ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಅಕ್ಟೋಬರ್ 14, 2017

ಘನತೆ ಮತ್ತು ಉಡುಪು

     ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ ಎಂಬ ಕನ್ನಡದ ಹಾಡು ಯಾರಿಗೆ ಗೊತ್ತಿಲ್ಲ? ನೀವು ವೇದದ ವಿಚಾರಗಳ ಬಗ್ಗೆ ಬರೆಯುತ್ತೀರಿ, ಮಾತನಾಡುತ್ತೀರಿ, ಆದರೆ ಪ್ಯಾಂಟು ಷರಟು ಹಾಕಿಕೊಳ್ಳುತ್ತೀರಲ್ಲಾ ಎಂದು ಹಿರಿಯರೊಬ್ಬರು ನನ್ನನ್ನು ವಿಚಾರಿಸಿದ್ದರು. ಇಂತಹವರು ಇಂತಹ ರೀತಿಯಲಿಯ್ಲೇ ದಿರಿಸು ಹಾಕಿಕೊಳ್ಳಬೇಕು ಎಂಬುದು ಜನರ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ. ಸಾಹಿತಿಗಳ ಉಡುಗೆ, ರಾಜಕಾರಣಿಗಳ ಉಡುಗೆ, ಸಮಾಜಸೇವೆ ಮಾಡುವವರ ಉಡುಗೆ, ಸಾಂಪ್ರದಾಯಿಕರ ಉಡುಗೆ, ಹೀಗೆ ಅವರುಗಳ ವೃತ್ತಿ, ಪ್ರವೃತ್ತಿಗಳಿಗೆ ತಕ್ಕಂತೆ ವೇಷ ಇರಬೇಕು ಎಂಬುದು ಅವರ ಅಂತರಾಳದಲ್ಲಿ ಕುಳಿತುಬಿಟ್ಟಿದೆ. ಹೀಗಾಗಿ ನಾವು ಧರಿಸುವ ಬಟ್ಟೆಗೂ ಇಂದು ಸಾಮಾಜಿಕ ಪ್ರಾಧಾನ್ಯತೆಯಿದೆ. ವಸ್ತ್ರಸಂಹಿತೆ ಕುರಿತು ಲಿಖಿತ, ಅಲಿಖಿತ ನಿಯಮಗಳಿವೆಯೆಂದರೆ ಆಶ್ಚರ್ಯಪಡಬೇಕಿಲ್ಲ. ದಿನವೊಂದರಲ್ಲೇ ನಾವು ಹಲವು ರೀತಿಯ ಉಡುಪುಗಳನ್ನು ಧರಿಸುತ್ತೇವೆ. ಮನೆಯಲ್ಲಿರುವಾಗ ಒಂದು ತರಹ, ಹೊರಗೆ ಹೋಗುವಾಗ ಮತ್ತೊಂದು ತರಹ, ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗುವಾಗ, ಕಛೇರಿಯ ಕೆಲಸಕ್ಕೆ ಹೋಗುವಾಗ, ವಿಶೇಷ ಸಂದರ್ಭಗಳಲ್ಲಿ ಹೀಗೆ ಸಮಯ, ಸಂದರ್ಭಗಳಿಗೆ ತಕ್ಕಂತೆ ನಮ್ಮ ವೇಷ-ಭೂಷಣಗಳೂ ಬದಲಾಗುತ್ತಿರುತ್ತವೆ. ಸಮುದಾಯ, ಜಾತಿ, ಲಿಂಗ, ವರಮಾನ, ಉದ್ಯೋಗ, ರಾಜಕೀಯ, ಸಂಪ್ರದಾಯ, ಅನುಕೂಲತೆ, ವೈಶಿಷ್ಟ್ಯತೆ, ಅಂತಸ್ತು, ಪ್ರದೇಶ, ವಿದೇಶೀಯರ ಅಂಧಾನುಕರಣೆ, ಹವಾಮಾನ ಇತ್ಯಾದಿಗಳೂ ವಿವಿಧ ರೀತಿಯ ವಸ್ತ್ರ ಧರಿಸುವಿಕೆಗೆ ಕಾರಣಗಳಾಗಿವೆ.
     ಸುಮಾರು ೮೪ ಲಕ್ಷ ವಿವಿಧ ಜೀವಸಂಕುಲಗಳಲ್ಲಿ ಮಾನವ ಜೀವಿ ಮಾತ್ರ ಬಟ್ಟೆಗೆ ಮಹತ್ವ ನೀಡಿದ್ದಾನೆ. ಇದು ಅವನ ವಿವೇಚನಾಶಕ್ತಿಯ ಕಾರಣದಿಂದಿರಬಹುದು. ಬಟ್ಟೆ ಧರಿಸುವುದು ಕೇವಲ ತಮಗಾಗಿ ಅಲ್ಲದೆ ಇತರರ ಸಲುವಾಗಿಯೂ ಅಗಿರುವುದು ವಿಶೇಷ. ಊಟ ತನ್ನಿಚ್ಛೆ, ನೋಟ ಪರರಿಚ್ಛೆ ಎಂಬ ಗಾದೆ ಬಂದಿರುವುದು ಈ ಕಾರಣದಿಂದಲೇ! ಬಟ್ಟೆಗಳ ವಿನ್ಯಾಸವೂ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ನಾಯಕರುಗಳು, ಕ್ರೀಡಾಪಟುಗಳು, ಸಿನೆಮಾ ತಾರೆಯರುಗಳ ಕೇಶ ಮತ್ತು ವಸ್ತ್ರವಿನ್ಯಾಸಗಳನ್ನು ಹಿಂಬಾಲಕರು ಮೆಚ್ಚುತ್ತಾರೆ, ಅನುಕರಿಸುತ್ತಾರೆ.
     ಧಾರ್ಮಿಕ ಸ್ಥಳಗಳಲ್ಲಿ ಅಲ್ಲಿನ ಪಾವಿತ್ರ್ಯ ಅಥವ ಮಹತ್ವಕ್ಕೆ ತಕ್ಕಂತೆ ಉಡುಪಿನ ಕೆಲವು ನಿರ್ಬಂಧಗಳು ಇರುವುದನ್ನು ಕಾಣುತ್ತೇವೆ. ವ್ಯಾಟಿಕನ್ನಿನ ಸಂತ ಬೆಸಿಲಿಯ ಚರ್ಚಿನ ಮುಂಭಾಗದಲ್ಲಿ ಚರ್ಚಿಗೆ ಭೇಟಿ ಕೊಡುವವರು ಧರಿಸಬೇಕಾದ ಕನಿಷ್ಠ ಉಡುಪುಗಳ ಕುರಿತು ಫಲಕವಿದೆ. ಕ್ವತಾರ್‌ನಲ್ಲಿ, ನೀವು ಈ ಪ್ರದೇಶದಲ್ಲಿದ್ದೀರಿ, ನೀವು ನಮ್ಮಲ್ಲಿ ಒಬ್ಬರು. ಆದ್ದರಿಂದ ಸಾರ್ವಜನಿಕ ಸಭ್ಯತೆಯನ್ನು ಗೌರವಿಸಿ ಎಂಬ ಫಲಕ ಗಮನ ಸೆಳೆಯುತ್ತದೆ. ಹಲವು ಮುಸ್ಲಿಮ್ ದೇಶಗಳಲ್ಲಿ ಅಲ್ಲಿನ ರೀತಿ-ನೀತಿಗಳಿಗೆ ತಕ್ಕಂತೆ ಉಡುಪು ಧರಿಸುವುದು ಕಡ್ಡಾಯವಾಗಿರುತ್ತದೆ. ಕೆಲವು ದೇವಸ್ಥಾನಗಳು, ಮಸೀದಿಗಳು ಮತ್ತು ಚರ್ಚುಗಳಲ್ಲೂ ಸಹ ಯಾವ ರೀತಿಯ ಉಡುಪು ಧರಿಸಿ ಪ್ರವೇಶಿಸಬೇಕೆಂಬ ಬಗ್ಗೆ ನಿರ್ಬಂಧಗಳಿರುವುದನ್ನು ಗಮನಿಸಬಹುದು. ಗಂಡಸರು ಮತ್ತು ಹೆಂಗಸರುಗಳು ಧರಿಸುವ ಉಡುಪುಗಳಲ್ಲೂ ಪ್ರತ್ಯೇಕತೆಗಳು ವಿಶೇಷವಾಗಿವೆ. ವಸ್ತ್ರವಿರಲಿ, ತಲೆಯ ಕೂದಲು ಬೆಳೆಸುವುದರಲ್ಲೂ ವಿಶೇಷತೆ ಗಮನಿಸಬಹುದು, ಹೆಂಗಸರಿಗೆ ಉದ್ದ ತಲೆಯಕೂದಲು ಮತ್ತು ಗಂಡಸರಿಗೆ ಗಿಡ್ಡ ತಲೆ ಕೂದಲುಗಳಿರುವುದು ಸಂಪ್ರದಾಯದಂತೆ ಆಗಿದೆ.
     ಸಮವಸ್ತ್ರಗಳೂ ಸಾಮಾನ್ಯವಾಗಿ ಬಳಕೆಯಲ್ಲಿವೆ. ಪೊಲೀಸ್, ಮಿಲಿಟರಿ, ಅಗ್ನಿಶಾಮಕ ದಳ, ವೈದ್ಯಕೀಯ ವೃತ್ತಿಯವರು, ವಕೀಲರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳವರು, ಕಾರ್ಖಾನೆಯ ಕೆಲಸಗಾರರು, ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಸಮವಸ್ತ್ರಗಳನ್ನು ಬಳಸುತ್ತಾರೆ. ಇದು ಅಗತ್ಯದ್ದೂ ಆಗಿದೆ. ಸಮವಸ್ತ್ರಗಳಿಂದಾಗಿ ಅವರುಗಳು ಗುರುತಿಸಲ್ಪಡುತ್ತಾರೆ. ಕೆಲವು ಪ್ರತಿಷ್ಠಿತ ಹೋಟೆಲುಗಳು, ಕ್ಲಬ್ಬುಗಳಲ್ಲಿ ಧರಿಸಬೇಕಾದ ವಸ್ತ್ರಗಳ ಕುರಿತೂ ನಿಬಂಧನೆಗಳನ್ನು ಮಾಡಿಕೊಂಡಿರುತ್ತಾರೆ. ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ಕ್ಲಬ್ ಒಂದರ ಕಾರ್ಯಕ್ರಮಕ್ಕೆ ಪಂಚೆ, ಚಪ್ಪಲಿ ಧರಿಸಿ ಹೋಗಿದ್ದ ಪ್ರತಿಷ್ಠಿತರನ್ನು ಒಳಗೆ ಪ್ರವೇಶಿಸದಂತೆ ತಡೆ ಹಿಡಿದಿದ್ದು ದೊಡ್ಡ ಸುದ್ದಿಯಾಗಿತ್ತು.  
     ಧಾರ್ಮಿಕ, ಮತೀಯ, ಪಾರಂಪರಿಕ ಸಂಪ್ರದಾಯಗಳೂ ಉಡುಪಿನ ವಿಶಿಷ್ಠತೆಗೆ ಕಾಣಿಕೆಯಿತ್ತಿವೆ. ಮುಸ್ಲಿಮ್ ಪುರುಷರು ಧರಿಸುವ ಜುಬ್ಬಾ, ಪೈಜಾಮ, ತಲೆಗೆ ಹಾಕುವ ಟೋಪಿ ಇತ್ಯಾದಿಗಳು, ಮುಸ್ಲಿಮ್ ಮಹಿಳೆಯರು ಧರಿಸುವ ಬುರ್ಕಾ, ಸಿಕ್ಖರು ಧರಿಸುವ ಪೇಟ, ಜುಟ್ಟು ಕಟ್ಟುವ ರೀತಿ, ಹಾಕುವ ಉಡುಗೆಗಳಿಂದ ಅವರುಗಳನ್ನು ಸುಲಭವಾಗಿ ಗುರುತಿಸಬಹುದು. ಸ್ವಾತಂತ್ರ್ಯದ ಹೆಸರಿನಲ್ಲಿ ಬತ್ತಲೆಯಾಗಿರಬಯಸುವ ಅಥವ ಸ್ವೇಚ್ಛೆಯಾಗಿರಬಯಸುವ ಜನರಿಗಾಗಿ ಅಮೆರಿಕಾದಲ್ಲಿ ಕೆಲವು ಖಾಸಗಿ ಬೀಚುಗಳಲ್ಲಿ, ರೆಸಾರ್ಟುಗಳಲ್ಲಿ, ಕ್ಲಬ್ಬುಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ, ಮುಜಗರವಾಗದಂತೆ ಸಭ್ಯತೆಯ ಎಲ್ಲೆಯನ್ನು ಮೀರದಂತೆ ವಸ್ತ್ರ ಧರಿಸುವುದು ನಾಗರಿಕ ನಡವಳಿಕೆ. ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರಚೋದನಕಾರಿ ಉಡುಪು ಧರಿಸುವುದು ಒಳ್ಳೆಯದಲ್ಲ. ವ್ಯಕ್ತಿಗೆ ಘನತೆ ತಂದುಕೊಡುವುದು ಆತ ಧರಿಸುವ ಉಡುಪು. ಸಾರ್ವಜನಿಕ ಕಛೇರಿಯಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಯೊಬ್ಬ ಟಿ ಷರ್ಟು, ಬರ್ಮುಡ ಧರಿಸಿ ಬಂದರೆ ಹೇಗಿದ್ದೀತು? ಮನೆಯಲ್ಲಿ, ಮಲಗುವ ಸಮಯದಲ್ಲಿ ಧರಿಸುವ ಉಡುಪುಗಳನ್ನು ಹೊರಗೆ ಹೋಗುವಾಗ ಹಾಕಿಕೊಳ್ಳಬಹುದೆ? ಉಡುಪಿನ ರೀತಿಯೂ ವ್ಯಕ್ತಿಯೊಬ್ಬ ಸರಳನೋ, ಶೋಕಿಲಾಲನೋ, ಶಿಸ್ತುಗಾರನೋ, ಸೋಮಾರಿಯೋ ಎಂಬುದನ್ನು ಬಿಂಬಿಸಬಲ್ಲದು. 
     ಸರಳ ಉಡುಪನ್ನು ಧರಿಸಿದವರನ್ನು ನಿಕೃಷ್ಟವಾಗಿ ಕಾಣುವ ಮನೋಭಾವದವರೂ ಇರುತ್ತಾರೆ. ಶ್ರೀಮತಿ ಸುಧಾ ನಾರಾಯಣಮೂರ್ತಿಯವರ ಸ್ವಂತದ ಅನುಭವವನ್ನು ಅವರ ಇತ್ತೀಚಿನ ಪುಸ್ತಕ ತ್ರೀ ಥೌಸಂಡ್ ಸ್ಟಿಚಸ್ನಲ್ಲಿ ಹಂಚಿಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸುವುದು ಉಚಿತವೆನಿಸುತ್ತದೆ. ಅವರು ಲಂಡನ್ನಿನ ಹೀತ್ರೋ ವಿಮಾನನಿಲ್ದಾಣದಲ್ಲಿ ಸರತಿಯ ಸಾಲಿನಲ್ಲಿ ನಿಂತಿದ್ದಾಗ ಒಬ್ಬ ಠಾಕು ಠೀಕಾಗಿ ಉಡುಪು ಧರಿಸಿದ್ದ ಹೈಹೀಲ್ಡ್ ಮಹಿಳೆ ಅವರನ್ನು ಕುರಿತು, ಹೋಗಿ ಎಕಾನಮಿ ಶ್ರೇಣಿಯ ಸಾಲಿನಲ್ಲಿ ನಿಲ್ಲು. ಇದು ಬಿಸಿನೆಸ್ ಶ್ರೇಣಿಯ ಸಾಲು ಎಂದಳಂತೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆಕೆ, ಜಾನುವಾರು ಜಾತಿ ವ್ಯಕ್ತಿ(ಛಿಚಿಣಣಟe-ಛಿಟಚಿss ಠಿeಡಿsoಟಿ) ಎಂದು ಗೊಣಗಿದ್ದಳಂತೆ. ಸಲ್ವಾರ್ ಕಮೀಜ್ ಧರಿಸಿ ನಿಂತಿದ್ದ ದೊಡ್ಡ ಉದ್ಯಮಿ ನಾರಾಯಣಮೂರ್ತಿಯವರ ೬೬ ವರ್ಷಗಳ ಪತ್ನಿ ತಾಳ್ಮೆಗೆ ಹೆಸರಾದ ಸುಧಾಮೂರ್ತಿಯವರಿಗೆ ಕೋಪ ಬಂದರೂ ಸುಮ್ಮನಿದ್ದರು. ಅವರು ಧರಿಸಿದ್ದ ಉಡುಪಿನಿಂದಾಗಿ ಇಂತಹ ಉಡುಪು ಧರಿಸಿ ಬಿಸಿನೆಸ್ ಶ್ರೇಣಿಯ ಸಾಲಿನಲ್ಲಿ ನಿಲ್ಲುವುದಕ್ಕೆ ಲಾಯಕ್ಕಿಲ್ಲವೆಂದು ಆಕೆ ಭಾವಿಸಿದ್ದಕ್ಕಾಗಿ ಕೋಪಕ್ಕಿಂತ ಹೆಚ್ಚು ದುಃಖವೆನಿಸಿತು. ಅವರು ತಮ್ಮ ಬೋರ್ಡಿಂಗ್ ಪಾಸ್ ತೋರಿಸಿ ಮಹಿಳೆಯ ಅನುಮಾನ ಪರಿಹರಿಸಬಹುದಾಗಿದ್ದರೂ ಹಾಗೆ ಮಾಡಲಿಲ್ಲ. ಕಾಕತಾಳೀಯವೆಂಬಂತೆ ಅದೇ ಮಹಿಳೆ ಅಂದಿನ ದಿನವೇ ಇನ್ಫೋಸಿಸ್ ಸಂಸ್ಥೆ ಸರ್ಕಾರಿ ಶಾಲೆಯೊಂದರ ಜೀರ್ಣೋದ್ಧಾರಕ್ಕಾಗಿ ಹಣ ಪ್ರಾಯೋಜಿಸುವುದಕ್ಕೆ ಸಂಬಂಧಿಸಿದ ಸಭೆಗೆ ಹಾಜರಾಗಿದ್ದಳು. ಅತಿ ಆಡಂಬರದ ದಿರಿಸು ಧರಿಸಿ ವಿಮಾನ ನಿಲ್ದಾಣದಲ್ಲಿದ್ದ ಆ ಮಹಿಳೆ ಸಭೆಯ ಉದ್ದೇಶಕ್ಕೆ ತಕ್ಕದೆಂಬಂತೆ ಖಾದಿ ಸೀರೆ ಧರಿಸಿ ಬಂದಿದ್ದಳು. ಸಭೆಯ ಅಧ್ಯಕ್ಷತೆಯನ್ನು ತಾನು ಯಾರನ್ನು ಜಾನುವಾರು ಜಾತಿ ಎಂದು ಹಂಗಿಸಿದ್ದಳೋ ಆ ಸುಧಾಮೂರ್ತಿಯವರೇ ವಹಿಸಿದ್ದುದನ್ನು ಕಂಡು ಅವಾಕ್ಕಾಗಿದ್ದಳು. ಅಂತಸ್ತು ಅನ್ನುವುದು ಹಣದಿಂದ ಬರುವುದಿಲ್ಲ, ಧರಿಸುವ ಆಡಂಬರದ ಉಡುಪಿನಿಂದ ಬರುವುದಿಲ್ಲ ಎಂಬ ಅರಿವು ಜನಕ್ಕೆ ಬರಬೇಕಾಗಿದೆ. ಹೆಚ್ಚು ಬೆಲೆಯ ಉಡುಪುಗಳ ಖರೀದಿಯ ಸಲುವಾಗಿಯೇ ಕೆಟ್ಟ ದಾರಿ ಹಿಡಿಯುವವರೂ ಇದ್ದಾರೆ ಎಂದು ಅವರು ತಮ್ಮ ಪುಸ್ತಕದಲ್ಲಿ ವಿಷಾದಿಸಿದ್ದಾರೆ. ಸಭ್ಯ ಉಡುಪು ಇರಬೇಕು, ಉಡುಪೇ ಎಲ್ಲವೂ ಅಲ್ಲ ಎಂಬ ಅರಿವೂ ಬರಬೇಕು!
ವೇಷಭೂಷಣವನೊಪ್ಪೀತು ನೆರೆಗಡಣ
ನೀತಿಪಠಣವ ಮೆಚ್ಚೀತು ಶ್ರೋತೃಗಣ|
ನುಡಿದಂತೆ ನಡೆದರದುವೆ ಆಭರಣ
ಮೊದಲಂತರಂಗವನೊಪ್ಪಿಸೆಲೋ ಮೂಢ||
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ