ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಡಿಸೆಂಬರ್ 24, 2014

ನಾವು ಮತ್ತು ನಮ್ಮ ಜ್ಞಾನ


     ಹೀಗೆಯೇ ಯಾವುದೋ ವಿಷಯದ ಕುರಿತು ಚಿಂತಿಸುತ್ತಿದ್ದಾಗ ಈ ಹಳೆಯ ಘಟನೆ ನೆನಪಾಯಿತು. ಆಗಿನ್ನೂ ಬಿ.ಎಸ್.ಸಿ. ಪದವಿ ಮುಗಿಸಿದ ತರುಣದಲ್ಲೇ ೧೯೭೧ರಲ್ಲಿ ನನಗೆ ಅಂಚೆ ಕಛೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿ ಹಾಸನದ ಪ್ರಧಾನ ಅಂಚೆ ಕಛೇರಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದೆ. ಅಲ್ಲಿನ ಉಳಿತಾಯ ಖಾತೆ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕಾಲೇಜಿನಲ್ಲಿ ನಮಗೆ ಗಣಿತದ ಪಾಠ ಮಾಡುತ್ತಿದ್ದ ಲೆಕ್ಚರರೊಬ್ಬರು ತಮ್ಮ ಉಳಿತಾಯ ಖಾತೆಗೆ ಹಣ ಜಮ ಮಾಡಲು ಬಂದಿದ್ದರು. ಎ.ಬಿ.ಚನ್ನೇಗೌಡ ಎಂಬ ಹೆಸರಿನ ಅವರನ್ನು ನಾವು ಎಬಿಸಿ ಗೌಡರು ಎಂದು ಕರೆಯುತ್ತಿದ್ದೆವು. ನಾನು ಓದಿದ ಓದಿಗೂ, ಆಗ ಮಾಡುತ್ತಿದ್ದ ಕೆಲಸಕ್ಕೂ ಯಾವುದೇ ಸಂಬಂಧವಿರಲಿಲ್ಲ. ಇದರ ಹಿನ್ನೆಲೆಯಲ್ಲಿ ನಾನು ಅವರಿಗೆ ನಮಸ್ಕಾರ ಮಾಡುತ್ತಾ ಹೇಳಿದ್ದೆ; "ಸರ್, ನಿಮ್ಮ ಟ್ರಿಗೊನೊಮೆಟ್ರಿ, ಕ್ಯಾಲ್ಕ್ಯುಲಸ್, ಅಸ್ಟ್ರಾನಮಿ ಯಾವುದೂ ಈಗ ಪ್ರಯೋಜನಕ್ಕೆ ಬರಲಿಲ್ಲ." ನಾನು ಅವರನ್ನು ಅವಹೇಳನ ಮಾಡುತ್ತಿದ್ದೇನೆಂದು ಭಾವಿಸಿದ ಅವರು ಗಟ್ಟಿಯಾಗಿ ಕೂಗಾಡಿ ನನ್ನ ಮೇಲೆ ತಿರುಗಿ ಬಿದ್ದಿದ್ದರು. ಕೊನೆಯಲ್ಲಿ, "ಮೈಂಡ್ ಯುವರ್ ಬಿಸಿನೆಸ್" ಎಂದೂ ಎಚ್ಚರಿಸಿದ್ದರು. ಈ ಗದ್ದಲದಿಂದಾಗಿ ಅಕ್ಕಪಕ್ಕದಲ್ಲಿದ್ದವರು ಮತ್ತು ನನ್ನ ಸಹೋದ್ಯೋಗಿಗಳ ಗಮನವೆಲ್ಲಾ ಅವರ ಮತ್ತು ನನ್ನ ನಡುವೆ ಕೇಂದ್ರೀಕೃತವಾಗಿಬಿಟ್ಟಿತ್ತು.  ಅವರ ಕ್ಷಮೆ ಕೇಳಿ ನನ್ನ ಮಾತಿನ ಅಂತರಾರ್ಥ ಅವರಿಗೆ ಗೊತ್ತಾಗುವಂತೆ ಮಾಡಿಸುವಷ್ಟರಲ್ಲಿ ನನಗೆ ಸಾಕೋಸಾಕಾಗಿತ್ತು. 
     ಹೌದು, ನಾನು ಭೌತಶಾಸ್ತ್ರ ಮತ್ತು ಗಣಿತಗಳನ್ನು ಪ್ರಧಾನ ವಿಷಯಗಳನ್ನಾಗಿ ಹೊಂದಿ ಬಿ.ಎಸ್.ಸಿ. ಪದವಿ ಪಡೆದಿದ್ದೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ನಾನು ಕಲಿತಿದ್ದ ಬಹಳಷ್ಟು ಸಂಗತಿಗಳು ಈಗ ನನ್ನ ನೆನಪಿನಲ್ಲಿ ಉಳಿದಿಲ್ಲ ಮತ್ತು ಉಪಯೋಗಕ್ಕೂ ಬರುತ್ತಿಲ್ಲ. ಈಗ ಪರೀಕ್ಷೆ ಎದುರಿಸಿದರೆ ನಾನು ಖಂಡಿತಾ ಅನುತ್ತೀರ್ಣನೇ ಆಗುತ್ತೇನೆ. ಹಾಗಾದರೆ ಇಂತಹ ವಿದ್ಯೆಗೆ ಅರ್ಥವಿದೆಯೇ? ಯಾವುದಾದರೂ ಒಂದು ನೌಕರಿ ಪಡೆಯುವ ಸಲುವಾಗಿ ಆ ಡಿಗ್ರಿ ಪಡೆದಿದ್ದೆ. ನೌಕರಿ ಸಿಕ್ಕಿತು. ಅಷ್ಟರ ಮಟ್ಟಿಗೆ ನನ್ನ ಡಿಗ್ರಿ ಉಪಯೋಗಕ್ಕೆ ಬಂದಿತು. ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಮಾರ್ಪಾಡು ಮಾಡಿ ಗುಮಾಸ್ತರ ಸೈನ್ಯ ನಿರ್ಮಿಸುತ್ತೇನೆಂದು ಹೇಳಿದ್ದ ಮೆಕಾಲೆಯ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ಪಡೆದ ನಾನು ಒಬ್ಬ ಗುಮಾಸ್ತ ಸೈನಿಕನಾಗುವಲ್ಲಿ ಯಶಸ್ವಿಯಾಗಿದ್ದೆ. 
     ೮೪ ಲಕ್ಷ ಜೀವವೈವಿಧ್ಯಗಳಿವೆಯೆಂದು ಹೇಳಲಾಗುತ್ತಿದ್ದು, ಇವುಗಳಲ್ಲಿ ಮಾನವಜೀವಿ ವಿಶಿಷ್ಟವಾಗಿ ಎದ್ದು ಕಾಣುತ್ತಾನೆ. ಅದಕ್ಕೆ ಕಾರಣ ಆತನಲ್ಲಿನ ವಿವೇಚನಾಶಕ್ತಿ. ವಿವೇಚನಾಶಕ್ತಿ ಬಳಸದಿರುವ, ಬಳಸಲಾಗದಿರುವ ಮಾನವನಿಗೂ ಇತರ ಪ್ರಾಣಿಗಳಿಗೂ ವ್ಯತ್ಯಾಸವೇನಿರುತ್ತದೆ? ಈ ವಿವೇಚನಾಶಕ್ತಿ ಬರಲು ಕಾರಣ ಅವನು ಪಡೆಯುವ ಜ್ಞಾನದಲ್ಲಿದೆ. ಈ ಜ್ಞಾನ ಅವನಿಗೆ ನೋಡುವುದರಿಂದ, ಕೇಳುವುದರಿಂದ, ಸೇವಿಸುವುದರಿಂದ, ಮನೆಯಿಂದ, ಸುತ್ತಮುತ್ತಲಿನ ಪರಿಸರದಿಂದ, ಹಿರಿಯರಿಂದ, ಗುರುಗಳಿಂದ, ಶಿಕ್ಷಣ ಶಾಲೆಗಳಿಂದ ಸಿಗುತ್ತದೆ. ಅವನ ಶಕ್ತ್ಯಾನುಸಾರ ಅವನು ಜ್ಞಾನಿಯಾಗುತ್ತಾನೆ. ಹಿಂದೆ ಮಕ್ಕಳಿಗೆ ಎಂಟು ವರ್ಷಗಳಾದಾಗ ಅವರಿಗೆ ಉಪನಯನ ಸಂಸ್ಕಾರ ನೀಡಿ ಗುರುಕುಲಕ್ಕೆ ಶಿಕ್ಷಣ ಪಡೆಯಲು ಕಳಿಸಲಾಗುತ್ತಿತ್ತು. ಆ ಗುರುಕುಲಗಳಲ್ಲಿ ಶಾಸ್ತ್ರವಿದ್ಯೆ, ಶಸ್ತ್ರವಿದ್ಯೆ ಸೇರಿದಂತೆ ಬದುಕಿಗೆ ಪೂರಕವಾಗುವ ವಿದ್ಯೆಗಳು, ಲಲಿತಕಲೆಗಳು ಮುಂತಾದುವನ್ನು ಕಲಿಯಲು ಅವಕಾಶವಿತ್ತು. ಪ್ರತಿಯೊಬ್ಬನಿಗೂ ತಾನು ಇಷ್ಟಪಡುವ ವಿಷಯದಲ್ಲಿ ಪ್ರಾವೀಣ್ಯತೆ ಪಡೆಯುವುದಕ್ಕೆ ಅವಕಾಶವಿರುತ್ತಿತ್ತು. ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ, ನೈತಿಕತೆಯ ಮಹತ್ವ ಅರಿಯುವಲ್ಲಿ ಸುಯೋಗ್ಯ ಮಾರ್ಗದರ್ಶನ ಸಿಗುತ್ತಿತ್ತು. ಅಂತಹ ಶಿಕ್ಷಣ ಪಡೆದು ಮರಳುತ್ತಿದ್ದ ವಿದ್ಯಾರ್ಥಿಗಳು ದೇಶದ ಸುಯೋಗ್ಯ ಪ್ರಜೆಗಳಾಗಿ ಸಮಾಜದ ಆಸ್ತಿಯಾಗುತ್ತಿದ್ದರು. ಇಂದು ಇಂತಹ ಶಿಕ್ಷಣ ಪದ್ಧತಿಯನ್ನು ಈಗ ಊಹಿಸಿಕೊಳ್ಳಲೂ ಆಗುವುದಿಲ್ಲ.
     ಈಗ ಜ್ಞಾನ ಅನ್ನುವುದು ಕೇವಲ ಹೆಸರಿಗಷ್ಟೇ ಆಗಿದೆ ಎಂಬುದನ್ನು ಒಪ್ಪಲೇಬೇಕು. ಕೆಲವರು ತಮ್ಮ ಹೆಸರಿನ ಜೊತೆಗೆ ತಾವು ಪಡೆದಿರುವ ದೇಶ-ವಿದೇಶಗಳ ಅನೇಕ ಪದವಿಗಳನ್ನು ಹಾಕಿಕೊಂಡಿರುವುದನ್ನು ಕಾಣಬಹುದು. ಅವರು ಅದರಲ್ಲಿ ಪ್ರವೀಣರೂ ಆಗಿರಬಹುದು. ಆದರೆ ಒಂದಂತೂ ಸತ್ಯ. ಅವರು ಏನು ಕಲಿತಿದ್ದಾರೋ ಅದರ ಅಂತಸ್ಸತ್ವವನ್ನು ಅರಿತಿರದಿದ್ದರೆ ಅದೆಲ್ಲವೂ ವ್ಯರ್ಥವೇ ಸರಿ. ಅವರು ಕಲಿತಿರುವ ವಿದ್ಯೆ ತಮ್ಮ ದೈನಂದಿನ ಜೀವನ, ವೃತ್ತಿಗಳಿಗೆ ಪೂರಕವಾಗಿದ್ದರೆ ಅದು ಉಳಿಯಬಹುದು. ಇಲ್ಲದಿದ್ದರೆ ಕ್ರಮೇಣ ಮಸುಕಾಗಿ ಅವು ಪುಸ್ತಕದ ಬದನೆಕಾಯಿ ಮಾತ್ರ ಆಗುತ್ತದೆ. ಅದನ್ನು ನೋಡಬಹುದಷ್ಟೆ, ಬಳಸಲಾಗುವುದಿಲ್ಲ.
     ಉಪನಿಷತ್ತಿನಲ್ಲಿ ನಾರದ-ಸನತ್ಕುಮಾರ ಸಂವಾದ ಎಂದು ಬರುತ್ತದೆ, ಬಹಳ ಮನನೀಯವಾಗಿದೆ. ಸನತ್ಕುಮಾರ ಜ್ಞಾನಪರ್ವತ, ಚಿರಕುಮಾರ. ನಾರ ಅಂದರೆ ನರರ ಜ್ಞಾನ ಮತ್ತು ದ ಎಂದರೆ ಕೊಡುವವನು- ನರರಿಗೆ ಜ್ಞಾನ ಕೊಡುವವನು ನಾರದ. ಸ್ವತಃ ಸಂತ ಮತ್ತು ಜ್ಞಾನಿಯಾಗಿದ್ದ, ಎಲ್ಲವನ್ನೂ ಬಲ್ಲವನಾಗಿದ್ದ ನಾರದ ಸನತ್ಕುಮಾರನ ಬಳಿ ಬಂದು ಕೇಳುತ್ತಾನೆ: "ಎಲ್ಲಾ ವಿಷಯಗಳನ್ನೂ ತಿಳಿದಿದ್ದರೂ ನನ್ನ ಮನಸ್ಸಿಗೆ ಶಾಂತಿಯಿಲ್ಲವಾಗಿದೆ. ದಯಮಾಡಿ ಮಾರ್ಗದರ್ಶನ ನೀಡಿ. ನಾನು ನಿಮ್ಮ ನಮ್ರ ವಿದ್ಯಾರ್ಥಿಯಾಗಿ ಬಂದಿರುವೆ." ಸನತ್ಕುಮಾರ ಹೇಳುತ್ತಾನೆ: "ನಾನು ಏನು ಕಲಿಸಬೇಕು? ನಿನ್ನ ತೊಂದರೆ ಏನು? ಮೊದಲು ನಿನಗೆ ಏನು ಗೊತ್ತಿದೆ ಹೇಳು. ಏನಾದರೂ ಉಳಿದಿದ್ದರೆ ಅದರ ಬಗ್ಗೆ ಕಲಿಸುವೆ." ಇದಕ್ಕೆ ನಾರದ ಉತ್ತರಿಸುತ್ತಾನೆ: "ಗುರುವೆ, ನಾನು ಋಗ್ವೇದದಲ್ಲಿ ಪರಿಣಿತ. ಯಜುರ್ವೇದದಲ್ಲಿ ಯಾಜಮಾನಿಕೆ ಹೊಂದಿರುವೆ. ಸಾಮವೇದದಲ್ಲಿ ನಾನು ಪಾರಂಗತ. ಅಥರ್ವವೇದ ಗೊತ್ತು. ಪುರಾಣಗಳು, ಗ್ರಂಥಗಳು ಮತ್ತು ವ್ಯಾಕರಣಗಳ ಬಗ್ಗೆ ಎಲ್ಲವೂ ತಿಳಿದಿರುವೆ. ಯಾವುದೂ ನನಗೆ ಗೊತ್ತಿಲ್ಲದ್ದು ಇಲ್ಲ. ಗಣಿತ, ಜ್ಯೋತಿಷ್ಯ, ಶಕುನಗಳು, ತರ್ಕ, ಇತಿಹಾಸ, ಸಂಪತ್ವಿದ್ಯೆ, ರಾಜನೀತಿ, ಖಗೋಳವಿದ್ಯೆ, ವೇದದ ಷಡಂಗಗಳ ಬಗ್ಗೆ ಗೊತ್ತಿದೆ. ಭೌತವಿಜ್ಞಾನ ಗೊತ್ತು, ಸಂಗೀತ ಬಲ್ಲೆ, ಕಲೆ, ನೃತ್ಯಗಳಲ್ಲಿ ಪ್ರವೀಣನಿರುವೆ. ಇಂತಹುದನ್ನು ಕಲಿತಿಲ್ಲ, ಗೊತ್ತಿಲ್ಲ ಎಂಬುದಿಲ್ಲ. ಇವು ನಾನು ಅಧ್ಯಯನ ಮಾಡಿರುವ, ತಿಳಿದಿರುವ ವಿಷಯಗಳು." ಸನತ್ಕುಮಾರ ನಾರದನ ಕಲಿಕೆಯ ಕುರಿತು ಹೇಳುತ್ತಾನೆ: "ಇವೆಲ್ಲಾ ಕೇವಲ ಹೆಸರುಗಳು. ಈ ಎಲ್ಲಾ ಜ್ಞಾನಗಳು ಸಾಕಾಗದು. ಅದಕ್ಕೇ ನಿನಗೆ ಶಾಂತಿ ಸಿಕ್ಕಿಲ್ಲ." ನಾರದನೂ ವಿನೀತನಾಗಿ ಹೇಳುತ್ತಾನೆ: "ಹೌದು, ಇವೆಲ್ಲಾ ಕೇವಲ ಹೆಸರುಗಳು, ಕೇವಲ ವಿದ್ಯೆಗಳ ಪಟ್ಟಿ. ಯಾರು ಆತ್ಮನನ್ನು ಅರಿಯುತ್ತಾರೋ ಅವರು ಶಾಂತಿ ಗಳಿಸುತ್ತಾರೆ ಎಂದು ಹೇಳುವುದನ್ನು ಕೇಳಿರುವೆ. ಈ ಆತ್ಮ ಅಂದರೆ ಏನು? ಎಲ್ಲವನ್ನೂ ತಿಳಿದೂ ನಾನು ಅಶಾಂತನಾಗಿದ್ದೇನೆ. ನನ್ನನ್ನು ಅಶಾಂತಸಾಗರದಿಂದ ಪಾರು ಮಾಡಲು ಕೋರಿ ನಿನ್ನಲ್ಲಿಗೆ ಬಂದಿದ್ದೇನೆ." ಹೀಗೆ ಸಂಭಾಷಣೆ ಮುಂದುವರೆಯುತ್ತದೆ.
     ಜ್ಞಾನದ ಅಂತಸ್ಸತ್ವದ ಮಹತ್ವವನ್ನು ಮೇಲಿನ ಸಂಭಾಷಣೆ ಹೇಳುತ್ತದೆ. ಪ್ರಪಂಚದ ಅನೇಕ ವಿಷಯಗಳ ಜ್ಞಾನ ನಮಗೆ ಇರಬಹುದು. ಉದಾಹರಣೆಗೆ ಸೂರ್ಯ, ಸೂರ್ಯಮಂಡಲ, ಇವುಗಳ ಉಗಮ ಹೇಗಾಯಿತು, ಇವುಗಳ ರಚನೆ ಹೇಗಿದೆ, ಇತ್ಯಾದಿಗಳ ಬಗ್ಗೆ ನಮಗೆ ಜ್ಞಾನವಿರಬಹುದು. ಆದರೆ ಈ ಜ್ಞಾನ ಕೇವಲ ಅಭಿಪ್ರಾಯ (ಥಿಯರಿ) ಮಾತ್ರ. ಇವುಗಳ ಈ ಜ್ಞಾನದಿಂದ ಮಾತ್ರ ಇವುಗಳು ನಮ್ಮ ಅಧೀನಕ್ಕೆ ಬರುತ್ತವೆಯೆಂದಾಗಲೀ, ಇವುಗಳು ನಮ್ಮ ಸ್ವತ್ತಾಗುತ್ತದೆಯೆಂಬುದಾಗಲೀ ಇಲ್ಲ. ಥಿಯರಿಗೂ ವಸ್ತುಸ್ಥಿತಿಗೂ ಭಿನ್ನತೆಯಿದೆ. ನಾರದನ ಜ್ಞಾನವೂ ಥಿಯರಿಯ ಜ್ಞಾನದಂತೆ. ಆತನಿಗೆ ವೇದಮಂತ್ರಗಳು ಗೊತ್ತು, ಅವುಗಳ ಹೆಸರುಗಳು ಗೊತ್ತು, ಅವುಗಳ ವಿಚಾರ ಗೊತ್ತು, ಅರ್ಥವೂ ಗೊತ್ತು. ಆದರೆ ಈ ಮಂತ್ರಗಳ ಆತ್ಮ -ಅಂತಸ್ಸತ್ವ- ಆತನ ಅರಿವಿನ ವ್ಯಾಪ್ತಿಯಿಂದ ಹೊರಗಿದೆ ಎಂಬುದು ಸನತ್ಕುಮಾರನ ಅಭಿಮತ. ನಾರದ ಹೀಗಿದ್ದನೋ, ಇಲ್ಲವೋ, ಆದರೆ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ, ಅದೆಂದರೆ ಕೇವಲ ಥಿಯರಿಯ ಜ್ಞಾನ ಪ್ರಯೋಜನಕ್ಕೆ ಬಾರದು, ಅದರೊಳಗಿನ ಆತ್ಮವನ್ನು ಅರಿತಾಗಲೇ ಜ್ಞಾನಕ್ಕೆ ಅರ್ಥ ಬರುತ್ತದೆ ಎಂಬುದು.
     ಹಾಗಾದರೆ ಥಿಯರಿಯ ಜ್ಞಾನ ಪ್ರಯೋಜನವಿಲ್ಲವೆಂದರೆ ಕಲಿಯುವ ಅಗತ್ಯವಿಲ್ಲವೇ ಎಂದರೆ ಅಗತ್ಯವಿದೆ. ಮೂಲಜ್ಞಾನವಿಲ್ಲದೆ ಅದರ ಅಂತಸ್ಸತ್ವವನ್ನು ಅರಿಯುವುದಾದರೂ ಹೇಗೆ? ಈ ಸಿದ್ಧಾಂತದ ಜ್ಞಾನ ನಿಜವಾದ ಜ್ಞಾನ ಪಡೆಯಲು ಸಾಧನವಾಗುತ್ತದೆ. ಕಲಿಕೆಯು ಮಾಹಿತಿ ಸಂಗ್ರಹದಿಂದಲೇ ಆರಂಭವಾಗುವುದು. ಪ್ರಯೋಗ ಸಿದ್ಧಾಂತದ ನಂತರವೇ ಬರುವಂತಹುದು. ಯಾವುದೇ ವಿಷಯದಲ್ಲಿ ಸಿದ್ಧಿಯಾಗಬೇಕೆಂದರೆ ಆ ವಿಷಯದ ಕುರಿತು ಸಮಗ್ರ ಮಾಹಿತಿ ಮೊದಲು ಹೊಂದಬೇಕು. ನಂತರ ಮುಂದಿನ ಹಂತ ಆರಂಭವಾಗುವುದು. ಸಂಗೀತ ಕಲಿತವರು ಬಹಳ ಜನರಿರುತ್ತಾರೆ. ಕಲಾವಿದರೂ ಬಹಳ್ಟದ್ದಾರೆ. ಆಧ್ಯಾತ್ಮಿಕ ಪಥದಲ್ಲಿ ಸಾಗುವವರಿಗೂ ಕಡಿಮೆಯೇನಿಲ್ಲ. ಆದರೆ ಅವರಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯುನ್ನತ ಸ್ಥಿತಿಗೆ ಏರಿದವರನ್ನು ಗಮನಿಸಿದರೆ ಅರ್ಥವಾಗುತ್ತದೆ. ಅಂತಹ ಸಾಧಕರು ತಮ್ಮ ವಿಷಯಗಳಲ್ಲಿ ತಾದಾತ್ಮ್ಯತೆ ಹೊಂದಿರುತ್ತಾರೆ. ಆಯಾ ವಿಷಯಗಳ ಅಂತರಂಗವನ್ನು ಅರಿತವರಾಗಿರುತ್ತಾರೆ. ಒಂದು ಅರ್ಥದಲ್ಲಿ ಅವರೇ ವಿಷಯವಾಗಿಬಿಟ್ಟಿರುತ್ತಾರೆ. ಇದು ನೈಜ ಜ್ಞಾನಿಗಳ ಲಕ್ಷಣ.
     ಈಗ ಅರ್ಥವಾಗಿರಬಹುದು. ನಾವು ಯಾವುದೇ ವಿಷಯದಲ್ಲಿ ಪಡೆದಿರುವ ಡಿಗ್ರಿ/ಪದವಿ ಅನ್ನುವುದು ಜ್ಞಾನದ ಪ್ರಾಥಮಿಕ ಹಂತ ಮಾತ್ರ. ನಮ್ಮ ಎದುರಿನಲ್ಲಿ ಸುಮಾರು ಒಂದು ಮೈಲು ದೂರದಲ್ಲಿ ಒಂದು ಪರ್ವತವಿದೆಯೆಂದುಕೊಳ್ಳೋಣ. ಅದು ಅಷ್ಟು ಎತ್ತರವಿದೆ, ಇಷ್ಟು ದೂರದಲ್ಲಿದೆ, ಇತ್ಯಾದಿ ಮಾಹಿತಿಗಳನ್ನು ಹೊರತುಪಡಿಸಿ ನಾವು ಹೆಚ್ಚು ವಿಷಯ ತಿಳಿದುಕೊಳ್ಳಲಾರೆವು. ಅದನ್ನು ಪೂರ್ಣವಾಗಿ ತಿಳಿಯಲು ಅದರ ಬಳಿಯೇ ಹೋಗಬೇಕು. ಹಾಗೆಯೇ ವಿಷಯದ ಒಳಹೊಕ್ಕು ಅದರೊಳಗೆ ಒಂದಾದಾಗ ಜ್ಞಾನ ಸಿದ್ಧಿಸುತ್ತದೆ. ಅಲ್ಲಿಯವರೆಗೆ ಕಲಿತಿರುವುದನ್ನು ಧ್ಯಾನಿಸುತ್ತಿರಬೇಕು, ಮನನ ಮಾಡುತ್ತಿರಬೇಕು, ಚಿಂತಿಸುತ್ತಿರಬೇಕು. ಕಲಿತಿರುವಷ್ಟರಲ್ಲಿ ಪ್ರಾವೀಣ್ಯತೆ ಪಡೆದ ನಂತರ ಮುಂದಿನ ಹಂತಕ್ಕೆ ಹೋಗಬೇಕು. ಪಡೆಯುವ ಜ್ಞಾನಕ್ಕೂ ಇತಿಮಿತಿಗಳಿರುತ್ತವೆ. ಶಿಕ್ಷಕ ವೃತ್ತಿಯವರಿಗೆ, ವೈದ್ಯಕೀಯ ವೃತ್ತಿಯವರಿಗೆ ಅವರುಗಳು ಪಡೆದ ಜ್ಞಾನ ಮುಂದೂ ಸಹ ಉಪಯೋಗಕ್ಕೆ ಬರುತ್ತದೆ. ಅದೇ ಶಿಕ್ಷಣ ನದಿಯಲ್ಲಿ ದೋಣಿಯಲ್ಲಿ ಸಾಗುತ್ತಿದ್ದು, ಪ್ರವಾಹದ ಕಾರಣ ಅಪಾಯದ ಸ್ಥಿತಿ ಎದುರಾದಾಗ ಉಪಯೋಗಕ್ಕೆ ಬರದು. ಆಗ ಬೇರೆಯದೇ ರೀತಿಯ ಜ್ಞಾನ ಅಗತ್ಯವಿರುತ್ತದೆ.  
     ಇಂದು ಶಿಕ್ಷಣ ಅನ್ನುವುದು ಮಾರಾಟದ ಸರಕಾಗಿದೆ. ಪದವಿಗಳು, ಡಾಕ್ಟರೇಟುಗಳನ್ನೂ ಕೊಳ್ಳಲು ಅವಕಾಶಗಳಿರುವ ಇಂದಿನ ದಿನಗಳಲ್ಲಿ ನೈಜ ಜ್ಞಾನ ಕಲಿಸುವ ಶಿಕ್ಷಣ ಪದ್ಧತಿ ಜಾರಿಗೆ ಬರುತ್ತದೆ ಎಂದು ನಿರೀಕ್ಷಿಸುವುದು ವಿಪರ್ಯಾಸವೇ ಸರಿ. ಸಾಧಕರು ತಮ್ಮ ತಮ್ಮ ಅಭಿರುಚಿ, ಆಸಕ್ತಿಗಳನ್ನು ಆಧರಿಸಿ ಸ್ವಂತ ಸಾಧನೆಯ ಮೂಲಕ ಜ್ಞಾನ ಗಳಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಹೀಗಿದ್ದೂ ಹಲವಾರು ಸಾಧಕರುಗಳನ್ನು ಹಲವು ರಂಗಗಳಲ್ಲಿ ನಾವು ಕಾಣುತ್ತಿದ್ದೇವೆ ಅಂದರೆ ಅಂತಹವರ ಜ್ಞಾನಾಕಾಂಕ್ಷೆ ಉನ್ನತ ಸ್ತರದಲ್ಲಿದೆ ಎಂದೇ ಅರ್ಥ. ಅವರುಗಳೇ ಏನಾದರೂ ಸಾಧಿಸಬೇಕೆಂದುಕೊಂಡವರಿಗೆ ಮಾರ್ಗದರ್ಶಿಗಳು, ಪ್ರೋತ್ಸಾಹಕರು ಹಾಗೂ ಆದರ್ಶಪ್ರಾಯರು.
-ಕ.ವೆಂ.ನಾಗರಾಜ್.
**************
ಚಿತ್ರಕೃಪೆ: http://www.fernhurst.net/images/ReadingManiacs.gif

ದಿನಾಂಕ 22.12.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: 


6 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. partha
      ನಿಜ ನಮ್ಮ ಜ್ಞಾನ ಯಾವುದಕ್ಕು ಜೀವನದಲ್ಲಿ ಉಪಯೋಗಕ್ಕೆ ಬರುವದಿಲ್ಲ !
      ಹಾಗೆ ನಮ್ಮ ತಾಂತ್ರಿಕ ಪರಿಣಿತಿ ಅಥವ ಅನುಭವ ಕೆಲಸಕ್ಕೆ ಬರುವದಿಲ್ಲ ಇಂದು ಇರುವ ತಾಂತ್ರಿಕತೆ ನಾಳೆ ಮೂಲೆಗೆ!
      ನಾವು ಓದಿದ್ದು ಕೆಲಸದಲ್ಲಿ ಅನುಭವಕ್ಕೆ ಬರಲಿಲ್ಲ, ಕೆಲಸದ ಅನುಭವ ಜೀವನಕ್ಕೆ ಯಾವುದೆ ಮೌಲ್ಯ ತಂದುಕೊಂಡಲಿಲ್ಲ ಕೇವಲ ಒಂದಿಷ್ಟು ಹಣವನ್ನು ಕೊಟ್ಟಿತ್ತು, ಆ ಹಣ ನನಗೆ ಎರಡುಹೊತ್ತಿನ ಊಟ ಇರಲು ಮನೆ ಹೊರತಾಗಿ ಮತ್ಯಾವ ಸಾರ್ಥಕತೆಯನ್ನು ತರಲಿಲ್ಲ !
      ನಿಮ್ಮ ಮಾತು ಸತ್ಯ ! ನಿಜವಾದ ಜ್ಞಾನ ಅನ್ನುವ ಮಾತೆ ಕೆಲವೊಮ್ಮೆ ಪೊಳ್ಳುತನದಿಂದ ಕೂಡಿದೆಯೇನೊ ಅನ್ನಿಸಿಬಿಡುತ್ತದೆ !
      ಸಾರ್ ಅಷ್ಟಕ್ಕೂ ಜ್ಞಾನ ಅಂದರೆ ಏನು ?
      ಬಿಡಿ
      ಅಂದ ಹಾಗೆ ನಾವು ಓದುವಾಗಲು ತುಮಕೂರಿನಲ್ಲಿ ಎಬಿಸಿ ಗೌಡ‌ ಅನ್ನುವವರು ಸರ್ಕಾರಿ ಕಾಲೇಜಿನಲ್ಲಿ ನಮಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು , ನೀವು ಹೇಳಿರುವ‌ ವ್ಯಕ್ತಿ ಅವರೇನ‌ ತಿಳಿದಿಲ್ಲ‌, ನಾವು ಓದುವಾಗಲೆ ಅವರು ತೀರಿಕೊಂಡರು ಅನ್ನಿಸುತ್ತೆ. ಮಂಡ್ಯದ‌ ಕಡೆಯವರು ,
      ಮತ್ತು ಸತತವಾಗಿ ಸಿಗರೇಟು ಸೇದುತ್ತಿದ್ದರು, ನಿಮ್ಮ‌ ಸರ್ಕಾರ‌ ಕೊಡುವ‌ ಸಂಬಳ‌ ನನ್ನ‌ ಸಿಗರೇಟಿಗೆ ಸಾಲಲ್ಲ‌ ಅನ್ನುತ್ತಿದ್ದರು :‍)

      kavinagaraj
      ಧನ್ಯವಾದಗಳು, ಪಾರ್ಥರೇ. ನಮ್ಮ ಆಂತರಿಕ ಮತ್ತು ಬಾಹ್ಯ ವಿಕಾಸಕ್ಕೆ ನೆರವಾಗುವುದೇ ನಿಜವಾದ ಜ್ಞಾನ.
      ನೀವು ಹೇಳಿದ ಎಬಿಸಿ ಗೌಡರು ಬೇರೆ ಇರಬೇಕು. ನಮ್ಮ ಗೌಡರೂ ಸಿಗರೇಟು ಸೇದುತ್ತಿದ್ದವರೇ! ಮುಂದೊಮ್ಮೆ ಅವರು ಕಾಲೇಜಿನ ಪ್ರಿನ್ಸಿಪಾಲರೂ ಆಗಿದ್ದರಂತೆ!

      ಅಳಿಸಿ
  2. Practical ಆಚರಣೆಯಲ್ಲಿ ಎಷ್ಟೇ ಪಕ್ಕ ಇದ್ದರೂ ಸಹ, ನಮಗೆ theory ಗೊತ್ತಿದ್ದರೆ ಸುಲಭವಾಗಿ ಕೆಲಸ ಮಾಡಬಹುದೆನ್ನುವ ಸರಳ 'ಜ್ಞಾನ' ನನ್ನ ಅರಿವಿಗೆ ಬರುವಷ್ಟರಲ್ಲಿ ನಾನೂ ನಲವತ್ತು ದಾಟಿದ್ದೆ ಕವಿವರ್ಯ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು, ಬದರೀನಾಥರೇ. ಸಾಮಾನ್ಯವಾಗಿ ಎಲ್ಲರಿಗೂ ಇಂತಹ 'ಜ್ಞಾನ' ಬರುವುದು ತಡವಾಗಿಯೇ! :)

      ಅಳಿಸಿ
    2. H A Patil
      ಕವಿ ನಾಗರಾಜ ರವರಿಗೆ ವಂದನೆಗಳು
      ’ ನಾವು ಮತ್ತು ನಮ್ಮ ಜ್ಞಾನ’ ನಮ್ಮ ದೇಶದ ವರ್ತಮಾನದ ಸ್ತಿತಿಗೆ ಬೆಳಕು ಚೆಲ್ಲುವ ಲೇಖನ. ಇಂದಿನ ವಸ್ತುಸ್ತಿತಿ ಹೇಗಿದೆ ಎಂದರೆ ಬಹುತೇಕ ವೃತ್ತಿ ಮತ್ತು ಪ್ರವೃತ್ತಿಗಳು ಪರಸ್ಪರ ಪೂರಕವಾಗಿರುವುದಿಲ್ಲ. ಇಲ್ಲಿ ಜ್ಞಾನ ನಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಲು ಸಹಾಯ ಮಾಡುವುದಿಲ್ಲ. ಅನಿವಾರ್ಯದ ಬದುಕು ಮತ್ತು ಅತ್ಮ ಸಂತೋಷವೆನ್ನುವ ಎರಡು ನೆಲೆಗಳಲ್ಲಿ ನಾವು ಇಂದು ಬದುಕು ನಡೆಸಬೇಕಿದೆ. ಇಂದು ನಮ್ಮ ಸುತ್ತ ಎರ್ಪಡುತ್ತಿರುವ ಸಂಬಂದಗಳು ಪಕ್ಕಾ ವ್ಯಾವಹಾರಿಕ ಸಂಬಂದಗಳೆ, ಇದಲ್ಲ ನಮ್ಮ ಜೀವನ ಮಾನವಂತರಾಗ ಬೇಕಿದೆ, ನಮ್ಮ ಸಾಮಾಜಿಕ ಪರಿಸ್ತಿತಿ ಸುಂದರ ಗೊಳ್ಳ ಬೇಕಿದೆ. ಬಹು ವೈಚಾರಿಕ ಲೇಖನ ನೀಡಿದ್ದೀರಿ ದನ್ಯವಾದಗಳು.

      kavinagaraj
      ಧನ್ಯವಾದಗಳು, ಪಾಟೋಲರೇ.ಪೂರಕ ಉತ್ತಮ ಅನಿಸಿಕೆಗೆ ವಂದನೆಗಳು.

      ಅಳಿಸಿ