ಈ ಬದುಕು ಇರುವುದು ನಡೆಯುವುದಕ್ಕೆ. ಓಡಿದರೆ, ಹಾರಿದರೆ ನೋಡುವುದನ್ನು ನೋಡದೇ ಹೋಗಬಹುದು. ನಡೆಯುತ್ತಾ ಹೋದರೆ ಸುತ್ತಲೂ ನೋಡುತ್ತಾ ಹೋಗಬಹುದು, ಅನುಭವಿಸಬಹುದು, ಆನಂದಿಸಬಹುದು, ಕಲಿಯಬಹುದು, ಕಲಿಸಬಹುದು, ಅಳಬಹುದು, ನಗಬಹುದು, ಒಟ್ಟಿನಲ್ಲಿ ಬದುಕಬಹುದು! ಬನ್ನಿ, ನಡೆಯೋಣ, ಒಟ್ಟಿಗೇ ನಡೆಯೋಣ. ಅತಿ ವೇಗದಲ್ಲಿ ಧಾವಿಸಬೇಕಾಗಿರುವ ಇಂದಿನ ದಿನಗಳಲ್ಲಿ ಇದು ಅವಾಸ್ತವಿಕವಾಗಿ ತೋರಬಹುದು. ಆದರೆ, ಅತಿ ವೇಗದಲ್ಲಿ ಓಡಬೇಕಾಗಿರುವ ಪರಿಸ್ಥಿತಿಯಲ್ಲಿ ನಾವು ಕಳೆದುಕೊಳ್ಳುತ್ತಿರುವುದು ಕಡಿಮೆಯೇನಲ್ಲ. ಈ ಅತಿವೇಗ ಸಮೀಪದಲ್ಲಿರುವವರನ್ನೂ ಕಾಣದಿರುವಂತೆ ಮಾಡುತ್ತದೆ. ಏನನ್ನು ಪಡೆಯಲು ಓಡುತ್ತಿದ್ದೇವೆಯೋ ಅದು ಸಮೀಪದಲ್ಲೇ ಇದ್ದರೂ ಕಾಣಿಸದಾಗುತ್ತದೆ. ಓಡಿ ಓಡಿ ದಣಿದಾಗ ನಿಂತು ನೋಡಿದರೆ ನಾವು ಎಲ್ಲಿಂದ ಓಡಲು ಹೊರಟಿದ್ದೆವೋ ಆ ಜಾಗದಲ್ಲೇ ಇರುವುದನ್ನು ಕಂಡು ಅವಾಕ್ಕಾಗುತ್ತೇವೆ. ಅಷ್ಟಾಗಿದ್ದರೆ ಪರವಾಗಿಲ್ಲ, ಮೊದಲಿದ್ದ ಜಾಗದಿಂದ ಇನ್ನೂ ಹಿಂದಕ್ಕೆ ಹೋಗಿದ್ದರೆ? ಅಷ್ಟೊಂದೆಲ್ಲಾ ಓಡಿದ್ದು ವ್ಯರ್ಥವಾಯಿತಲ್ಲಾ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಇಲ್ಲಿ ನಡೆಯುವುದು/ಓಡುವುದು/ಹಾರುವುದುಗಳನ್ನು ನಮ್ಮ ಬದುಕಿನ ಶೈಲಿಗೆ ಪರ್ಯಾಯ ಪದಗಳಾಗಿ ಬಳಸಿರುವೆ. ನಾವು ನಡೆಯುತ್ತಾ ಹೋದಂತೆ, ಮನುಷ್ಯನ ಅತಿ ಒಳ್ಳೆಯ ಮತ್ತು ಅತಿ ಕೆಟ್ಟ ಸ್ವಭಾವಗಳ - ಕೇವಲ ಬೇರೆಯವರದಲ್ಲ, ನಮ್ಮದೂ ಕೂಡ - ಪರಿಚಯವೂ ಆಗುತ್ತದೆ. ನಡೆಯುತ್ತಿದ್ದರೆ ಈ ಜಗತ್ತಿನ ಅಗಾಧತೆ, ವಿಶಾಲತೆ, ಪ್ರೀತಿಯ ಹರವನ್ನು ಕಣ್ಣಾರೆ ಕಂಡು ಅನುಭವಿಸಬಹುದು. ನಡೆಯುತ್ತಿದ್ದರೆ, ಸೂರ್ಯೋದಯ, ಸೂರ್ಯಾಸ್ತ, ಆಗಸದಲ್ಲಿನ ಚಂದ್ರ, ತಾರೆಗಳು, ನದಿಗಳು, ಸಮುದ್ರ, ಹಾರುವ ಹಕ್ಕಿಗಳನ್ನು ಕಂಡು ಕಣ್ತುಂಬಿಕೊಳ್ಳಬಹುದು. ಅತಿ ವೇಗ ಸಂಬಂಧಗಳನ್ನು ದೂರ ಮಾಡಬಹುದು, ಆದರೆ, ಸಾಮಾನ್ಯ ನಡಿಗೆ ಒಟ್ಟುಗೂಡಿಸಬಲ್ಲದು.
ಅಗತ್ಯವಿರುವಷ್ಟು ಮಾತ್ರ ಹೊಂದುವುದರಲ್ಲಿನ ಸುಖ, ಸಂತೋಷಗಳು, ಬೇಕುಗಳನ್ನು ಹೆಚ್ಚಿಸಿಕೊಳ್ಳುವದರಲ್ಲಿ ಇರುವುದಿಲ್ಲವೆಂದು ಗೊತ್ತಾಗುವುದು ನಡೆಯುವುದರಿಂದ. ಕಡಿಮೆ ಭಾರವಿದ್ದಷ್ಟೂ ನಡೆಯುವುದು ಸುಲಭ. ಜೀವನ ಸರಳವಾಗಿದೆ, ಅದನ್ನು ಓಡಿ ಸಂಕೀರ್ಣಗೊಳಿಸಿಕೊಳ್ಳಬೇಕೇಕೆ? ಮೋಡ ಹೆಚ್ಚು ಮಳೆ ಸುರಿಸುವಂತೆ ಮಾಡಲಾರೆವು, ಸೂರ್ಯನ ಬಿಸಿಲಿನ ತಾಪ ಕಡಿಮೆಯಾಗುವಂತೆ ಮಾಡಲಾರೆವು. ಅವು ಪ್ರಕೃತಿಯ ಕೊಡುಗೆಗಳು, ಬೇಕಾದರೆ ತೆಗೆದುಕೊಳ್ಳಬಹುದು, ಬೇಡವಾದರೆ ಬಿಡಬಹುದು! ಇಂತಹ ಕೊಡುಗೆಗಳು ನಮಗೆ ಇಷ್ಟವಾಗಲಿ, ಇಲ್ಲದಿರಲಿ ಅವನ್ನು ಸಮಭಾವದಿಂದ ಸ್ವೀಕರಿಸುವ ಮನೋಭಾವ ನಡೆಯುವುದರಿಂದ ಬರುತ್ತದೆ. ಹಳ್ಳಿಯ ಒಬ್ಬ ದನಗಾಹಿ ದನಗಳನ್ನು ತಂದೆಯ ಪ್ರೀತಿಯಿಂದ ಕಾಣುತ್ತಾನೆ, ಒಂದು ಮಗು ಆಗಸದಲ್ಲಿನ ನಕ್ಷತ್ರಗಳನ್ನು ಬಹಳ ಕಾಲ ತನ್ಮಯತೆಯಿಂದ ಕಂಡು ಸಂತಸಪಡುತ್ತದೆ. ಅಲ್ಲಿ ಬದುಕು ನಡೆಯುತ್ತದೆ, ಧಾವಿಸುವುದಿಲ್ಲ.
ನಡೆದಾಗ ದಣಿವಾಗುತ್ತದೆ, ನೀರಡಿಕೆಯಾಗುತ್ತದೆ, ಹಸಿವಾಗುತ್ತದೆ, ಗುರಿ ದೂರವೆನಿಸಿದಾಗ ನಿರಾಶೆಯೂ ಮೂಡುತ್ತದೆ. ಕೆಲವೊಮ್ಮೆ ನೀರೂ ಸಿಗದೆ ಬಸವಳಿಯಬೇಕಾಗುತ್ತದೆ. ಆಗ ನಾವು ಬದುಕಿನ ವಾಸ್ತವತೆಯನ್ನು ಎದುರಿಸುವ ಶಕ್ತಿಯನ್ನು, ಒಳಗೆ ಹುದುಗಿರುವ ಚೇತನವನ್ನು ಎಬ್ಬಿಸುವ ಕಲೆಯನ್ನು ಕಲಿತುಕೊಳ್ಳುತ್ತೇವೆ. ಕೆಲವೊಮ್ಮೆ ಬೇಕಾಗಿದ್ದಕ್ಕಿಂತ ಹೆಚ್ಚು ಸಿಕ್ಕಾಗ ಹೃದಯ ಕೃತಜ್ಞತೆಯಿಂದ ಭಾರವಾಗುತ್ತದೆ. ಬದುಕನ್ನು ಅದು ಬಂದಂತೆ ಸ್ವೀಕರಿಸುವ ಕಲೆ ನಡೆಯುವವರದಾಗುತ್ತದೆ. ಕಷ್ಟವಾದರೂ ನಡೆಯುವುದನ್ನು ನಿಲ್ಲಿಸಬಾರದೆಂಬುದಕ್ಕೆ ಈ ಪುಟ್ಟ ಕಥೆ ನಿದರ್ಶನವಾಗುತ್ತದೆ. ಪತಿ-ಪತ್ನಿ ಒಂದು ದೊಡ್ಡ ಬೆಟ್ಟವನ್ನು ಬೇರೆ ಬೇರೆ ದಿಕ್ಕುಗಳಿಂದ ಹತ್ತಲು ತೊಡಗಿರುತ್ತಾರೆ ಎಂದು ಭಾವಿಸೋಣ. ಅರ್ಧ ಬೆಟ್ಟ ಹತ್ತಿದಾಗ ಪತಿಗೆ ಇನ್ನು ಹತ್ತಲು ಸಾಧ್ಯವಿಲ್ಲವೆನ್ನಿಸಿ ಕುಳಿತುಕೊಳ್ಳುತ್ತಾನೆ. ಆಗ ಅಲ್ಲಿಗೆ ಹಾರಿ ಬಂದ ಗುಬ್ಬಚ್ಚಿಯೊಂದು ಉಲಿಯುತ್ತದೆ, 'ಏಳು, ನಿಲ್ಲಬೇಡ. ಅಲ್ಲಿ ನಿನ್ನ ಹೆಂಡತಿ ನಿನ್ನನ್ನು ಬೆಟ್ಟದ ತುದಿಯಲ್ಲಿ ಕಾಣಲು ಕಾತರಿಸಿದ್ದಾಳೆ'. ಅವನು ಗಡಬಡಿಸಿ ಎದ್ದು ಮುಂದೆ ಏರತೊಡಗುತ್ತಾನೆ. ಅತ್ತ ಕಡೆ ಅವನ ಹೆಂಡತಿ ಸಹ ಅರ್ಧ ದಾರಿಯಲ್ಲೇ ಬಸವಳಿದು ಇನ್ನು ಹತ್ತಲು ಸಾಧ್ಯವೇ ಇಲ್ಲವೆಂಬ ಸ್ಥಿತಿ ತಲುಪಿರುತ್ತಾಳೆ. ಆ ಗುಬ್ಬಚ್ಚಿ ಅವಳ ಬಳಿ ಹೋಗಿ ಅದೇ ಸಂದೇಶ ಕೊಡುತ್ತದೆ. ಪತ್ನಿ ಸಹ ಚೈತನ್ಯ ಒಟ್ಟುಗೂಡಿಸಿಕೊಂಡು ಪುನಃ ಬೆಟ್ಟ ಏರತೊಡಗುತ್ತಾಳೆ. 'ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂಬ ವಿವೇಕವಾಣಿ ನೆನಪಾಯಿತಲ್ಲವೇ?
ನಡೆಯುತ್ತಾ ಹೋದಂತೆ, ವಿಶಾಲ ವಿಶ್ವದ ಎದುರು ಅಲ್ಪಚೇತನರಾದ ನಮ್ಮತನದ ಅರಿವಾಗುತ್ತದೆ, ಅಂತರಂಗ ಚುರುಕಾಗುತ್ತದೆ. ದೇವನ ಪ್ರತಿಫಲಾಪೇಕ್ಷೆಯಿಲ್ಲದ ಶುದ್ಧ ಪ್ರೀತಿಯ ಅನುಭವವಾಗುತ್ತದೆ. ಏನನ್ನಾದರೂ ಕೊಡಬೇಕೆಂದರೆ ನಮ್ಮಲ್ಲಿ ಏನಾದರೂ ಇರಬೇಕು. ಎಲ್ಲಾ ವಸ್ತುಗಳಿಗೂ ಬೆಲೆಯಿದೆ. ಆದರೆ, ಕರುಣೆ, ಪ್ರೀತಿ, ವಿಶ್ವಾಸಗಳಿಗೆ ಬೆಲೆ ಕಟ್ಟಲಾಗುವುದಿಲ್ಲ. ಅವನ್ನಾದರೂ ಕೊಡುವ ಮನಸ್ಸು ಬರುವುದು ನಡೆಯುವುದರಿಂದಲೇ! ನಡೆಯುವ ಹಳ್ಳಿಗಳಲ್ಲಿ ಅಪರಿಚಿತರಿಗೂ ಅವು ಸಿಗುತ್ತವೆ. ಓಡುವ ನಗರಗಳಲ್ಲಿ ಪರಿಚಿತರಿಗೂ ಅವು ಅಲಭ್ಯ. ತಮಗೇ ಊಟಕ್ಕೆ ತೊಂದರೆಯಿದ್ದರೂ, ಹಳ್ಳಿಗರು ಸಾಲ ತಂದಾದರೂ ಆತಿಥ್ಯ ಮಾಡುತ್ತಾರೆ. ನಗರಿಗರು ಯಾರಾದರೂ ಬರುವ ಸೂಚನೆ ಕಂಡರೆ, ಅವರು ಬಾರದಂತೆ ನೆಪಗಳನ್ನು ಮುಂದೊಡುತ್ತಾರೆ. ನಮ್ಮಲ್ಲೇ ಪ್ರೀತಿಯ ಕೊರತೆಯಿದ್ದರೆ ಕೊಡುವುದಾದರೂ ಹೇಗೆ? ನಗರದಲ್ಲಿ ಕಸಕ್ಕೂ ಬೆಲೆಯಿದೆ. ಬೆಲೆ ತೆರದೇ ಅಲ್ಲಿ ಏನೂ ಸಿಗುವುದಿಲ್ಲ. ಆದರೆ, ಹಳ್ಳಿಯ ಒಬ್ಬ ಬಡ ಹಣ್ಣಿನ ವ್ಯಾಪಾರಿ ಬಳಲಿದ ಅಪರಿಚಿತ ದಾರಿಹೋಕನನ್ನು ಕಂಡರೆ ಕರುಣೆಯಿಂದ ಒಂದು ಹಣ್ಣನ್ನು ಕೊಡುವ ಮನಸ್ಸು ಹೊಂದಿರುತ್ತಾನೆ.
ಇತರರಿಗೆ ಪ್ರತಿಫಲಾಪೇಕ್ಷೆಯಿಲ್ಲದ ಪ್ರೀತಿ, ವಿಶ್ವಾಸಗಳನ್ನು ಕೊಡಬಲ್ಲೆವಾದರೆ, ನಾನುವಿನಿಂದ ನಾವುಗೆ ಬದಲಾಗುತ್ತೇವೆ ಮತ್ತು ಪರಸ್ಪರ ಹೆಚ್ಚು ಆತ್ಮೀಯರಾಗುತ್ತೇವೆ. ಸುತ್ತಮುತ್ತಲಿನವರೊಡನೆ ಸೌಹಾರ್ದತೆಯಿಂದ ಬಾಳುವುದರ ಸಂತೋಷ ಹೆಚ್ಚಿನದು. ಸೌಹಾರ್ದತೆ ನಡೆಯುವ ಕಾಲುಗಳಂತಿರಬೇಕು. ಗಮನಿಸಿದ್ದೀರಾ? ಒಂದು ಕಾಲು ನಡೆಯುತ್ತಿದ್ದರೆ, ಇನ್ನೊಂದು ಕಾಲು ಆ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತದೆ. ಸಮನ್ವಯದ ತತ್ವ ನಡೆಯುವುದರಲ್ಲಿದೆ. ಒಬ್ಬ ಅರ್ಹ ವ್ಯಕ್ತಿಗೆ ಸಹಾಯ ಮಾಡಿದೆವೆಂದುಕೊಳ್ಳೋಣ. ಹಾಗೆ ಮಾಡಿ ನಾವು ಸಹಾಯ ಮಾಡಿದೆವೋ, ಮಾಡಿಕೊಂಡೆವೋ? ಅರ್ಥವಾಗಲಿಲ್ಲವೇ? ಈ ಸಂದರ್ಭ ನೆನಪಿಸಿಕೊಳ್ಳೋಣ. ಒಂದು ಮಗುವಿಗೆ ಇಷ್ಟಪಡುವ ಚಾಕೊಲೇಟನ್ನು ಕೊಟ್ಟೆವು ಅಂದುಕೊಳ್ಳೋಣ. ಆ ಮಗುವಿಗೆ ಆಗುವ ಸಂತೋಷ, ಅದರ ಕಣ್ಣಿನ ಹೊಳಪನ್ನು ಕಂಡು ನಮಗೆ ಖುಷಿಯಾಗುವುದೋ ಇಲ್ಲವೋ? ಅದು ನಾವು ಕೊಟ್ಟದ್ದೋ, ಪಡೆದದ್ದೋ? ಪಡೆಯುವುದಕ್ಕಾಗಿ ಕೊಟ್ಟದ್ದು ಎಂದರೆ ಸಮಂಜಸ.. ತುಂಬಿ ತುಳುಕಿರುವ ಬಸ್ಸಿನಲ್ಲಿ ಕಷ್ಟಪಟ್ಟು ನಿಂತಿರುವ ಒಬ್ಬ ವೃದ್ಧರಿಗೆ ಕುಳಿತ ಸೀಟಿನಿಂದ ಎದ್ದು ಅವರಿಗೆ ಕುಳಿತುಕೊಳ್ಳಲು ಅನುಕೂಲ ಮಾಡಿಕೊಡುವುದರಲ್ಲೂ ಕೊಟ್ಟು ಪಡೆಯುವ ಸುಖವಿದೆ, ಏನೋ ಒಳ್ಳೆಯದು ಮಾಡಿದೆವೆಂದು ಮನ ಹಿಗ್ಗುವ/ಸಮಾಧಾನವಾಗುವ ಕ್ರಿಯೆಯಿದೆ. ನಡೆಯುವುದರಿಂದ ಕೇವಲ ಬದುಕಿನಲ್ಲಿ ಮುನ್ನಡೆಯುವುದಿಲ್ಲ, ಬೆಳೆಯುತ್ತಾ ಮುಂದೆ ಹೋಗುತ್ತೇವೆ.
ಮನುಷ್ಯನ ಮನಸ್ಸು ಈಗಿರುವ ಸ್ಥಿತಿಗಿಂತ ಮುಂದುವರೆಯಲು ಚಡಪಡಿಸುತ್ತಿರುತ್ತದೆ. ಆಗ ಅಂತರಂಗದ ಅನಿಸಿಕೆಗಳಿಗೆ ಮಹತ್ವ ಕೊಡದೆ, ಬೇರೆಯದೇ ಆದ ನಡೆಗಳು ರೂಪುಗೊಳ್ಳುತ್ತವೆ, ನಡೆಯುವ ದಾರಿ ತಪ್ಪುತ್ತದೆ. ಕಾಲ ಸರಿದಂತೆ ಮನಸ್ಸು ಕಲುಷಿತಗೊಳ್ಳುತ್ತದೆ, ಮೊದಲಿನ ನಂಬಿಕೆಗಳು, ಮೌಲ್ಯಗಳು ಸವಕಲಾಗುತ್ತವೆ. ಹಿಂದೆ ಹಿರಿಯರು ಇರುವೆ ಗೂಡುಗಳ ಬಳಿ ಸಕ್ಕರೆ, ಹಿಟ್ಟುಗಳನ್ನು ಉದುರಿಸುತ್ತಿದ್ದುದನ್ನು ಕಂಡಿದ್ದೇನೆ. ಈಗ ಅದೇ ಗೂಡುಗಳಿಗೆ ಇಂದಿನವರು ಡಿ.ಡಿ.ಟಿ./ಗೆಮಾಕ್ಸಿನ್ ಪುಡಿ ಹಾಕುತ್ತಾರೆ. ಆದರೆ, ಸರಿದಾರಿಯಲ್ಲಿ ನಡೆಯುತ್ತಾ ಹೋದಂತೆ ಜಗತ್ತು ಸ್ಪಷ್ಟವಾಗುತ್ತಾ ಹೋಗುತ್ತದೆ. ನಾನು ಮತ್ತು ನಾವುಗಳ, ಅಂತರಂಗದ ಮತ್ತು ಬಹಿರಂಗದ, ಸ್ವಾರ್ಥದ ಮತ್ತು ಸ್ವಾರ್ಥರಾಹಿತ್ಯದ ವ್ಯತ್ಯಾಸಗಳ ಕುರಿತು ಹೊಂದಿದ್ದ ಮೊದಲಿನ ಅನಿಸಿಕೆಗಳು ಪರಿಷ್ಕೃತಗೊಳ್ಳುತ್ತಾ ಹೋಗುತ್ತದೆ. ನಡೆಯುತ್ತಾ ಹೋದಂತೆ ಎದುರಾಗುವ ಹಲವಾರು ಪ್ರಶ್ನೆಗಳು, ಸಮಸ್ಯೆಗಳಿಗೆ ನಾವು ಕೊಡುವ ಉತ್ತರಗಳು ನಾವು ಪ್ರಪಂಚವನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ, ನಮ್ಮ ಸ್ಥಾನ ಎಲ್ಲಿದೆ ಎಂಬುದನ್ನು ನಿರ್ಧರಿಸುತ್ತವೆ. ಪ್ರಾರಂಭದಲ್ಲೇ ಹೇಳಿರುವಂತೆ ನಡೆಯುವುದು ಎಂಬುದನ್ನು ಬದುಕಿನ ಶೈಲಿ ಎಂಬುದಕ್ಕೆ ಪರ್ಯಾಯವಾಗಿ ಬಳಸಿರುವೆ. ವಿಚಿತ್ರ ಆದರೂ ಸತ್ಯವೆಂದರೆ, ಸರಿಯಾಗಿ ನಡೆಯುವವರು ಓಡುವವರಿಗಿಂತ, ಹಾರುವವರಿಗಿಂತ ಮುಂದೆ ಇರುತ್ತಾರೆ! ಬನ್ನಿ, ನಾವು ಬದಲಾಗೋಣ, ಜಗತ್ತು ತನ್ನಿಂದ ತಾನೇ ಬದಲಾದೀತು! ಬದಲಾಗುತ್ತದೋ, ಇಲ್ಲವೋ ನಮ್ಮ ಕಣ್ಣಿಗಂತೂ ಬದಲಾಗುತ್ತದೆ! ನಡೆಯೋಣ, ಒಟ್ಟಿಗೇ ನಡೆಯೋಣ!! ನಡೆಯುವಾಗ ಈ ವೇದ ಮಂತ್ರ ನಮಗೆ ದಾರಿ ದೀಪವಾಗಲಿ.
ಓಂ ವಿಶ್ವಾನಿ ದೇವ ಸವಿತರ್ದುರಿತಾನಿ ಪರಾ ಸುವ | ಯದ್ಭದ್ರಂ ತನ್ನ ಆ ಸುವ || [ಯಜು.೩೦.೩.]
ಅರ್ಥ: ಜಗದುತ್ಪಾದಕನಾದ ಸರ್ವದಾತಾ ಪ್ರಭುವೇ, ಸಮಸ್ತ ದುರ್ನಡತೆಗಳನ್ನೂ, ಪಾಪಗಳನ್ನೂ ದೂರ ಮಾಡು. ಯಾವುದು ಒಳ್ಳೆಯದೋ, ಕಲ್ಯಾಣಕರವೋ ಅದನ್ನು ನಮ್ಮಲ್ಲಿ ಉಂಟುಮಾಡು.