ಸರ್ಕಾರೀ ಸೇವಾ ನಿಯಮಗಳನ್ನು ಉಲ್ಲಂಘಿಸಿದ, ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಳ್ಳುವ, ಹಣ ದುರುಪಯೋಗ ಮಾಡಿಕೊಳ್ಳುವ, ಮುಂತಾದ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಗಳ ಅಗತ್ಯ ಬೀಳುತ್ತದೆ. ಇಂತಹ ಪ್ರಕರಣಗಳಲ್ಲಿ ನೌಕರರಿಗೆ ಅವರ ಮೇಲಾಧಿಕಾರಿಯಿಂದ ಕಾರಣ ಕೇಳಿ ನೋಟೀಸು ಕೊಡಲಾಗುತ್ತದೆ. ಆ ನೋಟೀಸಿಗೆ ನೌಕರ ಕೊಡುವ ಉತ್ತರ ಸಮರ್ಪಕವಿರದಿದ್ದಲ್ಲಿ/ ಉತ್ತರವನ್ನೇ ಕೊಡದಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಸ್ತು ಪ್ರಾಧಿಕಾರಕ್ಕೆ ಕಛೇರಿಯ ಅಧಿಕಾರಿ ಪೂರಕ ವಿವರಗಳು, ದಾಖಲಾತಿಗಳೊಂದಿಗೆ ವರದಿ ಕೊಡಬೇಕು. ಶಿಸ್ತು ಪ್ರಾಧಿಕಾರಿ ಅದನ್ನು ಪರಿಶೀಲಿಸಿ ಕ್ರಮ ಅಗತ್ಯವೆನಿಸಿದರೆ ಆಪಾದನೆಗಳು, ಆಪಾದನೆಗಳ ಪೂರ್ಣ ವಿವರಗಳು, ಸಮರ್ಥಿಸುವ ದಾಖಲೆಗಳ ಪಟ್ಟಿ. ಸಾಕ್ಷಿ ಹೇಳುವವರ ಪಟ್ಟಿಗಳೊಂದಿಗೆ ನೌಕರನಿಗೆ ಶಿಸ್ತು ಕ್ರಮ ಏಕೆ ತೆಗೆದುಕೊಳ್ಳಬಾರದೆಂದು ಕಾರಣ ಕೇಳಿ ನೋಟೀಸು ಕೊಡಬೇಕಾಗುತ್ತದೆ. ನೌಕರ ಸಲ್ಲಿಸುವ ಉತ್ತರ ಪರಿಶೀಲಿಸಿ ಉತ್ತರ ಸಮರ್ಪಕವಿರದಿದ್ದಲ್ಲಿ ಇಲಾಖಾ ವಿಚಾರಣೆಗೆ ಆದೇಶಿಸಿ ಒಬ್ಬರು ವಿಚಾರಣಾಧಿಕಾರಿಯನ್ನು ಮತ್ತು ಪ್ರಕರಣವನ್ನು ಸರ್ಕಾರದ ಪರವಾಗಿ ಮಂಡಿಸಲು ಒಬ್ಬ ಮಂಡನಾಧಿಕಾರಿಯನ್ನು ನೇಮಿಸುತ್ತಾರೆ. ವಿಚಾರಣಾಧಿಕಾರಿ ಆರೋಪಗಳ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿ ಆರೋಪಗಳು ರುಜುವಾತಾದವೇ, ಇಲ್ಲವೇ ಎಂಬ ಬಗ್ಗೆ ವರದಿಯನ್ನು ಶಿಸ್ತು ಪ್ರಾಧಿಕಾರಕ್ಕೆ ಸಲ್ಲಿಸುತ್ತಾರೆ. ಆರೋಪಗಳು ರುಜುವಾತಾಗಿದ್ದರೆ, ವಿಚಾರಣಾಧಿಕಾರಿಯ ಆದೇಶದ ಪ್ರತಿಯೊಂದಿಗೆ ನೌಕರನಿಗೆ ಸೂಕ್ತ ಶಿಕ್ಷೆ ನೀಡಬಾರದೇಕೆಂಬ ಬಗ್ಗೆ ಪುನಃ ನೋಟೀಸು ನೀಡಿ, ಆತನಿಂದ ಬರುವ ಉತ್ತರ ಗಮನಿಸಿ ಶಿಕ್ಷೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲು ದೀರ್ಘ ಅವಧಿ ಬೇಕೆಂಬುದು ಯಾರಿಗೂ ಅರ್ಥವಾಗುತ್ತದೆ. ಆರೋಪಗಳು ಗುರುತರವಾಗಿದ್ದರೆ, ನೌಕರನನ್ನು ಅಮಾನತ್ತಿನಲ್ಲಿರಿಸಲಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕೆಲವು ತಿಂಗಳ ನಂತರ ಅವನನ್ನು ಪುನಃ ಸೇವೆಗೆ ತೆಗೆದುಕೊಂಡು ಬೇರೆ ಕಛೇರಿಗೆ ನಿಯೋಜಿಸುತ್ತಾರೆ. ಎಚ್ಚರಿಕೆ ನೀಡುವುದು, ವಾರ್ಷಿಕ ವೇತನ ಬಡ್ತಿಗಳನ್ನು ತಡೆ ಹಿಡಿಯುವುದು, ಹಿಂಬಡ್ತಿ ನೀಡುವುದು, ಇತ್ಯಾದಿಗಳು ಸೇರಿದಂತೆ ಸೇವೆಯಿಂದ ವಜಾಗೊಳಿಸುವ ಶಿಕ್ಷೆ ನೀಡಲು ಶಿಸ್ತು ಪ್ರಾಧಿಕಾರಿಗೆ ಅಧಿಕಾರವಿರುತ್ತದೆ.
ಸರ್ಕಾರದ ಇಲಾಖೆಗಳಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು, ಸುಗಮ, ಜನಪರ ಆಡಳಿತ ನೀಡಲು ಇಲಾಖಾ ವಿಚಾರಣೆಗಳು ಪ್ರಮುಖ ಪಾತ್ರ ವಹಿಸಬಲ್ಲವು. ದೌರ್ಭಾಗ್ಯವಶಾತ್ ಭ್ರಷ್ಟಾಚಾರದ ಕರಿನೆರಳು ಬಿದ್ದು ಇವು ಕೇವಲ ಅರ್ಥಹೀನ ಪ್ರಕ್ರಿಯೆಗಳಾಗಿಬಿಟ್ಟಿರುವುದು ದುರ್ದೈವ. ಎಲ್ಲಾ ಇಲಾಖಾ ವಿಚಾರಣೆಗಳೂ ಹೀಗಾಗಿವೆ ಎಂದು ಹೇಳಲಾಗದಿದ್ದರೂ ನೈಜ ಮತ್ತು ಅರ್ಥಪೂರ್ಣ ವಿಚಾರಣೆಗಳು ಬೆರಳೆಣಿಕೆಯಷ್ಟು ಮಾತ್ರ ಎನ್ನಬಹುದು. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದಾಗ ನನ್ನ ಸೇವಾ ಅನುಭವದಿಂದ ತಿಳಿದ ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳುವೆ.
ಹುಟ್ಟುವ ಮೊದಲೇ ಸಾಯುವ ವಿಚಾರಣೆಗಳು:
ಸಣ್ಣ ಪುಟ್ಟ ತಪ್ಪುಗಳನ್ನು ಮಾನವೀಯತೆಯ ನೆಲೆಯಲ್ಲಿ ಕ್ಷಮಿಸುವ ಸಂಗತಿಗಳನ್ನು ಈ ವ್ಯಾಪ್ತಿಯಲ್ಲಿ ನಾನು ಸೇರಿಸಬಯಸುವುದಿಲ್ಲ. ಅಪರೂಪಕ್ಕೆ ಅನಿವಾರ್ಯವಾಗಿ ತಡವಾಗಿ ಬರುವ ನೌಕರರು, ಉದ್ದೇಶವಿಲ್ಲದೆ, ಗೊತ್ತಿಲ್ಲದೆ ಮಾಡುವ ಸಣ್ಣ ತಪ್ಪುಗಳು, ಮುಂತಾದುವನ್ನು ಎಚ್ಚರಿಕೆ ನೀಡಿ ಮುಂದೆ ಈ ರೀತಿ ಮಾಡದಿರಲು ತಿಳುವಳಿಕೆ ನೀಡಿ ಮಂಗಳ ಹಾಡಲಾಗುವ ಪ್ರಕರಣಗಳನ್ನೂ ಗಣಿಸುವ ಅಗತ್ಯವಿಲ್ಲ. ಅದರೆ ಶಿಸ್ತು ಕ್ರಮ ಅಗತ್ಯವಿದ್ದೂ ಯಾವ ಕ್ರಮವನ್ನೂ ಅನುಸರಿಸದೆ ಮುಕ್ತಾಯ ಮಾಡುವ ಸಂಗತಿಗಳೇ ಹೆಚ್ಚು ಎಂಬುದು ಸಾಮಾನ್ಯ ಅನುಭವ. ೧೫ ದಿನಗಳಿಗಿಂತ ಹೆಚ್ಚು ಕಾಲ ಒಬ್ಬ ನೌಕರ ಅನಧಿಕೃತ ಗೈರುಹಾಜರಾದನೆಂದರೆ ಅದು ಗುರುತರ ಅಪರಾಧವೇ. ಸಾಬೀತಾದರೆ ನೌಕರಿಯಿಂದ ವಜಾ ಮಾಡಬಹುದಾಗಿರುತ್ತದೆ. ಕೆಲವರು ತಿಂಗಳುಗಟ್ಟಲೆ ಗೈರುಹಾಜರಾದ ಪ್ರಕರಣಗಳಲ್ಲೂ ಕಛೇರಿಯ ಮುಖ್ಯಸ್ಥರ ಅದಕ್ಷತೆಯ ಕಾರಣದಿಂದ ಯಾವುದೇ ಕ್ರಮ ಆಗದೆ, ಅವರುಗಳು ಸಂಬಳವನ್ನೂ ಪಡೆದ ನಿದರ್ಶನಗಳಿವೆ. ಇಂತಹ ಅದಕ್ಷತೆಯಿಂದ ವಯೋನಿವೃತ್ತಿ ಅವಧಿ ನಂತರವೂ ಸೇವೆಯಲ್ಲಿ ಮುಂದುವರೆದು ಸಂಬಳ ಪಡೆದವರೂ ಇದ್ದಾರೆ. ಇಂತಹ ಪ್ರಕರಣಗಳಿಗೆ ಕಾರಣಗಳೆಂದರೆ:
೧. ಕಛೇರಿ ಮುಖ್ಯಸ್ಥರ ಅಸಮರ್ಪಕ ಕಾರ್ಯವೈಖರಿ, ೨. ಭ್ರಷ್ಟಾಚಾರ - ಸಂಬಂಧಿಸಿದವರಿಂದ ಲಂಚ ಪಡೆದು ಪ್ರಕರಣ ಮುಚ್ಚಿಹಾಕುವುದು, ಈ ತಪ್ಪನ್ನೇ ಬಂಡವಾಳ ಮಾಡಿಕೊಂಡು ಆ ನೌಕರನನ್ನು ಆಗಾಗ್ಗೆ ಶೋಷಿಸುವುದು, ೩. ಶಿಸ್ತು ಪ್ರಾಧಿಕಾರದ ಅಧಿಕಾರಿಗಳ ಹಸ್ತಕ್ಷೇಪ (ಇಲ್ಲೂ ಭ್ರಷ್ಟಾಚಾರವೇ ಪ್ರಧಾನ ಅಂಶ), ೪. ರಾಜಕಾರಣಿಗಳ ಹಸ್ತಕ್ಷೇಪ.
ವಿಫಲಗೊಳ್ಳುವ ವಿಚಾರಣೆಗಳು:
ದಕ್ಷ ಅಧಿಕಾರಿಗಳಿದ್ದು ಶಿಸ್ತುಕ್ರಮ ಕೈಗೊಂಡ ಪ್ರಕರಣಗಳಲ್ಲೂ ಹೆಚ್ಚಿನ ವಿಚಾರಣೆಗಳು ವಿಫಲವಾಗಿ ಆರೋಪಿಗಳು ಪಾರಾಗುತ್ತಾರೆ ಎಂಬುದು ವಿಡಂಬನೆಯೇ ಸರಿ. ಇದಕ್ಕೆ ಮೂಲಕಾರಣಗಳನ್ನು ವಿಶ್ಲೇಷಿಸಿದರೆ ಕಾಣುವ ಸಂಗತಿಗಳು ಇವು: ೧. ದಕ್ಷ ವಿಚಾರಣಾಧಿಕಾರಿಗಳು ಮತ್ತು ಮಂಡನಾಧಿಕಾರಿಗಳನ್ನು ನೇಮಿಸದಿರುವುದು, ೨. ಆರೋಪ ಪಟ್ಟಿ ತಯಾರಿಸುವಲ್ಲಿ ಲೋಪ, ೩. ವಿಚಾರಣಾ ನಿಯಮಗಳು, ಕಾನೂನುಗಳ ತಿಳುವಳಿಕೆಯಲ್ಲಿನ ಕೊರತೆ, ೩. ಭ್ರಷ್ಟತೆ, ೪. ಇತರ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹಸ್ತಕ್ಷೇಪ, ೪. ವಕೀಲರುಗಳು ಸರ್ಕಾರದ ಪರವಾಗಿ ಆಗಲೀ, ಆರೋಪಿ ನೌಕರರ ಪರವಾಗಿ ಆಗಲೀ ಹಾಜರಾಗಲು ಅವಕಾಶವಿಲ್ಲದಿರುವುದು.
ಒಂದು ಶಿಸ್ತು ಕ್ರಮ ಯಶಸ್ವಿಯಾಗಿ ಜರುಗಬೇಕೆಂದರೆ ಪ್ರಾಥಮಿಕವಾಗಿ ಆರೋಪಿಯ ವಿರುದ್ಧದ ಆರೋಪ ಪಟ್ಟಿಯನ್ನು ಸರಿಯಾಗಿ ಸಿದ್ಧಪಡಿಸುವುದಲ್ಲದೆ, ಆರೋಪಗಳನ್ನು ಸಮರ್ಥಿಸುವ ಪೂರಕ ದಾಖಲೆಗಳು ಮತ್ತು ಸಾಕ್ಷಿದಾರರ ವಿವರಗಳನ್ನು ವಿಚಾರಣಾಧಿಕಾರಿಯವರಿಗೆ ಒದಗಿಸಬೇಕು. ಆದರೆ, ಅಸಮರ್ಪಕ ಕಾರ್ಯವೈಖರಿಯಿಂದಾಗಿ ಮತ್ತು ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಆರೋಪ ಪಟ್ಟಿ ಸಿದ್ಧಪಡಿಸುವಾಗಲೇ ಅದರಲ್ಲಿ ಹುರುಳಿಲ್ಲದಂತೆ ಆಗಿರುತ್ತದೆ. ಅಗತ್ಯದ ದಾಖಲೆಗಳನ್ನು ಉಲ್ಲೇಖಿಸಿಯೇ ಇರುವುದಿಲ್ಲ. ಸಂಬಂಧಪಟ್ಟ ಸಾಕ್ಷಿಗಳನ್ನು ಕೈಬಿಟ್ಟು, ಸಂಬಂಧಪಡದವರನ್ನು ಸಾಕ್ಷಿಗಳಾಗಿ ಹೆಸರಿಸಿರುವ ಪ್ರಕರಣಗಳು ಇವೆ.
ಒಬ್ಬ ಅಸಮರ್ಪಕ ಮತ್ತು ಇಲಾಖಾ ವಿಚಾರಣೆ ನಡೆಸುವ ರೀತಿ ಗೊತ್ತಿಲ್ಲದ ಅಧಿಕಾರಿಯನ್ನು ವಿಚಾರಣಾಧಿಕಾರಿಯಾಗಿ ನೇಮಿಸಿದರೆ ಎಷ್ಟರಮಟ್ಟಿಗೆ ವಿಚಾರಣೆಯಲ್ಲಿ ಸತ್ಯಾಸತ್ಯತೆ ತಿಳಿದೀತು? ಅದೇ ರೀತಿ ಇಲಾಖಾ ವಿಚಾರಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಬೇಕಾದ ಮಂಡನಾಧಿಕಾರಿಗಳು ಸರಿಯಾಗಿ ತಮ್ಮ ಕಾರ್ಯ ನಿರ್ವಹಿಸದ ಕಾರಣಕ್ಕಾಗಿಯೇ ಬಹುತೇಕ ವಿಚಾರಣೆಗಳು ವಿಫಲಗೊಳ್ಳುತ್ತವೆ ಎಂಬುದು ನನ್ನ ಅನುಭವದಿಂದ ಕಂಡಿರುವೆ. ಮಂಡನಾಧಿಕಾರಿ ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷಿಗಳ ವಿಚಾರಣೆ ಸರಿಯಾಗಿ ಮಾಡಬೇಕು, ಪೂರಕ ದಾಖಲೆಗಳನ್ನು ವಿಚಾರಣಾಧಿಕಾರಿಗಳ ಮುಂದೆ ಇಡಬೇಕು, ಅಗತ್ಯವಿದ್ದರೆ ಆರೋಪ ಪಟ್ಟಿಯಲ್ಲಿ ಸೇರಿರದ, ಆದರೆ ವಿಚಾರಣೆಗೆ ಅಗತ್ಯವೆನಿಸಿದ ದಾಖಲೆಗಳನ್ನು ಹಾಜರುಪಡಿಸುವ, ಹೊಸ ಸಾಕ್ಷಿಗಳನ್ನು ಕರೆಸುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಈ ರೀತಿ ಆಗದ ಕಾರಣದಿಂದ ಸ್ವತಃ ಜಿಲ್ಲಾಧಿಕಾರಿಯವರೇ ಖುದ್ದು ಆಸಕ್ತಿ ವಹಿಸಿದ ಪ್ರಕರಣಗಳಲ್ಲೂ ಗುರುತರ ಆರೋಪಗಳಿಂದ ಆರೋಪಿಗಳು ಪಾರಾಗಿದ್ದ ಬಗ್ಗೆ ಹಿಂದಿನ ಲೇಖನಗಳಲ್ಲಿ ಪ್ರಸ್ತಾಪಿಸಿರುವೆ.
ನಾಟಕವಾಗುವ ವಿಚಾರಣೆ
ಇಲಾಖಾ ವಿಚಾರಣೆ ಒಂದು ನಾಟಕವೆನ್ನುವಂತೆ ಆಗಿರುವುದಕ್ಕೆ ಒಂದು ಪ್ರಸಂಗವನ್ನು ಉಲ್ಲೇಖಿಸುವೆ. ಅದಕ್ಕೆ ಮುಂಚೆ ಒಂದು ಸ್ವಾರಸ್ಯಕರ ವಿಷಯ ಹೇಳುವೆ. ನಾನು ರಾಜಕೀಯವಾಗಿ ಒಂದು ಶಕ್ತಿಕೇಂದ್ರವಾಗಿರುವ ತಾಲ್ಲೂಕಿನಲ್ಲಿ ತಹಸೀಲ್ದಾರನಾಗಿದ್ದಾಗ ಒಂದು ಮಧ್ಯಾಹ್ನ ಒಂದು ಗ್ರಾಮದ ಸುಮಾರು ೨೦-೨೫ ಜನರು ನನಗೆ ಜೈಕಾರ ಘೋಷಣೆ ಮಾಡುತ್ತಾ ಬಂದಿದ್ದವರು ನನ್ನ ಛೇಂಬರಿಗೆ ಬಂದು ಮಾಲಾರ್ಪಣೆ ಮಾಡಿ ತಮ್ಮ ಗ್ರಾಮದ ಶಾಲೆಯ ಪಕ್ಕದ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಿದ್ದಕ್ಕೆ ನನ್ನನ್ನು ಅಭಿನಂದಿಸಿಹೋದರು. ನನಗೆ ಆಶ್ಚರ್ಯವಾಗಿತ್ತು, ಏಕೆಂದರೆ ಅಂತಹ ಯಾವುದೇ ಕ್ರಮ ನಾನು ತೆಗೆದುಕೊಂಡಿರಲಿಲ್ಲ. ಆ ಜಮೀನಿನ ವಿಷಯ ನ್ಯಾಯಾಲಯದಲ್ಲಿದ್ದು ಯಥಾಸ್ಥಿತಿ ಕಾಪಾಡಲು ನ್ಯಾಯಾಲಯದ ಆದೇಶವಿತ್ತು. ತಕ್ಷಣ ಗ್ರಾಮಕ್ಕೆ ಹೊರಟು ರೆವಿನ್ಯೂ ಇನ್ಸ್ ಪೆಕ್ಟರರಿಗೆ ಕರೆಕಳುಹಿಸಿದರೆ ಆತ ಕೈಗೆ ಸಿಗಲಿಲ್ಲ. ಜಮೀನಿನ ಹತ್ತಿರ ಹೋಗಿ ನೋಡಿದರೆ ಆ ಜಮೀನಿನ ಸುತ್ತ ತಂತಿ ಬೇಲಿ ಹಾಕಿ ಒಂದು ಫಲಕ ನೇತುಹಾಕಿದ್ದರು. 'ಒತ್ತುವರಿ ತೆರವುಗಳಿಸಿ ಈ ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗಿದೆ. ಅತಿಕ್ರಮ ಪ್ರವೇಶ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು - ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿ' ಎಂದು ಆ ಫಲಕದಲ್ಲಿತ್ತು. ಆ ಫಲಕವನ್ನು ತೆಗೆಸಿ, ಆರೀತಿ ಯಾರು ಮಾಡಿದವರು ಎಂದು ವಿಚಾರಿಸಿದರೆ ಗ್ರಾಮದಲ್ಲಿ ಯಾರೂ ಸರಿಯಾಗಿ ಮಾಹಿತಿ ಕೊಡಲಿಲ್ಲ. ಜೈಕಾರ ಹಾಕಿಕೊಂಡು ಬಂದಿದ್ದವರು ಅಲ್ಲಿರಲೇ ಇಲ್ಲ. ವಾಪಸು ಬಂದ ಮೇಲೆ ಸೂಕ್ಷ್ಮವಾಗಿ ಪಡೆದ ಮಾಹಿತಿಯ ಪ್ರಕಾರ ಸ್ಥಳೀಯ ರಾಜಕಾರಣಿಗಳೊಂದಿಗೆ ಷಾಮೀಲಾದ ರೆವಿನ್ಯೂ ಇನ್ಸ್ ಪೆಕ್ಟರನ ಕುಮ್ಮಕ್ಕಿನಿಂದಲೇ ಇದು ನಡೆದಿದ್ದುದು ಗೊತ್ತಾಯಿತು. ಅಂದು ರಾತ್ರಿಯೇ ರೆವಿನ್ಯೂ ಇನ್ಸ್ ಪೆಕ್ಟರನನ್ನು ಕರೆಸಿ ವಿಚಾರಿಸಿದರೆ ಆತ ತನಗೇನೂ ಗೊತ್ತಿಲ್ಲವೆಂದೇ ವಾದಿಸಿದ್ದ. ಅವನ ಕಾರ್ಯವ್ಯಾಪ್ತಿಯ ಗ್ರಾಮದಲ್ಲಿ ನ್ಯಾಯಾಲಯದ ಆದೇಶದ ಉಲ್ಲಂಘನೆ ಪ್ರಕರಣ ನಡೆಯಲು ಕಾರಣರಾದವರು ಯಾರು, ಆ ಫಲಕವನ್ನು ಹಾಕಿಸಿದವರು ಯಾರು ಈ ಕುರಿತು ವಿಚಾರಿಸಿ ಒಂದು ದಿನದ ಒಳಗೆ ವರದಿ ಸಲ್ಲಿಸಲು ತಿಳಿಸಿದೆ ಮತ್ತು ಇಂತಹ ಘಟನೆ ನಡೆಯಲು ಅವಕಾಶ ಕೊಟ್ಟಿದ್ದಕ್ಕೆ ಆತನ ಮತ್ತು ಸಂಬಂಧಿಸಿದ ಗ್ರಾಮಲೆಕ್ಕಿಗರ ಮೇಲೆ ಕ್ರಮ ತೆಗೆದುಕೊಳ್ಳಬಾರದೇಕೆಂದು ವಿವರಣೆ ಕೇಳಿ ನೋಟೀಸನ್ನೂ ನೀಡಿದೆ. ಮರುದಿನ ಫಲಕದ ಫೋಟೋ ಸಹಿತ ನ್ಯಾಯಾಲಯಕ್ಕೆ ದೂರು ಅರ್ಜಿ ಸಹ ಸಲ್ಲಿತವಾಗಿ ನನಗೆ ನ್ಯಾಯಾಲಯದಿಂದ ವಿವರಣೆ ಕೇಳಿ ಸಮನ್ಸ್ ಸಹ ಬಂದಿತ್ತು. ನ್ಯಾಯಾಲಯಕ್ಕೆ ವಸ್ತುಸ್ಥಿತಿ ವರದಿ ನೀಡಿದೆ.
ರೆವಿನ್ಯೂ ಇನ್ಸ್ ಪೆಕ್ಟರ್ ಕಿತಾಪತಿ ಸ್ವಭಾವದವನಾಗಿದ್ದು ನಾನು ಮೇಲಾಧಿಕಾರಿಯಾಗಿದ್ದುದು ಅವನಿಗೆ ಕಷ್ಟವಾಗಿತ್ತು, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಅಡ್ಡಿಯಾಗಿತ್ತು. ರಾಜಕೀಯ ಶಕ್ತಿ ಕೇಂದ್ರವಾಗಿದ್ದ ಆ ತಾಲ್ಲೂಕಿನ ರಾಜಕೀಯ ಪುಡಾರಿಗಳೊಂದಿಗೆ ಸಂಪರ್ಕವಿದ್ದ ಆತ ಅವರುಗಳ ಮೂಲಕ ಮತ್ತು ಜನರನ್ನು ಗುಂಪು ಕೂಡಿಸಿ ದೂರುಗಳನ್ನು ಹೇಳಿಸುವ ಮೂಲಕ ನನ್ನನ್ನು ಅಲ್ಲಿಂದ ಎತ್ತಂಗಡಿ ಮಾಡಲು ಸತತ ಪ್ರಯತ್ನ ನಡೆಸಿದ್ದ. ಅವು ಫಲಪ್ರದವಾಗಿರಲಿಲ್ಲ. ಹೀಗಾಗಿ ಅವನು ನನಗೆ ಕೆಟ್ಟ ಹೆಸರು ಬರುವಂತಹ ಪ್ರಕರಣಗಳನ್ನು ಸೃಷ್ಟಿಸುತ್ತಿದ್ದ. ಅವನ ಇಂತಹ ಚಟುವಟಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ನನಗೆ ಪೂರಕವಾದ ಸಾಕ್ಷ್ಯ/ದಾಖಲೆ ಸಿಗುತ್ತಿರಲಿಲ್ಲ. ಹೀಗಿರುವಾಗ ಒಮ್ಮೆ ನನಗೆ ಮಾಹಿತಿ ಹಕ್ಕು ಆಯೋಗದಿಂದ ಒಂದು ಪ್ರಕರಣದಲ್ಲಿ ಅರ್ಜಿದಾರರಿಗೆ ಸೂಕ್ತ ಮಾಹಿತಿಯನ್ನು ಸಕಾಲದಲ್ಲಿ ಒದಗಿಸದಿದ್ದುದಕ್ಕೆ ನನಗೆ ದಂಡ ವಿಧಿಸಬಾರದೇಕೆಂದು ಕೇಳಿ ನೋಟೀಸು ಬಂದಿತು. ನನ್ನ ಹಿಂದಿನ ತಹಸೀಲ್ದಾರರ ಕಾಲದ ಆ ಪ್ರಕರಣದ ವಿಷಯ ನನ್ನ ಗಮನಕ್ಕೇ ಬಂದಿರಲಿಲ್ಲ. ಕಡತಗಳನ್ನು ತೆಗೆಸಿ ನೋಡಲಾಗಿ ಸಂಬಂಧಿಸಿದ ಕಡತ ಕಾಣೆಯಾಗಿದ್ದು, ರೆವಿನ್ಯೂ ಇನ್ಸ್ ಪೆಕ್ಟರ್ ಹಿಂದೆ ಕಛೇರಿಯ ಗುಮಾಸ್ತನಾಗಿದ್ದ ಸಂದರ್ಭದಲ್ಲಿ ಸಂಬಂಧಿಸಿದ ಕಡತ ಕಣ್ಮರೆ ಮಾಡಿದ್ದು, ತನ್ನ ನಂತರದ ಗುಮಾಸ್ತರಿಗೆ ದುರುದ್ದೇಶಪೂರ್ವಕವಾಗಿ ಛಾರ್ಜು ಕೊಟ್ಟಿರದಿದ್ದುದು ಗೊತ್ತಾಯಿತು. ಆ ವ್ಯಕ್ತಿಗೂ ಇವನಿಗೂ ಇದ್ದ ವೈಯಕ್ತಿಕ ದ್ವೇಷದಿಂದ ಹೀಗೆ ಮಾಡಿದ್ದ. ಆಗಲೇ ಹಿಂದಿನ ತಹಸೀಲ್ದಾರರು ಅವನಿಗೆ ನೋಟೀಸನ್ನೂ ಕೊಟ್ಟಿದ್ದರು. ರಾಜಕೀಯ ಪ್ರಭಾವದಿಂದ ವಿಷಯವನ್ನು ಮುಚ್ಚಿಹಾಕಲಾಗಿತ್ತು. ಇದನ್ನು ಬಳಸಿ ಅವನಿಗೆ ಪಾಠ ಕಲಿಸಲು ನಿರ್ಧರಿಸಿದ ನಾನು ಪುನಃ ಅವನಿಗೆ ನೋಟೀಸು ನೀಡಿ ೭ ದಿನಗಳ ಕಾಲಾವಕಾಶದಲ್ಲಿ ಕಡತ ಹಾಜರುಪಡಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸೂಚನೆ ಕೊಟ್ಟೆ. ಅವನಿಂದ ಉತ್ತರ ಬರದಿದ್ದರಿಂದ ಜಿಲ್ಲಾಧಿಕಾರಿಯವರಿಗೆ ಪೂರಕ ದಾಖಲೆಗಳೊಂದಿಗೆ ವರದಿ ನೀಡಿದೆ. ಈ ಹಂತದಲ್ಲಿ ಕಳೆದ ೩-೪ ವರ್ಷಗಳಿಂದ ಸಿಕ್ಕದಿದ್ದ ಕಡತ ರೆಕಾರ್ಡು ಕೋಣೆಯಲ್ಲಿ ಸಿಕ್ಕಿತೆಂಬಂತೆ ಮಾಡಿದರು. ಮಾಹಿತಿ ಕೇಳಿದವರಿಗೆ ಪೂರ್ಣ ಮಾಹಿತಿ ನೀಡಿ ಮಾಹಿತಿ ಹಕ್ಕು ಆಯೋಗಕ್ಕೆ ವಿಳಂಬಕ್ಕೆ ಮನ್ನಿಸುವಂತೆ ಕೋರಿ ವಿಳಂಬಕ್ಕೆ ಕಾರಣಗಳನ್ನು ವಿವರಿಸಿದೆ. ನನ್ನ ಒತ್ತಾಯದಿಂದಾಗಿ ಕಡತ ಕಣ್ಮರೆ ಮತ್ತು ಮಾಹಿತಿ ಹಕ್ಕು ಆಯೋಗದಿಂದ ನೋಟೀಸು ಬರಲು ಕಾರಣನಾದ ಆರೋಪಗಳ ಕುರಿತು ಇಲಾಖಾ ವಿಚಾರಣೆಗೆ ಆದೇಶವಾಗಿ, ಪಕ್ಕದ ತಾಲ್ಲೂಕಿನ ತಹಸೀಲ್ದಾರರನ್ನು ವಿಚಾರಣಾಧಿಕಾರಿಯಾಗಿ ಮತ್ತು ಅದೇ ಕಛೇರಿಯ ಶಿರಸ್ತೇದಾರರನ್ನು ಮಂಡನಾಧಿಕಾರಿಯಾಗಿ ನೇಮಿಸಿದ್ದರು. ಅಪರ ಜಿಲ್ಲಾಧಿಕಾರಿಯವರು 'ಹೋಗಲಿ, ಬಿಟ್ಟುಬಿಡು' ಎಂದು ನನಗೆ ಹೇಳಿದ್ದಾಗಲೇ ವಿಚಾರಣೆ ಹೇಗಾಗಬಹುದೆಂದು ನನಗೆ ಗೊತ್ತಾಗಿತ್ತು. ವಿಚಾರಣಾಧಿಕಾರಿಯವರು ಈಚೆಗೆ ತಹಸೀಲ್ದಾರರಾಗಿ ಬಡ್ತಿ ಹೊಂದಿದವರಾಗಿದ್ದು ಆರೋಪಿ ನೌಕರರ ಸ್ನೇಹಿತರಾಗಿದ್ದರು. ಇನ್ನು ಮಂಡನಾಧಿಕಾರಿಯೂ ಆತನಿಗೆ ಪರಮಾಪ್ತ ಸ್ನೇಹಿತನಾಗಿದ್ದ. ಆ ಮಂಡನಾಧಿಕಾರಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದವನಾಗಿದ್ದು, ಆ ಕುರಿತು ವಿಚಾರಣೆ ಇನ್ನೂ ನಡೆಯುತ್ತಿತ್ತು. ಆ ಸಮಯದಲ್ಲಿ ನಾನು ಸೇವೆಯಿಂದ ಸ್ವ ಇಚ್ಛಾ ನಿವೃತ್ತಿ ಪಡೆದೆ. ನಿವೃತ್ತನಾಗಿದ್ದರೂ, ವಿಚಾರಣೆ ಸಮಯದಲ್ಲಿ ಹಾಜರಾಗಿ ಸಾಕ್ಷ್ಯ ಹೇಳಿದೆ. ಮಂಡನಾಧಿಕಾರಿ ಪೂರಕ ದಾಖಲೆಗಳನ್ನು ವಿಚಾರಣೆ ಕಾಲದಲ್ಲಿ ಹಾಜರು ಪಡಿಸಿ ಗುರುತು ಮಾಡಿಸಲಿಲ್ಲ. ಅಲ್ಲೂ 'ಮ್ಯಾಚ್ ಫಿಕ್ಸ್' ಆಗಿತ್ತು. ಸಹಜವಾಗಿ ಆರೋಪಗಳು ಸಾಬೀತಾಗಲಿಲ್ಲವೆಂದು ವಿಚಾರಣಾಧಿಕಾರಿ ವರದಿ ಕೊಟ್ಟರು. ಆ ರೆವಿನ್ಯೂ ಇನ್ಸ್ ಪೆಕ್ಟರ್ ಶಿರಸ್ತೇದಾರನಾಗಿ ಬಡ್ತಿ ಹೊಂದಿದ.
ಏನು ಮಾಡಬಹುದು?
೧. ಇಲಾಖಾ ವಿಚಾರಣೆಗಳನ್ನು ನಡೆಸುವ ಸಲುವಾಗಿಯೇ ಪ್ರತ್ಯೇಕ ವಿಭಾಗ ತೆರೆದು, ಅಲ್ಲಿ ಸೇವಾ ನಿಯಮಗಳು, ಕಾಯದೆಗಳ ಅರಿವು ಇರುವವರು ಮಾತ್ರ ಇರಬೇಕು. ನಿಷ್ಪಕ್ಷಪಾತಿಗಳು ಮತ್ತು ಪ್ರಾಮಾಣಿಕರೆಂದು ಗುರುತಿಸಲ್ಪಟ್ಟವರನ್ನು ಅಲ್ಲಿ ನೇಮಕವಾಗುವಂತೆ ನೋಡಿಕೊಂಡರೆ ಉತ್ತಮ.
೨. ಆರೋಪ ಪಟ್ಟಿಗಳನ್ನು ಲೋಪಗಳಿಲ್ಲದಂತೆ ಸಿದ್ಧಪಡಿಸಬೇಕು. ಪೂರಕ ದಾಖಲೆ ಮತ್ತು ಸಾಕ್ಷ್ಯಗಳ ವಿವರವಿರುವಂತೆ ನೋಡಿಕೊಳ್ಳಬೇಕು. ನ್ಯೂನತೆಗಳಿಗೆ ಸಂಬಂಧಿಸಿದ ಕಛೇರಿ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು.
೩. ರಾಜಕೀಯ ಮತ್ತು ಇತರರ ಹಸ್ತಕ್ಷೇಪಗಳು ಶಿಕ್ಷಾರ್ಹ ಅಪರಾಧಗಳಾಗಬೇಕು.
೪. ಸ್ವತಃ ಇಲಾಖಾ ವಿಚಾರಣೆಗಳನ್ನಾಗಲೀ, ಇನ್ನಿತರ ವಿಚಾರಣೆಗಳನ್ನಾಗಲೀ ಎದುರಿಸುತ್ತಿರುವವರನ್ನು ವಿಚಾರಣಾಧಿಕಾರಿ ಅಥವ ಮಂಡನಾಧಿಕಾರಿಯಾಗಿ ನೇಮಿಸಬಾರದು.
೫. ವಿಚಾರಣೆ ಅಸಮರ್ಪಕವಾಗಿ ನಡೆದುದು ತಿಳಿದರೆ, ಪುನರ್ವಿಚಾರಣೆಗೆ ಆದೇಶಿಸುವುದಲ್ಲದೆ, ಪುನರ್ವಿಚಾರಣೆಯಲ್ಲಿ ಅಸಮರ್ಪಕ ವಿಚಾರಣೆ ನಡೆದುದು ಖಚಿತವಾದರೆ, ಅದಕ್ಕೆ ಕಾರಣರಾದವರಿಗೆ ದಂಡ ವಿಧಿಸಲು ಅವಕಾಶವಿರಬೇಕು.
೬. ಇಲಾಖಾ ವಿಚಾರಣೆಗಳ ಕುರಿತು ಸೂಕ್ತ ತರಬೇತಿಯನ್ನು ಕಾಲಕಾಲಕ್ಕೆ ಎಲ್ಲಾ ಕಛೇರಿ ಮುಖ್ಯಸ್ಥರುಗಳಿಗೆ ಮತ್ತು ಹಿರಿಯ ನೌಕರರುಗಳಿಗೆ ನೀಡುತ್ತಿರಬೇಕು.
ಒಟ್ಟಾರೆಯಾಗಿ ಹೇಳಬೇಕೆಂದರೆ, ಸುಧಾರಣೆಗೆ ಸಾಕಷ್ಟು ಅವಕಾಶಗಳಿವೆ. ಆದರೆ ಮೇಲಾಧಿಕಾರಿಗಳ, ಆಡಳಿತದ ಮುಖ್ಯಸ್ಥರುಗಳ, ನಮ್ಮನ್ನಾಳುವವರ ಮನೋಭಾವದಲ್ಲಿ ಬದಲಾವಣೆಯಾಗದಿದ್ದರೆ ಎಲ್ಲವೂ ವ್ಯರ್ಥವಾಗುತ್ತವೆ. ಯಾವುದೇ ಸುಧಾರಣೆ ಮೇಲಿನಿಂದ ಬರಬೇಕು. ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ, ಉನ್ನತ ಸ್ಥಾನಗಳಲ್ಲಿರುವವರು ಭ್ರಷ್ಟಾತಿಭ್ರಷ್ಟರಾಗಿದ್ದು ಇತರರನ್ನು, ಕೆಳಗಿನವರನ್ನು ಮಾತ್ರ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ತೋಳಗಳು ಕುರಿಗಳನ್ನು ಕಾಯುತ್ತಿವೆ. ಕುರಿಗಳು ಕುರಿಗಳಾಗೇ ಉಳಿದರೆ ತೋಳಗಳ ರಾಜ್ಯಭಾರಕ್ಕೆ ಅಡ್ಡಿಯೆಲ್ಲಿಯದು?
ಮಾನ್ಯರೇ, ಸರಕಾರಿ ನೌಕರಿಯಲ್ಲಿ ಇಂತಹ ಘಟನೆಗಳನ್ನು ನೋಡಿದರೆ, ಸರಕಾರಿ ನೌಕರರು ಹತಾಶರಾಗುತ್ತಾರೆ. ನೀವು ತಿಳಿಸಿರುವ ಪ್ರಕರಣದಲ್ಲಿ ಆ ರೆವಿನ್ಯೂ ಇನ್ ಸ್ಪೆಕ್ಟರ್ ವಿರುದ್ದ ಆರೋಪ ಸಾಬೀತುಗೊಳಿಸಲು ಸಾಕಷ್ಟು ದಾಖಲೆಗಳಿದ್ದರೂ ಸಹ ಶಿಕ್ಷೆಯಿಂದ ಪಾರು ಮಾಡಿದ್ದು ವಿಚಾರಣಾಧಿಕಾರಿಗಳ ಅಕ್ಷಮ್ಯ ಅಪರಾಧ. ನೀವು ಹೇಗೂ ಸ್ವಯಂ ನಿವೃತ್ತಿ ಪಡೆದಿದ್ದಿರಿ. ಪ್ರಕರಣದ ಸತ್ಯಾಸತ್ಯತೆಯನ್ನು ವಿವರಿಸಿ, ಜಿಲ್ಲಾಧಿಕಾರಿಗಳಿಗೋ ಅಥವಾ ವಿಭಾಗಧಿಕಾರಿಗಳಿಗೋ ಅಥವಾ ಸರಕಾರಕ್ಕೋ ಮಾಹಿತಿ ನೀಡಿ ದೂರು ನೀಡಬಹುದಿತ್ತು ಅಲ್ಲವೆ? ಎಲ್ಲಿಯಾದರೂ ಒಂದು ಕಡೆ ಮರು ವಿಚಾರಣೆಗೆ ಆದೇಶವಾಗುತ್ತಿತ್ತು. ಅಲ್ಲವೇ?
ಪ್ರತ್ಯುತ್ತರಅಳಿಸಿಸಂಬಂಧಪಟ್ಟ ನೀವು ಹೇಳಿದ ಮೇಲಾಧಿಕಾರಿಗಳ ಕೃಪಾಕಟಾಕ್ಷದಿಂದಲೇ ಈ ಪ್ರಕರಣ ಹಳ್ಳ ಹತ್ತಿದ್ದು. ಬರಲಿರುವ ಬಡ್ತಿ ತಪ್ಪುವುದೆಂದು ಅವರ ಕಾಲು ಕಟ್ಟಿಕೊಂಡದ್ದರಿಂದ ಅವರ ಮನ ಕರಗಿತ್ತು!! ಪ್ರತಿಕ್ರಿಯೆಗೆ ಧನ್ಯವಾದ, ನಂಜುಂಡರಾಜುರವರೇ.
ಪ್ರತ್ಯುತ್ತರಅಳಿಸಿ