ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 14, 2017

ದಲಿತತ್ವದಿಂದ ಉನ್ನತಿಯೆಡೆಗೆ! - 4


     2014ರ ವರದಿಯೊಂದರ ಪ್ರಕಾರ ಸುಮಾರು ಶೇ.44.8ರಷ್ಟು ಪ.ಪಂ. ಮತ್ತು ಶೇ.33.8ರಷ್ಟು ಪ.ಜಾ.ಗಳವರು ಬಡತನದ ರೇಖೆಗಿಂತ ಕೆಳಗಿರುವವರಾಗಿದ್ದರು. ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸದ ಮಕ್ಕಳ ಪೈಕಿ ಶೇ.48ರಷ್ಟು ಮಕ್ಕಳು ದಲಿತವರ್ಗದವರು. ಬಿಸಿಯೂಟ ತಯಾರಿಸುವವರು ದಲಿತರಾಗಿದ್ದರೆ ದಲಿತರಲ್ಲದ ಮಕ್ಕಳು ಪೋಷಕರ ಸೂಚನೆಯಂತೆ ಊಟವನ್ನು ಸ್ವೀಕರಿಸಲು ನಿರಾಕರಿಸಿದ ಪ್ರಸಂಗಗಳೂ ಇವೆ. ದಲಿತರು ಮತ್ತು ದಲಿತೇತರರ ನಡುವಣ ಸಂಘರ್ಷಗಳು ನಡೆಯುತ್ತಿರುತ್ತವೆ. ಇದಕ್ಕೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ, ಜಮೀನು ವ್ಯಾಜ್ಯ, ಇತ್ಯಾದಿಗಳು ಕಾರಣವಾಗಿದ್ದು ಕೆಲವರ ಚಿತಾವಣೆಯಿಂದ ಎರಡೂ ಸಮುದಾಯಗಳಲ್ಲಿ ದ್ವೇಷ ಹೆಚ್ಚುವ ಪ್ರಸಂಗಗಳಿಗೆ ಕೊರತೆಯಿಲ್ಲ. ಪ.ಜಾ., ಪ.ಪಂ.ಗಳ ದೌರ್ಜನ್ಯ ತಡೆ ಕಾಯದೆಯ ದುರ್ಬಳಕೆಗಳ ಪ್ರಸಂಗಗಳೂ ವೈಷಮ್ಯ ಹೆಚ್ಚಳಕ್ಕೆ ಕಾರಣವಾದದ್ದೂ ಇದೆ. ಈ ಕಾಯದೆಯನ್ನು ಅರ್ಹ ಪ್ರಕರಣಗಳಲ್ಲೂ ಸಮರ್ಪಕವಾಗಿ ಬಳಸದಿರುವುದೂ ಸಹ ಇದೆ. ದಲಿತರಿಗೆ ಬಹಿಷ್ಕಾರ ವಿಧಿಸಿದ ಪ್ರಸಂಗಗಳೂ ಕಾಣಸಿಗುತ್ತಿರುತ್ತವೆ. ನಗರ ಪ್ರದೇಶಗಳಲ್ಲಿ ಅಷ್ಟಾಗಿ ಕಾಣಬರದಿದ್ದರೂ ಗ್ರಾಮೀಣ ಭಾಗಗಳಲ್ಲಿ ಜಾತಿಯ ಕಾರಣದಿಂದ ಭೇದಭಾವ ಮಾಡುತ್ತಿರುವುದು ಕಂಡುಬರುತ್ತದೆ. ಹೋಟೆಲ್ಲುಗಳು, ಶಾಲೆಗಳು, ದೇವಸ್ಥಾನಗಳು, ಸಾಂಪ್ರದಾಯಿಕ ಆಚರಣೆಗಳು, ಸಾರ್ವಜನಿಕ ನೀರಿನ ಮೂಲಗಳು, ಇತ್ಯಾದಿಗಳು ಜಾತಿ ಕಾರಣದಿಂದ ದಲಿತರಿಗೆ ಪ್ರವೇಶಕ್ಕೆ ಕಿರಿಕಿರಿ ಉಂಟುಮಾಡುವ ತಾಣಗಳಾಗಿವೆಯೆನ್ನಬಹುದು. ಅಂತರ್ಜಾತೀಯ ಪ್ರೇಮ ಪ್ರಕರಣಗಳೂ ದಲಿತರ ಮತ್ತು ಇತರರ ನಡುವಣ ಸಂಘರ್ಷಗಳಿಗೆ ಕಾರಣವಾಗಿವೆ. ಕೆಲವು ದಶಕಗಳ ಹಿಂದೆ ಇದ್ದ ಅಸ್ಪೃಷ್ಯತೆಯ ಆಚರಣೆಯ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದ್ದರೂ ಪೂರ್ಣ ನಿಂತಿಲ್ಲದಿರುವ ಉದಾಹರಣೆಗಳು ಕಾಣಸಿಗುತ್ತವೆ. ಆದರೂ ಅಸ್ಪೃಷ್ಯತೆ ಆಚರಣೆ ವಿರುದ್ಧದ ಜಾಗೃತಿ ಮೂಡುತ್ತಿರುವುದಂತೂ ಒಳ್ಳೆಯ ಬೆಳವಣಿಗೆಯೆನ್ನಬಹುದು.
     ಅನೇಕ ರೀತಿಯ ವೈವಿಧ್ಯಗಳಿಂದ, ವ್ಶೆರುದ್ಧ್ಯಗಳಿಂದ ಕೂಡಿದ ಹಿಂದೂ ಧರ್ಮದ ವಿಶಿಷ್ಟತೆಯಿಂದಾಗಿ ದಲಿತರ ತಾವು ಹಿಂದೂಗಳೋ, ಹಿಂದೂಯೇತರರೋ ಎಂಬ ಚರ್ಚೆ ಮುಂದುವರೆದೇ ಇದೆ. ಹಿಂದೂಗಳಲ್ಲಿ ದೇವರನ್ನು ನಂಬುವವರು, ನಂಬದವರು, ವಿವಿಧ ರೀತಿಯ ಆಚರಣೆಗಳು, ಸಂಪ್ರದಾಯಗಳನ್ನು ಆಚರಿಸುವವರು, ತಮ್ಮ ಆಚರಣೆ, ಸಂಪ್ರದಾಯಗಳೇ ಶ್ರೇಷ್ಠವೆನ್ನುವವರು, ಎಲ್ಲರೂ ಸಮಾನರು, ಎಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುವವರು, ಸಂಪ್ರದಾಯಗಳನ್ನು ಧಿಕ್ಕರಿಸುವವರು, ಹೀಗೆ ವಿವಿಧ ಮನೋಭಾವದವರೆಲ್ಲರೂ ಕಾಣಸಿಗುವುದು ವಿಶೇಷವಾಗಿದೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿರುವ ದಲಿತರಲ್ಲಿಯೇ 900ಕ್ಕೂ ಹೆಚ್ಚು ಉಪಜಾತಿಗಳಿದ್ದು ಭಿನ್ನ ಆಚರಣೆಗಳನ್ನು ಹೊಂದಿವೆ. ಪರಸ್ಪರರಲ್ಲಿ ವೈಮನಸ್ಯಗಳು ಸಹ ಕಾಣಬರುತ್ತವೆ. ಸಿಕ್ಖರಾಗಿ ಪರಿವರ್ತಿತ ಹೆಚ್ಚಿನ ದಲಿತರು ತಾವು ಇತರ ದಲಿತರಿಗಿಂತ ಮೇಲೆಂದು ಭಾವಿಸುವುದಲ್ಲದೆ ಪರಸ್ಪರರಲ್ಲಿ ವಿವಾಹ ಸಂಬಂಧ ಬೆಳೆಸಲು ಇಚ್ಛಿಸುವುದಿಲ್ಲ. ಒಬ್ಬ ಹಿರಿಯ ನಾಯಕರು ದಲಿತರನ್ನು ಜಾತಿಪದ್ಧತಿ ವಿರುದ್ಧ ಒಗ್ಗೂಡಿಸುವುದಕ್ಕಿಂತ ಜಾತಿ ಆಧಾರದಲ್ಲಿ ಸಂಘಟಿಸುವುದು ಸುಲಭವೆಂದು ಹೇಳಿದುದರಲ್ಲಿ ಸತ್ಯಾಂಶವಿದೆ.
     ಸಿಕ್ಖರು ಜಾತಿಪದ್ಧತಿಯನ್ನು ಒಪ್ಪುವುದಿಲ್ಲವಾದರೂ ಸಾಮಾನ್ಯವಾಗಿ ಜಾತಿ ಮೀರಿ ವಿವಾಹ ಸಂಬಂಧಗಳನ್ನು ಮಾಡುವುದಿಲ್ಲ. ಸಿಕ್ಖರಾಗಿರುವ ದಲಿತರನ್ನು ಸಿಕ್ಖರಲ್ಲಿನ ಒಂದು ವರ್ಗವೆಂದು ಗುರುತಿಸಲಾಗುತ್ತಿದೆ. ಬಹುಜನ ಸಮಾಜ ಪಕ್ಷದ ಸ್ಥಾಪಕ ಶ್ರೀ ಕಾನ್ಶೀರಾಮರು ಸಿಖ್ ಮೂಲದವರಾಗಿದ್ದರೂ ಬೌದ್ಧದರ್ಮವನ್ನು ಸ್ವೀಕರಿಸಿರದಿದ್ದರೂ ಅದನ್ನು ಪಾಲಿಸುತ್ತಿದ್ದರು. 70 ವರ್ಷಗಳ ಹಿಂದೆ ಸ್ಥಾಪಿತವಾದ ದೇರಾ ಸಚ್ ಖಂಡ್‌ನ ಈಗಿನ ಮುಖ್ಯಸ್ಥ ಸಂತ ನಿರಂಜನ ದಾಸರಾಗಿದ್ದು ಈ ಸಂಸ್ಥೆಗೆ ದಲಿತಸಿಕ್ಖರು ಲಕ್ಷಾಂತರ ಸಂಖ್ಯೆಯಲ್ಲಿ ಅನುಯಾಯಿಗಳಾಗಿದ್ದಾರೆ. ದಲಿತ ಸಿಕ್ಖರು ಮತ್ತು ದಲಿತೇತರ ಸಿಕ್ಖರಲ್ಲಿಯೂ ಸಹ ಕೆಲವೆಡೆ ಸಂಘರ್ಷಗಳಾದ ಉದಾಹರಣೆಗಳಿವೆ. ದೇರಾ ಸಚ್ ಖಂಡ್ ನಾಯಕ ರಮಾನಂದ ದಾಸರ  ಕೊಲೆ (24.5.2009) ಇಂತಹ ಸಂಘರ್ಷದ ಪರಿಣಾಮವಾಗಿತ್ತು.
     ಕ್ರಿಶ್ಚಿಯನರಲ್ಲೂ ಸಹ ಜಾತಿ ಪದ್ಧತಿ ದಕ್ಷಿಣ ಭಾರತದಲ್ಲಿ ಜಾರಿಯಲ್ಲಿದೆ. ದಲಿತ ಕ್ರಿಶ್ಚಿಯನರಿಗೆ ತಾರತಮ್ಯ ನೀತಿಯ ಬಿಸಿ ತಟ್ಟದೇ ಇಲ್ಲ. 1992ರಲ್ಲಿನ ಒಂದು ಅಧ್ಯಯನದಲ್ಲಿ ತಮಿಳುನಾಡಿನಲ್ಲಿ ಅವರಿಗೆ ಪ್ರತ್ಯೇಕ ಚರ್ಚುಗಳು, ಪ್ರತ್ಯೇಕ ಸ್ಮಶಾನಗಳಿದ್ದು ಅವರು ಪ್ರತ್ಯೇಕವಾಗಿ ಆಚರಣೆಗಳನ್ನು ಆಚರಿಸಬೇಕಾಗಿದ್ದ ಬಗ್ಗೆ ಹೇಳಲಾಗಿದೆ. ಆಕರ್ಷಣೆ ಮತ್ತು ಸವಲತ್ತುಗಳ ಆಮಿಷ ಒಡ್ಡಿ ದಲಿತರ ಬಡತನ ಮತ್ತು ಶಿಕ್ಷಣದ ಕೊರತೆಯನ್ನು ಬಂಡವಾಳ ಮಾಡಿಕೊಂಡು ಕ್ರಿಶ್ಚಿಯನರಾಗಿ ಮತಾಂತರ ಮಾಡಲಾಗುತ್ತಿದೆಯೆಂಬ ಆರೋಪವೂ ಕೇಳಿಬರುತ್ತಿದೆ.
     ಓಟ್ ಬ್ಯಾಂಕ್ ರಾಜಕಾರಣಗಳಿಗೆ ದಲಿತರು ದಾಳವಾಗಿ ಬಳಸಲ್ಪಡುತ್ತಿದ್ದಾರೆ ಎಂಬುದು ಬಹಳವಾಗಿ ಕೇಳಿಬರುವ ಮಾತು. ವಿಶೇಷವಾಗಿ ಕಾಂಗ್ರೆಸ್ ಕುರಿತು ಈ ಮಾತು ಕೇಳಿಬರುತ್ತಿದ್ದು, ಇದೀಗ ಭಾ.ಜ.ಪ. ಸಹ ಹಿಂದೆ ಬಿದ್ದಿಲ್ಲ. 2014ರ ಸಮೀಕ್ಷೆಯಂತೆ ಶೇ. 24ರಷ್ಟು ದಲಿತರು ಭಾಜಪವನ್ನು ಬೆಂಬಲಿಸಿದ್ದರು (2009ರಲ್ಲಿ ಈ ಪ್ರಮಾಣ ಶೇ.12ರಷ್ಟಿತ್ತು) ಮತ್ತು ಕಾಂಗ್ರೆಸ್ ಪಕ್ಷ ಹಿಂದೆ ಬಿದ್ದು ಶೇ. 19ರಷ್ಟು ಬೆಂಬಲ ಗಳಿಸಿತ್ತು. ಬಹುಜನಸಮಾಜ ಪಕ್ಷ ಶೇ. 14ರಷ್ಟು ಬೆಂಬಲ ಗಳಿಸಿದ್ದರೆ, ಪಂಜಾಬಿನಲ್ಲಿ ಶೇ. 21ರಷ್ಟು ಮತ್ತು ದೆಹಲಿಯಲ್ಲಿ ಶೇ.40ಕ್ಕೂ ಹೆಚ್ಚು ದಲಿತರು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿದ್ದರು. ದಲಿತ ಮತದಾರರನ್ನು ಯಾವ ಪಕ್ಷವೂ ಕಡೆಗಣಿಸುವಂತಿಲ್ಲವೆಂದು ಈ ಸಮೀಕ್ಷೆ ತೋರಿಸಿದೆ.
     ವಚನ ಸಾಹಿತ್ಯದ ಪಿತಾಮಹನೆಂದು ಕೆಲವು ವಿದ್ವಾಂಸರು ಪರಿಗಣಿಸಿರುವ ಮಾದರ ಚನ್ನಯ್ಯ ಮೊದಲ ದಲಿತ ಸಾಹಿತಿಗಳಲ್ಲಿ ಒಬ್ಬರಾಗಿದ್ದು, 11ನೆಯ ಶತಮಾನದ ಚಾಲುಕ್ಯರ ಆಡಳಿತ ಕಾಲದಲ್ಲಿದ್ದವರು. ಡೋಹರ ಕಕ್ಕಯ್ಯನ ರಚನೆಗಳೂ ಗಮನ ಸೆಳೆಯುತ್ತವೆ. 1984ರಲ್ಲಿ ಬಾಬು ಜಗಜೀವನರಾಮರು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದರು. ಮಹಾತ್ಮ ಫುಲೆ ಮತ್ತು ಬಾಬಾಸಾಹೇಬ ಅಂಬೇಡ್ಕರರ ದಲಿತರ ಸ್ಥಾನಮಾನಗಳು, ಸಮಸ್ಯೆಗಳು, ಪರಿಹಾರಗಳ ಕುರಿತ ಅನೇಕ ಬರಹಗಳು, ಗ್ರಂಥಗಳು ಅನೇಕ ಭಾಷೆಗಳಲ್ಲಿ ಅನುವಾದಿತಗೊಂಡು ಮಹತ್ವ ಪಡೆದಿವೆ. ಇವರುಗಳಿಂದ ಪ್ರೇರಣೆಗೊಂಡ ಅನೇಕ ಸಾಹಿತಿಗಳು ದಲಿತ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.

ಗುರುವಾರ, ಜುಲೈ 13, 2017

ದಲಿತತ್ವದಿಂದ ಉನ್ನತಿಯೆಡೆಗೆ! - 3


     ಸಂತ ಧ್ಯಾನೇಶ್ವರ, ಏಕನಾಥ ಮೊದಲಾದವರು ದಲಿತರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದ್ದರಿಂದ ಅವರು ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದರು. ಭಕ್ತಿಪಂಥದ ಕಾಲದಲ್ಲಿ ಮೇಲುಜಾತಿಯ ಅನೇಕ ಸಂತರುಗಳು ಸಾಮಾಜಿಕ ನ್ಯಾಯದ ಪರವಾಗಿದ್ದರು. ಕಿರುಕುಳಕ್ಕೆ ಒಳಗಾದ ಕನಕದಾಸರು ಮತ್ತು ಇತರರಿಗೆ ಕೊನೆಗೆ ಮಾನ್ಯತೆಯೂ ದಕ್ಕಿತ್ತು. ಅಂಬೇಡ್ಕರರ ಪ್ರೇರಣೆಯಿಂದಾಗಿ ದಲಿತರಲ್ಲಿ ಬೌದ್ಧ ಮತದ ಕುರಿತು ಒಲವು ಕಂಡುಬರುತ್ತಿದೆ. ಜಮ್ನಾಲಾಲ್ ಬಜಾಜರು ಅಸ್ಪೃಷ್ಯತೆ ನಿವಾರಣೆಗಾಗಿ ತಮ್ಮದೇ ಆದ ರೀತಿಯಲ್ಲಿ ಹೋರಾಡಿದವರು. ದೇವಸ್ಥಾನಗಳಿಗೆ ಪ್ರವೇಶಕ್ಕಾಗಿ ಜನರನ್ನು ಜಾಗೃತಿಗೊಳಿಸಿದರು. ದಲಿತರಿಗಾಗಿಯೇ ತಮ್ಮ ಜಮೀನು ಮತ್ತು ತೋಟಗಳಲ್ಲಿ ಸಾರ್ವಜನಿಕ ಬಾವಿಗಳನ್ನು ತೋಡಿಸಿದರು. ತಮ್ಮ ಹೆಚ್ಚಿನ ಸಂಪತ್ತನ್ನು ದೀನ ದಲಿತರ ಸಲುವಾಗಿ ವಿನಿಯೋಗಿಸಿದವರು.
     ಭಾರತದ ಸಂವಿಧಾನವಾಗಲೀ, ಯಾವುದೇ ಕಾನೂನು, ಕಾಯದೆಗಳಾಗಲೀ ದಲಿತರ ವಿರುದ್ಧ ತಾರತಮ್ಯ ತೋರಿಸಿಲ್ಲ, ಅದಕ್ಕೆ ಅವಕಾಶವನ್ನೂ ಕೊಟ್ಟಿಲ್ಲ. ಬದಲಾಗಿ ಅವರ ಅಭಿವೃದ್ಧಿಯ ಸಲುವಾಗಿ ಮೀಸಲಾತಿ ನೀತಿಯನ್ನು ಜಾರಿಗೊಳಿಸಿದೆ, ವಿಶೇಷ ಸವಲತ್ತುಗಳನ್ನು ಅನೇಕ ಯೋಜನೆಗಳ ಮೂಲಕ ಒದಗಿಸುತ್ತಿದೆ. ದಲಿತರ ವಿರುದ್ಧದ ದೌರ್ಜನ್ಯ, ತಾರತಮ್ಯ ಮತ್ತು ಇತರ ಅಪರಾಧಗಳ ತಡೆಗಾಗಿ 1995ರಲ್ಲಿ ಪ.ಜಾ. ಪ.ಪಂ. ದೌರ್ಜನ್ಯ ತಡೆ ಕಾಯದೆ ಜಾರಿಗೆ ಬಂದಿದೆ. ಸರ್ಕಾರಿ ನೇಮಕಾತಿಗಳಲ್ಲಿ, ಶಿಕ್ಷಣ ರಂಗದಲ್ಲಿ, ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ದಲಿತರಿಗೆ ಮೀಸಲಾತಿ ಸೌಲಭ್ಯ ನೀಡಲಾಗಿದೆ. ಮೀಸಲಾತಿ ಪದ್ಧತಿಯನ್ನು ಮೊದಲು ಜಾರಿಗೆ ತಂದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಕೇವಲ 20 ವರ್ಷಗಳಿಗೆ ಮಿತಿಗೊಳಿಸಲು ನಿರ್ಧರಿಸಲಾಗಿತ್ತು. ಇದನ್ನು ಈಗಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ವಿಪರ್ಯಾಸವೆಂದರೆ ಇನ್ನೂ ಹತ್ತು ಹಲವು ಜಾತಿಗಳನ್ನು ಈ ವ್ಯಾಪ್ತಿಗೆ ಸೇರಿಸಲು ಒತ್ತಡ ತರಲಾಗುತ್ತಿದೆ. ಒಳಮೀಸಲಾತಿಗೂ ಒತ್ತಾಯಿಸಲಾಗುತ್ತಿದೆ. ಇದರ ಫಲಶೃತಿ ಎಂಬಂತೆ ಹಿಂದುಳಿದ ಇತರ ಜಾತಿಗಳವರಿಗೂ ಮೀಸಲಾತಿ ಸೌಲಭ್ಯ ಕೊಡಲಾಗುತ್ತಿದೆ. ಮುಸಲ್ಮಾನರಿಗೂ ಪ್ರತ್ಯೇಕ ಮೀಸಲಾತಿಗೆ ರಾಜಕೀಯ ಪಕ್ಷಗಳೇ ಆತುರ ತೋರುತ್ತಿವೆ. ಇತ್ತೀಚಿನ ರಾಜ್ಯ ಸರ್ಕಾರ ನಡೆಸಿದ ಜಾತಿಗಣತಿಯ ಸೋರಿಕೆಯಾದ ಅಂಕಿ-ಅಂಶಗಳಂತೆ ಕರ್ನಾಟಕದಲ್ಲಿ ಮುಸ್ಲಿಮರು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿಗಳ ಪೈಕಿ ಎರಡನೆಯ ಸ್ಥಾನದಲ್ಲಿದ್ದರೂ, ಅವರು ಅಲ್ಪ ಸಂಖ್ಯಾತರೆಂದು ಕರೆಸಿಕೊಳ್ಳುತ್ತಾರೆ! ಸರ್ವೋಚ್ಛ ನ್ಯಾಯಾಲಯ ಮೀಸಲಾತಿ ಶೇ.50ಕ್ಕೆ ಮೀರಬಾರದೆಂದು ನಿರ್ಬಂಧ ಹೇರಿರದೇ ಇದ್ದಿದ್ದರೆ ಇದು ಎಲ್ಲಿಗೆ ಮುಟ್ಟುತ್ತಿತ್ತೋ ದೇವರೇ ಬಲ್ಲ. ಹಿಂದುಳಿದವರನ್ನು ಮುಂದೆ ತರುವ ಉದ್ದೇಶದ ಮೀಸಲಾತಿಯನ್ನು ದುರ್ಬಳಕೆಗಾಗಿ, ರಾಜಕೀಯ ಕಾರಣಗಳಿಗಾಗಿ ಬಳಸುತ್ತಿರುವ ಕಾರಣದಿಂದ ಪ್ರಬಲ ಜಾತಿಗಳೆನಿಸಿಕೊಂಡವರೂ ಮೀಸಲಾತಿ ಬಯಸಿ ಹಿಂಸಾತ್ಮಕ ಚಳುವಳಿ ನಡೆಸುತ್ತಿರುವದನ್ನು ಕಾಣುತ್ತಿದ್ದೇವೆ. ಇರುವ ನೂರಾರು, ಸಾವಿರಾರು ಜಾತಿ ಉಪಜಾತಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳವರು, ಹಿಂದುಳಿದವರು ಇತ್ಯಾದಿ ಹಣೆಪಟ್ಟಿಗಳಲ್ಲಿ ಜಾತಿಯ ಕಾರಣದಿಂದ ಸೌಲಭ್ಯ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಜಾತಿಯ ಕಾರಣದಿಂದ ಯಾವುದೇ ವಿಶೇಷ ಸೌಲಭ್ಯ ಪಡೆಯದಿರುವ ಜಾತಿಗಳನ್ನು ಬೆರಳೆಣಿಕೆಯಲ್ಲಿ ಎಣಿಸಬಹುದು! ಅಂತಹವರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ. 10ರ ಒಳಗೇ ಬಂದರೂ ಆಶ್ಚರ್ಯವಿಲ್ಲ. ಇವರುಗಳಿಗೆ ಅರ್ಹತೆಯಿದ್ದರೂ ಮೀಸಲಾತಿಯ ನೀತಿಯಿಂದಾಗಿ ಅವಕಾಶಗಳಿಂದ ವಂಚಿತರಾಗಿರುವ ಪ್ರಸಂಗಗಳು ಕಡಿಮೆಯಲ್ಲ. ವಿದೇಶಗಳಿಗೆ ಇಂತಹವರ ಪ್ರತಿಭಾಪಲಾಯನಕ್ಕೂ ಇದು ಎಡೆ ಮಾಡಿರುವುದು ಸುಳ್ಳಲ್ಲ. ಮೀಸಲಾತಿ ನೀತಿಯಿಂದ ಅನುಕೂಲಗಳಿರುವಂತೆ ಅನಾನುಕೂಲಗಳೂ ಇವೆ. ಇದನ್ನು ಅವ್ಶೆಜ್ಞಾನಿಕ ರೀತಿಯಲ್ಲಿ ಜಾರಿಗೆ ತಂದಿರುವುದು ಹಿನ್ನಡೆಗೆ ಕಾರಣವೂ ಆಗಿದೆಯೆಂದರೆ ತಪ್ಪಲ್ಲ. ಇದು ದೊಡ್ಡ ಚರ್ಚೆಯ ವಿಷಯವೆಂಬುದರಲ್ಲಿ ಅನುಮಾನವಿಲ್ಲ.
     ರಾಜಕೀಯವಾಗಿ ದಲಿತರಿಗೂ ಅಧಿಕಾರದ ಸವಿ ಸಿಕ್ಕಿದೆ. ದಲಿತರಿಗಾಗಿಯೇ ಮೀಸಲಾದ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಿದ್ದು ಅನೇಕ ಪ್ರಭಾವಿ ರಾಜಕಾರಣಿಗಳು ಹೊರಹೊಮ್ಮಿದ್ದಾರೆ, ಹೊರಹೊಮ್ಮುತ್ತಿದ್ದಾರೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲೂ ಮೀಸಲಾತಿಯ ಸೌಲಭ್ಯ ಅವರಿಗೆ ಸಿಕ್ಕಿದೆ. ಈ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೂ ಮೀಸಲಾತಿ ಸೌಲಭ್ಯ ವಿಸ್ತರಣೆಯಾಗಿದೆ.  1997ರಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಶ್ರೀ ಕೆ.ಆರ್. ನಾರಾಯಣನ್ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಉತ್ತರಪ್ರದೇಶದಲ್ಲಂತೂ ದಲಿತರು ಕ್ರಾಂತಿಯನ್ನೇ ಉಂಟುಮಾಡಿದ್ದರು. ದಲಿತರ ನೇತೃತ್ವದ ಬಹುಜನಸಮಾಜ ಪಕ್ಷದ ನೇತಾರೆ ಮಾಯಾವತಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ದಾಮೋದರಮ್ ಸಂಜೀವಯ್ಯ 1960-62ರ ಅವಧಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಜಿತನ್ ರಾಮ್ ಮಾಂಜಿಯವರು ಒಂದು ವರ್ಷದ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ತಾವು ಹೇಳಿದಂತೆ ಕೇಳುತ್ತಾರೆಂದು ಭಾವಿಸಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ್ದ ನಿತೀಶಕುಮಾರರು ಮಾಂಜಿ ತಮ್ಮ ಕೈಗೊಂಬೆಯಾಗದಿದ್ದರಿಂದ ಅವರನ್ನು ಕೆಳಗಿಳಿಸಿ ಮತ್ತೆ ತಾವೇ ಮುಖ್ಯಮಂತ್ರಿಯಾದರು. ಬಾಬು ಜಗಜೀವನರಾಮರು ಉಪಪ್ರಧಾನ ಮಂತ್ರಿಯಾಗಿದ್ದರು. ಅವರ ಪುತ್ರಿ ಶ್ರೀಮತಿ ಮೀರಾಕುಮಾರಿ ಲೋಕಸಭೆಯ ಸ್ಪೀಕರ್ ಆಗಿದ್ದರು. ದಲಿತರ ರಾಜಕೀಯ ಪಕ್ಷಗಳಾಗಿ ಬಹುಜನ ಸಮಾಜ ಪಕ್ಷ, ಮಹಾರಾಷ್ಟ್ರದಲ್ಲಿ ರಿಪಬ್ಲಿಕನ್ ಪಾರ್ಟಿ, ತಮಿಳುನಾಡಿನಲ್ಲಿ ವಿದುತಲೈ ಚಿರುತಾಯಿಗಳ್ ಕಚ್ಚಿ, ಅಂಬೇಡ್ಕರರ ಮೊಮ್ಮಗ ಶ್ರೀ ಪ್ರಕಾಶ ಯಶವಂತ್ ಅಂಬೇಡ್ಕರ್ ಸ್ಥಾಪಿಸಿದ ಭಾರಿಪ ಬಹುಜನ ಮಹಾಸಂಘ, ಬಿಹಾರದ ಲೋಕ ಜನಶಕ್ತಿ ಪಾರ್ಟಿಗಳು ಮುಂಚೂಣಿಯಲ್ಲಿವೆ. ಬಂಗಾರು ಲಕ್ಷ್ಮಣ್, ಕಲ್ಯಾಣಸಿಂಗ್(ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದವರು), ರಾಮಚಂದ್ರ ವೀರಪ್ಪ, ಡಾ. ಸೂರಜ್ ಭಾನ್ ಮೊದಲಾದ ದಲಿತ ನಾಯಕರು ಭಾ.ಜ.ಪ.ದ ಹಿರಿಯ ನಾಯಕರುಗಳ ಪಟ್ಟಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆ (ಲೋಕಸಭೆಯ ವಿಪಕ್ಷ ನಾಯಕ), ಪರಮೇಶ್ವರ್ (ಕ.ಕಾಂಗ್ರೆಸ್ ಅಧ್ಯಕ್ಷ, ಗೃಹಮಂತ್ರಿ) ಮೊದಲಾದವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. 
     ದಿ. ಇ.ವಿ.ರಾಮಸ್ವಾಮಿ ಪೆರಿಯಾರರ ಪ್ರಭಾವ ತಮಿಳುನಾಡಿನಲ್ಲಿ ಇಂದಿಗೂ ಕಾಣಬರುತ್ತದೆ. ಸಾಮಾಜಿಕ ಹೋರಾಟಗಾರರಾಗಿದ್ದ ಇವರು ಸ್ವಾಭಿಮಾನ ಆಂದೋಳನದ ಹರಿಕಾರರಾಗಿ ದ್ರಾವಿಡ ಚಳುವಳಿ ಉತ್ತೇಜಿಸಿದವರು. ದಕ್ಷಿಣ ಭಾರತವನ್ನೊಳಗೊಂಡ ಸ್ವತಂತ್ರ ದ್ರಾವಿಡಸ್ಥಾನದ ಕನಸು ಕಂಡವರು. ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ದ್ರಾವಿಡ ಕಳಗಂ ಸ್ಥಾಪಕರು. ತಮಿಳುನಾಡಿನ ಇಂದಿನ ಅನೇಕ ರಾಜಕೀಯ ಪಕ್ಷಗಳು ದ್ರಾವಿಡ ಕಳಗಂನಿಂದ ವಿಭಜನೆಗೊಂಡಿದ್ದರೂ ಇವರ ವಿಚಾರದ ಆಧಾರದಲ್ಲಿ ಅಧಿಕಾರದ ರುಚಿ ಅನುಭವಿಸುತ್ತಿವೆ.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.

ಶನಿವಾರ, ಜುಲೈ 8, 2017

ದಲಿತತ್ವದಿಂದ ಉನ್ನತಿಯೆಡೆಗೆ! - 2


     ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಆಚಾರ್ಯ ವಿನೋಬಾಭಾವೆಯವರ ಭೂದಾನ ಆಂದೋಳನ ಒಂದು ಕ್ರಾಂತಿಯನ್ನೇ ಉಂಟುಮಾಡಿತ್ತೆನ್ನಬಹುದು. ದೇಶಾದ್ಯಂತ ಸಂಚರಿಸಿದ ಅವರು ಉಳ್ಳವರಿಂದ ಭೂದಾನ ಪಡೆದು ಅದನ್ನು ದೀನ ದಲಿತರಿಗೆ ಹಂಚುವ ಮಹತ್ಕಾರ್ಯ ಮಾಡಿ ಅನೇಕ ದಲಿತರ ಸ್ವಾಭಿಮಾನಿ ಬದುಕಿಗೆ ಆಶ್ರಯವಾದವರು. ಸಾಮಾಜಿಕ ನ್ಯಾಯ ಒದಗಿಸುವ ಅತ್ಯಂತ ಸುಂದರಮಾರ್ಗವಿದಾಗಿತ್ತು. ಬಲವಂತದಿಂದ, ಹಿಂಸೆಯಿಂದ ಸಾಧ್ಯವಾಗದುದು ಮನವೊಲಿಕೆಯಿಂದ ಸಾಧ್ಯವೆಂಬುದನ್ನು ತೋರಿಸಿಕೊಟ್ಟಿದ್ದವರು ವಿನೋಬಾಜಿ. ಅವರು 1975-77ರ ತುರ್ತುಪರಿಸ್ಥಿತಿಯನ್ನು ಬೆಂಬಲಿಸಿದ್ದ ದೂಷಣೆಗೆ ಒಳಗಾಗಿದ್ದೂ ಇತ್ತು. ಆದರೆ ಅವರ ಉದ್ದೇಶ ಜನರು ಮತ್ತು ಆಳುವವರು ಇಬ್ಬರೂ ಕಾನೂನನ್ನು ಗೌರವಿಸಬೇಕೆಂಬುದಾಗಿದ್ದು, ಇದನ್ನು ಆ ಸಮಯದಲ್ಲಿ ಆಡಳಿತದಲ್ಲಿದ್ದವರು ಜನರನ್ನು ದಾರಿತಪ್ಪಿಸಲು ಅವರ ಹೇಳಿಕೆಯನ್ನು ಭಾಗಶಃ ಬಳಸಿಕೊಂಡಿದ್ದರು.
     ಮದರ್ ತೆರೇಸಾ ಅವರು ಬಡಜನರ ಸೇವೆ ಮಾಡಿ ಹೆಸರಾದವರು. ಬಡವರಲ್ಲಿ ಬಡವರ, ಕಾಯಿಲೆಯಿಂದ ನರಳುತ್ತಿದ್ದವರ, ಸಾಯುವ ಸ್ಥಿತಿಯಲ್ಲಿದ್ದ ಜನರ ಆರೈಕೆ ಮಾಡಿದ್ದವರು. ಅನಾಥರ, ನೆರವು ಸಿಗದವರ ಆಶಾಕಿರಣವಾಗಿದ್ದ ಅವರ ವಿರುದ್ಧ ಸೇವೆಯ ಹೆಸರಿನಲ್ಲಿ ಮತಾಂತರ ಮಾಡಿದವರೆಂಬ ಆರೋಪವೂ ಇದೆ. ಅವರಿಗೆ ನೊಬೆಲ್ ಪ್ರಶಸ್ತಿಯೂ ಕೊಡಲ್ಪಟ್ಟಿತ್ತು.
     ಸ್ವಾಮಿ ವಿವೇಕಾನಂದರಂತೂ ದೀನದಲಿತರ ಪರವಾಗಿ ಬಲವಾದ ದ್ವನಿ ಎತ್ತಿದವರು. ಕಟುವಾದ ನುಡಿಗಳಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಅನಿಷ್ಟ ಆಚರಣೆಗಳನ್ನು ಖಂಡಿಸಿದ್ದವರು. 'ದರಿದ್ರದೇವೋಭವ' ಎಂದು ಘೋಷಿಸಿ ಜಾಗೃತಿ ಮೂಡಿಸಿದ್ದವರು. ಎಲ್ಲಾ ನ್ಯೂನತೆಗಳ ನಡುವೆಯೂ ಬದಲಾವಣೆಗೆ ತೆರೆದುಕೊಳ್ಳಬಲ್ಲ ಹಿಂದೂಧರ್ಮದ ಶ್ರೇಷ್ಠತೆಯನ್ನು ಜಗತ್ತಿನಲ್ಲಿ ಎತ್ತಿ ಹಿಡಿದ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ.
     ಮಹರ್ಷಿ ದಯಾನಂದ ಸರಸ್ವತಿಯವರು ಸಾಮಾಜಿಕ-ಧಾರ್ಮಿಕ ಜಗತ್ತಿನಲ್ಲಿ ಪ್ರಬಲ ಅಲೆಯನ್ನೆಬ್ಬಿಸಿದವರು. 'ವೇದಗಳಿಗೆ ಹಿಂತಿರುಗಿ' ಎಂಬ ಘೋಷವಾಕ್ಯದೊಂದಿಗೆ ಜಾತಿಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದ ಅವರು 1875ರಲ್ಲಿ ಆರ್ಯಸಮಾಜವನ್ನು ಸ್ಥಾಪಿಸಿ ಪುರಾಣಗಳು, ಮೂರ್ತಿಪೂಜೆ ಮತ್ತು ಅಂಧ ಸಂಪ್ರದಾಯಗಳನ್ನು ಕಟುವಾಗಿ ವಿರೋಧಿಸಿದರು. ಜನರನ್ನು ಹುಟ್ಟಿನ ಜಾತಿಯ ಆಧಾರದಲ್ಲಿ ಗುರುತಿಸುವುದು ತಪ್ಪೆಂದು, ಅವರು ಆಚರಿಸುವ ವೃತ್ತಿ ಮತ್ತು ಕೆಲಸಗಳಿಂದ ಮಾತ್ರ ಗುರುತಿಸಬೇಕೆಂದು ಪ್ರತಿಪಾದಿಸಿದವರು. ಅಸ್ಪೃಷ್ಯತೆ, ಬಾಲ್ಯವಿವಾಹಗಳ ವಿರುದ್ಧ ಅಭಿಯಾನ ಮಾಡಿದವರು. ಅಂತರ್ಜಾತೀಯ ವಿವಾಹ, ವಿಧವಾ ವಿವಾಹಗಳಿಗೆ ಪ್ರೋತ್ಸಾಹವಿತ್ತ ಅವರು ಎಲ್ಲಾ ಜಾತಿಗಳವರೂ ಮತ್ತು ಮಹಿಳೆಯರೂ ವೇದದ ಕಲಿಕೆ ಮಾಡಲು ಹಕ್ಕುಳ್ಳವರೆಂದು ಸಾಧಾರವಾಗಿ ನಿರೂಪಿಸಿದ್ದಲ್ಲದೆ ಪ್ರತ್ಯಕ್ಷ ಆಚರಣೆಗೂ ತಂದವರು. ಕ್ರಿಶ್ಚಿಯನ್ ಮತ್ತು ಇಸ್ಲಾಮ್ ಮತಗಳಿಗೆ ಮತಾಂತರಗೊಂಡವರನ್ನು ಮರಳಿ ಹಿಂದೂಧರ್ಮಕ್ಕೆ ಕರೆತರುವ ಶುದ್ಧೀಕರಣ ಕಾರ್ಯಕ್ಕೂ ಅವರು ಚಾಲನೆ ಕೊಟ್ಟವರು, ಭಾರತ ಭಾರತೀಯರದು ಎಂದವರು. ಅವರ ನಿಷ್ಠುರ ಮಾತು, ನಡಳಿಕೆಗಳನ್ನು ಸಹಿಸದ ವಿರೋಧಿಗಳಿಂದ ಅವರನ್ನು ಹತ್ಯೆ ಮಾಡುವ ಪ್ರಯತ್ನಗಳು ಹಲವು ಸಲ ನಡೆದಿದ್ದವು. ಕೊನೆಗೂ ಅವರು ವಿಷಪ್ರಾಶನಕ್ಕೆ ಬಲಿಯಾಗಬೇಕಾಯಿತು.
     ಜ್ಯೋತಿಬಾ ಫುಲೆಯವರು ಬ್ರಾಹ್ಮಣ ಜನಾಂಗದವರಾಗಿದ್ದು ಅಸ್ಪೃಷ್ಯತೆಯ ಆಚರಣೆಯ ಕಡುವಿರೋಧಿಯಾಗಿದ್ದಲ್ಲದೆ ಜಾತಿಬೇಧ ಮಾಡದೆ ಎಲ್ಲಾ ಸಮುದಾಯದವರಿಗಾಗಿ ಶಾಲೆ ತೆರೆದಿದ್ದವರು. ಸತ್ಯಶೋಧಕ ಸಮಾಜ ಸ್ಥಾಪಿಸಿ ಜಾತಿರಹಿತ ಸಮಾಜಕ್ಕಾಗಿ ದುಡಿದವರು. ಅಸ್ಪೃಷ್ಯರನ್ನು ದಲಿತ ಎಂಬ ಪದದಿಂದ ಮೊಟ್ಟಮೊದಲಿಗೆ ಸಂಬೋಧಿಸಿದವರು ಇವರೇ! ಇವರೂ ಸಹ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಜಾಗೃತಿ ಮೂಡಿಸಲು ಶ್ರಮಿಸಿದವರು.
     1958ರಲ್ಲಿ ಉದಯಪುರದ ಖಾಟಿಕ್ ಸಮುದಾಯದವರು ಜೈನಮುನಿ ಸಮೀರ ಮುನಿಯವರ ಪ್ರೇರಣೆಯಿಂದ ಜೈನರಾದರು. ದಲಿತ ಸಮುದಾಯಕ್ಕೆ ಸೇರಿದ 22 ವರ್ಷದ ತರುಣ 2005ರಲ್ಲಿ ಜಾಲೋರಿನಲ್ಲಿ ಜೈನಮುನಿಯಾಗಿ ದೀಕ್ಷೆ ಪಡೆದರೆ, 2010ರಲ್ಲಿ ಮಹರ್ ಜನಾಂಗದ ಇಂಜನಿಯರ್ ವಿಶಾಲ್ ದಾಮೋದರ್ ಸಮೇತ್ ಶಿಖರಿನಲ್ಲಿ ಜೈನ ಸನ್ಯಾಸಿಯಾದರು. 1984ರಲ್ಲಿ ಜೋಧಪುರದ ಭಂಗಿ ಸಮುದಾಯದವರು ಆಚಾರ್ಯ ತುಳಸಿಯವರ ಪ್ರಭಾವದಿಂದ ಜೈನ ಧರ್ಮ ಸ್ವೀಕರಿಸಿದರು.
     ಬ್ರಹ್ಮಸಮಾಜ, ಆರ್ಯಸಮಾಜ, ರಾಷ್ಟ್ರೀಯ ಸ್ವಯಂಸೇವಕ ಸಂಘ, ರಾಮಕೃಷ್ಣ ಮಿಷನ್‌ಗಳು ದಲಿತರನ್ನು ಸಾಮಾಜಿಕ ಬಹಿಷ್ಕಾರಗಳಿಂದ ಮುಕ್ತಿಗೊಳಿಸಲು ಮತ್ತು ಎಲ್ಲರಂತೆ ಒಂದು ಎಂಬ ಅಭಿಪ್ರಾಯ ಕ್ರೋಢೀಕರಣ ಮತ್ತು ಜಾಗೃತಿಗಾಗಿ ಅಪೂರ್ವವಾಗಿ ಶ್ರಮಿಸಿವೆ, ಶ್ರಮಿಸುತ್ತಿವೆ. ದಲಿತರು ತಮ್ಮದೇ ಆದ ಪೂಜಾಸ್ಥಳಗಳನ್ನು ಹೊಂದಿದ್ದರೂ, 1928ರಿಂದ ಪ್ರಥಮವಾಗಿ ಮೇಲುಜಾತಿಯವರ ದೇವಸ್ಥಾನವಾದ ವಾರ್ಧಾದ ಲಕ್ಷ್ಮಿನಾರಾಯಣ ದೇವಸ್ಥಾನಕ್ಕೆ ಬಹಿರಂಗವಾಗಿ ಮತ್ತು ಆತ್ಮೀಯವಾಗಿ ಪ್ರವೇಶ ಸಿಕ್ಕಿತು. ನಂತರದಲ್ಲಿ ಇನ್ನಿತರ ಹಲವು ದೇವಾಲಯಗಳಿಗೂ ಅವರ ಪ್ರವೇಶವನ್ನು ಸ್ವಾಗತಿಸಲಾಯಿತು. 1936-47ರ ಅವಧಿಯಲ್ಲಿ ಕೇರಳದ ಅರಸರು ಅಲ್ಲಿನ ಎಲ್ಲಾ ದೇವಾಲಯಗಳಲ್ಲಿ ಎಲ್ಲಾ ಹಿಂದೂಗಳಿಗೂ ಮುಕ್ತ ಪ್ರವೇಶಕ್ಕೆ ಅನುಮತಿಸಿ ಘೋಷಿಸಿದ್ದು ಅಸ್ಪೃಷ್ಯತೆಯ ನಿವಾರಣೆಯಲ್ಲಿ ದಿಟ್ಟ ಹೆಜ್ಜೆಯೆನಿಸಿತ್ತು. ಸತ್ನಾಮಿ ಆಂದೋಳನದ ರೂವಾರಿ ಪಂಜಾಬಿನ ಸುಧಾರಕ ದಲಿತ ಗುರು ಘಾಸಿದಾಸ್, ದಲಿತ ಗುರು ರವಿದಾಸ್ ಮೊದಲಾದವರು ದಲಿತರ ಹಿತಕ್ಕೆ ಶ್ರಮಿಸಿದ್ದವರು. ಸುಧಾರಕ ಗ್ಯಾನಿ ದಿತ್ತ್ ಸಿಂಗ್ ಸಿಂಗ್ ಸಭಾ ಪ್ರಾರಂಭಿಸಿ ದಲಿತರನ್ನು ತಮ್ಮ ತೆಕ್ಕೆಗೆ ಸೆರಿಸಿಕೊಳ್ಳುವ ಕೆಲಸ ಮಾಡಿದರು. ದೇವಾಲಯಗಳಿಗೆ ದಲಿತರ ಪ್ರವೇಶ ವಿವಾದಗಳನ್ನೂ ಸೃಷ್ಟಿಸಿತ್ತು. ಸುಬ್ರಹ್ಮಣ್ಯ ಭಾರತಿಯವರು ದಲಿತರಿಗೆ ಬ್ರಾಹ್ಮಣತ್ವ ದೀಕ್ಷೆ ಕೊಡಿಸಿದ್ದೂ ವಿವಾದದ ಸಂಗತಿಯಾಗಿತ್ತು. ಶಿವಾಜಿಯ ಸೈನ್ಯದಲ್ಲಿ ಹಿಂದುಳಿದವರಲ್ಲದೆ ದಲಿತರ ಮಹರ್ ರೆಜಿಮೆಂಟ್ ಸಹ ಅಸ್ತಿತ್ವದಲ್ಲಿತ್ತು. ಆದಿವಾಸಿಗಳು, ಗುಡ್ಡಗಾಡು ಜನಾಂಗಗಳವರ ಅನುಪಮ ಸಂಘಟಕ ಶಿವಾಜಿ ಬ್ರಿಟಿಷರಿಗೆ ಮತ್ತು ಮೊಘಲರಿಗೆ ಸಿಂಹಸ್ವಪ್ನವಾಗಿದ್ದುದು ಇತಿಹಾಸ.
    ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರರು ದಲಿತ ವಿಮೋಚನಾ ಕಾರ್ಯಕ್ಕಾಗಿ ಅನುಪಮ ಕಾರ್ಯ ಮಾಡಿದವರು. ಅಸ್ಪೃಷ್ಯರೆಂದು ಪರಿಗಣಿಸಲ್ಪಟ್ಟಿದ್ದ ಮಹರ್ ಜಾತಿಯಲ್ಲಿ ಜನಿಸಿದ ಅವರು ಅಸ್ಪೃಷ್ಯತೆಯ ಕರಾಳ ಅನುಭವಗಳ ನಡುವೆಯೂ ಛಲದಿಂದ ಉತ್ತಮ ಶಿಕ್ಷಣ ಪಡೆಯಲು ಸಫಲರಾಗಿ ಸ್ನಾತಕೋತ್ತರ ಶಿಕ್ಷಣಕ್ಕಾಗಿ ಅಮೆರಿಕಾಕ್ಕೆ ಹೋಗಿ ನ್ಯೂಯಾರ್ಕಿನ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ಪಿ.ಹೆಚ್.ಡಿ. ಸಂಪಾದಿಸಿದರು. ಲಂಡನ್ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಗಳಿಸಿ ಭಾರತಕ್ಕೆ ಹಿಂತಿರುಗಿದವರು. ಅವರು ಕಾನೂನು ಶಾಸ್ತ್ರದಲ್ಲೂ ಪದವಿ ಪಡೆದರು. ಅಸ್ಪೃಷ್ಯತೆ ವಿರುದ್ಧ ಹೋರಾಡಿದ್ದಲ್ಲದೆ ದಲಿತರಿಗೆ ಸ್ವಾಭಿಮಾನದ ಬದುಕಿಗಾಗಿ ಪ್ರೇರೇಪಿಸಿ, ಎಲ್ಲರ ಗೌರವಾದರಗಳಿಗೆ ಪಾತ್ರರಾದ ಅವರನ್ನು ವಿಶೇಷವಾಗಿ ದಲಿತ ಸಮುದಾಯವು ಅತ್ಯುನ್ನತ ಸ್ಥಾನದಲ್ಲಿರಿಸಿ ಗೌರವಿಸುತ್ತಿದೆ. ಮೂಕನಾಯಕ ಎಂಬ ಸಾಪ್ತಾಹಿಕ, ಬಹಿಷ್ಕೃತ ಭಾರತ ಎಂಬ ನಿಯತಕಾಲಿಕಗಳನ್ನು ಹೊರತಂದು ಸಮಾಜದ ಜಾಗೃತಿಗೆ ಶ್ರಮಿಸಿದವರು. 1924ರಲ್ಲಿ ಬಹಿಷ್ಕೃತ ಹಿತಕಾಮಿಸಭಾ ಸ್ಥಾಪಿಸಿ ಸಾಮಾಜಿಕ-ರಾಜಕೀಯ ಹಿತಾಸಕ್ತಿಗಳಿಗಾಗಿ ಹೋರಾಡಲು ದಲಿತರಿಗೆ ಪ್ರೇರಿಸಿದರು. ಶಿಕ್ಷಣ, ಸಂಘರ್ಷ ಮತ್ತು ಸಂಘಟನೆ ಎಂಬ ಧ್ಯೇಯವಾಕ್ಯದೊಂದಿಗೆ ಹುರಿದುಂಬಿಸಿದರು. ಅವರ ಪ್ರಕಾರ ಕ್ರಿ.ಶ. 400ರ ಸುಮಾರಿನಲ್ಲಿ ಬೌದ್ಧ ಮತ್ತು ಆರ್ಯ ಸಂಸ್ಕೃತಿಗಳ ನಡುವೆ ಶ್ರೇಷ್ಠತ್ವಕ್ಕಾಗಿ ಸಂಘರ್ಷ ನಡೆದ ಸಂದರ್ಭದಲ್ಲಿ ಅಸ್ಪೃಷ್ಯತೆಯ ಉಗಮವಾಯಿತೆನ್ನಲಾಗಿದೆ. ತಾರತಮ್ಯ ದೃಷ್ಟಿಗೆ ಮನುಸ್ಮೃತಿ ಕಾರಣವೆಂದು ಆ ಪುಸ್ತಕವನ್ನು ಸುಟ್ಟವರು. 1932ರಲ್ಲಿ ದಲಿತ ಪ್ರತಿನಿಧಿಗಳನ್ನು ದಲಿತರು ಮಾತ್ರ ಚುನಾಯಿಸಬೇಕೆಂದು ಬ್ರಿಟಿಷರ ಆಡಳಿತ ಕಾಲದಲ್ಲಿ ಒತ್ತಾಯಿಸಿದ್ದರು. ಇದು ದಲಿತರನ್ನು ಪ್ರತ್ಯೇಕವಾಗಿ ಉಳಿಸುತ್ತದೆಯೆಂದು ಮತ್ತು ಬದಲಾವಣೆಗೆ ಹಿಂದೂಧರ್ಮ ತೆರೆದುಕೊಳ್ಳುತ್ತದೆಯೆಂದು ಪ್ರತಿಪಾದಿಸಿದ್ದ ಗಾಂಧೀಜಿ ಮತ್ತು ಇತರ ನಾಯಕರು ಇದನ್ನು ವಿರೋಧಿಸಿದ್ದರು. ನಂತರದಲ್ಲಿ ದಲಿತರಿಗೆ ಹೆಚ್ಚಿನ ಸ್ಥಾನಗಳನ್ನು ಮೀಸಲಿರಿಸುವ ನಿರ್ಧಾರಕ್ಕೆ ಸಹಮತಿ ದೊರಕಿತ್ತು. ಇದು ಇತರರನ್ನು ದಲಿತರಿಂದ ಪ್ರತ್ಯೇಕಿಸುವ ಅಪಾಯ ತಪ್ಪಿಸಿ ಅವರನ್ನೂ ಒಳಗೊಂಡ ರಾಜಕೀಯ ವ್ಯವಸ್ಥೆ ರೂಪಿತವಾದುದು ಸಮಾಧಾನದ ಸಂಗತಿ. ಇದು ಸ್ವತಂತ್ರ ಭಾರತದಲ್ಲೂ ಮುಂದುವರೆದುಕೊಂಡು ಬಂದಿದೆ. ಭಾರತದ ಪ್ರಥಮ ಕಾನೂನು ಮಂತ್ರಿಯಾಗಿ ಮತ್ತು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ರೂಪಿಸುವಲ್ಲಿ ಅಂಬೇಡ್ಕರರ ಪಾತ್ರ ಮಹತ್ವದ್ದಾಗಿದೆ. ಅವರು ಆಚರಣೆಯಲ್ಲಿದ್ದ ಅಸ್ಪೃಷ್ಯತೆಯಿಂದ ಅನುಭವಿಸಿದ ಕಷ್ಟ, ನೋವುಗಳಿಂದಾಗಿ 14.10.1956ರಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರಲ್ಲದೆ ನಂತರದಲ್ಲಿ ಸುಮಾರು 5ಲಕ್ಷದಷ್ಟು ಸಮರ್ಥಕರನ್ನೂ ಬೌದ್ಧಧರ್ಮಕ್ಕೆ ಪರಿವರ್ತಿಸಿದರೆನ್ನಲಾಗಿದೆ.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.

ಶುಕ್ರವಾರ, ಜುಲೈ 7, 2017

ದಲಿತತ್ವದಿಂದ ಉನ್ನತಿಯೆಡೆಗೆ! - 1


     ನನ್ನ ಸ್ನೇಹಿತರೊಬ್ಬರು ಈಗಲೂ ನಡೆಯುತ್ತಿರುವ ದಲಿತರ ಮೇಲಿನ ಸವರ್ಣೀಯರ ದೌರ್ಜನ್ಯ ಎಂಬ ತಲೆಬರಹದಲ್ಲಿ ಫೇಸ್ ಬುಕ್ಕಿನಲ್ಲಿ ಚಿತ್ರವೊಂದನ್ನು ಶೇರ್ ಮಾಡಿ ಪ್ರಕಟಿಸಿದ್ದರು. ಆ ಚಿತ್ರವನ್ನು ನೋಡಿದ ಯಾರಿಗೇ ಆಗಲಿ, ಅಂತಹ ದೌರ್ಜನ್ಯವೆಸಗಿದವರ ವಿರುದ್ಧ ಆಕ್ರೋಷ ಬರದೇ ಇರಲು ಸಾಧ್ಯವಿರಲಿಲ್ಲ. ಆ ಘಟನೆ ನಡೆದದ್ದು ಹಲವಾರು ವರ್ಷಗಳ ಹಿಂದೆಯಾದರೂ ಈಗ ನಡೆದಂತೆ ಪ್ರಚುರಪಡಿಸಲಾಗುತ್ತಿರುವ ಹಿನ್ನೆಲೆ ಅರ್ಥವಾಗದುದೂ ಅಲ್ಲ. ಈಗಿನ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವ ತಂತ್ರವೂ ಅದರಲ್ಲಿದೆ.  ಅದೇನೇ ಇರಲಿ, ಒಂದಂತೂ ಒಪ್ಪಿಕೊಳ್ಳಲೇಬೇಕು. ಅಸಹಾಯಕರ ವಿರುದ್ಧದ ದೌರ್ಜನ್ಯ ಸಹಿಸುವಂತಹದು ಅಲ್ಲ, ಸಹಿಸಲೂಬಾರದು. ಇಂದು ದಲಿತ ಎಂಬ ಪದ ರೂಢಿಗತ ಅರ್ಥಕ್ಕಿಂತ ವಿಭಿನ್ನ ರೀತಿಗಳಲ್ಲಿ ಉಪಯೋಗಿಸಲ್ಪಡುತ್ತಿರುವುದು ನಿಜದಲಿತರ ದುರ್ಭಾಗ್ಯವಾಗಿದೆ.
     ದಲಿತ ಎಂಬ ಪದ ದಳವಾಗಿರುವುದು, ವಿಂಗಡಿಸಲ್ಪಟ್ಟಿರುವುದು, ವಿಭಜಿಸಲ್ಪಟ್ಟಿರುವುದು, ಮುರಿಯಲ್ಪಟ್ಟಿರುವುದು ಇತ್ಯಾದಿ ಅರ್ಥಗಳನ್ನು ಹೊರಡಿಸುತ್ತದೆ. ದಲಿತ ಎಂಬ ಪದವನ್ನು ತುಳಿತಕ್ಕೊಳಗಾದವರು ಎಂಬುದಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿದೆ. 19ನೆಯ ಶತಮಾನದಲ್ಲಿ ಈ ಪದದ ಬಳಕೆ ಪ್ರಾರಂಭವಾಯಿತೆನ್ನಲಾಗಿದೆ. ದಲಿತರ ದೌರ್ಬಲ್ಯ, ಬಡತನ ಮತ್ತು ಮೇಲುವರ್ಗಗಳಿಂದ ಆಗುವ ದೌರ್ಜನ್ಯಗಳನ್ನು ಈ ಪದ ಬಿಂಬಿಸುತ್ತದೆ. ಅಸ್ಪೃಷ್ಯತೆಯ ಮಹಾನ್ ಪಿಡುಗಿನ ವಿರುದ್ಧ ನೊಂದ ನೋವಿನ ಎಳೆ ಇಲ್ಲಿ ಕಾಣುತ್ತದೆ. ಭಾರತ ರತ್ನ ಅಂಬೇಡ್ಕರರು ಈ ಪದಬಳಕೆಯನ್ನು ಜನಪ್ರಿಯಗೊಳಿಸಿದರು. ಹಿಂದಿನ ನಾಲ್ಕು ವರ್ಣಗಳಿಂದಲೂ ಹೊರಗಿಟ್ಟಿದ್ದರೆನ್ನಲಾದ ಇವರನ್ನು ಐದನೆಯ ವರ್ಣಕ್ಕೆ ಸೇರಿದವರೆಂದು ಪಂಚಮರೆಂದು ಕರೆಯುತ್ತಿದ್ದುದೂ ಉಂಟು. ಈ ರೀತಿಯಾಗಿ ಸಾಂಪ್ರದಾಯಿಕರಿಂದ, ಮೇಲುವರ್ಗದವರಿಂದ ದೂರೀಕರಿಸಲ್ಪಟ್ಟ ಇವರಿಗೆ ಭಾರತ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರೆಂದು ಕಾನೂನು ರೀತ್ಯದ ಹೆಸರನ್ನು ಅಧಿಕೃತವಾಗಿ ಕೊಟ್ಟಿದೆ. ಮಹಾತ್ಮ ಗಾಂಧಿಯವರು ಇವರನ್ನು ಹರಿಜನರೆಂದು ದೇವರ ಮಕ್ಕಳು ಎಂಬ ಅರ್ಥದಲ್ಲಿ ಬಳಸಲು ಉತ್ತೇಜಿಸಿದ್ದರು ಮತ್ತು ಹರಿಜನ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದರು. ದಶಕಗಳ ಕಾಲ ಈ ಪದಬಳಕೆ ಚಾಲ್ತಿಯಲ್ಲಿತ್ತು. ಈಗ ಈ ಪದಬಳಕೆ ನಿಂದಾತ್ಮಕವೆಂದು ಪರಿಗಣಿಸಿ ನಿಷೇಧಿಸಲ್ಪಟ್ಟಿದೆ. ೨೦೦೪ರಲ್ಲಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ದಲಿತ ಎಂಬ ಪದವನ್ನು ಪರಿಶಿಷ್ಟ ಜಾತಿಗಳು ಎಂಬುದಕ್ಕೆ ಪರ್ಯಾಯವಾಗಿ ಬಳಕೆ ಮಾಡುವುದು ಅಸಾಂವಿಧಾನಿಕ ಎಂದು ಪರಿಗಣಿಸಿ ರಾಜ್ಯ ಸರ್ಕಾರಗಳು ಈ ಪದದ ಬಳಕೆಯನ್ನು ನಿಲ್ಲಿಸಲು ಸೂಚಿಸಿತ್ತು. ಇದನ್ನು ಅನುಸರಿಸಿ ಛತ್ತೀಸಘಡ ಸರ್ಕಾರವು ಸರ್ಕಾರದ ವ್ಯವಹಾರಗಳಲ್ಲಿ ಈ ಪದಬಳಕೆಯನ್ನು ಹಿಂದೆಯೇ ಕೊನೆಗೊಳಿಸಿದೆ.
     ದಲಿತರು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ ಆಯಾ ಪ್ರದೇಶಗಳಲ್ಲಿ ಪ್ರಚಲಿತವಿರುವ ಭಾಷೆಗಳನ್ನು, ಆಚರಣೆಗಳನ್ನು ಅನುಸರಿಸುತ್ತಾರೆ. ೨೦೧೧ರ ಜನಗಣತಿಯ ಅಂಕಿ-ಅಂಶಗಳಂತೆ ಶೇ.16.6ರಷ್ಟಿರುವ ಪರಿಶಿಷ್ಟ ಜಾತಿಗಳವರು, ಶೇ.8.6ರಷ್ಟಿರುವ ಪರಿಶಿಷ್ಟ ಪಂಗಡಗಳವರು ಒಟ್ಟಾಗಿ ದೇಶದ ಒಟ್ಟು ಜನಸಂಖ್ಯೆಯ ಶೇ. 25.2ರಷ್ಟಿದ್ದಾರೆ. ಭಾರತದ ನಾಲ್ಕು ರಾಜ್ಯಗಳಲ್ಲಿ ಒಟ್ಟು ದಲಿತ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರು [ಉತ್ತರಪ್ರದೇಶದಲ್ಲಿ(ಶೇ.20.5), ಪ.ಬಂಗಾಳದಲ್ಲಿ (ಶೇ.10.7), ಬಿಹಾರದಲ್ಲಿ(ಶೇ.8.2) ಮತ್ತು ತಮಿಳುನಾಡಿನಲ್ಲಿ(ಶೇ.7.2)] ಇರುವುದು ವಿಶೇಷವಾಗಿದೆ. ಪಂಜಾಬಿನ ಜನಸಂಖ್ಯೆಯ ಶೇ.31.9ರಷ್ಟು ಜನರು ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದವರಾಗಿದ್ದಾರೆ. ಮಿಜೋರಾಂ ರಾಜ್ಯದಲ್ಲಿ ಇವರ ಸಂಖ್ಯೆ ಶೂನ್ಯವಾಗಿದೆ. 1990ರ ಸಂವಿಧಾನ (ಪ.ಜಾ.) ಆದೇಶಗಳು (ತಿದ್ದುಪಡಿ) ಕಾಯದೆಯ ಪ್ರಕಾರ ಪರಿಶಿಷ್ಟ ಜಾತಿಗಳವರು ಹಿಂದೂ, ಸಿಖ್ ಅಥವ ಬೌದ್ಧ ಧರ್ಮಕ್ಕೆ ಮಾತ್ರ ಸೇರಿದವರಾಗಿರಬಹುದು. ಕರ್ನಾಟಕದಲ್ಲಿ ಇರುವ 6.10,95297 ಜನರ ಪೈಕಿ 1.04,74992 ಪ.ಜಾ. ಮತ್ತು 42,48987 ಪ.ಪಂ.ಕ್ಕೆ ಸೇರಿದವರೆಂದು 2011ರ ಜನಗಣತಿ ಅಂಕಿ-ಅಂಶಗಳು ಹೇಳುತ್ತವೆ. ಅಂದರೆ ರಾಜ್ಯದ ಜನಸಂಖ್ಯೆಯ ಶೇ.24ರಷ್ಟು ಜನರು ದಲಿತವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಪ್ರಮಾಣದಷ್ಟು ಜನರು ದಲಿತರಾಗಿಯೇ ಮುಂದುವರೆಯಬೇಕೇ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಆದಿದ್ರಾವಿಡ, ಆದಿಕರ್ನಾಟಕ, ಆದಿ ಆಂಧ್ರ ಮತ್ತು ಆದಿಧರ್ಮಿ -ಇವು ಒಂದು ಕಾಲದಲ್ಲಿ ಅಸ್ಪೃಷ್ಯವೆಂದು ಪರಿಗಣಿಸಲ್ಪಟ್ಟಿದ್ದ ಜಾತಿಗಳವರಿಗೆ ಅನುಕ್ರಮವಾಗಿ ತಮಿಳುನಾಡು, ಕರ್ನಾಟಕ, ಆಂಧ್ರ ಮತ್ತು ಪಂಜಾಬು ರಾಜ್ಯಗಳಲ್ಲಿ ಸರ್ಕಾರಿ ದಾಖಲಾತಿಗಳಲ್ಲಿ ಕೊಡಲಾಗಿರುವ ಹೆಸರುಗಳು. ಇಲ್ಲಿ ಆದಿ ಎಂದರೆ ಮೂಲನಿವಾಸಿಗಳು ಎಂಬ ಅರ್ಥ ಧ್ವನಿಸುತ್ತದೆ.
     ಕಾಯದೆಯ ಪ್ರಕಾರ ಪ.ಜಾ.ಗೆ ಸೇರಿದವರು ಹಿಂದೂ, ಸಿಖ್ ಅಥವ ಬೌದ್ಧ ಧರ್ಮಕ್ಕೆ ಮಾತ್ರ ಸೇರಿದವರಾಗಿರಬಹುದಾಗಿದ್ದು, ಪ.ಪಂ.ಗಳವರಿಗೆ ಆ ನಿರ್ಬಂಧವಿರುವುದಿಲ್ಲ. 61ನೆಯ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆಯ ಸಮೀಕ್ಷೆಯಂತೆ ಬೌದ್ಧ ಧರ್ಮೀಯರಲ್ಲಿ ಶೇ.90ರಷ್ಟು, ಸಿಕ್ಖರ ಮೂರನೆಯ ಒಂದು ಭಾಗದಷ್ಟು ಮತ್ತು ಕ್ರಿಶ್ಚಿಯನರ ಮೂರನೆಯ ಒಂದು ಭಾಗದಷ್ಟು ಜನರು ಪ.ಜಾ. ಅಥವ ಪ.ಪಂ.ಗಳವರಾಗಿದ್ದಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಅಲ್ಲಿ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡೂ, ಸರ್ಕಾರದ ವ್ಯಾವಹಾರಿಕ ಸವಲತ್ತುಗಳನ್ನು ಪಡೆಯುವ ಸಲುವಾಗಿ ಪ.ಜಾ. ಎಂದೇ ದಾಖಲಾತಿಗಳಲ್ಲಿ ಉಳಿದು ಎರಡೂ ಕಡೆಯ ಸೌಲಭ್ಯಗಳನ್ನು ಪಡೆಯುವವರನ್ನು ಕಿಶ್ಚಿಯನರದೇ ಭಾಷೆಯಲ್ಲಿ Crypto-Christians  ಅಥವ ಗುಪ್ತ ಕ್ರಿಶ್ಚಿಯನರು ಎಂದು ಕರೆಯುತ್ತಾರೆ. ಇಂತಹವರ ಸಂಖ್ಯೆಯೂ ಗಣನೀಯವಾಗಿದೆ. ಇವರುಗಳ ಈ ನಡೆಯಿಂದಾಗಿ ಎರಡೂ ಕಡೆಗಳಲ್ಲಿ ಕಡೆಗಣಿಸಲ್ಪಟ್ಟು ನೋವು ಅನುಭವಿಸುವವರೂ ಇದ್ದಾರೆ. ಕ್ರಿಶ್ಚಿಯನರಾಗಿ ಮತಾಂತರಿತರಾದರೂ ದಲಿತರನ್ನು ತಮ್ಮಲ್ಲೊಬ್ಬರಾಗಿ ಪರಿಗಣಿಸದೆ ಅವರನ್ನು ಪ್ರತ್ಯೇಕವಾಗಿಯೇ ಕಾಣುವ ಮನೋಭಾವ ಇರುವುದೂ ಅನುಭವಕ್ಕೆ ಬಂದಿದೆ. ಇಂತಹ ಪ್ರತ್ಯೇಕತೆಯ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳೂ ನಡೆದಿವೆ.
     ತುಳಿತಕ್ಕೊಳಗಾದವರ ಪರವಾಗಿ ಧ್ವನಿಯೆತ್ತಿದ, ಅವರನ್ನು ಮುಂದೆ ತರಲು ಶ್ರಮಿಸಿದ ಸಮಾಜ ಸುಧಾರಕರುಗಳಿಗೆ ಕೊರತೆಯಿಲ್ಲ. ಅಂತಹವರ ಶ್ರಮದ ಫಲಗಳು ಈಗ ಗೋಚರಿಸುತ್ತಿವೆ. ಜಾತಿಗಳನ್ನು ಒಗ್ಗೂಡಿಸಲು ಬಸವಣ್ಣನವರು ಮಾಡಿದ ಪ್ರಯತ್ನ ಅವರನ್ನು ಇಂದಿಗೂ ಮಹಿಮರ ಸಾಲಿನಲ್ಲಿ ನಿಲ್ಲಿಸಿದೆ. ದುರಾದೃಷ್ಟಕ್ಕೆ ಬಸವಣ್ಣನವರ ಅನುಯಾಯಿಗಳದೇ ಪ್ರತ್ಯೇಕ ಜಾತಿ, ಪಂಗಡಗಳಾಗಿ ಈಗ ಗುರುತಿಸಲ್ಪಡುತ್ತಿದೆ. ಬುದ್ಧ, ಮಹಾವೀರರೂ ಜಾತಿ ಕಾರಣದ ಭಿನ್ನತೆಗಳನ್ನು ವಿರೋಧಿಸಿದವರು. ಶುಕ್ಲಾಚಾರ್ಯರು ಅಸ್ಪೃಷ್ಯರೆನ್ನಲಾಗುತ್ತಿದ್ದ ಬಹುಜನರಿಗೆ ಮಂತ್ರದೀಕ್ಷೆ ನೀಡಿ ಉಪನಯನ ಸಂಸ್ಕಾರ ನೀಡಿ ಬ್ರಾಹ್ಮಣರನ್ನಾಗಿಸಿದ್ದರು. ಇಂದು ಬ್ರಾಹ್ಮಣ ಸಮುದಾಯದಲ್ಲಿರುವ ಶುಕ್ಲ ಯಜರ್ವೇದಿಗಳೆಂದು ಕರೆಯಲ್ಪಡುವವರು ಹೀಗೆ ಪರಿವರ್ತಿಸಲ್ಪಟ್ಟವರ ಸಂತತಿಯಾಗಿದ್ದಾರೆ. ರಾಮಾನುಜಾಚಾರ್ಯರು ದಲಿತ ಶಿಷ್ಯರನ್ನೂ ಸಾರ್ವಜನಿಕವಾಗಿ ತಮ್ಮವರೆಂದೇ ಸ್ವೀಕರಿಸಿದ್ದಲ್ಲದೆ ದಲಿತ ನಮ್ಮಾಳ್ವಾರರ ಕೃತಿಗಳನ್ನು ದ್ರಾವಿಡವೇದವೆಂದು ಪ್ರಚುರಪಡಿಸಿದ್ದರು. ಮಧ್ಯಪ್ರದೇಶದಲ್ಲಿ ಜಾತಿಗಳನ್ನು ಮೀರಿ ನಿಂತು ತಮ್ಮನ್ನು ಅಜಾತಿಯವರು ಎಂದು ಕರೆದುಕೊಂಡವರೇ ಇಂದು ಅಜಾತರು ಎಂಬ ಜಾತಿಯವರಾಗಿ ಗುರುತಿಸಲ್ಪಡುತ್ತಿದ್ದಾರೆ. ಮಹಾತ್ಮ ಗಾಂಧಿಯವರಂತೂ ದಲಿತರನ್ನು ಹರಿಜನರೆಂದು ಕರೆದು ಅವರೊಂದಿಗೆ ಭಾವನಾತ್ಮಕವಾಗಿ ಒಂದಾಗಿದ್ದರು. ಅಸ್ಪೃಷ್ಯತೆಯ ನಿವಾರಣೆಗೆ ಅವರ ಪ್ರಾಮಾಣಿಕ ಪ್ರಯತ್ನ, ಜಾತಿವೈಷಮ್ಯಗಳಿಗೆ ಅವರ ವಿರೋಧ ಮಾದರಿಯದಾಗಿತ್ತು. ಬಾಬಾ ಅಮ್ಟೆಯವರು(1914-2008) ಗ್ರಾಮೀಣ ಗೃಹ ಕೈಗಾರಿಕೆಗಳನ್ನು ಉತ್ತೇಜಿಸಿ ಸ್ವತಂತ್ರ ಬದುಕು ರೂಪಿಸಿಕೊಳ್ಳಲು ದಲಿತರನ್ನು ಪ್ರೇರಿಸಿದವರು. ಮಹಾರಾಷ್ಟ್ರದ ಕುಷ್ಟ ರೋಗಿಗಳ, ದುರ್ಬಲರ, ಅಸಹಾಯಕರ ನೆರವಿಗಾಗಿ ಮೂರು ಆಶ್ರಮಗಳನ್ನು ಸ್ಥಾಪಿಸಿದ್ದರು.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.

ಸಂಶಯ ಯಾರಿಗೂ ಹಿತ ತರುವುದಿಲ್ಲ!


     ಪರಸ್ಪರರಲ್ಲಿನ ಸಂಶಯದ ಕಾರಣದಿಂದ ಅನೇಕ ಸಂಸಾರಗಳು ಹಾಳಾಗಿರುವುದನ್ನು ಕಾಣುತ್ತಿರುತ್ತೇವೆ.  ಸಂಶಯ ಪಡುವವರು ಹಾಳಾಗುತ್ತಾರೆ, ಸಂಶಯ ಅನ್ನುವುದು ದೊಡ್ಡ ರೋಗ, ಸಂಶಯ ಪಡುವುದು ಒಳ್ಳೆಯದಲ್ಲ, ಇತ್ಯಾದಿ ಮಾತುಗಳು ಕೇಳಿಬರುವುದು ವಿಶೇಷವೇನಲ್ಲ. ಆದರೆ ಆ ರೀತಿ ಏಕೆ ಸಂಶಯಿಸುತ್ತಾರೆ, ಅದರ ಪರಿಣಾಮಗಳೇನು, ಇತ್ಯಾದಿಗಳ ಕುರಿತು ಮನೋವೈಜ್ಞಾನಿಕರು ಏನು ಹೇಳುತ್ತಾರೆ ಎಂಬ ಬಗ್ಗೆ ಅಂತರ್ಜಾಲ ತಾಣಗಳಲ್ಲಿ ತಡಕಾಡಿದಾಗ ಅನೇಕ ಕುತೂಹಲಕರ ಅಂಶಗಳು ಕಾಣಸಿಕ್ಕಿದವು. ವಿವಿಧ ಲೇಖನಗಳಲ್ಲಿ ಕಂಡು ಬಂದ ಅಂಶಗಳನ್ನು ಒಂದೆಡೆ ಕ್ರೋಢೀಕರಿಸಿ, ನನ್ನ ಮಾತುಗಳನ್ನೂ ಸೇರಿಸಿ ಅದರ ಸಾರವನ್ನು ಹಂಚಿಕೊಳ್ಳಬೇಕೆನ್ನಿಸಿದುದರ ಫಲಶ್ರುತಿ ಈ ಲೇಖನ. ಇಂತಹ ಸಮಸ್ಯೆಗಳಿಂದ ತೊಂದರೆಗೆ ಒಳಗಾದವರಿಗೆ ಇದು ನೆರವಾಗಬಹುದು. ಸಂಬಂಧಿಗಳ ನಡುವಿನ ಸಂಶಯ ಯಾರಿಗೂ ಹಿತ ತರುವುದಿಲ್ಲ ಮತ್ತು ಅಹಿತಕರ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಹಿತಕರ ಸಂಬಂಧಗಳಲ್ಲಿ ಪರಸ್ಪರರ ವೈಯಕ್ತಿಕ ರುಚಿ, ಅಭಿರುಚಿಗಳನ್ನು ಗೌರವದಿಂದ ಕಾಣಲಾಗುತ್ತದೆ, ನಂಬಿಕೆ ಇರುತ್ತದೆ. ವೈಯಕ್ತಿಕತನಕ್ಕೆ ಅವಕಾಶವಿರುತ್ತದೆ. ಸಂಶಯದಿಂದ ನೋಡುವ ಪ್ರವೃತ್ತಿಯವರಲ್ಲಿ ಇನ್ನೊಬ್ಬರ ದೂರವಾಣಿ ಸಂದೇಶಗಳು, ಇ-ಮೇಲುಗಳು, ಅವರ ಕಾಗದ-ಪತ್ರಗಳು ಇತ್ಯಾದಿಗಳನ್ನು ಕದ್ದು ನೋಡುವ ಸ್ವಭಾವ ಕಂಡು ಬರುತ್ತದೆ. ಹೀಗೆ ಕದ್ದು ನೋಡುವುದರಿಂದ ಆಗುವ ಪರಿಣಾಮಗಳೇನು ನೋಡೋಣ.
೧. ಕದ್ದು ನೋಡುವವರು ತಮ್ಮನ್ನೇ ನಂಬದವರು: ಕದ್ದು ನೋಡುವ ಸ್ವಭಾವದವರಲ್ಲಿ ಬೇರೆಯವರು ನಂಬಿಕೆಗೆ ಅರ್ಹರಲ್ಲ ಎಂಬ ಭಾವನೆ ಇರುತ್ತದೆ. ಇನ್ನೊಬ್ಬರ ವಿರುದ್ಧ ಮತ್ತಷ್ಟು ಸಾಕ್ಷಿ ಮತ್ತು ತಮ್ಮ ಅನಿಸಿಕೆಗೆ ಪುಷ್ತಿ ಪಡೆದುಕೊಳ್ಳಲು ನೋಡುತ್ತಿರುತ್ತಾರೆ. ಇದು ಒಂದು ರೀತಿಯಲ್ಲಿ ತಮ್ಮನ್ನೇ ತಾವು ನಂಬದ ಮನೋಭಾವ. ಅವರಿಂದ ತಮ್ಮ ಭವಿಷ್ಯಕ್ಕೆ ತೊಂದರೆ ಎಂಬ ಅಭದ್ರತೆಯಿಂದ ನರಳುತ್ತಾರೆ. ಬೇರೆಯವರನ್ನು ದುಷ್ಟರಂತೆ ಕಾಣುವ ಮನಸ್ಥಿತಿಯಿಂದ ಬಲಿಪಶುವಾಗುವವರು ಸ್ವತಃ ತಾವೇ ಎಂಬುದು ವಾಸ್ತವ.
೨. ಕದ್ದು ನೋಡುವುದು ಒಂದು ಗೀಳು: ಕದ್ದು ನೋಡುವವರು ಮೊದಲು ಬೇರೆಯವರ ಫೋನಿನಲ್ಲಿನ ಸಂದೇಶಗಳನ್ನು ಕದ್ದು ನೋಡುತ್ತಾರೆ. ನಂತರ ಅವರ ಕಂಪ್ಯೂಟರ್, ಆಮೇಲೆ ಅವರ ವಸ್ತುಗಳು ಇತ್ಯಾದಿಗಳನ್ನು ಕದ್ದು ಪರಿಶೀಲಿಸುತ್ತಾರೆ. ಅವರು ಕೆಲಸ ಮಾಡುವ ಸ್ಥಳಗಳಲ್ಲಿ ಗುಪ್ತ ವಿಚಾರಣೆ ಮಾಡುತ್ತಾರೆ. ಇದು ಒಳ್ಳೆಯದಲ್ಲ, ಖಂಡಿತವಾಗಿ ಅದು ಇಳಿಜಾರಿನಲ್ಲಿ ಜಾರುವ ದಾರಿ.
೩. ಕದ್ದು ನೋಡುವುದು ನೋವು ಕೊಡುತ್ತದೆ: ಕದ್ದು ನೋಡುವುದರಿಂದ ಒಳ್ಳೆಯದಾಗುವುದು ಸಾಧ್ಯವೇ ಇಲ್ಲ. ಇತರರನ್ನು ನಂಬದಿರುವುದು ಕದ್ದು ನೋಡುವುದರ ಮೂಲ ಕಾರಣ. ಕದ್ದು ನೋಡಿದಾಗ ಎರಡು ಸಾಧ್ಯತೆಗಳು ಸಂಭವಿಸುತ್ತದೆ. ಒಂದು, ಹಾಗೆ ನೋಡಿದಾಗ ಯಾವುದಾದರೂ ಇಷ್ಟವಿಲ್ಲದ ಸಂಗತಿ ಗಮನಕ್ಕೆ ಬರುವುದು. ಹಾಗಾದಾಗ ನೋಡಿದವರಿಗೆ ಸಂತೋಷವಂತೂ ಆಗುವುದಿಲ್ಲ. ಇನ್ನೊಂದು, ಅಂತಹುದೇನೂ ಕಾಣದಿರುವುದು. ಆಗ ಜಾಣತನದಿಂದ ಮುಚ್ಚುಮರೆಯಲ್ಲಿ ಏನೋ ಮಾಡುತ್ತಿದ್ದಾರೆಂದು ಅಂದುಕೊಳ್ಳುವುದು. ಇದು ಅವರನ್ನು ಅವರೇ ನಂಬದ ಮನಸ್ಥಿತಿ ಮತ್ತು ಕದ್ದು ನೋಡಿ ತಾವೇ ನಂಬಿಕೆಗೆ ಅರ್ಹರಲ್ಲವೆಂದು ಸಾಬೀತು ಪಡಿಸಿಕೊಳ್ಳುವ ರೀತಿಯಾಗುತ್ತದೆ. ಸಂಬಂಧಗಳನ್ನು ಇಷ್ಟಪಡುವವರು ಹೀಗೆ ಮಾಡಬಾರದು.
೪. ಕದ್ದು ನೋಡುವವರು ಕೆಟ್ಟವರೆನಿಸುವರು: ಕದ್ದು ನೋಡುವುದರಿಂದ ಪ್ರೀತಿ, ವಿಶ್ವಾಸ, ನಂಬಿಕೆಗಳಿಗೆ ಕೊಡಲಿಪೆಟ್ಟು ಬೀಳುತ್ತದೆ. ಕದ್ದು ನೋಡಲು ಪ್ರಾರಂಭಿಸಿದ ತಕ್ಷಣದಿಂದ ಅವರು ನಂಬಿಕೆಗೆ ಅನರ್ಹರಾಗುತ್ತಾರೆ. ಜೊತೆಗಾರರನ್ನು ನಂಬುವುದು ಕಷ್ಟ ಎಂಬ ಭಾವನೆಯಿಂದ ಕದ್ದು ನೋಡುವುದು ಅಗತ್ಯವೆನಿಸಿದರೆ, ಆ ಅನಿಸಿಕೆಗೆ ಕಡಿವಾಣ ಹಾಕಿ ಜೊತೆಗಾರರೊಡನೆ ಮುಖಾಮುಖಿ ಚರ್ಚಿಸುವುದು ಒಳ್ಳೆಯ ದಾರಿ. ಆಗ ಸಮಸ್ಯೆ ಖಂಡಿತ ತಿಳಿಯಾಗುವುದಲ್ಲದೆ ತಪ್ಪು ಅನಿಸಿಕೆಗಳು ದೂರವಾಗುವ ಅಥವ ಪರಿಸ್ಥಿತಿ ಸರಿಯಾಗುವ ಸಂಭವನೀಯತೆಯೇ ಹೆಚ್ಚಾಗಿರುತ್ತದೆ.
೫. ಕದ್ದು ನೋಡುವುದು ಮೂರ್ಖತನ: ಜನರ ಸಾಮಾನ್ಯ ಸ್ವಭಾವವೆಂದರೆ ತಮ್ಮ ಭದ್ರತೆ, ಅನುಕೂಲತೆಗಳಿಗೆ ಆದ್ಯತೆ ಕೊಡುವುದು. ಅದನ್ನು ತಪ್ಪಿಸುವುದು ಆಗದ ಮಾತು. ಹಾಗಾಗಿ ಸಂಬಂಧದಲ್ಲಿ ನಂಬಿಕೆ, ಪ್ರಾಮಾಣಿಕತೆ ಉಳಿಯಬೇಕೆಂದರೆ ಕದ್ದು ನೋಡದಿರುವುದು ಒಳಿತು.
೬. ಕದ್ದು ನೋಡಿ ನಂಬಿಕೆ ಕಳೆದುಕೊಳ್ಳಬಾರದು: ಕದ್ದು ನೋಡುವ ಸ್ವಭಾವದವರೇ ಜೊತೆಗಾರರು ತಮ್ಮ ವಿಚಾರಗಳನ್ನು ಕದ್ದು ಗಮನಿಸುತ್ತಾರೆಂದು ದೂರಿದರೆ, ತಾವೇ ಆ ರೀತಿ ಮಾಡುವುದನ್ನು ಮುಚ್ಚಿಟ್ಟು ಮೋಸ ಮಾಡಿದಂತೆ ಆಗುತ್ತದೆ. ಮಾಡುವುದಲ್ಲದೆ ಅದನ್ನು ಮುಚ್ಚಿಟ್ಟುಕೊಳ್ಳುವುದು ಹೆಚ್ಚಿನ ದುರ್ನಡತೆಯೆನಿಸುತ್ತದೆ.
೭. ಎರಡು ತಪ್ಪುಗಳಿಂದ ಒಂದು ಸರಿ ಆಗುವುದಿಲ್ಲ: ಸಂಬಂಧಿಗಳ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸುವುದು ಎಂದೂ ಸರಿಯಲ್ಲ. ಜೊತೆಗಾರರದು ತಪ್ಪು, ಅವರು ಸುಳ್ಳು ಹೇಳುತ್ತಿದ್ದಾರೆಂಬುದನ್ನು ಸಾಧಿಸುವ ಸಲುವಾಗಿ ಕದ್ದು ನೋಡುವುದಾದರೆ ಅದೂ ತಪ್ಪು. ಎರಡು ತಪ್ಪುಗಳಿಂದ ಒಂದು ಸರಿ ಆಗುವುದಿಲ್ಲ. ಉತ್ತಮ ವಿಧಾನವೆಂದರೆ ಇಬ್ಬರೂ ಒಟ್ಟಿಗೆ ಸಮಾಲೋಚಿಸಿ ಒಟ್ಟಿಗೆ ಫೋನಿನ ಸಂದೇಶಗಳು, ಇ-ಮೇಲುಗಳನ್ನು ಓದುವುದು ಮತ್ತು ಸಂದೇಹಗಳಿದ್ದರೆ ಪರಿಹರಿಸಿಕೊಳ್ಳುವುದು. ಅನುಮತಿಯಿಲ್ಲದೆ ಕದ್ದು ನೋಡುವುದಕ್ಕಿಂತ ಇದು ಒಳ್ಳೆಯದು.
೮. ತಪ್ಪು ಗ್ರಹಿಕೆಗೆ ಕಾರಣವಾಗುತ್ತದೆ: ಸಂಬಂಧಗಳಲ್ಲಿ ಇರಲೇಬೇಕಾದ ನಂಬಿಕೆಯನ್ನು ಕದ್ದು ನೋಡುವ ಕ್ರಿಯೆ ನುಚ್ಚುನೂರು ಮಾಡುತ್ತದೆ. ನಿಮ್ಮ ಫೋನ್/ಕಂಪ್ಯೂಟರ್ ಅನ್ನು ಬೇರೆಯವರು ಕದ್ದು ನೋಡಿದುದು ತಿಳಿದರೆ ನಿಮಗೆ ಹೇಗಾಗುತ್ತದೆ? ಕದ್ದು ನೋಡುವುದು ತಪ್ಪು ತಿಳುವಳಿಕೆಗೂ ಕಾರಣವಾಗುತ್ತದೆ. ಇರುವುದೇ ಒಂದು, ತಿಳಿಯುವುದೇ ಮತ್ತೊಂದು! ಕೆಲವೊಂದು ಸಲ ನಮಗೆ ತಿಳಿಯದಂತೆ ಕೆಲವು ಸಂಗತಿಗಳು ಜರುಗುವ ಸಾಧ್ಯತೆ ಇರುತ್ತದೆ. ಹುಟ್ಟುಹಬ್ಬಕ್ಕೋ, ಮತ್ತಾವುದೋ ವಿಶೇಷ ಸಂದರ್ಭಕ್ಕೋ ಚಕಿತಗೊಳಿಸುವ ಸಲುವಾಗಿ ಗುಟ್ಟಾಗಿ ವ್ಯವಸ್ಥೆ ಮಾಡಿಕೊಂಡಿರಬಹುದು. ಅದನ್ನು ಕದ್ದು ತಿಳಿದರೆ ಸ್ವಾರಸ್ಯವೂ ಇರುವುದಿಲ್ಲ, ಜೊತೆಗೆ ಕದ್ದು ನೋಡಿದವರ ಯೋಗ್ಯತೆಯೂ ಬಯಲಾಗುತ್ತದೆ.
೯. ಏಳು-ಬೀಳುಗಳಾಗುತ್ತವೆ: ಸಂಬಂಧಗಳು ನಿಲ್ಲುವುದೇ ನಂಬಿಕೆಯ ಮೇಲೆ. ಆ ನಂಬಿಕೆಯನ್ನು ಕಳೆದರೆ ಇಬ್ಬರೂ ಪರಸ್ಪರ ಬೆನ್ನು ತಿರುಗಿಸುವ ಸಂಭವ ಹೆಚ್ಚು. ಸಂಬಂಧಿಗಳಾಗಿದ್ದೇವೆ, ಸಂಬಂಧಕ್ಕೆ ಗೌರವ ಕೊಡಬೇಕು ಎಂಬ ಮನೋಭಾವವಿರಬೇಕು. ನಿನ್ನದು ತಪ್ಪು ಎಂದು ಒಂದು ಬೆರಳನ್ನು ತೋರಿಸಿದರೆ ಮೂರು ಬೆರಳುಗಳು ನಮ್ಮತ್ತಲೇ ತೋರುತ್ತಿರುತ್ತವೆ ಎಂಬುದು ನೆನಪಿನಲ್ಲಿರಬೇಕು.
೧೦. ಸಂಬಂಧಗಳು ಮುರಿಯುತ್ತವೆ: ಯಾವಾಗ ಅಪನಂಬಿಕೆ ಪ್ರವೇಶಿಸುತ್ತದೋ ನಂಬಿಕೆ ಹಾರಿಹೋಗುತ್ತದೆ. ಸಂಬಂಧ ಮುರಿದುಬೀಳುತ್ತದೆ. ನಿಮ್ಮ ವೈಯಕ್ತಿಕತೆಯನ್ನು ನೀವು ಇಷ್ಟಪಡುವಂತೆ ಬೇರೆಯವರೂ ತಮ್ಮತನ ಉಳಿಸಿಕೊಳ್ಳಲು ಬಯಸುತ್ತಾರೆ ಎಂಬ ಅರಿವಿರಬೇಕು. 
೧೧. ಸಂಬಂಧ ಹಾಳು ಮಾಡಿದ ಹೊಣೆ ಹೊರಬೇಕಾಗುತ್ತದೆ: ಕದ್ದು ನೋಡುವ ಮುನ್ನ ಎಚ್ಚರವಿರಬೇಕು. ಸಂಶಯದಿಂದ ನೋಡುವಾಗ ಎಲ್ಲಾ ಸಂಗತಿಗಳೂ ತಪ್ಪು ಗ್ರಹಿಕೆಗೆ ಕಾರಣವಾಗುತ್ತವೆ. ಪ್ರತಿಯೊಂದರಲ್ಲೂ ತಪ್ಪು ಕಾಣುತ್ತದೆ. ಸಂಶಯವಿದ್ದರೆ ಸಂಬಂಧವೇಕೆ ಬೆಳೆಸಬೇಕು? ಸಂಬಂಧ ಬೆಳೆಸಿದ ಮೇಲೆ ನಂಬಿಕೆಯನ್ನೂ ಬೆಳೆಸಿಕೊಳ್ಳಬೇಕು. ತಿದ್ದಿಕೊಳ್ಳಲಾರದ ತಪ್ಪು ಯಾವುದೂ ಇಲ್ಲ.
೧೨. ವೈಯಕ್ತಿಕ ಸಂಗತಿಗಳಿಗೆ ಅಗೌರವವಾಗುತ್ತದೆ: ಸಂಬಂಧಿ/ಜೊತೆಗಾರರು ತಪ್ಪೇ ಮಾಡಿರುವುದು ತಿಳಿದರೂ ಅವರ ಫೋನ್, ಇತ್ಯಾದಿಗಳನ್ನು ಕದ್ದು ನೋಡುವುದು ವೈಯಕ್ತಿಕ ಸ್ವಾತಂತ್ರ್ಯದ ಗೌರವಕ್ಕೆ ಚ್ಯುತಿ ತಂದಂತಾಗುತ್ತದೆ. ಅಲ್ಲಿ ನಂಬಿಕೆ ಮುಳುಗುತ್ತದೆ, ಸಂಬಂಧಕ್ಕೆ ಗಂಡಾಂತರ ಒದಗುತ್ತದೆ. ಗೂಢಚಾರಿಕೆಯಿಂದ ಎಂತಹುದೇ ಸಂಗತಿ ತಿಳಿದುಬರಲಿ, ಮುಕ್ತವಾಗಿ ಪರಸ್ಪರ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದೇ ಅತ್ಯಂತ ಒಳ್ಳೆಯ ಮಾರ್ಗ. ಅಪಮಾರ್ಗಗಳು ಯಾರಿಗೂ ಹಿತವಲ್ಲ. 
೧೩. ಕದ್ದು ನೋಡುವುದರಿಂದ ಪರಿಹಾರ ದೊರೆಯದು: ಬಿರುಕು ಬಿಟ್ಟ ತಳಪಾಯದ ಮೇಲೆ ಕಟ್ಟಡ ಹೇಗೆ ಸುಭದ್ರವಾಗಿರುವುದಿಲ್ಲವೋ ಹಾಗೆಯೇ ಸಂಶಯವಿದ್ದಾಗ ದೀರ್ಘಕಾಲದ ಸಂಬಂಧ ಸಾಧ್ಯವಿಲ್ಲ. ದೀರ್ಘ ಕಾಲ ಇದ್ದ ಸಂಬಂಧವೂ ಕದ್ದು ನೋಡುವಂತಹ ಕೆಟ್ಟ ಚಾಳಿಯ ಕಾರಣದಿಂದ ಮುರಿದು ಬೀಳುವುದು ದುರಂತವೇ ಸರಿ.
೧೪. ಮುರಿದ ಕನ್ನಡಿಯಾಗುತ್ತದೆ: ಕದ್ದು ನೋಡುವ ಪ್ರವೃತ್ತಿಯಿಂದ ಏನಾಗುತ್ತದೆಯೆಂದು ಸರಳವಾಗಿ ಹೇಳಬೇಕೆಂದರೆ, ಅವರು ಸಂಬಂಧಿ/ಜೊತೆಗಾರರ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಸಂಬಂಧಗಳು ಮೊದಲಿನಂತೆ ಇರುವುದು ದುಸ್ತರವಾಗುತ್ತದೆ. ಪ್ರೀತಿಸುತ್ತೇನೆ, ಆದರೆ ನಂಬುವುದಿಲ್ಲವೆಂದರೆ ಅದಕ್ಕೆ ಅರ್ಥವೇ  ಇಲ್ಲ.
     ಸಾರಾಂಶ: ಸಂಬಂಧ ಸುಮಧುರವಾಗಿ ಮುಂದುವರೆಯಬೇಕೆಂದರೆ ಸಂಬಂಧಿ/ಜೊತೆಗಾರರ ಬಗ್ಗೆ ಗೂಢಚಾರಿಕೆ ನಡೆಸುವ ಮನಸ್ಥಿತಿಯಿಂದ ದೂರವಿರಬೇಕು. ಸಂಶಯ ಹಾಳು ಮಾಡುತ್ತದೆ, ನಂಬಿಕೆ ಸಂಬಂಧವನ್ನು ಬೆಸೆಯುತ್ತದೆ.
ನಂಬಿದರೆ ಸತಿ-ಪತಿಯು ನಂಬಿರಲು ಸುತೆ-ಸುತರು
ಬಂಧು-ಮಿತ್ರರ ಬಳಗ ನಂಬಿದರೆ ಮಾತ್ರ|
ಬಾಳಿನಾ ಪಯಣದಲಿ ನಂಬಿಕೆಯೆ ಆಸರೆಯು
ನಂಬಿಕೆಗೆ ನೆರಳಾಗಿ ಬಾಳು ನೀ ಮೂಢ||
-ಕ.ವೆಂ.ನಾಗರಾಜ್.

ಶನಿವಾರ, ಜೂನ್ 17, 2017

ಅಪ್ಪ


     ಅಂತರ್ಜಾಲ ತಾಣಗಳಲ್ಲಿ ಇತ್ತೀಚೆಗೆ ಹರಿದಾಡಿದ, ಹರಿದಾಡುತ್ತಿರುವ 'ಐ ಲವ್ ಯು ಅಪ್ಪಾ' ಎಂಬ ಚಿತ್ರಗೀತೆ ಜನಪ್ರಿಯವಾಗಿದ್ದು, ಭಾವನಾತ್ಮಕವಾಗಿ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಾಡುವರಿಗೆ, ಕೇಳುವವರಿಗೆ ಅಪ್ಪನ ಕುರಿತ ನೆನಪುಗಳು ಉಮ್ಮಳಿಸಿ ಬರುವಂತೆ ಮಾಡುವಲ್ಲಿ ಗೀತೆಯ ಸಾಹಿತ್ಯ ಯಶಸ್ವಿಯಾಗಿದೆ. ಈ ಲೇಖನದ ವಿಷಯಕ್ಕೂ ಇದೇ ಪ್ರೇರಣೆ. ಭೋಗವಾದ, ಕೊಳ್ಳುಬಾಕತನ, ಸ್ವಾರ್ಥಪರತೆಯೇ ಆದ್ಯತೆಯಾಗಿ ಕಂಡುಬರುತ್ತಿರುವ ಇಂದಿನ ದಿನಗಳಲ್ಲಿ ಪರಸ್ಪರರಲ್ಲಿ ಬಾಂಧವ್ಯಗಳನ್ನು ನೆನಪಿಸುವ, ಬೆಸೆಯುವ ಇಂತಹ ಪ್ರಯತ್ನಗಳು ಅಭಿನಂದನೀಯ. ತಂದೆ-ತಾಯಿ-ಮಕ್ಕಳ ನಡುವಿನ ಸಂಬಂಧಗಳಿರಲಿ, ಗಂಡ-ಹೆಂಡಿರ ಸಂಬಂಧಗಳೂ ಅರ್ಥ, ಪಾವಿತ್ರ್ಯ ಕಳೆದುಕೊಳ್ಳುತ್ತಿರುವುದು ಸಮಾಜ ನೈತಿಕ ದಿವಾಳಿತನದತ್ತ ಜಾರುತ್ತಿದೆಯೇನೋ ಎಂದು ಭಾವಿಸುವಂತೆ ಮಾಡುತ್ತಿರುವ ದಿನಗಳಲ್ಲಿ ಇಂತಹ ಪ್ರಯತ್ನ ಕಾರ್ಮೋಡಗಳ ನಡುವಿನ ಮಿಂಚಿನಂತಿದೆ.
     ಅಪ್ಪ ಎನ್ನುವ ಪದಕ್ಕೆ ವ್ಯಾಪಕವಾದ ಅರ್ಥವಿದೆ. ಕೇವಲ ಮಕ್ಕಳಿಗೆ ತಂದೆ ಎಂಬ ಅರ್ಥವಲ್ಲದೆ ಹಿರಿಯ, ಶ್ರೇಷ್ಠ, ಗುರು, ಸ್ವಾಮಿ, ದೇವರು ಇತ್ಯಾದಿ ಅರ್ಥಗಳಲ್ಲೂ ಈ ಪದ ಬಳಸಲ್ಪಡುತ್ತಿದೆ. ತಾಯಿಯನ್ನು ಭೂಮಿಗೆ ಹೋಲಿಕೆ ಮಾಡುವಂತೆ ತಂದೆಯನ್ನು ಆಕಾಶಕ್ಕೆ ಹೋಲಿಸುವ ಪರಿಪಾಠವೂ ಇದೆ. ಈ ಹೋಲಿಕೆಗಳು ಆದರ್ಶ ತಂದೆ-ತಾಯಿಗಳಿಗೆ ಅನ್ವಯವಾಗುತ್ತದೆ. ಸಕಲ ಜೀವಿಗಳಿಗೆ ಭೂಮಿ ಹೇಗೆ ಆಧಾರಪ್ರಾಯವಾಗಿದೆಯೋ ಹಾಗೆಯೇ ತಾಯಿ ತನ್ನ ಮಕ್ಕಳು ಪ್ರೌಢಾವಸ್ಥೆಗೆ ಬರುವವರೆಗೂ ಅವರ ಪಾಲನೆ-ಪೋಷಣೆಗೆ ಹೆಚ್ಚಿನ ಗಮನ ನೀಡುತ್ತಾಳೆ. ಈ ಕಾರ್ಯಕ್ಕೆ ತಂದೆ ಆಧಾರಪ್ರಾಯನಾಗಿ, ಪೋಷಕನಾಗಿ ನಿಲ್ಲುತ್ತಾನೆ. ಅಮ್ಮನ ಮಹತ್ವ ಮಕ್ಕಳಿಗೆ ಹುಟ್ಟಿನ ಕ್ಷಣದಿಂದ ಅನುಭವಕ್ಕೆ ಬರುತ್ತದೆ. ಆದರೆ ಅಪ್ಪನ ಮಹತ್ವ ಮಕ್ಕಳಿಗೆ ತಿಳಿಯುವುದು ಅವರು ಸ್ವತಃ ಅಪ್ಪಂದಿರಾದ ನಂತರವೇ! ಆಕಾಶ ಹೇಗೆ ಭೂಮಿಯೂ ಸೇರಿದಂತೆ ಬ್ರಹ್ಮಾಂಡದ ಸಕಲ ಕಾಯಗಳಿಗೂ ಹೇಗೆ ಆಧಾರ ಮತ್ತು ಆಶ್ರಯಪ್ರಾಯವಾಗಿದೆಯೋ, ಹಾಗೆ ತಂದೆಯಾದವನು ಕುಟುಂಬಕ್ಕೆ ಆಶ್ರಯ ಮತ್ತು ಆಧಾರದಾತನಾಗಿರುತ್ತಾನೆ. ಆಕಾಶದ ಇರುವಿಕೆ ಹೇಗೆ ಗಮನಕ್ಕೆ ಬರುವುದಿಲ್ಲವೋ, ಹಾಗೆಯೇ ತಂದೆಯ ಮಹತ್ವ ಅಷ್ಟಾಗಿ ಮಕ್ಕಳ ಗಮನಕ್ಕೆ ಬರುವುದು ಕಡಿಮೆ. 
     ಮಕ್ಕಳ ಬೆಳವಣಿಗೆಯಲ್ಲಿ ತಂದೆ-ತಾಯಿಯರ ಪಾತ್ರಗಳು ಪರಸ್ಪರ ಪೂರಕವಾಗಿರುವುದು ವಿಶೇಷವೇ ಸರಿ. ತಾಯಿ ಮಕ್ಕಳನ್ನು ಪ್ರಪಂಚಕ್ಕೆ ಪರಿಚಯಿಸಿದರೆ ತಂದೆ ಪ್ರಪಂಚವನ್ನು ಮಕ್ಕಳಿಗೆ ಪರಿಚಯಿಸುತ್ತಾನೆ. ತಾಯಿಯಿಂದ ಜೀವ, ತಂದೆಯಿಂದ ಜೀವನ! ಮಕ್ಕಳು ಕಷ್ಟಪಡಬಾರದೆಂದು ತಾಯಿ ಬಯಸಿದರೆ, ತಂದೆ ಕಷ್ಟಗಳನ್ನು ಎದುರಿಸಿ ಮುಂದೆಬರಲು ಹುರಿದುಂಬಿಸುತ್ತಾನೆ. ಮಕ್ಕಳು ಒಂದು ಹಂತಕ್ಕೆ ಬರುವವರೆಗೆ ತಾಯಿ ಅವರ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದರೆ, ಅದಕ್ಕೆ ಪೋಷಕವಾಗಿ ಹಿನ್ನೆಲೆಯಲ್ಲಿ ತಂದೆಯ ಶ್ರಮವಿರುತ್ತದೆ. ತಾಯಿಯದು ಮಧುರಗಾನವಾದರೆ, ಗಾನಕ್ಕೆ ಕಳೆಕಟ್ಟುವ ಹಿಮ್ಮೇಳ ತಂದೆಯದು! ಈ ತಾಳ-ಮೇಳಗಳಲ್ಲಿ ವ್ಯತ್ಯಾಸವಾದರೆ ಮಕ್ಕಳ ಭವಿಷ್ಯ ಮತ್ತು ಸಂಸಾರ ಹದಗೆಡುತ್ತದೆ. 
     ಎಲ್ಲಾ ವಿಷಯಗಳಿಗೂ ಅಪವಾದವಿರುತ್ತದೆಯಾದರೂ, ಹೆಚ್ಚಿನ ಕುಟುಂಬಗಳಲ್ಲಿ ಕುಟುಂಬದ ಸದಸ್ಯರುಗಳ ಭದ್ರತೆ, ಅಭಿವೃದ್ಧಿಗಳ ಬಗ್ಗೆ ತಂದೆಯ ಪಾತ್ರ ಪ್ರಧಾನವಾಗಿರುತ್ತದೆ. ಇರಲೊಂದು ಸೂರು, ಮಕ್ಕಳಿಗೆ ಶಿಕ್ಷಣ, ಅವರಗಳು ಸ್ವಂತ ಕಾಲಿನ ಮೇಲೆ ನಿಲ್ಲಿಸಲು ಶ್ರಮಪಡುವ ತಂದೆಯರು ಕುಟುಂಬದ ಮುಖ್ಯಸ್ಥರೆಂದೇ ಪರಿಗಣಿಸಲ್ಪಡುತ್ತಾರೆ. ಮಕ್ಕಳ ಮದುವೆಯಾಗಿ ಅವರುಗಳದೇ ಆದ ಸಂಸಾರ ಪ್ರಾರಂಭವಾದ ಮೇಲೆ ಅಪ್ಪಂದಿರ ಪಾತ್ರ ಅಷ್ಟೊಂದು ಗಣನೆಗೆ ಬರದೆ ಉಳಿದುಬಿಡುವುದನ್ನೂ ಕಾಣುತ್ತೇವೆ. ಎಲ್ಲರನ್ನೂ ದಡ ಸೇರಿಸುವಲ್ಲಿ ಸಫಲನಾಗುವ ಹೊತ್ತಿಗೆ ಹಣ್ಣಾಗಿರುವ ಅಪ್ಪನಿಗೆ ತಲೆಯಲ್ಲಿ ಬಿಳಿಕೂದಲು ಕಾಣಿಸಿಕೊಂಡಿರುತ್ತದೆ. ಹೊಳೆ ದಾಟಿದ ಮೇಲೆ ಅನ್ನುವ ಪರಿಸ್ಥಿತಿ ಬಾರದ ಅಪ್ಪಂದಿರೇ ಭಾಗ್ಯವಂತರು.
     ಅಪ್ಪನ ಸ್ಥಾನ ವಿವಾದಗಳಿಗೆ ತುತ್ತಾಗುವ ಉದಾಹರಣೆಗಳೂ ಸಿಗುತ್ತವೆ. ಅಕ್ರಮ ಸಂಬಂಧದಿಂದ ಜನಿಸುವ ಮಕ್ಕಳಿಗೆ ಅಪ್ಪನೆನಿಸಿಕೊಳ್ಳಲು ಹಿಂದೇಟು ಹಾಕುವವರು, ಅತ್ಯಾಚಾರ, ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಸಂಬಂಧಗಳಿಂದ ಜನಿಸುವ ಮಕ್ಕಳ ಅಪ್ಪಂದಿರು ಯಾರೆಂದು ತಿಳಿಯದ ಪ್ರಸಂಗಗಳು ಕಂಡುಬರುತ್ತಿರುತ್ತವೆ. ಪ್ರತಿಷ್ಠಿತರೆನಿಸಕೊಂಡವರೇ ಅಕ್ರಮ ಸಂಬಂಧಗಳಿಂದ ಜನಿಸಿದ ಮಕ್ಕಳಿಗೆ ಸೌಲಭ್ಯಗಳನ್ನು ಗುಟ್ಟಾಗಿ ಮಾಡಿಕೊಟ್ಟರೂ ಅವರನ್ನು ತಮ್ಮ ಮಕ್ಕಳೆಂದು ಒಪ್ಪಿಕೊಳ್ಳದ ಪ್ರಕರಣ, ಪಿತೃತ್ವ ಸಾಬೀತಿಗೆ ಮಕ್ಕಳೇ ನ್ಯಾಯಾಲಯದ ಮೆಟ್ಟಲೇರಿದ ಪ್ರಕರಣಗಳೂ ಇವೆ. ನೋವಿನ ಸಂದರ್ಭಗಳಲ್ಲಿ ಅಪ್ಪನೊಬ್ಬ ತನ್ನ ಮಕ್ಕಳಿಗೆ, ನಿಮಗಾಗಿ ಎಷ್ಟು ಕಷ್ಟಪಟ್ಟಿದ್ದೇನೆ, ಗೊತ್ತೆ? ಎಂಬರ್ಥದ ಮಾತುಗಳನ್ನು ಆಡಿದಾಗ ಪ್ರತಿಯಾಗಿ ಕೇಳಬಾರದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗಿ ಬರುವುದೂ ಇದೆ. ಇಂತಹವನ್ನು ಒತ್ತಟ್ಟಿಗಿಟ್ಟು ಸಾಮಾನ್ಯ ಅಪ್ಪಂದಿರ ಬಗ್ಗೆ ನೋಡೋಣ.
     ಒಬ್ಬ ಸಾಮಾನ್ಯ ಅಪ್ಪ ತನ್ನ ಕೈಯಲ್ಲಿ ಮಾಡಲಾಗದಿದ್ದ ಕೆಲಸಗಳನ್ನು ಮಕ್ಕಳು ಮಾಡಲೆಂದು ಬಯಸುತ್ತಾನೆ. ತಾನು ಆಸೆಪಟ್ಟು ಪಡೆಯಲಾಗದಿದ್ದುದನ್ನು ಮಕ್ಕಳಾದರೂ ಪಡೆಯಲೆಂದು ಆಶಿಸುತ್ತಾನೆ. ಅದರ ಸಲುವಾಗಿ ತಾನು ಮಾಡಬಹುದಾದ ಪ್ರಯತ್ನಗಳನ್ನೆಲ್ಲಾ ಮಾಡುತ್ತಾನೆ, ಕಷ್ಟಪಡುತ್ತಾನೆ. ಅವರುಗಳ ಏಳಿಗೆಗಾಗಿ ಸ್ವಂತದ ಅವಶ್ಯಕತೆಗಳನ್ನು ತ್ಯಾಗ ಮಾಡುತ್ತಾನೆ. ಈ ಗುಣವೇ ಅಪ್ಪ-ಅಮ್ಮಂದಿರನ್ನು ಸಜ್ಜನರನ್ನಾಗಿ ರೂಪಿಸುವುದು, ಆದರ್ಶರನ್ನಾಗಿಸುವುದು. ನಮ್ಮ ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಮರು ಹೇಳುತ್ತಿದ್ದ ಈ ಮಾತು ಪಾಲನೀಯವಾಗಿದೆ: "ಒಂದು ದೇಶ ಭ್ರಷ್ಠಾಚಾರ ಮುಕ್ತವಾಗಬೇಕಾದರೆ, ಸುಂದರ ಮನಸ್ಸುಗಳಿಂದ ಕೂಡಿರಬೇಕೆಂದಾದರೆ ಮೂವರಿಂದ ಮಾತ್ರ ಸಾಧ್ಯ. ಆ ಮೂವರೆಂದರೆ ಅಪ್ಪ, ಅಮ್ಮ ಮತ್ತು ಶಿಕ್ಷಕ." ಈ ಮೂವರಲ್ಲಿ ಕುಟುಂಬದ ಮುಖ್ಯಸ್ಥನಾಗಿ ಅಪ್ಪನ ಜವಾಬ್ದಾರಿಯೂ ಹೆಚ್ಚಿನದಾಗಿದೆ. ಅವನ ನಡವಳಿಕೆ, ಮೇಲ್ಪಂಕ್ತಿ, ತೆಗೆದುಕೊಳ್ಳುವ ನಿರ್ಧಾರಗಳು ಗುರುತರವಾದ ಬದಲಾವಣೆ ತರಲು ಸಾಧ್ಯವಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಅವನು ನೋಡಿಕೊಳ್ಳಬೇಕಿದೆ. 
     ಮಕ್ಕಳ ದೃಷ್ಟಿಯಲ್ಲಿ ಅಪ್ಪ ಮಾದರಿಯಾಗಿರುತ್ತಾನೆ. ಮಕ್ಕಳ ಬೇಕು-ಬೇಡಗಳನ್ನು ಗಮನಿಸುವುದು, ಅವರ ರಕ್ಷಣೆ, ಭದ್ರತೆ ವಿಚಾರಗಳಿಗೆ ಗಮನ ಕೊಡುವುದು, ಇತ್ಯಾದಿಗಳಿಂದಾಗಿ ಅವರ ದೃಷ್ಟಿಯಲ್ಲಿ ಅವನೇ ಹೀರೋ ಆಗಿರುತ್ತಾನೆ. ಏನು ಆಗಿರದಿದ್ದರೂ, ತಾವು ಏನಾಗಬೇಕು ಎಂಬುದಕ್ಕೆ ಅಪ್ಪನೇ ಅವರಿಗೆ ಮಾರ್ಗದರ್ಶಿ, ಮಾನದಂಡ ಆಗಿರುತ್ತಾನೆ. ಅಪ್ಪ ಅನ್ನಿಸಿಕೊಳ್ಳುವುದೇ ಹೆಮ್ಮೆಯ ವಿಷಯ, ಅದರಲ್ಲೂ ಒಳ್ಳೆಯ ಅಪ್ಪ ಅನ್ನಿಸಿಕೊಂಡರೆ ಅದೊಂದು ಶ್ರೇಷ್ಠ ಸಾಧನೆಯೇ ಸರಿ. ದೇಶ ಸಧೃಢವಾಗಿರಬೇಕಾದರೆ ರಾಜ್ಯಗಳು ಸಧೃಢವಾಗಿರಬೇಕು. ರಾಜ್ಯಗಳು ಸಮೃದ್ಧಿಯಾಗಿರಬೇಕೆಂದರೆ ಜಿಲ್ಲೆಗಳು, ಜಿಲ್ಲೆಗಳಿಗೆ ತಾಲ್ಲೂಕುಗಳು, ತಾಲ್ಲೂಕುಗಳಿಗೆ ನಗರ, ಹಳ್ಳಿಗಳು! ನಗರ, ಹಳ್ಳಿಗಳು ಮಾದರಿ ಎನ್ನಿಸಿಕೊಳ್ಳಬೇಕಾದರೆ ಅಲ್ಲಿರುವ ಕುಟುಂಬಗಳು ನಾಗರಿಕ ಪ್ರಜ್ಞೆ ಹೊಂದಿರಬೇಕು. ಕುಟುಂಬಗಳು ಹೀಗಿರಬೇಕಾದರೆ ಆ ಕುಟುಂಬಗಳ ಮುಖ್ಯಸ್ಥರು, ಅಂದರೆ ಅಪ್ಪಂದಿರುಗಳು ಸುಯೋಗ್ಯರಾಗಿರಬೇಕು. ಒಟ್ಟಾರೆಯಾಗಿ, ದೇಶಕ್ಕೆ ಒಳ್ಳೆಯದಾಗಬೇಕೆಂದರೆ, ಕುಟುಂಬದ ಆಧಾರಗಳಾದ ಅಪ್ಪ-ಅಮ್ಮಂದಿರುಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
-ಕ.ವೆಂ.ನಾಗರಾಜ್.

ಸೋಮವಾರ, ಜೂನ್ 12, 2017

ಸಜ್ಜನಶಕ್ತಿ ಜಾಗೃತವಾಗಲಿ

     ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ, ಮಾನವೀಯ ಭಾವನೆಗಳು ಬರಡಾಗಿ ಬೆಲೆಯೇ ಇಲ್ಲವಾಗಿರುವಾಗ, ಇದು ಎಂಥಾ ಲೋಕವಯ್ಯಾ ಎಂದು ಅನ್ನಿಸದೇ ಇರದು. ನಿಜಕ್ಕೂ ಇದೊಂದು ವಿಚಿತ್ರ ಲೋಕ. ಇಲ್ಲಿ ಕರುಣಾಮಯಿಗಳಿದ್ದಾರೆ, ಕರುಣೆಯ ಲವಲೇಶವೂ ಕಾಣಸಿಗದ ಕಟುಕರಿದ್ದಾರೆ, ನಯವಂಚಕರಿದ್ದಾರೆ, ಮುಖವಾಡಧಾರಿಗಳಿದ್ದಾರೆ, ಜಾತಿವಾದಿಗಳಿದ್ದಾರೆ, ವಿಚಾರವಾದಿಗಳಿದ್ದಾರೆ, ಕಾನೂನು-ಕಟ್ಟಳೆಗಳಿಗೆ ಬೆಲೆ ಕೊಡುವವರಿದ್ದಾರೆ, ಅದನ್ನು ಕಾಲಕಸವಾಗಿ ಕಾಣುವವರಿದ್ದಾರೆ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ, ಎಂಥೆಂತಹವರೋ ಇದ್ದಾರೆ.  ಅವರವರಿಗೆ ಅವರದೇ ಆದ ಮಾನದಂಡಗಳು, ಅವರವರ ಪಾಲಿಗೆ ಅವರದೇ ಸರಿ. ಎಲ್ಲರಿಗೂ ಸಮಾನವಾದ ಮಾನದಂಡ ಅನ್ನುವುದು ಪುಸ್ತಕದ ಬದನೆಕಾಯಿಯಷ್ಟೆ. 
     ಹಿಂದೆ ಪಿಪ್ಪಲಾದ ಎಂಬ ಋಷಿ ಇದ್ದನಂತೆ. ಆತನ ನಿಜವಾದ ಹೆಸರು ಏನಿತ್ತೋ ಗೊತ್ತಿಲ್ಲ. ಆದರೆ ಆತ ಮರದಿಂದ ಕಳಿತು ಕೆಳಗೆ ಬಿದ್ದಿದ್ದ ಹಣ್ಣು ಹಂಪಲುಗಳನ್ನು ಮಾತ್ರ ಆಯ್ದು ತಿನ್ನುತ್ತಿದ್ದರಿಂದ ಆತನಿಗೆ ಆ ಹೆಸರು ಬಂದಿತ್ತು. ಅದೇ ರೀತಿ ಅಕ್ಷಪಾದ (ಪಾದದಲ್ಲಿ ಕಣ್ಣುಳ್ಳವನು) ಎಂಬ ಹೆಸರಿನ ಋಷಿಗೂ, ಆತ ನಡೆಯುವಾಗ ಕಾಲಿನ ಕೆಳಗೆ ಯಾವ ಕ್ರಿಮಿ-ಕೀಟಗಳೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನಡೆಯುತ್ತಿದ್ದರಿಂದ ಆ ಹೆಸರು ಬಂದಿತ್ತು. ಅಂತಹವರು ಇದ್ದ ಕಾಲದಲ್ಲೂ ಋಷಿಮುನಿಗಳು ಮಾಡುತ್ತಿದ್ದ ಯಜ್ಞ ಯಾಗಗಳ ಹೋಮಕುಂಡದಲ್ಲಿ ಮಾಂಸದ ತುಂಡುಗಳನ್ನು ಹಾಕಿ ಯಜ್ಞಗಳಿಗೆ ಭಂಗ ತರುತ್ತಿದ್ದವರೂ ಇದ್ದರು. ಅವರನ್ನು ರಾಕ್ಷಸರು ಅನ್ನುತ್ತಿದ್ದರು.  ರಕ್ಷಃ ಅಥವ ರಕ್ಷಸ್ ಅಂದರೆ ಶತ್ರುಗಳು, ದುರ್ಭಾವನೆ, ದುರ್ವಿಚಾರ ಎಂದರ್ಥ. ಯಾರು ರಕ್ಷಸ್ಸುಗಳನ್ನು, ಅಂದರೆ ದುರ್ಭಾವನೆ ಹೊಂದಿರುತ್ತಾರೋ, ದುರ್ವಿಚಾರಗಳನ್ನು ಹೊಂದಿರುತ್ತಾರೋ, ಯಾರು ದುಷ್ಕಾರ್ಯಗಳನ್ನು ಮಾಡುತ್ತಾರೋ ಅವರು ರಾಕ್ಷಸರು, ಅಷ್ಟೆ. ರಾಕ್ಷಸತ್ವಕ್ಕೆ ಯಾವುದೇ ಜಾತಿಯ ಕಟ್ಟಿಲ್ಲ. ರಾಕ್ಷಸ ಎಂದು ಕರೆಯಲ್ಪಡುವ ರಾವಣ, ಕುಂಭಕರ್ಣ, ಶೂರ್ಪಣಖಿ ಇವರುಗಳ ತಂದೆ ವಿಶ್ರವಸು ಎಂಬ ಒಬ್ಬ ಮುನಿ, ವಿಪ್ರಕುಲಕ್ಕೆ ಸೇರಿದವನು. ಅವರುಗಳು ರಾಕ್ಷಸರೆನಿಸಲು ಪ್ರಮುಖ ಕಾರಣ ಅವರಲ್ಲಿದ್ದ ದುರ್ವಿಚಾರ, ದುರ್ಭಾವನೆ ಮತ್ತು ದುಷ್ಕಾರ್ಯಗಳು. ರಾಕ್ಷಸನೂ ಒಬ್ಬ ಮಾನವ ಜೀವಿಯೇ ಹೊರತು ಬೇರೆ ಪ್ರಕಾರದ ಜೀವಿಯಲ್ಲ. ಹೀಗಿರುವಾಗ ಒಬ್ಬ ಮಾನವ ರಾಕ್ಷಸನಾಗುವುದು ಅಥವ ಆದರ್ಶ ಮಾನವನಾಗುವುದು ಆತನ ನಡವಳಿಕೆಯಿಂದ ಎಂಬ ಪ್ರಾಥಮಿಕ ಸಂಗತಿಯನ್ನು ಗಮನದಲ್ಲಿಡಬೇಕು.

     ಇಂದಿನ ಸ್ಥಿತಿ-ಗತಿಗಳ ಕುರಿತು ನೋಡೋಣ. ಗೋವಿನ ಬಗ್ಗೆ ಪೂಜ್ಯ ಭಾವನೆ ಇಟ್ಟುಕೊಂಡವರಿದ್ದಾರೆ. ಅದು ನಮ್ಮ ಆಹಾರ ಅನ್ನುವವರೂ ಇದ್ದಾರೆ. ನಮ್ಮ ಸಂವಿಧಾನದಲ್ಲೂ ಗೋವಿನ ಬಗ್ಗೆ ಆದರ ಅಭಿಮಾನಗಳು ಲಿಖಿತವಾಗಿ ದಾಖಲಿತವಾಗಿದೆ. ಈಗ ಗೋಹತ್ಯೆ ನಿಷೇಧದ ವಿಚಾರದಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಬೆಂಬಲ ಮತ್ತು ಆಕ್ರೋಷಗಳೆರಡೂ ಅತಿರೇಕವಾಗಿ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಿಪರೀತವೆನಿಸುವಷ್ಟು ಕೆಸರೆರಚಾಟಗಳು ನಡೆಯುತ್ತಿದೆ. ಬಹಿರಂಗವಾಗಿ ಗೋವನ್ನು ಕತ್ತರಿಸಿ ಹಸಿ ಹಸಿಯಾದ ಮಾಂಸವನ್ನು ಸಾರ್ವಜನಿಕವಾಗಿ ಭಕ್ಷಿಸುವ ಪ್ರತಿಭಟನೆಯೂ ಕೇರಳದಲ್ಲಿ ಯುವ ಕಾಂಗ್ರೆಸ್ಸಿಗರಿಂದ ಆಗಿದೆ. ಇದರಲ್ಲಿ ಗೋವಿನ ತಪ್ಪೇನಿದೆ? ಅದು ತನ್ನನ್ನು ಪೂಜೆ ಮಾಡಿ ಎಂದೂ ಹೇಳಿಲ್ಲ, ತನ್ನನ್ನು ಕಡಿದು ತಿನ್ನಿ ಎಂತಲೂ ಹೇಳಿಲ್ಲ. ಪಾಪ, ಅದಕ್ಕೆ ಅದು ಯಾವುದೂ ಗೊತ್ತೇ ಇಲ್ಲ. ಗೋವನ್ನು ಪೂಜ್ಯ ಭಾವನೆಯಿಂದ ಕಾಣುವವರನ್ನು ಕೆಣಕುವ ಏಕಮಾತ್ರ ಉದ್ದೇಶದ ಈ ಕೃತ್ಯ ರಾಕ್ಷಸೀಕೃತ್ಯ ಅಲ್ಲದೆ ಮತ್ತೇನು? ಪ್ರತಿಭಟನೆಗೂ ಯೋಗ್ಯ ಮಾರ್ಗಗಳಿವೆ, ಸಮಸ್ಯೆ ಇತ್ಯರ್ಥಕ್ಕೆ ಹಲವು ದಾರಿಗಳಿವೆ, ನ್ಯಾಯಾಲಯಗಳಿವೆ, ಶಾಸಕಾಂಗವಿದೆ. ಅವುಗಳಿಂದ ಇತ್ಯರ್ಥವಾಗದ ಸಂದರ್ಭಗಳಲ್ಲಿ ಅತಿರೇಕದ ನಡವಳಿಕೆಗಳು ಸಾಮಾನ್ಯವೆನಿಸಿದರೂ, ಈ ಪ್ರಸಂಗದಲ್ಲಿ ಅಂತಹ ರಕ್ಕಸ ನಡವಳಿಕೆಯ ತೋರ್ಪಡಿಕೆ ಅಗತ್ಯವಿರಲಿಲ್ಲ. 

     ಇಂದು ಸಮಾಜವನ್ನು, ದೇಶವನ್ನು ಜಾತಿಗಳ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ವಿವಿಧ ವಿಚಾರಗಳ ಹೆಸರಿನಲ್ಲಿ ಛಿದ್ರಗೊಳಿಸುವ ಕೆಲಸವನ್ನು ರಾಜಕಾರಣಿಗಳು, ಜಾತ್ಯಂಧರು ಮತ್ತು ಮತಾಂಧರುಗಳು ಎಗ್ಗಿಲ್ಲದೇ ಮಾಡುತ್ತಿದ್ದಾರೆ. ಮಾನವೀಯತೆ ಅನ್ನುವುದೂ ಸಹ ದೇಶ, ಮತ, ಧರ್ಮ, ಜಾತಿ, ವಿಚಾರಗಳಿಗೆ ಥಳಕು ಹಾಕಿಕೊಂಡುಬಿಟ್ಟಿದೆ. ಮತಾಂಧ ಮುಸ್ಲಿಮ್ ಉಗ್ರ ಸಂಘಟನೆಗೆ ಸೇರಿದವರಿಗೆ ತಮ್ಮ ಮತದವರನ್ನು ಯಾರು ಟೀಕಿಸಿದರೂ ಸಹನೆಯಾಗುವುದಿಲ್ಲ. ಆದರೆ ಅವರು ಇತರ ಮತೀಯರನ್ನು ನಿರ್ದಯೆಯಿಂದ ಕತ್ತು ಸೀಳಿ ಕೊಲೆಗೈಯಬಲ್ಲರು. ಜನನಿಬಿಡ ಪ್ರದೇಶಗಳಲ್ಲಿ ಬಾಂಬು ಸಿಡಿಸಿ ನೂರಾರು ಜನರ ಹತ್ಯೆಯಾದರೂ ಅವರು ಅದರಿಂದ ಸಂಭ್ರಮಪಡುತ್ತಾರೆ. ತಮ್ಮವರು ಸತ್ತಾಗ ದುಃಖಿಸುವ ಅವರು ಇತರರು ಕೊಲೆಯಾದಾಗ ಸಂತೋಷಿಸುತ್ತಾರೆ. ಸತ್ತವರು ತಮ್ಮಂತೆಯೇ ಇರುವ ಮಾನವ ಜೀವಿಗಳು ಎಂದು ಅವರಿಗೆ ಅನ್ನಿಸುವುದೇ ಇಲ್ಲ. ಇದು ಮತ/ಧರ್ಮದ ಹೆಸರಿನಲ್ಲಿ ಮರೆಯಾಗಿರುವ ಮಾನವೀಯತೆ. ಕೇರಳದಲ್ಲಿ ಜಯಕೃಷ್ಣನ್ ಮಾಸ್ತರ್ ಎಂಬ ಶಿಕ್ಷಕರನ್ನು ಅವರು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗಲೇ ಮಕ್ಕಳ ಎದುರಿನಲ್ಲೇ ಸಿ.ಪಿ.ಎಂ. ಕಾರ್ಯಕರ್ತರು ಕೊಚ್ಚಿ ಕೊಲೆ ಮಾಡಿದ್ದರು. ಅವರ ದೇಹದ ೪೮ ಕಡೆಗಳಲ್ಲಿ ಕೊಚ್ಚಲಾಗಿತ್ತು. ಇದಕ್ಕೆ ಕಾರಣ ವೈಚಾರಿಕ ಭಿನ್ನತೆ. ಅವರು ಆರೆಸ್ಸೆಸ್ಸಿನವರಾಗಿದ್ದರು ಎಂಬುದೊಂದೇ ಅವರ ಹತ್ಯೆಗೆ ಕಾರಣವಾಗಿತ್ತು. ಕೇರಳದಲ್ಲಿ ಇಂತಹ ವೈಚಾರಿಕ ವಿರೋಧಿಗಳ ಹತ್ಯೆ ಸಾಮಾನ್ಯವಾಗಿಬಿಟ್ಟಿದೆ. ಇದನ್ನು ಇತರೆಡೆಗಳಲ್ಲಿರುವ ಕಮ್ಯುನಿಸ್ಟರು ಮತ್ತು ಅವರ ಹಿತೈಷಿಗಳು ಖಂಡಿಸುವುದೇ ಇಲ್ಲ. ಆದರೆ ಹೈದರಾಬಾದಿನಲ್ಲಿ ಒಬ್ಬ ಕಮ್ಯುನಿಸ್ಟ್ ಹಿತೈಷಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಅದರ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆಯುತ್ತವೆ. ವೈಚಾರಿಕ ಭಿನ್ನತೆಯಿಂದ ಯಾರದಾದರೂ ಕೊಲೆಯಾದರೆ ಅದನ್ನು ಮಾನವೀಯ ಕಳಕಳಿ ಇರುವ ಯಾರಾದರೂ ಖಂಡಿಸಲೇಬೇಕು. ಎಡಪಂಥೀಯನಾಗಲೀ, ಬಲಪಂಥೀಯನಾಗಲೀ ದುಷ್ಕೃತ್ಯ ಯಾರೇ ಮಾಡಿದರೂ ಅದನ್ನು ಸಮಾನ ರೀತಿಯಲ್ಲಿ ನೋಡುವ ಪರಿಪಾಠ ಮರೆಯಾಗಿದೆ. ಇಲ್ಲಿ ಮಾನವತೆಯನ್ನು ವಿಚಾರವಾದ ನುಂಗಿಬಿಟ್ಟಿದೆ. ಸತ್ತವರು, ದೌರ್ಜನ್ಯಕ್ಕೊಳಗಾದವರ ಜಾತಿ, ಮತ, ರಾಜಕೀಯ ಪಕ್ಷ, ವೈಚಾರಿಕ ಒಲವು/ನಿಲುವುಗಳನ್ನು ಆಧರಿಸಿ ಅಂತಹ ದುರ್ಘಟನೆಗಳಿಗೆ ನಮ್ಮ ಪ್ರತಿಕ್ರಿಯೆ ಇರುತ್ತದೆಯೆಂದರೆ ಅದು ಮಾನವೀಯತೆಯ ಒರತೆ ಬತ್ತುತ್ತಿರುವುದನ್ನು ತೋರಿಸುತ್ತದೆ.
     ಅಧಿಕಾರದ ಸಲುವಾಗಿ ಏನು ಮಾಡಲೂ ಹೇಸದ ರಾಜಕಾರಣಿಗಳು, ಮತಾಂಧರು, ಸ್ವಂತದ ಲಾಭಕ್ಕಾಗಿ ಸತ್ಯದ ಹತ್ಯೆ ಮಾಡಲು ಸಿದ್ಧರಾಗಿರುವ ವಿಚಾರವ್ಯಾಧಿಗಳು, ಹಣ ಮತ್ತು ಟಿ.ಆರ್.ಪಿ. ಸಲುವಾಗಿ ಋಣಾತ್ಮಕ ಸಂಗತಿಗಳಿಗೆ ನೀರೆರೆಯುತ್ತಿರುವ ಹಲವು ಮಾಧ್ಯಮಗಳವರು ಮತ್ತು ಇಂತಹವನ್ನು ಕಂಡೂ ಕಾಣದಂತೆ ಕಣ್ಣುಮುಚ್ಚಿಕೊಂಡು ಸಹಿಸುವ ಸಜ್ಜನ ಸುಬ್ಬಣ್ಣರುಗಳು ಇಂದಿನ ಪರಿಸ್ಥಿತಿಗೆ ನೇರ ಕಾರಣರೆಂದರೆ ಅತಿಶಯೋಕ್ತಿಯಲ್ಲ. ನಮಗೆ ತೊಂದರೆಯಾದರೆ ಮಾತ್ರ ಗೊಣಗುಟ್ಟುವ, ನಮಗೇನೂ ತೊಂದರೆಯಿಲ್ಲವೆನಿಸಿದಾಗ ಮತ್ತು ಇತರರಿಗೆ ಮಾತ್ರ ತೊಂದರೆಯಾದಾಗ ಅದನ್ನು ಕಟ್ಟಿಕೊಂಡು ನಮಗೇನು ಎಂಬ ಭಾವ ತೋರುವವರ ಮನೋಭಾವ ಬದಲಾಗುವವರೆಗೆ ಇಂತಹ ಪರಿಸ್ಥಿತಿ ಇದ್ದೇ ಇರುತ್ತದೆ. ಕೆಟ್ಟವರು ಕೆಲವೇ ಜನರಿದ್ದರೂ ಅವರ ಉಪಟಳ, ಶಕ್ತಿ ಏಕೆ ಹೆಚ್ಚಾಗಿರುತ್ತದೆಯೆಂದರೆ, ಹೆಚ್ಚಿನ ಸಂಖ್ಯೆಯಲ್ಲಿರುವ ಒಳ್ಳೆಯವರು ನಮಗೇಕೆ ಅವರ ಉಸಾಬರಿ, ನಮಗೆ ಅವರಿಂದ ತೊಂದರೆಯಾಗದಿದ್ದರೆ ಸಾಕು ಎಂದು ಅಂದುಕೊಳ್ಳುವುದೇ ಆಗಿದೆ. ಸಜ್ಜನ ಶಕ್ತಿಯನ್ನು ಬಡಿದೆಬ್ಬಿಸಿ ಜಾಗೃತಗೊಳಿಸುವ ಕೆಲಸ ಈಗ ತುರ್ತಾಗಿ ಆಗಬೇಕಿದೆ.
-ಕ.ವೆಂ.ನಾಗರಾಜ್.
**************
ದಿನಾಂಕ 12.6.2017ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ: