ನಮ್ಮ ಆದ್ಯತೆ ಜೀವನ ಮೌಲ್ಯ, ನೈತಿಕ ಸಿದ್ಧಾಂತ, ಉತ್ತಮ ವಿಚಾರ, ಸದ್ಗುಣಗಳಿಗೆ ಇರಬೇಕೇ ಹೊರತು ವ್ಯಕ್ತಿಗಳಿಗೆ ಇರಬಾರದು. ವ್ಯಕ್ತಿಯನ್ನು ಪೂಜಿಸುವುದು, ಗೌರವಿಸುವುದು ತಪ್ಪಲ್ಲ. ಸಂದರ್ಭ, ಸನ್ನಿವೇಶ ಮತ್ತು ವ್ಯಕ್ತಿಗಳನ್ನು ಅವಲಂಬಿಸಿ ಇದನ್ನು ಮಾಡಬೇಕಿದೆ. ಇದನ್ನು ಹೊರತುಪಡಿಸಿದರೆ, ವ್ಯಕ್ತಿಪೂಜೆ ಮಾಡುವುದು ವ್ಯಕ್ತಿಯ ಹಿತಕ್ಕಾಗಲೀ, ಸಮಾಜದ ಹಿತಕ್ಕಾಗಲೀ ಸೂಕ್ತವಲ್ಲ. ಯಾವುದೇ ವಸ್ತುನಿಷ್ಠ ಮತ್ತು ವಿಷಯನಿಷ್ಠ ಸಂಗತಿಗಳ ಕುರಿತು ನಮ್ಮ ದೃಷ್ಟಿಕೋನ ಅರ್ಥಪೂರ್ಣವೆನಿಸಬೇಕಾದರೆ, ನಮ್ಮ ವಿಶ್ಲೇಷಣೆ ವಸ್ತು ಮತ್ತು ವಿಷಯವನ್ನು ಅವಲಂಬಿಸಿದರೆ ಮಾತ್ರ ಸಾಧ್ಯ, ವ್ಯಕ್ತಿಯನ್ನು ಗಣನೆಗೆ ತೆಗೆದುಕೊಂಡರೆ ಆಗಲಾರದು. ಯಾವುದೇ ಪ್ರಶಂಸೆಯಿರಬಹುದು, ಸಮರ್ಥನೆಯಿರಬಹುದು, ಟೀಕೆಯಿರಬಹುದು, ವಿರೋಧವಿರಬಹುದು, ಅವು ವಿಚಾರಾರ್ಹ ವಿಷಯಗಳಿಗೆ ಸಂಬಂಧಿಸಿದಂತೆ ಇರಬೇಕೇ ಹೊರತು ವ್ಯಕ್ತಿ ಗಣನೆಗೆ ಬರಬಾರದು. ಅಭಿವ್ಯಕ್ತಿಯ ಸಾರ್ಥಕತೆ ವಸ್ತುನಿಷ್ಠತೆಯಲ್ಲಿದೆ, ವ್ಯಕ್ತಿನಿಷ್ಠತೆಯಲ್ಲಿಲ್ಲ. ಆದರೆ ನಮ್ಮಲ್ಲಿ ಬಹುತೇಕರು ಇದಕ್ಕೆ ವಿಪರೀತವಾಗಿ ವರ್ತಿಸುವುದು ಸಾಮಾನ್ಯವಾಗಿದೆ. ನಾವು ಚರ್ಚೆಯ ಭರಾಟೆಯಲ್ಲಿ ವಿಷಯವನ್ನೇ ಮರೆತು, ವ್ಯಕ್ತಿಯನ್ನೇ ವೈಭವೀಕರಿಸತೊಡಗುತ್ತೇವೆ ಅಥವ ವಿರೋಧಿಸುತ್ತೇವೆ. ಹೀಗಾದಾಗ ನಮ್ಮ ಭಾವನೆ, ಪೂರ್ವಾಗ್ರಹಗಳು ಪ್ರಧಾನವಾಗುತ್ತದೆಯೇ ಹೊರತು, ತರ್ಕ ಮತ್ತು ಸತ್ಯಗಳು ಮರೆಯಾಗಿಬಿಡುತ್ತವೆ. ಅಭಿವ್ಯಕ್ತಿ ಸಂತುಲನೆ ಕಳೆದುಕೊಂಡು ಅತಿರೇಕವಾಗುತ್ತಿದೆ. ಚರ್ಚೆಯ ಭರಾಟೆಯಲ್ಲಿ ಸಂಯಮ ಕಳೆದುಕೊಂಡು ವ್ಯಕ್ತಿಯ ಕುರಿತು ನಮ್ಮಲ್ಲಿನ ಭಾವನೆಗಳನ್ನು ಪರವಾಗಿಯೋ, ವಿರೋಧವಾಗಿಯೋ ಸಭ್ಯತೆಯ ಎಲ್ಲೆ ಮೀರಿ ಹೊರಹಾಕುವುದನ್ನೂ ಕಾಣುತ್ತೇವೆ. ತರ್ಕ ಗೌಣವಾದಾಗ, ಸಮರ್ಥನೆ ಅಥವ ವಿರೋಧಗಳು ಬಲವಂತವಾಗಿ ಒಬ್ಬರು ಇನ್ನೊಬ್ಬರನ್ನು ಒಪ್ಪಿಸುವ ಅಥವ ಹಳಿಯುವ ಹಂತಕ್ಕೆ ಹೋಗಿ ಅಸಹ್ಯಕರ ವಾತಾವರಣ ಸೃಷ್ಟಿಯಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಇಂತಹ ಅನೇಕ ಚರ್ಚೆಗಳು ಕೊನೆಗೆ ಪೊಲೀಸು, ನ್ಯಾಯಾಲಯಗಳವರೆಗೂ ಹೋದದ್ದಿದೆ.
ವೈಜ್ಞಾನಿಕ ಮತ್ತು ತರ್ಕಸಮ್ಮತ ವಿಚಾರಗಳಿಗೆ ಮಹತ್ವವಿರುವ ಈ ಕಾಲದಲ್ಲಿಯೂ ವ್ಯಕ್ತಿಪೂಜೆ ಪ್ರಭಾವಿ ಅಗಿರುವುದು ಕಾಣುವ ಸಂಗತಿ. ಗೌರವ, ಪ್ರತಿಷ್ಠೆಗೆ ಹಂಬಲಿಸುವ ವ್ಯಕ್ತಿ ತನ್ನ ಪ್ರಭಾವವನ್ನು ಸಮಾಜ ಗುರುತಿಸುವಂತೆ ಮಾಡಲು ಅನೇಕ ಕಸರತ್ತುಗಳನ್ನು ಸ್ವತಃ ಮತ್ತು ತನ್ನ ಸ್ವಯಂಘೋಷಿತ ಹಿಂಬಾಲಕರ ಸಹಾಯದಿಂದ ಮಾಡುವುದನ್ನು ಕಾಣುತ್ತಿದ್ದೇವೆ. ಇಂತಹ ಕಸರತ್ತುಗಳಿಂದ ಮಾಡಿಸಿಕೊಳ್ಳುವ ವ್ಯಕ್ತಿಪೂಜೆ ಸಮಾಜಹಿತಕ್ಕೆ ಎಂದೂ ಪೂರಕವಾಗದು. ತಾತ್ಕಾಲಿಕವಾಗಿ ಇಂತಹ ವ್ಯಕ್ತಿ ಗೌರವಿಸಲ್ಪಟ್ಟರೂ, ಮುಂದೊಮ್ಮೆ ಆತನ ದೌರ್ಬಲ್ಯಗಳು ಜಾಹೀರಾಗಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದವರು ಪಾತಾಳಕ್ಕೆ ಜಾರಿದ ನಿದರ್ಶನಗಳೂ ನಮ್ಮ ಮುಂದೆ ಸಿಗುತ್ತವೆ.
ಕರ್ನಾಟಕದ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್, ಜನರು ತನ್ನನ್ನು ಪ್ರಶಂಸಿಸಿದಾಗ ಉಬ್ಬಿಹೋಗದೆ ಸಂಯಮ ಉಳಿಸಿಕೊಳ್ಳುತ್ತಿದ್ದರು. ಏಕೆಂದರೆ ಕ್ರಿಕೆಟ್ ಆಟದಲ್ಲಿ ಜೈಕಾರಗಳು ಎಷ್ಟು ಬೇಗ ಬರುತ್ತವೋ, ಟೀಕೆಗಳೂ ಅಷ್ಟೇ ಬೇಗ ಬರುತ್ತವೆಯೆಂದು ಅವರಿಗೆ ಗೊತ್ತಿತ್ತು. ಸಿನೆಮಾ ತಾರೆ ಖುಷ್ಬೂ, ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್ ಅಥವ ಮಹೇಂದ್ರ ಸಿಂಗ್ ಧೋನಿ ಮುಂತಾದವರ ದೇವಸ್ಥಾನಗಳನ್ನು ಕಟ್ಟಿರುವ ಅವರ ಅತ್ಯುತ್ಸಾಹಿ ಅಭಿಮಾನಿಗಳು ಅವರ ಕ್ಷೇತ್ರಗಳಲ್ಲಿ ಅವರುಗಳ ಸಾಧನೆ ಸದಾ ಒಂದೇ ರೀತಿಯಲ್ಲಿ ಇರುವುದಿಲ್ಲವೆನ್ನುವುದನ್ನು ಮರೆತುಬಿಡುತ್ತಾರೆ. ಹೀಗಿರುವಾಗ ಗುಣ-ದೋಷಗಳಿಂದ ಕೂಡಿರುವ ಸಾಮಾನ್ಯ ಮಾನವನನ್ನು ಬದುಕಿರುವಾಗಲೇ ದೇವರ ರೂಪದಲ್ಲಿ ಪ್ರತಿಷ್ಠಿತಗೊಳಿಸುವುದು ಅನುಚಿತವಷ್ಟೇ ಅಲ್ಲ, ಹಾಸ್ಯಾಸ್ಪದ ಮತ್ತು ಅವರಿಗೆ ಮಾಡುವ ಅನ್ಯಾಯವೂ ಆಗುತ್ತದೆ. ಅನೇಕ ಶತಮಾನಗಳ ಕಾಲ ಸಾಮಂತವಾದಿ ವ್ಯವಸ್ಥೆಯಲ್ಲಿ ಇದ್ದ ಭಾರತದ ಬಹಪಾಲು ಜನರಿಗೆ ವ್ಯಕ್ತಿಪೂಜೆಯ ಅಭ್ಯಾಸ ಬಂದುಬಿಟ್ಟಿದೆ. ಇದರ ಛಾಯೆಯನ್ನು ಅನೇಕ ಸಂಸ್ಥೆಗಳು, ಪ್ರತಿಷ್ಠಾನಗಳು, ಪೀಠಗಳಲ್ಲಿ ಈಗಲೂ ಕಾಣಬಹುದು. ಯಾವ ವ್ಯಕ್ತಿ ಈ ಪೀಠ, ಇತ್ಯಾದಿಗಳ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೋ ಆ ವ್ಯಕ್ತಿ ಪೂಜಾರ್ಹನೆನಿಸಿಬಿಡುತ್ತಾರೆ. ಆ ಸ್ಥಾನದಲ್ಲಿ ಕುಳಿತವರು ವಿವೇಕಶೀಲ, ಪರಿಪಕ್ವರಾಗಿದ್ದರೆ ಅವರಿಗೆ ತಮಗೆ ಸಲ್ಲುತ್ತಿರುವ ಗೌರವ ಕುಳಿತ ಪೀಠದಿಂದ ಬಂದದ್ದೆಂಬ ಅರಿವಿರುತ್ತದೆ. ಅವರು ಆ ಗೌರವದಿಂದ ಭ್ರಮಿತರಾಗುವುದಿಲ್ಲ ಮತ್ತು ತಮ್ಮ ಅನುಯಾಯಿಗಳನ್ನೂ ಮಿತಿ ಮೀರಿ ಗೌರವಿಸಲು ಅವಕಾಶ ಕೊಡುವುದಿಲ್ಲ. ಇಂತಹ ಅರಿವಿಲ್ಲದಿದ್ದವರು ತಮ್ಮ ಬಗ್ಗೆಯೇ ತಾವು ಬಹಳ ಎತ್ತರದಲ್ಲಿದ್ದೇನೆಂದು ಭ್ರಮಿಸಿ ವರ್ತಿಸುತ್ತಾರೆ ಮತ್ತು ಭವಿಷ್ಯದಲ್ಲಿ ಇದರ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
ಭಾರತದಲ್ಲಿ ವ್ಯಕ್ತಿಪೂಜೆಯ ಅತಿ ದೊಡ್ಡ ಕ್ಷೇತ್ರವೆಂದರೆ ರಾಜಕೀಯ ಕ್ಷೇತ್ರವಾಗಿದೆ. ಅಧಿಕಾರದ ಉನ್ನತ ಗದ್ದುಗೆಯಲ್ಲಿ ಕುಳಿತ ವ್ಯಕ್ತಿಗಳಿಗೆ ಸ್ಥಾನದ ಮಹಿಮೆಯಿಂದ ಅಸೀಮಿತ ಬಲ ಬರುತ್ತದೆ. ಆ ಬಲ ಅವರ ಅನುಯಾಯಿಗಳು ಮತ್ತು ಜನರು ಅವರನ್ನು ಉನ್ನತ ಗೌರವಕ್ಕೆ ಪಾತ್ರರಾಗುವಂತೆ ಮಾಡುತ್ತದೆ. ಸಾಮಾನ್ಯ ಜನರಿರಲಿ, ಚುನಾಯಿತ ಶಾಸಕರುಗಳೇ ಸರತಿಯ ಸಾಲಿನಲ್ಲಿ ನಿಂತು ಒಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದವರೊಬ್ಬರ ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದುದನ್ನು ಕಂಡಿದ್ದೇವೆ. ಅವರ ನಂತರದಲ್ಲಿ, ಇನ್ನೇನು ಮುಖ್ಯಮಂತ್ರಿ ಆಗೇಬಿಟ್ಟರು ಎಂದು ಭಾವಿಸಲಾಗಿದ್ದ ವ್ಯಕ್ತಿಗೂ (ಅವರು ಈಗ ಜೈಲಿನಲ್ಲಿದ್ದಾರೆ) ಸಹ ಇದೇ ರೀತಿಯ ಗೌರವ ಸಿಕ್ಕಿತ್ತು. ಯಾವಾಗ ಅವರು ಆ ಸ್ಥಾನವನ್ನು ಏರಲಾರರು ಎಂದು ಸ್ಪಷ್ಟವಾಯಿತೋ ಆಗ ಅವರು ನಗಣ್ಯರಾಗಿಬಿಟ್ಟರು. ನಾಯಕರು ವಿವೇಕವಿದ್ದವರಾದರೆ ಅನುಯಾಯಿಗಳು ಅಂತಹ ಅತಿರೇಕಕ್ಕೆ ಹೋಗದಂತೆ ತಡೆಯುತ್ತಾರೆ. ಉನ್ನತ ಸ್ಥಾನದಲ್ಲಿರುವ ನಾಯಕರಿಗೆ ಗೌರವ ಅನೇಕ ಕಾರಣಗಳಿಂದ ಸಿಗುತ್ತದೆ. ಸ್ವಲಾಭದ ದೃಷ್ಟಿ, ಪರಿಸ್ಥಿತಿಯ ಅನಿವಾರ್ಯತೆ, ತೊಂದರೆ ಕೊಡದಿರಲಿ ಎಂಬ ಉದ್ದೇಶ ಇತ್ಯಾದಿಗಳೂ ಅವರಿಗೆ ಇತರರು ಗೌರವಿಸುವಂತೆ ಮಾಡುತ್ತದೆ. ಅಧಿಕಾರ ಯಾರಿಗೆ ಸಿಗುತ್ತದೋ ಅವರು ಪೂಜಾರ್ಹರಾಗಿ ಬಿಡುತ್ತಾರೆ ಮತ್ತು ಭಕ್ತರೂ ತಾನೇತಾನಾಗಿ ಸಿಕ್ಕಿಬಿಡುತ್ತಾರೆ. ದಿನದಿಂದ ದಿನಕ್ಕೆ ಅದು ಏರಿಕೆಯಾಗುತ್ತಾ ಹೋಗುತ್ತದೆ. ಪ್ರಚಾರದ ಸಾಧನಗಳು, ಅಧಿಕಾರದ ಪ್ರತ್ಯಕ್ಷ ಅಥವ ಪರೋಕ್ಷ ಹಸ್ತಕ್ಷೇಪ ಸಾಧ್ಯವಿರುವ ಎಲ್ಲೆಡೆಗಳಲ್ಲಿ ನಾಯಕರ ಅನುಯಾಯಿಗಳು ತುಂಬಿಕೊಳ್ಳುತ್ತಾರೆ. ಈಗ ಮಾಧ್ಯಮಗಳು, ಪತ್ರಕರ್ತರುಗಳಲ್ಲೂ ನಿಷ್ಪಕ್ಷತೆಯನ್ನು ನಿರೀಕ್ಷಿಸಲಾಗದ ಸ್ಥಿತಿಯಿದೆ. ಅವರುಗಳಲ್ಲೂ ಬಹುತೇಕರು ಒಬ್ಬರಲ್ಲಾ ಒಬ್ಬರು ನೇತಾರರ ಭಕ್ತರೇ ಆಗಿರುತ್ತಾರೆ. ಒಬ್ಬನೇ ನೇತಾರ ಅನುಯಾಯಿಗಳಿಗೆ ದೇವರು, ಆಪದ್ಭಾಂಧವನಂತೆ ತೋರಿದರೆ ವಿರೋಧಿಗಳಿಗೆ ಘನಘೋರ ಶತ್ರುವಾಗಿ ಕಂಡುಬರುತ್ತಾನೆ. ನೇತಾರನ ವಿಚಾರಕ್ಕಿಂತ ಅವನ ವ್ಯಕ್ತಿತ್ವ ಮಹತ್ವ ಪಡೆದಾಗ ಆಗುವ ಅಪಾಯವಿದಾಗಿದೆ.
ವ್ಯಕ್ತಿಪೂಜೆ ಮಾಡುವ ಅಂಧ ಅನುಯಾಯಿಗಳಿಗೆ ದ್ವಂದ್ವವಿರುವುದಿಲ್ಲ. ಆದರೆ ವಿಚಾರಶೀಲರಿಗೆ ಕೆಲವೊಮ್ಮೆ ದ್ವಂದ್ವ ಉತ್ಪನ್ನವಾಗುತ್ತದೆ. ತಮ್ಮ ಅಂತರಂಗಕ್ಕೆ ಒಪ್ಪದ ಕೆಲವು ಸಂಗತಿಗಳನ್ನೂ ಅವರು ಸಮರ್ಥಿಸಿಕೊಳ್ಳಬೇಕಾಗಿ ಬರಬಹುದು. ಜಾತಿ ಆಧಾರಿತ ಮೀಸಲಾತಿ ರಾಷ್ಟ್ರಹಿತಕ್ಕೆ ಒಳಿತಲ್ಲವೆಂದು ಭಾವಿಸುವವರೂ ಸಹ ಅದನ್ನು ತಮ್ಮ ನೇತಾರರ ಸಲುವಾಗಿ ನ್ಯಾಯಸಮ್ಮತವೆಂದು ಸಮರ್ಥಿಸಿಕೊಳ್ಳಬೇಕಾಗಿ ಬರುತ್ತದೆ. ರಾಷ್ಟ್ರಮಟ್ಟದ ನಾಯಕರು, ಅವರು ಯಾವುದೇ ಪಕ್ಷದವರಿರಬಹುದು, ಕೈಗೊಳ್ಳುವ ನಿರ್ಧಾರ ತಮ್ಮ ರಾಜ್ಯದ ಹಿತಕ್ಕೆ ವಿರುದ್ಧವಾದರೂ ರಾಜ್ಯದ ಅನುಯಾಯಿಗಳು ಸಮರ್ಥಿಸಿಕೊಳ್ಳುವ ಅನಿವಾರ್ಯತೆಯನ್ನೂ ಗಮನಿಸಬಹುದು. ಬೀರಬಲ್ ಅಕ್ಬರನಿಗೆ ಒಮ್ಮೆ ಹೀಗೆ ಹೇಳಿದ್ದನಂತೆ: ಹುಜೂರ್, ನಿಮಗೆ ಬದನೆಕಾಯಿ ಇಷ್ಟವಾಗಿದ್ದರೆ ನನಗೂ ಇಷ್ಟ. ನಿಮಗೆ ಇಷ್ಟವಿಲ್ಲದಿದ್ದರೆ ನನಗೂ ಇಷ್ಟವಿಲ್ಲ. ಏಕೆಂದರೆ ನಾನು ನಿಮ್ಮ ನೌಕರ, ಬದನೆಕಾಯಿಗೆ ಅಲ್ಲ. ಇಂತಹ ಮನೋಭಾವ ಬೆಳೆಸಿಕೊಂಡರೆ ವಿವೇಚನೆ ಮಾಡುವ ಶಕ್ತಿ ನಷ್ಟವಾಗಿ, ಸರಿ-ತಪ್ಪುಗಳ ತುಲನೆ ಅಸಾಧ್ಯವಾಗುತ್ತದೆ. ನಿರ್ಮಲ ಮನಸ್ಸೂ ಕೊಳಕಾಗುತ್ತದೆ. ರಾಜಕೀಯ ಪಕ್ಷಗಳ ಏಕಮಾತ್ರ ಉದ್ದೇಶ ಅಧಿಕಾರಗ್ರಹಣ ಎಂಬುದನ್ನು ನೆನಪಿನಲ್ಲಿಡಬೇಕಾಗಿದೆ. ಅವುಗಳಲ್ಲಿರುವ ಭಿನ್ನತೆ ತೋರಿಕೆಯದು ಮಾತ್ರ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಬಹುತೇಕ ರಾಜಕೀಯ ನಾಯಕರ ಅಂತರಂಗದ ಉದ್ದೇಶ ಅಧಿಕಾರಪ್ರಾಪ್ತಿಯೇ ಆಗಿದೆ.
ವ್ಯಕ್ತಿ ಎಷ್ಟೇ ಆದರೂ ವ್ಯಕ್ತಿಯೇ ಆಗಿದ್ದು ಗುಣ-ಅವಗುಣಗಳಿಂದ ಕೂಡಿರುತ್ತಾನೆ. ಅವನು ಪ್ರತಿಪಾದಿಸುವ ವಿಚಾರ ಎಷ್ಟೇ ಉನ್ನತವಾಗಿದ್ದರೂ, ಆ ವಿಚಾರಗಳು ಪೂಜಾರ್ಹವೇ ಹೊರತು ವ್ಯಕ್ತಿಯಲ್ಲ. ವ್ಯಕ್ತಿ ಪತನಗೊಳ್ಳುವ ಸಾಧ್ಯತೆಯಿರುತ್ತದೆ. ಅಲ್ಲದೆ ಅವನು ಶಾಶ್ವತನೂ ಅಲ್ಲ. ಪೂಜೆ ಮಾಡುವುದೇ ಆದಲ್ಲಿ ಪರಮಾತ್ಮನ ಪೂಜೆ ಮಾಡೋಣ. ವ್ಯಕ್ತಿಗಳನ್ನು ಸಾಂದರ್ಭಿಕವಾಗಿ ಅಗತ್ಯವಿದ್ದಾಗ ಗೌರವಿಸೋಣ. ಅವರನ್ನು ಬದುಕಿದ್ದಾಗಲೇ ಮಹಾಮಹಿಮರಂತೆ ಬಿಂಬಿಸದಿರೋಣ. ವಿಚಾರ ಮುಖ್ಯವೇ ಹೊರತು ವ್ಯಕ್ತಿಯಲ್ಲ. ನಾವು ತತ್ವಪೂಜಕರಾಗೋಣ, ಸದ್ವಿಚಾರಗಳ ಆರಾಧಕರಾಗೋಣ.
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ