ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜೂನ್ 24, 2014

ಪಟ್ಟಭದ್ರ ಹಿತಾಸಕ್ತಿ ಮತ್ತು ಸರ್ಕಾರಿ ಸೇವೆ

     ಸರ್ಕಾರಿ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮಿತಿ ಮೀರಿರುವುದರಿಂದ ಪಟ್ಟಭದ್ರ ಹಿತಾಸಕ್ತರ ಒಂದು ಪಡೆಯೇ ಆಡಳಿತವನ್ನು ನಿಯಂತ್ರಿಸುತ್ತಿದೆಯೇನೋ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ವಹಿತಾಸಕ್ತ ಪಟ್ಟಭದ್ರ ಅಧಿಕಾರಿಗಳೇ ಮೇಲುಗೈ ಸಾಧಿಸಿರುವುದೂ ಇದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಟ್ಟಭದ್ರ ಕೂಟಗಳೇ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಸಕ್ರಿಯವಾಗಿದ್ದು, ಪರಸ್ಪರರನ್ನು ಪೋಷಿಸುತ್ತಿವೆ. ಈ ಕೂಟ ಇತರ ಅಧಿಕಾರಿಗಳು, ನೌಕರರನ್ನು ನಿಯಂತ್ರಿಸುತ್ತದೆ. ಕೆಲವರು ಹಿರಿಯ ಅಧಿಕಾರಿಗಳಿಗೆ ತಾವು ಅಸಹಾಯಕರು ಎಂಬ ಭಾವನೆ ಬರುತ್ತಿದೆ. ಪ್ರಾಮಾಣಿಕ ಅಧಿಕಾರಿಗಳು ಅನೇಕ ರೀತಿಯ ಕಿರುಕುಳಕ್ಕೆ ಒಳಗಾಗುವುದನ್ನು ಕಾಣುತ್ತಿದ್ದೇವೆ. ಇದೇ ಈ ಭಾವನೆ ಮೂಡಲು ಪ್ರಮುಖ ಕಾರಣ. ಈ ಭಾವನೆಯ ಜಾಲದಿಂದ ಅವರುಗಳು ಹೊರಬರಬೇಕಿದೆ. ಅವರುಗಳು ಅಭದ್ರತೆಯ ಕಾರಣದಿಂದ ತಮಗಿರುವ ಅಧಿಕಾರವನ್ನು ಬಳಸುತ್ತಿಲ್ಲ. ಹೀಗಾಗಿ ಅಂತಿಮವಾಗಿ ಇದರ ಕೆಟ್ಟ ಪರಿಣಾಮಗಳನ್ನು ಅನುಭವಿಸುವವರು ಜನಸಾಮಾನ್ಯರೇ ಆಗುತ್ತಾರೆ. ಅಧಿಕಾರಿಗಳು ತಮಗೆ ಇರುವ ಅಧಿಕಾರವನ್ನು ಉಪಯೋಗಿಸಿ ಜನಪರವಾಗಿ ಕೆಲಸ ಮಾಡುವ ಮನಸ್ಸು ಮಾಡಿದರೆ ಅವರಿಗೆ ಅಡಚಣೆಗಳು ಬರಬಹುದು, ರಾಜಕೀಯವಾಗಿ ಕಿರಿಕಿರಿಗಳನ್ನು ಎದುರಿಸಬೇಕಾಗಿ ಬರಬಹುದು, ಹೆಚ್ಚೆಂದರೆ ಅವರನ್ನು ಉಪಯೋಗವಿಲ್ಲವೆಂದು ಭಾವಿಸಲಾಗುವ ಹುದ್ದೆಗೆ, ಬೇರೆ ಸ್ಥಳಕ್ಕೆ ವರ್ಗಾಯಿಸಬಹುದು. ಇವುಗಳನ್ನು ಎದುರಿಸಿ ನಿಲ್ಲುವವರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ ಪರಿಸ್ಥಿತಿಯಲ್ಲಿ ಸುಧಾರಣೆ ನಿರೀಕ್ಷಿಸಬಹುದು. 
     ಇದು ಹಲವು ವರ್ಷಗಳ ಹಿಂದೆ ಪಕ್ಕದ ಜಿಲ್ಲೆಯಲ್ಲಿ ನಡೆದ ಘಟನೆ. ಸಹಾಯಕ ಕೃಷಿ ನಿರ್ದೇಶಕರೊಬ್ಬರು ಶಾಸಕರ ಆಜ್ಞಾನುವರ್ತಿಯಾಗಿದ್ದರು. ಅವರ ಇಷ್ಟಾನಿಷ್ಟಗಳನ್ನು ಅನುಸರಿಸಿ ಕೆಲಸ ಮಾಡುತ್ತಿದ್ದವರು. ಒಮ್ಮೆ ಶಾಸಕರು ಅವರಿಗೆ ಹಣದ ಬೇಡಿಕೆ ಇಟಿದ್ದಲ್ಲದೆ ಅದನ್ನು ಹೊಂದಿಸಲು ಮಾರ್ಗವನ್ನೂ ಸೂಚಿಸಿದ್ದರು. ನಡೆಯದ ಕಾಮಗಾರಿಗೆ ಸುಳ್ಳು ಬಿಲ್ಲು ತಯಾರಿಸಿ ಹಣ ಹೊಂದಿಸುವುದೇ ಅದು! ಅಧಿಕಾರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿಯೂ ಅಭಯ ಕೊಟ್ಟಿದ್ದರು. ಸರಿ, ಹಣ ಹೊಂದಾಣಿಕೆಯಾಯಿತು. ಅಭಯ ಕೊಟ್ಟಿದ್ದಂತೆ ಅವರಿಗೆ ಯಾರಿಂದಲೂ ತೊಂದರೆಯಾಗಲಿಲ್ಲ. ಆದರೆ, ನಿಜವಾದ ತೊಂದರೆ ಶಾಸಕರಿಂದಲೇ ಶುರುವಾಗಿತ್ತು. ಶಾಸಕರು ಆಗಾಗ್ಗೆ ಹಣಕ್ಕೆ ಹೇಳಿಕಳಿಸುತ್ತಿದ್ದರು. ಕೊಡದಿದ್ದರೆ ಸುಳ್ಳು ಬಿಲ್ಲಿನ ವಿಚಾರ ಹೊರತಂದು ಅಧಿಕಾರಿಯ ಕೆಲಸಕ್ಕೆ ಸಂಚಕಾರ ತರುವುದಾಗಿ ಬೆದರಿಸುತ್ತಿದ್ದರು. ಬರಬರುತ್ತಾ ಇದು ತುಂಬಾ ವಿಪರೀತಕ್ಕೆ ಇಟ್ಟುಕೊಂಡಾಗ ಆ ಅಧಿಕಾರಿ ಮೃತ್ಯುಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ವಿಷಯ ಎಲ್ಲಾ ಪತ್ರಿಕೆಗಳಲ್ಲಿ ಪ್ರಚುರವಾಗಿತ್ತು. ಮುಂದೇನಾಯಿತು? ಏನೂ ಆಗಲಿಲ್ಲ. ನಿಜವಾದ ಅಪರಾಧಿಗೆ ಶಿಕ್ಷೆಯಾಗಲೇ ಇಲ್ಲ. ಅಧಿಕಾರಿಯದೂ ತಪ್ಪಿರಲಿಲ್ಲ ಎಂದು ಹೇಳುವಂತಿಲ್ಲ. ಆ ತಪ್ಪಿಗಾಗಿ ಅವರು ಪ್ರಾಣವನ್ನೇ ತೆರಬೇಕಾಯಿತಷ್ಟೆ. ಜನಪ್ರತಿನಿಧಿಗಳಿಗೆ, ಮೇಲಾಧಿಕಾರಿಗಳಿಗೆ ಕಪ್ಪ-ಕಾಣಿಕೆಗಳನ್ನು ನಿಯಮಿತವಾಗಿ ಒಪ್ಪಿಸುವ ಅಧಿಕಾರಿಗಳ ಸಂಖ್ಯೆ ಕಡಿಮೆಯೇನಲ್ಲ. ಇವು ನೇರವಾಗಿ ತಲುಪುತ್ತದೆ, ಅಥವ ಪರೋಕ್ಷವಾಗಿ ತಲುಪುತ್ತದೆ. ಯಾವುದೋ ನಿಧಿಯ ಹೆಸರಿನಲ್ಲಿ, ಯಾವುದೋ ಸಭೆ-ಸಮಾರಂಭದ ವೆಚ್ಚಗಳ ಹೆಸರಿನಲ್ಲಿ ಈ ಸೇವೆ ಸಲ್ಲಿಸಲ್ಪಡುತ್ತದೆ. ಆ ಅಧಿಕಾರಿಗಳಾದರೋ, ತಮ್ಮ ಸ್ವಂತದ ಹಣ ಕೊಡುತ್ತಾರೆಯೇ? ಅವರು ಇನ್ನು ಯಾರ ತಲೆಗಳ ಮೇಲೋ ಕೈ ಇಡುತ್ತಾರೆ. ಸರ್ಕಾರಿ ಹಣದ ಸೋರಿಕೆ ಮತ್ತು ದುರುಪಯೋಗಗಳಲ್ಲಿ ಇದು ಪರ್ಯವಸಾನವಾಗುತ್ತದೆ.
     ನೇಮಕಾತಿಯಿಂದ ಪ್ರಾರಂಭವಾಗುವ ಭ್ರಷ್ಠಾಚಾರದ ಹಾವಳಿ, ಸೂಕ್ತ ಇಲಾಖೆಯ ಆಯ್ಕೆ, ಬಯಸಿದ ಹುದ್ದೆಗೆ ಆಯ್ಕೆ, ಬಯಸಿದ ಸ್ಥಳಕ್ಕೆ ನೇಮಕ, ವರ್ಗಾವಣೆ, ಇತ್ಯಾದಿ ಹಲವು ಸಂಗತಿಗಳಲ್ಲಿ ವ್ಯಾಪಿಸಿದೆ. ಒಬ್ಬರು ಅಧಿಕಾರಿ ತಾನು ಪಡೆಯುತ್ತಿದ್ದ ಅಕ್ರಮ ಸಂಭಾವನೆಗೆ ಸಮರ್ಥನೆ ನೀಡುತ್ತಿದ್ದುದು ಹೀಗೆ: "ನಾನು ಇಷ್ಟು ಲಕ್ಷ ಹಣ ಕೊಟ್ಟು ಈ ಹುದ್ದೆಗೆ ಬಂದಿದ್ದೇನೆ. ಅದನ್ನು ವಸೂಲು ಮಾಡಿಕೊಳ್ಳಬೇಡವೇ?" ವರ್ಗಾವಣೆ ಅನ್ನುವುದು ಹಣ ಮಾಡುವ ಒಂದು ದೊಡ್ಡ ದಂಧೆಯಾಗಿಬಿಟ್ಟಿರುವುದು ಬಹಿರಂಗ ಸತ್ಯ. ಬಯಸಿದ ಸ್ಥಳ, ಹುದ್ದೆಗಳಿಗೆ ವರ್ಗಾವಣೆ ಹಣ ಕೊಟ್ಟರೆ ಸಲೀಸಾಗಿ ಆಗುತ್ತದೆ. ಇಂತಹ ಹುದ್ದೆಗೆ ಇಷ್ಟು ಎಂದು ದರ ನಿಗದಿಯಾಗಿರುತ್ತದೆ. ಪ್ರಭಾವ ಇದ್ದಲ್ಲಿ ಸ್ವಲ್ಪ ರಿಯಾಯಿತಿಯೂ ಇರುತ್ತದೆ! ಹಣ ಕೊಡದವರು ಬೇಡದ ಸ್ಥಳಗಳಿಗೆ ಮತ್ತು ಅಕಾಲಿಕ ವರ್ಗಾವಣೆಗಳಿಗೆ ಒಳಪಡಬೇಕಾಗುತ್ತದೆ ಎಂಬುದು ಸುಳ್ಳಲ್ಲ. ನನ್ನ ಸೇವಾವಧಿಯಲ್ಲಿ ನಾನು ೨೬ ವರ್ಗಾವಣೆಗಳನ್ನು ಕಂಡವನು. ಇವುಗಳಲ್ಲಿ ರಾಜಕೀಯ ಪ್ರೇರಿತ ವರ್ಗಾವಣೆಗಳದೇ ಸಿಂಹಪಾಲು. ಒಮ್ಮೆಯಂತೂ ಬಂದ ಒಂದೆರಡೇ ತಿಂಗಳಿನಲ್ಲಿ ವರ್ಗ ಮಾಡಲಾಗಿತ್ತು. ಒಂದು ತಮಾಷೆಯ ಪ್ರಸಂಗ ಹಂಚಿಕೊಳ್ಳಬೇಕೆನಿಸುತ್ತಿದೆ. ನಾನು ಮಂಗಳೂರಿನ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ನಗರ ಆಸ್ತಿಮಿತಿ ತಹಸೀಲ್ದಾರ್ ಆಗಿದ್ದಾಗ ಕಂದಾಯ ಆಯುಕ್ತರ ಕಾರ್ಯಾಲಯದಿಂದ ಸಿಬ್ಬಂದಿಯೊಬ್ಬರು ನನಗೆ ದೂರವಾಣಿ ಮೂಲಕ ನನ್ನನ್ನು ಹಾಸನ ಜಿಲ್ಲಾಧಿಕಾರಿಯವರ ಕಛೇರಿಗೆ ವರ್ಗಾಯಿಸಲು ಅನುಕೂಲಿಸುವುದಾಗಿಯೂ ೨ ಲಕ್ಷ ರೂ. ಕೊಟ್ಟರೆ ಕೆಲಸ ಆಗುತ್ತದೆಯೆಂದೂ ತಿಳಿಸಿದ್ದರು. ನಾನು, 'ನನಗೇ ಕೇವಲ ಇಪ್ಪತ್ತೈದು ಸಾವಿರ ರೂ. ಕೊಟ್ಟು ಎಲ್ಲಿಗಾದರೂ ವರ್ಗಾಯಿಸಿ, ನಾನು ಈಗಿರುವ ಹುದ್ದೆಯನ್ನೂ ಹೆಚ್ಚು ಹಣ ಕೊಡುವ ಇನ್ನು ಯಾರಿಗಾದರೂ ಮಾರಿಕೊಳ್ಳಬಹುದೆಂದು' ಹಾಸ್ಯ ಮಾಡಿದ್ದೆ. ಆ ಸಂದರ್ಭದಲ್ಲಿ ನನಗೆ ಎತ್ತಂಗಡಿಯಾಗಿ ಬೇರೊಂದು ಸ್ಥಳಕ್ಕೆ ವರ್ಗಾವಣೆಯಾದಾಗ ನನ್ನ ಜಾಗಕ್ಕೆ ಬಂದಿದ್ದವರು ದಕ್ಷಿಣೆ ಕೊಟ್ಟು ಬಂದಿದ್ದರೆಂದು ನನಗೆ ತಿಳಿಯಿತು. ಹೇಗಿದ್ದರೂ ನನ್ನನ್ನು ವರ್ಗಾಯಿಸಬೇಕಿತ್ತು, ನನ್ನಿಂದಲೂ ಏನಾದರೂ ಗಿಟ್ಟಬಹುದೆಂದು ಭಾವಿಸಿ ನನಗೆ ಹಾಸನಕ್ಕೆ ವರ್ಗಾಯಿಸುವ 'ಆಫರ್' ಕೊಟ್ಟಿದ್ದರು! ವ್ಯವಸ್ಥೆ ಹೀಗಿರುವಾಗ ಭ್ರಷ್ಠತೆಯ ಬೇರುಗಳು ಗಟ್ಟಿಯಾಗುತ್ತಾ ಹೋಗದೆ ಮತ್ತೇನಾದೀತು! ಸ್ಥಳೀಯ ರಾಜಕೀಯ ನಾಯಕರುಗಳಿಗೆ ಅನುಕೂಲವಾಗಲೆಂದು ಹಲವಾರು ಹುದ್ದೆಗಳಿಗೆ ಅಧಿಕಾರಿಗಳನ್ನೇ ನೇಮಿಸದೆ ಕೈಕೆಳಗಿನ ಅಧಿಕಾರಿಗಳನ್ನೇ ಹೆಚ್ಚಿನ ಪ್ರಭಾರೆಯಲ್ಲಿರಿಸಿ ವರ್ಷಗಟ್ಟಲೆ ಇದೇ ಸ್ಥಿತಿ ಇರುವಂತೆ ನೋಡಿಕೊಂಡಿದ್ದುದು ಪಟ್ಟಭದ್ರರ ಕೂಟ ಎಷ್ಟು ಬಲವಾಗಿದೆ ಎಂಬುದನ್ನು ತೋರಿಸುತ್ತದೆ. 
     ಅವರು ಒಬ್ಬರು ಪ್ರಾಮಾಣಿಕ ಹಿರಿಯ ಅಧಿಕಾರಿ, ಶಿಕ್ಷಣ ಇಲಾಖೆಯಲ್ಲಿ ಕಮಿಷನರ್ ಆಗಿದ್ದರು. ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಮಧ್ಯಾಹ್ನದ ಊಟ, ಉಚಿತ ಪಠ್ಯ ಪುಸ್ತಕಗಳ ವಿತರಣೆ, ಮುಂತಾದ ಯೋಜನೆಗಳ ಯಶಸ್ಸಿಗೆ, ಸಮರ್ಪಕ ಜಾರಿಗೆ ಎಲ್ಲಾ ಶ್ರಮ ಹಾಕಿದ್ದವರು. ಮುಖ್ಯಮಂತ್ರಿಗಳೇ ಅವರನ್ನು ಬಹಿರಂಗ ವೇದಿಕೆಯಲ್ಲಿ ಉತ್ತಮ ಮತ್ತು ದಕ್ಷ ಅಧಿಕಾರಿ ಎಂದು ಶ್ಲಾಘಿಸಿದ್ದರು. ಹಾಗಿರುವಾಗ ಅವರನ್ನು ಇದ್ದಕ್ಕಿದ್ದಂತೆ ವರ್ಗಾವಣೆ ಮಾಡಿದ್ದರು. ಕಾರಣವಿಲ್ಲದೆ ಮಾಡಿದ ವರ್ಗಾವಣೆಯಿಂದ ನೊಂದ ಅವರು ಕೆಲಸಕ್ಕೇ ರಾಜಿನಾಮೆ ನೀಡಿದರು. ಆಗ ಮಂತ್ರಿಯೊಬ್ಬರು, "ದಯವಿಟ್ಟು ರಾಜಿನಾಮೆ ಹಿಂತೆಗೆದುಕೊಳ್ಳಿ. ಜನ ಇದಕ್ಕೆ ನಮ್ಮನ್ನೇ ಕಾರಣವೆಂದು ದೂರುತ್ತಾರೆ" ಎಂದಾಗ ಅಧಿಕಾರಿ ತಮ್ಮ ವರ್ಗಾವಣೆಯ ಕಾರಣ ಕೇಳಿದರು. 'ಮುಖ್ಯಮಂತ್ರಿಯವರನ್ನೇ ವಿಚಾರಿಸಿ' ಎಂದು ಮಂತ್ರಿ ಮಹೋದಯರು ಹೇಳಿದರು. ಮುಖ್ಯಮಂತ್ರಿಯವರನ್ನೇ 'ಒಳ್ಳೆಯ ಅಧಿಕಾರಿ ಎಂದು ಹೊಗಳಿದವರೇ ಇದ್ದಕ್ಕಿದ್ದಂತೆ ವರ್ಗಾಯಿಸಿದ ಕಾರಣವಾದರೂ ಏನು?' ಎಂದು ವಿಚಾರಿಸಿದರು. ಮುಖ್ಯಮಂತ್ರಿಯವರು ತೇಲಿಸಿ ಮಾತನಾಡಿದರೂ ಕೊನೆಗೆ 'ಆ ಮಂತ್ರಿಯವರ ಕೋರಿಕೆಯಂತೆ ವರ್ಗಾವಣೆ ಮಾಡುವುದಿಲ್ಲ' ಎಂಬ ಕಾರಣಕ್ಕಾಗಿ ಅಧಿಕಾರಿಯನ್ನೇ ವರ್ಗ ಮಾಡಿದ ಸತ್ಯ ಹೊರಬಿದ್ದಿತ್ತು. 'ಉತ್ತರ ಕರ್ನಾಟಕದಲ್ಲಿ ಶೇ. ೨೫ರಷ್ಟು ಹುದ್ದೆಗಳು ಖಾಲಿ ಇವೆ. ಅವರನ್ನು ಮಂತ್ರಿಯವರ ಇಚ್ಛೆಯಂತೆ ಮತ್ತೆ ಬೇರೆಡೆಗೆ ವರ್ಗಾಯಿಸಿದರೆ ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುವುದಿಲ್ಲವೆ?' ಎಂದ ಅಧಿಕಾರಿಗೆ ಮುಖ್ಯಮಂತ್ರಿಯವರು ಕೊಟ್ಟಿದ್ದ ಉತ್ತರವಿದು: "ನೀವು ಹೇಳುವುದೆಲ್ಲಾ ಸರಿ. ಅದಕ್ಕೆಲ್ಲಾ ರಾಜಕೀಯ ಕಾರಣಗಳೂ ಇರುತ್ತವೆ. ನೀವು ಮಾತ್ರ ರಾಜಿನಾಮೆ ಕೊಡಬೇಡಿ. ನಿಮ್ಮಂತಹವರು ನಮಗೆ ಬೇಕು". ಅಧಿಕಾರಿಯ ಮನವೊಲಿಸಿ ರಾಜಿನಾಮೆ ಹಿಂಪಡೆಯುವಂತೆ ಮಾಡಿದ್ದರು. ಗುಜರಾತ್, ತಮಿಳುನಾಡುಗಳಲ್ಲಿ ಈ ರೀತಿಯ ಅವಧಿಪೂರ್ವ ವರ್ಗಾವಣೆಗಳು ಬಹಳ ಕಡಿಮೆ. ಪದೇ ಪದೇ ವರ್ಗಾವಣೆಗಳು ಆಡಳಿತದ ಮೇಲೂ ಪರಿಣಾಮ ಬೀರುತ್ತವೆ. ಹೊಸ ಅಧಿಕಾರಿ ಪರಿಸರಕ್ಕೆ ಹೊಂದಿಕೊಂಡು ಕೆಲಸ ಪ್ರಾರಂಭಿಸುವಷ್ಟರಲ್ಲಿ ವರ್ಗಾವಣೆ ಆದರೆ ಕಷ್ಟ ಅನುಭವಿಸುವವರು ಸಾಮಾನ್ಯ ಜನರು ಮಾತ್ರ. ಅಲ್ಪಕಾಲಿಕ ಲಾಭಕ್ಕಾಗಿ ಜನರ ಹಿತ ಬಲಿ ಕೊಡುವ ಇಂತಹ ಪ್ರವೃತ್ತಿಗೆ ಕಡಿವಾಣ ಬೀಳಲೇಬೇಕು.
     ವಿವಿಧ ಯೋಜನೆಗಳನ್ನು ಜಾರಿ ಮಾಡುವ ಸಂದರ್ಭಗಳಲ್ಲೂ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದರಿಂದ ಯೋಜನೆಗಳ ಪ್ರಯೋಜನ ಜನರಿಗೆ ತಲುಪಬೇಕಾದ ಪ್ರಮಾಣದಲ್ಲಿ ತಲುಪುವುದು ಕಷ್ಟಸಾಧ್ಯ. ಸಾರ್ವಜನಿಕರ ಹಣ ರಾಜಕಾರಣಿಗಳ, ಮಧ್ಯವರ್ತಿಗಳ ಮತ್ತು ಅಧಿಕಾರಿಗಳ ಪಾಲಾಗುತ್ತಿದೆ. ಅನ್ನಭಾಗ್ಯದ ಮತ್ತು ಸಾರ್ವಜನಿಕರ ಪಡಿತರ ಸಾಮಗ್ರಿಗಳು ಕಾಳಸಂತೆಯಲ್ಲಿ ಮಾರಾಟವಾಗುವುದು, ಮರಳು ಮಾಫಿಯಾ, ಭೂಗಳ್ಳತನ, ಅನರ್ಹರಿಗೆ ಸರ್ಕಾರಿ ಸವಲತ್ತುಗಳು ಸಿಗುವುದು, ಅರ್ಹರಿಗೆ ಸಿಗದೇ ಇರುವುದು, ಮುಂತಾದ ಸಮಸ್ಯೆಗಳು ಅಧಿಕಾರಿಗಳು, ಮಧ್ಯವರ್ತಿಗಳು, ರಾಜಕಾರಣಿಗಳ ಪರಸ್ಪರ ಸಹಕಾರವಿಲ್ಲದೆ, ಅವರ ಪಾಲು ಇಲ್ಲದೆ ಉದ್ಭವಿಸುತ್ತಿವೆ ಎಂದರೆ ನಂಬಲು ಸಾಧ್ಯವೇ? ಚುನಾವಣೆ ಸಂದರ್ಭಗಳಲ್ಲಿ ನೇಮಕವಾಗುವ ಉಸ್ತುವಾರಿ ಆಧಿಕಾರಿಗಳು, ಮತಗಟ್ಟೆ ಅಧಿಕಾರಿಗಳ ನೇಮಕಗಳನ್ನು ಮಂತ್ರಿಗಳು, ಶಾಸಕರ ಮರ್ಜಿ ಅನುಸರಿಸಿ ಅವರ ಸಲಹೆಯಂತೆ ಮಾಡುತ್ತಿದ್ದ ಜಿಲ್ಲಾಧಿಕಾರಿಗಳು, ತಹಸೀಲ್ದಾರರುಗಳನ್ನು ಕಂಡಿದ್ದೇನೆ. ಮೇಲ್ಮಟ್ಟದ ಅಧಿಕಾರಿಗಳು ಶಿಸ್ತುಬದ್ಧರಾಗಿದ್ದರೆ ಅಧೀನ ಅಧಿಕಾರಿಗಳೂ ಶಿಸ್ತುಬದ್ಧರಾಗಿರುತ್ತಾರೆ. ಕಾನೂನು ಸಮಸ್ಯೆ ಪರಿಹರಿಸಲಾರದು, ಸುಗಮ ಆಡಳಿತಕ್ಕೆ ಅದು ಸಹಕಾರಿ ಮಾತ್ರ. ಜನರು ಮಾತ್ರ ಸಮಸ್ಯೆ ಬಗೆಹರಿಸಬಹುದು. ಜನರ ಜೀವನ ಮಟ್ಟದ ಮೇಲೆ ಭ್ರಷ್ಠಾಚಾರ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಜನರಿಗೆ ಎಲ್ಲಿಯವರೆಗೆ ಅರಿವಾಗುವುದಿಲ್ಲವೋ ಅಲ್ಲಿಯವರೆಗೆ ಪರಿಹಾರ ಕಷ್ಟ. ಕಾನೂನು ಭ್ರಷ್ಠಾಚಾರಿಗಳನ್ನು ಬಂಧಿಸಬಹುದು, ಶಿಕ್ಷೆ ಮಾಡಬಹುದು, ಆದರೆ ಮನೋಭಾವ ಬದಲಿಸಲಾರದು. ಬದಲಾವಣೆ ಬರಬೇಕು, ಮನೋಭಾವ ಬದಲಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬದಲಾವಣೆ ಮೇಲಿನಿಂದ ಬರಬೇಕು. ಬರಲಿ ಎಂದು ಆಶಿಸೋಣ.
-ಕ.ವೆಂ.ನಾಗರಾಜ್.
***************
4.6.2014ರ ಜನಹಿತ ಪತ್ರಿಕೆಯ ಅಂಕಣ 'ಜನಕಲ್ಯಾಣ'ದಲ್ಲಿ ಪ್ರಕಟಿತ.


4 ಕಾಮೆಂಟ್‌ಗಳು:

  1. ಬಾಚಿಕೊಳ್ಳಲೆಂದೇ ಗೆದ್ದು ಬರುವ ರಾಜಕಾರಣೀ ಮತ್ತು ಬಂದಷ್ಟು ತನಗೇ ಬರಲಿ ಎನ್ನುತ್ತಾ ಲಂಚ ನೀಡಿ ಮತ್ತೆ ಸ್ಥಾನವನ್ನು ಅಲಂಕರಿಸಿದ ಅಧೀಕಾರೀ ಸಮೂಹ ಇಬ್ಬರ ಬಂಡವಾಳವನ್ನೂ ಸಮಗ್ರವಾಗಿ ತೆರೆದಿಟ್ಟಿದ್ದೀರ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಭಂಡರ ಬಂಡವಾಳದ ಬಗ್ಗೆ ಸಾಮಾನ್ಯರು ಬಾಯಿ ಬಡಿದುಕೊಂಡರೂ 'ಗೋರ್ಕಲ್ಲ ಮೇಲೆ. . . . .'. ಪ್ರತಿಕ್ರಿಯೆಗೆ ಧನ್ಯವಾದಗಳು, ಬದರೀನಾಥರೇ.

      ಅಳಿಸಿ
    2. nageshamysore
      <>
      - ಕವಿಗಳೆ ಇದಂತೂ ಸತ್ಯವಾದ ಮಾತು. ಮೇಲೆ ಬದಲಾವಣೆಯಾಗಿ ಸತ್ವಪೂರ್ಣ ಪ್ರಾಮಾಣಿಕತೆ ನಳನಳಿಸಿದರೆ ಮಿಕ್ಕೆಲ್ಲವನ್ನು ಮಟ್ಟ ಹಾಕುವುದು ಸಾಧ್ಯವಾಗುತ್ತದೆ - ವ್ಯವಸ್ಥೆಯ ಬೇರಿನತನಕ ಸ್ವಚ್ಚಗೊಳಿಸಲು ಸಮಯ ಹಿಡಿದರೂ ಕೂಡ. ಮೇಲಿನವರ ಭದ್ರತೆ ಇರುವುದೆಂದು ಅರಿವಾದರೆ ಕೆಳಗಿನ ಪ್ರಾಮಾಣಿಕರಿಗು ಬಲ ಬಂದಂತಾಗುತ್ತದೆ.

      kavinagaraj
      ಇದು ಸ್ವಾನುಭವದಿಂದ ಹೊರಬಂದ ಮಾತು ನಾಗೇಶರೇ. ಮೇಲಿರುವವರನ್ನು ನಿಯಂತ್ರಿಸಿದರೆ ಕೆಳಗಿನವರ ನಿಯಂತ್ರಣ ಕಷ್ಟವಲ್ಲ. ಧನ್ಯವಾದ, ನಾಗೇಶರೇ.

      ಅಳಿಸಿ
    3. mmshaik shaik
      namaskaara
      indina dinagaLlli sarkaari seve tumbaa kastavagide..elladaralluu rajakiya tumbi holasaagide..ellaa kstragaLu aste..! uttama baraha..!

      kavinagaraj
      ವಂದನೆಗಳು, ಶೇಕ್ ರವರೇ.

      lpitnal
      ಕ ವೆಂ ನಾಗರಾಜ್ ಸರ್, ತುಂಬ ಸಕಾಲಿಕ ಲೇಖನ. ಆಶಾವಾದಿಯಾಗಿರೋಣ, ಮುಂದೆ ಒಳ್ಳಯ ದಿನಗಳು ಬರಬಹುದು, ಅಲ್ಲವೆ ಸರ್

      kavinagaraj
      ಧನ್ಯವಾದ, ಇಟ್ನಾಳರೇ. ನಾನೂ ಒಬ್ಬ ಆಶಾವಾದಿ.

      ಅಳಿಸಿ