ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 30, 2010

ಮೂಢ ಉವಾಚ -15

ಕೆಂಡ ಕಾರುವ ಕಣ್ಣು ಗಂಟಿಕ್ಕಿದಾ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು|
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||


ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ|
ತಡೆಯಬಂದವರನೆ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||


ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ
ಕೋಪದಿಂದಲೆ ನಾಶ ಕೋಪದಿಂದಲೆ ಭಯವು|
ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ
ಕೋಪಿಷ್ಠರವರು ಪಾಪಿಷ್ಠರೋ ಮೂಢ||


ಸರಸ ಸಂತಸವಿಲ್ಲ ಮನಕೆ ನೆಮ್ಮದಿಯಿಲ್ಲ
ಮಾತಿಲ್ಲ ಕತೆಯಿಲ್ಲ ನಗುವು ಮೊದಲೇ ಇಲ್ಲ|
ಕೋಪಿಷ್ಠರಾ ಮನೆಯು ಸೂತಕದ ಅಂಗಣವು
ಕೋಪವದು ನರಕದ್ವಾರವೋ ಮೂಢ||
*****************
-ಕವಿನಾಗರಾಜ್.

ಗುರುವಾರ, ಜುಲೈ 29, 2010

ಸೇವಾ ಪುರಾಣ -10: ಸರಳುಗಳ ಹಿಂದಿನ ಲೋಕ -3: ಹೃದಯ ಕಲಕಿದ ಘಟನೆ


ಹೊರಗೂ ಜೈಲು, ಒಳಗೂ ಜೈಲು!
     ತುರ್ತು ಪರಿಸ್ಥಿತಿ ಸಮಯದಲ್ಲಿ ನನ್ನ ಮಟ್ಟಿಗೆ ಎಲ್ಲವೂ ಜೈಲಿನಂತೆಯೇ ಆಗಿತ್ತು. ಮನೆಯಲ್ಲಿದ್ದರೆ ಮನೆಯವರೆಲ್ಲರೂ ನನಗೆ ಏನಾಗುತ್ತದೆಯೋ, ನಾನು ದುಡುಕಿ ಏನಾದರೂ ಆಪತ್ತು ತಂದುಕೊಳ್ಳುತ್ತೇನೋ ಎಂದು ಗಮನಿಸುತ್ತಿದ್ದರು. ಹೊರಗೆ ಹೋದರೆ ಮಫ್ತಿ ಪೋಲಿಸರ ಕಾಟ. ನನ್ನನ್ನು ಮಾತನಾಡಿಸಲು ನನ್ನ ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳು ಹಿಂಜರಿಯುತ್ತಿದ್ದರು. ನನ್ನಿಂದಾಗಿ ಅವರಿಗೂ ತೊಂದರೆಯಾಗಬಾರದು, ಮುಜುಗುರವಾಗಬಾರದು ಎಂದು ನಾನೂ ಸಹ ಅವರನ್ನು ಮಾತನಾಡಿಸುತ್ತಿರಲಿಲ್ಲ. ಹೀಗಾಗಿ ಒಂದು ರೀತಿಯ ಒಂಟಿತನದಿಂದ ಜೀವನ ಸಾಗುತ್ತಿತ್ತು. ಲೈಬ್ರರಿಗೆ ಹೋಗಿ ಮಹಾಪುರುಷರ ಜೀವನ ಚರಿತ್ರೆಗಳು, ಇಷ್ಟವಾಗುವ ಪುಸ್ತಕಗಳನ್ನು ಓದುತ್ತಾ ಕುಳಿತುಕೊಳ್ಳುತ್ತಿದ್ದೆ. ಸ್ವಾಮಿ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳು, ಸುಭಾಷಚಂದ್ರ ಬೋಸರ ಸಾಹಸಗಾಥೆ, ಕ್ರಾಂತಿಕಾರಿಗಳ ಕುರಿತು ಪುಸ್ತಕಗಳನ್ನು ಓದಲು, ಅಭ್ಯಸಿಸಲು ಅವಕಾಶವಾಯಿತು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಯಾವುದೇ ಪುಸ್ತಕ, ಸಂಗತಿಗಳು ನನಗೆ ಇಷ್ಟವಾಗುತ್ತಿತ್ತು. ಲೈಬ್ರರಿಗೆ ಹೋಗಿ ತುರ್ತು ಪರಿಸ್ಥಿತಿ ವಿರುದ್ಧ ಕರಪತ್ರಗಳನ್ನು ಹಾಕುತ್ತಿದ್ದೆನೆಂದು ಒಂದು ಪ್ರಕರಣ ಸಹ ನನ್ನ ಮೇಲೆ ದಾಖಲಾಯಿತು. ಮನೆಯಿಂದ ಹೊರಗೆ ಹೊರಟರೆ ಮನೆಗೆ ವಾಪಸು ಬರುತ್ತೇನೋ ಇಲ್ಲವೋ ಎಂದು ಮನೆಯಲ್ಲಿ ಆತಂಕಪಡುತ್ತಿದ್ದರು. ಮನೆಯಲ್ಲೇ ಇರಲೂ ಆಗುತ್ತಿರಲಿಲ್ಲ. ಹಾಸನಕ್ಕೆ ಯಾರೇ ಪ್ರಮುಖ ಕಾಂಗ್ರೆಸ್ ನಾಯಕರುಗಳು ಬಂದಾಗಲೆಲ್ಲಾ ನಾನೂ ಸೇರಿದಂತೆ 15-20 ಜನರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಠಾಣೆಯಲ್ಲಿರಿಸಿಕೊಂಡು ಅವರು ಹೋದ ನಂತರ ಬಿಟ್ಟು ಕಳುಹಿಸುತ್ತಿದ್ದರು. ಪೋಲಿಸರ ಪ್ರಕಾರ ವಿಧ್ವಂಸಕರ, ರಾಷ್ಟ್ರದ್ರೋಹಿಗಳ ಪೈಕಿ ನಾನೂ ಒಬ್ಬನಾಗಿದ್ದೆ. ಹೀಗಾಗಿ ನನಗೆ ಹೊರಗಿನ ಜೈಲಿಗಿಂತ ಒಳಗಿನ ಜೈಲೇ ಹಿತವೆನಿಸುತ್ತಿತ್ತು, ಅಲ್ಲೇ ಮುಕ್ತ ವಾತಾವರಣವಿತ್ತೆಂದು ಅನ್ನಿಸುತ್ತಿತ್ತು.
ಹೃದಯ ಕಲಕಿದ ಘಟನೆ
     ವೈಯಕ್ತಿಕವಾಗಿ ನನಗೆ ಸಂಬಂಧಿಸಿರದಿದ್ದರೂ ಹೃದಯ ಕಲಕಿದ ಈ ಘಟನೆಯನ್ನು ಉಲ್ಲೇಖಿಸದೆ ಇರಲು ಆಗುತ್ತಿಲ್ಲ. ಕೇಂದ್ರ ಮಂತ್ರಿಯಾಗಿದ್ದ ಶ್ರೀ ಜಾಫರ್ ಶರೀಫ್ ಸಾಹೇಬರು ಎರಡು ದಿನಗಳ ಭೇಟಿಗಾಗಿ ಹಾಸನಕ್ಕೆ ಬರುತ್ತಾರೆಂದು ನಮ್ಮನ್ನು ಹಾಸನದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಕೂಡಿಟ್ಟಿದ್ದರು. ಶರೀಫ್ ಸಾಹೇಬರು ಬರುತ್ತಾರೆಂದು ನಮ್ಮನ್ನು ಠಾಣೆಯಲ್ಲಿ ಇರಿಸಿದಾಗಲೇ ನಮಗೆ ಗೊತ್ತಾಗಿದ್ದು. ನಾವು ಅಲ್ಲಿದ್ದಂತೆ ಸಾಯಂಕಾಲದ ಹೊತ್ತಿಗೆ ಹಳ್ಳಿಯವರಂತೆ ಕಾಣುತ್ತಿದ್ದ ಒಬ್ಬ ವೃದ್ಧ ಮತ್ತು ಸುಮಾರು 25 ವರ್ಷದ ಒಬ್ಬ ಹೆಣ್ಣುಮಗಳನ್ನು ತಂದು ಸೆಲ್ ನಲ್ಲಿರಿಸಿದರು. ಹೆಣ್ಣುಮಗಳು ಆ ವೃದ್ಧನ ಮಗಳಿರಬಹುದೆಂದು ಅಂದುಕೊಂಡೆವು. ರಾತ್ರಿ ಸುಮಾರು 10 ಘಂಟೆ ವೇಳೆಗೆ ಮುದುಕನ ಗೋಳಾಟ ತೂಕಡಿಸುತ್ತಿದ್ದ ನಮ್ಮನ್ನೆಚ್ಚರಿಸಿತು. 'ಬೇಡ ಸ್ವಾಮಿ, ನಿಮ್ಮ ಕಾಲಿಗೆ ಬೀಳುತ್ತೇನೆ, ನನ್ನ ಮಗಳಿಗೆ ಏನೂ ಮಾಡಬೇಡಿ,ನಿಮ್ಮ ದಮ್ಮಯ್ಯ, ಬಿಟ್ಟುಬಿಡಿ' ಎಂದು ಆ ಮುದುಕ ಕಲ್ಲೂ ಕರಗುವಂತೆ ಅಂಗಲಾಚುತ್ತಿದ್ದರೆ ಒಬ್ಬ ಪೇದೆ ಅವಳನ್ನು ನಿರ್ದಯವಾಗಿ ಅಲ್ಲಿಂದ ಕರೆದೊಯ್ದ. ಸ್ವಲ್ಪ ಹೊತ್ತಿಗೆಲ್ಲಾ ಆ ಹೆಣ್ಣುಮಗಳ ಭಯಭೀತ ಆಕ್ರಂದನ ಕೇಳಲಾರಂಭಿಸಿತು. ನಮಗೆ ಪರಿಸ್ಥಿತಿಯ ಅರಿವಾದರೂ ನಾವು ಒಳಗಿದ್ದರಿಂದ ನಾವು ಏನೂ ಮಾಡುವಂತಿರಲಿಲ್ಲ. ಒಳಗಿನಿಂದಲೇ ನಾವೂ ಕೂಗಾಡಿ, ಕಿರುಚಾಡಿ ಮಾಡಿದೆವು. ನಮ್ಮ ಕೈಯಲ್ಲಿ ಮಾಡಲು ಸಾಧ್ಯವಿದ್ದದ್ದು ಅಷ್ಟೇ ಆಗಿತ್ತು. ಅದನ್ನು ಯಾರೂ ಲೆಕ್ಕಿಸಲೂ ಇಲ್ಲ, ಹೊರಜಗತ್ತಿಗೆ ಏನೂ ಗೊತ್ತಾಗಲೇ ಇಲ್ಲ. ಮರುದಿನ ಬೆಳಿಗ್ಗೆ ಆ ಮುದುಕ ಮತ್ತು ಅವನ ಮಗಳನ್ನು ಠಾಣೆಯಿಂದ ಕರೆದುಕೊಂಡು ಹೋದರು. ನಮ್ಮನ್ನೂ ಆದಿನ ಸಾಯಂಕಾಲ ಬಿಟ್ಟುಕಳಿಸಿದರು.
     ಈ ಘಟನೆ ನಡೆದ ಹಲವು ದಿನಗಳ ನಂತರ ಇನ್ನೊಂದು ಪ್ರಕರಣದ ಕಾರಣದಿಂದ ಹಾಸನದ ಜೈಲಿಗೆ ಮತ್ತೆ ಪ್ರವೇಶವಾಯಿತು. ಊಟಕ್ಕೆ ಬಿಟ್ಟ ವೇಳೆಯಲ್ಲಿ ಇನ್ನೊಂದು ಬ್ಯಾರಕ್ಕಿನಲ್ಲಿದ್ದ ವೃದ್ಧ ಕಣ್ಣಿಗೆ ಬಿದ್ದ. ಮಾತನಾಡಿಸಿ ವಿಚಾರಿಸಿದಾಗ ತಿಳಿದ ವಿಷಯ ಎಂತಹವರನ್ನೂ ಮರುಗಿಸದೆ ಇರಲಾರದು. ಆತನ ಮಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನದ ಸಮಯದಲ್ಲಿ ಆತನ ಮಗಳು ಅವನಿಗಾಗಿ ಊಟದ ಬುತ್ತಿ ತೆಗೆದುಕೊಂಡು ಹೋಗಿದ್ದಳು. ಊಟ ಮಾಡುತ್ತಿದ್ದ ಸಮಯದಲ್ಲಿ ಇವರ ಎತ್ತೊಂದು ಪಕ್ಕದ ಜಮೀನಿಗೆ ಹೋಗಿ ಮೇಯತೊಡಗಿತ್ತು. ಪಕ್ಕದ ಜಮೀನಿನವನು ದೊಣ್ಣೆಯಿಂದ ಎತ್ತಿಗೆ ಹೊಡೆದಾಗ ಎತ್ತಿನ ಮುಂಗಾಲು ಮುರಿದಿತ್ತು. ಸಿಟ್ಟಿಗೆದ್ದ ಇವನ ಮಗ ತಕ್ಷಣ ಕುಡುಗೋಲಿನಿಂದ ಪಕ್ಕದ ಜಮೀನಿನವನ ಕುತ್ತಿಗೆಗೆ ಹೊಡೆದಾಗ ಆತ ಅಲ್ಲೇ ಕುಸಿದು ಸತ್ತುಬಿದ್ದ. ಅಲ್ಲಿದ್ದ ಇವನ ಮಗಳು ತಮ್ಮನನ್ನು ಉಳಿಸುವ ಸಲುವಾಗಿ ಕುಡುಗೋಲನ್ನು ತಾನು ತೆಗೆದುಕೊಂಡು ತಮ್ಮನನ್ನು ಮನೆಗೆ ಕಳಿಸಿದಳು. ಜನ ಗುಂಪುಕೂಡಿದರು. ಇವನೂ ಅಲ್ಲಿಗೆ ಓಡಿ ಬಂದ. ಪೋಲಿಸರೂ ಬಂದರು. ಇವನ ಮಗಳು ಪಕ್ಕದ ಜಮೀನಿನವನು ತನ್ನನ್ನು ಕೆಡಿಸಲು ಬಂದನೆಂದೂ ರಕ್ಷಣೆಗಾಗಿ ತಾನು ಹಾಗೆ ಮಾಡಬೇಕಾಯಿತೆಂದು ಹೇಳಿಕೆ ಕೊಟ್ಟಳು. ಪೋಲಿಸರು ತನ್ನನ್ನೂ ಮತ್ತು ತನ್ನ ಮಗಳನ್ನೂ ಬಂಧಿಸಿ ಕರೆತಂದರೆಂದೂ, ಪೋಲಿಸ್ ಠಾಣೆಯಲ್ಲಿ ಪೋಲಿಸರು ತನ್ನ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದರೆಂದು ಹೇಳುವಾಗ ಆ ವೃದ್ಧನ ಗಂಟಲಿನ ನರಗಳು ಉಬ್ಬಿ ಮಾತನಾಡಲಾರದಾಗಿದ್ದ.ನನ್ನ ಕಣ್ಣುಗಳೂ ನೀರಾಡಿದವು. ಇದೇ ಜೈಲಿನ ಇನ್ನೊಂದು ಬ್ಯಾರಕ್ಕಿನಲ್ಲಿರುವ ತನ್ನ ಮಗಳನ್ನು ನೋಡಲೂ ಅವಕಾಶವಾಗಿಲ್ಲವೆಂದು ಕಣ್ಣೀರಿಟ್ಟ. ಜೈಲಿನಲ್ಲಿದ್ದ ಹಳೆಯ ಕೈದಿಗಳು ಹೇಳಿದ ಪ್ರಕಾರ ಮಹಿಳಾ ಕೈದಿಗಳನ್ನು ನೋಡಿಕೊಳ್ಳಲು ಒಬ್ಬರು ಮಹಿಳಾ ವಾರ್ಡನ್ ಇದ್ದರೂ ಆಕೆ ರಾತ್ರಿ ಹೊತ್ತು ಇರುವುದಿಲ್ಲವೆಂದೂ ಯಾವುದೇ ಮಹಿಳಾ ಕೈದಿ ಬಂದರೂ ಜೈಲಿನ ಸಿಬ್ಬಂದಿ ಅವರನ್ನು ಲೈಂಗಿಕವಾಗಿ ಹಿಂಸಿಸುವುದು ಸಾಮಾನ್ಯವೆಂದೂ, ಹಣ ಕೊಡುವ ಹಳೆಯ ಕೈದಿಗಳಿಗೂ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆಂದೂ ಹೇಳಿದ ಸಂಗತಿ ಆಘಾತಕರವಾಗಿತ್ತು. ವಿಶ್ವಾಸದಿಂದಿದ್ದ ಜೈಲಿನ ಗಾರ್ಡ್ ಒಬ್ಬರು ಇದನ್ನು ಖಚಿತಪಡಿಸಿ ತನ್ನ ಸಹೋದ್ಯೋಗಿಗಳಿಂದ ಮುದುಕನ ಮಗಳಿಗೂ ತೊಂದರೆಯಾಗಿದೆಯೆಂದೂ ಹೇಳಿದರು. ಸುಮಾರು 90 ಸಂಖ್ಯೆಯಷ್ಟಿದ್ದ ನಾವುಗಳು ಪರಸ್ಪರ ಚರ್ಚಿಸಿ ಇದನ್ನು ಪ್ರತಿಭಟಿಸಲು ನಿರ್ಧರಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತೆವು. ಹೆದರಿಕೆ, ಬೆದರಿಕೆಗಳು ಬಂದರೂ ಜಗ್ಗಲಿಲ್ಲ. ನ್ಯಾಯಾಲಯಗಳಲ್ಲಿ ಹಿಯರಿಂಗ್ ಇದ್ದವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲು ಪೋಲಿಸರು ಬಂದಾಗ ಬಂದಿಗಳು ಹೋಗಲು ನಿರಾಕರಿಸಿದರು. ವಿಷಯ ತೀವ್ರಗೊಂಡಾಗ ಹಿರಿಯ ಅಧಿಕಾರಿಗಳು ಬಂದು ಇಬ್ಬರು ಗಾರ್ಡ್ ಗಳನ್ನು ಅಮಾನತ್ತಿನಲ್ಲಿಟ್ಟು ನ್ಯಾಯಯುತ ವಿಚಾರಣೆ ನಡೆಸುವುದಾಗಿ ಆಶ್ವಾಸನೆ ಕೊಟ್ಟ ನಂತರ ನಮ್ಮ ಎರಡು ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿತು. ಹೆಚ್ಚಿನ ವಿವರ ನೀಡದೇ ಕಥೆಯ ಅಂತ್ಯಕ್ಕೆ ಬಂದುಬಿಡುತ್ತೇನೆ. ಕೆಲವು ತಿಂಗಳುಗಳ ನಂತರದಲ್ಲಿ (ನಾನು ಆಗ ಜೈಲಿನಲ್ಲಿರಲಿಲ್ಲ)ಮುದುಕನ ಪತ್ನಿ ತೀರಿಕೊಂಡಾಗ ಅಂತ್ಯ ಸಂಸ್ಕಾರದ ಸಮಯದಲ್ಲಿ ಮುದುಕನನ್ನೂ ಆತನ ಮಗಳನ್ನೂ ಪೋಲಿಸ್ ರಕ್ಷಣೆಯಲ್ಲಿ ಕರೆದುಕೊಂಡು ಹೋಗಿದ್ದರಂತೆ. ಆ ಹುಡುಗಿ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಳಂತೆ. ಆ ಸಂದರ್ಭದಲ್ಲಿ ಅವಳು ಪೋಲಿಸರ ಕಣ್ಣು ತಪ್ಪಿಸಿ ಮನೆಯ ಹಿಂದಿನ ಬಾವಿಗೆ ಹಾರಿದಳಂತೆ. ನಂತರ ಹೊರಬಂದಿದ್ದು ಆಕೆಯ ಹೆಣ. ಪತ್ರಿಕೆಗಳಲ್ಲಿ ಈ ವಿಷಯ ಆತ್ಮಹತ್ಯೆ ಎಂದು ಪ್ರಕಟವಾಗಿತ್ತು. ನಿಜಕ್ಕೂ ಅದು ಆತ್ಮಹತ್ಯೆಯೇ? ಕೊಲೆಯೇ?

ಸೋಮವಾರ, ಜುಲೈ 26, 2010

ಸೇವಾಪುರಾಣ -9: ಸರಳುಗಳ ಹಿಂದಿನ ಲೋಕ -2: ಪೋಲಿಸರ ಕುಯುಕ್ತಿ

ಪೋಲಿಸರ ಕುಯುಕ್ತಿ
     ನಾನು ಪೋಲಿಸ್ ಠಾಣೆಗೆ ಹಾಜರಾತಿ ಹಾಕಲು ಹೋಗಿದ್ದಾಗ ಸಬ್ ಇನ್ಸ್ ಪೆಕ್ಟರರು ನನ್ನನ್ನು ಜೀಪಿನಲ್ಲಿ ಕುಳಿತುಕೊಳ್ಳಲು ಹೇಳಿದರು. ನಾನು ಏಕೆ ಎಂದು ಕೇಳಿದ್ದಕ್ಕೆ ಕೆಕ್ಕರಿಸಿ ನೋಡಿದರು. ನಾನು ಸುಮ್ಮನೆ ಹೋಗಿ ಜೀಪು ಹತ್ತಿ ಕುಳಿತೆ. ಒಬ್ಬ ಆರೆಸ್ಸೆಸ್ ಕಾರ್ಯಕರ್ತನನ್ನು ಬಂಧಿಸಲು ಹೋಗುತ್ತಿದ್ದರೆಂದು ಆತನ ಮನೆಯ ಮುಂದೆ ಜೀಪು ನಿಂತಾಗಲೇ ನನಗೆ ಗೊತ್ತಾಗಿದ್ದು. ನನ್ನನ್ನೂ ಅವರ ಮನೆಯ ಒಳಗೆ ಕರೆದುಕೊಂಡು ಹೋದರು.ನಾನು ಮನೆಯ ಸ್ಟೇರ್ ಕೇಸಿನ ಮೆಟ್ಟಿಲ ಮೇಲೆ ಹಿಡಿಯಾದ ಮನಸ್ಸಿನಿಂದ ಕುಳಿತಿದ್ದೆ. ಯಾರನ್ನು ಬಂಧಿಸಲು ಹೋಗಿದ್ದರೋ ಆತನೂ ನನ್ನ ಸ್ನೇಹಿತನೇ ಆಗಿದ್ದು ಆತನ ಮನೆಯವರೂ ನನಗೆ ಪರಿಚಿತರಿದ್ದರು. ಆತನ ಮನೆಯವರು ನನ್ನನ್ನು ಒಂದು ತರಹಾ ನೋಡುತ್ತಿದ್ದರು. ಅವರ ದೃಷ್ಟಿಯಲ್ಲಿ ಆತನನ್ನು ನಾನೇ ಹಿಡಿಸುತ್ತಿದ್ದೇನೆ ಎಂಬ ಭಾವನೆ ಬಂದಿತ್ತೆಂದು ನಂತರ ನನಗೆ ಗೊತ್ತಾಗಿ ಬಹಳ ನೊಂದುಕೊಂಡಿದ್ದೆ. ಆತ ಆ ಸಮಯದಲ್ಲಿ ಮನೆಯಲ್ಲಿರಲಿಲ್ಲ. ಪೇದೆಗಳು ಮನೆಯನ್ನೆಲ್ಲಾ ಜಾಲಾಡಿದರು. ಅವನನ್ನು ಕರೆಸಲು ಆತನ ತಂದೆಗೆ ಪೋಲಿಸ್ ಭಾಷೆಯಲ್ಲಿ ಆದೇಶಿಸಿದರು. ಬಂದ ತಕ್ಷಣ ಠಾಣೆಗೆ ಕಳಿಸಿಕೊಡುವುದಾಗಿ ಆತನ ವೃದ್ಧ ತಂದೆ ಹೇಳಿದರೂ, ಸಬ್ ಇನ್ಸ್ ಪೆಕ್ಟರರು ಆ ವೃದ್ಧರಿಗೆ ಹೇಳಿದ ಮಾತಿನಿಂದ ನನಗೇ ರೋಷ ಉಕ್ಕಿ ಬಂದಿದ್ದಾಗ ಆತನ ಮನೆಯವರಿಗೆ ಹೇಗಾಗಿರಬೇಕು!  ಅಸಹಾಯಕತೆ ಎಲ್ಲರನ್ನೂ ಷಂಡರನ್ನಾಗಿಸಿತ್ತು. ತುರ್ತು ಪರಿಸ್ಥಿತಿ ಅಂತಹ ವಾತಾವರಣ ನಿರ್ಮಿಸಿತ್ತು. ರಾಜಕೀಯಸ್ಥರು -ಅದರಲ್ಲೂ ಕಾಂಗ್ರೆಸ್ಸಿಗರು- ತಮಗಾಗದವರನ್ನು ಮಟ್ಟ ಹಾಕಲು ಸಂದರ್ಭವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಪೋಲಿಸರ ಕೈಗೆ ಸರ್ವಾಧಿಕಾರ ಸಿಕ್ಕಿಬಿಟ್ಟಿತ್ತು. ಅವರ ವಿಕೃತ ಕ್ರೌರ್ಯಕ್ಕೆ ಮಿತಿಯೇ ಇರಲಿಲ್ಲ.
ರಾಷ್ಟ್ರದ್ರೋಹದ ಕೇಸು!
     ಎರಡು ತಿಂಗಳ ನಂತರ ದಿನಾಂಕ 9-11-1975ರಂದು ವಿಧ್ವಂಸಕ ಕೃತ್ಯಕ್ಕಾಗಿ ಪಿತೂರಿ ಮಾಡುತ್ತಿದ್ದೇನೆಂದು ನಾನೂ ಸೇರಿದಂತೆ 11 ಜನರ ವಿರುದ್ಧ ಭಾರತ ರಕ್ಷಣಾ ಕಾಯದೆಯನ್ವಯ ಮೊಕದ್ದಮೆ ಹೂಡಿದಾಗ ಪುನಃ ಜೈಲಿನ ದರ್ಶನವಾಯಿತು. ಹಾಸನದ ಇಂಜನಿಯರಿಂಗ್ ಕಾಲೇಜಿನ ಇನ್ಸ್ ಟ್ರಕ್ಟರ್ ಚಂದ್ರಶೇಖರ್, ಕರ್ನಾಟಕ ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಟೈಲರ್ ಜನಾರ್ಧನ ಐಯಂಗಾರ್, ಪೆಟ್ಟಿಗೆ ಅಂಗಡಿ ರಾಮಚಂದ್ರ (ಇವರನ್ನು ಕಛ್ ರಾಮಚಂದ್ರ ಎಂದು ಕರೆಯುತ್ತಿದ್ದರು, ಗೋವಾ ವಿಮೋಚನಾ ಚಳುವಳಿಯಲ್ಲಿ ಪಾಲ್ಗೊಂಡಿದ್ದವರು),ಆರೆಸ್ಸೆಸ್ ಪ್ರಚಾರಕರಾಗಿದ್ದ ಪ್ರಭಾಕರ ಕೆರೆಕೈ (ಇವರು ತುರ್ತು ಪರಿಸ್ಥಿತಿ ನಂತರದಲ್ಲಿ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಯಾರನ್ನು ಕಂಡರೂ -ಪರಿಚಯದವರಾದರೂ- ಭಯಪಡುತ್ತಿದ್ದರು, ಮತ್ತು ಇದೇ ಕಾರಣದಲ್ಲಿ 30-32ರ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡರು.ಬಹುಷಃ ತುರ್ತು ಪರಿಸ್ಥಿತಿಯಲ್ಲಿ ಅವರು ಅನುಭವಿಸಿದ್ದ ಹಿಂಸೆ ಅದಕ್ಕೆ ಕಾರಣವಾಗಿದ್ದಿರಬಹುದು),ವಿದ್ಯಾರ್ಥಿಗಳಾದ ನಾಗಭೂಷಣ, ಪಾರಸಮಲ್, ಶ್ರೀನಿವಾಸ,ಪಟ್ಟಾಭಿರಾಮ, ಸದಾಶಿವ ಇವರುಗಳೇ ನನ್ನೊಂದಿಗೆ ಬಂದಿಗಳಾದವರು. ಈ ಪ್ರಕರಣದಲ್ಲಿ ನಮಗೆ ಜಾಮೀನು ಸಿಗಲಿಲ್ಲ. ಜೊತೆಯಲ್ಲಿದ್ದ ಕೆಲವರು ಹತಾಶರಾಗಿದ್ದರು. ಈ ಪ್ರಕರಣ ಮುಗಿಯುವವರೆಗೆ ಅಂದರೆ 3-4 ತಿಂಗಳುಗಳವರೆಗೆ ನಾವು ಕಾರಾಗೃಹದಲ್ಲೇ ಇರಬೇಕಾಯಿತು. ನನ್ನ ಜೊತೆಗೆ ನನ್ನಂತಹವರೇ ಇದ್ದುದರಿಂದ ಈಸಲ ಅಷ್ಟೊಂದು ಹಿಂಸೆಯೆನಿಸಲಿಲ್ಲ.ಇದೇ ತಿಂಗಳಿನಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ದೇಶವ್ಯಾಪಿ ಆಂದೋಲನ ಪ್ರಾರಂಭವಾಗಿ ಆರೆಸ್ಸೆಸ್, ಜನಸಂಘದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಸನದ ಜೈಲಿಗೆ ಬರತೊಡಗಿದರು. ಇಂತಹ ಹೊಸ ಹೊಸ ಬಂದಿಗಳು ಬಂದಾಗಲೆಲ್ಲಾ ಅವರಿಗೆ ಜೈಲಿನಲ್ಲಿ ವೀರೋಚಿತ ಸ್ವಾಗತ ಸಿಗುತ್ತಿತ್ತು. ಸತ್ಯಾಗ್ರಹಿಗಳ ಸಂಖ್ಯೆ ಜಾಸ್ತಿಯಾದಾಗ ಕಳ್ಳಕಾಕರೊಂದಿಗೆ ಇರಿಸದೆ ಪ್ರತ್ಯೇಕವಾಗಿ ಇರಿಸಬೇಕೆಂಬ ಒತ್ತಾಯಕ್ಕೆ ಜೈಲು ಸಿಬ್ಬಂದಿ ಮಣಿಯಲೇ ಬೇಕಾಯಿತು. ನಮ್ಮನ್ನೆಲ್ಲಾ ಒಂದು ಬ್ಯಾರಕ್ಕಿನಲ್ಲಿ, ಇತರ ಕೈದಿಗಳನ್ನು ಇನ್ನೊಂದು ಬ್ಯಾರಕ್ಕಿನಲ್ಲಿ ತುಂಬಿದರು. 35 ಬಂದಿಗಳನ್ನು ಇರಿಸಬಹುದಾದ ಕಾರಾಗೃಹದಲ್ಲಿ 200ಕ್ಕೂ ಹೆಚ್ಚು ಕೈದಿಗಳನ್ನು ಅಕ್ಷರಶಃ ತುಂಬಲಾಗಿತ್ತು.ನಂತರ ಬಂದವರನ್ನು ಬಳ್ಳಾರಿ, ಮೈಸೂರು ಜೈಲುಗಳಿಗೆ ಕಳಿಸುತ್ತಿದ್ದರು. ಜೈಲಿನ ಒಳಗಿದ್ದಾಗ ಹೊಸ ಕೇಸುಗಳ ಭಯವಿರಲಿಲ್ಲ.ಹೊರಗಿಗಿಂತ ಜೈಲಿನ ಒಳಗೇ ಒಂದು ರೀತಿಯ ನಿರ್ಭಯ ವಾತಾವರಣವಿತ್ತೆಂದರೆ ತಪ್ಪಿರಲಿಲ್ಲ.
ಸುಧಾರಣೆ
     ನಮ್ಮ ಪ್ರತಿಭಟನೆಯಿಂದಾಗಿ ಜೈಲು ಸಿಬ್ಬಂದಿ ಕಟ್ಟಿದಾರಭ್ಯ ಶುಚಿಗೊಳ್ಳದಿದ್ದ ನೀರಿನ ತೊಟ್ಟಿ, ಅಡುಗೆ ಮನೆ, ಶೌಚಾಲಯ ಸ್ವಚ್ಛಗೊಳಿಸಲು ಕ್ರಮ ಕೈಗೊಂಡದ್ದು ಅದ್ಭುತ ಸಾಧನೆಯೆಂದೇ ಹೇಳಬಹುದು.ಮೊದಲು ನಮಗೆ ಕೊಡುತ್ತಿದ್ದ ಆಹಾರವನ್ನು ತಯಾರಿಸುವ ಕೆಲಸ ಅಡುಗೆ ಬಲ್ಲ ಕೈದಿಗಳೇ ಮಾಡುತ್ತಿದ್ದು ಅವರು ಇರುತ್ತಿದ್ದ ಸ್ಥಿತಿ ನೋಡಿದರೆ ಮಾಡಿದ ಊಟವೆಲ್ಲಾ ಹೊರಬರುತ್ತಿತ್ತು.ನಮ್ಮ ಅಡುಗೆಯನ್ನು ನಾವೇ ಸಿದ್ಧಪಡಿಸಿಕೊಳ್ಳಲು ಅವಕಾಶ ಪಡೆದೆವು.ನಾನು ಫುಡ್ ಇನ್ಸ್ ಪೆಕ್ಟರ್ ಆಗಿದ್ದರಿಂದ ಎಲ್ಲರೂ ನನ್ನನ್ನು ಫುಡ್ ನಾಗರಾಜ ಎಂತಲೇ ಕರೆಯುತ್ತಿದ್ದರು. ಜೈಲಿನಲ್ಲಿಯೂ ಆಹಾರ ವಿಭಾಗದ ಮೇಲ್ವಿಚಾರಣೆ ಕೆಲಸ ನನ್ನ ಹೆಗಲಿಗೇ ಬಿತ್ತು.ನಮಗೆ ಬರಬೇಕಾದ ಆಹಾರ ಧಾನ್ಯಗಳ ಪ್ರಮಾಣವನ್ನು (ಒಬ್ಬ ಕೈದಿಗೆ ಇಷ್ಟು ಹಿಟ್ಟು, ತರಕಾರಿ, ಬೇಳೆ, ಸೌದೆ, ಎಂದು ಪ್ರಮಾಣ ನಿಗದಿತವಾಗಿರುತ್ತದೆ) ಲೆಕ್ಕ ಹಾಕಿ ಪಡೆಯುವ ಕೆಲಸ ಮಾಡುತ್ತಿದ್ದೆ. ಜೈಲು ಸಿಬ್ಬಂದಿ ಈ ಮೊದಲು ಕೈದಿಗಳಿಗೆ ಕೊಡುತ್ತಿದ್ದ ಪ್ರಮಾಣ ಕಡಿಮೆ ಮಾಡಿ ತಮ್ಮ ಮನೆಗಳಿಗೆ ಸಾಗಿಸುತ್ತಿದ್ದುದು ನಾವು ಸರಿಯಾಗಿ ತೂಕ ಹಾಕಿಸಿ ಪಡೆಯುತ್ತಿದ್ದರಿಂದ ಇಂತಹ ಅಕ್ರಮಕ್ಕೆ ಅವಕಾಶವಾಗುತ್ತಿರಲಿಲ್ಲ.ಕಾಯಿಲೆಯಾದವರಿಗೆ ಹಾಲು, ಬ್ರೆಡ್ ಕೊಡಲು ಅವಕಾಶವಿದ್ದುದರಿಂದ ಮತ್ತು ನಮಗೆ ಮಜ್ಜಿಗೆ ಕೊಡುತ್ತಿರಲಿಲ್ಲವಾದ್ದರಿಂದ 6-7 ಜನರಿಗೆ ಕಾಯಿಲೆಯಾದವರೆಂದು ಲೆಕ್ಕ ಕೊಟ್ಟು ಅವರ ಪಾಲಿನ ಹಾಲು, ಬ್ರೆಡ್ ಪಡೆದು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದೆವು.ಜೈಲು ಸಿಬ್ಬಂದಿಗೆ ಸೌದೆ, ತರಕಾರಿ, ಇತ್ಯಾದಿಗಳನ್ನು ಮನೆಗೆ ಸಾಗಿಸಲು ಅವಕಾಶವಿಲ್ಲದ್ದರಿಂದ ಅವರಿಗೆ ನಮ್ಮಗಳ ಮೇಲೆ ಅಸಮಾಧಾನವಿತ್ತು.ಇದಕ್ಕಾಗಿ ಅವರು ಇತರ ಕೈದಿಗಳನ್ನು ನಮ್ಮ ಮೇಲೆ ಎತ್ತಿಕಟ್ಟಿದ್ದರಿಂದ ಅವರಿಗೂ, ನಮಗೂ ಎರಡು-ಮೂರು ಸಲ ಹೊಡೆದಾಟವಾಗಿತ್ತು. ಒಳ್ಳೆಯ ಕಂಬಳಿ, ತಟ್ಟೆ, ಲೋಟಗಳಿಗಾಗಿ ಸಹ ಸತ್ಯಾಗ್ರಹ ನಡೆಸಬೇಕಾಯಿತು. ಜೈಲು ಸೂಪರಿಂಟೆಂಡೆಂಟರು ತಟ್ಟೆ, ಲೋಟಗಳನ್ನು ತರಿಸಿಕೊಟ್ಟರು. ಕಂಬಳಿ ತರಿಸಲು ಅವರು ಸಮಯಾವಕಾಶ ಕೇಳಿದರೂ ತರಿಸಿಕೊಡಲಿಲ್ಲ. ಅವುಗಳನ್ನು ಯಾರೂ ಉಪಯೋಗಿಸುತ್ತಲೂ ಇರಲಿಲ್ಲ.ಮನೆಯಿಂದ ಹೊದಿಕೆ ತರಿಸಿಕೊಳ್ಳಲು ಅವಕಾಶ ನೀಡಿ ಉಪಕಾರ ಮಾಡಿದರು.ಹಾಡು, ಭಜನೆ, ಚರ್ಚೆಗಳನ್ನು ಮಾಡುತ್ತಾ ಸಮಯ ಕಳೆಯುತ್ತಿದ್ದೆವು. 'ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನದಿನ' ಎಂಬುದು ನನ್ನ ಮೆಚ್ಚಿನ ಹಾಡಾಗಿದ್ದು ಅದನ್ನೇ ಇತರರಿಗೆ ಹೇಳಿಕೊಡುತ್ತಿದ್ದೆ. ಹೊರಗಿಗಿಂತ ಜೈಲಿನ ಒಳಗೇ ಒಂದು ರೀತಿಯ ನಿರ್ಭಯ ವಾತಾವರಣವಿತ್ತು. ತುರ್ತು ಪರಿಸ್ಥಿತಿಯಲ್ಲಿ ನಾವು ಜೈಲಿನ ಒಳಗಡೆ ಮಾಡುತ್ತಿದ್ದಂತಹ ಚರ್ಚೆಗಳನ್ನು ಮುಕ್ತವಾಗಿ ಹೊರಗೆ ಮಾಡಲು ಸಾಧ್ಯವೇ ಇರಲಿಲ್ಲ!
-ಕ.ವೆಂ.ನಾಗರಾಜ್.

ಭಾನುವಾರ, ಜುಲೈ 25, 2010

ಮೂಢ ಉವಾಚ -14

ತನುಮನಗಳ ತೀರದ ದಾಹವದೆ ಕಾಮ|
ದಾಹವನು ತಣಿಸಲು ಮಾಡುವುದೆ ಕರ್ಮ||
ತಣಿಯದದು ಕಾಮ ನಿಲ್ಲದದು ಕರ್ಮ||
ದೇವನಾಟವನರಿತವರಾರಿಹರೋ ಮೂಢ||

ಹಿತಕಾಮ ಮಿತಕಾಮ ವಿಕಟಕಟಕಾಮ|
ಸತ್ಕಾಮ ದುಷ್ಕಾಮ ಸುರಾಸುರರ ಕಾಮ||
ಎಂತಪ್ಪ ಜನರಿಹರೋ ಅಂತಪ್ಪ ಕಾಮ||
ನಿಷ್ಕಾಮ ಕಾಮ್ಯತೆಯೆ ಗುರಿಯಿರಲಿ ಮೂಢ||

ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು|
ಕಾಮವೆಂಬುದು ಪಾಶ ಕಾಮದಿಂದಲೆ ನಾಶ||
ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ|
ಕಾಮದಿಂದಲೆ ಸಕಲ ಸಂಪದವು ಮೂಢ||

ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು|
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು||
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ|
ದಿವ್ಯಕಾಮ ರಮ್ಯ ಕಾಮ ನಿನದಲ್ತೆ ಮೂಢ||
*************
-ಕ.ವೆಂ.ನಾಗರಾಜ್.

ಶುಕ್ರವಾರ, ಜುಲೈ 23, 2010

ಸೇವಾ ಪುರಾಣ -8

ಸೇವಾ ಪುರಾಣ -8
ಸರಳುಗಳ ಹಿಂದಿನ ಲೋಕ -1
     ಪಾಪಿಗಳ ಲೋಕವೆಂದೇ ಹೇಳಲಾಗುವ ಬಂದೀಖಾನೆಗೆ ನನ್ನ ಪ್ರಥಮ ಪ್ರವೇಶ ದಿನಾಂಕ 05-08-1975ರಲ್ಲಿ ಆಗಿ ಅಲ್ಲಿ ನನ್ನ ಹೆಸರು ನೋಂದಾವಣೆ ಆಯಿತು. ಹಾಸನದ ಬಂದೀಖಾನೆಯಲ್ಲಿ ನನ್ನ ಹೆಸರು, ಕುಲ, ಗೋತ್ರ, ಅಪರಾಧದ ವಿವರ, ನನ್ನ ಕೈಬೆರಳುಗಳ ಮುದ್ರೆಗಳು, ಇತ್ಯಾದಿಗಳನ್ನೆಲ್ಲಾ ಒಂದು ರಿಜಿಸ್ಟರಿನಲ್ಲಿ ಪಡೆದುಕೊಂಡರು. ನನ್ನ ಜೇಬಿನಲ್ಲಿದ್ದ ಪುಡಿಗಾಸು, ಕೈಯಲ್ಲಿದ್ದ ವಾಚು, ಎಲ್ಲವನ್ನೂ ತೆಗೆದಿರಿಸಿಕೊಂಡು ದಾಖಲಿಸಿ ಇಟ್ಟುಕೊಂಡರು. ನನ್ನ ಮೈಮೇಲಿದ್ದ ಜನಿವಾರ, ಉಡುದಾರಗಳನ್ನು ಹರಿದು ಕಿತ್ತೆಸೆದರು. ಗಬ್ಬು ವಾಸನೆ ಬರುತ್ತಿದ್ದ ಒಂದು ಹರಕಲು ಕಂಬಳಿ,ನೆಗ್ಗಿ ನುಗ್ಗೆಕಾಯಿ ಆಗಿದ್ದ ಒಂದು ಅಲ್ಯೂಮಿನಿಯಂ ಚಂಬು, ತಟ್ಟೆಯ ಅಕಾರವನ್ನೇ ಕಳೆದುಕೊಂಡಿದ್ದ ಒಂದು ಅಲ್ಯೂಮಿನಿಯಂ ತಟ್ಟೆಗಳನ್ನು ನನ್ನ ಕೈಗೆ ಕೊಟ್ಟರು. ಜೈಲಿನ ದೊಡ್ಡ ಬಾಗಿಲಿನ ಒಂದು ಭಾಗದಲ್ಲಿದ್ದ ಸಣ್ಣ ಬಾಗಿಲಿನಿಂದ ಬಗ್ಗಿ ನಡೆದು ಜೈಲಿನ ಒಳಾಂಗಣಕ್ಕೆ ಕಾಲಿಟ್ಟಾಗ ನನಗೆ ಹೇಗೆ ಹೇಗೋ ಆಯಿತು, ತಳಮಳವಾಯಿತು. ಅಲ್ಲಿ ಇದ್ದ ಎರಡು ದೊಡ್ಡ ಬ್ಯಾರಕ್ ಗಳ ಪೈಕಿ ಒಂದರ ಒಳಗೆ ನನ್ನನ್ನು ತಳ್ಳಿ ಮತ್ತೆ ಬ್ಯಾರಕ್ ಗೆ ಬೀಗ ಹಾಕಿದರು.ಒಳಗೆ ಹೋದ ಕೂಡಲೇ ಒಳಗಿದ್ದವರು ನನ್ನನ್ನು 'ಹೋ' ಎಂದು ಮುತ್ತಿಕೊಂಡರು. ನನಗೆ ಕಕ್ಕಾಬಿಕ್ಕಿಯಾಯಿತು. ಕಾಲೇಜುಗಳಲ್ಲಿ ಹೊಸ ವಿದ್ಯಾರ್ಥಿಗಳನ್ನು ಹಳಬರು ಗೋಳು ಹುಯ್ದುಕೊಳ್ಳುವಂತೆ ಕೆಲವರು ನನ್ನನ್ನು ಗೋಳಾಡಿಸಿದರು. ಕೆಲವರು ನಿರ್ಲಿಪ್ತರಾಗಿ ತಮ್ಮ ಪಾಡಿಗೆ ತಾವು ಇದ್ದರು. ನನ್ನ ಚರಿತ್ರೆ ಕೇಳಿ ತಿಳಿದುಕೊಂಡ ಅವರುಗಳು 'ಓ, ಇಂದಿರಾಗಾಂಧಿ ಕೇಸು' ಎಂದು ಚಪ್ಪಾಳೆ ಬಡಿದು ನಕ್ಕರು. ಆ ದೊಡ್ಡ ಹಾಲಿನಲ್ಲಿ ಸಮಾಧಿಗಳ ಆಕಾರದಲ್ಲಿ ಗಾರೆ,ಸಿಮೆಂಟಿನಲ್ಲಿ ಕಟ್ಟೆಗಳನ್ನು ಕೈದಿಗಳು ಮಲಗುವ ಸಲುವಾಗಿ ಕಟ್ಟಿಸಿದ್ದರು. ಇರಬೇಕಾದ ಸಂಖ್ಯೆಗಿಂತ ಹೆಚ್ಚಿನ ಕೈದಿಗಳು ಇದ್ದುದರಿಂದ ಕಟ್ಟೆಗಳ ನಡುವಿನ ಸ್ಥಳಗಳಲ್ಲೂ ಕೈದಿಗಳು ಮಲಗಬೇಕಾಗಿತ್ತು. ಕಟ್ಟೆಗಳನ್ನು ಸಮಾಧಿ ಎಂದೇ ಕರೆಯುತ್ತಿದ್ದರು. ಕಟ್ಟೆಯ ಮೇಲೆ ಮಲಗುವುದು ಎಂದರೆ ಸಮಾಧಿಯ ಮೇಲೆ ಮಲಗುವುದು ಎಂತಲೂ ಮಧ್ಯದ ಸ್ಥಳದಲ್ಲಿ ಮಲಗುವುದು ಎಂದರೆ ಸಮಾಧಿಯ ಒಳಗೆ ಮಲಗುವುದು ಎಂತಲೂ ಹೇಳುತ್ತಿದ್ದರು.ಅಂತಹ ಒಂದು ಸಮಾಧಿಯ ಒಳಗೆ ನಾನು ಮಲಗಬೇಕೆಂದು ಅಲ್ಲಿದ್ದ ಹಳಬರು ಅಪ್ಪಣೆ ಕೊಟ್ಟರು.ನನಗೆ ಕೊಟ್ಟಿದ್ದ ಹರಕಲು ಕಂಬಳಿಯಲ್ಲಿ ತಿಗಣೆಯೊಂದು ಹರಿಯುತ್ತಿದ್ದುದನ್ನು ನೋಡಿದ ನಾನು ಕಂಬಳಿಯನ್ನು ಪಕ್ಕಕ್ಕೆ ತಳ್ಳಿ ಅಲ್ಲಿದ್ದವರನ್ನು ಗಮನಿಸುತ್ತಾ ಗೋಡೆಗೆ ಒರಗಿ ಕುಳಿತುಕೊಳ್ಳಲು ಹೋದವನು ಒರಗಿಕೊಳ್ಳಲಿಲ್ಲ, ಏಕೆಂದರೆ ಗೋಡೆಯ ಮೇಲೆಲ್ಲಾ ತಿಗಣೆಗಳನ್ನು ತೀಡಿ ಸಾಯಿಸಿದ, ಸೊಳ್ಳೆಗಳನ್ನು ಸಾಯಿಸಿದ ರಕ್ತದ ಕಲೆಗಳು ರಾರಾಜಿಸುತ್ತಿದ್ದವು.ಅಲ್ಲಿದ್ದವರ ಮುಖಗಳಲ್ಲಿ ಕೆಲವರು ಕೇಡಿಗರಂತೆ ಕಂಡರೆ ಕೆಲವರು ಅಮಾಯಕರಂತೆ ಕಾಣುತ್ತಿದ್ದರು. ಕೆಲವರು ಚಿಂತಿತರಾಗಿದ್ದರೆ ಕೆಲವರು ಏನೂ ಆಗೇ ಇಲ್ಲವೆಂಬಂತೆ ಇದ್ದರು.ನಾಲ್ಕು ಗೋಡೆಗಳು, ಭದ್ರವಾದ ಬಾಗಿಲು, ಅಲ್ಲಿದ್ದ ಅದೇ ಜನಗಳು, ಇಷ್ಟೇ ಪ್ರಪಂಚ. ಆ ಮುಚ್ಚಿದ ಬ್ಯಾರಕ್ಕಿನ ಮೂಲೆಯಲ್ಲಿಯೇ ಶೌಚಾಲಯವಿತ್ತು. ನಾನು ಅಲ್ಲಿಗೆ ಹೋಗಿ ನೋಡಿದರೆ ವಾಂತಿ ಬರುವಂತಾಯಿತು. ಶೌಚ ಹೋಗುವ ಪೈಪು ಕಟ್ಟಿಕೊಂಡು ಶೌಚ ಹೊರಗೆ ಹೋಗುತ್ತಿರಲಿಲ್ಲ. ಶೌಚಾಲಯದ ಒಳಗೆ ಕಾಲಿಡಲು ಸಾಧ್ಯವೇ ಆಗದಷ್ಟು ಹೇಸಿಗೆ ತುಂಬಿಹೋಗಿತ್ತು. ನಾರುತ್ತಿದ್ದ ಗಬ್ಬು ವಾಸನೆ ಬ್ಯಾರಕ್ಕಿನಲ್ಲೂ ಹರಡಿತ್ತು. ಹಾಗೆಯೇ ವಾಪಸು ಬಂದೆ.
     ಊಟಕ್ಕಾಗಿ ಬೀಗ ತೆಗೆದು ಹೊರಬಿಟ್ಟಾಗ ಎಲ್ಲರ ಜೊತೆ ಸಾಲಿನಲ್ಲಿ ನಿಂತರೆ ನನ್ನ ತಟ್ಟೆಗೆ ಅರ್ಧ ಇಟ್ಟಿಗೆ ಆಕಾರದ ಮುದ್ದೆ ಮತ್ತು ಅರ್ಧ ಸೌಟು ನೀರು ಸಾಂಬಾರು ಬಿತ್ತು. ಸಾಂಬಾರಿನಲ್ಲಿದ್ದ ಬೇಳೆ ಬೆಂದಿರಲೇ ಇಲ್ಲ.ಒಬ್ಬಿಬ್ಬರ ತಟ್ಟೆಯಲ್ಲಿ ತರಕಾರಿ ಹೋಳುಗಳು ಕಂಡವು. ಕಲ್ಲಿನಂತಿದ್ದ ಮುದ್ದೆ ಕಂಡು ತಿನ್ನಲು ಮನಸ್ಸಾಗದೆ ಹಾಗೆಯೇ ಹಿಡಿದುಕೊಂಡಿದ್ದೆ. ನನ್ನನ್ನು ಗಮನಿಸುತ್ತಿದ್ದವನೊಬ್ಬ ನನ್ನನ್ನು ಕೇಳಿ ನನ್ನ ಊಟವನ್ನೂ ತೆಗೆದುಕೊಂಡ.ಎಲ್ಲರೂ ಅದನ್ನೇ ತಿಂದರು.ಕೆಲವರು ತಟ್ಟೆಯನ್ನೇ ನೆಕ್ಕುತ್ತಿದ್ದರು. ತಿಂದಾದ ಮೇಲೆ ಕೈತೊಳೆಯಲು ಇದ್ದ ಪಾಚಿಗಟ್ಟಿದ್ದ ತೊಟ್ಟಿಯ ನೀರಿಗೆ ತಟ್ಟೆಯನ್ನೇ ಅದ್ದುತ್ತಿದ್ದರು.ಸ್ನಾನ ಮಾಡಲೂ ಅದೇ ತೊಟ್ಟಿಯ ನೀರನ್ನು ಬಳಸಬೇಕಾಗಿತ್ತು. ಅದನ್ನು ಕಟ್ಟಿಸಿದಾಗಿನಿಂದಲೂ ಸ್ವಚ್ಛಗೊಳಿಸಿರಲಿಲ್ಲವೆಂಬಂತೆ ಕಾಣುತ್ತಿತ್ತು. ಅದರಲ್ಲಿದ್ದ ನೀರು ಚರಂಡಿಯ ನೀರಿನಂತೆ ಇತ್ತು. ಅಲ್ಲಿದ್ದ ಸ್ಥಿತಿ ನೋಡಿದರೆ ಕಾರಾಗೃಹ ಕಾಯಿಲೆಗಳ ಉಗಮಸ್ಥಾನ ಎಂಬುದರಲ್ಲಿ ಅನುಮಾನ ಕಾಣಲಿಲ್ಲ. ಏಕೆಂದರೆ ಕಾಯಿಲೆಗಳಿಂದ ನರಳುವವರ ಸಂಖ್ಯೆ ಕಡಿಮೆಯಿರಲಿಲ್ಲ. ಕೆಮ್ಮುವವರು, ಸೀನುವವರು, ಎಲ್ಲೆಂದರಲ್ಲಿ ಉಗುಳುವವರು, ಇತ್ಯಾದಿ ನೋಡಿದಾಗ ಹಿಂಸೆಯೆನಿಸುತ್ತಿತ್ತು. ನೀರಿನ ತೊಟ್ಟಿಯ ಹತ್ತಿರದಲ್ಲೇ ಕ್ಷೌರಿಕನೊಬ್ಬ ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳುವ ಬಂದಿಗಳಿಗೆ ಕ್ಷೌರ ಮಾಡುತ್ತಿದ್ದ. ಕಟಿಂಗ್ ಮಾಡಿಸಿಕೊಂಡ ಒಬ್ಬ ಬಂದಿ ತನ್ನ ತಲೆಯನ್ನೇ ತೊಟ್ಟಿಗೆ ಅದ್ದಿ ಹೊರತೆಗೆದಿದ್ದುದನ್ನು ಕಂಡೆ. ಅದೇ ಮತ್ತು ಅಷ್ಟೇ ಅವನ ಸ್ನಾನವಾಗಿತ್ತು. ನಾನು ತೊಟ್ಟಿಗೆ ನೀರು ಬಿಡಲು ಇದ್ದ ನಲ್ಲಿಯಿಂದ ಸೋರುತ್ತಿದ್ದ ಚಂಬಿನಲ್ಲಿ ನೀರು ಹಿಡಿದುಕೊಂಡು ಮುಖ ತೊಳೆದುಕೊಂಡೆ. ಊಟಕ್ಕೆ ಬಿಟ್ಟಿದ್ದ ಸಮಯದಲ್ಲಿ ಕೆಲವು ಒಂಟಿ ಸೆಲ್ ಗಳು ಹಾಗೂ ಒಂದು ಸಣ್ಣ ಬ್ಯಾರಕ್ ಇದ್ದುದನ್ನು ಗಮನಿಸಿದೆ. ಒಂಟಿ ಸೆಲ್ ಗಳಲ್ಲಿ ಗಲಾಟೆ ಮಾಡುವವರು, ಅಪಾಯಕಾರಿಗಳೆಂದು ಕಂಡವರನ್ನು ಇಡುತ್ತಿದ್ದರು. ಸಣ್ಣ ಬ್ಯಾರಕ್ಕಿನಲ್ಲಿ ಮಹಿಳಾ ಕೈದಿಗಳಿದ್ದು ಅವರಿಗೆ ಬೇರೆ ಸಮಯದಲ್ಲಿ ಊಟ, ಸ್ನಾನಗಳಿಗೆ ಹೊರಬಿಡುತ್ತಿದ್ದರು. ಕೆಲವರು ಕೈದಿಗಳು ಮಹಿಳಾ ಕೈದಿಗಳ ಬ್ಯಾರಕ್ಕಿನ ಸರಳಿನ ಒಳಗೆ ಕೈಬೆರಳುಗಳನ್ನು (ಕೈ ಹಿಡಿಸುತ್ತಿರಲಿಲ್ಲ, ಒಳಗಿದ್ದವರು ಕಾಣುತ್ತಿರಲಿಲ್ಲ) ಹಾಕುತ್ತಿದ್ದರು.ಅದಕ್ಕೆ ಒಳಗಿದ್ದವರೂ ಬೆರಳುಗಳನ್ನು ಸ್ಪರ್ಶಿಸಿ ಪರಸ್ಪರ ಸಂತೋಷಿಸುತ್ತಿದ್ದರಂತೆ. ಬಹಳ ಕಾಲದಿಂದ ಜೈಲಿನಲ್ಲಿದ್ದವರು ಸ್ವಲಿಂಗಿಗಳೊಂದಿಗೇ ವಿಹರಿಸುತ್ತಿದ್ದುದು ವಿಶೇಷವಾಗಿರಲಿಲ್ಲ. ಲೈಂಗಿಕ ಹಸಿವು ಅವರನ್ನು ಹಾಗೆ ಮಾಡಿಸಿದ್ದಿರಬಹುದು. ಸ್ವಲ್ಪ ಸಮಯದ ನಂತರ ಎಲ್ಲರನ್ನೂ ಒಳಗೆ ಕಳಿಸಿ ತಲೆಗಳನ್ನು ಎಣಿಸಿ ಬೀಗ ಹಾಕಿದರು.ಸಾಯಂಕಾಲದ ಹೊತ್ತಿಗೆ ನನ್ನ ತಂದೆ ನನ್ನನ್ನು ಜಾಮೀನಿನ ಮೇಲೆ ಬಿಡಿಸಿ ಹೊರಕರೆತಂದರು.ಮನೆಗೆ ಹೋಗಿ ಸ್ನಾನ ಮಾಡಿದ ನಂತರವೇ ನನಗೆ ಉಸಿರಾಡುವಂತೆ ಆಗಿದ್ದು. ಸುದಾರಿಸಿಕೊಂಡನಂತರ ಮಾಡಿದ ಅಮ್ಮನ ಕೈಯಿನ ಊಟ ಅಮೃತಸಮಾನವಾಗಿತ್ತು!

ಬುಧವಾರ, ಜುಲೈ 21, 2010

ಸೇವಾ ಪುರಾಣ -7: ಸಂಕಷ್ಟದ ಸರಮಾಲೆ

ಸಂಕಷ್ಟದ ಸರಮಾಲೆ
     ಪ್ರಧಾನ ಮಂತ್ರಿಯಾಗಿದ್ದ ದಿ. ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ಅಧಿಕಾರದ ಉಳಿವಿಗಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ವಿಚಾರದಲ್ಲಿ ಬಹಳಷ್ಟು ಪರ-ವಿರೋಧದ ಚರ್ಚೆಗಳಾಗಿವೆ. ಆ ಕುರಿತು ನನ್ನ ಅಭಿಪ್ರಾಯವನ್ನೂ ಸಹ ದಾಖಲಿಸಲು ನಾನು ಬಯಸಿಲ್ಲ. ಆದರೆ ಆ ಪರಿಸ್ಥಿತಿಯ ದುರ್ಲಾಭ ಪಡೆದು ಅನೇಕ ರೀತಿಯ ಬಹಳಷ್ಟು ಅನ್ಯಾಯಗಳು ಖಂಡಿತಾ ಜರುಗಿವೆ. ನನಗೆ ಆದ ಅನ್ಯಾಯ, ಅನುಭವಗಳನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ವಾರಕ್ಕೊಂದು ಕೇಸು
     ಜಿಲ್ಲಾಧಿಕಾರಿಯವರ ಆಪ್ತ ಸಹಾಯಕರು ನನ್ನನ್ನು ಗುಟ್ಟಾಗಿ ಕರೆದು ನಾನು ಕೂಗಾಡಿ ಹೋದ ಮೇಲೆ ಜಿಲ್ಲಾಧಿಕಾರಿಯವರು ಜಿಲ್ಲಾ ಪೋಲಿಸ್ ಸೂಪರಿಂಟೆಂಡೆಂಟರೊಂದಿಗೆ ಬಹಳ ಹೊತ್ತು ನನ್ನ ಬಗ್ಗೆ ಮಾತನಾಡಿದರೆಂದೂ ನಾನು ಹುಷಾರಾಗಿರಬೇಕೆಂದೂ ತಿಳಿಸಿದ್ದರು. ಅದಕ್ಕೆ ತಕ್ಕಂತೆ ನನ್ನ ಮೇಲೆ ವಾರ, ಹತ್ತು, ಹದಿನೈದು ದಿನಗಳಿಗೊಮ್ಮೆ ಸುಳ್ಳು ಕ್ರಿಮಿನಲ್ ಕೇಸುಗಳನ್ನು ಹಾಕಲು ಪ್ರಾರಂಭಿಸಿದರು. ಕೆಳ ಕೋರ್ಟಿನಲ್ಲಿ ಜಾಮೀನು ಸಿಕ್ಕಿದರೆ, ನನ್ನಂತೆ ತೀರ್ಪು ಬಂದರೆ ಸೆಷನ್ಸ್ ಕೋರ್ಟಿಗೆ ಸರ್ಕಾರದಿಂದ ಮೇಲುಮನವಿ ಸಲ್ಲಿಸುತ್ತಿದ್ದರು. ಅಲ್ಲೂ ನನ್ನ ಪರವಾಗಿ ಆದೇಶವಾದರೆ ಹೈಕೋರ್ಟಿನಲ್ಲಿ ಮೇಲು ಮನವಿ ಸಲ್ಲಿಸುತ್ತಿದ್ದರು. ನನಗೆ ಕೋರ್ಟುಗಳಿಗೆ ಹಾಜರಾಗಬೇಕಾದ ದಿನಾಂಕಗಳನ್ನು ನೆನಪಿಟ್ಟುಕೊಳ್ಳಲು ಒಂದು ದಿನಚರಿಯನ್ನೇ ಇಟ್ಟುಕೊಳ್ಳಬೇಕಾಯಿತು. ದಿನ ಬೆಳಗಾದರೆ ನಾನು ಮತ್ತು ನನ್ನ ತಂದೆ ಲಾಯರರ ಮನೆಗೆ ಎಡತಾಕುವುದೇ ಕೆಲಸವಾಯಿತು. ನನ್ನನ್ನು ಎಂತಹ ಭಯಂಕರ ಅಪರಾಧಿಯೆಂಬಂತೆ ಬಿಂಬಿಸಲಾಗಿತ್ತೆಂದರೆ ನಾನು ಪ್ರತಿದಿನ ಪೋಲಿಸ್ ಠಾಣೆಗೆ ಹೋಗಿ ಹಾಜರಿ ಹಾಕಿ ಬರಬೇಕಾಗಿತ್ತು. ಹಾಸನಕ್ಕೆ ಯಾರೇ ರಾಜಕೀಯ ಮುಖಂಡರು, ನೇತಾರರು ಬಂದರೆ ಅವರು ಬಂದು ಹೋಗುವವರೆಗೆ ನನ್ನನ್ನು ಇತರರೊಂದಿಗೆ ಪೋಲಿಸ್ ಠಾಣೆಯಲ್ಲಿ ಕುಳ್ಳಿರಿಸಿ ಅವರು ಹೋದ ನಂತರ ಬಿಟ್ಟು ಕಳಿಸುತ್ತಿದ್ದರು. ಹೊತ್ತಲ್ಲದ ಹೊತ್ತಿನಲ್ಲಿ ಪೋಲಿಸ್ ಜೀಪು ನನ್ನ ಮನೆಯ ಬಳಿ ಬರುವುದು, ನನ್ನನ್ನು ಕರೆದುಕೊಂಡು ಹೋಗುವುದನ್ನು ನೋಡುತ್ತಿದ್ದ ಅಕ್ಕ ಪಕ್ಕದ ಮನೆಯವರಿಗೆ ನನ್ನ ಬಗ್ಗೆ ಏನೋ ಅನ್ನಿಸುತ್ತಿತ್ತು. ಗುಸುಗುಸು ಮಾತಾಡುತ್ತಿದ್ದರು. ನಮಗೆಲ್ಲಾ ಮಾನಸಿಕವಾಗಿ ಬಹಳ ಹಿಂಸೆಯಾಗುತ್ತಿತ್ತು. ಹೀಗಾಗಿ ಒಮ್ಮೆ ಕೇಸು ಹಾಕಿದಾಗ ಜಾಮೀನು ಪಡೆಯಲು ಇಚ್ಛಿಸದೆ ಜೈಲಿನಲ್ಲೇ ಉಳಿದೆ. ಹೊರಗಿನ ವಾತಾವರಣಕ್ಕಿಂತ ಜೈಲೇ ವಾಸಿಯೆಂದು ನನಗೆ ಅನ್ನಿಸಿತ್ತು. ಅಲ್ಲದೆ ಹೊಸ ಕೇಸುಗಳಿಂದಲೂ ಪಾರಾಗಲು ಅದೂ ಒಂದು ಮಾರ್ಗವಾಗಿತ್ತು. ಹೀಗಾಗಿ ಆರು ತಿಂಗಳು ಹಾಸನದ ಜೈಲಿನಲ್ಲಿಯೇ ಇದ್ದೆ. ಆ ಪ್ರಕರಣದಲ್ಲಿ ನನ್ನ ಪರವಾಗಿ ತೀರ್ಪು ಬಂದಾಗಲೇ ಹೊರಗೆ ಬಂದಿದ್ದು. ನಾನು ಎಷ್ಟು ರೋಸಿ ಹೋಗಿದ್ದೆನೆಂದರೆ ಕೇಸುಗಳ ಭರಾಟೆಯಿಂದ ನನ್ನ ನೌಕರಿ ಹೋಗುವುದೆಂದೇ ಭಾವಿಸಿದ್ದೆ. ನನ್ನ ಸ್ನೇಹಿತರು, ಕಛೇರಿಯ ಸಹೋದ್ಯೋಗಿಗಳು ನನ್ನೊಡನೆ ಮಾತನಾಡಲೇ ಹೆದರುತ್ತಿದ್ದರು. ಎಲ್ಲಿ ಅವರನ್ನೂ ನನ್ನೊಂದಿಗೆ ಸೇರಿಸಿಬಿಡುತ್ತಾರೋ ಎಂಬ ಭಯ ಅವರಿಗೆ ಇತ್ತು. ತುರ್ತು ಪರಿಸ್ಥಿತಿ ಮುಗಿಯುವವರೆಗೆ ಮಾತನಾಡಿಸಬೇಡವೆಂದು ಕೈಮುಗಿದು ಕೇಳಿಕೊಂಡವರೂ ಇದ್ದರು. ನಾನೊಬ್ಬ ಒಂಟಿಯಾಗಿದ್ದೆ. ಹಿರಿಯ ವಕೀಲರಾದ ಶ್ರೀ ಹಾರನಹಳ್ಳಿ ರಾಮಸ್ವಾಮಿ ಮತ್ತು ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರ ಸಹಾಯವನ್ನು ನಾನು ಮರೆಯಲಾರೆ. ಹೆಚ್ಚಿನ ಪ್ರಕರಣಗಳು ನನ್ನಂತೆ ತೀರ್ಮಾನವಾಗಿದ್ದರೆ ಉಳಿದ ಪ್ರಕರಣಗಳನ್ನು ತುರ್ತು ಪರಿಸ್ಥಿತಿ ಹೋದ ನಂತರ ಸರ್ಕಾರವೇ ವಾಪಸು ಪಡೆದಿತ್ತು. ಅವರುಗಳು ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ನನ್ನಿಂದ ಶುಲ್ಕ ತೆಗೆದುಕೊಳ್ಳಲು ಒಪ್ಪಲಿಲ್ಲ. ನನ್ನ ತಂದೆಯವರು ಕೋರ್ಟಿನಲ್ಲಿ ಶಿರಸ್ತೇದಾರರಾಗಿದ್ದುದು ಒಂದು ಕಾರಣವಾಗಿದ್ದರೆ, ಪ್ರಮುಖ ಕಾರಣ ತುರ್ತು ಪರಿಸ್ಥಿತಿಯ ಅನ್ಯಾಯದ ಪ್ರಕರಣಗಳ ವಿರುದ್ಧ ವಾದಿಸಿದ್ದುದು ತಮ್ಮ ಕರ್ತವ್ಯವೆಂದು ಅವರುಗಳು ಭಾವಿಸಿದ್ದುದು!
ನಮಸ್ಕಾರ ಮಾಡದಿದ್ದಕ್ಕೆ ಕೇಸು!
     ಹಾಜರಾತಿ ಹಾಕಲು ಪೋಲಿಸ್ ಠಾಣೆಗೆ ಹೋದಾಗ ರಸ್ತೆಯಲ್ಲಿ ಓಡಾಡುವಾಗ ಎದುರಿಗೆ ಸಿಗುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಒಬ್ಬರು ನನ್ನಿಂದ ನಮಸ್ಕಾರ ನಿರೀಕ್ಷೆ ಮಾಡುತ್ತಿದ್ದರು. ನಾನು ಅವರನ್ನು ಗಮನಿಸದಂತೆ ಹೋಗುತ್ತಿದ್ದುದು ಅವರನ್ನು ಕೆರಳಿಸುತ್ತಿತ್ತೇನೋ! ನಾನು ನಮಸ್ಕಾರ ಮಾಡದಿದ್ದುದು ಅವರಿಗೆ ಸಹನೆಯಾಗುತ್ತಿರಲಿಲ್ಲವೆನ್ನುವುದು ಅವರ ವರ್ತನೆಯಿಂದ ನನಗೆ ಗೊತ್ತಾಗುತ್ತಿತ್ತು. 'ಇನ್ನೂ ಕೊಬ್ಬು ಇಳಿದಿಲ್ಲ ಮಗನಿಗೆ, ನಾನು ಇಳಿಸುತ್ತೇನೆ' ಎಂದು ನನಗೆ ಕೇಳುವಂತೆ ಹೇಳುತ್ತಿದ್ದರು. ಒಂದು ದಿನ ಸಾಯಂಕಾಲ ಪೇಟೆ ಬೀದಿಯಲ್ಲಿ ಸೈಕಲ್ಲಿನಲ್ಲಿ ಹೋಗುವಾಗ ಆ ಹೆಡ್ ಕಾನ್ಸ್ ಟೇಬಲ್ ತಮ್ಮ ಪತ್ನಿಯೊಂದಿಗೆ ಹೋಗುತ್ತಿದ್ದುದನ್ನು ನಾನು ಗಮನಿಸಿರದೆ ಅವರ ಪಕ್ಕದಲ್ಲೇ ಹಾದುಹೋದೆ. ಯಾವ ಕಾರಣಕ್ಕೋ ಹಿಂತಿರುಗಿ ನೋಡಿದರೆ ಆ ಮಹಾಶಯ ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದ. ನಾನು ಉದ್ದೇಶ ಪೂರ್ವಕವಾಗಿ ಅವರ ಪಕ್ಕ ಹೋಗಿದ್ದೆನೆಂದು ಆತ ಭಾವಿಸಿರಬೇಕು. ನಾನು ಸುಮ್ಮನೆ ಮುಂದೆ ಹೋದೆ. ನಂತರ ಆ ವಿಷಯ ಮರೆತೇಹೋಗಿತ್ತು.

     ಮೇಲಿನ ಘಟನೆ ನಡೆದು ೨-೩ ದಿನಗಳಾಗಿರಬೇಕು. ಒಂದು ಭಾನುವಾರದ ದಿನ ಮಧ್ಯಾಹ್ನ ಊಟದ ಸಮಯದಲ್ಲಿ ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು ಆ ಸಮಯಕ್ಕೆ ಸರಿಯಾಗಿ ಒಬ್ಬ ಪೋಲಿಸ್ ಪೇದೆ ಬಂದು ನನ್ನನ್ನು 'ಸಾಹೇಬರು ಕರೆಯುತ್ತಿದ್ದಾರೆ,ಬರಬೇಕಂತೆ' ಎಂದು ಒತ್ತಾಯ ಮಾಡಿ ನನ್ನನ್ನು ಕರೆದುಕೊಂಡು ಹೋದ. ಮನೆಯಲ್ಲಿ ಎಲ್ಲರೂ ಊಟ ಮಾಡಿ ಬರುತ್ತಾನೆಂದು ಹೇಳಿದರೂ ಆತ ಕೇಳಿರಲಿಲ್ಲ. ದಾರಿಯಲ್ಲಿ ವಿಚಾರಿಸಿದರೆ ಆತನಿಗೆ ಏನೂ ವಿಷಯ ಗೊತ್ತಿರಲೇ ಇಲ್ಲ. ನಾನು ಠಾಣೆಯ ಒಳಗೆ ಕಾಲಿಡುತ್ತಿದ್ದಂತೆ ಒಬ್ಬ್ಬ ಧಡಿಯ ಪೇದೆ ನನ್ನ ಕುತ್ತಿಗೆ ಪಟ್ಟಿ ಹಿಡಿದು ಒಳಕ್ಕೆಳೆದು ತಳ್ಳಿದ ರಭಸಕ್ಕೆ ನಾನು ತತ್ತರಿಸಿ ಹೋಗಿ ಎದುರಿನ ಗೋಡೆಗೆ ಅಪ್ಪಳಿಸಿ ಡಿಕ್ಕಿ ಹೊಡೆದುಕೊಂಡು ಕೆಳಗೆ ಬಿದ್ದೆ. ಇನ್ನೊಬ್ಬ ನನ್ನ ಜುಟ್ಟು ಹಿಡಿದು ಮೇಲಕ್ಕೆ ಎತ್ತಿದ. ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದ ಸಬ್ ಇನ್ಸ್ ಪೆಕ್ಟರರು ನನ್ನನ್ನು ಕುರಿತು 'ಯಾವತ್ತಾದರೂ ವಿಮಾನದಲ್ಲಿ ಹೋಗಿದ್ದೆಯಾ?' ಎಂದು ಕೇಳಿದರು. ನಾನು ಇಲ್ಲವೆಂದಾಗ 'ಇವನು ವಿಮಾನದಲ್ಲಿ ಹೋಗಬೇಕಂತೆ, ಹತ್ತಿಸಿರೋ' ಎಂದು ಅಪ್ಪಣೆ ಮಾಡಿದರು. ನನಗೆ ಇವರೆಲ್ಲಾ ಏಕೆ ಹೀಗೆ ಮಾಡುತ್ತಿದ್ದಾರೆಂದು ಗೊತ್ತೇ ಆಗಲಿಲ್ಲ. ಒಬ್ಬ ಪೇದೆ ನನ್ನ ಕೈಗಳನ್ನು ಹಿಂದಕ್ಕೆ ಮಾಡಿ ಹಗ್ಗದಿಂದ ಹೆಡೆಮುರಿ ಕಟ್ಟಿದ. ಅಷ್ಟರಲ್ಲಿ ಸರ್ಕಲ್ ಇನ್ಸ್ ಪೆಕ್ಟರರು ಅಲ್ಲಿಗೆ ಬಂದರು. (ಅವರು ಕೊಡಗು ಮೂಲದವರಾಗಿದ್ದು ಈ ಘಟನೆ ನಡೆದ ಸುಮಾರು ಎರಡು ವರ್ಷಗಳ ನಂತರ ಅಪಘಾತದಲ್ಲಿ ಮೃತರಾದರು.) ಅವರು ನನ್ನ ಕೈಗೆ ಕಟ್ಟಿದ್ದ ಹಗ್ಗ ಬಿಚ್ಚಿಸಿದರು. ಸಬ್ ಇನ್ಸ್ ಪೆಕ್ಟರರ ಕುರ್ಚಿಯಲ್ಲಿ ಕುಳಿತ ಅವರು ನನ್ನನ್ನುದ್ದೇಶಿಸಿ "ಏನೋ, ಚಾಕು, ಚೂರಿ ಹಾಕ್ತೀಯಾ? ನೋಡಕ್ಕೆ ಹೀಗಿದಿಯಾ, ದಾದಾಗಿರಿ ಮಾಡ್ತೀಯಾ?" ಎಂದು ಗದರಿಸಿದರು. ನಾನು "ನೋಡಿ, ನನಗೇನೂ ಗೊತ್ತಿಲ್ಲ. ವಿಷಯವೇ ತಿಳಿಯದೆ ನಾನು ಏನು ಹೇಳಲಿ?" ಎಂದಾಗ ಅವರು ಟೇಬಲ್ಲಿನ ಮೇಲೆ ಇದ್ದ ಕಾಗದ ಓದಲು ಕೊಟ್ಟರು. ಅದು ಹೆಡ್ ಕಾನ್ಸ್ ಟೇಬಲ್ ಮಹಾಶಯರು ನನ್ನ ಬಗ್ಗೆ ಕೊಟ್ಟ ದೂರಾಗಿತ್ತು. ಅದರಲ್ಲಿ 'ನಾನು ಹೆಡ್ ಕಾನ್ಸ್ ಟೇಬಲ್ಲರಿಗೆ ನನ್ನ ವಿರುದ್ಧ ಸಾಕ್ಷಿ ಹೇಳಿದರೆ ಚಾಕು ಹಾಕಿ ದೇವಿಗೆರೆಗೆ ಹಾಕುತ್ತೇನೆಂದು ಬೆದರಿಕೆ ಹಾಕಿದ್ದೇನೆಂದೂ, ತನಗೆ ರಕ್ಷಣೆ ಕೊಡಬೇಕೆಂದೂ' ಬರೆದಿದ್ದರು. (ದೇವಿಗೆರೆ ಅನ್ನುವುದು ಹಾಸನದ ಗಾಂಧಿಬಜಾರಿನಲ್ಲಿರುವ ದೇವಸ್ಥಾನದ ಕೊಳ.) ನಾನು "ಇದೆಲ್ಲಾ ಸುಳ್ಳು. ಅವರಿಗೆ ನಮಸ್ಕಾರ ಮಾಡಲಿಲ್ಲ, ಗೌರವ ಕೊಡಲಿಲ್ಲ ಎಂದು ಸುಳ್ಳು ದೂರು ಕೊಟ್ಟಿದ್ದಾರೆ, ನನಗೆ ಬುದ್ಧಿ ಕಲಿಸುತ್ತೇನೆಂದು ಹೇಳಿದ್ದಾರೆ" ಎಂದು ನಿಜ ಸಂಗತಿ ಹೇಳಿದೆ. ದೂರು ಕೊಟ್ಟ ಮಹಾಶಯ "ಮೊನ್ನೆ ನಾನು ಮತ್ತು ನನ್ನ ಹೆಂಡತಿ ಪೇಟೆಯಲ್ಲಿ ಹೋಗುವಾಗ ನನ್ನ ಹೆಂಡತಿಗೆ ಸೈಕಲ್ಲಿನಲ್ಲಿ ಡಿಕ್ಕಿ ಹೊಡೆದು ಹೋದ" ಎಂದು ಮತ್ತೊಂದು ಹಸಿಸುಳ್ಳು ಹೇಳಿದ. ಸರ್ಕಲ್ ಇನ್ಸ್ ಪೆಕ್ಟರರು ಕುರ್ಚಿಯಿಂದ ಧಡಕ್ಕನೆ ಎದ್ದು ನನಗೆ ಹೊಡೆಯಲು ಕೈ ಎತ್ತಿದಾಗ ನಾನು ಕೈ ಅಡ್ಡ ಇಟ್ಟು ತಡೆದು "ತಡೆಯಿರಿ. ಈ ದೂರಿನ ಮೇಲೆ ಕೇಸು ಹಾಕುವುದಿದ್ದರೆ ಹಾಕಿರಿ. ಹೊಡೆಯುವುದೇಕೆ? ಇರುವ ಹತ್ತು-ಹನ್ನೊಂದು ಕೇಸುಗಳ ಜೊತೆಗೆ ಈ ಕೇಸೂ ಆಗಲಿ. ಆದರೆ ಒಂದಂತೂ ನಿಜ. ಈ ಸುಳ್ಳು ದೂರಿನ ಮೇಲೆ ಕೇಸು ಹಾಕುವುದಾದರೆ ನಾನು ಈ ದೂರನ್ನು ಖಂಡಿತಾ ನಿಜ ಮಾಡುತ್ತೇನೆ. ನಾನು ಸತ್ತರೂ ಪರವಾಗಿಲ್ಲ. ಈ ಮನಷ್ಯನನ್ನು ಖಂಡಿತಾ ತೆಗೆದೇ ಸಾಯುತ್ತೇನೆ" ಎಂದು ಶಾಂತವಾಗಿ ಆದರೆ ಧೃಢವಾಗಿ ದೂರು ಕೊಟ್ಟಾತನನ್ನು ನೋಡುತ್ತಾ ಹೇಳಿದೆ. ಆತ ಬೆವೆತು ಹೋಗಿದ್ದ. ಇನ್ಸ್ ಪೆಕ್ಟರರೂ ಅವಾಕ್ಕಾಗಿದ್ದರು. ಅವರು ಸಾವರಿಸಿಕೊಂಡು "ಹೋಗಲಿ, ತಪ್ಪಾಯಿತೆಂದು ಬರೆದುಕೊಡು. ಬಿಟ್ಟುಬಿಡುತ್ತೇನೆ" ಎಂದರು. ಏನೂ ತಪ್ಪು ಮಾಡದೆ ತಪ್ಪಾಯಿತೆಂದು ಬರೆದುಕೊಡಲು ನಾನು ನಿರಾಕರಿಸಿ ಏನು ಬೇಕಾದರೂ ಮಾಡಬಹುದೆಂದು ಹೇಳಿದೆ. ಇನ್ಸ್ ಪೆಕ್ಟರರು ದೂರು ಕೊಟ್ಟಾತನನ್ನು ನೋಡಿದರು. ಅವನು ತಲೆತಗ್ಗಿಸಿ ತನ್ನ ದೂರು ಅರ್ಜಿಯನ್ನು ತೆಗೆದುಕೊಂಡು ಹೊರಗೆ ಹೋದ. ಅದೇ ಸಮಯಕ್ಕೆ ನನ್ನ ತಂದೆಯವರು ಶ್ರೀ ಹಾರನಹಳ್ಳಿ ರಾಮಸ್ವಾಮಿಯವರೊಂದಿಗೆ ಠಾಣೆಗೆ ಬಂದರು. ಇನ್ಸ್ ಪೆಕ್ಟರರು ಮೆಲ್ಲಗೆ ನನ್ನ ಕಿವಿಯಲ್ಲಿ "ಇಲ್ಲಿ ನಡೆದ ವಿಷಯ ಹೊರಗೆ ಬಾಯಿ ಬಿಟ್ಟರೆ ಹೂತುಹಾಕಿಬಿಡುತ್ತೇನೆ" ಎಂದು ಹೇಳಿ, ಶ್ರೀ ಹಾರನಹಳ್ಳಿ ರಾಮಸ್ವಾಮಿಯವರಿಗೆ 'ವಿಚಾರಣೆಗಾಗಿ ಕರೆಸಿದ್ದೆವೆಂದೂ ಕರೆದುಕೊಂಡು ಹೊಗಬಹುದೆಂದೂ' ಹೇಳಿದರು. ನಾನು ಮನೆಗೆ ಬಂದಾಗ ಸಂಜೆ ಐದು ಘಂಟೆಯಾಗಿತ್ತು. ಮನೆಯಲ್ಲಿ ಯಾರೂ ಊಟ ಮಾಡಿರಲಿಲ್ಲ. ಒಟ್ಟಿಗೇ ಊಟ ಮಾಡಿದೆವು. ನಾನು 'ಸರಿಯಾಗಿ' ಇರಬೇಕೆಂದು ಅಪ್ಪ, ಅಮ್ಮ ಬುದ್ಧಿ ಹೇಳಿದರು. ಒಂದಂತೂ ನಿಜ. ನನ್ನ ತಂದೆಯವರು ಕೋರ್ಟಿನಲ್ಲಿ ಶಿರಸ್ತೇದಾರರಾಗಿರದಿದ್ದಿದ್ದರೆ, ಶ್ರೀ ಹಾರನಹಳ್ಳಿ ರಾಮಸ್ವಾಮಿ ಮತ್ತು ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರುಗಳ ಸಕಾಲಿಕ ಸಹಾಯ ದೊರೆಯದಿದ್ದಿದ್ದರೆ, ನಾನು ಹೆದರಿದ್ದರೆ ಮತ್ತು ಪರಿಸ್ಥಿತಿಯನ್ನು ಧೃಢವಾಗಿ ಎದುರಿಸದೇ ಇದ್ದಿದ್ದರೆ ಯಾವುದಾದರೂ ಸಂದರ್ಭದಲ್ಲಿ ನಾನು ಶಾಶ್ವತವಾಗಿ ಅಂಗವಿಕಲನಾಗಿರುತ್ತಿದ್ದೆ ಅಥವಾ ಈ ಲೋಕದಿಂದಲೇ ಕಣ್ಮರೆಯಾಗಿರುತ್ತಿದ್ದೆ!
-ಕ.ವೆಂ.ನಾಗರಾಜ್.

ಮಂಗಳವಾರ, ಜುಲೈ 20, 2010

ಮೂಢ ಉವಾಚ -13

ಆರು ಅರಿಗಳನು ಅರಿಯದವರಾರಿಹರು?
ದೇವಕಾಮದ ಫಲವಲ್ಲವೇ ಚರಾಚರರು|
ನಿತ್ಯಮುಕ್ತ ಪರಮಾತ್ಮನಾಧೀನ ಕಾಮವಾದರೆ
ಕಾಮನಾಧೀನರಾಗಿಹರು ನರರು ಮೂಢ||


ಆತ್ಮನೇ ತಾನೆಂಬ ಅರಿವು ಮರೆಯಾಗಿ
ತನು-ಮನವೆ ತಾವೆಂದುಭ್ರಮಿತರಾಗಿರಲು|
ತುಂಬಿದಜ್ಞಾನದಿಂ ಜನಿಸುವುದು ಕಾಮ
ಕಾಮಫಲಿತಕ್ಕಾಗಿ ಕರ್ಮಗೈವರೋ ಮೂಢ||


ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ ಅದಕಿಲ್ಲ ಪೂರ್ಣ ವಿರಾಮ ಮೂಢ||


ಹೊನ್ನು ಕಾರಣವಲ್ಲ ಹೆಣ್ಣು ಕಾರಣವಲ್ಲ
ಮಣ್ಣು ಕಾರಣವಲ್ಲ ಮನಸು ಕಾರಣವಲ್ಲ|
ಬೇಕು ಬೇಕು ಬೇಕೆಂಬ ಅನಂತಾತೃಪ್ತತೆಗೆ
ಕಾಮ ಕಾರಣವಲ್ಲದೆ ಮತ್ತೊಂದಲ್ಲ ಮೂಢ||
-ಕ.ವೆಂ.ನಾಗರಾಜ್.