ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಸೆಪ್ಟೆಂಬರ್ 14, 2017

ಮಾಡಿದ್ದುಣ್ಣೋ ಮಹರಾಯ!


     ಈ ವೇದಮಂತ್ರ ನನಗೆ ಬಹಳ ಪ್ರಿಯವಾದುದಾಗಿದೆ: 'ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈ ಸಮಮಮಾನ ಏತಿ| ಅನೂನಂ ಪಾತ್ರಮ್ ನಿಹಿತಂ ಏತತ್ಪಕ್ತಾರಂ ಪಕ್ವಃ ಪುನರಾವಿಷಾತಿ||' - ಯಾವುದೇ ಕಲ್ಮಶವಿಲ್ಲದ, ನ್ಯೂನತೆಯಿಲ್ಲದ ಪಾತ್ರೆ ನಮ್ಮಲ್ಲಿ ಅಂತರ್ನಿಹಿತವಾಗಿದೆ. ಈ ಪಾತ್ರೆಯಲ್ಲಿ ಬೇಯಿಸಲಾಗುವ ಪದಾರ್ಥ ಬೇಯಿಸಿದವನನ್ನು ತಪ್ಪದೆ ಸೇರಿಕೊಳ್ಳುತ್ತದೆ. ಯಾರಾದರೂ ಮಿತ್ರರು, ಹಿತೈಷಿಗಳು ಇದನ್ನು ತಪ್ಪಿಸುತ್ತಾರೆ ಎಂಬುದಕ್ಕೆ ಆಧಾರವಿಲ್ಲ ಎಂದು ಸಾರುವ ಈ ಮಂತ್ರ ಕರ್ಮ ಸಿದ್ಧಾಂತವನ್ನು ಎತ್ತಿ ಹಿಡಿದಿದೆ. ನಾವು ಮಾಡುವ ಕರ್ಮಗಳ ಫಲವನ್ನು ನಾವೇ ಅನುಭವಿಸಬೇಕೇ ಹೊರತು ತಪ್ಪಿಸಿಕೊಳ್ಳಲು ಅನ್ಯ ಮಾರ್ಗಗಳಿಲ್ಲ. ನಮ್ಮ ಹಿತೈಷಿಗಳು, ಸ್ನೇಹಿತರು, ಗುರುಗಳು, ಬಂಧುಗಳು, ಮಧ್ಯವರ್ತಿಗಳು, ಪುರೋಹಿತರು ಇತ್ಯಾದಿ ಯಾರೂ ಸಹ ನಮ್ಮನ್ನು ನಮ್ಮ ಕರ್ಮಗಳ ಫಲವನ್ನು ಅನುಭವಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಅವರುಗಳ ಬೆಂಬಲವಿದೆಯೆಂದು ನಾವು ಆಡಿದ್ದೇ ಆಟ ಎಂದು ಮೆರೆಯಲು ಆಗುವುದಿಲ್ಲ. ಗುರುಗಳ ಪಾದಪೂಜೆ ಮಾಡಿದರಾಗಲೀ, ದೇವರ ಮೂರ್ತಿಗೆ ಚಿನ್ನದ ಕಿರೀಟವನ್ನು ಮಾಡಿಸಿಕೊಟ್ಟರಾಗಲೀ ಬೆನ್ನಿಗಂಟಿದ ಕರ್ಮ ಬೆನ್ನು ಬಿಡುವುದೇ ಇಲ್ಲ. ಅದನ್ನು ಅನುಭವಿಸಿ ಕಳೆದುಕೊಳ್ಳಲು ಮಾತ್ರ ಸಾಧ್ಯ, ತಪ್ಪಿಸಿಕೊಳ್ಳಲು ಅಡ್ಡದಾರಿಗಳು ಇಲ್ಲವೇ ಇಲ್ಲ.  ಸ್ವತಃ ದೇವರೂ ಸಹ ನಮ್ಮ ಹಣೆಯ ಬರಹವನ್ನು ಬದಲಾಯಿಸಲಾರ ಎಂದರೆ ಕಠಿಣವಾಧ ಮಾತಾದರೂ ಸತ್ಯ. ನಮ್ಮ ಹಣೆಬರಹವನ್ನು ತಿದ್ದಬಲ್ಲವರು, ಬದಲಾಯಿಸಬಲ್ಲವರು ಯಾರಾದರೂ ಇದ್ದರೆ ಅದು ನಾವು ಮಾತ್ರ, ಅನ್ಯರಲ್ಲವೇ ಅಲ್ಲ, ದೇವರೂ ಅಲ್ಲ. ಸರಳವಾಗಿ ಹೇಳಬೇಕೆಂದರೆ, ಮಾಡಿದ್ದುಣ್ಣೋ ಮಹರಾಯ!    
     ನಿಮಗೆ ಈ ವಿಚಾರ, ಸಿದ್ಧಾಂತ ಇಷ್ಟವಾಗಿದೆ. ಅದಕ್ಕೇ ಹೀಗೆ ಹೇಳುತ್ತೀರಿ. ಇದು ಸತ್ಯವಲ್ಲ. ನೀವು ಹೇಳುವುದೇ ನಿಜವಾಗಿದ್ದಲ್ಲಿ ಕೆಟ್ಟವರು ಏಕೆ ವಿಜೃಂಭಿಸುತ್ತಿದ್ದಾರೆ? ಒಳ್ಳೆಯವರಿಗೆ ಏಕೆ ಅಷ್ಟೊಂದು ಕಷ್ಟ ಬರುತ್ತದೆ? ಎಂದು ಕೇಳಬಹುದು. ನಿಜ, ನನಗೆ ಈ ವಿಚಾರ ಪ್ರಿಯವಾಗಿದೆ ಮತ್ತು ಇದು ಹೀಗೆಯೇ ಇರಬೇಕೆಂಬುದು ನನ್ನ ಅಪೇಕ್ಷೆ ಕೂಡಾ ಆಗಿದೆ. ಪ್ರಿಯವಾಗಲು ಕಾರಣ, ಇದು ಸತ್ಯಕ್ಕೆ ಹತ್ತಿರವಾಗಿದೆ ಮತ್ತು ತರ್ಕಕ್ಕೆ ನಿಲುಕುವಂತಹುದಾಗಿದೆ. ಈ ಪ್ರಶ್ನೆಗೆ ಆಧ್ಯಾತ್ಮ, ವೈಚಾರಿಕತೆ ಮತ್ತು ತರ್ಕಗಳನ್ನು ಬಳಸಿ ಉತ್ತರ ಕಂಡುಕೊಳ್ಳಬೇಕು. ಒಳ್ಳೆಯದು, ಕೆಟ್ಟದ್ದು, ಸುಖ, ದುಃಖ ಇತ್ಯಾದಿಗಳು ಮಾನಸಿಕ ಸ್ಥಿತಿಗಳು. ಆಯಾ ವ್ಯಕ್ತಿಗಳನ್ನು, ಅವರ ಮಾನಸಿಕ ಸ್ಥಿತಿಗಳನ್ನು ಅವಲಂಬಿಸಿ ಈ ಸ್ಥಿತಿಗಳು ಅನುಭವಕ್ಕೆ ಬರುತ್ತವೆ. ಉದಾಹರಣೆಗೆ, ದೊಡ್ಡ ಶ್ರೀಮಂತ, ಅಧಿಕಾರದ ಉನ್ನತ ಹುದ್ದೆ ಹೊಂದಿರುವವ, ಹೆಜ್ಜೆ ಹೆಜ್ಜೆಗೆ ಆಳು-ಕಾಳುಗಳನ್ನು ಹೊಂದಿರುವ ವ್ಯಕ್ತಿಯೊಬ್ಬ ಹವಾನಿಯಂತ್ರಿತ ಕೊಠಡಿಯಲ್ಲಿ ಸುಪ್ಪತ್ತಿಗೆಯಲ್ಲಿ ಮಲಗಿ ನಿದ್ರೆ ಮಾತ್ರೆ ತೆಗೆದುಕೊಂಡರೂ ನಿದ್ರೆ ಬರದೆ ಅಶಾಂತಿಯಿಂದ ಹೊರಳಾಡುತಿದ್ದರೆ, ಜೋಪಡಿಯಲ್ಲಿ ಮಲಗಿದ ಕಷ್ಟಪಟ್ಟು ದುಡಿದು ಬಂದ ಬಡವನೊಬ್ಬ ಮೈಮೇಲೆ ಎಚ್ಚರವಿರದಂತೆ ನಿದ್ರೆಯ ಸುಖ ಅನುಭವಿಸುತ್ತಾನೆ.
     ಕರ್ಮ ಸಿದ್ಧಾಂತವನ್ನು ಒರೆಗೆ ಹಚ್ಚಬೇಕೆಂದರೆ ಇದರ ಜೊತೆಗೆ ದೇವರು ಮತ್ತು ನಮ್ಮ ಅಸ್ತಿತ್ವಗಳನ್ನೂ ವಿಚಾರಣೆಯ ಕಟಕಟೆಗೆ ತರಬೇಕಾಗುತ್ತದೆ, ಜೊತೆಗೆ ಪುನರ್ಜನ್ಮ ಸಿದ್ಧಾಂತವನ್ನೂ ಒಪ್ಪಬೇಕಾಗುತ್ತದೆ. ವಿಚಾರ ಮಾಡೋಣ, ತರ್ಕಿಸೋಣ, ಸರಿ ಅನ್ನಿಸಿದರೆ ಒಪ್ಪೋಣ. ಪುನರ್ಜನ್ಮವಿಲ್ಲವೆಂದಾದರೆ, ಇರುವುದು ಈಗಿರುವ ಒಂದೇ ಜನ್ಮ ಅನ್ನುವುದಾದರೆ ಕೆಲವರು ಶ್ರೀಮಂತರ ಮನೆಯಲ್ಲಿ, ಕೆಲವರು ಬಡವರ ಮನೆಯಲ್ಲಿ, ಕೆಲವರು ಆರೋಗ್ಯವಂತ, ಧೃಢಕಾಯರಾಗಿ. ಕೆಲವರು ಅಂಗವಿಕಲರಾಗಿ, ರೋಗಿಷ್ಠರಾಗಿ ಜನಿಸುವುದೇಕೆ? ಎಲ್ಲರೂ ಮನುಷ್ಯರಾಗಿಯೇ ಹುಟ್ಟುವುದಿಲ್ಲವೇಕೆ? ಹದ್ದು, ಗೂಬೆ, ಬೆಕ್ಕು, ಇಲಿ, ಇತ್ಯಾದಿ ಸುಮಾರು ೮೪ ಲಕ್ಷ ವಿವಿಧ ಜೀವಸಂಕುಲಗಳು ಏಕೆ ಹುಟ್ಟಬೇಕು? ಮಾನವನಿಗೆ ಮಾತ್ರ ವಿವೇಚನಾ ಶಕ್ತಿ ಏಕಿರಬೇಕು? ತಮ್ಮ ಯಾವುದೇ ತಪ್ಪಿಲ್ಲದೆ ಹೀಗೆ ಹುಟ್ಟುವುದಾದರೆ, ಪುನರ್ಜನ್ಮವಿಲ್ಲವೆಂದಾದರೆ ದೇವರನ್ನು ಪಕ್ಷಪಾತಿ ಎನ್ನಲೇಬೇಕಾಗುತ್ತದೆ. ಸಂಯೋಗ ಫಲವಾಗಿ ಇಂತಹ ಜನನವಾಗುತ್ತದೆ ಎಂದರೆ ಒಂದೇ ತಂದೆ-ತಾಯಿಗೆ ಹುಟ್ಟಿದ ಹಲವು ಮಕ್ಕಳು ಒಂದೇ ರೀತಿ ಇರದೆ ಗುಣ-ಸ್ವಭಾವಗಳಲ್ಲಿ ವ್ಯತ್ಯಾಸವಿರುವುದೇಕೆ? ಜೀವಿಯು ತನ್ನ ಜೀವಿತ ಕಾಲದಲ್ಲಿ ಮಾಡುವ ಪಾಪ/ಪುಣ್ಯ ಕಾರ್ಯಗಳಿಗನುಸಾರವಾಗಿ ಮುಂದಿನ ಜನ್ಮದಲ್ಲಿ ಒಳ್ಳೆಯ ಸ್ಥಿತಿಯಲ್ಲಿ ಅಥವ ಹೀನ-ದೀನ ಸ್ಥಿತಿಯಲ್ಲಿ ಜನಿಸುತ್ತಾನೆ ಎಂದರೆ ಒಪ್ಪಬಹುದು. ಒಪ್ಪದಿದ್ದರೆ, ಅಂತಹ ಸ್ಥಿತಿಯಲ್ಲಿ ಹುಟ್ಟಲು ದೇವರೊಬ್ಬನೇ ಕಾರಣ ಎನ್ನುವುದಾದರೆ ಜೀವಿಯು ಮುಂದೆ ತಾನು ಮಾಡುವ ಒಳ್ಳೆಯ/ಕೆಟ್ಟ ಕಾರ್ಯಗಳಿಗೆ ದೇವರೇ ಹೊಣೆಗಾರ ಎನ್ನಬೇಕಾಗುತ್ತದೆಯೇ ಹೊರತು ಜೀವಿಯನ್ನು ಹೊಣೆ ಮಾಡಲಾಗದು. ಅರ್ಥಾತ್ ಒಬ್ಬ ಕೊಲೆ ಮಾಡಿದರೂ ಅದಕ್ಕೆ ಅಂತಹ ಬುದ್ಧಿ ಕೊಟ್ಟ ದೇವರನ್ನೇ ಹೊಣೆ ಮಾಡಬೇಕಾಗುತ್ತದೆ. ಇದು ತರ್ಕಕ್ಕಾಗಲೀ, ವೈಜ್ಞಾನಿಕವಾಗಲೀ, ಧಾರ್ಮಿಕವಾಗಲೀ ಅಥವ ಇನ್ನಾವುದೇ ವಾದಕ್ಕಾಗಲೀ ಸಮಂಜಸವಾಗಿ ಕಾಣುವುದಿಲ್ಲ. ಅದೂ ಅಲ್ಲದೆ, ಧರ್ಮ, ಮೋಕ್ಷ, ಸನ್ನಡತೆ, ದುರ್ನಡತೆ, ಇತ್ಯಾದಿಗಳಿಗೆ ಅರ್ಥವೇ ಇರುವುದಿಲ್ಲ. ಆಸ್ತಿಕ ಮನಸ್ಸುಗಳು ಇದನ್ನು ಒಪ್ಪುವುದಿಲ್ಲ, ನಾಸ್ತಿಕರಲ್ಲಿ ಈ ವೈಪರೀತ್ಯಗಳಿಗೆ ಉತ್ತರವಿರುವುದಿಲ್ಲ.
     ಪುನರ್ಜನ್ಮವಿದೆ ಅನ್ನುವುದಾದರೆ ಹಿಂದಿನ ಜನ್ಮಗಳ ನೆನಪು ಏಕೆ ಇರುವುದಿಲ್ಲ? ಒಂದು ವೇಳೆ ನೆನಪು ಇದ್ದಿದ್ದರೆ ಏನಾಗಬಹುದಿತ್ತು? ಹಿಂದಿನ ಜನ್ಮದಲ್ಲಿ ಹೆಂಡತಿಯಾಗಿದ್ದವಳು ನಂತರದಲ್ಲಿ ಅಕ್ಕನೋ, ತಂಗಿಯೋ ಅಥವ ಮಗಳೋ ಆಗಿ ಹುಟ್ಟಿದ್ದರೆ ಮತ್ತು ಅದರ ಅರಿವು ಜೀವಿಗೆ ಇದ್ದರೆ ಆಗುವ ಮನೋವೇದನೆಗಳು/ಭಾವಗಳು ತರ್ಕಕ್ಕೆ ನಿಲುಕದು. ಹಿಂದೊಮ್ಮೆ ಆಗರ್ಭ ಶ್ರೀಮಂತನಾಗಿದ್ದು, ಈಗ ಬಡವನ ಮನೆಯಲ್ಲಿ ಜನಿಸಿದ್ದರೆ ಮತ್ತು ಅದರ ಅರಿವಿದ್ದರೆ ಏನಾಗುತ್ತಿತ್ತು? ತಾನು ಹಿಂದಿದ್ದ ಮನೆಗೆ ಹೋಗಿ ಅವರಿಂದ ಪಾಲು ಪಡೆಯಲು ಹೋದರೆ ಏನಾಗಬಹುದು? ಕೇವಲ ಉದಾಹರಣೆಗಾಗಿ ಇವನ್ನು ಹೇಳಿದ್ದಷ್ಟೇ. ಇಂತಹ ಅನೂಹ್ಯ ಪ್ರಸಂಗಗಳು ಎದುರಾಗಿ ಬದುಕು ದುರ್ಭರವೆನಿಸುವ ಸಾಧ್ಯತೆಗಳೇ ಜಾಸ್ತಿ. ಆದ್ದರಿಂದ ಹಿಂದಿನ ಜನ್ಮದ ನೆನಪು ಇಲ್ಲದಿರುವುದೇ ಒಂದು ರೀತಿಯಲ್ಲಿ ದೇವರ ಕರುಣೆಯೆನ್ನಬೇಕು. ಹಿಂದಿನ ಜನ್ಮದ ಸಂಸ್ಕಾರ/ಪ್ರಭಾವ ಪ್ರಬಲವಾಗಿರುವ ಕೆಲವರಿಗೆ ಹಿಂದಿನ ಜನ್ಮದ ನೆನಪು ಇರುವ ಹಲವಾರು ಪ್ರಕರಣಗಳು ಕಾಣಸಿಗುತ್ತವೆ.
     ಸೀಮಿತ ವ್ಯಾಪ್ತಿಯಲ್ಲಿ ಇಂತಹ ವಿಸ್ತಾರದ ವಿಷಯವನ್ನು ಮಂಡಿಸುವುದು, ಅರ್ಥೈಸಿಕೊಳ್ಳುವುದು ಕಷ್ಟ. ಆಸಕ್ತರು ಆಧ್ಯಾತ್ಮಿಕವಾಗಿ ಉನ್ನತ ಸ್ತರದಲ್ಲಿರುವ ವ್ಯಕ್ತಿಗಳ ವಿಚಾರಗಳು, ಉಪದೇಶಗಳನ್ನು ಅಧ್ಯಯನ ಮಾಡಿ ವೈಚಾರಿಕ ಹಸಿವನ್ನು ತಣಿಸಿಕೊಳ್ಳಲು ಪ್ರಯತ್ನಿಸಬಹುದು. ಸನಾತನಿಗಳು ವಿವೇಚನಾ ಶಕ್ತಿ ಹೊಂದಿರುವ ಮನುಷ್ಯ ಕರ್ಮಜೀವಿಯೆಂದೂ, ವಿವೇಚನಾ ಶಕ್ತಿಯಿರದ ಇತರ ಪ್ರಾಣಿ-ಪಕ್ಷಿ ಸಂಕುಲಗಳು ಭೋಗಜೀವಿಗಳೆಂದೂ ತಿಳಿಯುತ್ತಾರೆ. ತಮ್ಮ ಕರ್ಮಫಲಗಳಿಗನುಸಾರವಾಗಿ ಇಂತಹ ಜನ್ಮಗಳು ಬರುತ್ತಿರುತ್ತವೆ, ಇದು ಒಂದು ರೀತಿಯಲ್ಲಿ ಪಾಪಶೇಷವನ್ನು ಕಳೆದುಕೊಳ್ಳುವ, ಪ್ರಾಯಶ್ಚಿತ್ತವನ್ನು ಅನುಭವಿಸುವ ಅವಧಿಯೆಂದು ತಿಳಿದವರು ಹೇಳುತ್ತಾರೆ. ವಿವೇಚನಾಶಕ್ತಿಯಿರುವ ಮನುಷ್ಯನ ಕರ್ಮಗಳು ಆತನ ಹಣೆಯಬರಹವನ್ನು ನಿರ್ಧರಿಸುತ್ತವೆ. ಮಾನವ ಜನ್ಮ ಅಷ್ಟು ಸುಲಭವಾಗಿ ಸಿಗುವಂತಹುದಲ್ಲ. ಅದನ್ನು ವ್ಯರ್ಥವಾಗಿ ಹಾಳುಮಾಡಿಕೊಳ್ಳದೆ ಉನ್ನತ ಸ್ಥಿತಿಗೆ ಏರಲು ಪ್ರಯತ್ನಿಸಬೇಕಾದುದು ವಿವೇಕದ ನಡೆಯಾಗುತ್ತದೆ.
ಪೂರ್ವಕರ್ಮಗಳ ಫಲವ ಅನುಭವಿಸಬೇಕು
ಒದಗುವ ಫಲದಿಂದ ಹೆದರದಿರಬೇಕು |
ಕರ್ಮಫಲವನನುಭವಿಸಿ ಕಳೆದಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ ||
     ಆದಿ ಶಂಕರರು ತಮ್ಮ ಸಾಧನಾ ಪಂಚಕದಲ್ಲಿ 'ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ ಪ್ರಾರಬ್ಧಂ ತ್ವಿಹ ಭುಜ್ಯತಾಂ||' ಎಂದಿದ್ದಾರೆ. ಪೂರ್ವಾರ್ಜಿತ ಕರ್ಮಗಳ ಫಲವನ್ನು ಅನುಭವಿಸಿ ಕಳೆದುಕೊಳ್ಳಬೇಕು ಮತ್ತು ಬರುವ ಕಷ್ಟ-ನಷ್ಟಗಳನ್ನು ಹೆದರದೆ ಎದುರಿಸಿ ಮುನ್ನಡೆಯಬೇಕು ಎಂಬ ಅರ್ಥ ಹೊರಡಿಸುವ ಈ ಸಂದೇಶದಲ್ಲಿ ಒಳ್ಳೆಯ ಹಾದಿಯಲ್ಲಿ ನಡೆಯಬೇಕೆಂಬ ಸೂಕ್ಷ್ಮವಿದೆ. ಶೃಂಗೇರಿಯ ಮಹಾಸ್ವಾಮಿಯವರು ಒಂದು ಉಪನ್ಯಾಸದಲ್ಲಿ ಹೇಳಿದ ಈ ಮಾತುಗಳು ಮನನೀಯ: 'ವಿಶುದ್ಧವಾದ ಕೆಲಸಗಳನ್ನು ಅಂದರೆ ಪಾಪಕೃತ್ಯಗಳನ್ನು ಮಾಡಿದರೆ ವಿಶೇಷವಾದ ದುಃಖವನ್ನು ಅನುಭವಿಸಬೇಕಾಗಿ ಬರುತ್ತದೆ. ನಮಗೆ ಯಾರಿಗೂ ಬೇಡದ ಪದಾರ್ಥ ಅಂದರೆ ದುಃಖ. ಎಲ್ಲರಿಗೂ ಬೇಕಾದ ಪದಾರ್ಥ ಅಂದರೆ ಸುಖ. ಸುಖ ಬೇಕು, ದುಃಖ ಬೇಡ ಇದು ಪ್ರತಿಯೊಬ್ಬರ ಬಯಕೆ. ಇವೆರಡಕ್ಕೂ ಸಾಧನವೇನು? ಸುಖ ಬೇಕು ಅಂದರೆ ಧರ್ಮವನ್ನು ಮಾಡಬೇಕು. ದುಃಖ ಬೇಡವೆಂದರೆ ಅಧರ್ಮವನ್ನು ಮಾಡಬಾರದು. ಧರ್ಮ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ. ಅಧರ್ಮ ಬಿಡುವುದಕ್ಕೂ ಮನಸ್ಸು ಬರುವುದಿಲ್ಲ. ಆದರೆ ಸುಖ ಬೇಕು, ದುಃಖ ಮಾತ್ರ ಬೇಡ. ಇದು ಹೇಗೆ ಸಾಧ್ಯ?' ಯೋಚಿಸಬೇಕಾದ ವಿಚಾರವಲ್ಲವೇ? ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದ್ದು ಮಾಡಿದರೆ ಕೆಟ್ಟದ್ದಾಗುತ್ತದೆ ಎಂಬುದು ಸರಳ ನಿಯಮ. ಈ ಸರಳ ನಿಯಮವನ್ನು ಒಪ್ಪಿ ಬಾಳುವುದಾದರೆ ನಾವೂ ನೆಮ್ಮದಿಯಾಗಿರುತ್ತೇವೆ, ಸಮಾಜವೂ ನೆಮ್ಮದಿಯಾಗಿರುತ್ತದೆ. ವೈಚಾರಿಕತೆಯ ಉತ್ತುಂಗದಲ್ಲಿ ಈ ಸತ್ಯ ಗೋಚರವಾಗುತ್ತದೆ. ಯಾರು ಒಪ್ಪಲಿ, ಬಿಡಲಿ, ಇಷ್ಟವಿರಲಿ, ಇಲ್ಲದಿರಲಿ, ಈ ನಿಯಮ ಜಾರಿಯಲ್ಲಿರುತ್ತದೆ ಮತ್ತು ಪ್ರಪಂಚ ಹೀಗೆಯೇ ಸಾಗುತ್ತಿರುತ್ತದೆ.
-ಕ.ವೆಂ.ನಾಗರಾಜ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ