"ದುರ್ಬಲತೆಗಳ ಅರಿವಿರುವವರು ಬಲಶಾಲಿಯಾಗುವರು; ಲೋಪಗಳನ್ನು ಒಪ್ಪಿಕೊಳ್ಳುವವರು ಒಳ್ಳೆಯವರೆನಿಸುವರು; ತಪ್ಪುಗಳನ್ನು ತಿದ್ದಿಕೊಂಡು ನಡೆವವರು ಬುದ್ಧಿವಂತರೆನಿಸುವರು."
ಜಗತ್ತಿನ ಮಹಾಕಾವ್ಯ ಎನ್ನಬಹುದಾದ ರಾಮಾಯಣ ಬರೆದ ವಾಲ್ಮೀಕಿ ಇಂದು ಬದುಕಿದ್ದಿದ್ದರೆ? ಆತನ ಹಿನ್ನೆಲೆಯನ್ನು ಹುಡುಕಿ, ಕೆದಕಿ ರಂಪ-ರಾಮಾಯಣ ಮಾಡುತ್ತಿದ್ದರು. 'ಆದರ್ಶ ಪುರುಷ ರಾಮನ ಆದರ್ಶ ಗುಣಗಳು ಎಲ್ಲರಲ್ಲೂ ಬರಲಿ ಎನ್ನುವ ನೀನು ಹಿಂದೆ ಎಷ್ಟು ಆದರ್ಶವಾಗಿ ಬದುಕಿದ್ದೆ?' ಎಂದು ಕೇಳುತ್ತಿದ್ದರು. 'ನಿನ್ನ ಸ್ವಾರ್ಥಕ್ಕಾಗಿ ಎಷ್ಟು ಜನರ ತಲೆ ಒಡೆದು ಹಣ ದೋಚಿದೆ, ಎಷ್ಟು ಪ್ರಾಣಿಗಳನ್ನು ಕೊಂದೆ, ಎಷ್ಟು ಸಂಸಾರಗಳನ್ನು ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದೆ?' ಎಂದು ಪ್ರಶ್ನಿಸುತ್ತಿದ್ದರು. ಈ ಕುರಿತ ಚರ್ಚೆ, ಕೆಸರೆರಚಾಟ, ದೂಷಣೆ, ನಿಂದನೆಗಳಲ್ಲಿ ರಾಮಾಯಣದ ಮಹತ್ವ ಹಿಂದೆ ಸರಿದುಬಿಡುತ್ತಿತ್ತು. 'ನದಿ ಮೂಲ, ಋಷಿ ಮೂಲ ಹುಡುಕಬಾರದು' ಎಂಬ ಗಾದೆ ಹುಟ್ಟಿಕೊಂಡದ್ದು ಬಹುಷಃ ಇಂತಹ ಕಾರಣಕ್ಕಾಗಿಯೇ ಇರಬೇಕು. ಗಾಂಧೀಜಿಯವರು ತಮ್ಮ ಕಾಮನಿಗ್ರಹ ಶಕ್ತಿಯನ್ನು ಪರಿಶೀಲಿಸಲು ಇಬ್ಬರು ನಗ್ನ ಹೆಣ್ಣು ಮಕ್ಕಳೊಂದಿಗೆ ಮಲಗಿದ್ದೆನೆಂದು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಇಂದು ಗಾಂಧೀಜಿ ಇದ್ದಿದ್ದರೆ ಅವರು ನಿತ್ಯಾನಂದರಿಗಿಂತ ಕೀಳುಮಟ್ಟದಲ್ಲಿ ಬಿಂಬಿತರಾಗಿರುತ್ತಿದ್ದರು ಎಂಬುದರಲ್ಲಿ ಅನುಮಾನವೇ ಇಲ್ಲ.
ವ್ಯಕ್ತಿಯೊಬ್ಬನ ಭೂತಕಾಲದ ಸಂಗತಿಗಳು ವರ್ತಮಾನದಲ್ಲಿ ಅವನನ್ನು ಭೂತವಾಗಿ ಕಾಡುವ ಸಂದರ್ಭಗಳು ಬರಬಹುದು ಎಂಬುದನ್ನು ತಿಳಿಸುವ ಸಲುವಾಗಿ ಮೇಲಿನ ಉದಾಹರಣೆಗಳನ್ನು ಕೊಟ್ಟಿರುವೆ. ನನ್ನನ್ನು ಈಗಲೂ ಹಲವು ಭೂತಗಳು ಕಾಡುತ್ತಿರುತ್ತವೆ. ಅಂತಹ ಒಂದು ಭೂತದ ಬಗ್ಗೆ ತಿಳಿಸುವೆ. ಆಗ ನನಗೆ ಸುಮಾರು 7-8 ವರ್ಷಗಳಿದ್ದಿರಬಹುದು. ಚಿಕ್ಕಮಗಳೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಶಾಲೆ ಮುಗಿಸಿಕೊಂಡು ಸ್ಲೇಟು, ಪುಸ್ತಕವಿದ್ದ ಚೀಲವನ್ನು ತೂಗಾಡಿಸುತ್ತಾ ಬರುತ್ತಿದ್ದೆ. ದಾರಿಯ ಬದಿಯಲ್ಲಿ ನಿಂತಿದ್ದ ಲಾರಿಯ ಬಂಪರಿನ ಬದಿಗಳಲ್ಲಿನ ಲೋಹದ ಪುಟ್ಟ ಸ್ತಂಭಗಳಿಗೆ ಕಟ್ಟಿದ್ದ ಕುಚ್ಚನ್ನು (ಹೆಣ್ಣು ಮಕ್ಕಳು ಜಡೆಗೆ ಕಟ್ಟಿಕೊಳ್ಳುವಂತಹದು) ಮುಟ್ಟಿ ಮುಂದೆ ಹೋಗುತ್ತಿದ್ದಾಗ ಧುತ್ತನೆ ಎದುರು ಬಂದು ನಿಂತಿದ್ದ ಲಾರಿಯ ಕ್ಲೀನರ್ ನನ್ನ ಕೆನ್ನೆಗೆ ಪಟಾರನೆ ಬಾರಿಸಿದ್ದ. ನಾನು ತತ್ತರಿಸಿಹೋಗಿದ್ದೆ, ಹೆದರಿಬಿಟ್ಟಿದ್ದೆ. ಈಗಲೂ ಸಹ ಯಾವದೇ ವಾಹನದ ಬಂಪರಿನಲ್ಲಿ ಕಟ್ಟಿರುವ ಕುಚ್ಚನ್ನು ಕಂಡಾಗ ನನ್ನ ಕೆನ್ನೆಗೆ ಬಿದ್ದಿದ್ದ ಆ ಏಟು ಮತ್ತು ಹೊಡೆದವನ ಮುಖ ನೆನಪಾಗುತ್ತದೆ. ಕುಚ್ಚನ್ನು ಮುಟ್ಟಲು ಈಗಲೂ ಹಿಂಜರಿಕೆಯಾಗುತ್ತದೆ. ಹಿಂದೆ ನಡೆದ ಪೇಚಿನ ಪ್ರಸಂಗಗಳು, ಅಕಾರಣವಾಗಿಯೋ, ಸಕಾರಣವಾಗಿಯೋ ಅವಮಾನಿತರಾಗುವ ಪ್ರಸಂಗಗಳು, ಒಟ್ಟಾರೆಯಾಗಿ ಹೇಳಬೇಕೆಂದರೆ ಕೆಟ್ಟ ಮತ್ತ ಕಹಿ ಘಟನೆಗಳು ಸಾಮಾನ್ಯವಾಗಿ ಎಲ್ಲರನ್ನೂ ಭೂತವಾಗಿ ಕಾಡುತ್ತವೆ. 'ಅವನಿ(ಳಿ)ಗೆ ಭೂತ ಮೆಟ್ಟಿಕೊಂಡಿದೆ' ಎಂಬಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ನಿಜವಾಗಿ ನೋಡಿದರೆ ಮೆಟ್ಟಿಕೊಂಡಿರುವುದು ಹೊರಗಿನ ಭೂತವಲ್ಲ, ಒಳಗಿನ ಭೂತವೇ ಆಗಿರುತ್ತದೆ. ಒಬ್ಬರೇ ತಮ್ಮಷ್ಟಕ್ಕೆ ತಾವೇ ಗುಣುಗುಣಿಸುತ್ತಾ ಹೋಗುವವರು, ಏನನ್ನೋ ನೆನೆಸಿಕೊಂಡು ತಮ್ಮಷ್ಟಕ್ಕೆ ತಾವೇ ನಗುವವರು, ಅಳುವವರು ಮುಂತಾದವರು ಇಂತಹ ಭೂತಚೇಷ್ಟೆಗೆ ಒಳಗಾದವರೇ!
ಭೂತ ಎಂದಾಕ್ಷಣ ದೆವ್ವ, ಪ್ರೇತ, ಪಿಶಾಚಿ, ಇತ್ಯಾದಿಗಳ ಕಲ್ಪನೆಯ ರೂಪ ಕಣ್ಣು ಮುಂದೆ ಬರುತ್ತದೆ. ಆದರೆ ವಾಸ್ತವಿಕವಾಗಿ ಭೂತ ಎಂದರೆ ಹಿಂದೆ ನಡೆದದ್ದು ಎಂದು ಅರ್ಥ. ಹಾಗಾದರೆ ಈ ಭೂತ ಕಾಡುವುದು ಅಂದರೆ? ನಾವು ಸಾಮಾನ್ಯವಾಗಿ ವರ್ತಮಾನದಲ್ಲಿರುವುದು ಕಡಿಮೆ. ಒಂದೋ, ಕಳೆದುಹೋದ ಸಂಗತಿಗಳ ಬಗ್ಗೆ ಚಿಂತಿತರಾಗಿರುತ್ತೇವೆ, ಮುಳುಗಿಹೋಗಿರುತ್ತೇವೆ ಅಥವ ಮುಂದೆ ಆಗಬಹುದಾದ ಭವಿಷ್ಯತ್ತಿನ ವಿಷಯಗಳ ಕುರಿತು ಕಲ್ಪನೆ, ಊಹಾಪೋಹಗಳಲ್ಲಿ ಕಳೆದುಹೋಗಿರುತ್ತೇವೆ. ಕಳೆದುಹೋದ ಸಂಗತಿಗಳ ಬಗ್ಗೆ ಚಿಂತಿತರಾಗಿರುವದೇ ಭೂತ ನಮ್ಮನ್ನು ಕಾಡುವುದು ಎಂದು ತಿಳಿಯಬೇಕು. ಕಳೆದುಹೋದುದನ್ನು ಮತ್ತೆ ಸರಿಪಡಿಸಲಾಗುವುದಿಲ್ಲ. ಕಾಲವನ್ನು ಹಿಂದಕ್ಕೆ ತಿರುಗಿಸಲು ಸಾಧ್ಯವೇ? ಹೀಗಿರುವಾಗ ಹಿಂದಿನ ಸಂಗತಿಗಳ ಕುರಿತು ತಲೆ ಕೆಡಿಸಿಕೊಳ್ಳುವುದೇ ಭೂತಚೇಷ್ಠೆ ಅಷ್ಟೆ. ಹಿಂದಿನ ಸಂಗತಿಗಳಿಂದ ಪಾಠ ಕಲಿತು ಮುಂದುವರೆಯಬೇಕೇ ಹೊರತು ಅದನ್ನು ಕುರಿತೇ ಯೋಚಿಸಿ ಮನಸ್ಸು ಕೆಡಿಸಿಕೊಳ್ಳುವುದೇ ಭೂತದ ಕಾಟ. ನಾವು ವರ್ತಮಾನದಲ್ಲಿ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂಬ ಬಗ್ಗೆ ಜಾಗೃತರಾಗಿರಬೇಕೇ ಹೊರತು, ಏನೂ ಮಾಡಲು ಸಾಧ್ಯವಿಲ್ಲದ ಭೂತಕಾಲದ ಬಗ್ಗೆ ಚಿಂತಿಸದೆ, ಬದಲಾಯಿಸಲು ಆಗದ ಅದನ್ನು ಹೇಗಿದೆಯೋ ಹಾಗಿ ಒಪ್ಪಿಕೊಂಡು ಸುಮ್ಮನಿರಬೇಕು. ಭವಿಷ್ಯತ್ತಿನ ಬಗ್ಗೆಯೂ ಚಿಂತಿಸುವುದು ತರವಲ್ಲ. ಎಕೆಂದರೆ ಅದು ನಿರ್ಭರವಾಗಿರುವುದು ವರ್ತಮಾನದ ನಮ್ಮ ನಡೆನುಡಿಗಳಿಂದ ಮಾತ್ರ.
ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲ
ಒಳಗಣ್ಣು ತೆರೆದಿರಲು ಪತನದ ಭಯವಿಲ್ಲ |
ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರು
ತಪ್ಪೆ ಸರಿಯೆಂದವರು ಜಾರುವರು ಮೂಢ ||
ಜೀವನದಲ್ಲಿ ಮಾಡುವ ತಪ್ಪುಗಳು ಭೂತವಾಗಿ ಕಾಡುತ್ತವೆ ಎಂದಾಯಿತು. ತಪ್ಪುಗಳು ಜೀವನದಲ್ಲಿ ಸರಿಯಾಗಿ ಹೇಗೆ ಮುನ್ನಡೆಯಬೇಕೆಂಬುದನ್ನು ಕಲಿಸುವ ಗುರುಗಳು. ಈಜು ಕಲಿಯಬೇಕಾದರೆ ಮೊದಲು ತಪ್ಪು ಮಾಡುತ್ತೇವೆ. ಆ ತಪ್ಪು ಮಾಡದಿರಲು ಹೋಗಿ ಬೇರೆ ತಪ್ಪುಗಳನ್ನು ಮಾಡುತ್ತೇವೆ. ಕೊನೆಗೆ ಎಲ್ಲಾ ತಪ್ಪುಗಳನ್ನು ಮಾಡಿ, ಹಲವು ತಪ್ಪುಗಳನ್ನು ಪದೇ ಪದೇ ಮಾಡುತ್ತಾ ಮುಳುಗದಿರುವಂತೆ ನೋಡಿಕೊಂಡು ಈಜು ಕಲಿತುಬಿಡುತ್ತೇವೆ. ಈ ಜೀವನವೂ ಈಜುವುದನ್ನು ಕಲಿಯುವ ಹಾಗೇನೇ! ಹಲವಾರು ತಪ್ಪುಗಳನ್ನು ಮಾಡುತ್ತೇವೆ, ಪಾಠ ಕಲಿಯುತ್ತೇವೆ. ಹೇಗೆ ಬದುಕಬೇಕೆಂಬುದಕ್ಕೆ ಬೇರೆ ದಾರಿಯಿಲ್ಲ. ತಪ್ಪುಗಳನ್ನು ಮಾಡುತ್ತಾ, ಪೆಟ್ಟು ತಿನ್ನುತ್ತಾ ಬದುಕುವುದನ್ನು ಕಲಿಯಬೇಕಾಗುತ್ತದೆ. ಪರಿಪೂರ್ಣವಾಗಿರುವುದಕ್ಕಿಂತ ಹೆಚ್ಚು ಮೌಲ್ಯಯುತವಾದುದನ್ನು ತಪ್ಪುಗಳು ಕಲಿಸುತ್ತವೆ. ಗಾಂಧೀಜಿಯವರು ಬಾಲ್ಯದಲ್ಲಿ ಮನೆಯ ಆಳಿನ ಜೇಬಿನಿಂದ ಕೆಲವು ಕಾಸುಗಳನ್ನು ಕದ್ದು ಬೀಡಿ ಸೇದಿದ್ದರು. ತನ್ನ ಅಣ್ಣನ ಚಿನ್ನದ ಆಭರಣದ ಚೂರನ್ನೂ ಕಳವು ಮಾಡಿದ್ದರು. ನಂತರದಲ್ಲಿ ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು, ತಪ್ಪನ್ನು ಒಪ್ಪಿಕೊಂಡು ಪತ್ರದಲ್ಲಿ ಬರೆದು ಕಾಯಿಲೆಯಿಂದ ನರಳುತ್ತಿದ್ದ ತಂದೆಯವರಿಗೆ ಕೊಟ್ಟು ಅವರ ಮುಂದೆ ತಲೆ ತಗ್ಗಿಸಿ ನಿಂತಿದ್ದರು. ಮಲಗಿದ್ದ ತಂದೆಯವರು ಕಷ್ಟಪಟ್ಟು ಎದ್ದು ಕುಳಿತು ಅದನ್ನು ಓದಿ ಏನೂ ಮಾತನಾಡದೆ ಕಣ್ಣೀರು ಸುರಿಸಿ ಪತ್ರವನ್ನು ಹರಿದು ಹಾಕಿ ಮತ್ತೆ ಮಲಗಿದ್ದರು. ಅದು ಗಾಂಧಿಯ ಮೇಲೆ ಅಗಾಧ ಪರಿಣಾಮ ಬೀರಿತ್ತು ಮತ್ತು ಅವರ ವ್ಯಕ್ತಿತ್ವ ರೂಪಿಸಲು ಪ್ರಧಾನ ಪಾತ್ರ ವಹಿಸಿತ್ತು.
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||
ಭೂತಗಳು ಕಾಡದಿರಲು ಏನು ಮಾಡಬೇಕು? ಹಿಂದಿನದನ್ನು ಮರುಮಾತಾಡದೆ ಒಪ್ಪಿಕೊಂಡುಬಿಡಬೇಕು. ಹಿಂದಿನ ನಮ್ಮ ಮತ್ತು ಇತರರ ತಪ್ಪುಗಳನ್ನು ಮರೆತು ಕ್ಷಮಿಸಿ, ಆ ತಪ್ಪುಗಳಿಂದ ಪಾಠಗಳನ್ನು ಕಲಿತು, ಅವನ್ನು ನಮ್ಮ ಮುಂದಿನ ಯಶಸ್ಸಿಗೆ ಮೆಟ್ಟಿಲುಗಳನ್ನಾಗಿಸಿಕೊಳ್ಳಬೇಕು. ನಮಗೆ ಎರಡು ಅವಕಾಶಗಳಿರುತ್ತವೆ: 'ತಪ್ಪುಗಳಿಂದ ಪಾಠ ಕಲಿಯಬೇಕು ಅಥವ ಸಮಸ್ಯೆಗಳಿಂದ ಓಡಿಹೋಗಬೇಕು'. ಭೂತದ ಕಾಟ ಬೇಡವೆಂದರೆ ಮೊದಲನೆಯದನ್ನು ಆರಿಸಿಕೊಳ್ಳಬೇಕು. ಇಂದು ನಾಳೆಗೆ ಭೂತವಾಗುವುದರಿಂದ ಇಂದು ಸರಿಯಾಗಿರುವಂತೆ ಎಚ್ಚರದಿಂದಿರಬೇಕು. ಯಾವುದಾದರೂ ಕೆಲಸ ಮಾಡಬೇಕೆಂದರೆ, ಅದು ನಮಗೆ ಹೊಸದಾಗಿದ್ದರೆ 'ಅನುಭವಸ್ಥ'ರನ್ನು ಕೇಳಬೇಕು ಅನ್ನುತ್ತಾರಲ್ಲವೇ? ಆ ಅನುಭವಸ್ಥರು ಯಾರೆಂದರೆ ಅಂತಹ ಕೆಲಸಗಳಲ್ಲಿ ತೊಡಗಿಕೊಂಡು, ತಪ್ಪುಗಳನ್ನು ಮಾಡಿ ತಿದ್ದಿಕೊಂಡವರು, ತಪ್ಪಾಗದಿರುವಂತೆ ಏನು ಮಾಡಬೇಕೆಂಬ ಅರಿವಿರುವವರು! ಬುದ್ಧಿವಂತರು ಇತರರ ತಪ್ಪುಗಳಿಂದ ಕಲಿತುಕೊಳ್ಳುತ್ತಾರಾದರೆ, ದಡ್ಡರು ತಮ್ಮದೇ ತಪ್ಪುಗಳಿಂದ ಪಾಠ ಕಲಿಯುತ್ತಾರೆ. ತಪ್ಪುಗಳು ನಾವು ಏನನ್ನು ಕಲಿಯಬೇಕಿದೆ ಎಂಬುದನ್ನು ತೋರಿಸುತ್ತವೆ. ಪ್ರಸಿದ್ಧ ಸಂಶೋಧಕ ಥಾಮಸ್ ಆಲ್ವಾ ಎಡಿಸನ್ ಹೇಳುತ್ತಿದ್ದುದೇನೆಂದರೆ, 'ನೂರು ಪ್ರಯೋಗಗಳು ವಿಫಲವಾದರೂ ಅದು ವಿಫಲವಲ್ಲ. ಈ ನೂರು ಪ್ರಯೋಗಗಳಿಂದ ಹೀಗೆ ಆಗುವುದಿಲ್ಲ ಎಂಬ ಜ್ಞಾನ ನಮಗೆ ಸಿಗುತ್ತದೆ.' ಹೊಸ ಹೊಸ ಸಂಶೋಧನೆಗಳು ಹಲವಾರು ತಪ್ಪುಗಳ ನಂತರವೇ ಆವಿಷ್ಕಾರವಾದದ್ದು ಅಲ್ಲವೇ?
ಈ ಜೀವನವೇ ಅಂತಹದು, ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಕಳ್ಳನನ್ನು ಕಳ್ಳ ಎಂದರೆ ಅವನಿಗೆ ಏನೂ ಅನ್ನಿಸುವುದಿಲ್ಲ. ಸುಳ್ಳನನ್ನು, ಲಂಪಟನನ್ನು ಸುಳ್ಳ, ಲಂಪಟ ಎಂದರೆ ಬೇಸರವಾಗುವುದಿಲ್ಲ. ಕಳ್ಳ, ಸುಳ್ಳ, ಲಂಪಟರಲ್ಲದವರು ಸುಖಾಸುಮ್ಮನೆ ಇಂತಹ ಅಪವಾದಗಳಿಗೆ ಒಳಗಾದರೆ? ಅದೂ ತಮ್ಮ ಆಪ್ತರು, ಬಂಧುಗಳಿಂದ ಹೀಗೆ ದೂಷಿಸಲ್ಪಟ್ಟರೆ? ವರ್ಣನಾತೀತ ನೋವನ್ನು ಸಂಬಂಧಿಸಿದವರು ಅನುಭವಿಸುತ್ತಾರೆ. ನಿಧಾನವಾಗಿ ಯೋಚಿಸಿದರೆ, ಇದೂ ಒಂದು ರೀತಿಯಲ್ಲಿ ಭೂತದ ಕಾಟವೇ ಆಗಿರುತ್ತದೆ. ಹಿಂದಿನ ಯಾವುದೋ ಘಟನೆಗಳು, ಸಂಗತಿಗಳು, ವೈಯಕ್ತಿಕ ದ್ವೇಷಗಳು ಈ ರೀತಿಯ ಸುಳ್ಳು ಆಪಾದನೆಗಳಿಗೆ ಪ್ರೇರಣೆಯಾಗಿರುತ್ತವೆ. ತಮಗೆ ಆಗದವರ ಪ್ರತಿಯೊಂದು ನಡೆಯೂ ತಪ್ಪಾಗಿ ಗೋಚರಿಸುವುದರ ಫಲ ಇಂತಹ ಆಪಾದನೆಗಳು. ಆಗುವ ನೋವು, ನಿರಾಶೆ, ಹತಾಶೆಗಳನ್ನು ತಮಗೆ ಬೇಕಾದವರೊಂದಿಗೆ ಹಂಚಿಕೊಂಡು ಹಗುರವಾಗಬಹುದು. ಹೀಗೆ ಮಾಡುವುದು ಎಲ್ಲಾ ಸಂದರ್ಭಗಳಲ್ಲೂ ಸರಿಯಾಗಲಾರದು. ಅವರಿಂದ ಅನುಕಂಪ ಸಿಗಬಹುದು. ಪರಿಹಾರ ಸಿಗದು ಎಂಬಂತಹ ಸಂಗತಿಗಳನ್ನು ಹಂಚಿಕೊಳ್ಳದಿರುವುದೇ ಒಳಿತು. ನೋವಿನ ತೀವ್ರತೆ ಕಡಿಮೆಯಾಗಬೇಕೆಂದರೆ ಮನಸ್ಸಿಗೆ ತಿಳುವಳಿಕೆ ಹೇಳಬೇಕಾಗುತ್ತದೆ: "ನೋಡು, ಅವರು ಏನು ಹೇಳಿದರು, ಏನು ಮಾಡಿದರು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ, ಮರೆತುಬಿಡು. ನಿನ್ನನ್ನು ಅಲಕ್ಷ್ಯಿಸಿದ, ಅವಮಾನಿಸಿದ ಸಂಗತಿಗಳನ್ನು ಮನಸ್ಸಿನಿಂದ ತೆಗೆದುಹಾಕಿಬಿಡು. ನೀನು ಸರಿಯಾಗಿರುವೆ ಎಂದು ನಿನಗೆ ಗೊತ್ತಿದೆ ತಾನೇ? ಅಷ್ಟು ಸಾಕು. ನಿನ್ನ ಕುರಿತ ಅವರ ಭಾವನೆಗಳು ಬದಲಾಗುವುದೇ ಇಲ್ಲವೆನಿಸಿದರೆ ಅವರನ್ನು ಮರೆತುಬಿಡು. ನೋಯುತ್ತಿರುವುದು ನಿನ್ನ ಹೃದಯ. ಅದನ್ನು ನೀನೇ ಸಂತಯಿಸಬೇಕು. ಅಳುತ್ತಿರುವುದು ನಿನ್ನ ಕಣ್ಣು. ನೀನೇ ನಿನ್ನ ಕೈಯಿಂದ ಅದನ್ನು ಒರೆಸಿಕೊಳ್ಳಬೇಕು. ಜೀವ ನಿನ್ನದು, ಜೀವನ ನಿನ್ನದು. ನಿನ್ನ ಆತ್ಮ ಒಪ್ಪುವಂತೆ ಜೀವಿಸು. ನಿನ್ನ ತಪ್ಪೇನಾದರೂ ಇದ್ದರೆ ಸರಿಪಡಿಸಿಕೋ. ತಪ್ಪಿಲ್ಲದಿದ್ದರೆ ಚಿಂತಿಸುವ ಕಾರಣವಿಲ್ಲ. ಎದ್ದು ನಿಲ್ಲು. ಮುಂದೆ ನಡೆ, ಎಲ್ಲರಿಗೂ ನೀನು ಏನು ಎಂಬುದನ್ನು ತೋರಿಸು."
ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
ರೀತಿ ಸುಂದರವಿರೆ ಯಶ ನಿನದೆ ಮೂಢ ||
ಆತ್ಮಾವಲೋಕನ ಮಾಡಿಕೊಂಡು, ಭೂತಕಾಲದ ತಪ್ಪುಗಳಿಂದ ಪಾಠ ಕಲಿತು, ವರ್ತಮಾನದಲ್ಲಿ ಸರಿಯಾಗಿ ನಡೆದರೆ ಯಾವ ಭೂತಕಾಟವೂ ನಮ್ಮನ್ನು ಕಾಡಿಸದು. ಭವಿಷ್ಯತ್ತೂ ಸಹ ಸುಂದರವಾಗಿರುವುದು.
-ಕ.ವೆಂ.ನಾಗರಾಜ್.
**************
ದಿನಾಂಕ 9.2.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:
ತಿದ್ದಿಕೊಳ್ಳುವ ಅವಕಾಶವನು ಬದುಕೂ ಕೊಡಲಿ ಅಲ್ಲವೇ ಕವಿವರ್ಯ. ಅಂತಹ ಅವಕಾಶ ಸಿಕ್ಕ ಕಷ್ಣದಲ್ಲೇ ನನ್ನಂತ ಮೂಢನಿಗೂ ಸಂತನಾಗುವ ಅವಕಾಶ ಪಡೆಯುವ ಭಾಗ್ಯ.
ಪ್ರತ್ಯುತ್ತರಅಳಿಸಿನನನ್ನಂತಹ, 'ಸೋಲರಿತು ನೋವರಿತು ಹಸಿವರಿತು' ಬಾಳುಮೆ ನಡೆಸುವ ಅಲ್ಪತೃಪ್ತ ಅಜ್ಞಾತರಿಗೆ ಭಗವತ್ ಕೃಪೆ ನಿಮ್ಮಂತ ಹಿರಿಯರ ಮುಖೇನ ಲಭಿಸಲಿ.
ನಿಮ್ಮಂತಹ ಮುಕ್ತ ಮನಸ್ಸಿನವರಿಗೆ ಪರಮಾತ್ಮನ ಕೃಪೆ ಇದ್ದೇ ಇರುತ್ತದೆ. ಸಹೃದಯದ ಅನಿಸಿಕೆಗೆ ವಂದನೆಗಳು, ಬದರೀನಾಥರೇ.
ಪ್ರತ್ಯುತ್ತರಅಳಿಸಿpartha
ಅಳಿಸಿಕಳ್ಳನನ್ನು ಕಳ್ಳ ಎಂದರೇ
ಈಗ ಅನ್ನಲಾಗದು
’ನೀನು ಎಂದು ಕದ್ದಿಲ್ಲವೇ, ನೀನು ಮಾಡಿದ್ದನೆ ನಾನು ಮಾಡಿರುವೆ ಏನು ಮಹಾ ಎನ್ನುವರು’
ಭಂಡತನದ ಬದುಕು ಇಂದಿನದು
- ಪಾರ್ಥಸಾರಥಿ
kavinagaraj
:) ಧನ್ಯವಾದ, ಪಾರ್ಥರೇ.
nageshamysore
ಕವಿಗಳೆ, ನಮಸ್ಕಾರ. ಬಹುಶಃ ಪ್ರತಿಯೊಬ್ಬನ ಬದುಕಿನುದ್ದಕ್ಕು ಭೂತದಷ್ಟು ಬಲವಾಗಿ ಕಾಡಿ, ಪೀಡಿಸುವ ಮತ್ತೊಂದು ಅಸ್ತಿತ್ವ ಬೇರಾವುದೂ ಇಲ್ಲವೆಂದೆ ಹೇಳಬೇಕು. ಜೀವಿಯನ್ನು ಹಿಗ್ಗಿಸಿಯೊ, ಕುಗ್ಗಿಸಿಯೊ ಬಗ್ಗುಬಡಿದು ಶರಣಾಗತನಾಗಿಸುವ ಅದರ ಶಕ್ತಿಯೆ ಅಪಾರ. ಅದರಿಂದ ಪಾಠ ಕಲಿತು ಹೊರಬಿದ್ದು ನೆಟ್ಟಗಾದವರಷ್ಟೆ, ಅದರಿಂದ ಹೊರಬರಲೆ ಆಗದೆ ನರಳುವವರಿಗೇನೂ ಕಮ್ಮಿಯಿಲ್ಲ. ಒಟ್ಟಾರೆ, ಭೂತದ ಬಲದಿಂದ ವರ್ತಮಾನವ ಗೆಲ್ಲಬಲ್ಲವ, ಭವಿಷ್ಯತ್ತಿನ ಜಯಕೆ ನಾಂದಿ ಹಾಡಬಲ್ಲ ಎನ್ನುವುದು ಗಮನಾರ್ಹ.
kavinagaraj
ನೀವನ್ನುವುದು ನಿಜ, ನಾಗೇಶರೇ.ಭೂತದ ಕಾಟದಿಂದ ಹೊರಬರಲಾದವರಿಗೇನೂ ಕಡಿಮೆಯಿಲ್ಲ. ಹೊರಬರಬೇಕೆಂದರೆ ಸ್ವಂತದ ಬಲವನ್ನು ವರ್ತಮಾನದಲ್ಲಿ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಧನ್ಯವಾದಗಳು.