ಶ್ರೀಪಾದ ಪೂಜಾರರ 'ನಾನಿದ್ದೂ ನನ್ನದೇನಿಲ್ಲ' ಕೃತಿ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಕುರಿತ ನೆನಪುಗಳನ್ನು ಪೋಣಿಸುತ್ತಾ ಅವರ ಧೀಮಂತ ವ್ಯಕ್ತಿತ್ವವನ್ನು ಕಣ್ಣ ಮುಂದೆ ನಿಲ್ಲಿಸುವ ಒಂದು ಉತ್ತಮ ಪ್ರಯತ್ನವಾಗಿದೆ. ೨೩-೦೩-೨೦೧೩ರಲ್ಲಿ ತಮ್ಮ ೯೭ನೆಯ ವಯಸ್ಸಿನಲ್ಲಿ ಕಣ್ಮರೆಯಾದ ಅಪೂರ್ವ ಚೇತನಕ್ಕೆ ಸಲ್ಲಿಸಿದ ಅನುಪಮ ಶ್ರದ್ಧಾಂಜಲಿಯಾಗಿದೆ. ಬೆಂಗಳೂರಿನ ಕಾಮಧೇನು ಪ್ರಕಾಶನದಿಂದ ಪ್ರಥಮವಾಗಿ ಮೇ, ೨೦೧೩ರಲ್ಲಿ ಪ್ರಕಾಶಿತವಾದ ೨೧೬ ಪುಟಗಳ ಈ ಕೃತಿ ಕೇವಲ ೭ ತಿಂಗಳುಗಳಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿದೆಯೆಂದರೆ "ಶೇಷವೇ ಸರಿ. ಬೆಳಗೆರೆ ಕೃಷ್ಣಶಾಸ್ತ್ರಿಗಳ ವ್ಯಕ್ತಿತ್ವ ಜನರ ಮೇಲೆ ಬೀರಿದ್ದ ಪ್ರಭಾವದಿಂದ ಇದು ಸಾಧ್ಯವಾಗಿದೆಯೆಂದರೆ ಉತ್ಪ್ರೇಕ್ಷೆಯಾಗಲಾರದು. ಹೆಗ್ಗೆರೆಯ ಶ್ರೀ ನಾಗರಾಜು ಮತ್ತು ಶ್ರೀಮತಿ ಗಾಯತ್ರಿ ನಾಗರಾಜು ದಂಪತಿಗಳು ಶಿವಮೊಗ್ಗದ ತಮ್ಮ ನೂತನ ಮನೆ 'ನಂದನ'ದ ಗೃಹಪ್ರವೇಶದ ಸಂದರ್ಭದಲ್ಲಿ ಈ ಪುಸ್ತಕವನ್ನು ಸಮಾರಂಭಕ್ಕೆ ಆಗಮಿಸಿದ್ದ ಬಂಧು-ಮಿತ್ರರುಗಳಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದರು. ಅವರ ಅಳಿಯ ಶಿವಮೊಗ್ಗದ ಡಾ. ವೆಂಕಟಕೃಷ್ಣರವರಿಂದ ನನಗೆ ಈ ಪುಸ್ತಕದ ಪ್ರತಿ ತಲುಪಿದ್ದು, ಓದಲು ಪ್ರಾರಂಭಿಸಿದಾಗ ಸುಲಲಿತವಾಗಿ ಓದಿಸಿಕೊಂಡುಹೋದ ಪುಸ್ತಕವಿದು. ಕೃಷ್ಣಶಾಸ್ತ್ರಿಗಳ 'ಯೇಗ್ದಾಗೆಲ್ಲಾ ಐತೆ' ಓದಿದವರ ಮೇಲೆ ಮುಕುಂದೂರು ಸ್ವಾಮಿಗಳ ಬಗ್ಗೆ ಗೌರವ ಮತ್ತು ಅವರ ಒಡನಾಡಿಯಾಗಿದ್ದ ಕೃಷ್ಣಶಾಸ್ತ್ರಿಗಳ ಬಗ್ಗೆ ಅಭಿಮಾನ ಮೂಡದೇ ಇರಲು ಸಾಧ್ಯವೇ ಇಲ್ಲ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶರು ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಹೇಳಿದಂತೆ ಕೃಷ್ಣಶಾಸ್ತ್ರಿಗಳು 'ಎಲೆಯ ಮರೆಯ ಅಲರು'.
ಕೃಷ್ಣಶಾಸ್ತ್ರಿಗಳ ಕುರಿತ ನೆನಪುಗಳ ಎಳೆಗಳನ್ನು ಕೂಡಿಸುತ್ತಾ ಅವರ ವ್ಯಕ್ತಿತ್ವದ ಅನಾವರಣ ಮಾಡುವ ಲೇಖಕರ ರೀತಿ ಕೃಷ್ಣಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಪರಿಚಯ ಮಾಡಿದ ರೀತಿಗೆ ಹೋಲುತ್ತದೆ. 'ಯೇಗ್ದಾಗೆಲ್ಲಾ ಐತೆ' ಪುಸ್ತಕ ಓದಿ ಪ್ರಭಾವಿತರಾಗಿದ್ದ ಲೇಖಕರು ತಮಗೆ ಕೃಷ್ಣಶಾಸ್ತ್ರಿಗಳ ಪರಿಚಯ ಹೇಗೆ ಪ್ರಾರಂಭವಾಯಿತೆಂದು ವಿವರಿಸುವುದರೊಂದಿಗೆ ನೆನಪುಗಳ ಸರಮಾಲೆ ಆರಂಭವಾಗುತ್ತದೆ. ಮೊದಲ ಭೇಟಿಯಲ್ಲಿ ತಾವು ಭಾವಿಸಿದ್ದ ರೀತಿಯಲ್ಲಿ ಕಂಡು ಬರದಿದ್ದ ಈ ಬಿಳಿಬಟ್ಟೆಯ ವ್ಯಕ್ತಿಯ ಬಗ್ಗೆ ನಿರಾಶರಾಗಿದ್ದ ಅವರು ಕ್ರಮೇಣ ಶಾಸ್ತ್ರಿಗಳ ಒಳವ್ಯಕ್ತಿತ್ವದ ಅನುಭವ ಪಡೆದಾಗ ಧನ್ಯತೆಯ ಭಾವಕ್ಕೆ ಬದಲಾದುದನ್ನು ವಿವರಿಸಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ತೀವ್ರ ಹೃದ್ರೋಗದಿಂದ ಬಳಲಿ ಐ.ಸಿ.ಯು. ನಲ್ಲಿ ಇದ್ದಾಗ ಅವರ ಕೈಗೆ ಹಾಕಿದ್ದ ಡ್ರಿಪ್ಸ್ ಅಲ್ಲಾಡದಂತೆ ಇರಲು ಕೈಯನ್ನು ಹಿಡಿದು ಲೇಖಕರು ಕುಳಿತಿದ್ದಾಗ ಒಬ್ಬರು ಬಂದು 'ನಾನು ಸ್ವಲ್ಪ ಹೊತ್ತು ಅವರ ಕೈ ಹಿಡಿದುಕೊಳ್ಳಲೇ' ಎಂದು ಕೋರಿ ಅವಕಾಶ ಪಡೆದಿದ್ದರು. ಶಾಸ್ತ್ರಿಗಳು ಕಣ್ಣು ತೆರೆದು ಅವರನ್ನು ನೋಡಿ ಮುಗುಳ್ನಕ್ಕು ಮತ್ತೆ ಕಣ್ಣು ಮುಚ್ಚಿ ಮಲಗಿದರು. ಅರ್ಧ ಗಂಟೆಯ ನಂತರ ಲೇಖಕ ಬಂದಾಗ ಇನ್ನೂ ಸ್ವಲ್ಪ ಹೊತ್ತು ಇರುವುದಾಗಿ ಹೇಳಿದ್ದ ಅವರು ಸುಮಾರು ಒಂದೂವರೆ ಗಂಟೆಗಳ ಕಾಲ ಹಾಗೆ ಕುಳಿತಿದ್ದರು. ಆ ವ್ಯಕ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್.ಪಿ. ಆಗಿದ್ದ ಐ.ಪಿ.ಎಸ್. ಅಧಿಕಾರಿ ಶ್ರೀ ರಾಮಕೃಷ್ಣರವರು. ಓರ್ವ ಸಾಮಾನ್ಯ ಶಿಕ್ಷಕರಾಗಿದ್ದವರು ಯಾವ ಮಟ್ಟಕ್ಕೆ ಬೆಳೆದಿದ್ದರು ಎಂಬುದನ್ನು ಸೂಚಿಸುವ ಒಂದು ಸಣ್ಣ ಘಟನೆಯಿದು.
ಈ ಬಿಳಿಬಟ್ಟೆಯ ಸಂನ್ಯಾಸಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ಈ ಚಟುವಟಿಕೆಗಳ ಸಂದರ್ಭದ ಘಟನೆಗಳು ಒಂದಕ್ಕಿಂತಾ ಒಂದು ರೋಚಕವಾಗಿವೆ. ತಂದೆ ಸಂಸ್ಕೃತ ವಿದ್ವಾಂಸರಾಗಿದ್ದ ಚಂದ್ರಶೇಖರ ಶಾಸ್ತ್ರಿಗಳ ಗಾಢ ಪ್ರಭಾವ ಕೃಷ್ಣಶಾಸ್ತ್ರಿಗಳ ಮೇಲೆ ಆಗಿದೆ. ಜಾತಿ, ಮತ, ವರ್ಗ, ವರ್ಣ ಮುಂತಾದುವುಗಳಿಂದ ಗಾವುದ ದೂರವಿದ್ದ ಶಾಸ್ತ್ರಿಗಳ ಅಂತರಂಗ ಅವರ ಕೃತಿಗಳಲ್ಲಿ, ನಾಟಕಗಳಲ್ಲಿ, ನಡೆನುಡಿಗಳಲ್ಲಿ ಎದ್ದು ಕಾಣುವಂತಹದು. ಮುಕುಂದೂರು ಸ್ವಾಮಿಗಳ ಬಗ್ಗೆ ಮತ್ತು ರಮಣರ ಬಗ್ಗೆ ಹೇಳುವಾಗಲೆಲ್ಲಾ ಭಾವುಕರಾಗುತ್ತಿದ್ದವರು. ಅವರ ಬದುಕೇ ಒಂದು ತೆರೆದ ಪುಸ್ತಕ. 'ಮಕ್ಕಳಿಗೆ ಎರಡಕ್ಷರ ಕಲಿಸು, ನಾಲ್ಕು ತುತ್ತು ಅನ್ನ ಹಾಕು' ಎಂಬ ತಂದೆಯ ಮರಣಕಾಲದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿದ ಶಾಸ್ತ್ರಿಗಳು, ಈ ಸಾಧನೆ ಮಾಡುವಾಗ ಪಟ್ಟ ಕಷ್ಟ-ನಷ್ಟಗಳು, ಶ್ರಮ, ಸಾಫಲ್ಯ ಇವುಗಳನ್ನು ತೆರೆದಿಡುವಲ್ಲಿ ಪುಸ್ತಕ ಯಶಸ್ವಿಯಾಗಿದೆ. ೧೯೬೬ರಲ್ಲಿ ಹೀಗೆ ಪ್ರಾರಂಭವಾದದ್ದು ಬೆಳಗೆರೆಯ 'ಶ್ರೀ ಶಾರದಾ ಮಂದಿರ ವಿದ್ಯಾಸಂಸ್ಥೆ'. ತಮ್ಮ ವಿರೋಧಿಗಳಿಂದಲೂ ಮನ್ನಣೆ ಗಳಿಸಿದ ಕುರಿತ ಪ್ರಸಂಗಗಳು ಆಶ್ಚರ್ಯ ಮೂಡಿಸುತ್ತವೆ. ತಮ್ಮ ನೇರ ಮತ್ತು ದಿಟ್ಟ ನಡೆ ಮತ್ತು ಮಾತುಗಳಿಂದ ಸಾಕಷ್ಟು ವಿರೋಧಿಗಳನ್ನೂ ಹೊಂದಿದ್ದ ಅವರಿಗೆ ಜೀವ ಬೆದರಿಕೆ ಇದ್ದುದನ್ನು ಕಂಡ ಜಿಲ್ಲಾ ಪೋಲಿಸ್ ಅಧಿಕಾರಿ ಶ್ರೀ ಕೆ.ಆರ್. ಶ್ರೀನಿವಾಸನ್ ಅವರು ಶಾಸ್ತ್ರಿಗಳಿಗೆ ತಮ್ಮ ಗುಡಿಸಲ ವಾಸ ಬಿಟ್ಟು ವಾಸಸ್ಥಳವನ್ನು ಬದಲಾಯಿಸಲು ಹೇಳಿದ್ದರೂ ಅವರು ಕೇಳಲಿಲ್ಲ. ಅವರ ಮಾತಿಗೆ ಬೆಲೆ ಕೊಡದಿದ್ದಾಗ ಆ ಅಧಿಕಾರಿ ಕೆರಳಿ, 'ಇದರ ಪರಿಣಾಮ ನೆಟ್ಟಗಿರುವುದಿಲ್ಲ. ನೀವು ಕಂಬಿ ಎಣಿಸಬೇಕಾಗುತ್ತದೆ' ಎಂದು ಬೆದರಿಸಿದ್ದರು. ಶಾಸ್ತ್ರಿಗಳು, 'ಸತ್ಯ ಎಂಬುದೊಂದಿದ್ದು ಅದು ಸತ್ತು ಹೋದರೆ ಕಂಬಿ ಎಣಿಸಲು ತಯಾರಾಗಿದ್ದೇನೆ ಬಿಡಿ ಸಾರ್' ಎಂದಿದ್ದರು. ಧಡಕ್ಕನೆ ಎದ್ದು ಮನೆಯ ಒಳಗೆ ಹೋದ ಅಧಿಕಾರಿ ತಮ್ಮನ್ನು ಬಂಧಿಸಲು ಬೇಡಿ ತರಲು ಹೋಗಿದ್ದಾರೆ ಎಂದು ಶಾಸ್ತ್ರಿಗಳು ಅಂದುಕೊಂಡಿದ್ದರೆ, ಅಧಿಕಾರಿ ಬರುತ್ತಾ ಎರಡು ಲೋಟ ಕಾಫಿ ಹಿಡಿದುಕೊಂಡು ಬಂದಿದ್ದರು. ಶಾಸ್ತ್ರಿಯವರ ಮೇಲಿನ ಅಭಿಮಾನದಿಂದ ಒರಟಾಗಿ ನಡೆದುಕೊಂಡಿದ್ದಾಗಿಯೂ ತಿಳಿಸಿ ಕ್ಷಮಿಸಲು ಕೇಳುವುದರೊಂದಿಗೆ ಜಾಗರೂಕರಾಗಿ ಇರಲು ಕೇಳಿಕೊಂಡಿದ್ದರು. ಇಂತಹ ನೆನಪುಗಳ ಮೂಟೆಯನ್ನೇ ಈ ಪುಸ್ತಕ ಹೊಂದಿದೆ.
ಹೆಸರು ಬೆಳಗೆರೆ ಕೃಷ್ಣಶಾಸ್ತ್ರಿಯಾದರೂ ಒಂದು ಅಹಿತಕರ ಘಟನೆಯಿಂದ ಬೆಳಗೆರೆಯಿಂದ ಉಟ್ಟ ಬಟ್ಟೆಯಲ್ಲೇ ಹೊರಬಂದಿದ್ದ ಅವರು ತಮ್ಮ ಜಮೀನಿನಲ್ಲೇ ಒಂದು ಬಾಗಿಲಿಲ್ಲದ ಗುಡಿಸಲು ಕಟ್ಟಿಕೊಂಡು ಜೀವನದ ಬಹುಭಾಗ, ಸುಮಾರು ೪೫ ವರ್ಷಗಳನ್ನು ಅಲ್ಲಿ ಕಳೆದಿದ್ದರು. ವಿದ್ಯಾಮಂದಿರ ಮತ್ತು ಹಾಸ್ಟೆಲನ್ನು ಪೋಷಿಸುತ್ತಿದ್ದ ಜಮೀನಿನಲ್ಲೇ ವಾಸವಿದ್ದು ಇಪ್ಪತ್ತನಾಲ್ಕು ಗಂಟೆಗಳೂ ಜಾಗೃತನಾಗಿದ್ದ ಶಿಕ್ಷಕರಾಗಿದ್ದ ಅವರ ಬದುಕಿನ ರೀತಿಯನ್ನು ರೂಪಿಸಿಬಿಟ್ಟಿದ್ದವರು ರಮಣರು, ಮುಕುಂದೂರು ಸ್ವಾಮಿಗಳು ಮತ್ತು ಗಾಂಧೀಜಿ ಎಂದರೆ ಅತಿಶಯೋಕ್ತಿಯಲ್ಲವೆಂಬುದನ್ನು ಲೇಖಕರು ಚೆನ್ನಾಗಿ ನಿರೂಪಿಸಿದ್ದಾರೆ. 'ತಂದೆ ಚಂದ್ರಶೇಖರ ಶಾಸ್ತ್ರಿಗಳಿಗೆ ಗುಡಿಸಲೇ ಇರಲಿಲ್ಲ, ಮಗನ ಗುಡಿಸಲಿಗೆ ಬಾಗಿಲೇ ಇರಲಿಲ್ಲ' - ಎಂಬುದನ್ನು ಹೇಳುತ್ತಾ ಅನಿಕೇತನರಾದ ತಂದೆ, ನಿಕೇತನವಿದ್ದರೂ ಅದನ್ನು ಬಯಲಾಗಿಸಿದ ಮಗನ ಬಗ್ಗೆ ಕೃಷ್ಣಮೂರ್ತಿ ಹನೂರರು ಚಂದ್ರಶೇಖರ ಶಾಸ್ತ್ರಿಗಳ ಪುತ್ಥಳಿ ಬಿಡುಗಡೆ ಮಾಡುವಾಗ ಹೇಳಿದ ಮಾತಿನ ಉಲ್ಲೇಖ ಗಮನ ಸೆಳೆಯುತ್ತದೆ. ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಪತ್ನಿವಿಯೋಗವಾದಾಗ ಪುನರ್ವಿವಾಹದ ಪ್ರಸ್ತಾಪ ಬರಬಾರದೆಂದು ಗಟ್ಟಿಯಾಗಿದ್ದ ತಮ್ಮ ಹಲ್ಲುಗಳನ್ನು ಕೀಳಿಸಿಕೊಂಡು ಅಕಾಲವೃದ್ಧಾಪ್ಯ ಆವಾಹಿಸಿಕೊಂಡಿದ್ದ ಶಾಸ್ತ್ರಿಗಳ ವಿಲಕ್ಷಣ ನಡೆ ಗರಬಡಿಸುತ್ತದೆ. ತಂಗಿ ಪಾರ್ವತಮ್ಮನ ಒತ್ತಾಯದಿಂದ ಕಟ್ಟಿಕೊಂಡಿದ್ದ ಹಲ್ಲಿನ ಸೆಟ್ಟನ್ನೂ ವೇದಾವತಿ ನದಿಗೆ ಅರ್ಪಿಸಿ ಕೈ ತೊಳೆದುಕೊಂಡಿದ್ದ ಅವರ ಚರ್ಯೆ ಬೆರಗು ಮೂಡಿಸುತ್ತದೆ. ಕಾಮನಿಗ್ರಹಕ್ಕೆ ಇದು ಅವರು ಕಂಡುಕೊಂಡಿದ್ದ ರೀತಿಯೇ, ಹರಯದಲ್ಲೂ ಕಾಮ ಅವರನ್ನು ಕಾಡಿರಲಿಲ್ಲವೇ ಎಂಬ ಲೇಖಕರ ಪ್ರಶ್ನೆಗೆ ಶಾಸ್ತ್ರಿಗಳು ಕೊಟ್ಟಿದ್ದ ಉತ್ತರವೆಂದರೆ, 'ಹರೆಯದಲ್ಲೂ ಕಾಮ ನನ್ನನ್ನು ಕಾಡಲಿಲ್ಲ. ರಮಣರ ದರ್ಶನವಾದ ನಂತರ ಮನಸ್ಸು ಆ ಕಡೆ ಎಳೆಯಲೇ ಇಲ್ಲ' ಎಂಬುದು! ತಮ್ಮ ಎದುರಿಗೆ ಬಂದ ಹಾಲುಹಲ್ಲು ಬಿದ್ದ ಪುಟ್ಟಮಕ್ಕಳನ್ನು ಕಂಡಾಗ ಶಾಸ್ತ್ರಿಗಳು ತಮಾಷೆ ಮಾಡುತ್ತಿದ್ದರಂತೆ, "ನೋಡು, ನಿನಗೆ ಮತ್ತೆ ಹಲ್ಲು ಹುಟ್ಟಿಬಂದು ದೊಡ್ಡವನಾಗುತ್ತೀಯ. ನನಗೆ ಹಲ್ಲು ಬರುವುದೇ ಇಲ್ಲ. ನಾನು ಮಗುವಾಗಿಯೇ ಇರುತ್ತೇನೆ". ಸ್ತ್ರೀಯರ ಕುರಿತ ಇವರ ಭಾವನೆ ಅರ್ಥ ಮಾಡಿಕೊಳ್ಳಬೇಕೆಂದರೆ ಇನ್ನೊಂದು ಘಟನೆ ಉಲ್ಲೇಖಿಸಬೇಕು. ಚಿತ್ರದುರ್ಗದ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಉಷಾಲತಾ ಅವರಿಗೆ ಭದ್ರಾವತಿಗೆ ವರ್ಗವಾದ ಸಂದರ್ಭದಲ್ಲಿ ನಡೆದ ಬೀಳ್ಕೊಡುಗೆ ಸಂದರ್ಭದಲ್ಲಿ ಶಾಸ್ತ್ರಿಗಳೂ ಇಚ್ಛೆಪಟ್ಟು ಹೋದಾಗ ಅವರನ್ನು ಗೌರವದಿಂದ ವೇದಿಕೆಯಲ್ಲಿ ಕೂರಿಸಿದ್ದರು. ಉಷಾಲತಾ ಅವರಿಗೆ ಶಾಸ್ತ್ರಿಗಳ ಬಗ್ಗೆ ಗೌರವ ಮತ್ತು ಆತ್ಮೀಯತೆಯ ಸಂಬಂಧವಿತ್ತು. ಅಂದು ಮಾತನಾಡಿದವರೆಲ್ಲರೂ ಶಾಸ್ತ್ರಿಗಳು ಉಷಾಲತಾ ಅವರ ಪಿತೃಸಮಾನರೆಂದು ಹೇಳಿದ್ದರು. ಶಾಸ್ತ್ರಿಗಳ ಮಾತನಾಡುವ ಸರದಿ ಬಂದಾಗ ಅವರು ಹೇಳಿದ್ದರು, "ಮಾತನಾಡಿದವರೆಲ್ಲರೂ ಒಂದು ತಪ್ಪು ಮಾಡಿದ್ದಾರೆ. ಉಷಾಲತಾ ನನ್ನ ಮಗಳ ಸಮಾನ ಎಂದಿದ್ದಾರೆ. ಅದು ತಪ್ಪು. ಅವರು ನನ್ನ ತಾಯಿ".
ಎಸ್.ಎಲ್. ಭೈರಪ್ಪನವರಿಗೆ ಸರಸ್ವತೀ ಸಮ್ಮಾನ್ ಪ್ರಶಸ್ತಿ ಬಂದಾಗ ಅವರನ್ನು ಅಭಿನಂದಿಸಲು ತುಡಿದವರು ಶಾಸ್ತ್ರಿಗಳು. ಭೈರಪ್ಪನವರು 'ಹಿರಿಯರು ತೊಂದರೆ ತೆಗೆದುಕೊಳ್ಳಬಾರದೆಂದೂ, ತಾವೇ ಬರುವುದಾಗಿಯೂ' ತಿಳಿಸಿದರೂ ಅವರನ್ನು ಕಾಣಲು ಮೈಸೂರಿಗೇ ಹೋಗಿದ್ದರು. ಭೈರಪ್ಪನವರೂ ಶಾಸ್ತ್ರಿಗಳ ಬಗ್ಗೆ ಗೌರವಭಾವನೆ ಹೊಂದಿದ್ದು ಎರಡೆರಡು ಸಲ ಶಾಸ್ತ್ರಿಗಳ ಗುಡಿಸಲಿಗೆ ಬಂದು, ಅಲ್ಲೇ ಕೆಲವು ದಿನಗಳು ಕಳೆದಿದ್ದರು. ಅನಗತ್ಯ ಮಾತುಗಳಿಗಿಂತ ಮೌನದ ಮಹತ್ವ ಸಾರುವ ಭೈರಪ್ಪನವರ ಗೃಹಭಂಗ ಕಾದಂಬರಿಯಲ್ಲಿ ಬರುವ ಮಹದೇವಯ್ಯನವರು ನಿಜವಾಗಲೂ ಇದ್ದವರು. ಮಹದೇವಯ್ಯನವರು ಆಗಾಗ ಹೇಳುತ್ತಿದ್ದ ಮಾತು, "ಉತ್ಸವ ದೇವರು ಊರಾಡಿದಷ್ಟೂ ಮೂಲ ದೇವರ ಮಹಿಮೆ ಕಡಿಮೆ ಆಗುತ್ತೆ". (ಭೈರಪ್ಪನವರು ತಮ್ಮ ನಾಭಿಂದ ಕುತ್ತಿಗೆಯವರೆಗೆ ಕೈಯಾಡಿಸಿ ಅದನ್ನು ಮೂಲದೇವರು ಎಂಬಂತೆ ಸಂಕೇತಿಸಿದ್ದರಂತೆ). ಅನೇಕ ಹಿರಿಯರು, ಜಸ್ಟಿಸ್ ಎಂ.ಎನ್.ವೆಂಕಟಾಚಲಯ್ಯ, ನಿಟ್ಟೂರರು, ಕರೀಂಖಾನರು, ಹಿರಿಯ ಅಧಿಕಾರಿಗಳು, ಸಾಹಿತಿಗಳು, ಮಠಾಧಿಪತಿಗಳು ಇವರೊಡನೆ ಆತ್ಮೀಯ ಮತ್ತು ಗೌರವಭಾವನೆಯ ಸಂಬಂಧ ಹೊಂದಿದ್ದು ಅವರುಗಳ ಭೇಟಿಯ ಕ್ಷಣಗಳ ವಿವರಗಳು ದೊಡ್ಡವರ ದೊಡ್ಡತನದ ದರ್ಶನ ಮಾಡಿಸುತ್ತವೆ. ಶಾಸ್ತ್ರಿಗಳ ನಡೆ ನುಡಿಗಳು ಅವರ ಕಲ್ಪನೆಯ ವಿದ್ಯಾಮಂದಿರದ ಕಟ್ಟಡಗಳು, ಹಾಸ್ಟೆಲುಗಳು, ಮಕ್ಕಳ ಊಟದ ವ್ಯವಸ್ಥೆಗೆ ಹಣ ಹೊಂದಿಸಲು ನೆರವಾದ ಕುರಿತ ವಿವರಗಳು ಗಮನ ಸೆಳೆಯುತ್ತವೆ. ವಿಶೇಷವಾಗಿ ಅವರ 'ಯೇಗ್ದಾಗೆಲ್ಲಾ ಐತೆ' ಪುಸ್ತಕದ ಪ್ರಭಾವ ಸಹಾಯಕವಾಗಿ ಎದ್ದು ಕಾಣುತ್ತಿದ್ದ ಅಂಶವೆಂದರೆ ತಪ್ಪಲ್ಲ. ನಿಗದಿತವಾಗಿ ಧನಸಹಾಯ ಮಾಡುವವರ ದೊಡ್ಡ ಸಮೂಹವೇ ಅವರ ಬೆನ್ನಿಗಿತ್ತು.
ಶಾಸ್ತ್ರಿಗಳು ತಮ್ಮ ಇಳಿವಯಸ್ಸಿನಲ್ಲಿ ಶಸ್ತ್ರಕ್ರಿಯೆ ನಂತರದಲ್ಲಿ ತಂಗಿಯ ಮಗ ರವಿ ಬೆಳಗೆರೆಯ ಮನೆಯಲ್ಲಿ ಇರಲು ಪ್ರಾರಂಭಿಸಿದ್ದು ಹಲವರಿಗೆ ಇಷ್ಟವಾಗಿರಲಿಲ್ಲ. ಶಾಸ್ತ್ರಿಗಳ ಮನೋಭಾವಕ್ಕೂ ರವಿ ಬೆಳಗೆರೆಯವರ ಸ್ವಭಾವಕ್ಕೂ ಅಜಗಜಾಂತರ ವೈರುಧ್ಯವಿದ್ದುದೇ ಇದಕ್ಕೆ ಕಾರಣ. "ಶಾಸ್ತ್ರಿಗಳು ರವಿ ಬೆಳಗೆರೆಯ ಮನೆಯಲ್ಲಿ ಇದ್ದಾರೆಯೇ?" ಎಂದು ಆಶ್ಚರ್ಯ ಪಡುವ, ಆಕ್ಷೇಪಿಸುವ ಮಂದಿಗೆ ಕೊರತೆಯಿರಲಿಲ್ಲ. ರವಿ ಬೆಳಗೆರೆ ಮತ್ತು ಶಾಸ್ತ್ರಿಗಳ ಅಂತರ್ವೈಯುಕ್ತಿಕ ಸಂಬಂಧ ಕುರಿತು ಒಂದು ಅಧ್ಯಾಯವೇ ಇದೆ. ಈ ಬಗ್ಗೆ ಪುಸ್ತಕ ಓದಿಯೇ ತಿಳಿಯುವುದು ಒಳ್ಳೆಯದು. ಒಂದಂತೂ ನಿಜ, ಶಾಸ್ತ್ರಿಗಳ ಆಯಸ್ಸು ಹತ್ತು ವರ್ಷ ಹೆಚ್ಚಾಗಲು ಅವರು ರವಿಯವರ ಮನೆಯಲ್ಲಿದ್ದುದೇ ಕಾರಣವೆಂದು ಲೇಖಕರ ಮತ್ತು ಅವರನ್ನು ಅರಿತವರ ಖಚಿತ ಅಭಿಪ್ರಾಯ. ಅಂತ್ಯಕಾಲ ಸಮೀಪಿಸಿದ್ದ ದಿನದಲ್ಲಿ ಒಂದು ದಿನ ಲೇಖಕರಿಂದ ಡಿವಿಜಿಯವರ 'ವನಸುಮ' ಪದ್ಯವನ್ನು ಓದಿಸಿ ಹೇಳಿಸಿ, ರವಿಯವರಿಗೆ ಆ ಪದ್ಯದ ಪ್ರತಿ ಕೊಡುತ್ತಾ, "ನೋಡಪ್ಪಾ, ಹೆಚ್ಚಿಗೆ ಏನೂ ಹೇಳುವುದಿಲ್ಲ. ಇದರಂತೆ ಬಾಳಬೇಕು ನೀನು" ಎಂದಿದ್ದರು. ರವಿ ಭಾವುಕರಾಗಿ, "ನಿನ್ನ ಕಾಲ ಬಳಿ ಜಾಗ ಕೊಡು, ನನಗೆ ಇನ್ನೇನೂ ಬೇಡ" ಎಂದು ಕಣ್ಣೀರು ಸುರಿಸಿದ್ದರು.
ಗಾಂಧೀಜಿಯವರ ಸತ್ಯ, ಅಹಿಂಸೆ, ಆಸ್ತೇಯ, ಇತ್ಯಾದಿ ಏಕಾದಶವ್ರತಗಳು ಶಾಸ್ತ್ರಿಯವರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. ಇವುಗಳಿಗೆ ಪೂರಕವಾಗಿ ಅವರ ಜೀವನದ ವಿವಿಧ ಘಟನೆಗಳನ್ನು ಪೋಣಿಸಿ ನಿರೂಪಿಸಿರುವುದು ಮನಸ್ಸಿಗೆ ಹಿತವೆನಿಸುತ್ತವೆ. ಜಾತಿ, ವರ್ಗ, ವರ್ಣಬೇಧ ಮಾಡದ ಶಾಸ್ತ್ರಿಯವರ ಬಗ್ಗೆ ತಿಳಿಸಿರುವ ಈ ಘಟನೆ ಅವರ ಬಗ್ಗೆ ಪೂಜ್ಯಭಾವ ಮೂಡಿಸುತ್ತದೆ. ಮೀರಾಸಾಬಿಹಳ್ಳಿಯಲ್ಲಿ ಶಾಸ್ತ್ರಿಯವರು ಶಿಕ್ಷಕರಾಗಿದ್ದಾಗ ಅವರ ಜೊತೆ ಶಿಕ್ಷಕರಾಗಿದ್ದ ಮಾದಯ್ಯ ಒಬ್ಬ ದಲಿತ ವರ್ಗಕ್ಕೆ ಸೇರಿದವರು. ಅವರು ನಿವೃತ್ತರಾದ ನಂತರದಲ್ಲಿ ಅವರಿಗೆ ಸೌಖ್ಯವಿಲ್ಲವೆಂದು ತಿಳಿದು ಶಾಸ್ತ್ರಿಗಳು ಅವರನ್ನು ಕಾಣಲು ಅವರಿದ್ದ ಹಳ್ಳಿಗೆ ಹೋದರು. ಸಂತೋಷಪಟ್ಟ ಮಾದಯ್ಯ ಸಂಕೋಚದಿಂದ ತಮಗೆ ಒಂದು ಆಸೆಯಿದೆಯೆಂದು ಹೇಳಿದಾಗ ಶಾಸ್ತ್ರಿಯವರು 'ಹೇಳಿ ಮಾದಯ್ಯ, ಯಾಕೆ ಸಂಕೋಚ' ಎಂದಿದ್ದರು. ಶಾಸ್ತ್ರಿಯವರೊಂದಿಗೆ ಊಟ ಮಾಡುವ ಆಸೆ ವ್ಯಕ್ತಪಡಿಸಿದಾಗ. ಜಾತೀಯತೆ ತೋರದಿದ್ದ ತಮ್ಮನ್ನು ಕೇಳಲು ಸಂಕೋಚವೇಕೆಂದು ಅರ್ಥವಾಗದ ಶಾಸ್ತ್ರಿಯವರು 'ಅದಕ್ಕೇನಂತೆ? ತಾಯಿ, ಅಡುಗೆ ಮಾಡಿ. ನಾನು ಇಲ್ಲೇ ಊಟ ಮಾಡುತ್ತೇನೆ' ಎಂದಿದ್ದರು. ತೀವ್ರ ಅಸ್ವಸ್ಥರಾಗಿದ್ದ ಮಾದಯ್ಯನವರಿಗೆ ಶಾಸ್ತ್ರಿಯವರೇ ಕಲಸಿ ಅವರಿಗೆ ಪ್ರೀತಿಯಿಂದ ಊಟ ಮಾಡಿಸಿ, ತಾವೂ ಊಟ ಮಾಡಿ ಅವರ ಸಂತೃಪ್ತಿಗೆ ಕಾರಣರಾಗಿದ್ದರು. ಮುಂದೆ ನಾಲ್ಕೇ ದಿನದಲ್ಲಿ ಮಾದಯ್ಯನವರು ತೀರಿಹೋದರೆಂದು ಸುದ್ದಿ ಬಂದು ಶಾಸ್ತ್ರಿಯವರು ಮತ್ತೆ ಅವರ ಮನೆಗೆ ಹೋದರು. ಮಾದಯ್ಯನವರ ಮಡದಿ, "ನಿಮ್ಮ ಕೈಯಿಂದ ಊಟ ಮಾಡಿದ್ದೇ ಕೊನೆ ಸಾರ್. 'ದೇವರ ಕೈಯಲ್ಲಿಯೇ ಪ್ರಸಾದ ಸ್ವೀಕರಿಸಿದ ಮೇಲೆ ಮತ್ತೆ ಊಟ ಮಾಡಲೇ?' ಎಂದು ನಂತರ ಊಟ ಮಾಡದೇ ಶಾಂತಿಯಿಂದ ಹೋಗಿಬಿಟ್ಟರು ಸಾರ್" ಎಂದು ಹೇಳಿದ್ದರು. ಈ ಆತ್ಮಬಂಧ ವಿವರಿಸಲು ಸಾಧ್ಯವಿದೆಯೇ?
ಲೇಖಕರು ಅಭಿಪ್ರಾಯ ಪಡುವಂತೆ ಆಚರಿಸುವ ತತ್ವಗಳಿಂದ ವ್ಯಕ್ತಿ ದೊಡ್ಡವನಾಗುವುದಿಲ್ಲ. ಉನ್ನತ ವ್ಯಕ್ತಿಗಳಲ್ಲಿ ತತ್ವಗಳು ಪ್ರಕಾಶಿಸುತ್ತವೆ. ಒಟ್ಟಾರೆಯಾಗಿ, 'ನಾನಿದ್ದೂ ನನ್ನದೇನಿಲ್ಲ' ಕೃತಿಯು ಅವರ ಕುರಿತ ನೆನಪುಗಳ, ಘಟನೆಗಳ ಮೂಲಕ ಕೃಷ್ಣಶಾಸ್ತ್ರಿಗಳ ಗುಣಗಳ ಅನಾವರಣ ಮಾಡುವಲ್ಲಿ ಸಾಫಲ್ಯತೆ ಪಡೆದಿದೆ. ಓದಬೇಕಾದ ಪುಸ್ತಕವಿದು.
-ಕ.ವೆಂ.ನಾಗರಾಜ್.
ಗಣೇಶ on February 10, 2014 - 11:56pm
ಪ್ರತ್ಯುತ್ತರಅಳಿಸಿಪುಸ್ತಕ ಪರಿಚಯದಿಂದ ಬೆಳಗೆರೆ ಕೃಷ್ಣಶಾಸ್ತ್ರಿಗಳ ಬಗ್ಗೆ ಇನ್ನಷ್ಟು ವಿವರ ತಿಳಕೊಂಡೆ. ಪುಸ್ತಕವನ್ನೂ ಒಮ್ಮೆ ಓದಬೇಕು. ಧನ್ಯವಾದಗಳು ಕವಿನಾಗರಾಜರಿಗೆ.
kavinagaraj on February 11, 2014 - 8:16am
ನಿಜ, ಗಣೇಶರೇ. ತಿಳಿದಷ್ಟೂ ತಿಳಿದುಕೊಳ್ಳುವುದೂ ಮತ್ತಷ್ಟು ಇರುತ್ತದೆ. ವಂದನೆಗಳು.
.
nageshamysore on February 11, 2014 - 3:18am
ಸೊಗಸಾದ ಪರಿಚಯ ಲೇಖನ ಕವಿಗಳೆ. ತುಂಬಾ ಅತ್ಮೀಯವಾಗಿ ಮೂಡಿ ಬಂದಿದೆ. ಪುಸ್ತಕ ಮತ್ತು ವ್ಯಕ್ತಿತ್ವ ಎರಡು ಒಟ್ಟಾಗೆ ಪ್ರತಿಬಿಂಬಿಸಿದ ರೀತಿ ಚೆನ್ನಾಗಿದೆ.
kavinagaraj on February 11, 2014 - 8:17am
ಕೃಷ್ಣಶಾಸ್ತ್ರಿಗಳ ವ್ಯಕ್ತಿತ್ವವೇ ಪುಸ್ತಕದ ಜೀವಾಳ. ವಂದನೆಗಳು, ನಾಗೇಶರೇ.
Jayaprakash Sumana
ಅಳಿಸಿShatha Shatha NaMan !
ಹರಿಹರಪುರ ಶ್ರೀಧರ್ ನಾನು ಮಾಡಿದ್ದ ಕೃಷಾಸ್ತ್ರಿಗಳ ಸಂದರ್ಶನ ಇಲ್ಲಿದೆ http://avadoota.blogspot.in/2012/07/1.html
ಅವಧೂತ: ಬೆಳೆಗೆರೆ ಕೃಷ್ಣ ಶಾಸ್ತ್ರಿಗಳೊಡನೆ ಮಾತುಕತೆ ಭಾಗ-1
avadoota.blogspot.com
ಈ ಪುಣ್ಯಭೂಮಿಯು ಅದೆಷ್ಟು ಜನ ಸಿದ್ಧ ಪುರುಷರ, ಅವಧೂತರ, ಸಾದು ಸಂತರ ಪಾದ ಸ್ಪರ್ಷದಿಂದ ಪುನೀತ ವಾಗಿದೆಯೋ! ಅವರಲ್ಲಿ ಅಲ್ಲೊಬ್ಬ ಇಲ್ಲೊಬ್ಬರು ಮನುಷ್ಯನ ಕಣ್ಣಿಗೆ ಬೀಳುತ್ತಾರೆ. ಕೆಲವರನ್ನು ಜನರು ಗುರುತಿಸುತ್ತಾರೆ. ಕೆಲವರನ್ನು ಗುರುತಿಸುವುದೇ ಇಲ್ಲ! ಹಲವರನ್ನು ಸಮಾಜವು ಅವರ ಭೌತಿಕ ಶರೀರವು ಇಲ್ಲವಾದಮೆಲೆ ಗುರುತಿಸುತ್ತದೆ.ನನ್ನ ಕಣ್ಣಿಗೆ ಬಿದ್ದ ಕೆಲವರ ಕಿವಿಗೆ ಕೇಳಿದ...