ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಫೆಬ್ರವರಿ 20, 2015

'ಅನ್ನಬ್ರಹ್ಮ'ನಿಗೆ ನಮಸ್ಕಾರ


     ಯಾವುದು ಶಕ್ತಿಯನ್ನು ಕೊಡುತ್ತದೋ ಅದು ಶಕ್ತಿಗಿಂತಲೂ ದೊಡ್ಡದಾದುದು. ಶಕ್ತಿಯನ್ನು ಕರುಣಿಸುವುದೇ ಆಹಾರ ಅಥವ ಅನ್ನ! ಅನ್ನ ಎಂಬ ಪದದ ಬಳಕೆ ವೇದ, ಉಪನಿಷತ್ತುಗಳಲ್ಲಿ ಅನೇಕ ಸಲ ಬರುವ ವಿಶಿಷ್ಟ ಪದವಾಗಿದೆ. ಈ ಪದ ಹೊರಡಿಸುವ ಅರ್ಥ ಆಹಾರ ಎಂಬುದೇ ಆಗಿದೆ. ಸೇವಿಸಲು ಉಪಯೋಗಿಸುವ ಯಾವುದೇ ಪದಾರ್ಥವಾಗಲಿ ಅದು ಆಹಾರವೆನಿಸುತ್ತದೆ, ಅದು ಅಕ್ಕಿಯಿರಬಹುದು, ಗೋಧಿಯಿರಬಹುದು ಅಥವ ಮತ್ತೇನೋ ಆಗಿರಬಹುದು. ಅದು ಯಾವುದೋ ಮಾನಸಿಕ ವಸ್ತುವೂ ಆಗಿರಬಹುದು. ಯಾವುದೋ ಒಂದರ ಜೀವಿತಕ್ಕೆ ಪೂರಕವಾಗುವ ಯಾವುದೇ ಸಂಗತಿ ಅನ್ನವೆನಿಸುವುದು. ಹೀಗೆ ಅನ್ನ ಎಂಬುದರಲ್ಲಿ ವಿಷಯಾತ್ಮಕ ಮತ್ತು ಗುಣಾತ್ಮಕವಾಗಿ ಸಮ್ಮಿಲಿತವಾದ ಯಾವುದೇ ರೀತಿಯ ಶಕ್ತಿಯ ಉತ್ಪತ್ತಿಗೆ ಕಾರಣವಾಗುವ ಅಂಶ ಅಡಗಿದೆ. 
     ಜೀವನದಲ್ಲಿ ಯಶಸ್ಸು ಅನ್ನುವುದು ಯಾವುದೋ ಒಂದು ಸಂಗತಿಯನ್ನು ಅವಲಂಬಿಸಿ ಬರುವಂತಹುದಲ್ಲ. ಹಲವಾರು ಸಂಗತಿಗಳ ಸಮ್ಮಿಲಿತ ಫಲವಾಗಿ ಯಶಸ್ಸು ಸಿದ್ಧಿಸುತ್ತದೆ. ಉದಾಹರಣೆ ಕೊಡಬೇಕೆಂದರೆ: ಗಾಳಿ ಇಲ್ಲದೆ ನಾವು ಉಸಿರಾಡಲಾರೆವು, ನಿಜ. ಆದರೆ ಶ್ವಾಸಕೋಶಗಳಿಲ್ಲದೆಯೂ ಸಹ ನಮಗೆ ಉಸಿರಾಡಲಾಗುವುದಿಲ್ಲ. ಸಾಮಾಜಿಕ ಜೀವನದಲ್ಲೂ ಸಹ ಈ ನಿಯಮ ಅನ್ವಯವಾಗುತ್ತದೆ. ನಾವು ಪರಸ್ಪರ ಹೊಂದಾಣಿಕೆ, ಸಹಕಾರ ಮತ್ತು ಅರ್ಥ ಮಾಡಿಕೊಳ್ಳುವಿಕೆಯಿಂದ ಬಾಳಬೇಕಾಗುತ್ತದೆ. ಉಪನಿಷತ್ತು ಹೇಳುವ ವಿಶಾಲ ಅರ್ಥದಲ್ಲಿ ಹೀಗೆ ಬಾಳುವುದಕ್ಕೆ ಸಹಾಯ ಮಾಡುವುದು, ಸಹಾಯವಾಗುವುದೂ ಅನ್ನವೆಂದು ಕರೆಸಿಕೊಳ್ಳುತ್ತದೆ. ಪ್ರಕೃತಿಯ ಶಕ್ತಿಗಳು ಮತ್ತು ವ್ಯಕ್ತಿಗತ ಶಕ್ತಿಗಳ ಪರಸ್ಪರ ಸಂಬಂಧಗಳು ಪ್ರತಿಯೊಂದು ಕ್ರಿಯೆಗೆ ಕಾರಣವಾಗುತ್ತದೆ. ಇದೇ ಶಕ್ತಿಯ ಮೂಲ. ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡಿದ್ದಾಗ ಮತ್ತು ಪ್ರಕೃತಿಯ ಶಕ್ತಿಗಳು ನಮ್ಮೊಡನೆ ಹೊಂದಿಕೊಂಡಾಗ ನಾವು ಶಕ್ತಿಶಾಲಿಗಳಾಗುತ್ತೇವೆ. ಯಾವದು ಶಕ್ತಿಯ ಉತ್ಪಾದನೆಗೆ ಕಾರಣವಾಗುತ್ತದೋ ಅದೇ 'ಅನ್ನ'ವಾಗಿದೆ.
     ಇಂತಹ ಚೈತನ್ಯದಾಯಕವಾದ 'ಅನ್ನ'ದ ಕುರಿತು ಈ ವೇದಮಂತ್ರ ಹೀಗೆ ಹೇಳುತ್ತದೆ:
ಮೋಘಮನ್ನಂ ವಿಂದತೇ ಅಪ್ರಚೇತಾಃ ಸತ್ಯಂ ಬ್ರವೀಮಿ ವಧ ಇತ್ ಸ ತಸ್ಯ |
ನಾರ್ಯಮಣಂ ಪುಷ್ಯತಿ ನೋ ಸಖಾಯಂ ಕೇವಲಾಘೋ ಭವತಿ ಕೇವಲಾದೀ || (ಋಕ್.೧೦.೧೧೭.೬.)
     'ಸೋಮಾರಿಯೂ, ಅಜ್ಞಾನಿಯೂ ಆದವನು ವ್ಯರ್ಥವಾಗಿ ಆಹಾರವನ್ನು ಪಡೆಯುತ್ತಾನೆ. ಸತ್ಯ ಹೇಳುತ್ತೇನೆ, ಅವನು ಆಹಾರದ ಕೊಲೆಗಾರನೇ ಸರಿ. ಅವನು ದೇವರ ಶಾಸನವನ್ನಾಗಲೀ, ತನ್ನ ಆಪ್ತೇಷ್ಟರನ್ನಾಗಲೀ ಬಲಗೊಳಿಸುವುದಿಲ್ಲ. ಕುಳಿತು ತಿನ್ನುವ ಸೋಮಾರಿಯೂ, ಅಜ್ಞಾನಿಯೂ ಆದ ಅವನು ಪಾಪದ ಪ್ರತೀಕ' ಎಂಬುದು ಈ ಮಂತ್ರ ಅರ್ಥ. ಅವಧೂತ ಮುಕುಂದೂರು ಸ್ವಾಮಿಗಳು ಊಟಕ್ಕೆ ಕುಳಿತಿದ್ದ ಭಕ್ತರನ್ನು ಉದ್ದೇಶಿಸಿ ಹೀಗೆ ಹೇಳುತ್ತಿದ್ದರು: "ಮುದ್ದೆ ಅಂತ ಊಟ ಇಲ್ಲ, ಸಿದ್ದಪ್ಪನಂತ ದೇವರಿಲ್ಲ ಅಂತಾರೆ. ಆದ್ರೆ ಒಂದ್ಮಾತು, ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಕೇಳ್ಕಂಡು, ಹೇಳ್ಕಂಡು ಮುದ್ದೆ ಮುರೀರಪ್ಪಾ." ಎಂತಹ ದಿವ್ಯ ಸಂದೇಶ. ಊಟ ಮಾಡುವುದಕ್ಕೂ ಅರ್ಹತೆ ಇರಬೇಕು. ಹಾಗಿರುವಾಗ ಆಹಾರಕ್ಕಾಗಿ ಹಪಹಪಿಸುವ ಲಕ್ಷಾಂತರ ಜೀವಿಗಳಿರುವ ಈ ಜಗತ್ತಿನಲ್ಲಿ ತಿನ್ನುವ ಆಹಾರವನ್ನೇ ವ್ಯರ್ಥ ಮಾಡುವುದು ಮಹಾಪಾಪ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು. ಇದೇ ಸಾಮಾಜಿಕ ಪ್ರಜ್ಞೆ. 
     ಒಬ್ಬ ವ್ಯಕ್ತಿ ಹತ್ತು ದಿನಗಳಿಂದ ಆಹಾರ ಸೇವಿಸಿಲ್ಲವೆಂದಿಟ್ಟುಕೊಳ್ಳೋಣ. ಏನಾಗುತ್ತದೆ? ಅವನು ಬದುಕಿರಬಹುದು, ಜೀವಿಯೆಂದು ಅನ್ನಿಸಿಕೊಳ್ಳಬಹುದು, ಆದರೆ ಆತ ಕಾಣುವ, ಕೇಳುವ, ಯೋಚಿಸುವ ಅಥವ ಅರ್ಥ ಮಾಡಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿರುತ್ತಾನೆ. ಇದಕ್ಕೆ ಕಾರಣ ಆತ ಹತ್ತು ದಿನಗಳಿಂದ ಏನನ್ನೂ ಸೇವಿಸದಿರುವುದು. ಅಲ್ಲಿ ಪ್ರಾಣವಿದೆ, ಆದರೆ ಸತ್ವವಿಲ್ಲ, ಏಕೆಂದರೆ 'ಅನ್ನ' ಇಲ್ಲ. ಆಹಾರ ಕಂಡ ಕೂಡಲೇ ಅವನಿಗೆ ಚೈತನ್ಯ ಬಂದಂತಾಗುತ್ತದೆ. 'ಅನ್ನ'ವೆಂದರೆ ಕೇವಲ ತಿನ್ನುವ ಆಹಾರವಲ್ಲ. ಅದು ವಿಶ್ವದ ಉಗಮದ ಪ್ರತೀಕವಾಗಿದೆ. ಶಕ್ತಿಯ ಮೂಲವಾದ ಆಹಾರವೆಂದರೆ ಅದರಲ್ಲಿ ನಾವು ಸ್ವೀಕರಿಸುವುದೆಲ್ಲವೂ ಸೇರುತ್ತದೆ, ಅಂದರೆ ನಾವು ನೋಡುವುದು, ಕೇಳುವುದು, ತಿನ್ನುವುದು, ಇತ್ಯಾದಿಗಳೆಲ್ಲವೂ ಆಹಾರವೆಂದೇ ತಿಳಿಯಬೇಕು. ನಾವು ಎಂತಹ ಆಹಾರ ಸೇವಿಸುತ್ತೇವೆ ಎಂಬುದನ್ನು ಅವಲಂಬಿಸಿ ಅದಕ್ಕೆ ತಕ್ಕಂತೆ ನಾವು ಶಕ್ತಿ ಗಳಿಸಿಕೊಳ್ಳುತ್ತೇವೆ.
     'ನೀನು ಹೊಟ್ಟೆಗೆ ಏನು ತಿಂತೀಯ?'- ಯಾರಾದರೂ ಏನಾದರೂ ಅಚಾತುರ್ಯವೆಸಗಿದಾಗ, ತಪ್ಪು ಮಾಡಿದಾಗ ಈ ರೀತಿ ಪ್ರತಿಕ್ರಿಯಿಸುವುದನ್ನು ಕಾಣುತ್ತೇವೆ ಅಲ್ಲವೇ? ಇದರ ಅರ್ಥ ಸಹ ಸ್ಪಷ್ಟ. ನಾವು ಸೇವಿಸುವ ಆಹಾರ ನಮ್ಮ ಕೃತಿಯ ಮೇಲೆ, ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬುದೇ ಅದು. ಪ್ರಾಣಿಲೋಕದಲ್ಲೂ ಸಹ ಸಸ್ಯಾಹಾರಿ ಪ್ರಾಣಿಗಳು ಮತ್ತು ಮಾಂಸಾಹಾರಿ ಪ್ರಾಣಿಗಳ ಗುಣ, ಲಕ್ಷಣ ಮತ್ತು ಸ್ವಭಾವಗಳಲ್ಲಿ ಎದ್ದು ಕಾಣುವ ವ್ಯತ್ಯಾಸಗಳನ್ನು ಗಮನಿಸಬಹುದಾಗಿದೆ. ಆಯುರ್‍ವೇದದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರದ ಬಗ್ಗೆ ವಿವರಣೆ ಸಿಗುತ್ತದೆ. ಸಾತ್ವಿಕ ಗುಣವೆಂದರೆ ರಚನಾತ್ಮಕ, ಸ್ಪಷ್ಟ ಮತ್ತು ಜೀವನವನ್ನು ಪೋಷಿಸುವುದಾಗಿದೆ. ಶಾಂತಿ, ನೆಮ್ಮದಿ, ಪ್ರೀತಿ, ಇತ್ಯಾದಿಗಳು ಸಾತ್ವಿಕರ ಲಕ್ಷಣಗಳು. ಸಾತ್ವಿಕರು ಸಾಮಾನ್ಯವಾಗಿ ಆಧ್ಯಾತ್ಮಿಕ ಒಲವುಳ್ಳವರು, ಸರಳರು, ಉದ್ವೇಗರಹಿತರು, ಸಂತುಷ್ಟರು, ಕೋಪನಿಗ್ರಹಿಗಳು ಆಗಿದ್ದು, ಅವರ ವಿಚಾರಗಳು ಸ್ಪಷ್ಟವಾಗಿರುತ್ತವೆ. ಅವರು ಇತರರಿಗೆ ಸಂತೋಷ ಕೊಡುವವರು, ಉತ್ಸಾಹಿತರು, ಕುತೂಹಲಿಗಳು ಮತ್ತು ಪ್ರೇರಕರಾಗಿರುತ್ತಾರೆ. ಸಾತ್ವಿಕ ಆಹಾರ ಸತ್ವಯುತವಾಗಿದ್ದು ಸುಲಭವಾಗಿ ಜೀರ್ಣವಾಗುವಂತಹದು ಮತ್ತು ಹಗುರವಾಗಿರುತ್ತವೆ. ಹದವಾಗಿ ಬೇಯಿಸಿದ ತರಕಾರಿಗಳು, ಕಳಿತ ಹಣ್ಣುಗಳು, ಕಾಳುಗಳು, ಜೇನುತುಪ್ಪ, ಶುಂಠಿ, ಸ್ವಲ್ಪ ಪ್ರಮಾಣದ ತುಪ್ಪ, ಹಸುವಿನ ಹಾಲು ಇತ್ಯಾದಿಗಳು ಸಾತ್ವಿಕ ಆಹಾರದ ಪಟ್ಟಿಯಲ್ಲಿವೆ. ಸತ್ವವನ್ನು ಹೆಚ್ಚಿಸಿಕೊಳ್ಳಲು ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಸತ್ಸಂಗ ಇತ್ಯಾದಿಗಳಲ್ಲಿ ತೊಡಗಿಕೊಳ್ಳುವುದಲ್ಲದೆ, ಪ್ರಶಾಂತವಾದ ಮತ್ತು ಹಿತಕರವೆನಿಸುವ ವಾತಾವರಣದಲ್ಲಿ ಇರುವುದು ಸಹಾಯಕಾರಿಯಾಗುತ್ತವೆ. ನೋಡುವ ನೋಟಗಳು, ಕೇಳುವ ಸಂಗತಿಗಳು, ಓದುವ ಪುಸ್ತಕಗಳು ಒಳ್ಳೆಯದಾಗಿದ್ದಲ್ಲಿ, ಧನಾತ್ಮಕವಾಗಿದ್ದಲ್ಲಿ ಅವೂ ಸಹ ಸಾತ್ವಿಕ ಗುಣವನ್ನು ವೃದ್ಧಿಸುತ್ತವೆ.
     ರಾಜಸಿಕತೆಯೆಂದರೆ ಮುನ್ನುಗ್ಗುವ ಮತ್ತು ಚಟುವಟಿಕೆಯಿಂದ ಒಡಗೂಡಿದ ಸ್ವಭಾವ. ಜೀವನದಲ್ಲಿ ಕೆಲಸಗಳಾಗಬೇಕಾದರೆ ಈ ಸ್ವಭಾವವೂ ಅಗತ್ಯವಾಗಿದೆ. ಆದರೆ ಅತಿಯಾದಲ್ಲಿ ಇದು ಅತಿ ಚಟುವಟಿಕೆ ಮತ್ತು ತಳಮಳಕ್ಕೂ ಕಾರಣವಾಗುತ್ತದೆ. ಮನಸ್ಸು ವಿಶ್ರಾಂತವಾಗುವುದಿಲ್ಲ, ಭಯ, ಕಾತುರ ಮತ್ತು ಉಗ್ರತೆಯಿಂದ ಚಡಪಡಿಸುತ್ತದೆ. ಮಿತಿಯಲ್ಲಿರುವ ರಾಜಸಿಕತೆ ಒಳ್ಳೆಯ ಫಲ ನೀಡುತ್ತದೆ, ಸಮಾಜಕ್ಕೆ ಉಪಕಾರಿಯಾಗಿರುತ್ತದೆ. ಅತಿಯಾದಲ್ಲಿ ಅದು ಗರ್ವ, ಸ್ಪರ್ಧೆ, ಅತಿಕ್ರಮಣಕಾರಿ ಮನೋಭಾವ ಮತ್ತು ಮತ್ಸರಕ್ಕೆ ರಹದಾರಿಯಾಗುತ್ತದೆ. ಭೌತಿಕವಾದಕ್ಕೆ ಹೆಚ್ಚು ಮಹತ್ವ ಕೊಡುವ ಇವರು ಅಧಿಕಾರ, ಹೆಸರು, ವ್ಯಾಪಾರ, ವ್ಯವಹಾರಗಳಲ್ಲಿ ಉನ್ನತಿಗಾಗಿ ಹಂಬಲಿಸುತ್ತಾರೆ. ತಕ್ಷಣದಲ್ಲಿ ಇವರು ಮಾಡುವ ಕ್ರಿಯೆಗಳಿಂದಾಗಿ ನಂತರದಲ್ಲಿ ಪಶ್ಚಾತ್ತಾಪ ಪಡಬೇಕಾಗಿ ಬರುವುದನ್ನೂ ನಾವು ಕಾಣುತ್ತಿರುತ್ತೇವೆ. ನಮ್ಮ ಬಹುತೇಕ ರಾಜಕಾರಣಿಗಳನ್ನು ನೋಡಿದರೆ ಇದಕ್ಕೆ ಹೇರಳವಾದ ಉದಾಹರಣೆಗಳು ಸಿಗುತ್ತವೆ. ಮತೀಯ ಹುಚ್ಚಾಟಗಳಿಗೂ ಇದು ಮೂಲಕಾರಣವಾಗಿದೆ. ಅವರುಗಳು ತಾವು ನಂಬಿರುವುದೇ ಸರಿಯೆನ್ನುತ್ತಾರೆ ಮತ್ತು ಇತರರು ತಮ್ಮ ಮಾತನ್ನು ಕೇಳಬೇಕೆನ್ನುವ ಸಲುವಾಗಿ ಏನು ಮಾಡಲೂ ತಯಾರಿರುತ್ತಾರೆ. ಅತಿ ರಾಜಸಿಕತೆಯಲ್ಲಿ ಯಾವುದು ಒಳ್ಳೆಯದೆಂದು ಹೃದಯಕ್ಕೆ ಗೊತ್ತಿದ್ದರೂ, ಮನಸ್ಸು ಮಾತ್ರ ಬೇರೆಲ್ಲೋ ಕೊಂಡೊಯ್ದುಬಿಡುತ್ತದೆ. ಆದರೆ ಹಿಡಿತದಲ್ಲಿರುವ ರಾಜಸಿಕತೆ ಅತ್ಯಗತ್ಯವಾಗಿದ್ದು, ಗುರಿ ತಲುಪಲು ಮತ್ತು ಸಮಾಜವನ್ನು ಸರಿಯಾಗಿ ಕೊಂಡೊಯ್ಯಲು ಇದು ಸಹಕಾರಿಯಾಗಿರುತ್ತದೆ. ಇದಕ್ಕೂ ಸಹ ನಮ್ಮ ರಾಜಕಾರಣಿಗಳಲ್ಲಿ ಉದಾಹರಣೆಗಳು ಸಿಗುತ್ತವೆ. ನೋಡುವ ದೃಷ್ಯಗಳು/ಸಂಗತಿಗಳು, ದಾರಿ ತಪ್ಪಿಸುವ ಚಿತ್ರಗಳು, ಧಾರಾವಾಹಿಗಳು, ಕೇಳುವ ಕೆಟ್ಟ ಮಾತುಗಳು, ವಾಸಿಸುವ ಅಶಾಂತ ಪರಿಸರ ಸಹ ರಾಜಸಿಕತೆಗೆ ಪ್ರಚೋದಿಸುತ್ತವೆ. ಅತಿಯಾದ ವ್ಯಾಯಾಮ, ಅತಿಯಾದ ಪ್ರಯಾಣ, ಅತಿಯಾದ ಮಾತುಗಳು, ಅತಿಯಾದ ಕೆಲಸಗಳು, ಅತಿಯಾದ ಮನರಂಜನೆಗಳೂ ಸಹ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಕರಿದ, ಹುರಿದ ಪದಾರ್ಥಗಳು, ಚಾಕೊಲೇಟುಗಳು, ಅತಿಯಾದ ಸಿಹಿ, ಉಪ್ಪು, ಖಾರದ ಪದಾರ್ಥಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳು ರಾಜಸಿಕ ಆಹಾರದ ಪಟ್ಟಿಯಲ್ಲಿ ಇವೆ. ಇವುಗಳನ್ನು ಹಿತ-ಮಿತವಾಗಿ ಬಳಸಿದರೆ ಒಳಿತು. ರಾಜಸಿಕತೆಯ ನಿಯಂತ್ರಣವನ್ನು ಸಾತ್ವಿಕ ಆಹಾರಗಳ ಬಳಕೆಯೊಂದಿಗೆ ನಿಯಂತ್ರಿಸಬಹುದು. ಸಾತ್ವಿಕರ ಸಂಗವೂ ಸಹಕಾರಿಯಾಗುವುದು. ಸಾತ್ವಿಕರ ಮತ್ತು ನಿಯಂತ್ರಿತ ರಾಜಸಿಕರ ಒಟ್ಟುಗೂಡುವಿಕೆ ಸಮಾಜಕ್ಕೆ ಉಪಕಾರಿಯಾಗಿರುತ್ತದೆ.
     ತಾಮಸಿಕತೆ ನಾಶ ಮಾಡುವ ಗುಣವಾಗಿದೆ. ಆಲಸ್ಯ, ಜಡತ್ವ, ನಿರಾಶೆ, ಖಿನ್ನತೆ, ಕ್ರೋಧ ಇದರ ಉತ್ಪನ್ನಗಳು. ನಿದ್ರೆ, ವಿಶ್ರಾಂತಿ, ಮುನ್ನುಗ್ಗದಿರುವಿಕೆ, ಇತ್ಯಾದಿಗಳು ಸಂದರ್ಭಗಳಲ್ಲಿ ಅವಶ್ಯವಾಗಿದ್ದು ತಾಮಸಿಕತೆಯೂ ಸಹ ಸ್ವಲ್ಪ ಮಟ್ಟಿಗೆ ಅಗತ್ಯವಾದುದೇ ಆಗಿದೆ. ಆದರೆ ತಮೋಗುಣ ಹೆಚ್ಚಾದರೆ ಅನರ್ಥಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಕೀಳು ಅಭಿರುಚಿಯ ಚಿತ್ರಗಳು, ಕೀಳು ಮನೋಭಾವದ ಚಾನೆಲ್ಲುಗಳು, ಅಂತರ್ಜಾಲದ ಅಶ್ಲೀಲ ತಾಣಗಳು ತಾಮಸಿಕತೆಯ ಬೆಂಕಿಗೆ ತುಪ್ಪ ಸುರಿಯುವಂತಹವಾಗಿವೆ. ತಾಮಸಿಕರು ಸ್ವನಾಶಕ್ಕೆಡೆಮಾಡುವ ಜೀವನಶೈಲಿ ಮತ್ತು ಆಹಾರಸೇವನೆಯ ಅಭ್ಯಾಸದವರಾಗಿರುತ್ತಾರೆ. ಅತಿಯಾದ ಆಹಾರ ಸೇವನೆ, ಅತಿಯಾದ ಕಾಮ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆ ಮಾಡಲು ಹಂಬಲಿಸುತ್ತಾರೆ.  ಪರಿಣಾಮವಾಗಿ ನಿಸ್ತೇಜತೆ, ಭಾರವಾದ ಮನಸ್ಸಿನೊಂದಿಗೆ ಏನು ಮಾಡಬೇಕೆಂದು ತೋಚದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಮತ್ತು ಇತರರ ಬಗ್ಗೆ ಲೆಕ್ಕಿಸದಂತೆ ಇರುತ್ತಾರೆ. ಕೊನೆಯಲ್ಲಿ ಯಾವ ಸ್ಥಿತಿಗೆ ತಲುಪುತ್ತಾರೆಂದರೆ ತಮಗೆ ತಾವು ಸಹಾಯ ಮಾಡಿಕೊಳ್ಳಲಾಗದಂತಾಗಿ ಇತರರನ್ನು ಆಶ್ರಯಿಸಬೇಕಾಗುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಲಾರರು ಮತ್ತು ಅಸ್ಪಷ್ಟ ಮನಸ್ಸಿನಿಂದಾಗಿ ಒಳ್ಳೆಯ ನಿರ್ಧಾರ ತಳೆಯಲಾರರು. ತಾಮಸಿಕ ಆಹಾರ ಕಡಿಮೆ ಸತ್ವಯುತವಾಗಿದ್ದು, ಜೀವಕ್ಕೆ ಪೋಷಕವಾಗಿರುವುದಿಲ್ಲ. ಹಳೆಯದಾದ ಮತ್ತು ತಂಗಳು ಆಹಾರ, ಅತಿಯಾಗಿ ಕರಿದ ಮತ್ತು ಹುರಿದ ಪದಾರ್ಥಗಳು, ಸುಲಭವಾಗಿ ಜೀರ್ಣವಾಗದಂತಹ ಗಡಸು ಆಹಾರ, ಹೆಚ್ಚು ಅನ್ನಿಸುವಷ್ಟು ಮಾಂಸಾಹಾರ, ಇತ್ಯಾದಿಗಳು ತಾಮಸಿಕವೆನಿಸುವ ಆಹಾರಗಳ ಪಟ್ಟಿಯಲ್ಲಿ ಸೇರಿವೆ. ಮಾದಕ ದ್ರವ್ಯಗಳು, ಡ್ರಗ್ಸ್ ಮುಂತಾದವು ತಾಮಸ ಗುಣ ಪ್ರಚೋದಕಗಳು. ಇವು ರಾಜಸಿಕ ಪರಿಣಾಮಗಳನ್ನೂ ಬೀರುತ್ತವೆ. ಮೆದುಳಿನ ಮೇಲೆ ಪ್ರಭಾವ ಬೀರುವ, ಅದನ್ನು ಮಂಕುಗೊಳಿಸುವ ಪದಾರ್ಥಗಳೆಲ್ಲವೂ ತಾಮಸಿಕ ಆಹಾರವೆನಿಸುವುವು. ಮೆದುಳನ್ನು ಆವರಿಸಿರುವ ತಾಮಸಿಕ ಪೊರೆಯನ್ನು ಸರಿಸಲು ಶಾಂತ ಪರಿಸರ, ಸಾತ್ವಿಕ ಆಹಾರ ಸೇವನೆ ಮತ್ತು ಬದಲಾದ ಜೀವನಶೈಲಿಯಿಂದ ಸಾಧ್ಯವಿದೆ.
     ಜ್ಷಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ಸ್ಮರಣಶಕ್ತಿ, ಧ್ಯಾನ, ಧ್ಯಾನದ ಕುರಿತ ಅರಿವು, ದೈಹಿಕ ಮತ್ತು ಮಾನಸಿಕ ಬಲ ಇವುಗಳು ಸಾಧನೆಯ ಎಂಟು ಹಂತಗಳಾಗಿದ್ದು, ಈ ಕುರಿತು ಹಿಂದಿನ ಲೇಖನಗಳಲ್ಲಿ ಪ್ರಸ್ತಾಪವಾಗಿದೆ. 'ಅನ್ನ'ದ ಮಹತ್ವವನ್ನು ತಿಳಿದು ಅನುಸರಿಸುವುದು ಸಾಧನೆಯ ಒಂಬತ್ತನೆಯ ಹಂತವೆಂದು ತಿಳಿಯಬಹುದು. 'ಅನ್ನ'ವೆಂದರೆ ಕೇವಲ ನಾವು ಸೇವಿಸುವ ಆಹಾರ ಮಾತ್ರವಲ್ಲ ಎಂಬುದನ್ನು ಅರಿತೆವು. ಹಾಗೆಯೇ ನಾವು ನೋಡುವ, ಕೇಳುವ ಮತ್ತು ತಿನ್ನುವ 'ಅನ್ನ'ವನ್ನು ಅವಲಂಬಿಸಿ ನಮ್ಮ ಗುಣ, ಸ್ವಭಾವಗಳು ರೂಪಿತವಾಗುತ್ತವೆ ಎಂಬುದನ್ನೂ ತಿಳಿದೆವು. ಒಂದು ಕೆಟ್ಟ ಸುದ್ದಿಯಿದೆ. ಅದೆಂದರೆ, ಮನುಷ್ಯನ ಸ್ವಭಾವಕ್ಕೂ ಆತನ ಹುಟ್ಟಿನ ಜಾತಿಗೂ ಯಾವುದೇ ಸಂಬಂಧವಿಲ್ಲ. ಹಿಂದುಳಿದಿರುವಿಕೆ ಅಥವ ಮುಂದುವರೆದಿರುವಿಕೆಗೆ ಜಾತಿ ಕಾರಣ ಅಲ್ಲವೇ ಅಲ್ಲ. ಜಾತಿ ಆಧಾರಿತವಾಗಿ ಇದನ್ನು ನಿರ್ಧರಿಸುವುದು ಕೇವಲ ಅಧಿಕಾರದ, ಸ್ವಾರ್ಥದ ಅಥವ ರಾಜಕೀಯ ಲಾಭಗಳಿಕೆಯ ಉದ್ದೇಶದಿಂದ ಮಾತ್ರವೇ ಆಗಿದೆ. ಒಂದು ಒಳ್ಳೆಯ ಸುದ್ದಿಯೂ ಇದೆ. ಅದೆಂದರೆ, ಸಾತ್ವಿಕರೇ ಬೇರೆ, ರಾಜಸಿಕರೇ ಬೇರೆ ಮತ್ತು ತಾಮಸಿಕರೇ ಬೇರೆ ಎಂದು ಪ್ರತ್ಯೇಕವಾಗಿ ಗುರುತಿಸಲ್ಪಡುವವರು ಇರುವದಿಲ್ಲ. ಪ್ರತಿಯೊಬ್ಬರೂ ಸಾತ್ವಿಕರೂ, ರಾಜಸಿಕರೂ ಮತ್ತು ತಾಮಸಿಕರೂ ಆಗಿರುತ್ತಾರೆ. ಅವರು ಈ ಮೂರೂ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿರುತ್ತವೆ. ಆ ಪ್ರಧಾನ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ, ನಿರ್ಧರಿಸುತ್ತವೆ. ಎಂತಹ ಒಳ್ಳೆಯ ಅವಕಾಶ! ನಾವು ಏನಾಗಬೇಕು, ಹೇಗಿರಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬಲ್ಲೆವು. ಅದನ್ನು ನಾವು ಸೂಕ್ತವಾಗಿ ಆರಿಸಿಕೊಳ್ಳುವ 'ಅನ್ನ'ದ ಮೂಲಕ ಮತ್ತು ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಪಡೆದುಕೊಳ್ಳಬಲ್ಲೆವು. ಇಂತಹ ಕರುಣಾಮಯಿ 'ಅನ್ನಬ್ರಹ್ಮ'ನಿಗೆ ನಮಸ್ಕಾರಗಳು.
-ಕ.ವೆಂ.ನಾಗರಾಜ್.
***************
ದಿನಾಂಕ 16.02.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಫೆಬ್ರವರಿ 12, 2015

ಭೂತವಾಗಿ ಕಾಡುವ ಭೂತ


"ದುರ್ಬಲತೆಗಳ ಅರಿವಿರುವವರು ಬಲಶಾಲಿಯಾಗುವರು; ಲೋಪಗಳನ್ನು ಒಪ್ಪಿಕೊಳ್ಳುವವರು ಒಳ್ಳೆಯವರೆನಿಸುವರು; ತಪ್ಪುಗಳನ್ನು ತಿದ್ದಿಕೊಂಡು ನಡೆವವರು ಬುದ್ಧಿವಂತರೆನಿಸುವರು."
     ಜಗತ್ತಿನ ಮಹಾಕಾವ್ಯ ಎನ್ನಬಹುದಾದ ರಾಮಾಯಣ ಬರೆದ ವಾಲ್ಮೀಕಿ ಇಂದು ಬದುಕಿದ್ದಿದ್ದರೆ? ಆತನ ಹಿನ್ನೆಲೆಯನ್ನು ಹುಡುಕಿ, ಕೆದಕಿ ರಂಪ-ರಾಮಾಯಣ ಮಾಡುತ್ತಿದ್ದರು. 'ಆದರ್ಶ ಪುರುಷ ರಾಮನ ಆದರ್ಶ ಗುಣಗಳು ಎಲ್ಲರಲ್ಲೂ ಬರಲಿ ಎನ್ನುವ ನೀನು ಹಿಂದೆ ಎಷ್ಟು ಆದರ್ಶವಾಗಿ ಬದುಕಿದ್ದೆ?' ಎಂದು ಕೇಳುತ್ತಿದ್ದರು. 'ನಿನ್ನ ಸ್ವಾರ್ಥಕ್ಕಾಗಿ ಎಷ್ಟು ಜನರ ತಲೆ ಒಡೆದು ಹಣ ದೋಚಿದೆ, ಎಷ್ಟು ಪ್ರಾಣಿಗಳನ್ನು ಕೊಂದೆ, ಎಷ್ಟು ಸಂಸಾರಗಳನ್ನು ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದೆ?' ಎಂದು ಪ್ರಶ್ನಿಸುತ್ತಿದ್ದರು. ಈ ಕುರಿತ ಚರ್ಚೆ, ಕೆಸರೆರಚಾಟ, ದೂಷಣೆ, ನಿಂದನೆಗಳಲ್ಲಿ ರಾಮಾಯಣದ ಮಹತ್ವ ಹಿಂದೆ ಸರಿದುಬಿಡುತ್ತಿತ್ತು. 'ನದಿ ಮೂಲ, ಋಷಿ ಮೂಲ ಹುಡುಕಬಾರದು' ಎಂಬ ಗಾದೆ ಹುಟ್ಟಿಕೊಂಡದ್ದು ಬಹುಷಃ ಇಂತಹ ಕಾರಣಕ್ಕಾಗಿಯೇ ಇರಬೇಕು. ಗಾಂಧೀಜಿಯವರು ತಮ್ಮ ಕಾಮನಿಗ್ರಹ ಶಕ್ತಿಯನ್ನು ಪರಿಶೀಲಿಸಲು ಇಬ್ಬರು ನಗ್ನ ಹೆಣ್ಣು ಮಕ್ಕಳೊಂದಿಗೆ ಮಲಗಿದ್ದೆನೆಂದು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಇಂದು ಗಾಂಧೀಜಿ ಇದ್ದಿದ್ದರೆ ಅವರು ನಿತ್ಯಾನಂದರಿಗಿಂತ ಕೀಳುಮಟ್ಟದಲ್ಲಿ ಬಿಂಬಿತರಾಗಿರುತ್ತಿದ್ದರು ಎಂಬುದರಲ್ಲಿ ಅನುಮಾನವೇ ಇಲ್ಲ.
     ವ್ಯಕ್ತಿಯೊಬ್ಬನ ಭೂತಕಾಲದ ಸಂಗತಿಗಳು ವರ್ತಮಾನದಲ್ಲಿ ಅವನನ್ನು ಭೂತವಾಗಿ ಕಾಡುವ ಸಂದರ್ಭಗಳು ಬರಬಹುದು ಎಂಬುದನ್ನು ತಿಳಿಸುವ ಸಲುವಾಗಿ ಮೇಲಿನ ಉದಾಹರಣೆಗಳನ್ನು ಕೊಟ್ಟಿರುವೆ. ನನ್ನನ್ನು ಈಗಲೂ ಹಲವು ಭೂತಗಳು ಕಾಡುತ್ತಿರುತ್ತವೆ. ಅಂತಹ ಒಂದು ಭೂತದ ಬಗ್ಗೆ ತಿಳಿಸುವೆ. ಆಗ ನನಗೆ ಸುಮಾರು 7-8 ವರ್ಷಗಳಿದ್ದಿರಬಹುದು. ಚಿಕ್ಕಮಗಳೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಶಾಲೆ ಮುಗಿಸಿಕೊಂಡು ಸ್ಲೇಟು, ಪುಸ್ತಕವಿದ್ದ ಚೀಲವನ್ನು ತೂಗಾಡಿಸುತ್ತಾ ಬರುತ್ತಿದ್ದೆ. ದಾರಿಯ ಬದಿಯಲ್ಲಿ ನಿಂತಿದ್ದ ಲಾರಿಯ ಬಂಪರಿನ ಬದಿಗಳಲ್ಲಿನ ಲೋಹದ ಪುಟ್ಟ ಸ್ತಂಭಗಳಿಗೆ ಕಟ್ಟಿದ್ದ ಕುಚ್ಚನ್ನು (ಹೆಣ್ಣು ಮಕ್ಕಳು ಜಡೆಗೆ ಕಟ್ಟಿಕೊಳ್ಳುವಂತಹದು) ಮುಟ್ಟಿ ಮುಂದೆ ಹೋಗುತ್ತಿದ್ದಾಗ ಧುತ್ತನೆ ಎದುರು ಬಂದು ನಿಂತಿದ್ದ ಲಾರಿಯ ಕ್ಲೀನರ್ ನನ್ನ ಕೆನ್ನೆಗೆ ಪಟಾರನೆ ಬಾರಿಸಿದ್ದ. ನಾನು ತತ್ತರಿಸಿಹೋಗಿದ್ದೆ, ಹೆದರಿಬಿಟ್ಟಿದ್ದೆ. ಈಗಲೂ ಸಹ ಯಾವದೇ ವಾಹನದ ಬಂಪರಿನಲ್ಲಿ ಕಟ್ಟಿರುವ ಕುಚ್ಚನ್ನು ಕಂಡಾಗ ನನ್ನ ಕೆನ್ನೆಗೆ ಬಿದ್ದಿದ್ದ ಆ ಏಟು ಮತ್ತು ಹೊಡೆದವನ ಮುಖ ನೆನಪಾಗುತ್ತದೆ. ಕುಚ್ಚನ್ನು ಮುಟ್ಟಲು ಈಗಲೂ ಹಿಂಜರಿಕೆಯಾಗುತ್ತದೆ. ಹಿಂದೆ ನಡೆದ ಪೇಚಿನ ಪ್ರಸಂಗಗಳು, ಅಕಾರಣವಾಗಿಯೋ, ಸಕಾರಣವಾಗಿಯೋ ಅವಮಾನಿತರಾಗುವ ಪ್ರಸಂಗಗಳು, ಒಟ್ಟಾರೆಯಾಗಿ ಹೇಳಬೇಕೆಂದರೆ ಕೆಟ್ಟ ಮತ್ತ ಕಹಿ ಘಟನೆಗಳು ಸಾಮಾನ್ಯವಾಗಿ ಎಲ್ಲರನ್ನೂ ಭೂತವಾಗಿ ಕಾಡುತ್ತವೆ. 'ಅವನಿ(ಳಿ)ಗೆ ಭೂತ ಮೆಟ್ಟಿಕೊಂಡಿದೆ' ಎಂಬಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ನಿಜವಾಗಿ ನೋಡಿದರೆ ಮೆಟ್ಟಿಕೊಂಡಿರುವುದು ಹೊರಗಿನ ಭೂತವಲ್ಲ, ಒಳಗಿನ ಭೂತವೇ ಆಗಿರುತ್ತದೆ. ಒಬ್ಬರೇ ತಮ್ಮಷ್ಟಕ್ಕೆ ತಾವೇ ಗುಣುಗುಣಿಸುತ್ತಾ ಹೋಗುವವರು, ಏನನ್ನೋ ನೆನೆಸಿಕೊಂಡು ತಮ್ಮಷ್ಟಕ್ಕೆ ತಾವೇ ನಗುವವರು, ಅಳುವವರು ಮುಂತಾದವರು ಇಂತಹ ಭೂತಚೇಷ್ಟೆಗೆ ಒಳಗಾದವರೇ!
     ಭೂತ ಎಂದಾಕ್ಷಣ ದೆವ್ವ, ಪ್ರೇತ, ಪಿಶಾಚಿ, ಇತ್ಯಾದಿಗಳ ಕಲ್ಪನೆಯ ರೂಪ ಕಣ್ಣು ಮುಂದೆ ಬರುತ್ತದೆ. ಆದರೆ ವಾಸ್ತವಿಕವಾಗಿ ಭೂತ ಎಂದರೆ ಹಿಂದೆ ನಡೆದದ್ದು ಎಂದು ಅರ್ಥ. ಹಾಗಾದರೆ ಈ ಭೂತ ಕಾಡುವುದು ಅಂದರೆ? ನಾವು ಸಾಮಾನ್ಯವಾಗಿ ವರ್ತಮಾನದಲ್ಲಿರುವುದು ಕಡಿಮೆ. ಒಂದೋ, ಕಳೆದುಹೋದ ಸಂಗತಿಗಳ ಬಗ್ಗೆ ಚಿಂತಿತರಾಗಿರುತ್ತೇವೆ, ಮುಳುಗಿಹೋಗಿರುತ್ತೇವೆ ಅಥವ ಮುಂದೆ ಆಗಬಹುದಾದ ಭವಿಷ್ಯತ್ತಿನ ವಿಷಯಗಳ ಕುರಿತು ಕಲ್ಪನೆ, ಊಹಾಪೋಹಗಳಲ್ಲಿ ಕಳೆದುಹೋಗಿರುತ್ತೇವೆ. ಕಳೆದುಹೋದ ಸಂಗತಿಗಳ ಬಗ್ಗೆ ಚಿಂತಿತರಾಗಿರುವದೇ ಭೂತ ನಮ್ಮನ್ನು ಕಾಡುವುದು ಎಂದು ತಿಳಿಯಬೇಕು. ಕಳೆದುಹೋದುದನ್ನು ಮತ್ತೆ ಸರಿಪಡಿಸಲಾಗುವುದಿಲ್ಲ. ಕಾಲವನ್ನು ಹಿಂದಕ್ಕೆ ತಿರುಗಿಸಲು ಸಾಧ್ಯವೇ? ಹೀಗಿರುವಾಗ ಹಿಂದಿನ ಸಂಗತಿಗಳ ಕುರಿತು ತಲೆ ಕೆಡಿಸಿಕೊಳ್ಳುವುದೇ ಭೂತಚೇಷ್ಠೆ ಅಷ್ಟೆ. ಹಿಂದಿನ ಸಂಗತಿಗಳಿಂದ ಪಾಠ ಕಲಿತು ಮುಂದುವರೆಯಬೇಕೇ ಹೊರತು ಅದನ್ನು ಕುರಿತೇ ಯೋಚಿಸಿ ಮನಸ್ಸು ಕೆಡಿಸಿಕೊಳ್ಳುವುದೇ ಭೂತದ ಕಾಟ. ನಾವು ವರ್ತಮಾನದಲ್ಲಿ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂಬ ಬಗ್ಗೆ ಜಾಗೃತರಾಗಿರಬೇಕೇ ಹೊರತು, ಏನೂ ಮಾಡಲು ಸಾಧ್ಯವಿಲ್ಲದ ಭೂತಕಾಲದ ಬಗ್ಗೆ ಚಿಂತಿಸದೆ, ಬದಲಾಯಿಸಲು ಆಗದ ಅದನ್ನು ಹೇಗಿದೆಯೋ ಹಾಗಿ ಒಪ್ಪಿಕೊಂಡು ಸುಮ್ಮನಿರಬೇಕು. ಭವಿಷ್ಯತ್ತಿನ ಬಗ್ಗೆಯೂ ಚಿಂತಿಸುವುದು ತರವಲ್ಲ. ಎಕೆಂದರೆ ಅದು ನಿರ್ಭರವಾಗಿರುವುದು ವರ್ತಮಾನದ ನಮ್ಮ ನಡೆನುಡಿಗಳಿಂದ ಮಾತ್ರ.
ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲ
ಒಳಗಣ್ಣು ತೆರೆದಿರಲು ಪತನದ ಭಯವಿಲ್ಲ |
ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರು
ತಪ್ಪೆ ಸರಿಯೆಂದವರು ಜಾರುವರು ಮೂಢ ||
     ಜೀವನದಲ್ಲಿ ಮಾಡುವ ತಪ್ಪುಗಳು ಭೂತವಾಗಿ ಕಾಡುತ್ತವೆ ಎಂದಾಯಿತು. ತಪ್ಪುಗಳು ಜೀವನದಲ್ಲಿ ಸರಿಯಾಗಿ ಹೇಗೆ ಮುನ್ನಡೆಯಬೇಕೆಂಬುದನ್ನು ಕಲಿಸುವ ಗುರುಗಳು. ಈಜು ಕಲಿಯಬೇಕಾದರೆ ಮೊದಲು ತಪ್ಪು ಮಾಡುತ್ತೇವೆ. ಆ ತಪ್ಪು ಮಾಡದಿರಲು ಹೋಗಿ ಬೇರೆ ತಪ್ಪುಗಳನ್ನು ಮಾಡುತ್ತೇವೆ. ಕೊನೆಗೆ ಎಲ್ಲಾ ತಪ್ಪುಗಳನ್ನು ಮಾಡಿ, ಹಲವು ತಪ್ಪುಗಳನ್ನು ಪದೇ ಪದೇ ಮಾಡುತ್ತಾ ಮುಳುಗದಿರುವಂತೆ ನೋಡಿಕೊಂಡು ಈಜು ಕಲಿತುಬಿಡುತ್ತೇವೆ. ಈ ಜೀವನವೂ ಈಜುವುದನ್ನು ಕಲಿಯುವ ಹಾಗೇನೇ! ಹಲವಾರು ತಪ್ಪುಗಳನ್ನು ಮಾಡುತ್ತೇವೆ, ಪಾಠ ಕಲಿಯುತ್ತೇವೆ. ಹೇಗೆ ಬದುಕಬೇಕೆಂಬುದಕ್ಕೆ ಬೇರೆ ದಾರಿಯಿಲ್ಲ. ತಪ್ಪುಗಳನ್ನು ಮಾಡುತ್ತಾ, ಪೆಟ್ಟು ತಿನ್ನುತ್ತಾ ಬದುಕುವುದನ್ನು ಕಲಿಯಬೇಕಾಗುತ್ತದೆ. ಪರಿಪೂರ್ಣವಾಗಿರುವುದಕ್ಕಿಂತ ಹೆಚ್ಚು ಮೌಲ್ಯಯುತವಾದುದನ್ನು ತಪ್ಪುಗಳು ಕಲಿಸುತ್ತವೆ. ಗಾಂಧೀಜಿಯವರು ಬಾಲ್ಯದಲ್ಲಿ ಮನೆಯ ಆಳಿನ ಜೇಬಿನಿಂದ ಕೆಲವು ಕಾಸುಗಳನ್ನು ಕದ್ದು ಬೀಡಿ ಸೇದಿದ್ದರು. ತನ್ನ ಅಣ್ಣನ ಚಿನ್ನದ ಆಭರಣದ ಚೂರನ್ನೂ ಕಳವು ಮಾಡಿದ್ದರು. ನಂತರದಲ್ಲಿ ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು, ತಪ್ಪನ್ನು ಒಪ್ಪಿಕೊಂಡು ಪತ್ರದಲ್ಲಿ ಬರೆದು ಕಾಯಿಲೆಯಿಂದ ನರಳುತ್ತಿದ್ದ ತಂದೆಯವರಿಗೆ ಕೊಟ್ಟು ಅವರ ಮುಂದೆ ತಲೆ ತಗ್ಗಿಸಿ ನಿಂತಿದ್ದರು. ಮಲಗಿದ್ದ ತಂದೆಯವರು ಕಷ್ಟಪಟ್ಟು ಎದ್ದು ಕುಳಿತು ಅದನ್ನು ಓದಿ ಏನೂ ಮಾತನಾಡದೆ ಕಣ್ಣೀರು ಸುರಿಸಿ ಪತ್ರವನ್ನು ಹರಿದು ಹಾಕಿ ಮತ್ತೆ ಮಲಗಿದ್ದರು. ಅದು ಗಾಂಧಿಯ ಮೇಲೆ ಅಗಾಧ ಪರಿಣಾಮ ಬೀರಿತ್ತು ಮತ್ತು ಅವರ ವ್ಯಕ್ತಿತ್ವ ರೂಪಿಸಲು ಪ್ರಧಾನ ಪಾತ್ರ ವಹಿಸಿತ್ತು.
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||
     ಭೂತಗಳು ಕಾಡದಿರಲು ಏನು ಮಾಡಬೇಕು? ಹಿಂದಿನದನ್ನು ಮರುಮಾತಾಡದೆ ಒಪ್ಪಿಕೊಂಡುಬಿಡಬೇಕು. ಹಿಂದಿನ ನಮ್ಮ ಮತ್ತು ಇತರರ ತಪ್ಪುಗಳನ್ನು ಮರೆತು ಕ್ಷಮಿಸಿ, ಆ ತಪ್ಪುಗಳಿಂದ ಪಾಠಗಳನ್ನು ಕಲಿತು, ಅವನ್ನು ನಮ್ಮ ಮುಂದಿನ ಯಶಸ್ಸಿಗೆ ಮೆಟ್ಟಿಲುಗಳನ್ನಾಗಿಸಿಕೊಳ್ಳಬೇಕು. ನಮಗೆ ಎರಡು ಅವಕಾಶಗಳಿರುತ್ತವೆ: 'ತಪ್ಪುಗಳಿಂದ ಪಾಠ ಕಲಿಯಬೇಕು ಅಥವ ಸಮಸ್ಯೆಗಳಿಂದ ಓಡಿಹೋಗಬೇಕು'. ಭೂತದ ಕಾಟ ಬೇಡವೆಂದರೆ ಮೊದಲನೆಯದನ್ನು ಆರಿಸಿಕೊಳ್ಳಬೇಕು. ಇಂದು ನಾಳೆಗೆ ಭೂತವಾಗುವುದರಿಂದ ಇಂದು ಸರಿಯಾಗಿರುವಂತೆ ಎಚ್ಚರದಿಂದಿರಬೇಕು. ಯಾವುದಾದರೂ ಕೆಲಸ ಮಾಡಬೇಕೆಂದರೆ, ಅದು ನಮಗೆ ಹೊಸದಾಗಿದ್ದರೆ 'ಅನುಭವಸ್ಥ'ರನ್ನು ಕೇಳಬೇಕು ಅನ್ನುತ್ತಾರಲ್ಲವೇ? ಆ ಅನುಭವಸ್ಥರು ಯಾರೆಂದರೆ ಅಂತಹ ಕೆಲಸಗಳಲ್ಲಿ ತೊಡಗಿಕೊಂಡು, ತಪ್ಪುಗಳನ್ನು ಮಾಡಿ ತಿದ್ದಿಕೊಂಡವರು, ತಪ್ಪಾಗದಿರುವಂತೆ ಏನು ಮಾಡಬೇಕೆಂಬ ಅರಿವಿರುವವರು! ಬುದ್ಧಿವಂತರು ಇತರರ ತಪ್ಪುಗಳಿಂದ ಕಲಿತುಕೊಳ್ಳುತ್ತಾರಾದರೆ, ದಡ್ಡರು ತಮ್ಮದೇ ತಪ್ಪುಗಳಿಂದ ಪಾಠ ಕಲಿಯುತ್ತಾರೆ. ತಪ್ಪುಗಳು ನಾವು ಏನನ್ನು ಕಲಿಯಬೇಕಿದೆ ಎಂಬುದನ್ನು ತೋರಿಸುತ್ತವೆ. ಪ್ರಸಿದ್ಧ ಸಂಶೋಧಕ ಥಾಮಸ್ ಆಲ್ವಾ ಎಡಿಸನ್ ಹೇಳುತ್ತಿದ್ದುದೇನೆಂದರೆ, 'ನೂರು ಪ್ರಯೋಗಗಳು ವಿಫಲವಾದರೂ ಅದು ವಿಫಲವಲ್ಲ. ಈ ನೂರು ಪ್ರಯೋಗಗಳಿಂದ ಹೀಗೆ ಆಗುವುದಿಲ್ಲ ಎಂಬ ಜ್ಞಾನ ನಮಗೆ ಸಿಗುತ್ತದೆ.' ಹೊಸ ಹೊಸ ಸಂಶೋಧನೆಗಳು ಹಲವಾರು ತಪ್ಪುಗಳ ನಂತರವೇ ಆವಿಷ್ಕಾರವಾದದ್ದು ಅಲ್ಲವೇ?
    ಈ ಜೀವನವೇ ಅಂತಹದು, ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಕಳ್ಳನನ್ನು ಕಳ್ಳ ಎಂದರೆ ಅವನಿಗೆ ಏನೂ ಅನ್ನಿಸುವುದಿಲ್ಲ. ಸುಳ್ಳನನ್ನು, ಲಂಪಟನನ್ನು ಸುಳ್ಳ, ಲಂಪಟ ಎಂದರೆ ಬೇಸರವಾಗುವುದಿಲ್ಲ. ಕಳ್ಳ, ಸುಳ್ಳ, ಲಂಪಟರಲ್ಲದವರು ಸುಖಾಸುಮ್ಮನೆ ಇಂತಹ ಅಪವಾದಗಳಿಗೆ ಒಳಗಾದರೆ? ಅದೂ ತಮ್ಮ ಆಪ್ತರು, ಬಂಧುಗಳಿಂದ ಹೀಗೆ ದೂಷಿಸಲ್ಪಟ್ಟರೆ? ವರ್ಣನಾತೀತ ನೋವನ್ನು ಸಂಬಂಧಿಸಿದವರು ಅನುಭವಿಸುತ್ತಾರೆ. ನಿಧಾನವಾಗಿ ಯೋಚಿಸಿದರೆ, ಇದೂ ಒಂದು ರೀತಿಯಲ್ಲಿ ಭೂತದ ಕಾಟವೇ ಆಗಿರುತ್ತದೆ. ಹಿಂದಿನ ಯಾವುದೋ ಘಟನೆಗಳು, ಸಂಗತಿಗಳು, ವೈಯಕ್ತಿಕ ದ್ವೇಷಗಳು ಈ ರೀತಿಯ ಸುಳ್ಳು ಆಪಾದನೆಗಳಿಗೆ ಪ್ರೇರಣೆಯಾಗಿರುತ್ತವೆ. ತಮಗೆ ಆಗದವರ ಪ್ರತಿಯೊಂದು ನಡೆಯೂ ತಪ್ಪಾಗಿ ಗೋಚರಿಸುವುದರ ಫಲ ಇಂತಹ ಆಪಾದನೆಗಳು. ಆಗುವ ನೋವು, ನಿರಾಶೆ, ಹತಾಶೆಗಳನ್ನು ತಮಗೆ ಬೇಕಾದವರೊಂದಿಗೆ ಹಂಚಿಕೊಂಡು ಹಗುರವಾಗಬಹುದು. ಹೀಗೆ ಮಾಡುವುದು ಎಲ್ಲಾ ಸಂದರ್ಭಗಳಲ್ಲೂ ಸರಿಯಾಗಲಾರದು. ಅವರಿಂದ ಅನುಕಂಪ ಸಿಗಬಹುದು. ಪರಿಹಾರ ಸಿಗದು ಎಂಬಂತಹ ಸಂಗತಿಗಳನ್ನು ಹಂಚಿಕೊಳ್ಳದಿರುವುದೇ ಒಳಿತು. ನೋವಿನ ತೀವ್ರತೆ ಕಡಿಮೆಯಾಗಬೇಕೆಂದರೆ ಮನಸ್ಸಿಗೆ ತಿಳುವಳಿಕೆ ಹೇಳಬೇಕಾಗುತ್ತದೆ: "ನೋಡು, ಅವರು ಏನು ಹೇಳಿದರು, ಏನು ಮಾಡಿದರು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ, ಮರೆತುಬಿಡು. ನಿನ್ನನ್ನು ಅಲಕ್ಷ್ಯಿಸಿದ, ಅವಮಾನಿಸಿದ ಸಂಗತಿಗಳನ್ನು ಮನಸ್ಸಿನಿಂದ ತೆಗೆದುಹಾಕಿಬಿಡು. ನೀನು ಸರಿಯಾಗಿರುವೆ ಎಂದು ನಿನಗೆ ಗೊತ್ತಿದೆ ತಾನೇ? ಅಷ್ಟು ಸಾಕು. ನಿನ್ನ ಕುರಿತ ಅವರ ಭಾವನೆಗಳು ಬದಲಾಗುವುದೇ ಇಲ್ಲವೆನಿಸಿದರೆ ಅವರನ್ನು ಮರೆತುಬಿಡು. ನೋಯುತ್ತಿರುವುದು ನಿನ್ನ ಹೃದಯ. ಅದನ್ನು ನೀನೇ ಸಂತಯಿಸಬೇಕು. ಅಳುತ್ತಿರುವುದು ನಿನ್ನ ಕಣ್ಣು. ನೀನೇ ನಿನ್ನ ಕೈಯಿಂದ ಅದನ್ನು ಒರೆಸಿಕೊಳ್ಳಬೇಕು. ಜೀವ ನಿನ್ನದು, ಜೀವನ ನಿನ್ನದು. ನಿನ್ನ ಆತ್ಮ ಒಪ್ಪುವಂತೆ ಜೀವಿಸು. ನಿನ್ನ ತಪ್ಪೇನಾದರೂ ಇದ್ದರೆ ಸರಿಪಡಿಸಿಕೋ. ತಪ್ಪಿಲ್ಲದಿದ್ದರೆ ಚಿಂತಿಸುವ ಕಾರಣವಿಲ್ಲ. ಎದ್ದು ನಿಲ್ಲು. ಮುಂದೆ ನಡೆ, ಎಲ್ಲರಿಗೂ ನೀನು ಏನು ಎಂಬುದನ್ನು ತೋರಿಸು."
ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
ರೀತಿ ಸುಂದರವಿರೆ ಯಶ ನಿನದೆ ಮೂಢ ||
     ಆತ್ಮಾವಲೋಕನ ಮಾಡಿಕೊಂಡು, ಭೂತಕಾಲದ ತಪ್ಪುಗಳಿಂದ ಪಾಠ ಕಲಿತು, ವರ್ತಮಾನದಲ್ಲಿ ಸರಿಯಾಗಿ ನಡೆದರೆ ಯಾವ ಭೂತಕಾಟವೂ ನಮ್ಮನ್ನು ಕಾಡಿಸದು. ಭವಿಷ್ಯತ್ತೂ ಸಹ ಸುಂದರವಾಗಿರುವುದು.
-ಕ.ವೆಂ.ನಾಗರಾಜ್.
**************
ದಿನಾಂಕ 9.2.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಫೆಬ್ರವರಿ 3, 2015

ಬಲಕ್ಕೇ ಬೆಲೆ


ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ
ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ? |
ವೀರನಿಗೆ ಅವಕಾಶ ಹೇಡಿಗದು ನೆಪವು
ನಿಲುವು ಸರಿಯಿರಲು ಗೆಲುವೆ ಮೂಢ ||
     ಕೇವಲ ವಿದ್ಯೆಯನ್ನು ಮನನ ಮಾಡಿಕೊಂಡರೆ ಪ್ರಯೋಜನವಿಲ್ಲ, ವಿದ್ಯೆಯ ಅಂತಸ್ಸತ್ವವನ್ನು ಅರಿತವರಾಗಬೇಕು ಎಂದು ಅರಿತೆವು. ವಾಸ್ತವತೆಗೆ ಆ ಅರಿವು ಸರಿಹೊಂದಬೇಕು. ಯಾವುದೇ ವಿಷಯದ ಸ್ಪಷ್ಟ ಅರಿವಿಲ್ಲದಿದ್ದಲ್ಲಿ ಆ ಕುರಿತು ಮನಸ್ಸನ್ನು ಕೇಂದ್ರೀಕರಿಸುವುದು ಸಾಧ್ಯವಿಲ್ಲವೆಂಬುದನ್ನೂ ಕಂಡುಕೊಂಡೆವು. ಈಗ ಮುಂದಿನ ಸಂಗತಿಯ ಬಗ್ಗೆ ಗಮನ ಹರಿಸೋಣ. ದೇಹ ಮತ್ತು ಮನಸ್ಸುಗಳ ಸಂಬಂಧ ಪರಸ್ಪರ ಪೂರಕವಾಗಿರುತ್ತದೆ. ಮನಸ್ಸಿನ ಇಚ್ಛೆಗೆ ತಕ್ಕಂತೆ ದೇಹ ಸಹಕರಿಸದಿದ್ದರೆ ಪ್ರಯೋಜನವಿಲ್ಲ. ಈ ಕಾರಣದಿಂದಾಗಿ ದೈಹಿಕ ಬಲಕ್ಕೆ ಅರಿವಿಗಿಂತ ಹೆಚ್ಚಿನ ಪ್ರಾಧಾನ್ಯತೆ ಬರುತ್ತದೆ. ದೈಹಿಕ ಬಲದ ಮಹತ್ವದ ಬಗ್ಗೆ ನೋಡೋಣ.
     ಶಕ್ತಿ ಎಂದರೆ ಮನಸ್ಸು ಮತ್ತು ದೇಹದ ಕಾರ್ಯಗಳ ಹಿತಕರ ಮಿಶ್ರಣದ ಫಲ. ದೇಹ ಮತ್ತು ಮನಸ್ಸುಗಳು ಒಟ್ಟಾದರೆ ಒಂದು ಶ್ರೇಷ್ಠ ಚೈತನ್ಯದ ಉದಯವಾಗುತ್ತದೆ. ಒಬ್ಬ ವ್ಯಕ್ತಿಗೆ ಅಸಾಧಾರಣ ಮನೋಬಲವಿದ್ದು, ಆರೋಗ್ಯಕರ ಶರೀರವಿಲ್ಲದಿದ್ದರೆ ಆತನ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಅವನು ಅಸಮರ್ಥನಾಗುತ್ತಾನೆ. ಕಾಯಿಲೆಗಳಿಂದ ನರಳುತ್ತಿರುವ, ಸಾಯುವ ಹಂತದಲ್ಲಿರುವವರು ತಮ್ಮ ಇಚ್ಛೆಗಳನ್ನು ತಾವು ಬಯಸಿದಂತೆ ಕ್ರಿಯಾರೂಪಕ್ಕೆ ತರಲಾರರು. ಒಬ್ಬ ಆರೋಗ್ಯಕರ, ಸಧೃಢಕಾಯ ವ್ಯಕ್ತಿ ಸಹ ಶಕ್ತ ಮನೋಬಲವಿಲ್ಲದಿದ್ದರೆ ಏನನ್ನೂ ಸಾಧಿಸಲಾರ. ಹೀಗಾಗಿ ಬಲವೆಂದರೆ ಅದು ಮನಸ್ಸು ಮತ್ತು ದೇಹಗಳ ಸಂಯುಕ್ತ ಕ್ರಿಯೆಯಾಗಿದ್ದು, ಇದು ಜ್ಞಾನ, ವಾಕ್ಕು, ಮನಸ್ಸು, ಸಂಕಲ್ಪ, ನೆನಪು, ಧ್ಯಾನ, ಅರಿವು, ಇತ್ಯಾದಿಗಳಿಗಿಂತ ಮೇಲಿನ ಸ್ಥಾನದಲ್ಲಿ ನಿಲ್ಲುತ್ತದೆ. ಬಲವಿಲ್ಲದ ನೂರು ಪಂಡಿತರನ್ನು ಬಲವಿರುವ (ಪಾಂಡಿತ್ಯ ಮತ್ತು ಶಕ್ತಿ) ಒಬ್ಬ ಸೋಲಿಸಬಲ್ಲ ಎಂಬುದು ಪ್ರಸಿದ್ಧ ನುಡಿಯಾಗಿದೆ.
     ಹಿಂದೆ ಗುರುಕುಲದಲ್ಲಿ ಶಿಷ್ಯ ಗುರುವಿನೊಂದಿಗೇ ಕುಟೀರದಲ್ಲಿ ವಾಸವಿದ್ದು ವಿದ್ಯೆ ಕಲಿಯಬೇಕಿತ್ತು. ಶಿಷ್ಯರಾದವರು ಗುರುವಿನ ಸೇವೆ ಮಾಡಬೇಕಿತ್ತು. ಒಬ್ಬ ಸೊರಗಿಹೋಗಿರುವ, ರೋಗಿಷ್ಠ, ಶಕ್ತಿಹೀನ ಶಿಷ್ಯನಿಗೆ, ಆತ ಎಷ್ಟೇ ಕಲಿಯುವ ಶಕ್ತಿ ಮತ್ತು ಸಾಮರ್ಥ್ಯ ಇದ್ದರೂ, ಗುರುವಿನ ಸೇವೆ ಮಾಡಲು ಆಗುವುದೇ ಇಲ್ಲ. ಶಕ್ತಿ ಇದ್ದಿದ್ದರೆ, ಆತ ಗುರುವಿನ ಬಳಿ ಹೋಗಿ ನಿಲ್ಲಬಲ್ಲ, ಸೇವೆ ಮಾಡಬಲ್ಲ, ಗುರುವಿನ ಸಮೀಪ ಕುಳಿತು ಯೋಗ್ಯ ವಿದ್ಯೆಯನ್ನು ಕಲಿಯಬಲ್ಲ, ಗುರು ಹೇಳಿದ್ದನ್ನು ತಿಳಿಯಬಲ್ಲ, ದೇಹ ಸಾಮರ್ಥ್ಯದಿಂದ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಲ್ಲ, ಆಗ ಮಾತ್ರ ಆತನ ಕಲಿಕೆ ಪೂರ್ಣವಾಗುತ್ತಿತ್ತು.
     ನೂಕು ನುಗ್ಗಲು ಅಥವ ಹೆಚ್ಚು ಜನಸಂದಣಿ ಇರುವ ಸ್ಥಳದಲ್ಲಿ ಒಬ್ಬ ಠೊಣಪ ಸಣಕಲನೊಬ್ಬನ ಕಾಲನ್ನು ಅಕಸ್ಮಾತ್ತಾಗಿ ತುಳಿದುಬಿಟ್ಟನೆಂದು ಇಟ್ಟುಕೊಳ್ಳಿ. ಆ ಸಣಕಲ ಠೊಣಪನಿಗೆ, 'ಏಯ್, ಕಣ್ಣು ಕಾಣಿಸಲ್ವಾ? ನೋಡಿಕೊಂಡು ಹೋಗಕ್ಕೆ ಆಗಲ್ವಾ?' ಅನ್ನುತ್ತಾನೆ ಎಂದುಕೊಳ್ಳೋಣ. ಠೊಣಪ, 'ಕಾಣಲಿಲ್ಲ, ಸಾರಿ' ಎಂದಾಗ ಸಣಕಲ ಸುಮ್ಮನಿರದೆ, 'ಮಾಡೋದು ಮಾಡಿಬಿಟ್ಟು ಸಾರಿ ಅಂತೆ ಸಾರಿ. ಕೊಬ್ಬು ಜಾಸ್ತಿ' ಎಂದುಬಿಟ್ಟರೆ? ಸಣಕಲ ದೊಡ್ಡ ವಿದ್ಯಾವಂತ, ಪ್ರಭಾವಶಾಲಿ ಇರಬಹುದು. ಆದರೆ ಠೊಣಪ ಮುಷ್ಟಿ ಕಟ್ಟಿ ಒಂದು ಬಿಗಿದುಬಿಟ್ಟರೆ ಸಣಕಲನ ಶರೀರದ ಆಕಾರವೇ ಬದಲಾಗುವುದಿಲ್ಲವೇ? ನಮ್ಮ ರಾಜಕೀಯ ನಾಯಕರುಗಳಾದರೂ ಬಹತೇಕರು ಜನಬಲ, ಜಾತಿಬಲ, ಅಧಿಕಾರಬಲ, ತೋಳ್ಬಲದಲ್ಲಿ ಮುಂದಿರುವವರೇ. ಅವರ ಮಾತುಗಳು, ನಡೆ-ನುಡಿಗಳು ಇಷ್ಟವಾಗದಿದ್ದರೂ ಅವರ ವಿರುದ್ಧ ಯಾರಾದರೂ ಎದುರು ಮಾತನಾಡುತ್ತಾರೆಯೇ? ಬಲದ ಬಲ ಇದು! ಒಂದು ಸಂಸ್ಕೃತದ ಸುಭಾಷಿತ ಹೇಳುತ್ತದೆ: "ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವಚ ನೈವಚ; ಅಜಾಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲಘಾತಕಃ"- ('ಕುದುರೆಯಲ್ಲ, ಆನೆಯಲ್ಲ, ಹುಲಿಯಂತೂ ಅಲ್ಲವೇ ಅಲ್ಲ, ಮೇಕೆಯನ್ನು ಬಲಿ ಕೊಡುತ್ತಾರೆ, ದೇವರೂ ಸಹ ದುರ್ಬಲರನ್ನೇ ಘಾತಿಸುತ್ತಾನೆ'). ಇದರ ಅರ್ಥ ಸ್ಪಷ್ಟವಾಗಿದೆ. ಬಲವಿರುವವರ ತಂಟೆಗೆ ಯಾರೂ ಹೋಗುವುದಿಲ್ಲ!
     ಭೂಮಿ ಧ್ಯಾನಿಸುತ್ತಿದೆ ಎಂದರೆ ವಿಚಿತ್ರವಾಗಿದೆಯೆಂಬಂತೆ ಭಾವಿಸಿಯಾರು! ಧ್ಯಾನವೆಂದರೆ ಕಣ್ಣು ಮುಚ್ಚಿ ಕುಳಿತು ಯಾವುದೋ ಮಂತ್ರ ಪಠಿಸುತ್ತಾ ಕೂರುವುದಲ್ಲ. ಧ್ಯಾನವೆಂದರೆ ಒಂದು ನಿರ್ದಿಷ್ಟ ವಿಷಯದ ಬಗ್ಗೆ ತದೇಕಚಿತ್ತರಾಗಿ ಚಿಂತಿಸುತ್ತಾ ವಿಚಲಿತರಾಗದೆ ಧ್ಯಾನದ ಗಮ್ಯವನ್ನು ತಲುಪಲು ಉಪಕ್ರಮಿಸುವುದು. ಭೂಮಿ ತನ್ನ ಅಕ್ಷದ ಸುತ್ತಲೂ ನಿರ್ದಿಷ್ಟ ಸಮಯ ಅನುಸರಿಸಿ ಸುತ್ತುತ್ತಿರುತ್ತದೆ, ಸೂರ್ಯನ ಸುತ್ತಲೂ ಸುತ್ತಿಬರುವಾಗಲೂ ನಿರ್ದಿಷ್ಟ ನಿಯಮ ಅನುಸರಿಸಿ ನಡೆಯುತ್ತದೆ. ಭೂಮಿ ಚಂಚಲವಾಗಿದ್ದರೆ, ಅರ್ಥಾತ್ ಧ್ಯಾನಿಸದಿದ್ದಿದ್ದರೆ, ಹೇಗೆ ಹೇಗೋ ಸುತ್ತುತ್ತಿತ್ತು ಮತ್ತು ಅದರ ಪರಿಣಾಮ ಸಹ ವಿಪರೀತವಾಗಿರುತ್ತಿತ್ತು ಅಲ್ಲವೇ? ಭೂಮಿಗೆ ಹೀಗೆ ಧ್ಯಾನಿಸುವ ಶಕ್ತಿ ಬಂದಿದ್ದು ಅದು ಹೊಂದಿರುವ ಪ್ರಚಂಡ ಬಲದಿಂದ! ಆದ್ದರಿಂದ ಬಲ ಅಥವ ಶಕ್ತಿ ಅನ್ನುವುದು ಭೌತಿಕ ಬಲ ಮತ್ತು ಜ್ಞಾನ ಮತ್ತು ತಿಳುವಳಿಕೆಯ ಸಂಯುಕ್ತ ಪರಿಣಾಮ ಎನ್ನಬಹುದು. ಎಲ್ಲಾ ಜೀವಿಗಳ ಯಶೋಗಾಥೆಗೆ ಬಲವೇ ಕಾರಣವಾಗಿದೆ. ಇಡೀ ಪ್ರಪಂಚವೇ ಒಂದಲ್ಲಾ ಒಂದು ಶಕ್ತಿಯ ಕಾರಣದಿಂದ ಅಸ್ತಿತ್ವದಲ್ಲಿದೆ. 'ನೀನು ಏನು ಚಿಂತಿಸುತ್ತೀಯೋ, ಅದೇ ನೀನಾಗುತ್ತೀಯೆ' ಎಂಬುದು ಒಂದು ನಾಣ್ಣುಡಿ. ಒಬ್ಬ ವ್ಯಕ್ತಿ ತನ್ನನ್ನು ಒಬ್ಬ ದುರ್ಬಲ, ಏನೂ ಪ್ರಯೋಜನವಿಲ್ಲದವನು, ಜನರಿಗೆ ಬೇಡವಾದವನು, ಬಡವ, ಇತ್ಯಾದಿ ಅಂದುಕೊಳ್ಳುತ್ತಾನೆ ಎಂದಿಟ್ಟುಕೊಳ್ಳಿ. ಅವನು ಸಹಜವಾಗಿ, ತನ್ನನ್ನೇ ತಾನು ಸಮ್ಮೋಹಕ್ಕೆ ಒಳಪಡಿಸಿಕೊಂಡಂತೆ,  ಅದೇ ರೀತಿ ಆದರೆ ಆಶ್ಚರ್ಯಪಡಬೇಕಿಲ್ಲ. ತನ್ನನ್ನು ತಾನು ನಂಬುವ, ತನ್ನ ಶಕ್ತಿಯಲ್ಲಿ ಭರವಸೆ ಇಟ್ಟುಕೊಂಡ ವ್ಯಕ್ತಿ, ತನ್ನ ಮಾನಸಿಕ ಮತ್ತು ಭೌತಿಕ ಬಲಗಳ ಸೂಕ್ತ ಸಂಯೋಜನೆಯಿಂದಾಗಿ ಖಂಡಿತ ಮುಂದಕ್ಕೆ ಬರುತ್ತಾನೆ. ಆದ್ದರಿಂದ ಬಲ ಗಳಿಸಿಕೊಳ್ಳುವಲ್ಲಿ ಸಾಧಕ ಮುಂದುವರೆಯುತ್ತಾನೆ.
     ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯವಿರುವುದೇ ಆರೋಗ್ಯ. ಶರೀರದ ಆಲಸ್ಯ ಮತ್ತು ಮನಸ್ಸಿನ ಚಂಚಲತೆ ಇವುಗಳನ್ನು ತೊರೆಯುವುದು ಇದಕ್ಕೆ ಅತ್ಯಗತ್ಯ. ಇದನ್ನು ಗಳಿಸಲು ಯೋಗಾಭ್ಯಾಸ ಉತ್ತಮ ಮಾರ್ಗವಾಗಿದೆ. ಮಹಾಕವಿ ಕಾಳಿದಾಸ ಹೇಳಿರುವಂತೆ 'ಶರೀರಮಾದ್ಯಂ ಖಲು ಧರ್ಮಸಾಧನಂ' (ಎಲ್ಲ ಧರ್ಮಸಾಧನೆಗೂ ಶರೀರವೇ ಮೊದಲು). ಶರೀರದ ಸ್ವಾಸ್ಥ್ಯ ಕಾಪಾಡುವುದು ಬಹಿರಂಗ ಸಾಧನೆಯಾದರೆ, ಮನಸ್ಸಿನ ಸ್ವಾಸ್ಥ್ಯ ಕಾಪಾಡುವುದು ಅಂತರಂಗ ಸಾಧನೆ ಎನಿಸುತ್ತದೆ. ಅಂತರಂಗ ಮತ್ತು ಬಹಿರಂಗ ಸಾಧನೆಗಳನ್ನು ಸಾಧಿಸುವವನೇ ಸಾಧಕ.
ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು
ಇರುವುದಾದರೆ ಪಾಪ ದುರ್ಬಲತೆಯೊಂದೆ |
ದುರ್ಬಲತೆ ಪಾಪ ದುರ್ಬಲತೆಯೇ ಸಾವು
ವಿವೇಕವಾಣಿಯಿದು ನೆನಪಿರಲಿ ಮೂಢ ||
     ಪ್ರಪಂಚದಲ್ಲಿನ ಎಲ್ಲಾ ದುಃಖಗಳ, ಅಸಂತೋಷಗಳ ಕಾರಣ ದುರ್ಬಲತೆ ಎಂದು ವೇದಾಂತ ಸಾರುತ್ತದೆ. ನಾವು ಅಸಹಾಯಕರಾಗುವುದು, ಸುಳ್ಳು ಹೇಳುವುದು, ಕೊಲೆಗಾರರಾಗುವುದು, ಇನ್ನಿತರ ಅಪರಾಧಗಳನ್ನು ಮಾಡುವುದು, ಇತ್ಯಾದಿಗಳ ಮೂಲ ಕಾರಣವೆಂದರೆ ದುರ್ಬಲರಾಗಿರುವುದು. ದುರ್ಬಲರಾಗಿರುವ ಭಯ ಕೀಳರಿಮೆಗೆ, ಪಾಪ ಮಾಡುವುದಕ್ಕೆ ನಿಶ್ಚಿತ ಮೂಲಕಾರಣವಾಗಿದೆ.  ದುರ್ಬಲರಾಗಿರುವುದರಿಂದ ನಾವು ಸಾಯುತ್ತೇವೆ. ನಮ್ಮನ್ನು ದುರ್ಬಲಗೊಳಿಸುವಂತಹದು ಏನೂ ಇಲ್ಲವೆಂದರೆ, ಅಲ್ಲಿ ಸಾವಿಲ್ಲ, ದುಃಖವಿಲ್ಲವೆಂಬದು ವಿವೇಕಾನಂದರ ನುಡಿ. ಶಕ್ತಿಯೆಂಬುದು ಜೀವನ, ಶಕ್ತಿಯೆಂಬುದು ಪುಣ್ಯ; ದುರ್ಬಲತೆಯೆಂಬುದು ಮರಣ, ದುರ್ಬಲತೆಯೆಂಬುದು ಪಾಪ.
     ಈ ಭರತಭೂಮಿ ಶತಮಾನಗಳ ಕಾಲ ದಾಸ್ಯಕ್ಕೊಳಗಾಗಲು ಕಾರಣ ಮಾನಸಿಕ ದುರ್ಬಲತೆಯಲ್ಲದೇ ಮತ್ತೇನಲ್ಲ. ವೀರ-ಶೂರರ ನಾಡು ತುಳಿತಕ್ಕೊಳಗಾಯಿತೆಂದರೆ ಅದು ನಮ್ಮತನದ ಅರಿವಿನ ಕೊರತೆಯಲ್ಲದೆ ಬೇರೆಯಲ್ಲ. ಇತರರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದವರು ನಾವೇನೇ! ಮಾನಸಿಕ ಮತ್ತು ದೈಹಿಕ ಬಲ ನಮ್ಮ ಮಂತ್ರವಾದರೆ ಯಾವ ಕುಯುಕ್ತಿಯೂ ಅಲುಗಾಡಿಸಲಾಗದು. ಸುಯೋಗ್ಯ ಶಿಕ್ಷಣ ಪದ್ಧತಿ ರೂಪಿತವಾಗಿ, ಮನೆಮನೆಗಳು ಉತ್ತಮ ಸಂಸ್ಕಾರ ರೂಪಿಸುವ ಶಕ್ತಿ ಕೇಂದ್ರಗಳಾಗುವತ್ತ ಪ್ರಾಜ್ಞರು, ಗುರು-ಹಿರಿಯರು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಿದೆ. ಬಲ -ದೈಹಿಕ ಮತ್ತು ಮಾನಸಿಕ- ನಮ್ಮ ಧ್ಯೇಯವಾಗಲಿ. ಎಳೆಯ ಮಗು ಹಾಲು ಕುಡಿಯುತ್ತಾ ಶಕ್ತಿಯನ್ನು ಗಳಿಸಿಕೊಳ್ಳಲಿ, ಬೆಳೆಯುತ್ತಾ ಅಂಬೆಗಾಲಿಡುತ್ತಾ ಶಕ್ತಿ ವೃದ್ಧಿಸಿಕೊಳ್ಳಲಿ, ತರುಣರಾಗಿ ಶಕ್ತಿಯ ಚೈತನ್ಯದಿಂದ ನಳನಳಿಸಲಿ, ಆ ಮೂಲಕ ಮತ್ತೊಮ್ಮೆ ನಮ್ಮ ನಾಡು ವಿಶ್ವಕ್ಕೆ ಗುರುವಾಗಲಿ ಎಂದು ಆಶಿಸೋಣ. ಬಲಶಾಲಿ ನಾಡಿನ ಮಾತನ್ನು ಜಗತ್ತು ಕೇಳುತ್ತದೆ, ಒಪ್ಪಿಕೊಳ್ಳುತ್ತದೆ.
-ಕ.ವೆಂ. ನಾಗರಾಜ್.
****************
2.2.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: