ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಡಿಸೆಂಬರ್ 14, 2014

ಒಂಟಿತನ ಮತ್ತು ಏಕಾಂತ



     ಒಂಟಿತನ - ಮಾನವ ಜೀವಿಗಳು ಸಾಮಾನ್ಯವಾಗಿ ಅನುಭವಿಸುವ ಅನಿವಾರ್ಯ ಸ್ಥಿತಿ. ತಾನೊಬ್ಬನೇ, ತನ್ನೊಡನೆ ಇತರರಿಲ್ಲ ಎಂಬ ಭಾವವನ್ನು, ಇನ್ನೊಬ್ಬರ ತೀವ್ರವಾದ ಅಗತ್ಯವಿದ್ದು, ಸಿಗದಿದ್ದಾಗ ಉಂಟಾಗುವ ಸ್ಥಿತಿಯನ್ನು ಒಂಟಿತನವೆನ್ನಬಹುದು. ಇಂತಹ ಸ್ಥಿತಿಯಲ್ಲಿ ಆಹಾರ ರುಚಿಸುವುದಿಲ್ಲ, ನೀರು ಹಿತವಾಗುವುದಿಲ್ಲ. ಆಹಾರ ಸೇವಿಸಿದರೂ ಅನಿವಾರ್ಯ ಕ್ರಿಯೆಯಂತೆ ಜರುಗುವುದು. ಯಾವ ವಿಷಯಗಳಲ್ಲೂ ಆಸಕ್ತಿ ಬರದು. ಆಲಸ್ಯತನ ಮೈವೆತ್ತುವುದು. ಗಡಿಯಾರದ ಚಲನೆ ಅತ್ಯಂತ ನಿಧಾನವಾಗಿ ತೋರುವುದು. ತಾತ್ಕಾಲಿಕ ಒಂಟಿತನ ಸಹ್ಯವಾಗಬಹುದು, ಆದರೆ ದೀರ್ಘಕಾಲದ ಅನಿವಾರ್ಯ ಒಂಟಿತನ ಖಿನ್ನತೆಗೆ ದೂಡುತ್ತದೆ, ಇನ್ನಿತರ ಕಾಯಿಲೆಗಳಿಗೂ ದಾರಿ ಮಾಡಿಕೊಡುತ್ತದೆ. ಒಂಟಿತನದಿಂದ ಬರುವ ಹತಾಶೆ, ಸಿಟ್ಟು, ಅಸಹಾಯಕತೆಗಳು ಹುದುಗಿಟ್ಟಿಸಿದ್ದ ಆಕ್ರೋಶ ಒಮ್ಮೆಲೇ ಹೊರನುಗ್ಗಿ ಅಸಹ್ಯಕರ ವಾತಾವರಣ ಸೃಷ್ಟಿಸುವುದರ ಜೊತೆಗೆ, ಸಂಬಂಧಗಳನ್ನು ಶಾಶ್ವತವಾಗಿ ಮುರಿಯುವಂತೆ ಮಾಡಬಹುದು. ಪರಿಸ್ಥಿತಿ ಬಿಗಡಾಯಿಸಿ ಇತರರಿಗೂ ಮತ್ತು ಮುಖ್ಯವಾಗಿ ಸಂಬಂಧಿಸಿದವರಿಗೇ ಸರಿಡಿಸಲಾಗದ ಹಾನಿ ಉಂಟು ಮಾಡಬಹುದು. ಇಂತಹ ಸಂದರ್ಭಗಳಲ್ಲಿ ದುರ್ಬಲ ಮನಸ್ಕರು ಆತ್ಮಹತ್ಯೆ ಸಹ ಮಾಡಿಕೊಳ್ಳಬಹುದು. ಒಂಟಿತನದ ಭಾವವೆಂದರೆ ಸ್ನೇಹಕ್ಕಾಗಿ ಹಪಹಪಿಸುವ ಹಂಬಲಿಕೆಯ ಸೂಚಿ. 
     ಹಲವಾರು ರೀತಿಯ ಒಂಟಿತನಗಳನ್ನು ಗಮನಿಸಬಹುದು. ಒಂದು ಉದಾಹರಣೆ ನೋಡೋಣ. ಅವನೊಬ್ಬ ಆದರ್ಶವಾದಿ ಯುವಕ. ಹಲವಾರು ಕನಸುಗಳನ್ನು ಕಟ್ಟಿಕೊಂಡವನು, ನ್ಯಾಯ, ನೀತಿ, ಧರ್ಮ ಎಂದು ಹೋರಾಡುವ ಮನೋಭಾವದ ಅವನಿಗೆ ಕುಟುಂಬದ ಸದಸ್ಯರ ಸಹಕಾರ, ಬೆಂಬಲ ಸಿಗುವುದಿಲ್ಲ. ನಾಲ್ಕು ಜನರಂತೆ ನಮ್ಮ ಹುಡುಗ ಇಲ್ಲ, ಅವನು ಉದ್ಧಾರವಾಗುವುದಿಲ್ಲವೆಂಬ ಆತಂಕ ಅವನ ಪೋಷಕರಿಗೆ. ಅನೇಕ ರೀತಿಯಲ್ಲಿ ತಿಳಿ ಹೇಳುತ್ತಾರೆ, ಬೈದು ಬುದ್ಧಿ ಹೇಳುತ್ತಾರೆ, ಅವರಿವರಿಂದ ಉಪದೇಶ ಮಾಡಿಸುತ್ತಾರೆ. ಆದರೆ ಆದರ್ಶದ ಬೆನ್ನು ಬಿದ್ದ ಯುವಕನಿಗೆ ಅವಾವುದೂ ರುಚಿಸುವುದಿಲ್ಲ. ಒಳ್ಳೆಯ ವಿಚಾರಕ್ಕೆ ಮನೆಯವರೇ ಬೆಂಬಲಿಸದಿದ್ದರೆ ಹೇಗೆ ಎಂಬುದು ಅವನ ವಾದ. ಕೊನೆಗೆ ಮನೆಯವರು ಸುಮ್ಮನಾದರೂ ಅವರ ಕಿರಿಕಿರಿ, ಗೊಣಗಾಟಗಳು ತಪ್ಪುವುದೇ ಇಲ್ಲ. ಕಠಿಣ ಆದರ್ಶದ ಹಾದಿ ಹಿಡಿದ ಅವನಿಗೆ ಮನೆಯ ಹೊರಗೂ ಪ್ರೋತ್ಸಾಹ ಸಿಗುವುದಿಲ್ಲ. ತಾನು ಮಾಡುತ್ತಿರುವುದು ಸರಿ ಎಂಬ ಅವನ ಅಂತರಂಗದ ಒಪ್ಪಿಗೆ ಮಾತ್ರ ಅವನ ಜೊತೆಗಾರನಾಗಿರುತ್ತದೆ. ಬೆನ್ನು ತಟ್ಟುವವರಿಲ್ಲದ ಅವನನ್ನು ಪ್ರಿಯರ ಹೀನೈಕೆ ಜೊತೆಗೂಡಿ ಕುಗ್ಗಿಸುತ್ತದೆ, ಒಂಟಿತನದ ಅನುಭವ ಮಾಡಿಸುತ್ತದೆ. 'ಒಳ್ಳೆಯವನಾಗು, ನೀನು ಒಂಟಿಯಾಗುವೆ' ಎಂಬ ಮಾತು ಅವನಂತಹವರನ್ನು ಕಂಡೇ ಹೇಳಿದ್ದಿರಬೇಕು.
     ಹದಿಹರೆಯದ ಹುಚ್ಚು ಪ್ರೇಮಿಗಳ ಒಂಟಿತನ ಮತ್ತೊಂದು ತರಹ. ಅವನಿಲ್ಲದೆ/ಅವಳಿಲ್ಲದೆ ಬಾಳು ಶೂನ್ಯ ಎಂದು ಭಾವಿಸಿ ಕೊರಗುವ, ಹುಚ್ಚಾಗುವ ದೇವದಾಸಗಳದ್ದು ಒಂದು ರೀತಿಯಾದರೆ, ತನಗೆ ದಕ್ಕದ ಅವಳು/ಅವನು ಬೇರೆಯವರಿಗೂ ಸಿಗಬಾರದು ಎಂದು ಆಸಿಡ್ ಎರಚುವರದು, ಕೊಲೆ ಮಾಡುವರದು ಮತ್ತೊಂದು ರೀತಿ. ಆತ್ಮಹತ್ಯೆ ಮಾಡಿಕೊಳ್ಳುವವರದೂ ಒಂಟಿತನವನ್ನು ಎದುರಿಸಲಾಗದವರ ಮಗದೊಂದು ರೀತಿ. ಅವನ/ಅವಳ ನೆನಪಿನಲ್ಲಿ ಕೊನೆಯವರೆಗೂ ಮದುವೆಯಾಗದೇ ಉಳಿಯುವ ಪ್ರೇಮಿಗಳನ್ನೂ, ಮಾನಸಿಕ ಕಾಯಿಲೆಗಳಿಂದ ನರಳುವವರನ್ನೂ ಕಾಣಬಹುದು. ಅವನು/ಅವಳು ಜೊತೆಗಿರದ ಕಾರಣ ಕಾಡುವ ಒಂಟಿತನದ ಪರಿಣಾಮಗಳಿವು. ಕೇವಲ ಇವರಷ್ಟೇ ಅಲ್ಲ, ತಾವು ಅತಿಯಾಗಿ ಹಚ್ಚಿಕೊಂಡ ಸ್ನೇಹಿತರು, ಬಂಧುಗಳು, ಗಂಡ, ಹೆಂಡತಿ, ಸೋದರ-ಸೋದರಿಯರು, ಮನೆಯವರು ಯಾರೇ ಆಗಲಿ ತಮ್ಮಿಂದ ದೂರವಾದಾಗ/ಕಾಲವಾದಾಗ ಸಹ ಒಂಟಿತನ ಕಾಡದೇ ಇರದು. ಎಷ್ಟರ ಮಟ್ಟಿಗೆ ಅವರನ್ನು ಹಚ್ಚಿಕೊಂಡಿದ್ದರು ಎಂಬುದರ ಮೇಲೆ ಅಂತಹ ಒಂಟಿತನದ ಪರಿಣಾಮ ಬೀರುತ್ತದೆ. ವೃದ್ಧಾಪ್ಯದಲ್ಲಿ ಮಕ್ಕಳು ತಮಗೆ ಏನು ಮಾಡದಿದ್ದರೂ ಪರವಾಗಿಲ್ಲ, ಪ್ರೀತಿಯಿಂದ ಮಾತನಾಡಿಸಿದರೆ ಸಾಕು ಎಂದು ಹಂಬಲಿಸುವ ವೃದ್ಧರ ಸಂಖ್ಯೆಗೂ ಏನೂ ಕಡಿಮೆಯಿಲ್ಲ. 
     ಮೇಲಿನ ಉದಾಹರಣೆಗಳಿಂದ ಪ್ರೀತಿ, ವಿಶ್ವಾಸ, ಸ್ನೇಹದ ಕೊರತೆಯೇ ಒಂಟಿತನದ ಮೂಲವೆಂದು ತಿಳಿಯುವುದಲ್ಲವೇ? ಒಗಟಿನ ಒಳಗೇ ಉತ್ತರ ಅಡಗಿರುವಂತೆ ನಮಗೆ ಒಂಟಿತನ ಕಾಡಬಾರದೆಂದರೆ ಪರಸ್ಪರ ಪ್ರೀತಿ, ವಿಶ್ವಾಸಗಳಿಗೆ ಕನಿಷ್ಠ ನಮ್ಮ ಕಡೆಯಿಂದಲಾದರೂ ತಪ್ಪಾಗದಂತೆ ನೋಡಿಕೊಳ್ಳುವುದರ ಅಗತ್ಯತೆ ಗೋಚರಿಸುತ್ತದೆ. ಆಗ ನಮ್ಮ ಅಂತರಂಗವಾದರೂ ನಮ್ಮ ಜೊತೆಗೆ ಇರುತ್ತದೆ, ಸಮಾಧಾನಿಸುತ್ತದೆ. ನಮ್ಮ ತಪ್ಪಿದ್ದು ತಿದ್ದಿಕೊಳ್ಳದಿದ್ದರೆ ಅಂತರಂಗವೂ ಜೊತೆಗಿರುವುದಿಲ್ಲ. ಕಳೆದುಕೊಳ್ಳುವವರು ಇನ್ನು ಯಾರೂ ಉಳಿದಿಲ್ಲವೆಂದಾದಾಗ, ನಮ್ಮ ಸ್ವಂತಿಕೆಗೆ ಬೆಲೆಯೇ ಇಲ್ಲವಾದಾಗ ಅದನ್ನು ಜೀವನದ ಸಾವು (ಜೀವದ ಸಾವಲ್ಲ) ಎನ್ನಬಹುದು. ಅಂತಹ ಸಾವು ಜೀವನಕ್ಕೆ ಬರಬಾರದೆಂದರೆ ನಮ್ಮ ಒಳಗಿನ ಮಾತುಗಳಿಗೆ ನಾವು ಕಿವಿಗೊಡಲೇಬೇಕು. 
     ಮತ್ತೊಂದು ರೀತಿಯ ಒಂಟಿತನವಿದೆ. ಆ ಒಂಟಿತನದಲ್ಲಿ ಹಿತವಿದೆ. ಅದೆಂದರೆ ವಿವಿಧ ರಂಗಗಳಲ್ಲಿ ಸುಪ್ರಸಿದ್ಧರಾದವರ, ಮುಖಂಡರ, ಹಿರಿಯ ಅಧಿಕಾರಿಗಳ ಒಂಟಿತನ. ಅವರುಗಳು  ಒಂಟಿತನವನ್ನು ಒಪ್ಪಿಕೊಳ್ಳಲೇಬೇಕು, ಅಪ್ಪಿಕೊಳ್ಳಲೇಬೇಕು. 'ಒಂಟಿಯಾಗಿರುವುದೆಂದರೆ ಇತರರಿಗಿಂತ ಭಿನ್ನವಾಗಿರುವುದು, ಇತರರಿಗಿಂತ ಭಿನ್ನವೆಂದರೆ ಒಂಟಿಯಾಗಿರುವುದು' ಎಂದು ಅವರ ಮಟ್ಟಿಗೆ ಹೇಳಬಹುದು. ಅವರುಗಳನ್ನು ಸಮನಾಗಿ ಪರಿಗಣಿಸುವವರ ಸಂಖ್ಯೆ  ಬಹಳ ಕಡಿಮೆ. ಅವರ ಒಂಟಿತನದಲ್ಲೇ ಅವರ ಸೃಜನಾತ್ಮಕ ಶಕ್ತಿ ಹೊರಹೊಮ್ಮುತ್ತದೆ. ಇದರಲ್ಲೂ ಒಂದು ಅಪಾಯವಿದೆ. ಅದೆಂದರೆ ಸುಪ್ರಸಿದ್ಧರಾದವರು ಕಾರಣಾಂತರಗಳಿಂದ ಪ್ರಸಿದ್ಧಿ ಕಳೆದುಕೊಂಡರೆ, ಅಧಿಕಾರ ಚ್ಯುತಿಯಾದರೆ ಅವರ ಜೊತೆಗಿದ್ದು ಬಹುಪರಾಕ್ ಹೇಳುತ್ತಿದ್ದವರು ಇದ್ದಕ್ಕಿದ್ದಂತೆ ಕಣ್ಮರೆಯಾದರೆ ಅವರು ಅನುಭವಿಸುವ ಒಂಟಿತನದ ನೋವು ವರ್ಣನಾತೀತ. ಅದನ್ನು ಅವರು ಮಾತ್ರ ಅರಿಯಬಲ್ಲರು. ಇತ್ತೀಚಿನ ಉದಾಹರಣೆಯೆಂದರೆ ಕ್ಷಣಿಕ ವ್ಯಾಮೋಹದಿಂದಾಗಿ ಅಧಿಕಾರ, ಸ್ಥಾನ, ಮಾನಗಳನ್ನು ಕಳೆದುಕೊಂಡ ಕರ್ನಾಟಕದ ಸಚಿವರ ಜೊತೆಗೆ ಈಗ ಯಾರಿದ್ದಾರೆ? ಒಂದು ರೀತಿಯಲ್ಲಿ ಹೇಳಬೇಕೆಂದರೆ ಅವರಿಗೆ ಈಗ ಆಗಿರುವ, ಆಗುತ್ತಿರುವ ಶಿಕ್ಷೆ ಕಡಿಮೆಯೇನಲ್ಲ.
     ಇನ್ನೊಂದು ಅಪಾಯಕಾರಿ ಒಂಟಿತನದ ಬಗ್ಗೆ ನೋಡೋಣ. ಅದೆಂದರೆ ಒಟ್ಟಿಗಿದ್ದರೂ ಕಾಡುವ ಒಂಟಿತನ. ಸಾಗರದ ಮಧ್ಯದಲ್ಲಿದ್ದು 'ಎಲ್ಲೆಲ್ಲೂ ನೀರು, ಕುಡಿಯಲು ತೊಟ್ಟೂ ನೀರಿಲ್ಲ' ಎಂಬಂತಹ ಸ್ಥಿತಿ ಅದು. ಯಾವುದೋ ಒಂದು ಕುಟುಂಬದ ಉದಾಹರಣೆಯನ್ನು ತೆಗೆದುಕೊಳ್ಳೋಣ. (ಎಲ್ಲಾ ಕುಟುಂಬಗಳೂ ಹೀಗಿರುತ್ತವೆ ಎಂದು ಹೇಳುತ್ತಿಲ್ಲ, ಹೀಗಿರಲೂ ಬಾರದು) ಎಲ್ಲರೂ ಒಟ್ಟಿಗೇ ಟಿವಿ ನೋಡುತ್ತಿರುತ್ತಾರೆ. ಪರಸ್ಪರ ಮಾತುಗಳು ಅನಿವಾರ್ಯವಾದರೆ ಮಾತ್ರ ಆಡುತ್ತಾರೆ. ಅವರವರ ಪಾಡು ಅವರಿಗೆ. ಪರಸ್ಪರರನ್ನು ಸಹಿಸಿಕೊಂಡು ಹೋಗುತ್ತಿರುತ್ತಾರೆ. ಕೆಲವೊಮ್ಮೆ  ಅಸಹನೀಯವಾದಾಗ ಕಿರುಚಾಡುತ್ತಾರೆ, ಜಗಳವಾಡುತ್ತಾರೆ, ಅನಿವಾರ್ಯವೆಂಬಂತೆ ಸುಮ್ಮನಾದರೂ ಎಲ್ಲರೂ ಅಲ್ಲಿ ಒಂಟಿಗಳೇ. ನೆಂಟರು, ಸ್ನೇಹಿತರು ಬಂದರೂ ಔಪಚಾರಿಕವಾದ ಮಾತುಗಳನ್ನಾಡಿ ಪುನಃ ಟಿವಿಯ ಕಡೆ ಗಮನ ಕೊಡುತ್ತಾರೆ. ಬಂದವರಿಗೆ ಏಕಾದರೂ ಬಂದೆವಪ್ಪಾ ಅನ್ನುವ ಸ್ಥಿತಿ. ಕಛೇರಿಗಳಲ್ಲೂ ಅಷ್ಟೇ. ಒಂಟಿತನವನ್ನು ಅನುಭವಿಸುವ ಅಧಿಕಾರಿಗಳು, ನೌಕರರನ್ನು ಕಾಣಬಹುದು. ಇಲ್ಲಿ ಗಮನಿಸುವ ಅಂಶವೆಂದರೆ ಸ್ವಂತಿಕೆಗೆ, ಅಹಂಗೆ ಬೀಳುವ ಪೆಟ್ಟು ಒಂಟಿತನವಾಗಿ ಕಾಡುವುದು! ಪರಸ್ಪರ ಅಪನಂಬಿಕೆಯಿಂದ ಉಂಟಾಗುವ ಒಂಟಿತನ ನರಕಸದೃಶ. ಉದ್ದೇಶೂರ್ವಕವಾಗಿ ಅಹಂಗೆ ಪೆಟ್ಟು ಕೊಡುವ ಕುಟುಂಬದವರಿಂದಲೇ, ಜೊತೆಗಾರರಿಂದಲೇ, ಸಹೋದ್ಯೋಗಿಗಳಿಂದಲೇ ನೋವು ಅಧಿಕವಾಗಿ ಒಂಟಿಯಾದ ಭಾವ ತರುವುದು. 
     ಒಂಟಿತನದ ತಾಪ ಕಡಿಮೆ ಮಾಡಿಕೊಳ್ಳಲು ಮಾರ್ಗಗಳಿವೆ. ಓದುವುದು, ಬರೆಯುವುದು, ಸಂಗೀತ ಕೇಳುವುದು, ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯ ಅಭ್ಯಾಸಗಳಾದರೆ, ದುಶ್ಚಟಗಳಿಗೆ ದಾಸರಾಗುವುದು ಇನ್ನೊಂದು ರೀತಿಯ ಪಲಾಯನ. ಸಿಗರೇಟು ಸೇದುವುದು, ಕುಡಿಯುವುದು, ಜೂಜಾಡುವುದು, ವೇಶ್ಯಾಸಂಗ, ಇತ್ಯಾದಿಗಳು ಇದರಲ್ಲಿ ಸೇರುತ್ತವೆ. ಕ್ರಮೇಣ ದುಶ್ಚಟಗಳು ಅವರನ್ನೇ ಆಕ್ರಮಿಸಿ ಅವರನ್ನಲ್ಲದೆ ಅವರನ್ನು ನಂಬಿದವರಿಗೂ ನಾನಾ ರೀತಿಯ ತೊಂದರೆ ಕೊಡುತ್ತವೆ. ಇನ್ನೂ ಹೆಚ್ಚಿದ ಒಂಟಿತನದಿಂದ ಬಳಲುವಂತೆ ಮಾಡುತ್ತವೆ. ಒಂಟಿತನ ಜೀವನಕ್ಕೆ ಅನುಭವ ಕೊಡುತ್ತದೆ. ಸರಿಯಾಗಿ ಬಳಸಿಕೊಂಡಲ್ಲಿ ಒಂಟಿತನ ವರವಾಗುತ್ತದೆ. ಒಳ್ಳೆಯ ಸಾಹಿತ್ಯ, ಸಂಗೀತ, ಇತ್ಯಾದಿಗಳು ಕುಡಿಯೊಡೆಯುವುದು ಆಗಲೇ. ಪ್ರೀತಿಸುವವರ, ತನ್ನನ್ನು ಗುರುತಿಸುವವರ ಕೊರತೆ ನೀಗಿಸಿಕೊಳ್ಳಲು ಅವರೇ ಇತರರನ್ನು ಪ್ರೀತಿಸಲು, ಇತರರನ್ನು ಗೌರವಿಸಲು ಮುಂದಾದರೆ ಅವರಿಂದಲೂ ಪ್ರತಿ ಪ್ರೀತಿ, ಪ್ರತಿ ಗೌರವ ಸಿಗಲಾರದೆ? ಬಂದದ್ದೂ ಒಂಟಿ, ಹೋಗುವುದೂ ಒಂಟಿ, ಆದರೆ ನಡುವಿನ ಜೀವನದಲ್ಲಿ ಪರಸ್ಪರರ ಅವಲಂಬನೆ, ಅಗತ್ಯತೆ ಬರುವುದರಿಂದ ಒಂಟಿತನವನ್ನೂ ಎದುರಿಸಬೇಕಾಗುತ್ತದೆ. ಪ್ರೀತಿ, ವಿಶ್ವಾಸಗಳು ನಾವು ಒಂಟಿಯಲ್ಲವೆಂದು ಭಾವಿಸುವಂತೆ ಮಾಡುತ್ತದೆ. ಆಳವಾಗಿ ಯೋಚಿಸಿದರೆ ಸಮುದಾಯ, ಸಂಘಟನೆ, ಜಾತಿ, ಧರ್ಮ, ಗುಂಪು, ಇತ್ಯಾದಿಗಳೂ ಸಹ ಮಾನವನ ಒಂಟಿತನವನ್ನು ಹೋಗಲಾಡಿಸುವ ಸಲುವಾಗಿಯೇ ಹುಟ್ಟಿಕೊಂಡದ್ದು ಎಂದು ಅನ್ನಿಸದಿರದು. ದುಃಖ ಅನುಭವಿಸಲು ಒಬ್ಬರು ಇದ್ದರೂ ಆಗುತ್ತದೆ, ಆದರೆ ಸಂತೋಷ ಹಂಚಿಕೊಳ್ಳಲು ಇಬ್ಬರಾದರೂ ಇರಬೇಕು. ಆದ್ದರಿಂದ ಮನುಜ-ಮನುಜರ ನಡುವೆ ಗೋಡೆಗಳನ್ನು ಕಟ್ಟದೆ ಸೇತುವೆಗಳನ್ನು ಕಟ್ಟಿದರೆ ಒಂಟಿತನ ಕಡಿಮೆಯಾದೀತು. ಒಂಟಿಯಾಗಿ ಇರಬಯಸುವವರು ಯಶಸ್ವಿ ಮಾನವರಲ್ಲ. ಇತರ ಹೃದಯಗಳ ಮಿಡಿತ ಕೇಳದವರ ಹೃದಯ ಬಾಡುತ್ತದೆ, ಇತರರ ಮಾತುಗಳನ್ನು ಕೇಳಲಿಚ್ಛಿಸದೆ ತನ್ನೊಬ್ಬನ ಮಾತುಗಳನ್ನೇ ಕೇಳುವವನ ಮೆದುಳು ಕುಗ್ಗುತ್ತದೆ.
     ಇದುವರೆಗೆ ಒಂಟಿತನದ ಬಗ್ಗೆ ಸಾಕಷ್ಟು ಹೇಳಿದ್ದಾಯಿತು. ಒಂಟಿತನದಂತೆಯೇ ತೋರುವ, ಆದರೆ ಒಂಟಿತನವಲ್ಲದ, ಒಂಟಿತನಕ್ಕೆ ಹೋಲಿಸಲಾಗದ ಸಂಗತಿಯೊಂದಿದೆ. ಅದೇ ಏಕಾಂತ. ಏಕಾಂತ ಬೇರೆ, ಒಂಟಿತನ ಬೇರೆ. ಒಂಟಿತನ ತನ್ನತನದ ಬಡತನವಾದರೆ, ಏಕಾಂತ ತನ್ನತನದ ವೈಭವದ ಸ್ಥಿತಿಯೆನ್ನಬಹುದು. ಒಂಟಿತನ ಒಬ್ಬನೇ ಇರುವ ನೋವ ಹೇಳಿದರೆ, ಏಕಾಂತ ಒಬ್ಬನೇ ಇರುವ ಸೊಬಗ ತೋರುವುದು. ಏಕಾಂತದಲ್ಲಿ ಬರಹಗಾರನೊಬ್ಬ ಅರ್ಥವಾಗದ ಸಂಗತಿಗಳಿಗೆ ಅರ್ಥ ಹುಡುಕುತ್ತಾನೆ, ಸಂಗೀತಗಾರ ಹೊಸ ಆಯಾಮಗಳ ಕುರಿತು ಧ್ಯಾನಿಸುತ್ತಾನೆ, ವಿವಿಧ ಸ್ತರಗಳವರು ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಮುಂದುವರೆಯುವ ಕುರಿತು ಚಿಂತಿಸುತ್ತಾರೆ, ಸಾಧಕ ಬದುಕಿನ ಅರ್ಥ ತಿಳಿಯುವ ಪ್ರಯತ್ನ ನಡೆಸುತ್ತಾನೆ. ಆಗ ಅವರುಗಳ ಜೊತೆಗಿರುವುದು ಅವರ ಅಂತರಂಗ, ಅವರಿಗೆ ದಾರಿ ತೋರುವುದು ಅವರ ಅಂತರಂಗ. ನಮ್ಮ ತಪ್ಪುಗಳನ್ನು ಇತರರ ಎದುರಿಗೆ ಒಪ್ಪಿಕೊಳ್ಳದಿದ್ದರೂ ಅಂತರಂಗದ ಎದುರು ತಲೆಬಾಗಲೇಬೇಕು, ಅದುವರೆಗೆ ಗೋಚರಿಸದ ಸತ್ಯ ಗೋಚರಿಸುವುದು ಆಗಲೇ. ಅದೇ ಏಕಾಂತದ ಮಹಿಮೆ. ಏಕಾಂತ ಪ್ರೌಢತೆಯ ಸಂಕೇತ. ಏಕಾಂತದಲ್ಲಿ ಚಟುವಟಿಕೆಗಳ ಉದಯವಾಗುತ್ತದೆ, ಅಲ್ಲಿ ಚಲನೆಯಿಲ್ಲದ ಕ್ರಿಯೆಯಿದೆ, ಶ್ರಮವಿರದ ಕೆಲಸವಿದೆ, ಕಣ್ಣು ಮೀರಿದ ದೃಷ್ಟಿಯಿದೆ, ಬಯಕೆ ಮೀರಿದ ಆಸೆಯಿದೆ, ಅನಂತ ತೃಪ್ತಿಯ ಭಾವವಿದೆ. ಏಕಾಂತ ತನ್ನತನವನ್ನು ಬೆಳೆಸುವುದು, ಇತರರು ಏಕಾಂತದ ಸ್ಥಾನವನ್ನು ತುಂಬಲಾರರು. ಅಂತರಂಗ ಬಹಿರಂಗಕ್ಕೆ ಹೊಂದಿಕೆಯಾಗದಿದ್ದರೆ ಒಂಟಿತನ ಕಾಡುತ್ತದೆ. ಏಕಾಂತ ಹೊಂದಿಕೆ ಮಾಡಿಕೊಳ್ಳುವ ದಾರಿ ತೋರುತ್ತದೆ, ಒಂಟಿಯಲ್ಲವೆಂಬ ಭಾವಕ್ಕೆ ಇಂಬು ಕೊಡುತ್ತದೆ, ನಾವು ನಾವಾಗಿರಲು ಏಕಾಂತದಲ್ಲಿ ಮಾತ್ರ ಸಾಧ್ಯ. ಸಮೂಹದಲ್ಲಿ ಮತ್ತು ಇತರರೊಂದಿಗೆ ಇದ್ದಾಗ ನಾವು ನಮ್ಮತನವನ್ನು ಕಳೆದುಕೊಳ್ಳುತ್ತೇವೆ ಎಂಬುದು ನಿತ್ಯ ಸತ್ಯ. ಇತರರು ಏನೆಂದುಕೊಳ್ಳುತ್ತಾರೋ ಎಂಬ ಭಾವನೆಯಿಂದಲೋ, ಇತರರು ತಪ್ಪು ತಿಳಿಯುತ್ತಾರೆ ಎಂತಲೋ ಅಥವಾ ಯಾರನ್ನಾದರೂ ಮೆಚ್ಚಿಸುವ ಕಾರಣಕ್ಕಾಗಿಯೋ ನಾವು  ನಮಗಿಷ್ಟವಿಲ್ಲದಿದ್ದರೂ ನಮ್ಮತನಕ್ಕೆ ಹೊರತಾಗಿ ವರ್ತಿಸುತ್ತೇವೆ ಅಥವ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುತ್ತೇವೆ. ಅಂತರಂಗ ಬಹಿರಂಗಗಳಿಗೆ ಹೊಂದಿಕೆಯಾಗದ ಕಾರಣ ಆಗ ಒಂಟಿತನದ ಭಾವ ಮನೆ ಮಾಡುತ್ತದೆ. ಏಕಾಂತದಲ್ಲಿ ಹಾಗಲ್ಲ, ಅಲ್ಲಿ ಅಂತರಂಗ ಬಹಿರಂಗಗಳಿಗೆ ಹೊಂದಿಕೆಯಿರುತ್ತದೆ ಮತ್ತು ಆ ಕಾರಣದಿಂದಾಗಿ ಅಲ್ಲಿ ಸಂತೋಷವಿರುತ್ತದೆ. ಸಾಧನೆಗೆ, ಧ್ಯಾನಕ್ಕೆ, ಮನನಕ್ಕೆ, ವಿಮರ್ಶೆಗೆ, ಹೇಗಿರಬೇಕೆಂದು ನಿರ್ಧರಿಸುವುದಕ್ಕೆ, ಉತ್ತಮ ರೀತಿಯಲ್ಲಿ ಮುಂದುವರೆಯುವುದಕ್ಕೆ ಏಕಾಂತದಲ್ಲಿ ಅವಕಾಶವಿದೆ. ಇತರರನ್ನು ಕೈಯಿಂದ ಮುಟ್ಟುವುದಕ್ಕೂ ಹೃದಯದಿಂದ ಮುಟ್ಟುವುದಕ್ಕೂ ವ್ಯತ್ಯಾಸ ತಿಳಿಯುವುದು ಏಕಾಂತದಲ್ಲೇ.
-ಕ.ವೆಂ.ನಾಗರಾಜ್.
**************
3.12.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

3 ಕಾಮೆಂಟ್‌ಗಳು:

  1. ಮಕ್ಕಳೇ ಬೇಡವೆಂದು ತೀರ್ಮಾನಿಸಿ, ಹಾಗೇ ಉಳಿದುಬಿಟ್ಟಿರುವ ನಾವು ದಂಪತಿಗಳ ವೃದ್ಧಾಪ್ಯವು ಏಕಾಂತ ಕಲ್ಪಿಸಿವಂತಿದ್ದು, ಒಂಟಿತನ ಕಾಡದಂತೆ ತಾವು ಆಶೀರ್ವದಿಸಿರಿ.

    ಪ್ರತ್ಯುತ್ತರಅಳಿಸಿ
  2. ಬದರೀನಾಥರೇ, ನೀವೆಂದೂ ಒಂಟಿಯಲ್ಲ! ನಿಮಗೆಷ್ಟೊಂದು ಮಿತ್ರರಿದ್ದಾರೆ!! ಒಂಟಿತನ ನಿಮ್ಮನ್ನು ಕಂಡು ಹೆದರುತ್ತದೆ!!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೊಳೆನರಸಿಪುರ ಮ೦ಜುನಾಥ Thimmayya
      ತುಂಬಾ ಅರ್ಥಗರ್ಭಿತ ಲೇಖನ ಹಿರಿಯರೇ, ಒಂಟಿತನಕ್ಕೂ ಏಕಾಂತಕ್ಕೂ ಇರುವ ವ್ಯತ್ಯಾಸವನ್ನು ಬಹಳ ಚೆನ್ನಾಗಿ ವರ್ಣಿಸಿರುವಿರಿ. ಆ ಏಕಾಂತದ ಸುಖವನ್ನು ನಾನೀಗ ನಿಜಕ್ಕೂ ಅನುಭವಿಸುತ್ತಿದ್ದೇನೆ.

      Srinivasa Holla
      ಒಂಟಿತನ ಶಿಕ್ಷೆ ,ಆದರೆ ಎಕಾಂತ ನಾವೇ ಬಯಸಿ ಹೊಂದುವ ಸ್ಥಿತಿ

      Jayashree Bhat
      ಕನ್ನಡಭೂಮಿಯನ್ನು ಬೆಳೆಸುತ್ತಿರುವ ನಿಮಗೆ ನಮ್ಮ ಕೃತಜ್ಞತೆಗಳು

      ಅಳಿಸಿ