ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಮೇ 31, 2018

ಅಭಿವೃದ್ಧಿ ಎಂದರೆ ಏನು? ಮತ್ತು ಹೇಗೆ?


     ಅಭಿವೃದ್ಧಿಯೇ ನಮ್ಮ ಮಂತ್ರ, ವಿಕಾಸವೇ ನಮ್ಮ ತಂತ್ರ ಎಂಬ ಮಾತುಗಳನ್ನು ಧಾರಾಳವಾಗಿ ಬಳಸಲಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವಾಗ, ನಮ್ಮ ಅವದಿಯಲ್ಲಿ ಹೀಗೆ ಮಾಡಿದೆವು, ಹಾಗೆ ಮಾಡಿದೆವು ಎಂದು ದೊಡ್ಡ ಪಟ್ಟಿಯನ್ನೇ ಜನರ ಮುಂದಿಡುತ್ತಾರೆ. ಪತ್ರಿಕೆಗಳಲ್ಲಿ, ವಿವಿಧ ಮಾಧ್ಯಮಗಳಲ್ಲಿ ತಮ್ಮ ಸಾಧನೆಗಳ ಕುರಿತು ಜಾಹಿರಾತುಗಳನ್ನು ಕೊಡುತ್ತಾರೆ. ತಹಸೀಲ್ದಾರನಾಗಿ ಹಲವು ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿದ್ದ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಜನರ ನಡುವಿನ ಸಂಪರ್ಕಕೊಂಡಿಯಂತೆ ಕೆಲಸ ಮಾಡಿದ, ಹಳ್ಳಿಗಳಲ್ಲಿ ಸುತ್ತಿ ಜನರ ಅಭಿಪ್ರಾಯಗಳನ್ನೂ ಹತ್ತಿರದಿಂದ ಕಂಡಿರುವ ನನಗೆ ಅಭಿವೃದ್ಧಿ ಎಂಬ ಪದದ ವ್ಯಾಖ್ಯೆ ಬದಲಾಗದೆ ನಿಜವಾದ ಅಭಿವೃದ್ಧಿ ಅಸಾಧ್ಯ ಎಂಬ ಭ್ರಮನಿರಸನವೂ ಕಾಡಿದೆ. 
ಯಾರ ಅಭಿವೃದ್ಧಿ? 
    ಜನರ ಪ್ರಾಥಮಿಕ ಅವಶ್ಯಕತೆಗಳನ್ನು ಅಂದರೆ ಕುಡಿಯುವ ನೀರು, ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಇತ್ಯಾದಿ ಸಂಗತಿಗಳು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು ಅಭಿವೃದ್ಧಿಯ ಮೂಲ ತತ್ವ ಆಗಿರಬೇಕು. ಈ ಮೂಲಭೂತ ವಿಷಯಗಳಲ್ಲಿ ರಾಜಿ ಇರಬಾರದು ಮತ್ತು ಇವುಗಳನ್ನು ಎಲ್ಲಾ ರಾಜಕೀಯ ಪಕ್ಷಗಳವರೂ ತಮ್ಮ ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸಿಕೊಳ್ಳುವ ಪ್ರವೃತ್ತಿ ನಿಲ್ಲಬೇಕು. ವಸತಿ ಯೋಜನೆಯನ್ನೇ ಉದಾಹರಣೆಗೆ ತೆಗೆದುಕೊಂಡರೆ ಇಂದಿರಾಗಾಂಧಿ ಹೆಸರಿನಲ್ಲಿ, ರಾಜೀವಗಾಂಧಿ ಹೆಸರಿನಲ್ಲಿ, ವಾಜಪೇಯಿಯವರ ಹೆಸರಿನಲ್ಲಿ ಹೀಗೆ ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿ ಇರುತ್ತದೋ ಅವರ ನಾಯಕರುಗಳ ಹೆಸರಿನಲ್ಲಿ ವಸತಿ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಬಡವರಿಗೆ ಸೂರು ಅನ್ನುವ ಈ ಉದ್ದೇಶದ ಕಾರ್ಯಕ್ರಮ ಪಕ್ಷದ್ದಂತೂ ಅಲ್ಲ. ಹಣ ಸರ್ಕಾರದ್ದು, ಹೆಸರು ಮಾತ್ರ ರಾಜಕೀಯ ನೇತಾರರದು. ಕಳೆದ ಆರು ದಶಕಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಸಾಧನೆ ಎಂದರೆ ಪ್ರತಿಯೊಂದು ಯೋಜನೆಗೂ ಅವರ ನೇತಾರರದೇ ಹೆಸರು! ಇಂದಿರಾಗಾಂಧಿ, ರಾಜೀವಗಾಂಧಿಯವರ ಹೆಸರಿನಲ್ಲಿ ಎಷ್ಟು ಯೋಜನೆಗಳಿವೆಯೋ, ಅವರ ಹೆಸರಿನಲ್ಲಿ ಇರುವ ಸರ್ಕಾರಿ, ಅರೆಸರ್ಕಾರಿ ಸಂಸ್ಥೆಗಳು ಎಷ್ಟೋ ಎಂಬುದನ್ನು ಲೆಕ್ಕ ಹಾಕುವುದೇ ಕಷ್ಟ. ವಸತಿ ಯೋಜನೆಗಳು (ನಿವೇಶನ ಮಂಜೂರಾತಿಯೂ ಸೇರಿ) ರಾಜಕೀಯ ಪಕ್ಷದವರ ಗುತ್ತಿಗೆಯಂತೆ ಆಗಿರುವುದು ವಿಷಾದಕರ. ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಾಸಕರ ಅಧ್ಯಕ್ಷತೆಯಲ್ಲಿರುವ ಸಮಿತಿಗಳು ನಿಜವಾಗಿಯೂ ಅಗತ್ಯವಿರುವವರಿಗೆ ಯೋಜನೆಗಳ ಫಲ ಸಿಗುವುದಕ್ಕೆ ಬದಲಾಗಿ ತಮ್ಮ ಅನುಯಾಯಿಗಳಿಗೆ, ಪಕ್ಷದ ಕಾರ್ಯಕರ್ತರುಗಳಿಗೆ, ಅನರ್ಹರಿಗೆ ದಕ್ಕುವಂತೆ ಮಾಡುತ್ತಿವೆ ಎಂದರೆ ಕಠಿಣವಾಗಿ ಕಂಡರೂ ಸತ್ಯವಾಗಿದೆ. ಜೊತೆಗೆ ರಾಜಕಾರಣಿಗಳು, ಅಧಿಕಾರಿಗಳು, ನೌಕರರು, ಮಧ್ಯವರ್ತಿಗಳು ಫಲಾನುಭವಿಗಳಿಂದ ಹಣ ವಸೂಲಿಯಲ್ಲಿ ತೊಡಗುವುದೂ ಇದೆ. ಇಲ್ಲಿ ಅಭಿವೃದ್ಧಿ ಎಲ್ಲಾಯಿತು, ಯಾರದಾಯಿತು?
     ಕುಡಿಯುವ ನೀರಿನ ಯೋಜನೆಯಲ್ಲಿ  ರಾಜಕೀಯ ನುಸುಳಲೇಬಾರದು. ಆದರೆ ಆಗುತ್ತಿರುವುದೇನು? ಅವರಿಗೆ ಹೆಸರು ಬರುತ್ತದೆ ಎಂದು ಇವರು, ಇವರಿಗೆ ಕೆಟ್ಟ ಹೆಸರು ಬರಲಿ ಎಂದು ಅವರು ಪರಸ್ಪರ ಕಾಲೆಳೆಯುತ್ತಾ ಸಮಸ್ಯೆ ಇತ್ಯರ್ಥಕ್ಕಿಂತ ಹೆಚ್ಚು ಮಾಡುವುದರಲ್ಲೇ ರಾಜಕೀಯ ನೇತಾರರು ತೊಡಗಿರುವುದು ದುರದೃಷ್ಟ. ಕಾವೇರಿ, ಮಹದಾಯಿ, ಎತ್ತಿನಹೊಳೆ ಇತ್ಯಾದಿ ಸಮಸ್ಯೆಗಳು ಉಲ್ಬಣಗೊಂಡಿರುವುದೇ ರಾಜಕೀಯ ಪಕ್ಷಗಳ ನೇತಾರರ ಸಣ್ಣತನಗಳಿಂದ! ಕುಡಿಯುವ ನೀರಿನ, ನೀರಾವರಿಯ ವಿಷಯದಲ್ಲಿ ರಾಜಕೀಯ ಮಾಡದಿದ್ದರೆ ಅದೊಂದು ದೊಡ್ಡ ಸಾಧನೆ. ಇದನ್ನು ಸಾಧಿಸಲು ಸಾಧ್ಯವಾದರೆ ಇದೇ ಅಭಿವೃದ್ಧಿ! 
ಆ ಅಧಿಕಾರಿ ಏಕೆ ಆತ್ಮಹತ್ಯೆ ಮಾಡಿಕೊಂಡ?
     ಬಹಳ ವರ್ಷಗಳ ಹಿಂದಿನ ಘಟನೆಯಿದು. ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕಿನ ಸಹಾಯಕ ಕೃಷಿನಿರ್ದೇಶಕರೊಬ್ಬರು ಅಲ್ಲಿನ ಶಾಸಕರ ಆಜ್ಞಾನುವರ್ತಿಯಾಗಿ ಅವರ ಇಷ್ಟಾನಿಷ್ಟಗಳನ್ನು ಅನುಸರಿಸಿ ಕೆಲಸ ಮಾಡುತ್ತಿದ್ದರು. ಒಮ್ಮೆ ಶಾಸಕರು ಅವರಿಗೆ ಹಣದ ಬೇಡಿಕೆ ಇಟ್ಟಿದ್ದಲ್ಲದೆ ಅದನ್ನು ಹೊಂದಿಸಲು ಮಾರ್ಗವನ್ನೂ ತೋರಿಸಿದರು. ಅದೆಂದರೆ ನಡೆಯದ ಕಾಮಗಾರಿಗಳಿಗೆ ಸುಳ್ಳು ಬಿಲ್ಲುಗಳನ್ನು ಸೃಷ್ಟಿಸಿ ಹಣ ಹೊಂದಿಸುವುದು! ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿಯೂ ಶಾಸಕರು ಭರವಸೆಯಿತ್ತಿದ್ದರು. ಸರಿ, ಹಣ ಹೊಂದಾಣಿಕೆಯಾಯಿತು. ಶಾಸಕರ ಮಾತಿನಂತೆ ಅಧಿಕಾರಿಗೆ ಯಾರಿಂದಲೂ ತೊಂದರೆ ಆಗಲಿಲ್ಲ. ಆದರೆ, ನಿಜವಾದ ತೊಂದರೆ ಶಾಸಕರಿಂದಲೇ ಆರಂಭವಾಗಿತ್ತು. ಶಾಸಕರು ಆಗಾಗ್ಗೆ ಹಣಕ್ಕೆ ಹೇಳಿಕಳಿಸುತ್ತಿದ್ದರು. ಕೊಡದಿದ್ದರೆ ಸುಳ್ಳುಬಿಲ್ಲುಗಳ ವಿಚಾರ ಹೊರತೆಗೆದು ಕೆಲಸಕ್ಕೆ ಸಂಚಕಾರ ತರುವುದಾಗಿ ಬೆದರಿಸುತ್ತಿದ್ದರು. ಬರುಬರುತ್ತಾ ಇದು ವಿಪರೀತಕ್ಕೆ ಇಟ್ಟುಕೊಂಡಾಗ ಆ ಅಧಿಕಾರಿ ಖಿನ್ನತೆಗೆ ಒಳಗಾಗಿ ಮೃತ್ಯುಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ವಿಷಯ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾಯಿತು. ವಿಧಾನಸಭೆಯಲ್ಲೂ ಚರ್ಚೆಯಾಯಿತು. ಮುಂದೇನಾಯಿತು? ಏನೂ ಆಗಲಿಲ್ಲ! ಮೃತ ಅಧಿಕಾರಿಯದು ತಪ್ಪಿರಲಿಲ್ಲವೆನ್ನುವಂತಿಲ್ಲ. ಆದರೆ ಆ ತಪ್ಪಿಗೆ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ನಿಜವಾದ ಅಪರಾಧಿಗೆ ಶಿಕ್ಷೆ ಆಗಲೇ ಇಲ್ಲ. ಜನರೂ ತಮಗೆ ಇದು ಸಂಬಂಧಿಸಿದ್ದಲ್ಲವೆಂಬಂತೆ ಸುಮ್ಮನಿದ್ದರು!
     ಕಣ್ಣಿಗೆ ಕಾಣುವಂತಹ ಸಾರ್ವಜನಿಕ ಕಟ್ಟಡಗಳು, ಶಾಲಾ ಕಾಲೇಜುಗಳು, ವಸತಿ ನಿಲಯಗಳು, ಸರ್ಕಾರಿ ಕಟ್ಟಡಗಳು, ಇತ್ಯಾದಿ ನಿರ್ಮಾಣಗಳನ್ನು ಸಾಧನೆಯೆಂಬಂತೆ ರಾಜಕೀಯ ನೇತಾರರು ಚಿತ್ರಗಳ ಸಹಿತ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಶಂಕುಸ್ಥಾಪನೆಗೂ ಪ್ರಚಾರ, ಉದ್ಘಾಟನೆಗೂ ಪ್ರಚಾರ! ಇಂತಹ ಕಾರ್ಯಕ್ರಮಗಳಿಗೆ ಖರ್ಚನ್ನು ಅಧಿಕಾರಿಗಳು, ಗುತ್ತಿಗೆದಾರರೇ ಭರಿಸುತ್ತಾರೆ. ಆ ಖರ್ಚಿಗೆ ಭ್ರಷ್ಠಾಚಾರದ ಮಾರ್ಗದಲ್ಲೇ ಹಣ ಹೊಂದಾಣಿಕೆಯಾಗುತ್ತದೆ. ಈ ಪ್ರಚಾರಕ್ಕೆ ಬಳಸುವ ಹಣದಿಂದಲೇ ಅಂತಹ ಮತ್ತೊಂದು ಕಾಮಗಾರಿ ಆಗಬಹುದಾಗಿರುತ್ತದೆ. ಕಟ್ಟಡಗಳು ಪೂರ್ಣಗೊಂಡರೂ ಹಲವಾರು ಕಾರಣಗಳಿಂದ ಉದ್ಘಾಟನೆಯಾಗದೆ, ಉಪಯೋಗಕ್ಕೆ ಬರದೆ ಶಿಥಿಲವಾಗಿರುವುದೂ, ಅನೈತಿಕ ಚಟುವಟಿಕೆಗಳ ತಾಣವಾಗಿರುವುದೂ ಇದೆ. ಇದಕ್ಕೆ ವ್ಯಯವಾದ ಹಣ ಎಷ್ಟು, ನಷ್ಟ ಯಾರದು ಎಂಬ ಬಗ್ಗೆ ಜನಸಾಮಾನ್ಯರು ಪ್ರಶ್ನಿಸುವಂತಾದರೆ ಅದು ಅಭಿವೃದ್ಧಿ! ಪ್ರತಿ ಕಾಮಗಾರಿ, ಅದು ಕಟ್ಟಡವಿರಬಹುದು, ರಸ್ತೆಯಿರಬಹುದು, ಏನೇ ಇರಬಹುದು, ಅದರಲ್ಲಿ ಗುತ್ತಿಗೆದಾರನ ಲಾಭ, ಅಧಿಕಾರಿಗಳು, ರಾಜಕಾರಣಿಗಳಿಗೆ ಶೇಕಡಾವಾರು ಮಾಮೂಲು ಸಂದಾಯವಾಗದೆ ಸಾಧ್ಯವೇ ಇಲ್ಲ! ಇದು ಎಲ್ಲರಿಗೂ ಗೊತ್ತಿರುವ ಬಹಿರಂಗ ರಹಸ್ಯ. ಹೀಗಾಗಿ ಆ ಕಾಮಗಾರಿಗಳ ಗುಣಮಟ್ಟವನ್ನು ಪ್ರಶ್ನಿಸುವಂತೆಯೇ ಇಲ್ಲ. ಶೇ. ೪೦ರಿಂದ ೫೦ರಷ್ಟು ಹಣ ಕಾಮಗಾರಿಗಳಿಗೆ ನಿಜವಾಗಿ ಖರ್ಚಾದರೆ ಅದು ಉತ್ತಮವೆನ್ನುವ ಮಟ್ಟದಲ್ಲಿ ಇಂದಿನ ಸ್ಥಿತಿ ಇದೆ. ಎಷ್ಟೋ ಕಾಮಗಾರಿಗಳೇ ಆಗದೆ ಹಣ ಗುತ್ತಿಗೆದಾರರ, ರಾಜಕಾರಣಿಗಳ, ಅಧಿಕಾರಗಳ ಜೇಬು ಸೇರುತ್ತಿರುವುದು ಸುಳ್ಳಲ್ಲ. ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿ ಆಗಿರುವ ಚರಂಡಿ ಕಾಮಗಾರಿಗಳ ಒಟ್ಟು ಉದ್ದ ಲೆಕ್ಕ ಹಾಕಿದರೆ ಅದು ಜಿಲ್ಲಾಕೇಂದ್ರದಿಂದ ರಾಜಧಾನಿ ಬೆಂಗಳೂರಿನವರೆಗೂ ತಲುಪುವ ಸಾಧ್ಯತೆ ಇದೆ. ಇದರ ಸತ್ಯಾಸತ್ಯತೆಯನ್ನು ಯಾರು ಬೇಕಾದರೂ ಪರಿಶೀಲಿಸಬಹುದು. ಆದರೆ ಆ ಚರಂಡಿಗಳೇ ಇರುವುದಿಲ್ಲ.
ಇದು ಅಭಿವೃದ್ಧಿಯೇ?
     ಹಾಸನದ ಸ್ಟೇಡಿಯಮ್ಮಿನಲ್ಲಿ ಒಂದು ಹೈಟೆಕ್ ಶೌಚಾಲಯ ನಿರ್ಮಿಸಿ ಸುಮಾರು ೮ ವರ್ಷಗಳಾಗಿವೆ. ಆ ಸಮಯದಲ್ಲಿ ಆ ಕಾಮಗಾರಿಗೆ ಸುಮಾರು ೮ರಿಂದ೧೦ ಲಕ್ಷ ವೆಚ್ಚ ತೋರಿಸಿರಬಹುದು, ಅಥವ ಅದಕ್ಕೂ ಹೆಚ್ಚಾಗಿರಬಹುದು. ಅದನ್ನು ಇದುವರೆವಿಗೂ ಸಾರ್ವಜನಿಕ ಉಪಯೋಗಕ್ಕೆ ತೆರೆದಿಲ್ಲ. ಏಕೆ ತೆರೆದಿಲ್ಲ ಎಂಬುದಕ್ಕೆ ಅಧಿಕಾರಿಗಳಾಗಲೀ, ಸಾರ್ವಜನಿಕರಾಗಲೀ ತಲೆ ಕೆಡಿಸಿಕೊಂಡಿಲ್ಲ. ಹಾಗೆಂದು ಅಲ್ಲಿ ಬೇರೆ ಶೌಚಾಲಯಗಳಿವೆಯೇ ಎಂದರೆ ಅದೂ ಇಲ್ಲ. ಗಂಡಸರು ಆ ಶೌಚಾಲಯದ ಗೋಡೆಯ ಬಳಿಯೇ ತಮ್ಮ ಬಾಧೆ ತೀರಿಸಿಕೊಳ್ಳುತ್ತಾರೆ. ಹೆಂಗಸರು ತಮ್ಮ ಮನೆಗಳಿಗೇ ಹೋಗಬೇಕು. ಇಷ್ಟಾದರೂ ಯಾರೂ ಗೊಣಗಾಡುವುದಿಲ್ಲವೆಂದರೆ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಬದಲಾವಣೆ ನಿರೀಕ್ಷಿಸಬಹುದೆ? ಪ್ರತಿನಿತ್ಯ ನೂರಾರು, ವಿಶೇಷ ದಿನಗಳಲ್ಲಿ ಸಾವಿರಾರು ಜನರು ಬಂದು ಹೋಗುವ ಸ್ಥಳದಲ್ಲಿನ ಪರಿಸ್ಥಿತಿಯೇ ಹೀಗಿದೆ. ಈ ಕಾಮಗಾರಿಗೆ ಆದ ವೆಚ್ಚ ವ್ಯರ್ಥವಾದಂತೆ ಅಲ್ಲವೆ? ಇದು ಅಭಿವೃದ್ಧಿಯೇ? ಜನ ಜಾಗೃತರಾಗಿದ್ದರೆ, ಆಗಿರುವ ವೆಚ್ಚ ಸರಿಯೇ ಎಂದು ಗಮನಿಸುತ್ತಿದ್ದರು, ಶೌಚಾಲಯ ತೆರೆಯುವಂತೆ ಮಾಡುತ್ತಿದ್ದರು, ತೆರೆದರೂ ಸ್ವಚ್ಚವಾಗಿ ನಿರ್ವಹಣೆಯಾಗುವಂತೆ ನಿಗಾ ವಹಿಸುತ್ತಿದ್ದರು.
     ಹಣ, ಹೆಂಡ, ಸೀರೆ, ವಸ್ತುಗಳನ್ನು ಹಂಚದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೆನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಒಬ್ಬ ಪ್ರಾಮಾಣಿಕ ವ್ಯಕ್ತಿ ಚುನಾವಣೆಗೆ ನಿಂತರೆ ಠೇವಣಿ ಉಳಿಸಿಕೊಳ್ಳವುದೂ ಅನುಮಾನ. ಇಂತಹ ಪರಿಸ್ಥಿತಿಯಲ್ಲಿ ಗೆದ್ದವರ ಉದ್ದೇಶ ಮತ್ತಷ್ಟು ಹಣ ಬಾಚಿಕೊಳ್ಳುವುದೇ ಆಗುವುದು ಸಹಜ. ಹೀಗಿರುವಾಗ ಜನರ ಅಭಿವೃದ್ಧಿ ಹೇಗೆ ಸಾಧ್ಯ? ಭ್ರಷ್ಠಾಚಾರಕ್ಕೆ ಕಡಿವಾಣ ಬೀಳದೆ ಅಭಿವೃದ್ಧಿ ಸಾಧ್ಯವೇ ಇಲ್ಲ. ಭ್ರಷ್ಠಾಚಾರ ನಿವಾರಣೆಗೆ ಪ್ರಧಾನಿ ಮೋದಿಯವರ ಹಲವಾರು ದಿಟ್ಟ ಕ್ರಮಗಳಿಗೆ ಜನಸಾಮಾನ್ಯನ ಮೆಚ್ಚುಗೆ ಇರುವುದರಿಂದಲೇ ಜನ ಅವರ ಪಕ್ಷಕ್ಕೆ ಒಲವು ತೋರಿಸುತ್ತಿದ್ದಾರೆ. ನಿಜವಾಗಿ ಅಭಿವೃದ್ಧಿ ಬಯಸುವುದಾದಲ್ಲಿ ಆಸಕ್ತ ಜನರು, ಸಾಮಾಜಿಕ ಸಂಸ್ಥೆಗಳು, ಸಂಘಟನೆಗಳು ಹಳ್ಳಿ ಹಳ್ಳಿಗಳಲ್ಲಿ, ಹಿಂದುಳಿದ ಮತ್ತು ಕೊಳಚೆ ಪ್ರದೇಶಗಳ ನಿವಾಸಿಗಳಲ್ಲಿ ಆಮಿಷಕ್ಕೆ ಒಳಗಾಗದೆ ಮತ ನೀಡುವಂತಹ ಸ್ಥಿತಿ ತರಲು ಮತ್ತು ಭ್ರಷ್ಠಾಚಾರ ನಿಯಂತ್ರಣಕ್ಕೆ ಒತ್ತುಕೊಡಲು ಜನಜಾಗೃತಿ ಮೂಡಿಸುವುದೊಂದೇ ದಾರಿಯಾಗಿದೆ. ಭ್ರಷ್ಠಾಚಾರ ಹತ್ತಿಕ್ಕದೆ ಅಭಿವೃದ್ಧಿ ಕನಸುಮನಸಿನಲ್ಲೂ ಸಾಧ್ಯವಿಲ್ಲ. ಭ್ರಷ್ಠಾಚಾರವೇ ಅಭಿವೃದ್ಧಿಗೆ ಕಂಟಕ ಮತ್ತು ಸಕಲ ಸಮಸ್ಯೆಗಳ ತಾಯಿಯಾಗಿದೆ. ಜನಜಾಗೃತಿ ಮೂಡಿಸುವುದೇ ಇಂದಿನ ಆದ್ಯತೆಯ ಕೆಲಸವಾಗಬೇಕಿದೆ. 
-ಕ.ವೆಂ.ನಾಗರಾಜ್.
**************