"ಬೇಡಾ, ಕೆಣಕಬೇಡ, ತಲೆ ಕೆಟ್ಟರೆ ನಾನು ಮನುಷ್ಯ ಆಗಿರಲ್ಲ", "ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಪರಿಣಾಮ ನೆಟ್ಟಗಿರಲ್ಲ" - ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಈ ಮಾತುಗಳ ಅಂತರಾರ್ಥ 'ಇದುವರೆಗೆ ಸಹಿಸಿಕೊಂಡಿದ್ದೇನೆ, ಇನ್ನು ಸಹಿಸಿಕೊಳ್ಳಲಾಗುವುದಿಲ್ಲ' ಎಂಬುದೇ ಆಗಿದೆ. ಸಹನೆಯ ಮಹತ್ವ ಕಾಣಬರುವುದು ಇಲ್ಲಿಯೇ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ 'ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು'! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ.
ಅತ್ತ ಮುಖ ಇತ್ತ ಮುಖ ಎತ್ತೆತ್ತಲೋ ಮುಖ
ಏಕಮುಖ ಬಹುಮುಖ ಸುಮುಖ ಕುಮುಖ|
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ||
ಸಹನೆಯ ಮಹತ್ವವನ್ನು ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ದಾರ್ಶನಿಕವಾಗಿ ಅನೇಕ ಮಗ್ಗಲುಗಳಲ್ಲಿ ವಿಶ್ಲೇಷಿಸಬಹುದು. ವಿಜ್ಞಾನದ ಆವಿಷ್ಕಾರಗಳು ವಿಜ್ಞಾನಿಗಳ ಸಹನಾಸಹಿತವಾದ ಶ್ರಮದ ಫಲವೇ ಆಗಿದೆ. ಪ್ರಯೋಗಗಳನ್ನು ಮಾಡುತ್ತಾ ಮಾಡುತ್ತಾ, ವಿಫಲರಾದರೂ ಪ್ರಯತ್ನ ಮುಂದುವರೆಸಿ ಯಶಸ್ವಿಯಾದವರ ಪಟ್ಟಿ ದೊಡ್ಡದಿದೆ. ಥಾಮಸ್ ಆಲ್ವಾ ಎಡಿಸನ್ ಹೇಳಿದ್ದಂತೆ ಒಂದು ಸಾವಿರ ಪ್ರಯೋಗಗಳು ವಿಫಲವಾದರೂ, ಆ ಒಂದು ಸಾವಿರ ವಿಫಲ ಪ್ರಯೋಗಗಳಿಂದ ಆ ರೀತಿ ಮಾಡಿದರೆ ಪ್ರಯೋಜನವಾಗುವುದಿಲ್ಲ ಎಂಬ ಸಂಗತಿ ಗೊತ್ತಾಗುವುದೂ ದೊಡ್ಡ ಸಂಗತಿಯೇ ಅಲ್ಲವೇ? ಛಲ ಬಿಡದ ತ್ರಿವಿಕ್ರಮರೆನಿಸಿಕೊಳ್ಳಲು ಸಹನೆ ಇರಲೇಬೇಕು. ಒಂದು ಕಾಗದವನ್ನೋ, ವಸ್ತುವನ್ನೋ ಇಟ್ಟುಕೊಂಡು ಅದರಲ್ಲಿ ಏನೋ ಮಾಡಬೇಕೆಂದು ಪ್ರಯತ್ನಿಸುವ ಪುಟ್ಟ ಮಗುವನ್ನು ಗಮನಿಸಿ. ಅದು ತದೇಕಚಿತ್ತದಿಂದ ಏನನ್ನೋ ಮಾಡುತ್ತಿರುತ್ತದೆ. ತನ್ನ ಮನಸ್ಸಿನಂತೆ ಆಗದಿದ್ದರೆ ಸಿಟ್ಟು ಮಾಡಿಕೊಂಡು ಅದನ್ನು ಎಸೆಯುತ್ತದೆ. ಆದರೆ ಅಲ್ಲಿಗೇ ನಿಲ್ಲಿಸುವುದಿಲ್ಲ, ಮತ್ತೆ ಅದನ್ನು ತೆಗೆದುಕೊಂಡು ಪ್ರಯತ್ನ ಮುಂದುವರೆಸುತ್ತದೆ. ಯಾರಾದರೂ ಹಿರಿಯರು ಅದಕ್ಕೆ ಸಹಾಯ ಮಾಡುತ್ತಾ, ಹೇಳಿಕೊಡುತ್ತಾ ಇದ್ದು, ಮಗು ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ಆಗ ಅದು ಪಡುವ ಸಂತೋಷವನ್ನು ಕಂಡವರಿಗೂ ಸಂತೋಷವಾಗುತ್ತದೆ. ಹೀಗೆ ಸಹನೆ ಮೊಳಕೆಯೊಡೆಯುತ್ತದೆ. ಯಾವುದೇ ಸಾಧನೆಗೆ ಸಹನೆ ಬೇಕೇಬೇಕು. ಅಟ್ಟ ಹತ್ತಲಾಗದವನು ಬೆಟ್ಟ ಹತ್ತಲಾರ. ಯಾವುದೇ ದೊಡ್ಡ ಸಾಧನೆ ಕಾರ್ಯರೂಪಕ್ಕೆ ಬರುವುದು ಯಾರೂ ಗಮನಿಸದ ಒಂದು ಮೊದಲಿನ ಸಣ್ಣ ಹೆಜ್ಜೆಯಿಂದಲೇ ಎಂಬುದನ್ನು ನೆನಪಿಡೋಣ.
ಧಾರ್ಮಿಕವಾಗಿಯೂ ಸಹನೆ ಅತ್ಯಂತ ಪ್ರಧಾನವಾಗಿ ಬೋಧಿಸಲ್ಪಟ್ಟ ವಿಷಯವಾಗಿದೆ. ದೇವರಿಗೆ ಹತ್ತಿರವಾಗಲು ಇರಬೇಕಾದ ರೀತಿ ನೀತಿಗಳನ್ನು ಸ್ಪಷ್ಟಪಡಿಸುವ ಧಾರ್ಮಿಕ ಸಂಪ್ರದಾಯಗಳು, ಕಟ್ಟಳೆಗಳು ಸಹನೆಗೆ ಪ್ರಾಧಾನ್ಯತೆ ನೀಡಿವೆಯೆಂದರೆ ತಪ್ಪಲ್ಲ. ಸನಾತನ ಕಾಲದಲ್ಲಿ ಮೋಕ್ಷ ಸಂಪಾದನೆಗಾಗಿ ತಪಸ್ಸು, ಧ್ಯಾನಗಳಲ್ಲಿ ತೊಡಗಿರುತ್ತಿದ್ದ ಸಾಧು-ಸಂತ-ಸಂನ್ಯಾಸಿಗಳು ಸಹನೆಯ ಪ್ರತೀಕರಾಗಿದ್ದರು. 'ನೀನೂ ಜೀವಿಸು, ಇತರರನ್ನೂ ಜೀವಿಸಲು ಬಿಡು' ಎಂಬ ಮಹಾವೀರನ ಬೋಧನೆಯಲ್ಲಿ ಕಾಣುವುದೂ ಸಹನೆಯ ನೀತಿಪಾಠವೇ. ಏಸುಕ್ರಿಸ್ತ ತನ್ನವರಿಗಾಗಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಸಹಿಸಿದ್ದವನು. 'ತಾಳ್ಮೆಯಿಂದಿರುವ ವ್ಯಕ್ತಿ ಯೋಧನಿಗಿಂತಲೂ ಶ್ರೇಷ್ಠ, ರಾಜ್ಯವನ್ನು ಗೆದ್ದವನಿಗಿಂತ ತನ್ನ ಭಾವನೆಗಳನ್ನು ನಿಯಂತ್ರಿಸಿ ಗೆದ್ದವನೇ ಶ್ರೇಷ್ಠ' ಎಂದು ಹೀಬ್ರೂ ಗಾದೆಯಿದೆ. ಒಬ್ಬ ಶ್ರೇಷ್ಠ ಮಹಮದೀಯ ಅಲ್ಲಾಹುವಿಗೆ ಸಮೀಪನಾಗಿರಬೇಕೆಂದರೆ ಶ್ರೇಷ್ಠ ರೀತಿಯಲ್ಲಿ ಜೀವಿಸಬೇಕು, ಅರ್ಥಾತ್ ಸಹನಾಮುಯಾಗಿರಬೇಕು. ಪರಿಪೂರ್ಣತೆಯ ಸಾಧನೆಗೆ ತಾಳ್ಮೆ ಅತ್ಯಂತ ಅಗತ್ಯವೆಂದು ಬೌದ್ಧ ಧರ್ಮ ಪ್ರತಿಪಾದಿಸುತ್ತದೆ.
ಸನಾತನ ಧರ್ಮವಂತೂ ಸಹಿಷ್ಣುತೆಗ ಪ್ರಾಧಾನ್ಯತೆ ನೀಡಿದ ಧರ್ಮವಾಗಿದೆ. ಇದರಲ್ಲಿ ಸಹಿಷ್ಣುತೆಗೆ ೧೦ ಪರೀಕ್ಷೆಗಳಿವೆ. ಅವೆಂದರೆ:
೧. ಅಹಿಂಸೆ (ಯಾರನ್ನೂ ದೈಹಿಕವಾಗಿ, ಮಾನಸಿಕವಾಗಿ, ಬರವಣಿಗೆಯ ಮೂಲಕವಾಗಲೀ, ಮಾತಿನ ಮೂಲಕವಾಗಲೀ, ಇನ್ನು ಯಾವುದೇ ರೀತಿಯಲ್ಲಾಗಲೀ ನೋಯಿಸದಿರುವುದು.)
೨. ಸತ್ಯ,
೩. ಅಸ್ತೇಯ (ಇತರರ ವಸ್ತುಗಳನ್ನು ಭೌತಿಕವಾಗಿಯಾಗಲೀ, ಮಾನಸಿಕವಾಗಿಯಾಗಲಿ ಕದಿಯದಿರುವುದು),
೪. ಬ್ರಹ್ಮಚರ್ಯ (ಮದುವೆಯಾಗದೆ ಇರುವುದು ಎಂಬ ಅರ್ಥ ಮಾತ್ರವಲ್ಲದೆ, ಬ್ರಹ್ಮ=ಆಧ್ಯಾತ್ಮಿಕ ವಿಚಾರದಲ್ಲಿ ಸಂಚರಿಸುವುದು ಎಂಬ ಅರ್ಥವೂ ಇದೆ)
೫. ದಯೆ,
೬. ಮೋಸ ಮಾಡದಿರುವುದು,
೭. ಕ್ಷಮಾಗುಣ,
೮. ಧೃತಿ (ಯಾವುದೇ ಸಂದರ್ಭದಲ್ಲಿ, ಹಾನಿ, ನಷ್ಟ, ಅವಮಾನ, ಇತ್ಯಾದಿ ಸಂದರ್ಭಗಳಲ್ಲಿ ಧೃಢಚಿತ್ತತೆ)
೯. ಮಿತಾಹಾರ (ಅಗತ್ಯವಿರುವಷ್ಟೇ ಆಹಾರ ಸೇವನೆ) ಮತ್ತು
೧೦. ಶೌಚ (ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧವಾಗಿರುವುದು).
ಮೇಲಿನ ೧೦ ಸಂಗತಿಗಳನ್ನು ಪಾಲಿಸುವವರಿಗೆ ಸಹನಾಶಕ್ತಿ ತಾನಾಗಿ ಒಲಿದು ಬರದೇ ಇರಲಾರದು.
ಇಷ್ಟಾದರೂ ಮತೀಯ, ಧಾರ್ಮಿಕ ಅಸಹನೆಗಳು ಇಂದು ವಿಶ್ವದ ಬೃಹತ್ ಸಮಸ್ಯೆಯಾಗಿರುವುದಕ್ಕೆ ಕಾರಣ ಧರ್ಮಗಳದ್ದಲ್ಲ, ಅದನ್ನು ತಪ್ಪಾಗಿ ತಿಳಿದು ಅನುಸರಿಸುವ ಮತಾಂಧ ಅನುಯಾಯಿಗಳದು. ಎಲ್ಲಾ ಧರ್ಮಗಳ ಹಿರಿಯರೆನಿಸಿಕೊಂಡವರು ವಿಶ್ವಶಾಂತಿಯ ದೃಷ್ಟಿಯಿಂದ ಪರಸ್ಪರ ಸಮಾಲೋಚಿಸಿ ತಮ್ಮ ಅನುಯಾಯಿಗಳಿಗೆ ಸುಯೋಗ್ಯ ಮಾರ್ಗದರ್ಶನ ನೀಡದಿದ್ದರೆ ವಿನಾಶದ ಹಾದಿ ಖಂಡಿತವೆಂದರೆ ಅತಿಶಯೋಕ್ತಿಯಲ್ಲ. ಸಹನೆಯಿದ್ದಲ್ಲಿ ಸಮಸ್ಯೆಗಳಿಗೆ ಸ್ಥಳವಿರುವುದಿಲ್ಲ.
ಸಹನೆ ಅನ್ನುವುದು ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿ ಇಡುವಂತಹ ನಿಯಂತ್ರಕ ಶಕ್ತಿ ಎಂಬುದನ್ನು ಅರಿತೆವು. ಸಹನೆ ಸಜ್ಜನರ ಆಸ್ತಿಯಾಗಿದ್ದು, ಉತ್ತಮ ಫಲಗಳನ್ನು ಕೊಡುತ್ತದೆ ಎಂಬುದೂ ಅನುಭವದ ಮಾತು. ಸಹನೆಯ ವಿರುದ್ಧ ಗುಣವಾದ ಅಸಹನೆಗೂ ಹಲವು ಮಗ್ಗಲುಗಳಿವೆ. ಸಹನೆಯ ಕಟ್ಟೆ ಒಡೆದಾಗ ಉಂಟಾಗುವ ಅಸಹನೆಯ ಪರಿಣಾಮ ಮಾತ್ರ ಘೋರವಾಗಿರುತ್ತದೆ. ಮಿತಿಯಾಗಿದ್ದಾಗ ವಿಷವೂ ಅಮೃತವಾಗಬಹುದು, ಅತಿಯಾದರೆ ಅಮೃತವೂ ವಿಷವಾಗಬಹುದು. ಅವರು ಮುಂದಿದ್ದಾರೆ, ನಾವು ಹಿಂದಿದ್ದೇವೆ ಎಂಬ ಕಾರಣದಿಂದ ಉಂಟಾಗುವ ಅಸಹನೆ ಹತೋಟಿಯಲ್ಲಿದ್ದರೆ ನಾವೂ ಮುಂದುವರೆಯಲು ಅದು ಪ್ರೇರಿಸಬಹುದು. ಮಿತಿ ಮೀರಿದರೆ ಅದು ಮುಂದಿರುವವರ ವಿರುದ್ಧದ ದ್ವೇಷವಾಗಿಯೂ ಪರಿವರ್ತಿತವಾಗಬಹುದು. ಇದು ಬಂಧು-ಬಳಗಗಳಲ್ಲಿ, ವೃತ್ತಿ ವಲಯಗಳಲ್ಲಿ, ಜಾತಿ-ಜಾತಿಗಳ ನಡುವೆ ಸಾಮಾನ್ಯವಾಗಿ ಕಾಣಬರುವಂತಹದು. ಸಂಘರ್ಷವಲ್ಲ, ವೈಚಾರಿಕ ಜಾಗೃತಿ ಮಾತ್ರ ಇದಕ್ಕೆ ಪರಿಹಾರ ಕೊಡಬಲ್ಲದು.
ನಿರಂತರವಾದ ಕಿರುಕುಳ, ಯಾವುದೋ ಒಂದು ಕಾರಣದಿಂದಾದ ವೈಮನಸ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸತತವಾಗಿ ಮಾಡುವ ದ್ವೇಷ, ಇತ್ಯಾದಿಗಳು ಸಹನೆಯ ಕಟ್ಟೆ ಒಡೆಯಲು ಸಾಕಾಗುತ್ತದೆ. ಎಲಾಸ್ಟಿಕ್ಕಿನ ಎಳೆಯನ್ನು ಒಂದು ಹಂತದವರೆವಿಗೂ ತುಂಡಾಗದಂತೆ ಎಳೆಯಬಹುದು. ಆದರೆ ಅದರ ಧಾರಣಾಶಕ್ತಿ ಮೀರಿ ಎಳೆದರೆ ತುಂಡಾಗುತ್ತದೆ. ಮನುಷ್ಯರ ನಡುವಣ ವ್ಯವಹಾರವೂ ಹೀಗೆಯೇ. ಒಂದು ಹಂತದವರೆಗೆ ಸಹಿಸುತ್ತಾರೆ. ಇನ್ನು ಸಹಿಸಲು ಸಾಧ್ಯವೇ ಇಲ್ಲವೆಂದಾದಾಗ ಸ್ಫೋಟಕ ವಾತಾವರಣ ಉಂಟಾಗುತ್ತದೆ. ಆಗ ಮನಸ್ಸಿನ ನಿಯಂತ್ರಣ ಮೀರಿ ಸಹನೆಯ ಮುಖವಾಡ ಕಳಚುತ್ತದೆ, ಕ್ರೋಧಾಸುರ ಆವಾಹನೆಗೊಳ್ಳುತ್ತಾನೆ. ವಿವೇಕರಹಿತವಾದ ಆ ಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು, ಕೊಲೆ ಆಗಬಹುದು, ಆತ್ಮಹತ್ಯೆ ಮಾಡಿಕೊಳ್ಳಬಹುದು, ದೀರ್ಘಕಾಲದ ಸಂಬಂಧಗಳ ಇತಿಶ್ರೀ ಆಗಬಹುದು. ಏನೇ ಆದರೂ ಪರಿಣಾಮ ಮಾತ್ರ ಸಂಬಂಧಿಸಿದ ಯಾರಿಗೂ ಹಿತವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಸಿಟ್ಟಿಗೊಳಗಾದ ವ್ಯಕ್ತಿ ರಾಕ್ಷಸನಂತೆಯೇ ವರ್ತಿಸುತ್ತಾನೆ. ಅವನ ಸ್ಥಿತಿ ಹೇಗಿರುತ್ತದೆಂದರೆ:
ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||
ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ|
ತಡೆಯಬಂದವರ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||
ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತರಾದಾಗ ಬರುವುದಿಲ್ಲ ಎಂಬುದು ಸಹನೆಯ ಕಟ್ಟೆ ಒಡೆದವರಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಅಸಹನೆಯ ಮುದ್ದು ಕೂಸುಗಳಾದ ಕೋಪ, ಮತ್ಸರ ಮತ್ತು ದ್ವೇಷಗಳು ವಿವೇಚನೆ ಮಾಡುವ ಶಕ್ತಿಯನ್ನು ನುಂಗಿಬಿಡುತ್ತವೆ. ವಿವೇಚನಾಶಕ್ತಿ ನಾಶವಾಗಿರುವ ಆ ಸ್ಥಿತಿಯಲ್ಲಿ ಅನಾಹುತ ನಡೆದುಹೋಗುತ್ತದೆ. ಅದರ ದೀರ್ಘಕಾಲದ ಪರಿಣಾಮವನ್ನು ಸಂಬಂಧಿಸಿದವರಲ್ಲದೆ ಅವರ ಕುಟುಂಬದವರೂ ಎದುರಿಸಬೇಕಾಗುತ್ತದೆ.
ಸಾಮೂಹಿಕವಾಗಿ ಉಂಟಾಗುವ ಅಸಹನೆ ಅರಾಜಕತೆ, ಅಶಾಂತಿಗೆ ಕಾರಣವಾಗುತ್ತದೆ. ಸಾಮೂಹಿಕ ಅಸಹನೆ, ಅಶಾಂತಿಗೆ ಇಂದಿನ ರಾಜಕೀಯ ವ್ಯವಸ್ಥೆ, ವಿವಿಧ ಮಾಧ್ಯಮಗಳು ಗಣನೀಯ ಪಾಲು ನೀಡುತ್ತಿವೆ. ಇದಕ್ಕೆ ಪರಿಹಾರವಿಲ್ಲವೇ ಅಂದರೆ ಖಂಡಿತಾ ಇದೆ. ಕಾಯಿಲೆ ಬಂದ ಮೇಲಿನ ಚಿಕಿತ್ಸೆಗಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದೇ ಅತ್ಯುತ್ತಮವಾದ ಪರಿಹಾರ. ಸಹನೆ ಕಾಯ್ದುಕೊಳ್ಳಲು ಪೂರಕವಾದ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳಬೇಕು. ನಮ್ಮ ಸ್ನೇಹಿತರು, ಪರಿಸರಗಳ ವಿಚಾರದಲ್ಲಿ ಜಾಗೃತರಾಗಿರಬೇಕು. ಹುಳುಕು ಹುಡುಕುವವರು ವಿಷ ಕಕ್ಕುತ್ತಾರೆ, ಒಳಿತು ಕಾಣುವವರು ಅಮೃತ ಸುರಿಸುತ್ತಾರೆ ಎಂಬುದು ಅನುಭವಿಗಳ ನುಡಿ. ಎಲ್ಲೆಲ್ಲೂ ಕೆಟ್ಟದನ್ನು ಕಾಣುವ ದೃಷ್ಟಿಕೋನ ಬದಲಾಯಿಸಿಕೊಂಡು ಒಳಿತನ್ನು ಅರಸುವ ಮನೋಭಾವ ಮೂಡಿದರೆ, ಲೇಖನದಲ್ಲಿ ತಿಳಿಸಿರುವ ಸಹಿಷ್ಣುತೆಗೆ ಪೂರಕವಾದ ೧೦ ಅಂಶಗಳ ಪಾಲನೆ ಮಾಡುವ ಪ್ರವೃತ್ತಿ ರೂಢಿಸಿಕೊಂಡರೆ ನಾವು ಖಂಡಿತಾ ಸಹನಶೀಲರಾಗುತ್ತೇವೆ. ಸಮಯಕ್ಕೆ ತನ್ನದೇ ಆದ ರಹಸ್ಯಗಳಿರುತ್ತವೆ. ಅದು ತನ್ನ ರಹಸ್ಯಗಳನ್ನು ಬಿಟ್ಟುಕೊಡುವವರೆಗೆ ಕಾಯುವುದೇ ಸಹನೆ! ತಾಳ್ಮೆ ಕಹಿಯಾಗಿರುತ್ತದೆ, ಆದರೆ ಅದರ ಫಲ ಸಿಹಿಯಾಗಿರುತ್ತದೆ. ಸಹನೆ ಎಂದಿಗೂ ದುರ್ಬಲರ ಅನಿವಾರ್ಯತೆಯಲ್ಲ, ಅದು ಬಲಶಾಲಿಗಳ ಆಯುಧ. ಸಹನೆ ಸಹಬಾಳ್ವೆಗೆ ಒತ್ತು ಕೊಡುತ್ತದೆ. ಅಸಹನೆಯ ಮೂಲ ಸ್ವಾರ್ಥಪರ ಚಿಂತನೆ. ಕೇವಲ ಸ್ವಕೇಂದ್ರಿತ ಚಿಂತನೆ ಮತ್ತು ವಿಚಾರಗಳು ಇತರರನ್ನು ದ್ವೇಷಿಸುವಂತೆ, ಸಹಿಸಿಕೊಳ್ಳದಿರುವಂತೆ ಮಾಡುತ್ತವೆ. ಸಹನೆ ಗುಣವಲ್ಲ, ಅದೊಂದು ಸಾಧನೆ. ಸಹನೆ ನಮ್ಮ ಸಂಪತ್ತೆನಿಸಲು ಅಸಹನೆಯ ಮೊಳಕೆ ನಮ್ಮೊಳಗೆ ಚಿಗುರದಂತೆ ಎಚ್ಚರವಿರಬೇಕು.
ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು
ಉಸಿರು ನಿಲ್ಲುವವರೆಗೆ ಕಾಡುವವನಿವನು |
ಧೃಢಚಿತ್ತ ಸಮಚಿತ್ತಗಳಾಯುಧವ ಮಾಡಿ
ಒಳವೈರಿಯನು ಅಟ್ಟಿಬಿಡು ಮೂಢ ||
"ಸಹನೆ ಚಾರಿತ್ರ್ಯವನ್ನು ನಿರ್ಮಿಸುತ್ತದೆ; ಚಾರಿತ್ರ್ಯವಂತರು ಚರಿತ್ರೆಯ ವಿಷಯವಾಗುತ್ತಾರೆ, ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ."
-ಕ.ವೆಂ.ನಾಗರಾಜ್.