ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಆಗಸ್ಟ್ 12, 2016

ಬದುಕು ನಡೆಯಲಿ!


     ಈ ಬದುಕು ಇರುವುದು ನಡೆಯುವುದಕ್ಕೆ. ಓಡಿದರೆ, ಹಾರಿದರೆ ನೋಡುವುದನ್ನು ನೋಡದೇ ಹೋಗಬಹುದು. ನಡೆಯುತ್ತಾ ಹೋದರೆ ಸುತ್ತಲೂ ನೋಡುತ್ತಾ ಹೋಗಬಹುದು, ಅನುಭವಿಸಬಹುದು, ಆನಂದಿಸಬಹುದು, ಕಲಿಯಬಹುದು, ಕಲಿಸಬಹುದು, ಅಳಬಹುದು, ನಗಬಹುದು, ಒಟ್ಟಿನಲ್ಲಿ ಬದುಕಬಹುದು! ಬನ್ನಿ, ನಡೆಯೋಣ, ಒಟ್ಟಿಗೇ ನಡೆಯೋಣ. ಅತಿ ವೇಗದಲ್ಲಿ ಧಾವಿಸಬೇಕಾಗಿರುವ ಇಂದಿನ ದಿನಗಳಲ್ಲಿ ಇದು ಅವಾಸ್ತವಿಕವಾಗಿ ತೋರಬಹುದು. ಆದರೆ, ಅತಿ ವೇಗದಲ್ಲಿ ಓಡಬೇಕಾಗಿರುವ ಪರಿಸ್ಥಿತಿಯಲ್ಲಿ ನಾವು ಕಳೆದುಕೊಳ್ಳುತ್ತಿರುವುದು ಕಡಿಮೆಯೇನಲ್ಲ. ಈ ಅತಿವೇಗ ಸಮೀಪದಲ್ಲಿರುವವರನ್ನೂ ಕಾಣದಿರುವಂತೆ ಮಾಡುತ್ತದೆ. ಏನನ್ನು ಪಡೆಯಲು ಓಡುತ್ತಿದ್ದೇವೆಯೋ ಅದು ಸಮೀಪದಲ್ಲೇ ಇದ್ದರೂ ಕಾಣಿಸದಾಗುತ್ತದೆ. ಓಡಿ ಓಡಿ ದಣಿದಾಗ ನಿಂತು ನೋಡಿದರೆ ನಾವು ಎಲ್ಲಿಂದ ಓಡಲು ಹೊರಟಿದ್ದೆವೋ ಆ ಜಾಗದಲ್ಲೇ ಇರುವುದನ್ನು ಕಂಡು ಅವಾಕ್ಕಾಗುತ್ತೇವೆ. ಅಷ್ಟಾಗಿದ್ದರೆ ಪರವಾಗಿಲ್ಲ, ಮೊದಲಿದ್ದ ಜಾಗದಿಂದ ಇನ್ನೂ ಹಿಂದಕ್ಕೆ ಹೋಗಿದ್ದರೆ? ಅಷ್ಟೊಂದೆಲ್ಲಾ ಓಡಿದ್ದು ವ್ಯರ್ಥವಾಯಿತಲ್ಲಾ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿರುತ್ತದೆ.  ಇಲ್ಲಿ ನಡೆಯುವುದು/ಓಡುವುದು/ಹಾರುವುದುಗಳನ್ನು ನಮ್ಮ ಬದುಕಿನ ಶೈಲಿಗೆ ಪರ್ಯಾಯ ಪದಗಳಾಗಿ ಬಳಸಿರುವೆ.  ನಾವು ನಡೆಯುತ್ತಾ ಹೋದಂತೆ, ಮನುಷ್ಯನ ಅತಿ ಒಳ್ಳೆಯ ಮತ್ತು ಅತಿ ಕೆಟ್ಟ ಸ್ವಭಾವಗಳ - ಕೇವಲ ಬೇರೆಯವರದಲ್ಲ, ನಮ್ಮದೂ ಕೂಡ - ಪರಿಚಯವೂ ಆಗುತ್ತದೆ. ನಡೆಯುತ್ತಿದ್ದರೆ ಈ ಜಗತ್ತಿನ ಅಗಾಧತೆ, ವಿಶಾಲತೆ, ಪ್ರೀತಿಯ ಹರವನ್ನು ಕಣ್ಣಾರೆ ಕಂಡು ಅನುಭವಿಸಬಹುದು. ನಡೆಯುತ್ತಿದ್ದರೆ, ಸೂರ್ಯೋದಯ, ಸೂರ್ಯಾಸ್ತ, ಆಗಸದಲ್ಲಿನ ಚಂದ್ರ, ತಾರೆಗಳು, ನದಿಗಳು, ಸಮುದ್ರ, ಹಾರುವ ಹಕ್ಕಿಗಳನ್ನು ಕಂಡು ಕಣ್ತುಂಬಿಕೊಳ್ಳಬಹುದು. ಅತಿ ವೇಗ ಸಂಬಂಧಗಳನ್ನು ದೂರ ಮಾಡಬಹುದು, ಆದರೆ, ಸಾಮಾನ್ಯ ನಡಿಗೆ ಒಟ್ಟುಗೂಡಿಸಬಲ್ಲದು.
     ಅಗತ್ಯವಿರುವಷ್ಟು ಮಾತ್ರ ಹೊಂದುವುದರಲ್ಲಿನ ಸುಖ, ಸಂತೋಷಗಳು, ಬೇಕುಗಳನ್ನು ಹೆಚ್ಚಿಸಿಕೊಳ್ಳುವದರಲ್ಲಿ ಇರುವುದಿಲ್ಲವೆಂದು ಗೊತ್ತಾಗುವುದು ನಡೆಯುವುದರಿಂದ. ಕಡಿಮೆ ಭಾರವಿದ್ದಷ್ಟೂ ನಡೆಯುವುದು ಸುಲಭ. ಜೀವನ ಸರಳವಾಗಿದೆ, ಅದನ್ನು ಓಡಿ ಸಂಕೀರ್ಣಗೊಳಿಸಿಕೊಳ್ಳಬೇಕೇಕೆ? ಮೋಡ ಹೆಚ್ಚು ಮಳೆ ಸುರಿಸುವಂತೆ ಮಾಡಲಾರೆವು, ಸೂರ್ಯನ ಬಿಸಿಲಿನ ತಾಪ ಕಡಿಮೆಯಾಗುವಂತೆ ಮಾಡಲಾರೆವು. ಅವು ಪ್ರಕೃತಿಯ ಕೊಡುಗೆಗಳು, ಬೇಕಾದರೆ ತೆಗೆದುಕೊಳ್ಳಬಹುದು, ಬೇಡವಾದರೆ ಬಿಡಬಹುದು! ಇಂತಹ ಕೊಡುಗೆಗಳು ನಮಗೆ ಇಷ್ಟವಾಗಲಿ, ಇಲ್ಲದಿರಲಿ ಅವನ್ನು ಸಮಭಾವದಿಂದ ಸ್ವೀಕರಿಸುವ ಮನೋಭಾವ ನಡೆಯುವುದರಿಂದ ಬರುತ್ತದೆ. ಹಳ್ಳಿಯ ಒಬ್ಬ ದನಗಾಹಿ ದನಗಳನ್ನು ತಂದೆಯ ಪ್ರೀತಿಯಿಂದ ಕಾಣುತ್ತಾನೆ, ಒಂದು ಮಗು ಆಗಸದಲ್ಲಿನ ನಕ್ಷತ್ರಗಳನ್ನು ಬಹಳ ಕಾಲ ತನ್ಮಯತೆಯಿಂದ ಕಂಡು ಸಂತಸಪಡುತ್ತದೆ. ಅಲ್ಲಿ ಬದುಕು ನಡೆಯುತ್ತದೆ, ಧಾವಿಸುವುದಿಲ್ಲ.
     ನಡೆದಾಗ ದಣಿವಾಗುತ್ತದೆ, ನೀರಡಿಕೆಯಾಗುತ್ತದೆ, ಹಸಿವಾಗುತ್ತದೆ, ಗುರಿ ದೂರವೆನಿಸಿದಾಗ ನಿರಾಶೆಯೂ ಮೂಡುತ್ತದೆ. ಕೆಲವೊಮ್ಮೆ ನೀರೂ ಸಿಗದೆ ಬಸವಳಿಯಬೇಕಾಗುತ್ತದೆ. ಆಗ ನಾವು ಬದುಕಿನ ವಾಸ್ತವತೆಯನ್ನು  ಎದುರಿಸುವ ಶಕ್ತಿಯನ್ನು, ಒಳಗೆ ಹುದುಗಿರುವ ಚೇತನವನ್ನು ಎಬ್ಬಿಸುವ ಕಲೆಯನ್ನು ಕಲಿತುಕೊಳ್ಳುತ್ತೇವೆ. ಕೆಲವೊಮ್ಮೆ ಬೇಕಾಗಿದ್ದಕ್ಕಿಂತ ಹೆಚ್ಚು ಸಿಕ್ಕಾಗ ಹೃದಯ ಕೃತಜ್ಞತೆಯಿಂದ ಭಾರವಾಗುತ್ತದೆ. ಬದುಕನ್ನು ಅದು ಬಂದಂತೆ ಸ್ವೀಕರಿಸುವ ಕಲೆ ನಡೆಯುವವರದಾಗುತ್ತದೆ. ಕಷ್ಟವಾದರೂ ನಡೆಯುವುದನ್ನು ನಿಲ್ಲಿಸಬಾರದೆಂಬುದಕ್ಕೆ ಈ ಪುಟ್ಟ ಕಥೆ ನಿದರ್ಶನವಾಗುತ್ತದೆ. ಪತಿ-ಪತ್ನಿ ಒಂದು ದೊಡ್ಡ ಬೆಟ್ಟವನ್ನು ಬೇರೆ ಬೇರೆ ದಿಕ್ಕುಗಳಿಂದ ಹತ್ತಲು ತೊಡಗಿರುತ್ತಾರೆ ಎಂದು ಭಾವಿಸೋಣ. ಅರ್ಧ ಬೆಟ್ಟ ಹತ್ತಿದಾಗ ಪತಿಗೆ ಇನ್ನು ಹತ್ತಲು ಸಾಧ್ಯವಿಲ್ಲವೆನ್ನಿಸಿ ಕುಳಿತುಕೊಳ್ಳುತ್ತಾನೆ. ಆಗ ಅಲ್ಲಿಗೆ ಹಾರಿ ಬಂದ ಗುಬ್ಬಚ್ಚಿಯೊಂದು ಉಲಿಯುತ್ತದೆ, 'ಏಳು, ನಿಲ್ಲಬೇಡ. ಅಲ್ಲಿ ನಿನ್ನ ಹೆಂಡತಿ ನಿನ್ನನ್ನು ಬೆಟ್ಟದ ತುದಿಯಲ್ಲಿ ಕಾಣಲು ಕಾತರಿಸಿದ್ದಾಳೆ'. ಅವನು ಗಡಬಡಿಸಿ ಎದ್ದು ಮುಂದೆ ಏರತೊಡಗುತ್ತಾನೆ. ಅತ್ತ ಕಡೆ ಅವನ ಹೆಂಡತಿ ಸಹ ಅರ್ಧ ದಾರಿಯಲ್ಲೇ ಬಸವಳಿದು ಇನ್ನು ಹತ್ತಲು ಸಾಧ್ಯವೇ ಇಲ್ಲವೆಂಬ ಸ್ಥಿತಿ ತಲುಪಿರುತ್ತಾಳೆ. ಆ ಗುಬ್ಬಚ್ಚಿ ಅವಳ ಬಳಿ ಹೋಗಿ ಅದೇ ಸಂದೇಶ ಕೊಡುತ್ತದೆ. ಪತ್ನಿ ಸಹ ಚೈತನ್ಯ ಒಟ್ಟುಗೂಡಿಸಿಕೊಂಡು ಪುನಃ ಬೆಟ್ಟ ಏರತೊಡಗುತ್ತಾಳೆ. 'ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂಬ ವಿವೇಕವಾಣಿ ನೆನಪಾಯಿತಲ್ಲವೇ?
     ನಡೆಯುತ್ತಾ ಹೋದಂತೆ, ವಿಶಾಲ ವಿಶ್ವದ ಎದುರು ಅಲ್ಪಚೇತನರಾದ ನಮ್ಮತನದ ಅರಿವಾಗುತ್ತದೆ, ಅಂತರಂಗ ಚುರುಕಾಗುತ್ತದೆ. ದೇವನ ಪ್ರತಿಫಲಾಪೇಕ್ಷೆಯಿಲ್ಲದ ಶುದ್ಧ ಪ್ರೀತಿಯ ಅನುಭವವಾಗುತ್ತದೆ. ಏನನ್ನಾದರೂ ಕೊಡಬೇಕೆಂದರೆ ನಮ್ಮಲ್ಲಿ ಏನಾದರೂ ಇರಬೇಕು. ಎಲ್ಲಾ ವಸ್ತುಗಳಿಗೂ ಬೆಲೆಯಿದೆ. ಆದರೆ, ಕರುಣೆ, ಪ್ರೀತಿ, ವಿಶ್ವಾಸಗಳಿಗೆ ಬೆಲೆ ಕಟ್ಟಲಾಗುವುದಿಲ್ಲ. ಅವನ್ನಾದರೂ ಕೊಡುವ ಮನಸ್ಸು ಬರುವುದು ನಡೆಯುವುದರಿಂದಲೇ! ನಡೆಯುವ ಹಳ್ಳಿಗಳಲ್ಲಿ ಅಪರಿಚಿತರಿಗೂ ಅವು ಸಿಗುತ್ತವೆ. ಓಡುವ ನಗರಗಳಲ್ಲಿ ಪರಿಚಿತರಿಗೂ ಅವು ಅಲಭ್ಯ. ತಮಗೇ ಊಟಕ್ಕೆ ತೊಂದರೆಯಿದ್ದರೂ, ಹಳ್ಳಿಗರು ಸಾಲ ತಂದಾದರೂ ಆತಿಥ್ಯ ಮಾಡುತ್ತಾರೆ. ನಗರಿಗರು ಯಾರಾದರೂ ಬರುವ ಸೂಚನೆ ಕಂಡರೆ, ಅವರು ಬಾರದಂತೆ ನೆಪಗಳನ್ನು ಮುಂದೊಡುತ್ತಾರೆ. ನಮ್ಮಲ್ಲೇ ಪ್ರೀತಿಯ ಕೊರತೆಯಿದ್ದರೆ ಕೊಡುವುದಾದರೂ ಹೇಗೆ? ನಗರದಲ್ಲಿ ಕಸಕ್ಕೂ ಬೆಲೆಯಿದೆ. ಬೆಲೆ ತೆರದೇ ಅಲ್ಲಿ ಏನೂ ಸಿಗುವುದಿಲ್ಲ. ಆದರೆ, ಹಳ್ಳಿಯ ಒಬ್ಬ ಬಡ ಹಣ್ಣಿನ ವ್ಯಾಪಾರಿ ಬಳಲಿದ ಅಪರಿಚಿತ ದಾರಿಹೋಕನನ್ನು ಕಂಡರೆ ಕರುಣೆಯಿಂದ ಒಂದು ಹಣ್ಣನ್ನು ಕೊಡುವ ಮನಸ್ಸು ಹೊಂದಿರುತ್ತಾನೆ.
     ಇತರರಿಗೆ ಪ್ರತಿಫಲಾಪೇಕ್ಷೆಯಿಲ್ಲದ ಪ್ರೀತಿ, ವಿಶ್ವಾಸಗಳನ್ನು ಕೊಡಬಲ್ಲೆವಾದರೆ, ನಾನುವಿನಿಂದ ನಾವುಗೆ ಬದಲಾಗುತ್ತೇವೆ ಮತ್ತು ಪರಸ್ಪರ ಹೆಚ್ಚು ಆತ್ಮೀಯರಾಗುತ್ತೇವೆ. ಸುತ್ತಮುತ್ತಲಿನವರೊಡನೆ ಸೌಹಾರ್ದತೆಯಿಂದ ಬಾಳುವುದರ ಸಂತೋಷ ಹೆಚ್ಚಿನದು. ಸೌಹಾರ್ದತೆ ನಡೆಯುವ ಕಾಲುಗಳಂತಿರಬೇಕು. ಗಮನಿಸಿದ್ದೀರಾ? ಒಂದು ಕಾಲು ನಡೆಯುತ್ತಿದ್ದರೆ, ಇನ್ನೊಂದು ಕಾಲು ಆ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತದೆ. ಸಮನ್ವಯದ ತತ್ವ ನಡೆಯುವುದರಲ್ಲಿದೆ. ಒಬ್ಬ ಅರ್ಹ ವ್ಯಕ್ತಿಗೆ ಸಹಾಯ ಮಾಡಿದೆವೆಂದುಕೊಳ್ಳೋಣ. ಹಾಗೆ ಮಾಡಿ ನಾವು ಸಹಾಯ ಮಾಡಿದೆವೋ, ಮಾಡಿಕೊಂಡೆವೋ? ಅರ್ಥವಾಗಲಿಲ್ಲವೇ? ಈ ಸಂದರ್ಭ ನೆನಪಿಸಿಕೊಳ್ಳೋಣ. ಒಂದು ಮಗುವಿಗೆ ಇಷ್ಟಪಡುವ ಚಾಕೊಲೇಟನ್ನು ಕೊಟ್ಟೆವು ಅಂದುಕೊಳ್ಳೋಣ. ಆ ಮಗುವಿಗೆ ಆಗುವ ಸಂತೋಷ, ಅದರ ಕಣ್ಣಿನ ಹೊಳಪನ್ನು ಕಂಡು ನಮಗೆ ಖುಷಿಯಾಗುವುದೋ ಇಲ್ಲವೋ? ಅದು ನಾವು ಕೊಟ್ಟದ್ದೋ, ಪಡೆದದ್ದೋ? ಪಡೆಯುವುದಕ್ಕಾಗಿ ಕೊಟ್ಟದ್ದು ಎಂದರೆ ಸಮಂಜಸ.. ತುಂಬಿ ತುಳುಕಿರುವ ಬಸ್ಸಿನಲ್ಲಿ ಕಷ್ಟಪಟ್ಟು ನಿಂತಿರುವ ಒಬ್ಬ ವೃದ್ಧರಿಗೆ ಕುಳಿತ ಸೀಟಿನಿಂದ ಎದ್ದು ಅವರಿಗೆ ಕುಳಿತುಕೊಳ್ಳಲು ಅನುಕೂಲ ಮಾಡಿಕೊಡುವುದರಲ್ಲೂ ಕೊಟ್ಟು ಪಡೆಯುವ ಸುಖವಿದೆ, ಏನೋ ಒಳ್ಳೆಯದು ಮಾಡಿದೆವೆಂದು ಮನ ಹಿಗ್ಗುವ/ಸಮಾಧಾನವಾಗುವ ಕ್ರಿಯೆಯಿದೆ. ನಡೆಯುವುದರಿಂದ ಕೇವಲ ಬದುಕಿನಲ್ಲಿ ಮುನ್ನಡೆಯುವುದಿಲ್ಲ, ಬೆಳೆಯುತ್ತಾ ಮುಂದೆ ಹೋಗುತ್ತೇವೆ.
     ಮನುಷ್ಯನ ಮನಸ್ಸು ಈಗಿರುವ ಸ್ಥಿತಿಗಿಂತ ಮುಂದುವರೆಯಲು ಚಡಪಡಿಸುತ್ತಿರುತ್ತದೆ. ಆಗ ಅಂತರಂಗದ ಅನಿಸಿಕೆಗಳಿಗೆ ಮಹತ್ವ ಕೊಡದೆ, ಬೇರೆಯದೇ ಆದ ನಡೆಗಳು ರೂಪುಗೊಳ್ಳುತ್ತವೆ, ನಡೆಯುವ ದಾರಿ ತಪ್ಪುತ್ತದೆ. ಕಾಲ ಸರಿದಂತೆ ಮನಸ್ಸು ಕಲುಷಿತಗೊಳ್ಳುತ್ತದೆ, ಮೊದಲಿನ ನಂಬಿಕೆಗಳು, ಮೌಲ್ಯಗಳು ಸವಕಲಾಗುತ್ತವೆ. ಹಿಂದೆ ಹಿರಿಯರು ಇರುವೆ ಗೂಡುಗಳ ಬಳಿ ಸಕ್ಕರೆ, ಹಿಟ್ಟುಗಳನ್ನು ಉದುರಿಸುತ್ತಿದ್ದುದನ್ನು ಕಂಡಿದ್ದೇನೆ. ಈಗ ಅದೇ ಗೂಡುಗಳಿಗೆ ಇಂದಿನವರು ಡಿ.ಡಿ.ಟಿ./ಗೆಮಾಕ್ಸಿನ್ ಪುಡಿ ಹಾಕುತ್ತಾರೆ. ಆದರೆ, ಸರಿದಾರಿಯಲ್ಲಿ  ನಡೆಯುತ್ತಾ ಹೋದಂತೆ ಜಗತ್ತು ಸ್ಪಷ್ಟವಾಗುತ್ತಾ ಹೋಗುತ್ತದೆ. ನಾನು ಮತ್ತು ನಾವುಗಳ, ಅಂತರಂಗದ ಮತ್ತು ಬಹಿರಂಗದ, ಸ್ವಾರ್ಥದ ಮತ್ತು ಸ್ವಾರ್ಥರಾಹಿತ್ಯದ ವ್ಯತ್ಯಾಸಗಳ ಕುರಿತು ಹೊಂದಿದ್ದ ಮೊದಲಿನ ಅನಿಸಿಕೆಗಳು ಪರಿಷ್ಕೃತಗೊಳ್ಳುತ್ತಾ ಹೋಗುತ್ತದೆ. ನಡೆಯುತ್ತಾ ಹೋದಂತೆ ಎದುರಾಗುವ ಹಲವಾರು ಪ್ರಶ್ನೆಗಳು, ಸಮಸ್ಯೆಗಳಿಗೆ ನಾವು ಕೊಡುವ ಉತ್ತರಗಳು ನಾವು ಪ್ರಪಂಚವನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ, ನಮ್ಮ ಸ್ಥಾನ ಎಲ್ಲಿದೆ ಎಂಬುದನ್ನು ನಿರ್ಧರಿಸುತ್ತವೆ. ಪ್ರಾರಂಭದಲ್ಲೇ ಹೇಳಿರುವಂತೆ ನಡೆಯುವುದು ಎಂಬುದನ್ನು ಬದುಕಿನ ಶೈಲಿ ಎಂಬುದಕ್ಕೆ ಪರ್ಯಾಯವಾಗಿ  ಬಳಸಿರುವೆ. ವಿಚಿತ್ರ ಆದರೂ ಸತ್ಯವೆಂದರೆ, ಸರಿಯಾಗಿ ನಡೆಯುವವರು ಓಡುವವರಿಗಿಂತ, ಹಾರುವವರಿಗಿಂತ ಮುಂದೆ ಇರುತ್ತಾರೆ! ಬನ್ನಿ, ನಾವು ಬದಲಾಗೋಣ, ಜಗತ್ತು ತನ್ನಿಂದ ತಾನೇ ಬದಲಾದೀತು! ಬದಲಾಗುತ್ತದೋ, ಇಲ್ಲವೋ ನಮ್ಮ ಕಣ್ಣಿಗಂತೂ ಬದಲಾಗುತ್ತದೆ! ನಡೆಯೋಣ, ಒಟ್ಟಿಗೇ ನಡೆಯೋಣ!!  ನಡೆಯುವಾಗ ಈ ವೇದ ಮಂತ್ರ ನಮಗೆ ದಾರಿ ದೀಪವಾಗಲಿ.
ಓಂ ವಿಶ್ವಾನಿ ದೇವ ಸವಿತರ್ದುರಿತಾನಿ ಪರಾ ಸುವ | ಯದ್ಭದ್ರಂ ತನ್ನ ಆ ಸುವ ||  [ಯಜು.೩೦.೩.]
ಅರ್ಥ: ಜಗದುತ್ಪಾದಕನಾದ ಸರ್ವದಾತಾ ಪ್ರಭುವೇ, ಸಮಸ್ತ ದುರ್ನಡತೆಗಳನ್ನೂ, ಪಾಪಗಳನ್ನೂ ದೂರ ಮಾಡು. ಯಾವುದು ಒಳ್ಳೆಯದೋ, ಕಲ್ಯಾಣಕರವೋ ಅದನ್ನು ನಮ್ಮಲ್ಲಿ ಉಂಟುಮಾಡು.
-ಕ.ವೆಂ.ನಾಗರಾಜ್.
**************
ದಿನಾಂಕ 30.05.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಆಗಸ್ಟ್ 4, 2016

ಸೊಂಟದ ವಿಷಯ


   'ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊಂಟದ ಬಗ್ಗೆ ಮಾತಾಡ್ತಾ ಇದಾನೆ' ಅಂತ ಅಂದುಕೊಳ್ಳಬೇಡಿ. ವಾನಪ್ರಸ್ಥಕ್ಕೆ ಹೋಗೋರು ಸೊಂಟದ ಬಗ್ಗೆ ಮಾತಾಡಬಾರದು ಅಂತ ಯಾರಾದರೂ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಮಾತಾಡಿದರೆ ಅಪರಾಧ ಅನ್ನುವ ಕಾನೂನು ಇನ್ನೂ ಬಂದಂತೆ ಕಾಣುತ್ತಿಲ್ಲ. ಅಷ್ಟಕ್ಕೂ ಸೊಂಟ ಸರಿಯಾಗಿದ್ದರೆ ಮಾತ್ರ ವಾನಪ್ರಸ್ಥಕ್ಕೆ ಹೋಗಬಹುದು. ಸೊಂಟ ಬಾಗಿ ಶರೀರ ಹಲವಾರು ಕಾಯಿಲೆಗಳ ನೆಲೆವೀಡಾಗಿದ್ದರೆ ಹೋಗಬೇಕಾಗಿರುವುದು ಆಸ್ಪತ್ರೆಗೆ ಅಷ್ಟೆ. ನೀವು  'ಸೊಂಟದ ವಿಸ್ಯ, ಬೇಡವೋ ಸಿಸ್ಯಾ' ಎಂಬ ಜನಪ್ರಿಯ ಹಾಡು ನೆನಪು ಮಾಡಿಕೊಂಡರೆ ಅದು ನನ್ನ ತಪ್ಪಲ್ಲ. ಹಿಂದೊಮ್ಮೆ ರಸಿಕರಾಗೋಣ ಎಂಬ ಲೇಖನ ಬರೆದಾಗ ಕೆಲವರು ಹುಬ್ಬೇರಿಸಿದ್ದರು. ಶೀರ್ಷಿಕೆ ನೋಡಿ ಕುತೂಹಲದಿಂದ ಓದಿದವರು ಇವನು ದಾರಿ ತಪ್ಪಿಲ್ಲ ಎಂದು ಸಮಾಧಾನ ಪಟ್ಟಿದ್ದರು, ಕೆಲವರಿಗೆ ನಿರಾಶೆಯೂ ಆಗಿತ್ತು. ಈಗ ಈ ವಯಸ್ಸಿನಲ್ಲಿ ಸೊಂಟದ ಬಗ್ಗೆ ಹೇಳುತ್ತಿರುವುದರಿಂದ ನನ್ನ ತಲೆ ಕೆಡುತ್ತಿದೆಯೆಂದು ಯಾರಿಗಾದರೂ ಅನ್ನಿಸಿದರೆ ಅದಕ್ಕೆ ನನ್ನ ಅಭ್ಯಂತರವಿಲ್ಲ.
     ಸೊಂಟ ಅಂದಾಕ್ಷಣ ಸಿನೆಮಾ ತಾರೆಯರ, ಮಾಡೆಲ್ಲುಗಳ, ಸುಂದರ ತರುಣಿಯರ ಬಳುಕುವ ಸೊಂಟಗಳ ನೆನಪು ಸುಳಿದಾಡಿದರೆ ಅದು ನಿಮ್ಮ ಹಣೆಯಬರಹ. ಸುಂದರಿಯರ ಸ್ಪರ್ಧೆಯಲ್ಲಿ ಪ್ರಧಾನ ಪಾತ್ರ ವಹಿಸುವುದು ಸೊಂಟವೇ. ಯಾರ ಯಾರ ಸೊಂಟದ ಅಳತೆ ಎಷ್ಟೆಷ್ಟು ಅಂತ ಪಡ್ಡೆ ಹುಡುಗರು ನೋಡಿದ ತಕ್ಷಣ ಹೇಳಿಬಿಡುತ್ತಾರೆ. ಸೊಂಟದ ಅಳತೆ ಕಡಿಮೆಯಿರುವವರೆಗೆ ಮಾತ್ರ ನಾಯಕಿಯರುಗಳಿಗೆ ಬೇಡಿಕೆ. ಸ್ವಲ್ಪ ದಪ್ಪವಾಯಿತೋ ಅವರುಗಳು ಅಕ್ಕ, ಅಮ್ಮರ ಪಾತ್ರಗಳಿಗೆ ವರ್ಗಾವಣೆಯಾಗಿಬಿಡುತ್ತಾರೆ. ಪುರಾತನ ಕಾಲದಿಂದಲೂ ಕವಿಗಳು ತರುಣಿಯರ ಸೊಂಟವನ್ನು ಬಳುಕುವ ಬಳ್ಳಿಗೆ ಹೋಲಿಸಿ ಪ್ರಿಯತಮನ ತೋಳಿನಾಸರೆ ಅವರುಗಳಿಗೆ ಅವಶ್ಯವೆಂದು ಸಾರಿ ಸಾರಿ ಬರೆಯುತ್ತಾ ಬಂದಿದ್ದಾರೆ. ಸೊಂಟದ ಬಗ್ಗೆ ತಲೆ ಕೆಡಿಸಿಕೊಂಡ ಕೆಲವರು ಸೊಂಟ ಮುರಿಸಿಕೊಂಡದ್ದೂ ಇದೆ. ಇರಲಿ ಬಿಡಿ, ನಾನು ಸೊಂಟದ ಈ ರೀತಿಯ ಕಲ್ಪನೆಗೆ ಹೊರತಾಗಿ ಬರೆಯುವೆ. ಸೊಂಟಾಭಿಮಾನಿಗಳ ವಿರೋಧವನ್ನು ನಾನು ಕಟ್ಟಿಕೊಳ್ಳಲಾರೆ, ಆದ್ದರಿಂದ ಮೊದಲೇ ಹೇಳಿಬಿಡುವೆ, ಸೊಂಟ ಪ್ರಧಾನವಾದ ಅಂಗ ಎಂಬುದನ್ನು ಪ್ರತಿಪಾದಿಸುವುದೇ ಈ ಬರಹದ ಉದ್ದೇಶ.
     ಸೊಂಟದ ಸುತ್ತಳತೆ ಶರೀರದ ಎತ್ತರದ ಅರ್ಧಕ್ಕಿಂತ ಹೆಚ್ಚಿಗೆ ಇರಬಾರದೆಂದು ಯಾರೋ ಪುಣ್ಯಾತ್ಮ ಹೇಳಿದ್ದಾನೆ. ಇದು ಸರಿಯೋ, ಅಲ್ಲವೋ ನನಗಂತೂ ಗೊತ್ತಿಲ್ಲ. ಗೊತ್ತಿರುವವರು ತಿಳಿಸಿ. ಈ ಸೊಂಟ ಇದೆಯಲ್ಲಾ, ಅದೇ ಆಧಾರ ಮನುಷ್ಯನಿಗೆ. ಸೊಂಟ ಭದ್ರವಿಲ್ಲದಿದ್ದರೆ ಕೂರುವುದು, ಓಡಾಡುವುದಾದರೂ ಹೇಗೆ? ಮನುಷ್ಯನಿಗೆ ಆಧಾರವಾಗಿರುವ ಪ್ರಧಾನ ಬೆನ್ನು ಮೂಳೆಯ ಉಗಮ ಸೊಂಟದ ಕೆಳಭಾಗದಿಂದಲೇ. ಸೊಂಟ ಬಾಗಿಸಿದರೆ ಬೆನ್ನೂ ಬಾಗುತ್ತದೆ. ಎದೆ ಎತ್ತಿ, ಎದೆ ಉಬ್ಬಿಸಿ ನಡೆ ಎನ್ನುತ್ತಾರೆ. ಆದರೆ ಎದೆ ಎತ್ತಬೇಕಾದರೆ, ಎದೆ ಉಬ್ಬಿಸಿ ನಡೆಯಬೇಕೆಂದರೆ ಸೊಂಟ ನೆಟ್ಟಗಿರಬೇಕು! ಸೊಂಟ ಸೊಟ್ಟಗಿದ್ದರೆ ಎದೆ ಉಬ್ಬುವುದಾದರೂ ಹೇಗೆ? ಕೆಲಸ ಸೊಂಟದ್ದು, ಹೆಸರು ಮಾತ್ರ ಎದೆಗೆ! ಯಾರ ಸೊಂಟ ನೆಟ್ಟಗಿದೆಯೋ ಅವರು ಆರೋಗ್ಯವಾಗಿರುತ್ತಾರೆ. ಸೊಟ್ಟ ಸೊಂಟದವನ ಆರೋಗ್ಯವೂ ಸೊಟ್ಟವೇ ಆಗಿರುತ್ತದಂತೆ! ನೆಚ್ಚಿನ ಸಹಾಯಕ ದೂರವಾದರೆ ಕೈ ಮುರಿದಂತೆ ಅನ್ನುತ್ತಾರೆ. ಆದರೆ ಆಸರೆಯಾಗಿರುವವರು ದೂರವಾದರೆ ಸೊಂಟವೇ ಮುರಿದಂತೆ ಎಂದು ಹೇಳುತ್ತಾರೆ. ಆಸರೆ, ಆಧಾರಕ್ಕೆ ಪರ್ಯಾಯವೇ ಸೊಂಟ! ಯಾರಿಗಾದರೂ ಹಿರಿಯರಿಗೆ ಗೌರವ ಸಲ್ಲಿಸಬೇಕೆಂದರೆ ನಡು ಬಗ್ಗಿಸಿ ನಮಸ್ಕರಿಸುತ್ತಾರೆ. ಜಪಾನ್, ಚೀನಾಗಳಲ್ಲೂ ಸೊಂಟ ಬಗ್ಗಿಸಿ ಸಲಾಮು ಮಾಡುವುದು ಗೌರವದ ಸಂಕೇತ. ದೈನ್ಯ ಪ್ರದರ್ಶನಕ್ಕೂ, ಇಷ್ಟವಿರಲಿ, ಇಲ್ಲದಿರಲಿ ಸೊಂಟ ಬಗ್ಗಿಸಿ ಗೌರವ ಸಲ್ಲಿಸಬೇಕು. ಅಂತಹ ಗೌರವ ಕೊಡುವುದಕ್ಕೆ ಡೊಗ್ಗು ಸಲಾಮು ಎನ್ನುತ್ತಾರೆ. ಜನರಿಗೆ ನಮಸ್ಕಾರ ಮಾಡಿ ಅಧಿಕಾರಕ್ಕೇರಿದವರು ನಂತರ ಜನರಿಂದ ನಮಸ್ಕಾರ ಪಡೆದುಕೊಳ್ಳುತ್ತಾರೆ. ಧಿಮಾಕು ತೋರಿಸಬೇಕೆಂದವರು ಸೊಂಟದ ಮೇಲೆ ಕೈಯಿಟ್ಟು ಕುಹಕ ನೋಟ ಬೀರುತ್ತಾರೆ. ಮರುಳು ಮಾಡುವ ಲಲನಾಮಣಿಯರೂ ಸೊಂಟದ ಮೇಲೆ ಕೈಯಿಟ್ಟು ಓರೆನೋಟ ಬೀರುತ್ತಾರೆ. ಎಲ್ಲದಕ್ಕೂ ಸೊಂಟ ಬೇಕು! ಮಾನವಬಾಂಬುಗಳಾಗಿ ಹಲವರ ಪ್ರಾಣ ತೆಗೆಯುವ ಉಗ್ರಗಾಮಿಗಳು ಬಾಂಬು ಇರುವ ಬೆಲ್ಟು ಕಟ್ಟಿಕೊಳ್ಳುವುದಕ್ಕೂ ಸೊಂಟ ಬೇಕು. ಮಾನ ಮುಚ್ಚುವ ಬಟ್ಟೆಗೆ ಆಧಾರಕ್ಕೂ ಈ ಸೊಂಟವೇ ಬೇಕು. ಆಡುವ ಮಾತುಗಳಿಗೂ ಸೊಂಟಕ್ಕೂ ಏನೋ ಸಂಬಂಧವಿರಬೇಕು. ಸೊಂಟದ ಕೆಳಗಿನ ಮಾತು ಅಂದರೆ ಆಡಬಾರದ ಮಾತು, ಸೊಂಟದ ಮೇಲಿನ ಮಾತು ಅಂದರೆ ಹೃದಯದಿಂದ ಬಂದ ಮಾತು ಎನ್ನುವುದು ವಾಡಿಕೆ. ಆದರೆ ಸೊಂಟ ಮಾತ್ರ ಎರಡು ರೀತಿಯ ಮಾತುಗಳಿಗೂ ಮಧ್ಯದಲ್ಲಿದ್ದು ನಿಷ್ಪಕ್ಷಪಾತವಾಗಿರುತ್ತದೆ.
     'ಕೊಬ್ಬು ಜಾಸ್ತಿ ಮಗನಿಗೆ, ನಾನು ಇಳಿಸುತ್ತೇನೆ' ಎಂಬ ರೀತಿಯ ಮಾತುಗಳು ಕಿವಿಗೆ ಬಿದ್ದಿರಬಹುದು. ಈ ಕೊಬ್ಬು ಅನ್ನುವುದು ಎರಡು ತರಹ ಇರುತ್ತದೆ, ಒಂದು ಮಾನಸಿಕ, ಇನ್ನೊಂದು ಶಾರೀರಿಕ. ಮಾನಸಿಕ ಕೊಬ್ಬಿನ ಬಗ್ಗೆ ಮಾತನಾಡುವುದು ಇಲ್ಲಿ ಅಪ್ರಸ್ತುತ. ಶಾರೀರಿಕ ಕೊಬ್ಬು ಇದೆಯಲ್ಲಾ ಅದು ಮೊದಲು ಆಕ್ರಮಣ ಮಾಡುವುದು ಸೊಂಟವನ್ನೇ, ಚೀನಾ ಟಿಬೆಟ್ಟನ್ನು ನುಂಗಿದಂತೆ. ಅಂತಹವರ ಸೊಂಟ ಯಾವುದು ಹೊಟ್ಟೆ ಯಾವುದು ಗೊತ್ತಾಗುವುದಿಲ್ಲ. ಕೆಲವರ ಸೊಂಟ-ಕಮ್-ಹೊಟ್ಟೆಯ ಸುತ್ತಳತೆ ಶರೀರದ ಎತ್ತರಕ್ಕಿಂತ ಜಾಸ್ತಿಯಿರುತ್ತದೆ. ಸಾಮಾನ್ಯವಾಗಿ ಅವರಿಗೆ ಸಿಟ್ಟು ಬರುವುದು ಕಡಿಮೆ. ಸೊಂಟ ಮಾಯವಾಗುವುದರಿಂದ ಸಿಟ್ಟೂ ಮಾಯವಾಗುತ್ತದೆಯೇ ಎಂಬುದು ಸಂಶೋಧನೆ ಮಾಡಬೇಕಾದ ವಿಷಯ. ವೈಜ್ಞಾನಿಕ ಕಾರಣ ಏನಿರಬಹುದು ಎಂಬ ಕುತೂಹಲ ಯಾರಿಗಾದರೂ ಇದ್ದರೆ ನನ್ನನ್ನು ಕೇಳಬೇಡಿ, ನನಗೆ ಗೊತ್ತಿಲ್ಲ. ಮನುಷ್ಯನ ಮಧ್ಯ  ವಯಸ್ಸು ಎಂದರೆ ಸಣ್ಣ ಸೊಂಟ ಮತ್ತು ವಿಶಾಲ ಮನಸ್ಸುಗಳು ಸ್ಥಳ ಬದಲಾಯಿಸಲು ಪ್ರಾರಂಭಿಸುವ ಸಮಯ; ಅಂದರೆ ಸೊಂಟ ವಿಶಾಲವಾಗುತ್ತಾ ಹೋಗುತ್ತದೆ, ಮನಸ್ಸು ಸಣ್ಣದಾಗುತ್ತಾ ಹೋಗುತ್ತದೆ. ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಪ್ರತಿಯೊಂದಕ್ಕೂ ಅಪವಾದವಿರುತ್ತದೆ.
     ಏನಾದರೂ ಸಾಧಿಸಬೇಕು ಎನ್ನುವುದಕ್ಕೆ ಸೊಂಟ ಭದ್ರವಿರಬೇಕು ಎನ್ನುತ್ತಾರೆ. ಶ್ರಮದ ಕೆಲಸ ಮಾಡುವವರು ಸೊಂಟಕ್ಕೆ ಭದ್ರವಾಗಿ ಟವೆಲನ್ನೋ, ವಸ್ತ್ರವನ್ನೋ ಕಟ್ಟಿರುತ್ತಾರೆ. ಅದರಿಂದ ಸೊಂಟಕ್ಕೆ ಆಧಾರ, ಬಲ ಬರುತ್ತದೆ. ಹಿಡಿದ ಕೆಲಸ ಬಿಡದೆ ಸಾಧಿಸುವವರನ್ನು ಟೊಂಕ ಕಟ್ಟಿ ನಿಂತವರು ಎನ್ನುತ್ತಾರೆ. ಈ ಟೊಂಕ ಎಂದರೆ ಬೇರೆ ಅಲ್ಲ, ಸೊಂಟವೇ. ಸ್ವಾಮಿ ವಿವೇಕಾನಂದರ ಜನಪ್ರಿಯ ಭಂಗಿಯ ಫೋಟೋ ಗಮನಿಸಿದ್ದೀರಾ? ಅವರು ಸೊಂಟಕ್ಕೆ ವಸ್ತ್ರ ಬಿಗಿದುಕೊಂಡು ಕೈಕಟ್ಟಿ ಎದೆಯುಬ್ಬಿಸಿ ನೋಡುತ್ತಿರುವ ನೋಟ ಎಂತಹವರಿಗೂ ಅವರಲ್ಲಿ ಗೌರವ ಉಕ್ಕಿಸುತ್ತದೆ. ನಾವು ಏನೇನೋ ಮಾಡಬೇಕೆಂದು ಅಂದುಕೊಂಡಿರುತ್ತೇವೆ. ಅಂದುಕೊಂಡದ್ದನ್ನು ಮಾಡಲಾಗದ್ದಕ್ಕೆ ಮುಖ್ಯ ಕಾರಣ ಟೊಂಕ ಕಟ್ಟಿ ನಿಲ್ಲದಿರುವುದು! ಇನ್ನು ಮುಂದಾದರೂ ನಮ್ಮ ವೈಫಲ್ಯಗಳಿಗೆ ನೆಪಗಳನ್ನು ಹೇಳದಿರೋಣ, ಟೊಂಕ ಕಟ್ಟಿ ನಿಂತು ಸಾಧಿಸೋಣ. ಏನಂತೀರಿ?
-ಕ.ವೆಂ.ನಾಗರಾಜ್.
**************
ದಿನಾಂಕ 9.05.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಸೋಮವಾರ, ಜುಲೈ 25, 2016

ಸಂಪ್ರದಾಯಗಳು ಮತ್ತು ನಾವು


ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳು ಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ ||
     ಒಂದು ಕಾಲವಿತ್ತು, ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು, ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು, ಕೈಗೆ ಬಳೆ ಹಾಕಿಕೊಳ್ಳದೆ, ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆಸಬೇಕಾಗಿದ್ದ ಕಾಲವಿತ್ತು. ಚಿಕ್ಕ ವಯಸ್ಸಿನಲ್ಲೇ ವಿಧವೆಯಾದವರ ಪಾಡು ಅನುಭವಿಸಿದವರಿಗೇ ಗೊತ್ತು.  ಆಕೆಗೆ ಶುಭ ಕಾರ್ಯಗಳಲ್ಲಿ ಆಹ್ವಾನವಿರುತ್ತಿರಲಿಲ್ಲ. ಆಕೆ ಎದುರಿಗೆ ಬಂದರೆ ಅಪಶಕುನವೆಂದು ಭಾವಿಸುವವರಿದ್ದರು. ಹೊಸ ಪೀಳಿಗೆಯವರಿಗೆ ಇಂತಹ ಅನಿಷ್ಟ ಸಂಪ್ರದಾಯದ ಪರಿಚಯ ಇರಲಾರದು. ಪ್ರಾರಂಭದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುವುದು ನಿಂತರೂ ಕೈಗೆ ಬಳೆ ಹಾಕಿಕೊಳ್ಳಲು, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ, ಸುಧಾರಣೆಯಾಗಿದೆ. ಕಳೆದ ಮೂರು-ನಾಲ್ಕು ದಶಕಗಳಿಂದೀಚೆಗೆ ಈ ಸಂಪ್ರದಾಯದ ಆಚರಣೆ ಕಂಡು ಬರುತ್ತಿಲ್ಲ. ಒಂದು ಅನಿಷ್ಟ ಸಂಪ್ರದಾಯದ ಅಂತ್ಯವಾಗಿರುವುದು ಸಮಾಧಾನದ ಸಂಗತಿ.
     ಸಂಪ್ರದಾಯವೆಂದರೆ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುವ ಆಚರಣೆಗಳು/ ನಡವಳಿಕೆಗಳು. ಸರಿಯೋ, ತಪ್ಪೋ ವಿಚಾರ ಮಾಡದೆ ಅದನ್ನು ಮುಂದುವರೆಸಿಕೊಂಡು ಬರುವವರನ್ನು ಸಂಪ್ರದಾಯವಾದಿಗಳು ಎನ್ನುತ್ತಾರೆ. ಕೆಲವನ್ನು ಆಚರಿಸಿ ಕೆಲವನ್ನು ಕೈಬಿಡುವ ಅನುಕೂಲ/ಅವಕಾಶವಾದಿಗಳೂ ಇದ್ದಾರೆ. ಅರ್ಥವಿಲ್ಲದ ಸಂಪ್ರದಾಯಗಳನ್ನು ಧಿಕ್ಕರಿಸಿ ನಡೆಯುವವರೂ ಇದ್ದಾರೆ. ಸ್ವತಃ ಸಂಪ್ರದಾಯಗಳನ್ನು ಆಚರಿಸದಿದ್ದರೂ, ಅರ್ಥವಿಲ್ಲವೆಂದು ತಿಳಿದಿದ್ದರೂ, ಇತರರ ಸಲುವಾಗಿ ಅವನ್ನು ಬೆಂಬಲಿಸುವವರ ಸಂಖ್ಯೆ  ಸಹ ಗಣನೀಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ  ಎಲ್ಲರನ್ನೂ ಹೊಂದಿಸಿಕೊಂಡು, ಹೊಂದಿಕೊಂಡು ಸಮನ್ವಯ ಮಾಡಿ ಸದ್ವಿಚಾರ ತಿಳಿಸಲು ಹೆಣಗುವವರೂ ಇದ್ದಾರೆ. ಎಲ್ಲಾ ಸಂಪ್ರದಾಯಗಳೂ ಕೆಟ್ಟವಲ್ಲ. ಹಾಗೆಯೇ ಎಲ್ಲವೂ ಒಳ್ಳೆಯವು ಎಂದು ಹೇಳಲಾಗುವುದಿಲ್ಲ. ಯಾವ ಆಚರಣೆಗಳಿಂದ ಯಾರಿಗೂ ತೊಂದರೆಯಿಲ್ಲವೋ, ಯಾವುದರಿಂದ ಮನುಷ್ಯನ ಬೌದ್ಧಿಕ ಹಾಗೂ ಮಾನಸಿಕ ವಿಕಾಸ, ಅಭಿವೃದ್ಧಿಗೆ ಸಹಕಾರವಾಗುವುದೋ, ಸಂತಸ ಹರಡುವುದೋ, ತಾರತಮ್ಯ ಇಲ್ಲದಿರುವುದೋ ಅಂತಹವುಗಳನ್ನು  ಒಳ್ಳೆಯ ಸಂಪ್ರದಾಯಗಳೆನ್ನಬಹುದು. ಇದಕ್ಕೆ ತದ್ವಿರುದ್ಧವಾದ ಸಂಪ್ರದಾಯಗಳನ್ನು ಕೆಟ್ಟವು ಎಂದುಕೊಳ್ಳಬಹುದು. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ, ಈಗಂತೂ ಹೊಸ ಹೊಸ ಸಂಪ್ರದಾಯಗಳು, ಆಚರಣೆಗಳು ಚಾಲ್ತಿಗೆ ಬರುತ್ತಿವೆ. ಹಿಂದಿನ ಅನುಭವಗಳಿಂದ ಹೇಳುವುದಾದರೆ ಕ್ರಮೇಣ ಅವು ಗಟ್ಟಿಗೊಳ್ಳುತ್ತವೆ.
     ಬಾಲ ಗಂಗಾಧರನಾಥ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವ ಸಲುವಾಗಿ ಹುಟ್ಟುಹಾಕಿದ ಸಾರ್ವಜನಿಕ ಗಣೇಶ ಉತ್ಸವಗಳು ಇಂದು ಯಾವ ಮಟ್ಟಕ್ಕೆ ತಲುಪಿವೆ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ಮೊದಲು ಊರಿಗೆ ಒಂದರಂತೆ ಇದ್ದುದು, ಈಗ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಗಳನ್ನು ಇಟ್ಟು ಅಲ್ಲಿ ನಡೆಸುವ ಕಾರ್ಯಕ್ರಮಗಳು, ಪೈಪೋಟಿ, ವಂತಿಕೆ ವಸೂಲಿ, ವಿಸರ್ಜನೆ ಸಮಯದಲ್ಲಿ ಕುಡಿದು ಕುಣಿಯುವ ಯುವಕರು, ಮತೀಯ ಘರ್ಷಣೆಗಳು, ಇತ್ಯಾದಿಗಳನ್ನು ಗಮನಿಸಿದರೆ ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ ಎಂದು ಅನ್ನಿಸದೇ ಇರದು. ಒಳ್ಳೆಯ ರೀತಿಯಲ್ಲಿ ಆಚರಿಸುವವರು ಇದ್ದರೂ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟು. ಗಣೇಶೋತ್ಸವಗಳು ಮುಗಿಯುವವರೆಗೂ ಶಾಂತಿ, ಸುವ್ಯವಸ್ಥೆಗಳಿಗಾಗಿ ಸಂಬಂಧಿಸಿದವರು ಹಗಲೂ ರಾತ್ರಿ ಹೆಣಗುವ, ಇಂತಹ ಉತ್ಸವಗಳು (ಗಣೇಶೋತ್ಸವ ಮಾತ್ರ ಅಲ್ಲ, ಎಲ್ಲಾ ಮತೀಯ/ಧಾರ್ಮಿಕ ಉತ್ಸವಗಳು ಸೇರಿ) ಏಕಾದರೂ ಬರುತ್ತವೋ ಎಂದು ಅಂದುಕೊಳ್ಳುವ ಪರಿಸ್ಥಿತಿ ಇಂದು  ಇದೆ. ನಾನು ಗಣೇಶೋತ್ಸವವನ್ನಾಗಲೀ, ಇಂತಹ ಇತರ ಉತ್ಸವಗಳನ್ನಾಗಲೀ ವಿರೋಧಿಸುತ್ತಿಲ್ಲ, ಅದನ್ನು ಆಚರಿಸಲಾಗುತ್ತಿರುವ ರೀತಿಯ ಬಗ್ಗೆ ಮಾತ್ರ ಬೆರಳು ತೋರಿಸುತ್ತಿದ್ದು, ಆಚರಣೆಗಳು ಅರ್ಥಪೂರ್ಣವಾಗಿರಲೆಂಬ ಕಳಕಳಿ ಮಾತ್ರ ಇಲ್ಲಿದೆ.
     ಸಂಕಷ್ಟಹರ ಗಣಪತಿ ಪೂಜೆಯನ್ನು  ಇಂದು ಸಾಮೂಹಿಕ ಸನ್ನಿಯಂತೆ ಆಚರಿಸಲಾಗುತ್ತಿದೆ. ಆದರೆ ಎಷ್ಟು ಜನರು ಇದನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ? ಹೆಚ್ಚಿನವರು ಸ್ವಸಹಾಯ ಪದ್ಧತಿಯ ಹೋಟೆಲ್ಲಿನಲ್ಲಿ ಹಣ ಕೊಟ್ಟು ಕಾಫಿ ಕುಡಿದಂತೆ ದೇವಸ್ಥಾನಕ್ಕೆ ಹೋಗಿ ಹಣ ಕೊಟ್ಟು ಚೀಟಿ ಬರೆಸಿ ಹೋಗುತ್ತಾರೆ, ಪ್ರಸಾದ ಕೊಡುವ ಸಮಯಕ್ಕೆ ಬಂದು ಕೈಮುಗಿದು ಪ್ರಸಾದ ಪಡೆದು ಹೋಗುತ್ತಾರೆ. ಪೂಜೆಯ ಸಮಯದಲ್ಲಿ ದೇವಸ್ಥಾನದಲ್ಲಿದ್ದವರೂ ಪರಸ್ಪರ ಮಾತುಕತೆಗಳಲ್ಲಿ ತೊಡಗಿರುತ್ತಾರೆ. ಹಣ ಕೊಟ್ಟು ಪದಾರ್ಥಗಳನ್ನು ಕೊಂಡುಕೊಂಡಂತೆ ಪುಣ್ಯವನ್ನು ಖರೀದಿಸಬಹುದೇ? ಇಂತಹ ಆಚರಣೆಯಿಂದ ಯಾರಿಗೆ ಪ್ರಯೋಜನ? ಯಾರ ಕಷ್ಟಗಳು ಪರಿಹಾರವಾಗುತ್ತದೆ? ಶ್ರದ್ಧೆಯಿಂದ, ಅರ್ಥ ತಿಳಿದುಕೊಂಡು ಮಾಡುವ ಕ್ರಿಯೆಗಳಿಂದ ಮಾತ್ರ ಫಲ ಸಿಗಲು ಸಾಧ್ಯವಲ್ಲವೇ? ಇಲ್ಲದಿದ್ದರೆ ಅವು ತೋರಿಕೆಗೆ ಮಾಡುವ ಆಚರಣೆಗಳಾಗುತ್ತವೆ ಅಷ್ಟೆ. ಇಸ್ಲಾಮ್ ಮತ ಪ್ರಾರಂಭವಾದ ಸಂದರ್ಭದಲ್ಲಿ ಧ್ವನಿವರ್ಧಕವಿರಲಿಲ್ಲ. ಆದರೆ ಇಂದು ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಧ್ವನಿವರ್ಧಿಸಿ ನಮಾಜು, ಉಪದೇಶಗಳನ್ನು ಮಾಡುತ್ತಿರುವುದು ಸರ್ವೇ ಸಾಮಾನ್ಯವಾದ ಸಂಪ್ರದಾಯವಾಗಿಬಿಟ್ಟಿದೆ. ಅದನ್ನು ಕೇಳಲು ಇಚ್ಛಿಸದವರಿಗೂ ಬಲವಂತವಾಗಿ ಹಗಲು, ರಾತ್ರಿ ಎನ್ನದೆ ಕೇಳುವಂತೆ ಮಾಡುತ್ತಿರುವುದು ಒಂದು ರೀತಿಯ ಶಬ್ದಮಾಲಿನ್ಯವಲ್ಲವೇ?
     ಜಾತ್ರೆ, ಪೂಜೆ, ಇತ್ಯಾದಿಗಳ ಹೆಸರಿನಲ್ಲಿ ದೇವರನ್ನು ಸಂತುಷ್ಟಗೊಳಿಸುವ(?) ಕಾರಣದಿಂದ ಪ್ರಾಣಿಬಲಿ ನೀಡುವ ಸಂಪ್ರದಾಯ ಒಳ್ಳೆಯದೆಂದು ಹೇಳಬಹುದೆ? ಇದನ್ನು ಸಮರ್ಥಿಸುವ ಜನರಿಗೆ ಕಡಿಮೆಯೇನಿಲ್ಲ. ಶಿಕಾರಿಪುರದಲ್ಲಿ ತಾಲ್ಲೂಕು ದಂಡಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಾತ್ರೆಯ ಸಮಯದಲ್ಲಿ ಕೋಣಬಲಿ ತಡೆಯಲು ಒಂದು ಗ್ರಾಮದಲ್ಲಿ  ಪೋಲಿಸರ ನೆರವಿನೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೆ. ಗ್ರಾಮಸ್ಥರಿಗೆ ಕಾನೂನಿನಲ್ಲಿ ಇರುವ ನಿಷೇಧ, ಉಲ್ಲಂಘಿಸಿದರೆ ಆಗುವ ಪರಿಣಾಮಗಳು, ಇತ್ಯಾದಿ ತಿಳುವಳಿಕೆ ಹೇಳಲಾಗಿತ್ತು. ಮುಂಚಿತವಾಗಿ ನಡೆಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಪಶುವೈದ್ಯರ ಸಹಾಯದಿಂದ ಸಿರಿಂಜಿನಲ್ಲಿ ಕೋಣನ ರಕ್ತವನ್ನು ತೆಗೆದು ಸಾಂಕೇತಿಕವಾಗಿ ದೇವಿಗೆ ಅರ್ಪಿಸಲು ಗ್ರಾಮದ ಮುಖ್ಯಸ್ಥರು ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಪೋಲಿಸರ ಹಾಗೂ ನಮ್ಮ ಸಿಬ್ಬಂದಿಯ ಕಣ್ಗಾವಲು ಇದ್ದರೂ, ನಂತರ  ಎಲ್ಲರ ಕಣ್ಣುತಪ್ಪಿಸಿ ಕೋಣಬಲಿ ನೀಡಿದ ಪ್ರಸಂಗ ಬೇಸರ, ಮುಜುಗರ ಉಂಟುಮಾಡಿತ್ತು. ವಿಷಯ ಎಲ್ಲಾ ಮಾಧ್ಯಮಗಳಲ್ಲೂ ವಿಷಯ ಅತಿರಂಜಿತವಾಗಿ ಪ್ರಚಾರಗೊಂಡಿತು. ಕೆಲವರ ಮೇಲೆ ಪ್ರಕರಣ ದಾಖಲಿಸಿದರೂ ರಾಜಕೀಯ ನಾಯಕರ ಮಧ್ಯಪ್ರವೇಶ ಪ್ರಕರಣವನ್ನು ದುರ್ಬಲಗೊಳಿಸಿದ್ದು ಸುಳ್ಳಲ್ಲ. ಈ ಪ್ರಕರಣವನ್ನು ರಾಜಕೀಯ ಮಾಡುವ ಸಲುವಾಗಿ ಪರವಾಗಿ ಮತ್ತು ವಿರೋಧವಾಗಿ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಬಳಸಿಕೊಂಡವು. ಅನಿಷ್ಟ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದವರೂ ಸಾತ್ವಿಕ ಕಾರಣಕ್ಕೆ ವಿರೋಧಿಸದೆ ವಿರೋಧಿಗಳನ್ನು ವಿರೋಧಿಸಲು ಮಾತ್ರ ಬಳಸಿದ್ದು ನೋವಿನ ವಿಷಯ. ಮಾಧ್ಯಮಗಳೂ ಕೆಸರೆರಚಾಟಕ್ಕೆ ಸಾಥ್ ನೀಡಿದವೇ ಹೊರತು, ಅವುಗಳಿಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಶಕ್ತಿಯಿದ್ದರೂ ಮಾಡಲಿಲ್ಲ.  ಇಂತಹ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಪ್ರಚಲಿತ ನಾಡಿನ ಕಾನೂನುಗಳನ್ನೂ ಧಿಕ್ಕರಿಸಿ ನಡೆಸುವ ಅಂಧ ಸಂಪ್ರದಾಯಗಳ ಕುರಿತು ತಿಳಿಸುವ ಸಲುವಾಗಿ ಮಾತ್ರ ಇದನ್ನು ಸಾಂಕೇತಿಕವಾಗಿ ಉದಾಹರಿಸಿರುವೆ.
     ಸಂಪ್ರದಾಯಗಳನ್ನು ಹೇಗೆ ಆಚರಿಸಬೇಕು ಅನ್ನುವುದಕ್ಕಿಂತ ಕೆಟ್ಟ ಸಂಪ್ರದಾಯಗಳನ್ನು ಗುರುತಿಸಿ ಅವುಗಳಿಂದ ದೂರ ಉಳಿಯಲು ಮತ್ತು ಸಾಧ್ಯವಾದರೆ ತಡೆಯಲು ಪ್ರಯತ್ನಿಸುವುದು ಇಂದಿನ ಅಗತ್ಯ. ಮಠ-ಮಂದಿರಗಳು, ಮಸೀದಿಗಳು, ಚರ್ಚುಗಳು, ಇತ್ಯಾದಿಗಳು ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಮತ್ತು ಅರ್ಥರಹಿತ ಸಂಪ್ರದಾಯಗಳನ್ನು ದೂರ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ. ಈ ಕೇಂದ್ರಗಳು ವಾಸ್ತವವಾಗಿ ಸತ್ಕರ್ಮಗಳನ್ನು ಪೋಷಿಸುವ, ಜ್ಞಾನ ಪಸರಿಸುವ ಕೆಲಸ ಮಾಡಬೇಕು. ವಿಷಾದದ ಸಂಗತಿಯೆಂದರೆ ಹೆಚ್ಚಿನವು ಋಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ ಸಂಸ್ಥೆಗಳನ್ನು, ಕಲ್ಯಾಣ ಮಂದಿರಗಳನ್ನು ಕಟ್ಟಿ ಹಣ ಮಾಡುವ ಕೇಂದ್ರಗಳಾಗಿವೆ. ತಿರುಳಿಗಿಂತ ಸಿಪ್ಪೆಗೆ ಹೆಚ್ಚು ಮಾನ್ಯತೆ ಕೊಡಲಾಗುತ್ತಿದೆ. ನಿಜ, ತಿರುಳಿನ ರಕ್ಷಣೆಗೆ ಸಿಪ್ಪೆಯಿರಬೇಕು, ಆದರೆ ಸಿಪ್ಪೆಯೇ ತಿರುಳಾಗಬಾರದು. ಆ ಕಾರಣದಿಂದಾಗಿಯೇ ಉತ್ತರಾಧಿಕಾರಕ್ಕಾಗಿ ಕಚ್ಚಾಡುವ, ಒಡೆತನ ಸಾಧಿಸಬಯಸುವವರ ಕೂಟ ಅಲ್ಲಿ ಮನೆ ಮಾಡಿವೆ. ಮೂಲ ಉದ್ದೇಶ ಮರೆತು ಭೌತಿಕ ಆಸ್ತಿ, ಸಂಪತ್ತು ಕ್ರೋಢೀಕರಿಸಲು ನೀಡುವ ಮಹತ್ವವೇ ಇದಕ್ಕೆ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ.
     ರೂಢಿಗತ ಸಂಪ್ರದಾಯಗಳಿಗೆ ಹೇಗೆ ಮನಸ್ಸು ಒಗ್ಗಿಕೊಳ್ಳುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಬಲಶಾಲಿ ಆನೆಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಮರವೊಂದಕ್ಕೆ ಅಥವ ಒಂದು ಗೂಟಕ್ಕೆ ಕಟ್ಟಿ ಹಾಕಿದರೆ ಅದು ಬಿಡಿಸಿಕೊಳ್ಳಲು ಪ್ರಯತ್ನವೇ ಮಾಡುವುದಿಲ್ಲ. ಆನೆ ಎಷ್ಟು ಬಲಶಾಲಿಯೆಂದರೆ ಅದಕ್ಕೆ ಆ ಸರಪಳಿಯಾಗಲೀ, ಗೂಟವಾಗಲೀ ಅಥವ ಮರವಾಗಲೀ ಲೆಕ್ಕವೇ ಅಲ್ಲ. ಅದು ಮನಸ್ಸು ಮಾಡಿದರೆ ಸರಪಳಿ ತುಂಡರಿಸಬಲ್ಲದು ಮತ್ತು ಮರವನ್ನು ಕಿತ್ತು ಬಿಸಾಡಬಲ್ಲದು. ಆದರೂ ಆ ಕೆಲಸವನ್ನು ಆನೆ ಮಾಡುವುದಿಲ್ಲ. ಏಕೆಂದರೆ ಚಿಕ್ಕದಾಗಿದ್ದಾಗ ಅದನ್ನು ಅದೇ ರೀತಿ ಕಟ್ಟಿ ಹಾಕಲಾಗುತ್ತಿತ್ತು. ಚಿಕ್ಕದಾಗಿದ್ದರಿಂದ ಬಂಧನದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅದಕ್ಕೆ ಆಗ ಆಗುತ್ತಿರಲಿಲ್ಲ. ಕ್ರಮೇಣ ಅದೇ ಅಭ್ಯಾಸವಾಗಿ ಮರಕ್ಕೆ ಕಟ್ಟಿ ಹಾಕಿದರೆ ಬಿಡಿಸಿಕೊಳ್ಳಲಾಗುವುದಿಲ್ಲವೆಂಬ ಭಾವ ಗಟ್ಟಿಗೊಂಡು ಅದು ದೊಡ್ಡದಾದ ಮೇಲೂ ಹಾಗೆ ಕಟ್ಟಿಹಾಕಿದರೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರಲೇ ಇರಲಿಲ್ಲ. ನಮ್ಮ ಸ್ಥಿತಿ ಸಹ ಅದೇ ರೀತಿ ಇದೆ. ನಮಗೆ ವಿಚಾರ ಮಾಡುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಕೆಲವು ಸಂಪ್ರದಾಯಗಳು ಅರ್ಥಹೀನವೆಂದು ನಮಗೆ ತಿಳಿಯುತ್ತದೆ, ಮನಸ್ಸು ಮಾಡಿದರೆ ಅದನ್ನು ಧಿಕ್ಕರಿಸುವ, ಮುಂದುವರೆಸದಿರುವ ಶಕ್ತಿ ನಮಗಿದೆ, ಆದರೂ ನಾವು ಹಾಗೆ ಮಾಡುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಳ್ಳಲಾಗುವುದೇ ಎಂಬ ಪ್ರಚಲಿತ ಗಾದೆ ಮಾತು ತಿಳಿಸುವುದೂ ವಿಚಾರ ಮಾಡಿ ಮುಂದುವರೆಯಿರಿ ಎಂದೇ. ಮರದ ನೆರಳಿನಲ್ಲಿ ಬಾಳೋಣ, ಆದರೆ ಏಕೆ ನೇಣು ಹಾಕಿಕೊಳ್ಳಬೇಕು? ಸಾರಾಸಗಟಾಗಿ ಎಲ್ಲವನ್ನೂ ತಳ್ಳಿಹಾಕಬೇಕಾಗಿಲ್ಲ. ಕುಟುಂಬಕ್ಕೆ, ಸುತ್ತಮುತ್ತಲಿನವರಿಗೆ ಹಿತವೆನಿಸುವ ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬಹುದು, ಒಳ್ಳೆಯದಾದ ಹೊಸ ಸಂಪ್ರದಾಯಗಳನ್ನು ಹುಟ್ಟು ಹಾಕಬಹುದು, ಆದರೆ ಅನಿಷ್ಠ ಸಂಪ್ರದಾಯಗಳನ್ನು ನಿಲ್ಲಿಸುವ ಮತ್ತು ಸದ್ಯಕ್ಕೆ ಒಳ್ಳೆಯದೆನಿಸಿದರೂ ಕಾಲಾನುಕಾಲಕ್ಕೆ ಅದರ ಆಚರಣೆಯಿಂದ ಆಗುವ ಪರಿಣಾಮಗಳನ್ನೂ ಗಮನಿಸಿ ಯೋಗ್ಯತಾನುಸಾರ ನಿರ್ಣಯಿಸಿ ಅಂತಹವುಗಳನ್ನು ಕೈಬಿಡುವ ಬಗ್ಗೆ ನಿರ್ಧರಿಸುವುದು ಇಂದಿನ ಅಗತ್ಯವಾಗಿದೆ. ಸಂಪ್ರದಾಯಗಳು ನಮ್ಮನ್ನು ಕಟ್ಟಿಹಾಕುವ ಸರಪಳಿಗಳಾಗದೆ, ನಮ್ಮನ್ನು ಒಳ್ಳೆಯ ದಾರಿಯಲ್ಲಿ ಕೈಹಿಡಿದು ಮುನ್ನಡೆಸುವ ದಾರಿದೀಪಗಳಾಗಲಿ.
-ಕ.ವೆಂ. ನಾಗರಾಜ್.

ಸೋಮವಾರ, ಜುಲೈ 18, 2016

ಸಮಸ್ಯೆ ಒಂದು - ಪರಿಹಾರದ ರೀತಿ ಹಲವು!


     ರಾಜಣ್ಣ ಒಬ್ಬ ಪೋಸ್ಟ್ ಗ್ರಾಜುಯೇಟ್ ನಿರುದ್ಯೋಗಿ. ಏನಾದರೂ ಒಳ್ಳೆಯದು ಮಾಡಬೇಕೆಂಬ ಕಳಕಳಿಯಿದ್ದರೂ ಮುನ್ನುಗ್ಗುವ ಸ್ವಭಾವದವನಾಗಿರಲಿಲ್ಲ. ಓದುತ್ತಿದ್ದಾಗ ತಾನಾಯಿತು, ತನ್ನ ಪುಸ್ತಕವಾಯಿತು ಎಂಬಂತಿದ್ದವನು. ಅವನಿದ್ದ ಮನೆಯ ಮುಂದಿನ ರಸ್ತೆಯಲ್ಲಿ ದೊಡ್ಡ ಗುಂಡಿಯಿದ್ದು ವಾಹನಗಳು ಓಡಾಡುವುದು ದುಸ್ತರವಾಗಿತ್ತು. ಒಮ್ಮೆ ಅವನ ಸ್ನೇಹಿತ ಅವನನ್ನು ಕಾಣಲು ಬರುವಾಗ ಗುಂಡಿಯ ಕಾರಣದಿಂದ ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾಗಿನಿಂದ ರಸ್ತೆ ಸರಿಪಡಿಸಲು ನಗರಸಭೆಯ ಅಧಿಕಾರಿಗಳನ್ನು ಹಲವಾರು ಸಲ ಭೇಟಿ ಮಾಡಿ ಅರ್ಜಿ ಕೊಟ್ಟು ವಿಚಾರಿಸಿದರೂ ಏನೂ ಪ್ರಯೋಜನವಾಗಿರಲಿಲ್ಲ. ಆ ಭಾಗದ ಕೌನ್ಸಿಲರರನ್ನು ಕಂಡು ಬರುವುದು ಒಳ್ಳೆಯದೆಂದುಕೊಂಡು ಅವರ ಮನೆಗೆ ಹೋದ. ಮನೆಯ ಮುಂದೆ ಜನಗಳ ಗುಂಪೇ ಇತ್ತು, ಕೆಲಸ ಮಾಡಿಸಿಕೊಳ್ಳಲು ಬಂದವರು, ಹಿಂಬಾಲಕರು, ಮುಂಬಾಲಕರು, ಇತ್ಯಾದಿ. ರಾಜಣ್ಣ ಅವರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರೂ ಅವರು ಅವನನ್ನು ಗಮನಿಸಿಯೂ ಗಮನಿಸದಂತೆ ಇತರರೊಂದಿಗೆ ಮಾತುಕತೆಯಲ್ಲೇ ತೊಡಗಿದ್ದರು. ಮಧ್ಯೆ ಮಧ್ಯೆ ಆಪ್ತ/ಗುಪ್ತ ಸಮಾಲೋಚನೆಗಾಗಿ ಪಕ್ಕದ ಕೊಠಡಿಗೆ ಹೋಗಿಬರುತ್ತಿದ್ದರು. ರಾಜಣ್ಣ ಇನ್ನೂ ಅಲ್ಲೇ ಇದ್ದುದನ್ನು ಕಂಡ ಆ ಜನಪ್ರತಿನಿಧಿ ಅಸಹನೆಯಿಂದ  "ಏನ್ರೀ, ನಿಮ್ಮದು?" ಎಂದಾಗ 'ರಸ್ತೆ ದುರಸ್ತಿ ಮಾಡಿಸಿಕೊಡಬೇಕೆಂದೂ, ನಗರಸಭೆಯ ಅಧಿಕಾರಿಗಳು ಎಷ್ಟು ಹೇಳಿದರೂ ಕೇಳುತ್ತಿಲ್ಲ'ವೆಂದು ಹೇಳಿಕೊಂಡ. ಅವರು "ನಮಗೆ ಇದೇ ಕೆಲಸವೇನ್ರೀ? ಆ ರಸ್ತೆ ಮಾಡಿಸಿ, ಈ ಚರಂಡಿ ಕ್ಲೀನ್ ಮಾಡಿಸಿ, ಬರೀ ಇದೇ ಆಯಿತು" ಎಂದು ಹೇಳಿ, ಅಲ್ಲೇ ಇದ್ದ ನಗರಸಭೆ ಇಂಜನಿಯರರಿಗೆ "ಅದೇನು ನೋಡ್ರೀ" ಎಂದು ಹೇಳಿ ಆಗ ಬಂದ ವ್ಯಕ್ತಿಯೊಬ್ಬರನ್ನು ಆತ್ಮೀಯವಾಗಿ ಆಹ್ವಾನಿಸಿ ಪಕ್ಕದ ಕೊಠಡಿಗೆ ಕರೆದುಕೊಂಡು ಹೋದರು. ಇಂಜನಿಯರ್ ಉದಾಸೀನದಿಂದ "ಆಯ್ತು ನೋಡೋಣ, ಹೋಗಿ" ಎಂದು ಹೇಳಿದ. ರಾಜಣ್ಣ ವಾಪಸು ಬಂದ.
     ನಾಗಣ್ಣ ನಿವೃತ್ತನಾಗಿದ್ದ ಒಬ್ಬ ಹಿರಿಯ ಅಧಿಕಾರಿ. ರಸ್ತೆ ರಿಪೇರಿ ಮಾಡಿಸಲು ದೂರವಾಣಿ ಮೂಲಕ ನಗರಸಭೆ ಕಮಿಷನರರೊಂದಿಗೆ ಮಾತನಾಡಿದ್ದರು. ಹಾಗೆಯೇ ಕೌನ್ಸಿಲರರಿಗೆ ಒಂದು ಮಾತು ಹೇಳೋಣವೆಂದು ಕಾರಿನಲ್ಲಿ ಬಂದಿಳಿದ ಅವರನ್ನು ಕಂಡು ಮನೆಯ ಮುಂದಿದ್ದವರು ಅವರು ಒಳಗೆ ಬರಲು ಜಾಗ ಮಾಡಿಕೊಟ್ಟು ಸರಿದು ನಿಂತರು. ಒಳಗೆ ಹೋದ ನಾಗಣ್ಣ ಜನಪ್ರತಿನಿಧಿಗೆ ವಿಷಯ ತಿಳಿಸಿದರು. 'ಆಯ್ತು ಬಿಡಿ, ಮಾಡಿಸೋಣ' ಎಂದವರು, ಇಂಜನಿಯರರಿಗೆ "ಇಂಥ ಸಣ್ಣ ಕೆಲಸ ಮಾಡಕ್ಕೆ ಆಗಲ್ಲವೇನ್ರೀ, ಬೇಗ ಮಾಡಿಸಿರಿ" ಎಂದರು. ನಮಸ್ಕಾರ ಮಾಡಿ ನಾಗಣ್ಣ ಹೊರಗೆ ಹೋದಾಗ 'ನನಗೆ ಮಾಡಕ್ಕೆ ಬೇರೆ ಕೆಲಸ ಇಲ್ಲ ಅಂದುಕೊಂಡಿದಾನೆ' ಎಂದು ಗೊಣಗುಟ್ಟಿದರು. ಇಂಜನಿಯರರಿಗೆ ಆ ಕೆಲಸಕ್ಕೆ ಅರ್ಜೆಂಟ್ ಇಲ್ಲವೆಂದು ಅರ್ಥವಾಯಿತು.
     ಗುಂಡಣ್ಣ ವಿದ್ಯಾವಂತನೇನಲ್ಲ, ಪಿಯುಸಿ ಫೇಲಾದ ಮೇಲೆ ಅವನ ವಿದ್ಯಾಭ್ಯಾಸ ಮೊಟಕಾಗಿತ್ತು. ಅಪ್ಪ ಕೊಟ್ಟ ದುಡ್ಡಿನಲ್ಲಿ ಕೆಲವು ಟ್ಯಾಕ್ಸಿಗಳನ್ನು ಇಟ್ಟುಕೊಂಡು ಡ್ರೈವರರನ್ನು ನೇಮಿಸಿಕೊಂಡು ಟ್ರಾವೆಲ್ ಏಜೆನ್ಸಿ ನಡೆಸಿ ಪ್ರವರ್ಧಮಾನಕ್ಕೆ ಬರುತ್ತಿದ್ದ. ಕಟ್ಟುಮಸ್ತಾಗಿದ್ದ ಅವನ ಜೊತೆ ಗೆಳೆಯರ ಗುಂಪೇ ಇರುತ್ತಿತ್ತು. ಏನಾದರೂ ಕೆಲಸ ಆಗಬೇಕಿದ್ದರೆ ಅವನಿಗೆ ಹೇಳಿದರೆ ಆಗುತ್ತಿತ್ತು. ಅದನ್ನು ಮಾಡಬೇಕೆಂದು ಅವನಿಗೆ ಅನ್ನಿಸಿದರೆ ಅವನು ಅದನ್ನು ಆಗುವವರೆಗೂ ಬಿಡುವ ಜಾಯಮಾನ ಅವನದಾಗಿರಲಿಲ್ಲ. ಅಂದು ಅವನು ತನ್ನ ಗೆಳೆಯರ ಗುಂಪಿನೊಂದಿಗೆ ತನ್ನ ಗಡಸು ದ್ವನಿಯಲ್ಲಿ 'ಇದಾರೇನ್ರೀ' ಎಂದುಕೊಂಡು ಕೌನ್ಸಿಲರರ ಮನೆಗೆ ಪ್ರವೇಶಿಸುತ್ತಿದ್ದಂತೆಯೇ ಎದ್ದುಬಂದ ಆ ಜನಪ್ರತಿನಿಧಿ "ಏನ್ ಗುಂಡಣ್ಣಾ, ಏನ್ಸಮಾಚಾರ?" ಎಂದು ಕೇಳಿದ. 'ಬರೀ ಕಮಿಷನ್, ಕಂಟ್ರಾಕ್ಟು ಅಂತ ಇರ್ತೀರೋ ಅಥವಾ ಜನಗಳ ಕೆಲಸಾನೂ ಮಾಡ್ತೀರೋ?' ಎಂದ ಅವನನ್ನು ಸಮಾಧಾನಿಸಿ 'ಈಗ ಏನಾಗಬೇಕು ಹೇಳು ಗುಂಡಣ್ಣ' ಎಂದು ವಿಚಾರಿಸಿದ. ರಸ್ತೆ ರಿಪೇರಿ ವಿಷಯವೆಂದು ತಿಳಿದಾಗ ಅಲ್ಲಿದ್ದ ಇಂಜನಿಯರರಿಗೆ "ನೀವೇನು ಕತ್ತೆ ಕಾಯ್ತಾ ಇರ‍್ತೀರಾ? ಆ ರಸ್ತೆ ಗುಂಡಿ ಮುಚ್ಚಿ ಸರಿ ಮಾಡಿ ಅಂತ ನಿಮಗೆ ಎಷ್ಟು ಸಲ ಹೇಳಬೇಕ್ರೀ? ಅದೆಲ್ಲಾ ಗೊತ್ತಿಲ್ಲ, ನಾಳೆ ಒಳಗೆ ಆ ಕೆಲಸ ಮಾಡಿ ನನಗೆ ಮುಖ ತೋರಿಸಬೇಕು" ಎಂದು ಗದರಿಸಿದರು. ಇಂಜನಿಯರ್, "ಇವತ್ತೇ ಮಾಡಿಸುತ್ತಿದ್ದೆ ಸಾರ್, ಜನ ಸಿಗಲಿಲ್ಲ, ನಾಳೆ ಖಂಡಿತಾ ಆಗುತ್ತೆ ಸಾರ್" ಎಂದ. ಇಂಜನಿಯರ್ ತರಿಸಿದ ಕಾಫಿ ಕುಡಿದು ಗುಂಡಣ್ಣ ಮತ್ತು ಅವನ ಗೆಳೆಯರು ಅಲ್ಲಿಂದ ಹೊರಟರು. ಆ ನಾಳೆ ಹಲವು ದಿನಗಳಾದರೂ ಬರಲೇ ಇಲ್ಲ.
     ಹೀಗಿರುವಾಗ ಒಂದು ದಿನ ಬೆಳ್ಳಂಬೆಳಗ್ಗೆ ರಸ್ತೆ ದುರಸ್ತಿ ತರಾತುರಿಯಿಂದ ನಡೆದಿತ್ತು. ಕೆಲಸಗಾರರ, ಕೆಲಸದ ಉಸ್ತುವಾರಿ ನೋಡಿಕೊಳ್ಳುವವರ ದೊಡ್ಡ ಗುಂಪೇ ಅಲ್ಲಿ ನೆರೆದಿತ್ತು. ನಾಗಣ್ಣ, ರಾಜಣ್ಣ, ಗುಂಡಣ್ಣರು ತಮ್ಮ ಪ್ರಯತ್ನದಿಂದ ಕೆಲಸವಾಗುತ್ತಿದೆಯೆಂದುಕೊಂಡಿದ್ದರು. ಆದರೆ, ನಿಜವಾದ ಕಾರಣವೆಂದರೆ ಜಿಲ್ಲಾ ಮಂತ್ರಿಗಳು ಅಂದು ಆ ರಸ್ತೆಯ ಮೂಲಕ ಹಾದು ಹೋಗುತ್ತಿದ್ದರು!
-ಕ.ವೆಂ.ನಾಗರಾಜ್.
****************
ದಿನಾಂಕ 16.05.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಜುಲೈ 14, 2016

ನೂರ್ಕಾಲ ಬಾಳೋಣ!


ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರುತಿಹುದು ಸಾವು |
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ ||
     ಸಾವಿಲ್ಲದ ಜೀವಿಗಳು ಇವೆಯೇ? ಸಾವು ಖಚಿತವೆಂಬ ಸತ್ಯವನ್ನು ಒಪ್ಪದವರು ಇದ್ದಾರೆಯೇ? ಯಾವುದೇ ಸಿದ್ಧಾಂತ, ತತ್ವ, ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದೀತು, ಆದರೆ ಎಲ್ಲರೂ ಸಾಯುತ್ತಾರೆ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರಲಾರದು. ಸಾಯುವುದು ಗೊತ್ತಿದ್ದರೂ ಮನುಷ್ಯರು ಚಿರಂಜೀವಿಗಳಂತೆ ವರ್ತಿಸಿ, ಎಲ್ಲವೂ ಬೇಕು, ತಮಗೊಬ್ಬರಿಗೇ ಬೇಕು ಎಂದು ಏಕೆ ಹಪಹಪಿಸುತ್ತಾರೆಂಬುದು ಚೋದ್ಯವೇ ಸರಿ. ತರ್ಕಿಸುತ್ತಾ ಹೋದರೆ ಬೇಕು ಎಂಬುದು ಪ್ರತಿ ಜೀವಿಯ ಅಂತರ್ಗತ ಸ್ವಭಾವವೆಂಬುದನ್ನು ಒಪ್ಪಲೇಬೇಕು. ಇರುವ ಸ್ಥಿತಿಗಿಂತ ಮೇಲೇರಬೇಕು ಎಂಬ ಪ್ರಬಲ ಇಚ್ಛೆ ಎಲ್ಲರಿಗೂ ಸಹಜ. ಈ ಬೇಕು ಅನ್ನುವುದು ಯಾವ ಹಂತದಲ್ಲೇ ಆಗಲಿ, ಸಾಕು ಎಂಬ ಭಾವನೆ ಮೂಡಲು ಬಿಡುವುದಿಲ್ಲ. ಅಂದುಕೊಂಡಿದ್ದಂತೆ ಬಯಸಿದ್ದು ಸಿಕ್ಕಿದ ತಕ್ಷಣದಲ್ಲೇ ಅದಕ್ಕಿಂತ ಮೇಲಿನ ಬೇಕು ಧುತ್ತೆಂದು ಆ ಸ್ಥಾನವನ್ನು ಆಕ್ರಮಿಸಿಬಿಡುತ್ತದೆ. ಮನುಷ್ಯೇತರ ಜೀವಿಗಳಿಗಿಂತ ವಿವೇಚನೆ ಮಾಡುವ ಶಕ್ತಿ ಹೊಂದಿರುವ ಮಾನವಜೀವಿಗಳಲ್ಲಿ ಈ ಬೇಕುವಿನ ಪ್ರಮಾಣ ಜಾಸ್ತಿ. ಈ ಬೇಕುವಿನಿಂದಲೇ ಜೀವಚಕ್ರ ತಿರುಗುತ್ತಿದೆ. ಬೇಕುಗಳನ್ನು ಮೀರಿ ಯಾವುದೂ ಬೇಡವೆಂದು ವಿರಾಗಿಗಳಾದವರಿಗೂ ಮೋಕ್ಷ ಸಾಧಿಸಬೇಕೆಂಬ ದೊಡ್ಡ ಬೇಕು ಇರುತ್ತದೆ. ಈ ಬೇಕುವಿಗಾಗಿಯೇ ಅವರು ಇತರ ಪ್ರಾಪಂಚಿಕ ಬೇಕುಗಳನ್ನು ದೂರಮಾಡಿರುತ್ತಾರೆ! 
     ಜೀವ ಹೋಗಲು ಈಗಲೋ ಆಗಲೋ ಎನ್ನುತ್ತಿರುವಾಗಲೂ ಆ ಜೀವ ಬದುಕಲು ತುಡಿಯುತ್ತಿರುತ್ತದೆ. ಇಷ್ಟಾದರೂ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರೂ ಇರುತ್ತಾರೆ. ಬಹುಷಃ ಅದಕ್ಕೆ ಕಾರಣ ಈ ಜನ್ಮದಲ್ಲಿ ಸಿಗದಿದ್ದುದು ಮುಂದಿನ ಜನ್ಮದಲ್ಲಾದರೂ ಸಿಗಲಿ ಎಂಬ ಭಾವವೂ ಇದ್ದಿರಬಹುದು. ಬಡತನ, ಸಾಂಸಾರಿಕ ಸಮಸ್ಯೆಗಳು, ಇತ್ಯಾದಿಗಳಿಂದ ರೋಸಿಹೋದವರು, ಭಗ್ನಪ್ರೇಮಿಗಳು, ಮುಂತಾದವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಡೆದು, ಸಾಯುವುದರಿಂದ ಸಮಸ್ಯೆ ಪರಿಹಾರವಾಗುವುದೇ ಎಂದು ವಿಚಾರಿಸಿದರೆ ಅವರು ಬಹುಷಃ ಸಾಮಾನ್ಯವಾಗಿ ಹೇಳುವುದೇನೆಂದರೆ ಅವರು ಬಯಸಿದ್ದುದು ಈ ಜನ್ಮದಲ್ಲಿ ಸಿಗುವುದೇ ಇಲ್ಲ, ಅದು ಇಲ್ಲದೇ ಜೀವನ ವ್ಯರ್ಥ, ತಮ್ಮ ಸಮಸ್ಯೆಗೆ ಈ ಜನ್ಮದಲ್ಲಿ ಪರಿಹಾರ ಸಿಕ್ಕುವುದೇ ಇಲ್ಲ, ಇತ್ಯಾದಿ ಕಾರಣಗಳನ್ನು ಕೊಟ್ಟಾರು. ಗಮನಿಸಬೇಕಾದುದೇನೆಂದರೆ, ಅವರ ಬೇಕುಗಳಿಗಾಗಿಯೇ ಅವರು ಸಾಯುತ್ತಾರೆ. ಏಕೆಂದರೆ ಅದು ಅವರಿಗೆ ಬೇಕಾಗಿದೆ, ಬೇಕೆನಿಸಿದಂತೆ ಬದುಕುವುದು ಅವರಿಗೆ ಬೇಕಿದೆ! 
ಬಯಸಿದರು ಸಾವೆ ಬಯಸದಿದ್ದರು ಸಾವೆ
ಬೇಡವೆಂದರೆ ನೀನು ಬರದಿಹುದೆ ಸಾವು |
ಬೇಡದಿರು ಮನವೆ ಬೇಡದಿಹ ಸಾವ
ಅಡ್ಡದಾರಿಯಲಿ ನುಗ್ಗದಿರು ಮೂಢ ||
     ಈ ಸಾವಿಗೆ ನಾಚಿಕೆಯಿಲ್ಲ; ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಿರುವಾಗ ಬಯಸಿ ಏಕೆ ಕರೆಯಬೇಕು? ಅದು ಬರುವವರೆಗೂ ಬದುಕಿರೋಣ. ತಾನಾಗಿ ಬಂದಾಗ ಸಂತೋಷದಿಂದ ಹೋಗೋಣ. ನಗುತ್ತಾ ಸಾವನ್ನು ಅದು ಬರುವಾಗ ಮಿತ್ರನಂತೆ ಬರಮಾಡಿಕೊಳ್ಳೋಣ. ೮೪ ಲಕ್ಷ ವಿವಿಧ ಜೀವಿಗಳ ಪೈಕಿ ವಿರಳವಾದ ಮಾನವಜನ್ಮ ಹೊಂದುವುದು ಆ ಪರಮಾತ್ಮನ ಕರುಣೆಯಲ್ಲವೇ? ವೇದಗಳ ಪ್ರಕಾರ ಮತ್ತು ಭಾರತೀಯರ ನಂಬಿಕೆಯಂತೆ ಹುಟ್ಟು-ಸಾವುಗಳ ಚಕ್ರ ಸದಾ ತಿರುಗುತ್ತಿದ್ದು ಜೀವಿಗಳು ಹುಟ್ಟುತ್ತಾ, ಸಾಯುತ್ತಾ ಇದ್ದರೂ ಈ ಜೀವಿಗಳಿಗೆ ಚೈತನ್ಯದಾಯಕವಾದ ಆತ್ಮ ಮಾತ್ರ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ; ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಆದರೆ, ಇಲ್ಲಿ ಒಂದು ವಿಶೇಷ ಅಂಶವಿದೆ. ಮುಂದೆ ಪಡೆಯುವ ಜನ್ಮ ಈ ಜನ್ಮದಲ್ಲಿ ಮಾಡಿದ ಕರ್ಮಗಳ ಸಂಚಿತಾರ್ಜಿತಫಲವೆಂದು ವೇದ ಸಾರಿದೆ. 
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮.)
     ಪರಮಾತ್ಮನ ನ್ಯಾಯವಿಧಾನದಲ್ಲಿ ಒಡಕಾಗಲೀ, ದೋಷವಾಗಲೀ ಇಲ್ಲ. ಅವನು ಜೀವಿಗಳಲ್ಲಿ ಇಟ್ಟಿರುವ ಗೂಢವಾದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು (ಕರ್ಮಫಲವಿಪಾಕ) ತಯಾರು ಮಾಡಿದವರೇ ಉಣ್ಣಬೇಕಿದೆ. ಇತರರ ಸಹಾಯದಿಂದ, ಅಡ್ಡಮಾರ್ಗದಿಂದ ಇದನ್ನು ತಪ್ಪಿಸಿಕೊಳ್ಳಬಹುದೆಂಬ ಅವಕಾಶ ಇಲ್ಲಿಲ್ಲ ಎಂಬುದು ಇದರ ಅರ್ಥ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಹೀಗಿರುವಾಗ ಪುಣ್ಯವಶಾತ್ ಪಡೆದಿರುವ ಮಾನವ ಜನ್ಮವನ್ನು ಇರುವವರೆಗೂ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
     ಸಾಯುವುದು ಸುಲಭ, ಬದುಕುವುದು ಕಷ್ಟ. ಸುಲಭವೆಂದು ಸಾಯಲಾಗುವುದೇ? ಕಷ್ಟವಾದರೂ ಬದುಕಬೇಕು. ಬದುಕಬೇಕೆಂಬ ಅದ್ಭುತ ಇಚ್ಛಾಶಕ್ತಿಗೆ ದುರ್ಯೋಧನ ಸಾಕ್ಷಿಯಾಗಿದ್ದಾನೆ. ಅವನ ಕಣ್ಣೆದುರಿಗೇ ಭೀಷ್ಮ, ದ್ರೋಣ ಮೊದಲಾದ ಅತಿರಥ, ಮಹಾರಥರು ಹೋದರು. ಕರ್ಣ ಹೋದ, ಸೋದರರು ಹೋದರು, ಆದರೆ ಅವನಿಗೆ ಇನ್ನೂ ವಿಶ್ವಾಸವಿತ್ತು. ಶಲ್ಯ ಇದ್ದಾನೆ, ತಾನೂ ಇದ್ದೇನೆ. ಯುದ್ಧದಲ್ಲಿ ಗೆಲ್ಲುತ್ತೇನೆ, ಬದುಕುತ್ತೇನೆ ಎಂಬ ವಿಶ್ವಾಸ ಸಾಯುವವರೆಗೂ ಇತ್ತು. ಮನುಷ್ಯ ಕನಸು ಕಾಣುವುದನ್ನು ನಿಲ್ಲಿಸಿದಾಗ ಸಾಯತೊಡಗುತ್ತಾನೆ. ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದಂತೆ, ಆಶಾವಾದವೇ ಜೀವನ, ನಿರಾಶಾವಾದವೇ ಮರಣ. ಪರಮಾತ್ಮ ಯಾವ ಜೀವಿ ಎಷ್ಟು ಬದುಕಬೇಕು, ಎಷ್ಟು ಬಾಳಬೇಕು ಎಂಬುದನ್ನು ನಿರ್ಧರಿಸಿರುತ್ತಾನೆ. ಅದಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ. ಸಾಯಲು ಬಯಸುವ ದುರಾಸೆ ಜೀವಿಯ ಇಚ್ಛಾಶಕ್ತಿಯನ್ನೇ ಹಾಳುಮಾಡುತ್ತದೆ. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿರುವವರ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈಗಲೂ ನೂರು ವರ್ಷಗಳನ್ನು ಮೀರಿ ಜೀವಿಸಿರುವ ಹಲವರು ನಮ್ಮ ನಡುವೆ ಇದ್ದಾರೆ. ಅದಮ್ಯ ಜೀವನೋತ್ಸಾಹದ ಚಿಲುಮೆ, ನಾಲ್ಕು ವೇದಗಳನ್ನು ಸಂಪೂರ್ಣ ಅಧ್ಯಯನ ಮಾಡಿ ಚತುರ‍್ವೇದಿ ಎಂಬ ಸಾರ್ಥಕ ಹೆಸರನ್ನು ಪಡೆದಿರುವ, ವೇದದ ಸಾರ ಮತ್ತು ಉದ್ದೇಶಗಳನ್ನು ಈಗಲೂ ಸಾರುತ್ತಿರುವ, ಬೆಂಗಳೂರಿನ ೧೧೯ ವರ್ಷಗಳ ಅನುಪಮ ಸಾಧಕ ಮಾರ್ಗದರ್ಶಿ ಪಂ. ಸುಧಾಕರ ಚತುರ‍್ವೇದಿಯವರು ಇಚ್ಛಾಶಕ್ತಿಗೆ ಜ್ವಲಂತ ಉದಾಹರಣೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದ, ಅಲ್ಲಿ ಹುತಾತ್ಮರಾದವರ ಸಾಮೂಹಿಕ ಸಂಸ್ಕಾರಕಾರ್ಯದಲ್ಲಿ ಭಾಗಿಯಾಗಿದ್ದ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದು ಸುಮಾರು ೧೪ ವರ್ಷಗಳ ಕಾಲ ಸೆರೆವಾಸ ಕಂಡಿದ್ದ, ಈಗಲೂ ಸತ್ಸಂಗಗಳನ್ನು ನಡೆಸುತ್ತಾ, ರೂಢಿಗತ ಅಂಧ ಸಂಪ್ರದಾಯಗಳನ್ನು ವಿರೋಧಿಸಿ ವೇದದ ಬೆಳಕಿನಲ್ಲಿ ಸತ್ಯಾನ್ವೇಷಣೆಗೆ ಕರೆ ಕೊಡುತ್ತಿರುವ, ನಿಜವಾಗಿ ಬದುಕಲು ಪ್ರೇರಿಸುತ್ತಿರುವ ಅವರ ಬದುಕು ಅನುಸರಣೀಯ. 
     ಎಲ್ಲರೂ ಸಾಯುತ್ತಾರೆ, ಆದರೆ ಎಲ್ಲರೂ ಬದುಕುತ್ತಾರೆಯೇ ಎಂಬುದು ಕೇಳಬೇಕಾದ ಪ್ರಶ್ನೆ. ಬದುಕುವ ರೀತಿಯಲ್ಲಿ ಬದುಕಿದವರು ಸತ್ತ ಮೇಲೂ ಬದುಕಿರುತ್ತಾರೆ. ನೂರಾರು ವರ್ಷಗಳ ನಂತರವೂ, ಇಂದಿಗೂ ನಾವು ನೆನಪಿಸಿಕೊಳ್ಳುವ, ಗೌರವಿಸುವ, ದೇವರಂತೆ ಕಾಣುವ ರಾಮ, ಕೃಷ್ಣ, ವ್ಯಾಸ, ವಾಲ್ಮೀಕಿ, ಶಂಕರಾಚಾರ್ಯ, ವಿವೇಕಾನಂದ, ಬುದ್ಧ, ಬಸವ, ಮುಂತಾದ ನೂರಾರು, ಸಾವಿರಾರು ಮಹಾನ್ ವ್ಯಕ್ತಿಗಳು ಈ ಮಾತಿಗೆ ಪುಷ್ಟಿ ಕೊಡುತ್ತಾರೆ. ಹೇಗೋ ಹುಟ್ಟಿ, ಹೇಗೋ ಬದುಕಿ, ಹೇಗೋ ಕಂತೆ ಒಗೆದು ಹೋಗುವವರ ನೆನಪು ಅವರ ಮಕ್ಕಳು, ಮೊಮ್ಮಕ್ಕಳುಗಳಿಗೇ ಇರುವುದಿಲ್ಲ. ಮಸುಕಾಗಿ ಮರೆಯಾಗುವುದಕ್ಕಿಂತ ಜ್ಯೋತಿಯಾಗಿ ಉರಿದು ನೆನಪು ಉಳಿಸುವುದು ಉತ್ತಮ. ಯೋಗ್ಯವಾಗಿ ಬದುಕಬೇಕೆಂಬ ಮಾರ್ಗದರ್ಶನ ನೀಡುವುದೇ ಸಾವು! ಭಗತ್ ಸಿಂಗ್, ರಾಜಗುರು, ಸುಖದೇವರಂತೆ, ಚಂದ್ರಶೇಖರ ಆಜಾದರಂತೆ ಇನ್ನೊಬ್ಬರ ಬದುಕಿಗಾಗಿ, ಒಳಿತಿಗಾಗಿ ಸಾಯಲು ಸಿದ್ಧರಿರುವವರ, ಸಾಯುವವರ ಬದುಕುಗಳು ಬದುಕಬೇಕಾದ ರೀತಿಗೆ ಉದಾಹರಣೆಗಳು. ಈ ವೇದಮಂತ್ರ ಬದುಕಿನ ರೀತಿಗೆ ಅದ್ಭುತ ಮಾರ್ಗದರ್ಶಿಯಾಗಿದೆ: 'ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಗ್ಂ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಂ ಶತಮದೀನಾ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್ ||'
     ಅರ್ಥ: ಶುಭವ ನೋಡುತಲಿ, ಶುಭವ ಕೇಳುತಲಿ, ಶುಭವ ನುಡಿಯುತಲಿ ನೂರ್ಕಾಲ ಬಾಳೋಣ. ದೈನ್ಯತೆಯಿಲ್ಲದೆ ಸ್ವಾಭಿಮಾನದಿಂದ ಸ್ವತಂತ್ರರಾಗಿ ನೂರ್ಕಾಲ ಬಾಳೋಣ. ನೂರು ವರ್ಷಗಳಿಗಿಂತ ಹೆಚ್ಚಾಗಿಯೂ ಬಾಳಿಕೊಂಡಿರೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 25.04.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:



ಸೋಮವಾರ, ಜುಲೈ 4, 2016

ಹಿಂಸೆಯನ್ನು ಸಹಿಸುವುದು ಅಹಿಂಸೆಯೇ?


     ಒಬ್ಬ ಸಣಕಲ ವ್ಯಕ್ತಿ ಧಡೂತಿ ಪೈಲ್ವಾನನನ್ನು ಕುರಿತು, "ಈ ಸಲ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಮತ್ತೊಮ್ಮೆ ನನ್ನ ತಂಟೆಗೆ ಬಂದರೆ ಹುಷಾರ್" ಎಂದರೆ ಪೈಲ್ವಾನ ನಕ್ಕು ಸುಮ್ಮನಿರುತ್ತಾನೆ ಎಂದಿಟ್ಟುಕೊಳ್ಳಿ. ಈಗ ಅಹಿಂಸಾ ತತ್ವವನ್ನು ಪಾಲಿಸಿದವರು ಯಾರು? ಸಣಕಲನೋ, ಪೈಲ್ವಾನನೋ? ನಿಜವಾಗಿ ಹೇಳಬೇಕೆಂದರೆ ಪೈಲ್ವಾನನೇ ಅಹಿಂಸಾ ತತ್ವ ಪಾಲಿಸಿದವನು. ಏಕೆಂದರೆ ಸಣಕಲನ ಮಾತು ಕೇಳಿ ಆತ ಅವನ ಮುಸುಡಿಯ ಮೇಲೆ ಗುದ್ದಿಬಿಡಬಹುದಿತ್ತು. ಹಾಗೆ ಗುದ್ದಿದರೂ ಸಣಕಲ ತಿರುಗಿ ಏನೂ ಮಾಡುವಂತಿರಲಿಲ್ಲ. ಹಿಂಸೆ ಮಾಡಲು ಅವಕಾಶವಿದ್ದರೂ ಮಾಡದಿರುವುದೇ ನಿಜವಾದ ಅಹಿಂಸೆ. ಜಗತ್ತು ಮತ್ತು ಜೀವಗಳ ಉಗಮ ಕಾಲದಿಂದಲೂ ಹಿಂಸೆ, ಅಹಿಂಸೆಗಳ ತಾಕಲಾಟ ಸಾಗುತ್ತಿದೆ, ಸಾಗುತ್ತಲೇ ಇರುತ್ತದೆ.
     ಅಹಿಂಸೆಯಲ್ಲಿ ಪ್ರೀತಿಯ ತತ್ವವಿದೆ. ಪ್ರೀತಿಯಿರುವಲ್ಲಿ ಅಹಿಂಸೆಯಿರುತ್ತದೆ. ಮಾನವನಂತೆ ವಿವೇಚನಾ ಸಾಮರ್ಥ್ಯವಿಲ್ಲದ ಪ್ರಾಣಿಗಳಲ್ಲೂ ಇದನ್ನು ಗುರುತಿಸಬಹುದು. ತಮ್ಮ ಮರಿ, ಸಮೂಹ, ಕುಟುಂಬಗಳನ್ನು ಪ್ರೀತಿಯಿಂದ ಕಾಣುವ ಅವು ಇತರ ಪ್ರಾಣಿಗಳನ್ನು ಕಂಡಾಗ ಕಾದಾಡುತ್ತವೆ, ಬಲಿ ತೆಗೆದುಕೊಳ್ಳುತ್ತವೆ. ಮಾನವರಲ್ಲೂ ಅಷ್ಟೆ, ತಮ್ಮವರು ಅನ್ನುವವರ ಬಗ್ಗೆ ಕೆಡುಕನ್ನು ಅವರು ಬಯಸುವುದಿಲ್ಲ. ವಿಶಾಲವಾಗಿ ನೋಡುತ್ತಾ ಹೋದರೆ ಅಹಿಂಸೆ ಅನ್ನುವುದು ದೇವರ/ದೇವಮಾನವರ ಗುಣ ಅನ್ನುವುದು ಗೊತ್ತಾಗುತ್ತದೆ. ಅಹಿಂಸೆ ಹೃದಯದಿಂದ ಮೆದುಳಿಗೆ ಮೂಡಿ ಬರುವಂತಹದು. ದೇವರಲ್ಲಿ ಮತ್ತು ಜೀವರಲ್ಲಿ ನಂಬಿಕೆ ಇರುವವರಿಗೆ ಅಹಿಂಸೆ ಅರ್ಥವಾಗುತ್ತದೆ. ಅಹಿಂಸೆ ಮತ್ತು ಸತ್ಯಗಳಲ್ಲಿ ಅವಿನಾಭಾವ ಸಂಬಂಧವಿದೆ.
     ಅಹಿಂಸೆಯ ಮಹತ್ವ ಅರ್ಥವಾಗಬೇಕೆಂದರೆ ಹಿಂಸೆಯ ಪರಿಣಾಮಗಳನ್ನು ತಿಳಿಯಬೇಕು. ಹಿಂಸೆ ಪ್ರತಿಹಿಂಸೆಗೆ ಪ್ರಚೋದಿಸುತ್ತದೆ. ಹಿಂಸೆ, ಮಾನಸಿಕವಿರಬಹುದು, ದೈಹಿಕವಿರಬಹುದು ಅದು ಕೊಟ್ಟವರಿಗೂ, ಪಡೆದವರಿಗೂ ಕೇಡು ಮಾಡದೇ ಇರದು. ಹಿಂಸೆ ಕೊಟ್ಟವರಿಗೆ ತಮಗೆ ಪ್ರತಿಯಾಗಿ ತೊಂದರೆ ಮಾಡಿಯಾರೆಂಬ ಭಯ ಕಾಡುತ್ತಿರುತ್ತದೆ. ಅವರು ವಿಶ್ವಾಸ, ಸ್ನೇಹಗಳನ್ನು ಕಳೆದುಕೊಳ್ಳುತ್ತಾರೆ. ಹಿಂಸೆ ಅನುಭವಿಸಿದವರೂ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಾರೆ. ಹಿಂಸೆ ಕೊಟ್ಟವರು ಬಲಶಾಲಿಯಾಗಿದ್ದರೆ ಹಿಂಸಿಸಲ್ಪಟ್ಟವರು ಅವಮಾನದಿಂದ ಕುದಿಯುತ್ತಾರೆ ಮತ್ತು ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಾರೆ. ಇದರಿಂದಾಗಿ ದೈನಂದಿನ ಚಟುವಟಿಕೆಗಳು ಏರುಪೇರಾಗುತ್ತವೆ. ಮುಂದುವರೆಯುವುದಕ್ಕೆ ಹಿನ್ನಡೆಯಾಗುತ್ತದೆ. ಹಿಂಸೆ ದುರ್ಬಲರ ಮತ್ತು ಪ್ರೀತಿಯಿಂದ ಗೆಲ್ಲಲು ಸಾಧ್ಯವಾಗದ ಹತಾಶ ವ್ಯಕ್ತಿಗಳ ಆಯುಧ. ಭಯಪಡಿಸಿ ಜನರನ್ನು ಆಳುವುದು ಶಾಶ್ವತದ್ದಾಗಿರುವುದಿಲ್ಲ. ಒಮ್ಮೆ ಆ ರೀತಿ ಆಳಿದವರು ದುರ್ಬಲರಾದರೆಂದರೆ ಅವರೂ ಪ್ರತಿಹಿಂಸೆಯ ಬಲಿಪಶುಗಳಾಗುತ್ತಾರೆ. ಸರ್ವಾಧಿಕಾರಿಗಳಾಗಿ ಭಯಪಡಿಸಿ ದೇಶಗಳನ್ನು ಆಳಿದವರು ಕೊನೆಯಲ್ಲಿ ಅಮಾನುಷ ಅಂತ್ಯ ಕಂಡ ಅನೇಕ ಘಟನೆಗಳಿಗೆ ಇತಿಹಾಸ ಸಾಕ್ಷಿಯಾಗಿದೆ. ಅದೇ ನೈಜ ಕಾಳಜಿಯಿಂದ ಆಳಿದವರು ಸೋತಾಗಲೂ ಗೌರವ ಉಳಿಸಿಕೊಂಡಿರುವ ನಿದರ್ಶನಗಳೂ ಕಣ್ಣ ಮುಂದಿವೆ.
     ಅಹಿಂಸೆಯ ಶತ್ರು ಕೋಪ ಮತ್ತು ದುರಭಿಮಾನಗಳು. ಅವು ಅಹಿಂಸೆಯನ್ನು ನುಂಗಿ ನೀರು ಕುಡಿಯುತ್ತವೆ. ಕೋಪ ಮತ್ತು ದುರಭಿಮಾನಗಳು ಸಾಮಾನ್ಯರ ಆಸ್ತಿಗಳು. ಅಸಾಮಾನ್ಯರಷ್ಟೇ ಅವನ್ನು ಗೆಲ್ಲಬಲ್ಲರು. ಹಾಗಾಗಿ ಅಹಿಂಸೆ ಸಾಧಕರ/ಸಜ್ಜನರ ಸ್ವತ್ತು, ಬೆಳವಣಿಗೆಯ ಸಂಕೇತ. ಎಲ್ಲಿಯವರೆಗೆ ಇತರರನ್ನು ಹಿಂಸಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ನಾವು ಅಸುರರಾಗಿರುತ್ತೇವೆ. ಅಹಿಂಸಾತ್ಮಕರಾಗಿರಲು ಹೆಚ್ಚು ಶಕ್ತಿ, ಅಗಾಧ ಮಾನಸಿಕ ಬಲ ಇರಬೇಕಾಗುತ್ತದೆ. ಅಹಿಂಸಾತತ್ವ ಪಾಲಿಸುವವರಿಂದಾಗಿ ಜಗತ್ತು ಸ್ವಲ್ಪವಾದರೂ ಶಾಂತಿಯಿಂದಿದೆ. ಇಲ್ಲವಾದಲ್ಲಿ ಜಗತ್ತು ನಿರಂತರ ರಣಾಂಗಣವಾಗಿರುತ್ತಿತ್ತು!
     ಅಯೋಧ್ಯೆಯ ಜ್ವಲಂತ ಉದಾಹರಣೆಯನ್ನೇ ನೋಡೋಣ. ಅಯೋಧ್ಯೆ, ಮಥುರೆ ಮತ್ತು ವಾರಣಾಸಿಗಳಲ್ಲಿದ್ದ ಹಿಂದೂ ದೇವಾಲಯಗಳನ್ನು ಹಿಂದೊಮ್ಮೆ ಮುಸ್ಲಿಮ್ ಆಕ್ರಮಣಕಾರರು ಕೆಡವಿ ಮಸೀದಿಗಳನ್ನು ಕಟ್ಟಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಿ ಬಾಬರಿ ಮಸೀದಿ ತಲೆಯೆತ್ತಿತ್ತು. ಬಾಬರಿ ಮಸೀದಿ ಸಹ ಹಲವು ವರ್ಷಗಳ ಹಿಂದೆ ಧ್ವಂಸಗೊಂಡಿತು. ವಿವಾದ ಮಾತ್ರ ನಿಲ್ಲದೆ ಮುಂದುವರೆದಿದೆ. ಇತರ ಧರ್ಮ/ಮತ/ವಿಚಾರಗಳ ಬಗೆಗಿನ ಅಹನೆಯೇ ಸಮಸ್ಯೆಯ ಮೂಲವಾಗಿದೆ. ಇದು ನಿಲ್ಲುವುದೆಂದಿಗೆ? ರಾಜಕಾರಣಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಸಮಸ್ಯೆ ಇತ್ಯರ್ಥವಾಗದಿರುವಂತೆ ನೋಡಿಕೊಂಡು ಲಾಭ ಪಡೆಯುವುದಕ್ಕೆ ಮಾತ್ರ ಗಮನ ಹರಿಸುತ್ತಿರುವುದರಿಂದ ಪರಿಹಾರ ಸುಲಭವಲ್ಲ.
     ಅಹಿಂಸಾತತ್ವ ವೈಯಕ್ತಿಕ ಸಾಧನೆಗೆ ಅತ್ಯುನ್ನತ ಸಾಧನ. ಇದನ್ನು ಅಳವಡಿಸಿಕೊಂಡವನು ಅಜಾತಶತ್ರುವೆನಿಸುತ್ತಾನೆ. ಹೆಚ್ಚಿನ ಧರ್ಮ, ಮತಗಳು ಅಹಿಂಸೆಗೆ ಮಹತ್ವ ನೀಡಿವೆ. ಆದರೆ ಆಯಾ ಧರ್ಮದ ತಿರುಳನ್ನು ಸರಿಯಾಗಿ ಗ್ರಹಿಸದ, ತಮ್ಮ ಧರ್ಮ/ಮತವೇ ಶ್ರೇಷ್ಠ ಎಂದು ಭಾವಿಸುವುದರೊಂದಿಗೆ ಇತರ ಧರ್ಮ/ಆದರ್ಶಗಳನ್ನು ದ್ವೇಷಿಸುವ ಮನೋಭಾವದ ಕೆಳಸ್ತರದ ಧರ್ಮಾನುಯಾಯಿಗಳು ಹಿಂಸೆಗೆ ಎಳಸುವುದನ್ನು ಕಾಣುತ್ತಿದ್ದೇವೆ. ಹಿಂದೂ, ಬೌದ್ಧ, ಜೈನ ಧರ್ಮಗಳಲ್ಲಿ ಅಹಿಂಸೆಗೆ ಉನ್ನತ ಸ್ಥಾನ ನೀಡಿವೆ. ಇಸ್ಲಾಮ್ ಮತದಲ್ಲೂ ಅಹಿಂಸೆಗೆ ಪ್ರಾಧಾನ್ಯತೆ ಇದ್ದರೂ, ಇತರ ಧರ್ಮೀಯರ ಕುರಿತ ಅಸಹನೆ ಅಶಾಂತಿಗೆ ಎಡೆ ಮಾಡಿಕೊಟ್ಟಿದೆ. ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್‌ಖಾನರ ಈ ಮಾತು ಮನನೀಯವಾಗಿದೆ: "ಯಾರನ್ನೇ ಆಗಲಿ, ಮಾತಿನಿಂದಾಗಲೀ, ಕೃತಿಯಿಂದಾಗಲೀ ನೋಯಿಸದಿರುವ ಮತ್ತು ದೇವರ ಸೃಷ್ಟಿಯ ಜೀವಗಳ ಅನುಕೂಲ ಮತ್ತು ಸಂತೋಷಕ್ಕಾಗಿ ಶ್ರಮಿಸುವ ಮನುಷ್ಯನೇ ಮುಸ್ಲಿಮ. ಸಹಮನುಷ್ಯರನ್ನು ಪ್ರೀತಿಸುವುದೇ ದೇವರ ಮೇಲಿನ ನಂಬಿಕೆ". ಇದನ್ನು ಅನುಸರಿಸಿದರೆ ಸಮಸ್ಯೆ ಎಲ್ಲಿ ಬಂದೀತು? ಆದರೆ . . .?
     ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟಗಳು ಉಲ್ಲೇಖನೀಯವಾಗಿವೆ. ಅಹಿಂಸಾತ್ಮಕ ಹೋರಾಟಗಳನ್ನು ನ್ಯಾಯ, ನೀತಿ, ಮೌಲ್ಯಗಳಿಗೆ ಬೆಲೆ ಕೊಡುವಂತಹವರು ಮಾತ್ರ ಪರಿಗಣಿಸಿಯಾರು. ಕುಟಿಲತೆ, ಕುತಂತ್ರಗಳಿಗೆ ಹೆಸರಾದ ಬ್ರಿಟಿಷರು ಅಹಿಂಸಾತ್ಮಕ ಹೋರಾಟಕ್ಕೆ ಹೆದರಿ ಕಾಲ್ಕಿತ್ತರು ಎಂದು ಹೇಳುವುದು ಸ್ವಾತಂತ್ರ್ಯ ಹೋರಾಟಕ್ಕೆ ಮಾಡುವ ಅಪಚಾರ.  ಅವರು ಅಹಿಂಸೆಗೆ ಬೆಲೆ ಕೊಡುವವರಾಗಿದ್ದರೆ ಜಲಿಯನ್‌ವಾಲಾಬಾಗಿನಲ್ಲಿ ಅಹಿಂಸಾತ್ಮಕವಾಗಿ ನಡೆಸಲಾಗುತ್ತಿದ್ದ ಸಭೆಯನ್ನು ಸುತ್ತುವರೆದು ನಿರ್ದಯವಾಗಿ ಗುಂಡಿನ ಸರಿಮಳೆಗೈದು ಮಕ್ಕಳು, ಮುದುಕರೆನ್ನದೆ ಸಾವಿರಾರು ಭಾರತೀಯರನ್ನು ಹತ್ಯೆ ಮಾಡುತ್ತಿರಲಿಲ್ಲ. ಗಂಡುಗಲಿಗಳಾದ ಸುಭಾಷಚಂದ್ರ ಬೋಸ್, ಚಂದ್ರಶೇಖರ ಆಜಾದ್, ಭಗತ್‌ಸಿಂಗ್, ಸಾವರ್ಕರ್, ವಾಸುದೇವ ಬಲವಂತ ಫಡಕೆ, ಶಿವಾಜಿ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೊಂಡಿಯವಾಘನಂತಹ ಅಸಂಖ್ಯ ವೀರ ಶೂರರ ಕೆಚ್ಚೆದೆಯ ಹೋರಾಟಗಳು, ಬಲಿದಾನಗಳನ್ನು ಕಡೆಗಣಿಸಿದರೆ ದ್ರೋಹವಾಗುತ್ತದೆ. ಇಂತಹವರನ್ನು ಎದುರಿಸಿ ಹಣ್ಣಾಗಿದ್ದ, ಎರಡನೆಯ ವಿಶ್ವಯುದ್ಧದ ಪರಿಣಾಮಗಳನ್ನು ಎದುರಿಸಬೇಕಾಗಿದ್ದ ಸಂದರ್ಭದಲ್ಲಿ ಈ ಸತ್ಯಾಗ್ರಹಗಳೂ ಸೇರಿಕೊಂಡು ಬ್ರಿಟಿಷರು ದೇಶ ಬಿಟ್ಟು ಹೊರಡಬೇಕಾಯಿತು. ಇಂದು ಗಾಂಧಿಯ ಅನುಯಾಯಿಗಳೆಂದು ಹೇಳಿಕೊಳ್ಳುತ್ತಿರುವವರು ಮೇಲೆ ಹೆಸರಿಸಿದಂತಹ ದೇಶಪ್ರೇಮಿಗಳನ್ನು ಕಡೆಗಣಿಸುತ್ತಿರುವುದು ನಿಜಕ್ಕೂ ಅಕ್ಷಮ್ಯ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಶತ್ರುಗಳ ವಿರುದ್ಧ ತಕ್ಕ ರೀತಿಯಲ್ಲಿ ವರ್ತಿಸಬೇಕಾಗುತ್ತದೆ. ನೆರೆ ದೇಶ ನಮ್ಮ ಸೈನಿಕರ ರುಂಡಗಳನ್ನು ಕಡಿದು ಚೆಲ್ಲುವಾಗ, ಅಹಿಂಸೆಯ ಮಂತ್ರ ಜಪಿಸಿದರೆ ಅದು ಹೇಡಿತನವೆನಿಸುತ್ತದೆ.
     ಇಂದು ಆಡಳಿತದಲ್ಲಿ ಇರುವ ಹೆಚ್ಚಿನ ಜನಪ್ರತಿನಿಧಿಗಳಾದರೂ ಎಂತಹವರು? ಕೋಟಿ ಕೋಟಿ ಹಣವನ್ನು ಅಕ್ರಮ ರೀತಿಯಲ್ಲಿ ಸಂಗ್ರಹಿಸಿದವರು, ದೇಶದ ಸಂಪತ್ತನ್ನು ಲೂಟಿ ಮಾಡಿದವರು, ಭೂಗತ ದೊರೆಗಳು/ಅವರ ಕೃಪಾಪೋಷಿತರು. ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಕರಿ ಕಾರ್ಮೋಡದಲ್ಲಿನ ಬೆಳ್ಳಿಮಿಂಚಿನಂತೆ ಸಜ್ಜನ ರಾಜಕಾರಣಿಗಳೂ ಇದ್ದರೂ, ಅವರು ಮೂಲೆಗೆ ಒತ್ತರಿಸಲ್ಪಟ್ಟಿದ್ದಾರೆ. ಇಂತಹ ಬಲಾಢ್ಯರುಗಳು ಎಂತಹ ಪ್ರಬಲ ಜನಹೋರಾಟವನ್ನೂ ಹತ್ತಿಕ್ಕುವ ಸಾಮರ್ಥ್ಯ ಹೊಂದಿದ್ದಾರೆ. ಸಿ.ಬಿ.ಐ., ಪೋಲಿಸ್, ಅಧಿಕಾರಿಗಳನ್ನು ದಾಳಗಳಾಗಿ ಬಳಸಿಕೊಂಡು ವಿರೋಧಿಗಳನ್ನು ಹತ್ತಿಕ್ಕುತ್ತಾರೆ, ಸಾಧ್ಯವಾದರೆ ಕೊಂಡುಕೊಂಡೂಬಿಡುತ್ತಾರೆ. ಭಂಡತನವನ್ನು ಎಗ್ಗಿಲ್ಲದೆ ಪ್ರದರ್ಶಿಸಿ ತಮ್ಮ ವಿರುದ್ಧ ಯಾರಾದರೂ ಮಾತನಾಡಿದರೆ ಹುಷಾರ್ ಎಂಬ ಸಂದೇಶವನ್ನು ರವಾನಿಸುತ್ತಾರೆ. ಸಾಮಾನ್ಯ ಜನರು ಹೋರಾಡುವುದಿರಲಿ, ಮಾತನಾಡಲೂ ಹಿಂಜರಿಯುವ ಪರಿಸ್ಥಿತಿ ಇದೆ. ಇದನ್ನು ಅಹಿಂಸಾ ಮಾರ್ಗದಿಂದ ಸರಿದಾರಿಗೆ ತರಬಹುದೆ? ಹಾಗೆಂದು ಹಿಂಸಾಮಾರ್ಗದಿಂದಲೂ ಪರಿಹಾರ ಸಾಧ್ಯವಿಲ್ಲ. ಹಿಂಸಾಮಾರ್ಗದಿಂದ ಬದಲಾವಣೆ ತರಬಯಸುವ ನಕ್ಸಲರು, ಕಮ್ಯೂನಿಸ್ಟರು ಜನರಿಂದಲೂ ದೂರವಾಗುವುದಲ್ಲದೆ, ಇತರರ ಪ್ರಾಣಹರಣದ ಜೊತೆಗೆ ತಮ್ಮ ಜೀವಗಳನ್ನೂ ಪಣಕ್ಕಿಡಬೇಕಾಗುತ್ತದೆ. ಜನರಿಂದ ಸ್ವತಃ ದೂರವಾಗಿ, ತಾವೂ ಒಂದೊಮ್ಮೆ ಹತರಾಗಿ ಸಾಧಿಸುವುದಾದರೂ ಏನನ್ನು?
     ಮಾರ್ಟಿನ್ ಲೂಥರ್ ಕಿಂಗ್ ಹೇಳುತ್ತಾರೆ: "ಹಿಂಸೆಯಿಂದ ವರ್ಣಭೇದವನ್ನು ಹತ್ತಿಕ್ಕುವುದು ಅವ್ಯವಹಾರಿಕ ಮತ್ತು ಅನೈತಿಕ. ಅದು ಅನುಭವಿಸಿದವರಲ್ಲಿ ಕಹಿಯನ್ನು, ನಾಶ ಮಾಡುವವರಲ್ಲಿ ಕ್ರೂರತೆಯನ್ನು ಉಂಟುಮಾಡುತ್ತದೆ".  ಇದನ್ನು ಒಪ್ಪದ ಜಾರ್ಜ್ ಜಾಕ್ಸನ್ ಹೇಳುತ್ತಾರೆ: "ಅಹಿಂಸಾ ವಿಧಾನ ಒಂದು ಸುಳ್ಳು ಆದರ್ಶ. ಅದು ವಿರೋಧಿಗಳು ನ್ಯಾಯ, ನೀತಿಗಳನ್ನು ಮಾನ್ಯ ಮಾಡುವರೆಂದು ಆಶಿಸುತ್ತದೆ. ಅವರು ಅಂತಹ ಮನೋಭಾವದವರಾಗಿರದಿದ್ದರೆ ಮತ್ತು ನ್ಯಾಯ, ನೀತಿ, ಧರ್ಮ ಪಾಲಿಸಿದರೆ ಪ್ರಯೋಜನವಿಲ್ಲವೆಂದಾದರೆ, ಅವರ ಪ್ರತಿಕ್ರಿಯೆ ಸಕಾರಾತ್ಮಕವಾಗಿರುವುದಿಲ್ಲ". ಎರಡೂ ಹೇಳಿಕೆಗಳು ಪರಸ್ಪರ ವಿರುದ್ಧವಾಗಿದ್ದರೂ ಎರಡರಲ್ಲೂ ಸತ್ಯಾಂಶವಿದೆ. ಹಾಗಾದರೆ ಏನು ಮಾಡಬೇಕು? ಮಧ್ಯಮ ಮಾರ್ಗ ಅತ್ಯುತ್ತಮವಾಗಿದೆ. ಜಾಣನಿಗೆ ಮಾತಿನ ಪೆಟ್ಟಾದರೆ ಕೋಣನಿಗೆ ದೊಣ್ಣೆಯ ಪೆಟ್ಟೇ ಬೀಳಬೇಕು. ಸಮಯ, ಸಂದರ್ಭ, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸುವುದೇ ಒಳ್ಳೆಯದು. ಅಹಿಂಸೆ ಸಮಸ್ಯೆಯನ್ನು ಇತ್ಯರ್ಥಪಡಿಸದೆ ಕೇವಲ ಮುಂದೂಡುವದಕ್ಕಾಗಿ ಬಳಸುವ ಅಸ್ತ್ರವಾದರೆ, ವೈಯಕ್ತಿಕವಾಗಿ ನಾನು ಅಂತಹ ಸಂದರ್ಭದಲ್ಲಿ ಹಿಂಸೆಯನ್ನು ಬೆಂಬಲಿಸುತ್ತೇನೆ. ಭ್ರಷ್ಠರನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಪ್ರಶ್ನಿಸುವ ಎದೆಗಾರಿಕೆಯನ್ನು ಜನರು ಬೆಳೆಸಿಕೊಳ್ಳಬೇಕಿದೆ. ಇಂತಹ ಕೆಲಸ ಮಾಡುವವರನ್ನು ಇದೆಲ್ಲಾ ನಮಗೇಕೆ ಎಂದು ಸುಮ್ಮನಿರದೆ ಬೆಂಬಲಿಸುವ ಕನಿಷ್ಠ ಕಾರ್ಯವನ್ನಾದರೂ ನಾವು ಮಾಡಬೇಕಿದೆ. ದುಷ್ಟರು, ಭ್ರಷ್ಠರು ಪೆಟ್ಟು ತಿನ್ನುವ ಸಂದರ್ಭದಲ್ಲಿ ಸಜ್ಜನರೆನಿಸಿಕೊಂಡವರೂ ಮೂಕಪ್ರೇಕ್ಷಕರಾಗಿರದೆ ತಮ್ಮ ಪಾಲಿನ ಪೆಟ್ಟನ್ನೂ ಕೊಡಲು ಹಿಂಜರಿಯಬಾರದು. ಅಹಿಂಸೆ ಅತ್ಯುತ್ತಮವಾದ ಜೀವನವಿಧಾನ. ಆದರೆ, ಅದನ್ನು ಭಂಡರು, ನೀಚರು, ಸ್ವಾರ್ಥಿಗಳ ವಿರುದ್ಧ ಬಳಸುವುದು ಕಷ್ಟ. ಅವರಿಗೆ ಅವರ ರೀತಿಯಲ್ಲೇ ಉತ್ತರಿಸಬೇಕಾಗುತ್ತದೆ. ಕೃಷ್ಣನಂತಹ ಶ್ರೇಷ್ಠ ರಾಜನೀತಿಜ್ಞ, ಚಾಣಕ್ಯನಂತಹ ಮೇಧಾವಿಗಳು ಬೋಧಿಸಿರುವುದು ಇದನ್ನೇ. ಅಹಿಂಸಾಮಾರ್ಗ ನಮ್ಮ ಜೀವನವಿಧಾನವಾಗಲಿ. ಆದರೆ ಹಿಂಸೆಯನ್ನು ವಿನಾಕಾರಣ ಸಹಿಸದಿರುವ ಮನೋಭಾವವೂ ನಮ್ಮದಿರಲಿ.
-ಕ.ವೆಂ. ನಾಗರಾಜ್.
***************
ದಿನಾಂಕ 11.04.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಜೂನ್ 30, 2016

ದಕ್ಷ ಆಡಳಿತಗಾರನ ಲಕ್ಷಣ


     ರಾಜಕೀಯ ಕಾರಣಕ್ಕೋ, ಯಾವುದೋ ಕ್ಷುಲ್ಲಕ ಕಾರಣಕ್ಕೋ ದಕ್ಷ ಅಧಿಕಾರಿಯೊಬ್ಬನ ಅಕಾಲಿಕ ವರ್ಗಾವಣೆಯಾದರೆ ಜನರು ಪ್ರತಿಭಟಿಸುವುದುಂಟು. ಇದು ಎರಡು ಸಂಗತಿಗಳನ್ನು ಸೂಚಿಸುತ್ತವೆ- ಒಂದು, ದಕ್ಷ ಮತ್ತು ಜನಪರ ಅಧಿಕಾರಿಗಳನ್ನು ಜನರು ಇಷ್ಟಪಡುತ್ತಾರೆ ಮತ್ತು ಇನ್ನೊಂದು, ದಕ್ಷತೆ ಸ್ವಾರ್ಥಪರ ಹಿತಾಸಕ್ತಿಗಳಿಗೆ ಕಂಟಕವಾಗಿರುತ್ತದೆ. ಕಾನೂನು, ಕಾಯದೆಗಳನ್ನು ಎಲ್ಲಾ ಸಮಯಕ್ಕೂ, ಎಲ್ಲಾ ಸಂದರ್ಭಗಳಿಗೂ ಒಂದೇ ರೀತಿಯಲ್ಲಿ ಅನ್ವಯಿಸಬಾರದು ಮತ್ತು ಇವುಗಳನ್ನು ಜನರ ಹಿತಕ್ಕೆ ಅನುಕೂಲವಾಗುವಂತೆ ಹೇಗೆ ಬಳಸಬಹುದು ಎಂದು ದಕ್ಷ ಆಡಳಿತಗಾರ ಅರಿತಿರುತ್ತಾನೆ. ಇದೇ ಅವನ ಯಶಸ್ಸಿನ ಮೂಲಮಂತ್ರ.  ಇಂದಿನ ವ್ಯವಸ್ಥೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದನ್ನೂ ಮೀರಿ ನಿಲ್ಲಬಲ್ಲ ಅಧಿಕಾರಿಯನ್ನು ಮಹಾನ್ ಎನ್ನಲೇಬೇಕಾಗುತ್ತದೆ. ಒಬ್ಬ ಅಧಿಕಾರಿ ದಕ್ಷ ಎನಿಸಿಕೊಳ್ಳಬೇಕಾದರೆ ಏನೆಲ್ಲಾ ಗುಣಗಳು ಇರಬೇಕು ಎಂಬ ಬಗ್ಗೆ ನೋಡೋಣ.
೧. ತಾಂತ್ರಿಕ ನೈಪುಣ್ಯ:
     ಇಂದಿನ ಕಂಪ್ಯೂಟರ್ ಜಗತ್ತಿನಲ್ಲಿ ಅತ್ಯಾಧುನಿಕ ಸಂಪರ್ಕ ಮತ್ತು ಸಂವಹನ ಸಾಧನಗಳಲ್ಲಿ ಅವನು ನೈಪುಣ್ಯತೆ ಹೊಂದಿರಬೇಕಾಗುತ್ತದೆ. ಅಧೀನ ಸಿಬ್ಬಂದಿಯ ಕಾರ್ಯಕ್ಷಮತೆ, ಚಲನವಲನಗಳ ಮೇಲೆ ಗಮನ, ಕಡತಗಳ ಶೀಘ್ರ ವಿಲೇವಾರಿ, ಚರ್ಚೆ ಹಾಗೂ ಅಗತ್ಯ ಸಲಹೆ, ಸೂಚನೆಗಳನ್ನು ನೀಡುವುದು, ಸಾರ್ವಜನಿಕರೊಡನೆ ಸಂಪರ್ಕ, ಇತ್ಯಾದಿಗಳ ವಿಚಾರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಸಮರ್ಥವಾಗಿ ಮಾಡಿಕೊಳ್ಳುವವನಾಗಿರಬೇಕು. ಮೇಲಾಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ, ವರದಿ ನೀಡಿಕೆ, ಇತ್ಯಾದಿಗಳ ಸಲುವಾಗಿ ಸಹ ಇದನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳಬೇಕು.
೨. ಸ್ಥಳೀಯ ಸಮಸ್ಯೆಗಳ ಅರಿವು:
     ಒಂದೊಂದು ಪ್ರದೇಶಕ್ಕೂ ತನ್ನದೇ ಆದ ಗುಣ-ಲಕ್ಷಣಗಳು, ರೀತಿ-ನೀತಿಗಳು, ಸಮಸ್ಯೆಗಳು ಇರುತ್ತವೆ. ಅವುಗಳ ಕುರಿತು ಅಧ್ಯಯನ ಮತ್ತು ಮಾಹಿತಿಗಳನ್ನು ಹೊಂದಿರಬೇಕು. ಸಮಸ್ಯೆಗಳ ಪರಿಹಾರಕ್ಕೆ ಏನು ಮಾಡಬಹುದೆಂಬ ಬಗ್ಗೆಯೂ ಚಿಂತಿಸಬೇಕು ಮತ್ತು ಪರಿಹಾರಕ್ಕೆ ತೊಡಗಬೇಕು.
೩. ಸಂಘಟನಾ ಚತುರತೆ:
     ಅಧೀನ ಅಧಿಕಾರಿಗಳು, ಸಿಬ್ಬಂದಿಗಳನ್ನು ಒಂದು ತಂಡದಂತೆ ಮುನ್ನಡೆಸಬಲ್ಲ ಚಾಕಚಕ್ಯತೆ ಹೊಂದಿರಬೇಕು. ಮುಂಚೂಣಿಯಲ್ಲಿ ತಾನೇ ಇದ್ದು ಅಗತ್ಯದ ನಿರ್ದೇಶನ ನೀಡುತ್ತಾ ಸಿಬ್ಬಂದಿಯಿಂದ ಕೆಲಸ ಮಾಡಿಸುವವನಾಗಿರಬೇಕು. ಯಾವುದೇ ಕೆಲಸ ಸಣ್ಣದಲ್ಲವೆಂಬ ಅರಿವಿರಬೇಕು. ಸಣ್ಣ ಸಂಗತಿಗಳಿಗೂ ಗಮನ ಕೊಡಬೇಕು. ಹುರಿದುಂಬಿಸುವ, ಸಂದರ್ಭಗಳಲ್ಲಿ ಶಿಕ್ಷಿಸುವ ಮನೋಭಾವವಿರಬೇಕು. ತಂಡದಲ್ಲಿ ಸಮನ್ವಯತೆ ಇರುವಂತೆ ನೋಡಿಕೊಂಡು ದುರ್ಬಲ ಕೊಂಡಿಗಳನ್ನು ಬಲಗೊಳಿಸಬಲ್ಲವನಾಗಿರಬೇಕು. ಎಲ್ಲರೊಡನೆ ಸ್ನೇಹಿತನಂತೆ ವರ್ತಿಸಬೇಕು.
೪. ಸಮಯಪಾಲನೆ:
     ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮುಗಿಸುವಂತೆ ನೋಡಿಕೊಳ್ಳುವವನಾಗಿರಬೇಕು. ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವಂತೆ ಮತ್ತು ಕೆಲಸಗಳಲ್ಲಿ ತೊಡಗಿರುವಂತೆ ಸೂಕ್ತ ವ್ಯವಸ್ಥೆ ರೂಪಿಸಬೇಕು. ತಪ್ಪು ಮಾಡಿದರೆ ದಂಡ ತಪ್ಪಿದ್ದಲ್ಲ ಎಂದು ಸಿಬ್ಬಂದಿ ಅರಿಯುವಂತೆ ಮಾಡಬೇಕು.
೫. ದೂರದೃಷ್ಟಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಚಾಕಚಕ್ಯತೆ:
     ಮುಂದಿನ ಆಗು-ಹೋಗುಗಳನ್ನು ಗಮನಿಸುತ್ತಿದ್ದು ಸಂಭಾವ್ಯ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಯೋಜಿಸಿದ್ದರೆ ಸಮಸ್ಯೆಗಳ ಪರಿಹಾರ ಅರ್ಧಕ್ಕರ್ಧ ಆದಂತೆಯೇ ಸರಿ. ಕೆಲವೊಮ್ಮೆ ಅನಿರೀಕ್ಷಿತವಾಗಿ ಹಲವು ಸಮಸ್ಯೆಗಳು ಒಟ್ಟೊಟ್ಟಿಗೇ ಬಂದುಬಿಡಬಹುದು. ಆಗ ಸಮಚಿತ್ತದಿಂದ ಧೃಢತೆ ಕಾಯ್ದುಕೊಂಡು ವರ್ತಿಸಿದರೆ ಸಿಬ್ಬಂದಿ ಮತ್ತು ಜನರು ಸಹಾಯಕ್ಕೆ ನಿಲ್ಲುತ್ತಾರೆ. ಸಮಸ್ಯೆಗಳು ಎದುರಾದಾಗ ತಪ್ಪಿಸಿಕೊಂಡು ದೂರವಿರುವ ಪ್ರಯತ್ನ ಮಾಡದೆ ಸಮಸ್ಯೆಯ ಎದುರಿಗೇ ನಿಲ್ಲುವ ಮನೋಭಾವವಿರಬೇಕು. ದೂರ ಹೋದಷ್ಟೂ ಸಮಸ್ಯೆಗಳು ಭೂತಾಕಾರವಾಗಿ ಬೆಳೆದು ಬೆದರಿಸುತ್ತವೆ. ಹತ್ತಿರವಿದ್ದರೆ ಸಮಸ್ಯೆಗಳು ಸಣ್ಣದಾಗುತ್ತಾ ಹೋಗುತ್ತವೆ. ಸ್ವಂತದ ಅನುಭವವನ್ನು ಹಂಚಿಕೊಳ್ಳಬೇಕೆನಿಸುತ್ತಿದೆ. ಒಂದು ದಿನ ಒಬ್ಬ ರೌಡಿಯನ್ನು ಬೈಕಿನಲ್ಲಿ ಹೋಗುತ್ತಿದ್ದಾಗ ಅಡಗಟ್ಟಿ ಕೊಚ್ಚಿ ಕೊಲೆ ಮಾಡಿದ್ದರು. ಸರ್ಕಾರಿ ಭೂಮಿ ಒತ್ತುವರಿ ವಿಚಾರದಲ್ಲಿ ಎರಡು ಗುಂಪುಗಳ ನಡುವಣ ವೈಷಮ್ಯ ಕೊಲೆಗೆ ಕಾರಣವಾಗಿತ್ತು. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಇತ್ತು. ಶಂಕಿತ ಒಬ್ಬಿಬ್ಬರ ಬಂಧನವಾಗಿತ್ತು. ಪೋಲಿಸರು ಎರಡು ಗುಂಪುಗಳ ವಿರುದ್ಧ ಸೆ. ೧೦೭ರಂತೆ ಮೊಕದ್ದಮೆಯನ್ನು ನನ್ನ ನ್ಯಾಯಾಲಯದಲ್ಲಿ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದರು. ಸ್ಥಳೀಯ ಗ್ರಾಮಲೆಕ್ಕಿಗರನ್ನು ಕರೆಸಿ ಮಾಹಿತಿ ಸಂಗ್ರಹಿಸಿದೆ. ಅಂದು ಸಂಜೆ ೬ ಗಂಟೆಯ ವೇಳೆಗೆ ರೆವಿನ್ಯೂ ಇನ್ಸ್‌ಪೆಕ್ಟರರನ್ನು ಕರೆದುಕೊಂಡು ಗ್ರಾಮಕ್ಕೆ ಹೊರಟೆ. ರೆವಿನ್ಯೂ ಇನ್ಸ್‌ಪೆಕ್ಟರ್, ಸಾಯಂಕಾಲದ ವೇಳೆಯಲ್ಲಿ ಹೆಚ್ಚಿನವರು ಕುಡಿದ ಮತ್ತಿನಲ್ಲಿದ್ದು ಸಾಮಾನ್ಯವಾಗಿ ಯಾವ ಅಧಿಕಾರಿಗಳೂ ಅಲ್ಲಿಗೆ ಆ ಸಮಯದಲ್ಲಿ ಹೋಗುವುದಿಲ್ಲ, ಹೋಗುವುದೇ ಆದರೆ ಪೋಲಿಸರನ್ನೂ ಕರೆದುಕೊಂಡು ಹೋಗೋಣ ಎಂದು ಅಳುಕುತ್ತಾ ಹೇಳಿದ್ದ. ನಾನು ಧೈರ್ಯ ಹೇಳಿ ಗ್ರಾಮಕ್ಕೆ ಹೊರಟೆ. ನನ್ನನ್ನು ಆ ಸಮಯದಲ್ಲಿ ನಿರೀಕ್ಷಿಸಿರದಿದ್ದ ಗ್ರಾಮಸ್ಥರು ಮನೆಯೊಳಗೆ ಸೇರಿಕೊಂಡರು. ಯಾರೂ ಹೊರಬರಲಿಲ್ಲ. ಅಲ್ಲಿನ ದೇವಸ್ಥಾನದ ಜಗಲಿಯ ಮೇಲೆ ಕುಳಿತು ಇದ್ದ ಒಬ್ಬಿಬ್ಬರ ಜೊತೆ ಕುಶಲೋಪರಿ ಮಾತನಾಡುತ್ತಿದ್ದೆ. ಇಣಿಕಿ ನೋಡುತ್ತಿದ್ದ ಜನರು ಕ್ರಮೇಣ ಒಬ್ಬೊಬ್ಬರಾಗಿ ಬರತೊಡಗಿದರು. ಹೆಚ್ಚಿನವರಿಗೆ ನಾನು ಏನು ಮಾಡುತ್ತೇನೆಂದು ತಿಳಿದುಕೊಳ್ಳುವ ಕುತೂಹಲವಿತ್ತು. ಅವರೊಡನೆ ಮಳೆ, ಬೆಳೆ ಇತ್ಯಾದಿಗಳ ಬಗ್ಗೆ ಮಾತನಾಡುತ್ತ ಸ್ವಲ್ಪ ಸಮಯ ಕಳೆಯಿತು. ಬಂದಿದ್ದವರಲ್ಲಿ ಎರಡು ಗುಂಪಿಗೂ ಸೇರಿದ ಕೆಲವರು ಇದ್ದುದು ಅವರುಗಳು ಪ್ರತ್ಯೇಕ ಗುಂಪುಗಳಲ್ಲಿ ಇದ್ದುದರಿಂದ ಗೊತ್ತಾಯಿತು. ಎಲ್ಲರನ್ನೂ ಕುಳಿತುಕೊಳ್ಳಲು ಹೇಳಿ ನೇರ ವಿಷಯಕ್ಕೆ ಬಂದೆ. ನನಗೆ ಎಲ್ಲಾ ಗೊತ್ತಾಗಿದೆ. ಅಪರಾಧ ನಡೆಯುವ ಮುನ್ನ ತಡೆಯುವ ಹೊಣೆಗಾರಿಕೆ ನನ್ನದಿದೆ. ಅಪರಾಧ ನಡೆದುಹೋದರೆ ಪೋಲಿಸು, ಕೋರ್ಟು ನೋಡಿಕೊಳ್ಳುತ್ತದೆ. ನಿಮ್ಮಲ್ಲಿ ಯಾರು ಯಾರು ಜಗಳಕ್ಕೆ ಕುಮ್ಮಕ್ಕು ಕೊಡುತ್ತಿದ್ದೀರಿ ನನಗೆ ಗೊತ್ತು. ನಿಮ್ಮಲ್ಲಿ ಎರಡು ಗುಂಪನ್ನೂ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಲು ನನ್ನ ಮುಂದೆ ಸೆ. ೧೦೭ ಕೇಸ್ ಬಂದಿದೆ. ಮುಚ್ಚಳಿಕೆ ಬರೆದುಕೊಡಬೇಕು, ಇಲ್ಲಾ ಜೈಲಿಗೆ ಹೋಗಬೇಕು.  ನೀವೇ ನಿರ್ಧರಿಸಿ ನಾಳೆ ತಿಳಿಸಿ. ಒಮ್ಮೆ ಪಟ್ಟಿಗೆ ಸೇರಿದರೆ ಮುಂದೆ ಯಾವ ಜಗಳ ಆದರೂ ನೀವು ಒಳಗೆ ಹೋಗಬೇಕಾಗುತ್ತದೆ. ನಾನು ಯಾರ ಮುಲಾಜೂ ಇಟ್ಟುಕೊಳ್ಳುವುದಿಲ್ಲ. ಸಂದರ್ಭ ಬಂದರೆ ನನ್ನಷ್ಟು ಕೆಟ್ಟವನು ಯಾರೂ ಇರುವುದಿಲ್ಲ ಎಂದು ಗಂಭೀರವಾಗಿ ಧೃಢವಾಗಿ ಹೇಳಿದಾಗ ಯಾರೂ ತುಟಿಪಿಟಕ್ಕೆಂದಿರಲಿಲ್ಲ. ನನಗೆ ಮೌನ ಸಮ್ಮತಿ ಸಿಕ್ಕಿತ್ತು. ನಾನು ಕೇಸ್ ಮುಂದುವರೆಸದೆ ಮುಕ್ತಾಯಗೊಳಿಸಿದೆ. ನಡೆಸಿದ್ದರೆ ಕಹಿ ವಾತಾವರಣ ಮುಂದುವರೆಯುತ್ತಿತ್ತು. ನಂತರದಲ್ಲಿ ನಿರೀಕ್ಷಿಸಿದ್ದಂತೆ ಸಂಘರ್ಷ ನಡೆಯಲಿಲ್ಲ. ಬಹುಷಃ ಮುನ್ನೆಚ್ಚರಿಕೆ ಕೊಡದೆ ಇದ್ದಿದ್ದರೆ ದೊಡ್ಡ ಹೊಡೆದಾಟವೇ ಆಗುತ್ತಿತ್ತು.
೬. ತುರ್ತು ಮಾಹಿತಿ ಪಡೆಯುವ ವ್ಯವಸ್ಥೆ:
     ಕಾರ್ಯವ್ಯಾಪ್ತಿಯಲ್ಲಿ ಏನೇ ವಿಶೇಷ ಜರುಗಿದರೂ, ಜರುಗುವ ಸಂಭವವಿದ್ದರೂ ಕೂಡಲೇ ಅಧೀನ ಸಿಬ್ಬಂದಿ ದೂರವಾಣಿ ಮೂಲಕ ಮಾಹಿತಿ ಕೊಡುವಂತೆ ನೆಟ್ ವರ್ಕ್ ಇಟ್ಟುಕೊಂಡರೆ ಅದನ್ನು ಆಧರಿಸಿ ಕ್ರಮ ಅನುಸರಿಸುವುದು ಸುಲಭವಾಗುತ್ತದೆ. ನನ್ನ ಅನುಭವದಲ್ಲಿ ಹೇಳಬೇಕೆಂದರೆ ಅಧೀನ ಸಿಬ್ಬಂದಿಯಲ್ಲದೆ ಗ್ರಾಮಗಳ ಕೆಲವು ಜನರಿಗೂ ಸಹ ಈ ಬಗ್ಗೆ ತಿಳುವಳಿಕೆ ನೀಡಿ ಮಾಹಿತಿ ಪಡೆಯುವ ವ್ಯವಸ್ಥೆ ಪರಿಣಾಮಕಾರಿಯಾಗಿರುತ್ತದೆ. ನಿವೃತ್ತನಾದ ನಂತರದಲ್ಲೂ ಎರಡು ವರ್ಷಗಳವರೆಗೂ ಕೆಲವರಿಂದ ನನಗೆ ದೂರವಾಣಿ ಕರೆಗಳು ಬರುತ್ತಿದ್ದವು. ಅವು ಹೀಗಿರುತ್ತಿದ್ದವು, ಸಾರ್, ಸಿಡಿಲು ಹೊಡೆದು ರಾಮಯ್ಯನ ಎಮ್ಮೆ ಸತ್ತು ಹೋಯಿತು, ನಾಳೆ ಗ್ರಾಮದೇವತೆ ಪೂಜೆ ಇದೆ. ಮೊದಲ ಪೂಜೆ ಮಾಡುವ ಬಗ್ಗೆ ಜಗಳ ಆಗ್ತಾ ಇದೆ. ಹೊಡೆದಾಟ ಆಗಬಹುದು ಸಾರ್. ನನಗೆ ಹೆಮ್ಮೆ ಅನಿಸುತ್ತಿತ್ತು. ಅವರುಗಳಿಗೆ ಧನ್ಯವಾದ ಹೇಳಿ ಹೊಸ ತಹಸೀಲ್ದಾರರಿಗೆ ಫೋನು ಮಾಡಲು ಹೇಳುತ್ತಿದ್ದೆ.
೭. ಉತ್ತಮ ಸಂಪರ್ಕ ಮತ್ತು ಸಮನ್ವಯ:
     ಮೇಲಾಧಿಕಾರಿಗಳು, ಅಧೀನ ಸಿಬ್ಬಂದಿ, ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು, ಇತರ ಇಲಾಖೆಗಳ ಅಧಿಕಾರಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರೊಡನೆ ಉತ್ತಮ ರೀತಿಯ ಸಂಬಂಧಗಳನ್ನು ಹೊಂದಿರುವವನು ಉತ್ತಮ ಆಡಳಿತಗಾರನೆನಿಸುತ್ತಾನೆ. ಪೂರ್ವ ತಯಾರಿ ಮತ್ತು ಅಭ್ಯಾಸಗಳಿದ್ದರೆ ಮಾತ್ರ ಈ ಗುಣ ಬೆಳೆಸಿಕೊಳ್ಳಲು ಸಾಧ್ಯ.
     ಸಾರರೂಪವಾಗಿ ಹೇಳಬೇಕೆಂದರೆ ಒಬ್ಬ ದಕ್ಷ ಅಧಿಕಾರಿಗೆ ಕಾರ್ಯಗಳ ಅರಿವಿರಬೇಕು, ಕಾನೂನು-ಕಟ್ಟಳೆಗಳು, ಸ್ಥಳೀಯ ಸಂಪ್ರದಾಯಗಳ ಬಗ್ಗೆ ತಿಳಿದಿರಬೇಕು, ಧೃಢತೆ ಇರಬೇಕು, ಸಾಧಿಸುವ ವಿಶ್ವಾಸ ಇರಬೇಕು, ಸಂಘಟನಾ ಚಾತುರ್ಯವಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕನಾಗಿ ಪಕ್ಷಾತೀತನಾಗಿರುವುದಲ್ಲದೆ ಜೊತೆಗೆ, ಯಾರ ಪಕ್ಷಪಾತಿಯೂ ಅಲ್ಲ ಎಂಬುದನ್ನು ತೋರಿಸಿಕೊಳ್ಳಬೇಕು. ಪರಸ್ಪರ ರಾಜಕೀಯ ವಿರೋಧಿಗಳನ್ನು ಹೊಂದಾಣಿಸಿಕೊಂಡು, ಸಂಭಾಳಿಸಿಕೊಂಡು ಹೋಗುವ ಎರಡು ಅಲಗಿನ ಕತ್ತಿಯ ಮೇಲಣ ಜಾಗೃತ ನಡಿಗೆ ಮಾಡುವುದನ್ನು ಕಲಿಯಲೇಬೇಕು. ಕಷ್ಟ, ಆದರೆ ಅಸಾಧ್ಯವೇನಲ್ಲ. ದೇವರು ಎಲ್ಲರಿಗೂ ಅಧಿಕಾರ ಕೊಡುವುದಿಲ್ಲ. ಸಿಕ್ಕ ಅಧಿಕಾರವನ್ನು ಜನಪರವಾಗಿ ಬಳಸುವ ಮನೋಭಾವ ಅಧಿಕಾರಿಗಳಿಗೆ ಬರಬೇಕು. ಜನಪರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಗುರುತಿಸಿ ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸುವ ಕೆಲಸ ಆಗಬೇಕು. ಭ್ರಷ್ಠರನ್ನು ಸಲಹುವ ರಾಜಕೀಯ ನಾಯಕರುಗಳಿಗೆ ಪಾಠ ಕಲಿಸಿದರೆ ಬದಲಾವಣೆ ಆಗುತ್ತದೆ, ಆಗಬೇಕು!
--ಕ.ವೆಂ.ನಾಗರಾಜ್.
*****************
ದಿನಾಂಕ 04-04-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: