ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಸೆಪ್ಟೆಂಬರ್ 12, 2015

ಮನಸಿನ ನಿಯಂತ್ರಣ - ಅಂತರಂಗದ ಆಟ


ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
     ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು ಉಪದೇಶಿಸುವ ಅದೇ ಮನಸ್ಸು 'ಕುಡಿ, ಮಜಾ ಮಾಡು. ಸ್ನೇಹಿತರೊಂದಿಗೆ ಸೇರಿ ಎಲ್ಲವನ್ನೂ ಮರೆತು ಕುಡಿ, ನಿನಗೆ ಅದರಿಂದ ಸಂತೋಷ ಸಿಗುವುದಾದರೆ ಅದನ್ನು ಏಕೆ ಕಳೆದುಕೊಳ್ಳುತ್ತೀಯೆ' ಎಂದು ಪ್ರಚೋದಿಸುತ್ತದೆ. ಹಾಗೂ ಡೋಲಾಯಮಾನ ಸ್ಥಿತಿ ಮುಂದುವರೆದರೆ,  ಮಧ್ಯಮ ಮಾರ್ಗ ಸೂಚಿಸಿ ಹೇಳುತ್ತದೆ, 'ಇದೊಂದು ಸಲ ಕುಡಿದು ಬಿಡು, ಆಮೇಲೆ ಕುಡಿಯದಿದ್ದರಾಯಿತು.' ಕೊನೆಗೆ ಅವನು ಯೋಚನೆ ಮುಂದುವರೆಸಿದ್ದಂತೆಯೇ ಅವನ ಕಾಲುಗಳು ಬಾರಿನ ಹಾದಿ ಹಿಡಿದಿರುತ್ತವೆ.
     'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ಅದರಿಂದ ನನಗೆ ಸಂತೋಷವಾಗುತ್ತದೆ' ಎಂದು ಸಮರ್ಥಿಸಿಕೊಳ್ಳುತ್ತೇವೆ. ಖ ಅಂದರೆ ಇಂದ್ರಿಯ, ಸು-ಖ-  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ-ಖ- ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕುಣಿದರೆ/ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.
     ಮನಸ್ಸಿನ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೇವೆ, ಅಲ್ಲವೇ? ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ 'ನಾನು' ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ 'ತ'ಗಳೂ ಇಲ್ಲ. ವಿವಿಧ ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು 'ನಾನು' ಏಳುತ್ತದೆ. ಆ 'ನಾನು'ಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ 'ಅವನು' ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.
     ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಮಾಡಬೇಕಾದ ಅಂತಹ ಕೆಲಸಗಳಿಗೆ ನಾಚಿಕೊಳ್ಳಬೇಕಿಲ್ಲ, ಆದರೆ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.
     ಮನಸ್ಸಿನ ನಿಯಂತ್ರಣದ ಕುರಿತು ಎಲ್ಲರೂ ಮಾತನಾಡುತ್ತೇವೆ, ಅದರ ಅಗತ್ಯವನ್ನೂ ತಿಳಿದಿದ್ದೇವೆ. ಆದರೆ ಅದನ್ನು ಸಾಧಿಸುವುದಾದರೂ ಹೇಗೆ? ಸಹಾಯ ಮಾಡುವವರಾದರೂ ಯಾರು? ಈ ವಿಷಯದಲ್ಲಿ ಸಹಾಯಕ್ಕೆ ಬರುವವರೆಂದರೆ ಯಾರು ಸ್ವತಃ ತಮ್ಮ ಮನಸ್ಸನ್ನು ನಿಯಂತ್ರಿಸಿಕೊಂಡಿರುತ್ತಾರೋ ಅವರು ಮಾತ್ರ! ಮನಸ್ಸಿನ ನಿಯಂತ್ರಣ ಒಂದು ಅಂತರಂಗದ ಆಟ. ಈ ಅಟದಲ್ಲಿ ನಾವು ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಸೋಲುತ್ತೇವೆ, ಕೆಲವೊಮ್ಮೆ ಎಡವುತ್ತೇವೆ. ಈ ಆಟ ಆಡಲು ಚತುರತೆ, ಎಚ್ಚರಿಕೆ, ಹೃದಯದ ಶ್ರೀಮಂತಿಕೆ, ಯೋಜಿಸುವ ಸಾಮರ್ಥ್ಯ, ತಾಳ್ಮೆ, ಸಹನೆ, ಇತ್ಯಾದಿಗಳೆಲ್ಲವೂ ಇರಬೇಕಾಗುತ್ತದೆ. ಗೆದ್ದಾಗ ಮೈಮರೆಯದೆ, ಸೋತಾಗ ಕುಗ್ಗದೆ ಇರುವ ಮನೋಭಾವವಿರಬೇಕಾಗುತ್ತದೆ.
ವಿಷಯಲೋಲುಪತೆ ವಿಷಕಿಂತ ಘೋರ
ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?|
ಅಂತರಂಗದ ದನಿಯು ಹೊರದನಿಯು ತಾನಾಗೆ
ಹೊರಬರುವ ದಾರಿ ತೋರುವುದು ಮೂಢ||
     ಭಗವದ್ಗೀತೆಯಲ್ಲಿನ ಕರ್ಮಯೋಗದಲ್ಲಿನ ಅರ್ಜುನ ಶ್ರೀಕೃಷ್ಣನಿಗೆ ಕೇಳುವ ಈ ಪ್ರಶ್ನೆ ನಮ್ಮಂತಹ ಸಾಮಾನ್ಯರ ಪ್ರಶ್ನೆಯೂ ಆಗಿದೆ: ಅಥಕೇನ ಪ್ರಯುಕ್ತೋಯಂ ಪಾಪಂ ಚರತಿ ಪೂರುಷಃ | ಅನಿಚ್ಛನ್ನಪಿ ವಾರ್ಷ್ಣೇಯ ಬಲಾರ್ದಿವ ನಿಯೋಜಿತಃ || (೩.೩೬) - 'ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮಾಡಲ್ಪಡುವವನಂತೆ ಮನುಷ್ಯನು ಪಾಪವನ್ನು ಮಾಡಲು ಇರುವ ಪ್ರೇರಣೆಯಾದರೂ ಎಂತಹುದು?' ಎಂಬ ಅರ್ಜುನನ ಈ ಪ್ರಶ್ನೆ ಮಹತ್ವದ್ದಾಗಿದೆ. 'ಕುಡಿಯುವುದು ಕೆಟ್ಟದ್ದು ಎಂದು ಸ್ವತಃ ಕುಡುಕನಿಗೇ ಗೊತ್ತಿದ್ದರೂ ಆತ ಏಕೆ ಕುಡಿಯುತ್ತಾನೆ?' ಎಂದು ಕೇಳಿದಂತೆ ಈ ಪ್ರಶ್ನೆ ಇದೆ. ಶ್ರೀಕೃಷ್ಣ ಈ ಪ್ರಶ್ನೆಗೆ ಕೊಟ್ಟ ಉತ್ತರ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಆತ ಹೇಳುತ್ತಾನೆ, "ಕಾಮ, ಕ್ರೋಧಗಳು ರಜೋಗುಣದಿಂದ ಹುಟ್ಟಿದ್ದು ಇವುಗಳನ್ನು ತೃಪ್ತಿಗೊಳಿಸಲಾಗದು. ಹೊಗೆಯಿಂದ ಬೆಂಕಿ, ಧೂಳಿನಿಂದ ಕನ್ನಡಿ ಮುಚ್ಚಿ ಹೋಗುವಂತೆ ಈ ಪ್ರಪಂಚ ಕಾಮ-ಕ್ರೋಧಗಳಿಂದ ಮುಚ್ಚಿಹೋಗಿದೆ. ಇಂದ್ರಿಯಗಳು, ಬುದ್ಧಿ, ಮನಸ್ಸು ಇವುಗಳು ಕಾಮದ ನೆಲೆವೀಡುಗಳು. ಆದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಿ, ಜ್ಞಾನ-ವಿಜ್ಞಾನಗಳನ್ನು ನಾಶ ಮಾಡುವ ಕಾಮವನ್ನು ಹತ್ತಿಕ್ಕಬೇಕು." ಮುಂದುವರೆದು ಹೇಳುತ್ತಾನೆ: ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ | ಮನಸಸ್ತು ಪರಾ ಬುದ್ಧರ್ಯೋ ಬುದ್ಧೇಃ ಪರತಸ್ತು ಸಃ || (೩.೪೨) - 'ವಿಷಯಗಳಿಗಿಂತ ಇಂದ್ರಿಯಗಳು ಹೆಚ್ಚಿನವು, ಇಂದ್ರಿಯಗಳಿಗಿಂತ ಮನಸ್ಸು ಹೆಚ್ಚಿನದು, ಬುದ್ಧಿಯು ಮನಸ್ಸಿಗಿಂತ ಹೆಚ್ಚಿನದು. ಈ ಬುದ್ಧಿಗಿಂತಲೂ ಆತ್ಮ ಶ್ರೇಷ್ಠವಾದುದು.' ಆತ್ಮ ಜ್ಞಾನವನ್ನು ಅರಿಯುವ ಅಂತರಂಗದ ಆಟ ಆಡಲು ತೊಡಗಿದಾಗ, ಆ ಆಟದಲ್ಲಿ ತನ್ಮಯತೆಯಿಂದ ತೊಡಗಿಕೊಂಡಾಗ ಇದರ ಸತ್ಯಾಸತ್ಯತೆ ಅರಿವು ಗೊತ್ತಾಗುತ್ತಾ ಹೋಗುತ್ತದೆ. ಈ ಅಟದಲ್ಲಿ ಗೆಲ್ಲಬೇಕೆಂದರೆ ಮೊದಲು ಮನಸ್ಸನ್ನು ನಿಯಂತ್ರಿಸಬೇಕೆಂಬ ಧೃಡವಾದ ಸಂಕಲ್ಪ ಹೊಂದಬೇಕು, ಮನಸ್ಸಿನ ಸ್ವಭಾವವನ್ನು ಅರಿಯಬೇಕು ಮತ್ತು ಅದಕ್ಕಾಗಿ ನಮ್ಮದೇ ಆದ ತಂತ್ರಗಳು, ರೀತಿ-ನೀತಿಗಳನ್ನು ರೂಪಿಸಿಕೊಂಡು ಅವುಗಳನ್ನು ಬುದ್ದಿವಂತಿಕೆಯಿಂದ, ಪ್ರಾಮಾಣಿಕತೆಯಿಂದ ಜಾರಿಗೆ ತರಬೇಕು. 'ಚಪಳೆ ಸೊಡರ ಕುಡಿಯಂ ಪೋಲ್ವಳ್' ಎಂದು ಲಕ್ಷ್ಮಿ(ಸಂಪತ್ತು)ಯನ್ನು ಕುರಿತು ಕವಿ ವರ್ಣಿಸುತ್ತಾನೆ. ಆದರೆ, ನಮ್ಮ ಮನಸ್ಸು ಅನ್ನುವುದಿದೆಯಲ್ಲಾ, ಅದರ ಚಂಚಲತೆಯನ್ನು ಮೀರಿಸುವ ಮತ್ತೊಂದು ಸಂಗತಿ ಜಗತ್ತಿನಲ್ಲಿ ಇದೆಯೇ? ವಜ್ರವನ್ನು ವಜ್ರ ಕತ್ತರಿಸುವಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಬೇಕಿರುವುದು ಮಾನಸಿಕ ಬಲವೇ ಹೊರತು ಮತ್ತಾವುದರಿಂದಲೂ ಅದು ಜಗ್ಗುವುದಿಲ್ಲ.
-ಕ.ವೆಂ.ನಾಗರಾಜ್.
***************
ದಿನಾಂಕ  31-8-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಸೆಪ್ಟೆಂಬರ್ 9, 2015

ಚಿಂತೆ ಒಂದು ಸಮಸ್ಯೆ, ಪರಿಹಾರವಲ್ಲ!



     'ಅನುಗಾಲವೂ ಚಿಂತೆ ಜೀವಕೆ' ಎಂದು ದಾಸರು ಹೇಳಿರುವುದು ಸತ್ಯಸ್ಯ ಸತ್ಯವಾಗಿದೆ. ಚಿತೆ ಸತ್ತವರನ್ನು ದಹಿಸಿದರೆ ಚಿಂತೆ ಬದುಕಿರುವವರನ್ನೇ ದಹಿಸುತ್ತದೆ ಎಂಬುದು ಅನುಭವದ ನುಡಿಗಟ್ಟಾಗಿದೆ. ಪುಣ್ಯಕೋಟಿ ಗೋವಿನ ಹಾಡನ್ನು ಬದಲಾಯಿಸಿ ಹೀಗೆ ಹಾಡಬಹುದೇನೋ - 'ಚಿಂತೆಯೇ ನಮ್ಮ ತಾಯಿ ತಂದೆ, ಚಿಂತೆಯೇ ನಮ್ಮ ಬಂಧು ಬಳಗ, ಚಿಂತೆಯಿಲ್ಲದ ಮನುಜನಿದ್ದೊಡೆ, ಅವನೆ ನಿಜ ಪರಮಾತ್ಮನು'! ಹಾಗಾದರೆ ಪರಮಾತ್ಮನಿಗೆ ಚಿಂತೆಯೇ ಇಲ್ಲವೇ? ಎಷ್ಟೊಂದು ಸೂರ್ಯಮಂಡಲಗಳು, ಎಷ್ಟೊಂದು ನಕ್ಷತ್ರಗಳು, ಎಷ್ಟೊಂದು ಬಗೆಯ ಜೀವಿಗಳು, ಎಷ್ಟೊಂದು ಬಗೆಯ ಪ್ರಕೃತಿ ಇವೆಲ್ಲದರ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾದ ಅವನಿಗೆ ಚಿಂತೆ ಇಲ್ಲವೇ ಎಂದು ಕೇಳಬಹುದು. ನಿಜ, ಅವನಿಗೆ ಚಿಂತೆಯೇ ಇಲ್ಲ. ಏಕೆಂದರೆ ಅವನ ಕೆಲಸ ಅವನು ಮಾಡಿ ಮುಗಿಸಿದ್ದಾಗಿದೆ. ಸೃಷ್ಟಿ, ಸ್ಥಿತಿ. ಲಯಗಳನ್ನು ಸಹಜವಾಗಿ, ನಿರಂತರವಾಗಿ ನಡೆದುಕೊಂಡು ಹೋಗುತ್ತಿರುವಂತೆ ಮಾಡಿಬಿಟ್ಟಾಗಿದೆ. ಮನುಷ್ಯನಿಗೂ 'ಮಾಡಿದ್ದುಣ್ಣೋ ಮಹರಾಯ' ಎಂದು ಕರ್ಮಕ್ಕೆ ತಕ್ಕ ಫಲ ಎಂದು ಹೇಳಿಬಿಟ್ಟಿದ್ದಾನೆ. ಹಾಗಾಗಿ ಆ ದೇವರು ನಿಶ್ಚಿಂತೆಯಾಗಿ ಯಾರು ಯಾರ ತಲೆ ಕಡಿದರೂ ಸಾಕ್ಷಿಯಂತೆ ನೋಡುತ್ತಾ ಸುಮ್ಮನಿರುತ್ತಾನೆಯೇ ಹೊರತು ತಲೆ ಕೆಡಿಸಿಕೊಳ್ಳುವುದೇ ಇಲ್ಲ.

     ಈ ಚಿಂತೆ ಅನ್ನುವುದಾದರೂ ಏನು? ಚಿಂತೆ ಅನ್ನುವುದು ಮನಸ್ಸಿನಲ್ಲಿ ಮುಂಬರಲಿರುವ ಅಪಾಯಗಳು, ಅಹಿತಕರ ಸನ್ನಿವೇಶಗಳನ್ನು ಎದುರಿಸುವ ಉಪಾಯಗಳ ಕುರಿತು ನಡೆಯುವ ತಾಕಲಾಟಗಳು. ಆ ಸಮಸ್ಯೆಗಳು ಆರೋಗ್ಯದ್ದಾಗಿರಬಹುದು, ವೃತ್ತಿಗೆ ಸಂಬಂಧಿಸಿದ್ದಿರಬಹುದು, ಆರ್ಥಿಕ ಕಾರಣಗಳಿರಬಹುದು, ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳಿರಬಹುದು, ಇಂತಹ ಮತ್ತಾವುದೋ ಆಗಿರಬಹುದು. ನೈಜ ಸಮಸ್ಯೆಗಿಂತ ಕಾಲ್ಪನಿಕ ಸಮಸ್ಯೆ ಮನುಷ್ಯನನ್ನು ಹಿಂಡಿಬಿಡುತ್ತದೆ. ಚಿಂತೆ ಹೆಚ್ಚಾದಷ್ಟೂ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಾ ಹೋಗುತ್ತದೆ. ಈ ಚಿಂತೆ ಅನ್ನುವುದು ಸಮಸ್ಯೆಯನ್ನು ಎದುರಿಸಿ ಗೆಲ್ಲಲು ಸಹಾಯಕವಾಗಬಹುದು. ಆದರೆ, 'ಹೀಗಾದರೆ ಏನು?', 'ಹಾಗಾದರೆ ಏನು?', 'ಸಮಸ್ಯೆಗೆ ಪರಿಹಾರವೇ ಇಲ್ಲದಿದ್ದರೆ ಏನು ಮಾಡುವುದು?' ಇತ್ಯಾದಿ ತಾಕಲಾಟಗಳು, ಅನುಮಾನಗಳು ಮತ್ತು ಸಂದೇಹಗಳು ಮನಸ್ಸಿನ ಆರೋಗ್ಯಕ್ಕೆ, ದೈಹಿಕ ಆರೋಗ್ಯಕ್ಕೆ ಅಪಾಯಕಾರಿಯಾಗದೇ ಇರವು. ಅವು ಜೀವನದಲ್ಲಿನ ಆಸಕ್ತಿಯನ್ನು ಕಳೆದುಬಿಡುತ್ತವೆ, ಆತಂಕ ಮನೆ ಮಾಡಿ ಶಕ್ತಿಯನ್ನು ಬಸಿದುಬಿಡುತ್ತವೆ, ದಿನನಿತ್ಯದ ಚಟುವಟಿಕೆಗಳು ಏರುಪೇರಾಗುವಂತೆ ಮಾಡುತ್ತವೆ. ಸಮಸ್ಯೆ ಎದುರಿಸುವ ಕುರಿತು ಒಬ್ಬನೇ ಒಂಟಿಯಾಗಿ ಚಿಂತಿಸದೆ, ಅದನ್ನು ಆಪ್ತರಾದವರೊಡನೆ ಹಂಚಿಕೊಂಡರೆ ಸಮಸ್ಯೆಗೆ ಪರಿಹಾರ ಹುಡುಕಲು ಸುಲಭವಾಗಬಹುದು. ಕನಿಷ್ಠ ಪಕ್ಷ ನೈತಿಕ ಬೆಂಬಲವಾದರೂ ಸಿಕ್ಕಿ ಮನಸ್ಸು ಹಗುರವಾಗಬಹುದು. ಒಳ್ಳೆಯ ಸಹವಾಸಗಳು, ಒಳ್ಳೆಯ ಆಹಾರ, ಒಳ್ಳೆಯ ನಿದ್ದೆ ಚಿಂತೆಯನ್ನು ಹಗುರಗೊಳಿಸಬಲ್ಲವು. ಆದರೆ, ಈ ಚಿಂತೆ ಇದಕ್ಕೆ ಅವಕಾಶ ಕೊಟ್ಟೀತೇ ಅನ್ನುವುದೂ ಪ್ರಶ್ನೆಯಾಗುತ್ತದೆ.
     ಸತತವಾಗಿ ಚಿಂತಿತರಾಗಿರುವುದು ಬಹಳ ಹಾನಿಯುಂಟುಮಾಡುತ್ತದೆ. ಅದು ರಾತ್ರಿಯ ಸಮಯದಲ್ಲಿ ನಿದ್ರೆ ಬರದಂತೆ ಮಾಡುತ್ತದೆ. ದಿನದ ಸಮಯದಲ್ಲಿ ಏನೋ ಆತಂಕ, ಏನೋ ದುಗುಡ, ಏನೋ ಉದ್ವೇಗದಲ್ಲಿ ಇರುವಂತೆ ಮಾಡುತ್ತದೆ. ಯಾವ ಕೆಲಸ-ಕಾರ್ಯಗಳಲ್ಲೂ ಆಸಕ್ತಿ ಕಾಣುವುದಿಲ್ಲ. ಖಿನ್ನತೆ ಕಾಡುತ್ತದೆ ಮತ್ತು ಯಾರ ಸಹವಾಸವೂ, ಸ್ನೇಹವೂ ಹಿತಕರವೆನಿಸುವುದಿಲ್ಲ, ಏನೋ ಕಳೆದುಕೊಂಡವರಂತೆ ಚಡಪಡಿಸುತ್ತಿರುತ್ತಾರೆ. ಸೂಕ್ಷ್ಮ ಸ್ವಭಾವದವರಿಗೆ, ಭಾವಜೀವಿಗಳಿಗೆ ಚಿಂತೆಯಿಂದ ಆಗುವ ಹಾನಿ, ತೊಂದರೆಗಳ ಅರಿವಿದ್ದರೂ ಚಿಂತೆಯಿಂದ ಮುಕ್ತರಾಗುವ ದಾರಿ ಕಂಡುಕೊಳ್ಳುವುದು ಸುಲಭವಲ್ಲ.
     ಚಿಂತೆ ಮಾಡದಿರುವುದು ಇಷ್ಟೊಂದು ಕಷ್ಟವಾಗಿರುವುದೇಕೆ? ಸತತ ಚಿಂತೆಯಿಂದ ನರಳುವವರು ಚಿಂತೆಯ ಬಗ್ಗೆ ಧನಾತ್ಮಕವಾದ ಮತ್ತು ಋಣಾತ್ಮಕವಾದ ನಂಬಿಕೆಗಳನ್ನು ಹೊಂದಿರುತ್ತಾರೆ. ಚಿಂತೆ ತಲೆ ಕೆಡುವಂತೆ ಮಾಡುತ್ತದೆ, ಅದು ಆರೋಗ್ಯವನ್ನು ಹಾಳು ಮಾಡುತ್ತದೆ, ಸತತವಾಗಿ ಚಿಂತಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಅದು ನಿರಂತರವಾಗಿರುತ್ತದೆ ಎಂಬುದು ಋಣಾತ್ಮಕ ನಂಬಿಕೆಯಾಗಿದೆ. ಚಿಂತಿಸುವುದರಿಂದ ಕೆಟ್ಟ ಸಂಗತಿಗಳನ್ನು ನಿವಾರಿಸಿಕೊಳ್ಳಬಹುದು, ಸಮಸ್ಯೆಗಳನ್ನು ಪರಿಹರಿಸುತ್ತದೆ, ಅತಿ ಕೆಟ್ಟ ಸನ್ನಿವೇಶಗಳಲ್ಲೂ ಸಿದ್ಧರಿರುವಂತೆ ಮಾಡುತ್ತದೆ ಅಥವ ಸಮಸ್ಯೆಗೆ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಧನಾತ್ಮಕ ನಂಬಿಕೆಯೆನಿಸುತ್ತದೆ. ಈ ಎರಡೂ ನಂಬಿಕೆಗಳು ಒಳ್ಳೆಯವಲ್ಲ. ಋಣಾತ್ಮಕ ನಂಬಿಕೆ ಆತಂಕವನ್ನು ಹೆಚ್ಚಿಸುತ್ತದೆ ಮತ್ತು ಚಿಂತೆ ಮುಂದುವರೆಯುವಂತೆ ಮಾಡುತ್ತದೆ. ಧನಾತ್ಮಕ ನಂಬಿಕೆ ಸಹ ಅಷ್ಟೇ ಹಾನಿ ತರಬಲ್ಲದು. ಚಿಂತೆ ಮಾಡುವುದರಿಂದ ಸಮಸ್ಯೆ ಪರಿಹಾರಕ್ಕೆ ಸಹಾಯವಾಗುತ್ತದೆ ಎಂಬ ಭಾವನೆ ಚಿಂತಿಸುವ ಸ್ವಭಾವವನ್ನು ಉತ್ತೇಜಿಸುತ್ತದೆ. ಮನಸ್ಸಿನ ಮೇಲೆ ಹತೋಟಿ ಸಾಧಿಸಬೇಕೆಂದರೆ ಚಿಂತೆ ಅನ್ನುವುದು ಒಂದು ಸಮಸ್ಯೆ, ಪರಿಹಾರವಲ್ಲ ಎಂದು ಅರಿತುಕೊಳ್ಳಬೇಕಿದೆ.
     ಆತಂಕ, ಚಿಂತೆಗಳು ರಚನಾತ್ಮಕ ಶಕ್ತಿಯನ್ನು ಕಸಿದುಬಿಡುತ್ತವೆ, ಉತ್ಸಾಹಕ್ಕೆ ಗರ ಬಡಿಯುತ್ತದೆ, ಕ್ರಿಯಾತ್ಮಕತೆಯ ಬಾಗಿಲು ಮುಚ್ಚಿಬಿಡುತ್ತದೆ. ಆಗ ಏನು ಮಾಡಬಹುದು? ಸತತ ಚಿಂತೆಯಿಂದ ನರಳುವವರು ಏನೇ ಪ್ರಯತ್ನ ಮಾಡಿದರೂ ಅದರಿಂದ ಪಾರಾಗುವುದು ಸುಲಭವಲ್ಲವೆಂಬುದು ಅರಿವಿಗೆ ಬಂದಾಗ ನಿರಾಶೆ ಮೂಡುತ್ತದೆ. ಚಿಂತೆಯನ್ನು ಮರೆಯುವ ಪ್ರಯತ್ನ ಅಷ್ಟು ಸುಲಭವಲ್ಲ. ಮರೆಯಬೇಕೆಂದಷ್ಟೂ ಚಿಂತೆಯ ಸುತ್ತಲೇ ಮನಸ್ಸು ಸುಳಿದಾಡುತ್ತಿರುತ್ತದೆ. ಒಂದು ಉದಾಹರಣೆ ನೋಡೋಣ. ಕಣ್ಣು ಮುಚ್ಚಿ ಒಂದು ದೊಡ್ಡ ಹಂದಿ ತಿಪ್ಪೆಯ ಹೊಲಸಲ್ಲಿ ಆನಂದವಾಗಿ ಬಾಯಾಡಿಸುತ್ತಿರುವ ಚಿತ್ರವನ್ನು ಕಲ್ಪಿಸಿಕೊಳ್ಳೋಣ. ಮನಸ್ಸಿನಲ್ಲಿ ಆ ಚಿತ್ರ ಮನಸ್ಸಿನಲ್ಲಿ ಗಟ್ಟಿಗೊಂಡಾಗ ಆ ಚಿತ್ರದ ಕುರಿತು ಚಿಂತಿಸುವುದನ್ನು ನಿಲ್ಲಿಸೋಣ. ಏನೇ ಆದರೂ ಮುಂದಿನ ಐದು ನಿಮಿಷಗಳ ಅವಧಿಯವರೆಗೆ ಹಂದಿಯ ನೆನಪು ಬಾರದಿರುವಂತೆ ನಿರ್ಧರಿಸೋಣ. ಏನಾಗುತ್ತದೆ? ಅದರ ಕುರಿತು ಚಿಂತಿಸಬಾರದೆಂದುಕೊಂಡರೂ ಅದು ಸಾಧ್ಯವಾಗದು. ಮತ್ತೆ ಮತ್ತೆ ಆ ಚಿತ್ರ ಮೂಡಿಬರುತ್ತಿರುತ್ತದೆ. ಆದ್ದರಿಂದ ಚಿಂತೆಯನ್ನು ಮರೆಯಲು ಪ್ರಯತ್ನಿಸುವ ಬದಲು ಅದನ್ನು ನಿಯಂತ್ರಿಸಲು ಬೇರೆ ಮಾರ್ಗವನ್ನೇ ಹುಡುಕಬೇಕಿದೆ. ಚಿಂತೆ ಮಾಡಲು ದಿನದ ಒಂದು ನಿರ್ದಿಷ್ಟ ಅವಧಿಯನ್ನು, ಉದಾಹರಣೆಗೆ ಸಂಜೆಯ 5 ಗಂಟೆಯಿಂದ 6 ಗಂಟೆಯವರೆಗೆ ಅಥವ ರಾತ್ರಿಯ 9 ಗಂಟೆಯಿಂದ 10 ಗಂಟೆಯವರೆಗೆ, ಹೀಗೆ ನಿಗದಿಪಡಿಸಿಕೊಂಡರೆ ಮನಸ್ಸು ಸ್ವಲ್ಪ ಮಟ್ಟಿಗೆ ಚಿಂತೆಯನ್ನು ಬದಿಗಿಟ್ಟು ಮುಂದೂಡಲು ಸಹಾಯವಾಗುತ್ತದೆ. ಚಿಂತೆಗಾಗಿ ಸಮಯವಿರುವುದರಿಂದ ಇತರ ಸಂಗತಿಗಳಿಗೆ ಗಮನ ಕೊಡೋಣ ಎಂದು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಹೀಗೆ ಮುಂದೂಡುವ ಶಕ್ತಿ ರೂಢಿಸಿಕೊಂಡರೆ ಚಿಂತೆಯನ್ನು ನಿಯಂತ್ರಿಸುವ ಶಕ್ತಿ ಇದೆಯೆಂಬ ಅರಿವು ಮೂಡಿ ಹುರುಪು ಉಳಿಸಿಕೊಳ್ಳಲು ಸಹಾಯಕವಾಗುತ್ತದೆ.
     ಮುಂದಿನ ಹಂತವಾಗಿ ಸಮಸ್ಯೆಯ ಅಂತರಾಳಕ್ಕೆ ಇಳಿಯಬೇಕು. ಸಮಸ್ಯೆಯನ್ನು ಕೇವಲ ಚಿಂತಿಸುವುದರಿಂದ ಬಗೆಹರಿಸಲಾಗದು. ಪರಿಸ್ಥಿತಿಯ ಅವಲೋಕನ ಮಾಡಬೇಕು, ಏನು ಮಾಡಬಹುದೆಂಬ ಬಗ್ಗೆ ಯೋಚಿಸಬೇಕು ಮತ್ತು ಅದನ್ನು ಕ್ರಿಯಾರೂಪಕ್ಕೆ ತರುವ ಮಾರ್ಗಗಳನ್ನು ಹುಡುಕಬೇಕು. ಈ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕು.
** ಸಮಸ್ಯೆ ಕೇವಲ ಊಹಾತ್ಮಕ ಮತ್ತು ಕಲ್ಪನೆಯದೇ?
** ಕಲ್ಪನೆಯ ಸಮಸ್ಯೆಯಾದರೆ, ಅದು ನಿಜಕ್ಕೂ ಸಂಭವಿಸಬಹುದೇ?
** ಸಮಸ್ಯೆ ಪರಿಹಾರಕ್ಕೆ ಏನಾದರೂ ಮಾಡಬಹುದೇ ಅಥವ ಅದನ್ನು ಎದುರಿಸಲು ಸಿದ್ಧರಾಗಿದ್ದೇವೆಯೇ? ಅಥವ ಅದು ನಮ್ಮ ನಿಯಂತ್ರಣಕ್ಕೆ ಹೊರತಾದುದೇ?
ಪರಿಹರಿಸಬಹುದಾದ ಸಮಸ್ಯೆಯಾದರೆ ಏನು ಮಾಡಬಹುದೆಂಬ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಜನೆಗಳನ್ನು ರೂಪಿಸಬೇಕು. ಅದರ ಬಗ್ಗೆಯೇ, ಪರಿಪೂರ್ಣ ಪರಿಹಾರದ ಬಗ್ಗೆಯೇ, ತಲೆ ಕೆಡಿಸಿಕೊಳ್ಳದೆ, ನಮ್ಮ ನಿಯಂತ್ರಣಕ್ಕೆ ಹೊರತಾದ ಸಂಗತಿಗಳನ್ನು ಬಿಟ್ಟು ಉಳಿದಂತೆ ಏನು ಬದಲಾವಣೆ ತರಬಹುದೋ ಅಂತಹುದರ ಬಗ್ಗೆ ಕೇಂದ್ರೀಕರಿಸಿ ಪ್ರಯತ್ನಿಸಬೇಕು. ಒಮ್ಮೆ ಕಾರ್ಯಯೋಜನೆ ಸಿದ್ಧಪಡಿಸಿಕೊಂಡು ಪ್ರವೃತ್ತರಾದೆವೆಂದರೆ ಅರ್ಧ ಚಿಂತೆಯಿಂದ ಮುಕ್ತರಾದಂತೆಯೇ ಸರಿ.
     ಪರಿಹರಿಸಲಾಗದ ಸಮಸ್ಯೆಗಳಿದ್ದರೆ ಏನು ಮಾಡುವುದು? ನಮ್ಮಲ್ಲಿ ಹೆಚ್ಚಿನವರು ಇಂತಹ ಸಮಸ್ಯೆಗಳ ಚಿಂತೆಯಲ್ಲೇ ಬಳಲುತ್ತಿರುತ್ತೇವೆ. ಇಂತಹ ಸಂದರ್ಭಗಳಲ್ಲಿ, ನಮ್ಮ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದು ಅವಶ್ಯಕವಾಗಿದೆ. ಚಿಂತೆ ಸಮಸ್ಯೆ ಪರಿಹರಿಸಲಾಗದಿದ್ದರೂ ಭಾವನೆಗಳನ್ನು ನಿಯಂತ್ರಿಸಲು ಸಹಕಾರಿಯೆಂಬುದನ್ನು ಹಿಂದೆಯೇ ಹೇಳಿದೆ. ಆದರೆ ಅದು ಅಹಿತಕರ ಭಾವನೆಗಳನ್ನು ಹೋಗಲಾಡಿಸಲಾರದು. ಈ ವಿಷವೃತ್ತದಿಂದ ಹೊರಬರಬೇಕೆಂದರೆ ಅಹಿತಕರ ಭಾವನೆಗಳನ್ನು ಅವು ಇರುವಂತೆ ಒಪ್ಪಿಕೊಳ್ಳಬೇಕಷ್ಟೆ. ಈ ಭಾವನೆಗಳು ಜೀವನದಂತೆಯೇ ಗೋಜಲು ಗೋಜಲಾಗಿರುತ್ತವೆ ಎಂಬ ಸತ್ಯ ಮನಗಾಣಬೇಕು. ಭಾವನೆಗಳು ಯಾವಾಗಲೂ ಅರ್ಥವತ್ತಾಗಿರಲಾರದು ಅಥವ ಹಿತವಾಗಿರಲಾರದು. ಅವು ಮಾನವಸಹಜವೆಂದು ತಿಳಿದು ಅವುಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದರ ಬಗ್ಗೆ ಗಮನಿಸಬೇಕು.
     ಸತತ ಚಿಂತೆಯಿಂದ ಬಳಲುತ್ತಿರುವವರ ಮೂಲ ಸಮಸ್ಯೆಯೆಂದರೆ ಅವರು ಅನಿಶ್ಚಿತತೆಯನ್ನು ತಾಳಿಕೊಳ್ಳಲಾರರು. ಮುಂದೆ ಏನಾಗಬಹುದು ಎಂಬ ಕುರಿತು ಅವರು ಶೇಕಡ ನೂರರಷ್ಟು ಖಚಿತಪಡಿಸಿಕೊಳ್ಳಬಯಸುವವರು. ಅದನ್ನು ತಿಳಿಯುವ ಸಲುವಾಗಿಯೇ ಮತ್ತು ಅಂತಹ ಅಹಿತಕರ ಸನ್ನಿವೇಶಗಳನ್ನು ತಡೆಯುವುದು ಹೇಗೆ ಎಂಬ ಕುರಿತಾಗಿಯೇ ಚಿಂತೆಯಿಂದ ಬಳಲುತ್ತಾರೆ. ಆದರೆ ಸಮಸ್ಯೆಯೆಂದರೆ ಅಂತಹ ಚಿಂತೆ ಉಪಯೋಗಕ್ಕೆ ಬರುವುದಿಲ್ಲ. ಮುಂದೆ ಆಗಬಹುದಾದ ಸಂಗತಿಗಳ ಬಗ್ಗೆ ಚಿಂತಿಸುವುದರಿಂದ ಭವಿಷ್ಯ ತಿಳಿಯಲಾಗದು. ಹಾಗೆ ಚಿಂತಿಸುವುದರಿಂದ ಒಳ್ಳೆಯ ಸ್ಥಿತಿ ಬಂದೀತೆಂದು ಭಾವಿಸುವುದಾದರೂ, ಅದು ಕೇವಲ ಭ್ರಮೆಯಾಗಿರುತ್ತದೆ. ಕೆಟ್ಟ ಸಂಭವನೀಯ ಸಂಗತಿಗಳ ಬಗ್ಗೆ ಚಿಂತಿಸುವುದರಿಂದ ಅದನ್ನು ನಡೆಯುವುದನ್ನು ನಿಲ್ಲಿಸಲಾಗದು. ಅಂತಹ ಚಿಂತೆ ನಮ್ಮ ಈಗಿನ ಸುಖ-ಸಂತೋಷಗಳನ್ನು ಕಿತ್ತುಕೊಳ್ಳುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಈಗ ಏನು ಮಾಡಬಹುದೆಂಬ ಬಗ್ಗೆ ಮಾತ್ರ ಯೋಚಿಸಿ, ಕ್ರಮೇಣ ನಿಶ್ಚಿತ ಮತ್ತು ಉಪಯುಕ್ತ ಕ್ರಮಗಳ ಬಗ್ಗೆ ಮುಂದುವರೆಯುವುದು ಸೂಕ್ತ.
     ಸತತ ಚಿಂತೆಯಿಂದ ಬಳಲುವವರಿಗೆ ಸಮಸ್ಯೆ ವಾಸ್ತವಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ತೋರುತ್ತದೆ. ಸಮಸ್ಯೆಯನ್ನು ನಿಭಾಸುವುದು ದುಸ್ತರವಾಗಿ ತೋರುತ್ತದೆ. ಇದನ್ನು ಅರಿವಿನ ವಿಕಾರವೆನ್ನಬೇಕೋ ಅಥವ ಬೇರೆ ಏನೆನ್ನಬೇಕೋ ತಿಳಿಯದು. ಈ ಅರಿವಿನ ವಿಕಾರ ವಾಸ್ತವಿಕ ವಿಚಾರಗಳನ್ನು ಅವಲಂಬಿಸಿರದಿದ್ದರೂ ಅದನ್ನು ಬಿಡುವುದು ಕಷ್ಟವೇ. ಎಷ್ಟೋ ಸಲ ಅದು ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿರುವ, ಬದಲಾಯಿಸಲಾಗದ ವಿಚಾರವಾಗಿರಬಹುದು. ಇದನ್ನು ಸರಿಪಡಿಸಲು ಮೆದುಳಿಗೆ ತರಬೇತಿ ಕೊಡುವುದು ಅಗತ್ಯ. ಸಮಸ್ಯೆಯ ಅಪಾಯಗಳ ಕುರಿತು ಯಾವ ಸಂಗತಿ ಭಯಕ್ಕೆ ಕಾರಣವಾಗಿದೆಯೋ ಅದನ್ನು ವಸ್ತುಸ್ಥಿತಿಯೆಂದು ಭಾವಿಸದೆ, ಅದರ ಕುರಿತು ಸಾಧಕ-ಬಾಧಕಗಳ ಕುರಿತು ಪರಿಶೀಲಿಸಿದರೆ ಸಮತೋಲಿತವಾಗಿ ಯೋಚಿಸಲು ಸಾಧ್ಯವಾಗಬಹುದು. ಈ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ:
**  ಚಿಂತೆಗೆ ಕಾರಣವಾದ ಸಂಗತಿ ಎಷ್ಟರಮಟ್ಟಿಗೆ ಸತ್ಯ? ಎಷ್ಟು ಅಸತ್ಯ?
** ಈಗಿನ ಪರಿಹಾರಕ್ಕಿಂತ ಬೇರೆ ರೀತಿಯ ಪರಿಹಾರಕ್ಕೆ ಅವಕಾಶವಿದೆಯೇ?
**  ಭಯಕ್ಕೆ ಕಾರಣವಾದ ಸಂಗತಿ ನಡೆಯುವ ಸಾಧ್ಯತೆ ಎಷ್ಟು?
**  ಅಂತಹ ಸಾಧ್ಯತೆ ಕಡಿಮೆಯಿದ್ದರೆ, ಇತರ ಪರಿಣಾಮಗಳಾದರೂ ಎಂತಹವು?
**  ಚಿಂತಿಸುವುದು ಸಹಕಾರಿಯೇ? ಚಿಂತೆ ಮಾಡುವುದರಿಂದ ಎಷ್ಟರ ಮಟ್ಟಿಗೆ ಅನುಕೂಲ/ತೊಂದರೆ?
**  ಇಂತಹುದೇ ಸಮಸ್ಯೆ ನನ್ನ ಸ್ನೇಹಿತನಿಗೆ ಇದ್ದರೆ ನಾನು ಏನು ಸಲಹೆ ಕೊಡುತ್ತಿದ್ದೆ?
     ಸಮಸ್ಯೆ ಉಂಟುಮಾಡುವವರಿಂದ ಹಿತಕರವಾದ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಸಮಸ್ಯೆ ಉಲ್ಬಣವಾಗದಂತೆ ಅಂತಹವರೊಂದಿಗೆ ಜಾಗ್ರತೆಯಿಂದ ವ್ಯವಹರಿಸಬೇಕಾಗುತ್ತದೆ. ಆಪ್ತರು, ಸ್ನೇಹಿತರು, ಹಿತಚಿಂತಕರುಗಳನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು. ಚಿಂತೆಗೆ ಭವಿಷ್ಯದಲ್ಲಿ ಏನಾಗಬಹುದು ಮತ್ತು ಅದಕ್ಕೆ ನಾವು ಏನು ಮಾಡಬೇಕು ಎಂಬುದೇ ಮುಖ್ಯ ಕಾರಣವಾಗಿದೆ. ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು ಮತ್ತು ಅದಕ್ಕೆ ತರಬೇತಿ ನೀಡಿದರೆ ಸಮಸ್ಯೆ ಹಗುರವಾದೀತು. ಮನಸ್ಸಿನ ಆತಂಕಗಳು, ಉದ್ವೇಗಗಳನ್ನು ಉಪೇಕ್ಷಿಸದೆ, ಹತ್ತಿಕ್ಕದೆ ಅವುಗಳನ್ನು ಹೊರಗಿನ ವ್ಯಕ್ತಿಯ ದೃಷ್ಟಿಯಿಂದ ನೋಡುವ ಅಭ್ಯಾಸ ಬೆಳೆಸಿಕೊಂಡರೆ ಒಳಿತಾದೀತು. ಇಂತಹ ಅಭ್ಯಾಸ ಬೆಳೆಸಿಕೊಂಡರೆ ಸಮಸ್ಯೆಗಳು ಮೋಡ ಆಕಾಶದಲ್ಲಿ ಸರಿದುಹೋದಂತೆ ಸರಿದು ಹೋಗಬಹುದು. ಚಿಂತೆ ಭವಿಷ್ಯದ ದುಃಖಗಳನ್ನು ನಿವಾರಿಸುತ್ತದೋ ಇಲ್ಲವೋ ತಿಳಿಯದು, ಆದರೆ ಇಂದಿನ ಸಂತೋಷವನ್ನು ಮಾತ್ರ ಹಾಳು ಮಾಡುತ್ತದೆ. ಮುಂದಿನ ಸಂಗತಿಗಳಿಗಿಂತ ಇಂದಿನ ಪರಿಸ್ಥಿತಿಯ ಬಗ್ಗೆ ಗಮನ ನೀಡಿದರೆ ಮುಂದಿನದೂ ಸರಾಗವಾಗಿ ಸಾಗಬಹುದು. ಮನಸ್ಸನ್ನು ಕೇಂದ್ರೀಕರಿಸಿ ಈಗ ಏನು ಮಾಡಬೇಕೆಂಬ ಬಗ್ಗೆ ಮಾತ್ರ ಧ್ಯಾನಿಸಿದರೆ ಅನುಕೂಲವಾಗಬಹುದು. ಹಳೆಯ ಚಿಂತೆಗಳಿಗೆ ಮನಸ್ಸು ಮರಳಿದರೂ, ವಿಚಲಿತರಾಗದೆ ಪ್ರಯತ್ನ ಮುಂದುವರೆಸಿದರೆ ಚಿಂತೆಯಿಂದ ಮುಕ್ತವಾಗುವ ದಾರಿ ಸಿಕ್ಕೀತು. ಚಿಂತಿಸದಿರೋಣ. ಚಿಂತೆಯದೇ ಚಿಂತೆಯಾಗಿರುವಾಗ ಇದು ಬಹಳ ಕಷ್ಟವಾದರೂ ಪ್ರಯತ್ನಪಟ್ಟು ಚಿಂತಿಸದಿರೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 24-8-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಸೆಪ್ಟೆಂಬರ್ 2, 2015

ಆರರ ಮಹಿಮೆ


     ಈ 'ಆರು' ಅನ್ನುವುದಕ್ಕೆ ಪದಕೋಶದಲ್ಲಿ ಹಲವು ಅರ್ಥಗಳಿವೆ. ಎತ್ತುಗಳನ್ನು ಹೂಡಿದ ನೇಗಿಲಿಗೂ ಆರು ಎನ್ನುತ್ತಾರೆ. ಶಕ್ತವಾಗು, ಗಟ್ಟಿಯಾಗಿ ಕೂಗು, ತಣ್ಣಗಾಗು ಎಂಬ ಅರ್ಥಗಳು ಸಹ ಇವೆ. ಆರಿಸು ಎಂದರೆ ಶೇಖರಿಸು, ಆಯ್ಕೆ ಮಾಡು, ನಂದಿಸು ಎಂಬ ಅರ್ಥಗಳೂ ಪದಕೋಶದಲ್ಲಿ ಸಿಗುತ್ತವೆ. ಆರು ಗುಣಗಳು, ಅಂಶಗಳು/ವಿಚಾರಗಳ ಕುರಿತು ವಿವೇಚಿಸುವುದು ಈ ಲೇಖನದ ಉದ್ದೇಶ.      ಮಹಾಭಾರತದ ಉದ್ಯೋಗ ಪರ್ವದಲ್ಲಿ ವಿದುರ ಧೃತರಾಷ್ಟ್ರನಿಗೆ ನ್ಯಾಯಯುತ ಮಾರ್ಗದ ಕುರಿತು ತಿಳಿಸಿ ಹೇಳುವುದರೊಂದಿಗೆ, ನಡವಳಿಕೆಗಳು, ಸದಾಚಾರ, ಮಾತು, ನೀತಿ, ಧರ್ಮ, ಸುಖ-ದುಃಖಗಳ ಪ್ರಾಪ್ತಿ, ನ್ಯಾಯ-ಅನ್ಯಾಯ, ಸತ್ಯ, ಅಹಿಂಸೆ, ಕ್ಷಮೆ, ಮಿತ್ರ-ಶತ್ರುಗಳಾರು, ಮುಂತಾದ ಸಂಗತಿಗಳ ಬಗ್ಗೆ ತಿಳುವಳಿಕೆ ನೀಡಿರುವ ಬಗೆಗೂ ವಿಸ್ತೃತವಾಗಿ ವಿವರಿಸಲಾಗಿದೆ. ವಿದುರ ನೀತಿ ಎಂದೇ ಹೆಸರಾಗಿರುವ ಈ ಪರ್ವದಲ್ಲಿ ಸಜ್ಜನ-ಸಾಧಕರಿಗೆ ಇರಬೇಕಾದ ನೂರಾರು ಕಲ್ಯಾಣಕಾರಿ ಗುಣಗಳ ಬಗ್ಗೆ ಮಾಹಿತಿ, ಮಾರ್ಗದರ್ಶನಗಳು ಇದ್ದು, ಅವುಗಳಲ್ಲಿ ಬರುವ 'ಆರು' ಅಂಶಗಳನ್ನು ಹೆಕ್ಕಿ ಲೇಖನವಾಗಿಸಿರುವೆ.
     ೧. ಉನ್ನತ ಸ್ಥಿತಿಗೆ ಏರಬಯಸುವವರು, ಐಶ್ವರ್ಯ ಬಯಸುವವರು ನಿದ್ರೆ, ತೂಕಡಿಕೆ, ಭಯ, ಸಿಟ್ಟು, ಸೋಮಾರಿತನ ಮತ್ತು ವಿಳಂಬ ನೀತಿ - ಈ ಆರರಿಂದ ದೂರವಿರಬೇಕು. ಒಬ್ಬ ಸಾಧಕನ ಸಾಧನೆಗೆ ಸತತ ಶ್ರಮ, ಏಕಾಗ್ರತೆ ಅಗತ್ಯವಿದ್ದು ಇದಕ್ಕೆ ನಿದ್ರೆ, ತೂಕಡಿಕೆಗಳು, ಸೋಮಾರಿತನಗಳು ಅಡ್ಡಿ ತರುತ್ತವೆ. ನಮ್ಮ ಜೀವಿತಾವಧಿ ಯಾವಾಗ ಅಂತ್ಯವಾದೀತೋ ತಿಳಿಯದಾಗಿರುವಾಗ ಯಾವುದೇ ಕೆಲಸವನ್ನು ಮುಂದೂಡದೇ, 'ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈಗಲೇ ಮಾಡು' ಎಂಬ ಅನುಭವಿಗಳ ಮಾತನ್ನು ಅನುಸರಿಸುವುದು ಸೂಕ್ತವಾಗಿದೆ. ಮಾಡಹೊರಟಿರುವ ಕೆಲಸಕ್ಕೆ ಅಡ್ಡಿಗಳು, ಅಡಚಣೆಗಳು ಎದುರಾದಾಗ ಎದೆಗುಂದದೆ, ಭಯಪಡದೆ ಮುಂದಡಿಯಿಡುವುದು ಸಾಧಕರ ಲಕ್ಷಣವಾಗಿದೆ.
     ೨. ಜ್ಞಾನವನ್ನು ಹಂಚದ ಗುರು, ಅಧ್ಯಯನ ಮಾಡದ ಋತ್ವಿಜ, ದುರ್ಬಲ ರಾಜ, ಅಪ್ರಿಯವಾಧಿನಿ ಪತ್ನಿ, ಸದಾ ಊರಿನಲ್ಲೇ ಇರಬಯಸುವ ಗೋಪಾಲಕ ಮತ್ತು ವನದಲ್ಲಿ ಇರಬಯಸುವ ಕ್ಷೌರಿಕ - ಈ ಆರು ಜನರನ್ನು ಸಮುದ್ರದಲ್ಲಿ ರಂಧ್ರ ಬಿದ್ದ ನಾವೆಯಂತೆ ದೂರವಿರಿಸಬೇಕು ಎಂದು ವಿದುರ ಹೇಳಿದ್ದಾನೆ. ಗುರುವಾದವನು ತನ್ನ ಶಿಷ್ಯರಿಗೆ ತನಗೆ ಗೊತ್ತಿರುವ ಜ್ಞಾನವನ್ನು ಹಂಚಬೇಕು. ತಿಳಿದ ಜ್ಞಾನವನ್ನು ಇತರರಿಗೆ ಹಂಚದಿದ್ದರೆ ಅದು ಕಳ್ಳತನಕ್ಕೆ ಸಮನಾದುದು ಎಂಬುದು ವೇದೋಕ್ತಿಯಾಗಿದೆ. ಒಂದೊಮ್ಮೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಆಯುರ್ವೇದದ ಅನೇಕ ಸಂಗತಿಗಳು, ಲೋಹವನ್ನು ಚಿನ್ನವಾಗಿ ಪರಿವರ್ತಿಸಬಹುದಾದ ವಿದ್ಯೆ, ಇತ್ಯಾದಿಗಳು ಅವುಗಳನ್ನು ತಿಳಿದವರೊಂದಿಗೇ ಕಣ್ಮರೆಯಾಗಿವೆ. ಮಾರಣಾಂತಿಕ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ಕೊಡಬಲ್ಲ ನಾಟಿವೈದ್ಯರುಗಳನ್ನೂ ನಾವು ಕಂಡಿದ್ದೇವೆ. ಅವರು ತಮ್ಮ ಜ್ಞಾನವನ್ನು ಇನ್ನೊಬ್ಬರಿಗೆ ತಿಳಿಸಿಕೊಡದೇ ಇರುವುದರಿಂದ ಅವರೊಂದಿಗೇ ಆ ವಿದ್ಯೆ ಅಂತ್ಯ ಕಾಣುತ್ತವೆ. 'ಯೋಗ್ಯ ಶಿಷ್ಯ ಸಿಗಲಿಲ್ಲ, ಹೇಳಿಕೊಡಲಿಲ್ಲ' ಎಂಬುದು ನೆಪವಾಗುತ್ತದೆ. ಅಧ್ಯಯನ ಮಾಡಬೇಕಾದುದು ಒಬ್ಬ ಋತ್ವಿಜನ ಕರ್ತವ್ಯವಾಗಿದೆ. ಸಮಾಜಕ್ಕೆ ಅವರ ಮಾರ್ಗದರ್ಶನ ಅಗತ್ಯವಿರುತ್ತದೆ. ಆತನೇ ಸರಿಯಾಗಿ ತಿಳಿದುಕೊಳ್ಳದಿದ್ದರೆ ಆತ ಏನು ಮಾರ್ಗದರ್ಶನ ಮಾಡಿಯಾನು? ಮಾಡಿದರೂ ಅದು ಸರಿಯಾಗಿರದಿದ್ದರೆ ಹಾನಿಕಾರಕ ಪರಿಣಾಮ ಬೀರುವುದಂತೂ ನಿಶ್ಚಿತ. ಇಂದಿನ ಅನೇಕ ಪಂಡಿತೋತ್ತಮರು, ಗುರುಗಳು ಅನ್ನಿಸಿಕೊಂಡವರನ್ನು ಗಮನಿಸಿದರೆ ಈ ಮಾತಿನ ಮಹತ್ವ ತಿಳಿಯುತ್ತದೆ. ದುರ್ಬಲ ರಾಜನಿಂದ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ವಿವಿಧ ಮಾಫಿಯಾಗಳ ರಿಮೋಟ್ ಕಂಟ್ರೋಲಿನಲ್ಲಿ ಆಡಳಿತಗಾರರು ಆಡಳಿತ ನಡೆಸಿದರೆ ದೇಶದ ಪ್ರಜೆಗಳು ಅನೇಕ ರೀತಿಯ ಸಂಕಷ್ಟಗಳಿಗೆ ಒಳಪಡುತ್ತಾರೆ. ಇದರ ಅನುಭವ ಜನರಿಗೆ ಈಗಾಗಲೇ ಆಗಿಬಿಟ್ಟಿದೆ, ಆಗುತ್ತಿದೆ. ಗೋಪಾಲಕನಾದವನು ದನ-ಕರುಗಳನ್ನು ಮೇಯಿಸುವ ಸಲುವಾಗಿ ಕಾಡಿಗೆ ಹೋಗದೆ ಊರಿನಲ್ಲೇ ಇರಲು ಇಚ್ಛಿಸಿದರೆ ಪ್ರಯೋಜನವೇನು? ಈಗ ಕಾಡುಗಳೂ ಇಲ್ಲ, ಗೋಮಾಳವೂ ಇಲ್ಲ, ಇನ್ನು ದನ-ಕರುಗಳ ಪಾಡು, ಅವುಗಳನ್ನು ಸಾಕಿದವರ ಪಾಡು ಅನುಭವಿಸಿದವರಿಗೇ ಗೊತ್ತು. ಕ್ಷೌರಿಕನಾದವನು ಊರಿನಲ್ಲಿರದೆ ಕಾಡಿನಲ್ಲಿದ್ದರೆ ಅವನಿಂದ ಏನು ಪ್ರಯೋಜನ ಎಂಬುದು ವಿದುರನ ಪ್ರಶ್ನೆ.
     ೩. ಸತ್ಯ, ದಾನ, ಸೋಮಾರಿಯಾಗದಿರುವುದು, ಅಸೂಯಾಪರನಾಗದಿರುವುದು, ಕ್ಷಮಾಗುಣ, ಧೈರ್ಯ - ಈ ಆರು ಗುಣಗಳನ್ನು ಎಂದಿಗೂ ಬಿಡಬಾರದು. ಒಬ್ಬ ಆದರ್ಶ ವ್ಯಕ್ತಿ ಹೇಗಿರಬೇಕೆಂಬುದಕ್ಕೆ ಇಲ್ಲಿ ತಿಳುವಳಿಕೆಯಿದೆ. ಸತ್ಯವಂತ, ದಾನಶೀಲ ವ್ಯಕ್ತಿಗೆ ಸಮಾಜದಲ್ಲಿ ಮನ್ನಣೆ ಇರುತ್ತದೆ. ಸೋಮಾರಿಯಾದರೆ ಉನ್ನತ ಸ್ಥಿತಿಗೆ ಏರಲಾಗದೆಂಬುದನ್ನು ಹಿಂದೆಯೇ ತಿಳಿದೆವು. ಅಸೂಯೆ ಪಡುವುದು ತನಗಿಂತ ಇನ್ನೊಬ್ಬರು ಮೇಲಿದ್ದಾರೆ ಎಂಬುದನ್ನು ಒಪ್ಪುವವರ ಮತ್ತು ಕೀಳರಿಮೆಯಿಂದ ನರಳುವವರ ಗುಣವಾಗಿರುತ್ತದೆ. ಅಗತ್ಯದ ಸಂದರ್ಭಗಳಲ್ಲಿ ತಪ್ಪುಗಳನ್ನು ಕ್ಷಮಿಸುವ ಉದಾತ್ತತೆಯೊಂದಿಗೆ, ಸವಾಲುಗಳನ್ನು ಎದುರಿಸುವ ಛಲ ಮತ್ತು ಧೈರ್ಯಗಳಿದ್ದರೆ ಅಂತಹವನು ನಾಯಕನೆನಿಸಿಕೊಳ್ಳುತ್ತಾನೆ.
     ೪. ಮನುಷ್ಯನಿಗೆ ಸುಖ-ಸಂತೋಷಗಳನ್ನು ನೀಡುವ ಆರು ಸಂಗತಿಗಳೆಂದರೆ, ಧನಪ್ರಾಪ್ತಿ, ಒಳ್ಳೆಯ ಆರೋಗ್ಯ, ಅನುಕೂಲವತಿ ಜೊತೆಗೆ ಪ್ರಿಯವಾದಿನಿ ಸತಿ, ವಿಧೇಯ ಮಗ, ಧನಸಂಪಾದನೆಗೆ ನೆರವಾಗುವ ವಿದ್ಯೆ. ಇದಕ್ಕೆ ವಿವರಣೆಯ ಅಗತ್ಯ ಕಾಣುವುದಿಲ್ಲ. ಹಣವಿದ್ದವರಿಗೆ ಆರೋಗ್ಯವಿರದಿರುವ, ಆರೋಗ್ಯವಾಗಿರುವವರಿಗೆ ಹಣವಿಲ್ಲದ ಸ್ಥಿತಿ, ಕೌಟುಂಬಿಕ ಸಂಬಂಧಗಳು ಚೆನ್ನಾಗಿಲ್ಲದಿದ್ದರೆ ಎಲ್ಲವೂ ಇದ್ದರೂ ಪ್ರಯೋಜನವಾಗದಂತಹ ಸ್ಥಿತಿಗಳನ್ನು ಕಂಡರೆ ಈ ಸಂಗತಿಗಳ ಮಹತ್ವದ ಅರಿವು ನಮಗಾಗುತ್ತದೆ.
     ೫. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹಗಳ ಮೇಲೆ ಪ್ರಭುತ್ವ ಸಾಧಿಸುವವನು ಪಾಪಗಳಿಂದ ಮುಕ್ತನಾಗಿರುತ್ತಾನೆ. ಇವುಗಳಲ್ಲಿ ಕಾಮವು ಚತುರ್ವಿಧ ಪುರುಷಾರ್ಥಗಳಲ್ಲೂ ಒಂದಾಗಿದೆ. ಸುಕಾಮವು ಮುಕ್ತಿಯೆಡೆಗೆ ಕರೆದೊಯ್ದರೆ ಕುಕಾಮ ಜೀವಿಯನ್ನು ಪಾತಾಳಕ್ಕೆ ಬೀಳಿಸುತ್ತದೆ. ಸಕಲ ಜೀವರಾಶಿಯನ್ನು ಪ್ರೀತಿಸುವ ಸುಮೋಹ ಸಮಾಜವನ್ನು ಒಂದುಗೂಡಿಸುತ್ತದೆ. ಸಂಕುಚಿತ ಮೋಹ ಸಮಾಜಕ್ಕೆ ಕಂಟಕವಾಗುತ್ತದೆ. ಇದೇ ರೀತಿ ಸಾತ್ವಿಕ ಕ್ರೋಧ ಒಳಿತು ತಂದರೆ ವಿನಾಕಾರಣದ, ಸ್ವಾರ್ಥಪರ ಕ್ರೋಧ ಹಾನಿ ತರುತ್ತದೆ. ಆದರೆ ಉಳಿದ ಲೋಭ, ಮದ, ಮತ್ಸರಗಳು ಕೆಡುಕನ್ನೇ ತರುವ ಗುಣಗಳಾಗಿವೆ.
     ೬. ಕಳ್ಳರು ಅಜಾಗರೂಕ ಜನರಿಂದ, ವೈದ್ಯರು ರೋಗಿಗಳಿಂದ, ಕಾಮಿನಿಯರು ಕಾಮುಕರಿಂದ, ಪುರೋಹಿತರು ಯಾಗ ಮಾಡುವವರಿಂದ, ವಿವಾದಗಳಲ್ಲಿ ತೊಡಗಿರುವ ಪ್ರಜೆಗಳಿಂದ ರಾಜ ಜೀವಿತಗಳನ್ನು ಕಂಡುಕೊಳ್ಳುತ್ತಾರೆ. ವಿಚಿತ್ರವೆನಿಸಿದರೂ ಸತ್ಯವಾದ ಮಾತುಗಳಿವು. ಜಾಗೃತರಾಗಿದ್ದಲ್ಲಿ ಕಳ್ಳರಿಗೆ ಅವಕಾಶವಾದರೂ ಎಲ್ಲಿ ಸಿಕ್ಕೀತು? ವಿವಾದಗಳು, ಸಮಸ್ಯೆಗಳು ಇರದಿದ್ದಲ್ಲಿ ಕೋರ್ಟು, ಕಛೇರಿಗಳು, ಪೋಲಿಸ್ ಠಾಣೆಗಳ, ನ್ಯಾಯಾಲಯಗಳ ಅವಶ್ಯಕತೆಯೇ ಬರದು. ಇದನ್ನೇ ಮುಂದುವರೆಸಿ ಹೇಳಬೇಕೆಂದರೆ, ಜನರು ಜಾಗೃತರಾಗಿದ್ದರೆ, ಭ್ರಷ್ಠರು, ಮಾಫಿಯಾಗಳು, ಸ್ವಾರ್ಥಿಗಳು ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಿರುವುದಿಲ್ಲ.
     ೭. ಉಪೇಕ್ಷೆ ಮಾಡಿದರೆ ಗೋವು, ಸೇವೆ, ಕೃಷಿ, ಪತ್ನಿ, ವಿದ್ಯೆ, ಸೇವಕ -  ಈ ಆರು ಸಂಗತಿಗಳು ಕೈಬಿಡುತ್ತವೆ. ನಿರಂತರ ತೊಡಗಿಕೊಳ್ಳುವಿಕೆ, ಮೇಲ್ವಿಚಾರಣೆಯ ಮಹತ್ವವನ್ನು ಈ ನುಡಿ ಬಿಂಬಿಸುತ್ತಿದೆ. ಸರ್ಕಾರ ನಡೆಸುವವರು ಮತ್ತು ಉನ್ನತ ಹುದ್ದೆಗಳಲ್ಲಿರುವವರು ಸಕ್ಷಮರಾಗಿರದಿದ್ದರೆ ಆಡಳಿತ ಕುಸಿಯುತ್ತದೆ, ಅದರ ಪರಿಣಾಮವನ್ನು ಸಾಮಾನ್ಯ ಜನತೆ ಎದುರಿಸಬೇಕಾಗುತ್ತದೆ. ವೈಯಕ್ತಿಕ ಜೀವನದಲ್ಲೂ ಅಷ್ಟೆ, ಗಮನ ಕೊಡದಿದ್ದರೆ ಸೋಲು ಕಾಡದೇ ಇರದು.
     ೮. ವಿದ್ಯಾಭ್ಯಾಸದ ನಂತರ ಶಿಷ್ಯರು ಗುರುವನ್ನು, ವಿವಾಹದ ನಂತರ ಮಕ್ಕಳು ತಾಯಿಯನ್ನು, ಕಾಮವಾಂಛೆ ತೀರಿದ ನಂತರ ಪುರುಷನು ಸ್ತ್ರೀಯನ್ನು, ಕೆಲಸ ಪೂರ್ಣವಾದನಂತರ ಅದಕ್ಕೆ ನೆರವಾದವರನ್ನು, ಹೊಳೆ ದಾಟಿದ ಮೇಲೆ ಅಂಬಿಗನನ್ನು ಮತ್ತು ಕಾಯಿಲೆ ಗುಣವಾದ ನಂತರ ರೋಗಿಯು ವೈದ್ಯನನ್ನು ಉಪೇಕ್ಷಿಸುತ್ತಾರೆ. ಇಂದಿನ ಕಾಲಕ್ಕೂ ವಿದುರನ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ವಿದ್ಯಾಭ್ಯಾಸ ಅನ್ನುವುದು ವ್ಯಾಪಾರವಾಗಿರುವ ಸ್ಥಿತಿಯಲ್ಲಿ ಗುರು-ಶಿಷ್ಯ ಸಂಬಂಧಗಳಿಗೆ ಮಹತ್ವ ಅಳಿಸಿಹೋಗಿಬಿಟ್ಟಿದೆ. ಹಿರಿಯರನ್ನು, ಪೋಷಕರನ್ನು ದೂರವಿಡುವ ಪ್ರವೃತ್ತಿ ಆಘಾತಕರವಾದ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಇರುವ ಸಣ್ಣ ಕುಟುಂಬದಲ್ಲೇ ಸಾಮರಸ್ಯ ಉಳಿಸಿಕೊಳ್ಳುವುದೇ ಹೆಚ್ಚುಗಾರಿಕೆಯಾಗಿದೆ. ಕೆಲಸವಾಗುವವರೆಗೆ ಓಲೈಸುವವರು ಕೆಲಸವಾದ ನಂತರ 'ಯಾರೋ' ಆಗಿಬಿಡುವುದು ಸಾಮಾನ್ಯವಾಗಿದೆ.
     ೯. ಸುಖವೆಂದರೆ ಆರೋಗ್ಯವಾಗಿರುವುದು, ಸಾಲರಹಿತನಾಗಿರುವುದು, ವಿದೇಶಕ್ಕೆ ಹೋಗದಿರುವುದು, ಸಜ್ಜನ ಸಹವಾಸ, ಮನಸ್ಸಿಗೆ ಒಪ್ಪುವ ಕೆಲಸ ಮತ್ತು ಸ್ವಾತಂತ್ರ್ಯ. ಇವುಗಳಲ್ಲಿ ಒಂದೊಂದು ಸಂಗತಿಯೂ ಅನುಭವದ ರಸಘಟ್ಟಿಗಳಾಗಿವೆ. ವಿದೇಶಕ್ಕೆ ಹೋಗದಿರುವುದು ಎಂಬುದು ಚರ್ಚೆಗೊಳಪಡುವ ಸಂಗತಿಯಾಗಿದೆ. 'ಜನನೀ ಜನ್ಮಭೂಮಿ ಸ್ವರ್ಗಾದಪಿ ಗರೀಯಸೀ' ಎಂದು ಹೇಳುವ ನಮಗೆ ವಿದೇಶಗಳಲ್ಲಿನ ಸೌಕರ್ಯಗಳು, ಅವಕಾಶಗಳು ಕೈಬೀಸಿ ಕರೆಯುತ್ತಿರುವುದು ಆಕರ್ಷಣೆಯಾಗಿ ಕಾಣುತ್ತಿರಬಹುದು. ವಿದೇಶಗಳಲ್ಲಿರುವ ನಮ್ಮವರಿಗೆ ತಾಯಿನಾಡಿನ ಹಂಬಲ, ಪ್ರೀತಿ ಎದೆಯಾಳದಲ್ಲಿ ಅಚ್ಚೊತ್ತಿರುತ್ತದೆ. ಏನೇ ಸೌಲಭ್ಯಗಳಿದ್ದರೂ, ಸುಖ-ಸಂತೋಷಗಳಿದ್ದರೂ ತಾಯಿನಾಡಿನ ಸೆಳೆತ ಅಷ್ಟು ಸುಲಭವಾಗಿ ಹೋಗುವಂತಹುದಲ್ಲ. ತಾಯಿ ಹೇಗಿದ್ದರೂ ತಾಯಿಯೇ ಅಲ್ಲವೇ?
     ೧೦. ಅಸೂಯಾಪರರು, ದುರಾಸೆಯವರು, ಅತೃಪ್ತರು, ಶೀಘ್ರಕೋಪಿಗಳು, ಪ್ರತಿಯೊಂದನ್ನೂ ಸಂಶಯ ದೃಷ್ಟಿಯಿಂದ ನೋಡುವವರು, ಇತರರ ಗಳಿಕೆಯಿಂದ ಬಾಳುವವರು- ಈ ಆರು ಗುಣಗಳುಳ್ಳವರು ನಿತ್ಯ ದುಃಖಿಗಳೆಂಬುದು ವಿದುರನ ನುಡಿ. ಮತ್ಸರಿಗಳು ಕೊಟ್ಟಿಗೆಯಲ್ಲಿ ಇರುವ ನಾಯಿಯಂತಹವರು. ನಾಯಿ  ಹುಲ್ಲು ತಿನ್ನುವುದಿಲ್ಲ, ಆದರೆ ಹಸು ಹುಲ್ಲು ತಿನ್ನಲು ಹೋದರೆ ಬೊಗಳಿ ಹಸುವಿಗೂ ಹುಲ್ಲು ತಿನ್ನಲು ಬಿಡುವುದಿಲ್ಲ. ದೇಶ, ಸಮಾಜವನ್ನೇ ಕೊಳ್ಳೆ ಹೊಡೆದು ನೂರಾರು, ಸಾವಿರಾರು ಕೋಟಿ ಹಣವನ್ನು ಅಕ್ರಮವಾಗಿ ಕೂಡಿಟ್ಟುಕೊಂಡವರಿಗೆ ಇನ್ನೂ ಸಾಲದೆಂಬ ಹಪಹಪಿ ಹೋಗುವುದೇ ಇಲ್ಲ. ಜೊತೆಗೆ ಅಕ್ರಮ ಸಂಪತ್ತನ್ನು ಉಳಿಸಿಕೊಳ್ಳುವುದರಲ್ಲೇ ಆಯಷ್ಯ ಸವೆಸಿಬಿಡುತ್ತಾರೆ. ಕೋಪಿಷ್ಟರು, ಸಂಶಯಿಗಳು ಮತ್ತು ಪರಾವಲಂಬಿಗಳಿಗೆ ನೆಮ್ಮದಿ ಅನ್ನುವುದು ಕನಸೇ ಸರಿ.
     ವಿದುರ ಹೇಳಿರುವ ಮೇಲಿನ ಸಂಗತಿಗಳಲ್ಲದೇ ಇಂತಹ ಆರು ಅಂಶಗಳ ಬಗ್ಗೆ ಸಾಕಷ್ಟು ಹೇಳಲ್ಪಟ್ಟಿವೆ. ಉದಾಹರಣೆಗೆ ಹೇಳಬೇಕೆಂದರೆ 'ಷಟ್ಧರ್ಮಯುಕ್ತ' ಪತ್ನಿ ಆದರ್ಶಪ್ರಾಯವೆಂಬ  ಉಕ್ತಿ ಇದೆ. ಆದರ್ಶ ಪತ್ನಿ  ರೂಪದಲ್ಲಿ ಲಕ್ಷ್ಮಿ,  ಊಟಕ್ಕಿಡುವಲ್ಲಿ ತಾಯಿ,  ಶಯ್ಯಾಗೃಹದಲ್ಲಿ ರಂಭೆ, ಸಲಹೆ ನೀಡುವಲ್ಲಿ ಮಂತ್ರಿ, ಭೂಮಿಯಂತೆ ಕ್ಷಮಾಗುಣವುಳ್ಳವಳು, ಕೆಲಸ ಕಾರ್ಯಗಳಲ್ಲಿ ದಾಸಿಯಂತೆ ಇರಬೇಕೆನ್ನುತ್ತದೆ ಆ ಉಕ್ತಿ! ಈಗ ಇದನ್ನು ನಿರೀಕ್ಷಿಸಲಾಗದು.
-ಕ.ವೆಂ. ನಾಗರಾಜ್.
***************
ದಿನಾಂಕ 10.8.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಸೋಮವಾರ, ಆಗಸ್ಟ್ 24, 2015

ತುರ್ತು ಪರಿಸ್ಥಿತಿ ಸ್ಮರಣೆ - ಜಾಗೃತಿಗೆ ಪ್ರೇರಣೆ

ಹಾಸನದಲ್ಲಿ ದಿನಾಂಕ 10.08.2015ರಂದು ನಡೆದ 'ತುರ್ತು ಪರಿಸ್ಥಿತಿ ಸ್ಮರಣೆ - ಜಾಗೃತಿಗೆ ಪ್ರೇರಣೆ' ಕಾರ್ಯಕ್ರಮದ ಕೆಲವು ಫೋಟೋಗಳು




















ಗುರುವಾರ, ಆಗಸ್ಟ್ 20, 2015

ತುರ್ತು ಪರಿಸ್ಥಿತಿ - 40 ವರ್ಷಗಳು - ಒಂದು ನೆನಪು

     5-07-2015ರಂದು ಮೈಸೂರಿನಲ್ಲಿ ನಡೆದ 'ತುರ್ತುಪರಿಸ್ಥಿತಿ-40 ವರ್ಷಗಳು- ಒಂದು ನೆನಪು' ಕಾರ್ಯಕ್ರಮದಲ್ಲಿ ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ನೂರಾರು ಸತ್ಯಾಗ್ರಹಿಗಳನ್ನು (ತುರ್ತುಪರಿಸ್ಥಿತಿಯಲ್ಲಿ ಬಂಧಿತರಾಗಿದ್ದವರು) ಅಭಿನಂದಿಸಲಾಯಿತು. ನಿರಂತರ ಜಾಗೃತಿಯೇ ಪ್ರಜಾಪ್ರಭುತ್ವದ ರಕ್ಷಣೆಗೆ ತೆರಬೇಕಾದ ಬೆಲೆ ಎಂದು ಸಾರಲಾಯಿತು. ತುರ್ತುಪರಿಸ್ಥಿತಿಯ ಅರಿವಿಲ್ಲದ ಇಂದಿನ ಪೀಳಿಗೆಗೆ ಅಂದಿನ ದಿನಗಳು ಮುಂದೆ ಬರದಂತೆ ನೋಡಿಕೊಳ್ಳಲು ಕರೆಕೊಡಲಾಯಿತು. ಶ್ರೀಯುತರಾದ ಹೆಚ್. ಗಂಗಾಧರನ್, ಡಿ.ಹೆಚ್. ಶಂಕರಮೂರ್ತಿ, ಸುರೇಶಕುಮಾರ್, ಕಲ್ಲಡ್ಕ ಪ್ರಭಾಕರ ಭಟ್, ಗೋ. ಮದುಸೂದನ್, ತೋಂಟದಾರಾಧ್ಯರವರು ಮಾತನಾಡಿದರು. ಪ್ರಮುಖ ಭಾಷಣಕಾರರಾದ ಶ್ರೀ ಸು.ರಾಮಣ್ಣನವರ ಭಾಷಣ ಹೃದಯಸ್ಪರ್ಶಿಯಾಗಿತ್ತು. ಕಾರ್ಯಕ್ರಮದ ಕೆಲವು ದೃಷ್ಯಗಳಿವು:


























ಮಂಗಳವಾರ, ಆಗಸ್ಟ್ 18, 2015

ನಾಗರಪಂಚಮಿ - ಬರದಿರಲಿ ನಾಗನ ನೆಮ್ಮದಿಗೆ ಭಂಗ!



     ನಾಳೆ ನಾಗರಪಂಚಮಿ! ನಾಗನ ನೆಮ್ಮದಿಗೆ ಭಂಗ ತರದಂತೆ ಹಬ್ಬ ಆಚರಿಸಿದರೆ ಅದು ನಿಜವಾದ ನಾಗಪೂಜೆ ಆದೀತು!! ಪ್ರಕೃತಿಯ ಸಮತೋಲನಕ್ಕೆ ನಾಗನ ಸಂತತಿಯ ರಕ್ಷಣೆ ಅತ್ಯಗತ್ಯ ಎಂಬ ಅರಿವು ಜನರಲ್ಲಿ ಮೂಡಬೇಕಿದೆ. ಸಂಪ್ರದಾಯವನ್ನು ಅದರ ನಿಜಾರ್ಥದಲ್ಲಿ ಆಚರಿಸಲು ಈ ದಿನವನ್ನು ಆರಿಸಿಕೊಳ್ಳೋಣ.
   ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಹೇಳುತ್ತಿದ್ದ 'ನಾಗರಹಾವೇ, ಹಾವೊಳು ಹೂವೇ, ಬಾಗಿಲ ಬಿಲದಲಿ ನಿನ್ನಯ ಠಾವೇ, ಕೈಗಳ ಮುಗಿವೆ, ಹಾಲನ್ನೀವೆ, ಈಗಲೆ ಹೊರಗೆ ಪೋ ಪೋ ಪೋ ಪೋ' ಎಂಬ ಪದ್ಯ ಈಗಲೂ ನೆನಪಿಗೆ ಬರುತ್ತಿರುತ್ತದೆ.  ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು, ಹಲವಾರು ಕ್ಷೇತ್ರಗಳು ನಾಗಪೂಜೆಯ ಕಾರಣಕ್ಕೇ ಪ್ರಸಿದ್ಧವಾಗಿರುವುದೂ ಸತ್ಯ. ಕರ್ನಾಟಕದಲ್ಲಿ ದಕ್ಷಿಣಕನ್ನಡದ ಕುಕ್ಕೆ, ಕೋಲಾರದ ಘಾಟಿ ಹಾಗೂ ಉತ್ತರಕನ್ನಡದ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರಗಳು ನಾಗಪೂಜೆಯ ಕಾರಣದಿಂದಲೇ ಪ್ರಸಿದ್ಧವಾಗಿವೆ. ನಾಗನನ್ನೇ ಆರಾಧ್ಯದೈವವಾಗಿಸಿಕೊಂಡಿರುವ ಜನರಿದ್ದಾರೆ, ಜನಾಂಗಗಳೇ ಇವೆ. ನಾಗ ಉತ್ತಮ ಮಳೆ-ಬೆಳೆಯ ಸಂಕೇತವಾಗಿದ್ದು, ಅರಿತೋ ಅರಿಯದೆಯೋ ಅವುಗಳಿಗೆ ತೊಂದರೆಯಾದರೆ ದೋಷ ಕಾಡುತ್ತದೆಯೆಂದು ಇಂತಹ ಪ್ರಾಯಶ್ಚಿತ್ತ ಕಾರ್ಯಗಳಾದ ನಾಗಬಲಿ ಅಥವಾ ಆಶ್ಲೇಷಾ ಬಲಿ, ನಾಗಮಂಡಲ, ನಾಗಪ್ರತಿಷ್ಠೆ ಮೊದಲಾದ ಪೂಜಾವಿಧಿಗಳನ್ನು ನಡೆಸುತ್ತಾರೆ. ನಾಗರಹಾವು ಸತ್ತಿದ್ದನ್ನು ಕಂಡರೆ ಅದಕ್ಕೆ ಶಾಸ್ತ್ರೋಕ್ತವಾಗಿ ಅಂತಿಮ ಸಂಸ್ಕಾರ ನಡೆಸುವುದನ್ನೂ ಕಾಣುತ್ತೇವೆ. ಎಲ್ಲಾ ಹಾವುಗಳನ್ನು ಪೂಜಿಸದೆ ನಾಗರವನ್ನೇ ಆಯ್ಕೆ ಮಾಡಿಕೊಳ್ಳಲು ಅದರ ಚುರುಕುತನ, ನಯನ ಮನೋಹರ ರೂಪ, ಹೊಂದಿರುವ ಭಯಂಕರ ವಿಷ ಹಾಗೂ ಭಯ ಸಹ ಕಾರಣವಾಗಿರಬಹುದು. ನಾಗರಹಾವನ್ನು ಕಾಮ ಹಾಗೂ ದ್ವೇಷಕ್ಕೆ ಸಂಕೇತವಾಗಿಯೂ ಬಳಸುತ್ತಿರುವುದು ವೇದ್ಯದ ಸಂಗತಿ.
     ನಾಗರಪಂಚಮಿಯ ಹಬ್ಬದಲ್ಲಿ ಕುಟುಂಬದವರು ಹಬ್ಬದ ಅಡಿಗೆ ಮಾಡಿ, ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು, ಸೋದರ-ಸೋದರಿಯರು ಬಾಂಧವ್ಯದ ಬೆಸುಗೆ ಗಟ್ಟಿ ಮಾಡಿಕೊಳ್ಳುವುದು ಒಳ್ಳೆಯದೇ. 'ನಾಗದೇವ'ನಿಗೆ ಸಂತುಷ್ಟಗೊಳಿಸಲು, ಅರಿತೋ, ಅರಿಯದೆಯೋ ತಪ್ಪಾಗಿದ್ದಲ್ಲಿ ತಮಗೆ ಕೇಡಾಗದಿರಲಿ ಎಂಬ ಬೇಡಿಕೆಗಾಗಿ, ಮಕ್ಕಳ ಭಾಗ್ಯ(?)ಕ್ಕಾಗಿ ನಾಗಪೂಜೆಯನ್ನು, ಪ್ರಾಯಶ್ಚಿತ್ತಕಾರ್ಯವನ್ನು ಹಬ್ಬದ ದಿನಗಳಲ್ಲದೆ ಇತರ ದಿನಗಳಲ್ಲೂ ಆಚರಿಸುವವರಿದ್ದಾರೆ. ಪುರಾಣಗಳಲ್ಲಿ ನಾಗಲೋಕ ಪಾತಾಳದಲ್ಲಿದೆಯೆಂದು ಬಣ್ಣಿಸಲಾಗುತ್ತದೆ. ಹುತ್ತಗಳಲ್ಲಿ, ಬಿಲಗಳಲ್ಲಿ ವಾಸಿಸುವ ಉರಗಗಳು ಭೂಮಿಯ ಕೆಳಗೆ ಹೆಚ್ಚಾಗಿ ವಾಸಿಸುವುದರಿಂದ ಈ ಪ್ರತೀತಿ ಬಂದಿರಬಹುದು. ಕಾನನಗಳಲ್ಲಿರುವ ಹುತ್ತಗಳು ಮಳೆಗಾಲದಲ್ಲಿ ನೀರು ಭೂಮಿಯ ಒಳಗೆ ಬಸಿಯಲು ಸಹಾಯಕವಾಗಿ ಅಂತರ್ಜಲ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. 
     ನಾಗರಪಂಚಮಿಯನ್ನು ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲೂ ಭಕ್ತಿಭಾವದಿಂದ ಆಚರಿಸುತ್ತಾರಾದರೂ, ತುಳುನಾಡಿನಲ್ಲಿ 'ನಾಗ'ನಿಗೆ ವಿಶೇಷ ಮಹತ್ವ ನೀಡುತ್ತಾರೆ. ನಾಗಾರಾಧನೆಗೆ ಮಹತ್ವವಿರುವ ಅಲ್ಲಿ, 'ನಾಗಬನ'ಗಳ ಹೆಸರಿನಲ್ಲಾದರೂ ಸ್ವಲ್ಪಮಟ್ಟಿಗೆ ಹಸಿರು ಉಳಿದಿದೆ ಎನ್ನಲು ಅಡ್ಡಿಯಿಲ್ಲ. ಆದರೆ ಆ ನಾಗಬನಗಳನ್ನೂ ಕಾಂಕ್ರೀಟೀಕರಣ ಮಾಡುತ್ತಿರುವುದು ದುರ್ದೈವ.
     ಪ್ರಸ್ತುತ ಆಚರಣೆಯಲ್ಲಿರುವ ಹಾಲೆರೆಯುವ ಪದ್ಧತಿಯಿಂದ ನಾಗದೇವ ಸಂತುಷ್ಟಗೊಳ್ಳುವನೇ ಎಂಬ ಕುರಿತು ವಿಚಾರ ಮಾಡುವುದು ಒಳ್ಳೆಯದು. ಬಸವಣ್ಣನವರ ವಚನ "ಕಲ್ಲ ನಾಗರ ಕಂಡರೆ ಹಾಲನೆರೆವರಯ್ಯಾ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ" ಎಂಬುದು ಮಾನವನ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಹಾವು ಹಾಲು ಕುಡಿಯುವುದೇ, ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುದು ಸಂದೇಹಾಸ್ಪದ. ಒಂದು ವೇಳೆ ಹಾಲು ಅದಕ್ಕೆ ಇಷ್ಟವಾದ ಆಹಾರವೆಂದೇ ಇಟ್ಟುಕೊಂಡರೂ ಹುತ್ತಕ್ಕೆ ಹಾಲೆರೆದರೆ ಉದ್ದೇಶ ಈಡೇರುವುದೇ? ಎರೆಯುವುದಾದರೆ ಹಾವಿಗೇ ಎರೆಯಲಿ. ವರ್ಷಕ್ಕೊಮ್ಮೆ ಹಾಲೆರೆದರೆ ಉಳಿದ ೩೬೪ ದಿನಗಳಲ್ಲಿ ಅದಕ್ಕೆ ಹಾಲು ಎಲ್ಲಿ ಸಿಗುತ್ತದೆ? ಯೋಚಿಸಬೇಕಾದ ವಿಷಯವಿದಲ್ಲವೇ? ಹಾವು ಹಾಲು ಕುಡಿಯುವುದೆಂದೇನೂ ಇಲ್ಲ. ಕುಡಿಯಲು ನೀರಿಲ್ಲದಿದ್ದರೆ, ಬಾಯಾರಿಕೆಯಾದರೆ ಕುಡಿಯುತ್ತದೆ. ಹಾಲನೆರೆಯುವ ಶೇ. 95ಕ್ಕೂ ಹೆಚ್ಚು ಜನರು ಹಬ್ಬದ ದಿನದಂದು ಹುತ್ತವನ್ನು ಹುಡುಕಿಕೊಂಡು ಹೋಗಿ ಹಾಲು ಎರೆಯುವರು. ಹುತ್ತಕ್ಕೆ ಹಾಲು ಹಾಕುವುದರಿಂದ ಹುತ್ತಕ್ಕೆ ಹಾನಿಯಾಗುತ್ತದೆ, ಅಲ್ಲಿರಬಹುದಾದ ಹಾವಿನ ಏಕಾಂತಕ್ಕೆ ಭಂಗವಾಗುತ್ತದೆ, ಹಿಂಸೆಯಾಗುತ್ತದೆ, ತೊಂದರೆ ಅನುಭವಿಸುತ್ತದೆಯಲ್ಲವೇ? ಹೀಗೆ ತೊಂದರೆ ಕೊಟ್ಟು 'ನಾಗದೇವ' ಸಂತುಷ್ಟನಾದನೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಪ್ರದಾಯವಾದಿಗಳು 'ಎಷ್ಟೋ ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಗಲಾರದು ಮತ್ತು ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕಲಾರವು' ಎಂದು ಹೇಳುತ್ತಾರಾದರೂ, ಇಂತಹ ಆಚರಣೆ ಕುರಿತು ಪ್ರಶ್ನೆ ಮಾಡಬಾರದು, ತರ್ಕ ಮಾಡಬಾರದು ಎಂಬ ಅವರ ವಾದ ಸರಿಯೆಂದು ತೋರುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ನೇಣು ಹಾಕಿಕೊಳ್ಳಲು ಹೋಗದೆ ಅದರ ನೆರಳಿನಲ್ಲಿ ಬಾಳಬಹುದು.
      ನಗರ ಪ್ರದೇಶಗಳಲ್ಲಂತೂ ಹಾವಿಗೆ ತಾವೇ ಇಲ್ಲ. ಹೊರವಲಯಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅವುಗಳ ವಾಸಸ್ಥಾನಗಳನ್ನು ನಾಶಪಡಿಸಿ ಅವುಗಳ ಹೆಸರಿನಲ್ಲಿ ದೇವಸ್ಥಾನಗಳನ್ನು ನಿರ್ಮಿಸುತ್ತಿರುವುದು ಎಂತಹ ವಿಪರ್ಯಾಸ! ಉದ್ದೇಶ 'ನಾಗದೇವ'ನನ್ನು ಸಂತುಷ್ಟಗೊಳಿಸಬೇಕು, ಆತನಿಂದ ತೊಂದರೆಯಾಗಬಾರದು ಎಂಬುದೇ ಆಗಿದ್ದಲ್ಲಿ ಹಬ್ಬವನ್ನು ಈರೀತಿ ಆಚರಿಸಬಹುದಲ್ಲವೇ? 
1. ಬಾಂಧವ್ಯಗಳ ಬೆಸುಗೆ ಗಟ್ಟಿಗೊಳ್ಳಲು ಅಣ್ಣ-ತಮ್ಮಂದಿರು, ತಂಗಿಯರು ಒಂದೆಡೆ ಸೇರಿ ಒಟ್ಟಿಗೆ ಸಂಭ್ರಮದಿಂದ ಸೇರಿ ಹಬ್ಬವನ್ನಾಚರಿಸುವುದು. ಹಲವೆಡೆ ಆಚರಣೆಯಲ್ಲಿರುವ ಜೋಕಾಲಿ ಆಡುವುದು, ಮದರಂಗಿ (ಮೆಹಂದಿ) ಹಚ್ಚುವುದು, ಸೋದರರಿಗೆ ತನಿ ಎರೆಯುವುದು, ಮುಂತಾದವುಗಳಿಗೆ ಜೀವ ತುಂಬುವುದು. ಈ ದಿನದಂದು ಮಾಡುವ ತಂಬಿಟ್ಟು, ಕಡುಬು, ಮುಂತಾದ ವಿಶೇಷ ಖಾದ್ಯಗಳನ್ನು ಸೇವಿಸುವುದು.
2. ಮದುವೆಯಾದ ಹೆಣ್ಣು ಮಕ್ಕಳಿಗೆ ತವರಿನ ನೆನಪು ಕಾಡದಿರುವಂತೆ ಅವರಿಗೆ ಉಡುಗೊರೆಗಳನ್ನು ನೀಡಿ ಸಂತಸಗೊಳ್ಳುವಂತೆ ಮಾಡುವುದು.
3. ಉರಗಗಳು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು.
4. ತಮಗೆ ತೊಂದರೆಯಾದಾಗ ಮತ್ತು ಭಯವಾದಾಗ ಮಾತ್ರ ಹಾವುಗಳು ಕಚ್ಚುತ್ತವೆ. ಇಲ್ಲದಿದ್ದಲ್ಲಿ ಅವುಗಳಿಂದ ತೊಂದರೆಯಿಲ್ಲ. ಇಲಿಗಳು, ಕೀಟಗಳನ್ನು ಭಕ್ಷಿಸುವ ಅವು ರೈತಮಿತ್ರರು. ಜನರಲ್ಲಿ ಉರಗಗಳ ಕುರಿತು ಜಾಗೃತಿ ಮೂಡಿಸುವುದಲ್ಲದೆ ಪರಿಸರ ಸಂರಕ್ಷಣೆಯ ಕಡೆಗೆ ಗಮನ ಕೊಡಬೇಕು.
5. ಹುತ್ತಕ್ಕೆ ಹಾಲೆರೆಯುವ ಬದಲು ಕೆಲವು ವಿಚಾರವಂತ ಮಠಾಧೀಶರು ಮಾಡುತ್ತಿರುವಂತೆ ಮಕ್ಕಳಿಗೆ ಹಾಲು ಹಂಚಬಹುದು.
6. ಹಾವು ಅಥವ ಪ್ರಾಣಿಗಳ ಚರ್ಮ ಸುಲಿದು ತಯಾರಿಸುವ ಬೆಲ್ಟು, ಇತ್ಯಾದಿಗಳನ್ನು ಕೊಳ್ಳಬಾರದು. ಹಾವು ಬದುಕಿದ್ದಂತೆಯೇ ಹಾವಿನ ಚರ್ಮ ಸುಲಿದು, ಒದ್ದಾಡುತ್ತಿರುವ ಹಾವಿನ ದೇಹವನ್ನು ಎಸೆದು ಹೋಗುವ ಕ್ರೂರಿಗಳ ಕಾರ್ಯಕ್ಕೆ ಇದರಿಂದ ಕಡಿವಾಣ ಹಾಕಬಹುದು.
7. ಇಂತಹ  ಸೂಕ್ತವೆನಿಸುವ  ಇತರ ಕಾರ್ಯಗಳನ್ನು ಕೈಗೊಳ್ಳಬಹುದು.
     ಇನ್ನು ಮುಂದಾದರೂ ನಾಗರ ಪಂಚಮಿಯನ್ನು 'ಪರಿಸರ ಪಂಚಮಿ'ಯಾಗಿ ಆಚರಿಸೋಣ ಎಂಬುದು ಎಲ್ಲಾ ಪರಿಸರ ಪ್ರೇಮಿಗಳ ಪರವಾಗಿ ಈ 'ನಾಗರಾಜ'ನ ಆಶಯ!
-ಕ.ವೆಂ.ನಾಗರಾಜ್.