ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಮೇ 29, 2017

ಸಜ್ಜನಿಕೆ ಮತ್ತು ಕ್ಷಾತ್ರತೆ



    ಇತ್ತೀಚೆಗೆ ಕಾಶ್ಮೀರ ಕಣಿವೆಯಲ್ಲಿ ಸೈನ್ಯದ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದವರ ಪೈಕಿ ಒಬ್ಬನನ್ನು ಹಿಡಿದು ಜೀಪಿನ ಮುಂಭಾಗದಲ್ಲಿ ಕಟ್ಟಿಹಾಕಿ ಗುಂಪಿನಿಂದ ಆಗುತ್ತಿದ್ದ ಮಾರಣಾಂತಿಕ ಹಲ್ಲೆಯಿಂದ ಸಿಬ್ಬಂದಿ ತಪ್ಪಿಸಿಕೊಂಡ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಸುಮಾರು ೧೨೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಲ್ಲೆಕೋರರ ಗುಂಪಿನಿಂದ ಸಂಭವಿಸಬಹುದಾಗಿದ್ದ ೧೨ ಸೇನಾ ಸಿಬ್ಬಂದಿಯ ಜೀವಹಾನಿ ತಪ್ಪಿಸುವ ಸಲುವಾಗಿ ಸಾಂದರ್ಭಿಕವಾಗಿ ತೆಗೆದುಕೊಂಡ ಆ ನಿರ್ಧಾರ ಸರಿಯೆಂಬುದು ಬಹುತೇಕರ ಅಭಿಪ್ರಾಯವಾಗಿದೆ. ಮಾನವ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದವರೂ ಇದ್ದಾರೆ. ಸಾಮಾಜಿಕ ಅಂತರ್ಜಾಲ ತಾಣಗಳು, ಫೇಸ್ ಬುಕ್, ಟ್ಡಿಟರ್‌ಗಳಲ್ಲಿ ಸಹ ಚರ್ಚೆ ಗಂಭೀರ ಸ್ವರೂಪದಲ್ಲಿ ನಡೆದಿದೆ, ವೈಯಕ್ತಿಕ ಕೆಸರೆರಚಾಟಗಳೂ ನಡೆದಿವೆ. ಪಾಕಿಸ್ತಾನದ ನೇರ ಹಸ್ತಕ್ಷೇಪವೂ ಸಮಸ್ಯೆ ಬಿಗಡಾಯಿಸಲು ಕಾರಣವೆಂಬುದು ಸುಸ್ಪಷ್ಟ. ಸೇನೆಯ ಸ್ಥೈರ್ಯ ಕುಸಿಯುವಂತೆ ಮಾಡುವ ಕೆಲವು ಮಾಧ್ಯಮಗಳ ಜನರು ಹಾಗೂ ಒಂದು ಕಾಲದಲ್ಲಿ ಗಣ್ಯರೆನ್ನಿಸಿಕೊಂಡಿದ್ದವರ ಹೇಳಿಕೆಗಳು, ಪ್ರಯತ್ನಗಳು ಮಾತ್ರ ದೇಶದ ಹಿತದ ದೃಷ್ಟಿಯಿಂದ ಸಮರ್ಥನೀಯವೆನ್ನಿಸುವುದಿಲ್ಲ. ಟ್ವಿಟರಿನಲ್ಲಿ ಬರುವ ಹೇಳಿಕೆಗಳೂ ಒಂದಕ್ಕೊಂದು ಟಾಂಗ್ ಕೊಡುವ ರೀತಿಯಲ್ಲಿವೆ. ಉದಾಹರಿಸಬೇಕೆಂದರೆ, ಒಬ್ಬರು ಬರೆಯುತ್ತಾರೆ: ಕಣ್ಣು ಮುಚ್ಚಿಕೊಂಡು ಕಲ್ಪಿಸಿಕೊಳ್ಳಿ. ನಿಮ್ಮ ಕುಟುಂಬದ ಒಬ್ಬ ಸದಸ್ಯರನ್ನೇ ಸೈನ್ಯದ ಜೀಪಿನ ಮುಂದೆ ಕಟ್ಟಿ ಅಶಾಂತ ಸ್ಥಿತಿಯಿರುವ ಎಡೆಯಲ್ಲಿ ಕರೆದೊಯ್ಯುತ್ತಿದ್ದಾರೆಂದು ಕಲ್ಪಿಸಿಕೊಳ್ಳಿ. ಈಗ ಕಣ್ಣು ಬಿಡಿ. ನಿಮಗೆ ಏನು ಅನ್ನಿಸುತ್ತದೆ? ನಿಜವಾಗಿ ಹೇಳಿ. ಇದಕ್ಕೆ ಪ್ರತಿಕ್ರಿಯೆಯೂ ಬರುತ್ತದೆ: ನಿಮ್ಮ ತಂದೆ ಜೀಪು ಚಾಲನೆ ಮಾಡುತ್ತಿದ್ದಾರೆ. ನಿಮ್ಮ ತಾಯಿ ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದಾರೆ. ಸಾವಿರಾರು ಜನರು ಗುಂಪು ಕೂಡಿ ಜೀಪಿನ ಮೇಲೆ ಕಲ್ಲುಗಳನ್ನು ತೂರುತ್ತಿದ್ದಾರೆ ಎಂಬ ಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ಈಗ ನಿಮಗೆ ಏನು ಅನ್ನಿಸುತ್ತದೆ? ನಿಜವಾಗಿ ಹೇಳಿ. ಹಿಂದಿನ ದಶಕಗಳಲ್ಲಿ ಸಮಸ್ಯೆಯ ಇತ್ಯರ್ಥಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಜೊತೆಗೆ ದೇಶಹಿತಕ್ಕಿಂತ ರಾಜಕೀಯ ಲಾಭದ ಕಡೆಗೆ ಹೆಚ್ಚಿನ ಗಮನ ಕೊಟ್ಟದ್ದೇ ಸಮಸ್ಯೆ ಉಲ್ಬಣಗೊಂಡು, ನುಸುಳುಕೋರರದೇ ಪ್ರಾಬಲ್ಯವಾಗಲು ಕಾರಣವಾಗಿದೆಯೆಂದರೆ ಅದರಲ್ಲಿ ಸುಳ್ಳಿಲ್ಲ. ಇಂತಹುದೇ ಸಮಸ್ಯೆ ಪಶ್ಚಿಮ ಬಂಗಾಳದಲ್ಲೂ ಇದೆ. ಪಶ್ಚಿಮ ಬಂಗಾಳವನ್ನೂ ಬಾಂಗ್ಲಾದೇಶದೊಂದಿಗೆ ಸೇರಿಸಿಕೊಳ್ಳುವ ಹುನ್ನಾರವೂ ಬಾಂಗ್ಲಾದೇಶೀಯರ ಅಕ್ರಮ ನುಸುಳುವಿಕೆಯ ಹಿನ್ನೆಲೆಯಲ್ಲಿದೆ. ಈಗ ದಿಟ್ಟ ಮತ್ತು ಧೃಢ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದೆ ಕೇರಳದಲ್ಲೂ ಈ ಸ್ಥಿತಿ ಬರಲಿದೆ. ಕ್ಯಾನ್ಸರ್ ರೋಗದಂತೆ ದೇಶದ ವಿವಿದೆಡೆಗಳಲ್ಲಿ ಸಮಸ್ಯೆ ಹರಡಿದರೂ ಆಶ್ಚರ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇಶದ ಸಮಗ್ರತೆ ಮತ್ತು ಹಿತಕ್ಕೆ ಧಕ್ಕೆ ಬರುವಂತಹ ನಡವಳಿಕೆಗಳನ್ನು ಪ್ರದರ್ಶಿಸುವವರ ವಿರುದ್ಧವೂ ಕಠಿಣ ಕ್ರಮ ಅನುಸರಿಸುವುದು ಕಾಲದ ಅಗತ್ಯವಾಗಿದೆ.
     ಭಾರತ ಶಾಂತಿಪ್ರಿಯ ರಾಷ್ಟ್ರ. ತಾನಾಗಿಯೇ ಅದು ನೆರೆ ರಾಷ್ಟ್ರಗಳ ವಿರುದ್ಧ ಯುದ್ಧಕ್ಕೆ ಹೋಗಿಲ್ಲ. ಆದರೆ ಕೇವಲ ರಕ್ಷಣಾತ್ಮಕ ನೀತಿ ಅನುಸರಿಸಿದರೆ ಅದು ಒಂದು ರೀತಿಯಲ್ಲಿ ಸೋತಂತೆಯೇ ಎಂಬುದು ಇದುವರೆಗಿನ ಅನುಭವ. ಇಂತಹ ನೀತಿಯ ಅನುಸರಣೆಯಿಂದ ಭಾರತ ಕಳೆದುಕೊಂಡಿದ್ದೇ ಹೆಚ್ಚು. ಹಿಂದಿನ ಸರ್ಕಾರಗಳು ಸೇನೆಯ ಕೈಗಳನ್ನು ಕಟ್ಟಿಹಾಕಿದ್ದವು. ಒಂದು ಗುಂಡು ಹಾರಿಸಲೂ, ಪ್ರತೀಕಾರ ತೆಗೆದುಕೊಳ್ಳಲೂ ರಾಜಕಾರಣಿಗಳು ಬಿಡುತ್ತಿರಲಿಲ್ಲ. ಸೇನೆಗೆ  ಪ್ರತೀಕಾರ ತೆಗೆದುಕೊಳ್ಳಲು ಮುಕ್ತ ಹಸ್ತ ನೀಡಿದ್ದಿದ್ದರೆ ಸಮಸ್ಯೆ ತಾರ್ಕಿಕ ಅಂತ್ಯ ಕಂಡು ಬಹಳ ವರ್ಷಗಳಾಗಿರುತ್ತಿದ್ದವು. ಆದರೆ, ರಾಜಕೀಯ ಲಾಭವನ್ನು ಮಾತ್ರ ಗಮನದಲ್ಲಿರಿಸುವ ರಾಜಕಾರಣಿಗಳು ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥವಾಗದ ಹಂತಕ್ಕೆ ತಂದು ನಿಲ್ಲಿಸಿವೆ. ಪಾಕಿಸ್ತಾನ ತಾನು ಆಕ್ರಮಿಸಿದ ಕಾಶ್ಮೀರದ ಪ್ರಮುಖ ಭಾಗವನ್ನು ಚೀನಾಕ್ಕೆ ಧಾರೆಯೆರೆದಿದೆ. ತನ್ನ ವಶದಲ್ಲಿರುವ ಭಾಗವನ್ನು ಕಾಶ್ಮೀರದೊಳಗೆ ಉಗ್ರರನ್ನು ನುಸುಳಿಸಲು ಬಳಸುತ್ತಿದೆ. ಪಾಕ್ ಸೇನೆ ನುಸುಳುವಿಕೆಗೆ ಬೆಂಗಾವಲಾಗಿದೆ. ಇಂತಹ ಸ್ಥಿತಿಯಲ್ಲಿ ಕಾಶ್ಮೀರ ಕಣಿವೆಯಲ್ಲಿದ್ದ ಮೂಲ ನಿವಾಸಿಗಳನ್ನು ಹೊರದೂಡಿರುವ ನುಸುಳುಕೋರರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಸರ್ಕಾರವೂ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಅತ್ಯಂತ ತಾಳ್ಮೆಯಿಂದ ದೇಶ ಕಾಯುವ ಕೆಲಸ ಮಾಡುತ್ತಿರುವ ಯೋಧರು ಜೀವವನ್ನು ಅಂಗೈಯಲ್ಲಿ ಹಿಡಿದು ಕರ್ತವ್ಯ ಮಾಡುತ್ತಿದ್ದಾರೆ. ಹೊರದೂಡಲ್ಪಟ್ಟಿರುವ ಕಾಶ್ಮೀರಿ ಪಂಡಿತರ ಪುನರ್ವಸತಿ ಆಗಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಸೇನೆಯ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವಾಗಬೇಕಿದೆ ಮತ್ತು ಮಾನವ ಹಕ್ಕು ಉಲ್ಲಂಘನೆ, ಇತ್ಯಾದಿ ಮುಖವಾಡದ ಹಿನ್ನೆಲೆಯಲ್ಲಿ ಉಗ್ರರ ಮತ್ತು ನೆರೆರಾಷ್ಟ್ರದ ಪರವಾಗಿ ಪರೋಕ್ಷ ಬೆಂಬಲ ನೀಡುವ ಅನವಶ್ಯಕ ಮತ್ತು ಅನಪೇಕ್ಷಿತ ಹೇಳಿಕೆಗಳನ್ನು ಕೊಡುವ ಕಪಟಿಗಳನ್ನು ನಿಯಂತ್ರಿಸಬೇಕಿದೆ. ಪಾಕಿಸ್ತಾನ ನಿರಂತರವಾಗಿ ತನ್ನ ಚಟುವಟಿಕೆಗಳನ್ನು ನೇರ ಮತ್ತು ಪರೋಕ್ಷವಾಗಿ ಭಾರತದ ವಿರುದ್ಧ ನಡೆಸುತ್ತಲೇ ಇರುವಾಗ, ಶಾಂತಿಮಂತ್ರದ ಪಾಠ ಜಪಿಸಲು ಹೇಳುವ ಇಂತಹ ಕಪಟ ಮಾನವತಾವಾದಿಗಳು ಅಪಾಯಕಾರಿಗಳು ಎನ್ನಲೇಬೇಕಾಗುತ್ತದೆ. ಭಾರತಕ್ಕೆ ಹಾನಿಯಾದರೆ ಅದಕ್ಕೂ ಟೀಕಿಸುವುದು, ತಿರುಗಿಬಿದ್ದರೆ ಮಾನವ ಹಕ್ಕು ಉಲ್ಲಂಘನೆ ಅನ್ನುವುದು ಅವರ ನೀತಿಯಾಗಿದೆ.
     ಶಾಂತಿ ನಮ್ಮ ಮಂತ್ರವಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಒಮ್ಮುಖವಾದರೆ ಪ್ರಯೋಜನವಿಲ್ಲ. ನಾವಾಗಿ ಆಕ್ರಮಣ ಮಾಡಬೇಕಿಲ್ಲ. ಆದರೆ ಏಟಿಗೆ ಪ್ರತಿ ಏಟು ಎಂಬುದು ನೀತಿಯಾಗಲೇಬೇಕು. ಹಾಗಾದರೆ ಮಾತ್ರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದೀತು. ಸಮಸ್ಯೆ ಇತ್ಯರ್ಥಕ್ಕೆ ದಾರಿಗಳು ಕಂಡಾವು. ಭಯೋತ್ಪಾದಕರಿಗೆ ನಮ್ಮ ದೇಶದೊಳಗಿನವರೇ ಬೆಂಬಲ ಕೊಡುತ್ತಿರುವುದು ಈಗ ಮುಚ್ಚುಮರೆಯಾಗಿ ಉಳಿದಿಲ್ಲ. ಅಂತಹ ಸಹಕಾರ ಕೊಡುವ ಜನರನ್ನು ಗುರುತಿಸಿ ನಿಯಂತ್ರಿಸಲೇಬೇಕು. ರಾಜಕೀಯದ ಕಾರಣಕ್ಕಾಗಿ ಮತ್ತು ಮತಗಳಿಕೆಯ ಸಲುವಾಗಿ ಇದನ್ನು ನಿರ್ಲಕ್ಷಿಸಿದ್ದೇ ಆದರೆ ಗಂಡಾಂತರ ತಪ್ಪಿದ್ದಲ್ಲ. ದೇಶ ಹಲವಾರು ಸಮಸ್ಯೆಗಳಿಂದ ಬಳಲಿ ಬೆಂಡಾಗಿರುವಾಗ, ದೇಶದ ಬೆಂಗಾವಲಿಗಿರುವ ಸೇನೆಯ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳಬೇಕಾಗಿರುವುದು ನಾಗರಿಕರೆನ್ನಿಸಿಕೊಂಡವರೆಲ್ಲರ ಕರ್ತವ್ಯವಾಗಿದೆ. ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ನಾವು ಸಜ್ಜನ ಸುಬ್ಬಣ್ಣರಾದರೆ ಪ್ರಯೋಜನವಿಲ್ಲ. ನಮಗೆ ಹೋರಾಡಲು, ಪ್ರತಿಭಟಿಸಲು ಶಕ್ತಿಯಿಲ್ಲದಿರಬಹುದು. ಆದರೆ ಅನ್ಯಾಯದ ವಿರುದ್ಧ ಧ್ವನಿಯೆತ್ತುವವರಿಗೆ ಬೆಂಬಲವಾಗಿ ಇರಲಾದರೂ ಸಾಧ್ಯವಿದೆಯಲ್ಲವೇ? ಅಂತಹವರ ಪರವಾಗಿ ನಿಲ್ಲುವವರ ಸಂಖ್ಯೆ ಹೆಚ್ಚಾಗಿದ್ದರೂ ತೋರ್ಪಡಿಸಿಕೊಳ್ಳಲು ಸಜ್ಜನಿಕೆ, ಹಿಂಜರಿಕೆ, ಭಯ ಅವರನ್ನು ತಡೆಯುತ್ತಿರಬಹುದು. ಇದನ್ನು ಮೆಟ್ಟಿ ನಿಂತರೆ, ಈಗ ಕ್ಷೀಣವಾಗಿ ಕೇಳಿಬರುತ್ತಿರುವ ಧ್ವನಿ ಮುಂದೊಮ್ಮೆ ಶತ್ರುವನ್ನು ನಡುಗಿಸುವ ಸಿಂಹಘರ್ಜನೆಯಾಗುತ್ತದೆ. ಸಜ್ಜನ ಶಕ್ತಿ ಮತ್ತು ಕ್ಷಾತ್ರ ಶಕ್ತಿ ಒಟ್ಟುಗೂಡಿದರೆ ದುಷ್ಟಶಕ್ತಿಗಳ ಆಟ ನಡೆಯುವುದಿಲ್ಲ.
-ಕ.ವೆಂ.ನಾಗರಾಜ್.

ಭಾನುವಾರ, ಮೇ 28, 2017

ಸಸ್ಯಾಹಾರವೋ? ಮಾಂಸಾಹಾರವೋ?

     ಈ ಲೇಖನ ಸಸ್ಯಾಹಾರದ ಪರವಾಗಲೀ, ಮಾಂಸಾಹಾರದ ವಿರುದ್ದದ್ದಾಗಲೀ ಅಲ್ಲವೆಂದು ಮೊದಲಿಗೇ ಸ್ಪಷ್ಟಪಡಿಸಿಬಿಡುತ್ತೇನೆ. ಈಗ ಗೋವಧೆ ನಿಷೇಧದ ಕ್ರಮದಿಂದಾಗಿ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಅದರ ಜೊತೆಗೇ ಸಸ್ಯಾಹಾರ ಮತ್ತು ಮಾಂಸಾಹಾರದ ಕುರಿತೂ ವಾಗ್ವಾದಗಳಾಗುತ್ತಿವೆ. ಗೋವಧೆ ನಿಷೇಧಿಸುವುದು ನಮ್ಮ ಆಹಾರದ ಹಕ್ಕನ್ನು ಕಸಿದುಕೊಂಡಂತೆ ಎಂದು ವ್ಯಗ್ರವಾಗಿರುವವರೂ ಇದ್ದಾರೆ. ಮಾಂಸಾಹಾರದ ಪರ ವಾದಿಸುವವರು ಸಸ್ಯಗಳಿಗೂ ಜೀವವಿದೆ, ಸಸ್ಯಾಹಾರವೂ ಹಿಂಸೆಯಿಂದ ಕೂಡಿದೆ ಎಂದು ವಾದ ಮುಂದಿಡುತ್ತಾರೆ. ನನ್ನ ದೃಷ್ಟಿಕೋನದಿಂದ ಆಹಾರದ ವಿಚಾರದಲ್ಲಿ ನನಗೆ ಅನ್ನಿಸಿದ್ದನ್ನು ಮುಂದಿಡುವ ಪ್ರಯತ್ನ ಮಾಡಿದ್ದು, ಇದನ್ನೇ ಎಲ್ಲರೂ ಒಪ್ಪಬೇಕೆಂಬ ಒತ್ತಾಯ ಇಲ್ಲವೇ ಇಲ್ಲ. ಎಲ್ಲರೂ ಒಪ್ಪುತ್ತಾರೆಂಬ ಭ್ರಮೆಯೂ ನನಗಿಲ್ಲ. ಸಸ್ಯಾಹಾರಿಗಳಿಗಿಂತ ಮಾಂಸಾಹಾರಿಗಳೇ ಬಹುಸಂಖ್ಯಾತರು! ಮಾಂಸಾಹಾರಿಗಳು ಹೇಳಿದ್ದೇ ಸರಿ ಎಂಬುದಾಗಲೀ, ಸಸ್ಯಾಹಾರಿಗಳ ವಾದವೇ ಸರಿ ಎಂದಾಗಲೀ ಒಪ್ಪಲಾಗದು ಎಂಬುದೇ ಈಗ ಸರಿ.
     ಬಲಶಾಲಿಯಾದವನು ಬದುಕುತ್ತಾನೆ ಎಂಬುದು ಪ್ರಕೃತಿಯ ನಿಯಮ. ಈ ಜಗತ್ತಿನಲ್ಲಿ ಬದುಕಲು ಒಬ್ಬರು ಇನ್ನೊಬ್ಬರ ಮೇಲೆ ಅವಲಂಬಿಸಿರಲೇಬೇಕು. ನಾನು ಪ್ರಾಣಿಯನ್ನು ತಿನ್ನುತ್ತೇನೋ, ಸಸ್ಯವನ್ನು ತಿನ್ನುತ್ತೇನೋ, ಒಟ್ಟಿನಲ್ಲಿ ಜೀವಹಾನಿಯಂತೂ ಆಗುತ್ತದೆ. ಏನು ತಿನ್ನಬೇಕು ಅನ್ನುವುದನ್ನು ಮಾನವನೇ ವಿವೇಚಿಸಿ ನಿರ್ಧರಿಸಬೇಕು. ಸುಮಾರು ೮೪ ಲಕ್ಷ ವಿವಿಧ ಬಗೆಯ ಜೀವಜಂತುಗಳು ಇರುವ ಈ ಪ್ರಪಂಚದಲ್ಲಿ ಮಾನವನೂ ಒಂದು ಜೀವಜಂತು! ಪಶು-ಪಕ್ಷಿ, ಕ್ರಿಮಿ-ಕೀಟಗಳಿಗೂ ಮಾನವನಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಮಾನವನಿಗೆ ವಿವೇಚನೆ ಮಾಡುವ ಶಕ್ತಿಯಿದೆ. ಆತ ಮಾಡಬಲ್ಲ, ಮಾಡದಿರಲೂ ಬಲ್ಲ ಅಥವ ಬೇರೇನನ್ನೋ ಮಾಡಲುಬಲ್ಲ. ಇದೇ ಅವನ ವಿಶೇಷತೆ. ಎಲ್ಲಾ ಬಗೆಯ ಜೀವಮಾತ್ರರಲ್ಲಿ ಮಾನವ ಇತರ ಜೀವಿಗಳಿಗಿಂತ ಭಿನ್ನ. ಅವನಿಗೆ ಒಳ್ಳೆಯದು ಯಾವುದು, ಕೆಟ್ಟದು ಯಾವುದು ಎಂದು ತುಲನೆ ಮಾಡುವ ಶಕ್ತಿಯಿದೆ. ಅದು ಅವನಿಗೆ ಆಯ್ಕೆಯ ಸ್ವಾತಂತ್ರ್ಯವನ್ನೂ ಕೊಟ್ಟಿದೆ. ಸಸ್ಯಗಳು ಕೇವಲ ದೇಹ ಮತ್ತು ಬಹುಷಃ ಪ್ರಾರಂಭಿಕ ಹಂತದ ಮನಸ್ಸು ಹೊಂದಿರಬಹುದು. ಪ್ರಾಣಿಗಳು ದೇಹ ಮತ್ತು ಭಾವನೆಗಳು ಹಾಗೂ ನೋವನ್ನು ವ್ಯಕ್ತಪಡಿಸುವ ಮನಸ್ಸು ಹೊಂದಿರುವುದರ ಜೊತೆಗೆ ಪ್ರಾರಂಭಿಕ ಹಂತದ ಬುದ್ಧಿಶಕ್ತಿ ಹೊಂದಿರಬಹುದು. ಮಾನವ ದೇಹ ಮಾತ್ರವಲ್ಲ, ಮನಸ್ಸು ಮತ್ತು ಪರಿಶೀಲಿಸುವ, ನಿರ್ಧರಿಸುವ ಮತ್ತು ಆಯ್ಕೆ ಮಾಡುವ ಉತ್ತಮ ಬೆಳವಣಿಗೆ ಹೊಂದಿದ ಬುದ್ಧಿಶಕ್ತಿಯನ್ನೂ ಹೊಂದಿದ್ದಾನೆ. 
     ಪ್ರಾಣಿಗಳನ್ನು ಕೊಂದು ತಿನ್ನುವುದು ನಮ್ಮ ಹಕ್ಕು ಎನ್ನುವುದಾದರೆ ಆ ಹಕ್ಕನ್ನು ಕೊಟ್ಟವರು ಯಾರು? ಪ್ರಾಣಿಗಳು ನಮಗೂ ನಿಮ್ಮಂತೆ ಜೀವಿಸುವ ಹಕ್ಕು ಇಲ್ಲವೇ ಎಂದು ಕೇಳಲು ಬರುವಂತಿದ್ದರೆ ಕೇಳುತ್ತಿದ್ದವು. ಆದರೆ ವಿವೇಚನೆಯಿರುವ ಮಾನವನಿಗಂತೂ ಈ ಪ್ರಶ್ನೆಯನ್ನು ಹಾಕಿಕೊಳ್ಳಲು ಸಾಧ್ಯವಿದೆ. ಉತ್ತರವನ್ನೂ ಅವನೇ ಕೊಟ್ಟುಕೊಳ್ಳಬೇಕು. ಯಾರಿಗೇ ಆಗಲಿ, ಇನ್ನೊಂದು ಜೀವದ ಮೇಲೆ ತನ್ನ ಹಕ್ಕು ಇದೆ ಎಂದು ಸಾಧಿಸಲಾಗದು. ಅನಿವಾರ್ಯತೆ ಅಥವ ಅಗತ್ಯತೆ ಇದೆ ಎಂದು ಹೇಳಬಹುದಷ್ಟೆ. ಒಂದು ಹುಲಿ ಬೇಟೆಯಾಡಿ ತಿಂದರೆ ಅದು ಪಾಪ ಮಾಡಿದಂತೆ ಆಗುವುದಿಲ್ಲ. ಏಕೆಂದರೆ ಅದರ ಬುದ್ಧಿಶಕ್ತಿ ಪ್ರಾರಂಭಿಕ ಹಂತದಲ್ಲಿದ್ದು, ಅದು ಕೊಲ್ಲುವ ಮುನ್ನ, ಕೊಲ್ಲಬೇಕೋ, ಬೇಡವೋ, ಮಾಂಸಾಹಾರಿಯಾಗಿರಬೇಕೋ,  ಸಸ್ಯಾಹಾರಿಯಾಗಿರಬೇಕೋ  ಎಂದು ವಿಮರ್ಶಿಸುತ್ತಾ ಕೂರುವುದಿಲ್ಲ. ಅದಕ್ಕೆ ಹಸಿವಾದಾಗ, ಪ್ರಾಕೃತಿಕ ಬೇಡಿಕೆ ಈಡೇರಿಸಿಕೊಳ್ಳಲು ತನ್ನ ಬೇಟೆಯನ್ನು ಕೊಲ್ಲುತ್ತದೆ, ತಿನ್ನುತ್ತದೆ ಮತ್ತು ಅಗತ್ಯವಿರುವಷ್ಟು ತಿಂದ ನಂತರ ಉಳಿದುದನ್ನು ಬಿಡುತ್ತದೆ. ಅದಕ್ಕೆ ಹೊಟ್ಟೆಬಾಕತನ ಇಲ್ಲ. ಅದು ಅದರ ಸ್ವಧರ್ಮ. ಅದು ಸುಂದರ ಪರಿಸರ ವ್ಯವಸ್ಥೆಯನ್ನು ಪಾಲಿಸುತ್ತದೆ. ಮನುಷ್ಯನೊಬ್ಬ ಮಾತ್ರ ತನ್ನ ಹೊಟ್ಟೆಬಾಕತನದಿಂದ ಪರಿಸರ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾನೆ. ನಾನು ಸಸ್ಯಾಹಾರಿಯಾಗಿರಬೇಕೇ, ಮಾಂಸಾಹಾರಿ ಆಗಬೇಕೆ? ಎಂಬ ಪ್ರಶ್ನೆ ಅವನೊಬ್ಬನಿಂದ ಮಾತ್ರ ಬರಲು ಸಾಧ್ಯ. ಏಕೆಂದರೆ ಅವನಿಗೆ ವಿವೇಚನೆ ಮಾಡುವ ಬುದ್ಧಿಶಕ್ತಿ ಇದೆ ಮತ್ತು ಅವನು ಹೊಟ್ಟೆ ತುಂಬಿಸಿಕೊಳ್ಳಲು ಇತರರನ್ನು ನೋಯಿಸಲು ಬಯಸದಿರುವುದರಿಂದ ಈ ಪ್ರಶ್ನೆ ಬರುತ್ತದೆ. ಆತನಿಗೆ ನೋವು ಎಂದರೆ ಏನೆಂದು ಗೊತ್ತಿದೆ. 
     ಸಸ್ಯಗಳೂ ಜೀವಿಗಳೇ, ಅವುಗಳಿಗೆ ನೋವುಂಟು ಮಾಡಬಹುದೇ? ಎಂದು ಕೇಳಬಹುದು. ಯಾವುದೇ ಜೀವ ವೈವಿಧ್ಯಕ್ಕೆ ಹಾನಿಯುಂಟು ಮಾಡದೆ ಬದುಕಲು ಸಾಧ್ಯವಿದ್ದರೆ ಅದು ಅತ್ಯುತ್ತಮ, ಆದರೆ ಅದು ಸಾಧ್ಯವಿಲ್ಲ. ಜೀವನ ಜೀವದ ಮೇಲೆ ಜೀವಿಸಿದೆ - ಅದು ಪ್ರಕೃತಿಯ ನಿಯಮ. ವಿವೇಚನಾಶಕ್ತಿಯುಳ್ಳ ಮನುಷ್ಯನಾಗಿ ನನ್ನ ಪಾತ್ರವೆಂದರೆ ನಾನು ಬದುಕಿರುವ ಸಲುವಾಗಿ  ಪ್ರಕೃತಿಗೆ  ಕನಿಷ್ಠ ಹಾನಿಯಾಗುವಂತೆ ನೋಡಿಕೊಳ್ಳುವುದು. ಆದ್ದರಿಂದ ಬದುಕಲಿಕ್ಕಾಗಿ ತಿನ್ನುವುದು ಮತ್ತು ತಿನ್ನಲಿಕ್ಕಾಗಿ ಬದುಕದಿರುವುದು ನಿರ್ಣಾಯಕ ಅಂಶವಾಗುತ್ತದೆ. ಅಪಾಯ ಕಂಡು ಬಂದಾಗ ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಓಡುತ್ತವೆ. ಆದರೆ ಗಿಡ-ಮರಗಳಿಗೆ ಆ ಅವಕಾಶವಿಲ್ಲ. ಆದರೆ ದೇವರು ಕರುಣಾಮಯಿಯಾಗಿದ್ದಾನೆ. ನೋವನ್ನು ಸಹಿಸುವ ಅಥವ ಗೊತ್ತಾಗದಂತಹ ಶಕ್ತಿ ಅವುಗಳಿಗೆ ಇದೆ. ಒಂದು ರೆಂಬೆಯನ್ನು ಕತ್ತರಿಸಿದರೆ ಅದು ಮತ್ತೆ ಚಿಗುರಬಲ್ಲದು. ಆದರೆ ಒಂದು ಪ್ರಾಣಿಯ ಕಾಲು ಮುರಿದರೆ ಮತ್ತೆ ಬರಲಾರದು. ಮರವನ್ನು ಬುಡದವರೆಗೂ ಕತ್ತರಿಸಿದರೂ ಅದು ಮತ್ತೆ ಚಿಗುರೊಡೆದು ಬೆಳೆಯಬಲ್ಲದು. ಆದರೆ ಪ್ರಾಣಿಯ ವಿಷಯದಲ್ಲಿ ಹಾಗಿಲ್ಲ. ಕಸಿ ಮಾಡುವ ಕ್ರಮದಲ್ಲಿ ಗಿಡಮರಗಳನ್ನು ಅಲ್ಲಲ್ಲಿ ಕತ್ತರಿಸುತ್ತಾರೆ. ಆಗ ಮತ್ತಷ್ಟು ಸೊಂಪಾಗಿ ಗಿಡ ಬೆಳೆಯುತ್ತದೆ. ಮರದಲ್ಲಿನ ಹಣ್ಣುಗಳು ಪೂರ್ಣವಾಗಿ ಕಳಿತ ನಂತರ ತಾನಾಗಿ ಬೀಳುವ ಸಮಯದಲ್ಲಿ ಕಿತ್ತು ಉಪಯೋಗಿಸುವುದರಿಂದ ಕನಿಷ್ಠ ನೋವಿನ ಸಾಧ್ಯತೆಯಿದೆ. ಇದನ್ನು ಕೇವಲ ಉದಾಹರಣೆಗಾಗಿ ಹೇಳಿದ್ದಷ್ಟೆ. ಇಂತಹ ವಿವೇಚನೆ ಬಳಸಿ ನಮ್ಮ ಆಹಾರ ಕ್ರಮವನ್ನು ನಿರ್ಧರಿಸಿಕೊಳ್ಳಬೇಕಾದವರು ನಾವೇನೇ!
     ಡಾರ್ವಿನ್ನನ ವಿಕಾಸವಾದದಂತೆ ಜೀವಿಗಳು ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗದಿರುವಂತೆ ನೋಡಿಕೊಳ್ಳಲು ಕ್ರಮೇಣ ವಿಕಾಸ ಹೊಂದುತ್ತವೆ. ಆದರೆ ಶತಮಾನಗಳಿಂದಲೂ ಇತರ ಜೀವ ಸಂಕುಲಗಳ ಅಸ್ತಿತ್ವಕ್ಕೆ ಆಸರೆಯಾಗಿ ನಿಂತಿರುವ ಸಸ್ಯ ಸಂಕುಲ ಮಾತ್ರ ಓಡುವುದನ್ನಾಗಲೀ, ಹಾರುವುದನ್ನಾಗಲೀ ಮಾಡದೆ ಹಾಗೆಯೇ ಇದೆ. ತನ್ನ ಅಸ್ತಿತ್ವವನ್ನು ಇರುವಲ್ಲಿಯೇ ಹೇಗೆ ಮುಂದುವರೆಸಿಕೊಳ್ಳಬಹುದು ಎಂಬ ಧಾರಣಾಶಕ್ತಿ ಮಾತ್ರ ಗಳಿಸಿಕೊಂಡಿವೆ. ಪ್ರಾಣಿಗಳನ್ನು ಮಾಂಸದ ಸಲುವಾಗಿ ಸಾಕಿ ಬೆಳೆಸಲೂ ಸಸ್ಯ ಸಂಪತ್ತೇ ಬೇಕು. ಮಾಂಸಾಹಾರದಿಂದ ಪ್ರಾಣಿ ಮತ್ತು ಸಸ್ಯ ಸಂಪತ್ತುಗಳೆರಡೂ ನಶಿಸುತ್ತವೆ. ಮಾಂಸಾಹಾರಿಗಳು ಮಾಂಸ ತಿನ್ನುವುದನ್ನು ಬಿಡಬೇಕೆಂದು ಹೇಳಲು ಸಾಧ್ಯವಿಲ್ಲ. ಅದನ್ನು ಅವರವರೇ ನಿರ್ಧರಿಸಬೇಕು. ಆದರೆ ಒಂದನ್ನಂತೂ ಹೇಳಬಹುದು. ತಾವು ತಿನ್ನಬಯಸುವ ಪ್ರಾಣಿಗಳನ್ನು ಕೊಂದು ತಿನ್ನುವವರೆಗಾದರೂ ಮಾನವತೆಯಿಂದ ಕಾಣಲು ಹೇಳಬಹುದು. ಅವುಗಳಿಗೆ ಸರಿಯಾಗಿ ಆಹಾರ ಕೊಡದಿರುವುದು, ಒರಟಾಗಿ ನಡೆಸಿಕೊಳ್ಳುವುದು, ಸಾಗಾಣಿಕೆ ಮಾಡುವಾಗ ಸರಕುಗಳಂತೆ ಒತ್ತೊತ್ತಾಗಿ ತುಂಬಿಡುವುದು, ಹಿಂಸಿಸುವುದು, ಇತ್ಯಾದಿಗಳನ್ನಾದರೂ ಮಾಡದಿರಬಹುದಲ್ಲವೇ? ಕೇರಳದ ಕಣ್ಣೂರಿನಲ್ಲಿ ಗೋವಧೆ ನಿಷೇಧವನ್ನು ವಿರೋಧಿಸಿ ಯುವ ಕಾಂಗ್ರೆಸ್ಸಿಗರು ಬಹಿರಂಗವಾಗಿ ಗೋಹತ್ಯೆ ಮಾಡಿದ ವಿಡಿಯೋ ವೈರಲ್ ಆಗಿ ಹರಿದಾಡುತ್ತಿದೆ. ಇದರಲ್ಲಿ ಹಸುವಿನ ತಪ್ಪೇನಿದೆ? ಮನುಷ್ಯ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದು. ಪ್ರಾಣಿಗಳೇ ಗುಣದಲಿ ಮೇಲು, ಮಾನವನದಕಿಂತ ಕೀಳು ಎಂಬುದು ನಿಜವೆನಿಸುವಂತೆ ಮಾಡುವ ಇಂತಹ ಕೃತ್ಯಗಳು ಮರುಕಳಿಸಬಾರದು. ವಿವೇಚನೆ ಇರುವವರು ಯಾರೂ ಹೀಗೆ ಮಾಡಲಾರರು. 
     ಹೇಳಬಹುದಾದ ವಿಚಾರಗಳು ಬಹಳಷ್ಟಿದ್ದರೂ ಲೇಖನ ವಿಸ್ತಾರದ ಕಾರಣದಿಂದ ಕೊನೆಯ ಮಾತನ್ನು ದಾಖಲಿಸಿ ಮೊಟಕುಗೊಳಿಸುವೆ.  ನಮಗೆ ನಾವೇ ಒಂದು ಉಪಕಾರ ಮಾಡಿಕೊಳ್ಳಬಹುದು. ಅದೆಂದರೆ, ನಮ್ಮ ಅಂತರಂಗದ ಧ್ವನಿಗೆ ಕಿವಿಗೊಡುವುದು, ನಮ್ಮ ಬುದ್ಧಿಶಕ್ತಿ, ವಿವೇಚನಾ ಶಕ್ತಿ ಏನು ಸರಿ ಎಂದು ಹೇಳುತ್ತದೆಯೋ ಹಾಗೆ ನಡೆದುಕೊಳ್ಳುವುದು. ನಮಗೆ ನಿಜಕ್ಕೂ ಯಾವ ಆಹಾರದ ಅಗತ್ಯವಿದೆಯೋ ಅದನ್ನು ತಿನ್ನುವುದು ಮತ್ತು ಯಾವುದು ನಿಜಕ್ಕೂ ಅಗತ್ಯವಿಲ್ಲವೋ ಅದನ್ನು ಬಿಟ್ಟುಬಿಡುವುದು. 
-ಕ.ವೆಂ.ನಾಗರಾಜ್.