ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಡಿಸೆಂಬರ್ 11, 2014

ಅಪ್ಪ ಹಾಕಿದ ಆಲದ ಮರ ಮತ್ತು ನಾವು


ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು 
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳು ಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ ||
     ಒಂದು ಕಾಲವಿತ್ತು, ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು, ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು, ಕೈಗೆ ಬಳೆ ಹಾಕಿಕೊಳ್ಳದೆ, ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆಸಬೇಕಾಗಿದ್ದ ಕಾಲವಿತ್ತು. ಚಿಕ್ಕ ವಯಸ್ಸಿನಲ್ಲೇ ವಿಧವೆಯಾದವರ ಪಾಡು ಅನುಭವಿಸಿದವರಿಗೇ ಗೊತ್ತು.  ಆಕೆಗೆ ಶುಭ ಕಾರ್ಯಗಳಲ್ಲಿ ಆಹ್ವಾನವಿರುತ್ತಿರಲಿಲ್ಲ. ಆಕೆ ಎದುರಿಗೆ ಬಂದರೆ ಅಪಶಕುನವೆಂದು ಭಾವಿಸುವವರಿದ್ದರು. ಹೊಸ ಪೀಳಿಗೆಯವರಿಗೆ ಇಂತಹ ಅನಿಷ್ಟ ಸಂಪ್ರದಾಯದ ಪರಿಚಯ ಇರಲಾರದು. ಪ್ರಾರಂಭದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುವುದು ನಿಂತರೂ ಕೈಗೆ ಬಳೆ ಹಾಕಿಕೊಳ್ಳಲು, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ, ಸುಧಾರಣೆಯಾಗಿದೆ. ಕಳೆದ ಮೂರು-ನಾಲ್ಕು ದಶಕಗಳಿಂದೀಚೆಗೆ ಈ ಸಂಪ್ರದಾಯದ ಆಚರಣೆ ಕಂಡು ಬರುತ್ತಿಲ್ಲ. ಒಂದು ಅನಿಷ್ಟ ಸಂಪ್ರದಾಯದ ಅಂತ್ಯವಾಗಿರುವುದು ಸಮಾಧಾನದ ಸಂಗತಿ. 
     ಸಂಪ್ರದಾಯವೆಂದರೆ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುವ ಆಚರಣೆಗಳು/ ನಡವಳಿಕೆಗಳು. ಸರಿಯೋ, ತಪ್ಪೋ ವಿಚಾರ ಮಾಡದೆ ಅದನ್ನು ಮುಂದುವರೆಸಿಕೊಂಡು ಬರುವವರನ್ನು ಸಂಪ್ರದಾಯವಾದಿಗಳು ಎನ್ನುತ್ತಾರೆ. ಕೆಲವನ್ನು ಆಚರಿಸಿ ಕೆಲವನ್ನು ಕೈಬಿಡುವ ಅನುಕೂಲ/ಅವಕಾಶವಾದಿಗಳೂ ಇದ್ದಾರೆ. ಅರ್ಥವಿಲ್ಲದ ಸಂಪ್ರದಾಯಗಳನ್ನು ಧಿಕ್ಕರಿಸಿ ನಡೆಯುವವರೂ ಇದ್ದಾರೆ. ಸ್ವತಃ ಸಂಪ್ರದಾಯಗಳನ್ನು ಆಚರಿಸದಿದ್ದರೂ, ಅರ್ಥವಿಲ್ಲವೆಂದು ತಿಳಿದಿದ್ದರೂ, ಇತರರ ಸಲುವಾಗಿ ಅವನ್ನು ಬೆಂಬಲಿಸುವವರ ಸಂಖ್ಯೆ  ಸಹ ಗಣನೀಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ  ಎಲ್ಲರನ್ನೂ ಹೊಂದಿಸಿಕೊಂಡು, ಹೊಂದಿಕೊಂಡು ಸಮನ್ವಯ ಮಾಡಿ ಸದ್ವಿಚಾರ ತಿಳಿಸಲು ಹೆಣಗುವವರೂ ಇದ್ದಾರೆ. ಎಲ್ಲಾ ಸಂಪ್ರದಾಯಗಳೂ ಕೆಟ್ಟವಲ್ಲ. ಹಾಗೆಯೇ ಎಲ್ಲವೂ ಒಳ್ಳೆಯವು ಎಂದು ಹೇಳಲಾಗುವುದಿಲ್ಲ. ಯಾವ ಆಚರಣೆಗಳಿಂದ ಯಾರಿಗೂ ತೊಂದರೆಯಿಲ್ಲವೋ, ಯಾವುದರಿಂದ ಮನುಷ್ಯನ ಬೌದ್ಧಿಕ ಹಾಗೂ ಮಾನಸಿಕ ವಿಕಾಸ, ಅಭಿವೃದ್ಧಿಗೆ ಸಹಕಾರವಾಗುವುದೋ, ಸಂತಸ ಹರಡುವುದೋ, ತಾರತಮ್ಯ ಇಲ್ಲದಿರುವುದೋ ಅಂತಹವುಗಳನ್ನು  ಒಳ್ಳೆಯ ಸಂಪ್ರದಾಯಗಳೆನ್ನಬಹುದು. ಇದಕ್ಕೆ ತದ್ವಿರುದ್ಧವಾದ ಸಂಪ್ರದಾಯಗಳನ್ನು ಕೆಟ್ಟವು ಎಂದುಕೊಳ್ಳಬಹುದು. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ, ಈಗಂತೂ ಹೊಸ ಹೊಸ ಸಂಪ್ರದಾಯಗಳು, ಆಚರಣೆಗಳು ಚಾಲ್ತಿಗೆ ಬರುತ್ತಿವೆ. ಹಿಂದಿನ ಅನುಭವಗಳಿಂದ ಹೇಳುವುದಾದರೆ ಕ್ರಮೇಣ ಅವು ಗಟ್ಟಿಗೊಳ್ಳುತ್ತವೆ.
     ಬಾಲ ಗಂಗಾಧರನಾಥ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವ ಸಲುವಾಗಿ ಹುಟ್ಟುಹಾಕಿದ ಸಾರ್ವಜನಿಕ ಗಣೇಶ ಉತ್ಸವಗಳು ಇಂದು ಯಾವ ಮಟ್ಟಕ್ಕೆ ತಲುಪಿವೆ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ಮೊದಲು ಊರಿಗೆ ಒಂದರಂತೆ ಇದ್ದುದು, ಈಗ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಗಳನ್ನು ಇಟ್ಟು ಅಲ್ಲಿ ನಡೆಸುವ ಕಾರ್ಯಕ್ರಮಗಳು, ಪೈಪೋಟಿ, ವಂತಿಕೆ ವಸೂಲಿ, ವಿಸರ್ಜನೆ ಸಮಯದಲ್ಲಿ ಕುಡಿದು ಕುಣಿಯುವ ಯುವಕರು, ಮತೀಯ ಘರ್ಷಣೆಗಳು, ಇತ್ಯಾದಿಗಳನ್ನು ಗಮನಿಸಿದರೆ ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ ಎಂದು ಅನ್ನಿಸದೇ ಇರದು. ಒಳ್ಳೆಯ ರೀತಿಯಲ್ಲಿ ಆಚರಿಸುವವರು ಇದ್ದರೂ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟು. ಗಣೇಶೋತ್ಸವಗಳು ಮುಗಿಯುವವರೆಗೂ ಶಾಂತಿ, ಸುವ್ಯವಸ್ಥೆಗಳಿಗಾಗಿ ಸಂಬಂಧಿಸಿದವರು ಹಗಲೂ ರಾತ್ರಿ ಹೆಣಗುವ, ಇಂತಹ ಉತ್ಸವಗಳು (ಗಣೇಶೋತ್ಸವ ಮಾತ್ರ ಅಲ್ಲ, ಎಲ್ಲಾ ಮತೀಯ/ಧಾರ್ಮಿಕ ಉತ್ಸವಗಳು ಸೇರಿ) ಏಕಾದರೂ     ಬರುತ್ತವೋ ಎಂದು ಅಂದುಕೊಳ್ಳುವ ಪರಿಸ್ಥಿತಿ ಇಂದು  ಇದೆ. ನಾನು ಗಣೇಶೋತ್ಸವವನ್ನಾಗಲೀ, ಇಂತಹ ಇತರ ಉತ್ಸವಗಳನ್ನಾಗಲೀ ವಿರೋಧಿಸುತ್ತಿಲ್ಲ, ಅದನ್ನು ಆಚರಿಸಲಾಗುತ್ತಿರುವ ರೀತಿಯ  ಬಗ್ಗೆ ಮಾತ್ರ ಬೆರಳು ತೋರಿಸುತ್ತಿದ್ದು, ಆಚರಣೆಗಳು ಅರ್ಥಪೂರ್ಣವಾಗಿರಬೇಕೆಂಬ ಕಳಕಳಿ ಮಾತ್ರ ಇಲ್ಲಿದೆ. 
     ಸಂಕಷ್ಟಹರ ಗಣಪತಿ ಪೂಜೆಯನ್ನು  ಇಂದು ಸಾಮೂಹಿಕ ಸನ್ನಿಯಂತೆ ಆಚರಿಸಲಾಗುತ್ತಿದೆ. ಆದರೆ ಎಷ್ಟು ಜನರು ಇದನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ? ಹೆಚ್ಚಿನವರು ಸ್ವಸಹಾಯ ಪದ್ಧತಿಯ ಹೋಟೆಲ್ಲಿನಲ್ಲಿ ಹಣ ಕೊಟ್ಟು ಕಾಫಿ ಕುಡಿದಂತೆ ದೇವಸ್ಥಾನಕ್ಕೆ ಹೋಗಿ ಹಣ ಕೊಟ್ಟು ಚೀಟಿ ಬರೆಸಿ ಹೋಗುತ್ತಾರೆ, ಪ್ರಸಾದ ಕೊಡುವ ಸಮಯಕ್ಕೆ ಬಂದು ಕೈಮುಗಿದು ಪ್ರಸಾದ ಪಡೆದು ಹೋಗುತ್ತಾರೆ. ಪೂಜೆಯ ಸಮಯದಲ್ಲಿ ದೇವಸ್ಥಾನದಲ್ಲಿದ್ದವರೂ ಪರಸ್ಪರ ಮಾತುಕತೆಗಳಲ್ಲಿ ತೊಡಗಿರುತ್ತಾರೆ. ಹಣ ಕೊಟ್ಟು ಪದಾರ್ಥಗಳನ್ನು ಕೊಂಡುಕೊಂಡಂತೆ ಪುಣ್ಯವನ್ನು ಖರೀದಿಸಬಹುದೇ? ಇಂತಹ ಆಚರಣೆಯಿಂದ ಯಾರಿಗೆ ಪ್ರಯೋಜನ? ಯಾರ ಕಷ್ಟಗಳು ಪರಿಹಾರವಾಗುತ್ತದೆ? ಶ್ರದ್ಧೆಯಿಂದ, ಅರ್ಥ ತಿಳಿದುಕೊಂಡು ಮಾಡುವ ಕ್ರಿಯೆಗಳಿಂದ ಮಾತ್ರ ಫಲ ಸಿಗಲು ಸಾಧ್ಯವಲ್ಲವೇ? ಇಲ್ಲದಿದ್ದರೆ ಅವು ತೋರಿಕೆಗೆ ಮಾಡುವ ಆಚರಣೆಗಳಾಗುತ್ತವೆ ಅಷ್ಟೆ. ಇಸ್ಲಾಮ್ ಮತ ಪ್ರಾರಂಭವಾದ ಸಂದರ್ಭದಲ್ಲಿ ಧ್ವನಿವರ್ಧಕವಿರಲಿಲ್ಲ. ಆದರೆ ಇಂದು ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಧ್ವನಿವರ್ಧಿಸಿ ನಮಾಜು, ಉಪದೇಶಗಳನ್ನು ಮಾಡುತ್ತಿರುವುದು ಸರ್ವೇ ಸಾಮಾನ್ಯವಾದ ಸಂಪ್ರದಾಯವಾಗಿಬಿಟ್ಟಿದೆ. ಅದನ್ನು ಕೇಳಲು ಇಚ್ಛಿಸದವರಿಗೂ ಬಲವಂತವಾಗಿ ಕೇಳುವಂತೆ ಮಾಡುತ್ತಿರುವುದು ಒಂದು ರೀತಿಯ ಶಬ್ದಮಾಲಿನ್ಯವಲ್ಲವೇ? 
     ಜಾತ್ರೆ, ಪೂಜೆ, ಇತ್ಯಾದಿಗಳ ಹೆಸರಿನಲ್ಲಿ ದೇವರನ್ನು ಸಂತುಷ್ಟಗೊಳಿಸುವ(?) ಕಾರಣದಿಂದ ಪ್ರಾಣಿಬಲಿ ನೀಡುವ ಸಂಪ್ರದಾಯ ಒಳ್ಳೆಯದೆಂದು ಹೇಳಬಹುದೆ? ಇದನ್ನು ಸಮರ್ಥಿಸುವ ಜನರಿಗೆ ಕಡಿಮೆಯೇನಿಲ್ಲ. ಶಿಕಾರಿಪುರದಲ್ಲಿ ತಾಲ್ಲೂಕು ದಂಡಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಾತ್ರೆಯ ಸಮಯದಲ್ಲಿ ಕೋಣಬಲಿ ತಡೆಯಲು ಒಂದು ಗ್ರಾಮದಲ್ಲಿ  ಪೋಲಿಸರ ನೆರವಿನೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿತ್ತು. ಗ್ರಾಮಸ್ಥರಿಗೆ ಕಾನೂನಿನಲ್ಲಿ ಇರುವ ನಿಷೇಧ, ಉಲ್ಲಂಘಿಸಿದರೆ ಆಗುವ ಪರಿಣಾಮಗಳು, ಇತ್ಯಾದಿ ಕುರಿತು ತಿಳುವಳಿಕೆ ಹೇಳಲಾಗಿತ್ತು. ಮುಂಚಿತವಾಗಿ ನಡೆಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಪಶುವೈದ್ಯರ ಸಹಾಯದಿಂದ ಸಿರಿಂಜಿನಲ್ಲಿ ಕೋಣನ ರಕ್ತವನ್ನು ತೆಗೆದು ಸಾಂಕೇತಿಕವಾಗಿ ದೇವಿಗೆ ಅರ್ಪಿಸಲು ಗ್ರಾಮದ ಮುಖ್ಯಸರು ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಪೋಲಿಸರ ಹಾಗೂ ನಮ್ಮ ಸಿಬ್ಬಂದಿಯ ಕಣ್ಗಾವಲು ಇದ್ದರೂ, ನಂತರ  ಎಲ್ಲರ ಕಣ್ಣುತಪ್ಪಿಸಿ ಕೋಣಬಲಿ ನೀಡಿದ ಪ್ರಸಂಗ ಬೇಸರ, ಮುಜುಗರ ಉಂಟುಮಾಡಿತ್ತು. ಎಲ್ಲಾ ಮಾಧ್ಯಮಗಳಲ್ಲೂ ವಿಷಯ ಅತಿರಂಜಿತವಾಗಿ ಪ್ರಚಾರಗೊಂಡಿತು. ಕೆಲವರ ಮೇಲೆ ಪ್ರಕರಣ ದಾಖಲಿಸಿದರೂ ರಾಜಕೀಯ ನಾಯಕರ ಮಧ್ಯಪ್ರವೇಶ ಪ್ರಕರಣವನ್ನು ದುರ್ಬಲಗೊಳಿಸಿದ್ದು ಸುಳ್ಳಲ್ಲ. ಈ ಪ್ರಕರಣವನ್ನು ರಾಜಕೀಯ ಮಾಡುವ ಸಲುವಾಗಿ ಪರವಾಗಿ ಮತ್ತು ವಿರೋಧವಾಗಿ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಬಳಸಿಕೊಂಡವು. ಅನಿಷ್ಟ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದವರೂ ಸಾತ್ವಿಕ ಕಾರಣಕ್ಕೆ ವಿರೋಧಿಸದೆ ವಿರೋಧಿಗಳನ್ನು ವಿರೋಧಿಸಲು ಮಾತ್ರ ಬಳಸಿದ್ದು ನೋವಿನ ವಿಷಯ. ಮಾಧ್ಯಮಗಳೂ ಕೆಸರೆರಚಾಟಕ್ಕೆ ಸಾಥ್ ನೀಡಿದವೇ ಹೊರತು, ಅವುಗಳಿಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಶಕ್ತಿಯಿದ್ದರೂ ಮಾಡಲಿಲ್ಲ.  ಇಂತಹ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಪ್ರಚಲಿತ ನಾಡಿನ ಕಾನೂನುಗಳನ್ನೂ ಧಿಕ್ಕರಿಸಿ ನಡೆಸುವ ಅಂಧ ಸಂಪ್ರದಾಯಗಳ ಕುರಿತು ತಿಳಿಸುವ ಸಲುವಾಗಿ ಮಾತ್ರ ಇದನ್ನು ಸಾಂಕೇತಿಕವಾಗಿ ಉದಾಹರಿಸಿರುವೆ.  
     ಸಂಪ್ರದಾಯಗಳನ್ನು ಹೇಗೆ ಆಚರಿಸಬೇಕು ಅನ್ನುವುದಕ್ಕಿಂತ ಕೆಟ್ಟ ಸಂಪ್ರದಾಯಗಳನ್ನು ಗುರುತಿಸಿ ಅವುಗಳಿಂದ ದೂರ ಉಳಿಯಲು ಮತ್ತು ಸಾಧ್ಯವಾದರೆ ತಡೆಯಲು ಪ್ರಯತ್ನಿಸುವುದು ಇಂದಿನ ಅಗತ್ಯ. ಮಠ-ಮಂದಿರಗಳು, ಮಸೀದಿಗಳು, ಚರ್ಚುಗಳು, ಇತ್ಯಾದಿಗಳು ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಮತ್ತು ಅರ್ಥರಹಿತ ಸಂಪ್ರದಾಯಗಳನ್ನು ದೂರ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ. ಈ ಕೇಂದ್ರಗಳು ವಾಸ್ತವವಾಗಿ ಸತ್ಕರ್ಮಗಳನ್ನು ಪೋಷಿಸುವ, ಜ್ಞಾನ ಪಸರಿಸುವ ಕೆಲಸ ಮಾಡಬೇಕು. ವಿಷಾದದ ಸಂಗತಿಯೆಂದರೆ ಹೆಚ್ಚಿನವು ಋಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ ಸಂಸ್ಥೆಗಳನ್ನು, ಕಲ್ಯಾಣ ಮಂದಿರಗಳನ್ನು ಕಟ್ಟಿ ಹಣ ಮಾಡುವ ಕೇಂದ್ರಗಳಾಗಿವೆ. ತಿರುಳಿಗಿಂತ ಸಿಪ್ಪೆಗೆ ಹೆಚ್ಚು ಮಾನ್ಯತೆ ಕೊಡಲಾಗುತ್ತಿದೆ. ನಿಜ, ತಿರುಳಿನ ರಕ್ಷಣೆಗೆ ಸಿಪ್ಪೆಯಿರಬೇಕು, ಆದರೆ ಸಿಪ್ಪೆಯೇ ತಿರುಳಾಗಬಾರದು. ಆ ಕಾರಣದಿಂದಾಗಿಯೇ ಉತ್ತರಾಧಿಕಾರಕ್ಕಾಗಿ ಕಚ್ಚಾಡುವ, ಒಡೆತನ ಸಾಧಿಸಬಯಸುವವರ ಕೂಟ ಅಲ್ಲಿ ಮನೆ ಮಾಡಿವೆ. ಮೂಲ ಉದ್ದೇಶ ಮರೆತು ಭೌತಿಕ ಆಸ್ತಿ, ಸಂಪತ್ತು ಕ್ರೋಢೀಕರಿಸಲು ನೀಡುವ ಮಹತ್ವವೇ ಇದಕ್ಕೆ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ. 
     ರೂಢಿಗತ ಸಂಪ್ರದಾಯಗಳಿಗೆ ಹೇಗೆ ಮನಸ್ಸು ಒಗ್ಗಿಕೊಳ್ಳುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಬಲಶಾಲಿ ಆನೆಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಮರವೊಂದಕ್ಕೆ ಅಥವ ಒಂದು ಗೂಟಕ್ಕೆ ಕಟ್ಟಿ ಹಾಕಿದರೆ ಅದು ಬಿಡಿಸಿಕೊಳ್ಳಲು ಪ್ರಯತ್ನವೇ ಮಾಡುವುದಿಲ್ಲ. ಆನೆ ಎಷ್ಟು ಬಲಶಾಲಿಯೆಂದರೆ ಅದಕ್ಕೆ ಆ ಸರಪಳಿಯಾಗಲೀ, ಗೂಟವಾಗಲೀ ಅಥವ ಮರವಾಗಲೀ ಲೆಕ್ಕವೇ ಅಲ್ಲ. ಅದು ಮನಸ್ಸು ಮಾಡಿದರೆ ಸರಪಳಿ ತುಂಡರಿಸಬಲ್ಲದು ಮತ್ತು ಮರವನ್ನು ಕಿತ್ತು ಬಿಸಾಡಬಲ್ಲದು. ಆದರೂ ಆ ಕೆಲಸವನ್ನು ಆನೆ ಮಾಡುವುದಿಲ್ಲ. ಏಕೆಂದರೆ ಚಿಕ್ಕದಾಗಿದ್ದಾಗ ಅದನ್ನು ಅದೇ ರೀತಿ ಕಟ್ಟಿ ಹಾಕಲಾಗುತ್ತಿತ್ತು. ಚಿಕ್ಕದಾಗಿದ್ದರಿಂದ ಬಂಧನದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅದಕ್ಕೆ ಆಗ ಆಗುತ್ತಿರಲಿಲ್ಲ. ಕ್ರಮೇಣ ಅದೇ ಅಭ್ಯಾಸವಾಗಿ ಮರಕ್ಕೆ ಕಟ್ಟಿ ಹಾಕಿದರೆ ಬಿಡಿಸಿಕೊಳ್ಳಲಾಗುವುದಿಲ್ಲವೆಂಬ ಭಾವ ಗಟ್ಟಿಗೊಂಡು ಅದು ದೊಡ್ಡದಾದ ಮೇಲೂ ಹಾಗೆ ಕಟ್ಟಿಹಾಕಿದರೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರಲೇ ಇರಲಿಲ್ಲ. ನಮ್ಮ ಸ್ಥಿತಿ ಸಹ ಅದೇ ರೀತಿ ಇದೆ. ನಮಗೆ ವಿಚಾರ ಮಾಡುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಕೆಲವು ಸಂಪ್ರದಾಯಗಳು ಅರ್ಥಹೀನವೆಂದು ನಮಗೆ ತಿಳಿಯುತ್ತದೆ, ಮನಸ್ಸು ಮಾಡಿದರೆ ಅದನ್ನು ಧಿಕ್ಕರಿಸುವ, ಮುಂದುವರೆಸದಿರುವ ಶಕ್ತಿ ನಮಗಿದೆ, ಆದರೂ ನಾವು ಹಾಗೆ ಮಾಡುವುದಿಲ್ಲ. 'ಅಪ್ಪ ಹಾಕಿದ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಳ್ಳಲಾಗುವುದೇ' ಎಂಬ ಪ್ರಚಲಿತ ಗಾದೆ ಮಾತು ತಿಳಿಸುವುದೂ ವಿಚಾರ ಮಾಡಿ ಮುಂದುವರೆಯಿರಿ ಎಂದೇ. ಮರದ ನೆರಳಿನಲ್ಲಿ ಬಾಳೋಣ, ಆದರೆ ಏಕೆ ನೇಣು ಹಾಕಿಕೊಳ್ಳಬೇಕು? ಸಾರಾಸಗಟಾಗಿ ಎಲ್ಲವನ್ನೂ ತಳ್ಳಿಹಾಕಬೇಕಾಗಿಲ್ಲ. ಕುಟುಂಬಕ್ಕೆ, ಸುತ್ತಮುತ್ತಲಿನವರಿಗೆ ಹಿತವೆನಿಸುವ ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬಹುದು, ಒಳ್ಳೆಯದಾದ ಹೊಸ ಸಂಪ್ರದಾಯಗಳನ್ನು ಹುಟ್ಟು ಹಾಕಬಹುದು, ಆದರೆ ಅನಿಷ್ಠ ಸಂಪ್ರದಾಯಗಳನ್ನು ನಿಲ್ಲಿಸುವ ಮತ್ತು ಸದ್ಯಕ್ಕೆ ಒಳ್ಳೆಯದೆನಿಸಿದರೂ ಕಾಲಾನುಕಾಲಕ್ಕೆ ಅದರ ಆಚರಣೆಯಿಂದ ಆಗುವ ಪರಿಣಾಮಗಳನ್ನೂ ಗಮನಿಸಿ ಯೋಗ್ಯತಾನುಸಾರ ನಿರ್ಣಯಿಸಿ ಅಂತಹವುಗಳನ್ನು ಕೈಬಿಡುವ ಬಗ್ಗೆ ನಿರ್ಧರಿಸುವುದು ಇಂದಿನ ಅಗತ್ಯವಾಗಿದೆ. ಸಂಪ್ರದಾಯಗಳು ನಮ್ಮನ್ನು ಕಟ್ಟಿಹಾಕುವ ಸರಪಳಿಗಳಾಗದೆ, ನಮ್ಮನ್ನು ಒಳ್ಳೆಯ ದಾರಿಯಲ್ಲಿ ಕೈಹಿಡಿದು ಮುನ್ನಡೆಸುವ ದಾರಿದೀಪಗಳಾಗಲಿ. 


-ಕ.ವೆಂ. ನಾಗರಾಜ್.
***************
19.12.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಪತ್ರಿಕೆಯಲ್ಲಿ ಪ್ರಕಟಿತ:

4 ಕಾಮೆಂಟ್‌ಗಳು:

  1. K Venkatesh Karanth
    ಬಹಳ ವೈಚಾರಿಕ ಲೇಖನ..... ಅಪ್ಪ ಸಾಕಿದ ಆಲದ ಮರ...... !?..

    ಪ್ರತ್ಯುತ್ತರಅಳಿಸಿ
  2. ವಿವೇಕದಿಂದನುಸರಿಸುವ ಸದ್ಭುದ್ಡಿ ನಮಗೂ ಕರುಣಿಸು ದೇವ.
    ಗೊಡ್ಡು ಸಂಪ್ರದಾಯಗಳನ್ನು ನೂಕಾಚೆ ದೂರ ಎನ್ನುವ ತಮ್ಮ ಈ ಲೇಖನ ನೆಚ್ಚಿಗೆಯಾಯಿತು.

    ಪ್ರತ್ಯುತ್ತರಅಳಿಸಿ