ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜೂನ್ 25, 2012

ಸಂಧ್ಯಾಕಾಲದಲ್ಲಿರುವವರೊಂದಿಗೆ ಸ್ವಲ್ಪ ಸಮಯ



     ನನ್ನ ಮೊಮ್ಮಗಳು ಚಿ. ಅಕ್ಷಯಳ 6ನೆಯ ವರ್ಷದ ಹುಟ್ಟುಹಬ್ಬವನ್ನು ಕಳೆದ ವಾರ ಬೆಂಗಳೂರಿನ ಮನೆಯಲ್ಲಿ ಸರಳವಾಗಿ ಆಚರಿಸಿದರು. ಆ ಸಂದರ್ಭದಲ್ಲಿ ಯಾವುದಾದರೂ ಸಾಮಾಜಿಕ ಚಟುವಟಿಕೆಗೆ ಧನಸಹಾಯ ಮಾಡಲು ಅಪೇಕ್ಷಿಸಿದ್ದ ಅಳಿಯ ರಾಘವೇಂದ್ರ ಮತ್ತು ಮಗಳು ಬಿಂದು ಮನೆಯ ಸಮೀಪದಲ್ಲಿ ವಿಸ್ತರಣೆಯಾಗುತ್ತಿದ್ದ ದೇವಸ್ಥಾನದ ಕಟ್ಟಡಕ್ಕೆ ಹಣ ನೀಡುವ ಬಗ್ಗೆ ಮಾತನಾಡುತ್ತಿದ್ದರು. ಅದರ ಬದಲು ಯಾವುದಾದರೂ ವೃದ್ಧಾಶ್ರಮದ ನಿವಾಸಿಗಳಿಗೆ ಅವರ ಅಗತ್ಯ ನೋಡಿ ಏನಾದರೂ ಸಹಾಯ ಮಾಡಬಹುದೆಂದು ಕೊಟ್ಟ ಸಲಹೆಯನ್ನು ತಕ್ಷಣ ಒಪ್ಪಿದ ಅವರು ಹಾಸನದಲ್ಲೇ ಇರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವಿಚಾರಿಸಿ ತಿಳಿಸುವ ಹೊಣೆಯನ್ನು ನನಗೇ ವಹಿಸಿದರು. ಆ ಕಾರಣದಿಂದ ನಾನು ಮಿತ್ರ ಹರಿಹರಪುರ ಶ್ರೀಧರರನ್ನೂ ಕರೆದುಕೊಂಡು ಹಾಸನ ನಗರದ ಜೊರವಲಯದಲ್ಲಿರುವ ಗವೇನಹಳ್ಳಿಯಲ್ಲಿರುವ ವೃದ್ಧಾಶ್ರಮ ಚೈತನ್ಯ ಮಂದಿರಕ್ಕೆ ಭೇಟಿ ನೀಡಿ ಕೆಲವು ಗಂಟೆಗಳ ಕಾಲ ಅಲ್ಲಿದ್ದ ಹಿರಿಯರೊಡನೆ ಕಳೆದೆವು.  
     ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಂಗ ಸಂಸ್ಥೆ ಚೈತನ್ಯ ಮಂದಿರದಲ್ಲಿ ಈಗ 32 ವೃದ್ಧೆಯರು ಮತ್ತು 10 ವೃದ್ಧರು ಆಶ್ರಯ ಪಡೆದಿದ್ದಾರೆ. ಮೊದಲು 13 ವೃದ್ಧರಿದ್ದು ಅವರ ಪೈಕಿ ಮೂವರು ಕಳೆದ 15 ದಿನಗಳ ಅವಧಿಯಲ್ಲಿ ಇಹಲೋಕ ತ್ಯಜಿಸಿದ ವಿಷಯ ತಿಳಿದು ಮನಸ್ಸು ಭಾರವಾಯಿತು. ವೃದ್ಧಾಶ್ರಮದಲ್ಲಿ ಬಡವರಿಗೆ ಉಚಿತವಾಗಿ ಊಟ, ವಸತಿ, ವೈದ್ಯಕೀಯ ಚಿಕಿತ್ಸೆ, ಇತ್ಯಾದಿ ಅಗತ್ಯದ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ. ಆರ್ಥಿಕವಾಗಿ ಅನುಕೂಲವಾಗಿದ್ದು, ಅಸಹಾಯಕತೆ ಹಾಗೂ ಅನಿವಾರ್ಯತೆಯ ಕಾರಣ ಇರಬಯಸುವ ವೃದ್ಧ, ವೃದ್ಧೆಯರಿಗೂ ಇಲ್ಲಿ ಸ್ವಲ್ಪ ಹಣವನ್ನು ಮುಂಗಡವಾಗಿ ಕಟ್ಟಿಸಿಕೊಂಡು ಮಾಸಿಕ ರೂ. 1500/- ಅನ್ನು ಊಟೋಪಚಾರದ ವೆಚ್ಚವಾಗಿ ಪಡೆದು ಇರಲು ಅನುಕೂಲ ಕಲ್ಪಿಸಿದ್ದಾರೆ. ಅಂತಹ 4-5 ವೃದ್ಧರೂ ಇಲ್ಲಿದ್ದಾರೆ. ಆರು ಶಿಶುಗಳನ್ನೂ ಅಲ್ಲಿ ಪಾಲಿಸಲಾಗುತ್ತಿದೆ. ಮೂರು ಮಕ್ಕಳು 2-3 ವರ್ಷದವರಾಗಿದ್ದರೆ ಮೂರು ಶಿಶುಗಳು ಇನ್ನೂ ಹಾಲು ಕುಡಿಯುವ ಕೆಲವೇ ತಿಂಗಳುಗಳ ಎಳೆ ಕಂದಮ್ಮಗಳು. ಒಂದು ಶಿಶುವಂತೂ ಜನಿಸಿ ಕೇವಲ 2-3 ದಿನಗಳಾಗಿದ್ದು ಸಕಲೇಶಪುರ ತಾಲ್ಲೂಕು ಹುರುಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾಗಿದ್ದು ಇಲ್ಲಿ ಆಶ್ರಯ ಪಡೆದಿದೆ. ಬೆಳಿಗ್ಗೆ ಮತ್ತು ಸಾಯಂಕಾಲ ಕಾಫಿ, ಟೀ, ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಡಾ. ಗುರುರಾಜ ಹೆಬ್ಬಾರರು ಸಂಸ್ಥೆಯ ಅಧ್ಯಕ್ಷರು ಹಾಗೂ ಬೆನ್ನೆಲುಬಾಗಿದ್ದಾರೆ. ಉತ್ತಮ ಸಹಕಾರಿಗಳು ಅವರೊಡನಿದ್ದಾರೆ. 
     ಗಂಡ ಮತ್ತು ಮಕ್ಕಳು ಇಲ್ಲದ ಕಾರಣ ಅನಿವಾರ್ಯವಾಗಿ ಅಲ್ಲಿರಬೇಕಾಗಿ ಬಂದವರು ಕೆಲವರಾದರೆ, ಕೆಲವರು ಪರಸ್ಪರರಲ್ಲಿನ ಹೊಂದಾಣಿಕೆಯ ಕೊರತೆ, ಅಸಹನಾ ಮನೋಭಾವ, ವೈಯಕ್ತಿಕ ಸ್ವಪ್ರತಿಷ್ಠೆ, ಸ್ವಾಭಿಮಾನ, ಬಡತನ, ಇತ್ಯಾದಿಗಳ ಕಾರಣದಿಂದ ಅಲ್ಲಿರುವುದು ಕೆಲವರನ್ನು ಮಾತನಾಡಿಸಿದಾಗ ತಿಳಿದು ಬಂದ ಸಂಗತಿ. ಹೊಂದಿಕೊಂಡು ಹೋಗದ ಅವರುಗಳ ಸ್ವಭಾವದಿಂದ ವೃದ್ಧಾಶ್ರಮದಲ್ಲೂ ಕಿರಿಕಿರಿಯಾಗುವ ಬಗ್ಗೆ ಸಹ ಗೊತ್ತಾಯಿತು. ಒಬ್ಬ ವೃದ್ಧೆಯನ್ನು ಮಕ್ಕಳ ಬಗ್ಗೆ ಕೇಳಿದಾಗ, "ಮಕ್ಕಳು ಅವ್ರೆ, ಸತ್ತಿಲ್ಲ, ಬದುಕವ್ರೆ" ಎಂದು ಸಿಡಿಮಿಡಿಗೊಂಡಿದ್ದಳು. ಆರು ವರ್ಷಗಳಿಂದ ಇಲ್ಲಿರುವ ಇನ್ನೊಬ್ಬ ವೃದ್ಧೆ ಹಿಂದೆ ಅಂಗಡಿ ನಡೆಸುತ್ತಿದ್ದು, ಆಕೆ ಕಷ್ಟಪಟ್ಟು ಉಳಿಸಿದ್ದ  1ಲಕ್ಷ ರೂಪಾಯಿ ಇತರರ ಪಾಲಾಯಿತೆಂದು ಹಲುಬಿದ್ದಳು. ಹಾಸನ ನಗರದ ಒಬ್ಬ ಪ್ರತಿಷ್ಠಿತ ವ್ಯಕ್ತಿಯ (ಈಗ ದಿವಂಗತ) ಪತ್ನಿ ಸಹ ಪಾವತಿ ಆಧಾರದ ಮೇಲೆ ಇಲ್ಲಿನ ನಿವಾಸಿಯಾಗಿದ್ದಾರೆ. ಅವರ ಮಕ್ಕಳು ಅಮೆರಿಕಾದಲ್ಲಿದ್ದಾರೆ. ವಿಶೇಷವೆಂದರೆ ವೃದ್ಧಾಶ್ರಮದ ಒಂದು ಕೊಠಡಿಯನ್ನು (ಸುಮಾರು 2.00ಲಕ್ಷ ಇರಬಹುದು) ಅವರೇ ಕಟ್ಟಿಸಿಕೊಟ್ಟಿದ್ದಾರೆ. ಸಿರಸಿ, ತಿಪಟೂರು, ಬೆಂಗಳೂರು, ಇತ್ಯಾದಿ ಹಲವಾರು ಊರುಗಳಿಂದ ಬಂದವರೂ ಇಲ್ಲಿದ್ದಾರೆ, ಇಲ್ಲಿನವರೂ ಇದ್ದಾರೆ. ಹೆಚ್ಚಿನವರಿಗೆ ವಿಧವಾ ವೇತನ, ವೃದ್ಧಾಪ್ಯ ವೇತನಗಳು ಬರುತ್ತಿವೆ. ವಿಳಾಸ ಬದಲಾವಣೆ, ಊರಿನಲ್ಲಿಲ್ಲ, ಇತ್ಯಾದಿ ಕಾರಣಗಳಿಂದ ಬರುತ್ತಿದ್ದ ವೇತನ ನಿಂತು ಹೋಗಿದ್ದನ್ನು ಮತ್ತೆ ಬರುವಂತೆ ಮಾಡಲು ಕೆಲವರು ನಮ್ಮನ್ನು ಕೋರಿದರು. ಮತ್ತೊಮ್ಮೆ ಬರುವುದಾಗಿಯೂ, ವಿವರಗಳನ್ನು ಪಡೆದು ಸಂಬಂಧಿಸಿದವರೊಡನೆ ವ್ಯವಹರಿಸುವುದಾಗಿ ತಿಳಿಸಿದೆವು. ಎಲ್ಲರನ್ನೂ ಪ್ರಾರ್ಥನಾ ಮಂದಿರಕ್ಕೆ ಬರುವಂತೆ ಕೋರಿ ಅಲ್ಲಿ ಒಟ್ಟಿಗೆ ಕೆಲವು ಭಜನೆಗಳನ್ನು ಹಾಡಿದೆವು. ಶ್ರೀಧರ್ ಸಹ ಎರಡು ಭಜನೆಗಳನ್ನು ಹೇಳಿಕೊಟ್ಟು ಹೇಳಿಸಿದರು. ವೃದ್ಧಾಶ್ರಮಗಳ ಅಗತ್ಯ ಬಾರದಂತೆ ಹೊಂದಿಕೊಂಡು ಹೋಗುವ ಮನೋಭಾವವನ್ನು ಎಲ್ಲರಿಗೂ ಕರುಣಿಸುವಂತೆ 'ಸನ್ಮತಿ ದೇ, ಹೇ ಭಗವಾನ್' ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದೆವು. ಸ್ವಾರ್ಥ ಇಲ್ಲೂ ಬಿಡಲಿಲ್ಲ, 'ನನಗೆ ದೈನ್ಯತೆಯಿಲ್ಲದೆ ಬಾಳುವ ಅವಕಾಶ, ಅನಾಯಾಸದ ಮರಣ ಬರಲಿ' ಎಂದೂ ಕೇಳಿಕೊಂಡೆ.
     ಸ್ನಾನ ಆದ ನಂತರ ತಮ್ಮ ತಮ್ಮ ಇಷ್ಟದ ದೇವರ ಫೋಟೋಗೆ (ತಮ್ಮ ಮಂಚದ ಬಳಿ ಹಾಕಿಕೊಂಡಿರುವುದು) ಮತ್ತು ಪ್ರಾರ್ಥನಾ ಮಂದಿರದಲ್ಲಿರುವ ದೇವರ ಫೋಟೋಗಳಿಗೆ ಪೂಜೆ ಸಲ್ಲಿಸುವವರು ಸಲ್ಲಿಸುತ್ತಾರೆ. ಸಾಯಂಕಾಲ ಎಲ್ಲರೂ ಒಟ್ಟಿಗೆ ಭಜನೆ ಮಾಡುತ್ತಾರೆ. ಬೆಂಗಳೂರಿನ ರುದ್ರಮ್ಮ ಭಜನೆ ಹೇಳಿಕೊಡುತ್ತಾರೆ. ಟಿ.ವಿ. ಇದೆ. ಕೆಲವು ಧಾರಾವಾಹಿಗಳನ್ನು ನೋಡುತ್ತಾರೆ. ಸಮಾನ ಮನಸ್ಕರು ಗುಂಪು ಕಟ್ಟಿಕೊಂಡು ಮಾತನಾಡುತ್ತಾರೆ. ರಾತ್ರಿ ಊಟ ಆದ ನಂತರ ಮಲಗುತ್ತಾರೆ. ಮಕ್ಕಳ ಹುಟ್ಟು ಹಬ್ಬ, ಮದುವೆ, ಇತ್ಯಾದಿ ಶುಭ ಸಂದರ್ಭಗಳಲ್ಲಿ ಇಲ್ಲಿನ ನಿವಾಸಿಗಳಿಗೆ ಊಟ, ತಿಂಡಿಗಾಗಿ ದಾನ ಕೊಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಇಚ್ಛುಕರು ರೂ. 5000/- ದಾನ ನೀಡಿದರೆ ಆ ದಿನದ ತಿಂಡಿ ಮತ್ತು ಎರಡು ಊಟಗಳ ವ್ಯವಸ್ಥೆಯಾಗುತ್ತದೆ. ಕೇವಲ ಒಂದು ಹೊತ್ತಿನ ತಿಂಡಿಗಾದರೆ ರೂ.1000/-, ಒಂದು ಹೊತ್ತಿನ ಊಟಕ್ಕಾದರೆ ರೂ. 2000/- ದಾನ ಕೊಡಬಹುದಾಗಿರುತ್ತದೆ.  ಕೆಲವು ಹಸುಗಳನ್ನೂ ಇಲ್ಲಿ ಸಾಕಿದ್ದು ನೋಡಿಕೊಳ್ಳಲು ಒಬ್ಬ ಗೋಪಾಲಕ ಇದ್ದಾರೆ. ಇಳಿ ವಯಸ್ಸಿನಲ್ಲಿ ಜೀವನದ ಸಿಹಿಕಹಿಗಳನ್ನು ಉಂಡು ಸೋತಿರುವ ಇಲ್ಲಿನ ಜೀವಗಳಿಗೆ ಅಗತ್ಯವಾಗಿರುವುದು ಆಧ್ಯಾತ್ಮಿಕ ಚಿಂತನೆ ಮತ್ತು ಪ್ರೀತಿಯ ಮಾತುಗಳು. ಆಗಾಗ್ಗೆ ಇಲ್ಲಿ ಸತ್ಸಂಗಗಳನ್ನು ಏರ್ಪಡಿಸುವ ಬಗ್ಗೆ ಶ್ರೀಧರ್ ಮತ್ತು ನಾನು ಮಾತನಾಡಿಕೊಂಡೆವು. ಮಳೆಗಾಲವಾದ್ದರಿಂದ ಮತ್ತು ಮುಂಬರುವ ಚಳಿಗಾಲದ ಕಾರಣದಿಂದ ಅವರುಗಳಿಗೆ ಸ್ವೆಟರ್‌ಗಳನ್ನು ಒದಗಿಸುವುದು ಸೂಕ್ತವೆಂದು ಅನ್ನಿಸಿ ವ್ಯವಸ್ಥೆ ಮಾಡಲು ಮಗಳಿಗೆ ದೂರವಾಣಿ ಕರೆ ಮಾಡಿದೆ. 
-ಕ.ವೆಂ.ನಾಗರಾಜ್.
- - - - - - - - - - - - - - - - - - - - - - - - - -
ವೃದ್ಧಾಶ್ರಮದ ಕೆಲವು ಫೋಟೋಗಳು:










     . 
        



ಗುರುವಾರ, ಜೂನ್ 7, 2012

"ಆಡದ ಮಾತುಗಳು" - ಒಂದು ವಿಚಾರ ಸಂಕಿರಣ



     ಮಂಕ, ಮಡ್ಡಿ, ಮರುಳ, ಮೂಢರು ಒಂದು ನಿಯಮ ಮಾಡಿಕೊಂಡಿದ್ದರು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲಿ, ಬಿಡಲಿ ವಾರಕ್ಕೊಮ್ಮೆಯಾದರೂ ಮುಠ್ಠಾಳನ ಮನೆಯಲ್ಲಿ ಒಟ್ಟಿಗೆ ಸೇರಿ ಕೆಲವು ಗಂಟೆಗಳಾದರೂ ಕಷ್ಟ-ಸುಖಗಳನ್ನು ವಿನಿಮಯ ಮಾಡಿಕೊಳ್ಳಬೇಕೆಂಬುದೇ ಆ ನಿಯಮ. ಆಗ ಮುಠ್ಠಾಳ ಅವರಿಗೆ ಕಾಫಿ, ತಿಂಡಿ ಒದಗಿಸಬೇಕಾಗಿದ್ದುದೂ ಒಂದು ಅಲಿಖಿತ ನಿಯಮವಾಗಿತ್ತು. ಅವರು ಒಟ್ಟಿಗೆ ಇರುವುದನ್ನು ಕಂಡವರು ಆಡಿಕೊಳ್ಳುತ್ತಿದ್ದರು, 'ಶುರುವಾಯ್ತಪ್ಪಾ ಇವರ ಸತ್ತ ಸಂಗ (ಸತ್ಸಂಗ!)'. ಹಾಗೆ ಸೇರಿದಾಗ ಯಾವುದಾದರೂ ವಿಷಯದ ಮೇಲೆ ಚರ್ಚೆ ಮಾಡುತ್ತಿದ್ದರು. ಹಾಗೆ ಒಂದು ದಿನ ಸೇರಿದಾಗ ಮುಠ್ಠಾಳ ಕೊಟ್ಟ ಬಿಸಿ ಬಿಸಿ ಬೋಂಡಾ ತಿನ್ನುತ್ತಾ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತಿದ್ದರು. ಯಾರೂ ಮಾತು ಪ್ರಾರಂಭಿಸದಿದ್ದರಿಂದ ಮಂಕ ಗಂಟಲು ಸರಿ ಮಾಡಿಕೊಂಡು ತಾನೇ ಶುರು ಮಾಡಿದ:
    "ಗೆಳೆಯರೇ, ಈ ವಿಷಯ ನಿಮಗೆ ಮೊದಲು ಹೇಳಿರಲಿಲ್ಲ. ಈಗ ಹೇಳಿಬಿಡುತ್ತೇನೆ. ನಾನು  ದೇವರಲ್ಲಿ ಶಕ್ತಿ ಕೊಡು ಅಂತ ಕೇಳಿದೆ. ಆ ದೇವರು ನನ್ನನ್ನು ದುರ್ಬಲನಾಗಿ ಮಾಡಿಬಿಟ್ಟ, ಏಕೆಂದರೆ ವಿಧೇಯತೆ ಕಲಿಯಲಿ ಅಂತ. ಆರೋಗ್ಯ ಕೊಡು ಎಂದದ್ದಕ್ಕೆ, ಎಡವಟ್ಟು ಮಾಡಿದ, ಏಕೆಂದರೆ ಏನಾದರೂ ಮಾಡಬೇಕು ಅನ್ನುವ ಮನಸ್ಸು ಬರಲಿ ಅಂತ. ಸುಖ ಅನುಭವಿಸಲು ಶ್ರೀಮಂತಿಕೆ ಕೊಡು ಅಂತ ಕೇಳಿದರೆ ಬಡತನ ಕೊಟ್ಟುಬಿಟ್ಟ. ಬುದ್ಧಿವಂತ ಆಗಲಿ ಅಂತ. ಅಧಿಕಾರ ಕೊಡು, ಜನ ನನ್ನನ್ನು ಹೊಗಳಲಿ ಅಂತ ಕೇಳಿದರೆ ಜವಾನನಾಗಿ ಕೆಲಸ ಮಾಡುವಂತೆ ಮಾಡಿದ, ಏಕೆಂದರೆ ನಾನು ದೇವರನ್ನು ನೆನೆಸಿಕೊಳ್ಳುತ್ತಿರಲಿ ಅಂತ. ಎಲ್ಲಾ ವಸ್ತುಗಳನ್ನು ಜೀವನ ಸುಖವಾಗಿಡಲು ಕೊಡಪ್ಪಾ ಅಂತ ಕೇಳಿದೆ,  ಜೀವನ ಕೊಟ್ಟಿದೀನಿ, ಎಲ್ಲಾ ವಸ್ತುಗಳನ್ನು ನೀನೇ ಪಡಕೊಳ್ಳಬಹುದು ಅಂತ ಹೇಳಿದ. ಆಮೇಲೆ ನಾನು ಅವನನ್ನು ಕೇಳಿಕೊಳ್ಳಬೇಕು ಅಂತ  ಇದ್ದೆನೋ ಅದನ್ನು ಕೇಳಿಕೊಳ್ಳಲೇ ಇಲ್ಲ, ಆದರೆ ಆ ದೇವರು ಅವೆಲ್ಲವನ್ನೂ ನನಗೆ ಕೊಟ್ಟ. ನಾನು ಈಗ ಎಲ್ಲರಿಗಿಂತ ಹೆಚ್ಚು ಸುಖಿಯಾಗಿದೀನಿ." 
     'ಅವನು ಸುಖವಾಗಿರುವ ಮುಖ ನೋಡು' ಅಂತ ಮಡ್ಡಿ ಮನಸ್ಸಿನ ಒಳಗೇ ಗೊಣಗಿಕೊಂಡವನು ಮಂಕನಿಗೆ ಕೇಳಿದ: "ಹೌದಪ್ಪಾ, ಅಂಥಾದ್ದೇನು ನೀನು ದೇವರನ್ನು ಕೇಳಿಕೊಳ್ಳದೇ ಇದ್ದದ್ದು?" 
     "ಅದನ್ನು ನೀವು ಕೇಳಬಾರದು, ನಾನು ಹೇಳಲೂಬಾರದು"-ಮಂಕನ ಉತ್ತರ.
     ಇವರ ಮಾತು ಕೇಳುತ್ತಿದ್ದ ಮೂಢ ಮೂಗು ತೂರಿಸಿದ: "ಮಂಕ ಹೇಳೋದು ಒಂದು ರೀತಿಯಲ್ಲಿ ಸರಿ. ಆಡದ ಮಾತುಗಳಿಂದಾಗಿ ಮತ್ತು ಕೇಳದ ಮಾತುಗಳಿಂದಾಗಿ ಜನ ಗೌರವ ಉಳಿಸಿಕೊಂಡಿದ್ದಾರೆ. ಆಡಲಾಗದ, ಆಡಬಾರದ ಮಾತುಗಳು ಅವರ ಒಳಗೇ ಬಂದಿಯಾಗಿರುತ್ತವೆ. ಅಂತಹ ಮಾತುಗಳು ಒಳಗೇ ಉಳಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆಂದು ಹೊರಗೆ ಬಂದರೆ ಆಗಲೂ ಕೈಕಾಲು ಅಲ್ಲದಿದ್ದರೂ ಮನಸ್ಸಾದರೂ ಮುರಿಯಬಹುದು.  ಮಾತುಗಳು ಒಳಗೆ ಇರುವವರೆಗೆ ಅದಕ್ಕೆ ನೀವು ಬಾಸ್, ಹೊರಬಿತ್ತೋ ಅವಕ್ಕೆ ನೀವೇ ದಾಸರು. ಮಾತುಗಳನ್ನು ನಾವು ಮುಟ್ಟೋಕಾಗಲ್ಲ. ಆದರೆ ಮಾತುಗಳು ನಮ್ಮನ್ನು ಮುಟ್ಟುತ್ತವೆ. ಮಂಕ ಬುದ್ಧಿವಂತ, ಅದಕ್ಕೇ ಅದೇನು ಅಂತ ಹೇಳ್ತಾ ಇಲ್ಲ. ಒಂದಲ್ಲಾ ಒಂದು ದಿನ ಯಾವುದಾದರೂ ರೀತಿಯಲ್ಲಿ ಹೊರಬರುತ್ತೆ ಬಿಡು. ಎಷ್ಟು ದಿನಾ ಅಂತ ಅದನ್ನು ಒಳಗೇ ಇಟ್ಟುಕೊಂಡು ಒದ್ದಾಡ್ತಾನೆ."
     ಅರ್ಥವಾಗದೆ ಕಣ್ಣು ಕಣ್ಣು ಬಿಟ್ಟು ನೋಡಿದ ಮರುಳ, "ಮಾತು ಆಡಕ್ಕಾಗಲ್ವಾ? ಒಳಗೇ ಇರ್ತಾವಾ? ಹೆಂಗೆ?" ಎಂದಾಗ ಮಡ್ಡಿ, "ಅಯ್ಯೋ, ಮರುಳೆ, ನೀನು ಒಂದು ಸುಂದರ ಹುಡುಗಿ ನೋಡ್ತೀಯ, ಅವಳು ಹೆಂಡತಿಯಾಗಿ ಸಿಕ್ಕರೆ ಅಂತ ಆಸೆ ಪಡ್ತೀಯಾ ಅಂತಿಟ್ಕೋ. ಆ ಹುಡುಗಿ ಕಾರಿನಲ್ಲಿ ಓಡಾಡೋಳು, ದೊಡ್ಡ ಶ್ರೀಮಂತ ಅಪ್ಪ. ನೀನೋ ಅಟ್ಲಾಸ್ ಸೈಕಲ್ ಮಾಲಿಕ.  ನೀನು ಅವರಪ್ಪನ್ನ ಅಥವ ಆ ಹುಡುಗೀನ ನಿನ್ನ ಆಸೆ ಬಗ್ಗೆ ಹೇಳಿಕೊಳ್ಳೋಕೆ ಆಗುತ್ತಾ? ಅದು ನಿನ್ನ ಗಂಟಲ ಕೆಳಗೇ ಉಳಿದುಹೋಗುತ್ತೆ. ಅರ್ಥ ಆಯ್ತಾ? ಇನ್ನೊಂದು ಉದಾಹರಣೆ ಹೇಳಬೇಕು ಅಂದರೆ, ಒಬ್ಬ ಹುಡುಗ ಒಂದು ಹುಡುಗಿಯನ್ನು ಪ್ರೀತಿಸ್ತಿದಾನೆ ಅಂತ ಇಟ್ಕೋ. ಆದರೆ ಅದನ್ನು ಹೇಳೋಕೆ ಅವನಿಗೆ ಧೈರ್ಯ ಇಲ್ಲ, ಸುಮ್ಮನೆ ಇರ್ತಾನೆ. ಆ ಹುಡುಗೀಗೂ ಅದೇ ಕಥೇ ಆಗಿದ್ದು ಅವಳದ್ದೂ ಅದೇ ಪರಿಸ್ಥಿತಿ ಅಂತ ಇಟ್ಕೋ. ಇಬ್ಬರೂ ಸುಮ್ಮನೆ ಇರ್ತಾರೆ. ಒಂದು ದಿನ ಅವರ ಅಪ್ಪ-ಅಮ್ಮಂದಿರು ಅವರುಗಳಿಗೆ ಬೇರೆ ಗಂಡು/ಹೆಣ್ಣು ನೋಡಿ ಮದುವೆ ಮಾಡ್ತಾರೆ. ಆಗ ಅವರ ಒಳಗಿನ ಮಾತುಗಳು ಒಳಗೇ, ಹೊರಗಿನ ಮಾತುಗಳು ಹೊರಗೇ ಇರ್ತಾವೆ. ಮುಗಿದು ಹೋಯಿತು, ಮಾತುಗಳು ಅಲ್ಲೇ ಸಮಾಧಿಯಾಗುತ್ತವೆ" ಎಂದವನೇ ತಾನು ಎಷ್ಟು ಬುದ್ಧಿವಂತ ಎಂಬಂತೆ ಉಳಿದವರ ಕಡೆ ಕಣ್ಣು ಹಾಯಿಸಿದ.  
     ಎಲ್ಲರ ತಟ್ಟೆಗಳಿಗೆ ಮತ್ತಷ್ಟು ಬೋಂಡ ತಂದು ಹಾಕುತ್ತಾ ಮುಠ್ಠಾಳ, "ಹೇಳಕ್ಕಾಗದೇ ಇದ್ರೆ ಏನಾಯ್ತು? ಒಳಗೇ ಇದ್ದರೆ ಇರಲಿ, ಏನಾಗುತ್ತೆ?"  ಬೋಂಡಾದ ಮುಲಾಜಿಗೆ ಉಳಿದವರು ಅವನನ್ನು ಹಂಗಿಸಲಿಲ್ಲ. ಮೂಢ ಹೇಳಿದ, "ಹೇಳದೆ ಇದ್ದರೆ ಆ ಮಾತುಗಳು ಒಳಗೇ ಕುಣೀತಾ ಇರ್ತವೆ. ಹೊರಗೆ ಬರಲು ಚಡಪಡಿಸ್ತಾ ಇರ್ತವೆ. ಆಗ ಅಸಮಾಧಾನ, ಅಸಹನೆ ಉಂಟಾಗಿ ಮನಸ್ಸಿಗೆ ಶಾಂತಿಯೇ ಇರಲ್ಲ. ಎದುರಿಗೆ ಇರುವವರನ್ನು ಹಂಗಿಸುವ ಇಚ್ಛೆ ಒಳಗೇ ಇದ್ದರೂ ಹಂಗಿಸಲಾರದೆ, ಮೂರನೆಯವರ ಎದುರಿಗೆ ಅಪರೋಕ್ಷವಾಗಿ ಬೇರೆ ರೀತಿಯಲ್ಲಿ ಮಾತುಗಳು ಹೊರಗೆ ಬಂದುಬಿಡುತ್ತವೆ. ತಮ್ಮ ಅಸಹನೆ ಸಂಬಂಧಿಸಿದವರಿಗೆ ಗೊತ್ತಾಗಲಿ ಎಂಬಂತೆ ಅವರ ವರ್ತನೆ ಇರುತ್ತದೆ. ಸಂಬಂಧಿಸಿದವರಿಗೆ ಹೇಳಲಾಗದ ಮಾತುಗಳನ್ನು ತಮ್ಮ ವಿಶ್ವಾಸದ ಸ್ನೇಹಿತರಲ್ಲಿ ಹೇಳಿಕೊಂಡು ಹಗುರಾಗುತ್ತಾರೆ. ಒಬ್ಬರಿಂದ ಒಬ್ಬರಿಗೆ ಹೋಗುತ್ತಾ ಆ ಮಾತುಗಳು ಉದ್ದೇಶಿಸಿದವರಿಗೂ ತಲುಪಿ ರಂಪ ರಾಮಾಯಣವೂ ಆಗುತ್ತೆ. ಈ ಆಡಲಾಗದ, ಆಡದೇ ಇರುವ ಮಾತುಗಳು ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ."
     ಮಂಕ, "ಅನ್ನಿ, ಅನ್ನಿ. ನೀವು ನನ್ನನ್ನೇ ಅಂತಾ ಇರೋದು ಅಂತ ನನಗೆ ಗೊತ್ತು. ಒಂದು ವಿಷಯ ತಿಳ್ಕೊಳ್ಳಿ, ಮಾತುಗಳು ಮತ್ತು ಹೃದಯಗಳ ಬಗ್ಗೆ ಜೋಪಾನವಾಗಿರಬೇಕು. ಮಾತುಗಳನ್ನು ಆಡುವ ಮುನ್ನ ಮತ್ತು ಹೃದಯಗಳು ಒಡೆಯುವ ಮುನ್ನ ಎಚ್ಚರಿಕೆ ಇರಬೇಕು ಅನ್ನುವುದು ನೆನಪಿರಲಿ" ಅಂದ. ಎಲ್ಲರೂ ಮಂಕನ ಮೇಲೆ ಮುಗಿಬಿದ್ದರು. "ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳುತ್ತೀಯ? ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಸಿದ್ದಪ್ಪ ಎದೆ ಒಡೆದುಕೊಂಡ ಅಂದ ಹಾಗೆ ಆಯ್ತು ನಿನ್ನ ಮಾತು" ಎಂದರು. ಮಂಕನಿಗೆ ಸಿಟ್ಟು ಬಂದು ಹೇಳಿದ, "ನಾನು ಹೇಳಿದ್ದರಲ್ಲಿ ತಪ್ಪೇನಿದೆ, ನಾವು ಏನು ಯೋಚನೆ ಮಾಡ್ತೀವೋ ಅದರ ಬಗ್ಗೆ ಎಚ್ಚರವಾಗಿರಬೇಕು ಅಂತ ಹೇಳಿದ್ದು. ಏಕೆಂದರೆ ಅವೇ ಮಾತುಗಳಾಗಿ ಹೊರಬರೋದು." "ಆಂ?" ಅಂತ ಎಲ್ಲರೂ ತಲೆ ಕೆರೆದುಕೊಂಡರು. 'ಬಾಯಿ ಬಿಟ್ಟರೆ ಬಣ್ಣಗೇಡು' ಅಂತ ಅವನ ಬಗ್ಗೆ ಆಡಿಕೊಳ್ತಾ ಇದ್ದವರು ಮಂಕ ಈರೀತಿ ಮಾತು ಎಲ್ಲಿ ಕಲಿತ ಅಂತ ಆಶ್ಚರ್ಯಪಟ್ಟರು. 
     "ಆಡಲು ಏನೋ ಇದೆ, ಆದರೆ ಆಡಲಾಗುವುದಿಲ್ಲ ಎಂಬಂತಹ ಜನರಿಂದಲೇ     ಈ ಪ್ರಪಂಚ ತುಂಬಿಹೋಗಿದೆ. ಬುದ್ಧಿವಂತರು ಏನೋ ಹೇಳುತ್ತಾರೆ, ಅವರಿಗೆ ಏನೋ ಹೇಳಲು ಇರುತ್ತದೆ. ದಡ್ಡರೂ ಏನೋ ಹೇಳಬೇಕು ಅಂತಾ ಹೇಳ್ತಾರೆ"-ಮೂಢ ಹೇಳಿದ ಈ ಮಾತು ಯಾರಿಗೂ ಅರ್ಥವಾಗಲಿಲ್ಲ. ಮರುಳ ಕೇಳೇಬಿಟ್ಟ, "ಹಂಗಂದ್ರೆ?" ಮೂಢ ಹೇಳಿದ, "ನಂಗೂ ಸರಿಯಾಗಿ ಗೊತ್ತಿಲ್ಲ, ನಮ್ಮ ಗುರುಗಳು ಮೊನ್ನೆ ಹೇಳಿದರು, ಅದನ್ನೇ ನಿಮಗೆ ಹೇಳಿದೆ."
    ಇಷ್ಟು ಹೊತ್ತು ಸುಮ್ಮನೇ ಇದ್ದ ಮಡ್ಡಿ ಇನ್ನೂ ಸುಮ್ಮನೆ ಇದ್ದರೆ ತನ್ನನ್ನು ದಡ್ಡ ಅನ್ನುತ್ತಾರೆ ಅಂದುಕೊಂಡು ಬಾಯಿಬಿಟ್ಟ, "ಎಲ್ಲರೂ ಯಾಕೆ ಚರ್ಚೆ ಮಾಡುತ್ತಾರೆ ಗೊತ್ತಾ, ದೊಡ್ಡ ಬಾಯಿ ಮಾಡಿ ಬೇರೆಯವರ ಬಾಯಿ ಮುಚ್ಚಿಸುತ್ತಾರೆ ಗೊತ್ತಾ? ತಾವೇ ಬುದ್ಧಿವಂತರು, ತಮಗೇ ಹೆಚ್ಚು ತಿಳಿದಿದೆ, ಉಳಿದವರಿಗಿಂತ ತಾವೇ ಒಳ್ಳೆಯವರು, ತಾವೇ ಹೆಚ್ಚು ಕಷ್ಟಪಟ್ಟವರು, ತಾವೇ ಹೆಚ್ಚು ಅಂತ ತೋರಿಸಿಕೊಳ್ಳೋಕೆ. ತಮ್ಮ ಮಾತು ಕೇಳಿದರೆ ಪ್ರಪಂಚ ಉದ್ಧಾರ ಆಗುತ್ತೆ ಅಂತ ಅವರು ಅಂದುಕೊಳ್ತಾರೆ." ಗಂಟಲು ದೊಡ್ಡದು ಮಾಡಿಕೊಂಡು ವಿಷಯಕ್ಕೆ ಸಂಬಂಧಿಸದಿದ್ದ ಮಾತನಾಡಿದ ಮಡ್ಡಿಯನ್ನು ಎಲ್ಲರೂ ಬಾಯಿಬಿಟ್ಟುಕೊಂಡು ನೋಡಿದರು. ಯಾರಿಂದಲೂ ಪ್ರತಿಕ್ರಿಯೆ ಬರದಿದ್ದರಿಂದ ಮಡ್ಡಿಯ ಮುಖ ದಪ್ಪಗಾಯಿತು. 
     "ಅಪ್ಪಂದಿರಾ, ಇನ್ನು ಬೋಂಡಾ ಇಲ್ಲ, ಮುಗೀತು. ಕಾಫಿ ಕುಡಿದು ಜಾಗ ಖಾಲಿ ಮಾಡಿ. ಅಪ್ಪಾ, ಮೂಢೋತ್ತಮ, ವಂದನಾರ್ಪಣೆ ಮಾಡಿ ಮುಗಿಸಿಬಿಡು" - ಮುಠ್ಠಾಳ ಆರ್ಡರ್ ಮಾಡಿದಾಗ, ಎಲ್ಲರಿಗೂ ಏನೋ ಆಡಬೇಕು ಅನ್ನಿಸಿದರೂ ಆಡದೆ ಸುಮ್ಮನಾದರು. ಮೂಢ ಎಲ್ಲರ ಮುಖವನ್ನೂ ನೋಡುತ್ತಾ ಹೇಳಿದ: "ಗೆಳೆಯರೆ, ಸಂಬಂಧಗಳು ಚೆನ್ನಾಗಿರಬೇಕು, ತಮಗೆ ಕೆಡುಕಾಗಬಾರದು ಅನ್ನುವ ಕಾರಣಕ್ಕೆ ಜನ ತಮ್ಮ ಮನಸ್ಸಿನಲ್ಲಿ ಇರುವುದೇ ಒಂದಾದರೂ ಹೊರಗೆ ಆಡುವುದೇ ಬೇರೆ ತೋರಿಕೆಯ ಮಾತುಗಳು. ಅವುಗಳು ಗಟ್ಟಿ ಮಾತುಗಳಲ್ಲವಾದ್ದರಿಂದ ಅಂತಹ ಮಾತುಗಳ ಪ್ರಭಾವ ಕಡಿಮೆ. ಅವು ತೋರಿಕೆ ಮಾತುಗಳು ಅಂತಾ ಗೊತ್ತಾದಾಗ ಅದನ್ನು ಆಡಿದವರ ಬೆಲೆ ಸಹ ಕಡಿಮೆ ಆಗುತ್ತೆ. ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳಿದ್ದರೆ ಒಳ್ಳೆಯ ಮಾತುಗಳು ಬರುತ್ತವೆ. ಕೆಟ್ಟ ವಿಚಾರಗಳಿದ್ದರೆ ಆಡಲಾಗದ ಮಾತುಗಳು ಹುಟ್ಟುತ್ತವೆ. ಅದು ಹೆಚ್ಚು ಕಾಟ ಕೊಡುವುದು ಆ ಮಾತುಗಳನ್ನು ಹುಟ್ಟಿಸಿದವರಿಗೇ. ಆದ್ದರಿಂದ ಒಳ್ಳೆಯ ವಿಚಾರ ಮನಸ್ಸಿನಲ್ಲಿ ಬರುವಂತೆ ಮಾಡು ಅಂತ ದೇವರಲ್ಲಿ ಕೇಳಿಕೊಳ್ಳೋಣ. ಸರ್ವಜ್ಞನ ವಚನ ಹೇಳಿ ಮಾತು ಮುಗಿಸುತ್ತೇನೆ.  'ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಆಡಿಯೂ ಮಾಡದವ ಅಧಮ ಸರ್ವಜ್ಞ'." ಮೂಢ ಮಾತು ಮುಗಿಸುತ್ತಿದ್ದಂತೆಯೇ "ಆಡುವುದಕ್ಕೆ ಆಗದೆ ಇರುವವನು?" ಎಂಬ ಮಾತು ಕೇಳಿಬಂತು. ಎಲ್ಲರೂ ತನ್ನನ್ನು ದುರುಗುಟ್ಟಿ ನೋಡಿದರೂ ನಸುನಗುತ್ತಾ ಇದ್ದ ಮುಠ್ಠಾಳನಿಗೆ ಗೊತ್ತಿತ್ತು, ಕಾಫಿ, ತಿಂಡಿ ಮುಲಾಜಿಗೆ ಯಾರೂ ಏನೂ ಆಡಲಾರರು ಅಂತ!
********************
-ಕ.ವೆಂ.ನಾಗರಾಜ್.

ಭಾನುವಾರ, ಜೂನ್ 3, 2012

ಶರಣೋ ಶರಣು


ನೋವನಿತ್ತ ದೇವನಿಗೆ ಶರಣೋ ಶರಣು |
ನಲಿವನಿತ್ತ ದೇವನಿಗೆ ಶರಣೋ ಶರಣು ||


ಬರಿಗೈಲಿ ಬಂದೆನೆಂದು ತೋರಿಹೆ ಶರಣು
ಬರಿಗೈಲಿ ಪೋಪೆನೆಂದು ಹೇಳಿಹೆ ಶರಣು |
ನನದೆಂಬ ಮೋಹಪಾಶ ಹರಿಯೋ ಶರಣು
ಅತ್ತಲಿತ್ತ ಸರಿಯದಂತೆ ನೋಡಿಕೊ ಶರಣು ||


ನಿಂದಕರ ವಂದಿಸಲು ಕಲಿಸಿಹೆ ಶರಣು
ಪೀಡಕರೇ ಗುರುವೆಂದು ಸಾರಿಹೆ ಶರಣು |
ಅನುಭವದ ಬುತ್ತಿ ಯಿತ್ತು ತಣಿಸಿಹೆ ಶರಣು
ಕರಪಿಡಿದು ನಡೆಸಿರುವೆ ಶರಣೋ ಶರಣು ||

ಒಡಲಾಳದ ರಜತಮವ ಕಳೆಯೋ ಶರಣು
ಒಳಗಣ್ಣಿನ ಬೆಳಕಿನಲಿ ನಡೆಸೋ ಶರಣು |
ಒಳದನಿಯು ಕೇಳುವಂತೆ ಮಾಡೋ ಶರಣು
ಒಳ ಹೊರಗು ಒಂದೆನಿಸೆ ಶರಣೋ ಶರಣು ||
***************
-.ಕ.ವೆಂ.ನಾಗರಾಜ್.