ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮಾರ್ಚ್ 28, 2012

ಕೇಕೆ ಹಾಕಿತು ಕ್ರೌರ್ಯ!

     [ಇದು ನಡೆದ ಸತ್ಯ ಕಥೆ. ಹೆಸರುಗಳನ್ನು ಬದಲಿಸಿದ್ದೇನೆ.]
     ನಾಗಾನಾಯ್ಕ ಮತ್ತು ಸರಸ್ವತೀಬಾಯಿ ಬಹಳಷ್ಟು ಚರ್ಚೆಯ ನಂತರ ಕೊನೆಗೂ ತಮ್ಮ ಒಬ್ಬಳೇ ಮಗಳು ದೀಪಾಳನ್ನು ನಾಗಾನಾಯ್ಕನ ಅಕ್ಕ ಲಕ್ಷ್ಮಮ್ಮನ ಕಿರಿಯ ಮಗ ಸೂರ್ಯನಿಗೆ ಕೊಡಲು ನಿರ್ಧರಿಸಿದರು. ಸೂರ್ಯ ನಿರುದ್ಯೋಗಿಯಾಗಿದ್ದರೂ ಅವನ ತಂದೆ ರಾಮಾನಾಯ್ಕ ನಿವೃತ್ತ ಶಿರಸ್ತೇದಾರರಾಗಿದ್ದು ಒಳ್ಳೆಯ ಆಸ್ತಿ, ಜಮೀನು ಹೊಂದಿದ ಸ್ಥಿತಿವಂತರಾಗಿದ್ದರು. ಸೂರ್ಯನ ಅಣ್ಣಂದಿರೂ ಪ್ರತಿಷ್ಠಿತ ಹುದ್ದೆಗಳಲ್ಲಿ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದು, ಸೂರ್ಯ ಸಹ ಕೆಲಸದ ಹುಡುಕಾಟದಲ್ಲಿದ್ದ. ಒಂದಲ್ಲಾ ಒಂದು ಕೆಲಸ ಸಿಕ್ಕೇ ಸಿಗುತ್ತದೆ, ಸಿಗದಿದ್ದರೂ ಜೀವನಕ್ಕೆ ಏನೂ ತೊಂದರೆಯಿಲ್ಲವೆಂಬ ಅನಿಸಿಕೆ ಈ ನಿರ್ಧಾರಕ್ಕೆ ಪುಷ್ಟಿ ಕೊಟ್ಟಿತ್ತು. ಸಾಮಾನ್ಯ ರೂಪಿನ ದೀಪಾ ಸಹ ಸೂರ್ಯನನ್ನು ನೋಡಿದ್ದು ಅವಳು ಹಿರಿಯರ ಅಭಿಪ್ರಾಯಕ್ಕೆ ಸಮ್ಮತಿಸಿದ್ದಳು. ಎರಡೂ ಮನೆಯವರ ನಡುವೆ ಮಾತುಕತೆಗಳಾದವು. ಮದುವೆ ಸಂದರ್ಭದಲ್ಲಿ ಇಪ್ಪತ್ತು ತೊಲ ಬಂಗಾರ ಮತ್ತು ಕೇವಲ ನಾಲ್ಕು ಲಕ್ಷ ರೂಪಾಯಿ ನಾಗಾನಾಯ್ಕ ಕೊಡಬೇಕೆಂದು ಒಪ್ಪಂದವಾಗಿ ನಿಶ್ಚಿತಾರ್ಥವೂ ಸಂಭ್ರಮದಿಂದ ನಡೆಯಿತು. ನಂತರದ ಒಂದೇ ತಿಂಗಳಿನಲ್ಲಿ ಧಾಂ ಧೂಂ ಆಗಿ ಮದುವೆಯೂ ಆಗಿಹೋಯಿತು. ಒಪ್ಪಂದದಂತೆ ವರದಕ್ಷಿಣೆಯಾಗಿ ಆ ನಿರುದ್ಯೋಗಿಯ ತಂದೆ-ತಾಯಿಯವರಿಗೆ ನಾಲ್ಕು ಲಕ್ಷ ರೂ. ಹಣ, ಬಂಗಾರವೂ ದಕ್ಕಿತು. ಯಾವುದೇ ಲೋಪವಾಗದಂತೆ ಮದುವೆ ಮಾಡಿದ ಸಮಾಧಾನ ದೀಪಾಳ ತಂದೆ-ತಾಯಿಯವರದಾಯಿತು.
     ಮದುವೆ ನಂತರದಲ್ಲಿ ಒಂದು ವಾರ ನೂತನ ದಂಪತಿಗಳು ಆ ಊರು, ಈ ಊರು ತಿರುಗಿ ಹಳ್ಳಿಯ ಮನೆಗೆ ಬಂದು ಇದ್ದರು. ಹಳ್ಳಿಯ ಮನೆಯಲ್ಲಿ ೧೫-೨೦ ದಿನಗಳು ಇದ್ದು, ಸೂರ್ಯ ಕೆಲಸ ಹುಡುಕುವ ಸಲುವಾಗಿ ದೀಪಾಳನ್ನೂ ಕರೆದುಕೊಂಡು ಬೆಂಗಳೂರಿನ ಕಾಲೇಜು ಒಂದರಲ್ಲಿ ಉಪನ್ಯಾಸಕನಾಗಿದ್ದ ಅಣ್ಣ ಚಂದ್ರನ ಮನೆಗೆ ಬಂದ. ಸೂರ್ಯನಿಗೆ ಕೆಲಸ ಸಿಗಲಿಲ್ಲ. ದೀಪಾಳಿಗೆ ಸೂರ್ಯನ ಅತ್ತಿಗೆಯಿಂದ ಮೂದಲಿಕೆ ತಪ್ಪಲಿಲ್ಲ. ಬಿಟ್ಟಿ ಕೂಳು ಹಾಕುವುದಕ್ಕೆ ನಿಮ್ಮಪ್ಪ ಏನು ನಮಗೆ ಹಣ ಕೊಟ್ಟಿದ್ದಾನಾ? ಎಂದು ಪ್ರಾರಂಭವಾದ ಮಾತು ಕೊನೆ ಕೊನೆಗೆ ದೀಪಾಳ ಮೇಲೆ ಕೈ ಮಾಡುವಷ್ಟು ಮುಂದುವರೆಯಿತು. ಒಂದು ತಿಂಗಳ ನಂತರ ಇನ್ನು ಸಹಿಸುವುದು ಸಾದ್ಯವೇ ಇಲ್ಲವೆಂದಾದಾಗ ದೀಪಾಳ ಗೋಳಾಟ ನೋಡಲಾರದೆ ಗಂಡ ಸೂರ್ಯ ಅವಳನ್ನು ಅವಳ ತಂದೆಯ ಮನೆಗೆ ಕರೆದುಕೊಂಡು ಬಂದು ಅಲ್ಲಿ ಒಂದು ವಾರವಿದ್ದು ನಂತರ ಅವನೊಬ್ಬನೇ ಕೆಲಸ ಹುಡುಕುವುದಾಗಿ ಹೇಳಿ ಬೆಂಗಳೂರಿಗೆ ಹೋದ. ಮತ್ತೂ ಒಂದು ತಿಂಗಳು ಕಳೆಯಿತು. ಉಂಡಾಡಿ ಗುಂಡನಂತೆ ಬೆಳೆದಿದ್ದ ಸೋಮಾರಿತನವೇ ಮೈವೆತ್ತಿದ್ದ ಸೂರ್ಯ ಕೆಲಸ ಸಿಗಲಿಲ್ಲವೆಂದು ಮಾವನ ಮನೆಗೆ ಬಂದು ಕೆಲವು ದಿನವಿದ್ದು ನಂತರ ಪತ್ನಿ ದೀಪಾಳನ್ನು ಕರೆದುಕೊಂಡು ವಾಪಸು ಹಳ್ಳಿಯ ಮನೆಗೆ ಬಂದು ಅಲ್ಲಿಯೂ ಕೆಲವು ದಿನಗಳವರೆಗೆ ಕಾಲ ಕಳೆದರು. ಪುನಃ ಪುಸಲಾಯಿಸಿ ಪತ್ನಿಯನ್ನೂ ಕರೆದುಕೊಂಡು ಬೆಂಗಳೂರಿನ ಅಣ್ಣನ ಮನೆಗೆ ಹೋಗಿ ಒಂದು ತಿಂಗಳು ಅಲ್ಲಿದ್ದ ಸೂರ್ಯನ ಭಂಡತನಕ್ಕೆ ಏನೆನ್ನಬೇಕೋ ಗೊತ್ತಿಲ್ಲ. ಯಥಾಪ್ರಕಾರ ದೀಪಾ ಮತ್ತು ಸೂರ್ಯನ ಅತ್ತಿಗೆಯರ ನಡುವೆ ಜಟಾಪಟಿ ನಡೆಯುತ್ತಲೇ ಇತ್ತು. ದೀಪಾ ಕಣ್ಣೀರಿನಲ್ಲೇ ಕೈ ತೊಳೆಯುವಂತಹ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಯಿತು. ತನಗೆ ಕೆಲಸ ಸಿಕ್ಕ ಮೇಲೆ ಎಲ್ಲಾ ಸರಿಯಾಗುತ್ತದೆ ಎಂದು ಸಮಾಧಾನ ಮಾಡಿದ ಸೂರ್ಯ ಪತ್ನಿಯನ್ನು ಕರೆದುಕೊಂಡು ಹೋಗಿ ದಾವಣಗೆರೆಯಲ್ಲಿದ್ದ ತನ್ನ ಅಕ್ಕನ ಮನೆಯಲ್ಲಿ ಬಿಟ್ಟು ತಾನೊಬ್ಬನೇ ಬೆಂಗಳೂರಿಗೆ ವಾಪಸು ಹೋದ. ಹಂಗಿನ ಕೂಳು ತಿನ್ನುತ್ತಿದ್ದ ದೀಪಾ ದಾವಣಗೆರೆಯಲ್ಲಿ ಒಂದು ತಿಂಗಳು ಇದ್ದು, ತಂದೆಯನ್ನು ಕರೆಸಿಕೊಂಡು ತವರು ಮನೆಗೇ ಬಂದಳು.
     ತವರುಮನೆಯಲ್ಲಿ ಎರಡು ತಿಂಗಳು ಕಳೆಯಿತು. ಅಳಿಯ ಮಹಾಶಯ ನಂತರ ಬಂದವನು ಪತ್ನಿಯನ್ನು ಕರೆದುಕೊಂಡು ಹೋಗಿ ಶಿವಮೊಗ್ಗದಲ್ಲಿದ್ದ ಇನ್ನೊಬ್ಬ ಅಣ್ಣನ ಮನೆಗೆ ಬಂದ. ಅಲ್ಲೂ ೧೦-೧೫ ದಿನಗಳು ಇದ್ದರು. ಆ ನಂತರದಲ್ಲಿ ಪತ್ನಿ ಮತ್ತು ತಾಯಿಯನ್ನೂ ಕರೆದುಕೊಂಡು ಪುನಃ ಬೆಂಗಳೂರಿನ ದೀಪಾಳ ಪಾಲಿನ ನರಕದ ಮನೆಗೆ ಹೋದ. ೧೦-೧೫ ದಿನಗಳಲ್ಲಿ ಹೆಂಗಸರುಗಳ ನಡುವಣ ಜಗಳ ಬಗೆಹರಿಯದಷ್ಟು ತಾರಕಕ್ಕೇರಿದಾಗ ಗಂಡ-ಹೆಂಡತಿ ಇಬ್ಬರೂ ಗಂಟು ಮೂಟೆ ಕಟ್ಟಿಕೊಂಡು ನಾಗಾನಾಯ್ಕನ ಮನೆಗೆ ಬಂದರು. ನಾಗಾನಾಯ್ಕ ಇಬ್ಬರಿಗೂ ಬುದ್ಧಿ ಹೇಳಿ ಒಂದು ದಿನ ತಮ್ಮ ಮನೆಯಲ್ಲಿ ಇರಿಸಿಕೊಂಡು ಇಬ್ಬರನ್ನೂ ವಾಪಸು ಬೆಂಗಳೂರಿಗೇ ಕಳಿಸಿದ. ಬೆಂಗಳೂರಿಗೆ ಹೋಗಿ ಕೆಲವು ದಿನಗಳಾಗಿರಬಹುದು. ಒಂದು ರಾತ್ರಿ ನಾಗಾನಾಯ್ಕನ ಅಕ್ಕ ಫೋನು ಮಾಡಿ ನಿನ್ನ ಮಗಳು ಸಿಟ್ಟು ಮಾಡುತ್ತಿರುತ್ತಾಳೆ, ಅವಳನ್ನು ಕರೆದುಕೊಂಡು ಹೋಗು ಎಂದು ತಿಳಿಸಿದ್ದಾಳೆ. ಮಗಳ ಹತ್ತಿರ ಮಾತನಾಡಿದರೆ ಅವಳು ಅಪ್ಪಾ, ನಾನು ಈಗಲೇ ಹೊರಟುಬರುತ್ತಿದ್ದೇನೆ. ಬೆಳಿಗ್ಗೆ ಶಿವಮೊಗ್ಗದ ರೈಲ್ವೇ ಸ್ಟೇಷನ್ನಿನ ಹತ್ತಿರ ಬಾ ಎಂದಿದ್ದಾಳೆ. ರಾತ್ರಿ ಬರುವುದು ಬೇಡ, ಬೆಳಿಗ್ಗೆ ಬಾ ಎಂದು ಹೇಳಿದ ಅವನು ಅಳಿಯನಿಗೂ ಬೆಳಿಗ್ಗೆ ಕರೆದುಕೊಂಡು ಬರುವಂತೆ ಹೇಳಿದ್ದಾನೆ. ಮರುದಿನ ಬೆಳಗಿನ ಜಾವ ೫.೩೦ಕ್ಕೆ ಪುನಃ ಅಪ್ಪನಿಗೆ ಫೋನು ಮಾಡಿದ ದೀಪಾ ತಾನು ಹೊರಟು ಬರುತ್ತಿರುವುದಾಗಿಯೂ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಮಧ್ಯಾಹ್ನ ಬರಬೇಕೆಂದೂ ತಿಳಿಸಿದ್ದಾಳೆ. ಅವಳು ಬರುವುದು ಬೇಡವೆಂದೂ, ತಾನೇ ಬೆಂಗಳೂರಿಗೆ ಬರುತ್ತಿರುವುದಾಗಿ ನಾಗಾನಾಯ್ಕ ಹೇಳಿದಾಗ ಅಪ್ಪಾ, ನೀನು ಬೇಗ ಬಾ, ಇಲ್ಲದಿದ್ದರೆ ನನ್ನನ್ನು ಸಾಯಿಸಿಬಿಡುತ್ತಾರೆ ಎಂದು ಅಳುತ್ತಾ ಹೇಳಿದ್ದಾಳೆ. ಆದರೂ ನಾಗಾನಾಯ್ಕ ಹೊಲದ ಹತ್ತಿರದ ಕೆಲಸ ಮುಗಿಸಿ ೧೧ ಕ್ಕೆ ಫೋನು ಮಾಡಿ ವಿಚಾರಿಸಿದ್ದಾನೆ. ಅವನ ಅಕ್ಕ ನಿನ್ನ ಮಗಳನ್ನು ಕರೆದುಕೊಂಡು ಹೋಗಿಬಿಡು ಎಂದು ತಿಳಿಸಿದ್ದಾಳೆ. ೧೨ ಗಂಟೆಗೆ ಹೊರಟು ಶಿವಮೊಗ್ಗ ತಲುಪಿ ಅಲ್ಲಿಂದ ರೈಲಿನಲ್ಲಿ ಹೊರಟ ನಾಗಾನಾಯ್ಕ ಬೆಂಗಳೂರಿನ ಮನೆ ತಲುಪಿದಾಗ ರಾತ್ರಿ ೯.೩೦ ಆಗಿತ್ತು.
      ನಾಗಾನಾಯ್ಕನಿಗೆ ಆ ಮನೆಯಲ್ಲಿ ತಣ್ಣನೆಯ ಸ್ವಾಗತ ದೊರೆಯಿತು. ಕುಶಾಲಿಗಾಗಿ ಎಲ್ಲರ ಯೋಗಕ್ಷೇಮ ವಿಚಾರಿಸಿದ ನಂತರ ಮಗಳ ಬಗ್ಗೆ ಕೇಳಿದ್ದಾನೆ. ಅಕ್ಕ ಲಕ್ಷ್ಮಮ್ಮ ನಿನ್ನ ಮಗಳು ಉರುಳು ಹಾಕಿಕೊಂಡಿದ್ದಾಳೆ ಎಂಬ ಉತ್ತರ ಕೊಟ್ಟಾಗ ನಾಗಾನಾಯ್ಕ ಹೌಹಾರಿದ್ದಾನೆ. ಸುಸ್ತಾಗಿ ಕುಸಿದು ಬಿದ್ದ ಅವನನ್ನು ಉಪಚರಿಸುವವರು ಅಲ್ಲಿ ಯಾರೂ ಇರಲಿಲ್ಲ. ಮಗಳ ಹೆಣವನ್ನೂ ನೋಡಲು ಅವನಿಗೆ ಧೈರ್ಯವಿರಲಿಲ್ಲ. ಅಂದು ಮಧ್ಯರಾತ್ರಿ ಸುಮಾರು ೧.೩೦ರ ವೇಳೆಗೆ  ಸೂರ್ಯನ ಮೂವರು ಅಣ್ಣಂದಿರು ಮತ್ತು ಇಬ್ಬರು ಸ್ಥಳೀಯ ಮುಖಂಡರು ಸೇರಿಕೊಂಡು ಹೆಣವನ್ನು ಹಳ್ಳಿಗೆ ಸಾಗಿಸಲು ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಒಂದು ಕೆಂಪು ಮಾರುತಿ ಒಮ್ನಿ ವಾಹನವನ್ನು ಊರಿನಿಂದಲೇ ತಂದಿದ್ದರು. ನಾಗಾನಾಯ್ಕ ಆಗ ಹೆಣವಿದ್ದ ಕೊಠಡಿಯ ಬಾಗಿಲಿಗೆ ಅಡ್ಡವಾಗಿ ನಿಂತು, ಪೋಳಿಸರಿಗೆ ದೂರು ಕೊಟ್ಟು ಅವರು ಬರುವವರೆಗೂ ದೇಹ ಸಾಗಿಸಬಾರದು ಎಂದು ಅವರಿಗೆ ಸುಮಾರು ಒಂದೂವರೆ ಗಂಟೆಯ ಕಾಲ ಅಡ್ಡಿಪಡಿಸಿದ್ದಾನೆ. ಎಲ್ಲರೂ ಸೇರಿ ಅವನನ್ನು ಸಮಾಧಾನ ಪಡಿಸಿ ಊರಿಗೆ ಹೋದ ಮೇಲೆ ಅಲ್ಲೇ ಪೋಲಿಸರಿಗೆ ದೂರು ಕೊಟ್ಟು, ಅವರು ತನಿಖೆ ನಡೆಸಿದ ಮೇಲೇ ಮುಂದಿನ ಕಾರ್ಯ ಮಾಡೋಣ ಎಂದು ಒಪ್ಪಿಸಿ ಹೆಣವನ್ನು ವ್ಯಾನಿನಲ್ಲಿ ಹಾಕಿಕೊಂಡು ಹೊರಟಿದ್ದಾರೆ. ಅದೇ ವ್ಯಾನಿನಲ್ಲಿ ನಾಗಾನಾಯ್ಕ ಬಂದರೂ ಮಗಳ ಹೆಣವನ್ನು ನೋಡುವ ಧೈರ್ಯ ಆಗಲೂ ಮಾಡಿರಲಿಲ್ಲ. ಆ ವ್ಯಾನು ಹಳ್ಳಿ ತಲುಪಿದ್ದು ಮಧ್ಯಾಹ್ನ ೧೨.೩೦ರ ವೇಳೆಗೆ.
     ಇಲ್ಲಿಯವರೆಗಿನ ಕಥೆ ದೀಪಾಳ ತಂದೆ, ತಾಯಿ ಮತ್ತು ಅಣ್ಣ ಹೇಳಿದ್ದು. ಮುಂದಿನ ಕಥೆಯನ್ನು ನಾನು ಮುಂದುವರೆಸುತ್ತೇನೆ.ಏಕೆಂದರೆ, ಇಲ್ಲಿಂದ ಮುಂದೆ ಪ್ರಕರಣದಲ್ಲಿ ನನ್ನ ಪ್ರವೇಶವಾಯಿತು.
     ಅಂದು ಸಾಯಂಕಾಲ ೭ ಗಂಟೆಯ ವೇಳೆಗೆ ಮನೆಗೆ ಸುಸ್ತಾಗಿ ಬಂದವನು ಬಟ್ಟೆ ಬದಲಾಯಿಸುತ್ತಿದ್ದ ವೇಳೆಗೆ ಪೋಲಿಸ್ ಇನ್ಸ್‌ಪೆಕ್ಟರರು ಫೋನಿನಲ್ಲಿ ವಿಷಯ ತಿಳಿಸಿ ಶವತನಿಖೆ ನಡೆಸಿಕೊಡಲು ಕೋರಿದ್ದರು. ಲಿಖಿತ ವರದಿ ಮತ್ತು ಕೋರಿಕೆ ಕಳುಹಿಸಿಕೊಡಲು ಹಾಗೂ ಕತ್ತಲಾದ್ದರಿಂದ ಅಲ್ಲಿ ಬೆಳಕಿನ ವ್ಯವಸ್ಥೆ ಮಾಡಲೂ ತಿಳಿಸಿದ್ದೆ. ಅರ್ಧ ಗಂಟೆ ಬಿಟ್ಟು ಕಛೇರಿಗೆ ಫೋನು ಮಾಡಿ ವಿಚಾರಿಸಿದರೆ ಇನ್ನೂ ಪೋಲಿಸರಿಂದ ಕೋರಿಕೆ ಬಂದಿರಲಿಲ್ಲವೆಂದು ತಿಳಿಯಿತು. ಅಷ್ಟರಲ್ಲಿ ಮೃತಳ ಊರಿನಿಂದ ಟ್ರ್ಯಾಕ್ಟರುಗಳಲ್ಲಿ ಜನ ಬಂದು ಹಳ್ಳಿಯಲ್ಲಿದ್ದಾರೆಂದೂ ಗಲಾಟೆಯಾಗುವ ಸಂಭವವಿದೆಯೆಂದೂ ನನಗೆ ಮಾಹಿತಿ ಸಿಕ್ಕಿತು. ಸಬ್‌ಇನ್ಸ್ ಪೆಕ್ಟರರಿಗೆ ಫೋನು ಮಾಡಿ ವರದಿ ಬಗ್ಗೆ ಪುನಃ ವಿಚಾರಿಸಿದೆ. ಬರವಣಿಗೆ ಕೆಲಸ ಆಗುತ್ತಿದೆ, ದೂರು ತಡವಾಗಿ ಕೊಟ್ಟಿದ್ದಾರೆ, ಇನ್ನು ಅರ್ಧ ಗಂಟೆಯ ಒಳಗೆ ಆಗುತ್ತದೆ ಎಂಬ ಉತ್ತರ ಬಂದಿತು. ರಾತ್ರಿ ೯.೦೦ರ ವೇಳೆಯಾದರೂ ಕೋರಿಕೆಯ ಸುಳಿವಿರದ ಕಾರಣ ಪುನಃ ಫೋನು ಮಾಡಿ ಈಗಾಗಲೇ ತಡವಾಗಿದೆ, ಅಲ್ಲಿ ಗಲಾಟೆಗೆ ಅವಕಾಶ ಕೊಡುವುದು ಬೇಡ. ಅಗತ್ಯದ ಸಿಬ್ಬಂದಿಯೊಂದಿಗೆ ಬನ್ನಿ, ನಾನು ಈಗ ಹೊರಟಿದ್ದೇನೆ ಎಂದಾಗ ಅವರು ಹಿಂದೆಯೇ ತಾವೂ ಬರುವುದಾಗಿ ತಿಳಿಸಿದರು. ಹತ್ತು ನಿಮಿಷ ನೋಡಿ ಒಬ್ಬರು ಗುಮಾಸ್ತರು ಮತ್ತು ಒಬ್ಬರು ಜವಾನರನ್ನು ಕರೆದುಕೊಂಡು ಪೋಲಿಸ್ ಠಾಣೆಯ ಮುಂದೆಯೇ ಹೋಗಿ ಅವರನ್ನು ಹೊರಡಲು ಸೂಚಿಸಿದೆ. ಕೆಲವರು ಸಿಬ್ಬಂದಿ ಕರೆದುಕೊಂಡು ಬರುವುದಾಗಿ ಹೇಳಿದಾಗ ನಾನು ಹಳ್ಳಿಗೆ ಹೊರಟೆ. ಹೆಣವನ್ನು ಮನೆಯ ಮುಂಭಾಗದಲ್ಲಿ ಒಂದು ಹಳೆಯ ಮಂಚದ ಮೇಲೆ ಮಲಗಿಸಲಾಗಿತ್ತು. ಜನ ಗುಂಪು ಕೂಡಿದ್ದರು. ಅಲ್ಲಿದ್ದವರಲ್ಲಿ ಹೆಚ್ಚಿನವರು ಮೃತಳ ಊರಿನವರಾಗಿದ್ದು, ಸ್ಥಳೀಯರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಮೃತಳ ಗಂಡನಾಗಲೀ, ಅವನ ಅಣ್ಣಂದಿರಾಗಲೀ ಅಲ್ಲಿ ಇರಲಿಲ್ಲ. ಭಯದಿಂದ ಜಾಗ ಖಾಲಿ ಮಾಡಿದ್ದಿರಬೇಕು. ಹಳ್ಳಿ ತಲುಪಿದ ಅರ್ಧ ಗಂಟೆ ನಂತರ ಬಂದ ಪೋಲಿಸ್ ಜೀಪಿನಲ್ಲಿ ಒಬ್ಬರು ಹೆಡ್ ಕಾನ್ಸ್ ಟೇಬಲ್ ಮತ್ತು ಒಬ್ಬರು ಪೇದೆ ಮಾತ್ರ ಇದ್ದುದು ಕಂಡು ನನಗೆ ಸಿಟ್ಟು ಬಂದರೂ ತೋರಿಸಿಕೊಳ್ಳಲಿಲ್ಲ. ಸಬ್ ಇನ್ಸ್‌ಪೆಕ್ಟರ್ ಎಲ್ಲಿ? ವರದಿ ಎಲ್ಲಿ? ಎಂದು ಕೇಳಿದರೆ ಲೆಟರ್ ಕಛೇರಿಗೆ ಕೊಟ್ಟಿದ್ದೇವೆ ಎಂಬ ಉತ್ತರ ಬಂತು. ಕಛೇರಿಗೆ ಫೋನು ಮಾಡಿ ಕೇಳಿದರೆ ಅಲ್ಲಿದ್ದ ಕಾವಲುಗಾರ ಯಾವ ಪೋಲಿಸರೂ ಬಂದಿಲ್ಲ, ಯಾರೂ ಲೆಟರ್ ಕೊಟ್ಟಿಲ್ಲ ಎಂದು ಹೇಳಿದ್ದ. ಅದಿಕೃತ ಕೋರಿಕೆ ಇಲ್ಲದೆ ಶವತನಿಖೆ ಮಾಡುವಂತಿಲ್ಲ, ಅಲ್ಲಿಂದ ವಾಪಸೂ ಬರುವ್ಲಂತಿಲ್ಲ, ಹಾಗೆ ಬಂದಿದ್ದರೆ ಅದು ತಪ್ಪು ಸಂಧೇಶ ರವಾನಿಸುತ್ತಿತ್ತು ಮತ್ತು ಗಲಾಟೆಗೆ ಅವಕಾಶವಾಗುತ್ತಿತ್ತು. ನಾನು ಯಾರೂ ಇಲ್ಲದ ಸ್ಥಳಕ್ಕೆ ಹೋಗಿ ಫೋನಿನಲ್ಲಿ ಸಬ್ ಇನ್ಸ್‌ಪೆಕ್ಟರರಿಗೆ ಕಠಿಣವಾಗಿ ನಿಂದಿಸಿದೆ. ಅವರು ರಾತ್ರಿ ಕತ್ತಲಾದ್ದರಿಂದ ಬೆಳಿಗ್ಗೆ ಶವತನಿಖೆ ಮಾಡಬಹುದೆಂಬ ಕಾರಣದಿಂದ ಹೀಗೆ ಮಾಡಿದ್ದೆಂದು ಹೇಳಿ ಮತ್ತಷ್ಟು ಬೈಸಿಕೊಂಡರು.  ನಾನು ಶವತನಿಖೆ ಮಾಡಿದ ನಂತರ ಮೃತರ ಸಂಬಂಧಿಗಳನ್ನು ವಿಚಾರಿಸಿ ಹೇಳಿಕೆ ಪಡೆಯುತ್ತಿದ್ದೆ. ಆದರೆ ಈ ಪ್ರಕರಣದಲ್ಲಿ ಪೋಲಿಸರ ಕೋರಿಕೆ ಬರುವವರೆಗೆ ಆ ಕೆಲಸವನ್ನಾದರೂ ಮಾಡಬಹುದೆಂದು ಶವದ ಪಕ್ಕದಲ್ಲಿಯೇ ಕುರ್ಚಿ ತರಿಸಿ ಹಾಕಿಕೊಂಡು ಮೃತೆಯ ತಂದೆ, ತಾಯಿ, ಅಣ್ಣ ಮತ್ತು ಗ್ರಾಮಸ್ಥರ ಹೇಳಿಕೆಗಳನ್ನು ಪಡೆಯಲು ಪ್ರಾರಂಭಿಸಿದೆ. ಅದು ಸಾಮಯಿಕ ಮತ್ತು ಸಾಂದರ್ಭಿಕವಾಗಿ ತೆಗೆದುಕೊಂಡಿದ್ದ ಅಗತ್ಯದ ನಿರ್ಧಾರವಾಗಿತ್ತು. ಇದರಿಂದ ಅಲ್ಲಿದ್ದ ಯಾರಿಗೂ ಯಾವುದೇ ಸಂಶಯ ಬರಲು ಅವಕಾಶವಾಗಲಿಲ್ಲ. ಕೋರಿಕೆ ಪತ್ರ ಹಿಡಿದು ಸಬ್‌ಇನ್ಸ್‌ಪೆಕ್ಟರ್ ಧಾವಿಸಿ ಬಂದ ನಂತರವೇ ಶವತನಿಖೆ ಪ್ರಾರಂಭಿಸಿದ್ದು. ನಾನು ಪ್ರಾರಂಭದಲ್ಲಿ ಹೇಳಿರುವ ಎಲ್ಲಾ ಸಂಗತಿಗಳೂ ದಾಖಲಿಸಿಕೊಂಡಿರುವ ಹೇಳಿಕೆಗಳಲ್ಲಿ ಇರುವುದಾಗಿದೆ.
     ನಾನು ದೀಪಾಳ ಶವದ ಪಕ್ಕದಲ್ಲಿಯೇ ಕುಳಿತಿದ್ದರೂ ತನಿಖೆಯ ದೃಷ್ಟಿ ಬೀರಿದ್ದು ನಿಯಮದ ರೀತ್ಯಾ ಶವತನಿಖೆಯ ಕೋರಿಕೆ ಪತ್ರ ಕೈಸೇರಿದ ನಂತರವೇ. ೨೪ ವರ್ಷದ, ಮದುವೆಯಾದ ಕೇವಲ ೯ ತಿಂಗಳಲ್ಲಿ ಅಂತ್ಯ ಕಂಡಿದ್ದ, ಆ ೯ ತಿಂಗಳುಗಳಲ್ಲೂ ಕೇವಲ ನರಕವನ್ನೇ ಕಂಡಿದ್ದ, ಅವರಿವರ ಮನೆಗಳಲ್ಲಿ ಹಂಗಿನ ಕೂಳಿಗಾಗಿ ಕೈಯೊಡ್ಡಬೇಕಾಗಿ ಬಂದಿದ್ದ ದೀಪಾಳ ಪ್ರಾಣದೀಪ ನಂದಿಹೋಗಿತ್ತು. ಆ ೯ ತಿಂಗಳುಗಳಲ್ಲೇ ಎರಡು ಸಲ ಮಕ್ಕಳು ಈಗಲೇ ಬೇಡವೆಂದು ಅತ್ತೆಯ ಮನೆಯಲ್ಲಿ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದರೆಂದು ಮತ್ತು ಮಕ್ಕಳಾಗದಂತೆ ಬಲವಂತವಾಗಿ ಮಾತ್ರೆಗಳನ್ನು ನುಂಗಿಸುತ್ತಿದ್ದರೆಂದು ದೀಪಾಳ ತಾಯಿ ಹೇಳಿಕೆಯಲ್ಲಿ ತಿಳಿಸಿದ್ದಳು.  ಇನ್ನೂ ಅರಳಬೇಕಾಗಿದ್ದ ಹೂವೊಂದನ್ನು ಅರಳುವ ಮುನ್ನವೇ ಹೊಸಕಿ ಹಾಕಿದ್ದ ಕಟುಕರನ್ನು ಮನದಲ್ಲೇ ಶಪಿಸಿದೆ. ಶವ ಇರುವ ಜಾಗದ ಸುತ್ತಲೂ ಚಾಪೆ, ಸೀರೆಗಳಿಂದ ಪರದೆ ಕಟ್ಟಿಸಿದೆ. ಸಂದಿಯಿಂದ ಇಣುಕಿ ನೋಡುತ್ತಿದ್ದವರನ್ನು ಗದರಿಸಿ ಕಳಿಸಬೇಕಾಯಿತು. ನನ್ನ ಸಿಟ್ಟು ತಣಿದಿರದಿದ್ದ ಕಾರಣ, ಪಕ್ಕ ನಿಂತುಕೊಂಡಿದ್ದ ಪೇದೆಗೆ ಏನು ಮಿಕಿಮಿಕಿ ನೋಡುತ್ತಿದ್ದೀರಿ? ಜನರನ್ನು ದೂರ ಕಳಿಸಿ ಎಂದು ಸಿಡುಕಿದೆ. ನಿಯಮದಂತೆ ಶವತನಿಖೆ ನಡೆಸಿ ಕಂಡು ಬಂದ ಸಂಗತಿಗಳನ್ನು ಗುಮಾಸ್ತರಿಗೆ ಹೇಳಿ ಬರೆಸುತ್ತಿದ್ದೆ. ಶವದ ಮೂಗು, ಬಾಯಿ, ಕಣ್ಣುಗಳಿಂದ ರಕ್ತ ಜಿನುಗಿತ್ತು. ಬಲ ಕೆನ್ನೆ ಮತ್ತು ಎದೆಯ ಭಾಗ ಊದಿತ್ತು. ಕಿವಿಯಲ್ಲೂ ರಕ್ತ ಹೆಪ್ಪುಗಟ್ಟಿತ್ತು. ಬಲ ಕಂಕುಳಿನ ಕೆಳಭಾಗದಲ್ಲಿ, ಬಲಪಕ್ಕೆಗಳ ಭಾಗದಲ್ಲಿ ರಕ್ತನಾಳಗಳು ಒಡೆದು ರಕ್ರ ಹೆಪುಗಟ್ಟಿದ ಗುರುತುಗಳಿದ್ದವು. ಎಡಭಾಗದಲ್ಲೂ ಹೀಗೆಯೇ ಗುರುತುಗಳಿದ್ದವು. ಸೊಂಟದ ಭಾಗದಲ್ಲಿ ಮತ್ತು ತೊಡೆಗಳಲ್ಲಿ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದ ಗುರುತುಗಳು ಕಂಡವು. ಸಾಯುವ ಮುನ್ನ ಅವಳು ಅನುಭವಿಸಿರಬಹುದಾದ ಚಿತ್ರಹಿಂಸೆಯನ್ನು ನೆನೆದು ಇಂತಹ ವಿಕೃತರೂ ಇರುತ್ತಾರೆಯೇ ಎಂದು ನೊಂದುಕೊಂಡೆ. ಎಡಗೈ ರಟ್ಟೆ, ಮೊಣಕೈ, ಬಲ ಮೊಣಕಾಲಿನ ಕೆಳಗೆ ಎಳೆದಾಡಿದ, ಚರ್ಮ ಕಿತ್ತುಬಂದ ತರಚಿದ ಗುರುತುಗಳಿದ್ದು, ಬಹುಶಃ ಅವು ಶವವನ್ನು ವ್ಯಾನಿನಲ್ಲಿ ಇಡುವಾಗ, ಪ್ರಯಾಣಿಸುವಾಗ,  ಇಳಿಸುವಾಗ ಆಗಿರಬಹುದಾದ ತರಚು ಗಾಯಗಳಿರಬೇಕು. ಪಂಚರ ಸಮಕ್ಷಮದಲ್ಲಿ ಈ ಕೆಲಸ ಮುಗಿಸಿ, ಅವರುಗಳ ಸಹಿಯನ್ನೂ ಪಡೆದು, ಶವಪರೀಕ್ಷೆ ನಡೆಸಿ ವರದಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಿದೆ. ಶವಪರೀಕ್ಷೆ ನಂತರ ಸಂಬಂಧಿಕರಿಗೆ ಶವವನ್ನು ಅಂತ್ಯ ಸಂಸ್ಕಾರಕ್ಕಾಗಿ ಒಪ್ಪಿಸಲು ಮತ್ತು ಮುಂದಿನ ಅಗತ್ಯದ ತನಿಖೆ ಮುಂದುವರೆಸಲು ಸಬ್ ಇನ್ಸ್‌ಪೆಕ್ಟರರಿಗೆ ತಿಳಿಸಿ ಅಲ್ಲಿಂದ ಹೊರಟುಬಂದೆ. ಶವಪರೀಕ್ಷೆ ನಡೆಸಲು ವೈದ್ಯಾಧಿಕಾರಿಯವರಿಗೆ ಸೂಚನಾಪತ್ರ ಕಳಿಸಿದ ಮೂರು ಗಂಟೆಯ ನಂತರದಲ್ಲಿ ಅವರಿಂದ ಶವ ಕೊಳೆಯಲು ಪ್ರಾರಂಭಿಸಿರುವುದರಿಂದ ಶವಪರೀಕ್ಷೆಯನ್ನು ಮಾಡುವುದು ಕಷ್ಟವೆಂದು ತಿಳಿಸಿದ್ದರಿಂದ ಜಿಲ್ಲಾ ಆಸ್ಪತ್ರೆಯಿಂದ ಫೋರೆನ್ಸಿಕ್ ತಜ್ಞರನ್ನು ಕಳಿಸಿ ಶವಪರೀಕ್ಷೆ ಮಾಡುವಂತೆ ಪತ್ರ ಕಳುಹಿಸಿದೆ. ಅವರು ಬಂದು ತನಿಖೆ ನಡೆಸುವ ಹೊತ್ತಿಗೆ ಸಂಜೆಯಾಗಿತ್ತು. ಅವರು ಏನು ವರದಿಯನ್ನು ಪೋಲಿಸರಿಗೆ ಸಲ್ಲಿಸಿದರು ಎಂಬುದು ನನಗೆ ತಿಳಿದಿಲ್ಲ. ಕೊಲೆ ಮಾಡಿ ಕಲ್ಲು ಕಟ್ಟಿ ನೀರಿನಲ್ಲಿ ಹಲವಾರು ದಿನಗಳು ಇದ್ದು ಜಲಚರಗಳು ತಿಂದು ಅಕರಾಳ ವಿಕರಾಳವಾಗಿದ್ದ ಶವದ ಪರೀಕ್ಷೆಯನ್ನೇ ವೈದ್ಯರು ಮಾಡಿದ್ದ ಸಂಗತಿ ನನ್ನ ಅನುಭವದ ಬುತ್ತಿಯಲ್ಲಿದೆ. ಹಾಗಿರುವಾಗ ಈ ಶವದ ಪರೀಕ್ಷೆಗೆ ವೈದ್ಯರು ಏಕೆ ಹಿಂಜರಿದರು ಎಂಬ ಬಗ್ಗೆ ಅಧಿಕೃತವಾಗಿ ನಾನು ಹೇಳಲು ನಾನು ವೈದ್ಯಕೀಯ ವಿಷಯಗಳ ತಜ್ಞನಲ್ಲವಾದ್ದರಿಂದ ಸಾಧ್ಯವಿಲ್ಲ. ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟರ ನ್ಯಾಯಾಲಯಕ್ಕೆ ಶವತನಿಖಾ ವರದಿಯನ್ನು ದಾಖಲಿಸಿದ್ದ ಹೇಳಿಕೆಗಳು ಹಾಗೂ ನನ್ನ ಅನಿಸಿಕೆಗಳೊಂದಿಗೆ ಕಳುಹಿಸಿದೆ. ತನಿಖೆ ಕಾಲದಲ್ಲಿ ನನ್ನ ಜೊತೆಯೇ ಹಲವಾರು ಗಂಟೆಗಳ ಕಾಲ ಇರಬೇಕಾಗಿ ಬಂದಿದ್ದ ಗುಮಾಸ್ತ ಛಳಿಜ್ವರ ಬಂದು ಮೂರು ದಿನ ರಜಾ ಹಾಕಿದ್ದ. ಟಿವಿ ೯ರಲ್ಲಿ ಈ ಪ್ರಕರಣದ ಸುದ್ದಿಯನ್ನು ರಂಜಿತವಾಗಿ ತೋರಿಸಲಾಯಿತು. ಆ ಸುದ್ದಿ ಒಳ್ಳೆಯ ಮತ್ತು ಪ್ರಸಾರ ಮಾಡಬೇಕಾಗಿದ್ದ ರೀತಿಯಲ್ಲಿ ಇರಲಿಲ್ಲವೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
     ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ತ್ವರಿತಗತಿ ನ್ಯಾಯಾಲಯಗಳು ರಚಿತವಾಗಿರುವುದರಿಂದ ಮೊದಲಿಗಿಂತ ಪರವಾಗಿಲ್ಲವೆಂಬಂತೆ ಪ್ರಕರಣಗಳು ಇತ್ಯರ್ಥವಾಗುತ್ತಿದೆ. ಈ ಘಟನೆ ನಡೆದ ಸ್ಥಳ ಬೆಂಗಳೂರು ಆಗಿದ್ದರಿಂದ ಅಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. ಘಟನೆ ನಡೆದ ಸುಮಾರು ಎರಡು ವರ್ಷಗಳ ನಂತರ ನನಗೆ ಸಾಕ್ಷಿ ಹೇಳಿಕೆ ನೀಡಲು ಸಮನ್ಸ್ ಬಂದಿತು. ಹೇಳಿಕೆ ನೀಡಲು ಹೋದ ಸಂದರ್ಭದಲ್ಲಿ ಕಟಕಟೆಯಲ್ಲಿ ನಿಂತಿದ್ದ, ಸುಮಾರು ಎರಡು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಪ್ರಥಮ ದರ್ಶನ ನನಗಾಯಿತು. ಹೇಳಿಕೆ ನೀಡುವ ಮುನ್ನ ಕಡತವನ್ನು ನೋಡಲು ಮತ್ತು ಚರ್ಚಿಸಲು ಸರ್ಕಾರಿ ವಕೀಲರನ್ನು ಭೇಟಿಯಾದ ಸಂದರ್ಭದಲ್ಲಿ ಯಾವ ಪಂಚರ ಸಮಕ್ಷಮದಲ್ಲಿ ನಾನು ಶವತನಿಖೆ ನಡೆಸಿದ್ದೆನೋ ಅವರೆಲ್ಲರೂ ತಮಗೇನೂ ಗೊತ್ತಿಲ್ಲವೆಂಬಂತೆ ಸಾಕ್ಷ್ಯ ಹೇಳಿದ್ದ ವಿಷಯ ತಿಳಿಯಿತು. ಪೋಲಿಸರು ಹೆಸರಿಸಿದ್ದ ಇತರ ಕೆಲವು ಸಾಕ್ಷಿಗಳೂ ಪ್ರತೀಕೂಲ ಹೇಳಿಕೆ ನೀಡಿದ್ದುದೂ ತಿಳಿಯಿತು. ಸರ್ಕಾರಿ ವಕೀಲರು 'ಮೃತಳ ತಂದೆ ಸರಿಯಿಲ್ಲ, ಪಾಪ, ಆ ಕಾಲೇಜು ಲೆಕ್ಚರರ್ ಎರಡು ವರ್ಷಗಳಿಂದ ಜೈಲಿನಲ್ಲಿರಬೇಕಾಗಿ ಬಂದಿದೆ' ಎಂದಾಗ ಪ್ರಕರಣ ಸಾಗುತ್ತಿದ್ದ ರೀತಿಯ ಕಲ್ಪನೆ ನನಗಾಗಿತ್ತು. ನಾನು ನನ್ನ ಹೇಳಿಕೆ ನೀಡಿ ನಾನು ಮಾಡಿದ ತನಿಖೆಯನ್ನು ಸಮರ್ಥಿಸಿಕೊಂಡು, ಆರೋಪಿಗಳ ಪರ ವಕೀಲರ ಅಡ್ಡಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಟ್ಟಿದ್ದೆ. ಮುಂದೇನಾಯಿತು ಎಂಬ ವಿಷಯ ನನಗೆ ತಿಳಿಯಲಿಲ್ಲ. ಪ್ರಿಯ ದೀಪಾ, ಮುಂದಿನ ಜನ್ಮದಲ್ಲಾದರೂ ನಿನಗೆ ಸುಖ, ನ್ಯಾಯ ಸಿಗಲಿ ಎಂದು ಹಾರೈಸುವೆ.
     ಪ್ರಪಂಚವನ್ನು ನೋಡುವ ನಮ್ಮ ದೃಷ್ಟಿ ಬದಲಾಗಬೇಕೆಂದು ತಿಳಿದವರು ಹೇಳುತ್ತಾರೆ. ಎಲ್ಲಾ ವಿಷಯದಲ್ಲೂ ಒಳ್ಳೆಯದನ್ನು ಕಾಣಬೇಕೆನ್ನುತ್ತಾರೆ. ಈ ಪ್ರಕರಣದಲ್ಲಿ ಒಳ್ಳೆಯ ಸಂಗತಿ ಹುಡುಕಲು ನಾನು ವಿಫಲನಾಗಿರುವೆ. ನನ್ನ ನೋಟದಲ್ಲೇ ಏನೋ ತಪ್ಪಿರಬೇಕು!
-ಕ.ವೆಂ.ನಾಗರಾಜ್.
************
ಹಿಂದಿನ ಅನುಭವ ಕಥನ - 'ಶವಗಳೊಡನೆ ಸಂಭಾಷಣೆ'ಗೆ ಲಿಂಕ್: http://kavimana.blogspot.in/2012/03/blog-post_26.html

ಸೋಮವಾರ, ಮಾರ್ಚ್ 26, 2012

ಶವಗಳೊಡನೆ ಸಂಭಾಷಣೆ


     ಸುಮಾರು ೧೦ ವರ್ಷಗಳ ಹಿಂದಿನ ಒಂದು ಭಾನುವಾರ. ದಿನನಿತ್ಯದ ಕೆಲಸದ ಒತ್ತಡಗಳನ್ನು ಮರೆತು ಮನೆಯವರೊಂದಿಗೆ ಕಾಲ ಕಳೆಯಬೇಕೆಂದುಕೊಂಡಿದ್ದ ದಿನ. ಬೆಳಿಗ್ಗೆ ಸುಮಾರು ೭ ಘಂಟೆಯ ಸಮಯವಿರಬಹುದು. ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಕೊಣನೂರಿನ ಸಬ್ ಇನ್ಸ್‌ಪೆಕ್ಟರರಿಂದ ಫೋನು ಬಂದಿತು. ಹಿಂದಿನ ದಿನ ಕೇರಳಾಪುರದಲ್ಲಿ ಒಬ್ಬ ಹೆಣ್ಣುಮಗಳು ನೇಣು ಹಾಕಿಕೊಂಡು ಸತ್ತಿದ್ದಾಳೆಂದೂ, ಕೂಡಲೇ ಬಂದು ಶವತನಿಖೆ ನಡೆಸಿಕೊಡಬೇಕೆಂದೂ ಅವರು ಕೋರಿದ್ದರು. ಸರಿ, ಭಾನುವಾರದ ಕಥೆ ಮುಗಿಯಿತು ಎಂದು ಅಂದುಕೊಂಡು ಬಟ್ಟೆ ಹಾಕಿಕೊಂಡು ಜೀಪಿಗೆ ಕರೆಕಳುಹಿಸಿದೆ. ಗುಮಾಸ್ತರೊಬ್ಬರನ್ನು ಜೊತೆಗೆ ಕರೆದುಕೊಂಡು ಕೇರಳಾಪುರ ತಲುಪಿದಾಗ ಅಲ್ಲಿನ ಒಂದು ಮನೆಯ ಮುಂದೆ ಜನರ ದೊಡ್ಡ ಗುಂಪು ಕೂಡಿತ್ತು. ಪೋಲಿಸರು ಜನರನ್ನು ನಿಯಂತ್ರಿಸುತ್ತಿದ್ದರು. ನಾನು ಜೀಪಿನಿಂದ ಇಳಿದ ತಕ್ಷಣ ಜನರ ಗುಂಪು 'ಸಾಹೇಬರು ಬಂದರು' ಎನ್ನುತ್ತಾ ಅಕ್ಕ ಪಕ್ಕ ಸರಿದು ನನಗೆ ಮನೆಯ ಒಳಗೆ ಹೋಗಲು ದಾರಿ ಮಾಡಿಕೊಟ್ಟರು. ನಾನು ಮನೆಯ ಒಳಗೆ ಹೋದಾಗ ನನ್ನ ಹಿಂದೆ ಒಬ್ಬ ಪೋಲಿಸ್ ಪೇದೆ, ಗುಮಾಸ್ತ ಮತ್ತು ಒಬ್ಬ ಫೋಟೋಗ್ರಾಫರ್ ಬಂದರು. ನಾನು ಮನೆಯ ಒಳ ಕೊಠಡಿಗೆ ಹೋಗುತ್ತಾ ಬಾಗಿಲ ಪಕ್ಕದಲ್ಲಿ ನಿಂತಿದ್ದ ಒಬ್ಬ ಹೆಂಗಸಿಗೆ "ಎಲ್ಲಮ್ಮಾ?" ಎನ್ನುತ್ತಾ ಎರಡು ಹೆಜ್ಜೆ ಮುಂದಿಟ್ಟವನು ಗಕ್ಕನೆ ನಿಂತು ಹಿಂತಿರುಗಿದೆ. ನಾನು ಯಾರನ್ನು ವಿಚಾರಿಸಿ ಮುಂದೆ ಹೋಗಿದ್ದೆನೋ ಅದೇ ಹೆಣವಾಗಿತ್ತು. ಮನೆಯಲ್ಲಿ ನೀರವ ಮೌನ ಆವರಿಸಿತ್ತು. 
     ವಿಷಯ ಮುಂದುವರೆಸುವ ಮುನ್ನ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರುವುದು ಅಗತ್ಯವಾಗಿದೆ. ಯಾವುದೇ ಹೆಣ್ಣುಮಗಳು ಮದುವೆಯಾದ ೭ ವರ್ಷಗಳ ಒಳಗೆ ಮೃತಳಾದರೆ ಅದನ್ನು ವರದಕ್ಷಿಣೆಗಾಗಿ ಆದ ಸಾವೆಂಬ ಹಿನ್ನೆಲೆಯಲ್ಲಿ ತಾಲ್ಲೂಕು ಮ್ಯಾಜಿಸ್ಟ್ರೇಟರು ಮತ್ತು ಮೇಲ್ಪಟ್ಟ ಅಧಿಕಾರಿಯಿಂದ ಶವತನಿಖೆ ನಡೆಸಬೇಕಾಗಿರುತ್ತದೆ. ಪೋಲಿಸರಿಂದ ಪ್ರಥಮ ವರ್ತಮಾನ ವರದಿಯೊಡನೆ ಶವತನಿಖೆಗೆ ಕೋರಿಕೆ ಸ್ವೀಕರಿಸಿದ ನಂತರ ತನಿಖೆ ಮಾಡಲಾಗುತ್ತದೆ. ಕೆಲವು ಪ್ರಕರಣಗಳನ್ನು ಯಾರ ಗಮನಕ್ಕೂ ಬರದಂತೆ ಮುಚ್ಚಿಹಾಕುವುದು, ಹಣದ ವಿನಿಮಯ, ರಾಜಕಾರಣಿಗಳ ಮಧ್ಯಪ್ರವೇಶದಿಂದ ರಾಜಿ ಮಾಡಿಕೊಂಡು ಬಿಡುವುದು, ಇತ್ಯಾದಿಗಳೂ ನಡೆಯುತ್ತವೆ. ಕೆಲವು ವೈದ್ಯರುಗಳೂ ಸಹ ಹಣದ ಪ್ರಭಾವದಿಂದ ಸುಳ್ಳು ಪೋಸ್ಟ್ ಮಾರ್ಟಮ್ ವರದಿ ಕೊಟ್ಟ ಪ್ರಕರಣಗಳೂ ಇಲ್ಲವೆನ್ನಲಾಗುವುದಿಲ್ಲ. ಪ್ರಕರಣ ಮುಚ್ಚಿಹಾಕಲು ಕೆಲವು ಪ್ರಕರಣಗಳಲ್ಲಿ ಪೋಲಿಸರ ಸಹಕಾರ ಸಹ ಇಲ್ಲವೆಂದು ಹೇಳಲಾಗುವುದಿಲ್ಲ. ಮುಖ್ಯವಾಗಿ ಪ್ರಕರಣ ಮುಚ್ಚಿಹಾಕುವಂತಹ ಪ್ರಸಂಗದಲ್ಲಿ ಪ್ರಮುಖ ಪಾತ್ರ ವಹಿಸುವುದು ರಾಜಕಾರಣ ಮತ್ತು ಹಣ ಎಂಬುದಂತೂ ಗೊತ್ತಿರುವ ಸತ್ಯ. ಈಗ ಇಷ್ಟು ಮಾಹಿತಿ ಸಾಕು. ಮೂಲ ವಿಷಯ ಮುಂದುವರೆಸುವೆ.
     ಎಲ್ಲರ ಗಮನ ನನ್ನ ಮೇಲಿತ್ತು. ನಾನು ಶವವನ್ನು, ಶವವಿದ್ದ ಸ್ಥಿತಿಯನ್ನು ಗಮನಿಸಿದೆ. ಬಾಗಿಲಿನ ಪಕ್ಕದಲ್ಲಿದ್ದ ತೊಲೆಯಿಂದ ಪ್ಲಾಸ್ಟಿಕ್ ಹಗ್ಗದಲ್ಲಿ ನೇತಾಡುತ್ತಿದ್ದ ಶವದ ಕಾಲುಗಳು ಮುಂಚಾಚಿ ಇನ್ನೇನು ನೆಲವನ್ನು ಸೋಕುವಂತಿತ್ತು. ನೇಣು ಹಾಕಿಕೊಳ್ಳುವವರು ಅಷ್ಟು ಕಡಿಮೆ ಎತ್ತರದಿಂದ ನೇಣು ಹಾಕಿಕೊಳ್ಳಲಾರರು ಎಂದು ನನ್ನ ಮನಸ್ಸು ಹೇಳುತ್ತಿತ್ತು. ನಾನು ಪರೀಕ್ಷಿಸಲು ಅನುಕೂಲವಾಗುವಂತೆ ಪೋಲಿಸ್ ಪೇದೆ ಶವವನ್ನು ಪಕ್ಕಕ್ಕೆ ಸರಿಸಿದ್ದರಿಂದ ಅಲ್ಲಾಡುತ್ತಿದ್ದ ಶವ ನೀವಂದುಕೊಂಡಿರುವುದು ಸರಿ ಎಂದು ಹೇಳುವಂತಿತ್ತು. ಶವದ ನಾಲಿಗೆ ಹೊರಚಾಚಿದ್ದು ಹಲ್ಲುಗಳಿಂದ ಕಚ್ಚಿಕೊಂಡಿದ್ದು, ಬಾಯಿಯಿಂದ ನೊದ್ಲೆ ಹೊರಬಂದಿತ್ತು. ತೊಲೆಯಿಂದ ನೆಲಕ್ಕೆ ಇದ್ದ ಅಂತರ ಸುಮಾರು ೭ ಅಡಿ ಇತ್ತು. ಹೆಣದ ಕುತ್ತಿಗೆಯ ಗಂಟಿಗೂ ತೊಲೆಗೂ ಇದ್ದ ಅಂತರ ಸುಮಾರು ಎರಡೂವರೆ ಅಡಿ ಇದ್ದು, ಕೆಳಗಿನ ಪಾದಕ್ಕೂ ನೆಲಕ್ಕೂ ಇದ್ದ ಅಂತರ ಸುಮಾರು ಒಂದೂವರೆ ಇಂಚು ಇತ್ತು. ತೊಲೆಗೆ ಮೂರು ಎಳೆಯಲ್ಲಿ ಸುತ್ತಿ ಹಗ್ಗವನ್ನು ಗಂಟು ಹಾಕಲಾಗಿತ್ತು. ಶವದ ಕುತ್ತಿಗೆಯಲ್ಲಿದ್ದ ಹಗ್ಗವೂ ಮೂರು ಎಳೆಯಿಂದ ಸುತ್ತಿ ಗಂಟು ಹಾಕಿದ್ದಾಗಿತ್ತು. ಆ ಸ್ಥಿತಿಯಲ್ಲಿ ಕೆಲವು ಫೋಟೋಗಳನ್ನು ಸ್ಥಳೀಯ ಫೋಟೋಗ್ರಾಫರನ ಸಹಾಯದಿಂದ ತೆಗೆಸಿದೆ. ಹೆಣದ ಫೋಟೋ ತೆಗೆಯಲು ಹೆದರುತ್ತಿದ್ದ ಅವನಿಗೆ ಗದರಿಸಿ ಧೈರ್ಯ ಹೇಳಬೇಕಾಯಿತು. ನಂತರದಲ್ಲಿ ಹೆಣವನ್ನು ಕೆಳಗೆ ಇಳಿಸಿ ಒಂದು ಚಾಪೆಯ ಮೇಲೆ ಮಲಗಿಸಿ ಹಲವು ಕೋನಗಳಿಂದ ಫೋಟೋ ತೆಗೆಸಿದೆ. ಕುತೂಹಲದಿಂದ ಗುಂಪು ಕೂಡಿದ್ದ ಜನರನ್ನು ಹೊರಕಳುಹಿಸಿ ಒಬ್ಬರು ಹೆಂಗಸನ್ನು ಕರೆಸಿ ಶವದ ಬಟ್ಟೆ ಸರಿಸಿಸಿ ದೇಹದಲ್ಲಿ ಏನಾದರೂ ಗಾಯಗಳಾಗಿವೆಯೇ, ಗಮನಿಸುವಂತಹ ಅಸಹಜ ಸಂಗತಿಗಳಿವೆಯೇ ಎಂಬುದನ್ನು ನೋಡಿದೆ. ಅದು ನನ್ನ ಕರ್ತವ್ಯವಾಗಿತ್ತು. ಕುತ್ತಿಗೆಯ ಬಲಭಾಗದಿಂದ ಗಂಟಲವರೆಗೆ ಸುಮಾರು ೧೦ ಇಂಚು ಉದ್ದ, ಅರ್ಧ ಇಂಚು ಆಳ ಕೊರೆದಿರುವ ಲಿಗೇಚರ್ ಮಾರ್ಕು ಇತ್ತು. ಕುತ್ತಿಗೆಯ ಎಡಭಾಗದಲ್ಲೂ ಸುಮಾರು ೯ ಇಂಚು ಉದ್ದ, ಅರ್ಧ ಇಂಚು ಆಳದ ಕೊರೆದ ಗುರುತು ಇತ್ತು. ಎರಡು ಕೈಗಳೂ ದೇಹಕ್ಕೆ ಅಂಟಿಕೊಂಡಂತೆ ಇದ್ದು ನೀಳವಾಗಿದ್ದವು. ಮರ್ಮಸ್ಥಾನಗಳಿಂದ ತ್ಯಾಜ್ಯ ಹೊರಬಂದಿರಲಿಲ್ಲ. ಬಲಗೈಯಲ್ಲಿ ಒಂದು ಕೇಸರಿ ಬಣ್ಣದ ಗಾಜಿನ ಬಳೆಯಿತ್ತು. ಘಟನೆ ನಡೆದ ಸ್ಥಳಸಹಿತ ಪೂರ್ಣ ಮನೆಯ ಸ್ಥಿತಿ ಗಮನಿಸಿದೆ. ಮುಂಭಾಗದ ಕೊಠಡಿಯಲ್ಲಿ ಒಂದೆರಡು ಕೇಸರಿ ಬಳೆಗಳ ಚೂರುಗಳಿದ್ದುದನ್ನು ಗಮನಿಸಿದೆ. ಮೃತೆ ಸುಮಾರು ೨೨ ವರ್ಷದವಳಾಗಿದ್ದು ಮದುವೆಯಾಗಿ ಕೇವಲ ೯ ತಿಂಗಳಾಗಿತ್ತು. ಮದುವೆಗೆ ಮುನ್ನ ಆಗಿದ್ದ ಮಾತುಕಥೆಯಂತೆ ಹುಡುಗಿಯ ಮನೆಯವರು ೧೦೦ ಗ್ರಾಮ್ ಚಿನ್ನ ಮತ್ತು ರೂ. ೧,೦೦,೦೦೦/- ನಗದು ಕೊಡಬೇಕಾಗಿದ್ದು, ಅವರು ೧೦೦ ಗ್ರಾಮ್ ಚಿನ್ನ ಮತ್ತು ೭೫೦೦೦/- ಹಣ ಕೊಟ್ಟಿದ್ದರಂತೆ. ಉಳಿದ ರೂ. ೨೫೦೦೦/- ಕೊಡಲು ಒತ್ತಾಯಿಸಿ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದರಂತೆ. ಮೃತಳ ತಾಯಿ, ತಮ್ಮರೂ ಸೇರಿದಂತೆ ಕೆಲವರ ಹೇಳಿಕೆ ಪಡೆದೆ. ಪಂಚರ ಸಮಕ್ಷಮದಲ್ಲಿ ವಿವರವಾದ ಶವತನಿಖಾ ವರದಿ ಬರೆಸಿದೆ. ಅಗತ್ಯದ ಇತರ ನಿಗದಿತ ನಮೂನೆಗಳಲ್ಲಿ ಮಾಹಿತಿ ಸಿದ್ಧಪಡಿಸಿ, ಶವಪರೀಕ್ಷೆ ನಡೆಸಿ ವರದಿ ಕೊಡಲು ಕೇರಳಾಪುರದ ಸರ್ಕಾರೀ ವೈದ್ಯಾಧಿಕಾರಿಗೆ ಸೂಚಿಸಿದೆ. ಮುಂದಿನ ತನಿಖೆ ನಡೆಯಿಸಲು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿ, ಶವತನಿಖಾ ವರದಿಯನ್ನು ನನ್ನ ಅನಿಸಿಕೆಯೊಂದಿಗೆ ಜ್ಯುಡಿಶಿಯಲ್ ನ್ಯಾಯಾಧೀಶರಿಗೆ ಕಳಿಸಿದೆ. 
     ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬವಾದಷ್ಟೂ ನ್ಯಾಯಕ್ಕೆ ಅನ್ಯಾಯವಾಗುತ್ತದೆ ಎಂಬುದು ಸತ್ಯ. ವಿಳಂಬಕ್ಕೆ ನಾನಾ ಕಾರಣಗಳಿರುತ್ತವೆ. ಈ ಪ್ರಕರಣದಲ್ಲಿ ಸುಮಾರು ಮೂರು ವರ್ಷಗಳ ನಂತರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ನನಗೆ ಸಾಕ್ಷಿ ಹೇಳಲು ಸಮನ್ಸ್ ಬಂದಿತ್ತು. ಸಾಕ್ಷಿ ಹೇಳಿಕೆ ಕೊಟ್ಟಿದ್ದೆ. ಸರ್ಕಾರಿ ವಕೀಲರು ಖಾಸಗಿಯಾಗಿ ನನಗೆ ದೂರು ಅರ್ಜಿದಾರರು ಮತ್ತು ಆರೋಪಿಗಳು ರಾಜಿಯಾಗಿದ್ದಾರೆಂದು ಹೇಳಿದ್ದರು. ಕೊನೆಯಲ್ಲಿ ನ್ಯಾಯಾಲಯದ ತೀರ್ಪು ಏನಾಯಿತು ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ. 
     ನನ್ನ ಸೇವಾವಧಿಯಲ್ಲಿ ಇಂತಹ ಸುಮಾರು ೭೦-೮೦ ಶವತನಿಖೆಗಳನ್ನು ಮಾಡಿದ್ದೇನೆ. ಅವುಗಳು ಹೇಳಿದ ದಾರುಣ ಕಥೆಗಳಿಗೆ ಕಿವಿ ಕೊಟ್ಟಿದ್ದೇನೆ, ಅನುಭವಿಸಿದ ನೋವುಗಳನ್ನು, ಯಾತನೆಗಳನ್ನು ವಿವರಿಸಿದಾಗ ಮರುಗಿ ಒಳಗೇ ಕಣ್ಣೀರು ಹಾಕಿದ್ದೇನೆ. ನನ್ನ ಮಿತಿಯಲ್ಲಿ ಅವು ಹೇಳಿದ ಸಂಗತಿಗಳನ್ನು ದಾಖಲಿಸಿಕೊಂಡು, ನನ್ನ ಕೈಲಾದಷ್ಟು ನಿಮಗೆ ನ್ಯಾಯ ಒದಗಿಸಲು ಪ್ರಯತ್ನಿಸುವೆನೆಂದು ಆಶ್ವಾಸನೆ ಕೊಟ್ಟಿದ್ದೇನೆ. ಹಾಗೂ ನ್ಯಾಯ ಸಿಗದಿದ್ದರೆ ಅದರಲ್ಲಿ ನನ್ನ ಪಾತ್ರವಿರುವುದಿಲ್ಲವೆಂದೂ ಒಪ್ಪಿಸಿದ್ದೇನೆ. ಶವತನಿಖೆಗಳನ್ನು ನಡೆಸಿದ ಸಂದರ್ಭಗಳಲ್ಲಿ ದಾರುಣ ಅಂತ್ಯವನ್ನು ಕಣ್ಣಾರೆ ಕಂಡು ಒಂದೆರಡು ದಿನಗಳು ಸರಿಯಾಗಿ ಊಟ, ತಿಂಡಿ ಮಾಡಲಾಗದೆ ಇದ್ದುದೂ ಇದೆ. ಅಗಲಿದ ಆತ್ಮಗಳೇ, ನಿಮ್ಮನ್ನು ನೆನೆಸಿಕೊಂಡು, ನಿಮಗೆ ಸದ್ಗತಿ ಕೋರುವ ಸಲುವಾಗಿ ಈ ಕೆಲವು ಸಾಲುಗಳನ್ನು ಬರೆದಿರುವೆ.  
-ಕ.ವೆಂ.ನಾಗರಾಜ್.    

ಶನಿವಾರ, ಮಾರ್ಚ್ 24, 2012

ರಾಗ-ದ್ವೇಷಗಳು ಇರಬೇಕು!!

     ರಾಗ-ದ್ವೇಷಗಳು ಇರಬೇಕು! ಹೌದು ಇರಬೇಕು! ಆಶ್ಚರ್ಯವೆನಿಸಿತೇ? ಸತ್ಕಾರ್ಯದಲ್ಲಿ ರಾಗ, ದುಷ್ಕಾರ್ಯದಲ್ಲಿ ದ್ವೇಷ ಇರಬೇಕು ಎನ್ನುವ ವೇದಾಧ್ಯಾಯಿ ಶ್ರೀ ಸುಧಾಕರ ಶೆರ್ಮರವರ ವಿಚಾರ ಕೇಳಿ:


ಮಂಗಳವಾರ, ಮಾರ್ಚ್ 20, 2012

'ಇದಂ ನ ಮಮ'-ಇದು ನನಗಾಗಿ ಅಲ್ಲ!

     ಅಗ್ನಿಹೋತ್ರ - ಇದು ಸ್ವಹಿತ ಮತ್ತು ಸಮಾಜಹಿತದ ಸಲುವಾಗಿ ಮಾಡಬಹುದಾದ ಒಂದು ಕ್ರಿಯೆ. ಅಗ್ನಿಹೋತ್ರವನ್ನು ಆಚರಿಸಲು ಪ್ರತಿದಿನ ಸೂರ್ಯೋದಯ ಮತ್ತು ಸಾರ್ಯಾಸ್ತ ಕಾಲ ಸೂಕ್ತವಾಗಿದ್ದು ಇದರ ಅರ್ಥಪೂರ್ಣ ಆಚರಣೆಯಿಂದ ಅಂತರಂಗ ಮತ್ತು ಬಹಿರಂಗದ ಶುದ್ಧಿ ಸಾಧ್ಯವೆಂಬುದು ಬಲ್ಲವರ ನುಡಿ. ಹೇಳುವ ಮಂತ್ರಗಳ ಅರ್ಥ ತಿಳಿದು ಉಚ್ಛರಿಸುವುದರಿಂದ ಮತ್ತು ಸೂಕ್ತ ಸಮಿತ್ತುಗಳನ್ನು ಉಪಯೋಗಿಸುವುದರಿಂದ ಒಳ್ಳೆಯದಾಗುವುದು. ಈ ವಿಧಿಯ ಆಚರಣೆಯ ಕ್ರಮಗಳು ಹೀಗಿವೆ:
೧. ಪ್ರಾರಂಭದಲ್ಲಿ ಈಶ್ವರಸ್ತುತಿಪ್ರಾರ್ಥನೆ,
೨. ಆಚಮನ ಮಂತ್ರಗಳು,
೩. ಅಂಗಸ್ಪರ್ಶ ಮಂತ್ರಗಳು,
೪. ಅಗ್ನ್ಯಾಧಾನ ಮಂತ್ರಗಳು,
೫. ಆಗ್ನ್ಯುದ್ದೀಪನ ಮಂತ್ರ,
೬. ಸಮಿದಾಧಾನ ಮಂತ್ರಗಳು,
೭. ಪಂಚ ಘೃತಾಹುತಿ ಮಂತ್ರ,
೮. ಜಲಸೇಚನ ಮಂತ್ರ,
೯. ಆಘಾರಾವಾಜ್ಯ ಭಾಗಾಹುತಿ ಮಂತ್ರಗಳು,
೧೦. ಪ್ರಾತಃಕಾಲದ/ಸಾಯಂಕಾಲದ ಮಂತ್ರಗಳು,
೧೧. ಉಭಯಕಾಲದ ಮಂತ್ರಗಳು,
೧೨. ಪೂರ್ಣಾಹುತಿ ಮಂತ್ರ,
೧೩. ಶಾಂತಿ ಮಂತ್ರ
ಪೌರ್ಣಿಮೆ ಮತ್ತು ಅಮಾವಾಸ್ಯೆಗಳಲ್ಲಿ ವಿಶೇಷಾಹುತಿ ಸಂದರ್ಭಗಳಲ್ಲಿ ಹೇಳುವ ಮಂತ್ರ.
      ಇದರಲ್ಲಿ ತಾನಾಗಿಯೇ ಒಣಗಿ ಬಿದ್ದಿರುವ ಸಮಿತ್ತುಗಳು ಮತ್ತು ಔಷಧಯುಕ್ತ ವನಸ್ಪತಿಗಳನ್ನು ಬಳಸುವುದು ಸೂಕ್ತ. ಬೆಂಗಳೂರಿನಲ್ಲಿರುವ ಪಂ. ಸುಧಾಕರ ಚತುರ್ವೇದಿಯವರ ನಿವಾಸದಲ್ಲಿ ಪ್ರತಿ ಶನಿವಾರ ಸಾಯಂಕಾಲ ೫.೩೦ಕ್ಕೆ ಸರಿಯಾಗಿ ನಡೆಯುವ ಸತ್ಸಂಗದ ಪ್ರಾರಂಭದಲ್ಲಿ ಅಗ್ನಿಹೋತ್ರ ನಡೆಯುತ್ತದೆ. ಸ್ತ್ರೀಯರು ವೇದಮಂತ್ರಗಳನ್ನು ಹೇಳಬಾರದು ಎಂಬ ತಪ್ಪು ಕಲ್ಪನೆ ಪ್ರಚಲಿತವಿರುವಾಗ ಅದು ಸರಿಯಲ್ಲವೆಂದು ಹೇಳುವ ಬದಲು ಕೃತಿಯಲ್ಲಿ ಆಚರಿಸಿ ತೋರಿಸಲೋ ಎಂಬಂತೆ ಇಲ್ಲಿ ಮಹಿಳೆಯರೇ ಅಗ್ನಿಹೋತ್ರ ನಡೆಸುತ್ತಾರೆ. ಅದನ್ನು ವಿಡಿಯೋದಲ್ಲಿ ಚಿತ್ರೀಕರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಆಸಕ್ತ ಕೆಲವರಿಗಾದರೂ ಪ್ರೇರಿಸಲು ಈ ಪ್ರಯತ್ನ. 
-ಕ.ವೆಂ.ನಾಗರಾಜ್.
*************










ಭಾನುವಾರ, ಮಾರ್ಚ್ 18, 2012

ಗುಂಡಿಯಲ್ಲಿ ಬಿದ್ದ ನಾಯಿಮರಿ



     ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ವಾಕಿಂಗಿಗೆ [ವಾಯುಸೇವನೆಗೆ ಅನ್ನವುದಕ್ಕಿಂತ ವಾಕಿಂಗ್ ಅನ್ನುವುದು ಜನಪ್ರಿಯ ಬಳಕೆಯ ಪದ] ಹೊರಟು ಸ್ಟೇಡಿಯಮ್ ತಲುಪಿದೆ. ಒಂದು ಸುತ್ತು ಹಾಕಿರಬಹುದು. ಪಕ್ಕದಲ್ಲಿದ್ದ ಗುಂಡಿಯೊಂದರಿಂದ ನಾಯಿಮರಿಯ ಕುಂಯ್ ಕುಂಯ್ ಆರ್ತ ಸ್ವರ ಕೇಳಿಸಿತು. ಸುಮಾರು ೪ಅಡಿ ಆಳದ ಗುಂಡಿಯಲ್ಲಿ ಬಗ್ಗಿ ನೋಡಿದರೆ ಅಲ್ಲಿ ಪುಟಾಣಿ ನಾಯಿಮರಿಯೊಂದು ಮೇಲೆ ಹತ್ತಲು ಪರದಾಡುತ್ತಿತ್ತು. ಆಟವಾಡುತ್ತಾ ಅಲ್ಲಿ ಬಿದ್ದಿರಬೇಕು. ಅದಕ್ಕೆ ಮೇಲೆ ಹತ್ತಲಾಗುತ್ತಿರಲಿಲ್ಲ. ಅದರ ಜೊತೆಯ ಇನ್ನೊಂದು ಪುಟಾಣಿ ಮರಿ ಗುಂಡಿಯ ಮೇಲ್ಭಾಗದಲ್ಲಿ ನಿಂತು ಗಮನಿಸುತ್ತಾ ಸುತ್ತಲೂ ಪರದಾಡುತ್ತಿತ್ತು. ಅಲ್ಲಿ ಓಡಾಡುತ್ತಿದ್ದವರನ್ನು ನೋಡುತ್ತಾ ಇದ್ದ ಆ ಇನ್ನೊಂದು ಮರಿಯ ನೋಟ ಯಾರಾದರೂ ಸಹಾಯ ಮಾಡಿ ಎಂದು ಕೇಳುವಂತಿತ್ತು. ಯಾಂತ್ರಿಕವಾಗಿ ವಾಕಿಂಗ್ ಮುಂದುವರೆಸಿದ್ದ ನಾನು ಅದಾಗಲೇ ಆ ಗುಂಡಿ ದಾಟಿ ಮುಂದೆ ಹೋಗಿಬಿಟ್ಟಿದ್ದೆ. ಅದನ್ನು ಮೇಲೆತ್ತಬೇಕಾಗಿತ್ತು ಎಂದು ಮನಸ್ಸು ಹೇಳುತ್ತಿತ್ತು. ಇನ್ನೊಂದು ಸುತ್ತು ಬರುವಾಗ ನೋಡಿದರೆ ಆ ಮರಿ ಅಲ್ಲೇ ಇತ್ತು. ಅದನ್ನು ಮೇಲೆತ್ತಲು ಹೋದಾಗ ಅದು ಮುಂಗಾಲುಗಳನ್ನು ಮುಂದೆ ಚಾಚಿ ನೋಡಿದ 'ಮೇಲಕ್ಕೆ ಎತ್ತು' ಎಂದು ಕೋರುವ ನೋಟ ನನ್ನನ್ನು ಕರಗಿಸಿತು. ಅದರ ಕಾಲು ಹಿಡಿದು ಮೇಲಕ್ಕೆತ್ತಿ ಬಿಟ್ಟು ವಾಕಿಂಗ್ ಮುಂದುವರೆಸಿದರೆ ಆ ಮರಿ ಮತ್ತು ಅದರ ಜೊತೆಯ ಮರಿಗಳೆರಡೂ ಕೃತಜ್ಞತೆ ತೋರಿಸುವಂತೆ ಕುಣಿದು ಕುಪ್ಪಳಿಸಿ ನನ್ನ ಕಾಲುಗಳಿಗೆ ತೊಡರಿಕೊಂಡು ಬರತೊಡಗಿದವು. ಅವನ್ನು ತಪ್ಪಿಸಿಕೊಂಡು ವಾಕಿಂಗ್ ಮುಂದುವರೆಸಿದೆ. ಮುಂದಿನ ಸುತ್ತಿನಲ್ಲಿ ಬರುವಾಗ ಆ ಮರಿಗಳು ತಾಯಿಯ ಜೊತೆ ಚಿನ್ನಾಟವಾಡುತ್ತಾ, ಹಾಲು ಕುಡಿಯುತ್ತಾ ಇದ್ದ ದೃಷ್ಯ ಕಂಡು ಮನಸ್ಸು ಹಗುರವಾಯಿತು.
     ವಾಕಿಂಗ್ ಮುಂದುವರೆದು ವಾಪಸು ಮನೆ ತಲುಪುವವರೆಗೂ ನನ್ನ ಮನಸ್ಸು ಆ ವಿಚಾರದಲ್ಲೇ ಮುಳುಗಿತ್ತು. ನಾವೂ ಸಹ ಆ ನಾಯಿಮರಿಯಂತೆ ಗುಂಡಿಯಲ್ಲಿ ಬಿದ್ದು ಮೇಲೆ ಹತ್ತಲಾರದೇ ಪರದಾಡುತ್ತಿದ್ದೇವಲ್ಲವೇ ಅನ್ನಿಸಿತು. ನಮ್ಮನ್ನು ಆವರಿಸಿದ ಮಾಯೆ/ಭ್ರಮೆ ನಾವು ಗುಂಡಿಯಲ್ಲಿರುವ ವಾಸ್ತವತೆ ಮರೆಮಾಚಿ, ಗುಂಡಿಯಲ್ಲೇ ಇರುವಂತೆ ಮಾಡುತ್ತಿರಬೇಕು. ಸ್ವಾಭಿಮಾನ, ದುರಭಿಮಾನಗಳಿಂದ ನಾವೇ ತೋಡಿಕೊಂಡ ಗುಂಡಿಗೆ ನಾವೇ ಆಟವಾಡುತ್ತಾ ಬಿದ್ದುಬಿಟ್ಟಿರಬೇಕು. ಮೇಲೆ ಹತ್ತಲು ಮಾಡುವ ಪ್ರಯತ್ನಗಳಿಗೆ ರಾಗ, ದ್ವೇಷಗಳು ಅಡ್ಡಿಯಾಗಿ ಪುನಃ ಕೆಳಗೆ ಜಾರಿಸುತ್ತಿರಬೇಕು. ಒಂದೊಮ್ಮೆ ಗುಂಡಿಯಲ್ಲಿ ಬಿದ್ದ ಅರಿವಾದರೂ, ಮೋಹ, ಮಮಕಾರಗಳು ಮೇಲೆ ಹತ್ತದಂತೆ ಮಾಡುತ್ತಿರಬೇಕು. ಹೀಗೆಲ್ಲಾ ಯೋಚಿಸುತ್ತಿದ್ದ ಮನಸ್ಸು ಇಷ್ಟಕ್ಕೆಲ್ಲಾ ಹೊಣೆ ಯಾರು, ಅದರಲ್ಲಿ ನಿನ್ನ ಪಾಲೆಷ್ಟು, ಇತರರ ಪಾಲೆಷ್ಟು ಎಂದು ಕೆಣಕುತ್ತಿತ್ತು. ಗುಂಡಿಯಿಂದ ಮೇಲೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಮಾಡುತ್ತಲೇ ಇದ್ದರೆ, ಮೇಲೆ ಹತ್ತಲು ಸಹಾಯ ಮಾಡಲು ದೇವರು ಯಾರನ್ನಾದರೂ ಕಳಿಸಿಯೇ ಕಳಿಸುತ್ತಾನೆ. ಆರೀತಿ ಸಹಾಯ ಮಾಡುವ ಯಾರೋ ಒಬ್ಬರೇ ನಮ್ಮ ಪಾಲಿಗೆ ಮಾರ್ಗದರ್ಶಕರಾಗುತ್ತಾರೆ ಎಂದು ಅನ್ನಿಸುವ ಹೊತ್ತಿಗೆ ಮನೆಗೆ ಬಂದು ತಲುಪಿದ್ದೆ. ನಾಯಿಮರಿ ಕುಂಯ್‌ಗುಡದೇ ಇದ್ದಿದ್ದರೆ ನಾನು ಅದನ್ನು ಮೇಲೆತ್ತುತ್ತಿರಲಿಲ್ಲ. ಹಾಗೆಯೇ ನಾವು ಮೇಲೇರಲು ಮೊರೆಯಿಡದಿದ್ದರೆ ನಮಗೆ ಸಹಾಯ ಸಿಗದೇ ಹೋಗಬಹುದು!
-ಕ.ವೆಂ.ನಾಗರಾಜ್.

ಶನಿವಾರ, ಮಾರ್ಚ್ 17, 2012

ತಿಳಿದೆ ನಾನು


ತಿಳಿದೆ ನಾನು
ಒಬ್ಬನೇ ಬಂದೆ ಒಬ್ಬನೇ ಹೋಗುವೆನೆಂದು
ತಿಳಿದೆ ನಾನು
ಕೆಲರು ಒಡನಿರುವರು ನಾನು ಬೇಕೆಂದಲ್ಲ 
ಅವರಿಗೆ ನಾನು ಬೇಕಿತ್ತೆಂದು
ತಿಳಿದೆ ನಾನು 
ಯಾರನ್ನು ಇಷ್ಟಪಡುವೆನೋ ಅವರಿಂದ
ದೂರಲ್ಪಡುವೆನೆಂದು
ತಿಳಿದೆ ನಾನು
ಪ್ರಿಯರ ಸಣ್ಣ ಸುಳ್ಳು ಹೃದಯ ಒಡೆಸೀತೆಂದು
ತಿಳಿದೆ ನಾನು
ಆಸರೆಯ ಭುಜವಿಲ್ಲದೆ ಅಳುವುದು ಕಷ್ಟವೆಂದು
ತಿಳಿದೆ ನಾನು
ಇರುವ ಪ್ರೀತಿಯನ್ನೆಲ್ಲಾ ಕಳೆದುಕೊಳ್ಳದೆ
ಸ್ವಂತಕ್ಕೂ ಸ್ವಲ್ಪ ಉಳಿಸಿಕೊಳ್ಳಬೇಕೆಂದು
ತಿಳಿದೆ ನಾನು
ಎಲ್ಲರೊಡನಿದ್ದರೂ ಒಂಟಿಯಾಗಿರುವೆನೆಂದು
ತಿಳಿದೆ ನಾನು
ಬದಲಾಗಬೇಕಾದ್ದು ನಾನೇ ಎಂದು
ತಿಳಿದೆ ನಾನು
ಬಯಸಿದಂತೆ ನಡೆಯುವುದು ಕಷ್ಟವೆಂದು
ತಿಳಿದೆ ನಾನು
ಬಹಿರಂಗ ಅಂತರಂಗವ ನುಂಗಿ ನೀಗೀತೆಂದು
ತಿಳಿದೆ ನಾನು
ಏಕಾಂತ ಮಾತ್ರ ನನ್ನತನವನುಳಿಸೀತೆಂದು
ತಿಳಿದೆ ನಾನು
ತಿಳಿದದ್ದು ಸ್ವಲ್ಪ ತಿಳಿಯದಿರುವುದು ಬಹಳವೆಂದು
ತಿಳಿದೆ ನಾನು
. . . . . . . . . . . . . . . . . . . . . . . . . . . . . .! 
. . . . . . . . . . . . . . . . . . . . . . . . . 
-ಕ.ವೆಂ.ನಾಗರಾಜ್.

ಗುರುವಾರ, ಮಾರ್ಚ್ 15, 2012

೪ ಶತಮಾನಗಳ ಹಿಂದಿನ ಸ್ವರ್ಗಸದೃಶ ಕರ್ಣಾಟಕ ದೇಶ- ಕವಿ ಕಂಡಿದ್ದಂತೆ

     17ನೆಯ ಶತಮಾನದ ಕವಿಲಿಂಗಣ್ಣ ಅನುಪಮ ರೀತಿಯಲ್ಲಿ ಮಾಡಿರುವ ಜಂಬೂದ್ವೀಪವನ್ನು ಸುತ್ತುವರೆದಿದ್ದ ಸಮುದ್ರದ ರಮ್ಯ ವರ್ಣನೆಯನ್ನು ಓದುಗರಿಗೆ ಹಿಂದಿನ ಲೇಖನದಲ್ಲಿ ಪ್ರಸ್ತುತಪಡಿಸಿರುವೆ.[http://kavimana.blogspot.in/2012/03/blog-post.html]. ಕವಿ ಕಂಡಿದ್ದ ಕರ್ಣಾಟಕ ದೇಶದ ವರ್ಣನೆಯನ್ನು ನಿಮ್ಮ ಮುಂದಿಡಲು  ಲೇಖನದ ಈ ಭಾಗದಲ್ಲಿ ಪ್ರಯತ್ನಿಸಿರುವೆ.
     ಜಗತ್ತಿನ ಅತ್ಯುನ್ನತ ಹೈಮಾಚಲದ ದಕ್ಷಿಣ ಭಾಗದಲ್ಲಿ ವಿರಾಜಿಸಿದ ಸಂಪದ್ಭರಿತ ಭರತಖಂಡದ -ಕವಿಯ ಮಾತಿನಲ್ಲಿ ಹೇಳುವುದಾದರೆ ಅನಘಕರಂಡ ಭರತಖಂಡದ- ದಕ್ಷಿಣ ಭಾಗದ ಕನ್ಯಾಖಂಡ ಪ್ರದೇಶದಲ್ಲಿ ವಿವಿಧ ವರ್ಣಾಶ್ರಮಗಳಿಗೆ ಸೇರಿದ ಜನಸಮೂಹ, ಸುಖ, ಸಂತೋಷಗಳ ನೆಲೆವೀಡಾಗಿ, ಲೆಕ್ಕವಿಲ್ಲದಷ್ಟು ಪುಣ್ಯನದಿಗಳು, ಪವಿತ್ರ ಕ್ಷೇತ್ರಗಳು, ಘನಾರಣ್ಯಗಳು, ಕಂದರ ಪರ್ವತಗಳಿಗೆ ಆಶ್ರಯತಾಣವಾಗಿರುವ ಸಹ್ಯಾಚಲಶ್ರೇಣಿ ಸುಖ-ಸಂಪತ್ತಿನ ಮೂಲವಾಗಿತ್ತು. ಅಂತಹ ಸಹ್ಯಾದ್ರಿಯ ಮಡಿಲಲ್ಲಿ ಇದ್ದ ಹಲವು ದೇಶಗಳ ಪೈಕಿ ಕರ್ಣಾಟಕದೇಶವು ಅಸಮಾನ ಸಂಪತ್ತಿನ ಭಂಡಾರವಾಗಿ ಪುಣ್ಯದ ಭೂಮಿಯಾಗಿ ವೈಭವಯುತವಾಗಿ ಕಂಗೊಳಿಸಿತ್ತು. ಆ ದೇಶದ ವೈಭವವನ್ನು ವರ್ಣಿಸುವುದಾದರೂ ಹೇಗೆ? ಕೆರೆಗಳು, ಹಳ್ಳಗಳು, ನದಿಗಳು, ನೈದಿಲೆ, ತಾವರೆಗಳಿಂದ ಕಂಗೊಳಿಸುವ ಸರೋವರಗಳು, ವಿವಿಧ ಹೂಬಳ್ಳಿಗಳು, ಗಿಡಗಳಿಂದ ಶೋಭಿತ ಉದ್ಯಾನವನಗಳು, ಸುಗಂಧ ಸೂಸುವ ಅರಣ್ಯಗಳು, ರಂಜನೀಯ ಬೆಟ್ಟಗುಡ್ಡಗಳು, ಹೊಲ ಗದ್ದೆಗಳು ಮುಂತಾದುವುಗಳಿಂದ ಅತ್ಯುನ್ನತ ಸುಖದ ಬೀಡಾದ ಆ ದೇಶದ ವರ್ಣನೆ ಪದಗಳಿಗೆ ನಿಲುಕಲಾರದು. 
     ಕರ್ಣಾಟಕ ದೇಶವಾದರೋ ಇಂದ್ರನ ದೇವಲೋಕದಂತೆ ಇದ್ದು, ಸುಮನೋಹರ, ಸುಪರಿಮಳಯುಕ್ತ ವೃಕ್ಷಗಳಿಂದ ಕೂಡಿದೆ. ವಧೂಪಯೋಧರದಂತೆ ಶೋಭಿಸುವ ಅಗ್ರಹಾರಗಳು, ದ್ವಿಜರು, ವಿದ್ವಜ್ಜನರು, ವೇದಪರಾಯಣರು, ಪುಣ್ಯವಂತರುಗಳಿಂದ ಕೂಡಿ ಯಕ್ಷರು ವಾಸಿಸುವ ಅಲಕಾನಗರಿಯನ್ನು ಹೋಲುತ್ತಿದೆ. ಸುಂದರವಾದ ಈ ದೇಶ ಇವರೆಲ್ಲರಿಗೂ ಆಶ್ರಯತಾಣವಾಗಿದ್ದು, ಮಹಾದೇವನಂತೆ ಅಭೇದ್ಯ ಕೋಟೆಗಳಿಂದ ಅಭಯತಾಣವೂ ಆಗಿದೆ. ಇಂತಹ ಪುಣ್ಯದ ನಾಡಿನಲ್ಲಿ ಪುಸಿ(ಸುಳ್ಳು), ಕಳವು, ಪಾದರ(ಹಾದರ), ಪುಂಡಾಟಿಕೆ, ಆಕ್ರಮಣ, ಹೊಡೆದಾಟ, ಬಡಿದಾಟ, ಮೋಸ, ಲೋಭ, ಅನ್ಯಾಯಗಳು (ಪೆಸರ್ಗಳ್ ಪೆಸರ್ಗೊಂಬೊಡಿಲ್ಲ) ಹೆಸರಿಗೂ ಹೇಳುವಂತಿರಲಿಲ್ಲ. ಅಲ್ಲಿನ ಜನರು ಭತ್ತವನ್ನು ಪೊಡೆ ಎನ್ನುತ್ತಿದ್ದರೇ ಹೊರತು ಆ ಪದವನ್ನು ಹೊಡೆ ಎಂಬರ್ಥದಲ್ಲಿ ಬಳಸುತ್ತಿರಲಿಲ್ಲ. ದುಷ್ಟ ಪದಗಳ ಬಳಕೆಯೇ ಅವರಿಗೆ ಗೊತ್ತಿರಲಿಲ್ಲ. ಹೆಣ್ಣಾನೆಗೆ ಪಿಡಿ, ಕಡೆ ಎಂಬ ಪದವನ್ನು ಮೊಸರು ಕಡೆಯುವುದಕ್ಕೆ, ಒಂದು ತಿಂಡಿಗೆ ಒಡೆ, ತುರುಬಿಗೆ ಮುಡಿ ಎಂಬರ್ಥದಲ್ಲಿ ಬಳಸುತ್ತಿದ್ದರೇ ಹೊರತು ಬೇರೆ ಅರ್ಥಗಳು ಅವರಿಗೆ ಕನಸಿನಲ್ಲೂ ಬರುತ್ತಿರಲಿಲ್ಲವಂತೆ.
     ಇಂತಹ ಪಾಪವನ್ನೇ ಅರಿಯದ ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯಂತಹ ನಾಡಿನಲ್ಲಿ ಸಮೃದ್ಧವಾಗಿ ಮಳೆಬೆಳೆಗಳು ಆಗುತ್ತಿದ್ದವು. ನಳನಳಿಸಿ ತೊನೆದಾಡುತ್ತಿದ್ದ ಬತ್ತದ ತೆನೆಗಳು ನೀರಿನಲ್ಲಿ ಪ್ರತಿಫಲಿಸಿ ನೆಲದೊಳಗೆ ಬೇರಿನಲ್ಲೂ ತೆನೆಗಳಿವೆಯೇನೋ ಎಂಬಂತೆ ಕಾಣುತ್ತಿದ್ದವು. (ಜಲಜಜನಮರ್ದಂ ಬೆಳ್ಳಿಯ ಕೊಳವಿಗಳೊಳ್ ತುಂಬಿ ಗಂಟನೊಂದಿಸಿ) ಆ ಬ್ರಹ್ಮ ಅಮೃತವನ್ನು ಗರುಡ ಹೊತ್ತೊಯ್ಯದಿರಲೆಂದು ಬೆಳ್ಳಿಯ ಕೊಳವೆಗಳಲ್ಲಿ ತುಂಬಿಸಿಟ್ಟು ಈ ನಾಡಿನ ಭೂಮಿಯಲ್ಲಿ ಮುಚ್ಚಿಟ್ಟಂತೆ ಇಟ್ಟಿದ್ದ ತೆರದಿ ರಸಭರಿತ ಕಬ್ಬಿನ ಗದ್ದೆಗಳು ತೋರುತ್ತಿದ್ದವು. ಆ ವಿಷ್ಣುವಾದರೋ ಒಮ್ಮೆ ದೇವತೆಗಳಿಗೆ ಅಮೃತವನ್ನು ಕೊಟ್ಟ, ಆದರೆ ನಾವು ನಿಮಗೆ ಪ್ರತಿನಿತ್ಯ ಅಮೃತಧಾರೆಯೆರೆಯುವೆವು ಎಂಬಂತೆ ಕಬ್ಬಿನ ಗಾಣಗಳು ಆಹ್ವಾನಿಸುತ್ತಿದ್ದವು. ಬತ್ತದ ತೆನೆಯನ್ನು ಕಚ್ಚಿಕೊಂಡು ಹೋಗಲು ಬರುವ ಗಿಳಿವಿಂಡುಗಳನ್ನು ಓಡಿಸುತ್ತಿರುವ ಹಳ್ಳಿಯ ಹೆಂಗಸರ ಸೌಂದರ್ಯ ನೋಡುಗರ ಕಣ್ಕುಕ್ಕುವಂತಿತ್ತು. ಅವರ ಕೆಂಪು ತುಟಿಗಳನ್ನು ಕಳಿತ ತೊಂಡೆಹಣ್ಣುಗಳೆಂದು ಭ್ರಮಿಸಿ ಕಚ್ಚಲು ಬರುತ್ತಿರುವ ಗಿಳಿಗಳನ್ನು ಕಂಡು ನಕ್ಕರೆ ಅವರ ಹಲ್ಲುಗಳು ದಾಳಿಂಬೆ ಬೀಜವೆಂದುಕೊಂಡು ಮುಖದ ಸುತ್ತಾ ಹಾರಾಡುತ್ತಾ ಗಿಳಿಗಳು ಕಾಲ್ತೆಗೆಯುತ್ತಿದ್ದವು. 
     ಪಥಿಕರ ಅನುಕೂಲಕ್ಕಾಗಿ ನಿರ್ಮಿಸಿದ ಅರವಟ್ಟಿಗೆಗಳನ್ನು ನೋಡಿಯೇ ಆಯಾಸ ಪರಿಹಾರವಾಗುತ್ತಿತ್ತು. ಬಾಳೆಯಕಂಬಗಳು, ಕಬ್ಬುಗಳು, ತಾವರೆಹೂವುಗಳ ಜಂತೆ, ಮಲ್ಲಿಗೆ ಹೂವಿನ ಅಲಂಕಾರದಿಂದ ಹೊರಡುತ್ತಿದ್ದ ಘಮಘಮ, ಬತ್ತದ ಹುಲ್ಲಿನಿಂದ ಮಾಡಿದ ನೆಲಹಾಸು, ಲಾಮಂಚದ ಚಪ್ಪರದಿಂದೊಡಗೂಡಿ ಮನ್ಮಥನ ನಿವಾಸದಂತಿದ್ದ ಆ ಅರವಟ್ಟಿಗೆಯಲ್ಲಿ ತುಂಬಿದ ಸಿಹಿನೀರಿನ ಕೊಡಗಳಿರುತ್ತಿದ್ದವು. ಹೂವುಗಳ ಮಕರಂದ, ಕಬ್ಬಿನಹಾಲು ಮತ್ತು ಎಳನೀರುಗಳ ಕಾಲುವೆಯನ್ನು ದಾರಿಗರು ತೆಪ್ಪದಲ್ಲಿ ದಾಟುತ್ತಾರೆಂದು ಕವಿ ಉತ್ಪ್ರೇಕ್ಷೆ ಮಾಡುತ್ತಾನಾದರೂ ಅದು ನಾಡು ಸಮೃದ್ಧವಾಗಿತ್ತೆಂದು ಹೇಳುವ ಪರಿಯಾಗಿದೆ. ಆಯಾಸಗೊಂಡು ಬಂದ ದಾರಿಗರಿಗೆ ನೀರೆಯರು ನೀರನ್ನು ಕೊಡದಿಂದ ಎರೆಯುತ್ತಿದ್ದರೆ ಮೈಮರೆತು ಅವರ ಸುಂದರ ತೋಳುಗಳನ್ನು ಬಾಯಿಬಿಟ್ಟುಕೊಂಡು ನೋಡುತ್ತಾ ಇದ್ದ ಅವರ ಕೈಗಳಿಂದ ನೀರು ಚೆಲ್ಲಿ ಹೋಗುತ್ತಿದ್ದರೆ ಆ ಹೆಂಗಸರಿಗೆ ನಗು ಉಕ್ಕಿಬರುತ್ತಿತ್ತು. ಅವರ ಮುಗುಳ್ನಗುವಿನ ಹೊಳಪಿನಿಂದ ನೀರು ಕಂಗೊಳಿಸಿದಾಗ ಏನಾಗುತ್ತಿತ್ತು ಗೊತ್ತೇ? ಚಂದನಮಿಶ್ರಿತ ಸುಗಂಧವೆಂದು ಪಥಿಕರು ಅದನ್ನು ಮೈಗೆ ಪೂಸಿಕೊಳ್ಳಲು ಹೋಗುತ್ತಿದ್ದರಂತೆ!
ಕುಂದದೆ ನೀರೆರೆವಳ ಸು
ಯ್ಮಂದಸ್ಮಿತರೋಚಿ ಮುಸುಕಿ ಪರಿಮಳಿಸುತೆ ಬೆ
ಳ್ವೊಂದಿರೆ ಕುಡಿನೀರ್ ತನುಗಿದು
ಚಂದನರಸಮೆಂದು ಪೂಸಬಗೆವರ್ ಪಾಂಥರ್|| . . (ಕೆ.ನೃ.ವಿ. ೧.೨೮) 
     ಒಟ್ಟಿನಲ್ಲಿ ಹೇಳಬೇಕೆಂದರೆ ಅಂದಿನ ಕರ್ಣಾಟಕ ಸ್ವರ್ಗ ಸದೃಶ ಸುಖ, ಸಂಪತ್ತುಗಳಿಂದ ಕಂಗೊಳಿಸುತ್ತಿತ್ತಂತೆ! ಆಗ ಕರ್ಣಾಟಕವನ್ನು ಆಳುತ್ತಿದ್ದವರು ಮೈಸೂರು ಒಡೆಯರು ಮತ್ತು ಕೆಳದಿಯ ಅರಸರು!
**************************
ಕರ್ಣಾಟಕವನ್ನು ಆಳಿದ್ದ ರಾಜಮನೆತನಗಳ ವಿವರವನ್ನು ಸಾಂದರ್ಭಿಕವಾಗಿ ಇಲ್ಲಿ ಕೊಟ್ಟಿರುವೆ: (ಅನುಕ್ರಮವಾಗಿ ಅವಧಿ, ರಾಜವಂಶ ಮತ್ತು ಪ್ರಮುಖ ರಾಜರುಗಳ ವಿವರವಿದೆ).
1. 3ನೆಯ ಶತಮಾನಕ್ಕಿಂತ ಮುಂಚೆ - ಶಾತವಾಹನರು  -ಶ್ರೀಮುಖ, ಗೌತಮಿಪುತ್ರ
2. ಕ್ರಿ.ಶ. 325-540 - ಕದಂಬರು - ಮಯೂರವರ್ಮ
3. 325-999 - ಗಂಗರು - ಅವಿನೀತ, ದುರ್ವಿನೀತ, ರಾಚಮಲ್ಲ
4. 500-757 - ಬಾದಾಮಿ ಚಾಲುಕ್ಯರು - ಮಂಗಳೇಶ, ಪುಲಿಕೇಶಿ
5. 757-973 - ರಾಷ್ಟ್ರಕೂಟರು - ಕೃಷ್ಣ, ಗೋವಿಂದ, ನೃಪತುಂಗ
6. 973-1198 - ಕಲ್ಯಾಣದ ಚಾಲುಕ್ಯರು - ವಿಕ್ರಮಾದಿತ್ಯ
7. 1198-1312- ದೇವಗಿರಿ ಯಾದವರು - ಸಿಂಗಾಹನ
8. 1000-1346- ಹೊಯ್ಸಳರು - ವಿಷ್ಣುವರ್ಧನ
9. 1336-1565- ವಿಜಯನಗರದ ಅರಸರು - ಕೃಷ್ೞದೇವರಾಯ
10. 1347-1527 ಬಹಮನಿ ಸುಲ್ತಾನರು - ಮಹಮದ್ ಷಾ ೧,೨
11. 1490-1696 -  ಬಿಜಾಪುರ ಸುಲ್ತಾನರು - ಯೂಸುಫ್ ಆದಿಲ್ ಷಾ, ಇಬ್ರಾಹಿಮ್ ಆದಿಲ್ ಷಾ
12. 1500-1763 -  ಕೆಳದಿಯ ಅರಸರು - ಚೌಡಪ್ಪನಾಯಕ, ರಾಣಿ ಚನ್ನಮ್ಮ, ಶಿವಪ್ಪನಾಯಕ
13. 1399-1761 - ಮೈಸೂರು ಒಡೆಯರು - ರಣಧೀರ ಕಂಠೀರವ, ಚಿಕ್ಕದೇವರಾಯ
14. 1761-1799 - ಹ್ಶೆದರ್ ಆಲಿ, ಟಿಪ್ಪುಸುಲ್ತಾನ್
15. 1800-1831 - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್
16. 1800 - ಕರ್ಣಾಟಕದ ವಿಭಜನೆ: ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವನ್ನು ಬ್ರಿಟಿಷರ ಆಡಳಿತದಲ್ಲಿದ್ದ ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ ನಿಜಾಮರುಗಳ ನಡುವೆ ಹರಿದು ಹಂಚಲಾಯಿತು.
17. 1831-1881 ಬ್ರಿಟಿಷರು - ಆಂಗ್ಲರ ಆಧಿಪತ್ಯ
18. 1881-1950 - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್
19. 1956 - ಇಂದಿನ ಕರ್ನಾಟಕದ ರಚನೆ
***************
(ಆಧಾರ: ಕೆಳದಿನೃಪ ವಿಜಯ, ಕರ್ನಾಟಕ.ಕಾಮ್)

ಗುರುವಾರ, ಮಾರ್ಚ್ 8, 2012

ತಲೆ ಮಾತ್ರ ಬಾಗದಿರಲಿ, ಅನ್ಯಾಯದೆದುರು ಧಾತಾ

     ಪ್ರತಿ ಶನಿವಾರದಂದು ಸಾಯಂಕಾಲ 5-30ಕ್ಕೆ ಸರಿಯಾಗಿ ಬೆಂಗಳೂರಿನ ಪಂ. ಸುಧಾಕರ ಚತುರ್ವೇದಿಯವರ ನಿವಾಸದಲ್ಲಿ ಸತ್ಸಂಗವಿರುತ್ತದೆ. ಆ ಸಂದರ್ಭದಲ್ಲಿ ಅಗ್ನಿಹೋತ್ರ, ಭಜನೆ ಮತ್ತು ಪಂಡಿತರಿಂದ ಸುಮಾರು 45 ನಿಮಿಷಗಳ ಕಾಲ ಉಪನ್ಯಾಸವಿರುತ್ತದೆ. ಆಸಕ್ತರು ಭಾಗವಹಿಸಬಹುದು. ಅಲ್ಲಿ ಹಾಡಲಾದ ಒಂದು ಭಜನೆಯನ್ನು ಚಿತ್ರೀಕರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಭಜನೆಯ ಸಾಹಿತ್ಯವನ್ನೂ ಇಲ್ಲಿ ಕೊಟ್ಟಿರುವೆ. ನಿಮಗೆ ಇಷ್ಟವೆನಿಸಿದರೆ ಸಂತೋಷ.
-ಕ.ವೆಂ.ನಾಗರಾಜ್.



ಜ್ಯೋತೀಸ್ವರೂಪ ಭಗವನ್| ಆ ದಿವ್ಯಜ್ಯೋತಿ ನೀಡು|
ಈ ತಿಮಿರ ರಾಶಿ ಹರಿದು| ಮನವಾಗೆ ಬೆಳಕ ಬೀಡು || ೧ ||
ಪ್ರಾಸಾದ ಕುಟಿಗಳಲ್ಲಿ| ಧನಿ ದೀನರಲ್ಲಿ ದೇವ|
ವೈಶಮ್ಯ ದ್ವಂದ್ವದಲ್ಲಿ| ನೀಡೆಮಗೆ ಸಾಮ್ಯಭಾವ || ೨ ||
ನರರೆಲ್ಲ ಸರಿಸಮಾನ| ಎಂಬೀ ಪ್ರಬುದ್ಧ ಭಾವ|
ಉರದಲ್ಲಿ ಮೂಡುವಂತೆ| ಧೃತಿ ನೀಡು ಸತ್ಪ್ರಭಾವ || ೩ ||
ದೀನರ್ಗೆ ನೋವನಿತ್ತು| ಸಂಪತ್ತ ಗಳಿಸದಂತೆ|
ನೀ ನೀಡು ಶುದ್ಧಮತಿಯಾ| ಪರಹಿಂಸೆಗೆಳೆಸದಂತೆ || ೪ ||
ಮನದಲ್ಲಿ ಮಾತಿನಲ್ಲಿ| ಮೈಯಲ್ಲಿ ಸತ್ಯ ಮಾತ್ರ|
ಮೊನೆವಂತೆ ಆತ್ಮಬಲವ| ನೀಡೈ ಜಗದ್ವಿಧಾತ್ರ || ೫ ||
ಸಲೆ ಕಷ್ಟಕೋಟಿ ಬರಲಿ| ನಮಗಾದರಾತ್ಮಧಾತಾ|
ತಲೆ ಮಾತ್ರ ಬಾಗದಿರಲಿ| ಅನ್ಯಾಯದೆದುರು ಧಾತಾ || ೬ ||
ಪಾಪಾಚರಣ ವಿರಕ್ತಿ| ಜೀವಾತ್ಮರಲನುರಕ್ತಿ|
ತಾಪಾಪಹಾರ ಶಕ್ತಿ| ನೀಡೆಮಗೆ ನಿನ್ನ ಭಕ್ತಿ || ೭ ||
ಬಾಧಾ ಕಠೋರ ಕ್ಲೇಶ| ಪ್ರತಿನಿತ್ಯ ಸಹಿಪೆವಾವು|
ವೇದೋಕ್ತ ಧರ್ಮ ಮಾತ್ರ| ಬಿಡೆವಡಸಿದೊಡೆಯೆ ಸಾವು || ೮ ||

ಭಾನುವಾರ, ಮಾರ್ಚ್ 4, 2012

ಜಂಬೂದ್ವೀಪದ ಭರತಖಂಡ


      "ಸಪ್ತದ್ವೀಪಾ ವಸುಂಧರಾ" - ಈ ಭೂಮಂಡಲ ಏಳು ದ್ವೀಪಗಳನ್ನೊಳಗೊಂಡಿದೆ ಎಂಬುದು ಇದರ ಅರ್ಥ. ಪುರಾಣಗಳ ಪ್ರಕಾರ ಆ ಏಳು ದ್ವೀಪಗಳೆಂದರೆ ಜಂಬೂದ್ವೀಪ, ಪ್ಲಾಕ್ಷದ್ವೀಪ, ಶಾಲ್ಮಲೀದ್ವೀಪ, ಕುಶದ್ವೀಪ, ಕ್ರೌಂಚದ್ವೀಪ, ಶಕದ್ವೀಪ ಮತ್ತು ಪುಷ್ಕರದ್ವೀಪ. ಜಂಬೂದ್ವೀಪಕ್ಕೆ ಸುದರ್ಶನ ದ್ವೀಪವೆಂಬ ಹೆಸರೂ ಇದೆ. ಈ ದ್ವೀಪದಲ್ಲಿ ಹೇರಳವಾಗಿದ್ದ ಜಂಬೂ ಮರಗಳಿಂದಲೂ ಈ ಹೆಸರು ಬಂದಿತ್ತೆನ್ನಲಾಗಿದೆ. ವಿಷ್ಣುಪುರಾಣದ ಪ್ರಕಾರ ಜಂಬೂವೃಕ್ಷದಲ್ಲಿ ಬಿಡುತ್ತಿದ್ದ ಜಂಬೂಫಲಗಳು ಆನೆಗಳ ಗಾತ್ರವಿರುತ್ತಿದ್ದವೆಂದೂ, ಕಳಿತ ಫಲಗಳು ಪರ್ವತಗಳ ಮೇಲೆ ಬಿದ್ದು ಹೊರಸೂಸಿದ ರಸದಿಂದ ಜಂಬೂನದಿ ಉಗಮವಾಯಿತೆಂದೂ ಆ ನೀರನ್ನು ಜಂಬೂದ್ವೀಪದ ಜನರು ಬಳಸುತ್ತಿದ್ದರೆಂದೂ ಹೇಳಲಾಗಿದೆ. ಬೌದ್ಧ ಧರ್ಮ ಮತ್ತು ಜೈನ ಧರ್ಮದ ಕಥೆಗಳಲ್ಲೂ ಜಂಬೂದ್ವೀಪದ ಉಲ್ಲೇಖ ಕಂಡುಬರುತ್ತದೆ. ಜಂಬೂದ್ವೀಪ ಒಂಬತ್ತು ವಿಭಾಗಗಳು ಮತ್ತು ಎಂಟು ಪ್ರಮುಖ ಪರ್ವತಗಳಿಂದ ಪ್ರಸಿದ್ಧವಾಗಿತ್ತು. ವಾಯುಪುರಾಣ, ಮಾರ್ಕಂಡೇಯ ಪುರಾಣ ಮತ್ತು ಬ್ರಹ್ಮಾಂಡ ಪುರಾಣಗಳಲ್ಲೂ ಬರುವ ಉಲ್ಲೇಖಗಳಂತೆ ಜಂಬೂದ್ವೀಪ ಕಮಲದ ಹೂವಿನ ನಾಲ್ಕು ದೊಡ್ಡ ಎಸಳುಗಳಂತೆ ವಿಭಾಗಿಸಲ್ಪಟ್ಟಿದ್ದು ಆ ಹೂವಿನ ಮಧ್ಯಭಾಗದ ದಿಂಡಿನ ಪ್ರದೇಶದಲ್ಲಿ ಬೃಹತ್ ಮೇರು ಪರ್ವತವಿತ್ತು. ಶಿವನ ಪಾದದಿಂದ ಉಗಮಿಸಿ ಬ್ರಹ್ಮಪುರಿಯನ್ನು ಸುತ್ತುವರೆದಿರುವ ಆಕಾಶಗಂಗೆ ಆಕಾಶದ ಮೂಲಕ ಮೇರುಪರ್ವತದ ಮೇಲೆ ಬಿದ್ದು ನಾಲ್ಕು ವಿರುದ್ಧ ದಿಕ್ಕುಗಳಲ್ಲಿ ಹರಿಯುವ ದೊಡ್ಡ ನದಿಗಳಾಗಿ ಜೀವಿಗಳಿಗೆ ಜೀವನದಿಗಳಾಗಿದ್ದವೆಂದೂ ವರ್ಣನೆಗಳಿವೆ. 
                                       ಚಿತ್ರಕೃಪೆ: ಅಂತರ್ಜಾಲದಿಂದ.
   ಭಾಗವತದ ೧೬ನೆಯ ಅಧ್ಯಾಯದಲ್ಲೂ ಜಂಬೂದ್ವೀಪದ ವಿಷದವಾದ ವರ್ಣನೆಯಿದೆ. ಅದರ ಪ್ರಕಾರ ಭೂಮಂಡಲದ ವ್ಯಾಪ್ತಿಯೆಂದರೆ ಸೂರ್ಯನ ಬೆಳಕು ಮತ್ತು ಶಾಖ ಎಲ್ಲಿಯವರೆಗೆ ವಿಸ್ತಿರಿಸಿರುವುದೋ ಮತ್ತು ಎಲ್ಲಿಯವರೆಗೆ ಚಂದ್ರ, ನಕ್ಷತ್ರಗಳು ಕಾಣುವುವವೋ ಅಲ್ಲಿಯವರೆಗೆ. ಈ ಭೂಂಡಲವು ಏಳು ಸಾಗರಗಳಿಂದ ಸುತ್ತುವರೆಯಲ್ಪಟ್ಟ ಏಳು ದ್ವೀಪಗಳಾಗಿ ವಿಭಜಿತವಾಗಿವೆ. ಈ ದ್ವೀಪಗಳ ಪೈಕಿ ಜಂಬೂದ್ವೀಪವು ಒಂಬತ್ತು ವಿಭಾಗಗಳಾಗಿ ಎಂಟು ಪರ್ವತಗಳಿಂದ ಬೇರ್ಪಡಿಸಲ್ಪಟ್ಟಿದ್ದು ಪ್ರತಿಯೊಂದು ವಿಭಾಗವೂ ೯೦೦೦ ಯೋಜನಗಳಷ್ಟು (೭೨೦೦೦ ಮೈಲುಗಳು) ವಿಸ್ತಾರವುಳ್ಳದ್ದಾಗಿದೆ. ಈ ಒಂಬತ್ತು ವಿಭಾಗಗಳಲ್ಲಿ ಇಳಾವರ್ತವೆಂದು ಕರೆಯಲ್ಪಡುವ ಮಧ್ಯಭಾಗದಲ್ಲಿ ಬಂಗಾರದ ಪರ್ವತ ಮೇರುಪರ್ವತವಿದ್ದು ಅದು ೧೦೦,೦೦೦ ಯೋಜನಗಳಷ್ಟು ಅಗಲ ಮತ್ತು ೮೪೦೦೦ ಯೋಜನಗಳಷ್ಟು ಎತ್ತರವಿತ್ತು. ಇಳಾವರ್ತದ ಉತ್ತರದಲ್ಲಿ ನೀಲ, ಶ್ವೇತ ಮತ್ತು ಸಾರಂಗವನ ಪರ್ವತಗಳಿದ್ದು, ಪೂರ್ವ, ಪಶ್ಚಿಮ ಭಾಗದಲ್ಲಿ ಮಾಲ್ಯವನ ಮತ್ತು ಗಂಧಮಾದನ ಪರ್ವತಗಳಿದ್ದರೆ, ದಕ್ಷಿಣದಲ್ಲಿ ನಿಷಾದ, ಹೇಮಕೂಟ ಮತ್ತು ಹಿಮಾಲಯ ಪರ್ವತಗಳಿವೆ. ಹಿಮಾಲಯ ಪರ್ವತದಿಂದ ವಿಂಗಡಿಸಲ್ಪಟ್ಟ ವಿಭಾಗವೇ ಭಾರತವರ್ಷ. ಮೇರು ಪರ್ವತದ ನಾಲ್ಕು ಬದಿಗಳಲ್ಲಿ ಮಂದಾರ, ಮೇರುಮಂದಾರ, ಸುಪಾರ್ಶ್ವ ಮತ್ತು ಕುಮುದಗಳೆಂಬ ಪರ್ವತಗಳಿದ್ದು ಈ ಪರ್ವತಗಳ ಧ್ವಜಗಳಂತೆ ಕಂಗೊಳಿಸುವ ನಾಲ್ಕು ಮರಗಳು - ಮಾವು, ಸೇಬು, ಕದಂಬ ಮತ್ತು ಬಾಳೆ - ಇದ್ದು ಇವುಗಳು ೧೦೦ ಯೋಜನಗಳಷ್ಟು ಅಗಲ (೮೦೦ ಮೈಲುಗಳು) ಮತ್ತು ೧೧೦೦ ಯೋಜನಗಳಷ್ಟು ಎತ್ತರ (೮೮೦೦ ಮೈಲುಗಳು) ಇದ್ದವಂತೆ. ಅವುಗಳ ಕೊಂಬೆಗಳೂ ೧೧೦೦ ಯೋಜನಗಳಷ್ಟು ಹರಡಿದ್ದವಂತೆ. ಅಷ್ಟು ಎತ್ತರದಿಂದ ಬಿದ್ದ ಮರದ ಹಣ್ಣುಗಳ ರಸ ಹರಿಯುವ ನದಿಗಳಾಗಿ ಸುಗಂಧ ಬೀರುತ್ತಿದ್ದವಂತೆ. 
     ನಮ್ಮ ಪುಣ್ಯಭೂಮಿ, ಮಾತೃಭೂಮಿ, ಪಿತೃಭೂಮಿ, ಕರ್ಮಭೂಮಿ ಭಾರತದ ನೆಲೆವೀಡು ಜಂಬೂದ್ವೀಪ. ಜಂಬೂದ್ವೀಪದ ಎಲ್ಲೆಡೆ ಭಾರತದ ಹಿರಿಮೆ, ಗರಿಮೆ ಮತ್ತು ಸಂಸ್ಕೃತಿಯ ಪ್ರಭಾವ ಹರಡಿತ್ತು. ಆಗಿನ ಭಾರತದ ಮೇರೆಗಳು ಈಗಿನಂತಿರಲಿಲ್ಲ. ಕಾಲಾಂತರದಲ್ಲಿ ಭೌಗೋಳಿಕ ಕಾರಣವೂ ಸೇರಿದಂತೆ ಅನೇಕ ಕಾರಣಗಳಿಂದ ಮೇರೆಗಳು, ಭೂರಚನೆಗಳು ಮಾರ್ಪಾಡಾಗಿವೆ. ಆದರೂ 'ಜಂಬೂದ್ವೀಪೇ ಭರತವರ್ಷೇ ಭರತಖಂಡೇ. . .' ಎಂಬ ಪದಗಳ ಪ್ರಯೋಗ ಮಾತ್ರ ಇಂದಿಗೂ ನಿಂತಿಲ್ಲ. 
     ಪುರಾಣ, ಪುಣ್ಯಕಥೆಗಳಲ್ಲಿನ ವರ್ಣನೆ ತಿಳಿದೆವು. ಇನ್ನು ಕೆಳದಿ ಸಂಸ್ಥಾನದ ಆಸ್ಥಾನಕವಿ ಲಿಂಗಣ್ಣನ ಐತಿಹಾಸಿಕ ಕೃತಿ ಕೆಳದಿನೃಪ ವಿಜಯದಲ್ಲಿ ಬರುವ ಜಂಬೂದ್ವೀಪದ ಸುತ್ತಲೂ ಆವರಿಸಿದ್ದ ಸಮುದ್ರದ ಕಲ್ಪನೆ, ವಿವರಣೆ  ನೋಡೋಣ. ಕವಿಯೇ ಹೇಳಿಕೊಂಡಿರುವಂತೆ 'ಕೆಳದಿಪರಾಮೇಶ್ವರನೊಲಿದುಸುರ್ದ ಪ್ರಾಕೃತ ಸಂಸ್ಕೃತ ಮೃದುಭಾಷಾ ಕವನದಿನಧಿಕರಮ್ಯಮಾಗಿರ್ಪುದರಿಂ ಶ್ರೀಕೆಳದಿನೃಪವಿಜಯಮೆನಿಪೀಕಾವ್ಯಂ ಸೇವ್ಯಮೆನಿಸಿ ಶೋಭಿಸುತಿರ್ಕಂ'. ಈ ಶೋಭಿತ, ಸೇವ್ಯ ಕಾವ್ಯದಲ್ಲಿ ಬರುವ ಸಮುದ್ರದ ವರ್ಣನೆ ರಂಜನೀಯವಾಗಿದೆ. 
     ಎತ್ತರೆತ್ತರಕ್ಕೆ ಚಿಮ್ಮುವ ಹೊಳೆಯುವ ಅಲೆಗಳು, ಅಲೆಗಳಲ್ಲಿ ಓಡಾಡುವ ಭಯಂಕರ ಮೀನುಗಳು, ಆಮೆಗಳು, ಏಡಿಗಳು, ಮೊಸಳೆಗಳು, ನೀರಾನೆಗಳು, ಹಾವುಗಳೇ ಮುಂತಾದ ವಿಧವಿಧ ಜಲಚರಗಳು, ಅವುಗಳು ಚಿಮ್ಮಿಸುವ ನೀರಹನಿಗಳು, ನೊರೆಗಳು, ಶಂಖ, ಚಕ್ರಗಳಿಂದ ಶೋಭಿಸುವ ಆ ಸಾಗರವು ಶಿವನ ನಿಷಂಗ (ಬತ್ತಳಿಕೆ), ಅಚ್ಯುತನ ಪಾಸು (ವಿಷ್ಣುವಿನ ಹಾಸಿಗೆ), ವರುಣನ ಅರಮನೆ, ಚಂದಿರನ ಜನ್ಮಸ್ಥಳ, ಮೈನಾಕ ಪರ್ವತದ ರಕ್ಷಾಕವಚ, ವಡಬಾಗ್ನಿಯ ಉಷ್ಣ ಶಮನಗೊಳಿಸುವ ಜಲಪಾತ್ರೆ ಹಾಗೂ ಲಕ್ಷ್ಮಿಯ ತವರುಮನೆಯಾಗಿ ಶ್ರೇಷ್ಠ ರತ್ನ, ಮುತ್ತುಗಳ ಭಂಡಾರವಾಗಿದೆ. ಸಮುದ್ರವನ್ನು ಶ್ರೀಹರಿಗೆ ಹೋಲಿಸುವ ಕವಿ  ದೊಡ್ಡ ದೊಡ್ಡ ಅಲೆಗಳನ್ನು ಅವನ ತೋಳುಗಳಿಗೂ, ಸುಳಿಯನ್ನು ಸುದರ್ಶನ ಚಕ್ರಕ್ಕೂ, ಸಮುದ್ರದ ನೊರೆಯನ್ನು ಅವನ ಮಂದಹಾಸಕ್ಕೂ, ಸಮುದ್ರದ ಆಳ ವಿಸ್ತಾರಗಳು ಉದರದೊಳಗಣಜಾಂಡ (ಹೊಟ್ಟೆಯಲ್ಲಿ ಇರುವ ಬ್ರಹ್ಮಾಂಡ), ಹೊಳೆಯುವ ಜಲ ಅವನ ಕಾಂತಿ ಮತ್ತು ಬಡಬಾನಲವೇ ಅವನುಟ್ಟ ಪೀತಾಂಬರಕ್ಕೂ ಸಮೀಕರಿಸಿ ವರ್ಣಿಸುತ್ತಾನೆ. 
     ಅಸಂಖ್ಯಾತ ನದಿಗಳು, ತೊರೆಗಳನ್ನು ತನ್ನಲ್ಲಿ ಅಡಗಿಸಿ ಅರಗಿಸಿಕೊಳ್ಳುವ ಚಕ್ರವರ್ತಿ ಸಾರ್ವಭೌಮ ಸಮುದ್ರ ಹರಿಯ ನಂದಗೋಕುಲದಂತೆ ರಮಣೀಯ, ರುದ್ರಮನೋಹರ, ಮನ್ಮಥನಂತೆ ಸದಾ ಸುಂದರ, ಅತುಲ ಜಲಚರಗಳ ಸಮೂಹದಿಂದ ವೈಭವಯುತ, ಸೂರ್ಯನಂತೆ ಹೊಳೆಯುವ, ರೋಗವಿಲ್ಲದ, ಸೌಂದರ್ಯ ಮತ್ತು ಉಪ್ಪುಗಳ ಸಮ್ಮಿಳಿತ ಲಾವಣ್ಯ ಹೊಂದಿದ, ಚಂದ್ರೋದಯದಂತೆ ಭೂಮಿಗೆ ಶೀತಲ ಅನುಭವ ನೀಡುವ ಸಮುದ್ರಕ್ಕೆ ಸಮುದ್ರವೇ ಸಾಟಿ. ಇಷ್ಟಾದರೂ ಆ ಸಮುದ್ರರಾಜನಿಗೂ ಚಿಂತೆ ತಪ್ಪಿಲ್ಲ. ಮಗಳು ಲಕ್ಷ್ಮಿ ಅತಿ ಚಂಚಲೆ, ಅಳಿಯ ವಿಷ್ಣು ಹೂಗಣ್ಣ (ತಾವರೆ ಕಣ್ಣಿನವನು), ಮಗ ಚಂದ್ರನೋ ಕ್ಷಯರೋಗಿ, ಮೊಮ್ಮಗ ಮನ್ಮಥನಿಗೆ ದೇಹವೇ ಇಲ್ಲದೆ ಅನಂಗನಾಗಿದ್ದಾನೆ. ಅವನ ವಿಷಾದದ ನಿಟ್ಟುಸಿರೇ ಸಮುದ್ರದ ಅಲೆಗಳ ಭೋರ್ಗರೆತವಾಗಿ ಹೊರಹೊಮ್ಮುತ್ತಿದೆ. 
     ದೇವತೆಗಳಿಗೆ ಅಮೃತವನ್ನು ಕೊಟ್ಟ, ಶಿವನಿಗೆ ನೀಲಕಂಠನೆಂಬ ಹೆಸರು ಬರಲು ಕಾರಣವಾದ, ವಿಷ್ಣುವಿಗೆ ಲಕ್ಷ್ಮೀಪತಿಯೆಂದು ಹೆಸರು ಬರಲು ಕಾರಣವಾದ ಆ ಜಲರಾಜನ ಹಿರಿಮೆಯನ್ನು ಕವಿಯ ಮಾತಿನಲ್ಲೇ ಕೇಳುವುದು ಸೊಗಸು!
                      ಅಮರರ್ಗಮೃತಾಶನರೆಂ
                      ದುಮೆಯಾಣ್ಯಗೆ ನೀಲಕಂಠನೆಂದಚ್ಯುತಗಂ
                      ಕ್ರ್ರಮದಿಂ ಕಮಲಾಪತಿಯೆಂ
                      ದಮರ್ದಿರೆ ಪೆಸರಿತ್ತ ಜಲಧಿಯೇಂ ರಂಜಿಸಿತೋ || . . (ಕೆ.ನೃ.ವಿ.೧.೫)
      ಈರೀತಿ ಶೋಭಿಸುವ ಸಮುದ್ರದ ನಡುವೆ ವಿರಾಜಿಸುತ್ತಿದ್ದ ಭವ್ಯ ಕಮಲವೇ ಜಂಬೂದ್ವೀಪ !! ಈ ಜಂಬೂದ್ವೀಪದ ಮಧ್ಯಭಾಗದಲ್ಲಿದ್ದುದು ಕನಕಾಚಲ (ಬಂಗಾರದ ಪರ್ವತ-ಮೇರುಪರ್ವತ). ಹಿಂದೊಂದು ಕಲ್ಪದಲ್ಲಿ ಯಾರು ಶ್ರೇಷ್ಠರು ಎಂಬ ಕುರಿತು ಬ್ರಹ್ಮ ಮತ್ತು ವಿಷ್ಣುಗಳ ನಡುವೆ ವಿವಾದ ನಡೆದ ಸಂದರ್ಭದಲ್ಲಿ ಆ ವಿವಾದವನ್ನು ನಿಲ್ಲಿಸುವ ಸಲುವಾಗಿ ಸೃಷ್ಟಿಯಾದ ಆದಿ-ಅಂತ್ಯಗಳಿಲ್ಲದ ಮಹಾದಿವ್ಯಲಿಂಗದ ರೀತಿಯಲ್ಲಿ ಚೆಲ್ವಾಯ್ತು ಕಣ್ಗೆ ಕಾಂಚನಶೈಲ ಪರ್ವತ. ಮೇರು ಪರ್ವತದ ದಕ್ಷಿಣ ದಿಕ್ಕಿನಲ್ಲಿ ಪೂರ್ವ ಪಶ್ಚಿಮ ಸಮುದ್ರಗಳೇ ಅಂಚಾಗಿದ್ದು ಎತ್ತರೆತ್ತರದಲ್ಲಿ ಆಕಾಶವನ್ನು ಮುಟ್ಟಿ ಸೆಟೆದು ನಿಂತಿದ್ದುದು ಹಿಮವತ್ಪರ್ವತ. ಆ ಗಿರಿರಾಜನಾದರೋ ವಿಷ್ಣುವಿನ ವಾಹನವಾದ ಗರುಡನಿಗೆ ಆಧಾರವಾಗಿ, ಸಾಧು-ಸಜ್ಜನರಿಗೆ ಆಶ್ರಯತಾಣವಾಗಿ, ಅನೇಕ ಸಹಶಿಖರಗಳೊಡಗೂಡಿದ್ದು, ಆದಿಶೇಷನೆಂಬ ಕಾಲ್ಗಡಗ ಧರಿಸಿದ ಪಾದ ಉಳ್ಳವನು. ಹೈಮಾಚಲದ ದಕ್ಷಿಣಭಾಗದಲ್ಲಿ ಸಂಪತ್ಭರಿತವಾದ ಪುಣ್ಯದ ಭಂಡಾರವೆನಿಸಿ ಕರ್ಮಭೂಮಿಯಾಗಿ ಕಂಗೊಳಿಸುತ್ತಿದ್ದುದೇ ಭರತಖಂಡ.
*************
-ಕ.ವೆಂ.ನಾಗರಾಜ್.