ಪ್ರತಿಯೊಬ್ಬರ ಜೀವನದಲ್ಲೂ ತಿರುವುಗಳು ಇದ್ದೇ ಇರುತ್ತವೆ. ಅವು ಬಾಳಿನ ದಿಕ್ಕನ್ನೇ ಬದಲಾಯಿಸಿಬಿಡುತ್ತವೆ. ಭಾರತದ ಅತ್ಯುತ್ತಮ ಗ್ರಂಥಪಾಲಕರು ಮತ್ತು ಜಗತ್ತಿನ ಅತ್ಯುತ್ತಮ ಹತ್ತು ಗ್ರಂಥಪಾಲಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟವರು, ಕೇಂಬ್ರಿಡ್ಜಿನ ಅಂತರರಾಷ್ಟ್ರೀಯ ಬಯೋಗ್ರಾಫಿಕ್ ಕೇಂದ್ರದಿಂದ ಪ್ರಪಂಚದ ಅತ್ಯಂತ ಗುಣಾನ್ವಿತರಲ್ಲಿ ಒಬ್ಬರೆಂದು ಕರೆಯಲ್ಪಟ್ಟವರು, ಅಮೆರಿಕಾದ ಅಂತರರಾಷ್ಟ್ರೀಯ ಸಂಸ್ಥೆಯಿಂದ ಸಹಸ್ರಮಾನದ ವ್ಯಕ್ತಿಯೆಂಬ ಬಿರುದು ಗಳಿಸಿದವರು ಮತ್ತು ಬಿರುದಿನೊಂದಿಗೆ ಬಂದ ೩೦ ಕೋಟಿ ರೂ. ಹಣವನ್ನೂ ಸ್ವಂತಕ್ಕಾಗಿ ಇಟ್ಟುಕೊಳ್ಳದೆ ಬಡವರಿಗಾಗಿ ವಿನಿಯೋಗಿಸಿದವರು, ಗ್ರಂಥಪಾಲಕ ಹುದ್ದೆಯಿಂದ ಬಂದ ಸಂಬಳ, ಪೆನ್ಶನ್, ಇತ್ಯಾದಿಗಳನ್ನು ಸ್ವಂತಕ್ಕಾಗಿ ಬಳಸದೆ ಪೂರ್ಣವಾಗಿ ದೀನ ದಲಿತರಿಗಾಗಿ ಖರ್ಚು ಮಾಡಿದ ಏಕೈಕ ಅಪರೂಪದ ವ್ಯಕ್ತಿಯೇ ಪಾಲಮ್ ಕಲ್ಯಾಣಸುಂದರಮ್. ಅವರ ಜೀವನ ಶೈಲಿ ಬದಲಾದುದೇ ಈ ಬೆಳವಣಿಗೆಗಳಿಗೆ ಕಾರಣವಾಗಿದೆ. ಅಷ್ಟಕ್ಕೂ ಅವರಲ್ಲಿ ಈ ಬದಲಾವಣೆ ಬರಲು ಕಾರಣವಾದ ಘಟನೆಯೂ ಸ್ವಾರಸ್ಯಕರವಾಗಿದೆ. ಹಿಂದೆ ಚೀನಾ-ಭಾರತ ಯುದ್ಧ ನಡೆದ ಸಂದರ್ಭದಲ್ಲಿ ಇನ್ನೂ ವಿದ್ಯಾರ್ಥಿಯಾಗಿದ್ದ ಕಲ್ಯಾಣಸುಂದರಮ್ ಆಗಿನ ತಮಿಳುನಾಡಿನ ಮುಖ್ಯಮಂತ್ರಿಗಳಿಗೆ ಯುದ್ಧ ಸಂತ್ರಸ್ತರ ನಿಧಿಗಾಗಿ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದುಕೊಟ್ಟಿದ್ದ. ನಂತರ ಆನಂದವಿಕಟನ್ ಪತ್ರಿಕೆಯ ಸಂಪಾದಕರಲ್ಲಿ ಹೋಗಿ ತಾನು ಚಿನ್ನದ ಸರ ಕೊಟ್ಟ ವಿಷಯವನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿದ್ದ. ಪತ್ರಿಕೆಯ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್ ಅವನಿಗೆ, "ನೀನು ಸ್ವತಃ ದುಡಿದು ದಾನ ಕೊಡುತ್ತೀಯಲ್ಲಾ, ಆಗ ಬಂದು ಹೇಳು, ಪ್ರಕಟಿಸುತ್ತೇನೆ" ಎಂದು ಹೇಳಿ ವಾಪಸು ಕಳಿಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಆ ತರುಣ. ಪತ್ರಿಕಾ ಸಂಪಾದಕರ ಆ ಮಾತು ಅವನ ಬಾಳಿನ ದಿಕ್ಕನ್ನೇ ತಿರುಗಿಸಿಬಿಟ್ಟಿತು. ಮುಂದೆ ಆತ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಶ್ರೀವೈಕುಂಠಮ್ ಕಲಾ ಕಾಲೇಜಿನ ಗ್ರಂಥಪಾಲಕನಾಗಿ ಸುಮಾರು ೩೫ ವರ್ಷಗಳ ಕಾಲ ಕೆಲಸ ಮಾಡಿದಾಗ ಆತ ಮಾಡಿದ್ದೇನೆಂದರೆ ಆತ ತಾನು ದುಡಿದಿದ್ದ ಹಣವನ್ನು ಸ್ವಂತಕ್ಕೆ ಬಳಸದೆ ಪೂರ್ಣವಾಗಿ ಬಡಬಗ್ಗರಿಗಾಗಿ ಬಳಸಿದ್ದು. ಅದರ ಪರಿಣಾಮವೇ ಆತನನ್ನು ಮೇಲೆ ಹೇಳಿದ ಪ್ರಶಸ್ತಿಗಳು ಅರಿಸಿಕೊಂಡು ಬಂದದ್ದು. ದೌರ್ಭಾಗ್ಯವೆಂದರೆ ನಮ್ಮ ಜನಕ್ಕೆ ಸಿನೆಮಾ, ಕಿರುತೆರೆಗಳಲ್ಲಿನ ನಾಯಕರುಗಳು, ಬಿಗ್ ಬಾಸುಗಳೆನಿಸಿಕೊಳ್ಳಲು ಚಿತ್ರ ವಿಚಿತ್ರ ಸರ್ಕಸ್ ಮಾಡುವವರ ವೈಯಕ್ತಿಕ ಬದುಕುಗಳ ಬಗ್ಗೆ ಇರುವ ಆಸಕ್ತಿಯಲ್ಲಿನ ಸ್ವಲ್ಪ ಅಂಶವಾದರೂ ಕಲ್ಯಾಣ ಸುಂದರಮ್‌ನಂತಹ ನಿಜವಾದ ಹೀರೋಗಳ ಬಗ್ಗೆ ಇಲ್ಲದಿರುವುದು!
ಬಾಳದಾರಿಯಲ್ಲಿ ಸಾಗುವಾಗ ಕೆಲವು ಸಂದರ್ಭಗಳಲ್ಲಿ ಹಲವು ಕವಲೊಡೆದ ದಾರಿಗಳಿರುವ ಕೂಡುಸ್ಥಳ ಎದುರಾಗುತ್ತದೆ. ಆ ಸಂದರ್ಭಗಳಲ್ಲಿ ಯಾವ ದಾರಿ ಆರಿಸಿಕೊಳ್ಳುತ್ತೇವೆ ಎಂಬುದು ಮುಂದಿನ ಜೀವನವನ್ನು ನಿರ್ದೇಶಿಸುತ್ತದೆ. ಪಡೆಯುವ ಶಿಕ್ಷಣ, ಮಾಡುವ ಕೆಲಸ, ಆರಿಸಿಕೊಳ್ಳುವ ಸಂಗಾತಿ, ಪ್ರವೃತ್ತಿ, ಹವ್ಯಾಸಗಳು, ಪರಿಸರ, ಸಹವಾಸ, ಸಂಭವಿಸುವ ಘಟನೆಗಳು, ಅನಿರೀಕ್ಷಿತ ಸಂಗತಿಗಳು, ಸೋಲುಗಳು, ಅವಮಾನಗಳು, ಇತ್ಯಾದಿಗಳು ಜೀವನದ ದಿಕ್ಕನ್ನು ಬದಲಾಯಿಸಬಲ್ಲವು. ಆರಿಸಿಕೊಳ್ಳುವ ದಾರಿ ಕುರಿತು ಜಾಗೃತರಾಗಿರಬೇಕು. ಏಕೆಂದರೆ ನಮ್ಮ ಮಕ್ಕಳೂ ಸಹ ಆ ದಾರಿಯಲ್ಲಿ ಸಾಗುತ್ತಾರೆ ಎಂಬ ಅರಿವಿರಬೇಕು. ದಾರಿ ಒಳ್ಳೆಯದಿದ್ದರೆ ಮಕ್ಕಳಿಗೂ, ಸಮಾಜಕ್ಕೂ ಒಳಿತು. ದಾರಿ ಸರಿಯಿರದಿದ್ದರೆ ಸಮಾಜವಿರಲಿ, ಮಕ್ಕಳೂ ನಮ್ಮನ್ನು ಶಪಿಸುತ್ತಾರೆ.
ನಾವು ಗೌರವಿಸುವ ಅನೇಕ ಮಹಾಮಹಿಮರು ಏಕಾಏಕಿ ಮಹಾಮಹಿಮರಾದವರಲ್ಲ. ಬದುಕಿನಲ್ಲಿ ಅವರುಗಳು ಎದುರಿಸಿದ ಸಂದರ್ಭಗಳು, ಸಂಗತಿಗಳು ಅವರನ್ನು ಆ ಸ್ಥಾನಕ್ಕೆ ಏರಿಸಿದವು ಅನ್ನುವುದು ಹೆಚ್ಚು ಸಮಂಜಸವಾದೀತು. ರಾಮ, ಕೃಷ್ಣ, ಏಸುಕ್ರಿಸ್ತರ ದೇವತ್ವಕ್ಕೆ ಸಹ ಇವೇ ಕಾರಣಗಳು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ವರ್ಣಬೇಧ ನೀತಿಯಿಂದ ಎದುರಿಸಿದ ಹಿಂಸೆ, ಅನ್ಯಾಯಗಳು ಅವರನ್ನು ಗಟ್ಟಿಗೊಳಿಸಿದವು. ಆಚರಣೆಯಲ್ಲಿದ್ದ ತಾರತಮ್ಯಗಳಿಂದ ನೊಂದ ಬಸವಣ್ಣ ತಾರತಮ್ಯರಹಿತ ಸಮಾಜನಿರ್ಮಾಣಕ್ಕೆ ಮುಂದುವರೆದರು. ಹಿಂದುಳಿದವರ, ದಲಿತರ ಹರಿಕಾರರಾಗಿ ಅಂಬೇಡ್ಕರ್ ಹೊರಹೊಮ್ಮಿದ್ದೂ ಸಹ ಹೀಗೆಯೇ!
ಕುಪ್ರಸಿದ್ಧ ವ್ಯಕ್ತಿಗಳು ತಯಾರಾಗುವುದಕ್ಕೂ ಕಾರಣಗಳಿರುತ್ತವೆ. ಭ್ರಷ್ಠ ಆಡಳಿತ ವ್ಯವಸ್ಥೆ, ಭ್ರಷ್ಠ ಇಲಾಖೆಗಳು, ಭ್ರಷ್ಠ ನಾಯಕರುಗಳು ಖಳನಾಯಕರುಗಳ ನಿರ್ಮಾಣಕ್ಕೆ ಸಹಕಾರಿಗಳು. ಕೆಲವು ಸಂದರ್ಭಗಳಲ್ಲಿ ಪೋಲಿಸ್ ಠಾಣೆಗಳು ಮತ್ತು ಬಂದೀಖಾನೆಗಳೂ ಪಾತಕಿಗಳ ಉಗಮಕ್ಕೆ ಕಾರಣವಾಗುತ್ತವೆ. ನನ್ನ ಮನಸ್ಸಿನಲ್ಲಿ ಹುದುಗಿದ್ದ ಸಂಗತಿಯೊಂದನ್ನು ಹೊರಗೆಡವಿಬಿಡುತ್ತೇನೆ. ೧೯೭೫-೭೭ರ ತುರ್ತು ಪರಿಸ್ಥಿತಿ ಕಾಲದಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಿದ್ದೆನೆಂಬ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರದಿಂದ ನಾನು ಅನುಭವಿಸಿದ ಅಕಾರಣ ತೊಂದರೆಗಳು, ಹಿಂಸೆಗಳು, ಜೈಲುವಾಸ, ಸುಖಾಸುಮ್ಮನೆ ಹಾಕಿದ್ದ ಸುಳ್ಳು ಕ್ರಿಮಿನಲ್ ಮೊಕದ್ದಮೆಗಳು, ನನ್ನ ಮನೆಯವರು ಹಾಕಿದ್ದ ಕಣ್ಣೀರುಗಳು, ಇತ್ಯಾದಿಗಳು ನನ್ನನ್ನು ಒಬ್ಬ ಹಿಂಸಾವಾದಿಯನ್ನಾಗಿಸಲು, ಉಗ್ರಗಾಮಿಯಾಗಿಸಲು ಸಾಕಿತ್ತು. ನಿಮಗೆ ಆಶ್ಚರ್ಯವಾಗಬಹುದು, ನಾನು ಒಬ್ಬ ಜಿಲ್ಲಾಧಿಕಾರಿ ಮತ್ತು ಒಬ್ಬ ಪೋಲಿಸ್ ಅಧಿಕಾರಿಯೂ ಸೇರಿದಂತೆ ನನಗೆ ಬಹಳ ತೊಂದರೆ ನೀಡಿದ ಎಂಟು ಜನರನ್ನು ಕೊಲೆ ಮಾಡಲು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದೆ. ಅಷ್ಟು ರೋಸಿಹೋಗಿದ್ದೆ. ನನ್ನ ನೌಕರಿ ಹೋಗಿತ್ತು. ಮತ್ತೆ ಸಿಗುತ್ತದೆಯೆಂಬ ಆಸೆ ಇರಲಿಲ್ಲ. ಜೈಲಿನ ಗೋಡೆಗೊರಗಿ ಕುಳಿತು ಯಾರನ್ನು ಹೇಗೆ ಮುಗಿಸಬೇಕೆಂಬ ಯೋಜನೆ ಮನದಲ್ಲೇ ರೂಪುಗೊಳ್ಳುತ್ತಿತ್ತು. ಯಾವ ಆರೆಸ್ಸೆಸ್ಸನ್ನು ಹಿಂಸೆಗೆ ಪ್ರಚೋದಿಸುವವರೆಂದು ಕೆಲವು ಪೀತ ಮಾಧ್ಯಮಗಳು, ಸ್ವಘೋಷಿತ ಪ್ರಗತಿಪರರೆಂದುಕೊಳ್ಳುವವರು, ಪೂರ್ವಾಗ್ರಹ ಪೀಡಿತರು ದೂಷಿಸುತ್ತಾರೋ, ಆ ಆರೆಸ್ಸೆಸ್ಸಿನ ಹಿರಿಯರ ನಡವಳಿಕೆಗಳು ಮತ್ತು ಮಾರ್ಗದರ್ಶನಗಳು ನನ್ನನ್ನು ಹಿಂಸಾಮಾರ್ಗದಿಂದ ವಿಮುಖ ಮಾಡಿದವೆಂಬುದು ಸತ್ಯಸಂಗತಿ. ಒಂದೊಮ್ಮೆ ನಾನು ಎಡವಿದ್ದರೆ ಹಿಂದೆ ಬರಲಾಗದಂತೆ ಅದೇ ದಾರಿಯಲ್ಲಿ ಮುಂದುವರೆಯಬೇಕಾದ ಅನಿವಾರ್ಯತೆ ನನಗೆ ಬಂದೊದಗಿರುತ್ತಿತ್ತು. (ಪೂರ್ಣ ವಿವರಗಳನ್ನು 'ಆದರ್ಶದ ಬೆನ್ನು ಹತ್ತಿ. .' ಪುಸ್ತಕದಲ್ಲಿ ದಾಖಲಿಸಿರುವೆ.) ನಕ್ಸಲೀಯರು, ಉಗ್ರಗಾಮಿಗಳು ತಯಾರಾಗುವುದು ಹೀಗೆಯೇ!
ಭಾರತದ ಶಿರೋಭಾಗ ಕಾಶ್ಮೀರ ಕಣಿವೆಯ ದುರಂತ ಸ್ಥಿತಿಗೆ ಕಾರಣ, ಸಮಸ್ಯೆಯನ್ನು ಸರಿಯಾಗಿ ಗ್ರಹಿಸದೆ ಅಪಕ್ವವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದೇ ಎಂಬುದು ನಿರ್ವಿವಾದವಾಗಿದೆ. ಪರಿಸ್ಥಿತಿಗೆ ಬಲಿಯಾಗಿ ಮುಸ್ಲಿಮನಾಗಿದ್ದ ಕಾಳಿಚರಣ ಮರಳಿ ಮಾತೃಧರ್ಮಕ್ಕೆ ಮರಳಲು ಬಯಸಿದಾಗ ಅಂಧ ಸಂಪ್ರದಾಯವಾದಿಗಳು ಅದನ್ನು ವಿರೋಧಿಸಿದ್ದರು. ಕೆರಳಿದ ಕಾಳಿಚರಣ ಕಾಲಾಪಹಾಡ್ ಆಗಿ ಖಡ್ಗ ಹಿರಿದು ಅಸಂಖ್ಯಾತ ಹಿಂದೂಗಳನ್ನು ಮುಸ್ಲಿಮರನ್ನಾಗಿಸಿದ. ಇಂದು ಕಣಿವೆ ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿ ಕಾಶ್ಮೀರಿ ಪಂಡಿತರು ನಿರ್ವಸಿತರಾಗಬೇಕಾಗಿ ಬಂದ ಸ್ಥಿತಿಗೆ ಇವನ ಕೊಡುಗೆ ಮಹತ್ವದ್ದಾಗಿದೆ. ಒಂದು ವೇಳೆ ಕಾಳಿಚರಣ ಮಾತೃಧರ್ಮಕ್ಕೆ ಹಿಂತಿರುಗಲು ಅವಕಾಶವಾಗಿದ್ದಿದ್ದರೆ? ಇದನ್ನೇ ತಿರುವು ಅನ್ನುವುದು. ಇಂತಹ ತಿರುವುಗಳೇ ಭಾರತವನ್ನು ಹಿಂದೆ ಮುಸಲ್ಮಾನರ ಮತ್ತು ನಂತರ ಬ್ರಿಟಿಷರ ದಾಸ್ಯಕ್ಕೆ ದೂಡಿತ್ತು ಎಂಬುದು ಇತಿಹಾಸದ ಅಧ್ಯಯನದಿಂದ ತಿಳಿದುಬರುತ್ತದೆ. ಪ್ಲಾಸಿ ಕದನದಲ್ಲಿ ರಾಬರ್ಟ್ ಕ್ಲೈವನಿಗೆ ಸಹಾಯ ಮಾಡಿದ ಮೀರ್ ಜಾಫರನಿಂದಾಗಿ ಭಾರತ ಮುಂದಿನ ಎರಡು ಶತಮಾನಗಳ ಕಾಲ ದಾಸ್ಯಕ್ಕೊಳಗಾಗಬೇಕಾಯಿತು. ಬ್ರಿಟಿಷರು ಮತ್ತು ಸಿಖ್ಖರ ನಡುವಣ ಯುದ್ಧದಲ್ಲಿ ಬ್ರಿಟಿಷರಿಗೆ ನೆರವಾದ ಲಾಭಸಿಂಗ್, ಪೃಥ್ವಿರಾಜನನ್ನು ದ್ವೇಷಿಸುತ್ತಿದ್ದ ರಾಜ ಜಯಸಿಂಗನ ದ್ರೋಹದಿಂದಾಗಿ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟ ಭಾರತ, ಟಿಪ್ಪುವಿಗೆ ದ್ರೋಹ ಬಗೆದು ಬ್ರಿಟಿಷರಿಗೆ ಸಹಾಯ ಮಾಡಿದ ಮೀರ್ ಸಾದಿಕ್, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಜೊತೆಗಾರ ಕ್ರಾಂತಿಕಾರರನ್ನೇ ಹಿಡಿದುಕೊಟ್ಟ ಸಹಚರರು, ಭಾರತದ ವಿಮುಕ್ತಿಗಾಗಿ ಸೈನ್ಯವನ್ನೇ ಕಟ್ಟಿ ಹೋರಾಡುತ್ತಿದ್ದ ನೇತಾಜಿ ಸುಭಾಷ ಚಂದ್ರಬೋಸರ ವಿರುದ್ಧ ಮಸಲತ್ತು ಮಾಡಿದ ಕಾಂಗ್ರೆಸ್ ನಾಯಕರ ಕುತಂತ್ರಗಳು ದೇಶದ ಕಾಲೆಳೆದವು. ಇಂತಹ ಅಸಂಖ್ಯ ಉದಾಹರಣೆಗಳು ನಮ್ಮ ಮನ ನೋಯಿಸದೆ ಇರವು.
ಭಯೋತ್ಪಾದಕರ ಉಪಟಳ ಇಂದು ಮೇರೆ ಮೀರಿದೆ. ನಮ್ಮ ದೇಶದಲ್ಲೇ ಇದ್ದು, ನಮ್ಮ ದೇಶದ ಉಪ್ಪು ತಿಂದು ಬೆಳೆಯುತ್ತಿರುವ ಅನೇಕರು ಬಹಿರಂಗವಾಗಿ ದೇಶವನ್ನು ಹೀನಾಯವಾಗಿ ಟೀಕಿಸುವುದು, ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿರುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ಸಾಮಾಜಿಕ ತಾಣಗಳಾದ ಫೇಸ್ ಬುಕ್, ಟ್ವಿಟರುಗಳಲ್ಲೂ ಬಹಿರಂಗವಾಗಿ ಇಂತಹ ಹೇಳಿಕೆಗಳನ್ನು ಕೊಡುತ್ತಿರುವುದು ಅವರಿಗೆ ನಮ್ಮ ನೇತಾರರುಗಳೆನಿಸಿಕೊಂಡವರಿಂದ, ಎಡಬಿಡಂಗಿಗಳಿಂದ ಸಿಗುತ್ತಿರುವ ಬೆಂಬಲ, ಸಹಕಾರಗಳ ವಿಕಟದರ್ಶನ ಮಾಡಿಸುತ್ತಿವೆ. ಇಂತಹ ಸ್ಥಿತಿಯಲ್ಲಿ ಉತ್ತಮ ಶಿಕ್ಷಣ ಪದ್ಧತಿ ಮತ್ತು ಅಭಿವೃದ್ಧಿಯ ಕಡೆಗೆ ಗಮನಗಳು ಮಾತ್ರ ದೇಶವನ್ನು ಉತ್ತಮ ತಿರುವಿಗೆ ತಂದು ನಿಲ್ಲಿಸಬಲ್ಲವು. ಕೇಸರೀಕರಣವೆಂಬ ಗುಮ್ಮನನ್ನು ಮುಂದೆ ತೋರಿಸಿ ಬದಲಾವಣೆಯನ್ನು ವಿರೋಧಿಸುವ ಅರಾಜಕತಾವಾದಿಗಳ ಹಿಡಿತದಲ್ಲಿ ಮಾಧ್ಯಮಗಳು ಇವೆಯೇನೋ ಎಂದು ಭಾಸವಾಗುತ್ತದೆ. ಕೇಸರೀಕರಣ, ಹಸಿರೀಕರಣ, ಎಡವಾದ, ಬಲವಾದ, ಇತ್ಯಾದಿಗಳನ್ನು ಬದಿಗಿಟ್ಟು ಪೂರ್ವಾಗ್ರಹಪೀಡಿತರಾಗದೆ ಇಂದು ದೇಶಕ್ಕೆ ಅಗತ್ಯವಿರುವುದಾದರೂ ಏನು ಎಂಬ ಬಗ್ಗೆ ಚಿಂತಿಸಿ ಮುನ್ನಡೆಯುವುದು ಸೂಕ್ತವಾಗಿದೆ.
ಇಂದು ಎಲ್ಲಾ ಕ್ಷೇತ್ರಗಳೂ ಕಲುಷಿತಗೊಂಡಿವೆ. ಎಲ್ಲಾ ವಿಷಯಗಳನ್ನೂ ಅಧಿಕಾರ, ಹಣ, ಹೆಸರು, ಇತ್ಯಾದಿಗಳ ದೃಷ್ಟಿಯಿಂದ ನೋಡುವ ಪರಿಪಾಠ ಬೆಳೆಸಿಬಿಟ್ಟಿದ್ದಾರೆ. ಒಟ್ಟು ಸಾಮಾಜಿಕ ಹಿತವನ್ನು ಗೌಣವಾಗಿಸಿ ಜಾತಿ, ಮತ, ಪಂಥ, ಲಿಂಗ, ಎಡವಿಚಾರ, ಬಲವಿಚಾರ ಎಂಬ ಸುಳಿಗಳಲ್ಲಿ ಜನರನ್ನು ಸಿಲುಕಿಸಿ ದೇಶವನ್ನು ಪಾತಾಳಕ್ಕೆ ಜಾರಿಸುವವರ ಕೈ ಮೇಲಾಗಿದೆ. ಒಂದು ಸಣ್ಣ ಆದರೆ ಗಂಭೀರವಾದ, ಪತ್ರಿಕೆಯಲ್ಲಿ ಸುದ್ದಿಯಾಗಿರುವ ಉದಾಹರಣೆ ಕೊಡಬಯಸುವೆ. ಶಿಕ್ಷಕರ ದಿನಾಚರಣೆಯಂದು ಕೊಡುವ ಪ್ರಶಸ್ತಿಗೆ ಅರ್ಜಿ ಹಾಕಿ ಪ್ರಶಸ್ತಿ ಪಡೆಯಲು ಇಚ್ಛಿಸದವರು ಅರ್ಜಿ ಹಾಕುವುದಿಲ್ಲ. ಲಾಬಿ ಮಾಡಲು ಶಕ್ಯವಿಲ್ಲದವರೂ, ಜಾತಿಬೆಂಬಲವಿಲ್ಲದವರು, ಅಧಿಕಾರಿಗಳು ಹಾಗೂ ರಾಜಕಾರಣಿಗಳ ಬೆಂಬಲವಿಲ್ಲದವರೂ ಅರ್ಜಿ ಹಾಕುವುದಿಲ್ಲ. ಇನ್ನು ಯಾರು ಅರ್ಜಿ ಸಲ್ಲಿಸುತ್ತಾರೆ ಮತ್ತು ಪ್ರಶಸ್ತಿಗಳು ಯಾರ ಪಾಲಿಗೆ ಸೇರಬಹುದು, ಯೋಚಿಸಿ. ಇದು ದುರಂತ!
ಉತ್ತಮ ಆಧರ್ಶಗಳನ್ನು ಇಟ್ಟುಕೊಳ್ಳುವ, ನೈತಿಕತೆಗೆ ಬೆಲೆ ಕೊಡುವ ಸಮಾಜ ಮಾತ್ರ ಏಳಿಗೆ ಸಾಧಿಸಬಲ್ಲದು. ಪರಸ್ಪರರ ಏಳಿಗೆಯನ್ನು ಬಯಸುವ ಜನರೇ ನಿಜವಾದ ನಾಗರಿಕರೆನಿಸಬಲ್ಲರು. ಜಾತಿ, ಮತ, ಧರ್ಮ, ಪಂಥ, ಇತ್ಯಾದಿಗಳು ವೈಯಕ್ತಿಕ ಆಚರಣೆಗಳಿಗಷ್ಟೇ ಸೀಮಿತಗೊಳ್ಳಬೇಕು. ಒಟ್ಟು ದೇಶದ, ಸಮಾಜದ ಹಿತ ಪರಿಗಣನೆಗೆ ಬಂದಾಗ ಇವಾವುದೂ ಅಡ್ಡಿಯಾಗಬಾರದು. ಹಿಂದುಳಿದವರು, ಅಶಕ್ತರು, ದುರ್ಬಲರು, ಹೀನ-ದೀನ ಸ್ಥಿತಿಯಲ್ಲಿರುವವರು ಯಾರೇ ಆಗಲಿ ಅವರನ್ನು ಜಾತಿ/ಧರ್ಮಗಳ ಕನ್ನಡಕಗಳಿಂದ ನೋಡದೇ ಮುಂದೆ ತರುವ ಪ್ರಾಮಾಣಿಕ ಪ್ರಯತ್ನ ನಡೆದರೆ ಮಾತ್ರ ದೇಶದ ಉದ್ಧಾರ ಸಾಧ್ಯ, ಇಲ್ಲದಿದ್ದರೆ ಖಂಡಿತಾ ಸಾಧ್ಯವಿಲ್ಲ. ಅಂತಹ ತಿರುವನ್ನು ತರುವ ಶಿಕ್ಷಣ ಪದ್ಧತಿ ರೂಪುಗೊಳ್ಳಲು ಪ್ರಜ್ಞಾವಂತರು ಶ್ರಮಿಸಲೇಬೇಕು. ವೇದದ ಈ ಕರೆ ಸಕಾಲಿಕವಾಗಿದ್ದು ಅನುಕರಣೀಯವಾಗಿದೆ:
ಸತ್ಯಂ ಬೃಹದೃತಮುಗ್ರಂ ದೀಕ್ಷಾ ತಪೋ ಯಜ್ಞಃ ಪೃಥಿವೀಂ ಧಾರಯಂತಿ |
ಸಾ ನೋ ಭೂತಸ್ಯ ಭವ್ಯಸ್ಯ ಪತ್ನ್ಯುರುಂ ಲೋಕಂ ಪೃಥಿವೀ ನಃ ಕೃಣೋತು || (ಅಥರ್ವ.೧೨.೧.೧.)
ಸತ್ಯ, ಮನೋವೈಶಾಲ್ಯ, ನ್ಯಾಯ, ಪರಾಕ್ರಮ, ವ್ರತನಿಷ್ಠೆ, ಕಷ್ಟಸಹಿಷ್ಣುತೆ, ವೇದಜ್ಞಾನ ಮತ್ತು ತ್ಯಾಗಭಾವಸಂಪನ್ನ ಸತ್ಕರ್ಮ ಇವು ಭೂಮಿಯನ್ನು ಉದ್ಧರಿಸುತ್ತವೆ. ನಮ್ಮ ಅತೀತದ ಮತ್ತು ಭವಿಷ್ಯದ ಪಾಲಿಕೆಯಾದ ಆ ಭೂಮಿಯು ನಮಗಾಗಿ ವಿಶಾಲವಾದ ರಾಷ್ಟ್ರವನ್ನು ಉಂಟುಮಾಡಲಿ ಎಂಬುದು ಇದರ ದಿವ್ಯ ಸಂದೇಶವಾಗಿದೆ. ಈ ಎಂಟು ಗುಣಗಳನ್ನು ಮೈಗೂಡಿಸುವ ನೈಜ ಶಿಕ್ಷಣವನ್ನು ನಮ್ಮ ಮಕ್ಕಳಾದರೂ ಪಡೆಯುವ ಸಲುವಾಗಿ ಶ್ರಮಿಸುವ ಹೊಣೆ ನಮ್ಮ ಮೇಲಿದೆಯೆಂದು ಅರಿತರೆ ಅದೇ ಮಹತ್ವದ ತಿರುವಾಗುತ್ತದೆ.
-ಕ.ವೆಂ.ನಾಗರಾಜ್.
**************
ದಿನಾಂಕ 8.9.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: