ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಮಾರ್ಚ್ 15, 2012

೪ ಶತಮಾನಗಳ ಹಿಂದಿನ ಸ್ವರ್ಗಸದೃಶ ಕರ್ಣಾಟಕ ದೇಶ- ಕವಿ ಕಂಡಿದ್ದಂತೆ

     17ನೆಯ ಶತಮಾನದ ಕವಿಲಿಂಗಣ್ಣ ಅನುಪಮ ರೀತಿಯಲ್ಲಿ ಮಾಡಿರುವ ಜಂಬೂದ್ವೀಪವನ್ನು ಸುತ್ತುವರೆದಿದ್ದ ಸಮುದ್ರದ ರಮ್ಯ ವರ್ಣನೆಯನ್ನು ಓದುಗರಿಗೆ ಹಿಂದಿನ ಲೇಖನದಲ್ಲಿ ಪ್ರಸ್ತುತಪಡಿಸಿರುವೆ.[http://kavimana.blogspot.in/2012/03/blog-post.html]. ಕವಿ ಕಂಡಿದ್ದ ಕರ್ಣಾಟಕ ದೇಶದ ವರ್ಣನೆಯನ್ನು ನಿಮ್ಮ ಮುಂದಿಡಲು  ಲೇಖನದ ಈ ಭಾಗದಲ್ಲಿ ಪ್ರಯತ್ನಿಸಿರುವೆ.
     ಜಗತ್ತಿನ ಅತ್ಯುನ್ನತ ಹೈಮಾಚಲದ ದಕ್ಷಿಣ ಭಾಗದಲ್ಲಿ ವಿರಾಜಿಸಿದ ಸಂಪದ್ಭರಿತ ಭರತಖಂಡದ -ಕವಿಯ ಮಾತಿನಲ್ಲಿ ಹೇಳುವುದಾದರೆ ಅನಘಕರಂಡ ಭರತಖಂಡದ- ದಕ್ಷಿಣ ಭಾಗದ ಕನ್ಯಾಖಂಡ ಪ್ರದೇಶದಲ್ಲಿ ವಿವಿಧ ವರ್ಣಾಶ್ರಮಗಳಿಗೆ ಸೇರಿದ ಜನಸಮೂಹ, ಸುಖ, ಸಂತೋಷಗಳ ನೆಲೆವೀಡಾಗಿ, ಲೆಕ್ಕವಿಲ್ಲದಷ್ಟು ಪುಣ್ಯನದಿಗಳು, ಪವಿತ್ರ ಕ್ಷೇತ್ರಗಳು, ಘನಾರಣ್ಯಗಳು, ಕಂದರ ಪರ್ವತಗಳಿಗೆ ಆಶ್ರಯತಾಣವಾಗಿರುವ ಸಹ್ಯಾಚಲಶ್ರೇಣಿ ಸುಖ-ಸಂಪತ್ತಿನ ಮೂಲವಾಗಿತ್ತು. ಅಂತಹ ಸಹ್ಯಾದ್ರಿಯ ಮಡಿಲಲ್ಲಿ ಇದ್ದ ಹಲವು ದೇಶಗಳ ಪೈಕಿ ಕರ್ಣಾಟಕದೇಶವು ಅಸಮಾನ ಸಂಪತ್ತಿನ ಭಂಡಾರವಾಗಿ ಪುಣ್ಯದ ಭೂಮಿಯಾಗಿ ವೈಭವಯುತವಾಗಿ ಕಂಗೊಳಿಸಿತ್ತು. ಆ ದೇಶದ ವೈಭವವನ್ನು ವರ್ಣಿಸುವುದಾದರೂ ಹೇಗೆ? ಕೆರೆಗಳು, ಹಳ್ಳಗಳು, ನದಿಗಳು, ನೈದಿಲೆ, ತಾವರೆಗಳಿಂದ ಕಂಗೊಳಿಸುವ ಸರೋವರಗಳು, ವಿವಿಧ ಹೂಬಳ್ಳಿಗಳು, ಗಿಡಗಳಿಂದ ಶೋಭಿತ ಉದ್ಯಾನವನಗಳು, ಸುಗಂಧ ಸೂಸುವ ಅರಣ್ಯಗಳು, ರಂಜನೀಯ ಬೆಟ್ಟಗುಡ್ಡಗಳು, ಹೊಲ ಗದ್ದೆಗಳು ಮುಂತಾದುವುಗಳಿಂದ ಅತ್ಯುನ್ನತ ಸುಖದ ಬೀಡಾದ ಆ ದೇಶದ ವರ್ಣನೆ ಪದಗಳಿಗೆ ನಿಲುಕಲಾರದು. 
     ಕರ್ಣಾಟಕ ದೇಶವಾದರೋ ಇಂದ್ರನ ದೇವಲೋಕದಂತೆ ಇದ್ದು, ಸುಮನೋಹರ, ಸುಪರಿಮಳಯುಕ್ತ ವೃಕ್ಷಗಳಿಂದ ಕೂಡಿದೆ. ವಧೂಪಯೋಧರದಂತೆ ಶೋಭಿಸುವ ಅಗ್ರಹಾರಗಳು, ದ್ವಿಜರು, ವಿದ್ವಜ್ಜನರು, ವೇದಪರಾಯಣರು, ಪುಣ್ಯವಂತರುಗಳಿಂದ ಕೂಡಿ ಯಕ್ಷರು ವಾಸಿಸುವ ಅಲಕಾನಗರಿಯನ್ನು ಹೋಲುತ್ತಿದೆ. ಸುಂದರವಾದ ಈ ದೇಶ ಇವರೆಲ್ಲರಿಗೂ ಆಶ್ರಯತಾಣವಾಗಿದ್ದು, ಮಹಾದೇವನಂತೆ ಅಭೇದ್ಯ ಕೋಟೆಗಳಿಂದ ಅಭಯತಾಣವೂ ಆಗಿದೆ. ಇಂತಹ ಪುಣ್ಯದ ನಾಡಿನಲ್ಲಿ ಪುಸಿ(ಸುಳ್ಳು), ಕಳವು, ಪಾದರ(ಹಾದರ), ಪುಂಡಾಟಿಕೆ, ಆಕ್ರಮಣ, ಹೊಡೆದಾಟ, ಬಡಿದಾಟ, ಮೋಸ, ಲೋಭ, ಅನ್ಯಾಯಗಳು (ಪೆಸರ್ಗಳ್ ಪೆಸರ್ಗೊಂಬೊಡಿಲ್ಲ) ಹೆಸರಿಗೂ ಹೇಳುವಂತಿರಲಿಲ್ಲ. ಅಲ್ಲಿನ ಜನರು ಭತ್ತವನ್ನು ಪೊಡೆ ಎನ್ನುತ್ತಿದ್ದರೇ ಹೊರತು ಆ ಪದವನ್ನು ಹೊಡೆ ಎಂಬರ್ಥದಲ್ಲಿ ಬಳಸುತ್ತಿರಲಿಲ್ಲ. ದುಷ್ಟ ಪದಗಳ ಬಳಕೆಯೇ ಅವರಿಗೆ ಗೊತ್ತಿರಲಿಲ್ಲ. ಹೆಣ್ಣಾನೆಗೆ ಪಿಡಿ, ಕಡೆ ಎಂಬ ಪದವನ್ನು ಮೊಸರು ಕಡೆಯುವುದಕ್ಕೆ, ಒಂದು ತಿಂಡಿಗೆ ಒಡೆ, ತುರುಬಿಗೆ ಮುಡಿ ಎಂಬರ್ಥದಲ್ಲಿ ಬಳಸುತ್ತಿದ್ದರೇ ಹೊರತು ಬೇರೆ ಅರ್ಥಗಳು ಅವರಿಗೆ ಕನಸಿನಲ್ಲೂ ಬರುತ್ತಿರಲಿಲ್ಲವಂತೆ.
     ಇಂತಹ ಪಾಪವನ್ನೇ ಅರಿಯದ ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯಂತಹ ನಾಡಿನಲ್ಲಿ ಸಮೃದ್ಧವಾಗಿ ಮಳೆಬೆಳೆಗಳು ಆಗುತ್ತಿದ್ದವು. ನಳನಳಿಸಿ ತೊನೆದಾಡುತ್ತಿದ್ದ ಬತ್ತದ ತೆನೆಗಳು ನೀರಿನಲ್ಲಿ ಪ್ರತಿಫಲಿಸಿ ನೆಲದೊಳಗೆ ಬೇರಿನಲ್ಲೂ ತೆನೆಗಳಿವೆಯೇನೋ ಎಂಬಂತೆ ಕಾಣುತ್ತಿದ್ದವು. (ಜಲಜಜನಮರ್ದಂ ಬೆಳ್ಳಿಯ ಕೊಳವಿಗಳೊಳ್ ತುಂಬಿ ಗಂಟನೊಂದಿಸಿ) ಆ ಬ್ರಹ್ಮ ಅಮೃತವನ್ನು ಗರುಡ ಹೊತ್ತೊಯ್ಯದಿರಲೆಂದು ಬೆಳ್ಳಿಯ ಕೊಳವೆಗಳಲ್ಲಿ ತುಂಬಿಸಿಟ್ಟು ಈ ನಾಡಿನ ಭೂಮಿಯಲ್ಲಿ ಮುಚ್ಚಿಟ್ಟಂತೆ ಇಟ್ಟಿದ್ದ ತೆರದಿ ರಸಭರಿತ ಕಬ್ಬಿನ ಗದ್ದೆಗಳು ತೋರುತ್ತಿದ್ದವು. ಆ ವಿಷ್ಣುವಾದರೋ ಒಮ್ಮೆ ದೇವತೆಗಳಿಗೆ ಅಮೃತವನ್ನು ಕೊಟ್ಟ, ಆದರೆ ನಾವು ನಿಮಗೆ ಪ್ರತಿನಿತ್ಯ ಅಮೃತಧಾರೆಯೆರೆಯುವೆವು ಎಂಬಂತೆ ಕಬ್ಬಿನ ಗಾಣಗಳು ಆಹ್ವಾನಿಸುತ್ತಿದ್ದವು. ಬತ್ತದ ತೆನೆಯನ್ನು ಕಚ್ಚಿಕೊಂಡು ಹೋಗಲು ಬರುವ ಗಿಳಿವಿಂಡುಗಳನ್ನು ಓಡಿಸುತ್ತಿರುವ ಹಳ್ಳಿಯ ಹೆಂಗಸರ ಸೌಂದರ್ಯ ನೋಡುಗರ ಕಣ್ಕುಕ್ಕುವಂತಿತ್ತು. ಅವರ ಕೆಂಪು ತುಟಿಗಳನ್ನು ಕಳಿತ ತೊಂಡೆಹಣ್ಣುಗಳೆಂದು ಭ್ರಮಿಸಿ ಕಚ್ಚಲು ಬರುತ್ತಿರುವ ಗಿಳಿಗಳನ್ನು ಕಂಡು ನಕ್ಕರೆ ಅವರ ಹಲ್ಲುಗಳು ದಾಳಿಂಬೆ ಬೀಜವೆಂದುಕೊಂಡು ಮುಖದ ಸುತ್ತಾ ಹಾರಾಡುತ್ತಾ ಗಿಳಿಗಳು ಕಾಲ್ತೆಗೆಯುತ್ತಿದ್ದವು. 
     ಪಥಿಕರ ಅನುಕೂಲಕ್ಕಾಗಿ ನಿರ್ಮಿಸಿದ ಅರವಟ್ಟಿಗೆಗಳನ್ನು ನೋಡಿಯೇ ಆಯಾಸ ಪರಿಹಾರವಾಗುತ್ತಿತ್ತು. ಬಾಳೆಯಕಂಬಗಳು, ಕಬ್ಬುಗಳು, ತಾವರೆಹೂವುಗಳ ಜಂತೆ, ಮಲ್ಲಿಗೆ ಹೂವಿನ ಅಲಂಕಾರದಿಂದ ಹೊರಡುತ್ತಿದ್ದ ಘಮಘಮ, ಬತ್ತದ ಹುಲ್ಲಿನಿಂದ ಮಾಡಿದ ನೆಲಹಾಸು, ಲಾಮಂಚದ ಚಪ್ಪರದಿಂದೊಡಗೂಡಿ ಮನ್ಮಥನ ನಿವಾಸದಂತಿದ್ದ ಆ ಅರವಟ್ಟಿಗೆಯಲ್ಲಿ ತುಂಬಿದ ಸಿಹಿನೀರಿನ ಕೊಡಗಳಿರುತ್ತಿದ್ದವು. ಹೂವುಗಳ ಮಕರಂದ, ಕಬ್ಬಿನಹಾಲು ಮತ್ತು ಎಳನೀರುಗಳ ಕಾಲುವೆಯನ್ನು ದಾರಿಗರು ತೆಪ್ಪದಲ್ಲಿ ದಾಟುತ್ತಾರೆಂದು ಕವಿ ಉತ್ಪ್ರೇಕ್ಷೆ ಮಾಡುತ್ತಾನಾದರೂ ಅದು ನಾಡು ಸಮೃದ್ಧವಾಗಿತ್ತೆಂದು ಹೇಳುವ ಪರಿಯಾಗಿದೆ. ಆಯಾಸಗೊಂಡು ಬಂದ ದಾರಿಗರಿಗೆ ನೀರೆಯರು ನೀರನ್ನು ಕೊಡದಿಂದ ಎರೆಯುತ್ತಿದ್ದರೆ ಮೈಮರೆತು ಅವರ ಸುಂದರ ತೋಳುಗಳನ್ನು ಬಾಯಿಬಿಟ್ಟುಕೊಂಡು ನೋಡುತ್ತಾ ಇದ್ದ ಅವರ ಕೈಗಳಿಂದ ನೀರು ಚೆಲ್ಲಿ ಹೋಗುತ್ತಿದ್ದರೆ ಆ ಹೆಂಗಸರಿಗೆ ನಗು ಉಕ್ಕಿಬರುತ್ತಿತ್ತು. ಅವರ ಮುಗುಳ್ನಗುವಿನ ಹೊಳಪಿನಿಂದ ನೀರು ಕಂಗೊಳಿಸಿದಾಗ ಏನಾಗುತ್ತಿತ್ತು ಗೊತ್ತೇ? ಚಂದನಮಿಶ್ರಿತ ಸುಗಂಧವೆಂದು ಪಥಿಕರು ಅದನ್ನು ಮೈಗೆ ಪೂಸಿಕೊಳ್ಳಲು ಹೋಗುತ್ತಿದ್ದರಂತೆ!
ಕುಂದದೆ ನೀರೆರೆವಳ ಸು
ಯ್ಮಂದಸ್ಮಿತರೋಚಿ ಮುಸುಕಿ ಪರಿಮಳಿಸುತೆ ಬೆ
ಳ್ವೊಂದಿರೆ ಕುಡಿನೀರ್ ತನುಗಿದು
ಚಂದನರಸಮೆಂದು ಪೂಸಬಗೆವರ್ ಪಾಂಥರ್|| . . (ಕೆ.ನೃ.ವಿ. ೧.೨೮) 
     ಒಟ್ಟಿನಲ್ಲಿ ಹೇಳಬೇಕೆಂದರೆ ಅಂದಿನ ಕರ್ಣಾಟಕ ಸ್ವರ್ಗ ಸದೃಶ ಸುಖ, ಸಂಪತ್ತುಗಳಿಂದ ಕಂಗೊಳಿಸುತ್ತಿತ್ತಂತೆ! ಆಗ ಕರ್ಣಾಟಕವನ್ನು ಆಳುತ್ತಿದ್ದವರು ಮೈಸೂರು ಒಡೆಯರು ಮತ್ತು ಕೆಳದಿಯ ಅರಸರು!
**************************
ಕರ್ಣಾಟಕವನ್ನು ಆಳಿದ್ದ ರಾಜಮನೆತನಗಳ ವಿವರವನ್ನು ಸಾಂದರ್ಭಿಕವಾಗಿ ಇಲ್ಲಿ ಕೊಟ್ಟಿರುವೆ: (ಅನುಕ್ರಮವಾಗಿ ಅವಧಿ, ರಾಜವಂಶ ಮತ್ತು ಪ್ರಮುಖ ರಾಜರುಗಳ ವಿವರವಿದೆ).
1. 3ನೆಯ ಶತಮಾನಕ್ಕಿಂತ ಮುಂಚೆ - ಶಾತವಾಹನರು  -ಶ್ರೀಮುಖ, ಗೌತಮಿಪುತ್ರ
2. ಕ್ರಿ.ಶ. 325-540 - ಕದಂಬರು - ಮಯೂರವರ್ಮ
3. 325-999 - ಗಂಗರು - ಅವಿನೀತ, ದುರ್ವಿನೀತ, ರಾಚಮಲ್ಲ
4. 500-757 - ಬಾದಾಮಿ ಚಾಲುಕ್ಯರು - ಮಂಗಳೇಶ, ಪುಲಿಕೇಶಿ
5. 757-973 - ರಾಷ್ಟ್ರಕೂಟರು - ಕೃಷ್ಣ, ಗೋವಿಂದ, ನೃಪತುಂಗ
6. 973-1198 - ಕಲ್ಯಾಣದ ಚಾಲುಕ್ಯರು - ವಿಕ್ರಮಾದಿತ್ಯ
7. 1198-1312- ದೇವಗಿರಿ ಯಾದವರು - ಸಿಂಗಾಹನ
8. 1000-1346- ಹೊಯ್ಸಳರು - ವಿಷ್ಣುವರ್ಧನ
9. 1336-1565- ವಿಜಯನಗರದ ಅರಸರು - ಕೃಷ್ೞದೇವರಾಯ
10. 1347-1527 ಬಹಮನಿ ಸುಲ್ತಾನರು - ಮಹಮದ್ ಷಾ ೧,೨
11. 1490-1696 -  ಬಿಜಾಪುರ ಸುಲ್ತಾನರು - ಯೂಸುಫ್ ಆದಿಲ್ ಷಾ, ಇಬ್ರಾಹಿಮ್ ಆದಿಲ್ ಷಾ
12. 1500-1763 -  ಕೆಳದಿಯ ಅರಸರು - ಚೌಡಪ್ಪನಾಯಕ, ರಾಣಿ ಚನ್ನಮ್ಮ, ಶಿವಪ್ಪನಾಯಕ
13. 1399-1761 - ಮೈಸೂರು ಒಡೆಯರು - ರಣಧೀರ ಕಂಠೀರವ, ಚಿಕ್ಕದೇವರಾಯ
14. 1761-1799 - ಹ್ಶೆದರ್ ಆಲಿ, ಟಿಪ್ಪುಸುಲ್ತಾನ್
15. 1800-1831 - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್
16. 1800 - ಕರ್ಣಾಟಕದ ವಿಭಜನೆ: ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವನ್ನು ಬ್ರಿಟಿಷರ ಆಡಳಿತದಲ್ಲಿದ್ದ ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ ನಿಜಾಮರುಗಳ ನಡುವೆ ಹರಿದು ಹಂಚಲಾಯಿತು.
17. 1831-1881 ಬ್ರಿಟಿಷರು - ಆಂಗ್ಲರ ಆಧಿಪತ್ಯ
18. 1881-1950 - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್
19. 1956 - ಇಂದಿನ ಕರ್ನಾಟಕದ ರಚನೆ
***************
(ಆಧಾರ: ಕೆಳದಿನೃಪ ವಿಜಯ, ಕರ್ನಾಟಕ.ಕಾಮ್)

2 ಕಾಮೆಂಟ್‌ಗಳು:

  1. ಕೆಳದಿ ನೃಪ ವಿಜಯದ ಭಾಗವನ್ನು ಕಣ್ಮುಂದೆ ವಾಚಿಸಿದಂತಾಯ್ತು........
    ವಂದನೆಗಳು
    ರಮೇಶ ಜೋಯಿಸ್

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು, ರಮೇಶ ಜೋಯಿಸರೇ. ಸದ್ವಿಚಾರ ಹರಡುವ ಪ್ರಯತ್ನವಿದು.

    ಪ್ರತ್ಯುತ್ತರಅಳಿಸಿ