ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಜನವರಿ 21, 2012

ಭಾವತಂತಿ ಮೀಟಿದ ಹಾಡು

     1971-72ರಲ್ಲಿ ನಾನು ಅಂಚೆ ಇಲಾಖೆಯ ಕೆಲಸಕ್ಕೆ ಆಯ್ಕೆಯಾದಾಗ ಪ್ರಾರಂಭದಲ್ಲಿ ಮೈಸೂರಿನ ಅಂಚೆ ತರಬೇತಿ ಕೇಂದ್ರದಲ್ಲಿ ಮೂರು ತಿಂಗಳ ತರಬೇತಿ ನೀಡಿದ್ದರು. ಆ ಸಂದರ್ಭದಲ್ಲಿ ಅಂಚೆ ತರಬೇತಿ ಕೇಂದ್ರದ ಗೀತೆಯೆಂದು ಪರಿಗಣಿಸಿದ್ದ ಈ ಹಾಡನ್ನು ಆರಿಸಿದ್ದ ಪುಣ್ಯಾತ್ಮನನ್ನು ನೆನೆಸಿಕೊಳ್ಳುತ್ತೇನೆ. ಭಗತ್ ಸಿಂಗ್ ಕುರಿತಾದ ಶಹೀದ್ ಎಂಬ ಹಿಂದಿ ಚಲನಚಿತ್ರದಲ್ಲಿ  ಭಗತ್ ಸಿಂಗ್ ದೇಶಕ್ಕಾಗಿ ಹೋರಾಡಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ನಂತರ ಆತನ ಶವಮೆರವಣಿಗೆಯ ಸಂದರ್ಭದಲ್ಲಿ ಹಿನ್ನೆಲೆಗೀತೆಯಾಗಿ ಮಹಮದ್ ರಫಿಯವರು ಹಾಡಿದ್ದ ಗೀತೆ ಅದು. ಈ ಹಾಡನ್ನು ಸಾಮೂಹಿಕವಾಗಿ ನಮ್ಮಿಂದ ಹೇಳಿಸಲಾಗುತ್ತಿತ್ತು.
    ವತನ್ ಕಿ ರಾಹ ಮೇ ವತನ್ ಕೆ ನೌಜವಾನ್ ಶಹೀದ್ ಹೋ|
    ಪುಕಾರತೆ ಹೈ ಯಹ ಜಮೀನ್ ಆಸ್ಮಾ(ನ್) ಶಹೀದ್ ಹೋ|| 
    (ದೇಶಕ್ಕಾಗಿ ದೇಶದ ನವಯುವಕರೇ ಅಮರರಾಗಿರಿ|
    ನೆಲ ನಭಗಳು ಕರೆಯುತಿಹವು  ಅಮರರಾಗಿರಿ||) 
     ಈ ರೀತಿ ಪ್ರಾರಂಭವಾಗುತ್ತಿದ್ದ ಈ ಹಾಡಿನ ಪ್ರತಿ ಸಾಲಿನಲ್ಲೂ ದೇಶಕ್ಕಾಗಿ ಹೋರಾಡುವ, ದೇಶಕ್ಕಾಗಿ ಜೀವನ ಮುಡುಪಿಡುವ ಪ್ರೇರಣೆ ತುಂಬಿಸಲಾಗಿತ್ತು. ಈ ಹಾಡನ್ನು ಹೇಳುವಾಗಲೆಲ್ಲಾ ನನಗೆ ಗಂಟಲು ತುಂಬಿ ಬರುತ್ತಿತ್ತು. ಭಾವಾವೇಶಕ್ಕೆ ಒಳಗಾಗುತ್ತಿದ್ದೆ. ಈ ಹಾಡನ್ನು ನಾನು ಈಗಲೂ ನೆನೆಸಿಕೊಳ್ಳುತ್ತಿದ್ದು, ಇದು ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ಈ ಹಾಡಿನ ಸಾಹಿತ್ಯ ಹೀಗಿದೆ:
ವತನ್ ಕೀ ರಾಹ್ ಮೇ. .
ವತನ್ ಕೀ ರಾಹ್ ಮೆ ವತನ್ ಕೆ ನೌ ಜವಾನ್ ಶಹೀದ್ ಹೋ|
ಪುಕಾರ್ ತೀ ಹೈ ಯಹ ಜಮೀನ್ -ಆಸ್ಮಾ(ನ್) ಶಹೀದ್ ಹೋ||


ಶಹೀದ್ ತೇರೀ ಮೌತ್ ಹೀ ತೇರೆ ವತನ್ ಕೀ ಜಿಂದಗೀ
ತೇರೇ ಲಹೂ ಸೆ ಜಾಗ್ ಉಠೇಗಿ ಇಸ್ ಚಮನ್ ಕೀ ಜಿಂದಗೀ
ಖಿಲೇಂಗೇ ಫೂಲ್ ಉಸ್ ಜಗಹ್ ಪೆ ತು ಜಹಾನ್ ಶಹೀದ್ ಹೋ||
 . .ವತನ್ ಕಿ. .
ಗುಲಾಮ್ ಉಠ್ ವತನ್ ಕೆ ದುಷ್ಮನೋಂಸೆ ಇಂತಖಾಮ್ ಲೇ
ಇನ್ ಅಪ್ನೆ ದೋನೋ ಬಾಜೂವೋಂ ಸೆ ಖಂಜರೋಂಕಾ ಕಾಮ್ ಲೇ
ಚಮನ್ ಕೇ ವಾಸ್ತೆ ಚಮನ್ ಕೆ ಬಾಗ್‌ಬಾನ್ ಶಹೀದ್ ಹೋ||
. .ವತನ್ ಕಿ. .
ಪಹಾಡ್ ತಕ್ ಭೀ ಕಾಂಪನೇ ಲಗೇ ತೇರೇ ಜುನೂನ್ ಸೆ
ತೂ ಆಸ್ಮಾ(ನ್) ಪೆ ಇಂಖಿಲಾಬ್ ಲಿಖ್ ದೆ ಅಪ್ನೆ ಖೂನ್ ಸೆ
ಜಮೀನ್ ನಹೀಂ ತೇರಾ ವತನ್ ಹೈ ಆಸ್ಮಾನ್ ಶಹೀದ್ ಹೋ||
 . .ವತನ್ ಕಿ. .
ವತನ್ ಕಿ ಲಾಜ್ ಜಿಸ್ ಕೋ ಥಿ ಅಜೀಝ್ ಅಪ್ನಿ ಜಾನ್ ಸೇ
ವಹ್ ನೌ ಜವಾನ್ ಜಾ ರಹಾ ಹೈ ಆಜ್ ಕಿತ್ನೀ ಶಾನ್ ಸೇ
ಇಸ್ ಏಕ್ ಜವಾನ್ ಕೀ ಖಾಕ್ ಪರ್ ಹರ್ ಏಕ್ ಜವಾನ್ ಶಹೀದ್ ಹೋ||
 . .ವತನ್ ಕಿ. .
ಹೈ ಕೌನ್ ಖುಷ್‌ನಸೀಬ್ ಮಾ ಕಿ ಜಿಸ್ ಕಾ ಯಹ್ ಚಿರಾಗ್ ಹೈ
ವೊ ಖುಷ್‌ನಸೀಬ್ ಹೈ ಕಹಾಂ ಯಹ್ ಜಿಸ್ಕೆ ಸರ್ ಕಾ ತಾಜ್ ಹೈ
ಅಮರ್ ವೊ ದೇಶ್ ಕ್ಯೋಂ ನ ಹೋ ಕಿ ತು ಜಹಾನ್ ಶಹೀದ್ ಹೋ||
 . .ವತನ್ ಕಿ. .
[ಚಿತ್ರ: ಶಹೀದ್.          ಗಾಯಕರು: ರಫಿ, ಮಸ್ತಾನ್, ಸಂದರ್ಭ: ಹುತಾತ್ಮ ಭಗತ್ ಸಿಂಗ್ ಶವಯಾತ್ರೆ]
*************
Watan Ki Raah Mein lyrics by Mohammad Rafi
Watan ki raah mein watan ke naujawan shaheed ho
pukaarte hain ye zameen-o-aasmaan shaheed ho


shaheed teri maut hi tere vatan ki zindagi
tere lahu se jaag uthegi is chaman mein zindagi
khilenge phool us jagah ki tu jahaan shaheed ho,
watan ki ...
ghulam uth watan ke dushmano se intaqaam le
in apne donon baajuon se khanjaron ka kaam le
chaman ke vaaste chaman ke baagbaan shaheed ho,
watan ki ...
pahaad tak bhi kaanpane lage tere junoon se
tu aasmaan pe inqalaab likh de apane khoon se
zameen nahi tera watan hai aasmaan shaheed ho,
watan ki ...
watan ki laaj jisko thi ajeez apani jaan se
wo naujavaan ja raha hai aaj kitani shaan se
is ek jawaan ki khaak par har ik jawaan shaheed ho
watan ki ...
hai kaun khushanaseeb maan ki jiska ye chiraag hai
wo khushanaseeb hai kahaan ye jisake sar ka taaj hai
amar wo desh kyon na ho ki tu jahaan shaheed ho,
watan ki ...
****************
     ಈ ಹಾಡಿನ ಭಾವಾನುವಾದವನ್ನು ಮಾಡಿದ್ದು ತಮ್ಮ ಮುಂದಿಟ್ಟಿರುವೆ. ಇದು ಪದಶಃ ಮಾಡಿದ ಅನುವಾದವಲ್ಲ. ಮೂಲಾರ್ಥ ಉಳಿಸಿ ರಚಿಸಿರುವ ಭಾವಾನುವಾದ.
ನಾಡಿಗಾಗಿ . .
ನವತರುಣರೆ ನಾಡಿಗಾಗಿ ಜೀವಜ್ಯೋತಿಯುರಿಸಿರಿ
ನೆಲ ನಭಗಳು ಮೊರೆಯಿಡುತಿರೆ ಹುತಾತ್ಮರಾಗಿರಿ ||


ಅಮರ ನಿನ್ನ ಬಲಿದಾನದಿ ದೇಶ ಬೆಳಗಲಿಹುದು
ನಿನ್ನ ರಕ್ತ ಹೂದೋಟಕೆ ಕಸುವ ನೀಡಲಿಹುದು
ನೀನು ಬಿದ್ದ ತಾಣದಿ ನವಕುಸುಮವು ನಗುವುದು
.. ನವತರುಣರೇ ..
ಮೈಕೊಡವಿ ಮೇಲೇಳು ವೈರಿಗಳ ಬಡಿದಟ್ಟು
ಕೈಗಳೆ ಕರವಾಳವಲ್ತೆ ಎದ್ದು ತೊಡೆಯ ತಟ್ಟು
ತೋಟದೊಡೆಯ ಬಲಿಯಾಗಲು ತೋಟಕದು ಕಟ್ಟು
.. ನವತರುಣರೇ ..
ನಿನ್ನ ಈ ಹೂಂಕಾರಕೆ ಗಿರಿಪರ್ವತ ನಡುಗಿದೆ
ನಿನ್ನ ನೆತ್ತರ ಚಿತ್ತಾರವು ಮೂಡಲಿ ನಭದೆಲ್ಲೆಡೆ
ನೆಲವಲ್ಲವು ಅಮರನಾಗು ನಿನ್ನ ನಾಡು ಮೇಲೆ
.. ನವತರುಣರೇ ..
ಪ್ರಾಣಕಿಂತ ನಾಡಮಾನ ಹಿರಿದೆಂದನು ಅವನು
ಧನ್ಯತೆಯಲಿ ನೋಡು ಹೇಗೆ ಮೇಲಕೇರುತಿಹನು
ಅಮರ ಸಂದೇಶವದು ಪ್ರತಿ ತರುಣಗೆ ಪ್ರೇರಣೆಯು
.. ನವತರುಣರೇ ..
ಮುತ್ತಿನಂಥ ಮಗನ ಹೆತ್ತ ಮಾತೆಯದು ಯಾರು
ಕುಲತಿಲಕನೆತ್ತಾಡಿ ಬೀಗಿರುವ ಭಾಗ್ಯವಂತೆ ಯಾರು
ದೇಶಕಾಗಿ ದೇಹವಿಡಲು ಅಜರ ಅಮರವೀ ನಾಡು
.. ನವತರುಣರೇ ..
[ಭಾವಾನುವಾದ: ಕ.ವೆಂ.ನಾಗರಾಜ್]
****************
ಮೂಲ ಹಾಡಿನ ಆಡಿಯೋ ಆಲಿಸಿರಿ:



ಶುಕ್ರವಾರ, ಜನವರಿ 20, 2012

ಮಗಳು-ಮೊಮ್ಮಗಳು


ಮಗಳು ಬಿಂದು 25 ವರ್ಷಗಳ ಹಿಂದೆ

     ನನ್ನ ಮಗಳು ಬಿಂದು ಚಿಕ್ಕ ವಯಸ್ಸಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ನಾಟ್ಯ/ನೃತ್ಯಗಳಲ್ಲಿ ಭಾಗವಹಿಸಿದ ಸಂದರ್ಭದ ಕೆಲವು ಚಿತ್ರಗಳಿವು. ಅವಳು ಧರಿಸಿದ ಅಲಂಕಾರಿಕ ಆಭರಣಗಳನ್ನು (ಸೊಂಟದ ಪಟ್ಟಿ/ಡಾಬು, ತೋಳಬಂದಿ, ನೆಕ್ಲೇಸು, ಗೆಜ್ಜೆಗಳು, ಕಿರೀಟ, ಜಡೆಬಿಲ್ಲೆಗಳು, ಇತ್ಯಾದಿ) ಸುಮಾರು ೨೫ ವರ್ಷಗಳ ಹಿಂದೆ ನಾನೇ ಹಲವಾರು ದಿನಗಳ ಪರಿಶ್ರಮ ವಹಿಸಿ ತಯಾರಿಸಿದ್ದು ಎಂಬುದನ್ನು ನೆನೆಸಿಕೊಂಡರೆ ನನಗೇ ಆಶ್ಚರ್ಯವೆನಿಸುತ್ತಿದೆ. ಈಗ ಇದೇ ಅಲಂಕಾರಿಕ ವಸ್ತುಗಳು ನನ್ನ ಮೊಮ್ಮಗಳ ಉಪಯೋಗಕ್ಕೂ ಬಂದಿದೆ. ಇದೇ ಈ ವಿಶೇಷವನ್ನು ನಿಮ್ಮೊಡನೆ ಹಂಚಿಕೊಳ್ಳುವಂತೆ ಪ್ರೇರೇಪಿಸಿದೆ.

ಮೊಮ್ಮಗಳು ಅಕ್ಷಯ 

ಗುರುವಾರ, ಜನವರಿ 19, 2012

ಒಳ್ಳೆಯದನ್ನು ಕೇಳು, ಒಳ್ಳೆಯದನ್ನು ನೋಡು, ಒಳ್ಳೆಯದನ್ನು ಆಡು!!

     ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಆಡಬೇಡ ಎಂಬ ನೀತಿ ಸಾರುವ ಮೂರು ಕೋತಿಗಳ ಚಿತ್ರವನ್ನು ನಾವು ನೋಡುತ್ತಿರುತ್ತೇವೆ. ಇದು ಒಳ್ಳೆಯ ವಿಚಾರವಾದರೂ ಸಹ ಇದೇ ನೀತಿಯನ್ನು ಧನಾತ್ಮಕವಾಗಿ ಹೀಗೆ ಹೇಳಬಹುದು: ಒಳ್ಳೆಯದನ್ನು ಕೇಳು, ಒಳ್ಳೆಯದನ್ನು ನೋಡು, ಒಳ್ಳೆಯದನ್ನು ಆಡು:


ಪ್ರೇರಣೆ: ಚಂದನ ವಾಹಿನಿಯಲ್ಲಿ ಕಳೆದ ಭಾನುವಾರ ಬೆ. 9.30ಕ್ಕೆ ಪ್ರಸಾರವಾದ 'ಹೊಸಬೆಳಕು' ಕಾರ್ಯಕ್ರಮ

ಶುಕ್ರವಾರ, ಜನವರಿ 13, 2012

ಮಡ್ಡಿ-ಮಂಕರ ಸಂಭಾಷಣೆ


ಮಡ್ಡಿ :  ನೀನು ಅತ್ಯಂತವಾಗಿ ಪ್ರೀತಿಸುವ ವ್ಯಕ್ತಿ ಯಾರು?
ಮಂಕ:  ನನ್ನ ಹೆಂಡತಿ.
ಮಡ್ಡಿ:   ಹಾಂ!! ಅತ್ಯಂತವಾಗಿ ದ್ವೇಷಿಸುವ ವ್ಯಕ್ತಿ ಯಾರು?
ಮಂಕ:  ನನ್ನ ಹೆಂಡತಿ.
ಮಡ್ಡಿ:   ಹೌದಾ?? ಅದಕ್ಕೇ ನೀನು ಮಂಕಾಗಿರುವುದು! :)
ಮಂಕ:  ಇಷ್ಟು ಸಣ್ಣ ವಿಷಯ ನಿನಗೆ ತಿಳಿಯದೇ ಇರುವುದರಿಂದಲೇ ನಿನ್ನನ್ನು ಮಡ್ಡಿ ಅನ್ನುವುದು! :)
ಮಡ್ಡಿ:   :(
ಮಂಕ:  :(
ಮಡ್ಡಿ:   :) ಹೋಗಲಿ ಬಿಡು, ಬಾ, ಬೈಟು ಕಾಫಿ ಕುಡ್ಕೊಂಡ್ ಬರೋಣ.
ಮಂಕ:  :) ನಡಿ.

ಗುರುವಾರ, ಜನವರಿ 12, 2012

ನಾನು ಮತ್ತು ಕವಿ ನಾಗರಾಜ್


     ಹೊಗಳಿದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? ನನ್ನ ಕುರಿತು ಹೊಗಳಿ 'ಬಂಧು ಬಳಗ' ತಾಣದಲ್ಲಿ ಹರಿಹರಪುರ ಶ್ರೀಧರ್ ಬರೆದ ಲೇಖನವಿದು.
***************
    ಕವಿನಾಗರಾಜರ ಮತ್ತು ಕವಿಸುರೇಶರ ಮಿತ್ರತ್ವ ಮತ್ತು ಮಾನ್ಯ ಸು. ರಾಮಣ್ಣನವರ ಮಾರ್ಗದರ್ಶನ ....... ಈ ಅಂಶಗಳು ಕವಿಮನೆತನದ  ಸಮಾವೇಶದಲ್ಲಿ  ನಾನು ಇರುವಂತೆ ಪ್ರೇರೇಪಿಸಿತು.  ಈ ಸಮಾವೇಶಕ್ಕಾಗಿ ನಾಗರಾಜರು ಹಲವಾರು ತಿಂಗಳುಗಳಿಂದ ನಡೆಸುತ್ತಿದ್ದ ತಯಾರಿಯನ್ನು ನಾನು ಕಣ್ಣಾರೆ ಕಂಡಿದ್ದೆ. ಅವರ ಸತತ ಪ್ರಯತ್ನ, ಕವಿಕಿರಣಕ್ಕಾಗಿ ಅವರ ಸಿದ್ಧತೆ,ಶ್ರಮ, ಇವೆಲ್ಲವನ್ನೂ ನಾನು ಗಮನಿಸಿದ್ದೆ. ನಾಗರಾಜರು ಕಳೆದ ೪೦ ವರ್ಷಗಳಿಂದ ನನ್ನ ಮಿತ್ರರು ಮಾತ್ರವಲ್ಲ ಅಣ್ಣನ ಸಮಾನರು. ಅವರೊಡನೆ ಹಾಸನದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಇತ್ತೀಚೆಗೆ ನಾನು ಜೋಡಿಸಿಕೊಂಡಿರುವಷ್ಟು ಬಹುಷ: ಬೇರೆ ಯಾರೂ ಜೋಡಿಸಿಕೊಂಡಿರಲಾರರು. ನಾಲ್ಕು ದಶಕಗಳ ಹಿಂದಿನ ಮಾತು ಬೇರೆ. ಆಗ  ಕರ್ನಾಟಕ  ಬ್ಯಾಂಕಿನಲ್ಲಿ  ಉದ್ಯೋಗದಲ್ಲಿದ್ದ ಜಯಪ್ರಕಾಶ್ ಮತ್ತು ಗೀತಾ ಲಾರಿ  ಟ್ರಾಸ್ಪೋರ್ಟ್  ನ  ಶ್ರೀನಿವಾಸಪ್ರಭುಗಳೊಡನೆ ಶ್ರೀ ನಾಗರಾಜರು ಆರ್.ಎಸ್.ಎಸ್. ಕೆಲಸವನ್ನು ಹಾಸನದಲ್ಲಿ ಸಕ್ರಿಯವಾಗಿ ಮಾಡಿತ್ತಿದ್ದರು.ನಾನೂ ಕೂಡ  ಆರ್.ಎಸ್.ಎಸ್. ಕೆಲಸ ಮಾಡುತ್ತಿದ್ದರೂ ಇವರುಗಳಿಗಿಂತ ನಾನು ಮೂರ್ನಾಲ್ಕು ವರ್ಷ ಕಿರಿಯ. ಹಾಗಾಗಿ ನನಗೆ ಬಾಲಕರು  ಮತ್ತು ಕಿಶೋರರೇ ಹೆಚ್ಚಾಗಿ ಇರುತ್ತಿದ್ದ   ಶೈಲೇಂದ್ರ  ಶಾಖೆಯ ಮುಖ್ಯ ಶಿಕ್ಷಕನಾಗಿ ಜವಾಬ್ದಾರಿ ಇತ್ತು. ನಾನು  ಆಗ ಹಾಸನದಲ್ಲಿ ಐ.ಟಿ.ಐ. ನಲ್ಲಿ ಓದುತ್ತಿದ್ದೆ. ಓದುವ ಸಮಯ ಹೊರತಾಗಿ ಮಿಕ್ಕಿದ್ದೆಲ್ಲಾ ಶಾಖೆಯ ಕೆಲಸವೇ!! ಈ ಮೂವರಂತೂ ಇಡೀ ಹಾಸನ ನಗರವನ್ನು ಸೈಕಲ್ ನಲ್ಲಿ ಸುತ್ತಿ  ತರುಣರನ್ನು ಸಂಘಟಿಸುತ್ತಿದ್ದರು. ಆ ಸಮಯದಲ್ಲಿ [೧೯೭೩] ಹತ್ತು ತಿಂಗಳು ನಾನು ಹಾಸನದಲ್ಲಿದ್ದರೂ ಅದು ನನ್ನ ಮುಂದಿನ ಜೀವನವನ್ನು ರೂಪಿಸಿತ್ತು. ಆನಂತರ ಬೆಂಗಳೂರು, ಕೆ.ಜಿ.ಎಫ್, ಎಲ್ಲಾ ಸುತ್ತಾಡಿ ಪುನ: ೧೯೭೯ ಕ್ಕೆ ಹಾಸನ ಜಿಲ್ಲೆಗೆ ಬಂದರೂ ಅರಸೀಕೆರೆ ಸಮೀಪದ ಗಂಡಸಿ ಮತ್ತು ಹೊಳೇನರಸೀಪುರಗಳಲ್ಲಿ  ೧೯೯೨ ರವರೆಗೂ ಕೆ.ಇ.ಬಿ.ಯಲ್ಲಿ ಸೇವೆ ಸಲ್ಲಿಸಿದವನು ಅ೯೯೨ ಜೂನ್ ಮಾಸದಲ್ಲಿ ಪುನ: ಹಾಸನಕ್ಕೆ ಬಂದೆ. ಆಗ ಪುನ: ಶುರುವಾಯ್ತು    ನಾಗರಾಜರ  ಸಹವಾಸ ಮತ್ತು  ಸಾಮಾಜಿಕ ಚಟುವಟಿಕೆಗಳು. ಸೇವಾಭಾರತಿಯ ಹೆಸರಲ್ಲಿ  ನಾವುಗಳು ಹಾಸನದಲ್ಲಿ ಮಾಡಿದ ಚಟುವಟಿಕೆಯಂತೂ ಅವಿಸ್ಮರಣೀಯ.  ಸೇವಾಭಾರತಿಯ ಚಟುವಟಿಕೆಯು ನಮ್ಮಿಬ್ಬರನ್ನೂ ಬಲು ಹತ್ತಿರಕ್ಕೆ ತಂದಿತ್ತು. ಅದಕ್ಕಾಗಿ ಇಷ್ಟೆಲ್ಲಾ ಬರೆಯಬೇಕಾಯ್ತು. ೧೯೭೯ ರಿಂದ ೧೯೯೨ ರ ವರಗೆ ಸಂಘದ ಅನ್ಯಾನ್ಯ ಜವಾಬ್ದಾರಿಗಳನ್ನು  ಹಾಸನ ಜಿಲ್ಲಾ ಮಟ್ಟದಲ್ಲಿ ನಿರ್ವಹಿಸಿದರೂ ಆನಂತರದ ಸೇವಾಭಾರತಿಯ ಚಟುವಟಿಕೆಗಳನ್ನು ಮಾತ್ರ ಮರೆಯಲು ಸಾಧ್ಯವೇ ಇಲ್ಲ. ಆ ಒಂದು ಚಟುವಟಿಕೆಗಳೇ ನನ್ನ ನಾಗರಾಜರ ನಡುವೆ ಸಂಬಂಧವನ್ನು ಬೆಸೆಯಲು ಕಾರಣವಾಯ್ತು. ಆನಂತರ ನಾಗರಾಜರು ಶಿವಮೊಗ್ಗ, ಶಿಕಾರಿಪುರ, ಸೇಡಮ್, ಉಜಿರೆ ಮುಂತಾದ ಕಡೆಗಳಲ್ಲಿ   ತಹಸೀಲ್ದಾರರಾಗಿ ಸೇವೆಮಾಡಿ  ಸ್ವಯಮ್ ನಿವೃತ್ತಿ ಪಡೆದು ಹಾಸನಕ್ಕೆ ಹಿಂದಿರುಗಿದಮೇಲೆ  ಪುನ: ನಮ್ಮ ಸಂಬಂಧ ಗಟ್ಟಿಯಾಯ್ತು.  ಅದಾಗಲೇ ನಾನು ಅಂತರ್ಜಾಲದಲ್ಲಿ  ಸಾಕಷ್ಟು ಬರವಣಿಗೆ ಮಾಡುತ್ತಿದ್ದೆ, ಸಂಪದದಲ್ಲಿ ಒಂದೆರಡು ವರ್ಷಗಳು ಬರೆದ ಮೇಲೆ "ನೆಮ್ಮದಿಗಾಗಿ" ಎಂಬ ಸ್ವಂತ ಬ್ಲಾಗ್ ಮಾಡಿದೆ. ಅನಂತರ     ಸಂಸ್ಕೃತಿ ಪರಂಪರೆಗಳನ್ನು ಬಿಂಭಿಸುವ  ಅಂತರ್ ಜಾಲ ತಾಣವನ್ನು  ಮಾಡಬೇಕೆಂಬ ಆಕಾಂಕ್ಷೆಯಿಂದ ," ವೇದಸುಧೆ" ಬ್ಲಾಗ್  ಆರಂಭಿಸಿದೆ." ಎಲ್ಲರಿಗಾಗಿ ವೇದ " ಎಂಬ ವಿಚಾರವನ್ನಿಟ್ಟುಕೊಂಡು ಆರಂಭವಾದ ಬ್ಲಾಗ್  ಹಲವರ ಮೆಚ್ಚುಗೆಗೆ ಪಾತ್ರವಾಯ್ತು. ಆಗ  ನಾಗರಾಜರನ್ನು  "ನೀವೂ ವೇದಸುಧೆಯಲ್ಲಿ ಬರೆಯಬಾರದೇಕೆ? ಎಂದು ಕೇಳಿ  ಶ್ರೀ ಸುಧಾಕರ ಚತುರ್ವೇದಿಯವರ "ವೇದೋಕ್ತ ಜೀವನ ಪಥ" ಪುಸ್ತಕವನ್ನು ಅವರ ಕೈಗಿತ್ತು  ನೀವು ಇದನ್ನು ದಾರಾವಾಹಿಯಾಗಿ  ವೇದಸುಧೆಯಲ್ಲಿ ಬರೆಯಿರಿ ಎಂದು ಕೇಳಿಕೊಂಡೆ. ಅವರು ಪ್ರಾರಂಭಿಸಿಯೇಬಿಟ್ಟರು.  ಅದೇ ಸಮಯಕ್ಕೆ ಅವರದೇ ಆದ "ಕವಿಮನ" ಮತ್ತು 'ವೇದಜೀವನ' ಬ್ಲಾಗ್ ಗಳೂ ಆರಂಭವಾದವು. 'ಕವಿಕಿರಣ'ವೂ ಆರಂಭವಾಯ್ತು. ಅಂತೂ ಇಂತೂ ಕಳೆದ ಎರಡು ವರ್ಷಗಳಿಂದ ನಾವಿಬ್ಬರೂ ಅಂತರ್ಜಾಲದಲ್ಲಿ   ನಮ್ಮ  ಚಟುವಟಿಕೆಗಳನ್ನು ಆರಂಭಿಸಿ ಕಳೆದ ವರ್ಷದಿಂದ  ನಾಗರಾಜರು  ಗೌರವ ಸಂಪಾದಕರಾಗಿ ವೇದಸುಧೆಯನ್ನು ಮುನ್ನಡೆಸುತ್ತಿದ್ದಾರೆ. ...
....ಹೀಗಿದೆ ನಮ್ಮ ಗೆಳೆತನ, ಜೊತೆಗೆ ಕವಿಸುರೇಶರೂ ವೇದಸುಧೆಯ ಒಬ್ಬ ಪ್ರಮುಖ ಲೇಖಕರು ಮತ್ತು ಬಲು ಆತ್ಮೀಯರಾಗಿ ಬಿಟ್ಟಿದ್ದಾರೆ. ನಾಗರಾಜರು ನನ್ನನ್ನು ತಮ್ಮನೆಂದು ತಿಳಿದಿದ್ದರೆ ನನಗೊಬ್ಬ ಕವಿ ಸುರೇಶರ ಹೆಸರಿನ ತಮ್ಮನೇ ಇದ್ದಾನೆ. ಕವಿ ಸುರೇಶರು ನನ್ನ ಸ್ವಂತ ತಮ್ಮನಿಗಿಂತ ಹೆಚ್ಚಾಗಿ ಬಾಂಧವ್ಯ ಉಳಿಸಿಕೊಂಡಿದ್ದಾರೆ. ಸಮಾವೇಶದ ಪ್ರಾಯೋಜಕರಾದ ಕುಮಾರಸ್ವಾಮಿಯವರೂ ಕೂಡ ಸಂಘಕಾರ್ಯುದಲ್ಲಿ ಗೆಳೆಯರು. ಸಮಾವೇಶ ನಡೆದ ಶಾಲೆಯ ಮುಖ್ಯಸ್ಥರಾದ ಶ್ರೀಯುತ ಕೃಷ್ಣಸ್ವಾಮಿಗಳು ನಮ್ಮೆಲ್ಲರಿಗೂ  ಆತ್ಮೀಯ ಹಿತೈಶಿಗಳು. ಹೀಗಿರುವಾಗ ನಾನು ಸಮಾವೇಶದಲ್ಲಿ ಪಾಲ್ಗೊಳ್ಳದಿದ್ದರೆ ಭಾರೀ ತಪ್ಪಾಗುತ್ತಿತ್ತು. ನಿಜಸ್ಥಿತಿ ಹೇಳಬೇಕೆಂದರೆ  ನನ್ನ ಆರೋಗ್ಯ ಅಷ್ಟಾಗಿ ಚೆನ್ನಾಗಿರಲಿಲ್ಲ.  ಹಾಗಾಗಿ ಲವಲವಿಕೆ ಇರಲಿಲ್ಲ. ಆದರೂ ಯಾಂತ್ರಿಕವಾಗಿ  ಕಾರ್ಯಕ್ರಮಗಳ ಚಿತ್ರೀಕರಣ ವನ್ನು ನನ್ನ ಕೈಲಾದ ಮಟ್ಟಿಗೆ ಮಾಡಿರುವೆ.  ಸಮಾವೇಶವು  ಯಶಸ್ವಿಯಾಗಿದ್ದು ಎಲ್ಲರಿಗೂ ಸಂತೋಷ ತಂದಿದೆ. ಆದರೆ ಅದರ ಹಿಂದಿರುವ  ನಾಗರಾಜರ  ಪರಿಶ್ರಮ ಮಾತ್ರ  ವಿವರಿಸಲು ಅಸಾಧ್ಯ.  ಅವರ ಅರವತ್ತನೇ ವಯಸ್ಸಿನಲ್ಲಿ  ಮೂವತ್ತು ವಯಸ್ಸಿನ ತರುಣರಂತೆ ಪರಿಶ್ರಮ ಹಾಕಿದ್ದರು. ಅವರಿಗೆ ಭಗವಂತನು ಇನ್ನೂ ಹೆಚ್ಚು  ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತಾ  ನನ್ನ  ಮಾತು ಮುಗಿಸುವೆ. ನನ್ನ ಪುರಾಣದಿಂದ ನಿಮಗೆ ಬೇಸರವಾಗಿರಬಹುದು. ಕ್ಷಮೆ ಇರಲಿ.
-ಹರಿಹರಪುರ ಶ್ರೀಧರ್.

ಶುಕ್ರವಾರ, ಜನವರಿ 6, 2012

ಹರಿಹರಪುರ ಶ್ರೀಧರ್ ಮತ್ತು ಕವಿಮನೆತನದ ಸಮಾವೇಶ


     ಮಿತ್ರ ಶ್ರೀಧರ್ ಮತ್ತು ನನ್ನ ಸ್ನೇಹ ಕಳೆದ ನಾಲ್ಕು ದಶಕಗಳದ್ದು. ಕೆಲವು ತಾತ್ವಿಕ ವಿಷಯಗಳಲ್ಲಿ ಸಣ್ಣಪುಟ್ಟ ಅಭಿಪ್ರಾಯ ಬೇಧಗಳಿದ್ದರೂ ಅದರಿಂದ ನಮ್ಮ ಸ್ನೇಹಕ್ಕೆ ಭಂಗ ಬಂದಿಲ್ಲ. ಯಾವುದೇ ಒಳ್ಳೆಯ ಸಂಗತಿಗಳು, ವಿಚಾರಗಳಿಗೆ ಸ್ಪಂದಿಸುವ ಮನೋಭಾವದ ಶ್ರೀಧರ್ ಸತ್ಸಂಗಗಳನ್ನು ನಡೆಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿರುವ ಅವರು ಸಾಧು-ಸಂತರನ್ನು ಕರೆಯಿಸಿ ಉಪನ್ಯಾಸಗಳನ್ನು ಏರ್ಪಡಿಸುವುದಲ್ಲದೆ ಉಪನ್ಯಾಸಗಳ ಆಡಿಯೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿಕೊಂಡು ವೇದಸುಧೆ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ ಹೆಚ್ಚಿನ ಜನರಿಗೆ ಸದ್ವಿಚಾರ ತಲುಪಿಸುತ್ತಿರುವುದು ಅವರ ಕಳಕಳಿಗೆ ಸಾಕ್ಷಿ. ಸತ್ಸಂಗಕ್ಕಾಗಿಯೇ ಅವರ ಮನೆಯ ಮೇಲ್ಭಾಗದಲ್ಲಿ ಒಂದು ದೊಡ್ಡ ಸಭಾಂಗಣವನ್ನೇ ಕಟ್ಟಿಸಿ ಸಜ್ಜುಗೊಳಿಸಿರುವುದು ಅವರ ವಿಶೇಷತೆ. ವೇದಸುಧೆ ಅಂತರ್ಜಾಲ ತಾಣಕ್ಕೆ ನನ್ನನ್ನು ಗೌರವ ಸಂಪಾದಕನೆಂದು ಹೆಸರಿಸಿರುವುದು ಅವರು ನನ್ನಲ್ಲಿಟ್ಟ ವಿಶ್ವಾಸಕ್ಕೆ ದ್ಯೋತಕವಾಗಿದೆ. ಅವರು ನನ್ನನ್ನು ಅಣ್ಣನಂತೆ ಭಾವಿಸಿದ್ದಾರೆ. ನಾನೂ ಶ್ರೀಧರರನ್ನು ತಮ್ಮನಂತೆಯೇ ಕಂಡಿದ್ದೇನೆ. 
     25-12-2011ರಂದು ಹಾಸನದಲ್ಲಿ ನಡೆದ ಕವಿಮನೆತನದವರ ಮತ್ತು ಬಂಧು-ಬಳಗದವರ ಸಮಾವೇಶದ ವಿಶೇಷ ಆಹ್ವಾನಿತರಾದ ಸನ್ಮಾನ್ಯ ಶ್ರೀ ಸು.ರಾಮಣ್ಣ, ಮುಖ್ಯ ಅತಿಥಿ ಶ್ರೀ ಕೆಳದಿ ಗುಂಡಾಜೋಯಿಸರು ಮತ್ತು ಸೋದರ ಕವಿಸುರೇಶರನ್ನು ಸಮಾವೇಶದ ಹಿಂದಿನ ದಿನ ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ಸತ್ಕರಿಸಿದ್ದು ಅವರು ಸಮಾವೇಶದ ಕೆಲಸದಲ್ಲಿ ಹೇಗೆ ತೊಡಗಿಕೊಂಡಿದ್ದರು ಎಂಬುದನ್ನು ತೋರಿಸುತ್ತದೆ. ಅಲ್ಲದೆ ಹೆಚ್ಚಿನ ಬಂಧುಗಳನ್ನು ತಮ್ಮ ಮನೆಗೂ ಕಳುಹಿಸುವಂತೆ ನನಗೆ ಹೇಳಿದ್ದರು. ಸಮಾವೇಶದ ದೃಷ್ಯಗಳನ್ನು ಸೆರೆ ಹಿಡಿಯುವುದು, ವಿಡಿಯೋ ಚಿತ್ರೀಕರಿಸಿರುವುದು, ಅದನ್ನು 'ಬಂಧು-ಬಳಗ' ಎಂಬ ಅಂತರ್ಜಾಲ ತಾಣದಲ್ಲಿ ಪ್ರಚುರಪಡಿಸಿ ಸಮಾವೇಶದ ನೆನಪು ಬಹಳ ಕಾಲ ಉಳಿಯುವಂತೆ ಮಾಡಿರುವುದಕ್ಕಾಗಿ ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

ಗುರುವಾರ, ಜನವರಿ 5, 2012

ನಮ್ಮ ಮನೆ

     ದಿನಾಂಕ 25-12-2012ರಂದು ಹಾಸನದಲ್ಲಿ ನಡೆದ ಕವಿಮನೆತನದವರ ಮತ್ತು ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಮತ್ತು ಕುಟುಂಬ ಪ್ರಬೋಧನ್ ಸಂಸ್ಥೆಯ ಸಂಯೋಜಕರಾದ ಸನ್ಮಾನ್ಯ ಶ್ರೀ ಸು.ರಾಮಣ್ಣನವರು ನಮ್ಮ ಕುಟುಂಬ-ನಾವು-ನಮ್ಮವರು-ನಮ್ಮ ಮನೆ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಆ ಸಂದರ್ಭದಲ್ಲಿ ಅವರು 'ನಮ್ಮ ಮನೆ' ಎಂಬ ಹಾಡನ್ನು ಹೇಳಿಕೊಟ್ಟು ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರಿಗೂ ಹೇಳಿಸಿ ಕಾರ್ಯಕ್ರಮ ಪ್ರಾರಂಭಿಸಿದ್ದು ವಿಶೇಷವೆನಿಸಿತು. ಸಂವಾದದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲುಗೊಂಡಿದ್ದರು. ಮಿತ್ರ ಹರಿಹರಪುರ ಶ್ರೀಧರರು ಹಾಡಿನ ಭಾಗದ ದೃಷ್ಯ-ಧ್ವನಿಗ್ರಹಣ ಮಾಡಿದ್ದು ಅದನ್ನು ನಿಮ್ಮ ಕೇಳುವಿಕೆಗಾಗಿ ಇಲ್ಲಿ ಪ್ರಸ್ತುತ ಪಡಿಸಿದೆ. ಹಾಡಿನ ಸಾಹಿತ್ಯವನ್ನೂ ಕೆಳಗೆ ಕೊಟ್ಟಿದೆ.
ನಮ್ಮ ಮನೆ: ಭಾಗ-1


ನಮ್ಮ ಮನೆ: ಭಾಗ-2

ನಮ್ಮ ಮನೆ
ನಮ್ಮ ಮನೆ ಇದು ನಮ್ಮ ಮನೆ
ನಲಿವಿನ ಅರಿವಿನ ನಮ್ಮ ಮನೆ |
ರೀತಿಯ ನೀತಿಯ ಭದ್ರ ಬುನಾದಿಯ
ಮೇಲೆ ನಿಂತಿದೆ ನಮ್ಮ ಮನೆ || ಪ ||


ತಾಯಿಯ ಮಮತೆಯ ತಂದೆಯ ಪ್ರೀತಿಯ
ಸೆಲೆಯಲಿ ತೆರೆದಿದೆ ನಮ್ಮ ಮನೆ
ಅಜ್ಜಿಯ ಕಥೆಯ ಅಜ್ಜನ ಶಿಸ್ತಿನ
ನಿಲುವಲಿ ನಿಂತಿದೆ ನಮ್ಮ ಮನೆ || 1 ||


ಹಕ್ಕಿಗಳುಲಿವಿಗೆ ನೇಸರನುದಯಕೆ
ಏಳುವರೆಲ್ಲರು ಮುದದಿಂದ
ಮೀಯುತ ಮಡಿಯಲಿ ನೆನೆಯುತ ದೇವಗೆ
ಭಕುತಿಯ ನಮನ ಕರದಿಂದ || 2 ||


ಅಕ್ಕತಂಗಿಯರ ಅಣ್ಣತಮ್ಮದಿರ
ಕದನಕುತೂಹಲ ಮುದವಿರಲು
ಬೆಳೆಯುತ ನಾವು ಮುಂದಿನ ಪ್ರಜೆಗಳು
ದೇಶದ ಆಸ್ತಿಯು ನಾವೆನಲು || 3 ||


ಹಬ್ಬಹರಿದಿನದಿ ಮಾವುಬಾಳೆಯು
ಸಿಂಗರಿಸಿರಲು ಹಸಿರಿಂದ
ರಂಗವಲ್ಲಿಯ ಹೊಸ್ತಿಲದೀಪವು
ರುಚಿ ರುಚಿ ಅಡಿಗೆಯು ಘಮ್ಮೆಂದು || 4 ||


ಏಳುಬೀಳಿಗೆ ಕದಲದ ಮನವು
ಛಲದಲಿ ದುಡಿಯುವ ಕೈಗಳಿವು
ಬೀಳಿಗೆ ಆಸರೆ ಏಳ್ಗೆಗೆ ಹರಕೆ
ತುಂಬಿದ ಮನೆ ಮೇಲ್ ತಾಣವು || 5 ||


ಶಾಲೆಯು ಇದುವೆ ಬದುಕಿನ ಪಾಠಕೆ
ನಾಳೆಯ ಕನಸಿಗೆ ಕೇತನವು
ದೇಶವ ಕಟ್ಟುವ ಸಂಸ್ಕೃತಿ ಸಾರಕೆ
ಕೇಶವ ಕುಲದ ನಿಕೇತನವು || 6 ||

ಬುಧವಾರ, ಜನವರಿ 4, 2012

ಸಾಧನಾ ಪಥದಲ್ಲಿ ಕೆಳದಿಕವಿಮನೆತನ

"ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ
  ಭಿನ್ನ ಭಾವ ಮರೆಯುವಾ ದೇಶಕಾಗಿ ದುಡಿಯುವಾ"


     ದಿನಾಂಕ 25-12-2011ರಂದು ಹಾಸನದಲ್ಲಿ ನಡೆದ ಕೆಳದಿ ಕವಿಮನೆತನದವರ ಹಾಗೂ ಅವರ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ ಉದ್ದೇಶ ಸಾಧನೆಯಲ್ಲಿ ಯಶಸ್ಸು ಕಂಡಿತೆಂದರೆ ಉತ್ಪ್ರೇಕ್ಷೆಯಲ್ಲ. ಇಂದಿನ ವ್ಯವಸ್ಥೆಯಲ್ಲಿ 'ನಾವಾಯಿತು, ನಮ್ಮ ಸ್ವಂತ ಕುಟುಂಬದ ವಿಷಯವಾಯಿತು, ಇತರ ವಿಷಯಗಳಿಗೆ ಪುರುಸೊತ್ತಿಲ್ಲ' ಎನ್ನುವ ಮನಸ್ಥಿತಿಯವರೇ ಬಹಳವಿದ್ದಾಗ ಎಲ್ಲರನ್ನೂ ಜೊತೆಗೂಡಿಸಿ ಸಜ್ಜನಶಕ್ತಿಯ ಜಾಗರಣೆ ಮಾಡುವ ಮತ್ತು ಅದರಲ್ಲಿ ಪ್ರಗತಿ ಕಾಣುವ ಕೆಲಸ ಸುಲಭವೇನಲ್ಲ. ದೂರ ದೂರದ ಊರುಗಳಿಂದ ಬಂದಿದ್ದ 150 ಬಂಧುಗಳು ಅಂದು ಒಟ್ಟಿಗೆ ಸೇರಿ ಸಂಭ್ರಮಿಸಿದ ದಿನ. ಹಿರಿಯರಾದ ಶ್ರೀ ಸಾ.ಕ. ಕೃಷ್ಣಮೂರ್ತಿಯವರ ಆಶೀರ್ವಾದದೊಂದಿಗೆ ಸಂಚಾಲಕರುಗಳಾಗಿ ಹಾಸನದ ಶ್ರೀ ಕ.ವೆಂ. ನಾಗರಾಜ್ ಮತ್ತು ಶಿವಮೊಗ್ಗದ ಶ್ರೀ ಕವಿಸುರೇಶರ ಪ್ರಯತ್ನ, ಆಯೋಜಕರಾಗಿ ಶ್ರೀಮತಿ ಮತ್ತು ಶ್ರೀ ಕುಮಾರಸ್ವಾಮಿಯವರು ಕೈಜೋಡಿಸಿದುದು, ಮಿತ್ರ ಹರಿಹರಪುರ ಶ್ರೀಧರರ ನೆರವು, ಸ್ಪಂದಿಸಿದ ಬಂಧುವರ್ಗದಿಂದಾಗಿ ಭಾಗವಹಿಸಿದವರೆಲ್ಲರಿಗೆ ಸ್ಮರಣೀಯ ಸಮಾವೇಶವೆನಿದ್ದು ಸುಳ್ಳಲ್ಲ. ಸಮಾವೇಶದ ಸಂಕ್ಷಿಪ್ತ ನೋಟ ನಿಮಗಾಗಿ, ಇದೋ ಇಲ್ಲಿ!


     ಸಮಯಪಾಲನೆಗೆ ಮಹತ್ವ ನೀಡಿ ಸರಿಯಾಗಿ 10-00 ಘಂಟೆಗೆ ಕಾರ್ಯಕ್ರಮ ಆರಂಭಿಸಲಾಯಿತು. ಅದಕ್ಕೆ ಮುಂಚೆ ಬಂದಿದ್ದವರೆಲ್ಲರಿಗೆ ರುಚಿರುಚಿಯಾದ ಉಪಹಾರದ ವ್ಯವಸ್ಥೆಯಾಗಿತ್ತು. ವೇದಿಕೆಯಲ್ಲಿ ಮನೆತನದ ಅತ್ಯಂತ ಹಿರಿಯ ಸದಸ್ಯರಾದ ಬೆಂಗಳೂರಿನ ಶ್ರೀ ಸಾ.ಕ. ಕೃಷ್ಣಮೂರ್ತಿಯವರನ್ನು ಅಧ್ಯಕ್ಷರಾಗಿ, ಮುಖ್ಯ ಅತಿಥಿಯಾಗಿ ಹಾಸನದ ಶ್ರೀ ರಾಮಕೃಷ್ಣ ವಿದ್ಯಾಲಯ ಸಂಸ್ಥೆಗಳ ಸ್ಥಾಪಕ ಮುಖ್ಯಸ್ಥರು, ವಿಶೇಷ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಮತ್ತು ಕುಟುಂಬ ಪ್ರಭೋದನ್ ಸಂಸ್ಥೆಯ ಸಂಯೋಜಕರಾದ ಶ್ರೀ ಸು. ರಾಮಣ್ಣನವರು ಮತ್ತು ಸಮಾವೇಶದ ಆಯೋಜಕ ದಂಪತಿಗಳಾದ ಶ್ರೀಮತಿ ಗಿರಿಜಾಂಬಾ ಮತ್ತು ಶ್ರೀ ಕುಮಾರಸ್ವಾಮಿಯವರುಗಳನ್ನು ಆಸೀನಗೊಳಿಸಲಾಯಿತು. ಕುಮಾರಿ ಸ್ಫೂರ್ತಿಆತ್ರೇಯಳ ಗಣೇಶ ಸ್ತುತಿ ನೃತ್ಯದೊಂದಿಗೆ ಶುಭಾರಂಭವಾದರೆ, ವೇದಿಕೆಯಲ್ಲಿದ್ದ ಗಣ್ಯರು ಜ್ಯೋತಿ ಬೆಳಗಿಸಿ ಸಮಾವೇಶದ ಉದ್ಘಾಟನೆ ಮಾಡಿದರು.


ವೇದಿಕೆಯಲ್ಲಿ: ಶ್ರೀ/ಶ್ರೀಮತಿ:  ಸಾ.ಕ.ಕೃಷ್ಣಮೂರ್ತಿ, ಸು.ರಾಮಣ್ಣ, ಸಿ.ಎಸ್.ಕೃಷ್ಣಸ್ವಾಮಿ, ಗಿರಿಜಾಂಬಾ, ಕುಮಾರಸ್ವಾಮಿ
ನಿರೂಪಕಿ: ಬಿಂದು ರಾಘವೇಂದ್ರ
ಸ್ಫೂರ್ತಿಆತ್ರೇಯಳಿಂದ ಗಣೇಶ ಸ್ತುತಿ ನೃತ್ಯ 
  ಕಳೆದ ವರ್ಷ ವಿಧಿವಶರಾದ ಬೆಂಗಳೂರಿನ ಅಡ್ವೋಕೇಟ್ ಶ್ರೀ ಬಿ.ಎನ್. ಲಕ್ಷ್ಮಣರಾವ್, ಹಾಸನ ತಾ. ನಿಟ್ಟೂರಿನ ನಿವೃತ್ತ ಉಪಾಧ್ಯಾಯ ಶ್ರೀ ರಾಮರಾವ್ ಮತ್ತು ಬೀರೂರಿನ ಶ್ರೀಮತಿ ವಿಮಲಮ್ಮಶೇಷಗಿರಿರಾವ್ ಇವರುಗಳ ಆತ್ಮಗಳಿಗೆ ಸದ್ಗತಿ ಕೋರಿ ಎರಡು ನಿಮಿಷಗಳ ಕಾಲ ಮೌನ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಾಸನದ ಶ್ರೀ ಬಿ.ಎನ್. ಸತ್ಯಪ್ರಸಾದರವರು ವೇದಿಕೆಯಲ್ಲಿದ್ದ ಗಣ್ಯರ ಪರಿಚಯ ಮಾಡಿಕೊಡುವುದರೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.

ಶ್ರೀ ಬಿ.ಎನ್.ಸತ್ಯಪ್ರಸಾದರಿಂದ ಸ್ವಾಗತ, ಪರಿಚಯ
        'ಕವಿಕಿರಣ' ಪತ್ರಿಕೆಯ ಸಂಪಾದಕ ಶ್ರೀ ಕ.ವೆಂ. ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸಮಾವೇಶಗಳ ಹಿನ್ನೆಲೆ, ಕಾರ್ಯಕ್ರಮಗಳ ಮಹತ್ವ, ಕವಿಕಿರಣ ಪತ್ರಿಕೆಯ ಧ್ಯೇಯೋದ್ದೇಶ, ಕವಿಪ್ರಕಾಶನದ ಪ್ರಕಟಣೆಗಳು, ಇತ್ಯಾದಿ ಸಂಗತಿಗಳ ಕುರಿತು ವಿವರಿಸಿ ಸಾಧನಾಪಥದಲ್ಲಿ ಮುನ್ನಡೆದು ಮನೆತನದ ಪರಂಪರೆಯನ್ನು ಉಳಿಸಿ ಬೆಳೆಸಲು ಕರೆ ನೀಡಿದರು.
ಶ್ರೀ ಕ.ವೆಂ.ನಾಗರಾಜರಿಂದ ಪ್ರಾಸ್ತಾವಿಕ ನುಡಿ

     "ನಮ್ಮ ಕುಟುಂಬ-ನಾವು-ನಮ್ಮವರು-ನಮ್ಮ ಮನೆ" ಎಂಬ ವಿಷಯದಲ್ಲಿ ಶ್ರೀ ಸು.ರಾಮಣ್ಣನವರು ನಡೆಸಿಕೊಟ್ಟ ಸಂವಾದ ಕಾರ್ಯಕ್ರಮ ಸಮಾವೇಶದ ಪ್ರಮುಖ ಅಂಗವಾಗಿತ್ತು ಮತ್ತು ಪ್ರಭಾವಿಯಾಗಿತ್ತು. ಒಂದು ಮಾದರಿ ಕುಟುಂಬ ಹೇಗಿರಬೇಕು ಎಂಬ ಬಗ್ಗೆ ಒಂದು ಹಾಡನ್ನು ಹೇಳಿಕೊಟ್ಟು ಎಲ್ಲರಿಂದಲೂ ಹೇಳಿಸುವುದರಿಂದ ಪ್ರಾರಂಭವಾದ ಸಂವಾದದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು, ಪ್ರೇರಣೆ ಪಡೆದರು. ಹೆಚ್ಚಿನವರಿಗೆ ಇದು ಒಂದು ವಿಭಿನ್ನ ಕಾರ್ಯಕ್ರಮವೆನಿಸಿದ್ದು, ಈ ಸಂವಾದ ನೀಡಿದ ಸಂದೇಶದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಸಂವಾದ ನಡೆಸುತ್ತಿರುವ ಶ್ರೀ ಸು.ರಾಮಣ್ಣನವರು
ಇವರುಗಳೂ ಸಂವಾದದಲ್ಲಿ ಭಾಗಿಗಳು
ಶ್ರೀ ಸು.ರಾಮಣ್ಣನವರಿಗೆ ಸನ್ಮಾನ
     ಕವಿಮನೆತನದ ಮೂಲಪುರುಷ ಲಿಂಗಣ್ಣಕವಿಯ ಐತಿಹಾಸಿಕ ಕಾವ್ಯ ಕೆಳದಿನೃಪ ವಿಜಯದ ಇಂಗ್ಲಿಷ್ ಗದ್ಯಾನುವಾದ Keladi Nrupa Vijaya’  ಅನ್ನು ಮುಖ್ಯ ಅತಿಥಿ ಶ್ರೀ ಕೃಷ್ಣಸ್ವಾಮಿಯವರು ಬಿಡುಗಡೆಗೊಳಿಸಿ ಈ ಕೃತಿ ಸಾರಸ್ವತ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ ಎಂದು ಶ್ಲಾಘಿಸಿದರು. ಕೃತಿ ಪರಿಚಯವನ್ನು ಸಾಗರದ ಶ್ರೀಮತಿ ಸುಮನಾವೆಂಕಟೇಶ ಜೋಯಿಸ್ ಮಾಡಿಕೊಟ್ಟರು. ಲೇಖಕ ಸುರೇಶರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿ ಸುರೇಶ್ ಮಾತನಾಡಿ ತಮಗೆ ಇದು ಸ್ಮರಣೀಯವಾಗಿದೆಯೆಂದು ತಿಳಿಸಿ, ಈ ಕೃತಿ ತಮ್ಮ ಜೀವಮಾನದಲ್ಲಿ ಮಾಡಿದ ನೆನಪಿಟ್ಟುಕೊಳ್ಳುವ ಕೆಲಸವಾಗಿದೆಯೆಂದರು. ಕವಿಕಿರಣದ ಡಿಸೆಂಬರ್, ೨೦೧೧ ರ ಸಂಚಿಕೆಯನ್ನೂ ಬಿಡುಗಡೆಗೊಳಿಸಿ ಬಂದವರೆಲ್ಲರಿಗೆ ವಿತರಿಸಲಾಯಿತು. ಕ.ವೆಂ.ನಾಗರಾಜರ ಚಿಂತನಶೀಲ ಮುಕ್ತಕಗಳಿರುವ ಪುಸ್ತಕ ಮೂಢ ಉವಾಚದ ಪ್ರತಿಗಳನ್ನೂ ಸಹ ಬಂಧುಗಳಿಗೆ ಉಚಿತವಾಗಿ ನೀಡಲಾಯಿತು.
ಕವಿಸುರೇಶರ ಆಂಗ್ಲಭಾಷೆಯ ಕೃತಿ 'ಕೆಳದಿನೃಪ ವಿಜಯ'ದ ಬಿಡುಗಡೆ
ಶ್ರೀಮತಿ ಸುಮನಾ ವೆಂಕಟೇಶಜೋಯಿಸರಿಂದ ಕೃತಿ ಪರಿಚಯ
ಲೇಖಕ ಕವಿಸುರೇಶರ ಮಾತು
ಲೇಖಕರಿಗೆ ಸನ್ಮಾನ
'ಕವಿಕಿರಣ'ದ ಡಿಸೆಂಬರ್ ಸಂಚಿಕೆ ಬಿಡುಗಡೆ
ಮುಖ್ಯ ಅತಿಥಿಗಳ ಮೆಚ್ಚುಗೆಯ ನುಡಿಗಳು
     ಹಿರಿಯರಾದ ಬೆಂಗಳೂರಿನ ಶ್ರೀಮತಿ ಸುಬ್ಬಲಕ್ಷ್ಮಮ್ಮಸುಬ್ಬರಾವ್, ಶಿವಮೊಗ್ಗದ ಶ್ರೀಮತಿ ಸೀತಾಲಕ್ಷ್ಮಮ್ಮಕೃಷ್ಣಮೂರ್ತಿ ಮತ್ತು ಕೆಳದಿಯ ಶ್ರೀ ಗುಂಡಾಜೋಯಿಸರನ್ನು ಅತ್ಯಂತ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಶ್ರೀ ಗುಂಡಾಜೋಯಿಸರು ಹೊರಗಿನವರ ಸನ್ಮಾನಕ್ಕಿಂತ ಬಂಧುಗಳು ಮಾಡಿದ ಸನ್ಮಾನ ತಮಗೆ ತುಂಬಾ ಸಂತೋಷ ನೀಡಿದೆಯೆಂದು ಕೃತಜ್ಞತೆ ಅರ್ಪಿಸಿದರು. ಶ್ರೀ ಕುಮಾರಸ್ವಾಮಿಯವರು ಮಾತನಾಡುತ್ತಾ ಭಾವುಕರಾಗಿದ್ದು ಸಮಾವೇಶದ ಯಶಸ್ಸು ಬಿಂಬಿಸಿತ್ತು. ಆಯೋಜಕರು, ಸಮಾವೇಶಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಶ್ರೀಮತಿ ಸುಬ್ಬಲಕ್ಷ್ಮಮ್ಮಸುಬ್ಬರಾಯರನ್ನು ಸನ್ಮಾನಿಸಿದಾಗ ಸಂಭ್ರಮಿಸಿದ ಬಂಧುಗಳು
ಶ್ರೀಮತಿ ಸೀತಾಲಕ್ಷ್ಮಮ್ಮ ಕೃಷ್ಣಮೂರ್ತಿಯವರನ್ನು ಸನ್ಮಾನಿಸಿದಾಗ
ಶ್ರೀ ಕೆಳದಿ ಗುಂಡಾಜೋಯಿಸರನ್ನು ಸನ್ಮಾನಿಸಿದಾಗ ಹಿಗ್ಗಿದ ಕುಟುಂಬವರ್ಗ
ಸಮಾವೇಶದ ಅಯೋಜಕರ ಬಂಧುವರ್ಗದ ಸಂಭ್ರಮ
ಸಹಕಾರಿಗಳು ಶ್ರೀ ಹರಿಹರಪುರ ಶ್ರೀಧರ ದಂಪತಿಗಳಿಗೆ ಅಭಿನಂದನೆ
ಸಹಕಾರಿ ಶ್ರೀ ಪಾಂಡುರಂಗ, ಹಾಸನ ಇವರಿಗೆ ಅಭಿನಂದನೆ
     ಇದೇ ಸಂದರ್ಭದಲ್ಲಿ ಒಂದು ಪ್ರದರ್ಶಿನಿ ಏರ್ಪಡಿಸಿದ್ದು ಇದರಲ್ಲಿ ಕವಿಮನೆತನದವರು ರಚಿಸಿದ ಕಲಾಕೃತಿಗಳು, ವರ್ಣಚಿತ್ರಗಳು, ಪುಸ್ತಕಗಳು, ಭಾವಚಿತ್ರಗಳು ಇತ್ಯಾದಿಗಳನ್ನು ಪ್ರದರ್ಶಿಸಲಾಗಿದ್ದು ಇದು ಇತರರಿಗೂ ಸಹ ಏನನ್ನಾದರೂ ಮಾಡಲು ಪ್ರೇರೇಪಿಸಲು ಸಹಕಾರಿಯಾಯಿತು ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಶ್ರೀ ಸಾ.ಕ.ಕೃಷ್ಣಮೂರ್ತಿಯವರು ಚಿತ್ರಗಳನ್ನು ಪ್ಲೈವುಡ್ ಮೇಲೆ ಅಂಟಿಸಿ ಕಲಾರಚನೆಗೆ ಅನುಗುಣವಾಗಿ ಕತ್ತರಿಸಿ ಸಿದ್ಧಪಡಿಸಿದ ಕೃತಿಗಳು ಗಮನ ಸೆಳೆದವು.
 ಪ್ರದರ್ಶಿನಿಯ ಕೆಲವು ದೃಷ್ಯಗಳು


     ಬೆಂಗಳೂರಿನ ಶ್ರೀಮತಿ ಸುಮಾರಾಜೇಶ್, ಕುಮಾರಿಯರಾದ ಸ್ಫೂರ್ತಿಆತ್ರೇಯ ಮತ್ತು ಲಕ್ಷ್ಮಿಶ್ರೀಭಾರದ್ವಾಜರವರುಗಳಿಂದ ನಡೆದ ಭರತನಾಟ್ಯ ಕಾರ್ಯಕ್ರಮ ಕಲಾರಸಿಕರಿಗೆ ಮನದಣಿಸುವಲ್ಲಿ ಯಶಸ್ವಿಯಾಯಿತು. ಶ್ರೀಮತಿ ಸುಮಾರಾಜೇಶರು ಬೆಂಗಳೂರಿನಲ್ಲಿ ಸ್ಫೂರ್ತಿ ನಾಟ್ಯಶಾಲೆ ನಡೆಸುತ್ತಿದ್ದು ಹೆಸರಾಂತ ಕಲಾವಿದೆಯಾಗಿದ್ದಾರೆ. ಕುಮಾರಿ ಪಲ್ಲವಿ ಸತ್ಯಪ್ರಸಾದರ ಹಾಡುಗಾರಿಕೆ ಕೇಳುಗರಿಗೆ ಹಿತವಾದ ಅನುಭವ ನೀಡಿತು. ಪುಟಾಣಿ ಅಕ್ಷಯಳ ಏಕಪಾತ್ರಾಭಿನಯ. ಅನಘನ ಭಗವದ್ಗೀತಾ ಪಠಣ, ಕು. ಕವನ ಸಂಗಡಿಗರಿಂದ ಡ್ಯಾನ್ಸ್, ಶ್ರೀ ಲಕ್ಷ್ಮೀಶರ ಹಾಡು, ಡಾ. ಬಿ.ಎಸ್.ಆರ್. ದೀಪಕ್‌ರ ಸಂಗೀತ, ಅನೇಕ ಬಂಧುಗಳು, ವಿಶೇಷವಾಗಿ ಪುಟಾಣಿಗಳು ನಡೆಸಿಕೊಟ್ಟ ವಿವಿಧ ಮನರಂಜನಾ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿದವು. ಶ್ರೀಮತಿ ಬಿಂದುರಾಘವೇಂದ್ರರವರ ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಧ್ಯಾಹ್ನದ ಭೋಜನಾನಂತರ ಸಹ ಮನರಂಜನೆ ಕಾರ್ಯಕ್ರಮಗಳು ಮುಂದುವರೆದವು. ವಂದನೆ, ಅಭಿನಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಾಗ ಎಲ್ಲರೂ ಸ್ಮರಣೀಯ ನೆನಪುಗಳೊಂದಿಗೆ ತಮ್ಮ ತಮ್ಮ ಊರುಗಳಿಗೆ ತೆರಳಿದರೆ ಸಮಾವೇಶಕ್ಕಾಗಿ ಶ್ರಮಿಸಿದವರಲ್ಲಿ ಸಮಾವೇಶ ಸಫಲಗೊಂಡ ಬಗ್ಗೆ ಸಾರ್ಥಕಭಾವ ಮೂಡಿತ್ತು.
ಸ್ಫೂರ್ತಿ ಆತ್ರೇಯ
 ಸುಮಾ ರಾಜೇಶ್


ಲಕ್ಷ್ಮಿಶ್ರೀ ಭಾರದ್ವಾಜ್
ಪಲ್ಲವಿ ಸತ್ಯಪ್ರಸಾದರಿಂದ ಸುಮಧುರ ಹಾಡುಗಳು
ಅಕ್ಷಯ, ಓರ್ವ  ಪುಟಾಣಿ, ಅನಘ, ಡಾ. ದೀಪಕ್.
ಅಂಬಿಕಾ, ಗೋಪಾಲಕೃಷ್ಣ, ಅಕ್ಷಯ, ಲಕ್ಷ್ಮೀಶ



ಇವರುಗಳೇ ಸಕ್ರಿಯರಾಗಿ ಪಾಲುಗೊಂಡು ಸಮಾವೇಶವನ್ನು ಸಾರ್ಥಕಗೊಳಿಸಿದವರು