ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಡಿಸೆಂಬರ್ 24, 2014

ನಾವು ಮತ್ತು ನಮ್ಮ ಜ್ಞಾನ


     ಹೀಗೆಯೇ ಯಾವುದೋ ವಿಷಯದ ಕುರಿತು ಚಿಂತಿಸುತ್ತಿದ್ದಾಗ ಈ ಹಳೆಯ ಘಟನೆ ನೆನಪಾಯಿತು. ಆಗಿನ್ನೂ ಬಿ.ಎಸ್.ಸಿ. ಪದವಿ ಮುಗಿಸಿದ ತರುಣದಲ್ಲೇ ೧೯೭೧ರಲ್ಲಿ ನನಗೆ ಅಂಚೆ ಕಛೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿ ಹಾಸನದ ಪ್ರಧಾನ ಅಂಚೆ ಕಛೇರಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದೆ. ಅಲ್ಲಿನ ಉಳಿತಾಯ ಖಾತೆ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕಾಲೇಜಿನಲ್ಲಿ ನಮಗೆ ಗಣಿತದ ಪಾಠ ಮಾಡುತ್ತಿದ್ದ ಲೆಕ್ಚರರೊಬ್ಬರು ತಮ್ಮ ಉಳಿತಾಯ ಖಾತೆಗೆ ಹಣ ಜಮ ಮಾಡಲು ಬಂದಿದ್ದರು. ಎ.ಬಿ.ಚನ್ನೇಗೌಡ ಎಂಬ ಹೆಸರಿನ ಅವರನ್ನು ನಾವು ಎಬಿಸಿ ಗೌಡರು ಎಂದು ಕರೆಯುತ್ತಿದ್ದೆವು. ನಾನು ಓದಿದ ಓದಿಗೂ, ಆಗ ಮಾಡುತ್ತಿದ್ದ ಕೆಲಸಕ್ಕೂ ಯಾವುದೇ ಸಂಬಂಧವಿರಲಿಲ್ಲ. ಇದರ ಹಿನ್ನೆಲೆಯಲ್ಲಿ ನಾನು ಅವರಿಗೆ ನಮಸ್ಕಾರ ಮಾಡುತ್ತಾ ಹೇಳಿದ್ದೆ; "ಸರ್, ನಿಮ್ಮ ಟ್ರಿಗೊನೊಮೆಟ್ರಿ, ಕ್ಯಾಲ್ಕ್ಯುಲಸ್, ಅಸ್ಟ್ರಾನಮಿ ಯಾವುದೂ ಈಗ ಪ್ರಯೋಜನಕ್ಕೆ ಬರಲಿಲ್ಲ." ನಾನು ಅವರನ್ನು ಅವಹೇಳನ ಮಾಡುತ್ತಿದ್ದೇನೆಂದು ಭಾವಿಸಿದ ಅವರು ಗಟ್ಟಿಯಾಗಿ ಕೂಗಾಡಿ ನನ್ನ ಮೇಲೆ ತಿರುಗಿ ಬಿದ್ದಿದ್ದರು. ಕೊನೆಯಲ್ಲಿ, "ಮೈಂಡ್ ಯುವರ್ ಬಿಸಿನೆಸ್" ಎಂದೂ ಎಚ್ಚರಿಸಿದ್ದರು. ಈ ಗದ್ದಲದಿಂದಾಗಿ ಅಕ್ಕಪಕ್ಕದಲ್ಲಿದ್ದವರು ಮತ್ತು ನನ್ನ ಸಹೋದ್ಯೋಗಿಗಳ ಗಮನವೆಲ್ಲಾ ಅವರ ಮತ್ತು ನನ್ನ ನಡುವೆ ಕೇಂದ್ರೀಕೃತವಾಗಿಬಿಟ್ಟಿತ್ತು.  ಅವರ ಕ್ಷಮೆ ಕೇಳಿ ನನ್ನ ಮಾತಿನ ಅಂತರಾರ್ಥ ಅವರಿಗೆ ಗೊತ್ತಾಗುವಂತೆ ಮಾಡಿಸುವಷ್ಟರಲ್ಲಿ ನನಗೆ ಸಾಕೋಸಾಕಾಗಿತ್ತು. 
     ಹೌದು, ನಾನು ಭೌತಶಾಸ್ತ್ರ ಮತ್ತು ಗಣಿತಗಳನ್ನು ಪ್ರಧಾನ ವಿಷಯಗಳನ್ನಾಗಿ ಹೊಂದಿ ಬಿ.ಎಸ್.ಸಿ. ಪದವಿ ಪಡೆದಿದ್ದೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ನಾನು ಕಲಿತಿದ್ದ ಬಹಳಷ್ಟು ಸಂಗತಿಗಳು ಈಗ ನನ್ನ ನೆನಪಿನಲ್ಲಿ ಉಳಿದಿಲ್ಲ ಮತ್ತು ಉಪಯೋಗಕ್ಕೂ ಬರುತ್ತಿಲ್ಲ. ಈಗ ಪರೀಕ್ಷೆ ಎದುರಿಸಿದರೆ ನಾನು ಖಂಡಿತಾ ಅನುತ್ತೀರ್ಣನೇ ಆಗುತ್ತೇನೆ. ಹಾಗಾದರೆ ಇಂತಹ ವಿದ್ಯೆಗೆ ಅರ್ಥವಿದೆಯೇ? ಯಾವುದಾದರೂ ಒಂದು ನೌಕರಿ ಪಡೆಯುವ ಸಲುವಾಗಿ ಆ ಡಿಗ್ರಿ ಪಡೆದಿದ್ದೆ. ನೌಕರಿ ಸಿಕ್ಕಿತು. ಅಷ್ಟರ ಮಟ್ಟಿಗೆ ನನ್ನ ಡಿಗ್ರಿ ಉಪಯೋಗಕ್ಕೆ ಬಂದಿತು. ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಮಾರ್ಪಾಡು ಮಾಡಿ ಗುಮಾಸ್ತರ ಸೈನ್ಯ ನಿರ್ಮಿಸುತ್ತೇನೆಂದು ಹೇಳಿದ್ದ ಮೆಕಾಲೆಯ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ಪಡೆದ ನಾನು ಒಬ್ಬ ಗುಮಾಸ್ತ ಸೈನಿಕನಾಗುವಲ್ಲಿ ಯಶಸ್ವಿಯಾಗಿದ್ದೆ. 
     ೮೪ ಲಕ್ಷ ಜೀವವೈವಿಧ್ಯಗಳಿವೆಯೆಂದು ಹೇಳಲಾಗುತ್ತಿದ್ದು, ಇವುಗಳಲ್ಲಿ ಮಾನವಜೀವಿ ವಿಶಿಷ್ಟವಾಗಿ ಎದ್ದು ಕಾಣುತ್ತಾನೆ. ಅದಕ್ಕೆ ಕಾರಣ ಆತನಲ್ಲಿನ ವಿವೇಚನಾಶಕ್ತಿ. ವಿವೇಚನಾಶಕ್ತಿ ಬಳಸದಿರುವ, ಬಳಸಲಾಗದಿರುವ ಮಾನವನಿಗೂ ಇತರ ಪ್ರಾಣಿಗಳಿಗೂ ವ್ಯತ್ಯಾಸವೇನಿರುತ್ತದೆ? ಈ ವಿವೇಚನಾಶಕ್ತಿ ಬರಲು ಕಾರಣ ಅವನು ಪಡೆಯುವ ಜ್ಞಾನದಲ್ಲಿದೆ. ಈ ಜ್ಞಾನ ಅವನಿಗೆ ನೋಡುವುದರಿಂದ, ಕೇಳುವುದರಿಂದ, ಸೇವಿಸುವುದರಿಂದ, ಮನೆಯಿಂದ, ಸುತ್ತಮುತ್ತಲಿನ ಪರಿಸರದಿಂದ, ಹಿರಿಯರಿಂದ, ಗುರುಗಳಿಂದ, ಶಿಕ್ಷಣ ಶಾಲೆಗಳಿಂದ ಸಿಗುತ್ತದೆ. ಅವನ ಶಕ್ತ್ಯಾನುಸಾರ ಅವನು ಜ್ಞಾನಿಯಾಗುತ್ತಾನೆ. ಹಿಂದೆ ಮಕ್ಕಳಿಗೆ ಎಂಟು ವರ್ಷಗಳಾದಾಗ ಅವರಿಗೆ ಉಪನಯನ ಸಂಸ್ಕಾರ ನೀಡಿ ಗುರುಕುಲಕ್ಕೆ ಶಿಕ್ಷಣ ಪಡೆಯಲು ಕಳಿಸಲಾಗುತ್ತಿತ್ತು. ಆ ಗುರುಕುಲಗಳಲ್ಲಿ ಶಾಸ್ತ್ರವಿದ್ಯೆ, ಶಸ್ತ್ರವಿದ್ಯೆ ಸೇರಿದಂತೆ ಬದುಕಿಗೆ ಪೂರಕವಾಗುವ ವಿದ್ಯೆಗಳು, ಲಲಿತಕಲೆಗಳು ಮುಂತಾದುವನ್ನು ಕಲಿಯಲು ಅವಕಾಶವಿತ್ತು. ಪ್ರತಿಯೊಬ್ಬನಿಗೂ ತಾನು ಇಷ್ಟಪಡುವ ವಿಷಯದಲ್ಲಿ ಪ್ರಾವೀಣ್ಯತೆ ಪಡೆಯುವುದಕ್ಕೆ ಅವಕಾಶವಿರುತ್ತಿತ್ತು. ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ, ನೈತಿಕತೆಯ ಮಹತ್ವ ಅರಿಯುವಲ್ಲಿ ಸುಯೋಗ್ಯ ಮಾರ್ಗದರ್ಶನ ಸಿಗುತ್ತಿತ್ತು. ಅಂತಹ ಶಿಕ್ಷಣ ಪಡೆದು ಮರಳುತ್ತಿದ್ದ ವಿದ್ಯಾರ್ಥಿಗಳು ದೇಶದ ಸುಯೋಗ್ಯ ಪ್ರಜೆಗಳಾಗಿ ಸಮಾಜದ ಆಸ್ತಿಯಾಗುತ್ತಿದ್ದರು. ಇಂದು ಇಂತಹ ಶಿಕ್ಷಣ ಪದ್ಧತಿಯನ್ನು ಈಗ ಊಹಿಸಿಕೊಳ್ಳಲೂ ಆಗುವುದಿಲ್ಲ.
     ಈಗ ಜ್ಞಾನ ಅನ್ನುವುದು ಕೇವಲ ಹೆಸರಿಗಷ್ಟೇ ಆಗಿದೆ ಎಂಬುದನ್ನು ಒಪ್ಪಲೇಬೇಕು. ಕೆಲವರು ತಮ್ಮ ಹೆಸರಿನ ಜೊತೆಗೆ ತಾವು ಪಡೆದಿರುವ ದೇಶ-ವಿದೇಶಗಳ ಅನೇಕ ಪದವಿಗಳನ್ನು ಹಾಕಿಕೊಂಡಿರುವುದನ್ನು ಕಾಣಬಹುದು. ಅವರು ಅದರಲ್ಲಿ ಪ್ರವೀಣರೂ ಆಗಿರಬಹುದು. ಆದರೆ ಒಂದಂತೂ ಸತ್ಯ. ಅವರು ಏನು ಕಲಿತಿದ್ದಾರೋ ಅದರ ಅಂತಸ್ಸತ್ವವನ್ನು ಅರಿತಿರದಿದ್ದರೆ ಅದೆಲ್ಲವೂ ವ್ಯರ್ಥವೇ ಸರಿ. ಅವರು ಕಲಿತಿರುವ ವಿದ್ಯೆ ತಮ್ಮ ದೈನಂದಿನ ಜೀವನ, ವೃತ್ತಿಗಳಿಗೆ ಪೂರಕವಾಗಿದ್ದರೆ ಅದು ಉಳಿಯಬಹುದು. ಇಲ್ಲದಿದ್ದರೆ ಕ್ರಮೇಣ ಮಸುಕಾಗಿ ಅವು ಪುಸ್ತಕದ ಬದನೆಕಾಯಿ ಮಾತ್ರ ಆಗುತ್ತದೆ. ಅದನ್ನು ನೋಡಬಹುದಷ್ಟೆ, ಬಳಸಲಾಗುವುದಿಲ್ಲ.
     ಉಪನಿಷತ್ತಿನಲ್ಲಿ ನಾರದ-ಸನತ್ಕುಮಾರ ಸಂವಾದ ಎಂದು ಬರುತ್ತದೆ, ಬಹಳ ಮನನೀಯವಾಗಿದೆ. ಸನತ್ಕುಮಾರ ಜ್ಞಾನಪರ್ವತ, ಚಿರಕುಮಾರ. ನಾರ ಅಂದರೆ ನರರ ಜ್ಞಾನ ಮತ್ತು ದ ಎಂದರೆ ಕೊಡುವವನು- ನರರಿಗೆ ಜ್ಞಾನ ಕೊಡುವವನು ನಾರದ. ಸ್ವತಃ ಸಂತ ಮತ್ತು ಜ್ಞಾನಿಯಾಗಿದ್ದ, ಎಲ್ಲವನ್ನೂ ಬಲ್ಲವನಾಗಿದ್ದ ನಾರದ ಸನತ್ಕುಮಾರನ ಬಳಿ ಬಂದು ಕೇಳುತ್ತಾನೆ: "ಎಲ್ಲಾ ವಿಷಯಗಳನ್ನೂ ತಿಳಿದಿದ್ದರೂ ನನ್ನ ಮನಸ್ಸಿಗೆ ಶಾಂತಿಯಿಲ್ಲವಾಗಿದೆ. ದಯಮಾಡಿ ಮಾರ್ಗದರ್ಶನ ನೀಡಿ. ನಾನು ನಿಮ್ಮ ನಮ್ರ ವಿದ್ಯಾರ್ಥಿಯಾಗಿ ಬಂದಿರುವೆ." ಸನತ್ಕುಮಾರ ಹೇಳುತ್ತಾನೆ: "ನಾನು ಏನು ಕಲಿಸಬೇಕು? ನಿನ್ನ ತೊಂದರೆ ಏನು? ಮೊದಲು ನಿನಗೆ ಏನು ಗೊತ್ತಿದೆ ಹೇಳು. ಏನಾದರೂ ಉಳಿದಿದ್ದರೆ ಅದರ ಬಗ್ಗೆ ಕಲಿಸುವೆ." ಇದಕ್ಕೆ ನಾರದ ಉತ್ತರಿಸುತ್ತಾನೆ: "ಗುರುವೆ, ನಾನು ಋಗ್ವೇದದಲ್ಲಿ ಪರಿಣಿತ. ಯಜುರ್ವೇದದಲ್ಲಿ ಯಾಜಮಾನಿಕೆ ಹೊಂದಿರುವೆ. ಸಾಮವೇದದಲ್ಲಿ ನಾನು ಪಾರಂಗತ. ಅಥರ್ವವೇದ ಗೊತ್ತು. ಪುರಾಣಗಳು, ಗ್ರಂಥಗಳು ಮತ್ತು ವ್ಯಾಕರಣಗಳ ಬಗ್ಗೆ ಎಲ್ಲವೂ ತಿಳಿದಿರುವೆ. ಯಾವುದೂ ನನಗೆ ಗೊತ್ತಿಲ್ಲದ್ದು ಇಲ್ಲ. ಗಣಿತ, ಜ್ಯೋತಿಷ್ಯ, ಶಕುನಗಳು, ತರ್ಕ, ಇತಿಹಾಸ, ಸಂಪತ್ವಿದ್ಯೆ, ರಾಜನೀತಿ, ಖಗೋಳವಿದ್ಯೆ, ವೇದದ ಷಡಂಗಗಳ ಬಗ್ಗೆ ಗೊತ್ತಿದೆ. ಭೌತವಿಜ್ಞಾನ ಗೊತ್ತು, ಸಂಗೀತ ಬಲ್ಲೆ, ಕಲೆ, ನೃತ್ಯಗಳಲ್ಲಿ ಪ್ರವೀಣನಿರುವೆ. ಇಂತಹುದನ್ನು ಕಲಿತಿಲ್ಲ, ಗೊತ್ತಿಲ್ಲ ಎಂಬುದಿಲ್ಲ. ಇವು ನಾನು ಅಧ್ಯಯನ ಮಾಡಿರುವ, ತಿಳಿದಿರುವ ವಿಷಯಗಳು." ಸನತ್ಕುಮಾರ ನಾರದನ ಕಲಿಕೆಯ ಕುರಿತು ಹೇಳುತ್ತಾನೆ: "ಇವೆಲ್ಲಾ ಕೇವಲ ಹೆಸರುಗಳು. ಈ ಎಲ್ಲಾ ಜ್ಞಾನಗಳು ಸಾಕಾಗದು. ಅದಕ್ಕೇ ನಿನಗೆ ಶಾಂತಿ ಸಿಕ್ಕಿಲ್ಲ." ನಾರದನೂ ವಿನೀತನಾಗಿ ಹೇಳುತ್ತಾನೆ: "ಹೌದು, ಇವೆಲ್ಲಾ ಕೇವಲ ಹೆಸರುಗಳು, ಕೇವಲ ವಿದ್ಯೆಗಳ ಪಟ್ಟಿ. ಯಾರು ಆತ್ಮನನ್ನು ಅರಿಯುತ್ತಾರೋ ಅವರು ಶಾಂತಿ ಗಳಿಸುತ್ತಾರೆ ಎಂದು ಹೇಳುವುದನ್ನು ಕೇಳಿರುವೆ. ಈ ಆತ್ಮ ಅಂದರೆ ಏನು? ಎಲ್ಲವನ್ನೂ ತಿಳಿದೂ ನಾನು ಅಶಾಂತನಾಗಿದ್ದೇನೆ. ನನ್ನನ್ನು ಅಶಾಂತಸಾಗರದಿಂದ ಪಾರು ಮಾಡಲು ಕೋರಿ ನಿನ್ನಲ್ಲಿಗೆ ಬಂದಿದ್ದೇನೆ." ಹೀಗೆ ಸಂಭಾಷಣೆ ಮುಂದುವರೆಯುತ್ತದೆ.
     ಜ್ಞಾನದ ಅಂತಸ್ಸತ್ವದ ಮಹತ್ವವನ್ನು ಮೇಲಿನ ಸಂಭಾಷಣೆ ಹೇಳುತ್ತದೆ. ಪ್ರಪಂಚದ ಅನೇಕ ವಿಷಯಗಳ ಜ್ಞಾನ ನಮಗೆ ಇರಬಹುದು. ಉದಾಹರಣೆಗೆ ಸೂರ್ಯ, ಸೂರ್ಯಮಂಡಲ, ಇವುಗಳ ಉಗಮ ಹೇಗಾಯಿತು, ಇವುಗಳ ರಚನೆ ಹೇಗಿದೆ, ಇತ್ಯಾದಿಗಳ ಬಗ್ಗೆ ನಮಗೆ ಜ್ಞಾನವಿರಬಹುದು. ಆದರೆ ಈ ಜ್ಞಾನ ಕೇವಲ ಅಭಿಪ್ರಾಯ (ಥಿಯರಿ) ಮಾತ್ರ. ಇವುಗಳ ಈ ಜ್ಞಾನದಿಂದ ಮಾತ್ರ ಇವುಗಳು ನಮ್ಮ ಅಧೀನಕ್ಕೆ ಬರುತ್ತವೆಯೆಂದಾಗಲೀ, ಇವುಗಳು ನಮ್ಮ ಸ್ವತ್ತಾಗುತ್ತದೆಯೆಂಬುದಾಗಲೀ ಇಲ್ಲ. ಥಿಯರಿಗೂ ವಸ್ತುಸ್ಥಿತಿಗೂ ಭಿನ್ನತೆಯಿದೆ. ನಾರದನ ಜ್ಞಾನವೂ ಥಿಯರಿಯ ಜ್ಞಾನದಂತೆ. ಆತನಿಗೆ ವೇದಮಂತ್ರಗಳು ಗೊತ್ತು, ಅವುಗಳ ಹೆಸರುಗಳು ಗೊತ್ತು, ಅವುಗಳ ವಿಚಾರ ಗೊತ್ತು, ಅರ್ಥವೂ ಗೊತ್ತು. ಆದರೆ ಈ ಮಂತ್ರಗಳ ಆತ್ಮ -ಅಂತಸ್ಸತ್ವ- ಆತನ ಅರಿವಿನ ವ್ಯಾಪ್ತಿಯಿಂದ ಹೊರಗಿದೆ ಎಂಬುದು ಸನತ್ಕುಮಾರನ ಅಭಿಮತ. ನಾರದ ಹೀಗಿದ್ದನೋ, ಇಲ್ಲವೋ, ಆದರೆ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ, ಅದೆಂದರೆ ಕೇವಲ ಥಿಯರಿಯ ಜ್ಞಾನ ಪ್ರಯೋಜನಕ್ಕೆ ಬಾರದು, ಅದರೊಳಗಿನ ಆತ್ಮವನ್ನು ಅರಿತಾಗಲೇ ಜ್ಞಾನಕ್ಕೆ ಅರ್ಥ ಬರುತ್ತದೆ ಎಂಬುದು.
     ಹಾಗಾದರೆ ಥಿಯರಿಯ ಜ್ಞಾನ ಪ್ರಯೋಜನವಿಲ್ಲವೆಂದರೆ ಕಲಿಯುವ ಅಗತ್ಯವಿಲ್ಲವೇ ಎಂದರೆ ಅಗತ್ಯವಿದೆ. ಮೂಲಜ್ಞಾನವಿಲ್ಲದೆ ಅದರ ಅಂತಸ್ಸತ್ವವನ್ನು ಅರಿಯುವುದಾದರೂ ಹೇಗೆ? ಈ ಸಿದ್ಧಾಂತದ ಜ್ಞಾನ ನಿಜವಾದ ಜ್ಞಾನ ಪಡೆಯಲು ಸಾಧನವಾಗುತ್ತದೆ. ಕಲಿಕೆಯು ಮಾಹಿತಿ ಸಂಗ್ರಹದಿಂದಲೇ ಆರಂಭವಾಗುವುದು. ಪ್ರಯೋಗ ಸಿದ್ಧಾಂತದ ನಂತರವೇ ಬರುವಂತಹುದು. ಯಾವುದೇ ವಿಷಯದಲ್ಲಿ ಸಿದ್ಧಿಯಾಗಬೇಕೆಂದರೆ ಆ ವಿಷಯದ ಕುರಿತು ಸಮಗ್ರ ಮಾಹಿತಿ ಮೊದಲು ಹೊಂದಬೇಕು. ನಂತರ ಮುಂದಿನ ಹಂತ ಆರಂಭವಾಗುವುದು. ಸಂಗೀತ ಕಲಿತವರು ಬಹಳ ಜನರಿರುತ್ತಾರೆ. ಕಲಾವಿದರೂ ಬಹಳ್ಟದ್ದಾರೆ. ಆಧ್ಯಾತ್ಮಿಕ ಪಥದಲ್ಲಿ ಸಾಗುವವರಿಗೂ ಕಡಿಮೆಯೇನಿಲ್ಲ. ಆದರೆ ಅವರಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯುನ್ನತ ಸ್ಥಿತಿಗೆ ಏರಿದವರನ್ನು ಗಮನಿಸಿದರೆ ಅರ್ಥವಾಗುತ್ತದೆ. ಅಂತಹ ಸಾಧಕರು ತಮ್ಮ ವಿಷಯಗಳಲ್ಲಿ ತಾದಾತ್ಮ್ಯತೆ ಹೊಂದಿರುತ್ತಾರೆ. ಆಯಾ ವಿಷಯಗಳ ಅಂತರಂಗವನ್ನು ಅರಿತವರಾಗಿರುತ್ತಾರೆ. ಒಂದು ಅರ್ಥದಲ್ಲಿ ಅವರೇ ವಿಷಯವಾಗಿಬಿಟ್ಟಿರುತ್ತಾರೆ. ಇದು ನೈಜ ಜ್ಞಾನಿಗಳ ಲಕ್ಷಣ.
     ಈಗ ಅರ್ಥವಾಗಿರಬಹುದು. ನಾವು ಯಾವುದೇ ವಿಷಯದಲ್ಲಿ ಪಡೆದಿರುವ ಡಿಗ್ರಿ/ಪದವಿ ಅನ್ನುವುದು ಜ್ಞಾನದ ಪ್ರಾಥಮಿಕ ಹಂತ ಮಾತ್ರ. ನಮ್ಮ ಎದುರಿನಲ್ಲಿ ಸುಮಾರು ಒಂದು ಮೈಲು ದೂರದಲ್ಲಿ ಒಂದು ಪರ್ವತವಿದೆಯೆಂದುಕೊಳ್ಳೋಣ. ಅದು ಅಷ್ಟು ಎತ್ತರವಿದೆ, ಇಷ್ಟು ದೂರದಲ್ಲಿದೆ, ಇತ್ಯಾದಿ ಮಾಹಿತಿಗಳನ್ನು ಹೊರತುಪಡಿಸಿ ನಾವು ಹೆಚ್ಚು ವಿಷಯ ತಿಳಿದುಕೊಳ್ಳಲಾರೆವು. ಅದನ್ನು ಪೂರ್ಣವಾಗಿ ತಿಳಿಯಲು ಅದರ ಬಳಿಯೇ ಹೋಗಬೇಕು. ಹಾಗೆಯೇ ವಿಷಯದ ಒಳಹೊಕ್ಕು ಅದರೊಳಗೆ ಒಂದಾದಾಗ ಜ್ಞಾನ ಸಿದ್ಧಿಸುತ್ತದೆ. ಅಲ್ಲಿಯವರೆಗೆ ಕಲಿತಿರುವುದನ್ನು ಧ್ಯಾನಿಸುತ್ತಿರಬೇಕು, ಮನನ ಮಾಡುತ್ತಿರಬೇಕು, ಚಿಂತಿಸುತ್ತಿರಬೇಕು. ಕಲಿತಿರುವಷ್ಟರಲ್ಲಿ ಪ್ರಾವೀಣ್ಯತೆ ಪಡೆದ ನಂತರ ಮುಂದಿನ ಹಂತಕ್ಕೆ ಹೋಗಬೇಕು. ಪಡೆಯುವ ಜ್ಞಾನಕ್ಕೂ ಇತಿಮಿತಿಗಳಿರುತ್ತವೆ. ಶಿಕ್ಷಕ ವೃತ್ತಿಯವರಿಗೆ, ವೈದ್ಯಕೀಯ ವೃತ್ತಿಯವರಿಗೆ ಅವರುಗಳು ಪಡೆದ ಜ್ಞಾನ ಮುಂದೂ ಸಹ ಉಪಯೋಗಕ್ಕೆ ಬರುತ್ತದೆ. ಅದೇ ಶಿಕ್ಷಣ ನದಿಯಲ್ಲಿ ದೋಣಿಯಲ್ಲಿ ಸಾಗುತ್ತಿದ್ದು, ಪ್ರವಾಹದ ಕಾರಣ ಅಪಾಯದ ಸ್ಥಿತಿ ಎದುರಾದಾಗ ಉಪಯೋಗಕ್ಕೆ ಬರದು. ಆಗ ಬೇರೆಯದೇ ರೀತಿಯ ಜ್ಞಾನ ಅಗತ್ಯವಿರುತ್ತದೆ.  
     ಇಂದು ಶಿಕ್ಷಣ ಅನ್ನುವುದು ಮಾರಾಟದ ಸರಕಾಗಿದೆ. ಪದವಿಗಳು, ಡಾಕ್ಟರೇಟುಗಳನ್ನೂ ಕೊಳ್ಳಲು ಅವಕಾಶಗಳಿರುವ ಇಂದಿನ ದಿನಗಳಲ್ಲಿ ನೈಜ ಜ್ಞಾನ ಕಲಿಸುವ ಶಿಕ್ಷಣ ಪದ್ಧತಿ ಜಾರಿಗೆ ಬರುತ್ತದೆ ಎಂದು ನಿರೀಕ್ಷಿಸುವುದು ವಿಪರ್ಯಾಸವೇ ಸರಿ. ಸಾಧಕರು ತಮ್ಮ ತಮ್ಮ ಅಭಿರುಚಿ, ಆಸಕ್ತಿಗಳನ್ನು ಆಧರಿಸಿ ಸ್ವಂತ ಸಾಧನೆಯ ಮೂಲಕ ಜ್ಞಾನ ಗಳಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಹೀಗಿದ್ದೂ ಹಲವಾರು ಸಾಧಕರುಗಳನ್ನು ಹಲವು ರಂಗಗಳಲ್ಲಿ ನಾವು ಕಾಣುತ್ತಿದ್ದೇವೆ ಅಂದರೆ ಅಂತಹವರ ಜ್ಞಾನಾಕಾಂಕ್ಷೆ ಉನ್ನತ ಸ್ತರದಲ್ಲಿದೆ ಎಂದೇ ಅರ್ಥ. ಅವರುಗಳೇ ಏನಾದರೂ ಸಾಧಿಸಬೇಕೆಂದುಕೊಂಡವರಿಗೆ ಮಾರ್ಗದರ್ಶಿಗಳು, ಪ್ರೋತ್ಸಾಹಕರು ಹಾಗೂ ಆದರ್ಶಪ್ರಾಯರು.
-ಕ.ವೆಂ.ನಾಗರಾಜ್.
**************
ಚಿತ್ರಕೃಪೆ: http://www.fernhurst.net/images/ReadingManiacs.gif

ದಿನಾಂಕ 22.12.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: 


ಶುಕ್ರವಾರ, ಡಿಸೆಂಬರ್ 19, 2014

ದೇವರು- ಒಂದು ತರ್ಕವಿತರ್ಕ-4: ಒಬ್ಬನಲ್ಲದೆ ಹಲವರುಂಟೇ?

ಹಿಂದಿನ ಲೇಖನಕ್ಕೆ ಲಿಂಕ್: ದೇವರು ಒಂದು ತರ್ಕವಿತರ್ಕ - 3

ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು
ಎಲ್ಲೆಲ್ಲು ಅವನೆಂದು ಆಸ್ತಿಕನು ಹೇಳುವನು |
ಕಾಣದಿಹ ದೇವನಿಹನೆಂದು ಹೇಳಿಸುವ
ಶಕ್ತಿ ಯಾವುದದಚ್ಚರಿಯು ಮೂಢ ||
     ದೇವರ ಬಗ್ಗೆ ಮನುಷ್ಯಜೀವಿ ಬಹಳ ತಲೆಕೆಡಿಸಿಕೊಂಡಿದ್ದಾನೆ. ದೇವರು ಒಬ್ಬನು ಮಾತ್ರನೇ? ಹಲವು ದೇವರಿದ್ದಾರೆಯೇ? ಅವನು ಆಕಾರಿಯೇ? ನಿರಾಕಾರಿಯೇ? ಇದ್ದಾನೆಯೋ, ಇಲ್ಲವೋ? ಅವನನ್ನು ಕಂಡವರುಂಟೆ? ಇತ್ಯಾದಿ ಕುರಿತು ಬಹು ಪುರಾತನ ಕಾಲದಿಂದಲೂ ಚರ್ಚೆ, ತರ್ಕ, ಜಿಜ್ಞಾಸೆ, ಸಿದ್ಧಾಂತಗಳ/ವಿಚಾರಗಳ ಮಂಡನೆ/ಖಂಡನೆ, ಪರ-ವಿರೋಧ ಸಂಘರ್ಷಗಳು ನಡೆಯುತ್ತಿವೆ, ಬಹುಷಃ ಇದು ನಡೆಯುತ್ತಲೇ ಇರುತ್ತದೆ. ದೇವರ ಕುರಿತು ವಿಚಾರ ಮಾಡುವ ಮೊದಲು ಮಾನವನ ಇತಿ-ಮಿತಿ ಕುರಿತು ಸ್ವಲ್ಪ ವಿಚಾರ ಮಾಡೋಣ. ಬೃಹತ್ ಬ್ರಹ್ಮಾಂಡದ ತುಲನೆಯಲ್ಲಿ ಅವನು ಒಬ್ಬ ಕ್ಷುದ್ರಾತಿಕ್ಷುದ್ರ ಜೀವಿ ಎಂಬುದನ್ನು ಒಪ್ಪಲೇಬೇಕು. ಅವನು ಕಂಡದ್ದು, ಕೇಳಿದ್ದು, ಅಧ್ಯಯನ ಮಾಡಿದ್ದು, ಅರಿತಿದ್ದುಗಳನ್ನು ಆಧರಿಸಿ ತನ್ನ ಬುದ್ಧಿಶಕ್ತಿ, ಕಲ್ಪನಾಶಕ್ತಿ, ವಿವೇಚನಾಶಕ್ತಿ ಆಧರಿಸಿ ಕೆಲವು ನಂಬಿಕೆಗಳನ್ನು, ವಿಚಾರಗಳನ್ನು ಒಪ್ಪಿಕೊಳ್ಳುತ್ತಾನೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಈ ಮೂಲವಿಚಾರವನ್ನು ಮನದಲ್ಲಿ ಇಟ್ಟುಕೊಂಡು ನನಗೆ ಸರಿ ಅನ್ನಿಸಿದ ಕೆಲವು ವಿಷಯಗಳನ್ನು 'ದೇವರು- ಒಂದು ತರ್ಕವಿತರ್ಕ' ಎಂಬ ಲೇಖನಮಾಲೆಯಲ್ಲಿ ಪ್ರಸ್ತಾಪಿಸಿದ್ದೆ. ಇದಕ್ಕೆ ಹೊರತಾದ ಹೊಸ ವಿಚಾರಗಳನ್ನು, ನನ್ನ ಅನಿಸಿಕೆ ತಪ್ಪೆಂದು ತೋರಿಸುವ ಪೂರ್ವಾಗ್ರಹ ಪೀಡಿತವಲ್ಲದ ಮಂಡನೆಗಳನ್ನು ಸರಿ ಅನ್ನಿಸಿದರೆ ಒಪ್ಪುವ ಮುಕ್ತ ಮನಸ್ಸನ್ನು ಇಟ್ಟುಕೊಂಡು ಮುಂದುವರೆಸುವೆ. ಒಬ್ಬ ಮಿತ್ರರು 'ದೇವರು ಒಬ್ಬನು ಮಾತ್ರ' ಎಂದು ಹೇಗೆ ಹೇಳುತ್ತೀರಿ ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ಕೇಳಿದ್ದರು. ಇದು ವಿಚಾರ ಮಾಡಬೇಕಾದ ಸಂಗತಿಯೇ ಆಗಿದೆ.
ಪ್ರಶ್ನೆ:  Where is God?  (ದೇವರೆಲ್ಲಿದ್ದಾನೆ?) - ಈ ಪ್ರಶ್ನೆಗೆ ಎರಡು ಉತ್ತರಗಳಿವೆ:
ಉತ್ತರ-೧: He is nowhere.  (ಅವನು ಎಲ್ಲೂ ಇಲ್ಲ.)
ಉತ್ತರ-೨: He is now here.  (ಅವನು ಇಲ್ಲೇ ಇದ್ದಾನೆ.)
     ದೇವರ ಮಹಿಮೆಯನ್ನು ಬಣ್ಣಿಸುವ ಅನೇಕ ಕೃತಿಗಳನ್ನು ರಚಿಸಿದ ಸಂತ ಅಗಸ್ಟೀನ್ ಒಮ್ಮೆ ಸಮುದ್ರ ತೀರದಲ್ಲಿ ಅಡ್ಡಾಡುತ್ತಿದ್ದಾಗ ಒಬ್ಬ ಬಾಲಕ ಸಮುದ್ರದ ನೀರನ್ನು ತನ್ನ ಬೊಗಸೆಯಲ್ಲಿ ಹಿಡಿದು ಮರಳಿನಲ್ಲಿ ಮಾಡಿದ ಒಂದು ರಂಧ್ರಕ್ಕೆ ಹಾಕುತ್ತಿದ್ದುದನ್ನು ಕಂಡರು. ಆಶ್ಚರ್ಯದಿಂದ ಆ ಬಾಲಕನನ್ನು "ಇದೇನು ಮಾಡುತ್ತಿರುವೆ?" ಎಂದು ಕೇಳಿದರಂತೆ. ಆ ಬಾಲಕ, "ಈ ಸಮುದ್ರದ ನೀರನ್ನು ಈ ರಂಧ್ರದೊಳಗೆ ತುಂಬಿಸುತ್ತಿದ್ದೇನೆ" ಅಂದನಂತೆ. "ಈ ಚಿಕ್ಕ ರಂಧ್ರದ ಒಳಗೆ ಸಮುದ್ರದ ನೀರು ಹೇಗೆ ಹಿಡಿಯಬಲ್ಲದು?" ಎಂಬ ಪ್ರಶ್ನೆಗೆ ಬಾಲಕ ಮರುಪ್ರಶ್ನೆ ಮೂಲಕ ಉತ್ತರಿಸಿದ್ದು ಹೀಗೆ: "ನೀವು ಮಾಡುತ್ತಿರುವ ಕೆಲಸವೂ ಹೀಗೆಯೇ ಅಲ್ಲವೇ? ನಿಮ್ಮ ಮಿತಿಯಲ್ಲಿನ ಪದಗಳಿಂದ ದೇವರನ್ನು ವರ್ಣಿಸುತ್ತಿದ್ದೀರಿ. ಮಿತಿಯಿಲ್ಲದ ದೇವರನ್ನು ಮಿತಿಯಿರುವ ಪದಗಳಿಂದ ಬಣ್ಣಿಸಲು ಸಾಧ್ಯವೇ?" ದೇವರ ಕುರಿತು ಹೇಳಲಾಗಿರುವ ಎಲ್ಲಾ ವರ್ಣನೆಗಳು, ಬಣ್ಣನೆಗಳ ಸ್ಥಿತಿ ಹೀಗೆಯೇ ಇರುತ್ತದೆಯಲ್ಲವೇ? ಆದರೂ ಮಾನವನ ಸತ್ಯಾನ್ವೇಷಣೆಯ ಪ್ರಯತ್ನವನ್ನು ಮೆಚ್ಚಲೇಬೇಕು. ಒಬ್ಬನೇ ದೇವರು ಅನ್ನುವ ಬೈಬಲ್ ಹೇಳುತ್ತದೆ: "ನನ್ನ ಯೋಚನೆಗಳು ನಿಮ್ಮ ಯೋಚನೆಗಳಲ್ಲ ಮತ್ತು ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಲ್ಲ. ಏಕೆಂದರೆ ಸ್ವರ್ಗಗಳು ಭೂಮಿಗಿಂತ ಎತ್ತರದಲ್ಲಿವೆ ಮತ್ತು ನನ್ನ ಚಿಂತನೆಗಳು ನಿಮ್ಮ ಚಿಂತನೆಗಳಿಗಿಂತ ಎತ್ತರವಾಗಿವೆ ಹಾಗೂ ನನ್ನ ಮಾರ್ಗಗಳು ನಿಮ್ಮದಕ್ಕಿಂತ ಎತ್ತರವಾಗಿವೆ." ಕುರಾನ್ ಸಹ ಒಬ್ಬನೇ ದೇವರನ್ನು ಪ್ರತಿಪಾದಿಸುತ್ತಿದ್ದು, ಅದು ಹೇಳುತ್ತದೆ: "ದೇವರ ಮಾರ್ಗಗಳನ್ನು ಮಾನವಜೀವಿಗಳಿಗೆ ಗ್ರಹಿಸುವುದು ಕಷ್ಟ." ಅನಂತನಾದ ದೇವರನ್ನು ಅಲ್ಪ ಜ್ಞಾನದಿಂದ ಅರಿಯಲಾಗದು ಎಂದು ಹೇಳುವ ವೇದಗಳು ಸಹ ಒಬ್ಬನೇ ದೇವರೆಂದು ಸಾರಿ ಸಾರಿ ಹೇಳುತ್ತಿದೆ. ನಾವು ಅತ್ಯಲ್ಪರು ಎಂಬ ಅರಿವು ಮೂಡುತ್ತಾ ಹೋದಂತೆ ನಮ್ಮ ಅರಿವು ಹೆಚ್ಚಾಗುತ್ತಾ ಹೋಗುತ್ತದೆ.
ಅಲ್ಲೆಲ್ಲ ಇಲ್ಲೆಲ್ಲ ಮೇಲೆಲ್ಲ ಕೆಳಗೆಲ್ಲ
ಎಲ್ಲಿಂದ ಎಲ್ಲಿಗೂ ಮುಗಿದುದೇ ಇಲ್ಲ |
ಅವನೊಬ್ಬನೇ ಜಗದ ಎಲ್ಲೆಯನು ಬಲ್ಲ
ಕಣ್ಣರಳಿ ಬೆರಗಾಗಿ ನಿಂತಿಹನು ಮೂಢ || 
     ದೇವರು ಆಕಾರಿಯೋ, ನಿರಾಕಾರಿಯೋ ಇತ್ಯಾದಿ ಪ್ರಶ್ನೆಗಳು ಈಗ ಪ್ರಸ್ತಾಪಿಸಹೊರಟಿರುವ ಅಂಶಕ್ಕೆ ಪೂರಕವಾಗುವುದಿಲ್ಲವಾದ್ದರಿಂದ ಇಲ್ಲಿ ಅದನ್ನು ಒತ್ತಟ್ಟಿಗೆ ಇಟ್ಟು ಮುಂದೆ ಹೋಗೋಣ. ಈ ವಿಶ್ವಬ್ರಹ್ಮಾಂಡ ಅಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಸೂರ್ಯ ಅಲ್ಲ, ಒಂದು ಚಂದ್ರ ಅಲ್ಲ, ಅದರಲ್ಲಿ ಸೂರ್ಯನಿಗಿಂತಲೂ ಲಕ್ಷಾಂತರಪಟ್ಟು ದೊಡ್ಡದಾದ, ಅನಂತ ಆಕಾಶದಲ್ಲಿ ಅನೂಹ್ಯವಾದ ಎಲ್ಲೆಯಿರದ ಸ್ಥಳಗಳಲ್ಲಿ ಹರಡಿಕೊಂಡಿರುವ ಅನಂತ ಸಂಖ್ಯೆಯ ನಕ್ಷತ್ರಗಳ ಸಮೂಹವೇ ಇದೆ. ಇವುಗಳನ್ನು ಆ ಸ್ಥಳಗಳಲ್ಲಿ ಯಾವ ಆಧಾರವೂ ಇಲ್ಲದೆ ಇಟ್ಟವರು ಯಾರು? ಗೊತ್ತಿಲ್ಲ! ಸೂರ್ಯನ ಸುತ್ತ ಭೂಮಿ, ಮತ್ತಿತರ ಗ್ರಹಗಳು ಸುತ್ತಬೇಕು, ಇಂತಹ ಗತಿಯಲ್ಲೇ, ಇಂತಹ ಸಮಯದಲ್ಲೇ ಸುತ್ತಬೇಕು, ಹೀಗೆಯೇ ಸುತ್ತಬೇಕು ಎಂದು ನಿಗದಿಸಿದವರು ಯಾರು? ಗೊತ್ತಿಲ್ಲ! ಅಷ್ಟೊಂದು ದೊಡ್ಡದಾಗಿ ತಲೆ ಕೆಡಿಸಿಕೊಳ್ಳುವುದು ಬೇಡ. ನಮ್ಮ ಬುಡಕ್ಕೇ ಬರೋಣ. ನಾವು ಉಸಿರಾಡುವುದು, ನಮ್ಮ ದೇಹದಲ್ಲಿ ರಕ್ತಪರಿಚಲನೆ ಆಗುವುದು, ನಮ್ಮ ಹೃದಯ ಲಬ್ ಡಬ್ ಎಂದು ಬಡಿದುಕೊಳ್ಳುವುದು ನಮ್ಮ ಇಚ್ಛೆಯಿಂದ ಆಗುತ್ತಿದೆಯೇ? ನಾವು ನಿದ್ದೆ ಮಾಡುತ್ತಿದ್ದಾಗಲೂ, ನಮ್ಮ ಅರಿವಿಗೆ ಬಾರದ ಸ್ಥಿತಿಯಲ್ಲಿದ್ದಾಗಲೂ ಈ ಕ್ರಿಯೆಗಳು ನಡೆಯುತ್ತಿರುತ್ತವೆ. ಈ ಕ್ರಿಯೆಗಳಲ್ಲಿ ವ್ಯತ್ಯಾಸವಾದರೆ ನಾವು ಭೂತಕಾಲಕ್ಕೆ ಸೇರಿದವರಾಗುತ್ತೇವೆ. ಈ ಕ್ರಿಯೆಗಳಿಗೆ ಕಾರಣ ಏನು? ಯಾರು? ಗೊತ್ತಿಲ್ಲ! 'ಗೊತ್ತಿಲ್ಲ' ಎಂದಾಕ್ಷಣ 'ಇಲ್ಲ' ಎಂದಾಗುತ್ತದೆಯೇ? ಈ 'ಗೊತ್ತಿಲ್ಲ' ಅನ್ನುವುದು ಇದೆಯಲ್ಲಾ, ಅದೇ ದೇವರು!
     ನಮಗೆ ಇರುವ ಜ್ಞಾನ ಗುರು-ಹಿರಿಯರಿಂದ, ವಿದ್ವಾಂಸರುಗಳಿಂದ, ಅಧ್ಯಯನಗಳಿಂದ ಬಂದುದಾಗಿದೆ. ನೋಡುವುದರಿಂದ, ಕೇಳುವುದರಿಂದ, ತಿಳಿಯುವುದರಿಂದಲೂ ಈ ಜ್ಞಾನ ಸಿಗುತ್ತದೆ. ಇಂತಹ ಜ್ಞಾನ ಇಂದ್ರಿಯಗಮ್ಯವಾದ ಭೌತಿಕ ವಸ್ತುಗಳಲ್ಲೇ ಮಿತಿಯಾಗುವುದಿದ್ದು ಇದನ್ನು ವಿಜ್ಞಾನ ಎನ್ನಬಹುದು. ಈ ವಿಜ್ಞಾನ ಇನ್ನೂ ಶೈಶವಾವಸ್ಥೆಯಲ್ಲೇ ಇದ್ದು, ಇದರಿಂದ ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಮೋಕ್ಷ, ಇತ್ಯಾದಿ ಸಂಗತಿಗಳ ಬಗ್ಗೆ ತಿಳಿಯಲಾಗಿಲ್ಲ. ಹಾಗೆಂದು ಇವು ಇಲ್ಲವೆನ್ನಲಾಗುವುದಿಲ್ಲ. ಇವುಗಳ ಬಗ್ಗೆ ತಿಳಿಯಲು ದಿವ್ಯಜ್ಞಾನ ಅವಶ್ಯಕವಾಗಿದ್ದು, ಮನುಷ್ಯನ ವಿಕಾಸಕ್ಕೆ ಇದು ಅನಿವಾರ್ಯವಾಗಿದೆ. ಸ್ವತಃ ನಾವು ವಿಜ್ಞಾನಿಗಳಲ್ಲದಿದ್ದರೂ ವಿಜ್ಞಾನಿಗಳು ಹೇಳುವುದನ್ನು ಒಪ್ಪಿಕೊಳ್ಳುತ್ತೇವೆ. ಏಕೆಂದರೆ ಅವರು ಅದನ್ನು ಪ್ರಯೋಗಗಳ ಮೂಲಕ ಕಂಡುಕೊಂಡಿರುತ್ತಾರೆ. ಹಾಗೆಯೇ ಆಧ್ಯಾತ್ಮಿಕ, ಪಾರಮಾರ್ಥಿಕ ವಿಷಯಗಳಲ್ಲಿ ನಮಗಿಂತ ಹೆಚ್ಚು ತಿಳಿದವರು, ಪಂಡಿತರುಗಳ ಮಾತನ್ನೂ ಮಿತಿಗೊಳಪಟ್ಟು ನಂಬುವುದು, ಬಿಡುವುದು ಸಂಬಂಧಿಸಿದವರಿಗೇ ಬಿಟ್ಟಿದ್ದು. ಸಾಧಕರುಗಳು ಗುರುವಿನ ಮಾರ್ಗದರ್ಶನದ ಜೊತೆಗೆ ಮನನ, ಚಿಂತನ, ಮಂಥನ ನಡೆಸಿ ಸತ್ಯಾನ್ವೇಷಣೆಯಲ್ಲಿ ತೊಡಗಿರುತ್ತಾರೆ. ಅತೀಂದ್ರಿಯವಾದ ಅನುಭವ, ಆತ್ಮ, ಪರಮಾತ್ಮರ ಕುರಿತ ಜ್ಞಾನವನ್ನು ಹೊಂದಿರುವ ಅನುಭಾವಿಗಳೂ ಇರುತ್ತಾರೆ. ಅಂತಹ ಸಾಧಕರ, ಅನುಭಾವಿಗಳ ವಿಚಾರಗಳೂ ನಮಗೆ ಮಾರ್ಗದರ್ಶಿಯಾಗಬಲ್ಲವು.
     ನಾಸ್ತಿಕರು ದೇವರಿಲ್ಲವೆನ್ನುತ್ತಾರೆ. ಆಸ್ತಿಕರಾದ ಎಲ್ಲರೂ, ಅವರು ಯಾವ ಮತ, ಪಂಥ, ಧರ್ಮದವರೇ ಆಗಿರಲಿ, ತಮಗಿಂತ ದೊಡ್ಡದಾದ ಯಾವುದೋ ಒಂದು ಶಕ್ತಿ, ತತ್ವವಿದ್ದು ಅದು ಇಡೀ ಬ್ರಹ್ಮಾಂಡದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತವಾಗಿದೆ ಎಂದು ನಂಬುತ್ತಾರೆ. ಹೆಚ್ಚಿನ ಸಾಂಪ್ರದಾಯಿಕರು ಈ ಶಕ್ತಿಯನ್ನು ವ್ಯಕ್ತಿಯ ರೂಪದಲ್ಲಿ ಭಾವಿಸಿ ಪೂಜಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ.  ವಿಪರ್ಯಾಸವೆಂದರೆ ಒಂದು ಮತದವರು ನಂಬುವ, ಒಪ್ಪುವ ಈ ಶಕ್ತಿಯನ್ನು ಇತರ ಮತ/ಪಂಥಗಳವರು ಒಪ್ಪುವುದಿಲ್ಲ/ ಮಾನ್ಯ ಮಾಡುವುದಿಲ್ಲ. ಹೀಗಾಗಿ ಎಷ್ಟು ಸಂಪ್ರದಾಯಗಳಿವೆಯೋ, ಎಷ್ಟು ಸಿದ್ಧಾಂತಗಳಿವೆಯೋ ಅಷ್ಟು ದೇವರುಗಳ ಸೃಷ್ಟಿಯಾಗಿಬಿಟ್ಟಿದೆ. ಒಂದೊಂದು ಸಂಪ್ರದಾಯದವರಲ್ಲೂ ಹಲವು ದೇವರುಗಳಿದ್ದಾರೆ! ಈಗಲೂ ಹೊಸ ಹೊಸ ದೇವರುಗಳ ಸೃಷ್ಟಿಯೂ ಆಗುತ್ತಿರುವುದನ್ನೂ ಕಾಣಬಹುದಾಗಿದೆ. ಹಿಂದೆ ಫರ್ಲಾಂಗು, ಮೈಲಿಗಳ ಕಲ್ಲುಗಳನ್ನು ರಸ್ತೆಯಲ್ಲಿ ಕಾಣಬಹುದಿತ್ತು. ಈಗ ಕಿ.ಮೀ. ಕಲ್ಲುಗಳಿವೆ. ಒಂದು ಫರ್ಲಾಂಗು ಕಲ್ಲನ್ನು ಅದಕ್ಕೆ ದೈವಿಶಕ್ತಿಯಿದೆ ಎಂದು ಭಾವಿಸಿ ಪೂಜಿಸಿ ಅದಕ್ಕೊಂದು ಪುಟ್ಟ ಗುಡಿ ಕಟ್ಟಿ ಫರ್ಲಾಂಗಮ್ಮ ಎಂದು ಹೆಸರಿಟ್ಟು ಪೂಜಿಸಿದ್ದುದೂ ಇತ್ತು. ಪ್ಲೇಗು ರೋಗ ಕಾಡುತ್ತಿದ್ದ ಕಾಲದಲ್ಲಿ ಪ್ಲೇಗಮ್ಮ ದೇವರನ್ನು ಪೂಜಿಸುತ್ತಿದ್ದವರೂ ಇದ್ದರು. ಈಗಲೂ ಜಾವಗಲ್ಲಿನಲ್ಲಿ ಪ್ಲೇಗಿನಮ್ಮ ದೇವಸ್ಥಾನ ನೋಡಬಹುದು. ಬೇರೆಡೆಯೂ ಇಂತಹ ದೇವರುಗಳ ಗುಡಿಯಿರಬಹುದು. ದೇವರುಗಳ ಸಂಖ್ಯೆ ಹೆಚ್ಚಾಗಲು ಇಂತಹವೂ, ಇದನ್ನು ಪ್ರೋತ್ಸಾಹಿಸುವ ಜನರಿರುವುದೂ ಕಾರಣವಾಗಿವೆ.
     ದೇವರು ಒಬ್ಬನೇ ಎಂದು ಕ್ರೈಸ್ತರು, ಮುಸಲ್ಮಾನರು ಮಾತ್ರವಲ್ಲದೆ ಹಲವು ದೇವರನ್ನು ಪೂಜಿಸುವ ಹಿಂದೂಗಳೂ ನಂಬುತ್ತಾರೆ. ದೇವನೊಬ್ಬ, ನಾಮ ಹಲವು ಎಂದು ಬೋಧಿಸಿದ ಅನೇಕ ಸಾಧು-ಸಂತರುಗಳು, ದಾಸರುಗಳು, ದಾರ್ಶನಿಕರುಗಳ ಮಾರ್ಗದರ್ಶನ ನಮಗಿದೆ. ವಿಚಾರ ಮಾಡೋಣ. ನಮಗೆ ಈ ಬ್ರಹ್ಮಾಂಡ ಎಷ್ಟಿದೆ, ಹೇಗಿದೆ ಎಂಬುದೇ ತಿಳಿದಿಲ್ಲ. ಇನ್ನು ಇದೆಲ್ಲವನ್ನೂ ನಿಯಂತ್ರಿಸುವ ಆ ನಿಯಾಮಕನ ಬಗ್ಗೆ ಹೇಗೆ ತಿಳಿದೇವು! ನಮ್ಮ ಪರಿಸ್ಥಿತಿ ಸಂಕುಚಿತವಾಗಿದೆ, ಕೂಪಮಂಡೂಕಗಳಂತೆ ನಮ್ಮದೇ ಸರಿ ಅಂದು ವಾದಿಸಹೊರಡುತ್ತೇವೆ. ಸತ್ಯ ಅದಕ್ಕೂ ಹಿರಿದಾಗಿದೆ. ನಮ್ಮ ಮನೆಯೇ ನಮಗೆ ಒಂದು ಪ್ರಪಂಚ. ಈ ಮನೆಯಲ್ಲೂ ಒಳಗೆ ಕುಳಿತವರಿಗೆ ಹೊರಗಿನವರು ಕಾಣುವುದಿಲ್ಲ, ಹೊರಗಿನವರಿಗೆ ಒಳಗಿರುವವರು ಕಾಣುವುದಿಲ್ಲ. ಹೀಗಿರುವಾಗ ನಾವು ಸರ್ವಜ್ಞರು ಅಂದುಕೊಂಡರೆ ಆ ಸರ್ವ ಅನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾರೂ ಸರ್ವಜ್ಞರಲ್ಲ. ಈ ಮಾತು ಹೇಳಿದರೆ ಕೆಲವರಿಗೆ ಕೋಪ ಬರುತ್ತದೆ. ಶಂಕರಾಚಾರ್ಯರು ಸರ್ವಜ್ಞರಲ್ಲವೇ, ರಾಮಾನುಜಾಚಾರ್ಯರು, ಮಧ್ವರು, ಬುದ್ಧ, ಮಹಾವೀರ ಮುಂತಾದವರು ಸರ್ವಜ್ಞರಲ್ಲವಾ ಅನ್ನುತ್ತಾರೆ. ಅವರುಗಳು ಯಾರೂ ತಮ್ಮನ್ನು ಸರ್ವಜ್ಞರು ಅಂದುಕೊಳ್ಳಲಿಲ್ಲ. ಅವರ ಅನುಯಾಯಿಗಳು ಅನ್ನುತ್ತಾರೆ! ಒಂದು ಭೂಪ್ರದೇಶವನ್ನು ಒಬ್ಬ ರಾಜ ಆಳಬಹುದು. ಅದೇ ೨೫ ರಾಜರು ಕಿತ್ತಾಡಿ ಆಳಿದರೆ ಆ ರಾಜ್ಯದಲ್ಲಿ ಬಾಳುವ ಪ್ರಜೆಗಳಿಗೆ ಏನು ಸುಖ? ಆದ್ದರಿಂದ ಒಬ್ಬ ನಿಯಾಮಕನನ್ನು ನಂಬಬೇಕು. ಹಲವಾರು ದೇವರುಗಳಿದ್ದರೆ ಈ ಬ್ರಹ್ಮಾಂಡದ ಆಗು-ಹೋಗುಗಳಲ್ಲಿ ಕಿಂಚಿತ್ತೂ ವ್ಯತ್ಯಯವಾಗದಂತೆ ನಿಯಂತ್ರಣ ಸಾಧ್ಯವಿತ್ತೇ? ಭೂಮಿ ಏಕೆ ಸೂರ್ಯನ ಸುತ್ತ ಸುತ್ತಬೇಕು? ಸೂರ್ಯನೇ ಭೂಮಿಯ ಸುತ್ತ ಸುತ್ತಲಿ ಎಂದು ಒಬ್ಬ ದೇವರು ಅಂದುಕೊಂಡು ಬದಲಾವಣೆ ಮಾಡಿದರೆ? ಇನ್ನೊಬ್ಬ ದೇವರು ಭೂಮಿಯೇ ಚಂದ್ರನ ಉಪಗ್ರಹದಂತೆ ಆಗಲಿ ಎಂದುಕೊಂಡರೆ? ಸುಮ್ಮನೆ ತರ್ಕದ ಸಲುವಾಗಿ ದೇವರೊಬ್ಬನೇ ಎಂದು ಹೇಳುವ ಸಲುವಾಗಿ ಇದನ್ನು ಹೇಳಿದ್ದಷ್ಟೇ ಹೊರತು, ಮತ್ತೇನಲ್ಲ. 
     ವೇದಗಳಲ್ಲಿ ದೇವರನ್ನು ಅನೇಕ ಹೆಸರುಗಳಲ್ಲಿ ಸಂಬೋಧಿಸಲಾಗಿದೆ. ಅಂತಹ ಒಂದು ಹೆಸರು 'ಸಂಪ್ರಶ್ನ' ಎಂಬುದು. ಒಂದು ಪ್ರಶ್ನೆಗೆ ಉತ್ತರ ಸಿಕ್ಕಿತು ಎಂದರೆ ಮತ್ತೊಂದು ಪ್ರಶ್ನೆ ಸಿದ್ಧವಿರುತ್ತದೆ. ಆ ಪ್ರಶ್ನೆಗೂ ಉತ್ತರ ಸಿಕ್ಕಿದರೆ ಮಗುದೊಂದು ಪ್ರಶ್ನೆ ಧುತ್ತೆಂದು ಬರುತ್ತದೆ. ಇದು ಮುಗಿಯುವುದೇ ಇಲ್ಲ. ಪ್ರಶ್ನೆಗಳಿಗೆ ಇನ್ನು ಉತ್ತರ ಕೊಡುವುದಕ್ಕೆ ಆಗುವುದಿಲ್ಲವೆಂದಾಗ ಉಂಟಾಗುವ ಆ ಮೌನ ಇದೆಯಲ್ಲಾ, ಅದನ್ನು ಅನಿರ್ವಚನೀಯ ಅನ್ನಬಹುದು, ಅದೂ ಸಹ ಉತ್ತರವೇ! ಪರಮಾತ್ಮನೂ ಸಹ ಅನಿರ್ವಚನೀಯ, ಉತ್ತರವಿಲ್ಲದ ಪ್ರಶ್ನೆ. ಅವನು ಹೀಗೆಯೇ ಇದ್ದಾನೆ ಅಂತ ಹೇಳಲು ಸಾಧ್ಯವಿಲ್ಲ, ಯಾರ ಯಾರ ಬುದ್ಧಿಶಕ್ತಿ, ಮೇಧಾಶಕ್ತಿ, ತಪಶ್ಶಕ್ತಿ ಎಷ್ಟೆಷ್ಟು ಹೆಚ್ಚುತ್ತಾ ಹೋಗುತ್ತೋ ಅಷ್ಟಷ್ಟು ಆ ಭಗವಂತನ ಜ್ಞಾನ ಕೂಡಾ ಹೆಚ್ಚುತ್ತಾ ಹೋಗುತ್ತೆ. 'ಪ್ರಶ್ನಿಸುವುದು' ಅಂದರೆ ತಿಳಿಯುತ್ತಾ ಹೋಗುವುದು, ಅರ್ಥಾತ್ ಜ್ಞಾನಿಗಳಾಗುವುದು. ಪ್ರಶ್ನೆಗಳಿಗೆ ಕೊನೆಯಿರುವುದಿಲ್ಲವೆಂದರೆ ಜ್ಞಾನಕ್ಕೆ ಮಿತಿಯಿಲ್ಲ ಎಂದರ್ಥ. ಸತ್ಯಾನ್ವೇಷಣೆ ಮಾಡುತ್ತಾ ಹೋದಂತೆ ನಮ್ಮ ಅರಿವು ಹೆಚ್ಚುತ್ತಾ ಹೋಗುತ್ತದೆ. ದೇವರು ಕಾಣುವುದಿಲ್ಲ, ಅದಕ್ಕೆ ನಂಬುವುದಿಲ್ಲವೆಂದರೆ ಏನು ಮಾಡಲಾದೀತು? ಆಕಾಶ ಸಹ ಕಣ್ಣಿಗೆ ಕಾಣುವುದಿಲ್ಲ. ಅದನ್ನು ಇಲ್ಲವೆನ್ನಲಾದೀತೇ? ಸಕ್ಕರೆಯ ರುಚಿಯೇ ಗೊತ್ತಿಲ್ಲದವರಿಗೆ ಸಕ್ಕರೆ ಸಿಹಿಯಾಗಿದೆ ಎಂದು ನೂರು ಸಲ ಹೇಳಿದರೂ ಅರ್ಥವಾಗದೇ ಹೋಗಬಹುದು. ಅವರು ಸಕ್ಕರೆಯನ್ನು ನಾಲಿಗೆಯ ಮೇಲೆ ಇರಿಸಿಕೊಂಡಾಗ ತಕ್ಷಣ ಅವರಿಗೆ ಸಕ್ಕರೆ ಸಿಹಿಯಾಗಿದೆ ಎಂಬುದು ಗೊತ್ತಾಗಿಬಿಡುತ್ತದೆ. ದೇವರ ವಿಚಾರವೂ ಹಾಗೆಯೇ. ಯಾರು ಎಷ್ಟು ಸಲ ಎಷ್ಟು ರೀತಿಯಲ್ಲಿ ಹೇಳಿದರೂ ನಮ್ಮ ತಲೆಗೆ ಹೋಗುವುದೇ ಇಲ್ಲ. ನಾವು ಅವನ ಬಗ್ಗೆ ಏನು ಅಂದುಕೊಂಡಿರುತ್ತೆವೆಯೋ ಅಷ್ಟೇ ನಮಗೆ ಅರ್ಥವಾಗುವುದು. ದೇವರನ್ನು ನಾವು ಅನುಭವಿಸಿದರೆ ಮಾತ್ರ ಅರಿಯಲು ಸಾಧ್ಯ. ಆ ಅನುಭವ ಬರಲು ಆತ್ಮಜ್ಞಾನ ಅವಶ್ಯಕವಿದೆ. ಆತ್ಮಜ್ಞಾನ ಗಳಿಸಲು ಜ್ಞಾನ, ಕರ್ಮ, ಉಪಾಸನೆಗಳೆಂಬ ಹಾದಿಯಲ್ಲಿ ಮುನ್ನಡೆಯಬೇಕು. ಒಂದು ವಿದ್ಯುತ್ ಬಲ್ಬು ಸ್ವಿಚ್ಚು ಹಾಕಿದರೆ ಹತ್ತಿಕೊಳ್ಳುತ್ತದೆ. ಸ್ವಿಚ್ಚು ಹಾಕದಿದ್ದರೆ ಆ ಬಲ್ಬು ೧೦೦ ವೋಲ್ಟಿನದಾಗಿರಲಿ, ೧೦೦೦ ವೋಲ್ಟಿನದಾಗಿರಲಿ ಹತ್ತುವುದೇ ಇಲ್ಲ. ಹಾಗೆಯೇ ದೇವರನ್ನು ಅರಿಯಲು ಧ್ಯಾನ (ಅದನ್ನು ಆತ್ಮಾವಲೋಕನ ಎಂದಾದರೂ ಅಂದುಕೊಳ್ಳಿ,) ಎಂಬ ಸ್ವಿಚ್ಚು ಹಾಕಬೇಕು. ಆ ಸ್ವಿಚ್ಚು ಇರುವುದು ನಮ್ಮೊಳಗೇ. ದೇವರನ್ನು ಅರಿಯಬೇಕಾದರೆ ಮೊದಲು ನಮ್ಮನ್ನು ನಾವು ಅರಿಯಬೇಕು. ಇದೇ ಸೊನ್ನೆ ಆದರೆ ಆತ್ಮನೂ ಇಲ್ಲ, ಪರಮಾತ್ಮನೂ ಇಲ್ಲ. ಎಲ್ಲವೂ ಪೊಳ್ಳು, ಜೊಳ್ಳು ಅಷ್ಟೆ.
     ಪರಮಾತ್ಮನನ್ನು ಅನುಭವಿಸಿ ತಿಳಿಯಬೇಕು ಅನ್ನುತ್ತೀರಲ್ಲಾ, ಇಡೀ ಬ್ರಹ್ಮಾಂಡದಲ್ಲೆಲ್ಲಾ ವ್ಯಾಪಿಸಿರುವ ಸರ್ವವ್ಯಾಪಕನಾದ ಅವನನ್ನು ಹುಲುಮಾನವರಾದ ನಾವು ಅರಿಯಲು ಸಾಧ್ಯವೇ ಎಂದು ಕೇಳಬಹುದು. ನೀರಿಗೆ ನಿಂಬೆರಸ, ಸಕ್ಕರೆ ಬೆರೆಸಿ ಒಂದು ಲೋಟ ಶರಬತ್ತು ಮಾಡಿದಿರೆಂದು ಇಟ್ಟುಕೊಳ್ಳೋಣ. ಆ ಶರಬತ್ತು ಹೇಗಿದೆ ಎಂದು ತಿಳಿಯಲು ಅದರ ಯಾವುದೇ ಭಾಗದ ಒಂದು ತೊಟ್ಟು ರುಚಿ ನೋಡಿದರೆ ಸಾಕಾಗುತ್ತದೆ.  ಹಿಮಾಲಯ ಪರ್ವತ ಬಹು ಎತ್ತರದವರೆಗೆ ಹಾಗೂ ಸುಮಾರು ೨೫೦೦ ಮೈಲುಗಳು ಉದ್ದದವರೆಗೆ ವ್ಯಾಪಿಸಿದೆ. ಯಾರಾದರೂ 'ಹಿಮಾಲಯವನ್ನು ನೋಡಿದ್ದೀರಾ?' ಎಂದರೆ 'ಓಹೋ, ನೋಡಿದ್ದೇವೆ' ಅನ್ನುತ್ತೇವೆ ಅಲ್ಲವೇ? ವಾಸ್ತವವಾಗಿ ನಾವು ನೋಡಿದ್ದು ಹಿಮಾಲಯದ ಯಾವುದೋ ಒಂದು ಪುಟ್ಟ ಭಾಗವನ್ನು ಮಾತ್ರ. ಆದರೂ ಪೂರ್ಣ ಹಿಮಾಲಯದ ಕುರಿತ ಕಲ್ಪನೆ ನಮ್ಮ ಅನುಭವಕ್ಕೆ ಬರುತ್ತದೆಯಲ್ಲವೇ? ಹಾಗೆಯೇ ದೇವರನ್ನು ಅನುಭವಿಸಿ ತಿಳಿಯಲು ಸಾಧ್ಯವಿದೆ. ಆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕಷ್ಟೆ ಮತ್ತು ಶಕ್ತಿ ಗಳಿಸಿಕೊಳ್ಳಬೇಕಷ್ಟೆ! 
ತಿನಿಸ ಕಂಡೊಡನೆ ಹಸಿವು ಹಿಂಗುವುದೆ
ಜಠರಾಗ್ನಿ ತಣಿದೀತು ಸೇವಿಸಲು ತಾನೆ? |
ಅರಿವು ಇದ್ದೊಡನೆ ಪರಮಾತ್ಮ ಸಿಕ್ಕಾನೆ
ಅನುಭವಿಸಿ ಕಾಣಬೇಕವನ ಮೂಢ ||
-ಕ.ವೆಂ.ನಾಗರಾಜ್.
**************
ದಿನಾಂಕ 15.12.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಡಿಸೆಂಬರ್ 17, 2014

ಬನ್ನಿ, ನಡೆಯೋಣ !


     ಬನ್ನಿ, ನಡೆಯೋಣ. ಓಡದಿರೋಣ, ಹಾರದಿರೋಣ, ಒಟ್ಟಿಗೇ ನಡೆಯೋಣ. ಈ ಬದುಕು ಇರುವುದು ನಡೆಯುವುದಕ್ಕೆ. ಓಡಿದರೆ, ಹಾರಿದರೆ ನಾವು ನೋಡುವುದನ್ನು ನೋಡದೇ ಹೋಗಬಹುದು. ನಡೆಯುತ್ತಾ ಹೋದರೆ ನಾವು ಸುತ್ತಲೂ ನೋಡುತ್ತಾ ಹೋಗಬಹುದು, ಅನುಭವಿಸಬಹುದು, ಆನಂದಿಸಬಹುದು, ಕಲಿಯಬಹುದು, ಕಲಿಸಬಹುದು, ಅಳಬಹುದು, ನಗಬಹುದು, ಒಟ್ಟಿನಲ್ಲಿ ಬದುಕಬಹುದು. 'ಜಗವಿದು ಜಾಣ, ಚೆಲುವಿನ ತಾಣ, ಎಲ್ಲೆಲ್ಲೂ ರಸದೌತಣ' ಎಂಬ ಕವಿವಾಣಿಯನ್ನು ಮೆಲುಕುತ್ತಾ ಮೈಮರೆಯಬಹುದು. ಅತಿ ವೇಗದಲ್ಲಿ ಧಾವಿಸಬೇಕಾಗಿರುವ ಇಂದಿನ ದಿನಗಳಲ್ಲಿ ಇದು ಅವಾಸ್ತವಿಕವಾಗಿ ತೋರಬಹುದು. ಆದರೆ, ಅತಿ ವೇಗದಲ್ಲಿ ನಾವೂ ಓಡಬೇಕಾಗಿರುವ ಇಂದಿನ ಪರಿಸ್ಥಿತಿಯಲ್ಲಿ ನಾವು ಕಳೆದುಕೊಳ್ಳುತ್ತಿರುವುದು ಕಡಿಮೆಯೇನಲ್ಲ. ಈ ಅತಿವೇಗ ನಮ್ಮ ಸಮೀಪದಲ್ಲಿರುವವರನ್ನೂ ಕಾಣದಿರುವಂತೆ ಮಾಡುತ್ತದೆ. ನಾವು ಏನನ್ನು ಪಡೆಯಲು ಓಡುತ್ತಿದ್ದೇವೆಯೋ ಅದು ನಮ್ಮ ಸಮೀಪದಲ್ಲೇ ಇರುವುದನ್ನು ಕಾಣದೇ ಹೋಗುವಂತೆ ಮಾಡುತ್ತದೆ. ಓಡಿ ಓಡಿ ದಣಿದಾಗ ನಿಂತು ನೋಡಿದರೆ ನಾವು ಎಲ್ಲಿಂದ ಓಡಲು ಹೊರಟಿದ್ದೆವೋ ಆ ಜಾಗದಲ್ಲೇ ಇರುವುದನ್ನು ಕಂಡು ಅವಾಕ್ಕಾಗುತ್ತೇವೆ. ಅಷ್ಟಾಗಿದ್ದರೆ ಪರವಾಗಿಲ್ಲ, ಮೊದಲಿದ್ದ ಜಾಗದಿಂದ ಇನ್ನೂ ಹಿಂದಕ್ಕೆ ಹೋಗಿದ್ದರೆ? ಅಷ್ಟೊಂದೆಲ್ಲಾ ಓಡಿದ್ದು ವ್ಯರ್ಥವಾಯಿತಲ್ಲಾ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಇಲ್ಲಿ ನಡೆಯುವುದು/ಓಡುವುದು/ಹಾರುವುದುಗಳನ್ನು ನಮ್ಮ ಬದುಕಿನ ಶೈಲಿಗೆ ಪರ್ಯಾಯ ಪದಗಳಾಗಿ ಬಳಸಿರುವೆ.  ಒಂದು ಉದಾಹರಣೆ ಗಮನಿಸೋಣ. ಒಬ್ಬ ವ್ಯಕ್ತಿ ತೀರಾ ಬಡತನದಲ್ಲಿದ್ದವನು ಕಷ್ಟಪಟ್ಟು ಮುಂದೆ ಬರುತ್ತಾನೆಂದು ಇಟ್ಟುಕೊಳ್ಳೋಣ. ಅವನ ಗುರಿ ಹಣ ಮಾಡುವುದು, ಬೇಗ ಶ್ರೀಮಂತನಾಗುವುದು, ಅದಕ್ಕಾಗಿ ಆತ ಎಲ್ಲಾ ರೀತಿಗಳಲ್ಲಿ ಶ್ರಮವಹಿಸಿ ಯಶಸ್ವಿಯೂ ಆದನೆಂದುಕೊಳ್ಳೋಣ. ಹಣದ ಮದದಿಂದ ಎಲ್ಲಾ  ಬಂಧುಗಳಲ್ಲೂ ವಿರಸ/ದ್ವೇಷ ಕಟ್ಟಿಕೊಂಡನೆಂದುಕೊಳ್ಳೋಣ.ಅವನ ಕೊನೆಗಾಲದಲ್ಲಿ ಆತನ ದೈಹಿಕ ಸಾಮರ್ಥ್ಯವೂ ಕುಗ್ಗಿದ ದಿನಗಳಲ್ಲಿ ಯಾವುದೋ ಕಾರಣದಿಂದ ಆತ ಶ್ರೀಮಂತಿಕೆ ಕಳೆದುಕೊಂಡು ಬರಿಗೈದಾಸನಾದರೆ ಆತನಿಗೆ ಆಗುವ ಆಘಾತ ಊಹಿಸುವುದು ಕಷ್ಟ. ನಾವು ನಡೆಯುತ್ತಾ ಹೋದಂತೆ, ಮನುಷ್ಯನ ಅತಿ ಒಳ್ಳೆಯ ಮತ್ತು ಅತಿ ಕೆಟ್ಟ ಸ್ವಭಾವಗಳ - ಕೇವಲ ಬೇರೆಯವರದಲ್ಲ, ನಮ್ಮದೂ ಕೂಡ - ಪರಿಚಯವೂ ಆಗುತ್ತದೆ. ನಡೆಯುತ್ತಿದ್ದರೆ ಈ ಜಗತ್ತಿನ ಅಗಾಧತೆ, ವಿಶಾಲತೆ, ಪ್ರೀತಿಯ ಹರವನ್ನು ಕಣ್ಣಾರೆ ಕಂಡು ಅನುಭವಿಸಬಹುದು. ನಡೆಯುತ್ತಿದ್ದರೆ, ಸೂರ್ಯೋದಯ, ಸೂರ್ಯಾಸ್ತ, ಆಗಸದಲ್ಲಿನ ಚಂದ್ರ, ತಾರೆಗಳು, ನದಿಗಳು, ಸಮುದ್ರ, ಹಾರುವ ಹಕ್ಕಿಗಳನ್ನು ಕಂಡು ಕಣ್ತುಂಬಿಕೊಳ್ಳಬಹುದು. ಅತಿ ವೇಗ ಸಂಬಂಧಗಳನ್ನು ದೂರ ಮಾಡಬಹುದು; ಆದರೆ, ಸಾಮಾನ್ಯ ನಡಿಗೆ ಒಟ್ಟುಗೂಡಿಸಬಹುದು.
     ಅಗತ್ಯವಿರುವಷ್ಟು ಮಾತ್ರ ಹೊಂದುವುದರಲ್ಲಿನ ಸುಖ, ಸಂತೋಷಗಳು, ಬೇಕುಗಳನ್ನು ಹೆಚ್ಚಿಸಿಕೊಳ್ಳುವದರಲ್ಲಿ ಇರುವುದಿಲ್ಲವೆಂದು ಗೊತ್ತಾಗುವುದು ನಡೆಯುವುದರಿಂದ. ಏಕೆಂದರೆ ಕಡಿಮೆ ಭಾರವಿದ್ದಷ್ಟೂ ನಡೆಯುವುದು ಸುಲಭ. ಜೀವನ ಸರಳವಾಗಿದೆ, ಅದನ್ನು ಓಡಿ ಸಂಕೀರ್ಣಗೊಳಿಸಿಕೊಳ್ಳಬೇಕೇಕೆ? ಮೋಡ ಹೆಚ್ಚು ಮಳೆ ಸುರಿಸುವಂತೆ ನಾವು ಮಾಡಲಾರೆವು, ಸೂರ್ಯನ ಬಿಸಿಲಿನ ತಾಪ ಕಡಿಮೆಯಾಗುವಂತೆ ನಾವು ಮಾಡಲಾರೆವು. ಅವು ಪ್ರಕೃತಿಯ ಕೊಡುಗೆಗಳು, ಬೇಕಾದರೆ ತೆಗೆದುಕೊಳ್ಳಬಹುದು, ಬೇಡವಾದರೆ ಬಿಡಬಹುದು! ಅವನ್ನು ಕೊಡುಗೆಗಳು ಎಂದು ಭಾವಿಸಿದರೆ, ಅವು ಗುರಿಯೆಡೆಗಿನ ಸಾಧನಗಳಲ್ಲ, ಅವೇ ಗುರಿ ಮತ್ತು ಸಾಧನಗಳು ಎಂಬುದು ಅರಿವಾಗುತ್ತದೆ. ಇಂತಹ ಕೊಡುಗೆಗಳು ನಮಗೆ ಇಷ್ಟವಾಗಲಿ, ಇಲ್ಲದಿರಲಿ ಅವನ್ನು ಪ್ರೀತಿಸುವ, ಸಮಭಾವದಿಂದ ಸ್ವೀಕರಿಸುವ ಮನೋಭಾವ 'ನಡೆಯುವುದರಿಂದ' ಬರುತ್ತದೆ. ಹಳ್ಳಿಯ ಒಬ್ಬ ದನಗಾಹಿ ದನಗಳನ್ನು ತಂದೆಯ ಪ್ರೀತಿಯಿಂದ ಕಾಣುತ್ತಾನೆ, ಒಂದು ಮಗು ಆಗಸದಲ್ಲಿನ ನಕ್ಷತ್ರಗಳನ್ನು ಬಹಳ ಕಾಲ ತನ್ಮಯತೆಯಿಂದ ಕಂಡು ಸಂತಸಪಡುತ್ತದೆ. ಅಲ್ಲಿ ಬದುಕು 'ನಡೆಯುತ್ತದೆ', ಧಾವಿಸುವುದಿಲ್ಲ. 
     ನಡೆದಾಗ ದಣಿವಾಗುತ್ತದೆ, ನೀರಡಿಕೆಯಾಗುತ್ತದೆ, ಹಸಿವಾಗುತ್ತದೆ, ಗುರಿ ದೂರವೆನಿಸಿದಾಗ ನಿರಾಶೆಯೂ ಮೂಡುತ್ತದೆ. ಕೆಲವೊಮ್ಮೆ ನೀರೂ ಸಿಗದೆ ಬಸವಳಿಯಬೇಕಾಗುತ್ತದೆ. ಆಗ ನಾವು ಬದುಕಿನ ವಾಸ್ತವತೆಯನ್ನು  ಎದುರಿಸುವ ಶಕ್ತಿಯನ್ನು, ಒಳಗೆ ಹುದುಗಿರುವ ಚೇತನವನ್ನು ಎಬ್ಬಿಸುವ ಕಲೆಯನ್ನು ಕಲಿತುಕೊಳ್ಳುತ್ತೇವೆ. ಕೆಲವೊಮ್ಮೆ ಬೇಕಾಗಿದ್ದಕ್ಕಿಂತ ಹೆಚ್ಚು ಸಿಕ್ಕಾಗ ಹೃದಯ ಕೃತಜ್ಞತೆಯಿಂದ ಭಾರವಾಗುತ್ತದೆ. ಬದುಕನ್ನು ಅದು ಬಂದಂತೆ ಸ್ವೀಕರಿಸುವ ಕಲೆ ನಡೆಯುವವರದಾಗುತ್ತದೆ. ಕಷ್ಟವಾದರೂ, ನಷ್ಟವಾದರೂ ನಡೆಯುವುದನ್ನು ನಿಲ್ಲಿಸಬಾರದೆಂಬುದಕ್ಕೆ ಈ ಒಂದು ಪುಟ್ಟ ಕಥೆ ನಿದರ್ಶನವಾಗುತ್ತದೆ. ಪತಿ-ಪತ್ನಿ ಒಂದು ದೊಡ್ಡ ಬೆಟ್ಟವನ್ನು ಬೇರೆ ಬೇರೆ ದಿಕ್ಕುಗಳಿಂದ ಹತ್ತಲು ತೊಡಗಿರುತ್ತಾರೆ ಎಂದು ಭಾವಿಸೋಣ. ಅರ್ಧ ಬೆಟ್ಟ ಹತ್ತಿದಾಗ ಪತಿಗೆ ಇನ್ನು ಹತ್ತಲು ಸಾಧ್ಯವಿಲ್ಲವೆನ್ನಿಸಿ ಕುಳಿತುಕೊಳ್ಳುತ್ತಾನೆ. ಆಗ ಅಲ್ಲಿಗೆ ಹಾರಿ ಬಂದ ಗುಬ್ಬಚ್ಚಿಯೊಂದು ಉಲಿಯುತ್ತದೆ, "ಏಳು, ನಿಲ್ಲಬೇಡ. ಅಲ್ಲಿ ನಿನ್ನ ಹೆಂಡತಿ ನಿನ್ನನ್ನು ಬೆಟ್ಟದ ತುದಿಯಲ್ಲಿ ಕಾಣಲು ಕಾತರಿಸಿದ್ದಾಳೆ". ಅವನು ಗಡಬಡಿಸಿ ಎದ್ದು ಮುಂದೆ ಏರತೊಡಗುತ್ತಾನೆ. ಅತ್ತ ಕಡೆ ಅವನ ಹೆಂಡತಿ ಸಹ ಅರ್ಧ ದಾರಿಯಲ್ಲೇ ಬಸವಳಿದು ಇನ್ನು ಹತ್ತಲು ಸಾಧ್ಯವೇ ಇಲ್ಲವೆಂಬ ಸ್ಥಿತಿ ತಲುಪಿರುತ್ತಾಳೆ. ಆ ಗುಬ್ಬಚ್ಚಿ ಅವಳ ಬಳಿ ಹೋಗಿ ಅದೇ ಸಂದೇಶ ಕೊಡುತ್ತದೆ. ಪತ್ನಿ ಸಹ ಚೈತನ್ಯ ಒಟ್ಟುಗೂಡಿಸಿಕೊಂಡು ಪುನಃ ಬೆಟ್ಟ ಏರತೊಡಗುತ್ತಾಳೆ. 'ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂಬ ವಿವೇಕವಾಣಿ ನೆನಪಾಗುತ್ತದಲ್ಲವೇ?
     ನಡೆಯುತ್ತಾ ಹೋದಂತೆ, ವಿಶಾಲ ವಿಶ್ವದ ಎದುರು ಅಲ್ಪಚೇತನರಾದ ನಮ್ಮತನದ ಅರಿವಾಗುತ್ತದೆ, ಅಂತರಂಗ ಚುರುಕಾಗುತ್ತಾ ಹೋಗುತ್ತದೆ. ದೇವನ ಕರುಣೆಯನ್ನು ಕಾಣುವ ಸೌಭಾಗ್ಯ ನಮ್ಮದಾಗುತ್ತದೆ. ಅವನ ಪ್ರತಿಫಲಾಪೇಕ್ಷೆಯಿಲ್ಲದ ಶುದ್ಧ ಪ್ರೀತಿಯ ಅನುಭವವಾಗುತ್ತದೆ. ಏನನ್ನಾದರೂ ಕೊಡಬೇಕೆಂದರೆ ನಮ್ಮಲ್ಲಿ ಏನಾದರೂ ಇರಬೇಕು. ಎಲ್ಲಾ ವಸ್ತುಗಳಿಗೂ ಬೆಲೆದೆ. ಆದರೆ, ಕರುಣೆ, ಪ್ರೀತಿ, ವಿಶ್ವಾಸಗಳಿಗೆ ಬೆಲೆ ಕಟ್ಟಲಾಗುವುದಿಲ್ಲ. ಅವನ್ನಾದರೂ ಕೊಡುವ ಮನಸ್ಸು ಬರುವುದು 'ನಡೆಯುವುದರಿಂದಲೇ'! 'ನಡೆಯುವ' ಹಳ್ಳಿಗಳಲ್ಲಿ ಅಪರಿಚಿತರಿಗೂ ಅವು ಸಿಗುತ್ತವೆ. 'ಓಡುವ' ನಗರಗಳಲ್ಲಿ ಪರಿಚಿತರಿಗೂ ಅವು ಅಲಭ್ಯ. ತಮಗೇ ಊಟಕ್ಕೆ ತೊಂದರೆಯಿದ್ದರೂ, ಹಳ್ಳಿಗರು ಸಾಲ ತಂದಾದರೂ ಆತಿಥ್ಯ ಮಾಡುತ್ತಾರೆ. ನಗರಿಗರು ಯಾರಾದರೂ ಬರುವ ಸೂಚನೆ ಕಂಡರೆ, ಅವರು ಬಾರದಂತೆ ನೆಪಗಳನ್ನು ಮುಂದೊಡ್ಡುವುದು ವಿಶೇಷವಲ್ಲ. ಇರುವುದನ್ನು ಹಂಚಿಕೊಳ್ಳಬಹುದು, ಇಲ್ಲದಿದ್ದರೆ? ನಮ್ಮಲ್ಲೇ ಪ್ರೀತಿಯ ಕೊರತೆಯಿದ್ದರೆ ಕೊಡುವುದಾದರೂ ಹೇಗೆ? ನಗರದಲ್ಲಿ ಕಸಕ್ಕೂ 'ಬೆಲೆ'ಯಿದೆ. ಬೆಲೆ ತೆರದೇ ಅಲ್ಲಿ ಏನೂ ಸಿಗುವುದಿಲ್ಲ. ಆದರೆ, ಹಳ್ಳಿಯ ಒಬ್ಬ ಬಡ ಹಣ್ಣಿನ ವ್ಯಾಪಾರಿ ಬಳಲಿದ ಅಪರಿಚಿತ ದಾರಿಹೋಕನನ್ನು ಕಂಡರೆ ಕರುಣೆಯಿಂದ ಒಂದು ಹಣ್ಣನ್ನು ಕೊಡುವ ಮನಸ್ಸು ಹೊಂದಿರುತ್ತಾನೆ. 
     ಸಾಧು-ಸಂತರು ಹೇಳುತ್ತಾ ಬಂದಿರುವ ಸಂದೇಶವೆಂದರೆ, 'ಇತರರಿಗೆ ಪ್ರತಿಫಲಾಪೇಕ್ಷೆಯಿಲ್ಲದ ಪ್ರೀತಿ, ವಿಶ್ವಾಸಗಳನ್ನು ಕೊಡಬಲ್ಲೆವಾದರೆ, 'ನಾನು'ವಿನಿಂದ 'ನಾವು'ಗೆ ಬದಲಾಗುತ್ತೇವೆ ಮತ್ತು ಪರಸ್ಪರ ಹೆಚ್ಚು ಆತ್ಮೀಯರಾಗುತ್ತೇವೆ'. ಸುತ್ತಮುತ್ತಲಿನವರೊಡನೆ ಸೌಹಾರ್ದತೆಯಿಂದ ಬಾಳುವುದರ ಸಂತೋಷ ಹೆಚ್ಚಿನದು. ಆ ಸೌಹಾರ್ದತೆ ಹೇಗಿರಬೇಕೆಂದರೆ 'ನಡೆಯುವ' ಕಾಲುಗಳಂತಿರಬೇಕು. ಗಮನಿಸಿದ್ದೀರಾ? ಒಂದು ಕಾಲು ನಡೆಯುತ್ತಿದ್ದರೆ, ಇನ್ನೊಂದು ಕಾಲು ಆ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತದೆ. ಸಮನ್ವಯದ ತತ್ವ 'ನಡೆಯುವುದರಲ್ಲಿದೆ'. ಒಬ್ಬ ಅರ್ಹ ವ್ಯಕ್ತಿಗೆ ಸಹಾಯ ಮಾಡಿದೆವೆಂದು ಇಟ್ಟುಕೊಳ್ಳೋಣ. ಈಗ ಹೇಳಿ, ಹಾಗೆ ಮಾಡಿ ನಾವು ಸಹಾಯ ಮಾಡಿದೆವೋ, ಮಾಡಿಕೊಂಡೆವೋ? ಇನ್ನೂ ಅರ್ಥವಾಗಬೇಕೆಂದರೆ ಈ ಸಂದರ್ಭ ನೆನಪಿಸಿಕೊಳ್ಳೋಣ. ಒಂದು ಮಗುವಿಗೆ ಅದು ಇಷ್ಟಪಡುವ ಚಾಕೊಲೇಟನ್ನು ಕೊಟ್ಟೆವು ಅಂದುಕೊಳ್ಳೋಣ. ಆ ಮಗುವಿಗೆ ಆಗುವ ಸಂತೋಷ, ಅದರ ಕಣ್ಣಿನ ಹೊಳಪನ್ನು ಕಂಡು ನಮಗೆ ಖುಷಿಯಾಗುವುದೋ, ಇಲ್ಲವೋ? ಅದು ನಾವು ಕೊಟ್ಟದ್ದೋ, ಪಡೆದದ್ದೋ? 'ಪಡೆಯುವುದಕ್ಕಾಗಿ ಕೊಟ್ಟದ್ದು' ಎಂದರೆ ಹೆಚ್ಚು ಅರ್ಥಪೂರ್ಣವೆನಿಸೀತು. ತುಂಬಿ ತುಳುಕಿರುವ ಬಸ್ಸಿನಲ್ಲಿ ಕಷ್ಟಪಟ್ಟು ನಿಂತಿರುವ ಒಬ್ಬ ವೃದ್ಧರಿಗೆ ಕುಳಿತ ಸೀಟಿನಿಂದ ಎದ್ದು ಅವರಿಗೆ ಕುಳಿತುಕೊಳ್ಳಲು ಅನುಕೂಲ ಮಾಡಿಕೊಡುವುದರಲ್ಲೂ 'ಕೊಟ್ಟು ಪಡೆಯುವ' ಸುಖವಿದೆ, ಏನೋ ಒಳ್ಳೆಯದು ಮಾಡಿದೆವೆಂದು ಮನ ಹಿಗ್ಗುವ/ಸಮಾಧಾನವಾಗುವ ಕ್ರಿಯೆಯಿದೆ. ನಡೆಯುವುದು ಎಂದರೆ ಮುಂದೆ ಹೋಗುವುದು. ನಡೆಯುವುದರಿಂದ ಕೇವಲ ಬದುಕಿನಲ್ಲಿ ಮುನ್ನಡೆಯುವುದಿಲ್ಲ, ಬೆಳೆಯುತ್ತಾ ಮುಂದೆ ಹೋಗುತ್ತೇವೆ. 
     ಮನುಷ್ಯನ ಮನಸ್ಸು ಈಗಿರುವ ಸ್ಥಿತಿಗಿಂತ ಮುಂದುವರೆಯಲು ಚಡಪಡಿಸುತ್ತಿರುತ್ತದೆ. ಆಗ ಅಂತರಂಗದ ಅನಿಸಿಕೆಗಳಿಗೆ ಮಹತ್ವ ಕೊಡದೆ, ಬೇರೆಯದೇ ಆದ ಯೋಜನೆಗಳು, ನಡೆಗಳು ರೂಪುಗೊಳ್ಳುತ್ತವೆ. ಅಂದರೆ ನಡೆಯುವ ದಾರಿ ತಪ್ಪುತ್ತದೆ. ಕಾಲ ಸರಿದಂತೆ ಮನಸ್ಸು ಕಲುಷಿತಗೊಳ್ಳುತ್ತದೆ, ಮೊದಲು ಹೊಂದಿದ್ದ ನಂಬಿಕೆಗಳು, ಮೌಲ್ಯಗಳು ಸವಕಲಾಗುತ್ತವೆ. ಹಿಂದೆ ಹಿರಿಯರು ಇರುವೆ ಗೂಡುಗಳ ಬಳಿ ಸಕ್ಕರೆ, ಹಿಟ್ಟುಗಳನ್ನು ಉದುರಿಸುತ್ತಿದ್ದುದನ್ನು ಕಂಡಿದ್ದೇನೆ. ಈಗ ಅದೇ ಗೂಡುಗಳಿಗೆ ಇಂದಿನವರು ಡಿ.ಡಿ.ಟಿ./ಗೆಮಾಕ್ಸಿನ್ ಪುಡಿ ಹಾಕುವುದನ್ನೂ ಕಂಡಿರುವೆ. ಆದರೆ, ಸರಿದಾರಿಯಲ್ಲಿ  ನಡೆಯುತ್ತಾ ಹೋದಂತೆ ಜಗತ್ತು ಸ್ಪಷ್ಟವಾಗುತ್ತಾ ಹೋಗುತ್ತದೆ. ನಾನು ಮತ್ತು ನಾವುಗಳ, ಅಂತರಂಗದ ಮತ್ತು ಬಹಿರಂಗದ, ಸ್ವಾರ್ಥದ ಮತ್ತು ಸ್ವಾರ್ಥರಾಹಿತ್ಯದ ವ್ಯತ್ಯಾಸಗಳ ಕುರಿತು ಹೊಂದಿದ್ದ ಮೊದಲಿನ ಅನಿಸಿಕೆಗಳು ಪರಿಷ್ಕೃತಗೊಳ್ಳುತ್ತಾ ಹೋಗುತ್ತದೆ. ನಡೆಯುತ್ತಾ ಹೋದಂತೆ ಹಲವಾರು ಪ್ರಶ್ನೆಗಳು, ಸಮಸ್ಯೆಗಳು ಎದುರಾಗುತ್ತವೆ. ಆ ಪ್ರಶ್ನೆಗಳು, ಸಮಸ್ಯೆಗಳಿಗೆ ನಾವು ಕೊಡುವ ಉತ್ತರಗಳು ನಾವು ಪ್ರಪಂಚವನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ, ನಮ್ಮ ಸ್ಥಾನ ಎಲ್ಲಿದೆ ಅನ್ನುವುದನ್ನು ನಿರ್ಧರಿಸುತ್ತವೆ. ಒಂದು ವಿಚಿತ್ರ ಆದರೂ ಸತ್ಯವೆಂದರೆ, ಸರಿಯಾಗಿ ನಡೆಯುವವರು ಓಡುವವರಿಗಿಂತ, ಹಾರುವವರಿಗಿಂತ ಮುಂದೆ ಇರುತ್ತಾರೆ! 'Slow and steady wins the race!' ಬನ್ನಿ, ನಾವು ಬದಲಾಗೋಣ, ಜಗತ್ತು ತಂತಾನೇ ಬದಲಾದೀತು! ಬದಲಾಗುತ್ತದೋ, ಇಲ್ಲವೋ, ನಮ್ಮ ಕಣ್ಣಿಗಂತೂ ಬದಲಾಗುತ್ತದೆ! ನಡೆಯೋಣ, ಒಟ್ಟಿಗೇ ನಡೆಯೋಣ!!
-ಕ.ವೆಂ.ನಾಗರಾಜ್.
**************
10.12.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಡಿಸೆಂಬರ್ 14, 2014

ಒಂಟಿತನ ಮತ್ತು ಏಕಾಂತ



     ಒಂಟಿತನ - ಮಾನವ ಜೀವಿಗಳು ಸಾಮಾನ್ಯವಾಗಿ ಅನುಭವಿಸುವ ಅನಿವಾರ್ಯ ಸ್ಥಿತಿ. ತಾನೊಬ್ಬನೇ, ತನ್ನೊಡನೆ ಇತರರಿಲ್ಲ ಎಂಬ ಭಾವವನ್ನು, ಇನ್ನೊಬ್ಬರ ತೀವ್ರವಾದ ಅಗತ್ಯವಿದ್ದು, ಸಿಗದಿದ್ದಾಗ ಉಂಟಾಗುವ ಸ್ಥಿತಿಯನ್ನು ಒಂಟಿತನವೆನ್ನಬಹುದು. ಇಂತಹ ಸ್ಥಿತಿಯಲ್ಲಿ ಆಹಾರ ರುಚಿಸುವುದಿಲ್ಲ, ನೀರು ಹಿತವಾಗುವುದಿಲ್ಲ. ಆಹಾರ ಸೇವಿಸಿದರೂ ಅನಿವಾರ್ಯ ಕ್ರಿಯೆಯಂತೆ ಜರುಗುವುದು. ಯಾವ ವಿಷಯಗಳಲ್ಲೂ ಆಸಕ್ತಿ ಬರದು. ಆಲಸ್ಯತನ ಮೈವೆತ್ತುವುದು. ಗಡಿಯಾರದ ಚಲನೆ ಅತ್ಯಂತ ನಿಧಾನವಾಗಿ ತೋರುವುದು. ತಾತ್ಕಾಲಿಕ ಒಂಟಿತನ ಸಹ್ಯವಾಗಬಹುದು, ಆದರೆ ದೀರ್ಘಕಾಲದ ಅನಿವಾರ್ಯ ಒಂಟಿತನ ಖಿನ್ನತೆಗೆ ದೂಡುತ್ತದೆ, ಇನ್ನಿತರ ಕಾಯಿಲೆಗಳಿಗೂ ದಾರಿ ಮಾಡಿಕೊಡುತ್ತದೆ. ಒಂಟಿತನದಿಂದ ಬರುವ ಹತಾಶೆ, ಸಿಟ್ಟು, ಅಸಹಾಯಕತೆಗಳು ಹುದುಗಿಟ್ಟಿಸಿದ್ದ ಆಕ್ರೋಶ ಒಮ್ಮೆಲೇ ಹೊರನುಗ್ಗಿ ಅಸಹ್ಯಕರ ವಾತಾವರಣ ಸೃಷ್ಟಿಸುವುದರ ಜೊತೆಗೆ, ಸಂಬಂಧಗಳನ್ನು ಶಾಶ್ವತವಾಗಿ ಮುರಿಯುವಂತೆ ಮಾಡಬಹುದು. ಪರಿಸ್ಥಿತಿ ಬಿಗಡಾಯಿಸಿ ಇತರರಿಗೂ ಮತ್ತು ಮುಖ್ಯವಾಗಿ ಸಂಬಂಧಿಸಿದವರಿಗೇ ಸರಿಡಿಸಲಾಗದ ಹಾನಿ ಉಂಟು ಮಾಡಬಹುದು. ಇಂತಹ ಸಂದರ್ಭಗಳಲ್ಲಿ ದುರ್ಬಲ ಮನಸ್ಕರು ಆತ್ಮಹತ್ಯೆ ಸಹ ಮಾಡಿಕೊಳ್ಳಬಹುದು. ಒಂಟಿತನದ ಭಾವವೆಂದರೆ ಸ್ನೇಹಕ್ಕಾಗಿ ಹಪಹಪಿಸುವ ಹಂಬಲಿಕೆಯ ಸೂಚಿ. 
     ಹಲವಾರು ರೀತಿಯ ಒಂಟಿತನಗಳನ್ನು ಗಮನಿಸಬಹುದು. ಒಂದು ಉದಾಹರಣೆ ನೋಡೋಣ. ಅವನೊಬ್ಬ ಆದರ್ಶವಾದಿ ಯುವಕ. ಹಲವಾರು ಕನಸುಗಳನ್ನು ಕಟ್ಟಿಕೊಂಡವನು, ನ್ಯಾಯ, ನೀತಿ, ಧರ್ಮ ಎಂದು ಹೋರಾಡುವ ಮನೋಭಾವದ ಅವನಿಗೆ ಕುಟುಂಬದ ಸದಸ್ಯರ ಸಹಕಾರ, ಬೆಂಬಲ ಸಿಗುವುದಿಲ್ಲ. ನಾಲ್ಕು ಜನರಂತೆ ನಮ್ಮ ಹುಡುಗ ಇಲ್ಲ, ಅವನು ಉದ್ಧಾರವಾಗುವುದಿಲ್ಲವೆಂಬ ಆತಂಕ ಅವನ ಪೋಷಕರಿಗೆ. ಅನೇಕ ರೀತಿಯಲ್ಲಿ ತಿಳಿ ಹೇಳುತ್ತಾರೆ, ಬೈದು ಬುದ್ಧಿ ಹೇಳುತ್ತಾರೆ, ಅವರಿವರಿಂದ ಉಪದೇಶ ಮಾಡಿಸುತ್ತಾರೆ. ಆದರೆ ಆದರ್ಶದ ಬೆನ್ನು ಬಿದ್ದ ಯುವಕನಿಗೆ ಅವಾವುದೂ ರುಚಿಸುವುದಿಲ್ಲ. ಒಳ್ಳೆಯ ವಿಚಾರಕ್ಕೆ ಮನೆಯವರೇ ಬೆಂಬಲಿಸದಿದ್ದರೆ ಹೇಗೆ ಎಂಬುದು ಅವನ ವಾದ. ಕೊನೆಗೆ ಮನೆಯವರು ಸುಮ್ಮನಾದರೂ ಅವರ ಕಿರಿಕಿರಿ, ಗೊಣಗಾಟಗಳು ತಪ್ಪುವುದೇ ಇಲ್ಲ. ಕಠಿಣ ಆದರ್ಶದ ಹಾದಿ ಹಿಡಿದ ಅವನಿಗೆ ಮನೆಯ ಹೊರಗೂ ಪ್ರೋತ್ಸಾಹ ಸಿಗುವುದಿಲ್ಲ. ತಾನು ಮಾಡುತ್ತಿರುವುದು ಸರಿ ಎಂಬ ಅವನ ಅಂತರಂಗದ ಒಪ್ಪಿಗೆ ಮಾತ್ರ ಅವನ ಜೊತೆಗಾರನಾಗಿರುತ್ತದೆ. ಬೆನ್ನು ತಟ್ಟುವವರಿಲ್ಲದ ಅವನನ್ನು ಪ್ರಿಯರ ಹೀನೈಕೆ ಜೊತೆಗೂಡಿ ಕುಗ್ಗಿಸುತ್ತದೆ, ಒಂಟಿತನದ ಅನುಭವ ಮಾಡಿಸುತ್ತದೆ. 'ಒಳ್ಳೆಯವನಾಗು, ನೀನು ಒಂಟಿಯಾಗುವೆ' ಎಂಬ ಮಾತು ಅವನಂತಹವರನ್ನು ಕಂಡೇ ಹೇಳಿದ್ದಿರಬೇಕು.
     ಹದಿಹರೆಯದ ಹುಚ್ಚು ಪ್ರೇಮಿಗಳ ಒಂಟಿತನ ಮತ್ತೊಂದು ತರಹ. ಅವನಿಲ್ಲದೆ/ಅವಳಿಲ್ಲದೆ ಬಾಳು ಶೂನ್ಯ ಎಂದು ಭಾವಿಸಿ ಕೊರಗುವ, ಹುಚ್ಚಾಗುವ ದೇವದಾಸಗಳದ್ದು ಒಂದು ರೀತಿಯಾದರೆ, ತನಗೆ ದಕ್ಕದ ಅವಳು/ಅವನು ಬೇರೆಯವರಿಗೂ ಸಿಗಬಾರದು ಎಂದು ಆಸಿಡ್ ಎರಚುವರದು, ಕೊಲೆ ಮಾಡುವರದು ಮತ್ತೊಂದು ರೀತಿ. ಆತ್ಮಹತ್ಯೆ ಮಾಡಿಕೊಳ್ಳುವವರದೂ ಒಂಟಿತನವನ್ನು ಎದುರಿಸಲಾಗದವರ ಮಗದೊಂದು ರೀತಿ. ಅವನ/ಅವಳ ನೆನಪಿನಲ್ಲಿ ಕೊನೆಯವರೆಗೂ ಮದುವೆಯಾಗದೇ ಉಳಿಯುವ ಪ್ರೇಮಿಗಳನ್ನೂ, ಮಾನಸಿಕ ಕಾಯಿಲೆಗಳಿಂದ ನರಳುವವರನ್ನೂ ಕಾಣಬಹುದು. ಅವನು/ಅವಳು ಜೊತೆಗಿರದ ಕಾರಣ ಕಾಡುವ ಒಂಟಿತನದ ಪರಿಣಾಮಗಳಿವು. ಕೇವಲ ಇವರಷ್ಟೇ ಅಲ್ಲ, ತಾವು ಅತಿಯಾಗಿ ಹಚ್ಚಿಕೊಂಡ ಸ್ನೇಹಿತರು, ಬಂಧುಗಳು, ಗಂಡ, ಹೆಂಡತಿ, ಸೋದರ-ಸೋದರಿಯರು, ಮನೆಯವರು ಯಾರೇ ಆಗಲಿ ತಮ್ಮಿಂದ ದೂರವಾದಾಗ/ಕಾಲವಾದಾಗ ಸಹ ಒಂಟಿತನ ಕಾಡದೇ ಇರದು. ಎಷ್ಟರ ಮಟ್ಟಿಗೆ ಅವರನ್ನು ಹಚ್ಚಿಕೊಂಡಿದ್ದರು ಎಂಬುದರ ಮೇಲೆ ಅಂತಹ ಒಂಟಿತನದ ಪರಿಣಾಮ ಬೀರುತ್ತದೆ. ವೃದ್ಧಾಪ್ಯದಲ್ಲಿ ಮಕ್ಕಳು ತಮಗೆ ಏನು ಮಾಡದಿದ್ದರೂ ಪರವಾಗಿಲ್ಲ, ಪ್ರೀತಿಯಿಂದ ಮಾತನಾಡಿಸಿದರೆ ಸಾಕು ಎಂದು ಹಂಬಲಿಸುವ ವೃದ್ಧರ ಸಂಖ್ಯೆಗೂ ಏನೂ ಕಡಿಮೆಯಿಲ್ಲ. 
     ಮೇಲಿನ ಉದಾಹರಣೆಗಳಿಂದ ಪ್ರೀತಿ, ವಿಶ್ವಾಸ, ಸ್ನೇಹದ ಕೊರತೆಯೇ ಒಂಟಿತನದ ಮೂಲವೆಂದು ತಿಳಿಯುವುದಲ್ಲವೇ? ಒಗಟಿನ ಒಳಗೇ ಉತ್ತರ ಅಡಗಿರುವಂತೆ ನಮಗೆ ಒಂಟಿತನ ಕಾಡಬಾರದೆಂದರೆ ಪರಸ್ಪರ ಪ್ರೀತಿ, ವಿಶ್ವಾಸಗಳಿಗೆ ಕನಿಷ್ಠ ನಮ್ಮ ಕಡೆಯಿಂದಲಾದರೂ ತಪ್ಪಾಗದಂತೆ ನೋಡಿಕೊಳ್ಳುವುದರ ಅಗತ್ಯತೆ ಗೋಚರಿಸುತ್ತದೆ. ಆಗ ನಮ್ಮ ಅಂತರಂಗವಾದರೂ ನಮ್ಮ ಜೊತೆಗೆ ಇರುತ್ತದೆ, ಸಮಾಧಾನಿಸುತ್ತದೆ. ನಮ್ಮ ತಪ್ಪಿದ್ದು ತಿದ್ದಿಕೊಳ್ಳದಿದ್ದರೆ ಅಂತರಂಗವೂ ಜೊತೆಗಿರುವುದಿಲ್ಲ. ಕಳೆದುಕೊಳ್ಳುವವರು ಇನ್ನು ಯಾರೂ ಉಳಿದಿಲ್ಲವೆಂದಾದಾಗ, ನಮ್ಮ ಸ್ವಂತಿಕೆಗೆ ಬೆಲೆಯೇ ಇಲ್ಲವಾದಾಗ ಅದನ್ನು ಜೀವನದ ಸಾವು (ಜೀವದ ಸಾವಲ್ಲ) ಎನ್ನಬಹುದು. ಅಂತಹ ಸಾವು ಜೀವನಕ್ಕೆ ಬರಬಾರದೆಂದರೆ ನಮ್ಮ ಒಳಗಿನ ಮಾತುಗಳಿಗೆ ನಾವು ಕಿವಿಗೊಡಲೇಬೇಕು. 
     ಮತ್ತೊಂದು ರೀತಿಯ ಒಂಟಿತನವಿದೆ. ಆ ಒಂಟಿತನದಲ್ಲಿ ಹಿತವಿದೆ. ಅದೆಂದರೆ ವಿವಿಧ ರಂಗಗಳಲ್ಲಿ ಸುಪ್ರಸಿದ್ಧರಾದವರ, ಮುಖಂಡರ, ಹಿರಿಯ ಅಧಿಕಾರಿಗಳ ಒಂಟಿತನ. ಅವರುಗಳು  ಒಂಟಿತನವನ್ನು ಒಪ್ಪಿಕೊಳ್ಳಲೇಬೇಕು, ಅಪ್ಪಿಕೊಳ್ಳಲೇಬೇಕು. 'ಒಂಟಿಯಾಗಿರುವುದೆಂದರೆ ಇತರರಿಗಿಂತ ಭಿನ್ನವಾಗಿರುವುದು, ಇತರರಿಗಿಂತ ಭಿನ್ನವೆಂದರೆ ಒಂಟಿಯಾಗಿರುವುದು' ಎಂದು ಅವರ ಮಟ್ಟಿಗೆ ಹೇಳಬಹುದು. ಅವರುಗಳನ್ನು ಸಮನಾಗಿ ಪರಿಗಣಿಸುವವರ ಸಂಖ್ಯೆ  ಬಹಳ ಕಡಿಮೆ. ಅವರ ಒಂಟಿತನದಲ್ಲೇ ಅವರ ಸೃಜನಾತ್ಮಕ ಶಕ್ತಿ ಹೊರಹೊಮ್ಮುತ್ತದೆ. ಇದರಲ್ಲೂ ಒಂದು ಅಪಾಯವಿದೆ. ಅದೆಂದರೆ ಸುಪ್ರಸಿದ್ಧರಾದವರು ಕಾರಣಾಂತರಗಳಿಂದ ಪ್ರಸಿದ್ಧಿ ಕಳೆದುಕೊಂಡರೆ, ಅಧಿಕಾರ ಚ್ಯುತಿಯಾದರೆ ಅವರ ಜೊತೆಗಿದ್ದು ಬಹುಪರಾಕ್ ಹೇಳುತ್ತಿದ್ದವರು ಇದ್ದಕ್ಕಿದ್ದಂತೆ ಕಣ್ಮರೆಯಾದರೆ ಅವರು ಅನುಭವಿಸುವ ಒಂಟಿತನದ ನೋವು ವರ್ಣನಾತೀತ. ಅದನ್ನು ಅವರು ಮಾತ್ರ ಅರಿಯಬಲ್ಲರು. ಇತ್ತೀಚಿನ ಉದಾಹರಣೆಯೆಂದರೆ ಕ್ಷಣಿಕ ವ್ಯಾಮೋಹದಿಂದಾಗಿ ಅಧಿಕಾರ, ಸ್ಥಾನ, ಮಾನಗಳನ್ನು ಕಳೆದುಕೊಂಡ ಕರ್ನಾಟಕದ ಸಚಿವರ ಜೊತೆಗೆ ಈಗ ಯಾರಿದ್ದಾರೆ? ಒಂದು ರೀತಿಯಲ್ಲಿ ಹೇಳಬೇಕೆಂದರೆ ಅವರಿಗೆ ಈಗ ಆಗಿರುವ, ಆಗುತ್ತಿರುವ ಶಿಕ್ಷೆ ಕಡಿಮೆಯೇನಲ್ಲ.
     ಇನ್ನೊಂದು ಅಪಾಯಕಾರಿ ಒಂಟಿತನದ ಬಗ್ಗೆ ನೋಡೋಣ. ಅದೆಂದರೆ ಒಟ್ಟಿಗಿದ್ದರೂ ಕಾಡುವ ಒಂಟಿತನ. ಸಾಗರದ ಮಧ್ಯದಲ್ಲಿದ್ದು 'ಎಲ್ಲೆಲ್ಲೂ ನೀರು, ಕುಡಿಯಲು ತೊಟ್ಟೂ ನೀರಿಲ್ಲ' ಎಂಬಂತಹ ಸ್ಥಿತಿ ಅದು. ಯಾವುದೋ ಒಂದು ಕುಟುಂಬದ ಉದಾಹರಣೆಯನ್ನು ತೆಗೆದುಕೊಳ್ಳೋಣ. (ಎಲ್ಲಾ ಕುಟುಂಬಗಳೂ ಹೀಗಿರುತ್ತವೆ ಎಂದು ಹೇಳುತ್ತಿಲ್ಲ, ಹೀಗಿರಲೂ ಬಾರದು) ಎಲ್ಲರೂ ಒಟ್ಟಿಗೇ ಟಿವಿ ನೋಡುತ್ತಿರುತ್ತಾರೆ. ಪರಸ್ಪರ ಮಾತುಗಳು ಅನಿವಾರ್ಯವಾದರೆ ಮಾತ್ರ ಆಡುತ್ತಾರೆ. ಅವರವರ ಪಾಡು ಅವರಿಗೆ. ಪರಸ್ಪರರನ್ನು ಸಹಿಸಿಕೊಂಡು ಹೋಗುತ್ತಿರುತ್ತಾರೆ. ಕೆಲವೊಮ್ಮೆ  ಅಸಹನೀಯವಾದಾಗ ಕಿರುಚಾಡುತ್ತಾರೆ, ಜಗಳವಾಡುತ್ತಾರೆ, ಅನಿವಾರ್ಯವೆಂಬಂತೆ ಸುಮ್ಮನಾದರೂ ಎಲ್ಲರೂ ಅಲ್ಲಿ ಒಂಟಿಗಳೇ. ನೆಂಟರು, ಸ್ನೇಹಿತರು ಬಂದರೂ ಔಪಚಾರಿಕವಾದ ಮಾತುಗಳನ್ನಾಡಿ ಪುನಃ ಟಿವಿಯ ಕಡೆ ಗಮನ ಕೊಡುತ್ತಾರೆ. ಬಂದವರಿಗೆ ಏಕಾದರೂ ಬಂದೆವಪ್ಪಾ ಅನ್ನುವ ಸ್ಥಿತಿ. ಕಛೇರಿಗಳಲ್ಲೂ ಅಷ್ಟೇ. ಒಂಟಿತನವನ್ನು ಅನುಭವಿಸುವ ಅಧಿಕಾರಿಗಳು, ನೌಕರರನ್ನು ಕಾಣಬಹುದು. ಇಲ್ಲಿ ಗಮನಿಸುವ ಅಂಶವೆಂದರೆ ಸ್ವಂತಿಕೆಗೆ, ಅಹಂಗೆ ಬೀಳುವ ಪೆಟ್ಟು ಒಂಟಿತನವಾಗಿ ಕಾಡುವುದು! ಪರಸ್ಪರ ಅಪನಂಬಿಕೆಯಿಂದ ಉಂಟಾಗುವ ಒಂಟಿತನ ನರಕಸದೃಶ. ಉದ್ದೇಶೂರ್ವಕವಾಗಿ ಅಹಂಗೆ ಪೆಟ್ಟು ಕೊಡುವ ಕುಟುಂಬದವರಿಂದಲೇ, ಜೊತೆಗಾರರಿಂದಲೇ, ಸಹೋದ್ಯೋಗಿಗಳಿಂದಲೇ ನೋವು ಅಧಿಕವಾಗಿ ಒಂಟಿಯಾದ ಭಾವ ತರುವುದು. 
     ಒಂಟಿತನದ ತಾಪ ಕಡಿಮೆ ಮಾಡಿಕೊಳ್ಳಲು ಮಾರ್ಗಗಳಿವೆ. ಓದುವುದು, ಬರೆಯುವುದು, ಸಂಗೀತ ಕೇಳುವುದು, ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯ ಅಭ್ಯಾಸಗಳಾದರೆ, ದುಶ್ಚಟಗಳಿಗೆ ದಾಸರಾಗುವುದು ಇನ್ನೊಂದು ರೀತಿಯ ಪಲಾಯನ. ಸಿಗರೇಟು ಸೇದುವುದು, ಕುಡಿಯುವುದು, ಜೂಜಾಡುವುದು, ವೇಶ್ಯಾಸಂಗ, ಇತ್ಯಾದಿಗಳು ಇದರಲ್ಲಿ ಸೇರುತ್ತವೆ. ಕ್ರಮೇಣ ದುಶ್ಚಟಗಳು ಅವರನ್ನೇ ಆಕ್ರಮಿಸಿ ಅವರನ್ನಲ್ಲದೆ ಅವರನ್ನು ನಂಬಿದವರಿಗೂ ನಾನಾ ರೀತಿಯ ತೊಂದರೆ ಕೊಡುತ್ತವೆ. ಇನ್ನೂ ಹೆಚ್ಚಿದ ಒಂಟಿತನದಿಂದ ಬಳಲುವಂತೆ ಮಾಡುತ್ತವೆ. ಒಂಟಿತನ ಜೀವನಕ್ಕೆ ಅನುಭವ ಕೊಡುತ್ತದೆ. ಸರಿಯಾಗಿ ಬಳಸಿಕೊಂಡಲ್ಲಿ ಒಂಟಿತನ ವರವಾಗುತ್ತದೆ. ಒಳ್ಳೆಯ ಸಾಹಿತ್ಯ, ಸಂಗೀತ, ಇತ್ಯಾದಿಗಳು ಕುಡಿಯೊಡೆಯುವುದು ಆಗಲೇ. ಪ್ರೀತಿಸುವವರ, ತನ್ನನ್ನು ಗುರುತಿಸುವವರ ಕೊರತೆ ನೀಗಿಸಿಕೊಳ್ಳಲು ಅವರೇ ಇತರರನ್ನು ಪ್ರೀತಿಸಲು, ಇತರರನ್ನು ಗೌರವಿಸಲು ಮುಂದಾದರೆ ಅವರಿಂದಲೂ ಪ್ರತಿ ಪ್ರೀತಿ, ಪ್ರತಿ ಗೌರವ ಸಿಗಲಾರದೆ? ಬಂದದ್ದೂ ಒಂಟಿ, ಹೋಗುವುದೂ ಒಂಟಿ, ಆದರೆ ನಡುವಿನ ಜೀವನದಲ್ಲಿ ಪರಸ್ಪರರ ಅವಲಂಬನೆ, ಅಗತ್ಯತೆ ಬರುವುದರಿಂದ ಒಂಟಿತನವನ್ನೂ ಎದುರಿಸಬೇಕಾಗುತ್ತದೆ. ಪ್ರೀತಿ, ವಿಶ್ವಾಸಗಳು ನಾವು ಒಂಟಿಯಲ್ಲವೆಂದು ಭಾವಿಸುವಂತೆ ಮಾಡುತ್ತದೆ. ಆಳವಾಗಿ ಯೋಚಿಸಿದರೆ ಸಮುದಾಯ, ಸಂಘಟನೆ, ಜಾತಿ, ಧರ್ಮ, ಗುಂಪು, ಇತ್ಯಾದಿಗಳೂ ಸಹ ಮಾನವನ ಒಂಟಿತನವನ್ನು ಹೋಗಲಾಡಿಸುವ ಸಲುವಾಗಿಯೇ ಹುಟ್ಟಿಕೊಂಡದ್ದು ಎಂದು ಅನ್ನಿಸದಿರದು. ದುಃಖ ಅನುಭವಿಸಲು ಒಬ್ಬರು ಇದ್ದರೂ ಆಗುತ್ತದೆ, ಆದರೆ ಸಂತೋಷ ಹಂಚಿಕೊಳ್ಳಲು ಇಬ್ಬರಾದರೂ ಇರಬೇಕು. ಆದ್ದರಿಂದ ಮನುಜ-ಮನುಜರ ನಡುವೆ ಗೋಡೆಗಳನ್ನು ಕಟ್ಟದೆ ಸೇತುವೆಗಳನ್ನು ಕಟ್ಟಿದರೆ ಒಂಟಿತನ ಕಡಿಮೆಯಾದೀತು. ಒಂಟಿಯಾಗಿ ಇರಬಯಸುವವರು ಯಶಸ್ವಿ ಮಾನವರಲ್ಲ. ಇತರ ಹೃದಯಗಳ ಮಿಡಿತ ಕೇಳದವರ ಹೃದಯ ಬಾಡುತ್ತದೆ, ಇತರರ ಮಾತುಗಳನ್ನು ಕೇಳಲಿಚ್ಛಿಸದೆ ತನ್ನೊಬ್ಬನ ಮಾತುಗಳನ್ನೇ ಕೇಳುವವನ ಮೆದುಳು ಕುಗ್ಗುತ್ತದೆ.
     ಇದುವರೆಗೆ ಒಂಟಿತನದ ಬಗ್ಗೆ ಸಾಕಷ್ಟು ಹೇಳಿದ್ದಾಯಿತು. ಒಂಟಿತನದಂತೆಯೇ ತೋರುವ, ಆದರೆ ಒಂಟಿತನವಲ್ಲದ, ಒಂಟಿತನಕ್ಕೆ ಹೋಲಿಸಲಾಗದ ಸಂಗತಿಯೊಂದಿದೆ. ಅದೇ ಏಕಾಂತ. ಏಕಾಂತ ಬೇರೆ, ಒಂಟಿತನ ಬೇರೆ. ಒಂಟಿತನ ತನ್ನತನದ ಬಡತನವಾದರೆ, ಏಕಾಂತ ತನ್ನತನದ ವೈಭವದ ಸ್ಥಿತಿಯೆನ್ನಬಹುದು. ಒಂಟಿತನ ಒಬ್ಬನೇ ಇರುವ ನೋವ ಹೇಳಿದರೆ, ಏಕಾಂತ ಒಬ್ಬನೇ ಇರುವ ಸೊಬಗ ತೋರುವುದು. ಏಕಾಂತದಲ್ಲಿ ಬರಹಗಾರನೊಬ್ಬ ಅರ್ಥವಾಗದ ಸಂಗತಿಗಳಿಗೆ ಅರ್ಥ ಹುಡುಕುತ್ತಾನೆ, ಸಂಗೀತಗಾರ ಹೊಸ ಆಯಾಮಗಳ ಕುರಿತು ಧ್ಯಾನಿಸುತ್ತಾನೆ, ವಿವಿಧ ಸ್ತರಗಳವರು ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಮುಂದುವರೆಯುವ ಕುರಿತು ಚಿಂತಿಸುತ್ತಾರೆ, ಸಾಧಕ ಬದುಕಿನ ಅರ್ಥ ತಿಳಿಯುವ ಪ್ರಯತ್ನ ನಡೆಸುತ್ತಾನೆ. ಆಗ ಅವರುಗಳ ಜೊತೆಗಿರುವುದು ಅವರ ಅಂತರಂಗ, ಅವರಿಗೆ ದಾರಿ ತೋರುವುದು ಅವರ ಅಂತರಂಗ. ನಮ್ಮ ತಪ್ಪುಗಳನ್ನು ಇತರರ ಎದುರಿಗೆ ಒಪ್ಪಿಕೊಳ್ಳದಿದ್ದರೂ ಅಂತರಂಗದ ಎದುರು ತಲೆಬಾಗಲೇಬೇಕು, ಅದುವರೆಗೆ ಗೋಚರಿಸದ ಸತ್ಯ ಗೋಚರಿಸುವುದು ಆಗಲೇ. ಅದೇ ಏಕಾಂತದ ಮಹಿಮೆ. ಏಕಾಂತ ಪ್ರೌಢತೆಯ ಸಂಕೇತ. ಏಕಾಂತದಲ್ಲಿ ಚಟುವಟಿಕೆಗಳ ಉದಯವಾಗುತ್ತದೆ, ಅಲ್ಲಿ ಚಲನೆಯಿಲ್ಲದ ಕ್ರಿಯೆಯಿದೆ, ಶ್ರಮವಿರದ ಕೆಲಸವಿದೆ, ಕಣ್ಣು ಮೀರಿದ ದೃಷ್ಟಿಯಿದೆ, ಬಯಕೆ ಮೀರಿದ ಆಸೆಯಿದೆ, ಅನಂತ ತೃಪ್ತಿಯ ಭಾವವಿದೆ. ಏಕಾಂತ ತನ್ನತನವನ್ನು ಬೆಳೆಸುವುದು, ಇತರರು ಏಕಾಂತದ ಸ್ಥಾನವನ್ನು ತುಂಬಲಾರರು. ಅಂತರಂಗ ಬಹಿರಂಗಕ್ಕೆ ಹೊಂದಿಕೆಯಾಗದಿದ್ದರೆ ಒಂಟಿತನ ಕಾಡುತ್ತದೆ. ಏಕಾಂತ ಹೊಂದಿಕೆ ಮಾಡಿಕೊಳ್ಳುವ ದಾರಿ ತೋರುತ್ತದೆ, ಒಂಟಿಯಲ್ಲವೆಂಬ ಭಾವಕ್ಕೆ ಇಂಬು ಕೊಡುತ್ತದೆ, ನಾವು ನಾವಾಗಿರಲು ಏಕಾಂತದಲ್ಲಿ ಮಾತ್ರ ಸಾಧ್ಯ. ಸಮೂಹದಲ್ಲಿ ಮತ್ತು ಇತರರೊಂದಿಗೆ ಇದ್ದಾಗ ನಾವು ನಮ್ಮತನವನ್ನು ಕಳೆದುಕೊಳ್ಳುತ್ತೇವೆ ಎಂಬುದು ನಿತ್ಯ ಸತ್ಯ. ಇತರರು ಏನೆಂದುಕೊಳ್ಳುತ್ತಾರೋ ಎಂಬ ಭಾವನೆಯಿಂದಲೋ, ಇತರರು ತಪ್ಪು ತಿಳಿಯುತ್ತಾರೆ ಎಂತಲೋ ಅಥವಾ ಯಾರನ್ನಾದರೂ ಮೆಚ್ಚಿಸುವ ಕಾರಣಕ್ಕಾಗಿಯೋ ನಾವು  ನಮಗಿಷ್ಟವಿಲ್ಲದಿದ್ದರೂ ನಮ್ಮತನಕ್ಕೆ ಹೊರತಾಗಿ ವರ್ತಿಸುತ್ತೇವೆ ಅಥವ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುತ್ತೇವೆ. ಅಂತರಂಗ ಬಹಿರಂಗಗಳಿಗೆ ಹೊಂದಿಕೆಯಾಗದ ಕಾರಣ ಆಗ ಒಂಟಿತನದ ಭಾವ ಮನೆ ಮಾಡುತ್ತದೆ. ಏಕಾಂತದಲ್ಲಿ ಹಾಗಲ್ಲ, ಅಲ್ಲಿ ಅಂತರಂಗ ಬಹಿರಂಗಗಳಿಗೆ ಹೊಂದಿಕೆಯಿರುತ್ತದೆ ಮತ್ತು ಆ ಕಾರಣದಿಂದಾಗಿ ಅಲ್ಲಿ ಸಂತೋಷವಿರುತ್ತದೆ. ಸಾಧನೆಗೆ, ಧ್ಯಾನಕ್ಕೆ, ಮನನಕ್ಕೆ, ವಿಮರ್ಶೆಗೆ, ಹೇಗಿರಬೇಕೆಂದು ನಿರ್ಧರಿಸುವುದಕ್ಕೆ, ಉತ್ತಮ ರೀತಿಯಲ್ಲಿ ಮುಂದುವರೆಯುವುದಕ್ಕೆ ಏಕಾಂತದಲ್ಲಿ ಅವಕಾಶವಿದೆ. ಇತರರನ್ನು ಕೈಯಿಂದ ಮುಟ್ಟುವುದಕ್ಕೂ ಹೃದಯದಿಂದ ಮುಟ್ಟುವುದಕ್ಕೂ ವ್ಯತ್ಯಾಸ ತಿಳಿಯುವುದು ಏಕಾಂತದಲ್ಲೇ.
-ಕ.ವೆಂ.ನಾಗರಾಜ್.
**************
3.12.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಡಿಸೆಂಬರ್ 11, 2014

ಅಪ್ಪ ಹಾಕಿದ ಆಲದ ಮರ ಮತ್ತು ನಾವು


ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು 
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳು ಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ ||
     ಒಂದು ಕಾಲವಿತ್ತು, ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು, ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು, ಕೈಗೆ ಬಳೆ ಹಾಕಿಕೊಳ್ಳದೆ, ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆಸಬೇಕಾಗಿದ್ದ ಕಾಲವಿತ್ತು. ಚಿಕ್ಕ ವಯಸ್ಸಿನಲ್ಲೇ ವಿಧವೆಯಾದವರ ಪಾಡು ಅನುಭವಿಸಿದವರಿಗೇ ಗೊತ್ತು.  ಆಕೆಗೆ ಶುಭ ಕಾರ್ಯಗಳಲ್ಲಿ ಆಹ್ವಾನವಿರುತ್ತಿರಲಿಲ್ಲ. ಆಕೆ ಎದುರಿಗೆ ಬಂದರೆ ಅಪಶಕುನವೆಂದು ಭಾವಿಸುವವರಿದ್ದರು. ಹೊಸ ಪೀಳಿಗೆಯವರಿಗೆ ಇಂತಹ ಅನಿಷ್ಟ ಸಂಪ್ರದಾಯದ ಪರಿಚಯ ಇರಲಾರದು. ಪ್ರಾರಂಭದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುವುದು ನಿಂತರೂ ಕೈಗೆ ಬಳೆ ಹಾಕಿಕೊಳ್ಳಲು, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ, ಸುಧಾರಣೆಯಾಗಿದೆ. ಕಳೆದ ಮೂರು-ನಾಲ್ಕು ದಶಕಗಳಿಂದೀಚೆಗೆ ಈ ಸಂಪ್ರದಾಯದ ಆಚರಣೆ ಕಂಡು ಬರುತ್ತಿಲ್ಲ. ಒಂದು ಅನಿಷ್ಟ ಸಂಪ್ರದಾಯದ ಅಂತ್ಯವಾಗಿರುವುದು ಸಮಾಧಾನದ ಸಂಗತಿ. 
     ಸಂಪ್ರದಾಯವೆಂದರೆ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುವ ಆಚರಣೆಗಳು/ ನಡವಳಿಕೆಗಳು. ಸರಿಯೋ, ತಪ್ಪೋ ವಿಚಾರ ಮಾಡದೆ ಅದನ್ನು ಮುಂದುವರೆಸಿಕೊಂಡು ಬರುವವರನ್ನು ಸಂಪ್ರದಾಯವಾದಿಗಳು ಎನ್ನುತ್ತಾರೆ. ಕೆಲವನ್ನು ಆಚರಿಸಿ ಕೆಲವನ್ನು ಕೈಬಿಡುವ ಅನುಕೂಲ/ಅವಕಾಶವಾದಿಗಳೂ ಇದ್ದಾರೆ. ಅರ್ಥವಿಲ್ಲದ ಸಂಪ್ರದಾಯಗಳನ್ನು ಧಿಕ್ಕರಿಸಿ ನಡೆಯುವವರೂ ಇದ್ದಾರೆ. ಸ್ವತಃ ಸಂಪ್ರದಾಯಗಳನ್ನು ಆಚರಿಸದಿದ್ದರೂ, ಅರ್ಥವಿಲ್ಲವೆಂದು ತಿಳಿದಿದ್ದರೂ, ಇತರರ ಸಲುವಾಗಿ ಅವನ್ನು ಬೆಂಬಲಿಸುವವರ ಸಂಖ್ಯೆ  ಸಹ ಗಣನೀಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ  ಎಲ್ಲರನ್ನೂ ಹೊಂದಿಸಿಕೊಂಡು, ಹೊಂದಿಕೊಂಡು ಸಮನ್ವಯ ಮಾಡಿ ಸದ್ವಿಚಾರ ತಿಳಿಸಲು ಹೆಣಗುವವರೂ ಇದ್ದಾರೆ. ಎಲ್ಲಾ ಸಂಪ್ರದಾಯಗಳೂ ಕೆಟ್ಟವಲ್ಲ. ಹಾಗೆಯೇ ಎಲ್ಲವೂ ಒಳ್ಳೆಯವು ಎಂದು ಹೇಳಲಾಗುವುದಿಲ್ಲ. ಯಾವ ಆಚರಣೆಗಳಿಂದ ಯಾರಿಗೂ ತೊಂದರೆಯಿಲ್ಲವೋ, ಯಾವುದರಿಂದ ಮನುಷ್ಯನ ಬೌದ್ಧಿಕ ಹಾಗೂ ಮಾನಸಿಕ ವಿಕಾಸ, ಅಭಿವೃದ್ಧಿಗೆ ಸಹಕಾರವಾಗುವುದೋ, ಸಂತಸ ಹರಡುವುದೋ, ತಾರತಮ್ಯ ಇಲ್ಲದಿರುವುದೋ ಅಂತಹವುಗಳನ್ನು  ಒಳ್ಳೆಯ ಸಂಪ್ರದಾಯಗಳೆನ್ನಬಹುದು. ಇದಕ್ಕೆ ತದ್ವಿರುದ್ಧವಾದ ಸಂಪ್ರದಾಯಗಳನ್ನು ಕೆಟ್ಟವು ಎಂದುಕೊಳ್ಳಬಹುದು. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ, ಈಗಂತೂ ಹೊಸ ಹೊಸ ಸಂಪ್ರದಾಯಗಳು, ಆಚರಣೆಗಳು ಚಾಲ್ತಿಗೆ ಬರುತ್ತಿವೆ. ಹಿಂದಿನ ಅನುಭವಗಳಿಂದ ಹೇಳುವುದಾದರೆ ಕ್ರಮೇಣ ಅವು ಗಟ್ಟಿಗೊಳ್ಳುತ್ತವೆ.
     ಬಾಲ ಗಂಗಾಧರನಾಥ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವ ಸಲುವಾಗಿ ಹುಟ್ಟುಹಾಕಿದ ಸಾರ್ವಜನಿಕ ಗಣೇಶ ಉತ್ಸವಗಳು ಇಂದು ಯಾವ ಮಟ್ಟಕ್ಕೆ ತಲುಪಿವೆ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ಮೊದಲು ಊರಿಗೆ ಒಂದರಂತೆ ಇದ್ದುದು, ಈಗ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಗಳನ್ನು ಇಟ್ಟು ಅಲ್ಲಿ ನಡೆಸುವ ಕಾರ್ಯಕ್ರಮಗಳು, ಪೈಪೋಟಿ, ವಂತಿಕೆ ವಸೂಲಿ, ವಿಸರ್ಜನೆ ಸಮಯದಲ್ಲಿ ಕುಡಿದು ಕುಣಿಯುವ ಯುವಕರು, ಮತೀಯ ಘರ್ಷಣೆಗಳು, ಇತ್ಯಾದಿಗಳನ್ನು ಗಮನಿಸಿದರೆ ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ ಎಂದು ಅನ್ನಿಸದೇ ಇರದು. ಒಳ್ಳೆಯ ರೀತಿಯಲ್ಲಿ ಆಚರಿಸುವವರು ಇದ್ದರೂ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟು. ಗಣೇಶೋತ್ಸವಗಳು ಮುಗಿಯುವವರೆಗೂ ಶಾಂತಿ, ಸುವ್ಯವಸ್ಥೆಗಳಿಗಾಗಿ ಸಂಬಂಧಿಸಿದವರು ಹಗಲೂ ರಾತ್ರಿ ಹೆಣಗುವ, ಇಂತಹ ಉತ್ಸವಗಳು (ಗಣೇಶೋತ್ಸವ ಮಾತ್ರ ಅಲ್ಲ, ಎಲ್ಲಾ ಮತೀಯ/ಧಾರ್ಮಿಕ ಉತ್ಸವಗಳು ಸೇರಿ) ಏಕಾದರೂ     ಬರುತ್ತವೋ ಎಂದು ಅಂದುಕೊಳ್ಳುವ ಪರಿಸ್ಥಿತಿ ಇಂದು  ಇದೆ. ನಾನು ಗಣೇಶೋತ್ಸವವನ್ನಾಗಲೀ, ಇಂತಹ ಇತರ ಉತ್ಸವಗಳನ್ನಾಗಲೀ ವಿರೋಧಿಸುತ್ತಿಲ್ಲ, ಅದನ್ನು ಆಚರಿಸಲಾಗುತ್ತಿರುವ ರೀತಿಯ  ಬಗ್ಗೆ ಮಾತ್ರ ಬೆರಳು ತೋರಿಸುತ್ತಿದ್ದು, ಆಚರಣೆಗಳು ಅರ್ಥಪೂರ್ಣವಾಗಿರಬೇಕೆಂಬ ಕಳಕಳಿ ಮಾತ್ರ ಇಲ್ಲಿದೆ. 
     ಸಂಕಷ್ಟಹರ ಗಣಪತಿ ಪೂಜೆಯನ್ನು  ಇಂದು ಸಾಮೂಹಿಕ ಸನ್ನಿಯಂತೆ ಆಚರಿಸಲಾಗುತ್ತಿದೆ. ಆದರೆ ಎಷ್ಟು ಜನರು ಇದನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ? ಹೆಚ್ಚಿನವರು ಸ್ವಸಹಾಯ ಪದ್ಧತಿಯ ಹೋಟೆಲ್ಲಿನಲ್ಲಿ ಹಣ ಕೊಟ್ಟು ಕಾಫಿ ಕುಡಿದಂತೆ ದೇವಸ್ಥಾನಕ್ಕೆ ಹೋಗಿ ಹಣ ಕೊಟ್ಟು ಚೀಟಿ ಬರೆಸಿ ಹೋಗುತ್ತಾರೆ, ಪ್ರಸಾದ ಕೊಡುವ ಸಮಯಕ್ಕೆ ಬಂದು ಕೈಮುಗಿದು ಪ್ರಸಾದ ಪಡೆದು ಹೋಗುತ್ತಾರೆ. ಪೂಜೆಯ ಸಮಯದಲ್ಲಿ ದೇವಸ್ಥಾನದಲ್ಲಿದ್ದವರೂ ಪರಸ್ಪರ ಮಾತುಕತೆಗಳಲ್ಲಿ ತೊಡಗಿರುತ್ತಾರೆ. ಹಣ ಕೊಟ್ಟು ಪದಾರ್ಥಗಳನ್ನು ಕೊಂಡುಕೊಂಡಂತೆ ಪುಣ್ಯವನ್ನು ಖರೀದಿಸಬಹುದೇ? ಇಂತಹ ಆಚರಣೆಯಿಂದ ಯಾರಿಗೆ ಪ್ರಯೋಜನ? ಯಾರ ಕಷ್ಟಗಳು ಪರಿಹಾರವಾಗುತ್ತದೆ? ಶ್ರದ್ಧೆಯಿಂದ, ಅರ್ಥ ತಿಳಿದುಕೊಂಡು ಮಾಡುವ ಕ್ರಿಯೆಗಳಿಂದ ಮಾತ್ರ ಫಲ ಸಿಗಲು ಸಾಧ್ಯವಲ್ಲವೇ? ಇಲ್ಲದಿದ್ದರೆ ಅವು ತೋರಿಕೆಗೆ ಮಾಡುವ ಆಚರಣೆಗಳಾಗುತ್ತವೆ ಅಷ್ಟೆ. ಇಸ್ಲಾಮ್ ಮತ ಪ್ರಾರಂಭವಾದ ಸಂದರ್ಭದಲ್ಲಿ ಧ್ವನಿವರ್ಧಕವಿರಲಿಲ್ಲ. ಆದರೆ ಇಂದು ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಧ್ವನಿವರ್ಧಿಸಿ ನಮಾಜು, ಉಪದೇಶಗಳನ್ನು ಮಾಡುತ್ತಿರುವುದು ಸರ್ವೇ ಸಾಮಾನ್ಯವಾದ ಸಂಪ್ರದಾಯವಾಗಿಬಿಟ್ಟಿದೆ. ಅದನ್ನು ಕೇಳಲು ಇಚ್ಛಿಸದವರಿಗೂ ಬಲವಂತವಾಗಿ ಕೇಳುವಂತೆ ಮಾಡುತ್ತಿರುವುದು ಒಂದು ರೀತಿಯ ಶಬ್ದಮಾಲಿನ್ಯವಲ್ಲವೇ? 
     ಜಾತ್ರೆ, ಪೂಜೆ, ಇತ್ಯಾದಿಗಳ ಹೆಸರಿನಲ್ಲಿ ದೇವರನ್ನು ಸಂತುಷ್ಟಗೊಳಿಸುವ(?) ಕಾರಣದಿಂದ ಪ್ರಾಣಿಬಲಿ ನೀಡುವ ಸಂಪ್ರದಾಯ ಒಳ್ಳೆಯದೆಂದು ಹೇಳಬಹುದೆ? ಇದನ್ನು ಸಮರ್ಥಿಸುವ ಜನರಿಗೆ ಕಡಿಮೆಯೇನಿಲ್ಲ. ಶಿಕಾರಿಪುರದಲ್ಲಿ ತಾಲ್ಲೂಕು ದಂಡಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಾತ್ರೆಯ ಸಮಯದಲ್ಲಿ ಕೋಣಬಲಿ ತಡೆಯಲು ಒಂದು ಗ್ರಾಮದಲ್ಲಿ  ಪೋಲಿಸರ ನೆರವಿನೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿತ್ತು. ಗ್ರಾಮಸ್ಥರಿಗೆ ಕಾನೂನಿನಲ್ಲಿ ಇರುವ ನಿಷೇಧ, ಉಲ್ಲಂಘಿಸಿದರೆ ಆಗುವ ಪರಿಣಾಮಗಳು, ಇತ್ಯಾದಿ ಕುರಿತು ತಿಳುವಳಿಕೆ ಹೇಳಲಾಗಿತ್ತು. ಮುಂಚಿತವಾಗಿ ನಡೆಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಪಶುವೈದ್ಯರ ಸಹಾಯದಿಂದ ಸಿರಿಂಜಿನಲ್ಲಿ ಕೋಣನ ರಕ್ತವನ್ನು ತೆಗೆದು ಸಾಂಕೇತಿಕವಾಗಿ ದೇವಿಗೆ ಅರ್ಪಿಸಲು ಗ್ರಾಮದ ಮುಖ್ಯಸರು ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಪೋಲಿಸರ ಹಾಗೂ ನಮ್ಮ ಸಿಬ್ಬಂದಿಯ ಕಣ್ಗಾವಲು ಇದ್ದರೂ, ನಂತರ  ಎಲ್ಲರ ಕಣ್ಣುತಪ್ಪಿಸಿ ಕೋಣಬಲಿ ನೀಡಿದ ಪ್ರಸಂಗ ಬೇಸರ, ಮುಜುಗರ ಉಂಟುಮಾಡಿತ್ತು. ಎಲ್ಲಾ ಮಾಧ್ಯಮಗಳಲ್ಲೂ ವಿಷಯ ಅತಿರಂಜಿತವಾಗಿ ಪ್ರಚಾರಗೊಂಡಿತು. ಕೆಲವರ ಮೇಲೆ ಪ್ರಕರಣ ದಾಖಲಿಸಿದರೂ ರಾಜಕೀಯ ನಾಯಕರ ಮಧ್ಯಪ್ರವೇಶ ಪ್ರಕರಣವನ್ನು ದುರ್ಬಲಗೊಳಿಸಿದ್ದು ಸುಳ್ಳಲ್ಲ. ಈ ಪ್ರಕರಣವನ್ನು ರಾಜಕೀಯ ಮಾಡುವ ಸಲುವಾಗಿ ಪರವಾಗಿ ಮತ್ತು ವಿರೋಧವಾಗಿ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಬಳಸಿಕೊಂಡವು. ಅನಿಷ್ಟ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದವರೂ ಸಾತ್ವಿಕ ಕಾರಣಕ್ಕೆ ವಿರೋಧಿಸದೆ ವಿರೋಧಿಗಳನ್ನು ವಿರೋಧಿಸಲು ಮಾತ್ರ ಬಳಸಿದ್ದು ನೋವಿನ ವಿಷಯ. ಮಾಧ್ಯಮಗಳೂ ಕೆಸರೆರಚಾಟಕ್ಕೆ ಸಾಥ್ ನೀಡಿದವೇ ಹೊರತು, ಅವುಗಳಿಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಶಕ್ತಿಯಿದ್ದರೂ ಮಾಡಲಿಲ್ಲ.  ಇಂತಹ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಪ್ರಚಲಿತ ನಾಡಿನ ಕಾನೂನುಗಳನ್ನೂ ಧಿಕ್ಕರಿಸಿ ನಡೆಸುವ ಅಂಧ ಸಂಪ್ರದಾಯಗಳ ಕುರಿತು ತಿಳಿಸುವ ಸಲುವಾಗಿ ಮಾತ್ರ ಇದನ್ನು ಸಾಂಕೇತಿಕವಾಗಿ ಉದಾಹರಿಸಿರುವೆ.  
     ಸಂಪ್ರದಾಯಗಳನ್ನು ಹೇಗೆ ಆಚರಿಸಬೇಕು ಅನ್ನುವುದಕ್ಕಿಂತ ಕೆಟ್ಟ ಸಂಪ್ರದಾಯಗಳನ್ನು ಗುರುತಿಸಿ ಅವುಗಳಿಂದ ದೂರ ಉಳಿಯಲು ಮತ್ತು ಸಾಧ್ಯವಾದರೆ ತಡೆಯಲು ಪ್ರಯತ್ನಿಸುವುದು ಇಂದಿನ ಅಗತ್ಯ. ಮಠ-ಮಂದಿರಗಳು, ಮಸೀದಿಗಳು, ಚರ್ಚುಗಳು, ಇತ್ಯಾದಿಗಳು ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಮತ್ತು ಅರ್ಥರಹಿತ ಸಂಪ್ರದಾಯಗಳನ್ನು ದೂರ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ. ಈ ಕೇಂದ್ರಗಳು ವಾಸ್ತವವಾಗಿ ಸತ್ಕರ್ಮಗಳನ್ನು ಪೋಷಿಸುವ, ಜ್ಞಾನ ಪಸರಿಸುವ ಕೆಲಸ ಮಾಡಬೇಕು. ವಿಷಾದದ ಸಂಗತಿಯೆಂದರೆ ಹೆಚ್ಚಿನವು ಋಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ ಸಂಸ್ಥೆಗಳನ್ನು, ಕಲ್ಯಾಣ ಮಂದಿರಗಳನ್ನು ಕಟ್ಟಿ ಹಣ ಮಾಡುವ ಕೇಂದ್ರಗಳಾಗಿವೆ. ತಿರುಳಿಗಿಂತ ಸಿಪ್ಪೆಗೆ ಹೆಚ್ಚು ಮಾನ್ಯತೆ ಕೊಡಲಾಗುತ್ತಿದೆ. ನಿಜ, ತಿರುಳಿನ ರಕ್ಷಣೆಗೆ ಸಿಪ್ಪೆಯಿರಬೇಕು, ಆದರೆ ಸಿಪ್ಪೆಯೇ ತಿರುಳಾಗಬಾರದು. ಆ ಕಾರಣದಿಂದಾಗಿಯೇ ಉತ್ತರಾಧಿಕಾರಕ್ಕಾಗಿ ಕಚ್ಚಾಡುವ, ಒಡೆತನ ಸಾಧಿಸಬಯಸುವವರ ಕೂಟ ಅಲ್ಲಿ ಮನೆ ಮಾಡಿವೆ. ಮೂಲ ಉದ್ದೇಶ ಮರೆತು ಭೌತಿಕ ಆಸ್ತಿ, ಸಂಪತ್ತು ಕ್ರೋಢೀಕರಿಸಲು ನೀಡುವ ಮಹತ್ವವೇ ಇದಕ್ಕೆ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ. 
     ರೂಢಿಗತ ಸಂಪ್ರದಾಯಗಳಿಗೆ ಹೇಗೆ ಮನಸ್ಸು ಒಗ್ಗಿಕೊಳ್ಳುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಬಲಶಾಲಿ ಆನೆಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಮರವೊಂದಕ್ಕೆ ಅಥವ ಒಂದು ಗೂಟಕ್ಕೆ ಕಟ್ಟಿ ಹಾಕಿದರೆ ಅದು ಬಿಡಿಸಿಕೊಳ್ಳಲು ಪ್ರಯತ್ನವೇ ಮಾಡುವುದಿಲ್ಲ. ಆನೆ ಎಷ್ಟು ಬಲಶಾಲಿಯೆಂದರೆ ಅದಕ್ಕೆ ಆ ಸರಪಳಿಯಾಗಲೀ, ಗೂಟವಾಗಲೀ ಅಥವ ಮರವಾಗಲೀ ಲೆಕ್ಕವೇ ಅಲ್ಲ. ಅದು ಮನಸ್ಸು ಮಾಡಿದರೆ ಸರಪಳಿ ತುಂಡರಿಸಬಲ್ಲದು ಮತ್ತು ಮರವನ್ನು ಕಿತ್ತು ಬಿಸಾಡಬಲ್ಲದು. ಆದರೂ ಆ ಕೆಲಸವನ್ನು ಆನೆ ಮಾಡುವುದಿಲ್ಲ. ಏಕೆಂದರೆ ಚಿಕ್ಕದಾಗಿದ್ದಾಗ ಅದನ್ನು ಅದೇ ರೀತಿ ಕಟ್ಟಿ ಹಾಕಲಾಗುತ್ತಿತ್ತು. ಚಿಕ್ಕದಾಗಿದ್ದರಿಂದ ಬಂಧನದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅದಕ್ಕೆ ಆಗ ಆಗುತ್ತಿರಲಿಲ್ಲ. ಕ್ರಮೇಣ ಅದೇ ಅಭ್ಯಾಸವಾಗಿ ಮರಕ್ಕೆ ಕಟ್ಟಿ ಹಾಕಿದರೆ ಬಿಡಿಸಿಕೊಳ್ಳಲಾಗುವುದಿಲ್ಲವೆಂಬ ಭಾವ ಗಟ್ಟಿಗೊಂಡು ಅದು ದೊಡ್ಡದಾದ ಮೇಲೂ ಹಾಗೆ ಕಟ್ಟಿಹಾಕಿದರೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರಲೇ ಇರಲಿಲ್ಲ. ನಮ್ಮ ಸ್ಥಿತಿ ಸಹ ಅದೇ ರೀತಿ ಇದೆ. ನಮಗೆ ವಿಚಾರ ಮಾಡುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಕೆಲವು ಸಂಪ್ರದಾಯಗಳು ಅರ್ಥಹೀನವೆಂದು ನಮಗೆ ತಿಳಿಯುತ್ತದೆ, ಮನಸ್ಸು ಮಾಡಿದರೆ ಅದನ್ನು ಧಿಕ್ಕರಿಸುವ, ಮುಂದುವರೆಸದಿರುವ ಶಕ್ತಿ ನಮಗಿದೆ, ಆದರೂ ನಾವು ಹಾಗೆ ಮಾಡುವುದಿಲ್ಲ. 'ಅಪ್ಪ ಹಾಕಿದ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಳ್ಳಲಾಗುವುದೇ' ಎಂಬ ಪ್ರಚಲಿತ ಗಾದೆ ಮಾತು ತಿಳಿಸುವುದೂ ವಿಚಾರ ಮಾಡಿ ಮುಂದುವರೆಯಿರಿ ಎಂದೇ. ಮರದ ನೆರಳಿನಲ್ಲಿ ಬಾಳೋಣ, ಆದರೆ ಏಕೆ ನೇಣು ಹಾಕಿಕೊಳ್ಳಬೇಕು? ಸಾರಾಸಗಟಾಗಿ ಎಲ್ಲವನ್ನೂ ತಳ್ಳಿಹಾಕಬೇಕಾಗಿಲ್ಲ. ಕುಟುಂಬಕ್ಕೆ, ಸುತ್ತಮುತ್ತಲಿನವರಿಗೆ ಹಿತವೆನಿಸುವ ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬಹುದು, ಒಳ್ಳೆಯದಾದ ಹೊಸ ಸಂಪ್ರದಾಯಗಳನ್ನು ಹುಟ್ಟು ಹಾಕಬಹುದು, ಆದರೆ ಅನಿಷ್ಠ ಸಂಪ್ರದಾಯಗಳನ್ನು ನಿಲ್ಲಿಸುವ ಮತ್ತು ಸದ್ಯಕ್ಕೆ ಒಳ್ಳೆಯದೆನಿಸಿದರೂ ಕಾಲಾನುಕಾಲಕ್ಕೆ ಅದರ ಆಚರಣೆಯಿಂದ ಆಗುವ ಪರಿಣಾಮಗಳನ್ನೂ ಗಮನಿಸಿ ಯೋಗ್ಯತಾನುಸಾರ ನಿರ್ಣಯಿಸಿ ಅಂತಹವುಗಳನ್ನು ಕೈಬಿಡುವ ಬಗ್ಗೆ ನಿರ್ಧರಿಸುವುದು ಇಂದಿನ ಅಗತ್ಯವಾಗಿದೆ. ಸಂಪ್ರದಾಯಗಳು ನಮ್ಮನ್ನು ಕಟ್ಟಿಹಾಕುವ ಸರಪಳಿಗಳಾಗದೆ, ನಮ್ಮನ್ನು ಒಳ್ಳೆಯ ದಾರಿಯಲ್ಲಿ ಕೈಹಿಡಿದು ಮುನ್ನಡೆಸುವ ದಾರಿದೀಪಗಳಾಗಲಿ. 


-ಕ.ವೆಂ. ನಾಗರಾಜ್.
***************
19.12.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಪತ್ರಿಕೆಯಲ್ಲಿ ಪ್ರಕಟಿತ:

ಬುಧವಾರ, ಡಿಸೆಂಬರ್ 10, 2014

ನೀವು ಯಾವ ಜನ?


     "ನೀವು ಯಾವ ಜನ?" - ನಿಮ್ಮದು ಯಾವ ಜಾತಿಯೆಂದು ಕೇಳಿ ತಿಳಿದುಕೊಳ್ಳುವ ಸಲುವಾಗಿ ಎದುರಾಗಬಹುದಾದ ಪ್ರಶ್ನೆಯಿದು. ಕೆಲವರಿಗೆ ಈ ಪ್ರಶ್ನೆಯಿಂದ ಮುಜುಗರವೂ ಆಗುತ್ತದೆ. ಬರುವ ಉತ್ತರ ಬ್ರಾಹ್ಮಣ, ಲಿಂಗಾಯತ, ಗೌಡರು, ಕ್ರಿಶ್ಚಿಯನ್, ಮುಸ್ಲಿಮ್, ಇತ್ಯಾದಿಗಳಿದ್ದರೆ, ಮರುಪ್ರಶ್ನೆ ಬರುತ್ತದೆ, "ಅದರಲ್ಲಿ ಯಾರು?" "ಸ್ಮಾರ್ತ, ವೈಷ್ಣವ, ಮಾಧ್ವ, ದಾಸಗೌಡ, ಮುಳ್ಳುಗೌಡ, ಪಂಚಮಸಾಲಿ, ಆರಾಧ್ಯ, ಶಿಯಾ, ಸುನ್ನಿ, ಪ್ರಾಟೆಸ್ಟೆಂಟ್, . . . ." - ಮರು ಉತ್ತರ ಹೀಗೆ ಸಾಗುತ್ತದೆ. ಅಷ್ಟಕ್ಕೇ ನಿಲ್ಲುವುದಿಲ್ಲ. ಆ ಒಳಜಾತಿಯಲ್ಲಿ ಒಳಪಂಗಡಗಳು, ಊರು, . ., ಹೀಗೆ ಕುಲಾನ್ವೇಷಣೆ ಮುಂದುವರೆಯುತ್ತದೆ. ಇಬ್ಬರದೂ ಒಂದೇ ಜಾತಿ, ಒಳಜಾತಿಗಳಾದರೆ ಆತ್ಮೀಯತೆಯ ಬಂಧ ಗಟ್ಟಿಯಾಗುತ್ತದೆ. ಏಕೆ ಹೀಗೆ? ನಮ್ಮವರು, ಇತರೆಯವರು ಎನ್ನುವ ಇಂತಹ ಭೇದ ಕೇವಲ ಜಾತಿಗೆ ಮಾತ್ರ ಸೀಮಿತವಲ್ಲ. ಮಾಡುವ ವೃತ್ತಿ, ರಾಜಕೀಯ, ಕಲಿಯುವ ಕಲಿಕೆ, ಊರು, ಸ್ವಭಾವ, ಅಂತಸ್ತು, ಇತ್ಯಾದಿಗಳಿಗೂ ಅನ್ವಯವಾಗುತ್ತದೆ. ಈ 'ನಮ್ಮವರು' ಪ್ರತಿಯೊಂದರಲ್ಲೂ 'ಇತರರಿಗಿಂತ' ಮುಂದಿರಬೇಕು ಎಂಬ ಭಾವನೆ ಎಲ್ಲರಲ್ಲೂ ಅಂತರ್ಗತವಾಗಿರುತ್ತದೆ. ಈ 'ನಮ್ಮವರು'  ಎಂಬ ಭಾವನೆ ಪರಿಚಯವಿಲ್ಲದವರನ್ನೂ ಒಗ್ಗೂಡಿಸುತ್ತದೆ, 'ಇತರರು' ಎನ್ನುವ ಭಾವನೆಯೂ ಸಹ ಪರಿಚಯವಿರುವರನ್ನೂ ಸಂಶಯದಿಂದ ನೋಡುವಂತೆ ಮಾಡುತ್ತದೆ. 
     ಇಂದು ನಾವು ಕಾಣುತ್ತಿರುವ ದ್ವೇಷ, ಜಗಳ, ಭಿನ್ನಮತ, ಇತ್ಯಾದಿಗಳ ಮೂಲವೇ ಈ 'ನಮ್ಮವರು', 'ಇತರರು' ಅನ್ನುವ ಭಾವನೆ. ನಮ್ಮ ದೇವರೇ ಬೇರೆ, ನಮ್ಮ ಧರ್ಮವೇ ಬೇರೆ, ನಮ್ಮ ಜಾತಿಯೇ ಬೇರೆ, ನಮ್ಮ ಆಚಾರವೇ ಬೇರೆ, ನಮ್ಮ ವಿಚಾರವೇ ಬೇರೆ - ಹೀಗೆ ನಾವೇ ಬೇರೆ, ನೀವೇ ಬೇರೆಗಳನ್ನು ಬೆಳೆಸುತ್ತಾ, ಪೋಷಿಸುತ್ತಾ ಬಂದುದರ ಫಲವಿದು. ಈ ಬೇರೆಗಳು ಬೆಳೆಯುತ್ತಾ ಬೆಳೆಯುತ್ತಾ ನಮ್ಮವರಲ್ಲೇ ನಮ್ಮ ಒಳಗಿನವರು, ಒಳಗಿನ ಒಳಗಿನವರು ಸಹ ಬೆಳೆಯುತ್ತಾ ಹೋದರು. ಎಷ್ಟು ಧರ್ಮಗಳು, ಎಷ್ಟು ಜಾತಿಗಳು, ಎಷ್ಟು ಪಂಗಡಗಳು, ಒಳಪಂಗಡಗಳು!! ಒಂದೇ ಧರ್ಮ, ಜಾತಿ, ಪಂಗಡಗಳವರಲ್ಲೇ ವಿಭಿನ್ನ ರೀತಿಯ ಆಚಾರ-ವಿಚಾರಗಳು!! ನಮ್ಮವರುಗಳೇ ನಮಗೆ ಪರಕೀಯರಾಗುತ್ತಾ ಹೋದರು. ಈ ಭಾವನೆ ಪರಸ್ಪರರಲ್ಲಿ ದ್ವೇಷ, ವೈಮನಸ್ಸುಗಳನ್ನು ಉಂಟುಮಾಡಿ, ಒಂದಾಗದ ವಾತಾವರಣ ನಿರ್ಮಾಣವಾಯಿತು. ಈ ರೀತಿಯ ಒಳಜಗಳ, ದ್ವೇಷಾಸೂಯೆಗಳೇ ವಿದೇಶೀಯರು ನಮ್ಮ ದೇಶದ ಮೇಲೆ ಸಹಸ್ರ ವರ್ಷಗಳವರೆಗೆ ಹಿಡಿತ ಸಾಧಿಸಲು ಸಹಕಾರಿಯಾದವು. ಈ ರೀತಿ ಪರಸ್ಪರರನ್ನು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ ಇಬ್ಬರನ್ನೂ ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವ 'ಒಡೆದು ಆಳುವ' ನೀತಿಯನ್ನು ಬ್ರಿಟಿಷರು ಯಶಸ್ವಿಯಾಗಿ ನಮ್ಮ ದೇಶದ ಮೇಲೆ ಪ್ರಯೋಗಿಸಿದ್ದು ಈಗ ಇತಿಹಾಸ. 
     ನಮ್ಮಲ್ಲಿ ಈ 'ನಮ್ಮವರು', 'ಇತರರು' ಭಾವನೆ ಎಷ್ಟು ರಕ್ತಗತವಾಗಿದೆಯೆಂದರೆ ಯಾರಾದರೂ ದಾರ್ಶನಿಕರು, ಸಂತರು ಭೇದ ಭಾವಗಳನ್ನು ದೂರಮಾಡಿ ಜಾತಿಗಳನ್ನು ಒಂದುಗೂಡಿಸಲು ಮಾಡುವ ಪ್ರಯತ್ನಕ್ಕೆ ಓಗೊಟ್ಟು ಒಂದಾಗುವವರದ್ದೇ ಮತ್ತೊಂದು ಬೇರೆ ಧರ್ಮ/ಜಾತಿ ಆಗಿಬಿಡುತ್ತದೆ. ಇರುವ ಗುಂಪುಗಳ ಜೊತೆಗೆ ಮತ್ತೊಂದು ಹೊಸ ಗುಂಪು ಸೇರ್ಪಡೆಯಾಗುತ್ತದೆ. ಮಹಾನ್ ಮಾನವತಾವಾದಿ ಬಸವಣ್ಣನವರ ಜಾತಿಗಳನ್ನು ಒಗ್ಗೂಡಿಸುವ ಕರೆಗೆ ಓಗೊಟ್ಟು ಹಿಂಬಾಲಿಸಿದವರದ್ದೇ ಒಂದು ಪ್ರತ್ಯೇಕ ಜಾತಿಯಾದುದನ್ನು ಉದಾಹರಿಸಬಹುದು. ಇವರು ತಮ್ಮ ಧರ್ಮವೇ ಪ್ರತ್ಯೇಕವಾಗಿದ್ದು ಅದನ್ನು ಪ್ರತ್ಯೇಕ ಧರ್ಮ ಎಂದು ನಮೂದಿಸಬೇಕೆಂದು ರಾಷ್ಟ್ರೀಯ ಜನಗಣತಿ ಸಮಯದಲ್ಲಿ ಕರೆ ಕೊಡುವುದನ್ನೂ ಕಂಡಿದ್ದೇವೆ. ಶಂಕರಾಚಾರ್ಯರ ತತ್ವ, ಸಿದ್ಧಾಂತಗಳನ್ನು ಒಪ್ಪುವವರು ಸ್ಮಾರ್ತರೆನಿಸಿದರು. ಮಧ್ವಾಚಾರ್ಯರ ಅನುಯಾಯಿಗಳು ಮಾಧ್ವರಾದರು. ರಾಮಾನುಜರ ವಿಚಾರಗಳನ್ನು ಒಪ್ಪಿದವರು ವೈಷ್ಣವರೆನಿಸಿದರು. ಹೀಗೆ ಜಾತಿಗಳು ಹೆಚ್ಚುತ್ತಾ ಹೋದವು. ವಿಭಿನ್ನ ಆಚಾರ-ವಿಚಾರಗಳನ್ನು ರೂಢಿಸಿಕೊಂಡರು. ತಾವೇ ಹೆಚ್ಚು ಎಂದು ತರ್ಕ-ವಿತರ್ಕಗಳಲ್ಲಿ ಮುಳುಗಿಹೋದರು. ಜಾತಿಗಳು ಹೆಚ್ಚಿದಂತೆ ದೇವರುಗಳೂ ಹೆಚ್ಚಾಗುತ್ತಾ ಹೋದರು. ಸಮಾಜಕ್ಕೆ ಮಾರ್ಗದರ್ಶಿಯಾದ ಆದರ್ಶಪುರುಷರುಗಳನ್ನೂ, ಸಾಧು-ಸಂತರನ್ನೂ ದೇವರ ಮಟ್ಟಕ್ಕೆ ಏರಿಸಿ ದೇವರುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿರುವುದನ್ನೂ ಕಂಡಿದ್ದೇವೆ, ಕಾಣುತ್ತಲೂ ಇದ್ದೇವೆ. 
     ಒಂದು ರೀತಿಯಲ್ಲಿ ನೋಡಿದರೆ ಜಗತ್ತು ನಡೆದಿರುವುದೇ ಭಿನ್ನತೆಯಿಂದ! ಭಿನ್ನತೆಯಿರುವುದರಿಂದಲೇ ಜಗತ್ತಿಗೆ ಅರ್ಥ ಬಂದಿರುವುದು. ಆದರೆ ಈ ಭಿನ್ನತೆ ಪರಸ್ಪರರ ಉತ್ಕರ್ಷಕ್ಕೆ ಕಾರಣವಾಗಬೇಕೇ ಹೊರತು ಅವನತಿಗಲ್ಲ. ಆ ದೇವನ ಸೃಷ್ಟಿಯಲ್ಲೇ ಇರುವ ಭಿನ್ನತೆಗಳು ಪರಸ್ಪರರಿಗೆ ಪೂರಕವಾಗಿವೆ. ಆದರೆ ಮಾನವ ನಿರ್ಮಿತ ಭಿನ್ನತೆಗಳು ಅವನನ್ನು ಪಾತಾಳಕ್ಕೆ ತಳ್ಳುತ್ತಿವೆ. ಭಿನ್ನತೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಆಗದಿರುವುದನ್ನು ಅರ್ಥ ಮಾಡಿಕೊಂಡು ಭಿನ್ನತೆಗಳನ್ನು ಉನ್ನತಿಗೆ ಸಹಕಾರಿಯಾಗುವಂತೆ ಯಾರಿಗೂ ನೋವಾಗದಂತೆ ಸರ್ವ ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಬಳಸುವುದನ್ನು ಉತ್ತೇಜಿಸಬೇಕಿದೆ. 
     ಇಂದು ಪ್ರಚಲಿತವಿರುವ ಅನೇಕ ಜಾತಿಗಳಿಗೆ, ಜಾತಿಪದ್ಧತಿಗೆ ವೇದಗಳೇ ಮೂಲವೆಂದು ಆರೋಪಿಸಲಾಗುತ್ತಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಚಾತುರ್ವಣ್ಯಗಳನ್ನು ಜಾತಿಗಳೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಯಾವುದೋ ಸುದೀರ್ಘ ಹಿಂದಿನ ಕಾಲದಲ್ಲಿ ಜಾತಿಯನ್ನು ಹುಟ್ಟಿನಿಂದ ಬರುವುದೆಂದು ಪರಿಗಣಿಸಲ್ಪಟ್ಟು, ಅದೇ ಮುಂದುವರೆದುಕೊಂಡು ಬಂದಿದ್ದು, ಅದನ್ನು ಸಂಪ್ರದಾಯವಾದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪೋಷಿಸಿಕೊಂಡು ಬರುತ್ತಿರುವುದೂ ಸತ್ಯ. ಆದರೆ, ಸತ್ಯದ ಹಿನ್ನೆಲೆಯಲ್ಲಿ ಪೂರ್ವಾಗ್ರಹಪೀಡಿತರಾಗದೆ ಅಧ್ಯಯನ ಮಾಡುವವರಿಗೆ ವೇದಗಳಲ್ಲಿ ಜಾತಿಗಳು ಎಂದೂ ಹುಟ್ಟಿನಿಂದ ಬರುವುದೆಂದು ಪ್ರತಿಪಾದಿಸಿರುವುದು ಕಂಡುಬರುವುದಿಲ್ಲ. [ಇಂದಿನ ಆಡಳಿತ ವ್ಯವಸ್ಥೆಯೂ ಹುಟ್ಟಿನಿಂದ ಬರುವ ಜಾತಿಗೆ ಅನಗತ್ಯ ಪ್ರಾಧಾನ್ಯತೆ ನೀಡಿ, ಅಧಿಕಾರದ ಸಲುವಾಗಿ ಅದನ್ನು ಬಲಗೊಳಿಸುತ್ತಿರುವುದು ಕಠೋರ ಸತ್ಯ. ಇದರಿಂದಾಗಿ ದೇಶ ಸಂಕಟದ ಸಮಯಗಳಲ್ಲಿ ಒಂದಾಗಿ ನಿಲ್ಲುವುದೂ ದುಸ್ತರವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಸುಳ್ಳಲ್ಲ.] ವಿಪ್ರ ಸಮುದಾಯದವರಲ್ಲೇ 'ನಾವು ಋಗ್ವೇದಿಗಳು', 'ನಾವು ಯಜುರ್ವೇದಿಗಳು', ಇತ್ಯಾದಿ ಹೇಳಿಕೊಳ್ಳುವುದನ್ನು ಕಾಣುತ್ತೇವೆ. ಋಗ್ವೇದಿಗಳೆಂದರೆ ಋಗ್ವೇದವನ್ನು ಅಭ್ಯಸಿಸಿದವರು, ಯಜುರ್ವೇದಿಗಳೆಂದರೆ ಯಜುರ್ವೇದವನ್ನು ಅಭ್ಯಸಿಸಿದವರು ಅಷ್ಟೆ. ಅವರೇ ಬೇರೆ, ಇವರೇ ಬೇರೆ ಅಂತಲ್ಲ. ಅದೇ ರೀತಿ ಎರಡು ವೇದಗಳನ್ನು ಅರಿತವರು ದ್ವಿವೇದಿಗಳು, ಮೂರು ಮತ್ತು ನಾಲ್ಕು ವೇದಗಳನ್ನು ಅಧ್ಯಯನ ಮಾಡಿದವರು ಅನುಕ್ರಮವಾಗಿ ತ್ರಿವೇದಿ ಮತ್ತು ಚತುರ್ವೇದಿಗಳೆಂದು ಕರೆಯುತ್ತಾರೆ. ಆದರೆ ಋಗ್ವೇದಿ, ಯಜುರ್ವೇದಿ, ಇತ್ಯಾದಿ ಗುರುತಿಸಿಕೊಳ್ಳುವವರ ಪೈಕಿ ಎಷ್ಟು ಜನರು ನಿಜವಾಗಿಯೂ ಇಂದು ಆ ವೇದಗಳನ್ನು ಅಭ್ಯಸಿಸಿದ್ದಾರೆ?  
     ವೇದಗಳ ಮಂತ್ರಗಳನ್ನು ಅವುಗಳ ಗುಣ ಲಕ್ಷಣಗಳಿಗನುಸಾರವಾಗಿ ಮೂರು ವಿಧವಾಗಿ ಗುರುತಿಸುತ್ತಾರೆ. ಛಂದೋಬದ್ಧವಾದ ಮಂತ್ರಗಳನ್ನು 'ಋಕ್ಕು'ಗಳು ಎಂತಲೂ, ಗದ್ಯಮಯವಾದ ಮಂತ್ರಗಳನ್ನು 'ಯಜುಷ್' ಎಂತಲೂ ಮತ್ತು ಗೀತಾತ್ಮಕವಾಗಿ ಹೇಳಬಹುದಾದುದನ್ನು 'ಸಾಮ'ಗಳು ಎಂದು ಹೇಳುತ್ತಾರೆ. ಈ ಮೂರೂ ಪ್ರಕಾರಗಳು ನಾಲ್ಕು ವೇದಗಳಲ್ಲೂ ಕಾಣಸಿಗುತ್ತವೆ. ಋಗ್ವೇದ ಜ್ಞಾನಪ್ರಧಾನ, ಯಜುರ್ವೇದ ಕರ್ಮಪ್ರಧಾನ, ಸಾಮವೇದ ಉಪಾಸನಾಪ್ರಧಾನವಾಗಿದ್ದು, ಅಥರ್ವವೇದ ಈ ಮೂರೂ ಅಂಶಗಳನ್ನು ಒಳಗೊಂಡದ್ದಾಗಿದೆ. ಇವುಗಳಲ್ಲಿ ಯಾವುದು ಬೇಡ? ಜ್ಞಾನ ಮಾತ್ರ ಸಾಕು, ಕರ್ಮ ಮತ್ತು ಉಪಾಸನೆಗಳು ಬೇಡವೆನ್ನಬಹುದೇ? ಹಾಗೆಯೇ ಕೇವಲ ಉಪಾಸನೆ ಮಾಡೋಣ, ಜ್ಞಾನ ಮತ್ತು ಕರ್ಮಗಳು ಬೇಕಿಲ್ಲವೆನ್ನಲಾದೀತೆ? ನೈಜವಾಗಿ ಧಾರ್ಮಿಕನೆನಿಸಿಕೊಳ್ಳಲು ಜ್ಞಾನ, ಕರ್ಮ, ಉಪಾಸನೆಗಳು ಮೂರೂ ಅವಶ್ಯಕವೇ ಆಗಿದೆ. ಒಬ್ಬ ಋಗ್ವೇದಿ ಯಜುರ್ವೇದಿಯಾಗಬಾರದೆಂದೇನಿಲ್ಲ. ಇತರ ವೇದಗಳನ್ನು ಅಧ್ಯಯನ ಮಾಡಬಾರದೆಂದಿಲ್ಲ. ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ. ನಾಲ್ಕೂ ವೇದಗಳು ಪ್ರಜ್ಞಾವಂತರ ಅಧ್ಯಯನಕ್ಕೆ ಅತ್ಯಂತ ಯೋಗ್ಯವಾಗಿವೆ. 
     'ನಮ್ಮವರು', 'ಇತರರು' ಎಂಬವು ನಮ್ಮ ಸೃಷ್ಟಿಯಾಗಿವೆ, ಭಗವಂತನ ಸೃಷ್ಟಿಯಲ್ಲ. ಭಗವಂತನ ಸೃಷ್ಟಿಯಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಒಂದು ಉದಾಹರಣೆ ನೋಡೋಣ. ಅನೇಕ ರೀತಿಯ ವೈದ್ಯಕೀಯ ಪದ್ಧತಿಗಳಿವೆ - ಆಯುರ್ವೇದ, ಅಲೋಪತಿ, ಹೋಮಿಯೋಪತಿ, ಇತ್ಯಾದಿ, ಇತ್ಯಾದಿ. ಇವುಗಳಲ್ಲಿ ಯಾವುದು ಮೇಲು? ಯಾವುದು ಕೀಳು? ಎಲ್ಲಾ ವೈದ್ಯಕೀಯ ಶಾಸ್ತ್ರಗಳ ಉದ್ದೇಶ ಒಂದೇ - ಆರೋಗ್ಯಭಾಗ್ಯವನ್ನು ಕಾಪಾಡುವುದು. ಪ್ರತಿಯೊಂದು ವಿಧಾನಕ್ಕೂ ಈಗಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮುಂದುವರೆಯಲು ಅವಕಾಶಗಳು ಮುಕ್ತವಾಗಿವೆ. ವೈದ್ಯರುಗಳಲ್ಲೇ ಹಲವು ವಿಶೇಷ ತಜ್ಞವೈದ್ಯರಿದ್ದಾರೆ - ನರರೋಗ ತಜ್ಞ, ಹೃದಯರೋಗ ತಜ್ಞ, ನೇತ್ರ ತಜ್ಞ, ದಂತ ತಜ್ಞ, ಮನೋರೋಗ ತಜ್ಞ, ಹೀಗೆ ಹಲವಾರು ವಿಭಾಗಗಳಲ್ಲಿ ಪರಿಣತರಿದ್ದಾರೆ. ಇವರಲ್ಲಿ ಯಾರು ಹೆಚ್ಚು ಮತ್ತು ಯಾರು ಕಡಿಮೆ? ಒಬ್ಬ ವೈದ್ಯರ ಮಗ ವೈದ್ಯನೇ ಆಗಬೇಕೆಂದಿದೆಯೇ? ವಕೀಲರ ಮಕ್ಕಳು ವಕೀಲರೇ ಆಗಿರುತ್ತಾರೆಯೇ? ಇದೇ ವಾದವನ್ನು ಜಾತಿಗಳ ವಿಚಾರದಲ್ಲೂ ಅನ್ವಯಿಸಬಹುದಲ್ಲವೇ? ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ನೀಡಿ, 'ಒಡೆದು ಆಳುವ' ವ್ಯವಸ್ಥೆ ಇರುವವರೆಗೂ ಜಾತಿ ಆಧಾರಿತ ಮೇಲು-ಕೀಳುಗಳಿಗೆ ಅವಕಾಶವಿದ್ದೇ ಇರುತ್ತದೆ. 
ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ ||
ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]

     "ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಉನ್ನತ ಸ್ಥಿತಿಗೆ ಏರಬಲ್ಲವರಾಗಿದ್ದಾರೆ" ಎಂಬ ಈ ವೇದಮಂತ್ರದ ಕರೆ  ನಮಗೆ ಏಕೆ ಕೇಳಿಸುವುದಿಲ್ಲ?



     ವಿವೇಕಾನಂದರ ಈ ನುಡಿ ಮಾನವತೆಯ ಹಂಬಲಿಗರಿಗೆ ಪ್ರೇರಕವಾಗಿದೆ: "ನಿಜವಾದ ಧರ್ಮವೆಂದರೆ ಮಾತಲ್ಲ, ಸಿದ್ಧಾಂತಗಳಲ್ಲ ಅಥವ ಶಾಸ್ತ್ರಗಳಲ್ಲ ಅಥವ ಮತವಲ್ಲ. ಅದು ಆತ್ಮ ಮತ್ತು ದೇವರ ನಡುವಣ ಸಂಬಂಧ. ಧರ್ಮವೆಂದರೆ ದೇವಸ್ಥಾನಗಳನ್ನು ಕಟ್ಟುವುದಲ್ಲ ಅಥವ ಚರ್ಚುಗಳನ್ನು ನಿರ್ಮಿಸುವುದಲ್ಲ ಅಥವ ಸಾಮೂಹಿಕವಾಗಿ ಪೂಜಿಸುವುದನ್ನು ಒಳಗೊಂಡಿಲ್ಲ. ಅದು ಪುಸ್ತಕಗಳಲ್ಲಿ ಅಥವ ಪದಗಳಲ್ಲಿ ಅಥವ ಉಪನ್ಯಾಸಗಳಲ್ಲಿ ಅಥವ ಸಂಸ್ಥೆಗಳಲ್ಲಿ ಕಾಣುವಂತಹುದಲ್ಲ. ನಾವು ದೇವರನ್ನು ಅರಿಯಬೇಕು, ಅನುಭವಿಸಬೇಕು, ದೇವರೊಡನೆ ಸಂಭಾಷಿಸಬೇಕು. ಅದು ಧರ್ಮ." ದೇವರನ್ನು ಅರಿಯುವ ಕ್ರಿಯೆಗೆ ಜ್ಞಾನ, ಕರ್ಮ, ಉಪಾಸನೆಗಳು ಸಾಧನಾಪಥಗಳು. ಈ ಜ್ಷಾನ ಕರ್ಮ, ಉಪಾಸನೆಗಳು ಯಾವುದೇ ಒಂದು ಜಾತಿಯ, ಒಂದು ವರ್ಗದ, ಒಂದು ಧರ್ಮದ ಸ್ವತ್ತಲ್ಲ. ಎಲ್ಲಾ ಮಾನವರ ಸ್ವತ್ತು ಅದು, ಆಸಕ್ತಿ ಇರುವ ಯಾರೇ ಆದರೂ ಅದನ್ನು ಪಡೆಯಬಹುದು, ಮಾಡಬಹುದು, ಅನುಷ್ಠಾನಕ್ಕೆ ತರಬಹುದು. ಈಗ ಹೇಳಿ, ನೀವು ಯಾವ ಜನ? 
-ಕ.ವೆಂ.ನಾಗರಾಜ್.
**************
12.11.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಡಿಸೆಂಬರ್ 7, 2014

ತಪ್ಪು ನಮ್ಮಲ್ಲಿಯೇ ಇದೆ!


     'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನದ್ದೇನೂ ತಪ್ಪಿಲ್ಲ. ಅವನನ್ನು ಬಲಿಪಶು ಮಾಡಿದ್ದಾರೆ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ ಸಹವಾಸದಿಂದ ಹಾಳಾದಳು', 'ಅವನು ರಾಮಚಂದ್ರ. ಆದರೆ ಆ ಮಿಟಕಲಾಡಿ ಅವನನ್ನು ಬಲೆಗೆ ಹಾಕಿಕೊಂಡಿದ್ದಾಳೆ', 'ಮೊದಲು ಇವನು ಹೀಗಿರಲಿಲ್ಲ, ಪೋಲಿ ಪಟಾಲಮ್ ಸೇರಿ ಕೆಟ್ಟುಹೋದ', 'ನಮ್ಮೂರಿನಲ್ಲಿದ್ದಾಗ ಹೇಗಿದ್ದಳು, ಬೆಂಗಳೂರಿಗೆ ಸೇರಿದ್ದೇ ಸೇರಿದ್ದು, ತಲೆಯೇ ನಿಲ್ಲುತ್ತಿಲ್ಲ', 'ನಮ್ಮ, ಪಕ್ಕದ ಮನೆಯಲ್ಲೇ ಅವನು ಬಾಡಿಗೆಗೆ ಇದ್ದ, ಬಹಳ ಸಂಭಾವಿತ. ಅಂಥವನು ಉಗ್ರಗಾಮಿ ಎಂದರೆ ನಂಬಲೇ ಆಗುತ್ತಿಲ್ಲ' - ಇಂತಹ ಮಾತುಗಳು ಕಿವಿಗೆ ಬೀಳುತ್ತಿರುತ್ತವೆ. ಇದರಲ್ಲಿ ಹೊರಹೊಮ್ಮುವ ಮುಖ್ಯಾಂಶವೆಂದರೆ ತಪ್ಪು ನಮ್ಮದಲ್ಲ, ನಮ್ಮವರದಲ್ಲ, ಬೇರೆಯವರದು. ಇದು ಇಲ್ಲಿಗೇ ನಿಲ್ಲುವುದಿಲ್ಲ. ನಮ್ಮ ತಪ್ಪುಗಳು, ಸೋಲುಗಳು, ಕೆಟ್ಟ ಸಂಗತಿಗಳಿಗೆಲ್ಲಾ ಕಾರಣ ನಾವಲ್ಲ, ಬೇರೆಯವರೇ ಎಂದು ವಾದಿಸುತ್ತೇವೆ. ಆದರೆ, ಯಶಸ್ಸುಗಳಿಗೆ, ಒಳ್ಳೆಯ ಸಂಗತಿಗಳಿಗೆಲ್ಲಾ ನಾವು ಮಾತ್ರ ಕಾರಣರು ಎಂದು ನಂಬುತ್ತೇವೆ.
     ವಿವೇಚನೆ ಮಾಡೋಣ, ಯಾರಾದರೂ ಇನ್ನೊಬ್ಬರ ಕಾರಣದಿಂದ ಹಾಳಾಗುತ್ತಾರೆಯೇ ಎಂಬುದು ಸಂಶೋಧನೆಗೆ ಅರ್ಹವಾದ ವಿಚಾರ. ಇತರರಿಂದ ನಮಗೆ ತೊಂದರೆಯಾಗಬಹುದು, ಕೇಡಾಗಬಹುದು. ಆದರೆ ಆ ತೊಂದರೆಯಲ್ಲಿ ನಮ್ಮ ಪಾಲೂ ಇರಬಹುದಲ್ಲವೇ? ಒಂದು ಸರಳ ಉದಾಹರಣೆ ನೋಡೋಣ. ಮಾವಿನಮರ ಮತ್ತು ಬೇವಿನಮರ ಅಕ್ಕ ಪಕ್ಕದಲ್ಲಿ ಇವೆಯೆಂದು ಭಾವಿಸೋಣ. ಬೇವಿನಮರದ ಪಕ್ಕದಲ್ಲಿರುವ ಮಾವಿನಮರದ ಹಣ್ಣುಗಳು ಕಹಿಯಾಗಿರುವುವೇ? ಮಾವಿನಮರದ ಪ್ರಭಾವದಿಂದ ಬೇವಿನ ಕಹಿಯಲ್ಲಿ ವ್ಯತ್ಯಾಸವಾಗುವುದೇ? ಒಂದು ವೇಳೆ ಮಾವಿನಮರ ಇದ್ದ ಸ್ಥಳದಲ್ಲಿ ಬೇವಿನಮರ ಮತ್ತು ಬೇವಿನಮರ ಇದ್ದ ಸ್ಥಳದಲ್ಲಿ ಮಾವಿನಮರ ಇದ್ದಿದ್ದರೆ? ಆಗಲೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ಎರಡು ಮರಗಳು ಇರುವ ಭೂಮಿಯ ಗುಣ ಒಂದೇ. ಆದರೆ ಮಾವಿನಮರ ಭೂಮಿಯಲ್ಲಿ ತನಗೆ ಬೇಕಾದ ಸಾರವನ್ನು ಮಾತ್ರ ಹೀರಿಕೊಳ್ಳುತ್ತದೆ. ಬೇವಿನಮರವೂ ಅಷ್ಟೆ. ಮಾವು ಮತ್ತು ಬೇವಿನ ಮರಗಳಿಗೆ ವಿಭಿನ್ನ ಫಲಗಳನ್ನು ನೀಡುವ ಆಯ್ಕೆಯಿಲ್ಲ. ಮನುಷ್ಯನ ವಿಷಯದಲ್ಲಿ ಈ ತತ್ವ ಅನ್ವಯಿಸಿ ನೋಡೋಣ. ವಿವೇಚನೆ ಮಾಡುವ ಶಕ್ತಿಯಿರುವ ಮನುಷ್ಯ ವಿಚಿತ್ರ ಜೀವಿ, ಅದ್ಭುತ ಜೀವಿ, ಅವನೇ ಬೇರೆ, ಅವನ ರೀತಿಯೇ ಬೇರೆ. ಅವನಲ್ಲಿ ಒಳ್ಳೆಯ ಮತ್ತು ಕೆಟ್ಟ ಅಂಶಗಳೆರಡೂ ಇರುತ್ತವೆ. ಮರದ ಬೇರುಗಳು ಹೇಗೆ ನೀರಿನ ಸೆಲೆಯಿರುವ ಕಡೆಗೆ ಚಾಚಿ ಮುನ್ನಡೆಯುವುವೋ ಅದೇ ರೀತಿ ಒಳ್ಳೆಯ ಅಂಶ ಪ್ರಧಾನವಾಗಿರುವ ವ್ಯಕ್ತಿ ಅಂತಹವರದೇ ಸಹವಾಸ ಇಷ್ಟಪಡುತ್ತಾನೆ. ಒಂದುವೇಳೆ ಅವನು ಕೆಟ್ಟವರ ನಡುವೆಯೇ ಬಾಳಬೇಕಾದ ಪರಿಸ್ಥಿತಿಯಿದ್ದರೆ ಅವನಲ್ಲಿನ ಕೆಟ್ಟ ಅಂಶಗಳಿಗೆ ಪ್ರಚೋದನೆ ದೊರೆತು, ಕೆಟ್ಟವನೆನಿಸಿಕೊಂಡರೂ ಸಹ ಅವನು ಕೆಟ್ಟವರಲ್ಲಿ ಒಳ್ಳೆಯವನು ಅನ್ನಿಸಿಕೊಳ್ಳಬಹುದು. ಅದೇ ರೀತಿ ಕೆಟ್ಟ ಅಂಶಗಳು ಪ್ರಧಾನವಾಗಿರುವ ವ್ಯಕ್ತಿ ಒಳ್ಳೆಯವರ ನಡುವೆ ಇರಬೇಕಾದ ಅನಿವಾರ್ಯತೆ ಬಂದರೆ ಅವನ ಒಳ್ಳೆಯತನಕ್ಕೆ ಪ್ರಚೋದನೆ ಸಿಕ್ಕಿ ಒಳ್ಳೆಯವನೆನಿಸಿದರೂ, ಆಗಾಗ್ಗೆ ಅವನ ಕೆಟ್ಟತನ ಪ್ರಕಟವಾಗದೇ ಇರದು. 
     ಹಾಗಾದರೆ ಕೆಟ್ಟವರು ಕೆಟ್ಟವರಾಗೇ ಇರುತ್ತಾರೆಯೇ? ಒಳ್ಳೆಯವರು ಒಳ್ಳೆಯವರಾಗೇ ಇರುತ್ತಾರೆಯೇ? ಎಂಬ ಪ್ರಶ್ನೆಗೆ ಕಾಲ ನೀಡಿರುವ ಉತ್ತರವೆಂದರೆ ಇಲ್ಲ, ಹಾಗಿಲ್ಲ ಎಂಬುದೇ. ಪರಿಸ್ಥಿತಿಯ ಶಿಶುವಾಗಿ ಮುಸ್ಲಿಮನಾಗಬೇಕಾಗಿ ಬಂದ ಕಾಳಿಚರಣ ಮಾತೃಧರ್ಮಕ್ಕೆ ಮರಳಲು ಬಯಸಿದಾಗ ಅದನ್ನು ಒಪ್ಪದ ಅಂಧ ಸಂಪ್ರದಾಯವಾದಿಗಳು ಅದನ್ನು ವಿರೋಧಿಸಿದರು. ಅವರ ವಿರುದ್ಧ ಕೆರಳಿ ನಿಂತ ಅವನು ಕಾಲಾಪಹಾಡ್ ಆಗಿ ಖಡ್ಗ ಹಿರಿದು ಅಸಂಖ್ಯಾತ ಹಿಂದೂಗಳನ್ನು ಮುಸ್ಲಿಮರನ್ನಾಗಿ ಮಾಡಿದ ಇತಿಹಾಸ ಕಣ್ಣ ಮುಂದಿದೆ. ಅಂತಹ ತಪ್ಪುಗಳ ಫಲವೇ ಈಗಿನ ಕಾಶ್ಮೀರ ಸಮಸ್ಯೆ, ಉಗ್ರಗಾಮಿಗಳ ಸಮಸ್ಯೆ. ಬೇಡನಾಗಿ ಬೇಟೆಯಾಡಿ ಜೀವಿಸುತ್ತಿದ್ದ ವಾಲ್ಮೀಕಿ ಸಂತನಾಗಿ ಪರಿವರ್ತಿತನಾಗಿ ಅದ್ಭುತ ರಾಮಾಯಣ ರಚಿಸಿದ್ದನ್ನೂ ನಾವು ಅರಿತಿದ್ದೇವೆ. ಒಳ್ಳೆಯತನಕ್ಕೆ ಮತ್ತು ಕೆಟ್ಟತನಕ್ಕೆ ಜಾತಿ, ಮತ, ಪಂಥಗಳ ಭೇದವಿಲ್ಲ. ಸಪ್ತರ್ಷಿಗಳೆಂದು ಕರೆಯಲ್ಪಡುವ ಯಾವ ಋಷಿಯೂ ಮೂಲದಲ್ಲಿ ಹುಟ್ಟಿನಿಂದ ಬ್ರಾಹ್ಮಣರಾಗಿರಲಿಲ್ಲ. ನಾವು ಆರಾಧಿಸುವ ರಾಮ ಕ್ಷತ್ರಿಯನಾಗಿ ಜನಿಸಿದವನು. ಕೃಷ್ಣ ಗೊಲ್ಲಕುಲದಲ್ಲಿ ಹುಟ್ಟಿದವನು. ಮಹಾಪತಿವ್ರತೆಯೆಂದು ಗೌರವಿಸುವ ಅರುಂಧತಿ ಹುಟ್ಟಿನಿಂದ ಶೂದ್ರಳೆಂದರೆ ಹೆಮ್ಮೆಪಡಬೇಕು. ಜಾತಿ, ಮತ, ಧರ್ಮ, ಇತ್ಯಾದಿಗಳೆಲ್ಲಾ ದೇವನಿರ್ಮಿತವಲ್ಲ, ಮಾನವನ ಸೃಷ್ಟಿ. ಅಷ್ಟೇ ಏಕೆ, ಅಸಂಖ್ಯಾತ ದೇವರುಗಳೂ ಮಾನವನಿರ್ಮಿತರೇ. ಆದರೆ ಮಾನವನಿರ್ಮಿತನಲ್ಲದ, ಈ ಜಗತ್ತು, ಈ ಬ್ರಹ್ಮಾಂಡವನ್ನು ನಿಯಂತ್ರಿಸುವ ಆ ದೇವರದೇವನೊಬ್ಬನಿದ್ದಾನೆ. ಆ ದೇವನ ಇರುವಿಕೆಯನ್ನು ಅನುಭವಿಸಿ ಅರಿಯಬಹುದೇ ಹೊರತು ಕಾಣುವುದು ದುಸ್ತರ. ವಿಷಯಾಂತರವಾಗುವುದರಿಂದ ಇದನ್ನು ಇಲ್ಲಿಗೇ ನಿಲ್ಲಿಸಿ ಮೂಲವಿಷಯಕ್ಕೆ ಬರೋಣ.
     ನಮ್ಮ ಮನೋಭಾವ ಹೇಗಿದೆ? ಯಾರನ್ನಾದರೂ ಕುರಿತು ಯಾರಾದರೂ ಅವನು ಎಷ್ಟು ಒಳ್ಳೆಯವನು ಎಂದರೆ ಅದನ್ನು ತಕ್ಷಣ ಒಪ್ಪಿಕೊಳ್ಳುವುದಿಲ್ಲ. 'ನನಗೆ ಗೊತ್ತಿಲ್ಲವೇ ಅವನ ಬೇಳೆಕಾಳು' ಎಂದು ಮೂಗು ಮುರಿಯುತ್ತೇವೆ ಅಥವ ಅವನ ಒಳ್ಳೆಯತನಕ್ಕೆ ಸಾಕ್ಷಿ ಬಯಸುತ್ತೇವೆ. ಅವನಲ್ಲಿರಬಹುದಾದ ಲೋಪಗಳ ತನಿಖೆ ನಡೆಸುತ್ತೇವೆ. ಅಂತಹುದೇನಾದರೂ ಸಿಕ್ಕಿದರೆ ಸಾಕು, ಅವನ ಚಾರಿತ್ರ್ಯಹನನ ಮಾಡಿಯೇ ಸಿದ್ಧ.  ಅದೇ ಕೆಟ್ಟವನು ಅಂದರೆ ಹಿಂದೆ ಮುಂದೆ ನೋಡದೆ ಒಪ್ಪಿಬಿಡುತ್ತೇವೆ! ನಮ್ಮ ಮತ್ತು ನಮ್ಮವರ ತಪ್ಪುಗಳು ನಮಗೆ ಗೌಣವಾಗಿ ಕಾಣುತ್ತವೆ. ಇತರರ ಸಣ್ಣ ತಪ್ಪುಗಳೂ ಬೃಹದಾಕಾರ ತಳೆಯುತ್ತವೆ. ನಮ್ಮ ನಿಜವಾದ 'ದೋಷ' ಇಲ್ಲಿದೆ. ನಾವು ತಪ್ಪುಗಳನ್ನು, ಲೋಪಗಳನ್ನು ಹೊರಗೆ ಹುಡುಕುತ್ತೇವೆ, ಕಾಣುತ್ತೇವೆ. ನಿಜವಾದ ತಪ್ಪು, ನಿಜವಾದ ಲೋಪ 'ಒಳಗೆ' ಇದೆ! ಆ ಒಳಗಿನ ತಪ್ಪನ್ನು ಅರಿಯುವ, ತಿದ್ದಿಕೊಳ್ಳುವ ಪ್ರಯತ್ನ ಮಾಡಲು ಪ್ರಾರಂಭಿಸಿದಾಗ ನಾವು ನಿಜವಾದ ಮನುಷ್ಯರಾಗುತ್ತಾ ಹೋಗುತ್ತೇವೆ. ಸಮಸ್ಯೆ ಬರುವುದು ಇಲ್ಲೇ. ಏಕೆಂದರೆ ಒಳ್ಳೆಯವರಾಗುವುದು ಎಂದರೆ ಮೇಲೇರುತ್ತಾ ಹೋಗುವುದು. ಇದು ಕಠಿಣವಾದ ಹಾದಿ. ಮೇಲೇರುವುದು ಕಷ್ಟ, ಆದರೆ ಕೆಳಕ್ಕೆ ಬೀಳುವುದು? ಹಾಗೆಂದು ಇದ್ದಲ್ಲೇ ಇದ್ದರೆ ನಾವು ನಿಜವಾದ ಮನುಷ್ಯರೆನಿಸಿಕೊಳ್ಳುವುದಾದರೂ ಹೇಗೆ? ಸಾಧಕ ಮೇಲೇರುವ ಪ್ರಯತ್ನವನ್ನು ಕೆಳಕ್ಕೆ ಬಿದ್ದರೂ ಬಿಡುವುದಿಲ್ಲ. ಅಂತಹ ನಿಜಸಾಧಕರೇ ಸಮಾಜದ ಆಸ್ತಿಯೆಂದರೆ ತಪ್ಪಲ್ಲ. ಆದರೆ ನಾವಾದರೋ ಅಂತಹ ಸಾಧಕರನ್ನು ದೇವರುಗಳನ್ನಾಗಿ ಮಾಡಿಬಿಡುತ್ತೇವೆ. ಸಾಧನೆ ಮಾಡುವುದು ನಮಗೆ ಸಂಬಂಧಿಸಿದ್ದಲ್ಲ ಎಂದುಕೊಂಡುಬಿಡುತ್ತೇವೆ. 
ನಿನಗೆ ನೀನೆ ಬಂಧು ನಿನಗೆ ನೀನೆ ಶತ್ರು
ಪರರೇನು ಮಾಡುವರು ನಿನದೆ ತಪ್ಪಿರಲು  
ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರು
ನಿನ್ನುದ್ಧಾರ ನಿನ್ನಿಂದಲೇ ಮೂಢ ||
     ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ನಮ್ಮ ದೇಶ ಈ ಸ್ಥಿತಿಗೆ ಬಂದಿದೆ ಎಂದು ದೂರುವುದು ಸಾಮಾನ್ಯವಲ್ಲವೇ? 'ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ?' ಅಂದರೆ ಸಿಗಬಹುದಾದ ಉತ್ತರವೆಂದರೆ 'ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ?' ಎಂಬುದೇ. ಪುರಂದರದಾಸರೇ ಹಾಡಿಲ್ಲವೇ 'ಸತ್ಯವಂತರಿಗಿದು ಕಾಲವಲ್ಲ . . . .'! ಬದುಕುವುದು ಕಷ್ಟ, ಸತ್ಯವಂತರಿಗೆ ಕಾಲವಲ್ಲ ಎಂದು ಪ್ರತಿಯೊಬ್ಬರೂ ತಪ್ಪು ಮಾಡುತ್ತಾ ಹೋದರೆ ಇತರರನ್ನು ದೂಷಿಸಬೇಕಾದರೂ ಏಕೆ? ಅವರದು ದೊಡ್ಡ ತಪ್ಪುಗಳು, ನಮ್ಮದಾದರೋ ಪರಿಸ್ಥಿತಿಯ ಕಾರಣದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು ಎಂದು ಸಮರ್ಥಿಸಿಕೊಳ್ಳುತ್ತೇವೆ. ಈ ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯವಾಗುತ್ತದೆ. ಪುರಂದರದಾಸರು ಒಳ್ಳೆಯ ದಾರಿಯಲ್ಲಿ ನಡೆಯಲು ಪ್ರಾರಂಭಿಸಿದಾಗ ಅದರ ಕಷ್ಟದ ಅರಿವಾಗಿ ಆರೀತಿ ಹಾಡಿದ್ದೇ ಹೊರತು ಒಳ್ಳೆಯತನ ಬಿಡಿ ಎಂಬರ್ಥದಲ್ಲಿ ಅಲ್ಲ, ಕಷ್ಟವಾದರೂ ಬಿಡಬೇಡಿ ಎಂಬ ಒಳಧ್ವನಿ ಅದರಲ್ಲಿದೆ. ನಾವು ಒಳ್ಳೆಯವರಾಗಲು ಅಥವ ಕೆಟ್ಟವರಾಗಲು ಇತರರು ಕೇವಲ ನೆಪಗಳಾಗಬಹುದೇ ಹೊರತು ಅವರು ಕಾರಣರಾಗುವುದಿಲ್ಲ, ವಾಸ್ತವಿಕವಾಗಿ ನಾವೇ ಕಾರಣರು. ಹೀಗಿರುವಾಗ ನಮಗೆ ಹೊರಗಿನವರು ಮಾದರಿ ಏಕಾಗಬೇಕು? ನಾವು ಒಳ್ಳೆಯವರು/ಕೆಟ್ಟವರು ಅನ್ನಿಸಿಕೊಳ್ಳಲು ನಿಜವಾದ ಕಾರಣ ನಮ್ಮ ಒಳಗೇ ಇರುವಾಗ ನಾವು ಏನಾಗಬೇಕು ಅನ್ನುವುದು ನಮ್ಮ ಮೇಲೇ ನಿರ್ಭರವಾಗಿದೆ. ಗೀತೆ ಹೇಳುವಂತೆ ನಮ್ಮ ಉದ್ಧಾರಕ್ಕಾಗಲೀ, ಪತನಕ್ಕಾಗಲೀ ನಾವೇ ಕಾರಣರೇ ಹೊರತು ಇತರರಲ್ಲ. ಹಾಗಿರುವಾಗ ಒಳ್ಳೆಯತನಕ್ಕೆ ನಮ್ಮನ್ನು ನಾವು ತೆರೆದುಕೊಳ್ಳೋಣ, ಕನಿಷ್ಠ ಪ್ರಯತ್ನವನ್ನಾದರೂ  ಮಾಡೋಣ. ಲೋಪಗಳನ್ನು ಕಾಣುವೆಡೆಗಳಲ್ಲಿ ಒಳ್ಳೆಯದನ್ನು ಕಾಣಲು ಹಂಬಲಿಸೋಣ. ನಮ್ಮಲ್ಲಿ 'ಇರುವುದನ್ನು' ಗುರುತಿಸಿಕೊಳ್ಳೋಣ, ಉಪಯೋಗಿಸೋಣ!
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||
-ಕ.ವೆಂ.ನಾಗರಾಜ್.
**************
5.11.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಗುರುವಾರ, ಡಿಸೆಂಬರ್ 4, 2014

ಮರೆತು ಕ್ಷಮಿಸುವ ಗುಣ


     ಹಿರಿಯರೊಬ್ಬರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: "ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ". ಸಂಬಂಧಪಟ್ಟವರು, ಪಡದಿದ್ದವರು ಎಲ್ಲರಿಗೂ ಈ ಮಾತು ಹೇಳುತ್ತಿದ್ದುದು, ಕೈಹಿಡಿದುಕೊಂಡು ಈ ಮಾತು ಪುನರುಚ್ಛರಿಸುತ್ತಿದ್ದುದು, ಕೆಲವರಿಂದ ಈ ಕುರಿತು ಭಾಷೆ ಪಡೆಯುತ್ತಿದ್ದುದನ್ನು ಕಂಡ ಕೆಲವರಿಗೆ ಅದು ಅರಳು ಮರಳಿನ ಮಾತಿನಂತೆ ಕಂಡಿರಬಹುದು. ಆದರೆ ಅಂತರ್ಮುಖಿಯಾಗಿ ಯೋಚಿಸಿದಾಗ ಉತ್ತಮ ಬದುಕಿನ ಸಂದೇಶ ಇದರಲ್ಲಡಗಿರುವುದು ಗೋಚರಿಸದೆ ಇರದು. 'ಲೋಕೋ ಭಿನ್ನರುಚಿಃ' ಎಂಬಂತೆ ಭಿನ್ನ ಅಭಿರುಚಿಗಳ ಜನರ ನಡುವೆ ಸಮನ್ವಯ ಸಾಧಿಸಬೇಕೆಂದರೆ ಈ ಸಂದೇಶದ ಪಾಲನೆಯಿಂದ ಮಾತ್ರ ಸಾಧ್ಯ.
     ಸುಮಾರು ಹತ್ತು ವರ್ಷಗಳ ಹಿಂದಿನ ಪ್ರಸಂಗ: ನಾನು ಅರಕಲಗೂಡಿನಲ್ಲಿ ತಹಸೀಲ್ದಾರನಾಗಿದ್ದಾಗ ಒಂದು ಜಮೀನಿನ ತಕರಾರು ಪ್ರಕರಣ ನನ್ನ ಮುಂದೆ ಬಂದಿತ್ತು. ಗಂಡ ಅಪಘಾತದಲ್ಲಿ ಮೃತನಾದ ನಂತರ ಆತನ ಹೆಸರಿನಲ್ಲಿದ್ದ  ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಮಧ್ಯ ವಯಸ್ಕ ವಿಧವೆ ಕೋರಿದ್ದ ಅರ್ಜಿಗೆ ಗಂಡನ ಅಣ್ಣಂದಿರು ತಕರಾರು ಸಲ್ಲಿಸಿದ್ದರು. ವಿಚಾರಣೆ ಕಾಲದಲ್ಲಿ ತಿಳಿದು ಬಂದಿದ್ದೇನೆಂದರೆ ಮೃತನ ತಂದೆ-ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಮೃತನನ್ನು ಹೊರತುಪಡಿಸಿ ಉಳಿದವರೆಲ್ಲಾ ಒಳ್ಳೆಯ ಸ್ಥಿತಿಯಲ್ಲಿದ್ದರು. ಮಗಳನ್ನು ಸಿರಿವಂತ ಕುಟುಂಬಕ್ಕೆ ಕೊಟ್ಟು ವಿವಾಹ ಮಾಡಲಾಗಿತ್ತು. ಹಿರಿಯ ಮಗ ಬೆಂಗಳೂರಿನ ಸರ್ಕಾರಿ ಕಾಲೇಜೊಂದರ ಪ್ರೊಫೆಸರ್, ಎರಡನೆಯವನು ತುಮಕೂರಿನಲ್ಲಿ ಇಂಜನಿಯರ್, ಕೊನೆಯ ಮಗ ಪ್ರೌಢಶಾಲೆಯ ಉಪಾಧ್ಯಾಯ. ಮೃತ ವ್ಯಕ್ತಿ ಮೂರನೆಯವನಾಗಿದ್ದು ಅವಿದ್ಯಾವಂತ. ತಂದೆ-ತಾಯಿಗೆ ಪಿತ್ರಾರ್ಜಿತವಾಗಿ ಬಂದಿದ್ದ ನಾಲ್ಕು ಎಕರೆ ತರಿ ಜಮೀನು ಇತ್ತು. ಒಳ್ಳೆಯ ಸ್ಥಿತಿಯಲ್ಲಿದ್ದ ಉಳಿದ ಮಕ್ಕಳು ಅವಿದ್ಯಾವಂತ ಸಹೋದರನೂ ಚೆನ್ನಾಗಿರಲಿ, ಹಳ್ಳಿಯನ್ನು ಬಿಟ್ಟುಬರಲು ಇಚ್ಛಿಸದ ತಂದೆ-ತಾಯಿಗೆ ಆಸರೆಯಾಗಿರಲಿ ಎಂಬ ಭಾವನೆಯಿಂದ ಪಿತ್ರಾರ್ಜಿತ ಸ್ವತ್ತನ್ನು ಅವನ ಹೆಸರಿಗೆ ಖಾತೆ ಮಾಡಿಕೊಡಲು ಒಪ್ಪಿಗೆ ಸೂಚಿಸಿ, ಜಮೀನಿನ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟು ಅವನ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು. ಬಡಕುಟುಂಬದ ಹೆಣ್ಣನ್ನು ಮದುವೆಯಾಗಿದ್ದ  ಅವನ ಬದುಕಿಗೂ ಇದರಿಂದ ಭದ್ರತೆ ಬಂದಿತ್ತು. ಕೆಲವು ವರ್ಷಗಳ ನಂತರ ಆತ ಅಪಘಾತದಲ್ಲಿ ತೀರಿದಾಗ ಜಮೀನಿನ ಪಾಲು ಕೇಳುವುದರೊಂದಿಗೆ ಮೃತನ ಹೆಂಡತಿಯ ಹೆಸರಿಗೆ ಖಾತೆ ಮಾಡಿಕೊಡಬಾರದೆಂದು  ಮೃತನ ಅಣ್ಣಂದಿರು ತಕರಾರು ಮಾಡಿದ್ದರು. ಜಮೀನು ಕೈತಪ್ಪಿದಲ್ಲಿ ಆಸರೆಯಿಲ್ಲದೆ ಬೀದಿಗೆ ಬೀಳಲಿದ್ದ ಮೃತನ ಹೆಂಡತಿ, ಮದುವೆ ವಯಸ್ಸಿಗೆ ಬಂದಿದ್ದ ಅವನ ಮಗಳ ಕುರಿತು ತಕರಾರುದಾರರಿಗೆ ಮರುಕವಿರಲಿಲ್ಲ. ಕೊನೆಯ ಮಗನೊಬ್ಬ ಮಾತ್ರ ಅತ್ತಿಗೆಯ ಪರವಾಗಿ ಮಾತನಾಡಿದ್ದ. ಅಧಿಕಾರದಲ್ಲಿದ್ದ ಪ್ರಭಾವಿ ರಾಜಕಾರಣಿಯೊಬ್ಬರು ತಕರಾರುದಾರರ ಪರವಾಗಿ ತೀರ್ಪು ನೀಡಲು ಒಂದು ರೀತಿಯ ಬೆದರಿಕೆಯ ಒತ್ತಾಯ ಮಾಡಿದ್ದರು. ಕಾಲೇಜು ಪ್ರೊಫೆಸರರು ಹತ್ತು ಸಾವಿರ ರೂ. ಲಂಚದ ಆಮಿಷ ಒಡ್ಡಿದ್ದರು. ಇದನ್ನು ಲೆಕ್ಕಿಸದೆ, ಜಮೀನಿನ ಮೇಲಿನ ಹಕ್ಕನ್ನು ಮೊದಲೇ ಬಿಟ್ಟುಕೊಟ್ಟು ಮೃತನ ಹೆಸರಿಗೆ ಖಾತೆ ಮಾಡಿಕೊಡಲು ತಕರಾರುದಾರರು ಹಿಂದೆ ಬರೆದುಕೊಟ್ಟಿದ್ದ ಒಪ್ಪಿಗೆ ಪತ್ರ ಹಾಗೂ ಮೃತ ಗಂಡನ ಹೆಸರಿನಲ್ಲಿದ್ದ ಜಮೀನು ಇವುಗಳನ್ನು ಪರಿಗಣಿಸಿ ಮೃತನ ಪತ್ನಿಯ ಹೆಸರಿಗೆ ಖಾತೆ ಮಾಡಲು ತೀರ್ಪು ನೀಡಿದಾಗ ಜಮೀನು ಕೈತಪ್ಪಿ ಹೋಗುವುದೆಂದೇ ಆತಂಕದಲ್ಲಿದ್ದ ಆ ಬಡ ಹೆಣ್ಣು ಮಗಳು ತನ್ನ ಮಗಳೊಂದಿಗೆ ಬಂದು ಎಲ್ಲರ ಎದುರಿಗೇ   ನನ್ನ ಕಾಲು ಮುಟ್ಟಿ ನಮಸ್ಕರಿಸಿದ ಪ್ರಸಂಗ ನೆನಪಿನಲ್ಲಿ ಉಳಿದಿದೆ. ಆಗ ಆಕೆ ಕಾಲೇಜು ಪ್ರೊಫೆಸರರ ಪತ್ನಿಗೂ ತನಗೂ ಒಮ್ಮೆ ಸಂಸಾರಕ್ಕೆ ಸಂಬಂಧಿಸಿದ ವಿಷಯಕ್ಕೆ ಜಗಳವಾಗಿತ್ತೆಂದೂ, ಕುಟುಂಬಗಳಲ್ಲಿ ಪರಸ್ಪರ ಮನಸ್ತಾಪಕ್ಕೆ ಇದೇ ಕಾರಣವಾಗಿ ಈ ಹಂತಕ್ಕೆ ಬಂದು ತಾನು ಬೀದಿಗೆ ಬೀಳುವ ಪ್ರಸಂಗ ಒದಗಿತೆಂದೂ ಕಣ್ಣೀರಿಟ್ಟು ಹೇಳಿದ್ದಳು. ಮುಂದೊಮ್ಮೆ ಕಾಲೇಜು ಪ್ರೊಫೆಸರರು ಭೇಟಿಯಾದಾಗ ಅವರೊಂದಿಗೆ ಸಮಾಲೋಚಿಸಿ, ಚರ್ಚಿಸಿ, ಮನವೊಲಿಸಿ ದೊಡ್ಡ ಸ್ಥಾನದಲ್ಲಿರುವ ಅವರು ಪ್ರಸಂಗ ಇಲ್ಲಿಗೇ ಮುಕ್ತಾಯಗೊಳಿಸಿದಲ್ಲಿ ಆಗುವ ಸತ್ಪರಿಣಾಮದ ಕುರಿತು ಹಾಗೂ ಇದರಿಂದ ನಿಜಕ್ಕೂ ದೊಡ್ಡವರೆನಿಸಿಕೊಳ್ಳುತ್ತೀರೆಂದು ಮನವರಿಕೆ ಮಾಡಿಕೊಟ್ಟಾಗ ನನ್ನ ತೀರ್ಪಿನ ವಿರುದ್ಧ ಅವರು ಸಲ್ಲಿಸಬೇಕೆಂದಿದ್ದ್ದ ಮೇಲುಮನವಿಯನ್ನು ಸಲ್ಲಿಸಲಿಲ್ಲ. ಕೆಟ್ಟ ಘಳಿಗೆಯೊಂದರಲ್ಲಿ ಕುಟುಂಬದ ಸದಸ್ಯರುಗಳಲ್ಲಿ ಉಂಟಾಗುವ ಮನಸ್ತಾಪ ಮಾನವೀಯತೆಯನ್ನೇ ಹೇಗೆ ಮರೆಸುತ್ತದೆ ಎಂಬುದನ್ನು ತೋರಿಸುವುದಷ್ಟೇ ಈ ಪ್ರಸಂಗ ಉಲ್ಲೇಖಿಸಿದ ಉದ್ದೇಶ. ಹಲವಾರು ಕಾರಣಗಳಿಗಾಗಿ ಉಂಟಾಗುವ ಜಗಳ, ಮನಸ್ತಾಪಗಳನ್ನು ಮರೆತು ಪರಸ್ಪರರನ್ನು ಕ್ಷಮಿಸಿ ಮುನ್ನಡೆದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಲ್ಲದಿದ್ದಲ್ಲಿ ಸಂಬಂಧಗಳು ಹಳಸುತ್ತದೆ. ಹಳಸಿದ ಸಂಬಂಧಗಳ ಲಾಭ ಇತರರಿಗೆ ಆಗುತ್ತದೆ. ಸಂಬಂಧಿಸಿದವರು ನಗೆಪಾಟಲಿಗೆ ಒಳಗಾಗುವರಲ್ಲದೆ ಅವರ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಹೊರಟುಹೋಗುತ್ತದೆ. ಸಂಬಂಧಗಳು ಕಳಚಿದ ಬಗ್ಗೆ ಮನದಾಳದಲ್ಲಿ ನೋವು ಉಳಿಯುತ್ತದೆ. ಹೊಂದಿಕೊಂಡು ನಡೆದಲ್ಲಿ ಸಂಬಂಧಗಳು ಮಧುರವಾಗಿ ಉಳಿಯದಿದ್ದರೂ ಹಾಳಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ ಎಂಬ ಮಾತು ಅರ್ಥಪೂರ್ಣವೆನಿಸುತ್ತದೆ. ಮನ ನೋಯುವಂತಹ ಕೆಲವು ಸಂಗತಿಗಳು ಘಟಿಸಿದ  ಸಂದರ್ಭಗಳಲ್ಲಿ ನಾನು ನನ್ನ ಸ್ವಭಾವಕ್ಕೆ ವಿರುದ್ಧವಾಗಿ ತಕ್ಷಣದಲ್ಲಿ ಕೋಪದಿಂದ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇದ್ದುದರಿಂದ ಸಂಬಂಧಗಳು ಉಳಿದುಕೊಳ್ಳುತ್ತವೆ. 
     ಅಡಿಗಡಿಗೆ ಕಾಡಿ ಶಿರನರವ ತೀಡಿ
     ಮಿಡಿದಿಹುದು ಉಡಿಯೊಳಗಿನ ಕಿಡಿಯು|
     ಗಡಿಬಿಡಿಯಲಡಿಯಿಡದೆ ತಡೆತಡೆದು
     ಸಿಡಿನುಡಿಯ ನೀಡು ಸಿಹಿಯ ಮೂಢ||
     ಹೊಂದಾಣಿಕೆಯಿದ್ದಲ್ಲಿ ಸಂಬಂಧಗಳು ಚೆನ್ನಾಗಿರುತ್ತದೆ. ಸಂಬಂಧಗಳು ಚೆನ್ನಾಗಿದ್ದಲ್ಲಿ ಜೀವನ ಸಹನೀಯವೆನಿಸುತ್ತದೆ. ಸಂಬಂಧಗಳು ಹಾಳಾಗಲು ಕಾರಣಗಳೇನು ಎಂದು ವಿಶ್ಲೇಷಿಸುವುದು ಋಣಾತ್ಮಕ ಚಿಂತನೆಯಾಗುತ್ತದೆ. ಸಂಬಂಧಗಳು ಹಾಳಾಗದಿರಲು ಏನು ಮಾಡಬಹುದು ಎಂದು ಧನಾತ್ಮಕವಾಗಿ ನೋಡೋಣ. ಸಂಬಂಧಗಳು ಉಳಿಯಬೇಕೆಂದರೆ - ೧. ಸಂಬಂಧಗಳು ಇರಬೇಕು, ಉಳಿಯಬೇಕು, ಬೆಳೆಯಬೇಕು ಎಂಬ ಮನೋಭಾವ, ೨. ಕುಟುಂಬ ಎಂದರೆ ಕೇವಲ ಗಂಡ, ಹೆಂಡತಿ ಮತ್ತು ಮಕ್ಕಳು ಮಾತ್ರ ಎಂಬ ಸೀಮಿತ ಪರಿಧಿಯಿಂದ ಹೊರಬರುವುದು. ೩. ಕುಟುಂಬದ ಸದಸ್ಯರುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಮನಸ್ತಾಪಗಳ ಸಂದರ್ಭಗಳು ಬಾರದಂತೆ ನೋಡಿಕೊಳ್ಳುವುದು, ೪. ತಾಳ್ಮೆ, ಸಹನೆಯಿಂದ ವರ್ತಿಸುವುದು, ಕೋಪತಾಪದ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸದೆ ಸೂಕ್ತ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು, ೫. ಮೂರನೆಯ ವ್ಯಕ್ತಿಗಳು ಮೂಗು ತೂರಿಸಿ ಸಂಬಂಧಗಳನ್ನು ಕೆಡಿಸಲು ಅವಕಾಶ ಕೊಡಬಾರದು, ಅವರು ಹೇಳುವ ಮಾತುಗಳಲ್ಲಿ ನಿಜವಿದ್ದರೂ ಅದಕ್ಕೆ ಪ್ರಾಮುಖ್ಯತೆ ನೀಡದಿರುವುದು, ೬. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಬರಲು ಸಂಬಂಧಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು, ಆದರೆ ನಮಗಿಂತ ಚೆನ್ನಾಗಿರುವ ಸಂಬಂಧಿಗಳ ಕುರಿತು ಹೊಟ್ಟೆಕಿಚ್ಚು ಪಡದೆ, ಉತ್ತಮ ಸ್ಥಿತಿಯಲ್ಲಿರದವರನ್ನು ಕಡೆಗಣಿಸದೆ ಇರುವ ಮನೋಭಾವ ಇರಬೇಕು. ನಾವು ದೊಡ್ಡವರಾಗಲು ಇತರರನ್ನು ಚಿಕ್ಕವರಾಗಿ ಬಿಂಬಿಸಬೇಕಿಲ್ಲ. ನಾವು ದೊಡ್ಡತನದಿಂದ ವರ್ತಿಸಬೇಕಷ್ಟೆ. ೭. ಮಾತುಕತೆಗಳಲ್ಲಿ ಸಂಯಮವಿರಬೇಕು. ವ್ಯಕ್ತಿಗಳನ್ನು ಮುದುಕ, ಮುದುಕಿ, ಕುಂಟ, ಕುರುಡ, ಕುಳ್ಳ, ಲಂಬು, ಪೆದ್ದ, ಹುಚ್ಚ, ಇತ್ಯಾದಿ ವಿಶೇಷತೆಗಳನ್ನು ಜೋಡಿಸಿ ಎದುರಿನಿಂದಾಗಲೀ, ಹಿಂದಿನಿಂದಾಗಲೀ ಸಂಬೋಧಿಸಬಾರದು. ಇತರರ ಅಭಿಪ್ರಾಯಗಳನ್ನು ಅವು ನಮಗೆ ಸರಿಯೆನಿಸದಿದ್ದರೂ ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಎದುರಿಗಿಲ್ಲದ ವ್ಯಕ್ತಿಗಳ ಬಗ್ಗೆ ಸಹ ಹಗುರವಾಗಿ ಮಾತನಾಡಬಾರದು. ಒಂದಲ್ಲಾ ಒಂದು ಸಂದರ್ಭದಲ್ಲಿ ಆ ಮಾತು ಅವರಿಗೆ ತಲುಪುತ್ತದೆ ಹಾಗೂ ಅದರಿಂದ ಮಾತನಾಡಿದವರು ಸಣ್ಣವರಾಗುತ್ತಾರೆ ಎಂಬ ಅರಿವಿರಬೇಕು.  ೮. ತಮ್ಮದು ತಪ್ಪು ಎಂದು ಕಂಡುಬಂದರೆ ಹಿಂಜರಿಕೆ ತೋರದೆ ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು, ೯. ಸಂಬಂಧಗಳನ್ನು ಕೆಡಿಸುವವರಿಂದ ದೂರವಿರುವುದು, ೧೦. ಯಾರನ್ನೂ ದೂರದಿರುವುದು, ಯಾರಿಗೂ ಕೇಡೆಣಿಸದಿರುವುದು, . . ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇದರಲ್ಲಿನ ಒಂದೊಂದು ಅಂಶಗಳ ಕುರಿತೂ ಸ್ವವಿಮರ್ಶೆ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ.
     'ಬಾಳು, ಬಾಳಗೊಡು' ಎಂದ ಮಹಾವೀರ, 'ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು' ಎಂದ ಏಸುಕ್ರಿಸ್ತ, 'ಇವನಾರವ, ಇವನಾರವ ಎಂದೆಣೀಸದಿರಯ್ಯ, ಇವ ನಮ್ಮವನೆಂದೆಣಿಸಯ್ಯ' ಎಂದ ಬಸವಣ್ಣ,  'ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು' ಎಂದ ಸರ್ವಜ್ಙನೇ ಮುಂತಾದ ದಾರ್ಶನಿಕರು, ಸಂತರು ಒತ್ತಿ ಹೇಳುವುದು ಒಂದೇ ವಿಷಯ - ಮನುಷ್ಯನಿಗೆ ಇರಬೇಕಾಧ ಹೊಂದಾಣಿಕೆಯ ಮನೋಭಾವ. ನಮ್ಮದು ತಪ್ಪಿದ್ದರೆ ತಿದ್ದಿಕೊಂಡು ನಡೆಯೋಣ. ಇತರರ ತಪ್ಪನ್ನು ಕ್ಷಮಿಸೋಣ. ಕ್ಷಮಿಸುವ ಮನೋಭಾವ ದೈವತ್ವದ ಗುಣ.      ಸ್ವಾಮಿ ವಿವೇಕಾನಂದರ ಈ ವಾಣಿಯನ್ನುನೆನಪಿನಲ್ಲಿಡೋಣ:
          “ Doing good to others is virtue (Dharma); injuring others is sin. Strength and manliness are virtue; weakness and cowardice are sin. Independence is virtue; dependence is sin. Loving others is virtue; hating others is sin. Faith in God and one’s own Self is virtue; doubt is sin. Know that talking ill of others in private is a sin. You must wholly avoid it. Many things may occur to the mind, but it gradually makes a mountain of a molehill if you try to express them. Everything is ended if you forgive and forget.”
     ["ಇತರರಿಗೆ ಒಳಿತು ಮಾಡುವುದೇ ಧರ್ಮ; ಇತರರನ್ನು ಘಾಸಿಗೊಳಿಸುವುದು ಅಧರ್ಮ. ಶಕ್ತಿ ಮತ್ತು ಪುರುಷತ್ವವೇ ಧರ್ಮ; ದುರ್ಬಲತೆ ಮತ್ತು ಹೇಡಿತನಗಳೇ ಅಧರ್ಮ. ಸ್ವಾತಂತ್ರ್ಯವೇ ಧರ್ಮ; ಗುಲಾಮಗಿರಿಯೇ ಅಧರ್ಮ. ಇತರರನ್ನು ಪ್ರೀತಿಸುವುದು ಧರ್ಮ; ದ್ವೇಷಿಸುವುದೇ ಅಧರ್ಮ. ದೇವರಲ್ಲಿ ಮತ್ತು ತನ್ನಲ್ಲಿ ತಾನು ನಂಬಿಕೆಯಿರಿಸಿಕೊಳ್ಳುವುದೇ ಧರ್ಮ; ಅಪನಂಬಿಕೆಯೇ ಅಧರ್ಮ. ಇತರರ ಬಗ್ಗೆ ದೂಷಿಸಿ ಮಾತನಾಡುವುದು ತಪ್ಪು. ಬಹಳಷ್ಟು ಸಂಗತಿಗಳು ಮನಸ್ಸಿನಲ್ಲಿ ಮೂಡಬಹುದು; ಅವುಗಳನ್ನು ವ್ಯಕ್ತಪಡಿಸುತ್ತಾ ಹೋದರೆ ಕ್ರಮೇಣ ಸಣ್ಣ ಮಣ್ಣುಗುಡ್ಡೆಯೇ ಬೆಟ್ಟವಾಗುತ್ತದೆ. ಕ್ಷಮಿಸಿದರೆ ಮತ್ತು ಕ್ಷಮಿಸಿ ಮರೆತುಬಿಟ್ಟರೆ ಎಲ್ಲವೂ ಸುಖಾಂತ್ಯವಾಗುತ್ತದೆ."]  - ಎಂತಹ ಸತ್ವಯುತವಾದ, ಸತ್ಯವಾದ ಮಾತಿದು! 
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು||
ಗಡಿಬಿಡಿಯಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ||

      ಮರೆಯೋಣ; ಮರೆತು ಚೆನ್ನಾಗಿರೋಣ.
-ಕ.ವೆಂ.ನಾಗರಾಜ್.
**************
27.10.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ನವೆಂಬರ್ 30, 2014

ರಾಮರು ನಾವೇ, ರಾವಣರೂ ನಾವೇನೇ!


     "ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಈಗ ಕಾಲ ತುಂಬಾ ಕೆಟ್ಟು ಹೋಗಿದೆ. ಗುರು-ಹಿರಿಯರೆಂದರೆ ಗೌರವವೇ ಇಲ್ಲ" -  ಈ ಮಾತು ಕೇಳುವುದು ಈಗ ಸಾಮಾನ್ಯವಾಗಿ ಹೋಗಿದೆ. ವಾಸ್ತವವೆಂದರೆ ಈ ಮಾತನ್ನು ಈಗ ಹೇಳುವವರು ಚಿಕ್ಕವರಾಗಿದ್ದಾಗ ಅವರ ಹಿರಿಯರುಗಳೂ ಹೇಳುತ್ತಿದ್ದದೂ ಇದನ್ನೇ. "ಈ ಟಿವಿ ಬಂದಿದ್ದೇ ಬಂದಿದ್ದು, ನಮ್ಮ ಸಂಸ್ಕೃತಿಯೇ ಹಾಳಾಗಿ ಹೋಯಿತು" ಅನ್ನುತ್ತಾರೆ. ಟಿವಿ ತನ್ನಷ್ಟಕ್ಕೆ ತಾನೇ ಯಾರನ್ನಾದರೂ ಹಾಳು ಮಾಡುತ್ತದೆಯೇ? ಅದನ್ನು ಉಪಯೋಗಿಸಿ ಹಾಳಾದರೆ ಅದರ ಹೊಣೆಯನ್ನು ಟಿವಿಯ ಮೇಲೆ ಏಕೆ ಹಾಕಬೇಕು? ಅದೇ ರೀತಿ ಚಾಕುವನ್ನು ತರಕಾರಿ ಕತ್ತರಿಸಲೂ ಉಪಯೋಗಿಸಬಹುದು, ಇನ್ನೊಬ್ಬರನ್ನು ಕೊಲ್ಲಲೂ ಬಳಸಬಹುದು. ತನ್ನನ್ನು ಹೀಗೆಯೇ ಉಪಯೋಗಿಸಬೇಕು ಎಂದು ಚಾಕು ಹೇಳುತ್ತದೆಯೇ? ಚಾಕುವಿನಿಂದ ಏನಾದರೂ ತೊಂದರೆಯಾದರೆ ಅದು ಚಾಕುವಿನ ತಪ್ಪಂತೂ ಅಲ್ಲ. ಏನು ಹೇಳಹೊರಟಿರುವೆನೆಂದು ಈಗಾಗಲೇ ಅರ್ಥವಾಗಿರಬೇಕು. ಕೆಟ್ಟು ಹೋಗಲು ಕಾಲವಾಗಲೀ, ಯಾವುದೇ ವಸ್ತುವಾಗಲೀ ಕಾರಣವಲ್ಲ. ಅದನ್ನು ಬಳಸುವ ರೀತಿಯಿಂದ ಒಳಿತು/ಕೆಡಕು ಆಗುತ್ತದೆ. ಕಾಲ ಕೆಟ್ಟಿದೆಯೆಂದರೆ ವಾಸ್ತವಿಕವಾಗಿ ನಾವು ಕೆಟ್ಟುಹೋಗಿದ್ದೇವೆ ಎಂದೇ ಅರ್ಥ. ನೈತಿಕವಾಗಿ ಕೆಟ್ಟದ್ದು ಎಂದು ಭಾವಿಸುವ, ಭ್ರಷ್ಟತೆಯಿಂದ ಕೂಡಿದ, ಇತರರಿಗೆ ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಕೇಡು ಮಾಡುವ, ಒಳ್ಳೆಯದಕ್ಕೆ ವಿರುದ್ಧ ಎಂದು ಭಾವಿಸುವ ಯೋಚನೆಗಳು, ಕೃತಿಗಳನ್ನು ಕೆಟ್ಟದ್ದು ಅನ್ನಬಹುದು.
     ಕೆಟ್ಟ ಸಂಗತಿಗಳು, ಕೃತಿಗಳನ್ನು ಮಾಡಲು ನಾವು ಕೆಲವು ಜನಪ್ರಿಯ ಮಾತುಗಳನ್ನು ಸಮರ್ಥನೆಗಾಗಿ ಬಳಸಿಕೊಳ್ಳುತ್ತೇವೆ. 'ಯುದ್ಧದಲ್ಲಿ, ಪ್ರೀತಿಯಲ್ಲಿ ಗೆಲ್ಲಲು ಏನು ಬೇಕಾದರೂ ಮಾಡಬಹುದು', 'ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು', 'ವ್ಯಾಪಾರಮ್ ದ್ರೋಹ ಚಿಂತನಮ್', ಇತ್ಯಾದಿಗಳ ಸಾಲಿಗೆ ಈಗ 'ಅಧಿಕಾರಕ್ಕಾಗಿ, ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಏನು ಮಾಡಿದರೂ ತಪ್ಪಿಲ್ಲ' ಎಂಬುದೂ ಸೇರ್ಪಡೆಯಾಗಿದೆ. ಪರಂಪರೆಯಿಂದ ಬಂದ ಕುರುಡು  ಸಂಪ್ರದಾಯದ ಹೆಸರಿನಲ್ಲೂ ಇನ್ನೊಬ್ಬರನ್ನು ನೋಯಿಸಲು ಹಿಂದೆ ಮುಂದೆ ನೋಡದ ಪ್ರಸಂಗಗಳೂ ಇವೆ. ಅಗತ್ಯ, ಅನಿವಾರ್ಯ ಎಂಬ ಹೆಸರಿನಲ್ಲಿ ಕೇಡು ಮಾಡುವುದು ಸರ್ವಥಾ ಸರಿಯಲ್ಲ. ಕೆಟ್ಟ ಮಾರ್ಗಗಳಿಂದ ಒಳ್ಳೆಯದಾಗಬಹುದು ಎಂಬ ನಿರೀಕ್ಷೆ ಮರುಭೂಮಿಯ ಮರೀಚಿಕೆಯಿದ್ದಂತೆ. ಜನಸೇವೆಗೆ ಅವಕಾಶ ಕೊಡಿ, ಮಣ್ಣಿನ ಋಣ ತೀರಿಸಲು ಅಧಿಕಾರ ಕೊಡಿ ಎಂದು ಕೇಳುವ ಸಮಾಜಸೇವಕರು(?) ಕೆಟ್ಟ ಮಾರ್ಗಗಳಿಂದ ಅಧಿಕಾರಕ್ಕೆ ಬಂದು ಜನರನ್ನು ಉದ್ಧಾರ ಮಾಡುವರೆಂಬುದು ಹಗಲುಕನಸೇ ಸರಿ. ಅವರುಗಳು ಅಧಿಕಾರದ ಆಸೆಗಾಗಿ, ಹಣ ಗಳಿಸುವುದಕ್ಕಾಗಿ ಮಾಡಬಾರದುದನ್ನು ಮಾಡದಿದ್ದರೆ ಅದಕ್ಕಿಂತ ದೊಡ್ಡ ಜನಸೇವೆ ಇರಲಾರದು. ಕೆಟ್ಟ ಜನರು ವಿಜೃಂಭಿಸಲು ಮುಖ್ಯ ಕಾರಣವೆಂದರೆ ಒಳ್ಳೆಯ ಜನರೆನಿಸಿಕೊಂಡವರು ಸುಮ್ಮನಿರುವುದು. ಇಂದಿನ ವಸ್ತುಸ್ಥಿತಿಯನ್ನೇ ನೋಡೋಣ. ಕಾಲು ಕೆರೆದು ಗಡಿಯೊಳಗೆ ನುಗ್ಗಿ ಸಮ್ಮ ಸೈನಿಕರನ್ನು ಕೊಲ್ಲುವ, ಗಡಿ ನಿಯಂತ್ರಣ ರೇಖೆಗೆ ಗೌರವವನ್ನೇ ಕೊಡದಿರುವ, ಉಗ್ರಗಾಮಿಗಳ ಮೂಲಕ ಹಿಂಸಾಚಾರಕ್ಕೆ, ವಿನಾಕಾರಣ ಮುಗ್ಧರ ಮಾರಣಹೋಮಕ್ಕೆ ಪ್ರೇರಕರಾಗಿರುವ ನೆರೆ ರಾಷ್ಟ್ರಕ್ಕೆ ನಮ್ಮ ನಾಯಕರ ಕೇವಲ ಮಾತಿನ ಉಗ್ರ ಪ್ರತಿಭಟನೆ ನಾಟುವುದೇ? ಏಟಿಗೆ ಪ್ರತಿಯೇಟು ಬೀಳುತ್ತದೆಯೆಂದು ಅವರಿಗೆ ಗೊತ್ತಾಗುವವರೆಗೆ ಈ ಪರಿಸ್ಥಿತಿಗೆ ಮುಕ್ತಿಯಿರಲಾರದು. ಜಗತ್ತಿನ ಅತ್ಯಂತ ಕೆಡುಕಿನ ಸಂಗತಿಯೆಂದರೆ ಒಳ್ಳೆಯವರು ಗೊಣಗಾಡುವುದನ್ನು ಬಿಟ್ಟು ಏನೂ ಮಾಡದಿರುವುದೇ ಆಗಿದೆ. ಈ ಜಗತ್ತು ಕ್ರೂರವಾಗಿ ತೋರುವುದರ ಮೂಲ ಕೆಟ್ಟ ಸಂಗತಿಗಳಲ್ಲ, ಆ ಕೆಟ್ಟ ಸಂಗತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ, ಏನೂ ಮಾಡದಿರುವುದೇ ಆಗಿದೆ. ಒಳ್ಳೆಯತನದೊಂದಿಗೆ ಬುದ್ಧಿವಂತಿಕೆ ಸಹ ಇರಬೇಕು, ಬುದ್ಧಿವಂತಿಕೆ ಇಲ್ಲದ ಒಳ್ಳೆಯತನ ಕೆಡುಕಿಗೆ ಸಹಕಾರಿ. ಒಳ್ಳೆಯದನ್ನು ಮಾಡಬೇಕೋ, ಕೆಟ್ಟದನ್ನು ಮಾಡಬೇಕೋ ಎಂದು ನಿಶ್ಚಯ ಮಾಡಲಾರದವರಿಂದಲೇ ಕೆಡುಕು ಜಾಸ್ತಿ. ಡಂಭಾಚಾರ, ನಿಜಮುಖವನ್ನು ಮರೆಮಾಚುವ ಮುಖವಾಡಗಳು ಎಲ್ಲಾ ಕೆಟ್ಟ ಸಂಗತಿಗಳ, ಕ್ರೂರತೆಯ ಮೂಲವಾಗಿದೆ. ಆದರೆ ಒಂದಂತೂ ಸತ್ಯ. ಶಸ್ತ್ರರಹಿತ ಸತ್ಯ ಮತ್ತು ಪ್ರೀತಿಗಳದೇ ಕೊನೆಯ ಮಾತು. ಸತ್ಯಕ್ಕೆ ತಾತ್ಕಾಲಿಕ ಸೋಲಾದರೂ ಸಹ ಕೊನೆಯಲ್ಲಿ ವಿಜೃಂಭಿತ ಕೆಡುಕಿಗಿಂತ ಅದೇ ಬಲಶಾಲಿಯಾಗಿ ಹೊರಹೊಮ್ಮುವುದು! 
     ಕೆಟ್ಟದ್ದನ್ನು ಏಕೆ ಮಾಡುತ್ತಾರೆ? ತಮಾಷೆಯೆಂದರೆ, ಸಂತೋಷ, ಲಾಭ ಸಿಗುತ್ತದೆಯೆಂಬ ಭ್ರಮೆಯಿಂದ ಇನ್ನೊಬ್ಬರಿಗೆ ಕೇಡು ಮಾಡುತ್ತಾರೆಯೇ ಹೊರತು, ಆ ಭ್ರಮೆಯಿರದಿದ್ದಲ್ಲಿ ಯಾರೂ ಆ ತಪ್ಪು ಮಾಡುತ್ತಿರಲಿಲ್ಲ. ಪೌರಾಣಿಕ ಕಥೆಯಲ್ಲಿ ಕೇಳಿರಬಹುದು, ಹಿಂದೊಮ್ಮೆ ದೇವತೆಗಳು ಒಂದು ಕಡೆ, ಅಸುರರು ಒಂದು ಕಡೆ ಸೇರಿ ಸಮುದ್ರ ಮಥನ ಮಾಡಿದರು, ಆ ಮಥನದಿಂದ ಅನೇಕ ಒಳ್ಳೆಯ ಸಂಗತಿಗಳು, ವಜ್ರ, ವೈಢೂರ್ಯ, ಮುತ್ತು ರತ್ನಗಳು, ಲಕ್ಷ್ಮಿ, ಅಮೃತ, ಇತ್ಯಾದಿಗಳಂತೆ, ಹಾಲಾಹಲ ವಿಷ, ಕೆಡುಕು ತರುವ ವಸ್ತುಗಳೂ ಹೊರಬಂದವು, ಅಮೃತವನ್ನು ಪಡೆದು ಚಿರಂಜೀವಿಗಳಾಗಲು ಇಬ್ಬರೂ ಹೊಡೆದಾಡಿದರು, ವಿಷ್ಣು ಮೋಹಿನಿ ಅವತಾರ ತಾಳಿ, ಎಲ್ಲರನ್ನೂ ಮರುಳುಗೊಳಿಸಿ ಅಮೃತ ದೇವತೆಗಳಿಗೇ ದೊರೆಯುವಂತೆ ಮಾಡಿದ, ಇತ್ಯಾದಿ, ಇತ್ಯಾದಿ. ಈ ರೂಪಕ ಸುಂದರವಾಗಿದೆ. ನಿಜವಾಗಿ ಸಮುದ್ರವೆಂದರೆ ಮಾನವನ ಮನಸ್ಸೇ. ಅದರಲ್ಲಿ ಒಳ್ಳೆಯದರ ಜೊತೆಗೆ ಕೆಟ್ಟ ಸಂಗತಿಗಳೂ ಇವೆ. ಒಳ್ಳೆಯದು, ಕೆಟ್ಟದರ ನಡುವಣ ಸಂಘರ್ಷವೇ ಮಥನ. ಆ ಮಥನದಲ್ಲಿ ನಾವು ಏನನ್ನು ಆರಿಸಿಕೊಳ್ಳುತ್ತೇವೆ ಎಂಬುದರಿಂದ ನಾವು ಒಳ್ಳೆಯವರೋ, ಕೆಟ್ಟವರೋ ಆಗುವೆವು. ನಾವು ಏನು ಆರಿಸಿಕೊಳ್ಳುವೆವು ಎಂಬುದನ್ನು ನಮ್ಮನ್ನು ಆವರಿಸಿರುವ ಮಾಯೆ/ಭ್ರಮೆ ನಿರ್ಧರಿಸುತ್ತದೆ. 
     ನಮ್ಮೊಳಗೇ ರಾಮನೂ ಇದ್ದಾನೆ, ರಾವಣನೂ ಇದ್ದಾನೆ. ರಾಮನಾಗಬೇಕೋ, ರಾವಣನಾಗಬೇಕೋ ಎಂಬ ದ್ವಂದ್ವದಲ್ಲಿ ಇಂದಿನ ಪ್ರಪಂಚದಲ್ಲಿ ರಾಮನಂತಿದ್ದರೆ ಬದುಕಿಗೆ ಮಣ್ಣೇ ಸರಿ ಎಂದು ಮಾಯೆ ಉಪದೇಶಿಸುತ್ತದೆ. ಸಾವಿಲ್ಲದ ಜೀವಜಗತ್ತು ಇದೆಯೇ? ಹಾಗಿರುವಾಗ ಇನ್ನೊಬ್ಬರಿಗೆ ಕೇಡು ಬಗೆದು ನಾನು ಉದ್ಧಾರವಾಗಬೇಕೆಂಬ ಬಯಕೆ ಎಷ್ಟು ಸರಿ? ಪ್ರತಿಯಾಗಿ ನನಗೂ ಕೇಡು ಬಗೆಯದಿರುವರೇ? ಸಾವು ಅಂತಿಮ ಸತ್ಯವೆಂದಾದಾಗ ಆತ್ಮವಂಚನೆ ಮಾಡಿಕೊಂಡು ಹಲವಾರು ಸಲ ಸಾಯುವ ಬದಲು, ಕಷ್ಟವಾದರೂ ಒಳ್ಳೆಯ ದಾರಿಯಲ್ಲಿ ನಡೆದು ಒಂದು ಸಲ ಸಾಯುವುದು ಒಳ್ಳೆಯದು ಎಂದು ಮಾಯೆಯ ಮುಸುಕು ಸರಿಸಿದವನು ಯೋಚಿಸುತ್ತಾನೆ. ಜಗತ್ತಿನಲ್ಲಿ ಮರಗಳನ್ನು ಅದು ಕೊಡುವ ಫಲಗಳಿಂದ ಗುರುತಿಸುವಂತೆ ಜನರನ್ನು ಅವರು ಮಾಡುವ ಕಾರ್ಯಗಳಿಂದ ಗುರುತಿಸುತ್ತಾರೆ. ಗಮನಿಸಿ, ನಮ್ಮ ಹಿಂದಿನ ತಲೆಮಾರುಗಳ ಹಿರಿಯರ ನೆನಪು ನಮಗಿರುವುದಿಲ್ಲ, ಆದರೆ ವಿವೇಕಾನಂದರಂತಹವರ ಹೆಸರುಗಳು ಜನಮಾನಸದಲ್ಲಿ  ಅಜರಾಮರವಾಗಿರುತ್ತದೆ. ಒಳ್ಳೆಯ ಮತ್ತು ಶ್ರೇಷ್ಠ ಕಾರ್ಯಗಳು ಇದ್ದಕ್ಕಿದ್ದಂತೆ ಆಗುವುದಿಲ್ಲ. ಮೊದಲು ಮನುಷ್ಯನ ಮನಸ್ಸಿನಲ್ಲಿ ಅದರ ಮೊಳಕೆ ಚಿಗುರುತ್ತದೆ, ಅವನ ಸಂಕಲ್ಪದಿಂದ ಬೆಳೆಯುತ್ತದೆ, ಧೃಢತೆಯಿಂದ ಮುಂದುವರೆದಾಗ ಅಸಾಧ್ಯವೆನಿಸಿದ್ದು ಸಾಧ್ಯವಾಗುತ್ತದೆ. ಜನರನ್ನು ಅವರು ಮಾಡುವ ಕೆಲಸಗಳಿಂದ ಗುರುತಿಸುತ್ತಾರೆಯೇ ಹೊರತು ಅವನಲ್ಲಿ ಇರುವ ಸಂಪತ್ತು, ಜಾತಿ, ಅಧಿಕಾರ, ಇತ್ಯಾದಿಗಳಿಂದಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಮಾಯೆಯ ಮುಸುಕು ಸರಿಸಲು ಸಾಧ್ಯವಾದೀತು. 
ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ
ಬುದ್ಧನೂ ಬೇರಲ್ಲ ಹಿಟ್ಲರನು ಬೇರಿಲ್ಲ|
ಕೆಡುಕದು ಬೇರಲ್ಲ ಒಳಿತದು ಬೇರಿಲ್ಲ
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ||
     ಅದೆಲ್ಲಾ ಸರಿ, ಹೆಚ್ಚಿನವರು ಕೆಟ್ಟವರಾಗಿರುವಾಗ ನನ್ನೊಬ್ಬನ ಒಳ್ಳೆಯತನದಿಂದ ಏನು ಪ್ರಯೋಜನ? ಅದರಿಂದ ನನಗೇ ಕಷ್ಟ. 'ಯಾರಂತೆ ಅಂದರೆ ಊರಂತೆ' ಇರುವುದು ಜಾಣರ ಲಕ್ಷಣ ಎಂದು ಸಾಮಾನ್ಯನಾದವನು ಯೋಚಿಸುವುದು ಸಹಜ. 'ಕೆಟ್ಟು ಹೋಗಿರುವ' ಕಾಲ, ಸಂಸ್ಕೃತಿ, ಸಭ್ಯತೆಗಳನ್ನು ಸರಿಯಾಗಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಸರಿಪಡಿಸುವವರು ಯಾರು? ಬೇರೆಯವರು ಮಾಡಲಿ, ನಾವು ಬೆಂಬಲಿಸೋಣ; ಅಣ್ಣಾ ಹಜಾರೆ ಹೋರಾಟ ಮಾಡಲಿ, ನಾವು ಹಿಂದೆ ನಿಂತು ಜೈ ಅನ್ನೋಣ ಅನ್ನುವವರ ಸಂಖ್ಯೆಯೇ ಜಾಸ್ತಿ. ಇಂತಹ ಮನೋಭಾವವಿದ್ದಾಗ ಹೇಗೆ ಆಗುತ್ತದೆ ಅನ್ನುವುದಕ್ಕೆ ಅಣ್ಣಾಹಜಾರೆಯವರ ಹೋರಾಟದ ಕಾವು ತಣ್ಣಗಾಗಿರುವುದೇ ಸಾಕ್ಷಿ. ಪಕ್ಕದ ಮನೆಯ ಹುಡುಗ ಭಗತ್ ಸಿಂಗ್ ಆಗಲಿ, ನಮ್ಮ ಮನೆಯ ಹುಡುಗ ಮಾತ್ರ ಆಗುವುದು ಬೇಡ ಎಂದು ಭಾವಿಸುವವರು ಇರುವವರೆಗೆ, ಕುಟುಂಬದ ಸದಸ್ಯರಲ್ಲೇ ಒಬ್ಬರು ಸರಿಹಾದಿಯಲ್ಲಿ ನಡೆಯಲು ನಿರ್ಧರಿಸಿದರೆ ಅವನನ್ನು ಬಗ್ಗಿಸುವ, ಹಂಗಿಸುವ, ಕುಗ್ಗಿಸುವ ಕುಟುಂಬದ ಇತರ ಸದಸ್ಯರುಗಳು ಇರುವವರೆಗೆ 'ಕಾಲ ಕೆಟ್ಟೇ ಇರುತ್ತದೆ'. ಜಗತ್ತಿನಲ್ಲಿ ಏನಾದರೂ ಬದಲಾವಣೆ ಬಯಸುವುದಾದರೆ ಆ ಬದಲಾವಣೆಯನ್ನು ಮೊದಲು ನಾವು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಹೆಚ್ಚಿನವರು ಈರೀತಿ ಯೋಚಿಸಿ ಪ್ರವೃತ್ತರಾದರೆ ಬದಲಾವಣೆ ಖಂಡಿತಾ ಆಗುತ್ತದೆ. ಆದರೆ ನಮ್ಮ ಒಳಗೇ ಇರುವ 'ಬೆಕ್ಕಿಗೆ' ಗಂಟೆ ಕಟ್ಟುವವರು ಯಾರು? ನಾವೇ ಕಟ್ಟಬೇಕಲ್ಲವೇ?  
ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ಮೊದಲಾಗು ನೀನು |
ಬದಲಾಗು ನೀ ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
     "ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ ಧರ್ಮ ಸಂಸ್ಥಾನಾಪನಾರ್ಥಾಯ ಸಂಭವಾಮಿ ಯುಗೇ ಯುಗೇ" ಎಂಬುದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಉವಾಚ. ಈಗ ಅನ್ಯಾಯ ಮಿತಿ ಮೀರಿದೆ. ದೌರ್ಜನ್ಯಗಳು ಹೆಚ್ಚಿವೆ, ಭ್ರಷ್ಟಾಚಾರಕ್ಕೆ ಕಡಿವಾಣವೇ ಇಲ್ಲ, ಬಡವರ ಗೋಳು ಕೇಳುವವರೇ ದಿಕ್ಕಿಲ್ಲ. ಈಗ ಉದ್ಧಾರ ಮಾಡಲು ಪರಮಾತ್ಮ ಬಾರದಿದ್ದರೆ ಇನ್ನು ಯಾವಾಗ ಬರಬೇಕು ಅನ್ನುವ ಅಗತ್ಯವೇ ಇಲ್ಲ. ಪರಮಾತ್ಮ ಬರುತ್ತಾನೆ, ಖಂಡಿತಾ ಬರುತ್ತಾನೆ. ಆದರೆ, ಆ ಪರಮಾತ್ಮ ಎಲ್ಲೋ ಗಂಗಾತಟದಲ್ಲೋ, ಶ್ರೀರಂಗಪಟ್ಟಣದ ಹತ್ತಿರದ ಹಳ್ಳಿಯಲ್ಲೋ, ಯಾರೋ ಕಟ್ಟಾ ಸಂಪ್ರದಾಯಸ್ಥರ ಮನೆಯಲ್ಲೋ, ಮೆಕ್ಕಾ ಮದೀನಾದಲ್ಲೋ, ವ್ಯಾಟಿಕನ್ ದೇಶದಲ್ಲೋ ಹುಟ್ಟಿ ಬರುವುದಿಲ್ಲ. ಅವನಾಗಲೇ ಇದ್ದಾನೆ. ಅನಾದಿ, ಅನಂತನಾದ ಅವನು ಹೊಸದಾಗಿ ಹುಟ್ಟುವ ಅಗತ್ಯವೇ ಇಲ್ಲ. ಅವನು ನಮ್ಮ ನಿಮ್ಮೆಲ್ಲರ ಹೃದಯದಲ್ಲೇ ಇದ್ದಾನೆ. ಅವನನ್ನು ಅಲ್ಲೇ ಬಂಧಿಸಿಡದೆ ಹೊರಬಿಡಿ, ಆಗ ನೋಡಿ, ಅವನು ಮಾಡುವ ಪವಾಡವನ್ನು! ಜಗತ್ತಿನಲ್ಲಿ ಒಳ್ಳೆಯದು ಎಂದು ನಾವು ಭಾವಿಸುವ ಸಂಗತಿಗಳೆಲ್ಲವನ್ನೂ ಮಾಡಿರುವುದು, ಮಾಡುತ್ತಿರುವುದು ಮತ್ತು ಮಾಡುವುದು ಆ 'ನಮ್ಮೊಳಗಿರುವ' ಪರಮಾತ್ಮನೇ. ಆ ಕರುಣಾಳು ದೇವನಿಗೆ ನಮೋ ನಮಃ. ಯಜುರ್ವೇದದ ಈ ಮಂತ್ರದೊಂದಿಗೆ ಮುಕ್ತಾಯಗೊಳಿಸುವೆ: 
ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಃ | 
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಮಗ್ನಿನಾ || (ಯಜು. ೨೦.೨೫). 
     ಎಲ್ಲಿ ಬ್ರಾಹ್ಮಿ ಶಕ್ತಿ (ಜಾತಿಯಲ್ಲ) ಮತ್ತು ಕ್ಷಾತ್ರ ಶಕ್ತಿ (ಜಾತಿಯಲ್ಲ) ಒಂದಕ್ಕೊಂದು ಆಶ್ರಯವಾಗಿ ಒಟ್ಟಿಗೆ ಪ್ರವೃತ್ತವಾಗುತ್ತವೋ ಮತ್ತು ಎಲ್ಲಿ ಪವಿತ್ರ, ಚಾರಿತ್ರ್ಯವಂತರಾದ ವಿದ್ವಜ್ಜನರು ರಾಷ್ಟ್ರನಾಯಕರೊಡನೆ ಸಹಕರಿಸಿ ನಡೆಯುತ್ತಾರೋ ಅಂತಹ ಲೋಕವನ್ನು ಪುಣ್ಯಶಾಲಿ ಎನ್ನುತ್ತೇನೆ ಎಂಬುದು ಇದರ ಅರ್ಥ. ಪುಣ್ಯಶಾಲಿ ದೇಶದ ಪುಣ್ಯವಂತ ಪ್ರಜೆಗಳು ನಾವಾಗಬೇಕಾದರೆ ನಾವು ಮೊದಲು ಪುಣ್ಯವಂತರು,  ಚಾರಿತ್ರ್ಯವಂತರಾಗಬೇಕಲ್ಲವೇ?
-ಕ.ವೆಂ.ನಾಗರಾಜ್,
**************
ಚಿತ್ರ ಕೃಪೆ: http://www.vectorstock.com/royalty-free-vector/good-and-evil-vector-642668
ದಿನಾಂಕ 20.10.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: