ಪ್ರಗತಿಪರರು, ಪ್ರಗತಿಪರ ಚಿಂತಕರು ಎಂಬ ಪದ ಮಾಧ್ಯಮ ವಲಯಗಳಲ್ಲಿ ಈಗ ಬಹುವಾಗಿ ಬಳಸುವ ಪದವಾಗಿದೆ. ಇಂದು ಅನೇಕ ಪದಗಳು ಮೂಲದ ಅರ್ಥದಲ್ಲಿ ಬಳಕೆಯಾಗದೆ ಸವಕಲಾಗಿವೆ ಅಥವ ಅರ್ಥಹೀನವಾಗಿವೆ. ಹೀಗೆ ಸವಕಲಾಗಿರುವ ಜಾತ್ಯಾತೀತತೆ, ಸಮಾನತೆ, ಕೋಮುವಾದ, ಕೋಮುಸೌಹಾರ್ದ, ಬುದ್ಧಿಜೀವಿಗಳು ಇತ್ಯಾದಿ ಪದಗಳ ಸಾಲಿಗೆ ಈ ಪ್ರಗತಿಪರರು ಎಂಬುದೂ ಸೇರಿಬಿಟ್ಟಿದೆ. ಯಾರನ್ನು ಪ್ರಗತಿಪರರು ಎಂದು ಬಿಂಬಿಸಲಾಗುತ್ತಿದೆಯೋ ಅವರು ಹೇಳುವ ಮಾತುಗಳು, ಜೀವನಶೈಲಿ, ಅವರ ಸಂಸ್ಕಾರ, ಬರಹಗಳನ್ನು ಗಮನಿಸಿದರೆ ಪ್ರಗತಿಶೀಲ ಎಂದರೇನು ಎಂಬುದರ ಬಗ್ಗೆಯೇ ಸಂದೇಹ ಮೂಡುತ್ತದೆ. ಅವರು ಪ್ರಗತಿಪರರೆಂದಾದರೆ ಉಳಿದವರೆಲ್ಲಾ ಪ್ರಗತಿವಿರೋಧಿಗಳೇ? ಪ್ರಗತಿಪರರೆಂದು ಹೇಳಿಕೊಳ್ಳುವ ಕೆಲವರ ನಡೆ-ನುಡಿಗಳನ್ನು ನೋಡಿದರೆ ಭಯೋತ್ಪಾದಕರು ತಮ್ಮನ್ನು ತಾವು ಶಾಂತಿದೂತರು ಎಂದು ಕರೆದುಕೊಂಡಂತೆ ಇರುತ್ತದೆ.
ಪ್ರಗತಿ ಎಂಬುದು ಮೂಲ ಸಂಸ್ಕೃತ ಪದ. ಪ್ರ ಎಂದರೆ ಮುಂದೆ, ಗತಿ ಎಂದರೆ ಚಲನೆ ಎಂಬುದು ಸರಳ ಅರ್ಥ. ಮುಂದಕ್ಕೆ ಹೋಗುವುದು ಅಂದರೆ ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಏರುವುದು ಎಂಬುದು ಈ ಪದ ಹೊಮ್ಮಿಸುವ ಉದ್ದೇಶ. ಮೌಲ್ಯ ವರ್ಧನೆ, ಶಕ್ತಿವರ್ಧನೆ, ಸಂಪತ್ತು ವರ್ಧನೆ, ಜ್ಞಾನ ವರ್ಧನೆ, ಹೀಗೆ ಹತ್ತು ಹಲವು ರಂಗಗಳಲ್ಲಿ ಮುಂದೆ ಹೋಗುವ ಕ್ರಿಯೆಯೇ ಪ್ರಗತಿ. ಇಂತಹ ಉದ್ದೇಶಕ್ಕಾಗಿ ಶ್ರಮಿಸುವವರು, ಅದರ ಪರವಾಗಿ ದ್ವನಿ ಎತ್ತುವವರನ್ನು ಪ್ರಗತಿಪರರು ಎನ್ನಬಹುದು. ಒಟ್ಟು ಸಮಾಜದ ಹಿತವನ್ನು ಗಮನದಲ್ಲಿಟ್ಟು ಅದರ ಪ್ರಗತಿಗೆ, ಅಭಿವೃದ್ಧಿಗೆ ಕಂಕಣ ಕಟ್ಟಿದವರನ್ನು ಪ್ರಗತಿಪರರು ಎನ್ನಬಹುದು. ಆದರೆ ಇಂದೇನಾಗುತ್ತಿದೆ?
ಕಹಿಯೆನಿಸುವ ಸತ್ಯವೆಂದರೆ ಒಂದು ನಿರ್ದಿಷ್ಟ ಸಂಘಟನೆಗೆ ಸೇರಿದವರನ್ನು ಅಥವ ಅವರ ಪರ ಸಹಾನುಭೂತಿ ಹೊಂದಿದವರನ್ನು ವಿರೋಧಿಸುವವರು ತಮ್ಮನ್ನು ಪ್ರಗತಿಪರರು, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು ಎಂದು ಕರೆದುಕೊಳ್ಳುತ್ತಿರುವುದು, ನಿರ್ದಿಷ್ಟ ರಾಜಕೀಯ ಪಕ್ಷದವರು ಮತ್ತು ಅವರ ಬೆಂಬಲಿಗರನ್ನು ಕೋಮುವಾದಿಗಳು ಎನ್ನುವುದು. ಇದು ಪ್ರಗತಿಪರ ಎಂಬ ಪದಕ್ಕೆ ಮಾಡುವ ಅವಮಾನವಲ್ಲದೆ ಮತ್ತೇನೂ ಅಲ್ಲ. ಯಾವುದೇ ವಿಷಯಕ್ಕೆ ಸಂಬಂದಿಸಿದಂತೆ ನಿಷ್ಪಕ್ಷಪಾತತೆಯಿಂದ ವಿಮರ್ಶಿಸಿ ಸರಿಯಿದ್ದರೆ ಬೆಂಬಲಿಸುವುದು, ಇಲ್ಲದಿದ್ದರೆ ವಿರೋಧಿಸುವುದು ಮಾಡಿದರೆ ಅದನ್ನು ಒಪ್ಪಿಕೊಳ್ಳಬಹುದು. ಅದನ್ನು ಬಿಟ್ಟು ಸರಿಯೋ, ತಪ್ಪೋ ನೋಡದೆ, ಪ್ರತಿಯೊಂದನ್ನೂ ವಿರೋಧಿಸುವ, ಅಡ್ಡಗಾಲು ಹಾಕುವ, ತಮ್ಮದೇ ದೇಶದ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಶತಾಯ ಗತಾಯ ಪ್ರಯತ್ನ ಮಾಡುವವರು ತಮ್ಮನ್ನು ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವುದು ಹಾಸ್ಯಾಸ್ಪದವೇ ಸರಿ.
ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಎರಡನೆಯದಾದ ದೇಶ ಇತರ ದೇಶಗಳೆದುರು ತನ್ನ ಮಾತು ನಡೆಯುವಂತೆ ನೋಡಿಕೊಳ್ಳಬೇಕು. ವಿದೇಶಗಳಲ್ಲಿ ಭಾರತವನ್ನು ಕಡೆಗಣಿಸುವ ಪರಿಸ್ಥಿತಿ ಹಿಂದೆ ಇದ್ದುದು ಈಗ ಬದಲಾವಣೆಯಾಗುತ್ತಿರುವುದು ಸಾಮಾನ್ಯರ ಗಮನಕ್ಕೇ ಬರುತ್ತಿದೆ. ಗಡಿಭಾಗದಲ್ಲಿ ಬಲಿಷ್ಠ ಚೀನಾದ ಎದುರಿಗೆ ಸಮ ಸಮನಾಗಿ ನಿಂತು ದೋಕ್ಲಾಮ್ ಕಗ್ಗಂಟನ್ನು ಎದುರಿಸಿದ ರೀತಿ ನಿಜಕ್ಕೂ ಹೆಮ್ಮೆ ಪಡುವಂತಹದು. ಆದರೆ ಬುದ್ಧಿಜೀವಿಗಳು ಎನಿಸಿಕೊಂಡವರು ಚೀನಾದ ಪರವಾಗಿ ನಿಂತು ನಮ್ಮವರ ಸ್ಥೆರ್ಯ ಕುಂದಿಸುವ ಪ್ರಯತ್ನ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡಲು ಪಾಕಿಸ್ತಾನದ ಕುಮ್ಮಕ್ಕು ಸ್ಪಷ್ಟವಾಗಿದ್ದರೂ, ಸಂಯಮದಿಂದ ವರ್ತಿಸಿ ಪರಿಸ್ಥಿತಿ ಸುಧಾರಣೆ ಮತ್ತು ಹತೋಟಿಗೆ ಕ್ರಮ ಅನುಸರಿಸಿದ್ದನ್ನು ವಿರೋಧಿಸುವ ಮತ್ತು ನಮ್ಮ ಸೈನಿಕರ ಕುರಿತು ಅವಹೇಳನಕರ ಮಾತುಗಳನ್ನಾಡುವ, ಅವರ ಮನೋಬಲ ಕುಂದಿಸುವ ಕೆಲಸ ಮಾಡಿದವರು ತಮ್ಮನ್ನು ಕರೆದುಕೊಂಡದ್ದು ಪ್ರಗತಿಪರ ಚಿಂತಕರೆಂದೇ, ಆಜಾದಿಯ ಹರಿಕಾರರೆಂದೇ! ವಿದೇಶಗಳ ಎದುರಿನಲ್ಲಿ ಭಾರತ ತಲೆ ಎತ್ತಿ ನಿಲ್ಲುವಂತಹ, ಒಂದು ಬಲಾಢ್ಯ ಶಕ್ತಿಯಾಗಿ ಗುರುತಿಸಿಕೊಳ್ಳುವಂತಹ ಕಾಲ ಬರುತ್ತಿರುವುದು ಪ್ರಗತಿಪರತೆಯೋ, ಅದನ್ನು ವಿರೋಧಿಸುವುದು ಪ್ರಗತಿಪರವೋ? ದೇಶವಿರೋಧಿ ಘೋಷಣೆಗಳನ್ನು ಕೂಗುವುದು, ದೇಶದ ಭದ್ರತೆಗೆ ಆತಂಕ ತರುವ ಕಾರ್ಯಕ್ರಮಗಳನ್ನು ಮಾಡುವುದು ಮತ್ತು ಅಂತಹುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮುಸುಕಿನಲ್ಲಿ ಸಮರ್ಥಿಸುವವರು, ಬೆಂಬಲಿಸುವವರು ಪ್ರಗತಿಪರರೇ?
ರೂ.೫೦೦ ಮತ್ತು ರೂ.೧೦೦೦ದ ನೋಟುಗಳನ್ನು ಚಲಾವಣೆಯಿಂದ ರದ್ದುಗೊಳಿಸಿದ ಕ್ರಮ ಕಪ್ಪುಹಣವನ್ನು ಹೊರತೆಗೆಯುವುದಷ್ಟೇ ಆಗಿರದೆ, ನೆರೆದೇಶಗಳಿಂದ ಬರುವ ಖೋಟಾ ನೋಟುಗಳನ್ನು ತಡೆಯುವುದೂ ಆಗಿದ್ದು ಆರ್ಥಿಕವಾಗಿ ಕ್ರಾಂತಿಕಾರಕವೆಂದು ಹೇಳಲಾಗಿದ್ದು, ತಮಗೆ ಕಷ್ಟವಾದರೂ ಜನಸಾಮಾನ್ಯರು ಮುಂದೆ ಒಳ್ಳೆಯದಾಗುವುದೆಂಬ ಕಾರಣಕ್ಕೆ ಸಹಿಸಿಕೊಂಡು ಸಹಕರಿಸಿದ್ದು ಈಗ ಇತಿಹಾಸ. ಅವರನ್ನು ಪ್ರತಿಭಟನೆಗೆ ಪ್ರಚೋದಿಸಲು, ಎತ್ತಿಕಟ್ಟಲು ಪ್ರಗತಿಪರರೆನಿಸಿಕೊಂಡವರು, ರಾಜಕೀಯ ನಾಯಕರು ಮತ್ತು ಕೆಲವು ಮಾಧ್ಯಮಗಳವರು ನಾನಾ ರೀತಿಯಲ್ಲಿ ಪ್ರಯತ್ನಿಸಿ ವಿಫಲವಾಗಿದ್ದುದನ್ನೂ ಕಂಡೆವು. ಈಗ ಅಪಮೌಲ್ಯಗೊಂಡ ನೋಟುಗಳ ಶೇ. ೯೫ಕ್ಕೂ ಹೆಚ್ಚು ಭಾಗ ಬ್ಯಾಂಕುಗಳಲ್ಲಿ ಜಮಾ ಅಗಿರುವುದೆಂದು ಹೇಳಲಾಗಿದ್ದು, ಇದು ಸರ್ಕಾರದ ಕ್ರಮದ ವಿಫಲತೆಯೆಂದು ಬಣ್ಣಿಸಲಾಗುತ್ತಿದೆ. ಹಣ ಬ್ಯಾಂಕಿನಲ್ಲಿ ಜಮೆ ಆಗಿದ್ದರೂ, ಅದಕ್ಕೆ ಲೆಕ್ಕವಿದೆ. ಅಕ್ರಮವಾಗಿ ಜಮಾ ಆದ ಹಣದ ಬಗ್ಗೆ ಸರಿಯಾದ ತನಿಖೆ ಆದರೆ ಆಗಲೂ ಅಕ್ರಮ ಹಣದ ಪತ್ತೆ ಮತ್ತು ಅಪರಾಧಿಗಳ ದಂಡನೆಗೆ ಅವಕಾಶ ಮುಕ್ತವಾಗಿದೆ. ಈಗಾಗಲೇ ಆ ಕ್ರಮ ಪ್ರಾರಂಭವಾಗಿದೆ. ಅಪನಗದೀಕರಣದಿಂದಾಗಿ ಹಲವಾರು ದೊಡ್ಡ ತಿಮಿಂಗಲಗಳು ನೆಲ ಕಚ್ಚಿರುವುದು, ಭಯೋತ್ಪಾದಕ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿಗಾದರೂ ಕಡಿವಾಣ ಬಿದ್ದಿರುವುದು ಗಮನಾರ್ಹವಾಗಿದೆ. ಸರ್ಕಾರಕ್ಕೆ ತೆರಿಗೆಯ ರೂಪದಲ್ಲಿ ಗಣನೀಯ ಪ್ರಮಾಣದಲ್ಲಿ ಹಿಂದಿನ ವರ್ಷಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಹಣ ಸಂಗ್ರಹವಾಗುತ್ತಿದೆ. ಒಳ್ಳೆಯ ಉದ್ದೇಶದ ಕ್ರಮಕ್ಕೆ ಬೆಂಬಲಿಸುವುದು ಪ್ರಗತಿಪರವೋ, ಅದನ್ನು ವಿಫಲಗೊಳಿಸಲು ಪ್ರಯತ್ನಿಸುವುದು ಪ್ರಗತಿಪರವೋ?
ಹಲವು ವಿದೇಶಗಳು ಈ ದೇಶದ ಮೇಲೆ ಅಘೋಷಿತ ಹತೋಟಿ ಹೊಂದುವ ಅಥವ ಇಲ್ಲಿನ ಸರ್ಕಾರವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಈ ದೇಶದಲ್ಲಿ ಹಲವಾರು ಸರ್ಕಾರೇತರ ಸಂಸ್ಥೆಗಳನ್ನು, ಸಂಘಟನೆಗಳನ್ನು ಸ್ಥಾಪಿಸಿ ಪ್ರತಿಷ್ಠಿತರು, ಗೌರವಾನ್ವಿತರು ಅನ್ನಿಸಿಕೊಂಡವರನ್ನು ಅದಕ್ಕೆ ನೇಮಿಸಿ ಹಣದ ಹೊಳೆ ಹರಿಸುತ್ತಾ ಇರುವುದು ಈಗ ಗುಟ್ಟಾಗಿ ಉಳಿದಿಲ್ಲ. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಸುಂದರ ಮುಖವಾಡದ ಹಿಂದೆ ಸರ್ಕಾರ ದುರ್ಬಲಗೊಳಿಸುವ ಕ್ರೂರ ಹುನ್ನಾರ ಹೊಂದಿರುವ ಚಿಂತಕರು ತಮ್ಮ ಪ್ರತಿಭೆಯನ್ನು ಹಣಕ್ಕಾಗಿ ಒತ್ತೆ ಇಟ್ಟಿದ್ದಾರೆ ಎಂಬ ಸತ್ಯವೂ ಹೊರಬರುತ್ತಿದೆ. ಹಲವರ ಮುಖವಾಡಗಳೂ ಕಳಚಿಬೀಳುತ್ತಿವೆ. ಇವರುಗಳು ಪ್ರಗತಿಪರರೋ ಅಥವ ಇವರುಗಳ ಬಣ್ಣ ಬಯಲು ಮಾಡುತ್ತಿರುವುದು ಪ್ರಗತಿಪರತೆಯೋ? ಪ್ರಗತಿಪರರು, ಚಿಂತಕರು, ಬುದ್ಧಿಜೀವಿಗಳು ಎಂದು ಕರೆಯಲ್ಪಡುವವರ ಹಿನ್ನೆಲೆಯಲ್ಲಿ ಹಣದ, ಅಧಿಕಾರದ, ವಶೀಲಿಯ, ಪ್ರಶಸ್ತಿಯ ಆಸೆ ಇರುವುದೂ ಇದೆ. ಆದರೆ ಇದನ್ನು ಸಾರಾಸಗಟಾಗಿ ಎಲ್ಲರ ವಿಷಯದಲ್ಲಿ ಹೇಳಲಾಗುವುದಿಲ್ಲವಾದರೂ ಕೆಲವರ ನಡೆ-ನುಡಿಗಳು ಇದನ್ನು ಸಮರ್ಥಿಸುತ್ತವೆ.
ಮೇಲೆ ತಿಳಿಸಿದಂತಹ ಉದಾಹರಣೆಗಳು ಸಾಂಕೇತಿಕವಷ್ಟೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಪ್ರಗತಿಪರರು ಎಂಬ ವಿಶೇಷಣವನ್ನು ಕೆಲವರ ಗುತ್ತಿಗೆಯೆಂಬಂತೆ ಬಳಸುವ ಪ್ರವೃತ್ತಿ ನಿಲ್ಲಬೇಕು. ಪ್ರಗತಿಪರತೆ ಎಂದರೆ ಯಾವುದೋ ಒಂದು ವಿಚಾರವನ್ನು ಸಮರ್ಥಿಸುವುದಲ್ಲ ಅಥವ ವಿರೋಧಿಸುವುದಲ್ಲ, ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವರಾಗಬೇಕಿಲ್ಲ, ಜಾತಿ, ಧರ್ಮ, ಪಂಥದ ಹೆಸರಿನಲ್ಲಿ ಯಾರನ್ನೋ ತೆಗಳುವುದಲ್ಲ ಅಥವ ಓಲೈಸುವುದಲ್ಲ, ಒಂದೇ ಕಾನೂನನ್ನು ಬೆಂಬಲಿಗರಿಗೆ ಒಂದು ತರಹ, ವಿರೋಧಿಗಳಿಗೆ ಮತ್ತೊಂದು ತರಹ ಅನ್ವಯಿಸುವುದಲ್ಲ. ಎಲ್ಲರನ್ನೂ ಮಾನವರನ್ನಾಗಿ ಕಾಣುವ ದೃಷ್ಟಿ ಹೊಂದಿ, ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಏರುವುದಕ್ಕೆ ಧ್ವನಿ ಎತ್ತುವವರು ನಿಜವಾಗಿ ಪ್ರಗತಿಪರರು. ಹೀಗೆ ಇರದವರು, ಸುಂದರ ಮುಖವಾಡ ಧರಿಸಿ ಮರುಳು ಮಾಡುವ ಢೋಂಗಿಗಳು. ಸಿಕ್ಕ ಸಿಕ್ಕವರನ್ನೆಲ್ಲಾ ಪ್ರಗತಿಪರರು, ಬುದ್ಧಿಜೀವಿಗಳು, ಚಿಂತಕರು ಎಂದು ಹೇಳುವ ಪ್ರವೃತ್ತಿಗೆ ಕಡಿವಾಣ ಬೀಳಲೇಬೇಕು.
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ