ಅವರೊಬ್ಬರು ಗ್ರಂಥಪಾಲಕರಾಗಿದ್ದರು. ಸಾಕಷ್ಟು ಸಂಬಳವೂ ಬರುತ್ತಿತ್ತು. ಆದರೆ ಅವರು ತಮ್ಮ ವೈಯಕ್ತಿಕ ಖರ್ಚು-ವೆಚ್ಚಗಳಿಗಾಗಿ ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಒಮ್ಮೊಮ್ಮೆ ಹೋಟೆಲ್ಲಿನಲ್ಲಿ ಮಾಣಿಯಾಗಿಯೂ ಕೆಲಸ ಮಾಡಿ ಸಿಗುವ ಸ್ವಲ್ಪ ಹಣದಿಂದ ತೃಪ್ತರಾಗುತ್ತಿದ್ದರು. ಇದನ್ನು ನಂಬಲು ಕಷ್ಟವೆನಿಸಿದರೂ ನಂಬಲೇಬೇಕಾದ ಸತ್ಯವಾಗಿದೆ. ಕೈತುಂಬ ಸಂಬಳ ಬರುವ ಕೆಲಸವಿದ್ದರೂ ಅವರು ಏಕೆ ಈ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದರು? ಏಕೆಂದರೆ ಅವರು ತಮಗೆ ಬರುತ್ತಿದ್ದ ಪೂರ್ಣ ಸಂಬಳವನ್ನು ದೀನ ದಲಿತರ ಸೇವೆಯ ಸಲುವಾಗಿ ಖರ್ಚು ಮಾಡುತ್ತಿದ್ದರು, ಬಿಡಿಗಾಸನ್ನೂ ತಮಗಾಗಿ ಉಳಿಸಿಕೊಳ್ಳುತ್ತಿರಲಿಲ್ಲ. ಬ್ರಹ್ಮಚಾರಿಯಾಗಿದ್ದ ಇವರು ತಮ್ಮ ಒಬ್ಬರ ಖರ್ಚು ವೆಚ್ಚಕ್ಕೆ ಅಗತ್ಯವಾದಷ್ಟು ಹಣಕ್ಕಾಗಿ ಮಾತ್ರ ಇಂತಹ ಸಣ್ಣ ಕೆಲಸಗಳನ್ನು ಆಶ್ರಯಿಸುತ್ತಿದ್ದರು. ವಿಶ್ವಸಂಸ್ಥೆ ಈ ವ್ಯಕ್ತಿಯನ್ನು '೨೦ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು ಪರಿಗಣಿಸಿದೆ. ಅಮೆರಿಕಾ ಇವರನ್ನು 'ಸಹಸ್ರಮಾನದ ಪುರುಷ'ನೆಂದು ಗೌರವಿಸಿದೆ. ಭಾರತ ಸರ್ಕಾರ ಇವರನ್ನು ೧೯೯೦ರಲ್ಲಿ 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು ಸನ್ಮಾನಿಸಿದೆ. ಇವರನ್ನು 'ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು' ಎಂದು ಗುರುತಿಸಲಾಗಿದೆ. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು 'ಪ್ರಪಂಚದ ಅತ್ಯುನ್ನತ (noblest) ಉದಾತ್ತರಲ್ಲೊಬ್ಬರು' ಎಂದು ಅಭಿದಾನವಿತ್ತು ಗೌರವಿಸಿದೆ. ರೋಟರಿ ಇಂಟರ್‌ನ್ಯಾಷನಲ್ ೨೦೧೧ರಲ್ಲಿ ಅವರನ್ನು ಜೀವಮಾನದ ಸಾಧನೆಗಾಗಿ ಸನ್ಮಾನಿಸಿದೆ. ಅವರೇ ಪಾಲಮ್ ಕಲ್ಯಾಣ ಸುಂದರಮ್.
ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಶೀವೈಕುಂಠಮ್‌ನಲ್ಲಿನ ಕಲಾಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಮಾಡುತ್ತಿದ್ದ ಕೆಲಸದಿಂದ ಬರುತ್ತಿದ್ದ ಸಂಬಳದ ಹಣವನ್ನು ಪೂರ್ಣವಾಗಿ ದೀನದಲಿತರ ಸೇವೆಗಾಗಿ ಖರ್ಚು ಮಾಡಿದ ವ್ಯಕ್ತಿ ಬಹುಷಃ ಇವರೊಬ್ಬರೇ ಇರಬೇಕು. ಪ್ರಶಸ್ತಿ, ಬಹುಮಾನ, ಗೌರವಗಳಿಗಾಗಿ ಹಂಬಲಿಸುವ, ಲಾಬಿ ನಡೆಸುವ ಗಣ್ಯರೆನಿಸಿಕೊಂಡ ಹಲವರನ್ನು ಕಾಣುತ್ತಿರುತ್ತೇವೆ. ಅಪಮಾರ್ಗದಿಂದ ಪಡೆದ ಮತ್ತು ಕೊಟ್ಟ ಪ್ರಶಸ್ತಿಗಳು ವಿವಾದದ ಬಿರುಗಾಳಿಯೆಬ್ಬಿಸುತ್ತದೆ. ಪ್ರಶಸ್ತಿಯ ಮೌಲ್ಯವೇ ಕುಸಿಯುತ್ತದೆ. ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದು ಕೋಟಿಗಟ್ಟಲೆ ಸರ್ಕಾರಿ ಹಣವನ್ನು ಲೂಟಿ ಹೊಡೆಯುವುದನ್ನೇ ಕಾಯಕವಾಗಿಸಿಕೊಂಡಿದ್ದ 'ಜನಸೇವೆ' ಮಾಡುವ ಖದೀಮರನ್ನೂ ಕಂಡಿದ್ದೇವೆ. ಆದರೆ, ಈ ವಿಚಿತ್ರ ವ್ಯಕ್ತಿಯನ್ನು ನೋಡಿ. ಇವರು ತಮಗೆ 'ಸಹಸ್ರಮಾನದ ಪುರುಷ'ರೆಂಬ ಗೌರವದ ಜೊತೆಗೆ ಬಂದ ೩೦ ಕೋಟಿ ರೂ. ಹಣವನ್ನೂ ಸಹ ಬಿಡುಗಾಸೂ ಉಳಿಸಿಕೊಳ್ಳದೆ ಎಂದಿನಂತೆ ಸಮಾಜಕ್ಕೇ ಧಾರೆಯೆರೆದುಬಿಟ್ಟ ಈ ಪುಣ್ಯಾತ್ಮ. ಇಂತಹವರಿಂದ ಪ್ರಶಸ್ತಿಗಳಿಗೂ ಗೌರವ ಬರುತ್ತದೆ. ಇವರಿಗೆ ಇವರೇ ಸಾಟಿ, ಅನ್ಯರಿಲ್ಲ. ಸೂಪರ್ ಸ್ಟಾರ್ ರಜನಿಕಾಂತ್ ಇವರನ್ನು ತಮ್ಮ ದತ್ತು ತಂದೆಯನ್ನಾಗಿಸಿಕೊಂಡಿದ್ದಾರೆ.
ಕಲ್ಯಾಣ ಸುಂದರಮ್ ಅವರು ಸಮಾಜಸೇವೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡುದಕ್ಕೆ ಕಾರಣವಾದ ಘಟನೆ ಸ್ವಾರಸ್ಯಕರವಾಗಿದೆ. ಅದು ಭಾರತ-ಚೀನಾ ಯುದ್ಧ ನಡೆಯುತ್ತಿದ್ದ ಸಂದರ್ಭ. ಇಡೀ ದೇಶವೇ ಒಂದಾಗಿ ಎದ್ದು ನಿಂತಿದ್ದ ಸಮಯ. ಜನರು ನಾಮುಂದು-ತಾಮುಂದು ಎಂಬಂತೆ ತಮ್ಮ ತನು-ಮನ-ಧನಗಳನ್ನು ಅರ್ಪಿಸುತ್ತಿದ್ದ ಸಮಯ. ಆಗ ರಾಜಕಾರಣಿಗಳ ನೈತಿಕತೆ ಇಷ್ಟೊಂದು ಪಾತಾಳ ಕಂಡಿರಲಿಲ್ಲ. ರಾಜಕಾರಣಿಗಳನ್ನು ಜನರು ನಂಬುತ್ತಿದ್ದ ಕಾಲ. ಅವರುಗಳಲ್ಲೂ ನಂಬಿಕೆ ಉಳಿಸಿಕೊಂಡಿದ್ದವರಿದ್ದರು. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜರು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾಗ ಕಲ್ಯಾಣಸುಂದರಮ್ ಆಗಿನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದರು. ದೇಶಭಕ್ತಿ ಪ್ರೇರಿತ ಹುಡುಗ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದು ಕಾಮರಾಜರಿಗೆ ಯುದ್ಧ ಸಂತ್ರಸ್ತರ ನಿಧಿಗೆ ಅರ್ಪಿಸಿದ. ನಂತರದಲ್ಲಿ ಆನಂದವಿಕಟನ್ ಪತ್ರಿಕೆ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್‌ರವರನ್ನು ಕಂಡು ತಾನು ಕೊರಳಲ್ಲಿದ್ದ ಚಿನ್ನದ ಸರವನ್ನು ಸಂತ್ರಸ್ತರ ನಿಧಿಗೆ ಕೊಟ್ಟುದನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿದ. ಆಗ ಬಾಲಸುಬ್ರಹ್ಮಣ್ಯಮ್ ಅವರು, "ನೀನು ಸ್ವತಃ ದುಡಿದು ದಾನ ಮಾಡಿದಾಗ ಹೇಳು, ಪ್ರಕಟಿಸುವೆ" ಎಂದು ನಿಷ್ಠುರವಾಗಿ ಹೇಳಿ ಆ ಹುಡುಗನನ್ನು ವಾಪಸ್ ಕಳಿಸಿದರು. ಇದು ಪವಾಡವನ್ನೇ ಮಾಡಿತು. ಅವನ ಬಾಳಿನ ದಿಕ್ಕನ್ನೇ ಬದಲಿಸಿತು. ಆ ಹುಡುಗ ಅದನ್ನು ಸವಾಲಾಗಿ ಸ್ವೀಕರಿಸಿದ, ದಿಟ್ಟ ನಿರ್ಧಾರ ಮಾಡಿದ. ಅದೇ ಮುಂದೆ ಅವನನ್ನು ಗ್ರಂಥಪಾಲಕನಾಗಿ ಕೆಲಸಕ್ಕೆ ಸೇರಿದ ನಂತರ ಬಂದ ಪ್ರತಿ ತಿಂಗಳ ಪೂರ್ಣ ಹಣವನ್ನು ಸಮಾಜೋಪಯೋಗಿ ಕಾರ್ಯಕ್ಕೆ ವಿನಿಯೋಗಿಸುವಂತೆ ಮಾಡಿದ್ದು. ಸುಮಾರು ೩೦ ವರ್ಷಗಳ ಕಾಲ ಸಲ್ಲಿಸಿದ ಸೇವೆಯಲ್ಲಿ ಗಳಿಸಿದ ಎಲ್ಲಾ ಹಣವೂ ಸಮಾಜಕ್ಕೆ ಅರ್ಪಿಸಿದ ಆ ಪುಣ್ಯಾತ್ಮ. ಇಂತಹ ಅಸಾಮಾನ್ಯ ವ್ಯಕ್ತಿ ಸಾಮಾನ್ಯನಾಗೇ ಉಳಿದುದು ವಿವರಣೆಗೆ ನಿಲುಕದ ಸಂಗತಿ. ೧೯೯೦ರಲ್ಲಿ ಪೆನ್ಶನ್ ಮತ್ತು ನಿವೃತ್ತಿ ಸಂಬಂಧದ ಹಣ ಸುಮಾರು ೧೦ ಲಕ್ಷ ರೂ.ಗಳು ಬಂದಾಗ ಆ ಎಲ್ಲಾ ಹಣವನ್ನೂ ತಿರುನಲ್ವೇಲಿಯ ಕಲೆಕ್ಟರರ ನಿಧಿಗೆ ಕೊಟ್ಟು ನಿರಾಳರಾದ ಅವರನ್ನು, ಕಲೆಕ್ಟರರು ಅವರ ವಿರೋಧವನ್ನೂ ಲೆಕ್ಕಿಸದೆ ಸನ್ಮಾನಿಸಿದ್ದರು. ತಿರುನಲ್ವೇಲಿಯ ವೈದ್ಯಕೀಯ ಕಾಲೇಜಿಗೆ ಸತ್ತ ನಂತರದಲ್ಲಿ ತಮ್ಮ ಕಣ್ಣು ಮತ್ತು ದೇಹದಾನ ಪಡೆಯಲು ಅನುಮತಿಸಿ ಬರೆದುಕೊಟ್ಟಿರುವವರಿವರು. ಪಾಲಮ್ ಎಂಬ ಹೆಸರಿನ ಸಮಾಜ ಕಲ್ಯಾಣ ಸಂಸ್ಥೆ ಸ್ಥಾಪಿಸಿರುವ ಅವರು ಅದರ ಮೂಲಕ ಸಮಾಜಸೇವೆ ಮಾಡುತ್ತಿದ್ದಾರೆ. ಈ ಸಂಸ್ಥೆ ದಾನಿಗಳು ಮತ್ತು ಫಲಾನುಭವಿಗಳ ನಡುವಿನ ಕೊಂಡಿಯಂತೆ ಕೆಲಸ ಮಾಡುತ್ತಿದ್ದು, ದಾನಿಗಳು ಕೊಡುವ ವಸ್ತುಗಳು ಮತ್ತು ಹಣ ಯೋಗ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸಾದ ಚಂಡಮಾರುತ ಸಂತ್ರಸ್ತರಿಗೆ, ಮಹಾರಾಷ್ಟ್ರ ಮತ್ತು ಗುಜರಾತಿನ ಭೂಕಂಪ ಪೀಡಿತರಿಗೆ ಈ ಸಂಸ್ಥೆ ಸಹಾಯಹಸ್ತ ಚಾಚಿದೆ.
ತಿರುನಲ್ವೇಲಿ ಜಿಲ್ಲೆಯ ಮೇಲಕರಿವೇಲಾಂಕುಲಂನಲ್ಲಿ ೧೯೫೩ರ ಆಗಸ್ಟ್ ತಿಂಗಳಿನಲ್ಲಿ ಜನಿಸಿದ ಕಲ್ಯಾಣಸುಂದರಮ್ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ಅವರಿಗೆ ಬಡವರ ಸೇವೆ ಮಾಡಲು ಪ್ರೇರಿಸಿದ್ದು ಅವರ ತಾಯಿ. ಲೈಬ್ರರಿ ಸೈನ್ಸಿನಲ್ಲಿ ಚಿನ್ನದ ಪದಕ ಗಳಿಸಿದ್ದ ಅವರು ಕೆಲಸ ಮಾಡುತ್ತಿದ್ದ ಕ್ಷೇತ್ರದಲ್ಲೂ ಅನುಪಮ ಸೇವೆ ಸಲ್ಲಿಸಿದವರು. ಮದ್ರಾಸ್ ವಿಶ್ವವಿದ್ಯಾಲಯದ ಸಾಹಿತ್ಯ ಮತ್ತು ಇತಿಹಾಸ ವಿಷಯಗಳಲ್ಲಿ ಮಾಸ್ಟರ್ ಪದವಿ ಹೊಂದಿದ್ದಾರೆ. ಗ್ರಂಥಪಾಲನೆ ಮಾಡುವ ಕ್ರಮದ ಅಭಿವೃದ್ಧಿಗೆ ಮಾರ್ಗಸೂಚಿಗಳನ್ನು ತೋರಿದವರು. ಅವರು ಖಾದಿ ತೊಡಲು ಪ್ರಾರಂಭಿಸಿದ್ದಕ್ಕೂ ಹಿನ್ನೆಲೆಯಿದೆ. ಗಾಂಧೀಜಿ ವಿಚಾರಗಳ ಕುರಿತು ಅವರು ಕಾಲೇಜಿನಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕಿತ್ತಂತೆ. ಗಾಂಧಿ ಕುರಿತು ಮಾತನಾಡುವಾಗ ಬೆಲೆ ಬಾಳುವ ಬಟ್ಟೆ ಧರಿಸಿ ಮಾತನಾಡುವುದು ಸರಿಕಾಣದೆ ಅವರು ಖಾದಿ ತೊಡಲು ಆರಂಭಿಸಿದರು. ಇತರರಿಗೆ ಏನಾದರೂ ಹೇಳಬೇಕಾದರೆ ಅದರಂತೆ ಮೊದಲು ನಡೆದು ಮಾದರಿಯೆನಿಸುವ ಸಾಧಕರ ಸಾಲಿನಲ್ಲಿ ಕಲ್ಯಾಣಸುಂದರಮ್ ಸೇರುತ್ತಾರೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅವರು ಅಚ್ಚುಮೆಚ್ಚಿನವರಾಗಿದ್ದು, ಅವರಲ್ಲಿ ಅನೇಕರು ಪಾಲಮ್ ಸಂಸ್ಥೆಗೆ ಸೇರಿದ್ದಾರೆ. ರಾಷ್ಟ್ರೀಕೃತ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ ಎಲ್ಲಾ ಸ್ತರದ ಜನರಿಗೆ ಅದರ ಉಪಯೋಗ ಕಲ್ಪಿಸುವ ಒಂದು ಗುರಿಯನ್ನೂ ಸಹ ಅವರ ಸಂಸ್ಥೆ ಹೊಂದಿದೆ. "ಕ್ರಿಯಾಸಿದ್ಧಿಃ ಸತ್ವೇಭವತಿ ಮಹತಾಂ ನೋಪಕರಣೇ."
ಸರಳ ಜೀವನ, ಉನ್ನತ ಚಿಂತನೆಯ ಸಾಕಾರ ರೂಪ ಕಲ್ಯಾಣಸುಂದರಮ್. ಸಮಾಜಕ್ಕೆ ನಾವು ಏನನ್ನಾದರೂ ಕೊಡಬೇಕು. ಸಾಮಾಜಿಕ ಒಳಿತಿಗೆ ಪ್ರತಿಯೊಬ್ಬರೂ ತಮ್ಮ ಪಾಲಿನ ಕಾಣಿಕೆ ಕೊಟ್ಟರೆ ಬದಲಾವಣೆ ಸಾಧ್ಯವೆಂದು ನಂಬಿರುವ ಅವರು ಈ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹೆಸರಿಗೆ ತಕ್ಕಂತೆ ಲೋಕಕಲ್ಯಾಣಕಾರಿಯಾಗಿರುವ, ಸುಂದರ ವಿಚಾರಗಳನ್ನು ಕಾರ್ಯರೂಪಕ್ಕಿಳಿಸಿರುವ ಕಲ್ಯಾಣಸುಂದರಮ್ ನಮ್ಮೆಲ್ಲರಿಗೆ ಆದರ್ಶವಾಗಲಿ. ಕೋಟಿ ಕೋಟಿ ಹಣ ಬಾಚುವ, ದೋಚುವ ರಾಜಕಾರಣಿಗಳು, ನುಂಗಣ್ಣರನ್ನು ವೈಭವೀಕರಿಸುವ ಜನರು ಮತ್ತು ಮಾಧ್ಯಮಗಳು ಇಂತಹವರ ಕಾರ್ಯಗಳ ಮೇಲೆ ಬೆಳಕು ಚೆಲ್ಲಲಿ. 'ರಾಷ್ಟ್ರಾಯ ಸ್ವಾಹಾ ರಾಷ್ಟ್ರಾಯ ಇದಂ ನ ಮಮ" - (ದೇಶಕ್ಕಾಗಿ ನನ್ನ ಸೇವೆ ಅರ್ಪಿತ, ಇದು ದೇಶಕ್ಕಾಗಿ, ನನಗಲ್ಲ) ಎಂಬ ನುಡಿಯ ಸಾರ್ಥಕ ರೂಪವಾದ ಈ ಸಹಸ್ಯಮಾನದ ಅಪರೂಪದ ವ್ಯಕ್ತಿತ್ವಕ್ಕೆ ನಮೋನಮಃ.
-ಕ.ವೆಂ.ನಾಗರಾಜ್.
**************
11.6.2014ರ ಜನಹಿತದ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.