'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನದ್ದೇನೂ ತಪ್ಪಿಲ್ಲ. ಅವನನ್ನು ಬಲಿಪಶು ಮಾಡಿದ್ದಾರೆ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ ಸಹವಾಸದಿಂದ ಹಾಳಾದಳು', 'ಅವನು ರಾಮಚಂದ್ರ. ಆದರೆ ಆ ಮಿಟಕಲಾಡಿ ಅವನನ್ನು ಬಲೆಗೆ ಹಾಕಿಕೊಂಡಿದ್ದಾಳೆ', 'ಮೊದಲು ಇವನು ಹೀಗಿರಲಿಲ್ಲ, ಪೋಲಿ ಪಟಾಲಮ್ ಸೇರಿ ಕೆಟ್ಟುಹೋದ', 'ನಮ್ಮೂರಿನಲ್ಲಿದ್ದಾಗ ಹೇಗಿದ್ದಳು, ಬೆಂಗಳೂರಿಗೆ ಸೇರಿದ್ದೇ ಸೇರಿದ್ದು, ತಲೆಯೇ ನಿಲ್ಲುತ್ತಿಲ್ಲ', 'ನಮ್ಮ, ಪಕ್ಕದ ಮನೆಯಲ್ಲೇ ಅವನು ಬಾಡಿಗೆಗೆ ಇದ್ದ, ಬಹಳ ಸಂಭಾವಿತ. ಅಂಥವನು ಉಗ್ರಗಾಮಿ ಎಂದರೆ ನಂಬಲೇ ಆಗುತ್ತಿಲ್ಲ' - ಇಂತಹ ಮಾತುಗಳು ಕಿವಿಗೆ ಬೀಳುತ್ತಿರುತ್ತವೆ. ಇದರಲ್ಲಿ ಹೊರಹೊಮ್ಮುವ ಮುಖ್ಯಾಂಶವೆಂದರೆ ತಪ್ಪು ನಮ್ಮದಲ್ಲ, ನಮ್ಮವರದಲ್ಲ, ಬೇರೆಯವರದು. ಇದು ಇಲ್ಲಿಗೇ ನಿಲ್ಲುವುದಿಲ್ಲ. ನಮ್ಮ ತಪ್ಪುಗಳು, ಸೋಲುಗಳು, ಕೆಟ್ಟ ಸಂಗತಿಗಳಿಗೆಲ್ಲಾ ಕಾರಣ ನಾವಲ್ಲ, ಬೇರೆಯವರೇ ಎಂದು ವಾದಿಸುತ್ತೇವೆ. ಆದರೆ, ಯಶಸ್ಸುಗಳಿಗೆ, ಒಳ್ಳೆಯ ಸಂಗತಿಗಳಿಗೆಲ್ಲಾ ನಾವು ಮಾತ್ರ ಕಾರಣರು ಎಂದು ನಂಬುತ್ತೇವೆ.
ವಿವೇಚನೆ ಮಾಡೋಣ, ಯಾರಾದರೂ ಇನ್ನೊಬ್ಬರ ಕಾರಣದಿಂದ ಹಾಳಾಗುತ್ತಾರೆಯೇ ಎಂಬುದು ಸಂಶೋಧನೆಗೆ ಅರ್ಹವಾದ ವಿಚಾರ. ಇತರರಿಂದ ನಮಗೆ ತೊಂದರೆಯಾಗಬಹುದು, ಕೇಡಾಗಬಹುದು. ಆದರೆ ಆ ತೊಂದರೆಯಲ್ಲಿ ನಮ್ಮ ಪಾಲೂ ಇರಬಹುದಲ್ಲವೇ? ಒಂದು ಸರಳ ಉದಾಹರಣೆ ನೋಡೋಣ. ಮಾವಿನಮರ ಮತ್ತು ಬೇವಿನಮರ ಅಕ್ಕ ಪಕ್ಕದಲ್ಲಿ ಇವೆಯೆಂದು ಭಾವಿಸೋಣ. ಬೇವಿನಮರದ ಪಕ್ಕದಲ್ಲಿರುವ ಮಾವಿನಮರದ ಹಣ್ಣುಗಳು ಕಹಿಯಾಗಿರುವುವೇ? ಮಾವಿನಮರದ ಪ್ರಭಾವದಿಂದ ಬೇವಿನ ಕಹಿಯಲ್ಲಿ ವ್ಯತ್ಯಾಸವಾಗುವುದೇ? ಒಂದು ವೇಳೆ ಮಾವಿನಮರ ಇದ್ದ ಸ್ಥಳದಲ್ಲಿ ಬೇವಿನಮರ ಮತ್ತು ಬೇವಿನಮರ ಇದ್ದ ಸ್ಥಳದಲ್ಲಿ ಮಾವಿನಮರ ಇದ್ದಿದ್ದರೆ? ಆಗಲೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ಎರಡು ಮರಗಳು ಇರುವ ಭೂಮಿಯ ಗುಣ ಒಂದೇ. ಆದರೆ ಮಾವಿನಮರ ಭೂಮಿಯಲ್ಲಿ ತನಗೆ ಬೇಕಾದ ಸಾರವನ್ನು ಮಾತ್ರ ಹೀರಿಕೊಳ್ಳುತ್ತದೆ. ಬೇವಿನಮರವೂ ಅಷ್ಟೆ. ಮಾವು ಮತ್ತು ಬೇವಿನ ಮರಗಳಿಗೆ ವಿಭಿನ್ನ ಫಲಗಳನ್ನು ನೀಡುವ ಆಯ್ಕೆಯಿಲ್ಲ. ಮನುಷ್ಯನ ವಿಷಯದಲ್ಲಿ ಈ ತತ್ವ ಅನ್ವಯಿಸಿ ನೋಡೋಣ. ವಿವೇಚನೆ ಮಾಡುವ ಶಕ್ತಿಯಿರುವ ಮನುಷ್ಯ ವಿಚಿತ್ರ ಜೀವಿ, ಅದ್ಭುತ ಜೀವಿ, ಅವನೇ ಬೇರೆ, ಅವನ ರೀತಿಯೇ ಬೇರೆ. ಅವನಲ್ಲಿ ಒಳ್ಳೆಯ ಮತ್ತು ಕೆಟ್ಟ ಅಂಶಗಳೆರಡೂ ಇರುತ್ತವೆ. ಮರದ ಬೇರುಗಳು ಹೇಗೆ ನೀರಿನ ಸೆಲೆಯಿರುವ ಕಡೆಗೆ ಚಾಚಿ ಮುನ್ನಡೆಯುವುವೋ ಅದೇ ರೀತಿ ಒಳ್ಳೆಯ ಅಂಶ ಪ್ರಧಾನವಾಗಿರುವ ವ್ಯಕ್ತಿ ಅಂತಹವರದೇ ಸಹವಾಸ ಇಷ್ಟಪಡುತ್ತಾನೆ. ಒಂದುವೇಳೆ ಅವನು ಕೆಟ್ಟವರ ನಡುವೆಯೇ ಬಾಳಬೇಕಾದ ಪರಿಸ್ಥಿತಿಯಿದ್ದರೆ ಅವನಲ್ಲಿನ ಕೆಟ್ಟ ಅಂಶಗಳಿಗೆ ಪ್ರಚೋದನೆ ದೊರೆತು, ಕೆಟ್ಟವನೆನಿಸಿಕೊಂಡರೂ ಸಹ ಅವನು ಕೆಟ್ಟವರಲ್ಲಿ ಒಳ್ಳೆಯವನು ಅನ್ನಿಸಿಕೊಳ್ಳಬಹುದು. ಅದೇ ರೀತಿ ಕೆಟ್ಟ ಅಂಶಗಳು ಪ್ರಧಾನವಾಗಿರುವ ವ್ಯಕ್ತಿ ಒಳ್ಳೆಯವರ ನಡುವೆ ಇರಬೇಕಾದ ಅನಿವಾರ್ಯತೆ ಬಂದರೆ ಅವನ ಒಳ್ಳೆಯತನಕ್ಕೆ ಪ್ರಚೋದನೆ ಸಿಕ್ಕಿ ಒಳ್ಳೆಯವನೆನಿಸಿದರೂ, ಆಗಾಗ್ಗೆ ಅವನ ಕೆಟ್ಟತನ ಪ್ರಕಟವಾಗದೇ ಇರದು.
ಹಾಗಾದರೆ ಕೆಟ್ಟವರು ಕೆಟ್ಟವರಾಗೇ ಇರುತ್ತಾರೆಯೇ? ಒಳ್ಳೆಯವರು ಒಳ್ಳೆಯವರಾಗೇ ಇರುತ್ತಾರೆಯೇ? ಎಂಬ ಪ್ರಶ್ನೆಗೆ ಕಾಲ ನೀಡಿರುವ ಉತ್ತರವೆಂದರೆ ಇಲ್ಲ, ಹಾಗಿಲ್ಲ ಎಂಬುದೇ. ಪರಿಸ್ಥಿತಿಯ ಶಿಶುವಾಗಿ ಮುಸ್ಲಿಮನಾಗಬೇಕಾಗಿ ಬಂದ ಕಾಳಿಚರಣ ಮಾತೃಧರ್ಮಕ್ಕೆ ಮರಳಲು ಬಯಸಿದಾಗ ಅದನ್ನು ಒಪ್ಪದ ಅಂಧ ಸಂಪ್ರದಾಯವಾದಿಗಳು ಅದನ್ನು ವಿರೋಧಿಸಿದರು. ಅವರ ವಿರುದ್ಧ ಕೆರಳಿ ನಿಂತ ಅವನು ಕಾಲಾಪಹಾಡ್ ಆಗಿ ಖಡ್ಗ ಹಿರಿದು ಅಸಂಖ್ಯಾತ ಹಿಂದೂಗಳನ್ನು ಮುಸ್ಲಿಮರನ್ನಾಗಿ ಮಾಡಿದ ಇತಿಹಾಸ ಕಣ್ಣ ಮುಂದಿದೆ. ಅಂತಹ ತಪ್ಪುಗಳ ಫಲವೇ ಈಗಿನ ಕಾಶ್ಮೀರ ಸಮಸ್ಯೆ, ಉಗ್ರಗಾಮಿಗಳ ಸಮಸ್ಯೆ. ಬೇಡನಾಗಿ ಬೇಟೆಯಾಡಿ ಜೀವಿಸುತ್ತಿದ್ದ ವಾಲ್ಮೀಕಿ ಸಂತನಾಗಿ ಪರಿವರ್ತಿತನಾಗಿ ಅದ್ಭುತ ರಾಮಾಯಣ ರಚಿಸಿದ್ದನ್ನೂ ನಾವು ಅರಿತಿದ್ದೇವೆ. ಒಳ್ಳೆಯತನಕ್ಕೆ ಮತ್ತು ಕೆಟ್ಟತನಕ್ಕೆ ಜಾತಿ, ಮತ, ಪಂಥಗಳ ಭೇದವಿಲ್ಲ. ಸಪ್ತರ್ಷಿಗಳೆಂದು ಕರೆಯಲ್ಪಡುವ ಯಾವ ಋಷಿಯೂ ಮೂಲದಲ್ಲಿ ಹುಟ್ಟಿನಿಂದ ಬ್ರಾಹ್ಮಣರಾಗಿರಲಿಲ್ಲ. ನಾವು ಆರಾಧಿಸುವ ರಾಮ ಕ್ಷತ್ರಿಯನಾಗಿ ಜನಿಸಿದವನು. ಕೃಷ್ಣ ಗೊಲ್ಲಕುಲದಲ್ಲಿ ಹುಟ್ಟಿದವನು. ಮಹಾಪತಿವ್ರತೆಯೆಂದು ಗೌರವಿಸುವ ಅರುಂಧತಿ ಹುಟ್ಟಿನಿಂದ ಶೂದ್ರಳೆಂದರೆ ಹೆಮ್ಮೆಪಡಬೇಕು. ಜಾತಿ, ಮತ, ಧರ್ಮ, ಇತ್ಯಾದಿಗಳೆಲ್ಲಾ ದೇವನಿರ್ಮಿತವಲ್ಲ, ಮಾನವನ ಸೃಷ್ಟಿ. ಅಷ್ಟೇ ಏಕೆ, ಅಸಂಖ್ಯಾತ ದೇವರುಗಳೂ ಮಾನವನಿರ್ಮಿತರೇ. ಆದರೆ ಮಾನವನಿರ್ಮಿತನಲ್ಲದ, ಈ ಜಗತ್ತು, ಈ ಬ್ರಹ್ಮಾಂಡವನ್ನು ನಿಯಂತ್ರಿಸುವ ಆ ದೇವರದೇವನೊಬ್ಬನಿದ್ದಾನೆ. ಆ ದೇವನ ಇರುವಿಕೆಯನ್ನು ಅನುಭವಿಸಿ ಅರಿಯಬಹುದೇ ಹೊರತು ಕಾಣುವುದು ದುಸ್ತರ. ವಿಷಯಾಂತರವಾಗುವುದರಿಂದ ಇದನ್ನು ಇಲ್ಲಿಗೇ ನಿಲ್ಲಿಸಿ ಮೂಲವಿಷಯಕ್ಕೆ ಬರೋಣ.
ನಮ್ಮ ಮನೋಭಾವ ಹೇಗಿದೆ? ಯಾರನ್ನಾದರೂ ಕುರಿತು ಯಾರಾದರೂ ಅವನು ಎಷ್ಟು ಒಳ್ಳೆಯವನು ಎಂದರೆ ಅದನ್ನು ತಕ್ಷಣ ಒಪ್ಪಿಕೊಳ್ಳುವುದಿಲ್ಲ. 'ನನಗೆ ಗೊತ್ತಿಲ್ಲವೇ ಅವನ ಬೇಳೆಕಾಳು' ಎಂದು ಮೂಗು ಮುರಿಯುತ್ತೇವೆ ಅಥವ ಅವನ ಒಳ್ಳೆಯತನಕ್ಕೆ ಸಾಕ್ಷಿ ಬಯಸುತ್ತೇವೆ. ಅವನಲ್ಲಿರಬಹುದಾದ ಲೋಪಗಳ ತನಿಖೆ ನಡೆಸುತ್ತೇವೆ. ಅಂತಹುದೇನಾದರೂ ಸಿಕ್ಕಿದರೆ ಸಾಕು, ಅವನ ಚಾರಿತ್ರ್ಯಹನನ ಮಾಡಿಯೇ ಸಿದ್ಧ. ಅದೇ ಕೆಟ್ಟವನು ಅಂದರೆ ಹಿಂದೆ ಮುಂದೆ ನೋಡದೆ ಒಪ್ಪಿಬಿಡುತ್ತೇವೆ! ನಮ್ಮ ಮತ್ತು ನಮ್ಮವರ ತಪ್ಪುಗಳು ನಮಗೆ ಗೌಣವಾಗಿ ಕಾಣುತ್ತವೆ. ಇತರರ ಸಣ್ಣ ತಪ್ಪುಗಳೂ ಬೃಹದಾಕಾರ ತಳೆಯುತ್ತವೆ. ನಮ್ಮ ನಿಜವಾದ 'ದೋಷ' ಇಲ್ಲಿದೆ. ನಾವು ತಪ್ಪುಗಳನ್ನು, ಲೋಪಗಳನ್ನು ಹೊರಗೆ ಹುಡುಕುತ್ತೇವೆ, ಕಾಣುತ್ತೇವೆ. ನಿಜವಾದ ತಪ್ಪು, ನಿಜವಾದ ಲೋಪ 'ಒಳಗೆ' ಇದೆ! ಆ ಒಳಗಿನ ತಪ್ಪನ್ನು ಅರಿಯುವ, ತಿದ್ದಿಕೊಳ್ಳುವ ಪ್ರಯತ್ನ ಮಾಡಲು ಪ್ರಾರಂಭಿಸಿದಾಗ ನಾವು ನಿಜವಾದ ಮನುಷ್ಯರಾಗುತ್ತಾ ಹೋಗುತ್ತೇವೆ. ಸಮಸ್ಯೆ ಬರುವುದು ಇಲ್ಲೇ. ಏಕೆಂದರೆ ಒಳ್ಳೆಯವರಾಗುವುದು ಎಂದರೆ ಮೇಲೇರುತ್ತಾ ಹೋಗುವುದು. ಇದು ಕಠಿಣವಾದ ಹಾದಿ. ಮೇಲೇರುವುದು ಕಷ್ಟ, ಆದರೆ ಕೆಳಕ್ಕೆ ಬೀಳುವುದು? ಹಾಗೆಂದು ಇದ್ದಲ್ಲೇ ಇದ್ದರೆ ನಾವು ನಿಜವಾದ ಮನುಷ್ಯರೆನಿಸಿಕೊಳ್ಳುವುದಾದರೂ ಹೇಗೆ? ಸಾಧಕ ಮೇಲೇರುವ ಪ್ರಯತ್ನವನ್ನು ಕೆಳಕ್ಕೆ ಬಿದ್ದರೂ ಬಿಡುವುದಿಲ್ಲ. ಅಂತಹ ನಿಜಸಾಧಕರೇ ಸಮಾಜದ ಆಸ್ತಿಯೆಂದರೆ ತಪ್ಪಲ್ಲ. ಆದರೆ ನಾವಾದರೋ ಅಂತಹ ಸಾಧಕರನ್ನು ದೇವರುಗಳನ್ನಾಗಿ ಮಾಡಿಬಿಡುತ್ತೇವೆ. ಸಾಧನೆ ಮಾಡುವುದು ನಮಗೆ ಸಂಬಂಧಿಸಿದ್ದಲ್ಲ ಎಂದುಕೊಂಡುಬಿಡುತ್ತೇವೆ.
ನಿನಗೆ ನೀನೆ ಬಂಧು ನಿನಗೆ ನೀನೆ ಶತ್ರು
ಪರರೇನು ಮಾಡುವರು ನಿನದೆ ತಪ್ಪಿರಲು
ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರು
ನಿನ್ನುದ್ಧಾರ ನಿನ್ನಿಂದಲೇ ಮೂಢ ||
ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ನಮ್ಮ ದೇಶ ಈ ಸ್ಥಿತಿಗೆ ಬಂದಿದೆ ಎಂದು ದೂರುವುದು ಸಾಮಾನ್ಯವಲ್ಲವೇ? 'ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ?' ಅಂದರೆ ಸಿಗಬಹುದಾದ ಉತ್ತರವೆಂದರೆ 'ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ?' ಎಂಬುದೇ. ಪುರಂದರದಾಸರೇ ಹಾಡಿಲ್ಲವೇ 'ಸತ್ಯವಂತರಿಗಿದು ಕಾಲವಲ್ಲ . . . .'! ಬದುಕುವುದು ಕಷ್ಟ, ಸತ್ಯವಂತರಿಗೆ ಕಾಲವಲ್ಲ ಎಂದು ಪ್ರತಿಯೊಬ್ಬರೂ ತಪ್ಪು ಮಾಡುತ್ತಾ ಹೋದರೆ ಇತರರನ್ನು ದೂಷಿಸಬೇಕಾದರೂ ಏಕೆ? ಅವರದು ದೊಡ್ಡ ತಪ್ಪುಗಳು, ನಮ್ಮದಾದರೋ ಪರಿಸ್ಥಿತಿಯ ಕಾರಣದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು ಎಂದು ಸಮರ್ಥಿಸಿಕೊಳ್ಳುತ್ತೇವೆ. ಈ ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯವಾಗುತ್ತದೆ. ಪುರಂದರದಾಸರು ಒಳ್ಳೆಯ ದಾರಿಯಲ್ಲಿ ನಡೆಯಲು ಪ್ರಾರಂಭಿಸಿದಾಗ ಅದರ ಕಷ್ಟದ ಅರಿವಾಗಿ ಆರೀತಿ ಹಾಡಿದ್ದೇ ಹೊರತು ಒಳ್ಳೆಯತನ ಬಿಡಿ ಎಂಬರ್ಥದಲ್ಲಿ ಅಲ್ಲ, ಕಷ್ಟವಾದರೂ ಬಿಡಬೇಡಿ ಎಂಬ ಒಳಧ್ವನಿ ಅದರಲ್ಲಿದೆ. ನಾವು ಒಳ್ಳೆಯವರಾಗಲು ಅಥವ ಕೆಟ್ಟವರಾಗಲು ಇತರರು ಕೇವಲ ನೆಪಗಳಾಗಬಹುದೇ ಹೊರತು ಅವರು ಕಾರಣರಾಗುವುದಿಲ್ಲ, ವಾಸ್ತವಿಕವಾಗಿ ನಾವೇ ಕಾರಣರು. ಹೀಗಿರುವಾಗ ನಮಗೆ ಹೊರಗಿನವರು ಮಾದರಿ ಏಕಾಗಬೇಕು? ನಾವು ಒಳ್ಳೆಯವರು/ಕೆಟ್ಟವರು ಅನ್ನಿಸಿಕೊಳ್ಳಲು ನಿಜವಾದ ಕಾರಣ ನಮ್ಮ ಒಳಗೇ ಇರುವಾಗ ನಾವು ಏನಾಗಬೇಕು ಅನ್ನುವುದು ನಮ್ಮ ಮೇಲೇ ನಿರ್ಭರವಾಗಿದೆ. ಗೀತೆ ಹೇಳುವಂತೆ ನಮ್ಮ ಉದ್ಧಾರಕ್ಕಾಗಲೀ, ಪತನಕ್ಕಾಗಲೀ ನಾವೇ ಕಾರಣರೇ ಹೊರತು ಇತರರಲ್ಲ. ಹಾಗಿರುವಾಗ ಒಳ್ಳೆಯತನಕ್ಕೆ ನಮ್ಮನ್ನು ನಾವು ತೆರೆದುಕೊಳ್ಳೋಣ, ಕನಿಷ್ಠ ಪ್ರಯತ್ನವನ್ನಾದರೂ ಮಾಡೋಣ. ಲೋಪಗಳನ್ನು ಕಾಣುವೆಡೆಗಳಲ್ಲಿ ಒಳ್ಳೆಯದನ್ನು ಕಾಣಲು ಹಂಬಲಿಸೋಣ. ನಮ್ಮಲ್ಲಿ 'ಇರುವುದನ್ನು' ಗುರುತಿಸಿಕೊಳ್ಳೋಣ, ಉಪಯೋಗಿಸೋಣ!
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||
-ಕ.ವೆಂ.ನಾಗರಾಜ್.
**************
5.11.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:
K Venkatesh Karanth
ಪ್ರತ್ಯುತ್ತರಅಳಿಸಿ'ಸೊಡ್ಡಿರಿ' ನ ದೀಪದ ಬುಡದಲ್ಲಿ ಇರುವ ಕತ್ತಲೆ.......
Balarama Bhat
ಅಳಿಸಿಉತ್ತಮ ಲೇಖನ.
ಸತ್ಯವಾದ ಮಾತುಗಳು. ಒಳ್ಳೆಯದು ಅಥವಾ ಕೆಟ್ಟದ್ದು ಎಂಬುದು ನಮ್ಮೊಳಗೇ ಇರುವ ಸುಪ್ತ ಅಸ್ತಿತ್ವಗಳು. ಯಾವುದನ್ನು ನಾವು ಪೋಷಿಸಿ ಬೆಳೆಸಿಕೊಂಡು ನಮ್ಮಲ್ಲಿ ಅಳವಡಿಸಿಕೊಳ್ಳುವೆವೋ ಅದು ನಾವಾಗುವೆವು. 'ಬಿತ್ತಿದಂತೆ ಬೆಳೆಯಂತೆ'. ಆದರೆ ಆ ಪ್ರಯತ್ನದಲ್ಲಿ ನಾವು ಯಶ ಕಾಣದಾದಾಗ (ಪ್ರಯತ್ನಶೀಲತೆ, ಶ್ರದ್ಧೆ ಮತ್ತು ಪ್ರಾಮಾಣಿಕ ಸಾಧನೆಯ ಕೊರತೆಯಿಂದ) ಆ ಅಸಫಲತೆಯ ಕೊರತೆಯನ್ನು ಮುಚ್ಚಿ ಹಾಕಿಕೊಳ್ಳಲು ಬಹುಶಃ ಅನ್ಯರ ದೂಷಣೆಯಲ್ಲಿ, ಅನ್ಯರಲ್ಲಿ ಕುಂದು ಎತ್ತಿ ತೋರಿಸಿ, ವಿಕೃತ ಖುಷಿ ಕಾಣುವ ಪ್ರವೃತ್ತಿ ತಲೆದೋರುತ್ತದೆ ಎನ್ನಬಹುದು. ಹಾಗಾಗಿ ಮೊದಲು ಎಲ್ಲವೂ ಗಟ್ಟಿಯಾಗಬೇಕಾದದ್ದು ನಮ್ಮೊಳಗೇ ಇದೆ. ಅದನ್ನು ಸಾಧಿಸುವ ಶಕ್ತಿಯೂ ನಮ್ಮಲ್ಲಿ ಇದೆ. ಆ ಶಕ್ತಿಯನ್ನು ಗುರುತಿಸಿ, ಬಳಸಿಕೊಳ್ಳುವ ಜಾಣತನ ಮತ್ತು ಅನ್ಯರನ್ನು ಹೀಯಾಳಿಸುವ ಕೆಟ್ಟತನದಿಂದ ದೂರವಿರುವ ದೊಡ್ಡತನದ ಮಾರ್ಗವನ್ನು ಮಾತ್ರ ನಾವೇ ಕಂಡುಕೊಳ್ಳಬೇಕು.
ಪ್ರತ್ಯುತ್ತರಅಳಿಸಿಪ್ರತಿಕ್ರಿಯೆಗೆ ಧನ್ಯವಾದ, ಸುರೇಶ.
ಅಳಿಸಿ