ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜುಲೈ 25, 2016

ಸಂಪ್ರದಾಯಗಳು ಮತ್ತು ನಾವು


ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳು ಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ ||
     ಒಂದು ಕಾಲವಿತ್ತು, ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು, ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು, ಕೈಗೆ ಬಳೆ ಹಾಕಿಕೊಳ್ಳದೆ, ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆಸಬೇಕಾಗಿದ್ದ ಕಾಲವಿತ್ತು. ಚಿಕ್ಕ ವಯಸ್ಸಿನಲ್ಲೇ ವಿಧವೆಯಾದವರ ಪಾಡು ಅನುಭವಿಸಿದವರಿಗೇ ಗೊತ್ತು.  ಆಕೆಗೆ ಶುಭ ಕಾರ್ಯಗಳಲ್ಲಿ ಆಹ್ವಾನವಿರುತ್ತಿರಲಿಲ್ಲ. ಆಕೆ ಎದುರಿಗೆ ಬಂದರೆ ಅಪಶಕುನವೆಂದು ಭಾವಿಸುವವರಿದ್ದರು. ಹೊಸ ಪೀಳಿಗೆಯವರಿಗೆ ಇಂತಹ ಅನಿಷ್ಟ ಸಂಪ್ರದಾಯದ ಪರಿಚಯ ಇರಲಾರದು. ಪ್ರಾರಂಭದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುವುದು ನಿಂತರೂ ಕೈಗೆ ಬಳೆ ಹಾಕಿಕೊಳ್ಳಲು, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ, ಸುಧಾರಣೆಯಾಗಿದೆ. ಕಳೆದ ಮೂರು-ನಾಲ್ಕು ದಶಕಗಳಿಂದೀಚೆಗೆ ಈ ಸಂಪ್ರದಾಯದ ಆಚರಣೆ ಕಂಡು ಬರುತ್ತಿಲ್ಲ. ಒಂದು ಅನಿಷ್ಟ ಸಂಪ್ರದಾಯದ ಅಂತ್ಯವಾಗಿರುವುದು ಸಮಾಧಾನದ ಸಂಗತಿ.
     ಸಂಪ್ರದಾಯವೆಂದರೆ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುವ ಆಚರಣೆಗಳು/ ನಡವಳಿಕೆಗಳು. ಸರಿಯೋ, ತಪ್ಪೋ ವಿಚಾರ ಮಾಡದೆ ಅದನ್ನು ಮುಂದುವರೆಸಿಕೊಂಡು ಬರುವವರನ್ನು ಸಂಪ್ರದಾಯವಾದಿಗಳು ಎನ್ನುತ್ತಾರೆ. ಕೆಲವನ್ನು ಆಚರಿಸಿ ಕೆಲವನ್ನು ಕೈಬಿಡುವ ಅನುಕೂಲ/ಅವಕಾಶವಾದಿಗಳೂ ಇದ್ದಾರೆ. ಅರ್ಥವಿಲ್ಲದ ಸಂಪ್ರದಾಯಗಳನ್ನು ಧಿಕ್ಕರಿಸಿ ನಡೆಯುವವರೂ ಇದ್ದಾರೆ. ಸ್ವತಃ ಸಂಪ್ರದಾಯಗಳನ್ನು ಆಚರಿಸದಿದ್ದರೂ, ಅರ್ಥವಿಲ್ಲವೆಂದು ತಿಳಿದಿದ್ದರೂ, ಇತರರ ಸಲುವಾಗಿ ಅವನ್ನು ಬೆಂಬಲಿಸುವವರ ಸಂಖ್ಯೆ  ಸಹ ಗಣನೀಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ  ಎಲ್ಲರನ್ನೂ ಹೊಂದಿಸಿಕೊಂಡು, ಹೊಂದಿಕೊಂಡು ಸಮನ್ವಯ ಮಾಡಿ ಸದ್ವಿಚಾರ ತಿಳಿಸಲು ಹೆಣಗುವವರೂ ಇದ್ದಾರೆ. ಎಲ್ಲಾ ಸಂಪ್ರದಾಯಗಳೂ ಕೆಟ್ಟವಲ್ಲ. ಹಾಗೆಯೇ ಎಲ್ಲವೂ ಒಳ್ಳೆಯವು ಎಂದು ಹೇಳಲಾಗುವುದಿಲ್ಲ. ಯಾವ ಆಚರಣೆಗಳಿಂದ ಯಾರಿಗೂ ತೊಂದರೆಯಿಲ್ಲವೋ, ಯಾವುದರಿಂದ ಮನುಷ್ಯನ ಬೌದ್ಧಿಕ ಹಾಗೂ ಮಾನಸಿಕ ವಿಕಾಸ, ಅಭಿವೃದ್ಧಿಗೆ ಸಹಕಾರವಾಗುವುದೋ, ಸಂತಸ ಹರಡುವುದೋ, ತಾರತಮ್ಯ ಇಲ್ಲದಿರುವುದೋ ಅಂತಹವುಗಳನ್ನು  ಒಳ್ಳೆಯ ಸಂಪ್ರದಾಯಗಳೆನ್ನಬಹುದು. ಇದಕ್ಕೆ ತದ್ವಿರುದ್ಧವಾದ ಸಂಪ್ರದಾಯಗಳನ್ನು ಕೆಟ್ಟವು ಎಂದುಕೊಳ್ಳಬಹುದು. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ, ಈಗಂತೂ ಹೊಸ ಹೊಸ ಸಂಪ್ರದಾಯಗಳು, ಆಚರಣೆಗಳು ಚಾಲ್ತಿಗೆ ಬರುತ್ತಿವೆ. ಹಿಂದಿನ ಅನುಭವಗಳಿಂದ ಹೇಳುವುದಾದರೆ ಕ್ರಮೇಣ ಅವು ಗಟ್ಟಿಗೊಳ್ಳುತ್ತವೆ.
     ಬಾಲ ಗಂಗಾಧರನಾಥ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವ ಸಲುವಾಗಿ ಹುಟ್ಟುಹಾಕಿದ ಸಾರ್ವಜನಿಕ ಗಣೇಶ ಉತ್ಸವಗಳು ಇಂದು ಯಾವ ಮಟ್ಟಕ್ಕೆ ತಲುಪಿವೆ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ಮೊದಲು ಊರಿಗೆ ಒಂದರಂತೆ ಇದ್ದುದು, ಈಗ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಗಳನ್ನು ಇಟ್ಟು ಅಲ್ಲಿ ನಡೆಸುವ ಕಾರ್ಯಕ್ರಮಗಳು, ಪೈಪೋಟಿ, ವಂತಿಕೆ ವಸೂಲಿ, ವಿಸರ್ಜನೆ ಸಮಯದಲ್ಲಿ ಕುಡಿದು ಕುಣಿಯುವ ಯುವಕರು, ಮತೀಯ ಘರ್ಷಣೆಗಳು, ಇತ್ಯಾದಿಗಳನ್ನು ಗಮನಿಸಿದರೆ ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ ಎಂದು ಅನ್ನಿಸದೇ ಇರದು. ಒಳ್ಳೆಯ ರೀತಿಯಲ್ಲಿ ಆಚರಿಸುವವರು ಇದ್ದರೂ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟು. ಗಣೇಶೋತ್ಸವಗಳು ಮುಗಿಯುವವರೆಗೂ ಶಾಂತಿ, ಸುವ್ಯವಸ್ಥೆಗಳಿಗಾಗಿ ಸಂಬಂಧಿಸಿದವರು ಹಗಲೂ ರಾತ್ರಿ ಹೆಣಗುವ, ಇಂತಹ ಉತ್ಸವಗಳು (ಗಣೇಶೋತ್ಸವ ಮಾತ್ರ ಅಲ್ಲ, ಎಲ್ಲಾ ಮತೀಯ/ಧಾರ್ಮಿಕ ಉತ್ಸವಗಳು ಸೇರಿ) ಏಕಾದರೂ ಬರುತ್ತವೋ ಎಂದು ಅಂದುಕೊಳ್ಳುವ ಪರಿಸ್ಥಿತಿ ಇಂದು  ಇದೆ. ನಾನು ಗಣೇಶೋತ್ಸವವನ್ನಾಗಲೀ, ಇಂತಹ ಇತರ ಉತ್ಸವಗಳನ್ನಾಗಲೀ ವಿರೋಧಿಸುತ್ತಿಲ್ಲ, ಅದನ್ನು ಆಚರಿಸಲಾಗುತ್ತಿರುವ ರೀತಿಯ ಬಗ್ಗೆ ಮಾತ್ರ ಬೆರಳು ತೋರಿಸುತ್ತಿದ್ದು, ಆಚರಣೆಗಳು ಅರ್ಥಪೂರ್ಣವಾಗಿರಲೆಂಬ ಕಳಕಳಿ ಮಾತ್ರ ಇಲ್ಲಿದೆ.
     ಸಂಕಷ್ಟಹರ ಗಣಪತಿ ಪೂಜೆಯನ್ನು  ಇಂದು ಸಾಮೂಹಿಕ ಸನ್ನಿಯಂತೆ ಆಚರಿಸಲಾಗುತ್ತಿದೆ. ಆದರೆ ಎಷ್ಟು ಜನರು ಇದನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ? ಹೆಚ್ಚಿನವರು ಸ್ವಸಹಾಯ ಪದ್ಧತಿಯ ಹೋಟೆಲ್ಲಿನಲ್ಲಿ ಹಣ ಕೊಟ್ಟು ಕಾಫಿ ಕುಡಿದಂತೆ ದೇವಸ್ಥಾನಕ್ಕೆ ಹೋಗಿ ಹಣ ಕೊಟ್ಟು ಚೀಟಿ ಬರೆಸಿ ಹೋಗುತ್ತಾರೆ, ಪ್ರಸಾದ ಕೊಡುವ ಸಮಯಕ್ಕೆ ಬಂದು ಕೈಮುಗಿದು ಪ್ರಸಾದ ಪಡೆದು ಹೋಗುತ್ತಾರೆ. ಪೂಜೆಯ ಸಮಯದಲ್ಲಿ ದೇವಸ್ಥಾನದಲ್ಲಿದ್ದವರೂ ಪರಸ್ಪರ ಮಾತುಕತೆಗಳಲ್ಲಿ ತೊಡಗಿರುತ್ತಾರೆ. ಹಣ ಕೊಟ್ಟು ಪದಾರ್ಥಗಳನ್ನು ಕೊಂಡುಕೊಂಡಂತೆ ಪುಣ್ಯವನ್ನು ಖರೀದಿಸಬಹುದೇ? ಇಂತಹ ಆಚರಣೆಯಿಂದ ಯಾರಿಗೆ ಪ್ರಯೋಜನ? ಯಾರ ಕಷ್ಟಗಳು ಪರಿಹಾರವಾಗುತ್ತದೆ? ಶ್ರದ್ಧೆಯಿಂದ, ಅರ್ಥ ತಿಳಿದುಕೊಂಡು ಮಾಡುವ ಕ್ರಿಯೆಗಳಿಂದ ಮಾತ್ರ ಫಲ ಸಿಗಲು ಸಾಧ್ಯವಲ್ಲವೇ? ಇಲ್ಲದಿದ್ದರೆ ಅವು ತೋರಿಕೆಗೆ ಮಾಡುವ ಆಚರಣೆಗಳಾಗುತ್ತವೆ ಅಷ್ಟೆ. ಇಸ್ಲಾಮ್ ಮತ ಪ್ರಾರಂಭವಾದ ಸಂದರ್ಭದಲ್ಲಿ ಧ್ವನಿವರ್ಧಕವಿರಲಿಲ್ಲ. ಆದರೆ ಇಂದು ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಧ್ವನಿವರ್ಧಿಸಿ ನಮಾಜು, ಉಪದೇಶಗಳನ್ನು ಮಾಡುತ್ತಿರುವುದು ಸರ್ವೇ ಸಾಮಾನ್ಯವಾದ ಸಂಪ್ರದಾಯವಾಗಿಬಿಟ್ಟಿದೆ. ಅದನ್ನು ಕೇಳಲು ಇಚ್ಛಿಸದವರಿಗೂ ಬಲವಂತವಾಗಿ ಹಗಲು, ರಾತ್ರಿ ಎನ್ನದೆ ಕೇಳುವಂತೆ ಮಾಡುತ್ತಿರುವುದು ಒಂದು ರೀತಿಯ ಶಬ್ದಮಾಲಿನ್ಯವಲ್ಲವೇ?
     ಜಾತ್ರೆ, ಪೂಜೆ, ಇತ್ಯಾದಿಗಳ ಹೆಸರಿನಲ್ಲಿ ದೇವರನ್ನು ಸಂತುಷ್ಟಗೊಳಿಸುವ(?) ಕಾರಣದಿಂದ ಪ್ರಾಣಿಬಲಿ ನೀಡುವ ಸಂಪ್ರದಾಯ ಒಳ್ಳೆಯದೆಂದು ಹೇಳಬಹುದೆ? ಇದನ್ನು ಸಮರ್ಥಿಸುವ ಜನರಿಗೆ ಕಡಿಮೆಯೇನಿಲ್ಲ. ಶಿಕಾರಿಪುರದಲ್ಲಿ ತಾಲ್ಲೂಕು ದಂಡಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಾತ್ರೆಯ ಸಮಯದಲ್ಲಿ ಕೋಣಬಲಿ ತಡೆಯಲು ಒಂದು ಗ್ರಾಮದಲ್ಲಿ  ಪೋಲಿಸರ ನೆರವಿನೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೆ. ಗ್ರಾಮಸ್ಥರಿಗೆ ಕಾನೂನಿನಲ್ಲಿ ಇರುವ ನಿಷೇಧ, ಉಲ್ಲಂಘಿಸಿದರೆ ಆಗುವ ಪರಿಣಾಮಗಳು, ಇತ್ಯಾದಿ ತಿಳುವಳಿಕೆ ಹೇಳಲಾಗಿತ್ತು. ಮುಂಚಿತವಾಗಿ ನಡೆಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಪಶುವೈದ್ಯರ ಸಹಾಯದಿಂದ ಸಿರಿಂಜಿನಲ್ಲಿ ಕೋಣನ ರಕ್ತವನ್ನು ತೆಗೆದು ಸಾಂಕೇತಿಕವಾಗಿ ದೇವಿಗೆ ಅರ್ಪಿಸಲು ಗ್ರಾಮದ ಮುಖ್ಯಸ್ಥರು ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಪೋಲಿಸರ ಹಾಗೂ ನಮ್ಮ ಸಿಬ್ಬಂದಿಯ ಕಣ್ಗಾವಲು ಇದ್ದರೂ, ನಂತರ  ಎಲ್ಲರ ಕಣ್ಣುತಪ್ಪಿಸಿ ಕೋಣಬಲಿ ನೀಡಿದ ಪ್ರಸಂಗ ಬೇಸರ, ಮುಜುಗರ ಉಂಟುಮಾಡಿತ್ತು. ವಿಷಯ ಎಲ್ಲಾ ಮಾಧ್ಯಮಗಳಲ್ಲೂ ವಿಷಯ ಅತಿರಂಜಿತವಾಗಿ ಪ್ರಚಾರಗೊಂಡಿತು. ಕೆಲವರ ಮೇಲೆ ಪ್ರಕರಣ ದಾಖಲಿಸಿದರೂ ರಾಜಕೀಯ ನಾಯಕರ ಮಧ್ಯಪ್ರವೇಶ ಪ್ರಕರಣವನ್ನು ದುರ್ಬಲಗೊಳಿಸಿದ್ದು ಸುಳ್ಳಲ್ಲ. ಈ ಪ್ರಕರಣವನ್ನು ರಾಜಕೀಯ ಮಾಡುವ ಸಲುವಾಗಿ ಪರವಾಗಿ ಮತ್ತು ವಿರೋಧವಾಗಿ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಬಳಸಿಕೊಂಡವು. ಅನಿಷ್ಟ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದವರೂ ಸಾತ್ವಿಕ ಕಾರಣಕ್ಕೆ ವಿರೋಧಿಸದೆ ವಿರೋಧಿಗಳನ್ನು ವಿರೋಧಿಸಲು ಮಾತ್ರ ಬಳಸಿದ್ದು ನೋವಿನ ವಿಷಯ. ಮಾಧ್ಯಮಗಳೂ ಕೆಸರೆರಚಾಟಕ್ಕೆ ಸಾಥ್ ನೀಡಿದವೇ ಹೊರತು, ಅವುಗಳಿಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಶಕ್ತಿಯಿದ್ದರೂ ಮಾಡಲಿಲ್ಲ.  ಇಂತಹ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಪ್ರಚಲಿತ ನಾಡಿನ ಕಾನೂನುಗಳನ್ನೂ ಧಿಕ್ಕರಿಸಿ ನಡೆಸುವ ಅಂಧ ಸಂಪ್ರದಾಯಗಳ ಕುರಿತು ತಿಳಿಸುವ ಸಲುವಾಗಿ ಮಾತ್ರ ಇದನ್ನು ಸಾಂಕೇತಿಕವಾಗಿ ಉದಾಹರಿಸಿರುವೆ.
     ಸಂಪ್ರದಾಯಗಳನ್ನು ಹೇಗೆ ಆಚರಿಸಬೇಕು ಅನ್ನುವುದಕ್ಕಿಂತ ಕೆಟ್ಟ ಸಂಪ್ರದಾಯಗಳನ್ನು ಗುರುತಿಸಿ ಅವುಗಳಿಂದ ದೂರ ಉಳಿಯಲು ಮತ್ತು ಸಾಧ್ಯವಾದರೆ ತಡೆಯಲು ಪ್ರಯತ್ನಿಸುವುದು ಇಂದಿನ ಅಗತ್ಯ. ಮಠ-ಮಂದಿರಗಳು, ಮಸೀದಿಗಳು, ಚರ್ಚುಗಳು, ಇತ್ಯಾದಿಗಳು ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಮತ್ತು ಅರ್ಥರಹಿತ ಸಂಪ್ರದಾಯಗಳನ್ನು ದೂರ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ. ಈ ಕೇಂದ್ರಗಳು ವಾಸ್ತವವಾಗಿ ಸತ್ಕರ್ಮಗಳನ್ನು ಪೋಷಿಸುವ, ಜ್ಞಾನ ಪಸರಿಸುವ ಕೆಲಸ ಮಾಡಬೇಕು. ವಿಷಾದದ ಸಂಗತಿಯೆಂದರೆ ಹೆಚ್ಚಿನವು ಋಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ ಸಂಸ್ಥೆಗಳನ್ನು, ಕಲ್ಯಾಣ ಮಂದಿರಗಳನ್ನು ಕಟ್ಟಿ ಹಣ ಮಾಡುವ ಕೇಂದ್ರಗಳಾಗಿವೆ. ತಿರುಳಿಗಿಂತ ಸಿಪ್ಪೆಗೆ ಹೆಚ್ಚು ಮಾನ್ಯತೆ ಕೊಡಲಾಗುತ್ತಿದೆ. ನಿಜ, ತಿರುಳಿನ ರಕ್ಷಣೆಗೆ ಸಿಪ್ಪೆಯಿರಬೇಕು, ಆದರೆ ಸಿಪ್ಪೆಯೇ ತಿರುಳಾಗಬಾರದು. ಆ ಕಾರಣದಿಂದಾಗಿಯೇ ಉತ್ತರಾಧಿಕಾರಕ್ಕಾಗಿ ಕಚ್ಚಾಡುವ, ಒಡೆತನ ಸಾಧಿಸಬಯಸುವವರ ಕೂಟ ಅಲ್ಲಿ ಮನೆ ಮಾಡಿವೆ. ಮೂಲ ಉದ್ದೇಶ ಮರೆತು ಭೌತಿಕ ಆಸ್ತಿ, ಸಂಪತ್ತು ಕ್ರೋಢೀಕರಿಸಲು ನೀಡುವ ಮಹತ್ವವೇ ಇದಕ್ಕೆ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ.
     ರೂಢಿಗತ ಸಂಪ್ರದಾಯಗಳಿಗೆ ಹೇಗೆ ಮನಸ್ಸು ಒಗ್ಗಿಕೊಳ್ಳುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಬಲಶಾಲಿ ಆನೆಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಮರವೊಂದಕ್ಕೆ ಅಥವ ಒಂದು ಗೂಟಕ್ಕೆ ಕಟ್ಟಿ ಹಾಕಿದರೆ ಅದು ಬಿಡಿಸಿಕೊಳ್ಳಲು ಪ್ರಯತ್ನವೇ ಮಾಡುವುದಿಲ್ಲ. ಆನೆ ಎಷ್ಟು ಬಲಶಾಲಿಯೆಂದರೆ ಅದಕ್ಕೆ ಆ ಸರಪಳಿಯಾಗಲೀ, ಗೂಟವಾಗಲೀ ಅಥವ ಮರವಾಗಲೀ ಲೆಕ್ಕವೇ ಅಲ್ಲ. ಅದು ಮನಸ್ಸು ಮಾಡಿದರೆ ಸರಪಳಿ ತುಂಡರಿಸಬಲ್ಲದು ಮತ್ತು ಮರವನ್ನು ಕಿತ್ತು ಬಿಸಾಡಬಲ್ಲದು. ಆದರೂ ಆ ಕೆಲಸವನ್ನು ಆನೆ ಮಾಡುವುದಿಲ್ಲ. ಏಕೆಂದರೆ ಚಿಕ್ಕದಾಗಿದ್ದಾಗ ಅದನ್ನು ಅದೇ ರೀತಿ ಕಟ್ಟಿ ಹಾಕಲಾಗುತ್ತಿತ್ತು. ಚಿಕ್ಕದಾಗಿದ್ದರಿಂದ ಬಂಧನದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅದಕ್ಕೆ ಆಗ ಆಗುತ್ತಿರಲಿಲ್ಲ. ಕ್ರಮೇಣ ಅದೇ ಅಭ್ಯಾಸವಾಗಿ ಮರಕ್ಕೆ ಕಟ್ಟಿ ಹಾಕಿದರೆ ಬಿಡಿಸಿಕೊಳ್ಳಲಾಗುವುದಿಲ್ಲವೆಂಬ ಭಾವ ಗಟ್ಟಿಗೊಂಡು ಅದು ದೊಡ್ಡದಾದ ಮೇಲೂ ಹಾಗೆ ಕಟ್ಟಿಹಾಕಿದರೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರಲೇ ಇರಲಿಲ್ಲ. ನಮ್ಮ ಸ್ಥಿತಿ ಸಹ ಅದೇ ರೀತಿ ಇದೆ. ನಮಗೆ ವಿಚಾರ ಮಾಡುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಕೆಲವು ಸಂಪ್ರದಾಯಗಳು ಅರ್ಥಹೀನವೆಂದು ನಮಗೆ ತಿಳಿಯುತ್ತದೆ, ಮನಸ್ಸು ಮಾಡಿದರೆ ಅದನ್ನು ಧಿಕ್ಕರಿಸುವ, ಮುಂದುವರೆಸದಿರುವ ಶಕ್ತಿ ನಮಗಿದೆ, ಆದರೂ ನಾವು ಹಾಗೆ ಮಾಡುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಳ್ಳಲಾಗುವುದೇ ಎಂಬ ಪ್ರಚಲಿತ ಗಾದೆ ಮಾತು ತಿಳಿಸುವುದೂ ವಿಚಾರ ಮಾಡಿ ಮುಂದುವರೆಯಿರಿ ಎಂದೇ. ಮರದ ನೆರಳಿನಲ್ಲಿ ಬಾಳೋಣ, ಆದರೆ ಏಕೆ ನೇಣು ಹಾಕಿಕೊಳ್ಳಬೇಕು? ಸಾರಾಸಗಟಾಗಿ ಎಲ್ಲವನ್ನೂ ತಳ್ಳಿಹಾಕಬೇಕಾಗಿಲ್ಲ. ಕುಟುಂಬಕ್ಕೆ, ಸುತ್ತಮುತ್ತಲಿನವರಿಗೆ ಹಿತವೆನಿಸುವ ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬಹುದು, ಒಳ್ಳೆಯದಾದ ಹೊಸ ಸಂಪ್ರದಾಯಗಳನ್ನು ಹುಟ್ಟು ಹಾಕಬಹುದು, ಆದರೆ ಅನಿಷ್ಠ ಸಂಪ್ರದಾಯಗಳನ್ನು ನಿಲ್ಲಿಸುವ ಮತ್ತು ಸದ್ಯಕ್ಕೆ ಒಳ್ಳೆಯದೆನಿಸಿದರೂ ಕಾಲಾನುಕಾಲಕ್ಕೆ ಅದರ ಆಚರಣೆಯಿಂದ ಆಗುವ ಪರಿಣಾಮಗಳನ್ನೂ ಗಮನಿಸಿ ಯೋಗ್ಯತಾನುಸಾರ ನಿರ್ಣಯಿಸಿ ಅಂತಹವುಗಳನ್ನು ಕೈಬಿಡುವ ಬಗ್ಗೆ ನಿರ್ಧರಿಸುವುದು ಇಂದಿನ ಅಗತ್ಯವಾಗಿದೆ. ಸಂಪ್ರದಾಯಗಳು ನಮ್ಮನ್ನು ಕಟ್ಟಿಹಾಕುವ ಸರಪಳಿಗಳಾಗದೆ, ನಮ್ಮನ್ನು ಒಳ್ಳೆಯ ದಾರಿಯಲ್ಲಿ ಕೈಹಿಡಿದು ಮುನ್ನಡೆಸುವ ದಾರಿದೀಪಗಳಾಗಲಿ.
-ಕ.ವೆಂ. ನಾಗರಾಜ್.

ಸೋಮವಾರ, ಜುಲೈ 18, 2016

ಸಮಸ್ಯೆ ಒಂದು - ಪರಿಹಾರದ ರೀತಿ ಹಲವು!


     ರಾಜಣ್ಣ ಒಬ್ಬ ಪೋಸ್ಟ್ ಗ್ರಾಜುಯೇಟ್ ನಿರುದ್ಯೋಗಿ. ಏನಾದರೂ ಒಳ್ಳೆಯದು ಮಾಡಬೇಕೆಂಬ ಕಳಕಳಿಯಿದ್ದರೂ ಮುನ್ನುಗ್ಗುವ ಸ್ವಭಾವದವನಾಗಿರಲಿಲ್ಲ. ಓದುತ್ತಿದ್ದಾಗ ತಾನಾಯಿತು, ತನ್ನ ಪುಸ್ತಕವಾಯಿತು ಎಂಬಂತಿದ್ದವನು. ಅವನಿದ್ದ ಮನೆಯ ಮುಂದಿನ ರಸ್ತೆಯಲ್ಲಿ ದೊಡ್ಡ ಗುಂಡಿಯಿದ್ದು ವಾಹನಗಳು ಓಡಾಡುವುದು ದುಸ್ತರವಾಗಿತ್ತು. ಒಮ್ಮೆ ಅವನ ಸ್ನೇಹಿತ ಅವನನ್ನು ಕಾಣಲು ಬರುವಾಗ ಗುಂಡಿಯ ಕಾರಣದಿಂದ ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾಗಿನಿಂದ ರಸ್ತೆ ಸರಿಪಡಿಸಲು ನಗರಸಭೆಯ ಅಧಿಕಾರಿಗಳನ್ನು ಹಲವಾರು ಸಲ ಭೇಟಿ ಮಾಡಿ ಅರ್ಜಿ ಕೊಟ್ಟು ವಿಚಾರಿಸಿದರೂ ಏನೂ ಪ್ರಯೋಜನವಾಗಿರಲಿಲ್ಲ. ಆ ಭಾಗದ ಕೌನ್ಸಿಲರರನ್ನು ಕಂಡು ಬರುವುದು ಒಳ್ಳೆಯದೆಂದುಕೊಂಡು ಅವರ ಮನೆಗೆ ಹೋದ. ಮನೆಯ ಮುಂದೆ ಜನಗಳ ಗುಂಪೇ ಇತ್ತು, ಕೆಲಸ ಮಾಡಿಸಿಕೊಳ್ಳಲು ಬಂದವರು, ಹಿಂಬಾಲಕರು, ಮುಂಬಾಲಕರು, ಇತ್ಯಾದಿ. ರಾಜಣ್ಣ ಅವರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರೂ ಅವರು ಅವನನ್ನು ಗಮನಿಸಿಯೂ ಗಮನಿಸದಂತೆ ಇತರರೊಂದಿಗೆ ಮಾತುಕತೆಯಲ್ಲೇ ತೊಡಗಿದ್ದರು. ಮಧ್ಯೆ ಮಧ್ಯೆ ಆಪ್ತ/ಗುಪ್ತ ಸಮಾಲೋಚನೆಗಾಗಿ ಪಕ್ಕದ ಕೊಠಡಿಗೆ ಹೋಗಿಬರುತ್ತಿದ್ದರು. ರಾಜಣ್ಣ ಇನ್ನೂ ಅಲ್ಲೇ ಇದ್ದುದನ್ನು ಕಂಡ ಆ ಜನಪ್ರತಿನಿಧಿ ಅಸಹನೆಯಿಂದ  "ಏನ್ರೀ, ನಿಮ್ಮದು?" ಎಂದಾಗ 'ರಸ್ತೆ ದುರಸ್ತಿ ಮಾಡಿಸಿಕೊಡಬೇಕೆಂದೂ, ನಗರಸಭೆಯ ಅಧಿಕಾರಿಗಳು ಎಷ್ಟು ಹೇಳಿದರೂ ಕೇಳುತ್ತಿಲ್ಲ'ವೆಂದು ಹೇಳಿಕೊಂಡ. ಅವರು "ನಮಗೆ ಇದೇ ಕೆಲಸವೇನ್ರೀ? ಆ ರಸ್ತೆ ಮಾಡಿಸಿ, ಈ ಚರಂಡಿ ಕ್ಲೀನ್ ಮಾಡಿಸಿ, ಬರೀ ಇದೇ ಆಯಿತು" ಎಂದು ಹೇಳಿ, ಅಲ್ಲೇ ಇದ್ದ ನಗರಸಭೆ ಇಂಜನಿಯರರಿಗೆ "ಅದೇನು ನೋಡ್ರೀ" ಎಂದು ಹೇಳಿ ಆಗ ಬಂದ ವ್ಯಕ್ತಿಯೊಬ್ಬರನ್ನು ಆತ್ಮೀಯವಾಗಿ ಆಹ್ವಾನಿಸಿ ಪಕ್ಕದ ಕೊಠಡಿಗೆ ಕರೆದುಕೊಂಡು ಹೋದರು. ಇಂಜನಿಯರ್ ಉದಾಸೀನದಿಂದ "ಆಯ್ತು ನೋಡೋಣ, ಹೋಗಿ" ಎಂದು ಹೇಳಿದ. ರಾಜಣ್ಣ ವಾಪಸು ಬಂದ.
     ನಾಗಣ್ಣ ನಿವೃತ್ತನಾಗಿದ್ದ ಒಬ್ಬ ಹಿರಿಯ ಅಧಿಕಾರಿ. ರಸ್ತೆ ರಿಪೇರಿ ಮಾಡಿಸಲು ದೂರವಾಣಿ ಮೂಲಕ ನಗರಸಭೆ ಕಮಿಷನರರೊಂದಿಗೆ ಮಾತನಾಡಿದ್ದರು. ಹಾಗೆಯೇ ಕೌನ್ಸಿಲರರಿಗೆ ಒಂದು ಮಾತು ಹೇಳೋಣವೆಂದು ಕಾರಿನಲ್ಲಿ ಬಂದಿಳಿದ ಅವರನ್ನು ಕಂಡು ಮನೆಯ ಮುಂದಿದ್ದವರು ಅವರು ಒಳಗೆ ಬರಲು ಜಾಗ ಮಾಡಿಕೊಟ್ಟು ಸರಿದು ನಿಂತರು. ಒಳಗೆ ಹೋದ ನಾಗಣ್ಣ ಜನಪ್ರತಿನಿಧಿಗೆ ವಿಷಯ ತಿಳಿಸಿದರು. 'ಆಯ್ತು ಬಿಡಿ, ಮಾಡಿಸೋಣ' ಎಂದವರು, ಇಂಜನಿಯರರಿಗೆ "ಇಂಥ ಸಣ್ಣ ಕೆಲಸ ಮಾಡಕ್ಕೆ ಆಗಲ್ಲವೇನ್ರೀ, ಬೇಗ ಮಾಡಿಸಿರಿ" ಎಂದರು. ನಮಸ್ಕಾರ ಮಾಡಿ ನಾಗಣ್ಣ ಹೊರಗೆ ಹೋದಾಗ 'ನನಗೆ ಮಾಡಕ್ಕೆ ಬೇರೆ ಕೆಲಸ ಇಲ್ಲ ಅಂದುಕೊಂಡಿದಾನೆ' ಎಂದು ಗೊಣಗುಟ್ಟಿದರು. ಇಂಜನಿಯರರಿಗೆ ಆ ಕೆಲಸಕ್ಕೆ ಅರ್ಜೆಂಟ್ ಇಲ್ಲವೆಂದು ಅರ್ಥವಾಯಿತು.
     ಗುಂಡಣ್ಣ ವಿದ್ಯಾವಂತನೇನಲ್ಲ, ಪಿಯುಸಿ ಫೇಲಾದ ಮೇಲೆ ಅವನ ವಿದ್ಯಾಭ್ಯಾಸ ಮೊಟಕಾಗಿತ್ತು. ಅಪ್ಪ ಕೊಟ್ಟ ದುಡ್ಡಿನಲ್ಲಿ ಕೆಲವು ಟ್ಯಾಕ್ಸಿಗಳನ್ನು ಇಟ್ಟುಕೊಂಡು ಡ್ರೈವರರನ್ನು ನೇಮಿಸಿಕೊಂಡು ಟ್ರಾವೆಲ್ ಏಜೆನ್ಸಿ ನಡೆಸಿ ಪ್ರವರ್ಧಮಾನಕ್ಕೆ ಬರುತ್ತಿದ್ದ. ಕಟ್ಟುಮಸ್ತಾಗಿದ್ದ ಅವನ ಜೊತೆ ಗೆಳೆಯರ ಗುಂಪೇ ಇರುತ್ತಿತ್ತು. ಏನಾದರೂ ಕೆಲಸ ಆಗಬೇಕಿದ್ದರೆ ಅವನಿಗೆ ಹೇಳಿದರೆ ಆಗುತ್ತಿತ್ತು. ಅದನ್ನು ಮಾಡಬೇಕೆಂದು ಅವನಿಗೆ ಅನ್ನಿಸಿದರೆ ಅವನು ಅದನ್ನು ಆಗುವವರೆಗೂ ಬಿಡುವ ಜಾಯಮಾನ ಅವನದಾಗಿರಲಿಲ್ಲ. ಅಂದು ಅವನು ತನ್ನ ಗೆಳೆಯರ ಗುಂಪಿನೊಂದಿಗೆ ತನ್ನ ಗಡಸು ದ್ವನಿಯಲ್ಲಿ 'ಇದಾರೇನ್ರೀ' ಎಂದುಕೊಂಡು ಕೌನ್ಸಿಲರರ ಮನೆಗೆ ಪ್ರವೇಶಿಸುತ್ತಿದ್ದಂತೆಯೇ ಎದ್ದುಬಂದ ಆ ಜನಪ್ರತಿನಿಧಿ "ಏನ್ ಗುಂಡಣ್ಣಾ, ಏನ್ಸಮಾಚಾರ?" ಎಂದು ಕೇಳಿದ. 'ಬರೀ ಕಮಿಷನ್, ಕಂಟ್ರಾಕ್ಟು ಅಂತ ಇರ್ತೀರೋ ಅಥವಾ ಜನಗಳ ಕೆಲಸಾನೂ ಮಾಡ್ತೀರೋ?' ಎಂದ ಅವನನ್ನು ಸಮಾಧಾನಿಸಿ 'ಈಗ ಏನಾಗಬೇಕು ಹೇಳು ಗುಂಡಣ್ಣ' ಎಂದು ವಿಚಾರಿಸಿದ. ರಸ್ತೆ ರಿಪೇರಿ ವಿಷಯವೆಂದು ತಿಳಿದಾಗ ಅಲ್ಲಿದ್ದ ಇಂಜನಿಯರರಿಗೆ "ನೀವೇನು ಕತ್ತೆ ಕಾಯ್ತಾ ಇರ‍್ತೀರಾ? ಆ ರಸ್ತೆ ಗುಂಡಿ ಮುಚ್ಚಿ ಸರಿ ಮಾಡಿ ಅಂತ ನಿಮಗೆ ಎಷ್ಟು ಸಲ ಹೇಳಬೇಕ್ರೀ? ಅದೆಲ್ಲಾ ಗೊತ್ತಿಲ್ಲ, ನಾಳೆ ಒಳಗೆ ಆ ಕೆಲಸ ಮಾಡಿ ನನಗೆ ಮುಖ ತೋರಿಸಬೇಕು" ಎಂದು ಗದರಿಸಿದರು. ಇಂಜನಿಯರ್, "ಇವತ್ತೇ ಮಾಡಿಸುತ್ತಿದ್ದೆ ಸಾರ್, ಜನ ಸಿಗಲಿಲ್ಲ, ನಾಳೆ ಖಂಡಿತಾ ಆಗುತ್ತೆ ಸಾರ್" ಎಂದ. ಇಂಜನಿಯರ್ ತರಿಸಿದ ಕಾಫಿ ಕುಡಿದು ಗುಂಡಣ್ಣ ಮತ್ತು ಅವನ ಗೆಳೆಯರು ಅಲ್ಲಿಂದ ಹೊರಟರು. ಆ ನಾಳೆ ಹಲವು ದಿನಗಳಾದರೂ ಬರಲೇ ಇಲ್ಲ.
     ಹೀಗಿರುವಾಗ ಒಂದು ದಿನ ಬೆಳ್ಳಂಬೆಳಗ್ಗೆ ರಸ್ತೆ ದುರಸ್ತಿ ತರಾತುರಿಯಿಂದ ನಡೆದಿತ್ತು. ಕೆಲಸಗಾರರ, ಕೆಲಸದ ಉಸ್ತುವಾರಿ ನೋಡಿಕೊಳ್ಳುವವರ ದೊಡ್ಡ ಗುಂಪೇ ಅಲ್ಲಿ ನೆರೆದಿತ್ತು. ನಾಗಣ್ಣ, ರಾಜಣ್ಣ, ಗುಂಡಣ್ಣರು ತಮ್ಮ ಪ್ರಯತ್ನದಿಂದ ಕೆಲಸವಾಗುತ್ತಿದೆಯೆಂದುಕೊಂಡಿದ್ದರು. ಆದರೆ, ನಿಜವಾದ ಕಾರಣವೆಂದರೆ ಜಿಲ್ಲಾ ಮಂತ್ರಿಗಳು ಅಂದು ಆ ರಸ್ತೆಯ ಮೂಲಕ ಹಾದು ಹೋಗುತ್ತಿದ್ದರು!
-ಕ.ವೆಂ.ನಾಗರಾಜ್.
****************
ದಿನಾಂಕ 16.05.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಜುಲೈ 14, 2016

ನೂರ್ಕಾಲ ಬಾಳೋಣ!


ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರುತಿಹುದು ಸಾವು |
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ ||
     ಸಾವಿಲ್ಲದ ಜೀವಿಗಳು ಇವೆಯೇ? ಸಾವು ಖಚಿತವೆಂಬ ಸತ್ಯವನ್ನು ಒಪ್ಪದವರು ಇದ್ದಾರೆಯೇ? ಯಾವುದೇ ಸಿದ್ಧಾಂತ, ತತ್ವ, ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದೀತು, ಆದರೆ ಎಲ್ಲರೂ ಸಾಯುತ್ತಾರೆ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರಲಾರದು. ಸಾಯುವುದು ಗೊತ್ತಿದ್ದರೂ ಮನುಷ್ಯರು ಚಿರಂಜೀವಿಗಳಂತೆ ವರ್ತಿಸಿ, ಎಲ್ಲವೂ ಬೇಕು, ತಮಗೊಬ್ಬರಿಗೇ ಬೇಕು ಎಂದು ಏಕೆ ಹಪಹಪಿಸುತ್ತಾರೆಂಬುದು ಚೋದ್ಯವೇ ಸರಿ. ತರ್ಕಿಸುತ್ತಾ ಹೋದರೆ ಬೇಕು ಎಂಬುದು ಪ್ರತಿ ಜೀವಿಯ ಅಂತರ್ಗತ ಸ್ವಭಾವವೆಂಬುದನ್ನು ಒಪ್ಪಲೇಬೇಕು. ಇರುವ ಸ್ಥಿತಿಗಿಂತ ಮೇಲೇರಬೇಕು ಎಂಬ ಪ್ರಬಲ ಇಚ್ಛೆ ಎಲ್ಲರಿಗೂ ಸಹಜ. ಈ ಬೇಕು ಅನ್ನುವುದು ಯಾವ ಹಂತದಲ್ಲೇ ಆಗಲಿ, ಸಾಕು ಎಂಬ ಭಾವನೆ ಮೂಡಲು ಬಿಡುವುದಿಲ್ಲ. ಅಂದುಕೊಂಡಿದ್ದಂತೆ ಬಯಸಿದ್ದು ಸಿಕ್ಕಿದ ತಕ್ಷಣದಲ್ಲೇ ಅದಕ್ಕಿಂತ ಮೇಲಿನ ಬೇಕು ಧುತ್ತೆಂದು ಆ ಸ್ಥಾನವನ್ನು ಆಕ್ರಮಿಸಿಬಿಡುತ್ತದೆ. ಮನುಷ್ಯೇತರ ಜೀವಿಗಳಿಗಿಂತ ವಿವೇಚನೆ ಮಾಡುವ ಶಕ್ತಿ ಹೊಂದಿರುವ ಮಾನವಜೀವಿಗಳಲ್ಲಿ ಈ ಬೇಕುವಿನ ಪ್ರಮಾಣ ಜಾಸ್ತಿ. ಈ ಬೇಕುವಿನಿಂದಲೇ ಜೀವಚಕ್ರ ತಿರುಗುತ್ತಿದೆ. ಬೇಕುಗಳನ್ನು ಮೀರಿ ಯಾವುದೂ ಬೇಡವೆಂದು ವಿರಾಗಿಗಳಾದವರಿಗೂ ಮೋಕ್ಷ ಸಾಧಿಸಬೇಕೆಂಬ ದೊಡ್ಡ ಬೇಕು ಇರುತ್ತದೆ. ಈ ಬೇಕುವಿಗಾಗಿಯೇ ಅವರು ಇತರ ಪ್ರಾಪಂಚಿಕ ಬೇಕುಗಳನ್ನು ದೂರಮಾಡಿರುತ್ತಾರೆ! 
     ಜೀವ ಹೋಗಲು ಈಗಲೋ ಆಗಲೋ ಎನ್ನುತ್ತಿರುವಾಗಲೂ ಆ ಜೀವ ಬದುಕಲು ತುಡಿಯುತ್ತಿರುತ್ತದೆ. ಇಷ್ಟಾದರೂ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರೂ ಇರುತ್ತಾರೆ. ಬಹುಷಃ ಅದಕ್ಕೆ ಕಾರಣ ಈ ಜನ್ಮದಲ್ಲಿ ಸಿಗದಿದ್ದುದು ಮುಂದಿನ ಜನ್ಮದಲ್ಲಾದರೂ ಸಿಗಲಿ ಎಂಬ ಭಾವವೂ ಇದ್ದಿರಬಹುದು. ಬಡತನ, ಸಾಂಸಾರಿಕ ಸಮಸ್ಯೆಗಳು, ಇತ್ಯಾದಿಗಳಿಂದ ರೋಸಿಹೋದವರು, ಭಗ್ನಪ್ರೇಮಿಗಳು, ಮುಂತಾದವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಡೆದು, ಸಾಯುವುದರಿಂದ ಸಮಸ್ಯೆ ಪರಿಹಾರವಾಗುವುದೇ ಎಂದು ವಿಚಾರಿಸಿದರೆ ಅವರು ಬಹುಷಃ ಸಾಮಾನ್ಯವಾಗಿ ಹೇಳುವುದೇನೆಂದರೆ ಅವರು ಬಯಸಿದ್ದುದು ಈ ಜನ್ಮದಲ್ಲಿ ಸಿಗುವುದೇ ಇಲ್ಲ, ಅದು ಇಲ್ಲದೇ ಜೀವನ ವ್ಯರ್ಥ, ತಮ್ಮ ಸಮಸ್ಯೆಗೆ ಈ ಜನ್ಮದಲ್ಲಿ ಪರಿಹಾರ ಸಿಕ್ಕುವುದೇ ಇಲ್ಲ, ಇತ್ಯಾದಿ ಕಾರಣಗಳನ್ನು ಕೊಟ್ಟಾರು. ಗಮನಿಸಬೇಕಾದುದೇನೆಂದರೆ, ಅವರ ಬೇಕುಗಳಿಗಾಗಿಯೇ ಅವರು ಸಾಯುತ್ತಾರೆ. ಏಕೆಂದರೆ ಅದು ಅವರಿಗೆ ಬೇಕಾಗಿದೆ, ಬೇಕೆನಿಸಿದಂತೆ ಬದುಕುವುದು ಅವರಿಗೆ ಬೇಕಿದೆ! 
ಬಯಸಿದರು ಸಾವೆ ಬಯಸದಿದ್ದರು ಸಾವೆ
ಬೇಡವೆಂದರೆ ನೀನು ಬರದಿಹುದೆ ಸಾವು |
ಬೇಡದಿರು ಮನವೆ ಬೇಡದಿಹ ಸಾವ
ಅಡ್ಡದಾರಿಯಲಿ ನುಗ್ಗದಿರು ಮೂಢ ||
     ಈ ಸಾವಿಗೆ ನಾಚಿಕೆಯಿಲ್ಲ; ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಿರುವಾಗ ಬಯಸಿ ಏಕೆ ಕರೆಯಬೇಕು? ಅದು ಬರುವವರೆಗೂ ಬದುಕಿರೋಣ. ತಾನಾಗಿ ಬಂದಾಗ ಸಂತೋಷದಿಂದ ಹೋಗೋಣ. ನಗುತ್ತಾ ಸಾವನ್ನು ಅದು ಬರುವಾಗ ಮಿತ್ರನಂತೆ ಬರಮಾಡಿಕೊಳ್ಳೋಣ. ೮೪ ಲಕ್ಷ ವಿವಿಧ ಜೀವಿಗಳ ಪೈಕಿ ವಿರಳವಾದ ಮಾನವಜನ್ಮ ಹೊಂದುವುದು ಆ ಪರಮಾತ್ಮನ ಕರುಣೆಯಲ್ಲವೇ? ವೇದಗಳ ಪ್ರಕಾರ ಮತ್ತು ಭಾರತೀಯರ ನಂಬಿಕೆಯಂತೆ ಹುಟ್ಟು-ಸಾವುಗಳ ಚಕ್ರ ಸದಾ ತಿರುಗುತ್ತಿದ್ದು ಜೀವಿಗಳು ಹುಟ್ಟುತ್ತಾ, ಸಾಯುತ್ತಾ ಇದ್ದರೂ ಈ ಜೀವಿಗಳಿಗೆ ಚೈತನ್ಯದಾಯಕವಾದ ಆತ್ಮ ಮಾತ್ರ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ; ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಆದರೆ, ಇಲ್ಲಿ ಒಂದು ವಿಶೇಷ ಅಂಶವಿದೆ. ಮುಂದೆ ಪಡೆಯುವ ಜನ್ಮ ಈ ಜನ್ಮದಲ್ಲಿ ಮಾಡಿದ ಕರ್ಮಗಳ ಸಂಚಿತಾರ್ಜಿತಫಲವೆಂದು ವೇದ ಸಾರಿದೆ. 
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮.)
     ಪರಮಾತ್ಮನ ನ್ಯಾಯವಿಧಾನದಲ್ಲಿ ಒಡಕಾಗಲೀ, ದೋಷವಾಗಲೀ ಇಲ್ಲ. ಅವನು ಜೀವಿಗಳಲ್ಲಿ ಇಟ್ಟಿರುವ ಗೂಢವಾದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು (ಕರ್ಮಫಲವಿಪಾಕ) ತಯಾರು ಮಾಡಿದವರೇ ಉಣ್ಣಬೇಕಿದೆ. ಇತರರ ಸಹಾಯದಿಂದ, ಅಡ್ಡಮಾರ್ಗದಿಂದ ಇದನ್ನು ತಪ್ಪಿಸಿಕೊಳ್ಳಬಹುದೆಂಬ ಅವಕಾಶ ಇಲ್ಲಿಲ್ಲ ಎಂಬುದು ಇದರ ಅರ್ಥ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಹೀಗಿರುವಾಗ ಪುಣ್ಯವಶಾತ್ ಪಡೆದಿರುವ ಮಾನವ ಜನ್ಮವನ್ನು ಇರುವವರೆಗೂ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
     ಸಾಯುವುದು ಸುಲಭ, ಬದುಕುವುದು ಕಷ್ಟ. ಸುಲಭವೆಂದು ಸಾಯಲಾಗುವುದೇ? ಕಷ್ಟವಾದರೂ ಬದುಕಬೇಕು. ಬದುಕಬೇಕೆಂಬ ಅದ್ಭುತ ಇಚ್ಛಾಶಕ್ತಿಗೆ ದುರ್ಯೋಧನ ಸಾಕ್ಷಿಯಾಗಿದ್ದಾನೆ. ಅವನ ಕಣ್ಣೆದುರಿಗೇ ಭೀಷ್ಮ, ದ್ರೋಣ ಮೊದಲಾದ ಅತಿರಥ, ಮಹಾರಥರು ಹೋದರು. ಕರ್ಣ ಹೋದ, ಸೋದರರು ಹೋದರು, ಆದರೆ ಅವನಿಗೆ ಇನ್ನೂ ವಿಶ್ವಾಸವಿತ್ತು. ಶಲ್ಯ ಇದ್ದಾನೆ, ತಾನೂ ಇದ್ದೇನೆ. ಯುದ್ಧದಲ್ಲಿ ಗೆಲ್ಲುತ್ತೇನೆ, ಬದುಕುತ್ತೇನೆ ಎಂಬ ವಿಶ್ವಾಸ ಸಾಯುವವರೆಗೂ ಇತ್ತು. ಮನುಷ್ಯ ಕನಸು ಕಾಣುವುದನ್ನು ನಿಲ್ಲಿಸಿದಾಗ ಸಾಯತೊಡಗುತ್ತಾನೆ. ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದಂತೆ, ಆಶಾವಾದವೇ ಜೀವನ, ನಿರಾಶಾವಾದವೇ ಮರಣ. ಪರಮಾತ್ಮ ಯಾವ ಜೀವಿ ಎಷ್ಟು ಬದುಕಬೇಕು, ಎಷ್ಟು ಬಾಳಬೇಕು ಎಂಬುದನ್ನು ನಿರ್ಧರಿಸಿರುತ್ತಾನೆ. ಅದಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ. ಸಾಯಲು ಬಯಸುವ ದುರಾಸೆ ಜೀವಿಯ ಇಚ್ಛಾಶಕ್ತಿಯನ್ನೇ ಹಾಳುಮಾಡುತ್ತದೆ. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿರುವವರ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈಗಲೂ ನೂರು ವರ್ಷಗಳನ್ನು ಮೀರಿ ಜೀವಿಸಿರುವ ಹಲವರು ನಮ್ಮ ನಡುವೆ ಇದ್ದಾರೆ. ಅದಮ್ಯ ಜೀವನೋತ್ಸಾಹದ ಚಿಲುಮೆ, ನಾಲ್ಕು ವೇದಗಳನ್ನು ಸಂಪೂರ್ಣ ಅಧ್ಯಯನ ಮಾಡಿ ಚತುರ‍್ವೇದಿ ಎಂಬ ಸಾರ್ಥಕ ಹೆಸರನ್ನು ಪಡೆದಿರುವ, ವೇದದ ಸಾರ ಮತ್ತು ಉದ್ದೇಶಗಳನ್ನು ಈಗಲೂ ಸಾರುತ್ತಿರುವ, ಬೆಂಗಳೂರಿನ ೧೧೯ ವರ್ಷಗಳ ಅನುಪಮ ಸಾಧಕ ಮಾರ್ಗದರ್ಶಿ ಪಂ. ಸುಧಾಕರ ಚತುರ‍್ವೇದಿಯವರು ಇಚ್ಛಾಶಕ್ತಿಗೆ ಜ್ವಲಂತ ಉದಾಹರಣೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದ, ಅಲ್ಲಿ ಹುತಾತ್ಮರಾದವರ ಸಾಮೂಹಿಕ ಸಂಸ್ಕಾರಕಾರ್ಯದಲ್ಲಿ ಭಾಗಿಯಾಗಿದ್ದ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದು ಸುಮಾರು ೧೪ ವರ್ಷಗಳ ಕಾಲ ಸೆರೆವಾಸ ಕಂಡಿದ್ದ, ಈಗಲೂ ಸತ್ಸಂಗಗಳನ್ನು ನಡೆಸುತ್ತಾ, ರೂಢಿಗತ ಅಂಧ ಸಂಪ್ರದಾಯಗಳನ್ನು ವಿರೋಧಿಸಿ ವೇದದ ಬೆಳಕಿನಲ್ಲಿ ಸತ್ಯಾನ್ವೇಷಣೆಗೆ ಕರೆ ಕೊಡುತ್ತಿರುವ, ನಿಜವಾಗಿ ಬದುಕಲು ಪ್ರೇರಿಸುತ್ತಿರುವ ಅವರ ಬದುಕು ಅನುಸರಣೀಯ. 
     ಎಲ್ಲರೂ ಸಾಯುತ್ತಾರೆ, ಆದರೆ ಎಲ್ಲರೂ ಬದುಕುತ್ತಾರೆಯೇ ಎಂಬುದು ಕೇಳಬೇಕಾದ ಪ್ರಶ್ನೆ. ಬದುಕುವ ರೀತಿಯಲ್ಲಿ ಬದುಕಿದವರು ಸತ್ತ ಮೇಲೂ ಬದುಕಿರುತ್ತಾರೆ. ನೂರಾರು ವರ್ಷಗಳ ನಂತರವೂ, ಇಂದಿಗೂ ನಾವು ನೆನಪಿಸಿಕೊಳ್ಳುವ, ಗೌರವಿಸುವ, ದೇವರಂತೆ ಕಾಣುವ ರಾಮ, ಕೃಷ್ಣ, ವ್ಯಾಸ, ವಾಲ್ಮೀಕಿ, ಶಂಕರಾಚಾರ್ಯ, ವಿವೇಕಾನಂದ, ಬುದ್ಧ, ಬಸವ, ಮುಂತಾದ ನೂರಾರು, ಸಾವಿರಾರು ಮಹಾನ್ ವ್ಯಕ್ತಿಗಳು ಈ ಮಾತಿಗೆ ಪುಷ್ಟಿ ಕೊಡುತ್ತಾರೆ. ಹೇಗೋ ಹುಟ್ಟಿ, ಹೇಗೋ ಬದುಕಿ, ಹೇಗೋ ಕಂತೆ ಒಗೆದು ಹೋಗುವವರ ನೆನಪು ಅವರ ಮಕ್ಕಳು, ಮೊಮ್ಮಕ್ಕಳುಗಳಿಗೇ ಇರುವುದಿಲ್ಲ. ಮಸುಕಾಗಿ ಮರೆಯಾಗುವುದಕ್ಕಿಂತ ಜ್ಯೋತಿಯಾಗಿ ಉರಿದು ನೆನಪು ಉಳಿಸುವುದು ಉತ್ತಮ. ಯೋಗ್ಯವಾಗಿ ಬದುಕಬೇಕೆಂಬ ಮಾರ್ಗದರ್ಶನ ನೀಡುವುದೇ ಸಾವು! ಭಗತ್ ಸಿಂಗ್, ರಾಜಗುರು, ಸುಖದೇವರಂತೆ, ಚಂದ್ರಶೇಖರ ಆಜಾದರಂತೆ ಇನ್ನೊಬ್ಬರ ಬದುಕಿಗಾಗಿ, ಒಳಿತಿಗಾಗಿ ಸಾಯಲು ಸಿದ್ಧರಿರುವವರ, ಸಾಯುವವರ ಬದುಕುಗಳು ಬದುಕಬೇಕಾದ ರೀತಿಗೆ ಉದಾಹರಣೆಗಳು. ಈ ವೇದಮಂತ್ರ ಬದುಕಿನ ರೀತಿಗೆ ಅದ್ಭುತ ಮಾರ್ಗದರ್ಶಿಯಾಗಿದೆ: 'ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಗ್ಂ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಂ ಶತಮದೀನಾ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್ ||'
     ಅರ್ಥ: ಶುಭವ ನೋಡುತಲಿ, ಶುಭವ ಕೇಳುತಲಿ, ಶುಭವ ನುಡಿಯುತಲಿ ನೂರ್ಕಾಲ ಬಾಳೋಣ. ದೈನ್ಯತೆಯಿಲ್ಲದೆ ಸ್ವಾಭಿಮಾನದಿಂದ ಸ್ವತಂತ್ರರಾಗಿ ನೂರ್ಕಾಲ ಬಾಳೋಣ. ನೂರು ವರ್ಷಗಳಿಗಿಂತ ಹೆಚ್ಚಾಗಿಯೂ ಬಾಳಿಕೊಂಡಿರೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 25.04.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:



ಸೋಮವಾರ, ಜುಲೈ 4, 2016

ಹಿಂಸೆಯನ್ನು ಸಹಿಸುವುದು ಅಹಿಂಸೆಯೇ?


     ಒಬ್ಬ ಸಣಕಲ ವ್ಯಕ್ತಿ ಧಡೂತಿ ಪೈಲ್ವಾನನನ್ನು ಕುರಿತು, "ಈ ಸಲ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಮತ್ತೊಮ್ಮೆ ನನ್ನ ತಂಟೆಗೆ ಬಂದರೆ ಹುಷಾರ್" ಎಂದರೆ ಪೈಲ್ವಾನ ನಕ್ಕು ಸುಮ್ಮನಿರುತ್ತಾನೆ ಎಂದಿಟ್ಟುಕೊಳ್ಳಿ. ಈಗ ಅಹಿಂಸಾ ತತ್ವವನ್ನು ಪಾಲಿಸಿದವರು ಯಾರು? ಸಣಕಲನೋ, ಪೈಲ್ವಾನನೋ? ನಿಜವಾಗಿ ಹೇಳಬೇಕೆಂದರೆ ಪೈಲ್ವಾನನೇ ಅಹಿಂಸಾ ತತ್ವ ಪಾಲಿಸಿದವನು. ಏಕೆಂದರೆ ಸಣಕಲನ ಮಾತು ಕೇಳಿ ಆತ ಅವನ ಮುಸುಡಿಯ ಮೇಲೆ ಗುದ್ದಿಬಿಡಬಹುದಿತ್ತು. ಹಾಗೆ ಗುದ್ದಿದರೂ ಸಣಕಲ ತಿರುಗಿ ಏನೂ ಮಾಡುವಂತಿರಲಿಲ್ಲ. ಹಿಂಸೆ ಮಾಡಲು ಅವಕಾಶವಿದ್ದರೂ ಮಾಡದಿರುವುದೇ ನಿಜವಾದ ಅಹಿಂಸೆ. ಜಗತ್ತು ಮತ್ತು ಜೀವಗಳ ಉಗಮ ಕಾಲದಿಂದಲೂ ಹಿಂಸೆ, ಅಹಿಂಸೆಗಳ ತಾಕಲಾಟ ಸಾಗುತ್ತಿದೆ, ಸಾಗುತ್ತಲೇ ಇರುತ್ತದೆ.
     ಅಹಿಂಸೆಯಲ್ಲಿ ಪ್ರೀತಿಯ ತತ್ವವಿದೆ. ಪ್ರೀತಿಯಿರುವಲ್ಲಿ ಅಹಿಂಸೆಯಿರುತ್ತದೆ. ಮಾನವನಂತೆ ವಿವೇಚನಾ ಸಾಮರ್ಥ್ಯವಿಲ್ಲದ ಪ್ರಾಣಿಗಳಲ್ಲೂ ಇದನ್ನು ಗುರುತಿಸಬಹುದು. ತಮ್ಮ ಮರಿ, ಸಮೂಹ, ಕುಟುಂಬಗಳನ್ನು ಪ್ರೀತಿಯಿಂದ ಕಾಣುವ ಅವು ಇತರ ಪ್ರಾಣಿಗಳನ್ನು ಕಂಡಾಗ ಕಾದಾಡುತ್ತವೆ, ಬಲಿ ತೆಗೆದುಕೊಳ್ಳುತ್ತವೆ. ಮಾನವರಲ್ಲೂ ಅಷ್ಟೆ, ತಮ್ಮವರು ಅನ್ನುವವರ ಬಗ್ಗೆ ಕೆಡುಕನ್ನು ಅವರು ಬಯಸುವುದಿಲ್ಲ. ವಿಶಾಲವಾಗಿ ನೋಡುತ್ತಾ ಹೋದರೆ ಅಹಿಂಸೆ ಅನ್ನುವುದು ದೇವರ/ದೇವಮಾನವರ ಗುಣ ಅನ್ನುವುದು ಗೊತ್ತಾಗುತ್ತದೆ. ಅಹಿಂಸೆ ಹೃದಯದಿಂದ ಮೆದುಳಿಗೆ ಮೂಡಿ ಬರುವಂತಹದು. ದೇವರಲ್ಲಿ ಮತ್ತು ಜೀವರಲ್ಲಿ ನಂಬಿಕೆ ಇರುವವರಿಗೆ ಅಹಿಂಸೆ ಅರ್ಥವಾಗುತ್ತದೆ. ಅಹಿಂಸೆ ಮತ್ತು ಸತ್ಯಗಳಲ್ಲಿ ಅವಿನಾಭಾವ ಸಂಬಂಧವಿದೆ.
     ಅಹಿಂಸೆಯ ಮಹತ್ವ ಅರ್ಥವಾಗಬೇಕೆಂದರೆ ಹಿಂಸೆಯ ಪರಿಣಾಮಗಳನ್ನು ತಿಳಿಯಬೇಕು. ಹಿಂಸೆ ಪ್ರತಿಹಿಂಸೆಗೆ ಪ್ರಚೋದಿಸುತ್ತದೆ. ಹಿಂಸೆ, ಮಾನಸಿಕವಿರಬಹುದು, ದೈಹಿಕವಿರಬಹುದು ಅದು ಕೊಟ್ಟವರಿಗೂ, ಪಡೆದವರಿಗೂ ಕೇಡು ಮಾಡದೇ ಇರದು. ಹಿಂಸೆ ಕೊಟ್ಟವರಿಗೆ ತಮಗೆ ಪ್ರತಿಯಾಗಿ ತೊಂದರೆ ಮಾಡಿಯಾರೆಂಬ ಭಯ ಕಾಡುತ್ತಿರುತ್ತದೆ. ಅವರು ವಿಶ್ವಾಸ, ಸ್ನೇಹಗಳನ್ನು ಕಳೆದುಕೊಳ್ಳುತ್ತಾರೆ. ಹಿಂಸೆ ಅನುಭವಿಸಿದವರೂ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಾರೆ. ಹಿಂಸೆ ಕೊಟ್ಟವರು ಬಲಶಾಲಿಯಾಗಿದ್ದರೆ ಹಿಂಸಿಸಲ್ಪಟ್ಟವರು ಅವಮಾನದಿಂದ ಕುದಿಯುತ್ತಾರೆ ಮತ್ತು ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಾರೆ. ಇದರಿಂದಾಗಿ ದೈನಂದಿನ ಚಟುವಟಿಕೆಗಳು ಏರುಪೇರಾಗುತ್ತವೆ. ಮುಂದುವರೆಯುವುದಕ್ಕೆ ಹಿನ್ನಡೆಯಾಗುತ್ತದೆ. ಹಿಂಸೆ ದುರ್ಬಲರ ಮತ್ತು ಪ್ರೀತಿಯಿಂದ ಗೆಲ್ಲಲು ಸಾಧ್ಯವಾಗದ ಹತಾಶ ವ್ಯಕ್ತಿಗಳ ಆಯುಧ. ಭಯಪಡಿಸಿ ಜನರನ್ನು ಆಳುವುದು ಶಾಶ್ವತದ್ದಾಗಿರುವುದಿಲ್ಲ. ಒಮ್ಮೆ ಆ ರೀತಿ ಆಳಿದವರು ದುರ್ಬಲರಾದರೆಂದರೆ ಅವರೂ ಪ್ರತಿಹಿಂಸೆಯ ಬಲಿಪಶುಗಳಾಗುತ್ತಾರೆ. ಸರ್ವಾಧಿಕಾರಿಗಳಾಗಿ ಭಯಪಡಿಸಿ ದೇಶಗಳನ್ನು ಆಳಿದವರು ಕೊನೆಯಲ್ಲಿ ಅಮಾನುಷ ಅಂತ್ಯ ಕಂಡ ಅನೇಕ ಘಟನೆಗಳಿಗೆ ಇತಿಹಾಸ ಸಾಕ್ಷಿಯಾಗಿದೆ. ಅದೇ ನೈಜ ಕಾಳಜಿಯಿಂದ ಆಳಿದವರು ಸೋತಾಗಲೂ ಗೌರವ ಉಳಿಸಿಕೊಂಡಿರುವ ನಿದರ್ಶನಗಳೂ ಕಣ್ಣ ಮುಂದಿವೆ.
     ಅಹಿಂಸೆಯ ಶತ್ರು ಕೋಪ ಮತ್ತು ದುರಭಿಮಾನಗಳು. ಅವು ಅಹಿಂಸೆಯನ್ನು ನುಂಗಿ ನೀರು ಕುಡಿಯುತ್ತವೆ. ಕೋಪ ಮತ್ತು ದುರಭಿಮಾನಗಳು ಸಾಮಾನ್ಯರ ಆಸ್ತಿಗಳು. ಅಸಾಮಾನ್ಯರಷ್ಟೇ ಅವನ್ನು ಗೆಲ್ಲಬಲ್ಲರು. ಹಾಗಾಗಿ ಅಹಿಂಸೆ ಸಾಧಕರ/ಸಜ್ಜನರ ಸ್ವತ್ತು, ಬೆಳವಣಿಗೆಯ ಸಂಕೇತ. ಎಲ್ಲಿಯವರೆಗೆ ಇತರರನ್ನು ಹಿಂಸಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ನಾವು ಅಸುರರಾಗಿರುತ್ತೇವೆ. ಅಹಿಂಸಾತ್ಮಕರಾಗಿರಲು ಹೆಚ್ಚು ಶಕ್ತಿ, ಅಗಾಧ ಮಾನಸಿಕ ಬಲ ಇರಬೇಕಾಗುತ್ತದೆ. ಅಹಿಂಸಾತತ್ವ ಪಾಲಿಸುವವರಿಂದಾಗಿ ಜಗತ್ತು ಸ್ವಲ್ಪವಾದರೂ ಶಾಂತಿಯಿಂದಿದೆ. ಇಲ್ಲವಾದಲ್ಲಿ ಜಗತ್ತು ನಿರಂತರ ರಣಾಂಗಣವಾಗಿರುತ್ತಿತ್ತು!
     ಅಯೋಧ್ಯೆಯ ಜ್ವಲಂತ ಉದಾಹರಣೆಯನ್ನೇ ನೋಡೋಣ. ಅಯೋಧ್ಯೆ, ಮಥುರೆ ಮತ್ತು ವಾರಣಾಸಿಗಳಲ್ಲಿದ್ದ ಹಿಂದೂ ದೇವಾಲಯಗಳನ್ನು ಹಿಂದೊಮ್ಮೆ ಮುಸ್ಲಿಮ್ ಆಕ್ರಮಣಕಾರರು ಕೆಡವಿ ಮಸೀದಿಗಳನ್ನು ಕಟ್ಟಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಿ ಬಾಬರಿ ಮಸೀದಿ ತಲೆಯೆತ್ತಿತ್ತು. ಬಾಬರಿ ಮಸೀದಿ ಸಹ ಹಲವು ವರ್ಷಗಳ ಹಿಂದೆ ಧ್ವಂಸಗೊಂಡಿತು. ವಿವಾದ ಮಾತ್ರ ನಿಲ್ಲದೆ ಮುಂದುವರೆದಿದೆ. ಇತರ ಧರ್ಮ/ಮತ/ವಿಚಾರಗಳ ಬಗೆಗಿನ ಅಹನೆಯೇ ಸಮಸ್ಯೆಯ ಮೂಲವಾಗಿದೆ. ಇದು ನಿಲ್ಲುವುದೆಂದಿಗೆ? ರಾಜಕಾರಣಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಸಮಸ್ಯೆ ಇತ್ಯರ್ಥವಾಗದಿರುವಂತೆ ನೋಡಿಕೊಂಡು ಲಾಭ ಪಡೆಯುವುದಕ್ಕೆ ಮಾತ್ರ ಗಮನ ಹರಿಸುತ್ತಿರುವುದರಿಂದ ಪರಿಹಾರ ಸುಲಭವಲ್ಲ.
     ಅಹಿಂಸಾತತ್ವ ವೈಯಕ್ತಿಕ ಸಾಧನೆಗೆ ಅತ್ಯುನ್ನತ ಸಾಧನ. ಇದನ್ನು ಅಳವಡಿಸಿಕೊಂಡವನು ಅಜಾತಶತ್ರುವೆನಿಸುತ್ತಾನೆ. ಹೆಚ್ಚಿನ ಧರ್ಮ, ಮತಗಳು ಅಹಿಂಸೆಗೆ ಮಹತ್ವ ನೀಡಿವೆ. ಆದರೆ ಆಯಾ ಧರ್ಮದ ತಿರುಳನ್ನು ಸರಿಯಾಗಿ ಗ್ರಹಿಸದ, ತಮ್ಮ ಧರ್ಮ/ಮತವೇ ಶ್ರೇಷ್ಠ ಎಂದು ಭಾವಿಸುವುದರೊಂದಿಗೆ ಇತರ ಧರ್ಮ/ಆದರ್ಶಗಳನ್ನು ದ್ವೇಷಿಸುವ ಮನೋಭಾವದ ಕೆಳಸ್ತರದ ಧರ್ಮಾನುಯಾಯಿಗಳು ಹಿಂಸೆಗೆ ಎಳಸುವುದನ್ನು ಕಾಣುತ್ತಿದ್ದೇವೆ. ಹಿಂದೂ, ಬೌದ್ಧ, ಜೈನ ಧರ್ಮಗಳಲ್ಲಿ ಅಹಿಂಸೆಗೆ ಉನ್ನತ ಸ್ಥಾನ ನೀಡಿವೆ. ಇಸ್ಲಾಮ್ ಮತದಲ್ಲೂ ಅಹಿಂಸೆಗೆ ಪ್ರಾಧಾನ್ಯತೆ ಇದ್ದರೂ, ಇತರ ಧರ್ಮೀಯರ ಕುರಿತ ಅಸಹನೆ ಅಶಾಂತಿಗೆ ಎಡೆ ಮಾಡಿಕೊಟ್ಟಿದೆ. ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್‌ಖಾನರ ಈ ಮಾತು ಮನನೀಯವಾಗಿದೆ: "ಯಾರನ್ನೇ ಆಗಲಿ, ಮಾತಿನಿಂದಾಗಲೀ, ಕೃತಿಯಿಂದಾಗಲೀ ನೋಯಿಸದಿರುವ ಮತ್ತು ದೇವರ ಸೃಷ್ಟಿಯ ಜೀವಗಳ ಅನುಕೂಲ ಮತ್ತು ಸಂತೋಷಕ್ಕಾಗಿ ಶ್ರಮಿಸುವ ಮನುಷ್ಯನೇ ಮುಸ್ಲಿಮ. ಸಹಮನುಷ್ಯರನ್ನು ಪ್ರೀತಿಸುವುದೇ ದೇವರ ಮೇಲಿನ ನಂಬಿಕೆ". ಇದನ್ನು ಅನುಸರಿಸಿದರೆ ಸಮಸ್ಯೆ ಎಲ್ಲಿ ಬಂದೀತು? ಆದರೆ . . .?
     ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟಗಳು ಉಲ್ಲೇಖನೀಯವಾಗಿವೆ. ಅಹಿಂಸಾತ್ಮಕ ಹೋರಾಟಗಳನ್ನು ನ್ಯಾಯ, ನೀತಿ, ಮೌಲ್ಯಗಳಿಗೆ ಬೆಲೆ ಕೊಡುವಂತಹವರು ಮಾತ್ರ ಪರಿಗಣಿಸಿಯಾರು. ಕುಟಿಲತೆ, ಕುತಂತ್ರಗಳಿಗೆ ಹೆಸರಾದ ಬ್ರಿಟಿಷರು ಅಹಿಂಸಾತ್ಮಕ ಹೋರಾಟಕ್ಕೆ ಹೆದರಿ ಕಾಲ್ಕಿತ್ತರು ಎಂದು ಹೇಳುವುದು ಸ್ವಾತಂತ್ರ್ಯ ಹೋರಾಟಕ್ಕೆ ಮಾಡುವ ಅಪಚಾರ.  ಅವರು ಅಹಿಂಸೆಗೆ ಬೆಲೆ ಕೊಡುವವರಾಗಿದ್ದರೆ ಜಲಿಯನ್‌ವಾಲಾಬಾಗಿನಲ್ಲಿ ಅಹಿಂಸಾತ್ಮಕವಾಗಿ ನಡೆಸಲಾಗುತ್ತಿದ್ದ ಸಭೆಯನ್ನು ಸುತ್ತುವರೆದು ನಿರ್ದಯವಾಗಿ ಗುಂಡಿನ ಸರಿಮಳೆಗೈದು ಮಕ್ಕಳು, ಮುದುಕರೆನ್ನದೆ ಸಾವಿರಾರು ಭಾರತೀಯರನ್ನು ಹತ್ಯೆ ಮಾಡುತ್ತಿರಲಿಲ್ಲ. ಗಂಡುಗಲಿಗಳಾದ ಸುಭಾಷಚಂದ್ರ ಬೋಸ್, ಚಂದ್ರಶೇಖರ ಆಜಾದ್, ಭಗತ್‌ಸಿಂಗ್, ಸಾವರ್ಕರ್, ವಾಸುದೇವ ಬಲವಂತ ಫಡಕೆ, ಶಿವಾಜಿ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೊಂಡಿಯವಾಘನಂತಹ ಅಸಂಖ್ಯ ವೀರ ಶೂರರ ಕೆಚ್ಚೆದೆಯ ಹೋರಾಟಗಳು, ಬಲಿದಾನಗಳನ್ನು ಕಡೆಗಣಿಸಿದರೆ ದ್ರೋಹವಾಗುತ್ತದೆ. ಇಂತಹವರನ್ನು ಎದುರಿಸಿ ಹಣ್ಣಾಗಿದ್ದ, ಎರಡನೆಯ ವಿಶ್ವಯುದ್ಧದ ಪರಿಣಾಮಗಳನ್ನು ಎದುರಿಸಬೇಕಾಗಿದ್ದ ಸಂದರ್ಭದಲ್ಲಿ ಈ ಸತ್ಯಾಗ್ರಹಗಳೂ ಸೇರಿಕೊಂಡು ಬ್ರಿಟಿಷರು ದೇಶ ಬಿಟ್ಟು ಹೊರಡಬೇಕಾಯಿತು. ಇಂದು ಗಾಂಧಿಯ ಅನುಯಾಯಿಗಳೆಂದು ಹೇಳಿಕೊಳ್ಳುತ್ತಿರುವವರು ಮೇಲೆ ಹೆಸರಿಸಿದಂತಹ ದೇಶಪ್ರೇಮಿಗಳನ್ನು ಕಡೆಗಣಿಸುತ್ತಿರುವುದು ನಿಜಕ್ಕೂ ಅಕ್ಷಮ್ಯ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಶತ್ರುಗಳ ವಿರುದ್ಧ ತಕ್ಕ ರೀತಿಯಲ್ಲಿ ವರ್ತಿಸಬೇಕಾಗುತ್ತದೆ. ನೆರೆ ದೇಶ ನಮ್ಮ ಸೈನಿಕರ ರುಂಡಗಳನ್ನು ಕಡಿದು ಚೆಲ್ಲುವಾಗ, ಅಹಿಂಸೆಯ ಮಂತ್ರ ಜಪಿಸಿದರೆ ಅದು ಹೇಡಿತನವೆನಿಸುತ್ತದೆ.
     ಇಂದು ಆಡಳಿತದಲ್ಲಿ ಇರುವ ಹೆಚ್ಚಿನ ಜನಪ್ರತಿನಿಧಿಗಳಾದರೂ ಎಂತಹವರು? ಕೋಟಿ ಕೋಟಿ ಹಣವನ್ನು ಅಕ್ರಮ ರೀತಿಯಲ್ಲಿ ಸಂಗ್ರಹಿಸಿದವರು, ದೇಶದ ಸಂಪತ್ತನ್ನು ಲೂಟಿ ಮಾಡಿದವರು, ಭೂಗತ ದೊರೆಗಳು/ಅವರ ಕೃಪಾಪೋಷಿತರು. ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಕರಿ ಕಾರ್ಮೋಡದಲ್ಲಿನ ಬೆಳ್ಳಿಮಿಂಚಿನಂತೆ ಸಜ್ಜನ ರಾಜಕಾರಣಿಗಳೂ ಇದ್ದರೂ, ಅವರು ಮೂಲೆಗೆ ಒತ್ತರಿಸಲ್ಪಟ್ಟಿದ್ದಾರೆ. ಇಂತಹ ಬಲಾಢ್ಯರುಗಳು ಎಂತಹ ಪ್ರಬಲ ಜನಹೋರಾಟವನ್ನೂ ಹತ್ತಿಕ್ಕುವ ಸಾಮರ್ಥ್ಯ ಹೊಂದಿದ್ದಾರೆ. ಸಿ.ಬಿ.ಐ., ಪೋಲಿಸ್, ಅಧಿಕಾರಿಗಳನ್ನು ದಾಳಗಳಾಗಿ ಬಳಸಿಕೊಂಡು ವಿರೋಧಿಗಳನ್ನು ಹತ್ತಿಕ್ಕುತ್ತಾರೆ, ಸಾಧ್ಯವಾದರೆ ಕೊಂಡುಕೊಂಡೂಬಿಡುತ್ತಾರೆ. ಭಂಡತನವನ್ನು ಎಗ್ಗಿಲ್ಲದೆ ಪ್ರದರ್ಶಿಸಿ ತಮ್ಮ ವಿರುದ್ಧ ಯಾರಾದರೂ ಮಾತನಾಡಿದರೆ ಹುಷಾರ್ ಎಂಬ ಸಂದೇಶವನ್ನು ರವಾನಿಸುತ್ತಾರೆ. ಸಾಮಾನ್ಯ ಜನರು ಹೋರಾಡುವುದಿರಲಿ, ಮಾತನಾಡಲೂ ಹಿಂಜರಿಯುವ ಪರಿಸ್ಥಿತಿ ಇದೆ. ಇದನ್ನು ಅಹಿಂಸಾ ಮಾರ್ಗದಿಂದ ಸರಿದಾರಿಗೆ ತರಬಹುದೆ? ಹಾಗೆಂದು ಹಿಂಸಾಮಾರ್ಗದಿಂದಲೂ ಪರಿಹಾರ ಸಾಧ್ಯವಿಲ್ಲ. ಹಿಂಸಾಮಾರ್ಗದಿಂದ ಬದಲಾವಣೆ ತರಬಯಸುವ ನಕ್ಸಲರು, ಕಮ್ಯೂನಿಸ್ಟರು ಜನರಿಂದಲೂ ದೂರವಾಗುವುದಲ್ಲದೆ, ಇತರರ ಪ್ರಾಣಹರಣದ ಜೊತೆಗೆ ತಮ್ಮ ಜೀವಗಳನ್ನೂ ಪಣಕ್ಕಿಡಬೇಕಾಗುತ್ತದೆ. ಜನರಿಂದ ಸ್ವತಃ ದೂರವಾಗಿ, ತಾವೂ ಒಂದೊಮ್ಮೆ ಹತರಾಗಿ ಸಾಧಿಸುವುದಾದರೂ ಏನನ್ನು?
     ಮಾರ್ಟಿನ್ ಲೂಥರ್ ಕಿಂಗ್ ಹೇಳುತ್ತಾರೆ: "ಹಿಂಸೆಯಿಂದ ವರ್ಣಭೇದವನ್ನು ಹತ್ತಿಕ್ಕುವುದು ಅವ್ಯವಹಾರಿಕ ಮತ್ತು ಅನೈತಿಕ. ಅದು ಅನುಭವಿಸಿದವರಲ್ಲಿ ಕಹಿಯನ್ನು, ನಾಶ ಮಾಡುವವರಲ್ಲಿ ಕ್ರೂರತೆಯನ್ನು ಉಂಟುಮಾಡುತ್ತದೆ".  ಇದನ್ನು ಒಪ್ಪದ ಜಾರ್ಜ್ ಜಾಕ್ಸನ್ ಹೇಳುತ್ತಾರೆ: "ಅಹಿಂಸಾ ವಿಧಾನ ಒಂದು ಸುಳ್ಳು ಆದರ್ಶ. ಅದು ವಿರೋಧಿಗಳು ನ್ಯಾಯ, ನೀತಿಗಳನ್ನು ಮಾನ್ಯ ಮಾಡುವರೆಂದು ಆಶಿಸುತ್ತದೆ. ಅವರು ಅಂತಹ ಮನೋಭಾವದವರಾಗಿರದಿದ್ದರೆ ಮತ್ತು ನ್ಯಾಯ, ನೀತಿ, ಧರ್ಮ ಪಾಲಿಸಿದರೆ ಪ್ರಯೋಜನವಿಲ್ಲವೆಂದಾದರೆ, ಅವರ ಪ್ರತಿಕ್ರಿಯೆ ಸಕಾರಾತ್ಮಕವಾಗಿರುವುದಿಲ್ಲ". ಎರಡೂ ಹೇಳಿಕೆಗಳು ಪರಸ್ಪರ ವಿರುದ್ಧವಾಗಿದ್ದರೂ ಎರಡರಲ್ಲೂ ಸತ್ಯಾಂಶವಿದೆ. ಹಾಗಾದರೆ ಏನು ಮಾಡಬೇಕು? ಮಧ್ಯಮ ಮಾರ್ಗ ಅತ್ಯುತ್ತಮವಾಗಿದೆ. ಜಾಣನಿಗೆ ಮಾತಿನ ಪೆಟ್ಟಾದರೆ ಕೋಣನಿಗೆ ದೊಣ್ಣೆಯ ಪೆಟ್ಟೇ ಬೀಳಬೇಕು. ಸಮಯ, ಸಂದರ್ಭ, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸುವುದೇ ಒಳ್ಳೆಯದು. ಅಹಿಂಸೆ ಸಮಸ್ಯೆಯನ್ನು ಇತ್ಯರ್ಥಪಡಿಸದೆ ಕೇವಲ ಮುಂದೂಡುವದಕ್ಕಾಗಿ ಬಳಸುವ ಅಸ್ತ್ರವಾದರೆ, ವೈಯಕ್ತಿಕವಾಗಿ ನಾನು ಅಂತಹ ಸಂದರ್ಭದಲ್ಲಿ ಹಿಂಸೆಯನ್ನು ಬೆಂಬಲಿಸುತ್ತೇನೆ. ಭ್ರಷ್ಠರನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಪ್ರಶ್ನಿಸುವ ಎದೆಗಾರಿಕೆಯನ್ನು ಜನರು ಬೆಳೆಸಿಕೊಳ್ಳಬೇಕಿದೆ. ಇಂತಹ ಕೆಲಸ ಮಾಡುವವರನ್ನು ಇದೆಲ್ಲಾ ನಮಗೇಕೆ ಎಂದು ಸುಮ್ಮನಿರದೆ ಬೆಂಬಲಿಸುವ ಕನಿಷ್ಠ ಕಾರ್ಯವನ್ನಾದರೂ ನಾವು ಮಾಡಬೇಕಿದೆ. ದುಷ್ಟರು, ಭ್ರಷ್ಠರು ಪೆಟ್ಟು ತಿನ್ನುವ ಸಂದರ್ಭದಲ್ಲಿ ಸಜ್ಜನರೆನಿಸಿಕೊಂಡವರೂ ಮೂಕಪ್ರೇಕ್ಷಕರಾಗಿರದೆ ತಮ್ಮ ಪಾಲಿನ ಪೆಟ್ಟನ್ನೂ ಕೊಡಲು ಹಿಂಜರಿಯಬಾರದು. ಅಹಿಂಸೆ ಅತ್ಯುತ್ತಮವಾದ ಜೀವನವಿಧಾನ. ಆದರೆ, ಅದನ್ನು ಭಂಡರು, ನೀಚರು, ಸ್ವಾರ್ಥಿಗಳ ವಿರುದ್ಧ ಬಳಸುವುದು ಕಷ್ಟ. ಅವರಿಗೆ ಅವರ ರೀತಿಯಲ್ಲೇ ಉತ್ತರಿಸಬೇಕಾಗುತ್ತದೆ. ಕೃಷ್ಣನಂತಹ ಶ್ರೇಷ್ಠ ರಾಜನೀತಿಜ್ಞ, ಚಾಣಕ್ಯನಂತಹ ಮೇಧಾವಿಗಳು ಬೋಧಿಸಿರುವುದು ಇದನ್ನೇ. ಅಹಿಂಸಾಮಾರ್ಗ ನಮ್ಮ ಜೀವನವಿಧಾನವಾಗಲಿ. ಆದರೆ ಹಿಂಸೆಯನ್ನು ವಿನಾಕಾರಣ ಸಹಿಸದಿರುವ ಮನೋಭಾವವೂ ನಮ್ಮದಿರಲಿ.
-ಕ.ವೆಂ. ನಾಗರಾಜ್.
***************
ದಿನಾಂಕ 11.04.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: