ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಅಕ್ಟೋಬರ್ 15, 2011

ಹಳೆ ಬೇರು-ಹೊಸಚಿಗುರು - ಕೆಳದಿ ಕವಿ ವಂಶಸ್ಥರ ಸ್ಥೂಲ ಪರಿಚಯ

ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವವರಿಹರು ಬೆಸೆದುಕೊಂಬವರಿಹರು |
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ ||


     ವ್ಯಕ್ತಿ-ವ್ಯಕ್ತಿಗಳ ಸುಮಧುರ ಬಾಂಧವ್ಯ ಒಳ್ಳೆಯ ಮತ್ತು ಆರೋಗ್ಯಕರ ಸಮಾಜದ ದ್ಯೋತಕ. ಒಂದು ಕುಟುಂಬದಲ್ಲೇ ಈ ಸಾಮರಸ್ಯದ ಕೊರತೆಯನ್ನು ಗಮನಿಸಬಹುದಾಗಿದೆ. ಈ ಕೊರತೆಯನ್ನು ನೀಗಿಸುವ ಪ್ರಯತ್ನವೇ ಕವಿಕುಟುಂಬಗಳ ವಾರ್ಷಿಕ ಸಮಾವೇಶಗಳು. ಶಿವಮೊಗ್ಗದಲ್ಲಿ ೨೮-೦೧-೨೦೦೭ರಲ್ಲಿ ನಡೆದ ಕವಿಕುಟುಂಬಗಳ ಮತ್ತು ಬಂಧು-ಬಳಗದವರ ಪ್ರಥಮ ವಾರ್ಷಿಕ ಸಮಾವೇಶದಲ್ಲಿ ಸಹೋದರ ಕವಿಸುರೇಶನ "ಹಳೆ ಬೇರು-ಹೊಸಚಿಗುರು - ಕೆಳದಿ ಕವಿ ವಂಶಸ್ಥರ ಸ್ಥೂಲ ಪರಿಚಯ" ಎಂಬ ಪುಸ್ತಕದ ಬಿಡುಗಡೆಯಾಯಿತು. ಸುಪ್ರಸಿದ್ಧ ಲೇಖಕ ಶ್ರೀ ಕೂಡಲಿ ಜಗನ್ನಾಥ ಶಾಸ್ತ್ರಿಯವರು ಮುನ್ನುಡಿ ಬರೆದಿರುವ ಈ ಪುಸ್ತಕದಲ್ಲಿ ಹೆಸರೇ ಸೂಚಿಸಿರುವಂತೆ ಕೆಳದಿ ಕವಿ ವಂಶಸ್ಥರ ಕಿರುಪರಿಚಯವನ್ನು ಮಾಡಿಕೊಡಲಾಗಿದೆ. ಹಿಂದಿನವರ ಸಾಧನೆಗಳು, ಅವರ ಕೃತಿಗಳ ವಿವರಗಳು ಇದರಲ್ಲಿದ್ದು ಈಗಿನವರಿಗೆ ಮಾದರಿಯಾಗಿವೆ. ಈ ಪುಸ್ತಕದಲ್ಲಿನ ವಿಶೇಷತೆಗಳು:
೧. ಸಂಬಂಧಿಗಳನ್ನು ಹುಡುಕಲು ನಡೆಸಿದ ಪ್ರಯತ್ನದ ವಿವರ, ಸಹಕಾರ ನೀಡಿದವರಿಗೆ ಕೃತಜ್ಞತೆ ಅರ್ಪಣೆ,
೨. ಕವಿಮನೆತನದ ವಂಶವೃಕ್ಷ, ಪೀಳಿಗೆವಾರು ವಿವರ, ಕಿರುಪರಿಚಯಗಳು,
೩. ಹಿಂದಿನವರ ಸಾಧನೆಗಳು, ಕೃತಿಗಳ ಪರಿಚಯ,
೪. ಕವಿಮನೆತನದ ಹೆಣ್ಣುಮಕ್ಕಳು ಸೇರಿರುವ ಮನೆತನಗಳ ಹಾಗೂ ಕವಿಮನೆತನಕ್ಕೆ ಬಂದ ಹೆಣ್ಣುಮಕ್ಕಳ ತವರಿನವರ ವಿವರ, ವಂಶವೃಕ್ಷಗಳು,
೫. ಹಿರಿಯರು ಸದ್ಗತಿ ಹೊಂದಿದ ದಿನಾಂಕಗಳು, ಈಗಿನವರ ಹುಟ್ಟಿದ ದಿನಾಂಕಗಳು, ವಿವಾಹದ ದಿನಾಂಕಗಳು, ಇತ್ಯಾದಿಗಳ ವಿವರ,
೬. ಎಲ್ಲರ ವಿಳಾಸಗಳು, ದೂರವಾಣಿ ಸಂಖ್ಯೆಗಳು,
೭. ಕವಿಮನೆತನಕ್ಕೆ ಸಂಬಂಧಿಸಿದ ಅಪರೂಪದ ಫೋಟೋಗಳು,
೮. ಶ್ರೀಯುತರಾದ ಕವಿನಾಗರಾಜ್, ಡಾ. ಕೆ.ಕೃಷ್ಣಾಜೋಯಿಸ್, ಗುಂಡಾಜೋಯಿಸ್, ಶಿವಪ್ರಸಾದ್ ಮುಂತಾದವರ ಲೇಖನಗಳು, ಕವನಗಳು, ಚಿತ್ರಗಳು.


     ಕವಿಪ್ರಕಾಶನದಲ್ಲಿ ಹೊರತಂದಿರುವ ಆಕರ್ಷಕ ರಕ್ಷಾಪುಟ ಹೊಂದಿರುವ ೧೨೪ ಪುಟಗಳ ಈ ಪುಸ್ತಕ ಸಂಬಂಧಗಳನ್ನು ಜೋಡಿಸುವ ಪ್ರಯತ್ನ ಮಾಡಬಯಸುವವರಿಗೆ ಮಾದರಿಯಾಗಿದೆ.
****************
-ಕ.ವೆಂ.ನಾಗರಾಜ್.
ಹಿಂದಿನ ಲೇಖನಕ್ಕೆ ಲಿಂಕ್: ಕೆಳದಿ ಕವಿ ಮನೆತನ: ಕುಟುಂಬಗಳು ಮತ್ತು ಬಂಧು-ಬಳಗದವರ ವಾರ್ಷಿಕ ಸಮಾವೇಶಗಳು - 1
http://kavimana.blogspot.com/2011/10/1.html

ಶುಕ್ರವಾರ, ಅಕ್ಟೋಬರ್ 14, 2011

ಮೂಢ ಉವಾಚ - 75


ಕೇಳುತಿರ್ದೊಡೆ ತಿಳಿವ ಬೀಜ ಮೊಳೆತೀತು
ಮೊಳಕೆ ಬೆಳೆದೀತು ಕಾಣುವ ನೋಟವಿರೆ
ಮನನದ ನೀರೆರೆದು ಅನುಭವದಿ ಕಳೆಕೀಳೆ
ಅದ್ಭುತಾಮೃತ ಫಲ ನಿನದೆ ಮೂಢ ||


ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||


ಕಂಡವರು ಯಾರಿಹರು ಜೀವ ಚೇತನವ
ತರ್ಕವನೆ ಮಾಡುವರು ಅವಿನಾಶಿಯೆನ್ನುವರು |
ವಾದಗಳ ಮುಂದಿರಿಸಿ ವಿನಾಶಿಯೆಂದಿಹರು
ಅನುಭಾವಿ ತಿಳಿದಾನು ಉತ್ತರವ ಮೂಢ ||


ದೇಹವೆಂಬುದು ರಥವು ಬುದ್ಧಿಯೇ ಸಾರಥಿಯು
ಇಂದ್ರಿಯಾಶ್ವವನು ಚಿತ್ತ ಹಿಡಿದಿಹುದು |
ಒಡೆಯ ಹೇಳ್ದಂತೆ ಸಾಗುವನು ಸಾರಥಿಯು
ಒಡೆಯನಾರೆಂದು ತಿಳಿದಿಹೆಯ ಮೂಢ ||
*********************
-ಕ.ವೆಂ.ನಾಗರಾಜ್.

ಗುರುವಾರ, ಅಕ್ಟೋಬರ್ 13, 2011

ಕೆಳದಿ ಕವಿ ಮನೆತನ: ಕುಟುಂಬಗಳು ಮತ್ತು ಬಂಧು-ಬಳಗದವರ ವಾರ್ಷಿಕ ಸಮಾವೇಶಗಳು - 1

     ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಕೆಳದಿ ಸಂಸ್ಥಾನದ ಆಸ್ಥಾನ ಕವಿ ಲಿಂಗಣ್ಣನನ್ನು ಕವಿ ಮನೆತನದ ಒಂದನೆಯ ಪೀಳಿಗೆ ಎಂದು ಪರಿಗಣಿಸಿದರೆ, ಪ್ರಸ್ತುತ ಮೊದಲಿನ ಆರು ಪೀಳಿಗೆಯವರು ಈಗ ಬದುಕಿಲ್ಲ. ಏಳರಿಂದ ಹತ್ತನೆಯ ಪೀಳಿಗೆಯ ಕುಟುಂಬಗಳವರು ಈಗ ಇದ್ದು ಹನ್ನೊಂದನೆಯ ಪೀಳಿಗೆ ಆಗಮನ ಸನ್ನಿಹಿತವಾಗಿದೆ. ಸುಮಾರು ಮುನ್ನೂರು ವರ್ಷಗಳ ಇತಿಹಾಸವಿರುವ ಈ ಮನೆತನದ ಕುಟುಂಬಗಳ ಸದಸ್ಯರುಗಳು ಹಲವೆಡೆ ಚದುರಿ ಹೋಗಿದ್ದು, ಅವರುಗಳನ್ನು ಗುರುತಿಸಿ ಒಟ್ಟುಗೂಡಿಸಿ ವರ್ಷಕ್ಕೆ ಒಮ್ಮೆಯಾದರೂ ಒಟ್ಟಿಗೆ ಸೇರಿಸಿ ಸಮಾವೇಶ ನಡೆಸುವ ಕಾರ್ಯ ೨೦೦೭ ರಲ್ಲಿ ಚಾಲನೆ ಪಡೆಯಿತು. ಕವಿಮನೆತನದ ವಂಶವೃಕ್ಷ ಸಿದ್ಧಪಡಿಸುವಲ್ಲಿ ನಡೆದ ಯಶಸ್ವಿ ಪ್ರಯತ್ನದ ಬಗ್ಗೆ ಈಹಿಂದೆ ಬರೆದಿದ್ದ ಒಂದು ಲೇಖನ ದ ಮುಂದುವರಿಕೆ ಈ ಬರಹ. ಪರಸ್ಪರ ಪರಿಚಯವೇ ಇಲ್ಲದ, ಸಂಪರ್ಕ ಸಹ ಇಲ್ಲದಿದ್ದ ಬಂಧುಗಳನ್ನು  ಒಟ್ಟುಗೂಡಿಸಿ ೨೮-೦೧-೦೭ರಲ್ಲಿ ನನ್ನ ಸಹೋದರ ಶಿವಮೊಗ್ಗದ ಕವಿ ಸುರೇಶರ ಮನೆಯಲ್ಲಿ ನಡೆದ ಪ್ರಥಮ ಸಮ್ಮೇಳನ ಅವಿಸ್ಮರಣೀಯ, ಅನುಪಮವಾಗಿದ್ದು, ಇದಕ್ಕಾಗಿ ಅವನು ಪಟ್ಟ ಪರಿಶ್ರಮ ಸಾರ್ಥಕವಾಗಿದೆ. ಇಂತಹ ಪ್ರಯತ್ನವನ್ನು ಇತರ ಸಹೃದಯಿಗಳು ಮಾಡಲು ಪ್ರೇರಣೆ ಸಿಗಬಹುದೆಂಬ ಕಾರಣದಿಂದ ಈ ಕೆಲವು ಸಾಲುಗಳು ಮತ್ತು ನಾವು - ನಮ್ಮವರು ಶೀರ್ಷಿಕೆಯಲ್ಲಿ ನಡೆದ ಸಮಾರಂಭದ ಚಿತ್ರಗಳನ್ನು ಪ್ರಕಟಿಸಿರುವೆ. ಸುಮಾರು ೧೫೦ ಸದಸ್ಯರುಗಳು ಪೂರ್ಣಕಾಲ ಸಕ್ರಿಯವಾಗಿ ಪಾಲ್ಗೊಂಡ ಈ ಸಮಾವೇಶ ಕೆಳಕಂಡ ಭಾವನಾತ್ಮಕ ಕ್ಷಣಗಳಿಗೆ. ಕಾರ್ಯಗಳಿಗೆ ಸಾಕ್ಷಿಯಾಯಿತು. ಜರುಗಿದ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿ:

೧. ಅರುಣ ಪಾರಾಯಣ: ಅನೇಕ ವರ್ಷಗಳ ನಂತರ ಪ್ರಥಮ ಬಾರಿಗೆ ಬಂಧುಗಳ ಮಿಲನವಾಗುತ್ತಿರುವ ನಿಮಿತ್ತ ಶ್ರೀ ಸಾ.ಕ. ಕೃಷ್ಣಮೂರ್ತಿ, ಡಾ. ಕೃಷ್ಣಜೋಯಿಸ್ ಮತ್ತು ಶ್ರೀ ರಾಮಾಜೋಯಿಸ್ ರವರು ಅರುಣಪಾರಾಯಣ;
೨. ಪ್ರಾಸ್ತಾವಿಕ: ಸಮಾವೇಶದ ಪ್ರಸ್ತುತತೆ, ಕಾರ್ಯಕ್ರಮಗಳ ವಿವರ ಕುರಿತು ಕ.ವೆಂ. ನಾಗರಾಜರಿಂದ ಪ್ರಾಸ್ತಾವಿಕ ಭಾಷಣ ಹಾಗೂ ಗಣ್ಯರ ಪರಿಚಯ;
೩. ಗಣ್ಯರು, ಕುಟುಂಬದ ಹಿರಿಯರಿಂದ ಜ್ಯೋತಿ ಬೆಳಗುವುದು - ವೇದಘೋಷದೊಂದಿಗೆ;
೪. ಬಂಧುಗಳ ಪರಸ್ಪರ ಪರಿಚಯ  
೫. ಪುಸ್ತಕ ಬಿಡುಗಡೆ: ಕವಿಸುರೇಶ ಸಂಪಾದಿಸಿದ ಹಳೆ ಬೇರು - ಹೊಸ ಚಿಗುರು ಪುಸ್ತಕ ಬಿಡುಗಡೆ ಮಾಡಿದ ಶ್ರೀ ಕೂಡಲಿಜಗನ್ನಾಥ ಶಾಸ್ತ್ರಿಗಳಿಂದ ಸ್ತುತ್ಯಾರ್ಹ ಕಾರ್ಯದ ಪ್ರಶಂಸೆ;
೬. ವಸ್ತು ಪ್ರದರ್ಶನ: ಎಲ್ಲರ ಗಮನ ಸೆಳೆದ ಕವಿ ಮನೆತನದ ಹಿಂದಿನ ಮತ್ತು ಈಗಿನ ಪೀಳಿಗೆಗಳ ಸಾಧನೆ ಪರಿಚಯಿಸುವ ಪುಟ್ಟ ವಸ್ತು ಪ್ರದರ್ಶನ; 
೭. ಸನ್ಮಾನ: ಹಳೇ ಬೇರು ಹೊಸಚಿಗುರು ಪುಸ್ತಕ ರಚನೆಗೆ ಸಹಕರಿಸಿದ ಮಹನೀಯರಿಗೆ ಹಾಗೂ ಕುಟುಂಬಗಳ ಹಿರಿಯರಾದ ಶ್ರೀಯುತ ಸಾ.ಕ.ಕೃಷ್ಣಮೂರ್ತಿ, ರಾಮರಾವ್, ನಾಗರಾಜಭಟ್ಟ, ರಾಮಾಜೋಯಿಸ್, ವಿನೋದಮ್ಮ, ಸೀತಾಲಕ್ಷ್ಮಮ್ಮ, ಸುಬ್ಬಲಕ್ಷ್ಮಮ್ಮ, ಪದ್ಮಾವತಮ್ಮ, ಗಿರಿಜಮ್ಮ, ರಾಮಮೂರ್ತಿ, ಹರಿಹರದ ರಾಮರಾವ್‌ರವರುಗಳಿಗೆ  ಸನ್ಮಾನ;
೮. ಕವಿ ಮನೆತನದ ಸದಸ್ಯರ ಪೈಕಿ ಅತ್ಯಂತ ಹಿರಿಯರಾದ ಶ್ರೀ ಕವಿ ವೆಂಕಟಸುಬ್ಬರಾವ್ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳನ್ನು ಅವರ ಮಕ್ಕಳು ಸನ್ಮಾನಿಸಿ ಗೌರವ, ಪ್ರೀತಿ, ವಾತ್ಸಲ್ಯ, ಕೃತಜ್ಞತೆಗಳನ್ನು ಸಲ್ಲಿಸಿದ್ದು ತುಂಬಾ ಭಾವನಾತ್ಮಕ ವಾಗಿತ್ತು. ಸನ್ಮಾನಿತರುಗಳು ಹಾಗೂ ಗಣ್ಯರು ಹೃದಯ ಮುಟ್ಟುವ ಮಾತುಗಳನ್ನಾಡಿದರು.
೯. ವಿಚಾರ ವಿನಿಮಯ: ಮುಂದಿನ ಸಮಾವೇಶ, ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಾಯಿತು.     ಕಾರ್ಯಕ್ರಮದಲ್ಲಿ ಶ್ರೀಮತಿ ಕಾಶಿಬಾಯಿ, ಅಂಬಿಕಾ, ದೀಪಕ್, ಮುಂತಾದವರು ತಮ್ಮ ಸುಮಧುರ ಗಾಯನದಿಂದ ರಂಜನೆ ನೀಡಿದರು. ಒಳ್ಳೆಯ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.  ಪ್ರತಿ ವರ್ಷ ಡಿಸೆಂಬರ್ ತಿಂಗಳ ೨೫ ರಂದು ಇದೇ ರೀತಿ ಒಟ್ಟಿಗೆ ಸೇರಬೇಕೆಂದು ನಿರ್ಧರಿಸಲಾಯಿತು. ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. 
















ಗುರುವಾರ, ಅಕ್ಟೋಬರ್ 6, 2011

ಸಹವಾಸ ದೋಷದ ತಪ್ಪಲ್ಲ!


     'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನದ್ದೇನೂ ತಪ್ಪಿಲ್ಲ. ಅವನನ್ನು ಬಲಿಪಶು ಮಾಡಿದ್ದಾರೆ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ ಸಹವಾಸದಿಂದ ಹಾಳಾದಳು', 'ಅವನು ರಾಮಚಂದ್ರ. ಆದರೆ ಆ ಮಿಟಕಲಾಡಿ ಅವನನ್ನು ಬಲೆಗೆ ಹಾಕಿಕೊಂಡಿದ್ದಾಳೆ', 'ಮೊದಲು ಇವನು ಹೀಗಿರಲಿಲ್ಲ, ಪೋಲಿ ಪಟಾಲಮ್ ಸೇರಿ ಕೆಟ್ಟುಹೋದ', 'ನಮ್ಮೂರಿನಲ್ಲಿದ್ದಾಗ ಹೇಗಿದ್ದಳು, ಬೆಂಗಳೂರಿಗೆ ಸೇರಿದ್ದೇ ಸೇರಿದ್ದು, ತಲೆಯೇ ನಿಲ್ಲುತ್ತಿಲ್ಲ', 'ನಮ್ಮ, ಪಕ್ಕದ ಮನೆಯಲ್ಲೇ ಅವನು ಬಾಡಿಗೆಗೆ ಇದ್ದ, ಬಹಳ ಸಂಭಾವಿತ. ಅಂಥವನು ಉಗ್ರಗಾಮಿ ಎಂದರೆ ನಂಬಲೇ ಆಗುತ್ತಿಲ್ಲ' - ಇಂತಹ ಮಾತುಗಳು ಕಿವಿಗೆ ಬೀಳುತ್ತಿರುತ್ತವೆ. ಇದರಲ್ಲಿ ಹೊರಹೊಮ್ಮುವ ಮುಖ್ಯಾಂಶವೆಂದರೆ ತಪ್ಪು ನಮ್ಮದಲ್ಲ, ನಮ್ಮವರದಲ್ಲ, ಬೇರೆಯವರದು. ಇದು ಇಲ್ಲಿಗೇ ನಿಲ್ಲುವುದಿಲ್ಲ. ನಮ್ಮ ತಪ್ಪುಗಳು, ಸೋಲುಗಳು, ಕೆಟ್ಟ ಸಂಗತಿಗಳಿಗೆಲ್ಲಾ ಕಾರಣ ನಾವಲ್ಲ, ಬೇರೆಯವರೇ ಎಂದು ವಾದಿಸುತ್ತೇವೆ. ಆದರೆ, ಯಶಸ್ಸುಗಳಿಗೆ, ಒಳ್ಳೆಯ ಸಂಗತಿಗಳಿಗೆಲ್ಲಾ ನಾವು ಮಾತ್ರ ಕಾರಣರು ಎಂದು ನಂಬುತ್ತೇವೆ.
     ವಿವೇಚನೆ ಮಾಡೋಣ, ಯಾರಾದರೂ ಇನ್ನೊಬ್ಬರ ಕಾರಣದಿಂದ ಹಾಳಾಗುತ್ತಾರೆಯೇ ಎಂಬುದು ಸಂಶೋಧನೆಗೆ ಅರ್ಹವಾದ ವಿಚಾರ. ಇತರರಿಂದ ನಮಗೆ ತೊಂದರೆಯಾಗಬಹುದು, ಕೇಡಾಗಬಹುದು. ಆದರೆ ಆ ತೊಂದರೆಯಲ್ಲಿ ನಮ್ಮ ಪಾಲೂ ಇರಬಹುದಲ್ಲವೇ? ಒಂದು ಸರಳ ಉದಾಹರಣೆ ನೋಡೋಣ. ಮಾವಿನಮರ ಮತ್ತು ಬೇವಿನಮರ ಅಕ್ಕ ಪಕ್ಕದಲ್ಲಿ ಇವೆಯೆಂದು ಭಾವಿಸೋಣ. ಬೇವಿನಮರದ ಪಕ್ಕದಲ್ಲಿರುವ ಮಾವಿನಮರದ ಹಣ್ಣುಗಳು ಕಹಿಯಾಗಿರುವುವೇ? ಮಾವಿನಮರದ ಪ್ರಭಾವದಿಂದ ಬೇವಿನ ಕಹಿಯಲ್ಲಿ ವ್ಯತ್ಯಾಸವಾಗುವುದೇ? ಒಂದು ವೇಳೆ ಮಾವಿನಮರ ಇದ್ದ ಸ್ಥಳದಲ್ಲಿ ಬೇವಿನಮರ ಮತ್ತು ಬೇವಿನಮರ ಇದ್ದ ಸ್ಥಳದಲ್ಲಿ ಮಾವಿನಮರ ಇದ್ದಿದ್ದರೆ? ಆಗಲೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ಎರಡು ಮರಗಳು ಇರುವ ಭೂಮಿಯ ಗುಣ ಒಂದೇ. ಆದರೆ ಮಾವಿನಮರ ಭೂಮಿಯಲ್ಲಿ ತನಗೆ ಬೇಕಾದ ಸಾರವನ್ನು ಮಾತ್ರ ಹೀರಿಕೊಳ್ಳುತ್ತದೆ. ಬೇವಿನಮರವೂ ಅಷ್ಟೆ. ಮಾವು ಮತ್ತು ಬೇವಿನ ಮರಗಳಿಗೆ ವಿಭಿನ್ನ ಫಲಗಳನ್ನು ನೀಡುವ ಆಯ್ಕೆಯಿಲ್ಲ. ಮನುಷ್ಯನ ವಿಷಯದಲ್ಲಿ ಈ ತತ್ವ ಅನ್ವಯಿಸಿ ನೋಡೋಣ. ವಿವೇಚನೆ ಮಾಡುವ ಶಕ್ತಿಯಿರುವ ಮನುಷ್ಯ ವಿಚಿತ್ರ ಜೀವಿ, ಅದ್ಭುತ ಜೀವಿ, ಅವನೇ ಬೇರೆ, ಅವನ ರೀತಿಯೇ ಬೇರೆ. ಅವನಲ್ಲಿ ಒಳ್ಳೆಯ ಮತ್ತು ಕೆಟ್ಟ ಅಂಶಗಳೆರಡೂ ಇರುತ್ತವೆ. ಮರದ ಬೇರುಗಳು ಹೇಗೆ ನೀರಿನ ಸೆಲೆಯಿರುವ ಕಡೆಗೆ ಚಾಚಿ ಮುನ್ನಡೆಯುವುವೋ ಅದೇ ರೀತಿ ಒಳ್ಳೆಯ ಅಂಶ ಪ್ರಧಾನವಾಗಿರುವ ವ್ಯಕ್ತಿ ಅಂತಹವರದೇ ಸಹವಾಸ ಇಷ್ಟಪಡುತ್ತಾನೆ. ಒಂದುವೇಳೆ ಅವನು ಕೆಟ್ಟವರ ನಡುವೆಯೇ ಬಾಳಬೇಕಾದ ಪರಿಸ್ಥಿತಿಯಿದ್ದರೆ ಅವನಲ್ಲಿನ ಕೆಟ್ಟ ಅಂಶಗಳಿಗೆ ಪ್ರಚೋದನೆ ದೊರೆತು, ಕೆಟ್ಟವನೆನಿಸಿಕೊಂಡರೂ ಸಹ ಅವನು ಕೆಟ್ಟವರಲ್ಲಿ ಒಳ್ಳೆಯವನು ಅನ್ನಿಸಿಕೊಳ್ಳಬಹುದು. ಅದೇ ರೀತಿ ಕೆಟ್ಟ ಅಂಶಗಳು ಪ್ರಧಾನವಾಗಿರುವ ವ್ಯಕ್ತಿ ಒಳ್ಳೆಯವರ ನಡುವೆ ಇರಬೇಕಾದ ಅನಿವಾರ್ಯತೆ ಬಂದರೆ ಅವನ ಒಳ್ಳೆಯತನಕ್ಕೆ ಪ್ರಚೋದನೆ ಸಿಕ್ಕಿ ಒಳ್ಳೆಯವನೆನಿಸಿದರೂ, ಆಗಾಗ್ಗೆ ಅವನ ಕೆಟ್ಟತನ ಪ್ರಕಟವಾಗದೇ ಇರದು. 
     ಹಾಗಾದರೆ ಕೆಟ್ಟವರು ಕೆಟ್ಟವರಾಗೇ ಇರುತ್ತಾರೆಯೇ? ಒಳ್ಳೆಯವರು ಒಳ್ಳೆಯವರಾಗೇ ಇರುತ್ತಾರೆಯೇ? ಎಂಬ ಪ್ರಶ್ನೆಗೆ ಕಾಲ ನೀಡಿರುವ ಉತ್ತರವೆಂದರೆ ಇಲ್ಲ, ಹಾಗಿಲ್ಲ ಎಂಬುದೇ. ಪರಿಸ್ಥಿತಿಯ ಶಿಶುವಾಗಿ ಮುಸ್ಲಿಮನಾಗಬೇಕಾಗಿ ಬಂದ ಕಾಳಿಚರಣ ಮಾತೃಧರ್ಮಕ್ಕೆ ಮರಳಲು ಬಯಸಿದಾಗ ಅದನ್ನು ಒಪ್ಪದ ಅಂಧ ಸಂಪ್ರದಾಯವಾದಿಗಳು ಅದನ್ನು ವಿರೋಧಿಸಿದರು. ಅವರ ವಿರುದ್ಧ ಕೆರಳಿ ನಿಂತ ಅವನು ಕಾಲಾಪಹಾಡ್ ಆಗಿ ಖಡ್ಗ ಹಿರಿದು ಅಸಂಖ್ಯಾತ ಹಿಂದೂಗಳನ್ನು ಮುಸ್ಲಿಮರನ್ನಾಗಿ ಮಾಡಿದ ಇತಿಹಾಸ ಕಣ್ಣ ಮುಂದಿದೆ. ಅಂತಹ ತಪ್ಪುಗಳ ಫಲವೇ ಈಗಿನ ಕಾಶ್ಮೀರ ಸಮಸ್ಯೆ, ಉಗ್ರಗಾಮಿಗಳ ಸಮಸ್ಯೆ. ಬೇಡನಾಗಿ ಬೇಟೆಯಾಡಿ ಜೀವಿಸುತ್ತಿದ್ದ ವಾಲ್ಮೀಕಿ ಸಂತನಾಗಿ ಪರಿವರ್ತಿತನಾಗಿ ಅದ್ಭುತ ರಾಮಾಯಣ ರಚಿಸಿದ್ದನ್ನೂ ನಾವು ಅರಿತಿದ್ದೇವೆ. ಒಳ್ಳೆಯತನಕ್ಕೆ ಮತ್ತು ಕೆಟ್ಟತನಕ್ಕೆ ಜಾತಿ, ಮತ, ಪಂಥಗಳ ಭೇದವಿಲ್ಲ. ಸಪ್ತರ್ಷಿಗಳೆಂದು ಕರೆಯಲ್ಪಡುವ ಯಾವ ಋಷಿಯೂ ಮೂಲದಲ್ಲಿ ಹುಟ್ಟಿನಿಂದ ಬ್ರಾಹ್ಮಣರಾಗಿರಲಿಲ್ಲ. ನಾವು ಆರಾಧಿಸುವ ರಾಮ ಕ್ಷತ್ರಿಯನಾಗಿ ಜನಿಸಿದವನು. ಕೃಷ್ಣ ಗೊಲ್ಲಕುಲದಲ್ಲಿ ಹುಟ್ಟಿದವನು. ಮಹಾಪತಿವ್ರತೆಯೆಂದು ಗೌರವಿಸುವ ಅರುಂಧತಿ ಹುಟ್ಟಿನಿಂದ ಶೂದ್ರಳೆಂದರೆ ಹೆಮ್ಮೆಪಡಬೇಕು. ಜಾತಿ, ಮತ, ಧರ್ಮ, ಇತ್ಯಾದಿಗಳೆಲ್ಲಾ ದೇವನಿರ್ಮಿತವಲ್ಲ, ಮಾನವನ ಸೃಷ್ಟಿ. ಅಷ್ಟೇ ಏಕೆ, ಅಸಂಖ್ಯಾತ ದೇವರುಗಳೂ ಮಾನವನಿರ್ಮಿತರೇ. ಆದರೆ ಮಾನವನಿರ್ಮಿತನಲ್ಲದ, ಈ ಜಗತ್ತು, ಈ ಬ್ರಹ್ಮಾಂಡವನ್ನು ನಿಯಂತ್ರಿಸುವ ಆ ದೇವರದೇವನೊಬ್ಬನಿದ್ದಾನೆ. ಆ ದೇವನ ಇರುವಿಕೆಯನ್ನು ಅನುಭವಿಸಿ ಅರಿಯಬಹುದೇ ಹೊರತು ಕಾಣುವುದು ದುಸ್ತರ. ವಿಷಯಾಂತರವಾಗುವುದರಿಂದ ಇದನ್ನು ಇಲ್ಲಿಗೇ ನಿಲ್ಲಿಸಿ ಮೂಲವಿಷಯಕ್ಕೆ ಬರೋಣ.
     ನಮ್ಮ ಮನೋಭಾವ ಹೇಗಿದೆ? ಯಾರನ್ನಾದರೂ ಕುರಿತು ಯಾರಾದರೂ ಅವನು ಎಷ್ಟು ಒಳ್ಳೆಯವನು ಎಂದರೆ ಅದನ್ನು ತಕ್ಷಣ ಒಪ್ಪಿಕೊಳ್ಳುವುದಿಲ್ಲ. 'ನನಗೆ ಗೊತ್ತಿಲ್ಲವೇ ಅವನ ಬೇಳೆಕಾಳು' ಎಂದು ಮೂಗು ಮುರಿಯುತ್ತೇವೆ ಅಥವ ಅವನ ಒಳ್ಳೆಯತನಕ್ಕೆ ಸಾಕ್ಷಿ ಬಯಸುತ್ತೇವೆ. ಅವನಲ್ಲಿರಬಹುದಾದ ಲೋಪಗಳ ತನಿಖೆ ನಡೆಸುತ್ತೇವೆ. ಅಂತಹುದೇನಾದರೂ ಸಿಕ್ಕಿದರೆ ಸಾಕು, ಅವನ ಚಾರಿತ್ರ್ಯಹನನ ಮಾಡಿಯೇ ಸಿದ್ಧ.  ಅದೇ ಕೆಟ್ಟವನು ಅಂದರೆ ಹಿಂದೆ ಮುಂದೆ ನೋಡದೆ ಒಪ್ಪಿಬಿಡುತ್ತೇವೆ! ನಮ್ಮ ಮತ್ತು ನಮ್ಮವರ ತಪ್ಪುಗಳು ನಮಗೆ ಗೌಣವಾಗಿ ಕಾಣುತ್ತವೆ. ಇತರರ ಸಣ್ಣ ತಪ್ಪುಗಳೂ ಬೃಹದಾಕಾರ ತಳೆಯುತ್ತವೆ. ನಮ್ಮ ನಿಜವಾದ 'ದೋಷ' ಇಲ್ಲಿದೆ. ನಾವು ತಪ್ಪುಗಳನ್ನು, ಲೋಪಗಳನ್ನು ಹೊರಗೆ ಹುಡುಕುತ್ತೇವೆ, ಕಾಣುತ್ತೇವೆ. ನಿಜವಾದ ತಪ್ಪು, ನಿಜವಾದ ಲೋಪ 'ಒಳಗೆ' ಇದೆ! ಆ ಒಳಗಿನ ತಪ್ಪನ್ನು ಅರಿಯುವ, ತಿದ್ದಿಕೊಳ್ಳುವ ಪ್ರಯತ್ನ ಮಾಡಲು ಪ್ರಾರಂಭಿಸಿದಾಗ ನಾವು ನಿಜವಾದ ಮನುಷ್ಯರಾಗುತ್ತಾ ಹೋಗುತ್ತೇವೆ. ಸಮಸ್ಯೆ ಬರುವುದು ಇಲ್ಲೇ. ಏಕೆಂದರೆ ಒಳ್ಳೆಯವರಾಗುವುದು ಎಂದರೆ ಮೇಲೇರುತ್ತಾ ಹೋಗುವುದು. ಇದು ಕಠಿಣವಾದ ಹಾದಿ. ಮೇಲೇರುವುದು ಕಷ್ಟ, ಆದರೆ ಕೆಳಕ್ಕೆ ಬೀಳುವುದು? ಹಾಗೆಂದು ಇದ್ದಲ್ಲೇ ಇದ್ದರೆ ನಾವು ನಿಜವಾದ ಮನುಷ್ಯರೆನಿಸಿಕೊಳ್ಳುವುದಾದರೂ ಹೇಗೆ? ಸಾಧಕ ಮೇಲೇರುವ ಪ್ರಯತ್ನವನ್ನು ಕೆಳಕ್ಕೆ ಬಿದ್ದರೂ ಬಿಡುವುದಿಲ್ಲ. ಅಂತಹ ನಿಜಸಾಧಕರೇ ಸಮಾಜದ ಆಸ್ತಿಯೆಂದರೆ ತಪ್ಪಲ್ಲ. ಆದರೆ ನಾವಾದರೋ ಅಂತಹ ಸಾಧಕರನ್ನು ದೇವರುಗಳನ್ನಾಗಿ ಮಾಡಿಬಿಡುತ್ತೇವೆ. ಸಾಧನೆ ಮಾಡುವುದು ನಮಗೆ ಸಂಬಂಧಿಸಿದ್ದಲ್ಲ ಎಂದುಕೊಂಡುಬಿಡುತ್ತೇವೆ. 


ನಿನಗೆ ನೀನೆ ಬಂಧು ನಿನಗೆ ನೀನೆ ಶತ್ರು
ಪರರೇನು ಮಾಡುವರು ನಿನದೆ ತಪ್ಪಿರಲು  
ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರು
ನಿನ್ನುದ್ಧಾರ ನಿನ್ನಿಂದಲೇ ಮೂಢ ||
     ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ನಮ್ಮ ದೇಶ ಈ ಸ್ಥಿತಿಗೆ ಬಂದಿದೆ ಎಂದು ದೂರುವುದು ಸಾಮಾನ್ಯವಲ್ಲವೇ? 'ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ?' ಅಂದರೆ ಸಿಗಬಹುದಾದ ಉತ್ತರವೆಂದರೆ 'ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ?' ಎಂಬುದೇ. ಪುರಂದರದಾಸರೇ ಹಾಡಿಲ್ಲವೇ 'ಸತ್ಯವಂತರಿಗಿದು ಕಾಲವಲ್ಲ . . . .'! ಬದುಕುವುದು ಕಷ್ಟ, ಸತ್ಯವಂತರಿಗೆ ಕಾಲವಲ್ಲ ಎಂದು ಪ್ರತಿಯೊಬ್ಬರೂ ತಪ್ಪು ಮಾಡುತ್ತಾ ಹೋದರೆ ಇತರರನ್ನು ದೂಷಿಸಬೇಕಾದರೂ ಏಕೆ? ಅವರದು ದೊಡ್ಡ ತಪ್ಪುಗಳು, ನಮ್ಮದಾದರೋ ಪರಿಸ್ಥಿತಿಯ ಕಾರಣದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು ಎಂದು ಸಮರ್ಥಿಸಿಕೊಳ್ಳುತ್ತೇವೆ. ಈ ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯವಾಗುತ್ತದೆ. ಪುರಂದರದಾಸರು ಒಳ್ಳೆಯ ದಾರಿಯಲ್ಲಿ ನಡೆಯಲು ಪ್ರಾರಂಭಿಸಿದಾಗ ಅದರ ಕಷ್ಟದ ಅರಿವಾಗಿ ಆರೀತಿ ಹಾಡಿದ್ದೇ ಹೊರತು ಒಳ್ಳೆಯತನ ಬಿಡಿ ಎಂಬರ್ಥದಲ್ಲಿ ಅಲ್ಲ, ಕಷ್ಟವಾದರೂ ಬಿಡಬೇಡಿ ಎಂಬ ಒಳಧ್ವನಿ ಅದರಲ್ಲಿದೆ. ನಾವು ಒಳ್ಳೆಯವರಾಗಲು ಅಥವ ಕೆಟ್ಟವರಾಗಲು ಇತರರು ಕೇವಲ ನೆಪಗಳಾಗಬಹುದೇ ಹೊರತು ಅವರು ಕಾರಣರಾಗುವುದಿಲ್ಲ, ವಾಸ್ತವಿಕವಾಗಿ ನಾವೇ ಕಾರಣರು. ಹೀಗಿರುವಾಗ ನಮಗೆ ಹೊರಗಿನವರು ಮಾದರಿ ಏಕಾಗಬೇಕು? ನಾವು ಒಳ್ಳೆಯವರು/ಕೆಟ್ಟವರು ಅನ್ನಿಸಿಕೊಳ್ಳಲು ನಿಜವಾದ ಕಾರಣ ನಮ್ಮ ಒಳಗೇ ಇರುವಾಗ ನಾವು ಏನಾಗಬೇಕು ಅನ್ನುವುದು ನಮ್ಮ ಮೇಲೇ ನಿರ್ಭರವಾಗಿದೆ. ಗೀತೆ ಹೇಳುವಂತೆ ನಮ್ಮ ಉದ್ಧಾರಕ್ಕಾಗಲೀ, ಪತನಕ್ಕಾಗಲೀ ನಾವೇ ಕಾರಣರೇ ಹೊರತು ಇತರರಲ್ಲ. ಹಾಗಿರುವಾಗ ಒಳ್ಳೆಯತನಕ್ಕೆ ನಮ್ಮನ್ನು ನಾವು ತೆರೆದುಕೊಳ್ಳೋಣ, ಕನಿಷ್ಠ ಪ್ರಯತ್ನವನ್ನಾದರೂ  ಮಾಡೋಣ. ಲೋಪಗಳನ್ನು ಕಾಣುವೆಡೆಗಳಲ್ಲಿ ಒಳ್ಳೆಯದನ್ನು ಕಾಣಲು ಹಂಬಲಿಸೋಣ. ನಮ್ಮಲ್ಲಿ 'ಇರುವುದನ್ನು' ಗುರುತಿಸಿಕೊಳ್ಳೋಣ, ಉಪಯೋಗಿಸೋಣ!
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||

ಮಂಗಳವಾರ, ಅಕ್ಟೋಬರ್ 4, 2011

ಮೂಢ ಉವಾಚ - 74


ಸ್ವರ್ಗವೆಂಬುದು ಕೇಳು ಪುಣ್ಯ ತೀರುವ ತನಕ
ನರಕವೆಂಬುದಿದೆ  ಪಾಪ ಕಳೆಯುವ ತನಕ 
ನಿನ್ನೊಳಗೆ ನಾನು ನನ್ನೊಳಗೆ ನೀನೆನಲು
ಸಚ್ಚಿದಾನಂದಭಾವ ಕೊನೆತನಕ ಮೂಢ ||


ಸ್ವರ್ಗವನು ಬಯಸುವರು ಕಾಮಿಗಳು ಕೇಳು
ನಿಜಭಕ್ತರವರಲ್ಲ ಜ್ಞಾನಿಗಳು ಮೊದಲಲ್ಲ 
ಅಂಜಿಕೆಯ ಮೇಲೆ ನರಕ ನಿಂತಿರಲು
ಆಸೆಯೇ ಸಗ್ಗಕಾಧಾರ ಮೂಢ ||


ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರಲಿಹುದು ಸಾವು
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ ||


ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು
ಹೇಡಿ ಸಾಯುವನು ವೀರನೂ ಸಾಯುವನು
ದೇವ ನಿಯಮವಿದು ಎಲ್ಲರೂ ಸಾಯುವರು
ಬದುಕಿ ಸಾಯುವರ ನೆನೆಯೋ ಮೂಢ ||
****************
-ಕ.ವೆಂ.ನಾಗರಾಜ್.


ಸೋಮವಾರ, ಅಕ್ಟೋಬರ್ 3, 2011

ಕೆಂಗನ ಡ್ಯಾನ್ಸು

     ಶೆಟ್ಟಿಹಳ್ಳಿಯ ಕೆಂಗ ನನ್ನ ಮನೆಯ ಮೇಲೆ ಒಂದು ಕೊಠಡಿ ಕಟ್ಟಿಸುತ್ತಿದ್ದ  ಸಂದರ್ಭದಲ್ಲಿ ಬರುತ್ತಿದ್ದ ಒಬ್ಬ ಗಾರೆಯಾಳು. ಆತನಿಗೆ ಲೆಕ್ಕ ಬರುತ್ತಿರಲಿಲ್ಲ. ಅಕ್ಷರವಂತನೂ ಅಲ್ಲ. ಆದರೆ ತನಗೆ ಬರಬೇಕಾದ ಕೂಲಿಯನ್ನು ಸರಿಯಾಗಿ ಪಡೆಯುತ್ತಿದ್ದ. ಪಡೆದಿದ್ದ ಹಣವನ್ನು ಕೊಟ್ಟವರಿಗೆ ಗೊತ್ತಾಗದಂತೆ ಬೇರೊಬ್ಬರಿಂದ ಎಣಿಸಿಸಿಕೊಂಡು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದ. ಬಂದ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿಬಿಡುತ್ತಿದ್ದ. ಅವನು ಹಣವನ್ನು ಮೂಟೆಗಳ ಲೆಕ್ಕದಲ್ಲಿ ಹೇಳುತ್ತಿದ್ದ. ಅರ್ಥಾತ್  ಅವರ ಹತ್ತಿರ ಅಷ್ಟು ಮೂಟೆ ಹಣ ಇದೆ, ಇವರ ಹತ್ತಿರ ಇಷ್ಟು ಮೂಟೆ ಹಣ ಇದೆ ಅನ್ನುತ್ತಿದ್ದ. ತನ್ನ ಹತ್ತಿರ ಮೂರು ಮೂಟೆ ಹಣ ಇದೆ ಅನ್ನುತ್ತಿದ್ದ ಅವನನ್ನು ಎಲ್ಲರೂ 'ಮೂರು ಮೂಟೆ ಕೆಂಗ' ಅನ್ನುತ್ತಿದ್ದರು. ಅವನು ನಾಲಗೆ ಹೊರಳದೆ ಸ್ಪಷ್ಟವಾಗಿ ಮಾತನಾಡುತ್ತಿರಲಿಲ್ಲ. ಅವನ ಸಹ ಕೆಲಸಗಾರರು ಅವನನ್ನು ರೇಗಿಸಿ ಅವನು ಕೊಡುತ್ತಿದ್ದ ಉತ್ತರಗಳನ್ನು ಕೇಳಿ ಮನರಂಜನೆ ಪಡೆಯುತ್ತಿದ್ದರು. ನಾನೊಮ್ಮೆ ಕೆಲಸದ ನಡುವೆ ಅವನನ್ನು ಹುರಿದುಂಬಿಸಿದಾಗ ಅವನು ಮಾಡಿದ ನೃತ್ಯ ಹೇಗಿತ್ತು ಗೊತ್ತೇ? ನೀವೇ ನೋಡಿ.
*******************
-ಕ.ವೆಂ.ನಾಗರಾಜ್.

ಶುಕ್ರವಾರ, ಸೆಪ್ಟೆಂಬರ್ 30, 2011

ಮೂಢ ಉವಾಚ - 73


ಶ್ರಮವಿರದ ಸುಖವೆಲ್ಲರಿಗೆ ಬೇಕು ನಿತ್ಯ
ಸುಖವು ಶ್ರಮದಲಿಹುದೆಂಬುದೆ ಪರಮಸತ್ಯ |
ಸುಖಿಸುವರ ಕಂಡು ಕರುಬುವರು ಪರರು
ಶ್ರಮಿಸುವರ ಮಚ್ಚರಿಪರಿಹರೆ ಮೂಢ ||


ವಿಷಯರಾಗವನು ಮೂಡಿಪುದೆ ಮನಸು
ಪಶುತರದಿ ಬಂಧಗೊಳಿಪುವುದು ಮನಸೆ |
ವಿರಾಗದಲಿ ಬಂಧ ಬಿಡಿಸುವುದು ಮನಸು
ಮನಸಿನಿಂದಲೆ ಕನಸು ನನಸು ಮೂಢ ||


ಹೆತ್ತು ಹೊತ್ತು ಸಲಹಿದ ಮಮತೆಯ ಜಲಧಿ
ತಾಯ ಋಣ ತೀರಿಸಲು ಆಗುವುದೆ ಜಗದಿ |
ನೋವನುಂಡು ನಲಿವ ನೀಡುವಳು ಮುದದಿ
ಆಕೆಯನು ನೋಯಿಪನು ಕಡುಪಾಪಿ ಮೂಢ ||


ಸಾಲ ಪಡೆದೆವು ಋಣಿಗಳಾದೆವು ನಾವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||

****************
-ಕ.ವೆಂ.ನಾಗರಾಜ್.