ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಅಕ್ಟೋಬರ್ 31, 2013

ಅಭಿವೃದ್ಧಿ ಕಾರ್ಯಗಳು ಮತ್ತು ಜನಜಾಗೃತಿ

     ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳೂ ತಮ್ಮ ಅಧಿಕಾರದ ಅವಧಿಯಲ್ಲಿ ಹಾಗೆ ಮಾಡಿದೆವು, ಹೀಗೆ ಮಾಡಿದೆವು, ಇಷ್ಟೊಂದು ಅಭಿವೃದ್ಧಿ ಸಾಧಿಸಿದೆವು ಎಂದು ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ದೇಶದ, ರಾಜ್ಯದ ಅಭಿವೃದ್ಧಿ ಮಾಡುವ ಸಲುವಾಗಿಯೇ ಅವರು ಅಧಿಕಾರಕ್ಕೆ ಬಂದದ್ದು, ಅದು ತಮ್ಮ ಕರ್ತವ್ಯ ಎಂಬುದನ್ನು ಮರೆಯುತ್ತಾರೆ. ಇಷ್ಟಕ್ಕೂ ಆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಜನರ ಹಣದಿಂದಲೇ ಹೊರತು, ಪಕ್ಷದ ಅಥವ ನಾಯಕರುಗಳ ಹಣದಿಂದಲ್ಲ ಅಲ್ಲವೇ? ಜನರ ಅಭಿವೃದ್ಧಿಯ ಸಲುವಾಗಿ ಮಾಡಲೇಬೇಕಾದ ಕಾರ್ಯಕ್ರಮಗಳನ್ನು ತಮ್ಮದೇ ಕಾರ್ಯಕ್ರಮ, ತಮ್ಮ ಪಕ್ಷದ್ದೇ ಕಾರ್ಯಕ್ರಮ ಎಂದು ಬಿಂಬಿಸುವ ಪರಂಪರೆ ಪ್ರಧಾನಮಂತ್ರಿಯಾಗಿದ್ದ ದಿ. ಶ್ರೀಮತಿ ಇಂದಿರಾಗಾಂಧಿಯವರ ಅಧಿಕಾರಾವಧಿಯಿಂದ ವಿಜೃಂಭಿತವಾಗಲಾರಂಭವಾಗಿ ಈಗ ಆ ಪದ್ಧತಿ ಉತ್ತುಂಗ ಸ್ಥಿತಿಗೆ ತಲುಪಿದೆ. ದೇಶ ಅಭಿವೃದ್ಧಿಯ ಬದಲಿಗೆ ಅಧೋಗತಿಗೆ ತಲುಪುತ್ತಿದೆಯೇನೋ ಎಂದು ಅನ್ನಿಸುತ್ತಿದೆ. ಆಗ 'ಇಂದಿರಾಗಾಂಧಿಯ ಇಪ್ಪತ್ತಂಶದ ಕಾರ್ಯಕ್ರಮ, ಜನತೆಗೆ ಮಾಡಿದೆ ಬಾಳ್ ಸುಗಮ'- ಎಂಬ ಪ್ರಚಾರಗೀತೆ ಎಲ್ಲರಿಗೂ ಬಾಯಿಪಾಠವಾಗಿತ್ತು. ಆ ಇಪ್ಪತ್ತಂಶದ ಕಾರ್ಯಕ್ರಮಗಳಿಗೆ ಬೇಕಾದ ಹಣ ಬರುತ್ತಿದ್ದುದು ಸರ್ಕಾರದ ಖಜಾನೆಯಿಂದ. ನಂತರದಲ್ಲಿ, ವಿವಿಧ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಘೋಷಿಸುವ ಕಾರ್ಯಕ್ರಮಗಳನ್ನು ಅಧಿಕಾರಕ್ಕೆ ಬಂದ ನಂತರದಲ್ಲಿ ತಮ್ಮ ನೇತಾರರುಗಳ ಹೆಸರಿನಲ್ಲಿ ಜಾರಿಗಳಿಸಲು ಪ್ರಾರಂಭಿಸಿದವು. ಹಿಂದಿದ್ದ ಯೋಜನೆ, ಕಾರ್ಯಕ್ರಮಗಳನ್ನೇ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿ ತಮ್ಮದೇ ಕಾರ್ಯಕ್ರಮವೆಂಬಂತೆ ಬಿಂಬಿಸತೊಡಗಿದವು. ಇಂದು ಇಂದಿರಾಗಾಂಧಿ ಮತ್ತು ರಾಜೀವಗಾಂಧಿಯವರ ಹೆಸರಿನಲ್ಲಿ ದೇಶದಲ್ಲಿ ಎಷ್ಟು ಸರ್ಕಾರಿ ಸಂಸ್ಥೆಗಳು, ಯೋಜನೆಗಳು, ಕಟ್ಟಡಗಳು ಇವೆಯೋ ಅದರ ಲೆಕ್ಕ ಯಾರಿಗೂ ತಿಳಿದಿರಲಾರದು. ಕಾಂಗ್ರೆಸ್ಸೇತರ ಸರ್ಕಾರಗಳ ಕಥೆಯೂ ಇದೇ. ರಾಜ್ಯ ಸರ್ಕಾರಗಳೂ ಕೇಂದ್ರ ಸರ್ಕಾರದ ಹಿರಿಯಕ್ಕನ ಚಾಳಿಯನ್ನೇ ಮುಂದುವರೆಸಿಕೊಂಡು ಬರುತ್ತಿವೆ. ಅಭಿವೃದ್ಧಿ ಕಾರ್ಯಗಳನ್ನು ತಮ್ಮದೇ ಕಾರ್ಯಕ್ರಮವೆಂಬಂತೆ ಚುನಾವಣೆಯಲ್ಲಿ ಮತಗಳಿಕೆಯ ದೃಷ್ಟಿಯಿಂದ ಪತ್ರಿಕೆಗಳಲ್ಲಿ, ದೃಷ್ಯಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಮಾಡುವ ಸಲುವಾಗಿಯೇ ವೆಚ್ಚ ಮಾಡುವ ಕೋಟಿ ಕೋಟಿ ಸರ್ಕಾರದ ಹಣದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು. ಜನಸಾಮಾನ್ಯನ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವುದಾದರೂ, ಸಂವಿಧಾನ ಬದ್ಧ ಕರ್ತವ್ಯಗಳನ್ನು ನಿರ್ವಹಿಸುವುದಾದರೂ ಅವುಗಳಿಗೆ ಪಕ್ಷಗಳ ಸಾಧನೆಯೆಂಬಂತೆ ಬಿಂಬಿಸುವ ಪ್ರವೃತ್ತಿ ದೇಶದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. 
     ಜನಸಾಮಾನ್ಯರ ಪ್ರಾಥಮಿಕ ಅಗತ್ಯತೆಗಳಾದ ಕುಡಿಯುವ ನೀರು ಒದಗಿಸುವುದು, ಉತ್ತಮ ಶಿಕ್ಷಣ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು, ಮೂಲಭೂತ ಸೌಕರ್ಯಗಳಾದ ಸಂಪರ್ಕ ರಸ್ತೆಗಳು, ಚರಂಡಿಗಳ ನಿರ್ಮಾಣ ಮತ್ತು ನಿವಃಹಣೆ, ಉತ್ತಮ ಆರೋಗ್ಯ ಪಾಲನೆ ಮತ್ತು ಸುಯೋಗ್ಯ ಚಿಕಿತ್ಸಾ ವ್ಯವಸ್ಥೆ, ಇತ್ಯಾದಿ ಹತ್ತು ಹಲವು ಪ್ರಾಥಮಿಕ ಅಂಶಗಳನ್ನು ಮುಂದಿಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳವರೂ ಒಟ್ಟಾಗಿ ದೇಶಕ್ಕೆ ಒಂದು ಸಾಮಾನ್ಯ ಕಾರ್ಯಕ್ರಮ ರೂಪಿಸಬೇಕು. ಯಾವುದೇ ಪಕ್ಷದ ಸರ್ಕಾರ ಬಂದರೂ ಈ ಸಾಮಾನ್ಯ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾದುದು ಅವುಗಳ ಮೂಲಭೂತ ಜವಾಬ್ದಾರಿಯಾಗಬೇಕು. ಈ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಿ ಕಾಂಗ್ರೆಸ್ ಕಾರ್ಯಕ್ರಮ, ಬಿಜೆಪಿ ಕಾರ್ಯಕ್ರಮ, ಕಮ್ಯುನಿಸ್ಟ್ ಕಾರ್ಯಕ್ರಮ ಎಂದೆಲ್ಲಾ ಹೇಳಬಾರದು. ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳು ಈ ಸಾಮಾನ್ಯ ಕಾರ್ಯಕ್ರಮಗಳಿಗೆ ಬದ್ಧರಾಗಿರುತ್ತೇವೆಂದು ಸಹಿ ಮಾಡಬೇಕು. ನಮ್ಮ ಚುನಾವಣಾ ಆಯೋಗ ಇದನ್ನು ಏಕೆ ಕಡ್ಡಾಯ ಮಾಡಬಾರದು? ಚುನಾವಣಾ ಸಮಯಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ಆಗ ಗಣನೀಯವಾಗಿ ಕಡಿಮೆಯಾದಾವು. ಜನರನ್ನು ಸೋಮಾರಿಗಳನ್ನಾಗಿಸುವ ಅಗ್ಗದ ಕಾರ್ಯಕ್ರಮಗಳಿಗೆ ಕಡಿವಾಣ ಬೀಳಬೇಕು. ಇಂತಹ ಚುನಾವಣೆಯಲ್ಲಿ ಮತಗಳಿಕೆ ಉದ್ದೇಶದಿಂದ ಸರ್ಕಾರದ ಹಣದಲ್ಲಿ ಜಾರಿಗೆ ತರುವ ಅಗ್ಗದ ಜನಪ್ರಿಯ ಕಾರ್ಯಕ್ರಮಗಳಿಂದ ದೇಶದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದಲ್ಲದೆ, ರೂಪಾಯಿ ಮೌಲ್ಯ ಕುಸಿಯುವುದಕ್ಕೂ ಕಾರಣವಾಗುತ್ತದೆ. ಒಂದು ವೇಳೆ ತಮ್ಮದೇ ಆದ, ತಮ್ಮ ಪಕ್ಷದ್ದೇ ಆದ ಹೊಸದಾದ, ಜನಸಾಮಾನ್ಯರ ಮೇಲೆ ಪರೋಕ್ಷ ಅಥವ ಅಪರೋಕ್ಷ ಆರ್ಥಿಕ ಹೊರೆ ಬೀಳುವಂತಹ ಕಾರ್ಯಕ್ರಮಗಳು, ಯೋಜನೆಗಳನ್ನು ಮಾಡಬಯಸಿದರೆ ರಾಜಕೀಯ ಪಕ್ಷಗಳು, ರಾಜಕೀಯ ನೇತಾರರು ಅವರದೇ ಹಣ ಬಳಸಿ ಮಾಡಲಿ ಮತ್ತು ಅವರ ಹೆಸರುಗಳನ್ನೇ ಬಳಸಲಿ. 
     ಯಾವುದೇ ಒಬ್ಬ ವ್ಯಕ್ತಿ ಹಳ್ಳಿಯೊಂದರಲ್ಲಿ ಸಾಯುವ ಸ್ಥಿತಿಯಲ್ಲಿದ್ದಾನೆ ಎಂದರೆ ಅವನನ್ನು ರಕ್ಷಿಸುವ ಹೊಣೆ ಸರ್ಕಾರದ್ದಾಗಿರುತ್ತದೆ. ಅವನು ಕಾಂಗ್ರೆಸ್ ಪಕ್ಷದವನು, ಬಿಜೆಪಿಯವನು, ಕಮ್ಯೂನಿಸ್ಟ್, ಸಮಾಜವಾದಿ ಪಕ್ಷದವನು, ಆ ಜಾತಿಯವನು, ಈ ಧರ್ಮದವನು, ನಮಗೆ ಮತ ನೀಡಿದವನು/ನೀಡದವನು,  ಇತ್ಯಾದಿ ನೋಡಬೇಕೇ? ಉತ್ತಮ ನೈರ್ಮಲ್ಯ ಪಾಲನೆಗೂ, ಒಳ್ಳೆಯ ಸಂಪರ್ಕ ಸಾಧನಗಳನ್ನು ಕಲ್ಪಿಸುವುದಕ್ಕೂ ರಾಜಕೀಯ ಬೆರೆಸಬೇಕೇ? ಕೆಲವು ಮಕ್ಕಳು ಕಾರುಗಳಲ್ಲಿ ಶಾಲೆಗಳಿಗೆ ಹೋಗುತ್ತಿದ್ದರೆ, ಕೆಲವರು ಶಿಕ್ಷಣ ವಂಚಿತರಾಗಿ ತುತ್ತು ಕೂಳಿಗೂ ಪರದಾಡುವ ಸ್ಥಿತಿಯಲ್ಲಿರಬೇಕೇ? ಹೆಚ್ಚಿನ ಆರೋಗ್ಯದ ಸಮಸ್ಯೆಗಳು ಉಂಟಾಗುವುದು ಒಳ್ಳೆಯ ಕುಡಿಯುವ ನೀರಿನ ಪೂರೈಕೆಯ ಕೊರತೆಯಿಂದಲ್ಲವೇ? ಕುಡಿಯುವ ನೀರಿನ ಪೂರೈಕೆ ಒದಗಿಸುವುದು ಎಲ್ಲಾ ಸರ್ಕಾರಗಳ ಕರ್ತವ್ಯವಲ್ಲವೇ? ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ  ನೀಡಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುವುದೆಂದು ಹೇಳಿ ಮತ ಕೇಳುವುದು ಎಷ್ಟು ಸರಿ? ನೈರ್ಮಲ್ಯದ ಸಮಸ್ಯೆಗೆ ಪರಿಹಾರ ರೂಪಿಸುವುದಕ್ಕೆ ಯಾವ ಕಾನೂನು ಬೇಕು? ಯಾವ ಕ್ರಾಂತಿ ಆಗಬೇಕು? ಮಾಡಬೇಕೆಂಬ ಮನಸ್ಸು ಇದ್ದರೆ ಸಾಕಲ್ಲವೇ? ಇಂತಹ ಸಂಗತಿಗಳನ್ನು ಸೇರಿಸಿ ಒಂದು ಸಾಮಾನ್ಯ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಲು ಒತ್ತಡ ತರಬೇಕಿದೆ. ರಾಜಕೀಯ ಧುರೀಣರ, ಸರ್ಕಾರದ ಹಣ ಬಳಸಿ ಜಾರಿಯಾಗುವ ವಿವಿಧ ಸರ್ಕಾರಿ ಯೋಜನೆಗಳಿಗೆ ಪಕ್ಷದ ನೇತಾರರುಗಳ ಹೆಸರಿಡುವುದನ್ನು ಮೊದಲು ನಿಷೇಧಿಸಬೇಕು. ಈಗ ಅಂತಹ ರಾಜಕೀಯ ನಾಯಕರುಗಳ ಹೆಸರಿನಲ್ಲಿ ಇರುವ ಸರ್ಕಾರೀ ಸಂಸ್ಥೆಗಳ ಹೆಸರುಗಳಲ್ಲಿ ಸ್ವಾತಂತ್ರ್ಯಾನಂತರದ ರಾಜಕೀಯ ನಾಯಕರ ಹೆಸರುಗಳನ್ನು ಕಿತ್ತುಹಾಕಬೇಕು. ಚುನಾವಣಾ ಆಯೋಗ ಮತ್ತು ಜನಸಾಮಾನ್ಯರ ಹಿತ ಬಯಸುವ ನೇತಾರರು ಇತ್ತ ಗಮನ ಹರಿಸಬೇಕು.
     ಅಗ್ಗದ ಪ್ರಚಾರ ಪಡೆದುಕೊಳ್ಳುವ ಪ್ರವೃತ್ತಿ ಇಂದು ಯಾವ ಹಂತಕ್ಕೆ ತಲುಪಿದೆಯೆಂದರೆ ಸಂಸದರ, ಶಾಸಕರ ಹೆಸರಿನಲ್ಲಿ ಸರ್ಕಾರಿ ಅನುದಾನಗಳು ಬಿಡುಗಡೆಯಾಗುತ್ತವೆ. ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿಯೂ ಕೂಡ ಸದಸ್ಯರ ಹೆಸರುಗಳಲ್ಲಿ, ಅವರುಗಳು ಬಯಸಿದಂತೆ ಅನುದಾನಗಳು ಬಿಡುಗಡೆಯಾಗುತ್ತವೆಯೇ ಹೊರತು ಜನರ ಅಗತ್ಯ, ಅವಶ್ಯಕತೆಗಳಿಗನುಸಾರವಾಗಿ ಅಲ್ಲ. ಅದರಲ್ಲೂ ರಾಜಕೀಯ ತಾರತಮ್ಯವಿರುತ್ತದೆ. ಅವರುಗಳು ಬಯಸುವ ಕಾರ್ಯಕ್ರಮಗಳಿಗೆ ಅವುಗಳು ಬಳಕೆಯಾಗುತ್ತಿವೆ. ಸಂಸದರ, ಶಾಸಕರ ಹೆಸರುಗಳು ಸರ್ಕಾರಿ ಹಣದಿಂದ ಕಟ್ಟಲಾದ ಬಸ್ ನಿಲ್ದಾಣಗಳು, ಕಟ್ಟಡಗಳು, ಮುಂತಾದುವುಗಳ ಮೇಲೆ ರಾರಾಜಿಸುತ್ತವೆ. ಸಮುದಾಯ ಭವನದ ಹೆಸರಿನಲ್ಲಿ ಕಟ್ಟುವ ಕಟ್ಟಡಗಳಿಗೂ ಸಹ ಅಂತಹ ಹಣ ಹೋಗುತ್ತಿದೆ. ನಂತರದಲ್ಲಿ ಅವು ಕಲ್ಯಾಣ ಮಂಟಪಗಳಾಗಿ ಖಾಸಗಿಯವರು ಹಣ ಮಾಡಿಕೊಳ್ಳುವುದರಲ್ಲಿ ಅಂತ್ಯವಾಗುತ್ತಿದೆ. ಈ ರೀತಿಯಲ್ಲಿ ಸರ್ಕಾರಿ ಹಣ ಸಂಬಂಧಿಸಿದ ಸಂಸದರು, ಶಾಸಕರುಗಳು ತಮಗೆ ಮತ ನೀಡಿದವರು, ತಮ್ಮ ಬೆಂಬಲಿಗರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಾರಿಗೊಳಿಸುವ ಕಾಮಗಾರಿಗಳಿಗೆ ಬಳಕೆಯಾಗುತ್ತವೆ. ತಮಗೆ ಮತ ನೀಡದವರ ಮತ್ತು ವಿರೋಧಿಪಕ್ಷದವರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗುವುದೇ ಇಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಲ್ಲದ ನಡೆಯಾಗುತ್ತದೆ. ಇವುಗಳನ್ನು ಸಾಮಾನ್ಯ ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡುವ ಕಾರ್ಯಕ್ರಮಗಳು ಎನ್ನಲಾಗದು. ಚುನಾಯಿತ ಪ್ರತಿನಿಧಿಗಳು ಹಣ ಮಾಡುವ ಸಲುವಾಗಿಯೇ ರಾಜಕೀಯ ಮಾಡುತ್ತಿರುವುದು ಮತ್ತು ಕೇವಲ ರಾಜಕೀಯ ಮಾಡಿಕೊಂಡಿದ್ದರೂ ಅವರ ಸಂಪತ್ತು ವೃದ್ಧಿಯಾಗುತ್ತಿರುವುದು ಜನಸಾಮಾನ್ಯರ ಕಣ್ಣಿಗೆ ಕಾಣುತ್ತಿರುವ ಸತ್ಯ. ಕೇವಲ ಮತಗಳಿಕೆ ದ್ಟೃಂದ ಅಗ್ಗದ ಜನಪ್ರಿಯ ಕಾರ್ಯಕ್ರಮಗಳು ಜಾರಿಯಾಗುತ್ತಿದ್ದು, ಅವುಗಳಿಂದ ಸರ್ಕಾರದ ಬೊಕ್ಕಸದಿಂದ ಜನಸಾಮಾನ್ಯರ ಕೋಟಿಗಟ್ಟಲೆ ಹಣ ಲೂಟಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನೈಜ ಫಲಾನುಭವಿಗಳಿಗೆ ತಲುಪುವುದರಲ್ಲಿ ಎಷ್ಟರಮಟ್ಟಿಗೆ ಸಫಲವಾಗುತ್ತವೆ ಎಂಬುದು ಎಲ್ಲರಿಗೂ ತಿಳಿದದ್ದೇ.
     ದೇಶ ಇಂದು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ತಾಯಿಬೇರು ಭ್ರಷ್ಠಾಚಾರ. ಇದನ್ನು ತಡೆಗಟ್ಟಿದರೆ ಇತರ ಹಲವಾರು ಸಮಸ್ಯೆಗಳು ತಾವಾಗಿಯೇ ಕಣ್ಮರೆಯಾಗುತ್ತವೆ. ಜಾರಿಯಾಗುತ್ತಿರುವ ಅಭಿವೃದ್ಧಿ ಕಾರ್ಯಗಳೂ ಅಕ್ರಮ ಹಣ ಮಾಡುವ ಸಾಧನಗಳಾಗಿವೆ. ಪ್ರತಿ ಹಂತದಲ್ಲಿ ಹಣ ಸೋರಿಕೆಯಾಗಿ ಸಾಮಾನ್ಯ ಜನರವರೆಗೆ ತಲುಪುವ ಭಾಗ ಎಷ್ಟು ಎಂದು ಪರಿಶೀಲಿಸಿದರೆ ಗಾಬರಿಯಾಗುವ ಅಂಶಗಳು ಹೊರಬೀಳುತ್ತವೆ. ಸಾಮಾನ್ಯ ಜನರು ನಡೆಯುವ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳು ಮಂಜೂರಾಗಿ ಪೂರ್ಣವಾಗುವವರೆಗೆ ಗಮನಿಸಿ ಅವು ಸರಿಯಾದ ರೀತಿಯಲ್ಲಿ ಜಾರಿಯಾಗುತ್ತಿವೆಯೇ ಎಂದು ಗಮನಿಸುವ ಅಭ್ಯಾಸ ಬೆಳೆಸಿಕೊಂಡರೆ ಮಾತ್ರ ಏನಾದರೂ ಬದಲಾವಣೆ ಸಾಧ್ಯ. ನಮ್ಮ ಜನರು ಎಷ್ಟರಮಟ್ಟಿಗೆ ಜಾಗೃತರಾಗಿದ್ದಾರೆ ಎಂಬುದಕ್ಕೆ ಒಂದು ಪುಟ್ಟ ಉದಾಹರಣೆ ಸಾಕು. ಹಾಸನದ ಸ್ಟೇಡಿಯಮ್ಮಿನಲ್ಲಿ ಹಲವಾರು ಲಕ್ಷಗಳ ವೆಚ್ಚದಲ್ಲಿ ಒಂದು ಸುಂದರವಾದ ಸಾರ್ವಜನಿಕ ಶೌಚಾಲಯದ ಕಟ್ಟಡ ನಿರ್ಮಾಣವಾಗಿ ಹಲವಾರು ವರ್ಷಗಳೇ ಸಂದಿವೆ. ಪ್ರತಿನಿತ್ಯ ಸ್ಟೇಡಿಯಮ್ಮಿಗೆ ನೂರಾರು, ಕೆಲವೊಮ್ಮೆ ಸಾವಿರಾರು ಜನರು ಬಂದು ಹೋಗುತ್ತಾರೆ. ಅವರ ಪೈಕಿ ಯಾರಾದರೂ ಈ ಶೌಚಾಲಯಕ್ಕೆ ಎಷ್ಟು ವೆಚ್ಚ ಮಾಡಿದ್ದಾರೆ, ಇದನ್ನು ಸಾರ್ವಜನಿಕರ ಉಪಯೋಗಕ್ಕೆ ಇದುವರೆವಿಗೂ ಏಕೆ ಬಿಟ್ಟುಕೊಟ್ಟಿಲ್ಲ ಎಂದು ಸ್ಟೇಡಿಯಮ್ಮಿನ ಕಟ್ಟಡದಲ್ಲೇ ಇರುವ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದ್ದಾರೆಯೇ? ಈ ಸುಂದರ ಶೌಚಾಲಯಕ್ಕಾಗಿ ಮಾಡಿದ ವೆಚ್ಚ ವ್ಯರ್ಥವೆಂದು ಯಾರಿಗಾದರೂ ಅನ್ನಿಸಿದೆಯೇ? 
     ಶ್ರೀ ಎಸ್.ಎಮ್. ಕೃಷ್ಣರವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಜಾರಿ ಮಾಡಿದ ಜಲಸಂವರ್ಧಿನಿ ಯೋಜನೆಯನ್ನು ಉದ್ಘಾಟಿಸಿದ್ದ ಶ್ರೀ ಅಣ್ಣಾ ಹಜಾರೆಯವರು ಆ ಸಂದರ್ಭದಲ್ಲಿ ಮಾತನಾಡುತ್ತಾ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಎಂದರೆ ಏನು?" ಎಂದು ಪ್ರಶ್ನಿಸಿ ತಾವೇ ಕೊಟ್ಟಿದ್ದ ಉತ್ತರವೆಂದರೆ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಅನ್ನುವುದು ಸರಿಯಲ್ಲ; ಜನರ ಕಾರ್ಯಕ್ರಮದಲ್ಲಿ ಸರ್ಕಾರ ಪಾಲುಗೊಳ್ಳುವುದು ಅನ್ನಬೇಕು." ಎಷ್ಟು ಸತ್ಯ! ಹೀಗಾಗಬೇಕೆಂದರೆ ಜನರು ಜಾಗೃತರಾಗಿರಬೇಕು. ರಾಜಕೀಯ ನಾಯಕರುಗಳು ಜನರ 'ನಾಯಕ'ರಾಗದೆ, 'ಸೇವಕ'ರಾಗಬೇಕು. ಸರ್ವಸಮ್ಮತ, ಮೂಲಭೂತ ಅತ್ಯಗತ್ಯ ಜನಪರ ಕಾರ್ಯಕ್ರಮಗಳು ಯಾವುದೇ ರಾಜಕೀಯ ಪಕ್ಷದ, ನೇತಾರರ ಕಾರ್ಯಕ್ರಮಗಳೆನಿಸದೆ ರಾಷ್ಟ್ರೀಯ ಕಾರ್ಯಕ್ರಮಗಳೆನಿಸಲಿ; ಈ ಕುರಿತು ಜನಜಾಗೃತಿ ಮೂಡಿಸುವ ಕೆಲಸ ಎಲ್ಲಾ ಪ್ರಜ್ಞಾವಂತರು ಮಾಡಲಿ ಎಂದು ಆಶಿಸೋಣ.
-ಕ.ವೆಂ.ನಾಗರಾಜ್,

ಸೋಮವಾರ, ಅಕ್ಟೋಬರ್ 28, 2013

ನಿಜ ರಸಿಕರಾಗೋಣ!

      ರಸಿಕರಾಗೋಣ!
      ಈ ಮಾತು ಹೇಳಿದರೆ ಈ ವಯಸ್ಸಿನಲ್ಲಿ ಇದೇನು ಹೇಳುತ್ತಿದ್ದಾನೆ ಎಂದು ಅನ್ನಿಸಬಹುದು. ಹೀಗೆ ಅನ್ನಿಸುವುದು ಸಹಜವೇ ಸರಿ. ಏಕೆಂದರೆ ರಸಿಕತೆ ಎಂದರೆ ವಿಲಾಸಪ್ರಿಯತೆ, ಸರಸವಾಗಿರುವಿಕೆ ಎಂಬ ಅರ್ಥವಿದೆ. ರಸಿಕನೆಂದರೆ ವಿಷಯಲಂಪಟನೆಂದೇ ತಿಳಿಯುವವರು ಹೆಚ್ಚು.  ೯೦ ವರ್ಷದ ಮುದುಕ ೧೮ ವರ್ಷದ ಹುಡುಗಿಯನ್ನು ಮದುವೆಯಾಗುವ ಸುದ್ದಿ, ಕಪಟ ಸಂನ್ಯಾಸಿಗಳ ಕುರಿತು ಅಗತ್ಯಕ್ಕಿಂತ ಹೆಚ್ಚು ಅಬ್ಬರದ ಕುಪ್ರಚಾರ, ಅನ್ಶೆತಿಕ ಸಂಬಂಧಗಳ ವರ್ಣರಂಜಿತ, ವೈಭವೀಕರಿಸಿದ ಸುದ್ದಿಗಳು ದೃಷ್ಯಮಾಧ್ಯಮಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ. ವಿಷಯಲಂಪಟತೆಯನ್ನು ಕೃಷ್ಣಲೀಲೆ ಎನ್ನುವುದು, ವಿಷಯಲಂಪಟರನ್ನು 'ಕೃಷ್ಣಪರಮಾತ್ಮ' ಎಂದು ವ್ಯಂಗ್ಯವಾಗಿ ಹೋಲಿಸುವುದು, ಇತ್ಯಾದಿಗಳು 'ರಸಿಕತೆ' ಎಂಬ ಪದ ಈಗ ಯಾವ ಅರ್ಥ ಪಡೆದುಕೊಂಡಿದೆಯೆಂಬುದರ ದ್ಯೋತಕ. ಧನಾತ್ಮಕ ವಿಷಯಗಳಿಗೆ, ಸುಕೃತಿಗಳಿಗೆ ಪ್ರಾಧಾನ್ಯತೆ ಸಿಗದಿರುವುದು, ಕೇವಲ ಋಣಾತ್ಮಕ ಸಂಗತಿಗಳಿಗೆ, ವಿಕೃತಿಗಳಿಗೆ ಸಿಗಬೇಕಾದಕ್ಕಿಂತ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿರುವುದರಿಂದ 'ರಸಿಕತೆ'ಯ ನಿಜವಾದ ಅರ್ಥ ಕಣ್ಮರೆಯಾಗಿದೆಯೇನೋ ಎಂದು ಭಾಸವಾಗುತ್ತಿದೆ. ಈ ಕಾರಣದಿಂದ ರಸಿಕತೆಯ ಕೆಲವು ಮಗ್ಗಲುಗಳನ್ನು ವಿವೇಚಿಸುವುದು ಈ ಬರಹದ ಉದ್ದೇಶ.
     ರಸವೆಂದರೆ 'ಸಾರ', ರಸಿಕನೆಂದರೆ ರಸಾಸ್ವಾದ ಮಾಡುವವನು ಎಂದಷ್ಟೇ ಅರ್ಥ. ರಸಿಕತೆಯೆಂದರೆ ಅದರಲ್ಲಿ ನಿಜವಾದ ಸುಖ, ಸಂತೋಷ ಸಿಗುವಂತಿರಬೇಕು. ಇಲ್ಲದಿದ್ದರೆ ಅದು ನ್ಶೆಜ ರಸಿಕತೆಯೆನಿಸಲಾರದು. ಚಾಕೊಲೇಟು, ಪೆಪ್ಪರಮೆಂಟುಗಳನ್ನು ಸವಿಯುವ ಮಕ್ಕಳನ್ನು ಗಮನಿಸಿದ್ದೀರಾ? ಎಲ್ಲಿ ಚಾಕೊಲೇಟು ಬೇಗ ಮುಗಿದು ಹೋಗುವುದೋ ಎಂದು ನಿಧಾನವಾಗಿ ರಸವನ್ನು ಚಪ್ಪರಿಸುತ್ತಾ ಆಗಾಗ್ಗೆ ಅದನ್ನು ಬಾಯಿಂದ ಹೊರತೆಗೆದು ನೋಡಿ ಖುಷಿಪಡುವ ಮಕ್ಕಳನ್ನು 'ಕೈ, ಬಾಯಿ ಎಲ್ಲವನ್ನೂ ಅಂಟು ಮಾಡಿಕೊಳ್ಳಬೇಡ'ವೆಂದು ದೊಡ್ಡವರು ಗದರಿಸುತ್ತಾರಲ್ಲವೇ? ಆದರೆ, ಯಾವುದನ್ನೂ ಲೆಕ್ಕಿಸದ ಮಗು ತನ್ನ ಪಾಡಿಗೆ ತಾನು ರಸಾಸ್ವಾದ ಮಾಡುತ್ತಿರುತ್ತದೆ, ಆನಂದಿಸುತ್ತಿರುತ್ತದೆ. ತನಗೆ ಖುಷಿ ಕೊಡುವ ಚಾಕೋಲೇಟನ್ನು ತೆಗೆತೆಗದು ನೋಡಿ ಕಣ್ತುಂಬಿಕೊಳ್ಳುತ್ತಿರುತ್ತದೆ. ಅದು ರಸಿಕತೆ! ಎಳೆಯ ಕಂದಮ್ಮಗಳನ್ನು ಆಡಿಸಿದಾಗ ಅವು ಬೊಚ್ಚುಬಾಯಿ ಬಿಟ್ಟು ಕೇಕೆ ಹಾಕಿ ನಗುವುದರಲ್ಲಿ ರಸಿಕತೆಯಿದೆ, ಏಕೆಂದರೆ ಅಲ್ಲಿ ಕೃತಕತೆಯ ಸೋಂಕಿಲ್ಲ. ನಾವೂ ಅಷ್ಟೆ, ರುಚಿರುಚಿಯಾದ ಪದಾರ್ಥಗಳನ್ನು ಗಬಗಬನೆ ತಿನ್ನುವುದಿಲ್ಲ, ಕುಡಿಯುವುದಿಲ್ಲ. ಅದರ ಸವಿಯನ್ನು ಅನುಭವಿಸುತ್ತಾ ಸ್ವಲ್ಪ ಸ್ವಲ್ಪವಾಗಿ ತಿನ್ನುತ್ತೇವಲ್ಲಾ, ಕುಡಿಯುತ್ತೇವಲ್ಲಾ, ಅದರಲ್ಲಿ ರಸಿಕತೆಯಿದೆ. ಟಿವಿಯನ್ನು ನೋಡುತ್ತಾ ರುಚಿಯನ್ನು ಅನುಭವಿಸದೆ ತಿಂದು, ಕುಡಿದು ಮಾಡುವವರು ನೈಜಸ್ವಾದವನ್ನು ಅನುಭವಿಸಲಾರರು. ನ್ಶೆಜಸವಿಯನ್ನು ಸವಿಯೋಣ, ನಿಜರಸಿಕರಾಗೋಣ.
     ರಸಿಕತೆಯಲ್ಲಿ ತನ್ಮಯತೆಯಿದೆ. ಧಾರ್ಮಿಕ ಸಮಾರಂಭದಲ್ಲಿ, ದೇವಸ್ಥಾನಗಳಲ್ಲಿ ಸಾಮೂಹಿಕ ಭಜನೆ ನಡೆಯುವ ಸಂದರ್ಭದಲ್ಲಿ ಕೆಲವರು ತಮ್ಮನ್ನೇ ಮರೆತು ತನ್ಮಯರಾಗಿ ಭಾವಪರವಶತೆಯಿಂದ, ಆನಂದಾನುಭವ ಹೊಂದುವುದನ್ನು  ಗಮನಿಸಿರಬಹುದು, ಆನಂದಾನುಭವ ನೀಡುವ ಆ ತನ್ಮಯತೆಯೇ ರಸಿಕತೆ! ಮನಸ್ಸಿಗೆ ಹಿತವಾಗುವ ಸಂಗೀತ, ಕಾರ್ಯಕ್ರಮಗಳೂ ಸಹ ಇಂತಹ ರಸಾನುಭೂತಿಗೆ ನೆರವಾಗುತ್ತವೆ. ಒಬ್ಬ ಚಿತ್ರಕಾರ, ಒಬ್ಬ ಬರಹಗಾರ, ಒಬ್ಬ ಶಿಲ್ಪಿ ತಮ್ಮ ಕೃತಿಯನ್ನು ಶ್ರದ್ಧೆಯಿಂದ ಪೂರ್ಣಗೊಳಿಸಿದ ನಂತರ ಅದನ್ನು ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಳ್ಳುತ್ತಾರಲ್ಲಾ, ಆನಂದಿಸುತ್ತಾರಲ್ಲಾ, ಅದು ರಸಿಕತೆ! ಹೊಟ್ಟೆಪಾಡಿಗೆ ಮಾಡುವ ಕೆಲಸದಲ್ಲೂ ಆನಂದ ಕಾಣುವ ರಸಿಕರಿದ್ದಾರೆ. ಅಂತಹ ರಸಿಕರೇ ತಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ, ಚೊಕ್ಕವಾಗಿ ಮಾಡುವವರೆಂದರೆ ಅದರಲ್ಲಿ ಅತಿಶಯೋಕ್ತಿಲ್ಲ. ಇಂತಹವರಿಂದಲೇ ಏನನ್ನಾದರೂ ಸಾಧಿಸಲು ಸಾಧ್ಯ. ಸ್ವಾಮಿ ವಿವೇಕಾನಂದರ ಈ ಮಾತು ಮನನೀಯ: "ಒಂದು ವಿಚಾರವನ್ನು ತೆಗೆದುಕೊಳ್ಳಿ. ಆ ವಿಚಾರವನ್ನು ನಿಮ್ಮ ಜೀವನವನ್ನಾಗಿಸಿಕೊಳ್ಳಿ, ಅದರ ಬಗ್ಗೆ ಕನಸು ಕಾಣಿ, ಅದರಲ್ಲೇ ಜೀವಿಸಿ. ನಿಮ್ಮ ಮೆದುಳು, ಸ್ನಾಯು, ನರಮಂಡಲ ಮತ್ತು ದೇಹದ ಎಲ್ಲಾ ಭಾಗಗಳೂ ಆ ವಿಚಾರದಲ್ಲೇ ಮುಳುಗಿರಲಿ. ಇತರ ಎಲ್ಲಾ ವಿಚಾರಗಳನ್ನೂ ಬದಿಗೆ ಸರಿಸಿ. ಅದು ಯಶಸ್ಸಿಗೆ ದಾರಿ. ದೊಡ್ಡ ಸಾಧಕರುಗಳು ಸಿದ್ಧಗೊಳ್ಳುವುದು ಹೀಗೆಯೇ." ಶ್ರದ್ಧಾಪೂರ್ವಕವಾಗಿ ಮನವೊಪ್ಪುವ ಕೆಲಸಗಳಲ್ಲಿ ತೊಡಗಿಕೊಂಡು, ಅದರಿಂದ ಸಿಗುವ ಹಿತಾನಂದವನ್ನು ಅನುಭವಿಸುವ ರಸಿಕರಾಗೋಣ.
ದೇಹ ದೇಹದ ಬೆಸುಗೆಯೆನಿಸುವುದು ಕಾಮ
ಹೃದಯಗಳ ಮಿಲನದಿಂದರಳುವುದು ಪ್ರೇಮ |
ಆತ್ಮ ಆತ್ಮಗಳೊಂದಾಗೆ ಆತ್ಮಾಮೃತಾನಂದ
ಅಂತರಂಗದ ಸುಖವೆ ಸುಖವು ಮೂಢ ||
     ರಸಿಕತೆಯೆಂದರೆ ಪ್ರೀತಿಸುವುದು, ಅದರಲ್ಲಿ ಪೂರ್ಣ ಸಂತೋಷ ಪಡೆಯುವುದು. ಕಳ್ಳತನದ ಕಾಮದಾಟವನ್ನು ರಸಿಕತೆಯೆನ್ನುವುದಾದರೆ ಅದು ಆ ಪದಕ್ಕೆ ಮಾಡುವ ಅಪಚಾರವೇ ಸರಿ. ಏಕೆಂದರೆ ಅಂತಹ ಕ್ರಿಯೆಯಲ್ಲಿ ಪೂರ್ಣ ಸಂತೋಷ ಸಿಗುವುದೆಂಬುದು ಭ್ರಮೆ. ಅಂತಹ ಕ್ರಿಯೆಯಲ್ಲಿ ಅಳುಕಿದೆ, ಆತಂಕವಿದೆ, ಭಯವಿದೆ. ಇನ್ನು ಆನಂದಕ್ಕೆ ಅರ್ಥವೆಲ್ಲಿ? ಯಾವ ಕ್ರಿಯೆಯಿಂದ ಅಳುಕಿಲ್ಲದ, ಆತಂಕವಿಲ್ಲದ ಆನಂದ ದೊರೆಯುವುದೋ ಅದನ್ನು ಮಾತ್ರ ರಸಿಕತೆಯೆನ್ನಬಹುದು. ನಿಜವಾದ ರಸಿಕ ಬಲವಂತ ಮಾಡಲಾರ. ರಾವಣ ಸಹ ಸಮಾಗಮಕ್ಕಾಗಿ ಸೀತೆಯ ಒಪ್ಪಿಗೆ ಪಡೆಯಲು ಪ್ರಯತ್ನಿಸಿದನೇ ಹೊರತು ಬಲಾತ್ಕಾರ ಮಾಡಲಿಲ್ಲ. ಪ್ರೀತಿಯೆಂದರೆ ಕೇವಲ ಗಂಡು-ಹೆಣ್ಣಿನ ಮಿಲನಕ್ಕೆ ಸೀಮಿತವಾಗಿರದೆ, ಅದಕ್ಕೂ ಮೀರಿರಬೇಕು.  ಗಂಡು-ಹೆಣ್ಣಿನ ಮಿಲನ ಸಹ ಪ್ರೀತಿಪೂರ್ವಕವಾಗಿರಬೇಕು. ಇಲ್ಲದಿದ್ದರೆ ಅದನ್ನು ಕಾಮವೆಂದು ಮಾತ್ರ ಹೇಳಬಹುದು. ಪಾಶ್ಚಾತ್ಯರಲ್ಲಿ ಕಂಡು ಬರುವ ಮುಕ್ತಕಾಮವನ್ನು, ಗುತ್ತಿಗೆಯ ಪ್ರೇಮದಾಟಗಳು, ಕರಾರಿನ ವಿವಾಹಗಳು, ಇತ್ಯಾದಿಗಳನ್ನು  ಸ್ವೇಚ್ಛಾಚಾರದ ಸಾಲಿಗೆ ಸೇರಿಸಬಹುದೇ ಹೊರತು ರಸಿಕತೆಯೆನ್ನಲಾಗದು. ಅಲ್ಲಿ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಕ್ರಿಯೆಯಿದೆಯೇ ಹೊರತು ಪ್ರೀತಿಯ ಅಂಶ ಕಾಣಲಾಗದು. ನಿಜರಸಿಕರಾಗೋಣ.
     ತಾಯಿ-ಮಕ್ಕಳ ಪ್ರೀತಿ, ಮಕ್ಕಳನ್ನು ಮುದ್ದು ಮಾಡುವ ಹಿರಿಯರ ಪ್ರೀತಿ, ಮಕ್ಕಳು ದೊಡ್ಡವರನ್ನು ಪ್ರೀತಿಸುವ, ಗೌರವಿಸುವ ರೀತಿಯೂ ರಸಿಕತೆಯೇ! ನಾನು ಹೇಗಿದ್ದೇನೆ, ನನ್ನ ಆಕಾರ ಈಗ ಹೇಗಿದೆಯೆಂದು ನನಗೆ ಗೊತ್ತು. ಒಂದಾನೊಂದು ಕಾಲದಲ್ಲಿ ಸುಂದರನಾಗಿದ್ದೆನೇನೋ! ಆದರೂ ನನ್ನ ಮೊಮ್ಮಗಳು 'ಮೈ ತಾತಾ ಈಸ್ ವೆರಿ ವೆರಿ ಕ್ಯೂಟ್" ಅನ್ನುತ್ತಾಳೆ! ಸುಂದರತೆ ಅನ್ನುವುದು ಹೊರರೂಪದಲ್ಲಿ ಕಾಣುವುದಾಗಿದ್ದರೆ ಅವಳು ನನ್ನನ್ನು ಕ್ಯೂಟ್ ಅನ್ನಲು ಸಾಧ್ಯವಿರಲಿಲ್ಲ. ನಾನು ಅವಳನ್ನು ತುಂಬಾ ಹಚ್ಚಿಕೊಂಡಿದ್ದೇನೆ, ಮುದ್ದಿಸುತ್ತೇನೆ, ಪ್ರೀತಿಸುತ್ತೇನೆ, ಅದಕ್ಕೇ ಹಾಗೆ ಹೇಳಿರಬಹುದು. ನಿಷ್ಕಳಂಕವಾಗಿ ಪ್ರೀತಿಸುವ ಮತ್ತು ಆ ಮೂಲಕ ಸಿಗುವ ಅದ್ಭುತ ಆನಂದವನ್ನು ಪಡೆಯುವಂತಹ ರಸಿಕರಾಗೋಣ.
ಸುಖವನಾಳೆ ಭೋಗಿ ಮನವನಾಳೆ ಯೋಗಿ 
ಸುಖವನುಂಡೂ ದುಃಖಪಡುವವನೆ ರೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ನಿಜರಸಿಕನವನೆ ತಿಳಿಯೊ ನೀ ಮೂಢ ||
      ನಿಜವಾದ ರಸಿಕರೆಂದರೆ ವಿರಾಗಿಗಳೇ! ಆಶ್ಚರ್ಯಪಡಬೇಡಿ. ಕಪಟಿ ಸನ್ಯಾಸಿಗಳನ್ನೂ ನೆನಪಿಸಿಕೊಳ್ಳಬೇಡಿ! ವಿರಾಗಿಗಳು, ಸನ್ಯಾಸಿಗಳು ಬಯಕೆಗಳನ್ನು, ಆಸೆಗಳನ್ನು ಬಿಟ್ಟವರು ಎಂದು ಹೇಳಲಾಗದು. ಅವರು ಸಾಮಾನ್ಯರು ಬಯಸುವಂತಹ ಸಂಗತಿಗಳು, ಆಸೆಗಳನ್ನು ಬಯಸುವವರಲ್ಲ. ಅವರದು ಅತ್ಯುನ್ನತ ಬಯಕೆ, ಆಸೆ. ಅವರು ಅತ್ಯುನ್ನತ ಬಯಕೆಯಾದ ಆತ್ಮವನ್ನು  ಅರಿಯುವ, ಆ ಮೂಲಕ ಪರಮಾತ್ಮನನ್ನು ಅರಿಯುವ ಹಾಗೂ ಅದರಿಂದ ಅತ್ಯುನ್ನತ ಆನಂದಸ್ಥಿತಿಯಾದ ಸಚ್ಚಿದಾನಂದಭಾವವನ್ನು ಹೊಂದುವ ಹೆಬ್ಬಯಕೆ ಹೊಂದಿದವರು. ಧ್ಯಾನದಿಂದ ಇಂತಹ ಸ್ಥಿತಿಯನ್ನು ತಲುಪಬಹುದೆನ್ನುತ್ತಾರೆ. ಹಿತವಾದ ಆನಂದಾನುಭವ ನೀಡುವ ಇದನ್ನೇ ಭಾವಸಮಾಧಿ ಅನ್ನುತ್ತಾರೆ. ಇದು ರಸಿಕತೆಯ ಉತ್ಕಟ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಆನಂದಾನುಭವ ಹೊರತುಪಡಿಸಿ ಬೇರೆ ಏನೂ ಬೇಕೆನ್ನಿಸುವುದಿಲ್ಲ. ಆ ಸಂದರ್ಭದಲ್ಲಿ ಏನೇ ಆದರೂ ಪರವಾಗಿಲ್ಲವೆಂಬ ಸ್ಥಿತಿ ತಲುಪಿರುತ್ತಾರೆ, ದೇಹದ ಪರಿವೆಯೂ ಇರುವುದಿಲ್ಲ. ದೈವಿಕ ಆನಂದದ ಸ್ಥಿತಿಯಲ್ಲಿ ತತ್ತ ಬೇಕಿರುವುದಿಲ್ಲ, ಸಿದ್ಧಾಂತಗಳ ಅಗತ್ಯವಿರುವುದಿಲ್ಲ, ಮುಕ್ತಿ, ಮೋಕ್ಷ ಇತ್ಯಾದಿಗಳೂ ಬೇಕೆನ್ನಿಸುವುದಿಲ್ಲ. ಇದು ರಸಿಕತೆಯ ಮಹತ್ವ. ರಸಿಕರಾಗಲು ಪ್ರಯತ್ನಿಸೋಣ, ರಸಿಕರಾಗೋಣ!
-ಕ.ವೆಂ.ನಾಗರಾಜ್.

ಶುಕ್ರವಾರ, ಅಕ್ಟೋಬರ್ 18, 2013

ಹುಟ್ಟಿದರು ಎನಲವರು ಸತ್ತಿರಲೇ ಇಲ್ಲ!

ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ ||

     "ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವಾಗಿರುವಾಗ ಅವರ ಕುಟುಂಬದವರಿಗೆ ಇನ್ನು ಹೇಗಾಗಿರಬೇಕು? ಅವರ ಕುಟುಂಬದವರೆಲ್ಲರಿಗೂ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದಯಾಮಯನಾದ ಭಗವಂತ ಕೊಡಲಿ ಎಂದು ಪ್ರಾರ್ಥಿಸೋಣ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ನಾವೆಲ್ಲರೂ ಎದ್ದುನಿಂತು ಎರಡು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸೋಣ" - ಗಣ್ಯರೊಬ್ಬರ ನಿಧನದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ವೇದಿಕೆಯಲ್ಲಿದ್ದವರೊಬ್ಬರು ಈ ರೀತಿಯಲ್ಲಿ ಕರೆ ಕೊಡುತ್ತಿದ್ದರು. ಮೃತ ಗಣ್ಯರ ಅಂತ್ಯಸಂಸ್ಕಾರ ಅದಾಗಲೇ ಆಗಿಹೋಗಿತ್ತು. ಅಗ್ನಿಯಲ್ಲಿ ಅರ್ಪಿತವಾದ ಶರೀರ ಪಂಚಭೂತಗಳಲ್ಲಿ ಲೀನವಾಗಿತ್ತು. ಹಾಗಾದರೆ ಆ ಶರೀರದೊಂದಿಗೆ ಗುರುತಿಸಿಕೊಂಡಿದ್ದ ಆತ್ಮ ಇನ್ನೂ ಇತ್ತೇ? ಶರೀರ ಹೋದರೂ ಆತ್ಮ ಇರುತ್ತದೆಯೇ? ಸದ್ಗತಿ ಸಿಗುವುದು ಅಂದರೆ ಏನು? . . ಇತ್ಯಾದಿ ಪ್ರಶ್ನೆಗಳು ಕಾಡತೊಡಗಿದವು. ಶರೀರಕ್ಕೆ ಹೊರತಾದ ಆತ್ಮ ಒಂದು ಇದೆ ಅನ್ನುವುದನ್ನು ಒಪ್ಪಿ, ಅದಕ್ಕೆ ಸದ್ಗತಿ ಬಯಸಿ ಮಾಡುವ ಕ್ರಿಯೆಯೇ ಉತ್ತರಕ್ರಿಯಾದಿ ಸಂಸ್ಕಾರಗಳು. ಶರೀರವನ್ನು ಹೂಳುವುದಿರಬಹುದು, ಸುಡುವುದಿರಬಹುದು, ಪಾರ್ಸಿಗಳು ಮಾಡುವಂತೆ ರಣಹದ್ದುಗಳಿಗೆ ದೇಹವನ್ನು ಆಹಾರವಾಗಿ ಉಣಿಸುವುದಿರಬಹುದು, ಏನಾದರೂ ಇರಬಹುದು. ಇಂತಹ ಕ್ರಿಯೆಗಳಿಂದ ಮೃತಶರೀರ ಪಂಚಭೂತಗಳಲ್ಲಿ ವಿಲೀನವಾಗಲು ಸಹಕಾರಿಯಾಗುತ್ತದೆ.
     'ಜೀವಾತ್ಮ ಅನ್ನುವ ವಸ್ತು ಇರುವುದಿಲ್ಲ. ಅದು ಶರೀರದೊಂದಿಗೆ ಸಹಜವಾಗಿ ಉಂಟಾಗುವ ಚೈತನ್ಯವಿಶೇಷ. ಶರೀರ ನಷ್ಟವಾದೊಡನೆ ಅದೂ ನಾಶವಾಗುತ್ತದೆ' ಎಂಬ ವಾದವೂ ಇದೆ. ವಿಚಾರ ಮಾಡೋಣ. ಈ ಶರೀರ ಅನ್ನುವುದು ಜಡವಸ್ತುಗಳಿಂದ ಕೂಡಿದ ಒಂದು ಸುಂದರ ನಿರ್ಮಾಣ. ಪರಮಾತ್ಮ ನಿರ್ಮಿಸಿದ ನವರಸದ ಅರಮನೆ. ಅದಕ್ಕೆ ಚೈತನ್ಯ ಬಂದಿರುವುದು ಅದರೊಳಗಿರುವ ಪ್ರಾಣ/ಚೈತನ್ಯ/ಜೀವಾತ್ಮ/ಯಾವುದೋ ಶಕ್ತಿಯಿಂದ ಎಂದು ಒಪ್ಪಬಹುದಲ್ಲವೇ? ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಯಾವುದೇ ಮೂಲವಸ್ತುವಿಗೆ ನಾಶವಿರುವುದಿಲ್ಲ. ಅದು ರೂಪಾಂತರ ಹೊಂದಿದರೂ ಒಂದಲ್ಲಾ ಒಂದು ರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆ. ಮೃತ ಶರೀರವನ್ನು ಸುಟ್ಟಾಗ ಅಥವ ಯಾವುದೇ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದಾಗ ಅದು ಬೂದಿಯಾಗಿಯೋ, ಆವಿಯಾಗಿಯೋ, ಮಣ್ಣಾಗಿಯೋ, ನೀರಾಗಿಯೋ ರೂಪಾಂತರ ಹೊಂದುತ್ತದೆ. ಆ ಶರೀರದೊಳಗಿದ್ದ ಜೀವ ಚೈತನ್ಯ ಏನಾಗುತ್ತದೆ? ನಾಶವಾಗುತ್ತದೆ ಎಂದರೆ ಅದು ಇನ್ನೂ ಯಾವುದೋ ರೀತಿಯಲ್ಲಿ ಇರಲೇಬೇಕಲ್ಲವೇ? ಮೊದಲು ಅದು ಯಾವ ರೂಪದಲ್ಲಿತ್ತು? ಅಂತ್ಯ ಸಂಸ್ಕಾರದ ನಂತರ ಯಾವ ರೂಪ ಹೊಂದುತ್ತದೆ ಎಂಬುದು ಯಾರಿಗೆ ಗೊತ್ತಿದೆ? ಶರೀರದೊಂದಿಗೆ ಸಹಜವಾಗಿ ಉಂಟಾಗುವ ಜೀವ ಚೈತನ್ಯವೆಂದರೆ ಅದನ್ನು ಸ್ಟೃಸಿದವರು ಯಾರು? ಜಡವಸ್ತು ತನ್ನಿಂದ ತಾನೇ ಏನಾದರೂ ಸ್ಟೃಸಲು ಸಾಧ್ಯವಿದೆಯೇ? ಇಲ್ಲ ಅನ್ನುತ್ತದೆ ವಿಜ್ಞಾನ. ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲಾರದು. ಒಂದು ವೇಳೆ ಜಡವಸ್ತು ಏನಾದರೂ ಸೃಷ್ಟಿಸಲು ಸಾಧ್ಯ ಎಂದು ವಾದಕ್ಕೋಸ್ಕರವಾಗಿ ಒಪ್ಪಿಕೊಂಡರೂ ಅದರಿಂದ ಮತ್ತೊಂದು ಜಡವಸ್ತು ನಿರ್ಮಾಣ ಸಾಧ್ಯವೇ ಹೊರತು ಚೈತನ್ಯದಿಂದ ಕೂಡಿದ ವಸ್ತು ನಿರ್ಮಾಣ ಆಗಲಾರದು. ಇರುವ ವಸ್ತುಗಳಿಂದ ಇಲ್ಲದ ವಸ್ತುವಿನ ಸೃಷ್ಟಿ ಹೇಗೆ ಸಾಧ್ಯ? ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಶರೀರದೊಳಗೆ ಜೀವ ಚೈತನ್ಯ ಸೇರಿದೆಯೇ ಹೊರತು, ಶರೀರದಿಂದ ಚೈತನ್ಯ ಉಂಟಾಗಿಲ್ಲ ಅನ್ನುವುದು ಹೆಚ್ಚು ತಾರ್ಕಿಕ. ಹೀಗೆಯೇ ಮುಂದುವರೆಸೋಣ. ಆ ಚೈತನ್ಯ ಮೊದಲು ಶರೀರದೊಳಗಿದ್ದಾಗ ವ್ಯಕ್ತಿ ಜೀವಂತನಾಗಿದ್ದ, ಇಲ್ಲದಾದಾಗ ಮೃತನಾದ ಅನ್ನಬಹುದು. ಹೊರಗಿನಿಂದ ವ್ಯಕ್ತಿಯ ಶರೀರದೊಳಗೆ ಬಂದು ಸೇರಿದ್ದ ಆ ಚೈತನ್ಯ ವ್ಯಕ್ತಿಯ ಮರಣಾನಂತರ ಶರೀರದ ಹೊರಗೆ ಇರುತ್ತದೆ. ಬದುಕಿದ್ದಾಗ ಒಂದು ರೂಪದಲ್ಲಿ, ಸತ್ತಾಗ ಇನ್ನೊಂದು ರೂಪದಲ್ಲಿ ಇರುತ್ತದೆ ಎಂದಾದರೆ ಯಾವ ರೂಪದಲ್ಲಿ ಇದ್ದೀತು ಅನ್ನುವುದು ಯಾರಿಗೆ ತಿಳಿದಿದೆ? ಇಂತಹ ವಿಶಿಷ್ಟ ಚೈತನ್ಯವನ್ನೇ ಜ್ಞಾನಿಗಳು ಜೀವಾತ್ಮ ಎನ್ನುತ್ತಾರೆ. ಜೀವಾತ್ಮಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ ಅನ್ನುವುದು ಈ ಅರ್ಥದಲ್ಲೇ ಇರಬೇಕು. 
     'ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ' - ಶ್ರೀ ಶಂಕರಾಚಾರ್ಯರ ಈ ಉಕ್ತಿ ಪುನರ್ಜನ್ಮವನ್ನು ಸಮರ್ಥಿಸುವುದರೊಂದಿಗೆ ಜೀವಚೈತನ್ಯದ ಅಮರತ್ವವನ್ನೂ ಸಾರುತ್ತಿದೆ. ಭಾರತೀಯ ವೈಚಾರಿಕರು ಪುನರ್ಜನ್ಮವನ್ನು ನಂಬುತ್ತಾರೆ. ಭಾರತೀಯ ಧರ್ಮಶಾಸ್ತ್ರಗಳೂ ಪುನರ್ಜನ್ಮ ಸಿದ್ಧಾಂತವನ್ನು ಎತ್ತಿ ಹಿಡಿದಿವೆ. ಪುನರ್ಜನ್ಮವಿದ್ದಲ್ಲಿ ಹಳೆಯ ಶರೀರ ನಷ್ಟವಾದ ಮೇಲೆ, ಅದು ಪಂಚಭೂತಗಳಲ್ಲಿ ಸೇರಿಹೋದಮೇಲೆ ಹಿಂದಿನ ಶರೀರದಲ್ಲಿದ್ದ ಜೀವಚೈತನ್ಯ ಬೇರೆ ಶರೀರದ ಮೂಲಕವೇ ಪ್ರಕಟಗೊಳ್ಳಬೇಕು/ಪುನರ್ಜನ್ಮ ಹೊಂದಬೇಕು.
     ಸಕಲ ಜೀವಿಗಳನ್ನು ಸೃಷ್ಟಿಸಿದವನು ಭಗವಂತ ಎಂದೂ ಸಹ ವಾದವಿದೆ. ಯಾವುದರಿಂದ ಸೃಷ್ಟಿಸಿದ? ಶೂನ್ಯದಿಂದಂತೂ ಆಗಿರಲಾರದು. ಶೂನ್ಯದಿಂದ ಸೃಷ್ಟಿ ಅನ್ನುವುದನ್ನು ವಿಜ್ಞಾನ ಸಹ ಒಪ್ಪುವುದಿಲ್ಲ. ಎಲ್ಲಾ ಜೀವಿಗಳೂ ಪರಮಾತ್ಮನ ಅಂಶಗಳೇ ಅಂದರೆ, ಇಷ್ಟೊಂದು ಜೀವಜಂತುಗಳು ಇರುವಾಗ ಅವೆಲ್ಲವನ್ನೂ ಪರಮಾತ್ಮ ತನ್ನ ಅಂಶದಿಂದಲೇ ಸೃಷ್ಟಿಸಿದ ಅಂದರೆ, ಸೃಷ್ಟಿಯ ನಂತರ ಅವನು  ಪರಿಪೂರ್ಣ ಎಂದೆನಿಸಿಕೊಳ್ಳಲಾರನು. ಭಗವಂತ ಸೃಷ್ಟಿಸಿದ ಅಂದರೆ ಏಕೆ  ಸೃಷ್ಟಿಸಿದ ಎಂಬ ಪ್ರಶ್ನೆ ಬರುತ್ತದೆ. ಅವನಿಗೆ ಬೇಕಾಗಿತ್ತು, ಅದಕ್ಕಾಗಿ  ಸೃಷ್ಟಿಸಿದ ಅಂದರೆ 'ಬೇಕು' ಅನ್ನುವ ಭಾವನೆ ಬಂದ ತಕ್ಷಣ ಪರಮಾತ್ಮನಿಗೆ ಏನೂ ಬೇಕಿಲ್ಲದಾಗ, ಯಾವುದರ ಅಗತ್ಯವೂ ಇಲ್ಲದಿರುವಾಗ, ಇಂತಹ ಸೃಷ್ಟಿಗೆ ಅರ್ಥವೇ ಉಳಿಯುವುದಿಲ್ಲ, ಅಲ್ಲದೆ ಪರಮಾತ್ಮ ಪರಿಪೂರ್ಣ ಎಂಬ ಗುಣವಿಶೇಷತೆಗೆ ಧಕ್ಕೆ ಬರುತ್ತದೆ. ಸೂಕ್ತವಾದ ವಾದವೆಂದರೆ ಎಷ್ಟು ಜೀವಜಂತುಗಳಿವೆಯೋ ಅಷ್ಟು ಜೀವಾತ್ಮಗಳಿವೆ ಅನ್ನುವುದು, ಆ ಜೀವಾತ್ಮಗಳೂ ಪರಮಾತ್ಮನಂತೆ ಹುಟ್ಟು-ಸಾವುಗಳಿಲ್ಲದವು, ಪರಮಾತ್ಮನ ಪ್ರಜೆಗಳು ಅನ್ನುವುದು! ಶರೀರದೊಡನೆ ಇದ್ದಾಗ ಆತ್ಮಗಳು ಮಾಡುವ ಕರ್ಮವನ್ನನುಸರಿಸಿ ಹೊಸ ಜನ್ಮ ಪಡೆಯುವುವು. ಆ ಜನ್ಮ ಮಾನವಜನ್ಮವೇ ಆಗಬೇಕೆಂದಿಲ್ಲ, ಇಂತಹ ಲಿಂಗವೇ ಆಗಬೇಕೆಂದಿಲ್ಲ. ಅಥರ್ವವೇದ ಹೇಳುತ್ತದೆ: 
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ ||  ಅಥರ್ವ: ೧೦.೮.೨೭)
     ಇದರ ಅರ್ಥ ಜೀವಾತ್ಮನೇ, ನೀನು ಸ್ತ್ರೀ, ನೀನು ಪುರುಷ, ನೀನು ಕುಮಾರ ಮತ್ತು ನೀನು ಕುಮಾರಿ. ವೃದ್ಧನಾಗಿ, ನಂತರ ಮತ್ತೆ ಜನಿಸಿ ಎಲ್ಲೆಡೆಯೂ ಮುಖ ಮಾಡುವೆ. ಭಗವಂತನಂತೆ ಜೀವಾತ್ಮನೂ ಲಿಂಗರಹಿತನಾಗಿದ್ದು ಧರಿಸಿದ ಶರೀರವನ್ನು ಅವಲಂಬಿಸಿ ಹೆಣ್ಣು, ಗಂಡು ಅನ್ನಿಸಿಕೊಳ್ಳುವುದು.
     ಮೃತ ಶರೀರವನ್ನು 'ವ್ಯಕ್ತಿಯ ಹೆಣ', 'ವ್ಯಕ್ತಿಯ ದೇಹ(ಬಾಡಿ)' ಅನ್ನುತ್ತೇವೆಯೇ ಹೊರತು 'ವ್ಯಕ್ತಿ' ಅನ್ನುವುದಿಲ್ಲ. ಅಂದರೆ ಕೇವಲ ಶರೀರ ವ್ಯಕ್ತಿಯೆನಿಸುವುದಿಲ್ಲ. ಶರೀರದೊಳಗೆ ಜೀವಾತ್ಮನಿದ್ದಾಗ ಅದು ನಾಗರಾಜ, ಶ್ರೀಧರ, ಅಬ್ದುಲ್, ಡಿಸೋಜಾ, ಊರ್ಮಿಳಾ, ಇತ್ಯಾದಿಗಳಿಂದ ಗುರುತಿಸಲ್ಪಡುತ್ತದೆ. ಎಂತಹ ಚೋದ್ಯ! ಶರೀರಕ್ಕೆ ಸಾವಿದೆ, ಚೈತನ್ಯಕ್ಕಿಲ್ಲ. ಮಾಯೆಯೆಂದರೆ, ಶರೀರದೊಳಗಿನ ಚೈತನ್ಯವೂ ತನ್ನನ್ನು ಶರೀರದೊಂದಿಗೇ ಗುರುತಿಸಿಕೊಳ್ಳುತ್ತದೆ, ತಾನೇ ವ್ಯಕ್ತಿಯೆಂದು ಭಾವಿಸುತ್ತದೆ, ಚಿಂತನ-ಮಂಥನ ಮಾಡುತ್ತದೆ, ಸಕಲ ಸುಖವೂ ತನಗೇ ಬೇಕೆನ್ನುತ್ತದೆ, ಶರೀರ ಸಾಯುವವರೆಗೂ ಆ ಶರೀರ ನಾಶವಾಗುವುದನ್ನು ಬಯಸುವುದೇ ಇಲ್ಲ! ಆ ಶರೀರ ಮನುಷ್ಯನದಾಗಿರಬಹುದು ಅಥವ ಮನುಷ್ಯ ತಿಂದು ತೇಗುವ ಕೋಳಿ, ಹಂದಿಯದಾಗಿರಬಹುದು, ಬೇರೆ ಯಾವುದೇ ಜೀವಜಂತುವಾಗಿರಬಹುದು! ಇದೆಂತಹ ಸೃಷ್ಟಿ ರಹಸ್ಯ!
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ|| 

ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದು ಹೇಗೆ|
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ|| 

ಕಾಣದದು ನಯನ ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? || 

ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ || 

-ಕ.ವೆಂ.ನಾಗರಾಜ್.
**************
[17-10-2013ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ]


ಬುಧವಾರ, ಅಕ್ಟೋಬರ್ 2, 2013

ನಾವೆಷ್ಟು ಒಳ್ಳೆಯವರು?

ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನೆನಬೇಡ ನಿನದೆನಬೇಡ
ಜಗವೃಕ್ಷರಸ ಹರಿವ ಕೊಂಬೆ ನೀ ಮೂಢ||
     ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು ಎಂದು ಹೆಮ್ಮೆ ಪಡಬಹುದೇ? ಮರದ ಬೇರು, ವಿವಿಧ ಅಂಗಾಂಗಗಳು ನೆಲ, ಜಲ, ಗಾಳಿ, ಬೆಳಕುಗಳಿಂದ ಪಡೆದ  ಸತ್ವಗಳು ಕೊಂಬೆಯ ಮೂಲಕ ಸಾಗಿ ರೂಪಿತವಾದುದೇ ಫಲ. ಅದಕ್ಕೆ ಕೊಂಬೆಯೂ ಸಹಕಾರಿಯೇ ಹೊರತು ಅದೇ ಮೂಲವಲ್ಲ. ಅದೇ ರೀತಿ ನಾವು ಏನನ್ನು ಮಾಡಿದ್ದೇವೆ, ಸಾಧಿಸಿದ್ದೇವೆ ಎಂದು ಅಂದುಕೊಳ್ಳುತ್ತೀವೋ ಅದಕ್ಕೆ ನಾವೂ ಕಾರಣರು ಎಂದಷ್ಟೇ ಹೇಳಿಕೊಳ್ಳಬಹುದು. ನಾವೇ ಕಾರಣರು ಎಂದು ಹೇಳಲಾಗದು. ನಾವು ವಾಹಕಗಳಷ್ಟೆ. ಎಂತಹ ವಾಹಕರು ಎಂಬುದು ನಮ್ಮಿಂದ ಆಗುವ ಕಾರ್ಯಗಳು ತೋರಿಸುತ್ತವೆ. ಒಳ್ಳೆಯ ವಾಹಕಗಳಾಗಿದ್ದಲ್ಲಿ ಒಳ್ಳೆಯ ಫಲಗಳು, ಕೆಟ್ಟದಾಗಿದ್ದಲ್ಲಿ ಕೊಳೆತ, ಕೆಟ್ಟ ಫಲಗಳು ಗೋಚರಿಸುತ್ತವೆ. 
     ಕಲ್ಮಶಭರಿತ ನೀರನ್ನು ಶುದ್ಧವಾದ ಪಾತ್ರೆಗೆ ಹಾಕಿದಾಕ್ಷಣ ನೀರು ಶುದ್ಧವಾಗುವುದಿಲ್ಲ. ಅದೇ ರೀತಿ ಶುದ್ಧವಾದ ನೀರನ್ನು ಕಲ್ಮಶಭರಿತ ಪಾತ್ರೆಗೆ ಹಾಕಿದರೆ ನೀರೂ ಅಶುದ್ಧವಾಗುತ್ತದೆ. ಆದ್ದರಿಂದ ನಾವು ಶುದ್ಧ ವಾಹಕಗಳಾಗಬೇಕೆಂದರೆ ಎಚ್ಚರಿಕೆಯಿಂದಿರಬೇಕು. ನಮ್ಮ ಆಹಾರ -ಅಂದರೆ, ಕೇವಲ ತಿನ್ನುವುದು, ಕುಡಿಯುವುದು ಮಾತ್ರ ಅಲ್ಲ ನೋಡುವುದು, ಕೇಳುವುದು, ಗ್ರಹಿಸುವುದು, ಇತ್ಯಾದಿಗಳೂ ಸೇರಿ- ಶುದ್ಧವಾಗಿರಬೇಕು. ಒಂದು ಉದಾಹರಣೆ ನೋಡೋಣ: ಸ್ನೇಹಿತರೊಬ್ಬರ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಅವರ ೩ ವರ್ಷದ  ಚಿಕ್ಕ ಮಗು ಒಬ್ಬರು ಹಿರಿಯರನ್ನು ಕುರಿತು 'ನೀನು ಪೆದ್ದ, ದಂಡ' ಎಂದಿತು. ಚಿಕ್ಕ ಮಗುವಾದ್ದರಿಂದ ಆ ಮಗುವಿನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಹಿರಿಯರು ಯಾವುದೋ ಕಾರಣಕ್ಕೆ ಹೊರಗೆ ಹೋದಾಗ ಅಲ್ಲಿದ್ದ ಮಗುವಿನ ಸಂಬಂಧಿಯೊಬ್ಬರು  "ಮಗು  ಸರಿಯಾಗಿ ಹೇಳಿತು, ಬಿಡು, ಅವರು ಮಾಡುವುದೂ ಹಾಗೆಯೇ, ಇರುವುದೂ ಹಾಗೆಯೇ"  ಎಂದರು.  ಅಲ್ಲೇ ಕುಳಿತಿದ್ದ ಮಗು ಖುಷಿಯಿಂದ ಇದನ್ನು ಕೇಳಿಸಿಕೊಂಡಿತು. ಈ ಪ್ರಸಂಗ ನನ್ನನ್ನು ವಿಚಾರಕ್ಕೆ ದೂಡಿತು. ಹಿರಿಯರಿಗೂ ಆ  ಸಂಬಂಧಿಗೂ ಅಷ್ಟಾಗಿ ಸರಿಯಿರಲಿಲ್ಲ. ಅದು ಮಗುವಿನ ಮೂಲಕ ಹೊರಬಿತ್ತು ಅಷ್ಟೆ. ಅವರು ಹಿರಿಯರ ಬೆನ್ನ ಹಿಂದೆ ಯಾವಾಗಲೋ ಆಡಿದ ಮಾತುಗಳನ್ನು ಮಗು ಪುನರುಚ್ಛರಿಸಿತ್ತಷ್ಟೆ ಹೊರತು ಅದು ಮಗುವಿನ ಸ್ವಂತ ಮಾತಾಗಿರಲಿಲ್ಲ. ಈಗ ಅವರು ಆಡಿದ ಮಾತಿನಿಂದ ಮಗುವಿಗೆ ತಾನು ಮಾಡಿದ್ದು ಸರಿ ಎಂದು ಶಹಭಾಸಗಿರಿ ಕೊಟ್ಟಂತಾತು. ಮಗು ಮುಂದೆ ಇಂತಹ ಮಾತುಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ ಆಡಲು ಪ್ರೇರೇಪಿಸಿದಂತೆ ಆಯಿತು. ಕಲುಷಿತ ಭಾವನೆಯನ್ನು ವಾಹಕರಾಗಿ ಅವರು ಆ ಮಗುವಿಗೂ ಹರಿಸಿದರಲ್ಲವೇ? ಇದು ಸರಿಯೇ?  ಮಕ್ಕಳು ನಿಷ್ಕಲ್ಮಶವಾದ ಪಾತ್ರೆಯಿದ್ದಂತೆ. ಆ ಪಾತ್ರೆಗೆ ಕಲ್ಮಶಗಳನ್ನು ತುಂಬಬಾರದಿತ್ತಲ್ಲವೇ?
     ಮನುಷ್ಯನ ಸ್ವಭಾವವೇ ವಿಚಿತ್ರ. ತನಗೆ ಬೇಕಾದವರ ಬಗ್ಗೆ ಯಾರಾದರೂ ಪ್ರಿಯವಾದ ವಿಷಯ ಹೇಳಿದರೆ ಅದಕ್ಕೆ ಮತ್ತಷ್ಟು ಒತ್ತುಕೊಟ್ಟು ಇನ್ನೊಬ್ಬರಿಗೆ ಹೇಳುತ್ತಾನೆ. ತನಗಾಗದವರ ಬಗ್ಗೆ ಒಳ್ಳೆಯ ಸಂಗತಿ ಕೇಳಿದರೆ ಅದನ್ನು ತಿರುಚಿ ತಮ್ಮ ಕೆಟ್ಟ ಅಭಿಪ್ರಾಯ ಸೇರಿಸಿ ಹೇಳುತ್ತಾನೆ. ಅವರ ಬಗ್ಗೆ ಕೆಟ್ಟ ವಿಷಯ ಕೇಳಿದರಂತೂ ಸಂಭ್ರಮಿಸಿ ಎಲ್ಲರಿಗೂ ಹರಡುತ್ತಾನೆ. (ಇಂದಿನ ಕೆಲವು ಟಿವಿ ಮಾಧ್ಯಮಗಳು ಇಂತಹ ಪ್ರವೃತ್ತಿಗೆ ಉತ್ತಮವಾದ ಉದಾಹರಣೆ.) ಆತ್ಮೀಯರು ಸೀನಿದರೆ ಸಾಕು, ಏನೋ ಆಗಿಹೋಯಿತೆಂದು ಕಳವಳ ಪಡುತ್ತಾರೆ. ಇಷ್ಟಪಡದವರು ಗಂಭೀರ ಕಾಯಿಲೆಯಿಂದ ನರಳುತ್ತಿದ್ದರೂ 'ಅವರಿಗೇನಾಗಿದೆ? ಇನ್ನೂ ಗಟ್ಟಿಗಡತವಾಗಿದ್ದಾರೆ. ಇನ್ನೂ ಎಷ್ಟು ಜನರನ್ನು ಹಾಳುಮಾಡಬೇಕೋ?' ಎಂದು ಉದ್ಗರಿಸುತ್ತಾರೆ. ಇಂತಹವರನ್ನು ಒಳ್ಳೆಯ ವಾಹಕರೆನ್ನಬಹುದೆ? ಸಂಬಂಧಗಳು ಹಾಳಾಗುವುದು ಇಂತಹ ನಡವಳಿಕೆಗಳಿಂದಲೇ.
     ಇನ್ನು ಕೆಲವರಿರುತ್ತಾರೆ. ಕೆಟ್ಟ ವಿಷಯ ಕೇಳಿದರೆ ಕೇಳಿಸಿಕೊಂಡು ಸುಮ್ಮನಾಗುತ್ತಾರೆಯೇ ಹೊರತು ಅದನ್ನು ಹರಡಲು ಹೋಗುವುದಿಲ್ಲ. ಒಳ್ಳೆಯ ವಿಷಯಗಳಿಗೆ ಸ್ಪಂದಿಸುತ್ತಾರೆ. ಇವರು ಒಳ್ಳೆಯ ವಾಹಕರು. ಇಂತಹವರನ್ನು ಸಾಮಾನ್ಯವಾಗಿ ಜನ ಒಳ್ಳೆಯವರೆಂದು ಗುರುತಿಸುತ್ತಾರೆ. ಇವರ ಮಾತುಗಳಿಗೆ ಗೌರವ ಕೊಡುತ್ತಾರೆ. ಸಂಬಂಧಗಳು ಉಳಿಯುವುದು, ಬೆಳೆಯುವುದು ಇಂತಹವರಿಂದಲೇ ಎಂಬುದರಲ್ಲಿ ಅನುಮಾನವಿಲ್ಲ. ಕುಟುಂಬದ ಮುಖ್ಯಸ್ಥ ಮುಖ್ಯ ವಾಹಕನಾದರೆ ಕುಟುಂಬದ ಸದಸ್ಯರುಗಳು ಉಪವಾಹಕಗಳಿದ್ದಂತೆ. ವಾಹಕ, ಉಪವಾಹಕಗಳಲ್ಲಿ ಯಾವುದೇ ಒಂದು ಸರಿಲ್ಲದಿದ್ದರೂ ಒಂದು ಘಟಕವಾಗಿ ಕುಟುಂಬಕ್ಕೇ ಕೆಟ್ಟ ಹೆಸರು ಬರುತ್ತದೆ. ಈ ವಿಚಾರದಲ್ಲಿ ಎಚ್ಚರವಿರುವುದು ಒಳ್ಳೆಯದು. ಒಬ್ಬರಿದ್ದಂತೆ ಇನ್ನೊಬ್ಬರು ಇಲ್ಲದಿರುವುದರಿಂದ ಇದಕ್ಕೆ ಪರಿಹಾರ ಕಷ್ಟಸಾಧ್ಯ. ಗೀತೆಯ 'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನಾ' ಎಂಬಂತೆ ಬಂದದ್ದನ್ನು ಸ್ವೀಕರಿಸಿ ನಡೆಯುವುದೊಂದೇ ಆಗ ಉಳಿಯುವ ಮಾರ್ಗ. ಆದರೆ ಒಬ್ಬರ ಕಾರಣದಿಂದ ಕುಟುಂಬದ ಎಲ್ಲರಿಗೂ ಕೆಟ್ಟ ಹೆಸರು ಬರುವಂತಾಗುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ನಾವು ಆಡುವ ಮಾತುಗಳು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆ. ಆಡುವ ಮಾತುಗಳು ಹೇಗಿರಬೇಕೆಂದು ಋಗ್ವೇದದ ಈ ಮಂತ್ರ ಮಾರ್ಗದರ್ಶನ ನೀಡುತ್ತಿದೆ: 
ಸಕ್ತುಮಿವ ತಿತಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕ್ರತ |
ಅತ್ರಾ ಸಖಾಯಃ ಸಖ್ಯಾನಿ ಜಾನತೇ ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿ ವಾಚಿ || (ಋಕ್. ೧೦.೭೧.೨.)
     ಜರಡಿಯಿಂದ ಹಿಟ್ಟನ್ನು ಶೋಧಿಸುವಂತೆ ಬುದ್ಧಿವಂತರು ಆಡುವ ಮಾತನ್ನು ಮನಸ್ಸಿನಲ್ಲಿ ಶೋಧಿಸಿ ನಂತರ ಮಾತನಾಡುತ್ತಾರೆ. ಈ ರೀತಿ ಆಲೋಚಿಸಿ ಮಾತನಾಡುವವರಿಂದ ಜನರಲ್ಲಿ ಸ್ನೇಹಭಾವನೆ ಬೆಳೆಯುತ್ತದೆ. ಮನುಷ್ಯನ ನಿಜವಾದ ಸಂಪತ್ತು ಮಾತಿನಲ್ಲಿಯೇ ಅಡಗಿದೆ ಎಂಬ ಈ ಮಂತ್ರದ ಅರ್ಥವನ್ನು ತಿಳಿದು ಆಚರಿಸಿದಲ್ಲಿ ಒಳಿತೇ ಆಗುತ್ತದೆ. 
     ನಾವೆಷ್ಟು ಒಳ್ಳೆಯವರು ಎಂಬುದರ ಅಳತೆಗೋಲು ನಮ್ಮಲ್ಲೇ ಇದೆ. ಕುಟುಂಬದ ಸದಸ್ಯರುಗಳ, ಬಂಧುಗಳ, ಸ್ನೇಹಿತರ ಪಟ್ಟಿ ಮಾಡಿರಿ. ಆ ಹೆಸರುಗಳ ಮುಂದೆ ಎರಡು ಕಲಮುಗಳು ಇರಲಿ. ಒಂದು ಕಲಮಿನಲ್ಲಿ ನಿಮ್ಮ ದೃಷ್ಟಿಯಲ್ಲಿ  ಅವರು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಇನ್ನೊಂದು ಕಲಮಿನಲ್ಲಿ ಅವರ ದೃಷ್ಟಿಯಲ್ಲಿ ನೀವು  ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಒಂದು ಆಶ್ಚರ್ಯದ ಸಂಗತಿ ನಿಮಗೇ ಗೋಚರಿಸುವುದು. ಸಾಮಾನ್ಯವಾಗಿ ಎರಡು ಕಲಮುಗಳ ವಿವರ ಒಂದೇ ಆಗಿರುತ್ತದೆ. ನೀವು ಒಳ್ಳೆಯವರೆಂದು ಹೇಳುವವರು ನಿಮ್ಮನ್ನೂ ಒಳ್ಳೆಯವರೆಂದು ಭಾವಿಸುವರು. ನೀವು ಕೆಟ್ಟವರೆನ್ನುವವರು ನಿಮ್ಮನ್ನು ಒಳ್ಳೆಯವರೆಂದು ಹೇಳಲಾರರು. ಕೊನೆಯಲ್ಲಿ ಎಷ್ಟು ಒಳ್ಳೆಯವರು ಮತ್ತು ಕೆಟ್ಟವರು ಎಂಬುದನ್ನು ಲೆಕ್ಕ ಹಾಕಿರಿ. ಒಳ್ಳೆಯವರು ಎಂಬ ಸಂಖ್ಯೆ ಜಾಸ್ತಿ ಬಂದರೆ ನೀವು ಒಳ್ಳೆಯವರೇ. ಕೆಟ್ಟವರು ಎಂಬ ವಿವರ ಹೆಚ್ಚಾಗಿದ್ದರೆ ತಿದ್ದಿಕೊಳ್ಳುವ, ಬದಲಾಗುವ ಅಗತ್ಯವಿದೆ ಎಂದೇ ಅರ್ಥ. ಈ ಜಗತ್ತು ಕನ್ನಡಿಯಿದ್ದಂತೆ. ಒಳ್ಳೆಯವರಿಗೆ ಒಳ್ಳೆಯದಾಗಿ, ಕೆಟ್ಟವರಿಗೆ ಕೆಟ್ಟದಾಗಿ ಕಾಣುತ್ತದೆ. ಕನ್ನಡಿಯ ಪ್ರತಿಬಿಂಬವೂ ಅಷ್ಟೆ. ನಾವು ಎಷ್ಟು ದೂರದಲ್ಲಿರುತ್ತೇವೋ ಪ್ರತಿಬಿಂಬವೂ ಅಷ್ಟೇ ದೂರದಲ್ಲಿರುತ್ತದೆ. ಇದರ ಅರ್ಥವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲವಲ್ಲವೇ?
     ಈ ಬದುಕು ಮೂರುದಿನದ್ದು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನಾವು ಚಿರಂಜೀವಿಗಳು ಎಂಬಂತೆ ವರ್ತಿಸುತ್ತೇವೆ. ಇತರರ ಬಗ್ಗೆ "ಅವನು ಏಕೆ ಹಾಗಾಡುತ್ತಾನೆ? ಹೋಗುವಾಗ ಎಲ್ಲಾ ಹೊತ್ತುಕೊಂಡು ಹೋಗುತ್ತಾನಾ?" ಎಂದು ಹೇಳುವ ನಾವು ಅದೇ ತತ್ವವನ್ನು ನಮಗೆ ಹೇಳಿಕೊಳ್ಳುತ್ತೇವೆಯೇ? ಒಂದು ವೇಳೆ ನಾವು ಸದ್ಯದಲ್ಲೇ ಸಾಯುತ್ತೇವೆ ಎಂಬುದು ನಮ್ಮ ಅರಿವಿಗೆ ಬಂದಾಗ ಮತ್ತು ಏನಾದರೂ ಹೇಳಲು ಐದು ನಿಮಿಷ ಮಾತ್ರ ಅವಕಾಶ ಸಿಕ್ಕಾಗ ನಾವು ಏನು ಹೇಳಬಹುದು, ಊಹಿಸಿಕೊಳ್ಳಿ. ಆ ಮಾತನ್ನು ಈಗಲೇ ಏಕೆ ಹೇಳಬಾರದು? ಜೀವನ ಪೂರ್ತಿ ಉತ್ತಮ ರೀತಿಯಲ್ಲಿ ಬಾಳಲು ಸಿದ್ಧತೆ ಮಾಡಿಕೊಳ್ಳುವುದರಲ್ಲಿಯೇ ಕಳೆಯುವ ನಾವು ಉತ್ತಮವಾಗಿ ಬಾಳುವುದಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ.
     ಸಂಬಂಧಗಳಲ್ಲಿ ಬರುವ ದೊಡ್ಡ ಸವಾಲೆಂದರೆ  ಏನನ್ನಾದರೂ ಪಡೆಯುವ ಸಲುವಾಗಿಯೇ ಸಂಬಂಧಗಳನ್ನು  ಹೆಚ್ಚಿನವರು ಬೆಳೆಸುವುದೇ ಆಗಿದೆ. ಅವರು ಇತರರು ತಮಗೆ ಒಳಿತು ಮಾಡಲಿ ಎಂದು ಬಯಸಿ ಸಂಬಂಧ ಬೆಳೆಸುತ್ತಾರೆ. ಸಂಬಂಧಗಳು ಏನನ್ನಾದರೂ ಕೊಡುವ ಸಲುವಾಗಿ, ಪಡೆಯುವ ಸಲುವಾಗಿ ಅಲ್ಲ ಎಂದುಕೊಂಡರೆ ಸಂಬಂಧಗಳು ಉಳಿಯುತ್ತವೆ, ಬೆಳೆಯುತ್ತವೆ.  ಬರ್ನಾರ್ಡ್ ಶಾ ಹೇಳಿದಂತೆ "ಸಾಯುವ ಮುನ್ನ ನಮ್ಮಲ್ಲಿರುವ ಒಳ್ಳೆಯದನ್ನೆಲ್ಲಾ ಕೊಟ್ಟುಬಿಡೋಣ." ಸಂತೋಷ ಹಂಚಿಕೊಳ್ಳೋಣ; ಅದು ದ್ವಿಗುಣಗೊಳ್ಳುತ್ತದೆ. ದುಃಖವನ್ನೂ ಹಂಚಿಕೊಳ್ಳೋಣ; ಅದು ಅರ್ಧ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ, ಒಡಲಗುಡಿಯ ರಜ-ತಮಗಳ ಗುಡಿಸಿ ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ ಮನದ ಕತ್ತಲ ಕಳೆದು ತಿಳಿವಿನ ಬೆಳಕ ಪಸರಿಸೋಣ; ಒಳ್ಳೆಯವರಾಗೋಣ. 
 -ಕ.ವೆಂ.ನಾಗರಾಜ್.