ಹಿರಿಯರೊಬ್ಬರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'. ಸಂಬಂಧಪಟ್ಟವರು, ಪಡದಿದ್ದವರು ಎಲ್ಲರಿಗೂ ಈ ಮಾತು ಹೇಳುತ್ತಿದ್ದುದು, ಕೈಹಿಡಿದುಕೊಂಡು ಈ ಮಾತು ಪುನರುಚ್ಛರಿಸುತ್ತಿದ್ದುದು, ಕೆಲವರಿಂದ ಈ ಕುರಿತು ಭಾಷೆ ಪಡೆಯುತ್ತಿದ್ದುದನ್ನು ಕಂಡ ಕೆಲವರಿಗೆ ಅದು ಅರಳು ಮರಳಿನ ಮಾತಿನಂತೆ ಕಂಡಿದ್ದಿರಬಹುದು. ಆದರೆ ಅಂತರ್ಮುಖಿಯಾಗಿ ಯೋಚಿಸಿದಾಗ ಉತ್ತಮ ಬದುಕಿನ ಸಂದೇಶ ಇದರಲ್ಲಡಗಿರುವುದು ಗೋಚರಿಸದೆ ಇರದು. 'ಲೋಕೋ ಭಿನ್ನರುಚಿಃ' ಎಂಬಂತೆ ಭಿನ್ನ ಅಭಿರುಚಿಗಳ ಜನರ ನಡುವೆ ಸಮನ್ವಯ ಸಾಧಿಸಬೇಕೆಂದರೆ ಈ ಸಂದೇಶದ ಪಾಲನೆಯಿಂದ ಮಾತ್ರ ಸಾಧ್ಯ.
ಸುಮಾರು ಹದಿನೈದು ವರ್ಷಗಳ ಹಿಂದಿನ ಪ್ರಸಂಗವಿದು. ಅರಕಲಗೂಡಿನಲ್ಲಿ ತಹಸೀಲ್ದಾರನಾಗಿದ್ದಾಗ ಒಂದು ಜಮೀನಿನ ತಕರಾರು ಪ್ರಕರಣ ನನ್ನ ಮುಂದೆ ಬಂದಿತ್ತು. ಗಂಡ ಅಪಘಾತದಲ್ಲಿ ಮೃತನಾದ ನಂತರ ಆತನ ಹೆಸರಿನಲ್ಲಿದ್ದ ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಮಧ್ಯ ವಯಸ್ಕ ವಿಧವೆ ಕೋರಿದ್ದ ಅರ್ಜಿಗೆ ಗಂಡನ ಅಣ್ಣಂದಿರು ತಕರಾರು ಸಲ್ಲಿಸಿದ್ದರು. ವಿಚಾರಣೆ ಕಾಲದಲ್ಲಿ ತಿಳಿದು ಬಂದಿದ್ದೇನೆಂದರೆ ಮೃತನ ತಂದೆ-ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಮೃತನನ್ನು ಹೊರತುಪಡಿಸಿ ಉಳಿದವರೆಲ್ಲಾ ಒಳ್ಳೆಯ ಸ್ಥಿತಿಯಲ್ಲಿದ್ದರು. ಮಗಳನ್ನು ಸಿರಿವಂತ ಕುಟುಂಬಕ್ಕೆ ಕೊಟ್ಟು ವಿವಾಹ ಮಾಡಲಾಗಿತ್ತು. ಹಿರಿಯ ಮಗ ಬೆಂಗಳೂರಿನ ಸರ್ಕಾರಿ ಕಾಲೇಜೊಂದರ ಪ್ರೊಫೆಸರ್, ಎರಡನೆಯವನು ತುಮಕೂರಿನಲ್ಲಿ ಇಂಜನಿಯರ್, ಕೊನೆಯ ಮಗ ಪ್ರೌಢಶಾಲೆಯ ಉಪಾಧ್ಯಾಯ. ಮೃತ ವ್ಯಕ್ತಿ ಮೂರನೆಯವನಾಗಿದ್ದು ಅವಿದ್ಯಾವಂತ. ತಂದೆ-ತಾಯಿಗೆ ಪಿತ್ರಾರ್ಜಿತವಾಗಿ ಬಂದಿದ್ದ ನಾಲ್ಕು ಎಕರೆ ತರಿ ಜಮೀನು ಇತ್ತು. ಒಳ್ಳೆಯ ಸ್ಥಿತಿಯಲ್ಲಿದ್ದ ಉಳಿದ ಮಕ್ಕಳು ಅವಿದ್ಯಾವಂತ ಸಹೋದರನೂ ಚೆನ್ನಾಗಿರಲಿ, ಹಳ್ಳಿಯನ್ನು ಬಿಟ್ಟುಬರಲು ಇಚ್ಛಿಸದ ತಂದೆ-ತಾಯಿಗೆ ಆಸರೆಯಾಗಿರಲಿ ಎಂಬ ಭಾವನೆಯಿಂದ ಪಿತ್ರಾರ್ಜಿತ ಸ್ವತ್ತನ್ನು ಅವನ ಹೆಸರಿಗೆ ಖಾತೆ ಮಾಡಿಕೊಡಲು ಒಪ್ಪಿಗೆ ಸೂಚಿಸಿ, ಜಮೀನಿನ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟು ಅವನ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು. ಬಡಕುಟುಂಬದ ಹೆಣ್ಣನ್ನು ಮದುವೆಯಾಗಿದ್ದ ಅವನ ಬದುಕಿಗೂ ಇದರಿಂದ ಭದ್ರತೆ ಬಂದಿತ್ತು. ಕೆಲವು ವರ್ಷಗಳ ನಂತರ ಆತ ಅಪಘಾತದಲ್ಲಿ ತೀರಿದಾಗ ಜಮೀನಿನ ಪಾಲು ಕೇಳುವುದರೊಂದಿಗೆ ಮೃತನ ಹೆಂಡತಿಯ ಹೆಸರಿಗೆ ಖಾತೆ ಮಾಡಿಕೊಡಬಾರದೆಂದು ಮೃತನ ಅಣ್ಣಂದಿರು ತಕರಾರು ಮಾಡಿದ್ದರು. ಜಮೀನು ಕೈತಪ್ಪಿದಲ್ಲಿ ಆಸರೆಯಿಲ್ಲದೆ ಬೀದಿಗೆ ಬೀಳಲಿದ್ದ ಮೃತನ ಹೆಂಡತಿ, ಮದುವೆ ವಯಸ್ಸಿಗೆ ಬಂದಿದ್ದ ಅವನ ಮಗಳ ಕುರಿತು ತಕರಾರುದಾರರಿಗೆ ಮರುಕವಿರಲಿಲ್ಲ. ಕೊನೆಯ ಮಗನೊಬ್ಬ ಮಾತ್ರ ಅತ್ತಿಗೆಯ ಪರವಾಗಿ ಮಾತನಾಡಿದ್ದ. ಅಧಿಕಾರದಲ್ಲಿದ್ದ ಪ್ರಭಾವಿ ರಾಜಕಾರಣಿಯೊಬ್ಬರು ತಕರಾರುದಾರರ ಪರವಾಗಿ ತೀರ್ಪು ನೀಡಲು ಒಂದು ರೀತಿಯ ಬೆದರಿಕೆಯ ಒತ್ತಾಯ ಮಾಡಿದ್ದರು. ಕಾಲೇಜು ಪ್ರೊಫೆಸರರು ಹತ್ತು ಸಾವಿರ ರೂ. ಲಂಚದ ಆಮಿಷ ಒಡ್ಡಿದ್ದರು. ಇದನ್ನು ಲೆಕ್ಕಿಸದೆ, ಜಮೀನಿನ ಮೇಲಿನ ಹಕ್ಕನ್ನು ಮೊದಲೇ ಬಿಟ್ಟುಕೊಟ್ಟು ಮೃತನ ಹೆಸರಿಗೆ ಖಾತೆ ಮಾಡಿಕೊಡಲು ತಕರಾರುದಾರರು ಹಿಂದೆ ಬರೆದುಕೊಟ್ಟಿದ್ದ ಒಪ್ಪಿಗೆ ಪತ್ರ ಹಾಗೂ ಮೃತ ಗಂಡನ ಹೆಸರಿನಲ್ಲಿದ್ದ ಜಮೀನು ಇವುಗಳನ್ನು ಪರಿಗಣಿಸಿ ಮೃತನ ಪತ್ನಿಯ ಹೆಸರಿಗೆ ಖಾತೆ ಮಾಡಲು ತೀರ್ಪು ನೀಡಿದಾಗ ಜಮೀನು ಕೈತಪ್ಪಿ ಹೋಗುವುದೆಂದೇ ಆತಂಕದಲ್ಲಿದ್ದ ಆ ಬಡ ಹೆಣ್ಣು ಮಗಳು ತನ್ನ ಮಗಳೊಂದಿಗೆ ಬಂದು ಕಣ್ಣೀರಿಡುತ್ತಾ ಕೃತಜ್ಞತೆ ವ್ಯಕ್ತಪಡಿಸಿದ್ದಳು. ಆಗ ಆಕೆ ಕಾಲೇಜು ಪ್ರೊಫೆಸರರ ಪತ್ನಿಗೂ ತನಗೂ ಒಮ್ಮೆ ಸಂಸಾರಕ್ಕೆ ಸಂಬಂಧಿಸಿದ ವಿಷಯಕ್ಕೆ ಜಗಳವಾಗಿತ್ತೆಂದೂ, ಕುಟುಂಬಗಳಲ್ಲಿ ಪರಸ್ಪರ ಮನಸ್ತಾಪಕ್ಕೆ ಇದೇ ಕಾರಣವಾಗಿ ಈ ಹಂತಕ್ಕೆ ಬಂದು ತಾನು ಬೀದಿಗೆ ಬೀಳುವ ಪ್ರಸಂಗ ಒದಗಿತೆಂದೂ ಕಣ್ಣೀರಿಟ್ಟು ಹೇಳಿದ್ದಳು. ಮುಂದೊಮ್ಮೆ ಕಾಲೇಜು ಪ್ರೊಫೆಸರರು ಭೇಟಿಯಾದಾಗ ಅವರೊಂದಿಗೆ ಸಮಾಲೋಚಿಸಿ, ಚರ್ಚಿಸಿ, ಮನವೊಲಿಸಿ ದೊಡ್ಡ ಸ್ಥಾನದಲ್ಲಿರುವ ಅವರು ಪ್ರಸಂಗ ಇಲ್ಲಿಗೇ ಮುಕ್ತಾಯಗೊಳಿಸಿದಲ್ಲಿ ಆಗುವ ಸತ್ಪರಿಣಾಮದ ಕುರಿತು ಹಾಗೂ ಇದರಿಂದ ನಿಜಕ್ಕೂ ದೊಡ್ಡವರೆನಿಸಿಕೊಳ್ಳುತ್ತೀರೆಂದು ಮನವರಿಕೆ ಮಾಡಿಕೊಟ್ಟಾಗ ತೀರ್ಪಿನ ವಿರುದ್ಧ ಅವರು ಸಲ್ಲಿಸಬೇಕೆಂದಿದ್ದ್ದ ಮೇಲುಮನವಿಯನ್ನು ಸಲ್ಲಿಸಲಿಲ್ಲ. ಕೆಟ್ಟ ಘಳಿಗೆಯೊಂದರಲ್ಲಿ ಕುಟುಂಬದ ಸದಸ್ಯರುಗಳಲ್ಲಿ ಉಂಟಾಗುವ ಮನಸ್ತಾಪ ಮಾನವೀಯತೆಯನ್ನೇ ಹೇಗೆ ಮರೆಸುತ್ತದೆ ಎಂಬುದನ್ನು ತೋರಿಸುವುದಷ್ಟೇ ಈ ಪ್ರಸಂಗ ಉಲ್ಲೇಖಿಸಿದ ಉದ್ದೇಶ. ಹಲವಾರು ಕಾರಣಗಳಿಗಾಗಿ ಉಂಟಾಗುವ ಜಗಳ, ಮನಸ್ತಾಪಗಳನ್ನು ಮರೆತು ಪರಸ್ಪರರನ್ನು ಕ್ಷಮಿಸಿ ಮುನ್ನಡೆದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಲ್ಲದಿದ್ದಲ್ಲಿ ಸಂಬಂಧಗಳು ಹಳಸುತ್ತದೆ. ಹಳಸಿದ ಸಂಬಂಧಗಳ ಲಾಭ ಇತರರಿಗೆ ಆಗುತ್ತದೆ. ಸಂಬಂಧಿಸಿದವರು ನಗೆಪಾಟಲಿಗೆ ಒಳಗಾಗುವರಲ್ಲದೆ ಅವರ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಹೊರಟುಹೋಗುತ್ತದೆ. ಸಂಬಂಧಗಳು ಕಳಚಿದ ಬಗ್ಗೆ ಮನದಾಳದಲ್ಲಿ ನೋವು ಉಳಿಯುತ್ತದೆ. ಹೊಂದಿಕೊಂಡು ನಡೆದಲ್ಲಿ ಸಂಬಂಧಗಳು ಮಧುರವಾಗಿ ಉಳಿಯದಿದ್ದರೂ ಹಾಳಾಗುವುದಿಲ್ಲ. ಈ ಹಿನ್ನೆಲೆಯಲ್ಲಿ 'ಎಲ್ಲಾ ಮರೆತುಬಿಡಿ, ಚೆನ್ನಾಗಿರಿ' ಎಂಬ ಮಾತು ಅರ್ಥಪೂರ್ಣವೆನಿಸುತ್ತದೆ. ಮನ ನೋಯುವಂತಹ ಕೆಲವು ಸಂಗತಿಗಳು ಘಟಿಸಿದ ಸಂದರ್ಭಗಳಲ್ಲಿ ತಕ್ಷಣದಲ್ಲಿ ಕೋಪದಿಂದ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇದ್ದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ.
ಹೊಂದಾಣಿಕೆಯಿದ್ದಲ್ಲಿ ಸಂಬಂಧಗಳು ಚೆನ್ನಾಗಿರುತ್ತದೆ. ಸಂಬಂಧಗಳು ಚೆನ್ನಾಗಿದ್ದಲ್ಲಿ ಜೀವನ ಸಹನೀಯವೆನಿಸುತ್ತದೆ. ಸಂಬಂಧಗಳು ಹಾಳಾಗಲು ಕಾರಣಗಳೇನು ಎಂದು ವಿಶ್ಲೇಷಿಸುವುದು ಋಣಾತ್ಮಕ ಚಿಂತನೆಯಾಗುತ್ತದೆ. ಸಂಬಂಧಗಳು ಹಾಳಾಗದಿರಲು ಏನು ಮಾಡಬಹುದು ಎಂದು ಧನಾತ್ಮಕವಾಗಿ ನೋಡೋಣ. ಸಂಬಂಧಗಳು ಉಳಿಯಬೇಕೆಂದರೆ - ೧. ಸಂಬಂಧಗಳು ಇರಬೇಕು, ಉಳಿಯಬೇಕು, ಬೆಳೆಯಬೇಕು ಎಂಬ ಮನೋಭಾವ, ೨. ಕುಟುಂಬ ಎಂದರೆ ಕೇವಲ ಗಂಡ, ಹೆಂಡತಿ ಮತ್ತು ಮಕ್ಕಳು ಮಾತ್ರ ಎಂಬ ಸೀಮಿತ ಪರಿಧಿಯಿಂದ ಹೊರಬರುವುದು. ೩. ಕುಟುಂಬದ ಸದಸ್ಯರುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಮನಸ್ತಾಪಗಳ ಸಂದರ್ಭಗಳು ಬಾರದಂತೆ ನೋಡಿಕೊಳ್ಳುವುದು, ೪. ತಾಳ್ಮೆ, ಸಹನೆಯಿಂದ ವರ್ತಿಸುವುದು, ಕೋಪತಾಪದ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸದೆ ಸೂಕ್ತ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು, ೫. ಮೂರನೆಯ ವ್ಯಕ್ತಿಗಳು ಮೂಗು ತೂರಿಸಿ ಸಂಬಂಧಗಳನ್ನು ಕೆಡಿಸಲು ಅವಕಾಶ ಕೊಡಬಾರದು, ಅವರು ಹೇಳುವ ಮಾತುಗಳಲ್ಲಿ ನಿಜವಿದ್ದರೂ ಅದಕ್ಕೆ ಪ್ರಾಮುಖ್ಯತೆ ನೀಡದಿರುವುದು, ೬. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಬರಲು ಸಂಬಂಧಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು, ಆದರೆ ನಮಗಿಂತ ಚೆನ್ನಾಗಿರುವ ಸಂಬಂಧಿಗಳ ಕುರಿತು ಹೊಟ್ಟೆಕಿಚ್ಚು ಪಡದೆ, ಉತ್ತಮ ಸ್ಥಿತಿಯಲ್ಲಿರದವರನ್ನು ಕಡೆಗಣಿಸದೆ ಇರುವ ಮನೋಭಾವ ಇರಬೇಕು. ನಾವು ದೊಡ್ಡವರಾಗಲು ಇತರರನ್ನು ಚಿಕ್ಕವರಾಗಿ ಬಿಂಬಿಸಬೇಕಿಲ್ಲ. ನಾವು ದೊಡ್ಡತನದಿಂದ ವರ್ತಿಸಬೇಕಷ್ಟೆ. ೭. ಮಾತುಕತೆಗಳಲ್ಲಿ ಸಂಯಮವಿರಬೇಕು. ವ್ಯಕ್ತಿಗಳನ್ನು ಮುದುಕ, ಮುದುಕಿ, ಕುಂಟ, ಕುರುಡ, ಕುಳ್ಳ, ಲಂಬು, ಪೆದ್ದ, ಹುಚ್ಚ, ಇತ್ಯಾದಿ ವಿಶೇಷತೆಗಳನ್ನು ಜೋಡಿಸಿ ಎದುರಿನಿಂದಾಗಲೀ, ಹಿಂದಿನಿಂದಾಗಲೀ ಸಂಬೋಧಿಸಬಾರದು. ಇತರರ ಅಭಿಪ್ರಾಯಗಳನ್ನು ಅವು ನಮಗೆ ಸರಿಯೆನಿಸದಿದ್ದರೂ ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಎದುರಿಗಿಲ್ಲದ ವ್ಯಕ್ತಿಗಳ ಬಗ್ಗೆ ಸಹ ಹಗುರವಾಗಿ ಮಾತನಾಡಬಾರದು. ಒಂದಲ್ಲಾ ಒಂದು ಸಂದರ್ಭದಲ್ಲಿ ಆ ಮಾತು ಅವರಿಗೆ ತಲುಪುತ್ತದೆ ಹಾಗೂ ಅದರಿಂದ ಮಾತನಾಡಿದವರು ಸಣ್ಣವರಾಗುತ್ತಾರೆ ಎಂಬ ಅರಿವಿರಬೇಕು. ೮. ತಮ್ಮದು ತಪ್ಪು ಎಂದು ಕಂಡುಬಂದರೆ ಹಿಂಜರಿಕೆ ತೋರದೆ ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು, ೯. ಸಂಬಂಧಗಳನ್ನು ಕೆಡಿಸುವವರಿಂದ ದೂರವಿರುವುದು, ೧೦. ಯಾರನ್ನೂ ದೂರದಿರುವುದು, ಯಾರಿಗೂ ಕೇಡೆಣಿಸದಿರುವುದು, . . ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇದರಲ್ಲಿನ ಒಂದೊಂದು ಅಂಶಗಳ ಕುರಿತೂ ಸ್ವವಿಮರ್ಶೆ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ.
'ಬಾಳು, ಬಾಳಗೊಡು' ಎಂದ ಮಹಾವೀರ, 'ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು' ಎಂದ ಏಸುಕ್ರಿಸ್ತ, 'ಇವನಾರವ, ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವನೆಂದೆಣಿಸಯ್ಯ' ಎಂದ ಬಸವಣ್ಣ, 'ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು' ಎಂದ ಸರ್ವಜ್ಙನೇ ಮುಂತಾದ ದಾರ್ಶನಿಕರು, ಸಂತರು ಒತ್ತಿ ಹೇಳುವುದು ಒಂದೇ ವಿಷಯ - ಮನುಷ್ಯನಿಗೆ ಇರಬೇಕಾಧ ಹೊಂದಾಣಿಕೆಯ ಮನೋಭಾವ. ನಮ್ಮದು ತಪ್ಪಿದ್ದರೆ ತಿದ್ದಿಕೊಂಡು ನಡೆಯೋಣ. ಇತರರ ತಪ್ಪನ್ನು ಕ್ಷಮಿಸೋಣ. ಕ್ಷಮಿಸುವ ಮನೋಭಾವ ದೈವತ್ವದ ಗುಣ. ಸ್ವಾಮಿ ವಿವೇಕಾನಂದರ ಈ ವಾಣಿಯನ್ನುನೆನಪಿನಲ್ಲಿಡೋಣ:
"ಇತರರಿಗೆ ಒಳಿತು ಮಾಡುವುದೇ ಧರ್ಮ; ಇತರರನ್ನು ಘಾಸಿಗೊಳಿಸುವುದು ಅಧರ್ಮ. ಶಕ್ತಿ ಮತ್ತು ಪುರುಷತ್ವವೇ ಧರ್ಮ; ದುರ್ಬಲತೆ ಮತ್ತು ಹೇಡಿತನಗಳೇ ಅಧರ್ಮ. ಸ್ವಾತಂತ್ರ್ಯವೇ ಧರ್ಮ; ಗುಲಾಮಗಿರಿಯೇ ಅಧರ್ಮ. ಇತರರನ್ನು ಪ್ರೀತಿಸುವುದು ಧರ್ಮ; ದ್ವೇಷಿಸುವುದೇ ಅಧರ್ಮ. ದೇವರಲ್ಲಿ ಮತ್ತು ತನ್ನಲ್ಲಿ ತಾನು ನಂಬಿಕೆಯಿರಿಸಿಕೊಳ್ಳುವುದೇ ಧರ್ಮ; ಅಪನಂಬಿಕೆಯೇ ಅಧರ್ಮ. ಇತರರ ಬಗ್ಗೆ ದೂಷಿಸಿ ಮಾತನಾಡುವುದು ತಪ್ಪು. ಬಹಳಷ್ಟು ಸಂಗತಿಗಳು ಮನಸ್ಸಿನಲ್ಲಿ ಮೂಡಬಹುದು; ಅವುಗಳನ್ನು ವ್ಯಕ್ತಪಡಿಸುತ್ತಾ ಹೋದರೆ ಕ್ರಮೇಣ ಸಣ್ಣ ಮಣ್ಣುಗುಡ್ಡೆಯೇ ಬೆಟ್ಟವಾಗುತ್ತದೆ. ಕ್ಷಮಿಸಿದರೆ ಮತ್ತು ಕ್ಷಮಿಸಿ ಮರೆತುಬಿಟ್ಟರೆ ಎಲ್ಲವೂ ಸುಖಾಂತ್ಯವಾಗುತ್ತದೆ." ಎಂತಹ ಸತ್ವಯುತವಾದ, ಸತ್ಯವಾದ ಮಾತಿದು!
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು||
ಗಡಿಬಿಡಿಯಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ||
-ಕ.ವೆಂ. ನಾಗರಾಜ್,