ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯ. ನಾವು ಒಳ್ಳೆಯವರಾಗಲು ಅಥವ ಕೆಟ್ಟವರಾಗಲು ಇತರರು ಕೇವಲ ನೆಪಗಳಾಗಬಹುದೇ ಹೊರತು ಅವರು ಕಾರಣರಾಗುವುದಿಲ್ಲ. ನಿಜವಾದ ಕಾರಣ ನಮ್ಮ 'ಒಳಗೇ' ಇರುವಾಗ ನಾವು ಏನಾಗಬೇಕು ಅನ್ನುವುದು ನಮ್ಮ ಮೇಲೇ ನಿರ್ಭರವಾಗಿದೆ. 'ಒಳ್ಳೆಯತನ'ಕ್ಕೆ ನಮ್ಮನ್ನು ನಾವು ತೆರೆದುಕೊಳ್ಳೋಣ, ಪ್ರಯತ್ನ ಮಾಡೋಣ.
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ |
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||                                      
-ಕ.ವೆಂ.ನಾಗರಾಜ್.
***************
ದಿನಾಂಕ 19.10.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ನವೆಂಬರ್ 26, 2015

ಆದರ್ಶ ಪುರೋಹಿತರಾಗೋಣ!



     ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದಾಕ್ಷಣ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ  ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕಾರಣವೂ ಇದೆ. ಬುದ್ಧಿಜೀವಿಗಳೆನಿಸಿಕೊಂಡವರು ಸಾಮಾನ್ಯವಾಗಿ 'ಪುರೋಹಿತಶಾಹಿ' ಎಂಬ ಪದವನ್ನು ಒಂದು ವರ್ಗದವರನ್ನು ದೂಷಿಸಲು ಕಾರಣವಾಗಿಯೋ, ಅಕಾರಣವಾಗಿಯೋ ಸುಲಭವಾಗಿ ಬಳಸುವ ಪದವಾಗಿದೆ. ಇಂದು ಅನೇಕ ಪದಗಳು ಮೂಲ ಅರ್ಥದಲ್ಲಿ ಬಳಕೆಯಾಗದೆ ವಿರುದ್ಧಾರ್ಥದಲ್ಲಿ ಬಳಕೆಯಾಗುತ್ತಿರುವುದು ವಿಪರ್ಯಾಸ. ಜಾತಿಯ ಬಲದಲ್ಲೇ ರಾಜಕಾರಣ ಮಾಡುತ್ತಿರುವವರು ಜಾತ್ಯಾತೀತತೆಯ ಮಾತನಾಡುತ್ತಾರೆ. ಯಾವುದಾದರೂ ಒಂದು ಕೋಮನ್ನು ದ್ವೇಷಿಸುವುದೇ ಬಂಡವಾಳವಾಗಿರುವವರು ಕೋಮು ಸೌಹಾರ್ದತೆಯ  ಮಾತನಾಡುತ್ತಾರೆ. ಕೋಟ್ಯಾಧೀಶರಾದರೂ, ಅಧಿಕಾರಸ್ಥಾನದಲ್ಲಿದ್ದು ಇತರರನ್ನು ನಿಯಂತ್ರಿಸುವ ಶಕ್ತಿಯಿರುವವರೂ ಹಿಂದುಳಿದವರು, ದಲಿತರು, ಶೋಷಿತರು ಎನಿಸಿಕೊಳ್ಳುವವರಿದ್ದಾರೆ. ಕಡುಬಡವರಾಗಿದ್ದರೂ ಹುಟ್ಟಿನ ಜಾತಿಯ ಕಾರಣ ಮುಂದುವರೆದವರು ಎಂದೆನಿಸಿಕೊಂಡವರಿದ್ದಾರೆ. ಮೂಲ ಅರ್ಥ ಕಳೆದುಕೊಂಡು ಸವಕಲಾಗಿರುವ ಪದಗಳ ಸಾಲಿನಲ್ಲಿ ಸೇರಿರುವ ಈ 'ಪುರೋಹಿತ' ಪದದ ಮೂಲ ಅರ್ಥ ಕುರಿತು ವಿಶ್ಲೇಷಿಸುವುದೇ ಈ ಲೇಖನದ ಉದ್ದೇಶವಾಗಿದೆ.
     ಮೂಲ ಸಂಸ್ಕೃತ ಪದವಾದ ಪುರೋಹಿತ ಎಂಬ ಪದದ ಶಬ್ದಾರ್ಥ 'ಪುರಸ್' ಎಂದರೆ ಮುಂದೆ 'ಹಿತ' ಎಂದರೆ ಇಡಲ್ಪಟ್ಟವನು ಅರ್ಥಾತ್ ಮುಂದೆ ಇರಿಸಲ್ಪಟ್ಟವನು, ಅಗ್ರಣಿ, ಮುಂದಿರುವವನು ಎಂದು. ಒಬ್ಬ ವ್ಯಕ್ತಿ ಪುರೋಹಿತನೆಂದು ಗೌರವಿಸಲ್ಪಡಬೇಕಾದರೆ ಆತನಲ್ಲಿ ವಿಶೇಷವಾದ ಜ್ಞಾನ ಮತ್ತು ಗುಣಗಳು ಇರಬೇಕಾಗುತ್ತದೆ. ಸಂದಿಗ್ಧ ಸಂದರ್ಭಗಳಲ್ಲಿ, ಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ ಅದಕ್ಕೆ ಸೂಕ್ತ ಪರಿಹಾರಗಳನ್ನು, ಸಮಸ್ಯೆಗಳಿಂದ ಹೊರಬರುವ ಮಾರ್ಗೋಪಾಯಗಳನ್ನು ತಿಳಿಸಬಲ್ಲ ಶಕ್ತಿ ಆತನಲ್ಲಿರಬೇಕಾಗುತ್ತದೆ. ಮುಂದಿರುವುದರಿಂದ ಹಿಂದೆ ಇರುವವರಿಗೆ ಆತ ಸಹಜವಾಗಿ ಮಾರ್ಗದರ್ಶಕನಾಗಿರಬೇಕಾಗುತ್ತದೆ. ಇತರರಿಗೆ ಬುದ್ಧಿ ಹೇಳಬೇಕಾದರೆ ಆತ ಸ್ವತಃ ಜ್ಞಾನವಂತ, ಶೀಲವಂತ, ಚಾರಿತ್ರ್ಯವಂತನಾಗಿರಬೇಕಾಗುತ್ತದೆ. ಇಂತಹ ಗುಣಗಳಿರುವವರು ಮಾತ್ರ ನೈಜ ಪುರೋಹಿತರೆನಿಸಿಕೊಳ್ಳಬಲ್ಲರು. ಪಂಡಿತರು ಎಂಬ ಪದ ಸಮಾನಾರ್ಥವನ್ನು ಕೊಡುವುದಾಗಿದೆ. ಗುರುಗಳು, ಸಾಧು-ಸಂತರು, ಸರ್ವರ ಹಿತವನ್ನು ಬಯಸುವವರೆಲ್ಲರೂ ಪುರೋಹಿತರೇ ಆಗುತ್ತಾರೆ. ಇದಕ್ಕೆ ಯಾವುದೇ ಜಾತಿಯ ಕಟ್ಟಾಗಲೀ, ಲೇಪವಾಗಲೀ ಇಲ್ಲವೆಂಬುದಕ್ಕೆ ಇತಿಹಾಸದಲ್ಲಿ ಅಸಂಖ್ಯ ಉದಾಹರಣೆಗಳಿವೆ. ವಿಶ್ವಾಮಿತ್ರ, ವಸಿಷ್ಠ, ವ್ಯಾಸ, ವಾಲ್ಮೀಕಿ ಮುಂತಾದ ಅನೇಕ ಋಷಿಮುನಿಗಳು ಒಂದು ಜಾತಿಯ ಎಲ್ಲೆಗೆ ಸೇರಿದವರಲ್ಲವೆಂಬುದನ್ನು ನೆನಪಿನಲ್ಲಿಡಬೇಕಿದೆ.
     ಹೆಮ್ಮೆಯ ವಿಜಯನಗರ ಸಂಸ್ಥಾನದ ರೂವಾರಿ ವಿದ್ಯಾರಣ್ಯರು ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಶಿಷ್ಯ ಮಾಧವನಿಗೂ (ಅರ್ಚಕರ ಮಗನಾಗಿದ್ದ ವಿದ್ಯಾರಣ್ಯರ ಪೂರ್ವಾಶ್ರಮದ ಹೆಸರು) ಕೇಳಿದ್ದರು: "ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?"
ಮಾಧವ ಉತ್ತರಿಸಿದ್ದ: "ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ."
ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, "ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ" ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದ್ದರು. ಮುಂದಿನದು ಇತಿಹಾಸ. ಹಕ್ಕ-ಬುಕ್ಕರನ್ನು ಮುಂದಿಟ್ಟುಕೊಂಡು ದೇಶ ಮತ್ತು ಧರ್ಮದ ಹಿತ ಕಾಪಾಡುವ ಧ್ಯೇಯದ ವಿಜಯನಗರ ಸಂಸ್ಥಾನ ಸ್ಥಾಪಿಸಿದರು. ವಿದ್ಯಾರಣ್ಯರು ಕೇವಲ ಮಾರ್ಗದರ್ಶಕರಾಗಿ ಉಳಿದರು. ಇದು ಆದರ್ಶ ಪುರೋಹಿತನ ಲಕ್ಷಣ.
     ಹಿಂದಿನ ರಾಜ-ಮಹಾರಾಜರುಗಳ ಆಸ್ಥಾನದಲ್ಲಿ ರಾಜಪುರೋಹಿತರುಗಳು ಇರುತ್ತಿದ್ದರು. ಅವರುಗಳು ಧಾರ್ಮಿಕ ಆಚರಣೆಗಳ ಕುರಿತಲ್ಲದೆ, ಸಮಸ್ಯೆಗಳು ಬಂದಾಗ ಅವನ್ನು ಎಲ್ಲಾ ದೃಷ್ಟಿಯಿಂದ ನೋಡಿ ಸೂಕ್ತ ಪರಿಹಾರ ರೂಪಿಸುವಲ್ಲಿ ರಾಜರಿಗೆ ನೆರವಾಗುತ್ತಿದ್ದರು. ಚಾಣಕ್ಯ, ಸಮರ್ಥ ಗುರು ರಾಮದಾಸರು ಮುಂತಾದ ನೂರಾರು ಮಾರ್ಗದರ್ಶಕರ ನೆರವಿನಿಂದ ಸನಾತನ ಸಂಸ್ಕೃತಿ ಜೀವಂತವಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡ, ಸಾವಿರಾರು ಜನರಿಗೆ ಪ್ರೇರೇಪಣೆ ನೀಡಿದ ಸಾಧು-ಸಂತರ ಸಂಖ್ಯೆ ಗಣನೀಯವಾಗಿದೆ. ಒಮ್ಮೆ ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯ ಸ್ವಾಮಿ ಶ್ರದ್ಧಾನಂದರ ಆಶ್ರಮಕ್ಕೆ ಬ್ರಿಟಿಷ್ ಪೋಲಿಸರು ನುಗ್ಗಿ ತಪಾಸಣೆ ನಡೆಸಿದ್ದರು. ಅವರಿಗೆ ಅಲ್ಲಿ ಬಾಂಬುಗಳನ್ನು ತಯಾರಿಸಲಾಗುತ್ತಿದೆಯೆಂಬ ಗುಮಾನಿ ಇತ್ತಂತೆ. ಹುಡುಕಿದರೂ ಏನೂ ಸಿಗದೆ ಪೋಲಿಸರು ವಾಪಸಾಗಿದ್ದರು. ನಂತರದಲ್ಲಿ ಶ್ರದ್ಧಾನಂದರು ಅಲ್ಲಿದ್ದ ತಮ್ಮ ಶಿಷ್ಯರನ್ನು ಉದ್ದೇಶಿಸಿ "ಕಣ್ಣ ಮುಂದೆಯೇ ಇದ್ದ ಜೀವಂತ ಬಾಂಬುಗಳನ್ನು ಪೋಲಿಸರು ಗುರುತಿಸದೇ ಹೋದರಲ್ಲಾ!" ಎಂದು ತಮಾಷೆ ಮಾಡಿದ್ದರು. ಅಲ್ಲಿ ತಯಾರಾಗುತ್ತಿದ್ದುದು ಕೃತಕ ಬಾಂಬುಗಳಲ್ಲ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಬಲ್ಲ ಜೀವಂತ ಶಿಷ್ಯರ ರೂಪದಲ್ಲಿನ ಬಾಂಬುಗಳು! ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರು ನಮ್ಮ ಸಂಸ್ಕೃತಿಯ ಪುರೋಹಿತರು! ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ದಾರ್ಶನಿಕತೆ, ವಿದ್ವತ್ತುಗಳಿಗೆ ಹೆಸರಾದ ಸರ್ ಎಂ. ವಿಶ್ವೇಶ್ವರಯ್ಯ, ಡಿವಿಜಿ, ಡಾ. ರಾಧಾಕೃಷ್ಣನ್, ಅಬ್ದುಲ್ ಕಲಾಂ ಮುಂತಾದವರು, ನಾಡು-ನುಡಿಗಳಿಗೆ ಜೀವ ಸವೆಸಿದ ಅಸಂಖ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಗ್ರಣಿಗಳಾಗಿದ್ದು ಇತರರಿಗೆ ಮಾರ್ಗದರ್ಶಿಯಾಗಿದ್ದುದನ್ನು ಸ್ಮರಿಸಬೇಕು. ಇಂತಹವರು ನಿಜ ಪುರೋಹಿತರು, ಪುರದ ಹಿತ ಬಯಸುವವರು!
     ಪುರೋಹಿತನಾದವನ ಗುರುತರವಾದ ಹೊಣೆಗಾರಿಕೆ ಎಂದರೆ ಎಡವದೆ ನಡೆಯಬೇಕಾಗಿರುವುದು ಮತ್ತು ತಿಳಿದ ಜ್ಞಾನವನ್ನು ಸಮಾಜಕ್ಕೆ ತಿಳಿಸಿಕೊಡುವುದಾಗಿರುತ್ತದೆ. ಅಗ್ರಣಿಯಾದವನೇ ಎಡವಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದಲ್ಲದೆ ಪುರೋಹಿತರೆಲ್ಲರೂ ಅಂತಹವರೇ ಎಂಬ ಭಾವನೆ ಮೂಡಲು ಕಾರಣವಾಗುತ್ತದೆ. ಕೆಸರೆರಚಲು ಕಾಯುತ್ತಿರುವ ಜನರು ಮತ್ತು ಮಾಧ್ಯಮಗಳವರು ಇದಕ್ಕೆ ನೀರೆರೆಯುತ್ತಾರೆ. ನಿತ್ಯಾನಂದ, ರಾಘವೇಶ್ವರರ ಉದಾಹರಣೆಗಳು ಇಲ್ಲಿ ಪ್ರಸ್ತುತವೆನಿಸುತ್ತವೆ. ಕಾವಿ ಧರಿಸಿದವರೆಲ್ಲರೂ ಸಂತರಾಗಲಾರರು ಮತ್ತು ಸಂತರಾಗಲು ಕಾವಿಯನ್ನೇ ಧರಿಸಬೇಕೆಂದಿಲ್ಲ.  ತಿಳಿದ ಜ್ಞಾನವನ್ನು ಆಸಕ್ತರಿಗೆ ಹಂಚದಿರುವುದು ಸಹ 'ಅಸ್ತೇಯ'(ಕಳ್ಳತನ)ವೆನಿಸುತ್ತದೆ. 'ಸರ್ವೇ ಭವನ್ತು ಸುಖಿನಃ ಸರ್ವೇ ಸಂತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಶಂತು ಮಾ ಕಶ್ಚಿತ್ ದುಃಖಭಾಗ್ಭವೇತ್||'  ಎಂದು ಸಾರುವ ನೈಜ ಪುರೋಹಿತರು ನಾವಾಗೋಣ.
-ಕ.ವೆಂ.ನಾಗರಾಜ್.
***************
ದಿನಾಂಕ  13.10.1015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: