ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಅಕ್ಟೋಬರ್ 28, 2016

ಕೆಳದಿ ಚೆನ್ನಮ್ಮಾಜಿ ಮತ್ತು ಧೊಂಡಿಯವಾಘರನ್ನು ನೆನಪಿಸುವ ಚನ್ನಗಿರಿ

     ಚನ್ನಗಿರಿ - ಮೊದಲು ಶಿವಮೊಗ್ಗ ಜಿಲ್ಲೆಗೆ, ನಂತರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಸೇರಿದ ತಾಲ್ಲೂಕಾಗಿದ್ದು ತದನಂತರದಲ್ಲಿ ಪ್ರಸ್ತುತ ದಾವಣಗೆರೆ ಜಿಲ್ಲೆಗೆ ಸೇರಿದ ಸಮೃದ್ಧ ತಾಲ್ಲೂಕು, ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಹೆಸರುವಾಸಿಯಾದ ತಾಲ್ಲೂಕು. 17ನೆಯ ಶತಮಾನದಲ್ಲಿ ಕೆಳದಿ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಚನ್ನಗಿರಿ ಅದಕ್ಕೂ ಮೊದಲು ಗಂಗರು, ಕಲ್ಯಾಣಿ ಚಾಲುಕ್ಯರು ಮತ್ತು ಪಾಂಡ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಚನ್ನಗಿರಿಯ ಕೋಟೆಯ ಆವರಣದಲ್ಲಿ ಪ್ರಾಚ್ಯವಸ್ತು ಇಲಾಖೆಯವರು ಹಾಕಿರುವ ಫಲಕದಲ್ಲಿ ಈ ಪ್ರದೇಶದಲ್ಲಿ ಚೆನ್ನಮ್ಮಾಜಿಯು ಕೋಟೆಯನ್ನು ಕಟ್ಟಿಸಿದ ನಂತರ ಈ ಸ್ಥಳಕ್ಕೆ ಚನ್ನಗಿರಿ ಎಂಬ ಹೆಸರು ಬಂದಿತು ಎಂದು ಇದೆ. ಕೆಳದಿಯ ಕೆಚ್ಚೆದೆಯ ರಾಣಿ ಚೆನ್ನಮ್ಮಾಜಿ ಕ್ರಿ.ಶ. 1671ರಿಂದ 1698ರವರೆಗೆ ಆಳ್ವಿಕೆ ನಡೆಸಿದ್ದು ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದವಳು. ಶಿವಾಜಿಯ ಮಗ ರಾಜಾರಾಮ ಔರಂಗಜೇಬನಿಂದ ಸೋಲಿಸಲ್ಪಟ್ಟು ರಕ್ಷಣೆ ಕೋರಿ ಬಂದಾಗ ರಕ್ಷಣೆ ನೀಡಿದವಳು. ಪಾರಂಪರಿಕವಾಗಿ ಮರಾಠರಿಗೂ ಕೆಳದಿಯರಸರಿಗೂ ಸಂಘರ್ಷಗಳು ನಡೆಯತ್ತಿದ್ದರೂ ಶರಣಾಗಿ ಬಂದವರಿಗೆ ರಕ್ಷಣೆ ನೀಡುವ ಹಿಂದೂ ಪರಂಪರೆಯನ್ನು ಎತ್ತಿಹಿಡಿದು ಅಪಾಯ ಎದುರಿಸಿದವಳು. ಕ್ರುದ್ಧ ಔರಂಗಜೇಬ ಕೆಳದಿಯನ್ನು ಆಕ್ರಮಿಸಲು ಮುಂದಾದಾಗ ನಡೆದ ಘೋರ ಕದನದಲ್ಲಿ ಅವನನ್ನು ಸೋಲಿಸಿ ಹಿಮ್ಮೆಟ್ಟಿಸಿದವಳು!
     ಕೆಳದಿ ಅರಸರ ಚರಿತ್ರೆ ತಿಳಿಸುವ ಲಿಂಗಣ್ಣಕವಿಯ ಐತಿಹಾಸಿಕ ಕಾವ್ಯ 'ಕೆಳದಿನೃಪ ವಿಜಯ'ದ ಒಂಬತ್ತನೆಯ ಆಶ್ವಾಸದ 62ನೆಯ ಪದ್ಯ ಮತ್ತು ನಂತರದ ವಚನದಲ್ಲಿ ಕವಿ ಚನ್ನಗಿರಿಯ ಕುರಿತು ಹೀಗೆ ಹೇಳಿದ್ದಾನೆ:
"ವ|| ಇಂತು ಸಂಗ್ರಾಮದೊಳ್ ಮೈಸೂರ ಮಹೀಶ್ವರನ ದಳವಾಯಿ ತಿಮ್ಮಪ್ಪನಂ ನಿಗ್ರಹಿಸಿ ತತ್ಪುತ್ರನಾದ ಕೃಷ್ಣಪ್ಪನಂ ಕೈಸೆರೆವಿಡಿದು ಮರಳ್ದು ಕಳುಹಿಸಿ ಪರಮಪ್ರಖ್ಯಾತಿಯಂ ಪಡೆದು ತುಂಗಭದ್ರಾ ನದೀತೀರದೊಳ್
 ಕಂ || ತರುಣಿಯರ ಕುಲಶಿರೋಮಣಿ
ವರಚನ್ನಮ್ಮಾಜಿಯಾತ್ಮನಾಥನ ಪೆಸರೊಳ್
ಸ್ಥಿರಮಾದ ಸೋಮಶೇಖರ
ಪುರಮೆಂದೆನಿಪಗ್ರಹಾರಮಂ ವಿರಚಿಸಿದಳ್  || 62 ||
ವ|| ಇಂತು ಪ್ರಾಣಕಾಂತನಾದ ಸೋಮಶೇಖರನಾಯಕರ ಪೆಸರೊಳ್ ಸೋಮಶೇಖರಪುರಮೆಂದೆನಿಪಗ್ರಹಾರಮಂ ನಿರ್ಮಾಣಂಗೈಸಿ ಸ್ವಾಸ್ಥೆಕ್ಷೇತ್ರವೃತ್ತಿಗಳಂ ಕಲ್ಪಿಸಿ ಶ್ರೋತ್ರಿಯ ಬ್ರಾಹ್ಮಣರ್ಗೆ ಶಿವಾರ್ಪಿತಮಾಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆಸಿತ್ತಳಂತುಮಲ್ಲದೆ ಬಸವಾಪಟ್ಟಣದ ಸೀಮಾಸನ್ನಿವೇಶದೊಳ್ ಹೂಲಿಕೆರೆಯೆಂಬ ಸ್ಥಳದೊಳ್ ವಿರಾಜಿಪ ಕೋಂಟೆಯಂ ಸ್ವಾಧೀನಂಗೈದದಕ್ಕೆ ಸ್ವನಾಮಾಂಕಿತಮಾದ ಚನ್ನಗಿರಿಯ ಕೋಂಟೆಯೆಂದು ಪೆಸರಿಟ್ಟು ತತ್ಪರಿಸ್ತರಣಮಂ ಬಲ್ಪುಗೈಸಿದಳಂತುಮಲ್ಲದೆಯುಂ"
     ಗದ್ಯಾರ್ಥ: ಯುದ್ಧದಲ್ಲಿ ಮೈಸೂರು ಅರಸರ ದಳವಾಯಿ ತಿಮ್ಮಪ್ಪನನ್ನು ಸೋಲಿಸಿ, ಅವನ ಮಗ ಕೃಷ್ಣಪ್ಪನನ್ನು ಸೆರೆಹಿಡಿದರೂ ಕ್ಷಮಿಸಿ ಮರಳಿ ಕಳುಹಿಸಿದ ಪ್ರಖ್ಯಾತಿ ಪಡೆದ ತರುಣಿಯರ ಕುಲಶಿರೋಮಣಿ ವರ ಚನ್ನಮ್ಮಾಜಿ ತನ್ನ ಗಂಡನ ಹೆಸರಿನಲ್ಲಿ ಸೋಮಶೇಖರಪುರವೆಂಬ ಅಗ್ರಹಾರ ನಿರ್ಮಾಣ ಮಾಡಿಸಿ ಶ್ರೋತ್ರೀಯ ಬ್ರಾಹ್ಮಣರಿಗೆ ಸ್ವಾಸ್ಥೆ, ಕ್ಷೇತ್ರ, ಉದ್ಯೋಗಗಳನ್ನು ಕಲ್ಪಿಸಿ ಶಿವಾರ್ಪಣವೆಂದು ಧಾರೆಯೆರೆದು ಶಾಶ್ವತ ಶಾಸನ ಬರೆಸಿಕೊಟ್ಟಳು. ಅದೂ ಅಲ್ಲದೆ ಬಸವಾಪಟ್ಟಣದ ಸೀಮೆಯ ಹತ್ತಿರ ಹೂಲಿಕೆರೆ(ಹುಲಿಕೆರೆ) ಎಂಬ ಸ್ಥಳದಲ್ಲಿ ಶೋಭಿಸುತ್ತಿದ್ದ ಕೋಟೆಯನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ತನ್ನ ಹೆಸರಿನ ಅಂಕಿತದೊಂದಿಗೆ 'ಚನ್ನಗಿರಿ ಕೋಟೆ' ಎಂದು ಹೆಸರಿಟ್ಟು ಆ ಕೋಟೆಯನ್ನು ಬಲಪಡಿಸಿದಳು.
     ಚೆನ್ನಮ್ಮಾಜಿ ಹೊಸದಾಗಿ ಕೋಟೆಯನ್ನು ಕಟ್ಟಿಸದೆ ಇದ್ದ ಕೋಟೆಯನ್ನೇ ಅಭಿವೃದ್ಧಿ ಪಡಿಸಿ ಬಲಗೊಳಿಸಿದ್ದಳೆಂದು ಇದರಿಂದ ತಿಳಿದುಬರುತ್ತದೆ. ಸ್ವಾಭಿಮಾನಿ ಸ್ವಾತಂತ್ರ್ಯ ಹೋರಾಟಗಾರ ಧೊಂಡಿಯವಾಘನ ಜನ್ಮಸ್ಥಳವಾದ ಚನ್ನಗಿರಿಗೆ ದಿನಾಂಕ 19.10.2016ರಂದು ಹೋಗಿ ಚನ್ನಗಿರಿ ಕೋಟೆಯನ್ನು ವೀಕ್ಷಿಸಿದ ಸಂದರ್ಭದಲ್ಲಿ ತೆಗೆದ ಕೆಲವು ಚಿತ್ರಗಳು ಇಂದಿನ ಸ್ಥಿತಿಯನ್ನು ಬಿಂಬಿಸುತ್ತಿವೆ. ಕೋಟೆಯು ಇತರ ಪ್ರದೇಶಗಳಲ್ಲಿ ಕಂಡುಬರುವ ಕೋಟೆಗಳಷ್ಟು ವಿಶಾಲವಾದುದಾಗಿಲ್ಲ. ಎರಡು ಸುತ್ತು ಗೋಡೆಗಳನ್ನು ಹೊಂದಿರುವ ಕೋಟೆಯನ್ನು ಮಣ್ಣು, ಗಾರೆ ಮತ್ತು ಕಲ್ಲುಗಳನ್ನು ಅಳವಡಿಸಿ ನಿರ್ಮಿಸಲಾಗಿದೆ. ಅಂಡಾಕಾರವಾಗಿರುವ ಕೋಟೆಯಲ್ಲಿ ಏಳು ಬುರುಜುಗಳಿದ್ದು, ಎರಡು ಕಾವಲು ಗೋಪುರಗಳಿವೆ. ಒಂದು ಭಾಗದಲ್ಲಿ ಬಂಡೆಯನ್ನು ಕೊರೆದು ಮಾಡಿದ ಕೊಳವಿದ್ದು ಅದಕ್ಕೆ ಮೆಟ್ಟಲುಗಳಿವೆ. ಸಭಾಗೃಹವಿರಬಹುದೆಂದು ಹೇಳಬಹುದಾದ ಸ್ಥಳದ ಅಡಿಪಾಯ ಕಂಡುಬರುತ್ತದೆ. 18ನೆಯ ಶತಮಾನಕ್ಕೆ ಸೇರಿದೆಯೆನ್ನಲಾದ ಕೋಟೆ ರಂಗನಾಥ ಸ್ವಾಮಿಯ ದೇವಾಲಯವನ್ನೂ ಕೋಟೆಯ ಭಾಗದಲ್ಲಿ ಕಾಣಬಹುದು. ಹಳೆಯ ರಥ ಶಿಥಿಲಾವಸ್ಥೆಯಲ್ಲಿದೆ. ಹೊಸ ರಥದ ಮನೆಯಿದೆ. ಚಿತ್ರಗಳು ಕಥೆಯನ್ನು ಮುಂದವರೆಸುತ್ತವೆ. 
-ಕ.ವೆಂ.ನಾಗರಾಜ್.

















































ಶುಕ್ರವಾರ, ಅಕ್ಟೋಬರ್ 21, 2016

ಶಿವಾಜಿಯ ತಂದೆ ಷಹಜಿಯ ಸಮಾಧಿ - ಹೊದಿಗೆರೆ, ಚನ್ನಗಿರಿ ತಾ.





     ಶಿವಾಜಿಯ ತಂದೆ ಷಹಜಿ ಭೋಸ್ಲೆ ಕರ್ನಾಟಕದ ಹೊದಿಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ಕ್ರಿ.ಶ. 1664ರ ಜನವರಿ, 23ರಂದು ಮೃತನಾದಾಗ ಆತನ ದೇಹವನ್ನು ಹೊದಿಗೆರೆಯಲ್ಲೇ ಸಮಾಧಿ ಮಾಡಲಾಯಿತು. ಆಗ ಹೊದಿಗೆರೆ ಕೆಳದಿಯ ರಾಜ್ಯದ ಸೀಮೆಯಲ್ಲೇ ಬರುತ್ತಿದ್ದು, ಷಹಜಿಯನ್ನು ಆ ಗ್ರಾಮದಲ್ಲೇ ಸಮಾಧಿ ಮಾಡಲು ಅವಕಾಶ ಕೊಟ್ಟದ್ದು ಕೆಳದಿಯ ಅರಸರೇ. ಸಮಾಧಿ ಮಾಡಲು ಅವಕಾಶ ಕೊಡಬೇಕೇ, ಬೇಡವೇ ಎಂಬ ಬಗ್ಗೆ ದೀರ್ಘವಾದ ಮಂತ್ರಾಲೋಚನೆ ನಡೆದು, ಕೊನೆಗೆ ಷಹಜಿ ಮರಣ ಹೊಂದಿದ ಸ್ಥಳದಲ್ಲೇ ಸಮಾಧಿಯನ್ನು ಗೌರವೋಚಿತವಾಗಿ ನಿರ್ಮಿಸಲಾಯಿತೆಂದು ಹೇಳಲಾಗಿದೆ. ಕೆಳದಿಯರಸರ ಮಾನವೀಯತೆಗೆ ಈ ಘಟನೆ ಸಾಕ್ಷಿಯಾಗಿದೆ. ಮರಾಠರಿಗೂ ಕೆಳದಿಯರಸರಿಗೂ ಪರಸ್ಪರ ಸಂಘರ್ಷ ಸಾಮಾನ್ಯವಾಗಿದ್ದರ ಹಿನ್ನೆಲೆಯಲ್ಲಿ ಈ ಘಟನೆಗೆ ಮಹತ್ವವಿದೆ. ಈ ಸಮಾಧಿಯನ್ನು ಕರ್ನಾಟಕ ಸರ್ಕಾರವು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಗ್ರಾಮದ ಒಂದು ವೃತ್ತಕ್ಕೆ ಷಹಜಿ ಸರ್ಕಲ್ ಎಂದು ನಾಮಕರಣವಾಗಿರುವುದನ್ನು ಗಮನಿಸಿದೆ.
     ದಿನಾಂಕ 19.10.2016ರಂದು ಈ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿನ ಚಿತ್ರಗಳಿವು:






-ಕ.ವೆಂ.ನಾಗರಾಜ್.
**********
[ಶಹಾಜಿಯ ಚಿತ್ರವನ್ನು ಅಂತರ್ಜಾಲದಿಂದ ಹೆಕ್ಕಿದೆ.]

ಮಂಗಳವಾರ, ಅಕ್ಟೋಬರ್ 11, 2016

ಧೊಂಡಿಯವಾಘನನ್ನು ನೆನಪಿಸುವ ತಿರುಗಣಿ ಮಡು (ಕಾಳೋಕೂಂಡೋ)


     ಶಿವಮೊಗ್ಗ ಜಿಲ್ಲೆಯ ಹೊಸನಗರದ ಹುಂಚ (ಹೊಂಬುಜ) ಎಂಬ ಸ್ಥಳ ಕುಮುದ್ವತಿ ನದಿಯ ಉಗಮ ಸ್ಥಾನವಾಗಿದೆ. ಅಲ್ಲಿಗೆ ಸಮೀಪದ ಭಿಲ್ಲೇಶ್ವರ ದೇವಾಲಯದ ಮುಂದೆ ಇರುವ ಕುಮುದ್ವತಿ ತೀರ್ಥವೆಂದು ಕರೆಯಲ್ಪಡುವ ಕಲ್ಯಾಣಿಯೇ ಆ ಉಗಮ ಸ್ಥಾನ. ಅಲ್ಲಿ 1945ರಲ್ಲಿ ಕೊಳ ನಿರ್ಮಿತವಾಗಿದೆಯೆನ್ನುತ್ತಾರೆ. ಅಲ್ಲಿ ಚಿಲುಮೆಯಾಗಿ ಹೊರಬಂದ ನೀರು ಮುಂದೆ ಝರಿಯಾಗಿ, ನದಿಯಾಗಿ ಮಾರ್ಪಟ್ಟು ಹರಿಯುತ್ತಾ ಸುಮಾರು 60 ಕಿ.ಮೀ. ಕ್ರಮಿಸಿದ ನಂತರದಲ್ಲಿ ಚೋರಡಿಯ ಪ್ರದೇಶದಲ್ಲಿ ಹರಿಯುತ್ತದೆ. ಚೋರಡಿಯ ಮುಖ್ಯ ವಸತಿ ಪ್ರದೇಶದಿಂದ ಸುಮಾರು 4.5 ಕಿ.ಮೀ. ದೂರದಲ್ಲಿ ತಿರುಗಣಿ ಮಡು ಇದೆ. ಇಂಗ್ಲಿಷಿನ ಎಸ್ ಆಕಾರದಲ್ಲಿ ಈ ಭಾಗದಲ್ಲಿ ನದಿ ಹರಿಯುತ್ತಿದ್ದು ಎರಡನೆಯ ತಿರುವಿನಲ್ಲಿ ತಿರುಗುವಾಗ ಮಡುವಾಗಿ ಸ್ಥಳೀಯವಾಗಿ ತಿರುಗಣಿ ಮಡು ಎಂಬ ಹೆಸರನ್ನು ಪಡೆದುಕೊಂಡಿದೆ. ಬಂಜಾರ ಸಮುದಾಯದವರಿಗೆ ಈ ಸ್ಥಳ ಪವಿತ್ರವಾದುದಾಗಿದೆ. ಅವರು ಇದನ್ನು ಕಾಳೋಕೂಂಡೋ (ಆಳವಾದ ನೀರಿನ ತಾಣ) ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಪ್ರದೇಶ ಅವರ ಸಮುದಾಯದ ಮಹಾಪುರುಷ ಸೇವಾಭಾಯಾರ ಹುಟ್ಟು ಮತ್ತು ಇತಿಹಾಸಕ್ಕೆ ಕಾರಣವಾದ ತಾಣವಾಗಿದ್ದು ಅವರು ಇದನ್ನು ಪವಿತ್ರ ಭಾವನೆಯಿಂದ ಕಾಣುತ್ತಾರೆ. ಸಪ್ತ ಮಾತೃಕೆಯರು ಸ್ನಾನ ಮಾಡಿದ ಸ್ಥಳವೆಂದು ಗೌರವದಿಂದ ಕಾಣುತ್ತಾರೆ.


     ಬಂಜಾರರ ಧಾರ್ಮಿಕ ಸ್ಥಳವಾದ ಈ ಪ್ರದೇಶ ಐತಿಹಾಸಿಕವಾಗಿಯೂ ಮಹತ್ವ ಪಡೆದದ್ದು ಧೊಂಡಿಯವಾಘನಿಂದಾಗಿ! ಟಿಪ್ಪುವಿನ ಸೆರೆಮನೆಯಲ್ಲಿ ಐದು ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸಿದ್ದ ಧೊಂಡಿಯವಾಘ ಟಿಪ್ಪು ಬ್ರಿಟಿಷರಿಂದ ಹತನಾದ ನಂತರದಲ್ಲಿ ಬಿಡುಗಡೆಯ ಭಾಗ್ಯ ಪಡೆದ ಬಂಧಿತರಲ್ಲಿ ಒಬ್ಬನಾಗಿದ್ದ. ಹೊರಬಂದವನೇ ಧೊಂಡಿಯ ಮಾಡಿದ ಮೊದಲ ಕೆಲಸವೆಂದರೆ ಬಿದನೂರಿಗೆ (ಈಗಿನ ನಗರ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ) ಧಾವಿಸಿ ಟಿಪ್ಪು ಮತ್ತು ಹೈದರರಿಂದ ಸಂತ್ರಸ್ತರಾಗಿದ್ದ ಸೈನಿಕರನ್ನು ಒಟ್ಟುಗೂಡಿಸಿ ತನ್ನದೇ ಒಂದು ಸೈನ್ಯ ಕಟ್ಟಿದ್ದು ಮತ್ತು ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದು! ಟಿಪ್ಪು ಸೈನ್ಯದಲ್ಲಿದ್ದಾಗ ಅನೇಕ ಯುದ್ಧಗಳಲ್ಲಿ, ಕಾಳಗಗಳಲ್ಲಿ ಭಾಗಿಯಾಗಿದ್ದಲ್ಲದೆ ಅವನ ಮತ್ತು ಬ್ರಿಟಿಷರ ತಂತ್ರ, ಕುತಂತ್ರಗಳನ್ನು ಕಂಡವನಾಗಿದ್ದ. ಟಿಪ್ಪು ಧೊಂಡಿಯನನ್ನು ಮುಸ್ಲಿಮನನ್ನಾಗಿಸಲು ಪ್ರಯತ್ನಿಸಿ ವಿಫಲನಾಗಿ ಬಲವಂತದಿಂದ ಮತಾಂತರ ಮಾಡಿಸಿದ್ದ. ಸತ್ತರೂ ಸರಿಯೇ, ಮುಸ್ಲಿಮನಾಗಿ ಬಾಳಲಾರೆ ಎಂಬ ಅವನ ನಿರ್ಧಾರ ಅವನನ್ನು ಟಿಪ್ಪುವಿನ ಬಂದಿಯಾಳು ಆಗುವಂತೆ ಮಾಡಿ ಐದು ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸುವಂತೆ ಮಾಡಿತ್ತು. ನೇರ ಯುದ್ಧದಲ್ಲಿ ಬ್ರಿಟಿಷರನ್ನು ಸೋಲಿಸುವುದು ಕಷ್ಟವೆಂಬುದನ್ನು ಅರಿತಿದ್ದ ಧೊಂಡಿಯ ಗೆರಿಲ್ಲಾ ಮಾದರಿಯ ಯುದ್ಧ ತಂತ್ರ ಬಳಸಿ ಅವರನ್ನು ಹಣ್ಣುಗಾಯಿ, ನೀರುಗಾಯಿ ಮಾಡುವಲ್ಲಿ ಸಫಲನಾಗಿದ್ದ. ಬಂಜಾರರು ಅವನ ಬೆನ್ನಿಗಿದ್ದು ಅಡಗುತಾಣಗಳಲ್ಲಿ ಅವನಿಗೆ ಆಹಾರ ಸಾಮಗ್ರಿ ಒದಗಿಸುವುದಲ್ಲದೆ, ಸೈನಿಕರಾಗಿಯೂ ಸಹಕರಿಸಿದ್ದರು. ಶಿವಾಜಿಗೆ ಮಹರ್ ಜನಾಂಗದವರು ಬೆನ್ನೆಲುಬಾಗಿದ್ದಂತೆ ಧೊಂಡಿಯನಿಗೆ ಬಂಜಾರರ ಸಹಾಯ ಅಮೂಲ್ಯವಾದುದಾಗಿತ್ತು. ಕಾಡು-ಮೇಡುಗಳಲ್ಲಿ ಸಂಚರಿಸಿ ಅನುಭವವಿದ್ದ ಬಂಜಾರರು ಧೋಂಡಿಯವಾಘನ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಸುರಕ್ಷಿತ ಸ್ಥಳಗಳ ಮಾಹಿತಿ, ಇದ್ದ ಸ್ಥಳಕ್ಕೆ ಆಹಾರ ಮತ್ತಿತರ ಆವಶ್ಯಕ ಸಾಮಗ್ರಿಗಳನ್ನು ಒದಗಿಸುತ್ತಿದ್ದವರು, ಬ್ರಿಟಿಷರ ಚಲನವಲನಗಳ ಮಾಹಿತಿ ನೀಡುತ್ತಿದ್ದವರು ಇವರುಗಳೇ ಆಗಿದ್ದರು.

     ಬ್ರಿಟಿಷ್ ಸೇನಾ ತುಕಡಿಗಳ ಮೇಲೆ ಆಯಕಟ್ಟಿನ ಸ್ಥಳಗಳಲ್ಲಿ ಹೊಂಚು ಹಾಕಿ ಅನಿರೀಕ್ಷಿತ ದಾಳಿ ನಡೆಸಿ ಅಪಾರ ಹಾನು ಉಂಟುಮಾಡುತ್ತಿದ್ದುದಲ್ಲದೆ ಅವರ ಶಸ್ತ್ರಾಸ್ತ್ರಗಳನ್ನೂ ಹೊತ್ತೊಯ್ಯುತ್ತಿದ್ದುದನ್ನು ತಪ್ಪಿಸಲು ಆಂಗ್ಲರು ಹೆಣಗಾಡಬೇಕಾಗಿತ್ತು. ತಂಗುದಾಣಗಳಲ್ಲಿ ಅವರು ಎಷ್ಟೋ ರಾತ್ರಿಗಳನ್ನು ಧೋಂಡಿಯನ ಅಂಜಿಕೆಯಿಂದ ನಿದ್ದೆಯಿಲ್ಲದೆ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಧೊಂಡಿಯನ ಉಪಟಳ ತಡೆಯಲಾರದೆ ಅವನನ್ನು ಹಿಡಿಯುವ ಸಲುವಾಗಿಯೇ ಲಾರ್ಡ್ ವೆಲ್ಲೆಸ್ಲಿ ಒಂದು ಪ್ರತ್ಯೇಕ ಸೈನಿಕರ ತಂಡವನ್ನೇ ನಿಯೋಜಿಸಿದ್ದ. ಒಮ್ಮೆ ಶಿವಮೊಗ್ಗದ ಕಡೆಯಿಂದ ಧಾವಿಸಿದ್ದ ಬ್ರಿಟಿಷರ ಸೇನೆಗೂ ಇವನಿಗೂ ಮುಖಾಮುಖಿಯಾಗಿ ಬ್ರಿಟಿಷರ ಕೈ ಮೇಲಾಗಿದ್ದನ್ನು ಗಮನಿಸಿದ ಧೋಂಡಿಯ ಮತ್ತು ಅವನ ಸಹಚರರು ಚದುರಿ ಚೋರಡಿಯ ಅರಣ್ಯ ಪ್ರದೇಶ ಸೇರಿದ್ದರು. ಅಲ್ಲಿಗೂ ಧಾವಿಸಿದ್ದ ಬ್ರಿಟಿಷರೊಡನೆ ಏಕಾಂಗಿಯಾದ ಧೋಂಡಿಯ ಸೆಣಸುತ್ತಾ ತಿರುಗಣಿ ಮಡುವಿರುವ ಜಾಗಕ್ಕೆ ಬಂದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಮಾರ್ಗ ಕಾಣದೆ ವಿಚಲಿತನಾಗಿದ್ದ. ಅನಿವಾರ್ಯವಾಗಿ ತಾನು ಏರಿದ್ದ ಕುದುರೆಯನ್ನೂ ಹುರಿದುಂಬಿಸಿ ತುಂಬಿ ಹರಿಯುತ್ತಿದ್ದ ನದಿಗೆ ಧುಮುಕಿಯೇ ಬಿಟ್ಟಿದ್ದ. ಸುಳಿಯಿದ್ದ ಆ ಜಾಗದಲ್ಲಿ ಆ ಸಾಹಸ ಮಾಡಲು ಎಂಟೆದೆ ಇದ್ದವರಿಗೆ ಮಾತ್ರ ಸಾಧ್ಯವಿತ್ತು. ಹಾಗಾಗಿ ಬ್ರಿಟಿಷರಿಗೆ ಅವನನ್ನು ಅಲ್ಲಿಯೂ ಹಿಂಬಾಲಿಸಲಾಗಿರಲಿಲ್ಲ. ನದಿಯನ್ನು ಸಾಹಸದಿಂದ ದಾಟಿ ಶಿಕಾರಿಪುರದ ಅರಣ್ಯ ಸೇರಿಕೊಂಡ ಧೊಂಡಿಯ ಸುಧಾರಿಸಿಕೊಂಡಿದ್ದ. ಶಿಕಾರಿಪುರದ ಆರಾಧ್ಯ ದೈವ ಹುಚ್ಚರಾಯಸ್ವಾಮಿಯನ್ನು (ಆಂಜನೇಯ) ತನ್ನ ರಕ್ಷಣೆಗೆ ಪ್ರಾರ್ಥಿಸಿಕೊಂಡಿದ್ದ. ಹೀಗೆ ಪಾರಾದ ನಂತರದಲ್ಲಿ ಹುಚ್ಚರಾಯಸ್ವಾಮಿಗೆ ತಲೆಬಾಗಿ ತನ್ನ ಖಡ್ಗವನ್ನು ಅರ್ಪಿಸಿ, ತನ್ನ ಶತ್ರುಗಳ ವಿರುದ್ಧ ಸೆಣೆಸಲು ಶಕ್ತಿ ಕೊಡಲು ಪ್ರಾರ್ಥಿಸಿದ್ದ.  
     ಬಂಜಾರರಲ್ಲಿ ಪ್ರಚಲಿತವಿರುವ ಕಥೆಯಂತೆ ಬ್ರಿಟಿಷರಿಂದ ಸುತ್ತುವರೆಯಲ್ಪಟ್ಟ ಧೊಂಡಿಯ ದಿಕ್ಕುಕಾಣದಂತಾಗಿ ಕಾಳೋಕೂಂಡೋ (ತಿರುಗಣಿ ಮಡು) ಹತ್ತಿರ ಬಂದಾಗ ಅವನ ಕುದುರೆ ಸಹ ನದಿಯನ್ನು ಕಂಡು ಗಾಬರಿಯಾಗಿರುತ್ತದೆ. ಆಗ ಅಲ್ಲಿಗೆ ಹತ್ತಿರದ ತಾಂಡಾದ ಬಳಿಯಲ್ಲಿ ಒಬ್ಬ ವೃದ್ಧೆ(ಡೊಕ್ರಿ) ಅವನಿಗೆ ಎದುರಾಗುತ್ತಾಳೆ. ಆಕೆ ಬೇರೆ ಯಾರೂ ಆಗಿರದೆ ವೇಷಧಾರಿಯಾಗಿದ್ದ ಮರಿಯಮ್ಮ (ಮಾರಮ್ಮ) ಆಗಿದ್ದು, ಆಕೆ ಮತ್ತು ಧೋಂಡಿಯನ ನಡುವಣ ಸಂಭಾಷಣೆ ಹೀಗಿತ್ತಂತೆ: (ಇದನ್ನು ಹಿಂದಿನ ತಲೆಮಾರಿನವರು ಹಾಡಿನ ರೂಪದಲ್ಲಿ ಹಾಡುತ್ತಿದ್ದರಂತೆ. ಈ ಮಾಹಿತಿ ಒದಗಿಸಿದವರು: ಶ್ರೀ ಇಂದ್ರಾನಾಯಕ್ ಡುಂಗಾವತ್.)
ಧೊಂಡಿಯ: ಯಾಡಿ ಸೇವಡೀತಿ ಫೀರಂಗಿವಾಳ್, ನಿಜಾಮೇರ್ ತುಕಡಿ, ಮರಾಠೇರ್ ತುಕಡಿ,  ಘೋರ್‌ಲಿದೇಚೇ ಯಾಡಿ; ಕೊನಿಕತೋ ಎನೂರ ಹಾತೇಮ ಮರನೂ; ನವತೋ ತೂಮನ್ನ  ತಾರ ಹಾತೇತಿ ಮಾರನಾಕೇ ಯಾಡೀ; ಮಾರ್ ಯಾಡಿ ಮರಿಯಮ್ಮ ಮನ್ನ ಮಾರಾನಾಕಿ  ಕೇಲೂಚುಯೇ ಯಾಡೀ; 
     ಅರ್ಥ :- ತಾಯಿ ಎಲ್ಲಾ ಕಡೆಯಿಂದ ಬ್ರಿಟೀಷ್ ಸೈನ್ಯ, ನಿಜಾಮರ ಸೈನ್ಯ, ಮರಾಠಿ ಸೈನ್ಯ ನನ್ನನ್ನು ಆವರಿಸಿಕೊಂಡಿದೆ. ನನ್ನ ಬಳಿ ಎರಡು ರೀತಿಯ ಆಯ್ಕೆಮಾತ್ರ ಇದೆ. ಒಂದು ಈ ದುಷ್ಟರ ಕೈಯಲ್ಲಿ ಸಿಕ್ಕಿ ಸಾಯುವುದು, ಅಥವಾ ನಿನ್ನ ಕೈಯಿಂದಲೇ ನನ್ನನ್ನು ಸಂಹರಿಸಿ ಬಿಡು. ನನ್ನ ತಾಯಿ ಮರಿಯಮ್ಮ ನನ್ನನ್ನು ಸಂಹರಿಸಿದಳು ಎಂದು ತಿಳಿದು ಸಂತೋಷದಿಂದ ಸಾಯುತ್ತೇನೆ. 
ಡೊಕ್ರಿ:  ಏ ವಾಘ್ ತೂ ಭೇಟೋಚಿ ಜಕೋ ಘೋಡೋ ತೋಳಾರಾಮ್ ಛ, ಕಸೇನ ಚಮಕರೋಚಿ; ಈ ಕಾಳೋಕೂಂಡೇಮ ಅಂಗೋಳಿಕೀದೋ ಹಮಾರ್ ಸೇವಾ; ಮರಿಯಮ್ಮಾರ್ ನಾಮ್ ಲೀದೋಚಿ, ತಾರ್ ತೋಳಾರಾಮ್ ಛ, ವಾಟ ದೇಕಾಳಚ 
  ಅರ್ಥ: ಹೇ ದೂಂಢಿಯಾವಾಘ್, ನೀನು ಕುಳಿತಿರುವ ಕುದುರೆಯು ಎಲ್ಲರಿಂದ ಆರಾಧಿಸಲ್ಪಡುವ ಶ್ರೀ ಸೇವಾಭಾಯರ ಕುದುರೆ ತೋಳಾರಾಮ ಆಗಿದೆ. ಈ ಕಾಳೊಕಂಡೋದಲ್ಲಿ ಸ್ನಾನ ಮಾಡಿದ ನಮ್ಮ ಸೇವಾಭಾಯ. ಮರಿಯಮ್ಮ ದೇವಿಯ ಹೆಸರು ಹೇಳಿದ್ದೀಯ. ಆ ತೋಳಾರಾಮನೇ ನಿನಗೆ ದಾರಿ ತೋರಿಸುತ್ತಾನೆ.
     ಈ ಮಾತುಗಳನ್ನು ಕೇಳಿದ ಧೊಂಡಿಯ ಗಲಿಬಿಲಿಗೊಳಗಾಗುತ್ತಾನೆ. ತನ್ನ ಅಂತ್ಯ ಸಮೀಪಿಸಿದೆ ಎಂದು ಭಾವಿಸಿದ ಆತ ಕುದುರೆಯ ಮುಖವನ್ನು ನೋಡುತ್ತಾನೆ. ಆ ಕುದುರೆ ನಗುನಗುತ್ತಾ ಅವನನ್ನು ಹೊತ್ತಿದ್ದಂತೆಯೇ ತುಂಬಿ ಹರಿಯುತ್ತಿದ್ದ ಕುಮುದ್ವತಿಯ ಆಳವಾದ ಕಾಳೋಕುಂಡೋಗೆ ಧುಮುಕಿಯೇಬಿಡುವುದಲ್ಲದೆ ಅವನನ್ನು ಸುರಕ್ಷಿತವಾಗಿ ಅವನನ್ನು ಆಚೆ ದಡಕ್ಕೆ ಸೇರಿಸಿಬಿಡುತ್ತದೆ. ನಂತರದಲ್ಲಿ ಸೂರಖಂಡ್ (ಸೊರಬ) ತಲುಪಿ ಚಂದ್ರಗುತ್ತಿಯಲ್ಲಿ ಮತ್ತು ಬೆಳಗುತ್ತಿಯ ಗುಡಿಗಳಲ್ಲಿ ಪೂಜೆ ಸಲ್ಲಿಸುತ್ತಾನೆ. ಆಮೇಲೆ ಕೆಲಕಾಲ ತಲೆ ಮರೆಸಿಕೊಂಡು ಶಿಕಾರಿಪುರದ ಅರಣ್ಯ ಪ್ರದೇಶದಲ್ಲಿ ಅಲೆದಾಡುತ್ತಾನೆ.
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 10, 2016

ಧೊಂಡಿಯವಾಘನ ಅಡಗುತಾಣವಾಗಿದ್ದ ಚೋರಡಿ ಅರಣ್ಯ ಪ್ರದೇಶ - ಕೋಟೆಹಾಳ್.


     ಧೊಂಡಿಯವಾಘನ ಭದ್ರವಾದ ಅನೇಕ ಅಡಗುತಾಣಗಳಲ್ಲಿ ಗಮನ ಸೆಳೆಯುವಂತಹದು ಮತ್ತು ಪ್ರಮುಖವಾಗಿದ್ದುದು ಚೋರಡಿಯ ಅರಣ್ಯ ಪ್ರದೇಶ. ಪ್ರಸ್ತುತ ಶಿವಮೊಗ್ಗ ತಾಲ್ಲೂಕಿನ ಹಳ್ಳಿಯಾದ ಚೋರಡಿ ಗ್ರಾಮ ದೊಡ್ಡ ಹಳ್ಳಿಯಾಗಿದ್ದು 19 ಚದರ ಕಿ.ಮೀ. ವಿಸ್ತೀರ್ಣ ಉಳ್ಳದ್ದಾಗಿದೆ. ಇದರಲ್ಲಿ ಸುಮಾರು 11.50 ಚದರ ಕಿ.ಮೀ. ಅರಣ್ಯ ಪ್ರದೇಶವಾಗಿದೆ. ಶಿವಮೊಗ್ಗದಿಂದ 28 ಕಿ.ಮೀ. ದೂರದಲ್ಲಿರುವ ಈ ಹಳ್ಳಿಯ ಜನಸಂಖ್ಯೆ 2011ರ ಜನಗಣತಿ ಅಂಕ ಅಂಶಗಳಂತೆ 2618 ಆಗಿದ್ದು 1305 ಪುರುಷರು ಮತ್ತು 1313 ಸ್ತ್ರೀಯರು ಇದ್ದಾರೆ. ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಈ ಗ್ರಾಮದಲ್ಲಿ ಸುಮಾರು 600 ಮನೆಗಳಿವೆ. ಸುಮಾರು ಶೇ. 80ರಷ್ಟು ಜನರು ಅಕ್ಷರಸ್ಥರು.
     ದೊಂಡಿಯವಾಘ ಬ್ರಿಟಿಷ್ ಸೈನ್ಯದೊಂದಿಗೆ ಮುಖಾಮುಖಿಯಾಗಿ ಸುತ್ತುವರೆಯಲ್ಪಟ್ಟು ತಪ್ಪಿಸಿಕೊಳ್ಳಲು ಮಾರ್ಗವೇ ಇಲ್ಲದಿದ್ದ ಸಂದರ್ಭದಲ್ಲಿ ತುಂಬಿ ಹರಿಯುತ್ತಿದ್ದ ಕುಮುದ್ವತಿ ನದಿಯ ತಿರುಗಣಿ ಮಡುವಿನಲ್ಲಿ ಕುದುರೆಯೊಂದಿಗೆ ಹಾರಿ ಆಚೆಯ ದಡ ಸೇರಿ ಶಿಕಾರಿಪುರದಲ್ಲಿ ರಕ್ಷಣೆ ಪಡೆದ ಸಂಗತಿಯಿಂದಾಗಿ ಚೋರಡಿಯ ಈ ಪರಿಸರ ಮಹತ್ವ ಪಡೆದಿದೆ. ಧೊಂಡಿಯನನ್ನು ಬೆನ್ನಟ್ಟಿ ಬಂದಿದ್ದ ಬ್ರಿಟಿಷರಿಗೆ ಅವನನ್ನು ನದಿಯ ಮಾರ್ಗವಾಗಿ ಹಿಂಬಾಲಿಸುವ ಧೈರ್ಯವಿರದೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂತಿರುಗಬೇಕಾಯಿತು. ಈ ಸ್ಥಳಕ್ಕೆ ಭೇಟಿ ಕೊಡಬೇಕೆಂಬ ಬಹಳ ದಿನಗಳ ಮನದಿಚ್ಛೆಗೆ ಕಾಲ ಕೂಡಿ ಬಂದಿತ್ತು. ಕಾರ್ಯನಿಮಿತ್ತ 27.09.2016ರಂದು ಶಿವಮೊಗ್ಗಕ್ಕೆ ಹೋಗಿದ್ದು, ಅಂದು ಈ ಸ್ಥಳಕ್ಕೆ ಭೇಟಿ ಕೊಡುವ ಬಗ್ಗೆ ಪೂರ್ವಭಾವಿಯಾಗಿ ಶಿವಮೊಗ್ಗದ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಉಪನಿರ್ದೇಶಕರಾದ ಶ್ರೀ ಇಂದ್ರಾನಾಯಕ್ ಡುಂಗಾವತರಿಗೂ ತಿಳಿಸಿ ಹೋಗಿದ್ದೆ. ಧೊಂಡಿಯವಾಘನ ಅಭಿಮಾನಿಯಾದ ಅವರೇ ಸಂಬಂಧಿಸಿದ ಸ್ಥಳಗಳಿಗೆ ಕರೆದುಕೊಂಡು ಹೋಗಿ ತೋರಿಸಿದರು ಮತ್ತು ಹಲವು ಮಾಹಿತಿಗಳನ್ನು ಒದಗಿಸಿದರು. 
ಕೋಟೆಹಾಳ್
     ಗ್ರಾಮದಿಂದ ಸ್ವಲ್ಪ ದೂರ ಸಾಗಿದಾಗ ದರ್ಶನವಾದದ್ದು ಹಾಳು ಬಿದ್ದ ಕೋಟೆಯ ಅವಶೇಷ. ಜಂಬಿಟ್ಟಿಗೆಯಿಂದ ನಿರ್ಮಿತವಾದ ಕೋಟೆ ಸಂಪೂರ್ಣವಾಗಿ ಶಿಥಿಲವಾಗಿದೆ. ಬೆಳೆದ ಗಿಡ ಮರಗಳು, ಮುಳ್ಳುಕಂಟಿಗಳಿಂದಾಗಿ ಹತ್ತಿರ ಹೋದರೆ ಮಾತ್ರ ಇಲ್ಲೊಂದು ಕೋಟೆಯಿತ್ತು ಎಂಬುದು ತಿಳಿಯುತ್ತದೆ. ಕೋಟೆಯ ಸುತ್ತಲೂ ಕಂಡು ಬರುವ ಕಂದಕವೂ ಇದಕ್ಕೆ ಪುಷ್ಟಿ ನೀಡುತ್ತದೆ. ದೂರದಿಂದ ನೋಡಿದರೆ ಎತ್ತರದ ಪ್ರದೇಶ ಒಂದು ಗುಡ್ಡದಂತೆ ಕಾಣುತ್ತದೆ. ಈ ಪ್ರದೇಶಕ್ಕೆ ಕೋಟೆಹಾಳ್ ಎಂದು ಹೆಸರು ಇರುವುದು ಅನ್ವರ್ಥವಾಗಿದೆ. ಈಗ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣವೂ ಒಂದೊಮ್ಮೆ ಕೋಟೆಯ ಭಾಗವೇ ಆಗಿದ್ದ ಪ್ರದೇಶವಾಗಿದೆ. ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಚಂದ್ರಶೇಖರ್ ಮತ್ತು ಶಿಕ್ಷಕ ಶ್ರೀ ಶಂಕರ್ ಸಹ ನಮ್ಮೊಡನೆ ಕೋಟೆಯ ದಿಬ್ಬ ಹತ್ತುವ ಕೆಲಸದಲ್ಲಿ ಸೇರಿಕೊಂಡರು. ಅಷ್ಟೊಂದು ಎತ್ತರದ ಸ್ಥಳವಲ್ಲವಾಗಿದ್ದರೂ ಹತ್ತುವುದು ನಾವು ಆರಿಸಿಕೊಂಡ ಸ್ಥಳದಲ್ಲಿ ಸುಲಭವಾಗಿರಲಿಲ್ಲ. ಇಳಿಯುವಾಗ ಮಾತ್ರ ಸುಲಭವಾದ ದಾರಿಯಲ್ಲಿ ಹಿಂತಿರುಗಿದೆವು. ಅರಣ್ಯ ಇಲಾಖೆಗೆ ಸೇರಿದ ಈ ಜಾಗದ ಬಗ್ಗೆ ಪ್ರಾಚ್ಯ ವಸ್ತು ಇಲಾಖೆಯೂ ಗಮನ ಹರಿಸಬೇಕಿದೆ. ಇಲ್ಲಿನ ಪ್ರದೇಶ ಅಡಗಿಕೊಳ್ಳಲು ಹೇಳಿ ಮಾಡಿದಂತಹ ಸ್ಥಳವಾಗಿದ್ದು, ಹೊಂಚು ಹಾಕಿ ಬ್ರಿಟಿಷರ ಮೇಲೆರಗಿ ಅವರ ಅರಿವಿಗೆ ಬರುವುದರ ಒಳಗೆ ಸಾಕಷ್ಟು ಹಾನಿ ಉಂಟು ಮಾಡಿ ಅವರ ಶಸ್ತ್ರಾಸ್ತ್ರ, ಮದ್ದು-ಗುಂಡುಗಳನ್ನು ದೋಚಿ ಪರಾರಿಯಾಗುತ್ತಿದ್ದ ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಪ್ರವೀಣನಾಗಿದ್ದ ಧೋಂಡಿಯವಾಘ ಇಂತಹ ಸ್ಥಳದಲ್ಲಿ ಅಡಗಿಕೊಂಡಿದ್ದರೆ ಶತ್ರುಗಳಿಗೆ ಹುಡುಕುವುದು ಸುಲಭದ್ದಾಗಿರಲಿಲ್ಲ. ಹುಡುಕಿಕೊಂಡು ಬಂದವರಿಗೇ ಆಪತ್ತು ಕಾದಿರುತ್ತಿತ್ತು. ಕೋಟೆಯ ಎತ್ತರದ ಪ್ರದೇಶದಲ್ಲಿ ನಿಂತು ನೋಡಿದರೆ ಕಾಣುವ ದೃಷ್ಯ ಚೇತೋಹಾರಿ. ಎಲ್ಲೆಲ್ಲೂ ಗಿಡ ಮರಗಳು, ಸುತ್ತಲೂ ಕಾಣುವ ಬೆಟ್ಟ ಗುಡ್ಡಗಳು ಆಯಾಸವನ್ನು ಮರೆಮಾಡುತ್ತವೆ. ಅರಣ್ಯ ಪ್ರದೇಶ ಒತ್ತುವರಿ, ಗಿಡ-ಮರಗಳ ಕಡಿತಗಳು, ಕಟ್ಟಡ ನಿರ್ಮಾಣಗಳು, ಇತ್ಯಾದಿಗಳ ನಡುವೆಯೂ ಈ ಪ್ರದೇಶ ಈಗಲೂ ಹೀಗಿರಬೇಕಾದರೆ ಹಿಂದೆ ಈ ಪ್ರದೇಶ ಹೇಗಿದ್ದಿರಬಹುದು ಎಂಬುದು ಕಲ್ಪನೆಗೆ ಬಿಟ್ಟ ಸಂಗತಿಯಾಗಿದೆ. ಕೋಟೆಹಾಳಿನ ಕೆಲವು ದೃಷ್ಯಗಳಿವು:







ಮುಚ್ಚಿ ಹೋಗಿರುವ ಸುರಂಗ ಮಾರ್ಗ
     ಶಾಲೆಯ ಹಿಂಭಾಗದಲ್ಲಿ ಒಂದು ಕಾಲದಲ್ಲಿ ಇದ್ದಿರಬಹುದಾದ ಸುರಂಗದ ಕುರುಹು ಕಂಡು ಬರುತ್ತದೆ. ಗೊತ್ತಿದ್ದವರು ಹೇಳುವ ಪ್ರಕಾರ ಆ ಸುರಂಗ ಚೌಕಾಕಾರವಾಗಿದ್ದು ಸುಮಾರು ಒಂದು ಕಿ.ಮೀ. ಉದ್ದದ್ದಾಗಿತ್ತೆಂದು ಅವರ ಹಿರಿಯರು ಹೇಳುತ್ತಿದ್ದರಂತೆ. ಇದೂ ಸಹ ಜಂಬಿಟ್ಟಿಗೆಯಿಂದ ನಿರ್ಮಿತವಾದದ್ದಾಗಿದೆ. ಕಾಲನ ಹೊಡೆತಕ್ಕೆ ಸಿಕ್ಕಿ ಸುರಂಗ ಕುಸಿದಿರಬಹುದು, ಮುಚ್ಚಿಹೋಗಿರಬಹುದು. ಉತ್ಖನನ ಮಾಡಿದರೆ ಅನೇಕ ಐತಿಹಾಸಿಕ ಮಹತ್ವದ ಸಂಗತಿಗಳು ತಿಳಿಯುತ್ತದೆ. ಇತಿಹಾಸ ಸಂಶೋಧಕರುಗಳು, ಸ್ಥಳೀಯ ನಾಯಕರುಗಳು ಸರ್ಕಾರದ ಗಮನ ಸೆಳೆದು ಈ ಕಾರ್ಯ ಮಾಡುವುದು ಅಗತ್ಯವಾಗಿದೆ. ಧೊಂಡಿಯನ ಅಭಿಮಾನಿಗಳಾದ ಬಂಜಾರ ಟ್ರಸ್ಟಿನವರು ಸುರಂಗದ ಕುರುಹು ಕಾಣುತ್ತಿರುವ ಭಾಗದಲ್ಲಿ 'ಧೊಂಡಿಯವಾಘನ ಸುರಂಗ' ಎಂದು ನಾಮಫಲಕ ಹಾಕಿರುವುದು ಸೂಕ್ತವಾಗಿದೆ. ಧೊಂಡಿಯ ಸಹ ಈ ಸುರಂಗದ ಉಪಯೋಗ ಪಡೆದಿದ್ದಿರಬಹುದು.





-ಕ.ವೆಂ.ನಾಗರಾಜ್.

ಗುರುವಾರ, ಅಕ್ಟೋಬರ್ 6, 2016

ಅರವತ್ತಾರನೆಯ ಮೆಟ್ಟಲಿನಲ್ಲಿ . . .


     65 ಮೆಟ್ಟಲುಗಳನ್ನು ಹತ್ತಿ 66ನೆಯ ಮೆಟ್ಟಲಿನಲ್ಲಿ ನಿಂತು ಹತ್ತಿದ ಮೆಟ್ಟಲುಗಳ ಕಡೆಗೆ ಕಣ್ಣು ಹಾಯಿಸಿದಾಗ ಆದದ್ದು ಸಮ್ಮಿಶ್ರ ಅನುಭವದ ಅನುಭೂತಿ. ಮೊದಲಿನ ಮೆಟ್ಟಿಲುಗಳನ್ನು ನನ್ನನ್ನು ಹೊತ್ತು ನಡೆದ, ಕೈ ಹಿಡಿದು ನಡೆಸಿದ ಅಪ್ಪ-ಅಮ್ಮರ ನೆನಪು, ತಮ್ಮಂದಿರು, ತಂಗಿಯ ಜೊತೆಗೂಡಿ ಹೆಜ್ಜೆ ಹಾಕಿದ ನೆನಪು, ಗೆಳೆಯರೊಡನೆ ಆಟವಾಡುತ್ತಾ, ಕಲಿಯುತ್ತಾ ಹೆಜ್ಜೆ ಹಾಕಿದ ಸುಂದರ ನೆನಪುಗಳು, 21 ಮೆಟ್ಟಿಲು ಹತ್ತಿದ ಸಮಯದಲ್ಲಿ ಪದವೀಧರನಾದದ್ದು, ನಮಗೋಸ್ಕರ ಕಷ್ಟಪಟ್ಟ ತಂದೆ-ತಾಯಿಯರಿಗೆ ನೆರವಾಗಬೇಕೆಂಬ ಇಚ್ಛೆ ದಟ್ಟವಾದ ಹೊತ್ತು, ನೌಕರಿಗೆ ಸೇರಿದ ಒಂದೆರಡು ವರ್ಷದಲ್ಲೇ ಧುತ್ತೆಂದು ಎರಗಿದ್ದ ತುರ್ತು ಪರಿಸ್ಥಿತಿಯ ನೆನಪು, ಸೆರೆಮನೆ ವಾಸ, ಪೋಲಿಸ್ ಠಾಣೆ, ಜೈಲು, ಕೋರ್ಟು-ಕಛೇರಿಗಳ ತಾಕಲಾಟ, ಪೀಕಲಾಟ, ಕತ್ತಲೆ ಕಳೆದು ಬೆಳಕು ಕಂಡು ನೌಕರಿ ಮತ್ತೆ ಸಿಕ್ಕಿದ ಸಂತಸಗಳ ನೆನಪು, . . . ಒಂದೇ, ಎರಡೇ, ಎಲ್ಲವೂ ಮನಃಪಟಲದ ಮೇಲೆ ಹರಿದಾಡಿದವು. 28ನೆಯ ಮೆಟ್ಟಿಲು ಹತ್ತುತ್ತಲೇ ಜೊತೆಗೂಡಿದ ಜೀವನ ಸಂಗಾತಿಯೊಂದಿಗೆ ಮೆಟ್ಟಿಲೇರುವ ಕಾಯಕ ಮುಂದುವರಿಕೆ, ಮಗಳು ಮತ್ತು ಮಗನ ಆಟ-ಪಾಠಗಳನ್ನು ಕಂಡು ಸಂಭ್ರಮಿಸಿದ ಹೊತ್ತು, ಅವರನ್ನು ಓದಿಸಿ, ಬೆಳೆಸಿ ಮುಂದೆ ತರುವ ಹೊಣೆಗಾರಿಕೆ ನಿಭಾಯಿಸಿದ ತೃಪ್ತಿ ಪಡುವ ಸಮಯದಲ್ಲೇ ಸಾಕಷ್ಟು ಮೆಟ್ಟಿಲುಗಳನ್ನು ಏರಿಯಾಗಿತ್ತು. ಮಕ್ಕಳ ಮದುವೆ ಆಯಿತು, ಅವರಿಗೂ ಮಕ್ಕಳಾದವು. ಈಗ ಅವರು ಸ್ವತಂತ್ರರಾಗಿ ತಮ್ಮ ಹಾದಿಯಲ್ಲಿ ಮುನ್ನಡೆದಿದ್ದಾರೆ. ನನ್ನ ಮೇಲೆ ಅವರುಗಳು ಈಗ ಅವಲಂಬಿತರಲ್ಲ ಮತ್ತು ನನ್ನ ಅಗತ್ಯತೆ ಅವರಿಗೆ ಇಲ್ಲವೆಂಬುದು ಸಮಾಧಾನದ ಸಂಗತಿ. ಅವರುಗಳು ಮುನ್ನಡೆಯಲಿ, ಅವರಿಗೆ ಶುಭವಾಗಲಿ ಎಂಬುದು ಮನದಾಳದ ಹಾರೈಕೆ. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮತ್ತು ಕುಟುಂಬ ಸಾಮರಸ್ಯದ ಕಾರ್ಯ ನಿರ್ವಹಿಸಲು ತೊಡಗಿಕೊಳ್ಳುವ ಸಲುವಾಗಿ ಹೊಂದಿದ್ದ ತಹಸೀಲ್ದಾರ್ ಹುದ್ದೆಗೆ ಸ್ವಇಚ್ಛಾ ನಿವೃತ್ತಿ ಮೂಲಕ ವಿದಾಯ ಹೇಳಿ ಏಳು ವರ್ಷಗಳಾದವು. ಮನವೊಪ್ಪುವ ಕಾರ್ಯಗಳಲ್ಲಿ ತೊಡಗಿ ಸರ್ವಹಿತ ಬಯಸುವ ವೇದಗಳ ಆಶಯದಂತೆ ಮುನ್ನಡೆಯಲು ಅಡಿಯಿಟ್ಟು ಮೆಟ್ಟಿಲುಗಳನ್ನು ಹತ್ತುವ ಕಾಯಕ ಮುಂದುವರೆದಿದೆ.
     ಡಿವಿಜಿಯವರ ಈ ಕಗ್ಗ ಮನುಷ್ಯನ ಜೀವನದ ಪರಿಯನ್ನು ಸಮರ್ಥವಾಗಿ ವಿವರಿಸಿದೆ. ಎಲ್ಲರಿಗೂ ಇದು ಅನ್ವಯಿಸುತ್ತದೆ:
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ 
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ |
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ 
ಬಾಯ ಚಪ್ಪರಿಸುವನು ಮಂಕುತಿಮ್ಮ ||
     ಈ ಭೂಮಿಯ ಒಲೆಯಲ್ಲಿ ನಮ್ಮ ಬಾಳನ್ನು ಬೇಯಿಸಿ ಬಾಯಿ ಚಪ್ಪರಿಸುವ ವಿಧಿಯ ರೀತಿಯೇ ಇದಾಗಿದೆ. ಯಾರ ಅನುಭವವೂ ಇದಕ್ಕೆ ಹೊರತಾಗಿಲ್ಲ.
     ಹೌದು, ಸಾಧಿಸಿದ್ದೇನು? ಸಿಕ್ಕಿದ್ದೇನು? ಇದರ ಪರಾಮರ್ಶೆ ಮಾಡಬೇಕಾದವನು ನಾನೇ! ನವರಸದ ಅನುಭವಗಳೂ ದಟ್ಟವಾಗಿ ಆಗಿವೆ. ಖುಷಿ ಪಟ್ಟಿದ್ದೇನೆ, ಸಂಕಟ ಪಟ್ಟಿದ್ದೇನೆ, ನೋವು ಅನುಭವಿಸಿರುವೆ, ಅತ್ತಿದ್ದೇನೆ, ನಕ್ಕಿದ್ದೇನೆ, ಗಳಿಸಿರುವೆ, ಕಳೆದಿರುವೆ. ಈ ಜೀವನದ ಪಾಠಶಾಲೆ ಅನುಭವ ಮೂಟೆಯನ್ನೇ ಹೊರಿಸಿದೆ. ಕೂಡಿಸಿ, ಕಳೆದು, ಗುಣಿಸಿ, ಭಾಗಿಸಿ ಉಳಿದ ಶೇಷವೇ ಈಗಿನ ನನ್ನ ಜೀವನವಾಗಿದೆ. ಸಾಮರಸ್ಯ ಬಯಸುವ ಮನಸ್ಸಿಗೆ ಸಾಮರಸ್ಯ ಕದಡುವ ಕೆಲಸ ಮಾಡುವವರನ್ನು  ಕಂಡಾಗ ಕಸಿವಿಸಿಯಾಗುತ್ತದೆ. ಒಳ್ಳೆಯ ರೀತಿಯಲ್ಲಿ ಬಾಳುವುದಕ್ಕೂ ಇರುವ ಅಡ್ಡಿ-ಅಡಚಣೆಗಳು ಹಲವು, ಮಾಡಬೇಕಾದ ಕರ್ತವ್ಯ ಮಾಡುವುದೂ ಸರಳವಲ್ಲವೆಂಬ ಹೆಚ್ಚಿನವರ ಅಭಿಪ್ರಾಯವೇ ನನ್ನದೂ ಆಗಿದೆ. ಅಭಿಮಾನ- ಅದು ಸ್ವಾಭಿಮಾನವೋ, ದುರಭಿಮಾನವೋ- ಎಲ್ಲೆ ಮೀರಬಾರದು ಮತ್ತು ನಂಬಿಕೆ ಕಳೆದುಕೊಳ್ಳಬಾರದು ಎಂಬುದು ನನ್ನ ಅನಿಸಿಕೆ. ನಂಬಿಕೆಯೇ ಜೀವನ. ಅದಿಲ್ಲದಿದ್ದರೆ ಜೀವನ ಅರ್ಥ ಕಳೆದುಕೊಳ್ಳುತ್ತದೆ. ಮನುಷ್ಯನ ಆರು ವೈರಿಗಳೊಂದಿಗೆ ಸಮರ ಸಾಗಿಯೇ ಇದೆ. ಸೋಲು-ಗೆಲವುಗಳೆರಡನ್ನೂ ಕಾಣುತ್ತಿರುವೆ. ಮದವೆಂಬ ವೈರಿಯನ್ನು ಮಣಿಸಿದ್ದಾಗಿದೆ. ಮತ್ಸರವೂ ತಂಟೆ ಮಾಡಲಾರದು. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮುಂದೆ ಬರುವವರನ್ನು ಕಂಡು ಮತ್ಸರ ಪಡುವುದೇನಿರುತ್ತದೆ? ನನ್ನ ಸಾಮರ್ಧ್ಯಕ್ಕೆ ತಕ್ಕಂತೆ ಸಾಧಿಸಬೇಕೆಂಬ ಭಾವ ಮಾತ್ರ ಸುಪ್ತವಾಗಿದೆ. ಇರುವುದೇ ಸಾಕೆಂಬ ಭಾವ ಲೋಭವನ್ನು ಹತ್ತಿಕ್ಕಿದೆ. ನಾವು-ನಮ್ಮವರು ಎಂಬ ಮೋಹ ಇದೆ. ಇದು ಇರಲೇಬೇಕು. ಆದರೆ ಈ ಮೋಹ ಇತರರಿಗೆ ತೊಂದರೆ ಕೊಡದಂತೆ ಇರುವಾಗ ಅವನೂ ಮಿತ್ರನಾಗಿಬಿಟ್ಟಿದ್ದಾನೆ. ಕ್ರೋಧವೂ ತಕ್ಕಮಟ್ಟಿಗೆ ಹಿಡಿತಕ್ಕೆ ಸಿಕ್ಕಿದೆ. ಇನ್ನು ಉಳಿದದ್ದು ಕಾಮ! ಇದರ ವಿಶೇಷವೆಂದರೆ ಆರು ವೈರಿಗಳಲ್ಲಿ ಒಂದಾದ ಕಾಮ ಚತುರ್ವಿಧ ಪುರುಷಾರ್ಥಗಳಲ್ಲೂ ಒಂದಾಗಿದೆ. ಬೇಕು, ಬೇಕು ಅನ್ನುವುದು ಕಾಮ. ಆದರೆ ಏನು ಬೇಕು ಎಂದು ಆರಿಸಿಕೊಳ್ಳುವುದು ಪುರುಷಾರ್ಥಕ್ಕೆ ದಾರಿ. ಈ ಹಾದಿಯಲ್ಲಿ ಸಾಗುವ ಮನೋಭಾವವಿರುವುದರಿಂದ ಸಾಧನೆಗೆ ತೊಂದರೆಯೇನಿಲ್ಲವೆಂದು ಅನ್ನಿಸಿದೆ. ಆದರೆ ಆರು ವೈರಿಗಳೊಡನೆ ಸಂಘರ್ಷ ಎಂದೂ ಮುಗಿಯದ ಸಂಘರ್ಷವಾಗಿದ್ದು ಸದಾ ಎಚ್ಚರವಿರಲೇಬೇಕು. ಈ ಎಚ್ಚರ ಸದಾ ಇರಲೆಂದು ನನ್ನ ಪ್ರಾರ್ಥನೆಯಿದೆ.
     ಅಗೋ! ಅಂತರಂಗ ಗದರಿಸುತ್ತಿದೆ: "ಲೋ, ನಾಗರಾಜ, ಸಾಕು ಮಾಡು, ಪ್ರಲಾಪ ನಿಲ್ಲಿಸು. ಹತ್ತುವ ಕೆಲಸ ಮುಂದುವರೆಸು. ನಿನ್ನ ಕೆಲಸ ನೀನು ಮಾಡು. ಜೊತೆಗೆ ಬರುವವರು ಬಂದೇ ಬರುತ್ತಾರೆ. ಒಂದು ಮಾತು ನೆನಪಿಟ್ಟುಕೋ. ಯಾರೋ ನಿನ್ನನ್ನು ಮುಂದೆ ಕರೆದುಕೊಂಡು ಹೋಗುತ್ತಾರೆ ಅಥವ ಯಾರೋ ನಿನ್ನನ್ನು ಕೆಳಗೆ ತಳ್ಳುತ್ತಾರೆ ಎಂಬುದನ್ನು ನಿನ್ನ ಮನಸ್ಸಿನಿಂದ ತೆಗೆದುಹಾಕಿಬಿಡು. ಮುಂದೆ ಹೋಗುವುದಾಗಲೀ, ಕೆಳಗೆ ಇಳಿಯುವುದಾಗಲೀ ಎರಡಕ್ಕೂ ನೀನೇ ಕಾರಣ ಹೊರತು ಬೇರೆಯವರಲ್ಲ. ಯಾರನ್ನೂ ದೂಷಿಸಬೇಡ. ನಿನ್ನಲ್ಲಿ ಶಕ್ತಿ ಇರುವವರೆಗೂ ಹತ್ತುತ್ತಲೇ ಇರು. ಇಡುವ ಒಂದೊಂದು ಹೆಜ್ಜೆಯೂ ನಿನ್ನನ್ನು ಮೇಲಕ್ಕೆ ಕರೆದೊಯ್ಯುತ್ತದೆ, ಗುರಿಗೆ ಹತ್ತಿರವಾಗಿಸುತ್ತದೆ. ನಿಲ್ಲಬೇಡ, ಮೇಲೆ ಹತ್ತು." 
     ಹೌದು, ಮೇಲಕ್ಕೆ ಏರಬೇಕು. ಮೇಲಕ್ಕೆ . . . ಮೇಲಕ್ಕೆ. . . . ತುಂಬಾ ಮೇಲಕ್ಕೆ. . . . .!! . . . . ತುಂಬಾ ತುಂಬಾ ಮೇಲಕ್ಕೆ . . . . . !!! . . . . . . . . .   

ಭಾನುವಾರ, ಅಕ್ಟೋಬರ್ 2, 2016

ಕಷ್ಟಗಳು ಇರಲಿ!


     ಇದೇನಪ್ಪಾ ಇದು? ಎಲ್ಲರೂ ಸುಖಕ್ಕಾಗಿ ಹಂಬಲಿಸುವಾಗ ಇದೇನಿದು ವಿಚಿತ್ರ ಅನಿಸಿಕೆ? ಎಂದು ಅನ್ನಿಸುವುದು ಸಹಜವೇ. ನಿಜ, ಸುಖವಿರಬೇಕು, ಒಳ್ಳೆಯ ಕಾಲ ಬರಬೇಕು. ವಿಚಾರ ಮಾಡೋಣ. ಸುಖ ನಮ್ಮನ್ನು ತೃಪ್ತರನ್ನಾಗಿಸಿದರೆ ಕಷ್ಟಗಳು ನಮ್ಮಲ್ಲಿನ ಅತ್ಯುತ್ತಮ ಸಂಗತಿಗಳು, ಪ್ರತಿಭೆಗಳು ಹೊರಬರಲು ಕಾರಣವಾಗುತ್ತವೆ. ನಾವು ಯಾರು ಯಾರನ್ನು ಮಹಾತ್ಮರು, ಸ್ಮರಣೀಯರು ಎಂದು ಗೌರವಿಸುತ್ತೇವೋ, ಪೂಜಿಸುತ್ತೇವೋ ಅವರೆಲ್ಲರೂ ಕಷ್ಟಗಳ ಸರಮಾಲೆಯನ್ನೇ ಧರಿಸಿ, ಎದುರಿಸಿ ಮುಂದೆಬಂದವರು! ಸುಖವಾಗಿ ಬೆಳೆದವರು, ಹಣ, ತೋಳ್ಬಲಗಳಿಂದ ಮೇಲೆ ಬಂದವರು, ಅಧಿಕಾರ ಹಿಡಿದವರುಗಳು ಲೌಕಿಕವಾಗಿ ಎಷ್ಟೇ ಉನ್ನತವಾದ ಸ್ಥಾನಗಳಲ್ಲಿದ್ದರೂ ಅವರು ಜನಮಾನಸದಲ್ಲಿ ಉಳಿದಿಲ್ಲ. ರಾಮಚಂದ್ರ ೧೪ ವರ್ಷಗಳ ಕಾಲ ವನವಾಸದಲ್ಲಿರಬೇಕಾಯಿತು, ಹೆಜ್ಜೆ ಹೆಜ್ಜೆಗೆ ತೊಂದರೆಗಳು ಎದುರಾದವು, ಪತ್ನಿ ಸೀತೆಯ ಅಪಹರಣವಾಯಿತು. ರಾವಣನನ್ನು ಸೋಲಿಸಿ ಮರಳಿ ಪತ್ನಿಯನ್ನು ಕರೆತಂದರೂ ಲೋಕಾಪವಾದಕ್ಕೆ ಒಳಗಾಗಬೇಕಾಯಿತು. ಆದರೆ ಇವುಗಳು ಆತನ ಆದರ್ಶಗಳನ್ನು ಅಲುಗಾಡಿಸಲಿಲ್ಲ, ಬದಲಾಗಿ ಗಟ್ಟಿಗೊಳಿಸಿದವು. ಕೃಷ್ಣ ಹುಟ್ಟುವ ಕ್ಷಣದಿಂದಲೇ ಆತನ ಜೀವಕ್ಕೆ ಕುತ್ತುಗಳು ಎದುರಾದವು. ಇದರಿಂದಾಗಿ ಸದಾ ಜಾಗೃತನಾಗಿರಲು, ಸಮಯ, ಸಂದರ್ಭಗಳಿಗೆ ಅನುಸಾರವಾಗಿ ಚಾಣಾಕ್ಷತನದಿಂದ ಎದುರಿಸುವ ಕಲೆ ಅವನಿಗೆ ಸಿದ್ಧಿಸಿತು. ಧರ್ಮ ಸಂಸ್ಥಾಪನೆಗಾಗಿ ಅರ್ಜುನನಾದಿಯಾಗಿ ಎಲ್ಲರನ್ನೂ ಪ್ರೇರಿಸುವ ಶಕ್ತಿ ಅವನಲ್ಲಿತ್ತು. ಇತ್ತೀಚಿನ ಉದಾಹರಣೆಗಳನ್ನೇ ನೋಡೋಣ. ಮಹಾತ್ಮ ಗಾಂಧಿ, ಅಂಬೇಡ್ಕರ್, ಅಬ್ದುಲ್ ಕಲಾಮರಂತಹ ಮಹಾನ್ ನಾಯಕರುಗಳೆಲ್ಲಾ ಕಷ್ಟಗಳನ್ನೇ ಹಾಸಿ ಹೊದ್ದಿದ್ದವರು. ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದ ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಕನ್ನಡನಾಡಿನ ಸಂಗೊಳ್ಳಿ ರಾಯಣ್ಣ, ದೊಂಡಿಯವಾಘ ಮೊದಲಾದವರು ಬಡತನದ ಕುಟುಂಬಗಳಿಂದ ಬಂದವರೇ ಆಗಿದ್ದರು. ಜೀವಮಾನದ ಹೆಚ್ಚು ಅವಧಿಯನ್ನು ಜೈಲಿನಲ್ಲೇ ಕಳೆದಿದ್ದ ನೆಲ್ಸನ್ ಮಂಡೇಲಾ, ಮ್ಯಾನ್ಮಾರಿನ (ಬರ್ಮಾ) ಸೂಕಿ ಅದಮ್ಯ ಚೇತನಗಳಿಗೆ ಸಾಕ್ಷಿಗಳು! ಇಂತಹ ನೂರಾರು, ಸಾವಿರಾರು ಉದಾಹರಣೆಗಳನ್ನು ಕೊಡಬಹುದು.
     ನಾವು ದೇವರನ್ನು ಯಾವಾಗ ಜ್ಞಾಪಿಸಿಕೊಳ್ಳುತ್ತೇವೆ? ಕಷ್ಟಗಳು ಬಂದಾಗ ಮಾತ್ರ ದೇವರ ನೆನಪಾಗುತ್ತದೆ. ಸಂಕಟ ಬಂದಾಗ ವೆಂಕಟರಮಣ! ನಮ್ಮ ತೊಂದರೆ, ದುಃಖಗಳನ್ನು ಪರಿಹರಿಸದ ದೇವರ ಮೇಲೆ ಸಿಟ್ಟನ್ನೂ ಮಾಡಿಕೊಳ್ಳುತ್ತೇವೆ. ಎಷ್ಟು ಪರೀಕ್ಷೆ ಮಾಡುತ್ತೀಯಾ ದೇವರೇ ಎಂದು ಕಷ್ಟಗಳಿಗೆ ಅವನೇ ಕಾರಣನೆಂಬಂತೆ ದೂರುತ್ತೇವೆ. ಅದೇ ಯಶಸ್ಸಿನ ಅಲೆಯ ಮೇಲೆ ತೇಲುತ್ತಿರುವಾಗ, ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುವಾಗ ದೇವರ ನೆನಪೇ ಆಗುವುದಿಲ್ಲ. ಕಟ್ಟಿದ ದೊಡ್ಡ ಬಂಗಲೆ, ಐಷಾರಾಮಿ ಕಾರು, ದೊಡ್ಡ ಆಸ್ತಿಗೆ ಒಡೆಯರಾದುದು ಸ್ವಂತ ಪರಿಶ್ರಮದ ಫಲದಿಂದ ಎಂದು ಅಂದುಕೊಳ್ಳುವ ನಾವು ವಹಿವಾಟಿನಲ್ಲಿ ದೊಡ್ಡ ನಷ್ಟವಾಗಿ ಎಲ್ಲವನ್ನೂ ಕಳೆದುಕೊಳ್ಳುವ ಹಂತ ಬಂದಾಗ ಮಾತ್ರ ದೇವರನ್ನು ನಿಷ್ಕರುಣಿ ಎಂದುಬಿಡುತ್ತೇವೆ.
     ಸುಖವಾಗಿರುವುದು, ಆನಂದವಾಗಿರುವುದು ತಪ್ಪಲ್ಲ. ವಾಸ್ತವವಾಗಿ ಎಲ್ಲಾ ಜೀವಿಗಳೂ ಸುಖವಾಗಿ, ಆನಂದವಾಗಿ ಬದುಕುವ ಸಲುವಾಗಿಯೇ ಹುಟ್ಟಿದ್ದು, ಅದನ್ನು ಗಳಿಸಲು ಶ್ರಮಿಸುತ್ತಲೇ ಇರುತ್ತವೆ. ನಾವು ಸುಖವಾಗಿದ್ದಾಗ, ಆನಂದವಾಗಿದ್ದಾಗ ಹೇಗಿರುತ್ತೇವೆ? ಆನಂದ, ಪ್ರೀತಿ, ಯಶಸ್ಸು, ವಿಶ್ವಾಸ, ಒಳ್ಳೆಯ ಸಂಬಂಧಗಳು, ಆರೋಗ್ಯ ಇವೆಲ್ಲವೂ ಸುಖವಾಗಿರುವಾಗ ಇರುವಂತಹವು. ಎಲ್ಲವೂ ಸಮೃದ್ಧವಾಗಿದ್ದು ಸಂತೋಷವಾಗಿದ್ದಾಗ ನಾವು ಸೋಮಾರಿಗಳಾಗಿರುತ್ತೇವೆ. ಅಶಿಸ್ತಿನ ಜೀವನ ನಮ್ಮದಾಗುತ್ತದೆ. ಮನಸ್ಸಿಗೆ ಬೇಕೆನ್ನಿಸಿದುದನ್ನು ಸೇವಿಸಿ ಬೊಜ್ಜು ಬೆಳೆಸಿಕೊಳ್ಳುತ್ತೇವೆ. ಅದೇ ನಮ್ಮ ಆರೋಗ್ಯ ಹದಗೆಟ್ಟಾಗ ಸಿಕ್ಕಿದ್ದನ್ನು ತಿನ್ನದೆ ಶಿಸ್ತಿನಿಂದ ಇರಬೇಕೆಂದು ಅಂದುಕೊಳ್ಳುತ್ತೇವೆ. ಮತ್ತೆ ಮೊದಲಿನಂತೆ ಆರೋಗ್ಯ ಸರಿಯಾದಾಗ ಅದನ್ನು ಮರೆತುಬಿಡುತ್ತೇವೆ. ಇಂದು ತಿಂದುಬಿಡೋಣ, ನಾಳೆಯಿಂದ ಸರಿಯಾಗಿ ಇದ್ದರಾಯಿತು ಅಂದುಕೊಳ್ಳುತ್ತೇವೆ. ಯಶಸ್ಸು ಬಂದಾಗ ನಮಗೆ ಅಹಂ ಜಾಸ್ತಿಯಾಗುತ್ತದೆ. ನಮ್ಮ ಮೇಲೆ ನಮಗಿರುವ ವಿಶ್ವಾಸ, ನಮ್ಮಲ್ಲಿನ ಹಣ, ಅಧಿಕಾರ, ಜನರ ಬೆಂಬಲ ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುತ್ತದೆ, ಮದದಿಂದ ಮತ್ತೇರಿಬಿಡುತ್ತೇವೆ. ಇತರರನ್ನು ನಿಕೃಷ್ಟವಾಗಿ ಕಾಣುವಂತೆ ಮಾಡುತ್ತದೆ. ಚಿಕ್ಕಂದಿನಲ್ಲಿ ಬಡತನದಿಂದ ಬೆಳೆದು ಸ್ವಂತ ಪರಿಶ್ರಮದಿಂದ ಮುಂದೆ ಬಂದಿದ್ದೇನೆ ಅನ್ನುವುದೂ ಹೊಗಳಿಕೊಳ್ಳುವ ಸಾಧನವಾಗುತ್ತದೆ. ಇತರರು ನಮ್ಮೊಡನೆ ಒಳ್ಳೆಯ ಸಂಬಂಧ ಹೊಂದಿದ್ದಾರೆ ಅನ್ನುವುದು ಅವರುಗಳು ಏನು ಹೇಳಿದರೂ ಕೇಳುತ್ತಾರೆ ಎಂಬ ಭಾವನೆ ಬಲವಾಗಿಸುತ್ತದೆ ಮತ್ತು ಅವರನ್ನು ಕೇಳದೆಯೇ ಅವರ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿಸುತ್ತದೆ. ಹೊಗಳಿಕೆ ಮಾತ್ರ ಇಷ್ಟವಾಗುತ್ತದೆ. ಸದುದ್ದೇಶದ ಟೀಕೆಗಳನ್ನೂ ಸಹಿಸಿಕೊಳ್ಳದ ಮನೋಪ್ರವೃತ್ತಿ ಬರುತ್ತದೆ.  ಇಂತಹ ಹಲವಾರು ಸಂಗತಿಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ಸುಖವಾಗಿರುವಾಗ ನಮ್ಮಲ್ಲಿನ ಕೆಟ್ಟ ಪ್ರವೃತ್ತಿಗಳು ಪ್ರಕಟಗೊಳ್ಳುತ್ತಾಹೋಗುತ್ತವೆ ಮತ್ತು ಶತ್ರುಗಳು ಹೆಚ್ಚಾಗುತ್ತಾರೆ.
     ಕಷ್ಟದ ಸಂದರ್ಭಗಳಲ್ಲಿ ಅದರಿಂದ ಹೊರಬರಲು ನಾವು ನಮ್ಮ ಅತ್ಯುತ್ತಮ ಪ್ರತಿಭೆಯನ್ನು ಉಪಯೋಗಿಸಿಕೊಳ್ಳುತ್ತೇವೆ. ನಾವು ಆಗ ವಿನೀತರಾಗಿರುತ್ತೇವೆ, ನಡವಳಿಕೆಯಲ್ಲಿ ಸಂಯಮವಿರುತ್ತದೆ, ಕೋಪವನ್ನು ನಿಗ್ರಹಿಸಿಕೊಳ್ಳುತ್ತೇವೆ, ಶಿಸ್ತಿನಿಂದ ವರ್ತಿಸುತ್ತೇವೆ, ಅಹಂಕಾರ ಹತ್ತಿರವೂ ಸುಳಿಯುವುದಿಲ್ಲ. ಯಾರೊಬ್ಬರನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಒಂದಲ್ಲಾ ಒಂದು ಸಮಯದಲ್ಲಿ ಅವರ ಸಹಕಾರವೂ ಬೇಕಾದೀತು ಎಂಬ ಪ್ರಜ್ಞೆ ಜಾಗೃತವಿರುತ್ತದೆ. ದೇವರ ನೆನಪು ಮಾಡಿಕೊಳ್ಳುತ್ತೇವೆ, ಗುರು-ಹಿರಿಯರನ್ನು ಗೌರವಿಸುತ್ತೇವೆ. ಒಟ್ಟಾರೆಯಾಗಿ ಕಷ್ಟಕಾಲದಲ್ಲಿ ನಾವು ಸಜ್ಜನರಾಗಿರುತ್ತೇವೆ! ಹಾಗಾದರೆ, ಕಷ್ಟಗಳೇ ಇರಲಿ ಎನ್ನುತ್ತೀರಾ ಎಂದರೆ, ಖಂಡಿತಾ ಇಲ್ಲ, ಕಷ್ಟಗಳು ಹೋಗಿ ಸುಖ, ಸಮೃದ್ಧಿ, ಶಾಂತಿಯ ದಿನಗಳು ಬರಲಿ ಎಂಬುದೇ ಎಲ್ಲರ ಹಾರೈಕೆಯಾಗಿದೆ. ವೇದಗಳು, ಎಲ್ಲಾ ಧರ್ಮಗ್ರಂಥಗಳೂ ಸಕಲರ ಹಿತವನ್ನೇ ಸಾರುತ್ತಿವೆ. ಸ್ವಂತ ಮತ್ತು ಸಮಾಜದ ಹಿತ ಎಲ್ಲಿದೆಯೆಂದರೆ ಕಷ್ಟಕಾಲದಲ್ಲಿ ನಾವು ಹೇಗಿದ್ದೆವೋ, ನಮ್ಮ ಸ್ವಭಾವ ಯಾವ ರೀತಿ ಒಳ್ಳೆಯದಿದ್ದಿತ್ತೋ ಸುಖವಾಗಿರುವ ಕಾಲದಲ್ಲೂ ನಮ್ಮ ಸ್ವಭಾವ ಅದೇ ರೀತಿ ಇರಬೇಕಾದುದೇ ಆಗಿದೆ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದುಕೊಂಡ ಎಂಬ ಗಾದೆಯಂತೆ ಸುಖ ಬಂತೆಂದು ನಮ್ಮ ಕಷ್ಟಕಾಲದ ದಿನಗಳನ್ನು ಮರೆತು, ಆ ದಿನಗಳಲ್ಲಿನ ನಮ್ಮ ನಡೆಗಳನ್ನು ಮರೆತು ಹುಂಬರಂತೆ ವರ್ತಿಸಿದರೆ ಅದು ನಮಗೂ ಮತ್ತು ಸಮಾಜಕ್ಕೂ ಹಾನಿ ತರುವುದರಲ್ಲಿ ಸಂದೇಹವಿಲ್ಲ.
     ನಾವು ಪ್ರವರ್ಧಮಾನಕ್ಕೆ ಬರುವಲ್ಲಿ ಸುತ್ತಲಿನ ಸಮಾಜದ ಕೊಡುಗೆಯೂ ಇದೆಯೆಂಬುದನ್ನು ಅರಿವಿನಲ್ಲಿರಿಸಿಕೊಂಡು ನಾವು ಮುಂದೆ ಬಂದಂತೆ ಹಿಂದಿರುವ ಇತರರನ್ನೂ ಮುಂದೆ ಬರಲು ಸಹಕರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಋಗ್ವೇದದ ಈ ಮಂತ್ರದ ಕರೆ ಆಪ್ಯಾಯಮಾನವಾಗಿದೆ:   'ಉತ ದೇವಾ ಅವಹಿತಂ ದೇವಾ ಉನ್ನಯಥಾ ಪುನಃ | ಉತಾಗಶ್ಚಕ್ರುಷಂ ದೇವಾ ದೇವಾ ಜೀವಯಥಾ ಪುನಃ || (ಋಕ್.೧೦.೧೩೭.೧)' ಹೇ, ದಾನಶೀಲರಾದ ವಿದ್ವಾಂಸರೇ, ಕೆಳಗೆ ಬಿದ್ದವನನ್ನು ಮತ್ತೆ ಮೇಲಕ್ಕೆತ್ತಿರಿ. ಮತ್ತು ಪುಣ್ಯಾತ್ಮರೇ, ಪಾಪ ಮಾಡುವವನಲ್ಲಿ, ಮರಳಿ ಸರಿದಾರಿಗೆ ತಂದು ನವಜೀವನವನ್ನು ತುಂಬಿಸಿರಿ ಎಂಬುದು ಈ ಮಂತ್ರದ ಅರ್ಥ. ನಾವೂ ಒಂದೊಮ್ಮೆ ಕಷ್ಟಪಟ್ಟವರೇ ಅಲ್ಲವೇ? ಇತರರ ಕಷ್ಟಗಳಿಗೂ ಮರುಗೋಣ, ಸಹಾಯಹಸ್ತ ಚಾಚೋಣ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಸಮಚಿತ್ತದಲ್ಲಿ ನಡೆದರೆ ಅಂತಹ ವ್ಯಕ್ತಿ ಪರಿಪೂರ್ಣ ಮಾನವತ್ವದ ಕಡೆಗೆ ಹೆಜ್ಜೆಯಿಡುತ್ತಿದ್ದಾನೆ ಎಂದೇ ತಿಳಿಯಬೇಕು. ಮಹತ್ವದ ಸಂಗತಿಯೆಂದರೆ, ಕಷ್ಟಕಾಲದಲ್ಲಿ ನಾವು ಹೇಗೆ ಶಿಸ್ತಿನಿಂದ, ವಿನೀತತೆಯಿಂದ, ಸಂಯಮದಿಂದ ಇದ್ದೆವೋ ಅದೇ ರೀತಿ ಸುಖ ಬಂದಾಗಲೂ ನಡೆದುಕೊಂಡರೆ ನಮಗೆ ಕಷ್ಟಗಳೇ ಬರಲಾರವು!
-ಕ.ವೆಂ.ನಾಗರಾಜ್.