ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಅಕ್ಟೋಬರ್ 11, 2017

ಸಜ್ಜನಶಕ್ತಿ ಜಾಗೃತವಾಗಲಿ!


     ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ, ಮಾನವೀಯ ಭಾವನೆಗಳು ಬರಡಾಗಿ ಬೆಲೆಯೇ ಇಲ್ಲವಾಗಿರುವಾಗ, ಇದು ಎಂಥಾ ಲೋಕವಯ್ಯಾ ಎಂದು ಅನ್ನಿಸದೇ ಇರದು. ನಿಜಕ್ಕೂ ಇದೊಂದು ವಿಚಿತ್ರ ಲೋಕ. ಇಲ್ಲಿ ಕರುಣಾಮಯಿಗಳಿದ್ದಾರೆ, ಕರುಣೆಯ ಲವಲೇಶವೂ ಕಾಣಸಿಗದ ಕಟುಕರಿದ್ದಾರೆ, ನಯವಂಚಕರಿದ್ದಾರೆ, ಮುಖವಾಡಧಾರಿಗಳಿದ್ದಾರೆ, ಜಾತಿವಾದಿಗಳಿದ್ದಾರೆ, ವಿಚಾರವಾದಿಗಳಿದ್ದಾರೆ, ಕಾನೂನು-ಕಟ್ಟಳೆಗಳಿಗೆ ಬೆಲೆ ಕೊಡುವವರಿದ್ದಾರೆ, ಅದನ್ನು ಕಾಲಕಸವಾಗಿ ಕಾಣುವವರಿದ್ದಾರೆ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ, ಎಂಥೆಂತಹವರೋ ಇದ್ದಾರೆ.  ಅವರವರಿಗೆ ಅವರದೇ ಆದ ಮಾನದಂಡಗಳು, ಅವರವರ ಪಾಲಿಗೆ ಅವರದೇ ಸರಿ. ಎಲ್ಲರಿಗೂ ಸಮಾನವಾದ ಮಾನದಂಡ ಅನ್ನುವುದು ಪುಸ್ತಕದ ಬದನೆಕಾಯಿಯಷ್ಟೆ. 
     ಹಿಂದೆ ಪಿಪ್ಪಲಾದ ಎಂಬ ಋಷಿ ಇದ್ದನಂತೆ. ಆತನ ನಿಜವಾದ ಹೆಸರು ಏನಿತ್ತೋ ಗೊತ್ತಿಲ್ಲ. ಆದರೆ ಆತ ಮರದಿಂದ ಕಳಿತು ಕೆಳಗೆ ಬಿದ್ದಿದ್ದ ಹಣ್ಣು ಹಂಪಲುಗಳನ್ನು ಮಾತ್ರ ಆಯ್ದು ತಿನ್ನುತ್ತಿದ್ದರಿಂದ ಆತನಿಗೆ ಆ ಹೆಸರು ಬಂದಿತ್ತು. ಅದೇ ರೀತಿ ಅಕ್ಷಪಾದ (ಪಾದದಲ್ಲಿ ಕಣ್ಣುಳ್ಳವನು) ಎಂಬ ಹೆಸರಿನ ಋಷಿಗೂ, ಆತ ನಡೆಯುವಾಗ ಕಾಲಿನ ಕೆಳಗೆ ಯಾವ ಕ್ರಿಮಿ-ಕೀಟಗಳೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನಡೆಯುತ್ತಿದ್ದರಿಂದ ಆ ಹೆಸರು ಬಂದಿತ್ತು. ಅಂತಹವರು ಇದ್ದ ಕಾಲದಲ್ಲೂ ಋಷಿಮುನಿಗಳು ಮಾಡುತ್ತಿದ್ದ ಯಜ್ಞ ಯಾಗಗಳ ಹೋಮಕುಂಡದಲ್ಲಿ ಮಾಂಸದ ತುಂಡುಗಳನ್ನು ಹಾಕಿ ಯಜ್ಞಗಳಿಗೆ ಭಂಗ ತರುತ್ತಿದ್ದವರೂ ಇದ್ದರು. ಅವರನ್ನು ರಾಕ್ಷಸರು ಅನ್ನುತ್ತಿದ್ದರು.  ರಕ್ಷಃ ಅಥವ ರಕ್ಷಸ್ ಅಂದರೆ ಶತ್ರುಗಳು, ದುರ್ಭಾವನೆ, ದುರ್ವಿಚಾರ ಎಂದರ್ಥ. ಯಾರು ರಕ್ಷಸ್ಸುಗಳನ್ನು, ಅಂದರೆ ದುರ್ಭಾವನೆ ಹೊಂದಿರುತ್ತಾರೋ, ದುರ್ವಿಚಾರಗಳನ್ನು ಹೊಂದಿರುತ್ತಾರೋ, ಯಾರು ದುಷ್ಕಾರ್ಯಗಳನ್ನು ಮಾಡುತ್ತಾರೋ ಅವರು ರಾಕ್ಷಸರು, ಅಷ್ಟೆ. ರಾಕ್ಷಸತ್ವಕ್ಕೆ ಯಾವುದೇ ಜಾತಿಯ ಕಟ್ಟಿಲ್ಲ. ರಾಕ್ಷಸ ಎಂದು ಕರೆಯಲ್ಪಡುವ ರಾವಣ, ಕುಂಭಕರ್ಣ, ಶೂರ್ಪಣಖಿ ಇವರುಗಳ ತಂದೆ ವಿಶ್ರವಸು ಎಂಬ ಒಬ್ಬ ಮುನಿ, ವಿಪ್ರಕುಲಕ್ಕೆ ಸೇರಿದವನು. ಅವರುಗಳು ರಾಕ್ಷಸರೆನಿಸಲು ಪ್ರಮುಖ ಕಾರಣ ಅವರಲ್ಲಿದ್ದ ದುರ್ವಿಚಾರ, ದುರ್ಭಾವನೆ ಮತ್ತು ದುಷ್ಕಾರ್ಯಗಳು. ರಾಕ್ಷಸನೂ ಒಬ್ಬ ಮಾನವ ಜೀವಿಯೇ ಹೊರತು ಬೇರೆ ಪ್ರಕಾರದ ಜೀವಿಯಲ್ಲ. ಹೀಗಿರುವಾಗ ಒಬ್ಬ ಮಾನವ ರಾಕ್ಷಸನಾಗುವುದು ಅಥವ ಆದರ್ಶ ಮಾನವನಾಗುವುದು ಆತನ ನಡವಳಿಕೆಯಿಂದ ಎಂಬ ಪ್ರಾಥಮಿಕ ಸಂಗತಿಯನ್ನು ಗಮನದಲ್ಲಿಡಬೇಕು. 
     ಇಂದಿನ ಸ್ಥಿತಿ-ಗತಿಗಳ ಕುರಿತು ನೋಡೋಣ. ಗೋವಿನ ಬಗ್ಗೆ ಪೂಜ್ಯ ಭಾವನೆ ಇಟ್ಟುಕೊಂಡವರಿದ್ದಾರೆ. ಅದು ನಮ್ಮ ಆಹಾರ ಅನ್ನುವವರೂ ಇದ್ದಾರೆ. ನಮ್ಮ ಸಂವಿಧಾನದಲ್ಲೂ ಗೋವಿನ ಬಗ್ಗೆ ಆದರ ಅಭಿಮಾನಗಳು ಲಿಖಿತವಾಗಿ ದಾಖಲಿತವಾಗಿದೆ. ಈಗ ಗೋಹತ್ಯೆ ನಿಷೇಧದ ವಿಚಾರದಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಬೆಂಬಲ ಮತ್ತು ಆಕ್ರೋಷಗಳೆರಡೂ ಅತಿರೇಕವಾಗಿ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಿಪರೀತವೆನಿಸುವಷ್ಟು ಕೆಸರೆರಚಾಟಗಳು ನಡೆಯುತ್ತಿದೆ. ಬಹಿರಂಗವಾಗಿ ಗೋವನ್ನು ಕತ್ತರಿಸಿ ಹಸಿ ಹಸಿಯಾದ ಮಾಂಸವನ್ನು ಸಾರ್ವಜನಿಕವಾಗಿ ಭಕ್ಷಿಸುವ ಪ್ರತಿಭಟನೆಯೂ ಕೇರಳದಲ್ಲಿ ಯುವ ಕಾಂಗ್ರೆಸ್ಸಿಗರಿಂದ ಆಗಿದೆ. ಇದರಲ್ಲಿ ಗೋವಿನ ತಪ್ಪೇನಿದೆ? ಅದು ತನ್ನನ್ನು ಪೂಜೆ ಮಾಡಿ ಎಂದೂ ಹೇಳಿಲ್ಲ, ತನ್ನನ್ನು ಕಡಿದು ತಿನ್ನಿ ಎಂತಲೂ ಹೇಳಿಲ್ಲ. ಪಾಪ, ಅದಕ್ಕೆ ಅದು ಯಾವುದೂ ಗೊತ್ತೇ ಇಲ್ಲ. ಗೋವನ್ನು ಪೂಜ್ಯ ಭಾವನೆಯಿಂದ ಕಾಣುವವರನ್ನು ಕೆಣಕುವ ಏಕಮಾತ್ರ ಉದ್ದೇಶದ ಈ ಕೃತ್ಯ ರಾಕ್ಷಸೀಕೃತ್ಯ ಅಲ್ಲದೆ ಮತ್ತೇನು? ಪ್ರತಿಭಟನೆಗೂ ಯೋಗ್ಯ ಮಾರ್ಗಗಳಿವೆ, ಸಮಸ್ಯೆ ಇತ್ಯರ್ಥಕ್ಕೆ ಹಲವು ದಾರಿಗಳಿವೆ, ನ್ಯಾಯಾಲಯಗಳಿವೆ, ಶಾಸಕಾಂಗವಿದೆ. ಅವುಗಳಿಂದ ಇತ್ಯರ್ಥವಾಗದ ಸಂದರ್ಭಗಳಲ್ಲಿ ಅತಿರೇಕದ ನಡವಳಿಕೆಗಳು ಸಾಮಾನ್ಯವೆನಿಸಿದರೂ, ಈ ಪ್ರಸಂಗದಲ್ಲಿ ಅಂತಹ ರಕ್ಕಸ ನಡವಳಿಕೆಯ ತೋರ್ಪಡಿಕೆ ಅಗತ್ಯವಿರಲಿಲ್ಲ. 
     ಇಂದು ಸಮಾಜವನ್ನು, ದೇಶವನ್ನು ಜಾತಿಗಳ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ವಿವಿಧ ವಿಚಾರಗಳ ಹೆಸರಿನಲ್ಲಿ ಛಿದ್ರಗೊಳಿಸುವ ಕೆಲಸವನ್ನು ರಾಜಕಾರಣಿಗಳು, ಜಾತ್ಯಂಧರು ಮತ್ತು ಮತಾಂಧರುಗಳು ಎಗ್ಗಿಲ್ಲದೇ ಮಾಡುತ್ತಿದ್ದಾರೆ. ಮಾನವೀಯತೆ ಅನ್ನುವುದೂ ಸಹ ದೇಶ, ಮತ, ಧರ್ಮ, ಜಾತಿ, ವಿಚಾರಗಳಿಗೆ ಥಳಕು ಹಾಕಿಕೊಂಡುಬಿಟ್ಟಿದೆ. ಮತಾಂಧ ಮುಸ್ಲಿಮ್ ಉಗ್ರ ಸಂಘಟನೆಗೆ ಸೇರಿದವರಿಗೆ ತಮ್ಮ ಮತದವರನ್ನು ಯಾರು ಟೀಕಿಸಿದರೂ ಸಹನೆಯಾಗುವುದಿಲ್ಲ. ಆದರೆ ಅವರು ಇತರ ಮತೀಯರನ್ನು ನಿರ್ದಯೆಯಿಂದ ಕತ್ತು ಸೀಳಿ ಕೊಲೆಗೈಯಬಲ್ಲರು. ಜನನಿಬಿಡ ಪ್ರದೇಶಗಳಲ್ಲಿ ಬಾಂಬು ಸಿಡಿಸಿ ನೂರಾರು ಜನರ ಹತ್ಯೆಯಾದರೂ ಅವರು ಅದರಿಂದ ಸಂಭ್ರಮಪಡುತ್ತಾರೆ. ತಮ್ಮವರು ಸತ್ತಾಗ ದುಃಖಿಸುವ ಅವರು ಇತರರು ಕೊಲೆಯಾದಾಗ ಸಂತೋಷಿಸುತ್ತಾರೆ. ಸತ್ತವರು ತಮ್ಮಂತೆಯೇ ಇರುವ ಮಾನವ ಜೀವಿಗಳು ಎಂದು ಅವರಿಗೆ ಅನ್ನಿಸುವುದೇ ಇಲ್ಲ. ಇದು ಮತ/ಧರ್ಮದ ಹೆಸರಿನಲ್ಲಿ ಮರೆಯಾಗಿರುವ ಮಾನವೀಯತೆ. ಕೇರಳದಲ್ಲಿ ಜಯಕೃಷ್ಣನ್ ಮಾಸ್ತರ್ ಎಂಬ ಶಿಕ್ಷಕರನ್ನು ಅವರು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗಲೇ ಮಕ್ಕಳ ಎದುರಿನಲ್ಲೇ ಸಿ.ಪಿ.ಎಂ. ಕಾರ್ಯಕರ್ತರು ಕೊಚ್ಚಿ ಕೊಲೆ ಮಾಡಿದ್ದರು. ಅವರ ದೇಹದ ೪೮ ಕಡೆಗಳಲ್ಲಿ ಕೊಚ್ಚಲಾಗಿತ್ತು. ಇದಕ್ಕೆ ಕಾರಣ ವೈಚಾರಿಕ ಭಿನ್ನತೆ. ಅವರು ಆರೆಸ್ಸೆಸ್ಸಿನವರಾಗಿದ್ದರು ಎಂಬುದೊಂದೇ ಅವರ ಹತ್ಯೆಗೆ ಕಾರಣವಾಗಿತ್ತು. ಕೇರಳದಲ್ಲಿ ಇಂತಹ ವೈಚಾರಿಕ ವಿರೋಧಿಗಳ ಹತ್ಯೆ ಸಾಮಾನ್ಯವಾಗಿಬಿಟ್ಟಿದೆ. ಇದನ್ನು ಇತರೆಡೆಗಳಲ್ಲಿರುವ ಕಮ್ಯುನಿಸ್ಟರು ಮತ್ತು ಅವರ ಹಿತೈಷಿಗಳು ಖಂಡಿಸುವುದೇ ಇಲ್ಲ. ಆದರೆ ಹೈದರಾಬಾದಿನಲ್ಲಿ ಒಬ್ಬ ಕಮ್ಯುನಿಸ್ಟ್ ಹಿತೈಷಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಅದರ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆಯುತ್ತವೆ. ವೈಚಾರಿಕ ಭಿನ್ನತೆಯಿಂದ ಯಾರದಾದರೂ ಕೊಲೆಯಾದರೆ ಅದನ್ನು ಮಾನವೀಯ ಕಳಕಳಿ ಇರುವ ಯಾರಾದರೂ ಖಂಡಿಸಲೇಬೇಕು. ಎಡಪಂಥೀಯನಾಗಲೀ, ಬಲಪಂಥೀಯನಾಗಲೀ ದುಷ್ಕೃತ್ಯ ಯಾರೇ ಮಾಡಿದರೂ ಅದನ್ನು ಸಮಾನ ರೀತಿಯಲ್ಲಿ ನೋಡುವ ಪರಿಪಾಠ ಮರೆಯಾಗಿದೆ. ಇಲ್ಲಿ ಮಾನವತೆಯನ್ನು ವಿಚಾರವಾದ ನುಂಗಿಬಿಟ್ಟಿದೆ. ಸತ್ತವರು, ದೌರ್ಜನ್ಯಕ್ಕೊಳಗಾದವರ ಜಾತಿ, ಮತ, ರಾಜಕೀಯ ಪಕ್ಷ, ವೈಚಾರಿಕ ಒಲವು/ನಿಲುವುಗಳನ್ನು ಆಧರಿಸಿ ಅಂತಹ ದುರ್ಘಟನೆಗಳಿಗೆ ನಮ್ಮ ಪ್ರತಿಕ್ರಿಯೆ ಇರುತ್ತದೆಯೆಂದರೆ ಅದು ಮಾನವೀಯತೆಯ ಒರತೆ ಬತ್ತುತ್ತಿರುವುದನ್ನು ತೋರಿಸುತ್ತದೆ.
     ಅಧಿಕಾರದ ಸಲುವಾಗಿ ಏನು ಮಾಡಲೂ ಹೇಸದ ರಾಜಕಾರಣಿಗಳು, ಮತಾಂಧರು, ಸ್ವಂತದ ಲಾಭಕ್ಕಾಗಿ ಸತ್ಯದ ಹತ್ಯೆ ಮಾಡಲು ಸಿದ್ಧರಾಗಿರುವ ವಿಚಾರವ್ಯಾಧಿಗಳು, ಹಣ ಮತ್ತು ಟಿ.ಆರ್.ಪಿ. ಸಲುವಾಗಿ ಋಣಾತ್ಮಕ ಸಂಗತಿಗಳಿಗೆ ನೀರೆರೆಯುತ್ತಿರುವ ಹಲವು ಮಾಧ್ಯಮಗಳವರು ಮತ್ತು ಇಂತಹವನ್ನು ಕಂಡೂ ಕಾಣದಂತೆ ಕಣ್ಣುಮುಚ್ಚಿಕೊಂಡು ಸಹಿಸುವ ಸಜ್ಜನ ಸುಬ್ಬಣ್ಣರುಗಳು ಇಂದಿನ ಪರಿಸ್ಥಿತಿಗೆ ನೇರ ಕಾರಣರೆಂದರೆ ಅತಿಶಯೋಕ್ತಿಯಲ್ಲ. ನಮಗೆ ತೊಂದರೆಯಾದರೆ ಮಾತ್ರ ಗೊಣಗುಟ್ಟುವ, ನಮಗೇನೂ ತೊಂದರೆಯಿಲ್ಲವೆನಿಸಿದಾಗ ಮತ್ತು ಇತರರಿಗೆ ಮಾತ್ರ ತೊಂದರೆಯಾದಾಗ ಅದನ್ನು ಕಟ್ಟಿಕೊಂಡು ನಮಗೇನು ಎಂಬ ಭಾವ ತೋರುವವರ ಮನೋಭಾವ ಬದಲಾಗುವವರೆಗೆ ಇಂತಹ ಪರಿಸ್ಥಿತಿ ಇದ್ದೇ ಇರುತ್ತದೆ. ಕೆಟ್ಟವರು ಕೆಲವೇ ಜನರಿದ್ದರೂ ಅವರ ಉಪಟಳ, ಶಕ್ತಿ ಏಕೆ ಹೆಚ್ಚಾಗಿರುತ್ತದೆಯೆಂದರೆ, ಹೆಚ್ಚಿನ ಸಂಖ್ಯೆಯಲ್ಲಿರುವ ಒಳ್ಳೆಯವರು ನಮಗೇಕೆ ಅವರ ಉಸಾಬರಿ, ನಮಗೆ ಅವರಿಂದ ತೊಂದರೆಯಾಗದಿದ್ದರೆ ಸಾಕು ಎಂದು ಅಂದುಕೊಳ್ಳುವುದೇ ಆಗಿದೆ. ಸಜ್ಜನ ಶಕ್ತಿಯನ್ನು ಬಡಿದೆಬ್ಬಿಸಿ ಜಾಗೃತಗೊಳಿಸುವ ಕೆಲಸ ಈಗ ತುರ್ತಾಗಿ ಆಗಬೇಕಿದೆ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ