ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ನವೆಂಬರ್ 15, 2012

ಅರಿಯದೆ ಕುವರಿಯನಿತ್ತೆ . .


ರಾಗ: ಸಾವೇರಿ
ಅರಿಯದೆ ಕುವರಿಯನಿತ್ತೆ | ಸರ್ವ | ಸುರರೊಳು ಲಾಘವವೆತ್ತೆ | ಸರಸಿಜಭವ ಸುರ | ವರರು ಬೋಧಿಸೆ ಲೋಕ | ಗುರುವೆಂದು ಕೇಳ್ದತಿ | ಮರುಳಾಗಿ ಗೊರವಗಾನರಿಯದೆ  ||ಪ||

ವರ ವ್ಯಾಘ್ರ ಚರ್ಮವನ್ನುಟ್ಟು | ವಿಷ | ಧರ ಭೂಷಣಂಗಳನಿಟ್ಟು | ಕರಿಚರ್ಮಮಂ ಪೊದೆ | ದೊರಲುವ ತಲೆಯೋಡ | ಕರದಿ ಪಿಡಿದು ನಿಚ್ಚ | ಚರಿಸುವನಾಥನಿಗರಿಯದೆ              || ೧ ||

ಪಿಂಗದೆ ಪಳೆಯೆತ್ತನೇರಿ | ಮುದಿ | ಸಿಂಗಿಯ ವಿಷವನು | ಪೀರಿ ಕಂಗೊಳಿಸುವ ಶಬ | ರಾಂಗವ ಧರಿಸಿ ಕ | ರ್ಮಂಗಳ ವರ್ಜಿಸಿ | ದಿಂಗಳಗಣ್ಣಗಾನರಿಯದೆ                         || ೨ ||

ರೂಢಿಯರಿಯೆ ತಿರಿದುಂಡು | ಮೈಗೆ | ಕಾಡ ಬೂದಿಯ ಪೂಸಿ ಕೊಂಡು | ಕೋಡುಗಲ್ಲೊಳು ಗೂಡ | ಮಾಡಿ ಭೂತಗಳೊಡ | ನಾಡಿ ಬತ್ತಲೆ ಕುಣಿ | ದಾಡುವ ಮರುಳಗಾ | ನರಿಯದೆ || ೩ ||

ಊರೊಳಗಿರ್ಪುದ ಬಿಟ್ಟು | ಕಾಡ | ಸೇರಿ ಮೂರೂರ್ಗಳ ಸುಟ್ಟು | ಕ್ರೂರ ಬಾಣನ ಪಡಿ | ಹಾರನೆಂದೆನಿಸಿ ಪು | ನ್ನಾರಿರವನಾಂತು | ನಾರ ಪೊತ್ತಿರುವಗಾನರಿಯದೆ || ೪ ||

ಪಲವು ನಾಮಂಗಳ ನಾಂತು | ಎಲು | ದಲೆ ಮಾಲೆಗಳ ತಳೆದಿಂತು | ಸುಲಭನಲ್ಲದೆ ಮನವಳಿದು ಸಂಸಾರವ | ನುಳಿದು ಲೋಗರ ಶೂಲೆ | ಗೆಳಸುವ ಮರುಳಗಾನರಿಯದೆ     || ೫ ||


     ಇದು ೧೮ನೆಯ ಶತಮಾನದ ಲಿಂಗಣ್ಣಕವಿ (ಕವಿ ಮನೆತನದ ಮೂಲ ಪುರುಷ) ರಚಿಸಿದ ಖಂಡ ಕಾವ್ಯ  'ದಕ್ಷಾಧ್ವರ ವಿಜಯ' ಕೃತಿಯಲ್ಲಿ ದಕ್ಷನು ಪರಮೇಶ್ವರನಿಗೆ ತನ್ನ ಮಗಳನ್ನು ಕೊಟ್ಟ ಬಗ್ಗೆ ಹಳಹಳಿಸುವ, ಶಿವನನ್ನು ನಿಂದಿಸುವ ಸನ್ನಿವೇಶ. ತಾನೇ ಶ್ರೇಷ್ಠನೆಂಬ ಹಮ್ಮಿನಿಂದ ಬೀಗುತ್ತಿದ್ದ ದಕ್ಷನನ್ನು ಶಿವ ಎದ್ದು ಗೌರವಿಸಲಿಲ್ಲವೆಂಬ ಕಾರಣದಿಂದ ಸಿಟ್ಟಿಗೆದ್ದ ದಕ್ಷ ಶಿವನನ್ನು ನಿಂದಿಸುವ ಸನ್ನಿವೇಶದಲ್ಲಿ ಇದನ್ನು ಕವಿ ರಚಿಸಿದ್ದಾನೆ. ಕವಿಯೇ ಹೇಳಿಕೊಂಡಿರುವಂತೆ 

"ಪಳಗನ್ನಡದೊಳಚ್ಚ ಸಕ್ಕದಂಗಳೊಳುಸುರೆ |
ತಿಳಿಯಲ್ಕೆ ಕೆಲಬರ್ಗಸಾಧ್ಯಮೆಂದು ||
ತಿಳಿದುತದ್ಭವಮಿಶ್ರದೇಶೀಯವರ್ಣಕೋ |
ಜ್ವಲ ವಸ್ತುಕಾನ್ವಿತ ಸುಗಾನ ಭಣಿತೆಯೊಳು ||" ಇದನ್ನು ರಚಿಸಿದ್ದಾನೆ. 
ಇದು ಕೆಳದಿ ಕವಿಮನೆತನದ 7ನೆಯ ತಲೆಮಾರಿನ ಬಹುಮುಖ ಪ್ರತಿಭೆ ದಿ. ಎಸ್.ಕೆ. ಲಿಂಗಣ್ಣಯ್ಯನವರು (1879-1943) ರಚಿಸಿದ ಚಿತ್ರ -  'ವೀರಭದ್ರ ಸೃಷ್ಟಿ'



ಸೋಮವಾರ, ನವೆಂಬರ್ 12, 2012

ಛತ್ರಪತಿ ಶಿವಾಜಿಯ ತಂದೆಯ ಸಮಾಧಿಗೆ ಸ್ಥಳ ಒದಗಿಸಿದವರು ಕೆಳದಿಯರಸರು



     ಶಿವಾಜಿಯ ತಂದೆ ಶಹಾಜಿ ಭೋಸ್ಲೆ ಕರ್ನಾಟಕದ ಹೋದಿಗ್ಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ೧೬೬೫ರಲ್ಲಿ ಮೃತನಾದಾಗ ಆತನ ದೇಹವನ್ನು ಹೋದಿಗ್ಗೆರೆಯಲ್ಲೇ ಸಮಾಧಿ ಮಾಡಲಾಯಿತು. ಆಗ ಹೋದಿಗ್ಗೆರೆ ಕೆಳದಿಯ ರಾಜ್ಯದ ಸೀಮೆಯಲ್ಲೇ ಬರುತ್ತಿದ್ದು, ಶಹಾಜಿಯನ್ನು ಆ ಗ್ರಾಮದಲ್ಲೇ ಸಮಾಧಿ ಮಾಡಲು ಅವಕಾಶ ಕೊಟ್ಟದ್ದು ಕೆಳದಿಯ ಅರಸರೇ. ಸಮಾಧಿ ಮಾಡಲು ಅವಕಾಶ ಕೊಡಬೇಕೇ, ಬೇಡವೇ ಎಂಬ ಬಗ್ಗೆ ದೀರ್ಘವಾದ ಮಂತ್ರಾಲೋಚನೆ ನಡೆದು, ಕೊನೆಗೆ ಶಹಾಜಿ ಮರಣ ಹೊಂದಿದ ಸ್ಥಳದಲ್ಲೇ ಸಮಾಧಿಯನ್ನು ಗೌರವೋಚಿತವಾಗಿ ನಿರ್ಮಿಸಲಾಯಿತೆಂದು ಹೇಳಲಾಗಿದೆ. ಈ ಸಮಾಧಿಯನ್ನು ಕರ್ನಾಟಕ ಸರ್ಕಾರವು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಶಿವಾಜಿಯ ಅನುಯಾಯಿಗಳೆಂದು ಹೇಳಿಕೊಂಡು ಮರಾಠಿ ಭಾಷೆಯನ್ನು ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವವರು ಈ ವಿಷಯವನ್ನು ಗಮನಿಸಬೇಕು. ಸ್ವಭಾಷಾಪ್ರೇಮ ಒಳ್ಳೆಯದು. ಆದರೆ ಅದು ಪರಭಾಷಾ ದ್ವೇಷವಾಗಿ ಬೆಳೆಯಬಾರದು, ಬೆಳೆಸಬಾರದು. ಒಂದು ಭಾಷೆ ಬೆಳೆಯುವುದು, ಅಳಿಯುವುದು ಅದನ್ನು ಬಳಸುವ ರೀತಿಯಿಂದ. ಅನ್ಯ ಭಾಷಿಗರೊಡನೆ ಹೋರಾಡುವುದರಿಂದ, ಕಚ್ಚಾಡುವುದರಿಂದ ಅಲ್ಲ.
-ಕ.ವೆಂ.ನಾಗರಾಜ್.
**********
[ಶಹಾಜಿಯ ಚಿತ್ರವನ್ನು ಅಂತರ್ಜಾಲದಿಂದ ಹೆಕ್ಕಿದೆ.]

ಬುಧವಾರ, ನವೆಂಬರ್ 7, 2012

ಬದುಕು ಧಾವಿಸದಿರಲಿ!


     ಬನ್ನಿ, ನಡೆಯೋಣ. ಓಡದಿರೋಣ, ಹಾರದಿರೋಣ, ಒಟ್ಟಿಗೇ ನಡೆಯೋಣ. ಈ ಬದುಕು ಇರುವುದು ನಡೆಯುವುದಕ್ಕೆ. ಓಡಿದರೆ, ಹಾರಿದರೆ ನಾವು ನೋಡುವುದನ್ನು ನೋಡದೇ ಹೋಗಬಹುದು. ನಡೆಯುತ್ತಾ ಹೋದರೆ ನಾವು ಸುತ್ತಲೂ ನೋಡುತ್ತಾ ಹೋಗಬಹುದು, ಅನುಭವಿಸಬಹುದು, ಆನಂದಿಸಬಹುದು, ಕಲಿಯಬಹುದು, ಕಲಿಸಬಹುದು, ಅಳಬಹುದು, ನಗಬಹುದು, ಒಟ್ಟಿನಲ್ಲಿ ಬದುಕಬಹುದು. 'ಜಗವಿದು ಜಾಣ, ಚೆಲುವಿನ ತಾಣ, ಎಲ್ಲೆಲ್ಲೂ ರಸದೌತಣ' ಎಂಬ ಕವಿವಾಣಿಯನ್ನು ಮೆಲುಕುತ್ತಾ ಮೈಮರೆಯಬಹುದು. ಅತಿ ವೇಗದಲ್ಲಿ ಧಾವಿಸಬೇಕಾಗಿರುವ ಇಂದಿನ ದಿನಗಳಲ್ಲಿ ಇದು ಅವಾಸ್ತವಿಕವಾಗಿ ತೋರಬಹುದು. ಆದರೆ, ಅತಿ ವೇಗದಲ್ಲಿ ನಾವೂ ಓಡಬೇಕಾಗಿರುವ ಇಂದಿನ ಪರಿಸ್ಥಿತಿಯಲ್ಲಿ ನಾವು ಕಳೆದುಕೊಳ್ಳುತ್ತಿರುವುದು ಕಡಿಮೆಯೇನಲ್ಲ. ಈ ಅತಿವೇಗ ನಮ್ಮ ಸಮೀಪದಲ್ಲಿರುವವರನ್ನೂ ಕಾಣದಿರುವಂತೆ ಮಾಡುತ್ತದೆ. ನಾವು ಏನನ್ನು ಪಡೆಯಲು ಓಡುತ್ತಿದ್ದೇವೆಯೋ ಅದು ನಮ್ಮ ಸಮೀಪದಲ್ಲೇ ಇರುವುದನ್ನು ಕಾಣದೇ ಹೋಗುವಂತೆ ಮಾಡುತ್ತದೆ. ಓಡಿ ಓಡಿ ದಣಿದಾಗ ನಿಂತು ನೋಡಿದರೆ ನಾವು ಎಲ್ಲಿಂದ ಓಡಲು ಹೊರಟಿದ್ದೆವೋ ಆ ಜಾಗದಲ್ಲೇ ಇರುವುದನ್ನು ಕಂಡು ಅವಾಕ್ಕಾಗುತ್ತೇವೆ. ಅಷ್ಟಾಗಿದ್ದರೆ ಪರವಾಗಿಲ್ಲ, ಮೊದಲಿದ್ದ ಜಾಗದಿಂದ ಇನ್ನೂ ಹಿಂದಕ್ಕೆ ಹೋಗಿದ್ದರೆ? ಅಷ್ಟೊಂದೆಲ್ಲಾ ಓಡಿದ್ದು ವ್ಯರ್ಥವಾಯಿತಲ್ಲಾ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಇಲ್ಲಿ ನಡೆಯುವುದು/ಓಡುವುದು/ಹಾರುವುದುಗಳನ್ನು ನಮ್ಮ ಬದುಕಿನ ಶೈಲಿಗೆ ಪರ್ಯಾಯ ಪದಗಳಾಗಿ ಬಳಸಿರುವೆ.  ಒಂದು ಉದಾಹರಣೆ ಗಮನಿಸೋಣ. ಒಬ್ಬ ವ್ಯಕ್ತಿ ತೀರಾ ಬಡತನದಲ್ಲಿದ್ದವನು ಕಷ್ಟಪಟ್ಟು ಮುಂದೆ ಬರುತ್ತಾನೆಂದು ಇಟ್ಟುಕೊಳ್ಳೋಣ. ಅವನ ಗುರಿ ಹಣ ಮಾಡುವುದು, ಬೇಗ ಶ್ರೀಮಂತನಾಗುವುದು, ಅದಕ್ಕಾಗಿ ಆತ ಎಲ್ಲಾ ರೀತಿಗಳಲ್ಲಿ ಶ್ರಮವಹಿಸಿ ಯಶಸ್ವಿಯೂ ಆದನೆಂದುಕೊಳ್ಳೋಣ. ಹಣದ ಮದದಿಂದ ಎಲ್ಲಾ  ಬಂಧುಗಳಲ್ಲೂ ವಿರಸ/ದ್ವೇಷ ಕಟ್ಟಿಕೊಂಡನೆಂದುಕೊಳ್ಳೋಣ.ಅವನ ಕೊನೆಗಾಲದಲ್ಲಿ ಆತನ ದೈಹಿಕ ಸಾಮರ್ಥ್ಯವೂ ಕುಗ್ಗಿದ ದಿನಗಳಲ್ಲಿ ಯಾವುದೋ ಕಾರಣದಿಂದ ಆತ ಶ್ರೀಮಂತಿಕೆ ಕಳೆದುಕೊಂಡು ಬರಿಗೈದಾಸನಾದರೆ ಆತನಿಗೆ ಆಗುವ ಆಘಾತ ಊಹಿಸುವುದು ಕಷ್ಟ. ನಾವು ನಡೆಯುತ್ತಾ ಹೋದಂತೆ, ಮನುಷ್ಯನ ಅತಿ ಒಳ್ಳೆಯ ಮತ್ತು ಅತಿ ಕೆಟ್ಟ ಸ್ವಭಾವಗಳ - ಕೇವಲ ಬೇರೆಯವರದಲ್ಲ, ನಮ್ಮದೂ ಕೂಡ - ಪರಿಚಯವೂ ಆಗುತ್ತದೆ. ನಡೆಯುತ್ತಿದ್ದರೆ ಈ ಜಗತ್ತಿನ ಅಗಾಧತೆ, ವಿಶಾಲತೆ, ಪ್ರೀತಿಯ ಹರವನ್ನು ಕಣ್ಣಾರೆ ಕಂಡು ಅನುಭವಿಸಬಹುದು. ನಡೆಯುತ್ತಿದ್ದರೆ, ಸೂರ್ಯೋದಯ, ಸೂರ್ಯಾಸ್ತ, ಆಗಸದಲ್ಲಿನ ಚಂದ್ರ, ತಾರೆಗಳು, ನದಿಗಳು, ಸಮುದ್ರ, ಹಾರುವ ಹಕ್ಕಿಗಳನ್ನು ಕಂಡು ಕಣ್ತುಂಬಿಕೊಳ್ಳಬಹುದು. ಅತಿ ವೇಗ ಸಂಬಂಧಗಳನ್ನು ದೂರ ಮಾಡಬಹುದು; ಆದರೆ, ಸಾಮಾನ್ಯ ನಡಿಗೆ ಒಟ್ಟುಗೂಡಿಸಬಹುದು.
     ಅಗತ್ಯವಿರುವಷ್ಟು ಮಾತ್ರ ಹೊಂದುವುದರಲ್ಲಿನ ಸುಖ, ಸಂತೋಷಗಳು, ಬೇಕುಗಳನ್ನು ಹೆಚ್ಚಿಸಿಕೊಳ್ಳುವದರಲ್ಲಿ ಇರುವುದಿಲ್ಲವೆಂದು ಗೊತ್ತಾಗುವುದು ನಡೆಯುವುದರಿಂದ. ಏಕೆಂದರೆ ಕಡಿಮೆ ಭಾರವಿದ್ದಷ್ಟೂ ನಡೆಯುವುದು ಸುಲಭ. ಜೀವನ ಸರಳವಾಗಿದೆ, ಅದನ್ನು ಓಡಿ ಸಂಕೀರ್ಣಗೊಳಿಸಿಕೊಳ್ಳಬೇಕೇಕೆ? ಮೋಡ ಹೆಚ್ಚು ಮಳೆ ಸುರಿಸುವಂತೆ ನಾವು ಮಾಡಲಾರೆವು, ಸೂರ್ಯನ ಬಿಸಿಲಿನ ತಾಪ ಕಡಿಮೆಯಾಗುವಂತೆ ನಾವು ಮಾಡಲಾರೆವು. ಅವು ಪ್ರಕೃತಿಯ ಕೊಡುಗೆಗಳು, ಬೇಕಾದರೆ ತೆಗೆದುಕೊಳ್ಳಬಹುದು, ಬೇಡವಾದರೆ ಬಿಡಬಹುದು! ಅವನ್ನು ಕೊಡುಗೆಗಳು ಎಂದು ಭಾವಿಸಿದರೆ, ಅವು ಗುರಿಯೆಡೆಗಿನ ಸಾಧನಗಳಲ್ಲ, ಅವೇ ಗುರಿ ಮತ್ತು ಸಾಧನಗಳು ಎಂಬುದು ಅರಿವಾಗುತ್ತದೆ. ಇಂತಹ ಕೊಡುಗೆಗಳು ನಮಗೆ ಇಷ್ಟವಾಗಲಿ, ಇಲ್ಲದಿರಲಿ ಅವನ್ನು ಪ್ರೀತಿಸುವ, ಸಮಭಾವದಿಂದ ಸ್ವೀಕರಿಸುವ ಮನೋಭಾವ 'ನಡೆಯುವುದರಿಂದ' ಬರುತ್ತದೆ. ಹಳ್ಳಿಯ ಒಬ್ಬ ದನಗಾಹಿ ದನಗಳನ್ನು ತಂದೆಯ ಪ್ರೀತಿಯಿಂದ ಕಾಣುತ್ತಾನೆ, ಒಂದು ಮಗು ಆಗಸದಲ್ಲಿನ ನಕ್ಷತ್ರಗಳನ್ನು ಬಹಳ ಕಾಲ ತನ್ಮಯತೆಯಿಂದ ಕಂಡು ಸಂತಸಪಡುತ್ತದೆ. ಅಲ್ಲಿ ಬದುಕು 'ನಡೆಯುತ್ತದೆ', ಧಾವಿಸುವುದಿಲ್ಲ. 
     ನಡೆದಾಗ ದಣಿವಾಗುತ್ತದೆ, ನೀರಡಿಕೆಯಾಗುತ್ತದೆ, ಹಸಿವಾಗುತ್ತದೆ, ಗುರಿ ದೂರವೆನಿಸಿದಾಗ ನಿರಾಶೆಯೂ ಮೂಡುತ್ತದೆ. ಕೆಲವೊಮ್ಮೆ ನೀರೂ ಸಿಗದೆ ಬಸವಳಿಯಬೇಕಾಗುತ್ತದೆ. ಆಗ ನಾವು ಬದುಕಿನ ವಾಸ್ತವತೆಯನ್ನು  ಎದುರಿಸುವ ಶಕ್ತಿಯನ್ನು, ಒಳಗೆ ಹುದುಗಿರುವ ಚೇತನವನ್ನು ಎಬ್ಬಿಸುವ ಕಲೆಯನ್ನು ಕಲಿತುಕೊಳ್ಳುತ್ತೇವೆ. ಕೆಲವೊಮ್ಮೆ ಬೇಕಾಗಿದ್ದಕ್ಕಿಂತ ಹೆಚ್ಚು ಸಿಕ್ಕಾಗ ಹೃದಯ ಕೃತಜ್ಞತೆಯಿಂದ ಭಾರವಾಗುತ್ತದೆ. ಬದುಕನ್ನು ಅದು ಬಂದಂತೆ ಸ್ವೀಕರಿಸುವ ಕಲೆ ನಡೆಯುವವರದಾಗುತ್ತದೆ. ಕಷ್ಟವಾದರೂ, ನಷ್ಟವಾದರೂ ನಡೆಯುವುದನ್ನು ನಿಲ್ಲಿಸಬಾರದೆಂಬುದಕ್ಕೆ ಈ ಒಂದು ಪುಟ್ಟ ಕಥೆ ನಿದರ್ಶನವಾಗುತ್ತದೆ. ಪತಿ-ಪತ್ನಿ ಒಂದು ದೊಡ್ಡ ಬೆಟ್ಟವನ್ನು ಬೇರೆ ಬೇರೆ ದಿಕ್ಕುಗಳಿಂದ ಹತ್ತಲು ತೊಡಗಿರುತ್ತಾರೆ ಎಂದು ಭಾವಿಸೋಣ. ಅರ್ಧ ಬೆಟ್ಟ ಹತ್ತಿದಾಗ ಪತಿಗೆ ಇನ್ನು ಹತ್ತಲು ಸಾಧ್ಯವಿಲ್ಲವೆನ್ನಿಸಿ ಕುಳಿತುಕೊಳ್ಳುತ್ತಾನೆ. ಆಗ ಅಲ್ಲಿಗೆ ಹಾರಿ ಬಂದ ಗುಬ್ಬಚ್ಚಿಯೊಂದು ಉಲಿಯುತ್ತದೆ, "ಏಳು, ನಿಲ್ಲಬೇಡ. ಅಲ್ಲಿ ನಿನ್ನ ಹೆಂಡತಿ ನಿನ್ನನ್ನು ಬೆಟ್ಟದ ತುದಿಯಲ್ಲಿ ಕಾಣಲು ಕಾತರಿಸಿದ್ದಾಳೆ". ಅವನು ಗಡಬಡಿಸಿ ಎದ್ದು ಮುಂದೆ ಏರತೊಡಗುತ್ತಾನೆ. ಅತ್ತ ಕಡೆ ಅವನ ಹೆಂಡತಿ ಸಹ ಅರ್ಧ ದಾರಿಯಲ್ಲೇ ಬಸವಳಿದು ಇನ್ನು ಹತ್ತಲು ಸಾಧ್ಯವೇ ಇಲ್ಲವೆಂಬ ಸ್ಥಿತಿ ತಲುಪಿರುತ್ತಾಳೆ. ಆ ಗುಬ್ಬಚ್ಚಿ ಅವಳ ಬಳಿ ಹೋಗಿ ಅದೇ ಸಂದೇಶ ಕೊಡುತ್ತದೆ. ಪತ್ನಿ ಸಹ ಚೈತನ್ಯ ಒಟ್ಟುಗೂಡಿಸಿಕೊಂಡು ಪುನಃ ಬೆಟ್ಟ ಏರತೊಡಗುತ್ತಾಳೆ. 'ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂಬ ವಿವೇಕವಾಣಿ ನೆನಪಾಗುತ್ತದಲ್ಲವೇ?
     ನಡೆಯುತ್ತಾ ಹೋದಂತೆ, ವಿಶಾಲ ವಿಶ್ವದ ಎದುರು ಅಲ್ಪಚೇತನರಾದ ನಮ್ಮತನದ ಅರಿವಾಗುತ್ತದೆ, ಅಂತರಂಗ ಚುರುಕಾಗುತ್ತಾ ಹೋಗುತ್ತದೆ. ದೇವನ ಕರುಣೆಯನ್ನು ಕಾಣುವ ಸೌಭಾಗ್ಯ ನಮ್ಮದಾಗುತ್ತದೆ. ಅವನ ಪ್ರತಿಫಲಾಪೇಕ್ಷೆಯಿಲ್ಲದ ಶುದ್ಧ ಪ್ರೀತಿಯ ಅನುಭವವಾಗುತ್ತದೆ. ಏನನ್ನಾದರೂ ಕೊಡಬೇಕೆಂದರೆ ನಮ್ಮಲ್ಲಿ ಏನಾದರೂ ಇರಬೇಕು. ಎಲ್ಲಾ ವಸ್ತುಗಳಿಗೂ ಬೆಲೆದೆ. ಆದರೆ, ಕರುಣೆ, ಪ್ರೀತಿ, ವಿಶ್ವಾಸಗಳಿಗೆ ಬೆಲೆ ಕಟ್ಟಲಾಗುವುದಿಲ್ಲ. ಅವನ್ನಾದರೂ ಕೊಡುವ ಮನಸ್ಸು ಬರುವುದು 'ನಡೆಯುವುದರಿಂದಲೇ'! 'ನಡೆಯುವ' ಹಳ್ಳಿಗಳಲ್ಲಿ ಅಪರಿಚಿತರಿಗೂ ಅವು ಸಿಗುತ್ತವೆ. 'ಓಡುವ' ನಗರಗಳಲ್ಲಿ ಪರಿಚಿತರಿಗೂ ಅವು ಅಲಭ್ಯ. ತಮಗೇ ಊಟಕ್ಕೆ ತೊಂದರೆಯಿದ್ದರೂ, ಹಳ್ಳಿಗರು ಸಾಲ ತಂದಾದರೂ ಆತಿಥ್ಯ ಮಾಡುತ್ತಾರೆ. ನಗರಿಗರು ಯಾರಾದರೂ ಬರುವ ಸೂಚನೆ ಕಂಡರೆ, ಅವರು ಬಾರದಂತೆ ನೆಪಗಳನ್ನು ಮುಂದೊಡ್ಡುವುದು ವಿಶೇಷವಲ್ಲ. ಇರುವುದನ್ನು ಹಂಚಿಕೊಳ್ಳಬಹುದು, ಇಲ್ಲದಿದ್ದರೆ? ನಮ್ಮಲ್ಲೇ ಪ್ರೀತಿಯ ಕೊರತೆಯಿದ್ದರೆ ಕೊಡುವುದಾದರೂ ಹೇಗೆ? ನಗರದಲ್ಲಿ ಕಸಕ್ಕೂ 'ಬೆಲೆ'ಯಿದೆ. ಬೆಲೆ ತೆರದೇ ಅಲ್ಲಿ ಏನೂ ಸಿಗುವುದಿಲ್ಲ. ಆದರೆ, ಹಳ್ಳಿಯ ಒಬ್ಬ ಬಡ ಹಣ್ಣಿನ ವ್ಯಾಪಾರಿ ಬಳಲಿದ ಅಪರಿಚಿತ ದಾರಿಹೋಕನನ್ನು ಕಂಡರೆ ಕರುಣೆಯಿಂದ ಒಂದು ಹಣ್ಣನ್ನು ಕೊಡುವ ಮನಸ್ಸು ಹೊಂದಿರುತ್ತಾನೆ. 
     ಸಾಧು-ಸಂತರು ಹೇಳುತ್ತಾ ಬಂದಿರುವ ಸಂದೇಶವೆಂದರೆ, 'ಇತರರಿಗೆ ಪ್ರತಿಫಲಾಪೇಕ್ಷೆಯಿಲ್ಲದ ಪ್ರೀತಿ, ವಿಶ್ವಾಸಗಳನ್ನು ಕೊಡಬಲ್ಲೆವಾದರೆ, 'ನಾನು'ವಿನಿಂದ 'ನಾವು'ಗೆ ಬದಲಾಗುತ್ತೇವೆ ಮತ್ತು ಪರಸ್ಪರ ಹೆಚ್ಚು ಆತ್ಮೀಯರಾಗುತ್ತೇವೆ'. ಸುತ್ತಮುತ್ತಲಿನವರೊಡನೆ ಸೌಹಾರ್ದತೆಯಿಂದ ಬಾಳುವುದರ ಸಂತೋಷ ಹೆಚ್ಚಿನದು. ಆ ಸೌಹಾರ್ದತೆ ಹೇಗಿರಬೇಕೆಂದರೆ 'ನಡೆಯುವ' ಕಾಲುಗಳಂತಿರಬೇಕು. ಗಮನಿಸಿದ್ದೀರಾ? ಒಂದು ಕಾಲು ನಡೆಯುತ್ತಿದ್ದರೆ, ಇನ್ನೊಂದು ಕಾಲು ಆ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತದೆ. ಸಮನ್ವಯದ ತತ್ವ 'ನಡೆಯುವುದರಲ್ಲಿದೆ'. ಒಬ್ಬ ಅರ್ಹ ವ್ಯಕ್ತಿಗೆ ಸಹಾಯ ಮಾಡಿದೆವೆಂದು ಇಟ್ಟುಕೊಳ್ಳೋಣ. ಈಗ ಹೇಳಿ, ಹಾಗೆ ಮಾಡಿ ನಾವು ಸಹಾಯ ಮಾಡಿದೆವೋ, ಮಾಡಿಕೊಂಡೆವೋ? ಇನ್ನೂ ಅರ್ಥವಾಗಬೇಕೆಂದರೆ ಈ ಸಂದರ್ಭ ನೆನಪಿಸಿಕೊಳ್ಳೋಣ. ಒಂದು ಮಗುವಿಗೆ ಅದು ಇಷ್ಟಪಡುವ ಚಾಕೊಲೇಟನ್ನು ಕೊಟ್ಟೆವು ಅಂದುಕೊಳ್ಳೋಣ. ಆ ಮಗುವಿಗೆ ಆಗುವ ಸಂತೋಷ, ಅದರ ಕಣ್ಣಿನ ಹೊಳಪನ್ನು ಕಂಡು ನಮಗೆ ಖುಷಿಯಾಗುವುದೋ, ಇಲ್ಲವೋ? ಅದು ನಾವು ಕೊಟ್ಟದ್ದೋ, ಪಡೆದದ್ದೋ? 'ಪಡೆಯುವುದಕ್ಕಾಗಿ ಕೊಟ್ಟದ್ದು' ಎಂದರೆ ಹೆಚ್ಚು ಅರ್ಥಪೂರ್ಣವೆನಿಸೀತು. ತುಂಬಿ ತುಳುಕಿರುವ ಬಸ್ಸಿನಲ್ಲಿ ಕಷ್ಟಪಟ್ಟು ನಿಂತಿರುವ ಒಬ್ಬ ವೃದ್ಧರಿಗೆ ಕುಳಿತ ಸೀಟಿನಿಂದ ಎದ್ದು ಅವರಿಗೆ ಕುಳಿತುಕೊಳ್ಳಲು ಅನುಕೂಲ ಮಾಡಿಕೊಡುವುದರಲ್ಲೂ 'ಕೊಟ್ಟು ಪಡೆಯುವ' ಸುಖವಿದೆ, ಏನೋ ಒಳ್ಳೆಯದು ಮಾಡಿದೆವೆಂದು ಮನ ಹಿಗ್ಗುವ/ಸಮಾಧಾನವಾಗುವ ಕ್ರಿಯೆಯಿದೆ. ನಡೆಯುವುದು ಎಂದರೆ ಮುಂದೆ ಹೋಗುವುದು. ನಡೆಯುವುದರಿಂದ ಕೇವಲ ಬದುಕಿನಲ್ಲಿ ಮುನ್ನಡೆಯುವುದಿಲ್ಲ, ಬೆಳೆಯುತ್ತಾ ಮುಂದೆ ಹೋಗುತ್ತೇವೆ. 
     ಮನುಷ್ಯನ ಮನಸ್ಸು ಈಗಿರುವ ಸ್ಥಿತಿಗಿಂತ ಮುಂದುವರೆಯಲು ಚಡಪಡಿಸುತ್ತಿರುತ್ತದೆ. ಆಗ ಅಂತರಂಗದ ಅನಿಸಿಕೆಗಳಿಗೆ ಮಹತ್ವ ಕೊಡದೆ, ಬೇರೆಯದೇ ಆದ ಯೋಜನೆಗಳು, ನಡೆಗಳು ರೂಪುಗೊಳ್ಳುತ್ತವೆ. ಅಂದರೆ ನಡೆಯುವ ದಾರಿ ತಪ್ಪುತ್ತದೆ. ಕಾಲ ಸರಿದಂತೆ ಮನಸ್ಸು ಕಲುಷಿತಗೊಳ್ಳುತ್ತದೆ, ಮೊದಲು ಹೊಂದಿದ್ದ ನಂಬಿಕೆಗಳು, ಮೌಲ್ಯಗಳು ಸವಕಲಾಗುತ್ತವೆ. ಹಿಂದೆ ಹಿರಿಯರು ಇರುವೆ ಗೂಡುಗಳ ಬಳಿ ಸಕ್ಕರೆ, ಹಿಟ್ಟುಗಳನ್ನು ಉದುರಿಸುತ್ತಿದ್ದುದನ್ನು ಕಂಡಿದ್ದೇನೆ. ಈಗ ಅದೇ ಗೂಡುಗಳಿಗೆ ಇಂದಿನವರು ಡಿ.ಡಿ.ಟಿ./ಗೆಮಾಕ್ಸಿನ್ ಪುಡಿ ಹಾಕುವುದನ್ನೂ ಕಂಡಿರುವೆ. ಆದರೆ, ಸರಿದಾರಿಯಲ್ಲಿ  ನಡೆಯುತ್ತಾ ಹೋದಂತೆ ಜಗತ್ತು ಸ್ಪಷ್ಟವಾಗುತ್ತಾ ಹೋಗುತ್ತದೆ. ನಾನು ಮತ್ತು ನಾವುಗಳ, ಅಂತರಂಗದ ಮತ್ತು ಬಹಿರಂಗದ, ಸ್ವಾರ್ಥದ ಮತ್ತು ಸ್ವಾರ್ಥರಾಹಿತ್ಯದ ವ್ಯತ್ಯಾಸಗಳ ಕುರಿತು ಹೊಂದಿದ್ದ ಮೊದಲಿನ ಅನಿಸಿಕೆಗಳು ಪರಿಷ್ಕೃತಗೊಳ್ಳುತ್ತಾ ಹೋಗುತ್ತದೆ. ನಡೆಯುತ್ತಾ ಹೋದಂತೆ ಹಲವಾರು ಪ್ರಶ್ನೆಗಳು, ಸಮಸ್ಯೆಗಳು ಎದುರಾಗುತ್ತವೆ. ಆ ಪ್ರಶ್ನೆಗಳು, ಸಮಸ್ಯೆಗಳಿಗೆ ನಾವು ಕೊಡುವ ಉತ್ತರಗಳು ನಾವು ಪ್ರಪಂಚವನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ, ನಮ್ಮ ಸ್ಥಾನ ಎಲ್ಲಿದೆ ಅನ್ನುವುದನ್ನು ನಿರ್ಧರಿಸುತ್ತವೆ. ಒಂದು ವಿಚಿತ್ರ ಆದರೂ ಸತ್ಯವೆಂದರೆ, ಸರಿಯಾಗಿ ನಡೆಯುವವರು ಓಡುವವರಿಗಿಂತ, ಹಾರುವವರಿಗಿಂತ ಮುಂದೆ ಇರುತ್ತಾರೆ! 'Slow and steady wins the race!' ಬನ್ನಿ, ನಾವು ಬದಲಾಗೋಣ, ಜಗತ್ತು ತಂತಾನೇ ಬದಲಾದೀತು! ಬದಲಾಗುತ್ತದೋ, ಇಲ್ಲವೋ, ನಮ್ಮ ಕಣ್ಣಿಗಂತೂ ಬದಲಾಗುತ್ತದೆ! ನಡೆಯೋಣ, ಒಟ್ಟಿಗೇ ನಡೆಯೋಣ!! ನಡೆಯುವಾಗ ಈ ವೇದ ಮಂತ್ರ ನಮಗೆ ದಾರಿ ದೀಪವಾಗಲಿ.
ಓಂ ವಿಶ್ವಾನಿ ದೇವ ಸವಿತರ್ದುರಿತಾನಿ ಪರಾ ಸುವ |
ಯದ್ಭದ್ರಂ ತನ್ನ ಆ ಸುವ ||  [ಯಜು.೩೦.೩.]
ಅರ್ಥ: ಜಗದುತ್ಪಾದಕನಾದ ಸರ್ವದಾತಾ ಪ್ರಭುವೇ, ಸಮಸ್ತ ದುರ್ನಡತೆಗಳನ್ನೂ, ಪಾಪಗಳನ್ನೂ ದೂರ ಮಾಡು. ಯಾವುದು ಒಳ್ಳೆಯದೋ, ಕಲ್ಯಾಣಕರವೋ ಅದನ್ನು ನಮ್ಮಲ್ಲಿ ಉಂಟುಮಾಡು.
-ಕ.ವೆಂ.ನಾಗರಾಜ್.


ಭಾನುವಾರ, ಅಕ್ಟೋಬರ್ 21, 2012

ಮೂಢ ಉವಾಚ - 92


ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ
ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ |
ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ
ಮಾಯಾ ಶಕ್ತಿಗೆದುರುಂಟೆ ಮೂಢ || ..೩೨೧

ನಿದ್ದೆಯಿಂದೆದ್ದೊಡನೆ ನಾನು ಜನಿಸುವುದು
ಒಂದಿದ್ದು ಎರಡಾಗಿ ಮೂರಾಗಿ ಕಾಣುವುದು |
ದೇಹವೇ ನಾನೆನಿಸಿ ಭೇದ ಮೆರೆಯುವುದು
ಮಾಯಾ ಮೋಹಿನಿಗೆ ಶರಣು ಮೂಢ || ..೩೨೨

ಮಾಯೆಯ ಮುಸುಕಿನಲಿ ನಡೆದಿಹುದು ಜಗವು
ಜಗದ ಅವಸಾನವದು ಮರೆಯಾಗೆ ಮಾಯೆ |
ಹುಡುಕಾಟ ಬೆದಕಾಟ ಚಣಚಣಕು ಪರದಾಟ
ಮಾಯೆಯಾಟದಲಿ ಮನವೆ ದಾಳ ಮೂಢ ||..೩೨೩

ತಳಮಳಿಪ ಮನವನ್ನು ತಣಿಪುವುದೆ ಪೂಜೆ
ಕುಣಿಕುಣಿವ ಮನವನ್ನು ನಿಲಿಸುವುದೆ ಧ್ಯಾನ |
ಒಳಹೊರಗು ಒಂದೆನಿಸೆ ಜಪತಪವು ಮತ್ತೇಕೆ
ಚಿತ್ತಶಾಂತಿಯೆ ಮೋಕ್ಷ ಬೇರಲ್ಲ ಮೂಢ || ..೩೨೪
****************
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 15, 2012

ಸಬಕೋ ಸನ್ಮತಿ ದೇ ಭಗವಾನ್!

     ಮೂರು ದಿನಗಳ ಹಿಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿನ ಒಳಪುಟವೊಂದರಲ್ಲಿನ ಈ ಸುದ್ದಿ ನನ್ನ ಮನ ಕಲಕಿತು. ನೈಜೀರಿಯಾ ದೇಶದ ಅಡಮಾವಾದಲ್ಲಿನ ಮುಬಿ ಪಾಲಿಟೆಕ್ನಿಕ್ಕಿನ ಹಾಸ್ಟೆಲ್ಲಿಗೆ ಸೈನಿಕರ ಸಮವಸ್ತ್ರ ಧರಿಸಿದ ಕೆಲವರು ಬಂದೂಕುಧಾರಿಗಳು ನುಗ್ಗಿ ಅಲ್ಲಿನ 46 ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಂದರು ಎಂಬುದು ಆ ಸುದ್ದಿ. ಅವರು ವಿದ್ಯಾರ್ಥಿಗಳನ್ನು ಹೆಸರುಗಳನ್ನು ಕೇಳಿ ಕೇಳಿ ಕೊಂದಿದ್ದರು. ಹೆಸರಿನ ಆಧಾರದ ಮೇಲೆಯೇ ಕೆಲವು ವಿದ್ಯಾರ್ಥಿಗಳನ್ನು ಕೊಲ್ಲದೆ ಬಿಟ್ಟಿದ್ದರು. ಇದಕ್ಕೆ ಮುಂಚೆ ಸಹ ಮೂವರು ವಿದ್ಯಾರ್ಥಿಗಳನ್ನು ಕೊಂದಿದ್ದರು. ಈ ಕೃತ್ಯವನ್ನು ಬೊಕೊ ಹರಮ್ ಎಂಬ ಮೂಲಭೂತವಾದಿ ಮುಸ್ಲಿಮ್ ಸಂಘಟನೆ ಮಾಡಿದ್ದೆಂದು ಶಂಕಿಸಿದ್ದಾರೆ. ವಿದ್ಯಾರ್ಥಿಗಳು ಕಾಲೇಜನ್ನು ಬಿಟ್ಟು ಹೋಗಲು ಮೊದಲು ಎಚ್ಚರಿಕೆ ನೀಡಲಾಗಿತ್ತಂತೆ. ಈ ಸಂಸ್ಥೆ ನೈಜೀರಿಯಾದ ಜನರನ್ನು ಬಂದೂಕಿನ ಬಲದಿಂದ ಮುಸ್ಲಿಮರನ್ನಾಗಿಸಲು ಮತ್ತು ಶರಿಯಾ ಸರ್ಕಾರ ಸ್ಥಾಪಿಸಲು ಬದ್ಧವಾಗಿದ್ದು, ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್ ಯೂಸುಫ್ ೨೦೦೯ರಲ್ಲಿ ಪೋಲಿಸರ ಗುಂಡಿಗೆ ಬಲಿಯಾದಾಗಿನಿಂದಲೂ ಇಂತಹ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದೆ. ನೈಜೀರಿಯಾದಲ್ಲಿರುವ ೧೫೦ ಮಿಲಿಯನ್ ಜನಸಂಖ್ಯೆಯಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನರು ಸಮಸಂಖ್ಯೆಯಲ್ಲಿದ್ದಾರೆ. ಕಳೆದ ೩ ವರ್ಷಗಳಿಂದ ನಡೆಯುತ್ತಿರುವ ಇಂತಹ ಭೀಕರ ಚಟುವಟಿಕೆಗಳ ಪರಿಣಾಮದ ಕುರಿತು ವಿಚಾರವಾದಿಗಳೆನಿಸಿಕೊಂಡವರು, ಮಾನವತಾವಾದಿಗಳೆನಿಸಿಕೊಂಡವರು ಚಿಂತಿಸಿ ಪರಿಹಾರ ಕಂಡುಕೊಳ್ಳದಿದ್ದರೆ ಈ ಭೂಖಂಡ ಮತೀಯ ಕಾರಣಗಳಿಗಾಗಿ ಹೊತ್ತಿ ಉರಿಯುವುದರಲ್ಲಿ ಅನುಮಾನವಿಲ್ಲ. ಮುಸ್ಲಿಮ್ ಮತಾಂಧರು ಭಯೋತ್ಪಾದನೆ ಮೂಲಕ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳಲು ಉದ್ಯುಕ್ತರಾಗಿದ್ದರೆ, ಕ್ರಿಶ್ಚಿಯನರು ಆಸೆ, ಆಮಿಷಗಳು, ನಯವಂಚಕತನದಿಂದ ಮತಾಂತರ ನಡೆಸುತ್ತಿರುವುದು ಸುಳ್ಳಲ್ಲ. ೪೬ ಮಕ್ಕಳನ್ನು ಕಳೆದುಕೊಂಡ ಆ ಕುಟುಂಬಗಳವರಿಗೆ ಇಸ್ಲಾಮ್ ಬಗ್ಗೆ ಯಾವ ಭಾವನೆ ಬರಬಹುದೆಂದು ಯೋಚಿಸಬೇಕಲ್ಲವೇ? ಹಿಂಸೆ ಹಿಂಸೆಯನ್ನೇ ಪ್ರಚೋದಿಸುತ್ತದೆ. ಅದರಿಂದ ಹಾನಿಯೇ ಹೊರತು ಉಪಯೋಗವಂತೂ ಇಲ್ಲ. ಭಾರತದಲ್ಲಿ ಇಂತಹ ಘಟನೆ ನಡೆದು, ಪ್ರತಿಯಾಗಿ ಕೋಮು ದಳ್ಳುರಿ ಎದ್ದಿದ್ದರೆ ಹಿಂದೂಗಳ ಮೇಲೆ, ಅವರ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ರಾಜಕೀಯ, ಮತೀಯ ಕಾರಣಗಳಿಗಾಗಿ, ಏನಕೇನ ಪ್ರಕಾರೇಣ ಹೆಸರು ಪಡೆಯುವ ಇಚ್ಛೆಯ ವಿಚಾರವಾದಿಗಳಿಂದಾಗಿ ಆಗುತ್ತಿತ್ತೆಂಬುದರಲ್ಲಿ ಅನುಮಾನವಿಲ್ಲ. ಇಂತಹ ಲೇಖನ ಬರೆದವರಿಗೂ ಯಾವುದಾದರೂ ಹಣೆಪಟ್ಟಿ ಹಚ್ಚಲಾಗುತ್ತಿತ್ತು. ನೈಜಿರಿಯಾದಲ್ಲಿನ ಈ ಘಟನೆಯಲ್ಲಿ ಸತ್ತವರು ಹಿಂದೂಗಳಲ್ಲವಾದ್ದರಿಂದ ನನ್ನ ಕಳಕಳಿ ವಿನಾಕಾರಣದ ಮಾನವ ಹತ್ಯೆಯ ಬಗ್ಗೆ ಮಾತ್ರ ಎಂದು ಅರ್ಥ ಮಾಡಿಕೊಂಡಲ್ಲಿ ಸಂತೋಷ. ಮನುಷ್ಯರನ್ನು ಮನುಷ್ಯರಂತೆ ಕಾಣದ ಯಾವುದೇ ಮತ/ಧರ್ಮ ಮಾನವತೆಗೆ ಕಳಂಕ. ಯಾವುದೇ ಮತದವರ ಸಂಖ್ಯೆ ಎಷ್ಟೇ ಹೆಚ್ಚಾದರೂ ಮಾನವತೆಗೆ, ವೈಜ್ಞಾನಿಕ ಚಿಂತನೆಗೆ, ವೈಚಾರಿಕತೆಯ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವುದಾದಲ್ಲಿ ಅದಕ್ಕೆ ಬೆಲೆಯೆಲ್ಲಿ ಬಂದೀತು? ಆದರೆ ಮಾನವತೆಗೆ ಬೆಲೆ ಕೊಡುವ, ವೈಚಾರಿಕತೆಯನ್ನು ಉಳಿಸಿಕೊಂಡಿರುವ, ಮಾನವಧರ್ಮವನ್ನು ಒತ್ತಿ ಹೇಳುವ ಧರ್ಮ/ಮತದವರ ಸಂಖ್ಯೆ ಕಡಿಮೆಯಾದರೂ ಪರವಾಗಿಲ್ಲ, ಅಂತಹವರು ಜಗತ್ತಿನ ಶಾಂತಿಗೆ, ನೆಮ್ಮದಿಗೆ ಅತ್ಯಗತ್ಯ. ಅಂತಹ ಮಾನವಧರ್ಮ ಪಾಲಿಸುವವರನ್ನು, ಆ ಮನೋಭಾವದವರನ್ನು ಪ್ರೋತ್ಸಾಹಿಸುವ, ಬೆಳೆಸುವ ಕಾರ್ಯ ಇಂದಿನ ತುರ್ತು ಅಗತ್ಯವಾಗಿದೆ.

ಭಾನುವಾರ, ಸೆಪ್ಟೆಂಬರ್ 23, 2012

ನಮ್ಮ ಆಚರಣೆಗಳು, ಸಂಪ್ರದಾಯಗಳು ವೇದೋಕ್ತವೇ?


'ಕವಿಮನ'ದ ಓದುಗರಿಗೆ,
ನಮಸ್ಕಾರಗಳು.
ದಿನಾಂಕ 30-09-2012ರಂದು ಹಾಸನದಲ್ಲಿ ಒಂದು ಒಳ್ಳೆಯ ವಿಚಾರ ಪ್ರಚೋದಕ ಕಾರ್ಯಕ್ರಮವಿದೆ. ಆಹ್ವಾನ ಪತ್ರಿಕೆ ಇದೋ ಇಲ್ಲಿದೆ. ಬಿಡುವು ಮಾಡಿಕೊಂಡು ಭಾಗವಹಿಸಿ. ಬರುವ ಕುರಿತು ಪೂರ್ವಭಾವಿಯಾಗಿ ತಿಳಿಸಬಹುದೇ?


ಗುರುವಾರ, ಸೆಪ್ಟೆಂಬರ್ 20, 2012

ಮೂಢ ಉವಾಚ - 91



ಜಗವೆಂತಿಹುದು ಎಷ್ಟಿಹುದು ಬಲ್ಲವರು ಇಹರೇನು
ಯಾರಿಗಾಗೀ ಜಗವು ರಚಿಸಿದವರಾರು |
ಆದಿ ತಿಳಿಯದೀ ಜಗಕೆ ಅಂತ್ಯವಿಹುದೇನು
ಜಗಜನಕನೇ ಬಲ್ಲ ಪ್ರಶ್ನೆಗುತ್ತರ ಮೂಢ || ..೩೧೭

ರವಿ ಸೋಮರಿಹರು ಇಹುದು ಭೂಮಂಡಲವು
ವಾಯು ಜಲವಿಹುದು ಆಗಸವು ತುಂಬಿಹುದು |
ಜಗವನನುಭವಿಪ ಜೀವಿಗಳ ಲೆಕ್ಕವಿಟ್ಟವರಾರು 
ಎಲ್ಲದಕೆ ಕಾರಣನು ಎಂತಿಹನೊ ಮೂಢ || ..೩೧೮

ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ || ..೩೧೯

ನಾನಾರೆಂದು ತಿಳಿಸಿ ಹೇಳುವನೆ ಗುರುವು
ಅವನೆಂತೆಂದು ತೋರಿ ತಿದ್ದುವನೆ ಗುರುವು |
ಜಗವನನುಭವಿಸೆ ಮಾರ್ಗದರ್ಶಿಯೆ ಗುರುವು
ಗುರಿಯವನು ಗುರುವವನು ಒಬ್ಬನೇ ಮೂಢ || ..೩೨೦
*****************
-ಕ.ವೆಂ.ನಾಗರಾಜ್.