ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಅಕ್ಟೋಬರ್ 16, 2017

ಸ್ವರ್ಗವನ್ನೂ ನರಕವಾಗಿಸುವ ಋಣಾತ್ಮಕ ಮನೋಭಾವ (Negativity)


     ಆ ದೇವನ ಆಟವನ್ನು ಬಲ್ಲವರಾರು? ಅವನು ಮನುಷ್ಯನನ್ನು ಮನಸ್ಸು ಎಂಬ ವಿಚಿತ್ರ ಶಕ್ತಿಯ ಹಿಡಿತದಲ್ಲಿ ಸಿಕ್ಕಿಸಿಬಿಟ್ಟಿದ್ದಾನೆ. ಮನಸ್ಸಿನ ಒಡೆಯನಾಗಬೇಕಾದ ಮನುಷ್ಯ ಮನಸ್ಸಿನ ಆಳಾಗಿರುವುದೇ ಹತ್ತು ಹಲವು ಸಮಸ್ಯೆಗಳಿಗೆ ಮೂಲವಾಗಿದೆ. ಋಣಾತ್ಮಕ ಮನೋಭಾವ(ನೆಗೆಟಿವಿಟಿ) ಆ ಮನಸ್ಸಿನ ಆಟವೇ ಆಗಿದೆ. ಮನಸ್ಸಿನಲ್ಲಿ ಬೇರೂರಿ ಬೆಳೆಯುವ ಈ ಮನೋಭಾವ ಸ್ವರ್ಗವನ್ನೂ ನರಕವಾಗಿಸುತ್ತದೆ, ನರಕದ ಸ್ವರ್ಗವಾಗಿ ಮಾಡುತ್ತದೆ. ಈ ಮನೋಭಾವ ಮನುಷ್ಯನನ್ನು ಕುಬ್ಜನನ್ನಾಗಿಸಿ, ಅವನನ್ನು ಮಾತ್ರವಲ್ಲದೆ ಸಂಬಂಧಿಸಿದವರಿಗೂ ಹಾನಿ ಮಾಡುತ್ತದೆ. ವಸ್ತುಸ್ಥಿತಿಯನ್ನು ಒಪ್ಪದಿರುವುದು ಅಥವ ತಪ್ಪಾಗಿ ಭಾವಿಸುವುದು ಅಥವ ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುವುದು ಮತ್ತು ತಪ್ಪು ಎಂದು ತಿಳಿದಿದ್ದರೂ ತಿದ್ದಿಕೊಳ್ಳದಿರುವುದು, ಇತ್ಯಾದಿ. ಋಣಾತ್ಮಕ ವಿಚಾರಧಾರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಸಂತೋಷದ ಹಾಲಿಗೆ ಹುಳಿ ಹಿಂಡುತ್ತದೆ, ಪ್ರಗತಿಗೆ ಅಡ್ಡಗಾಲಾಗುತ್ತದೆ, ಜೀವನ ಇಳಿಜಾರಿನಲ್ಲಿ ಸಾಗುತ್ತದೆ. ಋಣಾತ್ಮಕ ಮನೋಭಾವವನ್ನು ಹೋಗಲಾಡಿಸುವುದೆಂದರೆ ಭಯದ ವಿರುದ್ಧ ವಿಶ್ವಾಸ, ನಿರಾಶೆಯ ವಿರುದ್ಧ ಭರವಸೆ, ಸೋಲಿನ ವಿರುದ್ಧ ಗೆಲುವುಗಳ ಅಂತರ ತಿಳಿಯುವುದೇ ಆಗಿದೆ. ಋಣಾತ್ಮಕ ಮನೋಭಾವದ ಕೆಲವು ವಿಶಿಷ್ಟತೆಗಳನ್ನು ಗಮನಿಸೋಣ.
೧. ಕೀಳರಿಮೆ: ಸ್ವಂತವಾಗಿ ತಮ್ಮನ್ನು ತಾವು ಅಶಕ್ತರೆಂದು ಕರೆದುಕೊಳ್ಳುವುದು ವಿಶ್ವಾಸವನ್ನು ಕುಗ್ಗಿಸುತ್ತದೆ. ನನ್ನ ಕೈಯಲ್ಲಿ ಆಗಲ್ಲ, ನಾನು ಅಷ್ಟೊಂದು ತಿಳಿದವನಲ್ಲ, ನಾನು ಸೋತು ಹೋಗುತ್ತೇನೆ ಇತ್ಯಾದಿ ಮಾತುಗಳನ್ನು ಇನ್ನೊಬ್ಬರಿಗೆ ಹೇಳುವಂತೆ ಮಾಡುವುದೇ ಮನಸ್ಸಿನಲ್ಲಿ ಕುಳಿತಿರುವ ಋಣಾತ್ಮಕತೆ. ಯಾರಾದರೂ ನಿಮ್ಮ ಬಗ್ಗೆ, ನೀನೊಬ್ಬ ಮುಠ್ಠಾಳ, ಪ್ರಯೋಜನಕ್ಕೆ ಬಾರದವನು, ನಿನ್ನ ಕೈಯಲ್ಲಿ ಎಲ್ಲಿ ಆಗುತ್ತೆ, ಉಪಯೋಗಕ್ಕೆ ಬಾರದವನು ಎಂದರೆ ನಿಮಗೆ ಹೇಗೆ ಅನ್ನಿಸುತ್ತದೆ? ಇನ್ನೊಬ್ಬರು ಹೇಳಿದರೆ ಮುಜುಗರವಾಗುತ್ತದೆ, ನೋವಾಗುತ್ತದೆ. ಆದರೆ ಅದನ್ನು ನಮಗೆ ನಾವೇ ಹೇಳಿಕೊಂಡರೆ ಒಪ್ಪಿಕೊಳ್ಳುತ್ತೇವೆ, ಇದು ಸರಿಯೇ? ನಾನು ಅಶಕ್ತ, ನಾನು ಅಶಕ್ತ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಲೇ ಇದ್ದರೆ ಮನುಷ್ಯ ನಿಜಕ್ಕೂ ಅಶಕ್ತನೇ ಆಗುತ್ತಾನೆ ಎಂಬುದು ವಿವೇಕಾನಂದರು ಒತ್ತಿ ಹೇಳುತ್ತಿದ್ದ ಮಾತು. ಇದನ್ನು ಹೋಗಲಾಡಿಸುವುದು ಹೇಗೆ? ಋಣಾತ್ಮಕ ರೀತಿಯಲ್ಲಿ ಯೋಚಿಸುವುದನ್ನು ನಿಲ್ಲಿಸಿ ನಾನು ಮಾಡಬಲ್ಲೆ ಎಂಬ ವಿಶ್ವಾಸದ ಚಿಂತನೆಗಳು ಮೂಡುವಂತೆ ಮಾಡುವುದೇ ಇದಕ್ಕೆ ಪರಿಹಾರ. ಸತತ ಪ್ರಯತ್ನದಿಂದ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳೇ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾದರೆ ಕೀಳರಿಮೆಯಿಂದ ಹೊರಬರಲು ಸಾಧ್ಯವಿದೆ.
೨. ಋಣಾತ್ಮಕ ಭಾವನೆ: ಯಾವುದೇ ಸಂದರ್ಭ, ಪರಿಸ್ಥಿತಿಯನ್ನು ನಿರಾಶಾಭಾವದಿಂದ, ಹತಾಶೆಯಿಂದ ನೋಡುವುದರಿಂದ ಸಮಸ್ಯೆಯ ತಾಪ ಹೆಚ್ಚುವುದೇ ವಿನಃ ಕಡಿಮೆಯಾಗದು. ಬಿಲ್ಲು ಕಟ್ಟಲು ಹೋದರೆ ಅಲ್ಲಿ ದೊಡ್ಡ ಸರತಿಸಾಲು, ಈಗ ಎಲ್ಲದಕ್ಕೂ ಆಧಾರ್ ಕಾರ್ಡು ಕಡ್ಡಾಯ ಮಾಡಿರುವುದರಿಂದ ಆಧಾರ್ ನೋಂದಣೆಗೆ ಹೋದರೆ ಅಲ್ಲಿ ನೂಕು ನುಗ್ಗಲು, ಧಾರಾಕಾರ ಮಳೆ ಬರುತ್ತಿದೆ, ಎಲ್ಲೂ ಹೋಗಲಾಗುತ್ತಿಲ್ಲ ಇಂತಹ ಸಂಗತಿಗಳೆಲ್ಲಾ ಭೂತಾಕಾರದ ಸಮಸ್ಯೆಗಳೆನಿಸಿಬಿಡುತ್ತವೆ. ಹಾಗೆ ನೋಡಿದರೆ ಇಂತಹ ಪರಿಸ್ಥಿತಿಗಳಲ್ಲಿ ಋಣಾತ್ಮಕತೆಯೂ ಇಲ್ಲ, ಧನಾತ್ಮಕತೆಯೂ ಇಲ್ಲ. ಅವು ಹೇಗಿರಬಹುದೋ ಹಾಗೆಯೇ ಇವೆ. ಅದನ್ನು ನಾವು ನಿಭಾಯಿಸುವ ರೀತಿಯಲ್ಲಿ ಕೆಟ್ಟದ್ದೋ, ಒಳ್ಳೆಯದೋ ಇದೆ, ಸಂತೋಷವೋ, ಬೇಸರವೋ ಇದೆ. ನಿಧಾನವಾಗಿ ಪರಾಮರ್ಶಿಸಿದರೆ ಪರಿಹಾರ ಸಿಗುತ್ತದೆ. ಮಳೆಯ ಕಾರಣದಿಂದ ಇರುವಲ್ಲೇ ಇರುವಂತಾದರೆ ಒಳ್ಳೆಯ ಸಂಗೀತ ಹಾಕಿಕೊಂಡು ಕೇಳಬಹುದು, ಬಾಕಿ ಉಳಿದಿದ್ದ ಮತ್ತೇನೋ ಕೆಲಸಗಳನ್ನು ಮುಗಿಸುವಲ್ಲಿ ಗಮನ ಹರಿಸಬಹುದು.
೩. ಋಣಾತ್ಮಕ ಹೋಲಿಕೆ: ತಮ್ಮನ್ನು ತಾವೇ ಹಿಂದಿದ್ದೇವೆ ಎಂದು ಭಾವಿಸುವಲ್ಲಿ ಪ್ರಧಾನ ಪಾತ್ರ ವಹಿಸುವ ಸಂಗತಿಯೆಂದರೆ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಂಡು ಕುಗ್ಗುವುದು. ಇನ್ನೊಬ್ಬರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ, ಹೆಚ್ಚು ಸಾಧನೆ ಮಾಡಿದ್ದಾರೆ, ಇತ್ಯಾದಿ ಕಾರಣಗಳಿಂದ ಅವರೊಂದಿಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳುವುದು ಸುಲಕ್ಷಣವಲ್ಲ. ತಾನು ಏನನ್ನು ಹೊಂದಲು ಬಯಸಿರುವೆನೋ ಅದನ್ನು ಬೇರೊಬ್ಬರು ಹೊಂದಿದ್ದಾರೆ ಎಂಬ ಕಾರಣಕ್ಕೆ ಅಸೂಯೆಪಡುವುದು, ಕೀಳರಿಮೆಯಿಂದ ನರಳುವುದರಿಂದ ಋಣಾತ್ಮಕ ಭಾವ ಹೊಂದಿರುವುದು ಸ್ಪಷ್ಟವಾಗುತ್ತದೆ. ಇದರಿಂದಾಗಿ ಹೆಚ್ಚಿನ ಮನಸ್ಸಿನ ಒತ್ತಡ, ಕಾತರತೆ, ಖಿನ್ನತೆಗೆ ಒಳಗಾಗುವ ಅವಕಾಶಗಳಿವೆ. ಸತತ ಪರಿಶ್ರಮ, ಪಟ್ಟು ಬಿಡದ ಪ್ರಯತ್ನಕ್ಕೆ ಸಾಧಿಸಲಾಗದುದು ಏನೂ ಇಲ್ಲವೆಂಬ ಅರಿವಿನೊಂದಿಗೆ ಮುನ್ನಡೆದರೆ ಈ ಭಾವವನ್ನು ಹಿಮ್ಮೆಟ್ಟಿಸಬಹುದು.
೪. ಹಿಂದಿನ ಘಟನೆಗಳ ಛಾಯೆ: ಕೆಲವೊಮ್ಮೆ ಹಿಂದಿನ ಘಟನೆಗಳು, ಆಗು-ಹೋಗುಗಳು ಭೂತವಾಗಿ ಕಾಡುತ್ತಲೇ ಇದ್ದು ವರ್ತಮಾನಕ್ಕೆ ಅಡ್ಡಿಯಾಗಿ ನಿಲ್ಲುತ್ತಿರುತ್ತವೆ, ಸಾಧನೆಗೆ ಅಡ್ಡಿಯಾಗುತ್ತವೆ. ಇದು ನಿರಾಶೆಗೆ ಎಡೆ ಮಾಡಿ ಹೊಸ ಅವಕಾಶಗಳನ್ನು ಕಳೆದುಕೊಳ್ಳುವಂತೆ ಮಾಡಿ ಸ್ಥೈರ್ಯ ಕುಗ್ಗಿಸುತ್ತದೆ. ಆಗಿಹೋಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲವೆಂಬುದನ್ನು ಅರಿತು ಧೃಢವಾಗಿ ನಿಲ್ಲಬೇಕು. ಏನು ಆಗಬೇಕಿದೆಯೋ ಆ ದಿಸೆಯಲ್ಲಿ ಮುನ್ನಡೆಯಬೇಕು. ಇಷ್ಟೇ ಇದಕ್ಕಿರುವ ಪರಿಹಾರ. ದಾರಿಹೋಕರ ತಲೆ ಒಡೆದು ಜೀವನ ಸಾಗಿಸುತ್ತಿದ್ದ ಡಕಾಯಿತನೊಬ್ಬನಿಗೆ ಸತ್ಯದ ಸಾಕ್ಷಾತ್ಕಾರವಾದಾಗ ಮುಂದೆ ಆತ ವಾಲ್ಮೀಕಿ ಎನಿಸಿ ಇಂದಿಗೂ ಪ್ರಸಿದ್ಧವಾಗಿರುವ ರಾಮಾಯಣ ರಚಿಸಿದ. ಅಬ್ರಹಾಂ ಲಿಂಕನ್ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷನಾಗುವ ಮುನ್ನ ಎಂಟು ಚುನಾವಣೆಗಳಲ್ಲಿ ಸೋತಿದ್ದ, ವ್ಯಾಪಾರ ವಹಿವಾಟಿನಲ್ಲಿ ಎರಡು ಸಲ ವಿಫಲನಾಗಿ ಕುಸಿದುಹೋಗಿದ್ದ. ಹಳೆಯ ಅನುಭವಗಳಿಂದಾಗಿ ಆತ ನಿರಾಶೆಯಿಂದ ಕೈಚೆಲ್ಲಿದ್ದಿದ್ದರೆ ಇಂದು ಯಾರಿಗೂ ಆತನ ನೆನಪೂ ಇರುತ್ತಿರಲಿಲ್ಲ.
೫. ಬಲಿಷ್ಠರೆನಿಸಿಕೊಂಡವರು ಎದುರಾಳಿಗಳಾದಾಗ: ಕೆಲವು ಸಂದರ್ಭಗಳಲ್ಲಿ ಬಲಾಢ್ಯರೆನಿಸಿಕೊಂಡವರು ಸವಾಲೊಡ್ಡಿದಾಗ ತಮ್ಮ ತಪ್ಪಿಲ್ಲದಿದ್ದರೂ, ನ್ಯಾಯ ತಮ್ಮ ಕಡೆಗೆ ಇದ್ದರೂ ಹಿಂಜರಿಯುವ ಪ್ರವೃತ್ತಿ ಅಥವ ಸೋಲೊಪ್ಪಿಕೊಳ್ಳುವ ಮನೋಭಾವ ಉಂಟಾಗುತ್ತದೆ. ಬಲಾಢ್ಯರಿಗೆ ತಮಗಿರುವ ತೋಳ್ಬಲ, ಅಧಿಕಾರ, ಇತ್ಯಾದಿಯೇ ಆಸರೆಯಾಗಿದ್ದರೂ ಸತ್ಯ ತಮ್ಮ ಪಕ್ಷದಲ್ಲಿ ಇಲ್ಲದಿರುವ ಅಳುಕು ಇದ್ದೇ ಇರುತ್ತದೆ. ಎಂತಹ ಸಂದರ್ಭದಲ್ಲೂ ಎದೆಗುಂದದೆ ಸೂಕ್ತ ರೀತಿಯಲ್ಲಿ ಪರಿಸ್ಥಿತಿಯನ್ನು ಎದುರಿಸುವ ಚಾಕಚಕ್ಯತೆ ಅಗತ್ಯವಿರುತ್ತದೆ. ಸರ್ವಾಧಿಕಾರವಿರುವ, ಮಿಲಿಟರಿ ಆಡಳಿತವಿರುವ ದೇಶಗಳಲ್ಲಿ ಕೆಲವೊಮ್ಮೆ ಸರ್ಕಾರವೇ ತನ್ನ ಪಾಶವೀಬಲವನ್ನು ಅಮಾಯಕರ ಮೇಲೆ ಪ್ರದರ್ಶಿಸುವುದಿದೆ. ಋಣಾತ್ಮಕ ಭಾವದವರು ಸೋತು ಸುಣ್ಣವಾದರೆ, ಮನೋಬಲವಿರುವವರು ತಮ್ಮಲ್ಲಿ ಶಕ್ತಿ ಇರುವವರೆಗೂ ಅದನ್ನು ತಾಳಿಕೊಳ್ಳುತ್ತಾರೆ. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ಮ್ಯಾನ್ಮಾರಿನ ಸೂಕಿ, ವೀರ ಸಾವರ್ಕರ್ ಮಹಾತ್ಮ ಗಾಂಧಿ ಮೊದಲಾದವರು ಇದಕ್ಕೆ ಉದಾಹರಣೆಗಳಾಗಿದ್ದಾರೆ. ದೇಶಕ್ಕಾಗಿ ಬಲಿದಾನ ಮಾಡಿದ ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಮೊದಲಾದ ಅಸಂಖ್ಯರು ನಗುನಗುತ್ತಾ ಪ್ರಾಣ ಕಳೆದುಕೊಂಡು ಅದ್ಭುತ ಮನೋಬಲ ತೋರಿಸಿದ್ದವರು. ೧೯೭೫-೭೭ರ ತುರ್ತು ಪರಿಸ್ಥಿತಿಯನ್ನು ಎದುರಿಸಿ ಕಷ್ಟ-ನಷ್ಟಗಳನ್ನು ಸಹಿಸಿದವರೂ ಮನೋಬಲಕ್ಕೆ ಉದಾಹರಣೆಗಳಾಗಿದ್ದಾರೆ.
೬. ದೂರುವ ಗುಣ: ಋಣಾತ್ಮಕತೆಯ ಮತ್ತೊಂದು ಅನಿಷ್ಟ ಲಕ್ಷಣವೆಂದರೆ ತಮ್ಮ ತಪ್ಪುಗಳಿಗೆ, ವಿಫಲತೆಗಳಿಗೆ ಬೇರೆಯವರನ್ನು ಹೊಣೆಗಾರರನ್ನಾಗಿಸಿ ದೂರುವುದು. ಆ ಬೇರೆಯವರು ತಂದೆ-ತಾಯಿಗಳಾಗಬಹುದು, ಗಂಡ/ಹೆಂಡತಿ ಆಗಬಹುದು, ರಕ್ತ ಸಂಬಂದಿಗಳಾಗಬಹುದು, ಮಿತ್ರರು, ಶತ್ರುಗಳು, ಹೀಗೆ ಯಾರು ಬೇಕಾದರೂ ಆಗಬಹುದು. ಭ್ರಷ್ಠ ರಾಜಕಾರಣಿಗಳು, ಅಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ತಾವು ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ರಾಜಕೀಯ ದ್ವೇಷ ಎಂಬಿತ್ಯಾದಿ ಕಾರಣಗಳನ್ನು ಕೊಡುವುದನ್ನು ಗಮನಿಸಬಹುದು. ಆದರೆ ಈ ಕಾರಣಗಳು ತಾಳಿಕೆ ಬರುವುದು ಕಡಿಮೆ. ಅಂತಿಮವಾಗಿ ದೂರುವವರೇ ತಪ್ಪಿತಸ್ಥರೆಂದು ತಿಳಿದಾಗ ಅವರು ಕುಬ್ಜರಾಗುವರು, ಶಕ್ತಿ ಕಳೆದುಕೊಳ್ಳುವರು.
೭. ತಪ್ಪಿತಸ್ಥ ಮನೋಭಾವ: ಜೀವನದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ. ಕೆಲವು ಗಂಭೀರತರ ತಪ್ಪುಗಳಿಂದ, ದೋಷಯುತ ನಿರ್ಧಾರಗಳಿಂದ ಕೇವಲ ತಮಗಲ್ಲದೆ ಇತರರಿಗೂ ಕೆಡುಕಾಗಿರಬಹುದು. ಅದರಿಂದಾಗಿ ತಪ್ಪಿತಸ್ಥನೆಂಬ ಕೊರಗು, ಅಳುಕು ಉಳಿದು ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳಬಹುದು. ಇದರಿಂದ ಹೊರಬರಲು, ಹೌದು, ತಪ್ಪು ಮಾಡಿದ್ದೇನೆ. ಅದು ಆ ವಿಷಘಳಿಗೆಯಲ್ಲಿ ಮಾಡಿದ್ದು ಅದಕ್ಕಾಗಿ ಪಶ್ಚಾತ್ತಾಪವಿದೆ. ನಾನು ಕೆಟ್ಟವನಲ್ಲ. ಮುಂದೆ ಹಾಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳಬೇಕು. ತಮ್ಮನ್ನು ತಾವೇ ಕ್ಷಮಿಸಿಕೊಳ್ಳದಿದ್ದರೆ ಇತರರು ಹೇಗೆ ಕ್ಷಮಿಸಿಯಾರು?
೮. ತಪ್ಪುಗಳನ್ನು ಮಾಡುವ ಭಯ: ತಪ್ಪುಗಳನ್ನು ಮಾಡುವ ಭಯ, ಪರಿಪೂರ್ಣವಾಗಿರಬೇಕೆಂಬ ಒತ್ತಡಗಳು ಮನಸ್ಸಿನ ಸಂತೋಷವನ್ನು ಕಿತ್ತುಕೊಳ್ಳುತ್ತವೆ. ನಮಗೆ ನಾವೇ ಉನ್ನತ ಮಾನದಂಡಗಳನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಾವಿಲ್ಲವೆಂದಾದಾಗ ಒಂದು ರೀತಿಯ ಕೀಳರಿಮೆ ಕಾಡದೇ ಇರದು. ಇದು ನಮ್ಮ ಶಕ್ತಿಯನ್ನು ಬಸಿದುಬಿಡುತ್ತದೆ. ಪರಿಪೂರ್ಣತೆಯ ಹಂಬಲ ಮತ್ತು ಅಸಂತೋಷಗಳಿಗೆ ಒಂದಕ್ಕೊಂದು ಸಂಬಂಧವಿದೆ. ಉನ್ನತ ಸ್ಥಿತಿಗೆ ಏರುವ ನಮ್ಮ ಪ್ರಯತ್ನಗಳ ಜೊತೆಗೆ ಇರುವ ಸ್ಥಿತಿಯಲ್ಲಿನ ಸಂತೋಷ ಕಡಿಮೆಯಾಗದಂತೆ ಎಚ್ಚರ ವಹಿಸಿದರೆ ಮನಸ್ಸಿಗೆ ಹಿತವಾದೀತು. ಎಷ್ಟಾದರೂ ನಾವು ಮಾನವರು, ಎಷ್ಟೇ ಪ್ರಯತ್ನಿಸಿದರೂ, ಎಲ್ಲಾಕಾಲಕ್ಕೂ ಪರಿಪೂರ್ಣತೆ ಸಿದ್ಧಿಸುವುದು ಸುಲಭವಲ್ಲ. ಇದನ್ನು ಒಪ್ಪಿ, ಇರುವ ಸ್ಥಿತಿಯಲ್ಲೇ ತೃಪ್ತಿ ಕಂಡರೆ ಅದೇ ದೊಡ್ಡದು.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ