ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಸೆಪ್ಟೆಂಬರ್ 24, 2015

ವಿಕೃತಿಯಿಂದ ಸುಕೃತಿಯೆಡೆಗೆ


     ಇಂದಿನ ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಯುಗದಲ್ಲಿ ಗಂಡು-ಹೆಣ್ಣು ಪರಸ್ಪರ ನೋಡಿ ವಿವಾಹವಾಗುವ ರೀತಿ-ನೀತಿಗಳೇ ಬದಲಾಗಿವೆ. ಹಿರಿಯರ ಪಾತ್ರ ಔಪಚಾರಿಕವಾಗಿ ಉಳಿದಿದೆಯೆನ್ನಬಹುದು. ಹಳೆಯ ರೀತಿ-ನೀತಿ, ಸಂಪ್ರದಾಯಗಳನ್ನು ಉಳಿಸಿಕೊಂಡಿರುವ ಕುಟುಂಬಗಳೂ ಇವೆಯೆನ್ನುವುದು ಸ್ವಲ್ಪ ಸಮಾಧಾನದ ಸಂಗತಿ. ಇಂತಹ ಒಂದು ಕುಟುಂಬದ ಹಿರಿಯರು ಮಗನಿಗೆ ಹೆಣ್ಣು ನೋಡುತ್ತಿದ್ದರು. ಸಾಫ್ಟ್‌ವೇರ್ ಇಂಜನಿಯರ್ ಆದ ಆ ಹುಡುಗನನ್ನು ನೋಡಿದ ಕೆಲವು ವಧು ಮತ್ತು ಅವರ ಮನೆಯವರು ಔಪಚಾರಿಕ ಮಾತುಕತೆಗಳ ನಂತರ ಹೊರಡುತ್ತಿದ್ದಾಗ ಸಂಬಂಧಗಳು ಕೂಡಿಬಂತೆಂದೇ ಎರಡೂ ಕುಟುಂಬಗಳವರಿಗೆ ಭಾಸವಾಗುತ್ತಿತ್ತು. ಆದರೆ ಮರುದಿನ ಅಥವ ಅಂದು ರಾತ್ರಿಯೇ ಹುಡುಗಿಯ ತಂದೆ ಅಥವ ತಾಯಿಯಿಂದ ಹುಡುಗನ ಮನೆಯವರಿಗೆ 'ಋಣಾನುಬಂಧವಿಲ್ಲ, ಅನ್ಯಥಾ ಭಾವಿಸದಿರಿ' ಎಂಬರ್ಥದ ದೂರವಾಣಿ ಸಂದೇಶ ಬರುತ್ತಿತ್ತು. ಹೀಗೆ ಹಲವು ಸಲ ಪುನರಾವರ್ತನೆಯಾದಾಗ ಇದರ ಕಾರಣ ತಿಳಿಯದೆ ಹುಡುಗನ ಮನೆಯವರು ಗೊಂದಲಕ್ಕೊಳಗಾಗಿದ್ದರು. ಇದರ ಕಾರಣ ತಿಳಿದದ್ದು, ಇನ್ನೊಬ್ಬ ಬಂಧುವಿನ ಮನೆಯ ಹುಡುಗಿಯೊಂದಿಗೆ ವಿವಾಹದ ಪ್ರಸ್ತಾಪ ಬಂದ ಸಂದರ್ಭದಲ್ಲಿ! ಹುಡುಗ-ಹುಡುಗಿ ಮನೆಯವರಿಬ್ಬರೂ ಮೊದಲಿನಿಂದಲೂ ಪರಿಚಿತರೇ ಆಗಿದ್ದರು. ಪರಸ್ಪರ ನೋಡಿದ, ಮಾತನಾಡಿದ ಶಾಸ್ತ್ರ ಮುಗಿಸಿ ವಾಪಸಾದ ನಂತರದಲ್ಲಿ ಹುಡುಗ ಇದ್ದ ಬಾಡಿಗೆ ಮನೆಯ ಮಾಲಕಿ ಹುಡುಗಿಯ ಮನೆಗೆ ದೂರವಾಣಿ ಮೂಲಕ 'ಹುಡುಗ ಸರಿಯಿಲ್ಲವೆಂದೂ, ಹುಡುಗನ ತಾಯಿ ಗಟವಾಣಿ ಆಗಿದ್ದು ನಿಮ್ಮ ಮಗಳು ಸುಖವಾಗಿರುವುದಿಲ್ಲವೆಂದೂ' ಹೇಳಿದ್ದರು. ಪರಿಚಿತರೇ ಆಗಿದ್ದರಿಂದ ಹುಡುಗಿಯ ತಂದೆ-ತಾಯಿ ಮರುದಿನ ಪುನಃ ಬಂದು ವಿಚಾರಿಸಿದಾಗ ಸತ್ಯ ಹೊರಬಿದ್ದಿತ್ತು. ಮನೆ ಮಾಲಕಿಯ ಮಗ ಉಡಾಳನಾಗಿದ್ದು ಅವನನ್ನು ಮದುವೆಯಾಗಲು ಯಾವ ಹುಡುಗಿಯೂ ಒಪ್ಪದೆ ವಿವಾಹವಾಗಿರಲಿಲ್ಲ, ವಿವಾಹದ ವಯಸ್ಸೂ ಸಹ ಮೀರುತ್ತಾ ಬಂದಿತ್ತು. ಇತರರ ಮನೆಯಲ್ಲಿ ವಿವಾಹಗಳಾಗುತ್ತಿದ್ದುದು ಉಡಾಳನ ತಾಯಿಗೆ ಸಹಿಸಲಾಗುತ್ತಿರಲಿಲ್ಲ. ಹೀಗಾಗಿ ಬೇರೆ ಮನೆಗಳಲ್ಲಿ ಮದುವೆ ಪ್ರಸ್ತಾಪಗಳು ಬಂದ ಸಂದರ್ಭದಲ್ಲಿ ಹೇಗೋ ಮಾಡಿ ವಿಳಾಸ/ದೂರವಾಣಿ ತಿಳಿದುಕೊಂಡು ದೂರವಾಣಿ ಮಾಡಿ ಸುಳ್ಳು ಆರೋಪ ಹೊರಿಸಿ ಮದುವೆ ಪ್ರಸ್ತಾಪಗಳು ಮುರಿದುಹೋಗುವಂತೆ ಮಾಡಿ ಸಂತೋಷಪಡುತ್ತಿದ್ದರು. ಇದು ಅಸೂಯೆಯಿಂದ ಮೂಡುವ ವಿಕೃತಿಗೆ ಒಂದು ಸಣ್ಣ ಉದಾಹರಣೆಯಷ್ಟೆ.
     ಇನ್ನೊಬ್ಬರಿಗೆ ಆಗುವ ಹಿಂಸೆ, ಅವಮಾನಗಳನ್ನು ಕಂಡು ಸಂತೋಷಿಸುವುದು, ಸ್ವತಃ ಇನ್ನೊಬ್ಬರಿಗೆ ಹಿಂಸೆ ನೀಡಿ, ಅವಮಾನಿಸಿ ಸಂತೋಷಿಸುವುದೇ ವಿಕೃತಿ. ಈ ವಿಕೃತಿ ಅನ್ನುವುದು ಮನುಷ್ಯನ ಅಂತರ್ಗತ ಸ್ವಭಾವವೆಂದರೆ ತಪ್ಪಾಗಲಾರದು. ಪ್ರಮಾಣ ಹೆಚ್ಚು, ಕಡಿಮೆ ಇರಬಹುದೇನೋ! ಯಾರನ್ನು ಕಂಡರೆ ಅಸೂಯೆಯೆನಿಸುವುದೋ, ಯಾರನ್ನು ಕಂಡರೆ ದ್ವೇಷವಿದೆಯೋ ಅಂತಹವರು ತೊಂದರೆಗೊಳಗಾದಾಗ, 'ಅವನಿಗೆ ಹಾಗೆಯೇ ಆಗಬೇಕು, ಮೆರೀತಿದ್ದ ಬಡ್ಡೀಮಗ' ಎಂದು ಸಂತೋಷಪಡದಿರುವವರು ವಿರಳರೇ ಸರಿ. ಕೆಟ್ಟವರು ಅನ್ನಿಸಿಕೊಂಡವರು ಹಿಂಸೆಗೊಳಪಟ್ಟಾಗ, ಅವಮಾನಿತರಾದಾಗ ಒಳ್ಳೆಯವರು ಅನ್ನಿಸಿಕೊಂಡವರೂ ಸಂತೋಷಿಸುವುದು ಸಾಮಾನ್ಯವಾಗಿ ನಡೆಯುವ ಕ್ರಿಯೆಯಾಗಿದೆ. ವಿಕೃತಿಯ ಕ್ರೂರ ಪರಾಕಾಷ್ಠೆಯೆಂದರೆ ಚಿತ್ರವಿಚಿತ್ರ ಹಿಂಸೆ ನೀಡಿ ಕೊಲ್ಲುವುದು, ಲೈಂಗಿಕವಾಗಿ ಶೋಷಿಸಿ ಸಿಕ್ಕಿಬೀಳಬಾರದೆಂದು ಹತ್ಯೆಗೈಯುವುದು, ಇತ್ಯಾದಿಗಳು. ವಿಕೃತಿಗೆ ಹಲವಾರು ಕಾರಣಗಳಿರುತ್ತವೆ. ಪ್ರಾರಂಭದಲ್ಲಿ ಹೇಳಿದ ಅಸೂಯೆ ಸಹ ಅಂತಹ ಒಂದು ಕಾರಣವಾಗಿದೆ. ಇತರ ಕಾರಣಗಳ ಕುರಿತೂ ಸಂಕ್ಷಿಪ್ತವಾಗಿ ನೋಡೋಣ.
     ದುರಾಸೆ ಅನ್ನುವುದು ಜಗತ್ತಿನ ಅನೇಕ ಸಮಸ್ಯೆಗಳಿಗೆ ಮೂಲಕಾರಣವಾಗಿದೆ. ಲಂಚಗುಳಿತನ, ಭ್ರಷ್ಠಾಚಾರ, ಇತ್ಯಾದಿಗಳಿಗೆ ದುರಾಸೆಯೇ ಕಾರಣ. ಇದಕ್ಕೆ ಪಕ್ಕಾದವರು ಸಂವೇದನಾಶೀಲತೆಯನ್ನೇ ಕಳೆದುಕೊಳ್ಳುತ್ತಾರೆ. ಬಡವ, ದಿಕ್ಕಿಲ್ಲದವ ಎಂಬುದರ ಪರಿವೆಯೇ ಇಲ್ಲದೆ ಲಂಚಕ್ಕೆ ಕೈಚಾಚುವವರು ಹೃದಯಹೀನರಲ್ಲದೇ ಮತ್ತೇನು? ಸರ್ಕಾರದ ಖಜಾನೆಗೇ ಕನ್ನ ಕೊರೆಯುವ ಪುಡಾರಿಗಳು, ಅಧಿಕಾರಿಗಳಿಂದಾಗಿ ಸಾರ್ವಜನಿಕರ ಹಣ ಮತ್ತು ಸ್ವತ್ತುಗಳು ಕೆಲವೇ ಕೆಲವರ ಪಾಲಾಗುತ್ತವೆ. ಸಾಮಾನ್ಯರು ಇದರಿಂದ ಪಡುವ ಪಡಿಪಾಟಲುಗಳ ಬಗ್ಗೆ ಅವರಿಗೆ ಚಿಂತೆಯೇ ಇರುವುದಿಲ್ಲ. ಯಾರು ಹಾಳಾದರೆ ನನಗೇನು, ನಾನು ಸುಖವಾಗಿದ್ದರೆ ಆಯಿತು ಎನ್ನುವುದೂ ವಿಕೃತಿಯ ಒಂದು ಮುಖ. ಸ್ವಾರ್ಥದ ಸಲುವಾಗಿ ದೇಶದ ಹಿತವನ್ನೇ ಕಡೆಗಣಿಸುವ ಜನನಾಯಕರುಗಳನ್ನೂ ಕಾಣುತ್ತಿರುವ ದೌರ್ಭಾಗ್ಯ ನಮ್ಮದಾಗಿದೆ. ಹಣವಿದ್ದವರು ಎಂತಹ ಘೋರ ಅಪರಾಧ ಮಾಡಿದರೂ ತಪ್ಪಿಸಿಕೊಳ್ಳಬಹುದು ಎಂಬ ವಾತಾವರಣವಿರುವುದು ಮತ್ತು ಇದರಿಂದ ಆಘಾತಕ್ಕೊಳಗಾಗುವ ನೊಂದವರನ್ನು ಕಂಡು ಹರ್ಷಿಸುವ ವಿಕೃತತೆಯನ್ನೂ ಕಾಣುತ್ತಿದ್ದೇವೆ.
     ಕಾಮಾತುರರು ಮೆರೆಯುವ ವಿಕೃತತೆ ಮಾನವೀಯತೆಯನ್ನೇ ಅಣಕಿಸುತ್ತದೆ. ಪ್ರಿಯಕರನ ನೆರವಿನಿಂದ ಪತಿಯನ್ನೇ ಕೊಲೆ ಮಾಡುವುದು, ಅಡ್ಡಿಯಾಗುತ್ತಾರೆಂದು ಎಳೆ ಮಕ್ಕಳನ್ನೇ ಸಾಯಿಸುವುದು, ಅಸಹಾಯಕತೆ, ದೌರ್ಬಲ್ಯಗಳನ್ನು ದುರುಪಯೋಗಿಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸುವುದು, ಚಿಕ್ಕ ಕಂದಮ್ಮಗಳ ಮೇಲಿನ ಅತ್ಯಾಚಾರ ಮುಂತಾದ ಸುದ್ದಿಗಳು ದಿನಬೆಳಗಾದರೆ ರಾಚುತ್ತಿರುತ್ತವೆ. ಆಸ್ತಿಗಾಗಿ ಕುಟುಂಬದವರನ್ನೇ ಕೊಲೆ ಮಾಡುವುದು, ಮತ್ಸರದಿಂದಾಗಿ ಬೆಳೆದು ನಿಂತ ಪೈರಿಗೇ ಬೆಂಕಿ ಹಚ್ಚುವುದು, ಮದದ ಕಾರಣದಿಂದಾಗಿ ಅಸಹಾಯಕರು, ದುರ್ಬಲರನ್ನು ಹಂಗಿಸಿ, ಹಿಂಸಿಸಿ ಆನಂದಿಸುವುದು, ಒಂದೇ, ಎರಡೇ ವಿಕೃತಿಯ ನೂರಾರು ಉದಾಹರಣೆಗಳನ್ನು ಕೊಡಬಹುದು. ಧೃತರಾಷ್ಟ್ರನ ಪುತ್ರಮೋಹ ನ್ಯಾಯ, ನೀತಿ, ಧರ್ಮಗಳನ್ನೇ ನುಂಗಿ ನೀರು ಕುಡಿದಿದ್ದಲ್ಲದೆ ಮಹಾಭಾರತ ಯುದ್ಧಕ್ಕೇ ಕಾರಣವಾಯಿತು. ಇಂದಿನ ರಾಜಕಾರಣದಲ್ಲೂ ಪುತ್ರವ್ಯಾಮೋಹ, ವಂಶವ್ಯಾಮೋಹ, ಜಾತಿ ವ್ಯಾಮೋಹ, ಅಧಿಕಾರದ ಮೋಹಗಳು ದೇಶವನ್ನು ಅಧೋಗತಿಗೆ ಒಯ್ಯುತ್ತಿವೆ. ಯಾರು ವಿಕೃತಿಯ ನಿಯಂತ್ರಣ ಮಾಡಬೇಕೋ ಅವರುಗಳೇ ವಿಕೃತಿಯ ಪೋಷಕರಾಗಿದ್ದಾರೆ. ತನ್ನ ಮಾತೇ ನಡೆಯಬೇಕು, ತಾನು ಹೇಳಿದಂತೆಯೇ ಎಲ್ಲವೂ ಆಗಬೇಕು ಎಂದು ಬಯಸುವವರು ಅದಕ್ಕಾಗಿ ಹಲವಾರು ತಂತ್ರ-ಕುತಂತ್ರಗಳನ್ನು ಹೆಣೆಯುವುದಲ್ಲದೆ ಈ ಅಹಮ್ಮಿಗಾಗಿ ಕುಟುಂಬದ ಸದಸ್ಯರ - ಅವರು ಗಂಡ, ಹೆಂಡತಿ, ಮಕ್ಕಳು, ತಂದೆ, ತಾಯಿ ಯಾರೇ ಆಗಿರಲಿ -  ಭಾವನೆಗಳಿಗೂ ಬೆಲೆಕೊಡದೆ ಅವರುಗಳ ಮನಸ್ಸನ್ನು ಘಾಸಿಪಡಿಸುವುದನ್ನೂ ಕಾಣುತ್ತಿರುತ್ತೇವೆ. ಮನುಷ್ಯನನ್ನು ಕೊಲ್ಲುವುದಕ್ಕಿಂತ ಘೋರ ಅಪರಾಧ ಮನಸ್ಸುಗಳನ್ನು ಕೊಲ್ಲುವುದೇ ಆಗಿದೆ.
     ಐಸಿಸ್ ಉಗ್ರರು ನೂರಾರು ಜನರ ಸಮ್ಮುಖದಲ್ಲಿ ಹಲವರ ಶಿರಚ್ಛೇದವನ್ನು ವಿಕೃತಾನಂದ ಮೆರೆಯುತ್ತಾ ಮಾಡುವುದು, ನೆರೆದಿದ್ದವರೂ ಸಹ ಆನಂದದಿಂದ ಅದನ್ನು ವೀಕ್ಷಿಸುವ ಹಲವಾರು ವಿಡಿಯೋಗಳು, ಸೆರೆಹಿಡಿದ ಅಮಾಯಕ ಹೆಣ್ಣುಮಕ್ಕಳನ್ನು ಉಗ್ರರು ಕಾಮತೃಷೆ ತೀರಿಸಿಕೊಳ್ಳಲು ಬಳಸುವ ಮತ್ತು ಅವರನ್ನು ಹರಾಜಿನ ಮೂಲಕ ವಿಕ್ರಯಿಸುವ ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿರುವುದು ಪರಮವಿಕೃತ್ಯಗಳಿಗೆ ಸಾಕ್ಷಿಯಂತಿವೆ.
     ವಿಕೃತಿಯ ಮನೋಭಾವ ಮೂಡಲು ಹಲವಾರು ಕಾರಣಗಳನ್ನು ಕೊಡಬಹುದು. ಸ್ವತಃ ವಿಕೃತ್ಯಕ್ಕೆ ಬಲಿಯಾಗಿರುವುದು, ಮನೆಯ ವಾತಾವರಣ, ಹೊಂದಿರುವ ಸ್ನೇಹಿತರು, ಪರಿಸರ, ತಪ್ಪು ಮಾರ್ಗದರ್ಶನದ ಪ್ರಭಾವ, ಮತಾಂಧತೆ, ಸ್ವಾರ್ಥ, ದುರಾಸೆ, ಅಹಂ, ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ, ಇತ್ಯಾದಿ ಹಲವು  ಸಂಗತಿಗಳು ವಿಕೃತಿಯ ಪೋಷಕವಾಗಿವೆ. ಆದರೆ ಪ್ರಧಾನವಾದ ಕಾರಣ ಸೇವಿಸುವ ಆಹಾರ ಎಂದರೆ ಆಶ್ಚರ್ಯವಾಗಬಹುದಾದರೂ ಇದು ಸತ್ಯಸಂಗತಿಯಾಗಿದೆ. ಇಲ್ಲಿ ಆಹಾರವೆಂದರೆ ಕೇವಲ ತಿನ್ನುವ ಕ್ರಿಯೆ ಮಾತ್ರ ಅಲ್ಲ ಎಂಬುದನ್ನು ನೆನಪಿಡಬೇಕು. ಕಣ್ಣಿನಿಂದ ನೋಡುವ, ಕಿವಿಯಿಂದ ಕೇಳುವ, ಮೂಗಿನಿಂದ ಆಸ್ವಾದಿಸುವ, ಚರ್ಮದಿಂದ ಸ್ಪರ್ಷಿಸುವ ಸಂಗತಿಗಳಲ್ಲದೆ ಮನೋವ್ಯಾಪಾರಗಳೂ ಆಹಾರದ ವ್ಯಾಪ್ತಿಯಲ್ಲಿ ಬರುತ್ತವೆ. ಈಗ ವಿಷಯ ಸ್ಪಷ್ಟವಾಗಿರಬಹುದು. ಒಳ್ಳೆಯ ಆಹಾರ ಸೇವಿಸಿದರೆ ನಾವು ಒಳ್ಳೆಯವರು, ಕೆಟ್ಟ ಆಹಾರ ಸೇವಿಸಿದರೆ ನಾವು ಕೆಟ್ಟವರಾಗುತ್ತೇವೆ ಎಂಬುದು ಸರಳ ನಿಯಮ. ಈ ಕುರಿತು ಸ್ವಲ್ಪ ವಿವರವಾಗಿ ನೋಡೋಣ.
     'ನೀನು ಹೊಟ್ಟೆಗೆ ಏನು ತಿಂತೀಯ?'- ಯಾರಾದರೂ ಏನಾದರೂ ಅಚಾತುರ್ಯವೆಸಗಿದಾಗ, ತಪ್ಪು ಮಾಡಿದಾಗ ಈ ರೀತಿ ಪ್ರತಿಕ್ರಿಯಿಸುತ್ತಾರಲ್ಲವೇ? ಸೇವಿಸುವ ಆಹಾರ ನಮ್ಮ ಕೃತಿಯ ಮೇಲೆ, ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬುದೇ ಇದರ ಅರ್ಥ. ಆಯುರ್‍ವೇದದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರದ ಬಗ್ಗೆ ವಿವರಣೆ ಸಿಗುತ್ತದೆ. ಸಾತ್ವಿಕ ಗುಣವೆಂದರೆ ರಚನಾತ್ಮಕ, ಸ್ಪಷ್ಟ ಮತ್ತು ಜೀವನವನ್ನು ಪೋಷಿಸುವುದಾಗಿದೆ. ಶಾಂತಿ, ನೆಮ್ಮದಿ, ಪ್ರೀತಿ, ಇತ್ಯಾದಿಗಳು ಸಾತ್ವಿಕರ ಲಕ್ಷಣಗಳು. ಸಾತ್ವಿಕರು ಸಾಮಾನ್ಯವಾಗಿ ಆಧ್ಯಾತ್ಮಿಕ ಒಲವುಳ್ಳವರು, ಸರಳರು, ಉದ್ವೇಗರಹಿತರು, ಸಂತುಷ್ಟರು, ಕೋಪನಿಗ್ರಹಿಗಳಾಗಿದ್ದು, ಅವರ ವಿಚಾರಗಳು ಸ್ಪಷ್ಟವಾಗಿರುತ್ತವೆ. ಅವರು ಇತರರಿಗೆ ಸಂತೋಷ ಕೊಡುವವರು, ಉತ್ಸಾಹಿತರು, ಕುತೂಹಲಿಗಳು ಮತ್ತು ಪ್ರೇರಕರಾಗಿರುತ್ತಾರೆ. ಸಾತ್ವಿಕ ಆಹಾರ ಸತ್ವಯುತವಾಗಿದ್ದು ಸುಲಭವಾಗಿ ಜೀರ್ಣವಾಗುವಂತಹದು ಮತ್ತು ಹಗುರವಾಗಿರುತ್ತವೆ. ಹದವಾಗಿ ಬೇಯಿಸಿದ ತರಕಾರಿಗಳು, ಕಳಿತ ಹಣ್ಣುಗಳು, ಕಾಳುಗಳು, ಜೇನುತುಪ್ಪ, ಶುಂಠಿ, ಸ್ವಲ್ಪ ಪ್ರಮಾಣದ ತುಪ್ಪ, ಹಸುವಿನ ಹಾಲು ಇತ್ಯಾದಿಗಳು ಸಾತ್ವಿಕ ಆಹಾರದ ಪಟ್ಟಿಯಲ್ಲಿವೆ. ಸತ್ವವನ್ನು ಹೆಚ್ಚಿಸಿಕೊಳ್ಳಲು ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಸತ್ಸಂಗಗಳು, ಪ್ರಶಾಂತವಾದ ಮತ್ತು ಹಿತಕರ ವಾತಾವರಣಗಳು ಸಹಾಯಕಾರಿ. ನೋಡುವ ನೋಟಗಳು, ಕೇಳುವ ಸಂಗತಿಗಳು, ಓದುವ ಪುಸ್ತಕಗಳು ಒಳ್ಳೆಯದಾಗಿದ್ದಲ್ಲಿ, ಧನಾತ್ಮಕವಾಗಿದ್ದಲ್ಲಿ ಅವೂ ಸಹ ಸಾತ್ವಿಕ ಗುಣವನ್ನು ವೃದ್ಧಿಸುತ್ತವೆ.
     ರಾಜಸಿಕತೆಯೆಂದರೆ ಮನ್ನುಗ್ಗುವ ಮತ್ತು ಚಟುವಟಿಕೆಯಿಂದ ಒಡಗೂಡಿದ ಸ್ವಭಾವ. ಅತಿಯಾದಲ್ಲಿ ಇದು ಅತಿ ಚಟುವಟಿಕೆ ಮತ್ತು ತಳಮಳಕ್ಕೂ ಕಾರಣವಾಗುತ್ತದೆ. ಅವಿಶ್ರಾಂತ ಮನಸ್ಸು ಭಯ, ಕಾತುರ ಮತ್ತು ಉಗ್ರತೆಯಿಂದ ಚಡಪಡಿಸುತ್ತದೆ. ಮಿತಿಯಲ್ಲಿರುವ ರಾಜಸಿಕತೆ ಒಳ್ಳೆಯ ಫಲ ನೀಡುತ್ತದೆ, ಸಮಾಜಕ್ಕೆ ಉಪಕಾರಿಯಾಗಿರುತ್ತದೆ. ಅತಿಯಾದಲ್ಲಿ ಗರ್ವ, ಸ್ಪರ್ಧೆ, ಅತಿಕ್ರಮಣಕಾರಿ ಮನೋಭಾವ ಮತ್ತು ಮತ್ಸರಕ್ಕೆ ರಹದಾರಿಯಾಗುತ್ತದೆ. ಅತಿ ರಾಜಸಿಕತೆಯಲ್ಲಿ ಯಾವುದು ಒಳ್ಳೆಯದೆಂದು ಹೃದಯಕ್ಕೆ ಗೊತ್ತಿದ್ದರೂ, ಮನಸ್ಸು ಮಾತ್ರ ಬೇರೆಲ್ಲೋ ಕೊಂಡೊಯ್ದುಬಿಡುತ್ತದೆ. ಹಿಡಿತದಲ್ಲಿರುವ ರಾಜಸಿಕತೆ ಗುರಿ ತಲುಪಲು ಮತ್ತು ಸಮಾಜವನ್ನು ಸರಿಯಾಗಿ ಕೊಂಡೊಯ್ಯಲು ಸಹಕಾರಿಯಾಗಿರುತ್ತದೆ. ನೋಡುವ ದೃಷ್ಯಗಳು/ಸಂಗತಿಗಳು, ದಾರಿ ತಪ್ಪಿಸುವ ಚಿತ್ರಗಳು, ಧಾರಾವಾಹಿಗಳು, ಕೇಳುವ ಕೆಟ್ಟ ಮಾತುಗಳು, ವಾಸಿಸುವ ಅಶಾಂತ ಪರಿಸರ ಸಹ ರಾಜಸಿಕತೆಗೆ ಪ್ರಚೋದಿಸುತ್ತವೆ. ಅತಿಯಾದ ವ್ಯಾಯಾಮ, ಅತಿಯಾದ ಪ್ರಯಾಣ, ಅತಿಯಾದ ಮಾತುಗಳು, ಅತಿಯಾದ ಕೆಲಸಗಳು, ಅತಿಯಾದ ಮನರಂಜನೆಗಳೂ ಸಹ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಕರಿದ, ಹರಿದ ಪದಾರ್ಥಗಳು, ಚಾಕೊಲೇಟುಗಳು, ಅತಿಯಾದ ಸಿಹಿ, ಉಪ್ಪು, ಖಾರದ ಪದಾರ್ಥಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳು ರಾಜಸಿಕ ಆಹಾರದ ಪಟ್ಟಿಯಲ್ಲಿ ಇವೆ.
     ತಾಮಸಿಕತೆ ನಾಶ ಮಾಡುವ ಗುಣವಾಗಿದೆ. ಆಲಸ್ಯ, ಜಡತ್ವ, ನಿರಾಶೆ, ಖಿನ್ನತೆ, ಕ್ರೋಧ ಇದರ ಉತ್ಪನ್ನಗಳು. ನಿದ್ರೆ, ವಿಶ್ರಾಂತಿ, ಮುನ್ನುಗ್ಗದಿರುವಿಕೆ, ಇತ್ಯಾದಿಗಳು ಸಂದರ್ಭಗಳಲ್ಲಿ ಅವಶ್ಯವಾಗಿದ್ದು ತಾಮಸಿಕತೆಯೂ ಸಹ ಸ್ವಲ್ಪ ಮಟ್ಟಿಗೆ ಅಗತ್ಯವಾದುದೇ ಆಗಿದೆ. ಆದರೆ ತಮೋಗುಣ ಹೆಚ್ಚಾದರೆ ಅನರ್ಥಕಾರಿ. ಕೀಳು ಅಭಿರುಚಿಯ ಚಿತ್ರಗಳು, ಕೀಳು ಮನೋಭಾವದ ಚಾನೆಲ್ಲುಗಳು, ಅಂತರ್ಜಾಲದ ಅಶ್ಲೀಲ ತಾಣಗಳು ತಾಮಸಿಕತೆಯ ಬೆಂಕಿಗೆ ತುಪ್ಪ ಸುರಿಯುವಂತಹವಾಗಿವೆ. ತಾಮಸಿಕರು ಸ್ವನಾಶಕ್ಕೆಡೆಮಾಡುವ ಜೀವನಶೈಲಿ ಮತ್ತು ಆಹಾರಸೇವನೆಯ ಅಭ್ಯಾಸದವರಾಗಿರುತ್ತಾರೆ. ಅತಿಯಾದ ಆಹಾರ ಸೇವನೆ, ಅತಿಯಾದ ಕಾಮ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆ ಮಾಡಲು ಹಂಬಲಿಸುತ್ತಾರೆ.  ಪರಿಣಾಮವಾಗಿ ನಿಸ್ತೇಜತೆ, ಭಾರವಾದ ಮನಸ್ಸಿನೊಂದಿಗೆ ಏನು ಮಾಡಬೇಕೆಂದು ತೋಚದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಮತ್ತು ಇತರರ ಬಗ್ಗೆ ಲೆಕ್ಕಿಸದಂತೆ ಇರುತ್ತಾರೆ. ಕೊನೆಯಲ್ಲಿ ಯಾವ ಸ್ಥಿತಿಗೆ ತಲುಪುತ್ತಾರೆಂದರೆ ತಮಗೆ ತಾವು ಸಹಾಯ ಮಾಡಿಕೊಳ್ಳಲಾಗದಂತಾಗಿ ಇತರರನ್ನು ಆಶ್ರಯಿಸಬೇಕಾಗುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಲಾರರು ಮತ್ತು ಅಸ್ಪಷ್ಟ ಮನಸ್ಸಿನಿಂದಾಗಿ ಒಳ್ಳೆಯ ನಿರ್ಧಾರ ತಳೆಯಲಾರರು. ತಾಮಸಿಕ ಆಹಾರ ಕಡಿಮೆ ಸತ್ವಯುತವಾಗಿದ್ದು, ಜೀವಕ್ಕೆ ಪೋಷಕವಾಗಿರುವುದಿಲ್ಲ. ಹಳೆಯದಾದ ಮತ್ತು ತಂಗಳು ಆಹಾರ, ಅತಿಯಾಗಿ ಕರಿದ ಮತ್ತು ಹುರಿದ ಪದಾರ್ಥಗಳು, ಸುಲಭವಾಗಿ ಜೀರ್ಣವಾಗದ ಗಡಸು ಆಹಾರ, ಹೆಚ್ಚು ಅನ್ನಿಸುವಷ್ಟು ಮಾಂಸಾಹಾರ, ಇತ್ಯಾದಿಗಳು ತಾಮಸಿಕವೆನಿಸುವ ಆಹಾರಗಳ ಪಟ್ಟಿಯಲ್ಲಿ ಸೇರಿವೆ. ಮಾದಕ ದ್ರವ್ಯಗಳು, ಡ್ರಗ್ಸ್ ಮುಂತಾದವು ತಾಮಸ ಗುಣ ಪ್ರಚೋದಕಗಳು. ಇವು ರಾಜಸಿಕ ಪರಿಣಾಮಗಳನ್ನೂ ಬೀರುತ್ತವೆ. ಮೆದುಳಿನ ಮೇಲೆ ಪ್ರಭಾವ ಬೀರುವ, ಅದನ್ನು ಮಂಕುಗೊಳಿಸುವ ಪದಾರ್ಥಗಳೆಲ್ಲವೂ ತಾಮಸಿಕ ಆಹಾರವೆನಿಸುವುವು.
     ಒಂದು ಒಳ್ಳೆಯ ಸುದ್ದಿಯೆಂದರೆ, ಸಾತ್ವಿಕರೇ ಬೇರೆ, ರಾಜಸಿಕರೇ ಬೇರೆ ಮತ್ತು ತಾಮಸಿಕರೇ ಬೇರೆ ಎಂದು ಪ್ರತ್ಯೇಕವಾಗಿ ಗುರುತಿಸಲ್ಪಡುವವರು ಇರುವದಿಲ್ಲ. ಪ್ರತಿಯೊಬ್ಬರೂ ಸಾತ್ವಿಕರೂ, ರಾಜಸಿಕರೂ ಮತ್ತು ತಾಮಸಿಕರೂ ಆಗಿದ್ದು, ಈ ಮೂರೂ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿರುತ್ತವೆ. ಆ ಪ್ರಧಾನ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಎಂತಹ ಒಳ್ಳೆಯ ಅವಕಾಶ! ನಾವು ಏನಾಗಬೇಕು, ಹೇಗಿರಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬಲ್ಲೆವು. ಅದನ್ನು ನಾವು ಸೂಕ್ತವಾಗಿ ಆರಿಸಿಕೊಳ್ಳುವ 'ಅನ್ನ'ದ ಮೂಲಕ ಮತ್ತು ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಪಡೆದುಕೊಳ್ಳಬಲ್ಲೆವು. ವಿಕೃತಿಯಿಂದ ಸುಕೃತಿಯೆಡೆಗೆ ಸಾಗಲು ಉತ್ತಮ 'ಆಹಾರ' (ಕೇವಲ ತಿನ್ನುವುದಲ್ಲ, ನೋಡುವುದು, ಕೇಳುವುದು, ಪಂಚೇಂದ್ರಿಯಗಳಿಂದ ಸ್ವೀಕರಿಸುವುದೂ ಸೇರಿದಂತೆ) ಸೇವಿಸುವುದೇ ಉಪಾಯವಾಗಿದೆ, ಪರ್ಯಾಯ ಮಾರ್ಗವಿಲ್ಲ.
-ಕ.ವೆಂ.ನಾಗರಾಜ್.
**************
ದಿನಾಂಕ 7-09-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಸೆಪ್ಟೆಂಬರ್ 16, 2015

ಜನಹಿತ ಪತ್ರಿಕೆಯ 'ಹಿತ-ಸಾಹಿತ್ಯ' ಅಂಕಣದಲ್ಲಿ ಮಿತ್ರ ಕೊಟ್ರೇಶ ಉಪ್ಪಾರರು ನನ್ನ ಕುರಿತು ಬರೆದ ಲೇಖನ


 ನಿಷ್ಠುರವಾದಿ ಆಡಳಿತಗಾರ, ಕವಿ, ಸಾಮಾಜಿಕ ಚಿಂತಕ - ಕ.ವೆಂ.ನಾಗರಾಜ್.

     ಕ.ವೆಂ.ನಾಗರಾಜ್ ಸಾಮಾಜಿಕ ಕಳಕಳಿಯ ಚಿಂತಕ, ವಿಚಾರವಾದಿ, ನ್ಯಾಯ, ನಿಷ್ಠುರವಾದ ವ್ಯಕ್ತಿತ್ತ್ವವುಳ್ಳವರು. ಆಡಳಿತಗಾರರಾಗಿ, ಸಾಮಾಜಿಕ ಚಳವಳಿಗಾರರಾಗಿ, ಸತ್ಸಂಗದ ವಿವೇಕಿಯಾಗಿ, ಸಾಹಿತಿಯಾಗಿ, ಅಂತರ್ಜಾಲ ಬರಹಗಾರರಾಗಿ ಚಿರಪರಿಚಿತವಾದವರು. ಮನೆ ಮನೆ ಕವಿಗೋಷ್ಠಿಯ ಸದಸ್ಯರಾಗಿಯೂ ಮುನ್ನೆಡೆದು ಬಂದವರು. ತಮ್ಮ  ಮೂಢ ಉವಾಚ ಮುಕ್ತಕಗಳ ಮೂಲಕ ಮುಕ್ತ ಕಂಠದಿಂದ ಸಮಾಜದ ಕೊಳೆಯನ್ನು ಕೀಳಲ್ಹೊರಟವರು.
ಬಾಲ್ಯ : ಶ್ರೀಯುತ ಕ.ವೆಂ.ನಾಗರಾಜ್ ರವರು 1951 ಅಕ್ಟೋಬರ್ 7 ರಂದು ತಾಯಿ ಮನೆ ಹಾಸನ ಜಿಲ್ಲೆಯ ಹಳೆಬೀಡಿನಲ್ಲಿ ಜನಿಸಿದರು. ತಂದೆ ಶ್ರೀ ಕೆ.ವೆಂಕಟಸುಬ್ಬರಾವ್, ತಾಯಿ ಶ್ರೀಮತಿ ಸೀತಮ್ಮ.
     ಚಿಕ್ಕಮಗಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ವ್ಯಾಸಂಗ ಮಾಡಿದ ಇವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಚಿತ್ರದುರ್ಗದಲ್ಲಿ ಪ್ರೌಢ ಶಿಕ್ಷಣವನ್ನು, ಚಿಕ್ಕಮಗಳೂರಿನಲ್ಲಿ ಪಿಯುಸಿಯನ್ನು ಓದಿದ ಇವರು ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ವಿಜ್ಞಾನ ಪದವಿಯನ್ನು ಪಡೆದರು.
ವೃತ್ತಿ : 1971 ಡಿಸೆಂಬರ್ ನಲ್ಲಿ ಹಾಸನದ ಅಂಛೆ ಕಛೇರಿಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ನಂತರ 1973 ಮೇ 3 ರಂದು ಹಾಸನದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಹಾರ ನಿರೀಕ್ಷಣಾಧಿಕಾರಿಯಾಗಿ ನಿಯೋಜನೆಗೊಂಡರು.  1998 ರಲ್ಲಿ ಮಂಗಳೂರಿಗೆ ತಹಸಿಲ್ದಾರರಾಗಿ ಬಡ್ತಿ ಹೊಂದಿದರು. ಮುಂದೆ ಮುಜರಾಯಿ ತಹಸಿಲ್ದಾರರಾಗಿ, ಮುನಿಸಿಪಲ್ ತಹಸಿಲ್ದಾರರಾಗಿ, ಎಲೆಕ್ಷನ್ ತಹಸಿಲ್ದಾರರಾಗಿ, ಆಡಳಿತ ತಹಸಿಲ್ದಾರರಾಗಿ, ಪುತ್ತೂರಿನ ಕಡಬದಲ್ಲಿ ವಿಶೇಷ ತಹಸಿಲ್ದಾರರಾಗಿ, ಮಂಗಳೂರಿನಲ್ಲಿ ಪ್ರೋಟೋಕಾಲ್ ತಹಸಿಲ್ದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಹಾಸನ, ಕಲಬುರ್ಗಿ ಜಿಲ್ಲೆಯ ಸೇಡಮ್, ಮೈಸೂರು, ಹೊಳೆನರಸಿಪುರ, ಸಕಲೇಶುರ, ಬೇಲೂರು, ಮಂಗಳೂರು, ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಅರಕಲಗೂಡು, ಶಿವಮೊಗ್ಗ, ಶಿಕಾರಿಪುರ, ಸೊರಬ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಸುತ್ತಲೂ ಒಂದು ಕಾರಣವಿದೆ. ಇವರ ನೇರ ನಡೆ-ನುಡಿ ಇವರನ್ನು ಒಂದೆಡೆ ನಿಲ್ಲಲು ಬಿಡಲಿಲ್ಲ ಎನ್ನುವುದಕ್ಕಿಂತಲೂ ಆಯಾ ಭಾಗದ ರಾಜಕೀಯ ವ್ಯವಸ್ಥೆಗೆ ಸಹಿಸಲು ಆಗಲಿಲ್ಲವೆಂದೇ ಹೇಳಬಹುದು. ಆದ್ದರಿಂದಲೇ ಇವರ ಸೇವಾವಧಿಯಲ್ಲಿ 26 ವರ್ಗಾವಣೆಗಳು - ಹೆಚ್ಚಿನವು ರಾಜಕೀಯ ಪ್ರೇರಿತವಾದವು ಎಂಬುದು ಗಮನಾರ್ಹ . ಇವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಿಕಾರಿಪುರದಲ್ಲಿದ್ದಾಗ ಅತ್ಯುತ್ತಮ ಅಧಿಕಾರಿಯೆಂದು ಇಲಾಖೆ ಗುರುತಿಸಿ ಸನ್ಮಾನಿಸಿ ಗೌರವಿಸಿದೆ.
ನಿಷ್ಠುರವಾದಿ : ಕ.ವೆಂ.ನಾ.ರವರು ನಿಷ್ಠುರ ಅಧಿಕಾರಿಯಾಗಿದ್ದರು ಎಂಬುದಕ್ಕೆ ಅನೇಕ ನಿದರ್ಶನಗಳು ದೊರೆಯುತ್ತವೆ. ಯಾವುದೇ ಆಸೆ, ಆಕಾಂಕ್ಷೆ, ಸ್ವಾರ್ಥಗಳ ಕಡೆಗೆ ಮುಖ ಮಾಡದೆ ನ್ಯಾಯ, ಧರ್ಮ, ನೀತಿ, ಸಮಾನತೆ ಹಾಗೂ ವೈಚಾರಿಕ ಮನೋಧೋರಣೆ ಹೊಂದಿದ್ದ ಇವರು ರಾಜಕಾರಣಿಗಳಿಗೆ ದುಃಸ್ವಪ್ನವಾಗಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ರಾಜಕೀಯ ಕುತಂತ್ರತೆಗೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರೂ ಯಾರಿಗೂ ಸೊಪ್ಪಾಕಲಿಲ್ಲ. ಅಧಿಕಾರಕ್ಕಾಗಿಯೇ ಅಂಗಲಾಚುವ ಪ್ರಸ್ತುತ ಸಂದರ್ಭದಲ್ಲಿ ಕ.ವೆಂ.ನಾ. ನಮಗೆ ವ್ಯತಿರಿಕ್ತವಾಗಿ ನಿಲ್ಲುತ್ತಾರೆ. ಆದ್ದರಿಂದಲೇ 2009ರಲ್ಲಿ ಒಂದು ತಿಂಗಳು ಮುಂದುವರೆದಿದ್ದರೆ ಸಹಾಯಕ ಕಮಿಷನರ್ ಆಗುವ ಅವಕಾಶವಿದ್ದರೂ 3 ವರ್ಷಗಳ ಸೇವೆ ಇರುವಂತೆಯೇ ಸ್ವ ಇಚ್ಛಾ ನಿವೃತ್ತಿ ಹೊಂದಿದ ಧೀಮಂತ ವ್ಯಕ್ತಿ ಇವರು. ಇದೆ ಇವರ ಜೀವನದ ಆದರ್ಶ.
ಹೋರಾಟಗಾರ : ಕ.ವೆಂ.ನಾ. ಕೇವಲ ಉತ್ತಮ ಆಡಳಿತಗಾರರಷ್ಟೇ ಅಲ್ಲ ನಾಡು-ನುಡಿಯ ಬಗ್ಗೆ, ಸಾಮಾಜಿಕ ತೊಡಕುಗಳ ಬಗ್ಗೆ ಚಿಂತಿಸುವ ಪ್ರಗತಿಪರ ವ್ಯಕ್ತಿ. ಆದ್ದರಿಂದಲೇ 1975 ರಿಂದ 1977ರ ನಡುವೆ ಇಡಿ ದೇಶಾದ್ಯಂತ ತಲೆದೋರಿದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾ.ಸ್ವ. ಸಂಘದ ಕಾರ್ಯಕರ್ತನೆಂದು ಆರೋಪಿಸಿ ಈ ಕಾರಣಕ್ಕೆ ಬಂಧಿಸಿ ವೃತ್ತಿಯಿಂದ ವಜಾಗೊಳಿಸಲಾಯಿತು. ಇದರಿಂದ ಜಿಲ್ಲಾಧಿಕಾರಿಯವರೊಂದಿಗೆ ವಾಗ್ವಾದದ ಪರಿಣಾಮ ಮತ್ತಷ್ಟು ಮೊಕದ್ದಮೆಗಳನ್ನು ಎದುರಿಸಬೇಕಾಗಿ ಬಂದಿತು. ಭಾರತ ರಕ್ಷಣಾ ಕಾಯದೆಯನ್ವಯ 13 ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಯಾವುದೇ ತಪ್ಪು ಮಾಡದಿದ್ದರೂ ಇವರನ್ನು ಒಂದೂವರೆ ವರ್ಷದ ಕಾಲ ಸೇವೆಯಿಂದ ಅಮಾನತ್ತುಗೊಳಿಸಿ ಸತ್ಯಾಸತ್ಯತೆ ಮನಗಂಡು ನಂತರ ವಿಚಾರಣೆ ಕಾಯ್ದಿರಿಸಿ ಗುಲ್ಬರ್ಗಕ್ಕೆ ವರ್ಗಾವಣೆ ಮಾಡಲಾಯಿತು. ಕೆಲವು ಮೊಕದ್ದಮೆಗಳು ವಜಾ ಆದವು. ಉಳಿದ ಪ್ರಕರಣಗಳು ತುರ್ತು ಪರಿಸ್ಥಿತಿ ಹೋದನಂತರದಲ್ಲಿ ಸರ್ಕಾರ ಹಿಂತೆಗೆದುಕೊಂಡಿತು. ಪುನಃ ಹಾಸನಕ್ಕೆ ಮರು ವರ್ಗಾವಣೆಯಾಯಿತು. ಹೀಗೆ ಇವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಇತ್ತೀಚೆಗೆ ಇವರ ಜೀವನಗಾಥೆಯನ್ನು ಬಿ-ಟಿವಿ ಪ್ರಸಾರ ಪಡಿಸಿದ ಸಂದರ್ಭದಲ್ಲಿ ಎಲ್ಲವನ್ನೂ ವೀಕ್ಷಿಸಿ ಆಶ್ಚರ್ಯಚಕಿತನಾದೆ. ಇವರ ಬಗ್ಗೆ ಗೌರವ ಹೆಚ್ಚಾಯಿತು.
ಸಾಮಾಜಿಕ ಚಟುವಟಿಕೆ ಮತ್ತು ಸಾಹಿತ್ಯ ಕ್ಷೇತ್ರ : ನಿವೃತ್ತಿಯ ನಂತರ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದಲೇ ಕವಿ ಹರಿಹರಪುರ ಶ್ರೀಧರ್ ಅವರ ಜೊತೆಗೂಡಿ ಪ್ರಸ್ತುತ ಪ್ರಖ್ಯಾತಿ ಪಡೆದಿರುವ ವೇದಭಾರತಿ ಸಂಸ್ಥೆಯನ್ನು ಹುಟ್ಟುಹಾಕಿ ಈ ಸಂಸ್ಥೆಯ ಗೌರವಾಧ್ಯಕ್ಷರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತರ್ಜಾಲದಲ್ಲಿ ‘ಕವಿಮನ’ ಹಾಗೂ ‘ವೇದ ಜೀವನ’ ಎಂಬ ತಾಣಗಳನ್ನು ಹೊಂದಿರುವ ಇವರು ಆ ಮೂಲಕ ಸಾವಿರಾರು ಓದುಗರನ್ನು ಪಡೆದಿದ್ದಾರೆ. ಈ ಜಾಲತಾಣಗಳಲ್ಲಿ ಪ್ರಕಟವಾದ ಇವರ ‘ಮೂಢ ಉವಾಚ’ ಹೆಚ್ಚು ಜನಪ್ರಿಯವಾಯಿತು. ಇದೇ 2011ರಲ್ಲಿ ‘ಮೂಢ ಉವಾಚ’ ಎಂಬ ಕೃತಿಯಾಗಿ ಪ್ರಕಟಣೆಯಾಯಿತು. 80 ಪುಟಗಳ ಈ ಕೃತಿಯು 20 ರೂಗಳ ಮುಖ ಬೆಲೆಯನ್ನು ಹೊಂದಿದೆ. 2011ರಲ್ಲಿ ಹಾಸನದ ಶಂಕರಮಠದಲ್ಲಿ ವೇದಸುಧೆ ಬಳಗದ ಪ್ರಾಯೋಜಕತ್ವದಲ್ಲಿ ನಡೆದ ಮನೆ ಮನೆ ಕವಿಗೋಷ್ಠಿಯ ವಾರ್ಷಿಕೋತ್ಸವದಲ್ಲಿ ಈ ಕೃತಿಯು ಬಿಡುಗಡೆಯಾಗಿತ್ತು. ಅದೇ ವೇದಿಕೆಯಲ್ಲಿ ನನ್ನ ‘ಮೃತ್ಯುವಿನಾಚೆಯ ಬದುಕು’ ಕವನ ಸಂಕಲನವೂ ಸಹ ಬಿಡುಗಡೆಯಾಗಿತ್ತು.
ಕವಿ ಮನೆತನ : ಕ.ವೆಂ.ನಾ.ರವರು ಕರ್ನಾಟಕದ ಪ್ರಸಿದ್ಧ ಕೆಳದಿ ಕವಿಮನೆತನದರು. ಇವರ ಪೂರ್ವಜ ಕವಿಲಿಂಗಣ್ಣಯ್ಯ ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದರು. ಕವಿಲಿಂಗಣ್ಣಯ್ಯ ರಚಿಸಿದ 'ಕೆಳದಿನೃಪ ವಿಜಯ' ಐತಿಹಾಸಿಕ ಕಾವ್ಯಕೃತಿಯಾಗಿದ್ದು, ಕೆಳದಿ ಇತಿಹಾಸ ಅಧ್ಯಯನಕ್ಕೆ ಪ್ರಮುಖವಾದ ಆಕರ ಗ್ರಂಥವಾಗಿದೆ. 13 ತಲೆಮಾರುಗಳ ವಂಶವೃಕ್ಷ ಇದರಲ್ಲಿ ಲಭ್ಯವಿದೆ. ಪ್ರತಿವರ್ಷ ಕೆಳದಿ ಕವಿ ಕುಟುಂಬದವರು ಒಟ್ಟಿಗೆ ಸೇರುವ ಮೂಲಕ ಸಮಾವೇಶಗಳ ನಡೆಸುತ್ತಾರೆ. ಈ ಕೆಳದಿ ಕವಿ ಮನೆತನದಿಂದ 'ಕವಿಕಿರಣ' ಎಂಬ ಹೆಸರಿನ ಅರ್ಧವಾರ್ಷಿಕ ಪತ್ರಿಕೆಯ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಸಂಪಾದಕರಾಗಿ ಕ.ವೆಂ.ನಾಗರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕೆಳದಿ ಕವಿಕುಟುಂಬಗಳು, ಬಂಧುಗಳು ಮತ್ತು ಸ್ನೇಹಿತರ ಸಲುವಾಗಿ ಪ್ರಕಟವಾಗುವ ಪತ್ರಿಕೆಯಾಗಿದ್ದು ಇದುವರೆಗೆ 15 ಸಂಚಿಕೆಗಳು ಪ್ರಕಟವಾಗಿವೆ. ಮುಂದಿನ ಸಂಚಿಕೆ ಡಿಸೆಂಬರ್, 2015ರಲ್ಲಿ ಪ್ರಕಟವಾಗಲಿದೆ.

ಮೂಢ ಉವಾಚ : ಕ.ವೆಂ.ನಾಗರಾಜ್ ರವರು ಪ್ರಗತಿಪರ ಚಿಂತಕರೂ ಹೌದು. ಇವರ ;ಮೂಢ ಉವಾಚ’ ಓದಿದರೆ ಇವರ ಸಮಸಮಾಜದ ದೃಷ್ಟಿಕೋನ ಅರಿವಾಗದೇ ಇರದು. ಡಿ.ವಿ.ಗುಂಡಪ್ಪನವರ ಸುಪ್ರಸಿದ್ಧ ಕೃತಿ ‘ಮಂಕು ತಿಮ್ಮನ ಕಗ್ಗ’ ದಂತೆಯೇ ಸಾಮಾಜಿಕ ಕಳಕಳಿಯನ್ನು ಹೊಂದಿರುವ ‘ಮೂಢ ಉವಾಚ’ ವೂ ಸಹ ಒಂದು ಉತ್ತಮ ಕೃತಿಯಾಗಿದೆ. ಇದರಲ್ಲಿ 250 ಮುಕ್ತಕಗಳಿವೆ. 
ಕೇಳಲೊಲ್ಲದ ಕಿವಿಗೆ ನೀತಿ ಪಾಠವದೇಕೆ?
ತಿನ್ನಲೊಲ್ಲದ ಬಾಯ್ಗೆ ಷಡ್ರಸವದೇಕೆ?
ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು
ಪಾತ್ರಾಪಾತ್ರರನರಿತಡಿಯನಿಡು ಮೂಢ ||
***
ಕಣ್ಣಿದ್ದು ಕುರುಡಾಗಿ, ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ, ಕ್ರೂರತ್ವ ತಾನೆರಗಿ
ತಡೆಯಬಂದವರನೆ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ ||
ಹೀಗೆ ಇವರ ಮುಕ್ತಕಗಳು ಭ್ರಷ್ಟಾಚಾರ, ಸಮಾಜಿಕ ಜಾಡ್ಯತೆಗಳು, ಕ್ರೋಧ, ಮದ, ಮತ್ಸರಗಳನ್ನು ಅನಾವರಣಗೊಳಿಸುತ್ತವೆ.

ಕವಿ ಸುಬ್ರಹ್ಮಣ್ಯಯ್ಯ-ಒಂದು ಜೀವಗೀತೆ : ಕವಿ ಸುಬ್ರಹ್ಮಣ್ಯಯ್ಯ –ಒಂದು ಜೀವಗೀತೆ ಕೃತಿಯು 2008 ರಲ್ಲಿ ಪ್ರಕಟವಾಗಿದೆ. 60 ಪುಟಗಳನ್ನು ಹೊಂದಿರುವ ಈ ಕೃತಿಯು ಕೆಳದಿ ಕವಿಮನೆತನದ ಹಿರಿಯ ಚೇತನ ಕವಿ ಸುಬ್ರಹ್ಮಣ್ಯಯ್ಯನವರ ಜೀವನ ಕುರಿತದ್ದಾಗಿದೆ.
     ಇದರಲ್ಲಿ ಮಾಸದ ನೆನಪು, ಸಾಗರದ ಚಿಗುರು, ಅಪ್ಪಳಿಸಿದ ಆಘಾತ, ಕೊಪ್ಪಕ್ಕೆ ಸಾಗಿದ ಬಾಳಿನ ತೆಪ್ಪ, ದಾವಣಗೆರೆಗೆ ಪಯಣ, ಕರೆಯಿತು ಶಿವಮೊಗ್ಗ, ಆನಂದ ಲಕ್ಷ್ಮಮ್ಮ, ಸುಬ್ರಹ್ಮಣ್ಯನ ಹೆಗ್ಗಳಿಕೆ, ಆಶು ಕವಿ-ಹಾಸ್ಯಗಾರ ಸುಬ್ಬಣ್ಣ, ಸುಬ್ರಹ್ಮಣ್ಯನ ಪಂಚಾಂಗ ಶ್ರವಣ, ಕಳಚಿದ ಕೊಂಡಿ ಸೇರಿತು, ಜೀವನ ಸಂಧ್ಯಾಕಾಲದಲ್ಲಿ, ಕವಿ ಸುಬ್ರಹ್ಮಣ್ಯನ ವಂಶಾವಳಿ, ಮುಗಿಸುವ ಮುನ್ನ ಎಂಬ ಹದಿನಾಲ್ಕು ಬರಹಗಳು ಇಲ್ಲಿವೆ. ಈ ಎಲ್ಲ ಬರಹಗಳು ಕ.ವೆಂ.ನಾ.ರವರು ಅವರ ತಾತನೊಂದಿಗಿನ ನೆನಪುಗಳನ್ನು, ಅವರ ಹಿನ್ನಲೆಗಳನ್ನು, ಕವಿ ಮನೆತನದ ಕೊಡುಗೆಗಳನ್ನು , ಆ ಕಾಲದ ಕುಟುಂಬ ಬಾಂಧವ್ಯದ ಸುಮಧುರ ಕ್ಷಣಗಳನ್ನು ಅರ್ಥವತ್ತಾಗಿ ಚಿತ್ರಿಸಿದ್ದಾರೆ.

ಆದರ್ಶದ ಬೆನ್ನು ಹತ್ತಿ :  30 ರೂಗಳ ಮುಖಬೆಲೆಯ 100 ಪುಟಗಳ “ಆದರ್ಶದ ಬೆನ್ನು ಹತ್ತಿ”  ಕೃತಿಯು 1975 ರಿಂದ 1977 ಅವಧಿಯ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ಕುರಿತ ವಿವರವಾದ ಚಿತ್ರಣಸಾಮಾನ್ಯ ನಾಗರಿಕನೊಬ್ಬ ಎದುರಿಸಿದ ಕಷ್ಟ ನಷ್ಟಗಳ ಅನುಭವ ಕಥನ ಇದಾಗಿದೆ.
    ಈ ಪುಸ್ತಕಕ್ಕೆ ಮುನ್ನುಡಿ ಬರೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಮಟ್ಟದ ಪ್ರಚಾರಕರು, ಕುಟುಂಬ ಪ್ರಬೋಧನ್ ಅಖಿಲ ಭಾರತ ಪ್ರಮಖರೂ ಆದ ಶ್ರೀ ಸು.ರಾಮಣ್ಣನವರು ಈ ಕೃತಿಯ ಬಗ್ಗೆ ಹೀಗೆ ಹೇಳಿದ್ದಾರೆ:  “ಎಮರ್ಜೆನ್ಸಿಯ ಕರಾಳ ದಿನಗಳ ಘಟನಾವಳಿಗಳಲ್ಲಿ ಪ್ರತ್ಯಕ್ಷ್ಯ ಇದ್ದು ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಿದವರಲ್ಲಿ ಪ್ರಿಯ ನಾಗರಾಜರಂತಹವರ ಜೊತೆ  ನಾನೂ ಸಹ ಇದ್ದೆ ಎಂಬುದು ಅತ್ಯಂತ ಧನ್ಯತೆಯ ಸಂಗತಿ. ಈ ಪೀಳಿಗೆಯ ತರುಣರಿಗೆ ‘ಎಮರ್ಜೆನ್ಸಿ’ ಗೊತ್ತೇಯಿಲ್ಲ. ಗೊತ್ತಿರುವ ಹಿರಿಯರು ಅದೇಕೋ ಏನೋ ಮರೆತು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾಗರಾಜರು ರಚಿಸಿರುವ ಈ ಪುಸ್ತಕವು ಗಾತ್ರದಲ್ಲಿ ಚಿಕ್ಕದಿರಬಹುದು, ಆದರೆ ಪಾತ್ರ ಬಹಳ ದೊಡ್ಡದು. ಈ ಪುಸ್ತಕವು ಅನ್ಯಾಯಕ್ಕೆ ತಲೆ ಬಾಗದೆ, ನ್ಯಾಯಕ್ಕಾಗಿ ಬದುಕಬೇಕೆಂಬ ಛಲವನ್ನು ತರುಣರಲ್ಲಿ ಬೆಳೆಸಬಲ್ಲದು. ದೇಶ ನನಗಾಗಿ ಅಲ್ಲ. ನಾನು ದೇಶಕ್ಕಾಗಿ ಎಂಬ ಜೀವನ ರಚನೆ ನಮ್ಮದಾಗಬೇಕಾಗಿದೆ. ಭ್ರಷ್ಟಾಚಾರ ಹಾಗೂ ದುರಾಡಳಿತಗಳ ವಿರುದ್ಧವಾಗಿ ಹೋರಾಡಲು ಬೇಕಾದ ಕಸುವು ನಮ್ಮಲ್ಲಿ ಜಾಗೃತವಾಗಬೇಕಿದೆ. ಅಂತಹದ್ದೊಂದು ಪ್ರೇರಣೆಯನ್ನು ಈ ಪುಸ್ತಕ ನೀಡಲು ಅರ್ಹವಾಗಿದೆ ಎಂಬ ಧೃಢ ಅಭಿಪ್ರಾಯ ನನ್ನದು.”
     ಇದುವರೆಗೂ 600ಕ್ಕೂ ಹೆಚ್ಚು ಇವರ ಲೇಖನಗಳು ರಾಜ್ಯದ ವಿವಿಧ ದಿನಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜನಮಿತ್ರದ 'ಚಿಂತನ' ಮತ್ತು ಜನಹಿತದ 'ಜನಕಲ್ಯಾಣ' ಅಂಕಣಗಳು ಹೆಚ್ಚು ಜನಪ್ರಿಯವಾಗಿವೆ. ವಿಕ್ರಮ, ಹೊಸದಿಗಂತಗಳಲ್ಲಿ ವೈಚಾರಿಕ ಲೇಖನಗಳು. ಆಕಾಶವಾಣಿಯಲ್ಲಿ ಇವರ ಹಲವಾರು 'ಚಿಂತನ'ಗಳು ಬಿತ್ತರಗೊಂಡಿವೆ. 
                                                     ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794



ಶನಿವಾರ, ಸೆಪ್ಟೆಂಬರ್ 12, 2015

ಮನಸಿನ ನಿಯಂತ್ರಣ - ಅಂತರಂಗದ ಆಟ


ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
     ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು ಉಪದೇಶಿಸುವ ಅದೇ ಮನಸ್ಸು 'ಕುಡಿ, ಮಜಾ ಮಾಡು. ಸ್ನೇಹಿತರೊಂದಿಗೆ ಸೇರಿ ಎಲ್ಲವನ್ನೂ ಮರೆತು ಕುಡಿ, ನಿನಗೆ ಅದರಿಂದ ಸಂತೋಷ ಸಿಗುವುದಾದರೆ ಅದನ್ನು ಏಕೆ ಕಳೆದುಕೊಳ್ಳುತ್ತೀಯೆ' ಎಂದು ಪ್ರಚೋದಿಸುತ್ತದೆ. ಹಾಗೂ ಡೋಲಾಯಮಾನ ಸ್ಥಿತಿ ಮುಂದುವರೆದರೆ,  ಮಧ್ಯಮ ಮಾರ್ಗ ಸೂಚಿಸಿ ಹೇಳುತ್ತದೆ, 'ಇದೊಂದು ಸಲ ಕುಡಿದು ಬಿಡು, ಆಮೇಲೆ ಕುಡಿಯದಿದ್ದರಾಯಿತು.' ಕೊನೆಗೆ ಅವನು ಯೋಚನೆ ಮುಂದುವರೆಸಿದ್ದಂತೆಯೇ ಅವನ ಕಾಲುಗಳು ಬಾರಿನ ಹಾದಿ ಹಿಡಿದಿರುತ್ತವೆ.
     'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ಅದರಿಂದ ನನಗೆ ಸಂತೋಷವಾಗುತ್ತದೆ' ಎಂದು ಸಮರ್ಥಿಸಿಕೊಳ್ಳುತ್ತೇವೆ. ಖ ಅಂದರೆ ಇಂದ್ರಿಯ, ಸು-ಖ-  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ-ಖ- ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕುಣಿದರೆ/ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.
     ಮನಸ್ಸಿನ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೇವೆ, ಅಲ್ಲವೇ? ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ 'ನಾನು' ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ 'ತ'ಗಳೂ ಇಲ್ಲ. ವಿವಿಧ ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು 'ನಾನು' ಏಳುತ್ತದೆ. ಆ 'ನಾನು'ಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ 'ಅವನು' ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.
     ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಮಾಡಬೇಕಾದ ಅಂತಹ ಕೆಲಸಗಳಿಗೆ ನಾಚಿಕೊಳ್ಳಬೇಕಿಲ್ಲ, ಆದರೆ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.
     ಮನಸ್ಸಿನ ನಿಯಂತ್ರಣದ ಕುರಿತು ಎಲ್ಲರೂ ಮಾತನಾಡುತ್ತೇವೆ, ಅದರ ಅಗತ್ಯವನ್ನೂ ತಿಳಿದಿದ್ದೇವೆ. ಆದರೆ ಅದನ್ನು ಸಾಧಿಸುವುದಾದರೂ ಹೇಗೆ? ಸಹಾಯ ಮಾಡುವವರಾದರೂ ಯಾರು? ಈ ವಿಷಯದಲ್ಲಿ ಸಹಾಯಕ್ಕೆ ಬರುವವರೆಂದರೆ ಯಾರು ಸ್ವತಃ ತಮ್ಮ ಮನಸ್ಸನ್ನು ನಿಯಂತ್ರಿಸಿಕೊಂಡಿರುತ್ತಾರೋ ಅವರು ಮಾತ್ರ! ಮನಸ್ಸಿನ ನಿಯಂತ್ರಣ ಒಂದು ಅಂತರಂಗದ ಆಟ. ಈ ಅಟದಲ್ಲಿ ನಾವು ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಸೋಲುತ್ತೇವೆ, ಕೆಲವೊಮ್ಮೆ ಎಡವುತ್ತೇವೆ. ಈ ಆಟ ಆಡಲು ಚತುರತೆ, ಎಚ್ಚರಿಕೆ, ಹೃದಯದ ಶ್ರೀಮಂತಿಕೆ, ಯೋಜಿಸುವ ಸಾಮರ್ಥ್ಯ, ತಾಳ್ಮೆ, ಸಹನೆ, ಇತ್ಯಾದಿಗಳೆಲ್ಲವೂ ಇರಬೇಕಾಗುತ್ತದೆ. ಗೆದ್ದಾಗ ಮೈಮರೆಯದೆ, ಸೋತಾಗ ಕುಗ್ಗದೆ ಇರುವ ಮನೋಭಾವವಿರಬೇಕಾಗುತ್ತದೆ.
ವಿಷಯಲೋಲುಪತೆ ವಿಷಕಿಂತ ಘೋರ
ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?|
ಅಂತರಂಗದ ದನಿಯು ಹೊರದನಿಯು ತಾನಾಗೆ
ಹೊರಬರುವ ದಾರಿ ತೋರುವುದು ಮೂಢ||
     ಭಗವದ್ಗೀತೆಯಲ್ಲಿನ ಕರ್ಮಯೋಗದಲ್ಲಿನ ಅರ್ಜುನ ಶ್ರೀಕೃಷ್ಣನಿಗೆ ಕೇಳುವ ಈ ಪ್ರಶ್ನೆ ನಮ್ಮಂತಹ ಸಾಮಾನ್ಯರ ಪ್ರಶ್ನೆಯೂ ಆಗಿದೆ: ಅಥಕೇನ ಪ್ರಯುಕ್ತೋಯಂ ಪಾಪಂ ಚರತಿ ಪೂರುಷಃ | ಅನಿಚ್ಛನ್ನಪಿ ವಾರ್ಷ್ಣೇಯ ಬಲಾರ್ದಿವ ನಿಯೋಜಿತಃ || (೩.೩೬) - 'ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮಾಡಲ್ಪಡುವವನಂತೆ ಮನುಷ್ಯನು ಪಾಪವನ್ನು ಮಾಡಲು ಇರುವ ಪ್ರೇರಣೆಯಾದರೂ ಎಂತಹುದು?' ಎಂಬ ಅರ್ಜುನನ ಈ ಪ್ರಶ್ನೆ ಮಹತ್ವದ್ದಾಗಿದೆ. 'ಕುಡಿಯುವುದು ಕೆಟ್ಟದ್ದು ಎಂದು ಸ್ವತಃ ಕುಡುಕನಿಗೇ ಗೊತ್ತಿದ್ದರೂ ಆತ ಏಕೆ ಕುಡಿಯುತ್ತಾನೆ?' ಎಂದು ಕೇಳಿದಂತೆ ಈ ಪ್ರಶ್ನೆ ಇದೆ. ಶ್ರೀಕೃಷ್ಣ ಈ ಪ್ರಶ್ನೆಗೆ ಕೊಟ್ಟ ಉತ್ತರ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಆತ ಹೇಳುತ್ತಾನೆ, "ಕಾಮ, ಕ್ರೋಧಗಳು ರಜೋಗುಣದಿಂದ ಹುಟ್ಟಿದ್ದು ಇವುಗಳನ್ನು ತೃಪ್ತಿಗೊಳಿಸಲಾಗದು. ಹೊಗೆಯಿಂದ ಬೆಂಕಿ, ಧೂಳಿನಿಂದ ಕನ್ನಡಿ ಮುಚ್ಚಿ ಹೋಗುವಂತೆ ಈ ಪ್ರಪಂಚ ಕಾಮ-ಕ್ರೋಧಗಳಿಂದ ಮುಚ್ಚಿಹೋಗಿದೆ. ಇಂದ್ರಿಯಗಳು, ಬುದ್ಧಿ, ಮನಸ್ಸು ಇವುಗಳು ಕಾಮದ ನೆಲೆವೀಡುಗಳು. ಆದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಿ, ಜ್ಞಾನ-ವಿಜ್ಞಾನಗಳನ್ನು ನಾಶ ಮಾಡುವ ಕಾಮವನ್ನು ಹತ್ತಿಕ್ಕಬೇಕು." ಮುಂದುವರೆದು ಹೇಳುತ್ತಾನೆ: ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ | ಮನಸಸ್ತು ಪರಾ ಬುದ್ಧರ್ಯೋ ಬುದ್ಧೇಃ ಪರತಸ್ತು ಸಃ || (೩.೪೨) - 'ವಿಷಯಗಳಿಗಿಂತ ಇಂದ್ರಿಯಗಳು ಹೆಚ್ಚಿನವು, ಇಂದ್ರಿಯಗಳಿಗಿಂತ ಮನಸ್ಸು ಹೆಚ್ಚಿನದು, ಬುದ್ಧಿಯು ಮನಸ್ಸಿಗಿಂತ ಹೆಚ್ಚಿನದು. ಈ ಬುದ್ಧಿಗಿಂತಲೂ ಆತ್ಮ ಶ್ರೇಷ್ಠವಾದುದು.' ಆತ್ಮ ಜ್ಞಾನವನ್ನು ಅರಿಯುವ ಅಂತರಂಗದ ಆಟ ಆಡಲು ತೊಡಗಿದಾಗ, ಆ ಆಟದಲ್ಲಿ ತನ್ಮಯತೆಯಿಂದ ತೊಡಗಿಕೊಂಡಾಗ ಇದರ ಸತ್ಯಾಸತ್ಯತೆ ಅರಿವು ಗೊತ್ತಾಗುತ್ತಾ ಹೋಗುತ್ತದೆ. ಈ ಅಟದಲ್ಲಿ ಗೆಲ್ಲಬೇಕೆಂದರೆ ಮೊದಲು ಮನಸ್ಸನ್ನು ನಿಯಂತ್ರಿಸಬೇಕೆಂಬ ಧೃಡವಾದ ಸಂಕಲ್ಪ ಹೊಂದಬೇಕು, ಮನಸ್ಸಿನ ಸ್ವಭಾವವನ್ನು ಅರಿಯಬೇಕು ಮತ್ತು ಅದಕ್ಕಾಗಿ ನಮ್ಮದೇ ಆದ ತಂತ್ರಗಳು, ರೀತಿ-ನೀತಿಗಳನ್ನು ರೂಪಿಸಿಕೊಂಡು ಅವುಗಳನ್ನು ಬುದ್ದಿವಂತಿಕೆಯಿಂದ, ಪ್ರಾಮಾಣಿಕತೆಯಿಂದ ಜಾರಿಗೆ ತರಬೇಕು. 'ಚಪಳೆ ಸೊಡರ ಕುಡಿಯಂ ಪೋಲ್ವಳ್' ಎಂದು ಲಕ್ಷ್ಮಿ(ಸಂಪತ್ತು)ಯನ್ನು ಕುರಿತು ಕವಿ ವರ್ಣಿಸುತ್ತಾನೆ. ಆದರೆ, ನಮ್ಮ ಮನಸ್ಸು ಅನ್ನುವುದಿದೆಯಲ್ಲಾ, ಅದರ ಚಂಚಲತೆಯನ್ನು ಮೀರಿಸುವ ಮತ್ತೊಂದು ಸಂಗತಿ ಜಗತ್ತಿನಲ್ಲಿ ಇದೆಯೇ? ವಜ್ರವನ್ನು ವಜ್ರ ಕತ್ತರಿಸುವಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಬೇಕಿರುವುದು ಮಾನಸಿಕ ಬಲವೇ ಹೊರತು ಮತ್ತಾವುದರಿಂದಲೂ ಅದು ಜಗ್ಗುವುದಿಲ್ಲ.
-ಕ.ವೆಂ.ನಾಗರಾಜ್.
***************
ದಿನಾಂಕ  31-8-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಸೆಪ್ಟೆಂಬರ್ 9, 2015

ಚಿಂತೆ ಒಂದು ಸಮಸ್ಯೆ, ಪರಿಹಾರವಲ್ಲ!



     'ಅನುಗಾಲವೂ ಚಿಂತೆ ಜೀವಕೆ' ಎಂದು ದಾಸರು ಹೇಳಿರುವುದು ಸತ್ಯಸ್ಯ ಸತ್ಯವಾಗಿದೆ. ಚಿತೆ ಸತ್ತವರನ್ನು ದಹಿಸಿದರೆ ಚಿಂತೆ ಬದುಕಿರುವವರನ್ನೇ ದಹಿಸುತ್ತದೆ ಎಂಬುದು ಅನುಭವದ ನುಡಿಗಟ್ಟಾಗಿದೆ. ಪುಣ್ಯಕೋಟಿ ಗೋವಿನ ಹಾಡನ್ನು ಬದಲಾಯಿಸಿ ಹೀಗೆ ಹಾಡಬಹುದೇನೋ - 'ಚಿಂತೆಯೇ ನಮ್ಮ ತಾಯಿ ತಂದೆ, ಚಿಂತೆಯೇ ನಮ್ಮ ಬಂಧು ಬಳಗ, ಚಿಂತೆಯಿಲ್ಲದ ಮನುಜನಿದ್ದೊಡೆ, ಅವನೆ ನಿಜ ಪರಮಾತ್ಮನು'! ಹಾಗಾದರೆ ಪರಮಾತ್ಮನಿಗೆ ಚಿಂತೆಯೇ ಇಲ್ಲವೇ? ಎಷ್ಟೊಂದು ಸೂರ್ಯಮಂಡಲಗಳು, ಎಷ್ಟೊಂದು ನಕ್ಷತ್ರಗಳು, ಎಷ್ಟೊಂದು ಬಗೆಯ ಜೀವಿಗಳು, ಎಷ್ಟೊಂದು ಬಗೆಯ ಪ್ರಕೃತಿ ಇವೆಲ್ಲದರ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾದ ಅವನಿಗೆ ಚಿಂತೆ ಇಲ್ಲವೇ ಎಂದು ಕೇಳಬಹುದು. ನಿಜ, ಅವನಿಗೆ ಚಿಂತೆಯೇ ಇಲ್ಲ. ಏಕೆಂದರೆ ಅವನ ಕೆಲಸ ಅವನು ಮಾಡಿ ಮುಗಿಸಿದ್ದಾಗಿದೆ. ಸೃಷ್ಟಿ, ಸ್ಥಿತಿ. ಲಯಗಳನ್ನು ಸಹಜವಾಗಿ, ನಿರಂತರವಾಗಿ ನಡೆದುಕೊಂಡು ಹೋಗುತ್ತಿರುವಂತೆ ಮಾಡಿಬಿಟ್ಟಾಗಿದೆ. ಮನುಷ್ಯನಿಗೂ 'ಮಾಡಿದ್ದುಣ್ಣೋ ಮಹರಾಯ' ಎಂದು ಕರ್ಮಕ್ಕೆ ತಕ್ಕ ಫಲ ಎಂದು ಹೇಳಿಬಿಟ್ಟಿದ್ದಾನೆ. ಹಾಗಾಗಿ ಆ ದೇವರು ನಿಶ್ಚಿಂತೆಯಾಗಿ ಯಾರು ಯಾರ ತಲೆ ಕಡಿದರೂ ಸಾಕ್ಷಿಯಂತೆ ನೋಡುತ್ತಾ ಸುಮ್ಮನಿರುತ್ತಾನೆಯೇ ಹೊರತು ತಲೆ ಕೆಡಿಸಿಕೊಳ್ಳುವುದೇ ಇಲ್ಲ.

     ಈ ಚಿಂತೆ ಅನ್ನುವುದಾದರೂ ಏನು? ಚಿಂತೆ ಅನ್ನುವುದು ಮನಸ್ಸಿನಲ್ಲಿ ಮುಂಬರಲಿರುವ ಅಪಾಯಗಳು, ಅಹಿತಕರ ಸನ್ನಿವೇಶಗಳನ್ನು ಎದುರಿಸುವ ಉಪಾಯಗಳ ಕುರಿತು ನಡೆಯುವ ತಾಕಲಾಟಗಳು. ಆ ಸಮಸ್ಯೆಗಳು ಆರೋಗ್ಯದ್ದಾಗಿರಬಹುದು, ವೃತ್ತಿಗೆ ಸಂಬಂಧಿಸಿದ್ದಿರಬಹುದು, ಆರ್ಥಿಕ ಕಾರಣಗಳಿರಬಹುದು, ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳಿರಬಹುದು, ಇಂತಹ ಮತ್ತಾವುದೋ ಆಗಿರಬಹುದು. ನೈಜ ಸಮಸ್ಯೆಗಿಂತ ಕಾಲ್ಪನಿಕ ಸಮಸ್ಯೆ ಮನುಷ್ಯನನ್ನು ಹಿಂಡಿಬಿಡುತ್ತದೆ. ಚಿಂತೆ ಹೆಚ್ಚಾದಷ್ಟೂ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಾ ಹೋಗುತ್ತದೆ. ಈ ಚಿಂತೆ ಅನ್ನುವುದು ಸಮಸ್ಯೆಯನ್ನು ಎದುರಿಸಿ ಗೆಲ್ಲಲು ಸಹಾಯಕವಾಗಬಹುದು. ಆದರೆ, 'ಹೀಗಾದರೆ ಏನು?', 'ಹಾಗಾದರೆ ಏನು?', 'ಸಮಸ್ಯೆಗೆ ಪರಿಹಾರವೇ ಇಲ್ಲದಿದ್ದರೆ ಏನು ಮಾಡುವುದು?' ಇತ್ಯಾದಿ ತಾಕಲಾಟಗಳು, ಅನುಮಾನಗಳು ಮತ್ತು ಸಂದೇಹಗಳು ಮನಸ್ಸಿನ ಆರೋಗ್ಯಕ್ಕೆ, ದೈಹಿಕ ಆರೋಗ್ಯಕ್ಕೆ ಅಪಾಯಕಾರಿಯಾಗದೇ ಇರವು. ಅವು ಜೀವನದಲ್ಲಿನ ಆಸಕ್ತಿಯನ್ನು ಕಳೆದುಬಿಡುತ್ತವೆ, ಆತಂಕ ಮನೆ ಮಾಡಿ ಶಕ್ತಿಯನ್ನು ಬಸಿದುಬಿಡುತ್ತವೆ, ದಿನನಿತ್ಯದ ಚಟುವಟಿಕೆಗಳು ಏರುಪೇರಾಗುವಂತೆ ಮಾಡುತ್ತವೆ. ಸಮಸ್ಯೆ ಎದುರಿಸುವ ಕುರಿತು ಒಬ್ಬನೇ ಒಂಟಿಯಾಗಿ ಚಿಂತಿಸದೆ, ಅದನ್ನು ಆಪ್ತರಾದವರೊಡನೆ ಹಂಚಿಕೊಂಡರೆ ಸಮಸ್ಯೆಗೆ ಪರಿಹಾರ ಹುಡುಕಲು ಸುಲಭವಾಗಬಹುದು. ಕನಿಷ್ಠ ಪಕ್ಷ ನೈತಿಕ ಬೆಂಬಲವಾದರೂ ಸಿಕ್ಕಿ ಮನಸ್ಸು ಹಗುರವಾಗಬಹುದು. ಒಳ್ಳೆಯ ಸಹವಾಸಗಳು, ಒಳ್ಳೆಯ ಆಹಾರ, ಒಳ್ಳೆಯ ನಿದ್ದೆ ಚಿಂತೆಯನ್ನು ಹಗುರಗೊಳಿಸಬಲ್ಲವು. ಆದರೆ, ಈ ಚಿಂತೆ ಇದಕ್ಕೆ ಅವಕಾಶ ಕೊಟ್ಟೀತೇ ಅನ್ನುವುದೂ ಪ್ರಶ್ನೆಯಾಗುತ್ತದೆ.
     ಸತತವಾಗಿ ಚಿಂತಿತರಾಗಿರುವುದು ಬಹಳ ಹಾನಿಯುಂಟುಮಾಡುತ್ತದೆ. ಅದು ರಾತ್ರಿಯ ಸಮಯದಲ್ಲಿ ನಿದ್ರೆ ಬರದಂತೆ ಮಾಡುತ್ತದೆ. ದಿನದ ಸಮಯದಲ್ಲಿ ಏನೋ ಆತಂಕ, ಏನೋ ದುಗುಡ, ಏನೋ ಉದ್ವೇಗದಲ್ಲಿ ಇರುವಂತೆ ಮಾಡುತ್ತದೆ. ಯಾವ ಕೆಲಸ-ಕಾರ್ಯಗಳಲ್ಲೂ ಆಸಕ್ತಿ ಕಾಣುವುದಿಲ್ಲ. ಖಿನ್ನತೆ ಕಾಡುತ್ತದೆ ಮತ್ತು ಯಾರ ಸಹವಾಸವೂ, ಸ್ನೇಹವೂ ಹಿತಕರವೆನಿಸುವುದಿಲ್ಲ, ಏನೋ ಕಳೆದುಕೊಂಡವರಂತೆ ಚಡಪಡಿಸುತ್ತಿರುತ್ತಾರೆ. ಸೂಕ್ಷ್ಮ ಸ್ವಭಾವದವರಿಗೆ, ಭಾವಜೀವಿಗಳಿಗೆ ಚಿಂತೆಯಿಂದ ಆಗುವ ಹಾನಿ, ತೊಂದರೆಗಳ ಅರಿವಿದ್ದರೂ ಚಿಂತೆಯಿಂದ ಮುಕ್ತರಾಗುವ ದಾರಿ ಕಂಡುಕೊಳ್ಳುವುದು ಸುಲಭವಲ್ಲ.
     ಚಿಂತೆ ಮಾಡದಿರುವುದು ಇಷ್ಟೊಂದು ಕಷ್ಟವಾಗಿರುವುದೇಕೆ? ಸತತ ಚಿಂತೆಯಿಂದ ನರಳುವವರು ಚಿಂತೆಯ ಬಗ್ಗೆ ಧನಾತ್ಮಕವಾದ ಮತ್ತು ಋಣಾತ್ಮಕವಾದ ನಂಬಿಕೆಗಳನ್ನು ಹೊಂದಿರುತ್ತಾರೆ. ಚಿಂತೆ ತಲೆ ಕೆಡುವಂತೆ ಮಾಡುತ್ತದೆ, ಅದು ಆರೋಗ್ಯವನ್ನು ಹಾಳು ಮಾಡುತ್ತದೆ, ಸತತವಾಗಿ ಚಿಂತಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಅದು ನಿರಂತರವಾಗಿರುತ್ತದೆ ಎಂಬುದು ಋಣಾತ್ಮಕ ನಂಬಿಕೆಯಾಗಿದೆ. ಚಿಂತಿಸುವುದರಿಂದ ಕೆಟ್ಟ ಸಂಗತಿಗಳನ್ನು ನಿವಾರಿಸಿಕೊಳ್ಳಬಹುದು, ಸಮಸ್ಯೆಗಳನ್ನು ಪರಿಹರಿಸುತ್ತದೆ, ಅತಿ ಕೆಟ್ಟ ಸನ್ನಿವೇಶಗಳಲ್ಲೂ ಸಿದ್ಧರಿರುವಂತೆ ಮಾಡುತ್ತದೆ ಅಥವ ಸಮಸ್ಯೆಗೆ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಧನಾತ್ಮಕ ನಂಬಿಕೆಯೆನಿಸುತ್ತದೆ. ಈ ಎರಡೂ ನಂಬಿಕೆಗಳು ಒಳ್ಳೆಯವಲ್ಲ. ಋಣಾತ್ಮಕ ನಂಬಿಕೆ ಆತಂಕವನ್ನು ಹೆಚ್ಚಿಸುತ್ತದೆ ಮತ್ತು ಚಿಂತೆ ಮುಂದುವರೆಯುವಂತೆ ಮಾಡುತ್ತದೆ. ಧನಾತ್ಮಕ ನಂಬಿಕೆ ಸಹ ಅಷ್ಟೇ ಹಾನಿ ತರಬಲ್ಲದು. ಚಿಂತೆ ಮಾಡುವುದರಿಂದ ಸಮಸ್ಯೆ ಪರಿಹಾರಕ್ಕೆ ಸಹಾಯವಾಗುತ್ತದೆ ಎಂಬ ಭಾವನೆ ಚಿಂತಿಸುವ ಸ್ವಭಾವವನ್ನು ಉತ್ತೇಜಿಸುತ್ತದೆ. ಮನಸ್ಸಿನ ಮೇಲೆ ಹತೋಟಿ ಸಾಧಿಸಬೇಕೆಂದರೆ ಚಿಂತೆ ಅನ್ನುವುದು ಒಂದು ಸಮಸ್ಯೆ, ಪರಿಹಾರವಲ್ಲ ಎಂದು ಅರಿತುಕೊಳ್ಳಬೇಕಿದೆ.
     ಆತಂಕ, ಚಿಂತೆಗಳು ರಚನಾತ್ಮಕ ಶಕ್ತಿಯನ್ನು ಕಸಿದುಬಿಡುತ್ತವೆ, ಉತ್ಸಾಹಕ್ಕೆ ಗರ ಬಡಿಯುತ್ತದೆ, ಕ್ರಿಯಾತ್ಮಕತೆಯ ಬಾಗಿಲು ಮುಚ್ಚಿಬಿಡುತ್ತದೆ. ಆಗ ಏನು ಮಾಡಬಹುದು? ಸತತ ಚಿಂತೆಯಿಂದ ನರಳುವವರು ಏನೇ ಪ್ರಯತ್ನ ಮಾಡಿದರೂ ಅದರಿಂದ ಪಾರಾಗುವುದು ಸುಲಭವಲ್ಲವೆಂಬುದು ಅರಿವಿಗೆ ಬಂದಾಗ ನಿರಾಶೆ ಮೂಡುತ್ತದೆ. ಚಿಂತೆಯನ್ನು ಮರೆಯುವ ಪ್ರಯತ್ನ ಅಷ್ಟು ಸುಲಭವಲ್ಲ. ಮರೆಯಬೇಕೆಂದಷ್ಟೂ ಚಿಂತೆಯ ಸುತ್ತಲೇ ಮನಸ್ಸು ಸುಳಿದಾಡುತ್ತಿರುತ್ತದೆ. ಒಂದು ಉದಾಹರಣೆ ನೋಡೋಣ. ಕಣ್ಣು ಮುಚ್ಚಿ ಒಂದು ದೊಡ್ಡ ಹಂದಿ ತಿಪ್ಪೆಯ ಹೊಲಸಲ್ಲಿ ಆನಂದವಾಗಿ ಬಾಯಾಡಿಸುತ್ತಿರುವ ಚಿತ್ರವನ್ನು ಕಲ್ಪಿಸಿಕೊಳ್ಳೋಣ. ಮನಸ್ಸಿನಲ್ಲಿ ಆ ಚಿತ್ರ ಮನಸ್ಸಿನಲ್ಲಿ ಗಟ್ಟಿಗೊಂಡಾಗ ಆ ಚಿತ್ರದ ಕುರಿತು ಚಿಂತಿಸುವುದನ್ನು ನಿಲ್ಲಿಸೋಣ. ಏನೇ ಆದರೂ ಮುಂದಿನ ಐದು ನಿಮಿಷಗಳ ಅವಧಿಯವರೆಗೆ ಹಂದಿಯ ನೆನಪು ಬಾರದಿರುವಂತೆ ನಿರ್ಧರಿಸೋಣ. ಏನಾಗುತ್ತದೆ? ಅದರ ಕುರಿತು ಚಿಂತಿಸಬಾರದೆಂದುಕೊಂಡರೂ ಅದು ಸಾಧ್ಯವಾಗದು. ಮತ್ತೆ ಮತ್ತೆ ಆ ಚಿತ್ರ ಮೂಡಿಬರುತ್ತಿರುತ್ತದೆ. ಆದ್ದರಿಂದ ಚಿಂತೆಯನ್ನು ಮರೆಯಲು ಪ್ರಯತ್ನಿಸುವ ಬದಲು ಅದನ್ನು ನಿಯಂತ್ರಿಸಲು ಬೇರೆ ಮಾರ್ಗವನ್ನೇ ಹುಡುಕಬೇಕಿದೆ. ಚಿಂತೆ ಮಾಡಲು ದಿನದ ಒಂದು ನಿರ್ದಿಷ್ಟ ಅವಧಿಯನ್ನು, ಉದಾಹರಣೆಗೆ ಸಂಜೆಯ 5 ಗಂಟೆಯಿಂದ 6 ಗಂಟೆಯವರೆಗೆ ಅಥವ ರಾತ್ರಿಯ 9 ಗಂಟೆಯಿಂದ 10 ಗಂಟೆಯವರೆಗೆ, ಹೀಗೆ ನಿಗದಿಪಡಿಸಿಕೊಂಡರೆ ಮನಸ್ಸು ಸ್ವಲ್ಪ ಮಟ್ಟಿಗೆ ಚಿಂತೆಯನ್ನು ಬದಿಗಿಟ್ಟು ಮುಂದೂಡಲು ಸಹಾಯವಾಗುತ್ತದೆ. ಚಿಂತೆಗಾಗಿ ಸಮಯವಿರುವುದರಿಂದ ಇತರ ಸಂಗತಿಗಳಿಗೆ ಗಮನ ಕೊಡೋಣ ಎಂದು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಹೀಗೆ ಮುಂದೂಡುವ ಶಕ್ತಿ ರೂಢಿಸಿಕೊಂಡರೆ ಚಿಂತೆಯನ್ನು ನಿಯಂತ್ರಿಸುವ ಶಕ್ತಿ ಇದೆಯೆಂಬ ಅರಿವು ಮೂಡಿ ಹುರುಪು ಉಳಿಸಿಕೊಳ್ಳಲು ಸಹಾಯಕವಾಗುತ್ತದೆ.
     ಮುಂದಿನ ಹಂತವಾಗಿ ಸಮಸ್ಯೆಯ ಅಂತರಾಳಕ್ಕೆ ಇಳಿಯಬೇಕು. ಸಮಸ್ಯೆಯನ್ನು ಕೇವಲ ಚಿಂತಿಸುವುದರಿಂದ ಬಗೆಹರಿಸಲಾಗದು. ಪರಿಸ್ಥಿತಿಯ ಅವಲೋಕನ ಮಾಡಬೇಕು, ಏನು ಮಾಡಬಹುದೆಂಬ ಬಗ್ಗೆ ಯೋಚಿಸಬೇಕು ಮತ್ತು ಅದನ್ನು ಕ್ರಿಯಾರೂಪಕ್ಕೆ ತರುವ ಮಾರ್ಗಗಳನ್ನು ಹುಡುಕಬೇಕು. ಈ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕು.
** ಸಮಸ್ಯೆ ಕೇವಲ ಊಹಾತ್ಮಕ ಮತ್ತು ಕಲ್ಪನೆಯದೇ?
** ಕಲ್ಪನೆಯ ಸಮಸ್ಯೆಯಾದರೆ, ಅದು ನಿಜಕ್ಕೂ ಸಂಭವಿಸಬಹುದೇ?
** ಸಮಸ್ಯೆ ಪರಿಹಾರಕ್ಕೆ ಏನಾದರೂ ಮಾಡಬಹುದೇ ಅಥವ ಅದನ್ನು ಎದುರಿಸಲು ಸಿದ್ಧರಾಗಿದ್ದೇವೆಯೇ? ಅಥವ ಅದು ನಮ್ಮ ನಿಯಂತ್ರಣಕ್ಕೆ ಹೊರತಾದುದೇ?
ಪರಿಹರಿಸಬಹುದಾದ ಸಮಸ್ಯೆಯಾದರೆ ಏನು ಮಾಡಬಹುದೆಂಬ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಜನೆಗಳನ್ನು ರೂಪಿಸಬೇಕು. ಅದರ ಬಗ್ಗೆಯೇ, ಪರಿಪೂರ್ಣ ಪರಿಹಾರದ ಬಗ್ಗೆಯೇ, ತಲೆ ಕೆಡಿಸಿಕೊಳ್ಳದೆ, ನಮ್ಮ ನಿಯಂತ್ರಣಕ್ಕೆ ಹೊರತಾದ ಸಂಗತಿಗಳನ್ನು ಬಿಟ್ಟು ಉಳಿದಂತೆ ಏನು ಬದಲಾವಣೆ ತರಬಹುದೋ ಅಂತಹುದರ ಬಗ್ಗೆ ಕೇಂದ್ರೀಕರಿಸಿ ಪ್ರಯತ್ನಿಸಬೇಕು. ಒಮ್ಮೆ ಕಾರ್ಯಯೋಜನೆ ಸಿದ್ಧಪಡಿಸಿಕೊಂಡು ಪ್ರವೃತ್ತರಾದೆವೆಂದರೆ ಅರ್ಧ ಚಿಂತೆಯಿಂದ ಮುಕ್ತರಾದಂತೆಯೇ ಸರಿ.
     ಪರಿಹರಿಸಲಾಗದ ಸಮಸ್ಯೆಗಳಿದ್ದರೆ ಏನು ಮಾಡುವುದು? ನಮ್ಮಲ್ಲಿ ಹೆಚ್ಚಿನವರು ಇಂತಹ ಸಮಸ್ಯೆಗಳ ಚಿಂತೆಯಲ್ಲೇ ಬಳಲುತ್ತಿರುತ್ತೇವೆ. ಇಂತಹ ಸಂದರ್ಭಗಳಲ್ಲಿ, ನಮ್ಮ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದು ಅವಶ್ಯಕವಾಗಿದೆ. ಚಿಂತೆ ಸಮಸ್ಯೆ ಪರಿಹರಿಸಲಾಗದಿದ್ದರೂ ಭಾವನೆಗಳನ್ನು ನಿಯಂತ್ರಿಸಲು ಸಹಕಾರಿಯೆಂಬುದನ್ನು ಹಿಂದೆಯೇ ಹೇಳಿದೆ. ಆದರೆ ಅದು ಅಹಿತಕರ ಭಾವನೆಗಳನ್ನು ಹೋಗಲಾಡಿಸಲಾರದು. ಈ ವಿಷವೃತ್ತದಿಂದ ಹೊರಬರಬೇಕೆಂದರೆ ಅಹಿತಕರ ಭಾವನೆಗಳನ್ನು ಅವು ಇರುವಂತೆ ಒಪ್ಪಿಕೊಳ್ಳಬೇಕಷ್ಟೆ. ಈ ಭಾವನೆಗಳು ಜೀವನದಂತೆಯೇ ಗೋಜಲು ಗೋಜಲಾಗಿರುತ್ತವೆ ಎಂಬ ಸತ್ಯ ಮನಗಾಣಬೇಕು. ಭಾವನೆಗಳು ಯಾವಾಗಲೂ ಅರ್ಥವತ್ತಾಗಿರಲಾರದು ಅಥವ ಹಿತವಾಗಿರಲಾರದು. ಅವು ಮಾನವಸಹಜವೆಂದು ತಿಳಿದು ಅವುಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದರ ಬಗ್ಗೆ ಗಮನಿಸಬೇಕು.
     ಸತತ ಚಿಂತೆಯಿಂದ ಬಳಲುತ್ತಿರುವವರ ಮೂಲ ಸಮಸ್ಯೆಯೆಂದರೆ ಅವರು ಅನಿಶ್ಚಿತತೆಯನ್ನು ತಾಳಿಕೊಳ್ಳಲಾರರು. ಮುಂದೆ ಏನಾಗಬಹುದು ಎಂಬ ಕುರಿತು ಅವರು ಶೇಕಡ ನೂರರಷ್ಟು ಖಚಿತಪಡಿಸಿಕೊಳ್ಳಬಯಸುವವರು. ಅದನ್ನು ತಿಳಿಯುವ ಸಲುವಾಗಿಯೇ ಮತ್ತು ಅಂತಹ ಅಹಿತಕರ ಸನ್ನಿವೇಶಗಳನ್ನು ತಡೆಯುವುದು ಹೇಗೆ ಎಂಬ ಕುರಿತಾಗಿಯೇ ಚಿಂತೆಯಿಂದ ಬಳಲುತ್ತಾರೆ. ಆದರೆ ಸಮಸ್ಯೆಯೆಂದರೆ ಅಂತಹ ಚಿಂತೆ ಉಪಯೋಗಕ್ಕೆ ಬರುವುದಿಲ್ಲ. ಮುಂದೆ ಆಗಬಹುದಾದ ಸಂಗತಿಗಳ ಬಗ್ಗೆ ಚಿಂತಿಸುವುದರಿಂದ ಭವಿಷ್ಯ ತಿಳಿಯಲಾಗದು. ಹಾಗೆ ಚಿಂತಿಸುವುದರಿಂದ ಒಳ್ಳೆಯ ಸ್ಥಿತಿ ಬಂದೀತೆಂದು ಭಾವಿಸುವುದಾದರೂ, ಅದು ಕೇವಲ ಭ್ರಮೆಯಾಗಿರುತ್ತದೆ. ಕೆಟ್ಟ ಸಂಭವನೀಯ ಸಂಗತಿಗಳ ಬಗ್ಗೆ ಚಿಂತಿಸುವುದರಿಂದ ಅದನ್ನು ನಡೆಯುವುದನ್ನು ನಿಲ್ಲಿಸಲಾಗದು. ಅಂತಹ ಚಿಂತೆ ನಮ್ಮ ಈಗಿನ ಸುಖ-ಸಂತೋಷಗಳನ್ನು ಕಿತ್ತುಕೊಳ್ಳುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಈಗ ಏನು ಮಾಡಬಹುದೆಂಬ ಬಗ್ಗೆ ಮಾತ್ರ ಯೋಚಿಸಿ, ಕ್ರಮೇಣ ನಿಶ್ಚಿತ ಮತ್ತು ಉಪಯುಕ್ತ ಕ್ರಮಗಳ ಬಗ್ಗೆ ಮುಂದುವರೆಯುವುದು ಸೂಕ್ತ.
     ಸತತ ಚಿಂತೆಯಿಂದ ಬಳಲುವವರಿಗೆ ಸಮಸ್ಯೆ ವಾಸ್ತವಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ತೋರುತ್ತದೆ. ಸಮಸ್ಯೆಯನ್ನು ನಿಭಾಸುವುದು ದುಸ್ತರವಾಗಿ ತೋರುತ್ತದೆ. ಇದನ್ನು ಅರಿವಿನ ವಿಕಾರವೆನ್ನಬೇಕೋ ಅಥವ ಬೇರೆ ಏನೆನ್ನಬೇಕೋ ತಿಳಿಯದು. ಈ ಅರಿವಿನ ವಿಕಾರ ವಾಸ್ತವಿಕ ವಿಚಾರಗಳನ್ನು ಅವಲಂಬಿಸಿರದಿದ್ದರೂ ಅದನ್ನು ಬಿಡುವುದು ಕಷ್ಟವೇ. ಎಷ್ಟೋ ಸಲ ಅದು ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿರುವ, ಬದಲಾಯಿಸಲಾಗದ ವಿಚಾರವಾಗಿರಬಹುದು. ಇದನ್ನು ಸರಿಪಡಿಸಲು ಮೆದುಳಿಗೆ ತರಬೇತಿ ಕೊಡುವುದು ಅಗತ್ಯ. ಸಮಸ್ಯೆಯ ಅಪಾಯಗಳ ಕುರಿತು ಯಾವ ಸಂಗತಿ ಭಯಕ್ಕೆ ಕಾರಣವಾಗಿದೆಯೋ ಅದನ್ನು ವಸ್ತುಸ್ಥಿತಿಯೆಂದು ಭಾವಿಸದೆ, ಅದರ ಕುರಿತು ಸಾಧಕ-ಬಾಧಕಗಳ ಕುರಿತು ಪರಿಶೀಲಿಸಿದರೆ ಸಮತೋಲಿತವಾಗಿ ಯೋಚಿಸಲು ಸಾಧ್ಯವಾಗಬಹುದು. ಈ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ:
**  ಚಿಂತೆಗೆ ಕಾರಣವಾದ ಸಂಗತಿ ಎಷ್ಟರಮಟ್ಟಿಗೆ ಸತ್ಯ? ಎಷ್ಟು ಅಸತ್ಯ?
** ಈಗಿನ ಪರಿಹಾರಕ್ಕಿಂತ ಬೇರೆ ರೀತಿಯ ಪರಿಹಾರಕ್ಕೆ ಅವಕಾಶವಿದೆಯೇ?
**  ಭಯಕ್ಕೆ ಕಾರಣವಾದ ಸಂಗತಿ ನಡೆಯುವ ಸಾಧ್ಯತೆ ಎಷ್ಟು?
**  ಅಂತಹ ಸಾಧ್ಯತೆ ಕಡಿಮೆಯಿದ್ದರೆ, ಇತರ ಪರಿಣಾಮಗಳಾದರೂ ಎಂತಹವು?
**  ಚಿಂತಿಸುವುದು ಸಹಕಾರಿಯೇ? ಚಿಂತೆ ಮಾಡುವುದರಿಂದ ಎಷ್ಟರ ಮಟ್ಟಿಗೆ ಅನುಕೂಲ/ತೊಂದರೆ?
**  ಇಂತಹುದೇ ಸಮಸ್ಯೆ ನನ್ನ ಸ್ನೇಹಿತನಿಗೆ ಇದ್ದರೆ ನಾನು ಏನು ಸಲಹೆ ಕೊಡುತ್ತಿದ್ದೆ?
     ಸಮಸ್ಯೆ ಉಂಟುಮಾಡುವವರಿಂದ ಹಿತಕರವಾದ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಸಮಸ್ಯೆ ಉಲ್ಬಣವಾಗದಂತೆ ಅಂತಹವರೊಂದಿಗೆ ಜಾಗ್ರತೆಯಿಂದ ವ್ಯವಹರಿಸಬೇಕಾಗುತ್ತದೆ. ಆಪ್ತರು, ಸ್ನೇಹಿತರು, ಹಿತಚಿಂತಕರುಗಳನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು. ಚಿಂತೆಗೆ ಭವಿಷ್ಯದಲ್ಲಿ ಏನಾಗಬಹುದು ಮತ್ತು ಅದಕ್ಕೆ ನಾವು ಏನು ಮಾಡಬೇಕು ಎಂಬುದೇ ಮುಖ್ಯ ಕಾರಣವಾಗಿದೆ. ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು ಮತ್ತು ಅದಕ್ಕೆ ತರಬೇತಿ ನೀಡಿದರೆ ಸಮಸ್ಯೆ ಹಗುರವಾದೀತು. ಮನಸ್ಸಿನ ಆತಂಕಗಳು, ಉದ್ವೇಗಗಳನ್ನು ಉಪೇಕ್ಷಿಸದೆ, ಹತ್ತಿಕ್ಕದೆ ಅವುಗಳನ್ನು ಹೊರಗಿನ ವ್ಯಕ್ತಿಯ ದೃಷ್ಟಿಯಿಂದ ನೋಡುವ ಅಭ್ಯಾಸ ಬೆಳೆಸಿಕೊಂಡರೆ ಒಳಿತಾದೀತು. ಇಂತಹ ಅಭ್ಯಾಸ ಬೆಳೆಸಿಕೊಂಡರೆ ಸಮಸ್ಯೆಗಳು ಮೋಡ ಆಕಾಶದಲ್ಲಿ ಸರಿದುಹೋದಂತೆ ಸರಿದು ಹೋಗಬಹುದು. ಚಿಂತೆ ಭವಿಷ್ಯದ ದುಃಖಗಳನ್ನು ನಿವಾರಿಸುತ್ತದೋ ಇಲ್ಲವೋ ತಿಳಿಯದು, ಆದರೆ ಇಂದಿನ ಸಂತೋಷವನ್ನು ಮಾತ್ರ ಹಾಳು ಮಾಡುತ್ತದೆ. ಮುಂದಿನ ಸಂಗತಿಗಳಿಗಿಂತ ಇಂದಿನ ಪರಿಸ್ಥಿತಿಯ ಬಗ್ಗೆ ಗಮನ ನೀಡಿದರೆ ಮುಂದಿನದೂ ಸರಾಗವಾಗಿ ಸಾಗಬಹುದು. ಮನಸ್ಸನ್ನು ಕೇಂದ್ರೀಕರಿಸಿ ಈಗ ಏನು ಮಾಡಬೇಕೆಂಬ ಬಗ್ಗೆ ಮಾತ್ರ ಧ್ಯಾನಿಸಿದರೆ ಅನುಕೂಲವಾಗಬಹುದು. ಹಳೆಯ ಚಿಂತೆಗಳಿಗೆ ಮನಸ್ಸು ಮರಳಿದರೂ, ವಿಚಲಿತರಾಗದೆ ಪ್ರಯತ್ನ ಮುಂದುವರೆಸಿದರೆ ಚಿಂತೆಯಿಂದ ಮುಕ್ತವಾಗುವ ದಾರಿ ಸಿಕ್ಕೀತು. ಚಿಂತಿಸದಿರೋಣ. ಚಿಂತೆಯದೇ ಚಿಂತೆಯಾಗಿರುವಾಗ ಇದು ಬಹಳ ಕಷ್ಟವಾದರೂ ಪ್ರಯತ್ನಪಟ್ಟು ಚಿಂತಿಸದಿರೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 24-8-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಸೆಪ್ಟೆಂಬರ್ 2, 2015

ಆರರ ಮಹಿಮೆ


     ಈ 'ಆರು' ಅನ್ನುವುದಕ್ಕೆ ಪದಕೋಶದಲ್ಲಿ ಹಲವು ಅರ್ಥಗಳಿವೆ. ಎತ್ತುಗಳನ್ನು ಹೂಡಿದ ನೇಗಿಲಿಗೂ ಆರು ಎನ್ನುತ್ತಾರೆ. ಶಕ್ತವಾಗು, ಗಟ್ಟಿಯಾಗಿ ಕೂಗು, ತಣ್ಣಗಾಗು ಎಂಬ ಅರ್ಥಗಳು ಸಹ ಇವೆ. ಆರಿಸು ಎಂದರೆ ಶೇಖರಿಸು, ಆಯ್ಕೆ ಮಾಡು, ನಂದಿಸು ಎಂಬ ಅರ್ಥಗಳೂ ಪದಕೋಶದಲ್ಲಿ ಸಿಗುತ್ತವೆ. ಆರು ಗುಣಗಳು, ಅಂಶಗಳು/ವಿಚಾರಗಳ ಕುರಿತು ವಿವೇಚಿಸುವುದು ಈ ಲೇಖನದ ಉದ್ದೇಶ.      ಮಹಾಭಾರತದ ಉದ್ಯೋಗ ಪರ್ವದಲ್ಲಿ ವಿದುರ ಧೃತರಾಷ್ಟ್ರನಿಗೆ ನ್ಯಾಯಯುತ ಮಾರ್ಗದ ಕುರಿತು ತಿಳಿಸಿ ಹೇಳುವುದರೊಂದಿಗೆ, ನಡವಳಿಕೆಗಳು, ಸದಾಚಾರ, ಮಾತು, ನೀತಿ, ಧರ್ಮ, ಸುಖ-ದುಃಖಗಳ ಪ್ರಾಪ್ತಿ, ನ್ಯಾಯ-ಅನ್ಯಾಯ, ಸತ್ಯ, ಅಹಿಂಸೆ, ಕ್ಷಮೆ, ಮಿತ್ರ-ಶತ್ರುಗಳಾರು, ಮುಂತಾದ ಸಂಗತಿಗಳ ಬಗ್ಗೆ ತಿಳುವಳಿಕೆ ನೀಡಿರುವ ಬಗೆಗೂ ವಿಸ್ತೃತವಾಗಿ ವಿವರಿಸಲಾಗಿದೆ. ವಿದುರ ನೀತಿ ಎಂದೇ ಹೆಸರಾಗಿರುವ ಈ ಪರ್ವದಲ್ಲಿ ಸಜ್ಜನ-ಸಾಧಕರಿಗೆ ಇರಬೇಕಾದ ನೂರಾರು ಕಲ್ಯಾಣಕಾರಿ ಗುಣಗಳ ಬಗ್ಗೆ ಮಾಹಿತಿ, ಮಾರ್ಗದರ್ಶನಗಳು ಇದ್ದು, ಅವುಗಳಲ್ಲಿ ಬರುವ 'ಆರು' ಅಂಶಗಳನ್ನು ಹೆಕ್ಕಿ ಲೇಖನವಾಗಿಸಿರುವೆ.
     ೧. ಉನ್ನತ ಸ್ಥಿತಿಗೆ ಏರಬಯಸುವವರು, ಐಶ್ವರ್ಯ ಬಯಸುವವರು ನಿದ್ರೆ, ತೂಕಡಿಕೆ, ಭಯ, ಸಿಟ್ಟು, ಸೋಮಾರಿತನ ಮತ್ತು ವಿಳಂಬ ನೀತಿ - ಈ ಆರರಿಂದ ದೂರವಿರಬೇಕು. ಒಬ್ಬ ಸಾಧಕನ ಸಾಧನೆಗೆ ಸತತ ಶ್ರಮ, ಏಕಾಗ್ರತೆ ಅಗತ್ಯವಿದ್ದು ಇದಕ್ಕೆ ನಿದ್ರೆ, ತೂಕಡಿಕೆಗಳು, ಸೋಮಾರಿತನಗಳು ಅಡ್ಡಿ ತರುತ್ತವೆ. ನಮ್ಮ ಜೀವಿತಾವಧಿ ಯಾವಾಗ ಅಂತ್ಯವಾದೀತೋ ತಿಳಿಯದಾಗಿರುವಾಗ ಯಾವುದೇ ಕೆಲಸವನ್ನು ಮುಂದೂಡದೇ, 'ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈಗಲೇ ಮಾಡು' ಎಂಬ ಅನುಭವಿಗಳ ಮಾತನ್ನು ಅನುಸರಿಸುವುದು ಸೂಕ್ತವಾಗಿದೆ. ಮಾಡಹೊರಟಿರುವ ಕೆಲಸಕ್ಕೆ ಅಡ್ಡಿಗಳು, ಅಡಚಣೆಗಳು ಎದುರಾದಾಗ ಎದೆಗುಂದದೆ, ಭಯಪಡದೆ ಮುಂದಡಿಯಿಡುವುದು ಸಾಧಕರ ಲಕ್ಷಣವಾಗಿದೆ.
     ೨. ಜ್ಞಾನವನ್ನು ಹಂಚದ ಗುರು, ಅಧ್ಯಯನ ಮಾಡದ ಋತ್ವಿಜ, ದುರ್ಬಲ ರಾಜ, ಅಪ್ರಿಯವಾಧಿನಿ ಪತ್ನಿ, ಸದಾ ಊರಿನಲ್ಲೇ ಇರಬಯಸುವ ಗೋಪಾಲಕ ಮತ್ತು ವನದಲ್ಲಿ ಇರಬಯಸುವ ಕ್ಷೌರಿಕ - ಈ ಆರು ಜನರನ್ನು ಸಮುದ್ರದಲ್ಲಿ ರಂಧ್ರ ಬಿದ್ದ ನಾವೆಯಂತೆ ದೂರವಿರಿಸಬೇಕು ಎಂದು ವಿದುರ ಹೇಳಿದ್ದಾನೆ. ಗುರುವಾದವನು ತನ್ನ ಶಿಷ್ಯರಿಗೆ ತನಗೆ ಗೊತ್ತಿರುವ ಜ್ಞಾನವನ್ನು ಹಂಚಬೇಕು. ತಿಳಿದ ಜ್ಞಾನವನ್ನು ಇತರರಿಗೆ ಹಂಚದಿದ್ದರೆ ಅದು ಕಳ್ಳತನಕ್ಕೆ ಸಮನಾದುದು ಎಂಬುದು ವೇದೋಕ್ತಿಯಾಗಿದೆ. ಒಂದೊಮ್ಮೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಆಯುರ್ವೇದದ ಅನೇಕ ಸಂಗತಿಗಳು, ಲೋಹವನ್ನು ಚಿನ್ನವಾಗಿ ಪರಿವರ್ತಿಸಬಹುದಾದ ವಿದ್ಯೆ, ಇತ್ಯಾದಿಗಳು ಅವುಗಳನ್ನು ತಿಳಿದವರೊಂದಿಗೇ ಕಣ್ಮರೆಯಾಗಿವೆ. ಮಾರಣಾಂತಿಕ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ಕೊಡಬಲ್ಲ ನಾಟಿವೈದ್ಯರುಗಳನ್ನೂ ನಾವು ಕಂಡಿದ್ದೇವೆ. ಅವರು ತಮ್ಮ ಜ್ಞಾನವನ್ನು ಇನ್ನೊಬ್ಬರಿಗೆ ತಿಳಿಸಿಕೊಡದೇ ಇರುವುದರಿಂದ ಅವರೊಂದಿಗೇ ಆ ವಿದ್ಯೆ ಅಂತ್ಯ ಕಾಣುತ್ತವೆ. 'ಯೋಗ್ಯ ಶಿಷ್ಯ ಸಿಗಲಿಲ್ಲ, ಹೇಳಿಕೊಡಲಿಲ್ಲ' ಎಂಬುದು ನೆಪವಾಗುತ್ತದೆ. ಅಧ್ಯಯನ ಮಾಡಬೇಕಾದುದು ಒಬ್ಬ ಋತ್ವಿಜನ ಕರ್ತವ್ಯವಾಗಿದೆ. ಸಮಾಜಕ್ಕೆ ಅವರ ಮಾರ್ಗದರ್ಶನ ಅಗತ್ಯವಿರುತ್ತದೆ. ಆತನೇ ಸರಿಯಾಗಿ ತಿಳಿದುಕೊಳ್ಳದಿದ್ದರೆ ಆತ ಏನು ಮಾರ್ಗದರ್ಶನ ಮಾಡಿಯಾನು? ಮಾಡಿದರೂ ಅದು ಸರಿಯಾಗಿರದಿದ್ದರೆ ಹಾನಿಕಾರಕ ಪರಿಣಾಮ ಬೀರುವುದಂತೂ ನಿಶ್ಚಿತ. ಇಂದಿನ ಅನೇಕ ಪಂಡಿತೋತ್ತಮರು, ಗುರುಗಳು ಅನ್ನಿಸಿಕೊಂಡವರನ್ನು ಗಮನಿಸಿದರೆ ಈ ಮಾತಿನ ಮಹತ್ವ ತಿಳಿಯುತ್ತದೆ. ದುರ್ಬಲ ರಾಜನಿಂದ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ವಿವಿಧ ಮಾಫಿಯಾಗಳ ರಿಮೋಟ್ ಕಂಟ್ರೋಲಿನಲ್ಲಿ ಆಡಳಿತಗಾರರು ಆಡಳಿತ ನಡೆಸಿದರೆ ದೇಶದ ಪ್ರಜೆಗಳು ಅನೇಕ ರೀತಿಯ ಸಂಕಷ್ಟಗಳಿಗೆ ಒಳಪಡುತ್ತಾರೆ. ಇದರ ಅನುಭವ ಜನರಿಗೆ ಈಗಾಗಲೇ ಆಗಿಬಿಟ್ಟಿದೆ, ಆಗುತ್ತಿದೆ. ಗೋಪಾಲಕನಾದವನು ದನ-ಕರುಗಳನ್ನು ಮೇಯಿಸುವ ಸಲುವಾಗಿ ಕಾಡಿಗೆ ಹೋಗದೆ ಊರಿನಲ್ಲೇ ಇರಲು ಇಚ್ಛಿಸಿದರೆ ಪ್ರಯೋಜನವೇನು? ಈಗ ಕಾಡುಗಳೂ ಇಲ್ಲ, ಗೋಮಾಳವೂ ಇಲ್ಲ, ಇನ್ನು ದನ-ಕರುಗಳ ಪಾಡು, ಅವುಗಳನ್ನು ಸಾಕಿದವರ ಪಾಡು ಅನುಭವಿಸಿದವರಿಗೇ ಗೊತ್ತು. ಕ್ಷೌರಿಕನಾದವನು ಊರಿನಲ್ಲಿರದೆ ಕಾಡಿನಲ್ಲಿದ್ದರೆ ಅವನಿಂದ ಏನು ಪ್ರಯೋಜನ ಎಂಬುದು ವಿದುರನ ಪ್ರಶ್ನೆ.
     ೩. ಸತ್ಯ, ದಾನ, ಸೋಮಾರಿಯಾಗದಿರುವುದು, ಅಸೂಯಾಪರನಾಗದಿರುವುದು, ಕ್ಷಮಾಗುಣ, ಧೈರ್ಯ - ಈ ಆರು ಗುಣಗಳನ್ನು ಎಂದಿಗೂ ಬಿಡಬಾರದು. ಒಬ್ಬ ಆದರ್ಶ ವ್ಯಕ್ತಿ ಹೇಗಿರಬೇಕೆಂಬುದಕ್ಕೆ ಇಲ್ಲಿ ತಿಳುವಳಿಕೆಯಿದೆ. ಸತ್ಯವಂತ, ದಾನಶೀಲ ವ್ಯಕ್ತಿಗೆ ಸಮಾಜದಲ್ಲಿ ಮನ್ನಣೆ ಇರುತ್ತದೆ. ಸೋಮಾರಿಯಾದರೆ ಉನ್ನತ ಸ್ಥಿತಿಗೆ ಏರಲಾಗದೆಂಬುದನ್ನು ಹಿಂದೆಯೇ ತಿಳಿದೆವು. ಅಸೂಯೆ ಪಡುವುದು ತನಗಿಂತ ಇನ್ನೊಬ್ಬರು ಮೇಲಿದ್ದಾರೆ ಎಂಬುದನ್ನು ಒಪ್ಪುವವರ ಮತ್ತು ಕೀಳರಿಮೆಯಿಂದ ನರಳುವವರ ಗುಣವಾಗಿರುತ್ತದೆ. ಅಗತ್ಯದ ಸಂದರ್ಭಗಳಲ್ಲಿ ತಪ್ಪುಗಳನ್ನು ಕ್ಷಮಿಸುವ ಉದಾತ್ತತೆಯೊಂದಿಗೆ, ಸವಾಲುಗಳನ್ನು ಎದುರಿಸುವ ಛಲ ಮತ್ತು ಧೈರ್ಯಗಳಿದ್ದರೆ ಅಂತಹವನು ನಾಯಕನೆನಿಸಿಕೊಳ್ಳುತ್ತಾನೆ.
     ೪. ಮನುಷ್ಯನಿಗೆ ಸುಖ-ಸಂತೋಷಗಳನ್ನು ನೀಡುವ ಆರು ಸಂಗತಿಗಳೆಂದರೆ, ಧನಪ್ರಾಪ್ತಿ, ಒಳ್ಳೆಯ ಆರೋಗ್ಯ, ಅನುಕೂಲವತಿ ಜೊತೆಗೆ ಪ್ರಿಯವಾದಿನಿ ಸತಿ, ವಿಧೇಯ ಮಗ, ಧನಸಂಪಾದನೆಗೆ ನೆರವಾಗುವ ವಿದ್ಯೆ. ಇದಕ್ಕೆ ವಿವರಣೆಯ ಅಗತ್ಯ ಕಾಣುವುದಿಲ್ಲ. ಹಣವಿದ್ದವರಿಗೆ ಆರೋಗ್ಯವಿರದಿರುವ, ಆರೋಗ್ಯವಾಗಿರುವವರಿಗೆ ಹಣವಿಲ್ಲದ ಸ್ಥಿತಿ, ಕೌಟುಂಬಿಕ ಸಂಬಂಧಗಳು ಚೆನ್ನಾಗಿಲ್ಲದಿದ್ದರೆ ಎಲ್ಲವೂ ಇದ್ದರೂ ಪ್ರಯೋಜನವಾಗದಂತಹ ಸ್ಥಿತಿಗಳನ್ನು ಕಂಡರೆ ಈ ಸಂಗತಿಗಳ ಮಹತ್ವದ ಅರಿವು ನಮಗಾಗುತ್ತದೆ.
     ೫. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹಗಳ ಮೇಲೆ ಪ್ರಭುತ್ವ ಸಾಧಿಸುವವನು ಪಾಪಗಳಿಂದ ಮುಕ್ತನಾಗಿರುತ್ತಾನೆ. ಇವುಗಳಲ್ಲಿ ಕಾಮವು ಚತುರ್ವಿಧ ಪುರುಷಾರ್ಥಗಳಲ್ಲೂ ಒಂದಾಗಿದೆ. ಸುಕಾಮವು ಮುಕ್ತಿಯೆಡೆಗೆ ಕರೆದೊಯ್ದರೆ ಕುಕಾಮ ಜೀವಿಯನ್ನು ಪಾತಾಳಕ್ಕೆ ಬೀಳಿಸುತ್ತದೆ. ಸಕಲ ಜೀವರಾಶಿಯನ್ನು ಪ್ರೀತಿಸುವ ಸುಮೋಹ ಸಮಾಜವನ್ನು ಒಂದುಗೂಡಿಸುತ್ತದೆ. ಸಂಕುಚಿತ ಮೋಹ ಸಮಾಜಕ್ಕೆ ಕಂಟಕವಾಗುತ್ತದೆ. ಇದೇ ರೀತಿ ಸಾತ್ವಿಕ ಕ್ರೋಧ ಒಳಿತು ತಂದರೆ ವಿನಾಕಾರಣದ, ಸ್ವಾರ್ಥಪರ ಕ್ರೋಧ ಹಾನಿ ತರುತ್ತದೆ. ಆದರೆ ಉಳಿದ ಲೋಭ, ಮದ, ಮತ್ಸರಗಳು ಕೆಡುಕನ್ನೇ ತರುವ ಗುಣಗಳಾಗಿವೆ.
     ೬. ಕಳ್ಳರು ಅಜಾಗರೂಕ ಜನರಿಂದ, ವೈದ್ಯರು ರೋಗಿಗಳಿಂದ, ಕಾಮಿನಿಯರು ಕಾಮುಕರಿಂದ, ಪುರೋಹಿತರು ಯಾಗ ಮಾಡುವವರಿಂದ, ವಿವಾದಗಳಲ್ಲಿ ತೊಡಗಿರುವ ಪ್ರಜೆಗಳಿಂದ ರಾಜ ಜೀವಿತಗಳನ್ನು ಕಂಡುಕೊಳ್ಳುತ್ತಾರೆ. ವಿಚಿತ್ರವೆನಿಸಿದರೂ ಸತ್ಯವಾದ ಮಾತುಗಳಿವು. ಜಾಗೃತರಾಗಿದ್ದಲ್ಲಿ ಕಳ್ಳರಿಗೆ ಅವಕಾಶವಾದರೂ ಎಲ್ಲಿ ಸಿಕ್ಕೀತು? ವಿವಾದಗಳು, ಸಮಸ್ಯೆಗಳು ಇರದಿದ್ದಲ್ಲಿ ಕೋರ್ಟು, ಕಛೇರಿಗಳು, ಪೋಲಿಸ್ ಠಾಣೆಗಳ, ನ್ಯಾಯಾಲಯಗಳ ಅವಶ್ಯಕತೆಯೇ ಬರದು. ಇದನ್ನೇ ಮುಂದುವರೆಸಿ ಹೇಳಬೇಕೆಂದರೆ, ಜನರು ಜಾಗೃತರಾಗಿದ್ದರೆ, ಭ್ರಷ್ಠರು, ಮಾಫಿಯಾಗಳು, ಸ್ವಾರ್ಥಿಗಳು ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಿರುವುದಿಲ್ಲ.
     ೭. ಉಪೇಕ್ಷೆ ಮಾಡಿದರೆ ಗೋವು, ಸೇವೆ, ಕೃಷಿ, ಪತ್ನಿ, ವಿದ್ಯೆ, ಸೇವಕ -  ಈ ಆರು ಸಂಗತಿಗಳು ಕೈಬಿಡುತ್ತವೆ. ನಿರಂತರ ತೊಡಗಿಕೊಳ್ಳುವಿಕೆ, ಮೇಲ್ವಿಚಾರಣೆಯ ಮಹತ್ವವನ್ನು ಈ ನುಡಿ ಬಿಂಬಿಸುತ್ತಿದೆ. ಸರ್ಕಾರ ನಡೆಸುವವರು ಮತ್ತು ಉನ್ನತ ಹುದ್ದೆಗಳಲ್ಲಿರುವವರು ಸಕ್ಷಮರಾಗಿರದಿದ್ದರೆ ಆಡಳಿತ ಕುಸಿಯುತ್ತದೆ, ಅದರ ಪರಿಣಾಮವನ್ನು ಸಾಮಾನ್ಯ ಜನತೆ ಎದುರಿಸಬೇಕಾಗುತ್ತದೆ. ವೈಯಕ್ತಿಕ ಜೀವನದಲ್ಲೂ ಅಷ್ಟೆ, ಗಮನ ಕೊಡದಿದ್ದರೆ ಸೋಲು ಕಾಡದೇ ಇರದು.
     ೮. ವಿದ್ಯಾಭ್ಯಾಸದ ನಂತರ ಶಿಷ್ಯರು ಗುರುವನ್ನು, ವಿವಾಹದ ನಂತರ ಮಕ್ಕಳು ತಾಯಿಯನ್ನು, ಕಾಮವಾಂಛೆ ತೀರಿದ ನಂತರ ಪುರುಷನು ಸ್ತ್ರೀಯನ್ನು, ಕೆಲಸ ಪೂರ್ಣವಾದನಂತರ ಅದಕ್ಕೆ ನೆರವಾದವರನ್ನು, ಹೊಳೆ ದಾಟಿದ ಮೇಲೆ ಅಂಬಿಗನನ್ನು ಮತ್ತು ಕಾಯಿಲೆ ಗುಣವಾದ ನಂತರ ರೋಗಿಯು ವೈದ್ಯನನ್ನು ಉಪೇಕ್ಷಿಸುತ್ತಾರೆ. ಇಂದಿನ ಕಾಲಕ್ಕೂ ವಿದುರನ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ವಿದ್ಯಾಭ್ಯಾಸ ಅನ್ನುವುದು ವ್ಯಾಪಾರವಾಗಿರುವ ಸ್ಥಿತಿಯಲ್ಲಿ ಗುರು-ಶಿಷ್ಯ ಸಂಬಂಧಗಳಿಗೆ ಮಹತ್ವ ಅಳಿಸಿಹೋಗಿಬಿಟ್ಟಿದೆ. ಹಿರಿಯರನ್ನು, ಪೋಷಕರನ್ನು ದೂರವಿಡುವ ಪ್ರವೃತ್ತಿ ಆಘಾತಕರವಾದ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಇರುವ ಸಣ್ಣ ಕುಟುಂಬದಲ್ಲೇ ಸಾಮರಸ್ಯ ಉಳಿಸಿಕೊಳ್ಳುವುದೇ ಹೆಚ್ಚುಗಾರಿಕೆಯಾಗಿದೆ. ಕೆಲಸವಾಗುವವರೆಗೆ ಓಲೈಸುವವರು ಕೆಲಸವಾದ ನಂತರ 'ಯಾರೋ' ಆಗಿಬಿಡುವುದು ಸಾಮಾನ್ಯವಾಗಿದೆ.
     ೯. ಸುಖವೆಂದರೆ ಆರೋಗ್ಯವಾಗಿರುವುದು, ಸಾಲರಹಿತನಾಗಿರುವುದು, ವಿದೇಶಕ್ಕೆ ಹೋಗದಿರುವುದು, ಸಜ್ಜನ ಸಹವಾಸ, ಮನಸ್ಸಿಗೆ ಒಪ್ಪುವ ಕೆಲಸ ಮತ್ತು ಸ್ವಾತಂತ್ರ್ಯ. ಇವುಗಳಲ್ಲಿ ಒಂದೊಂದು ಸಂಗತಿಯೂ ಅನುಭವದ ರಸಘಟ್ಟಿಗಳಾಗಿವೆ. ವಿದೇಶಕ್ಕೆ ಹೋಗದಿರುವುದು ಎಂಬುದು ಚರ್ಚೆಗೊಳಪಡುವ ಸಂಗತಿಯಾಗಿದೆ. 'ಜನನೀ ಜನ್ಮಭೂಮಿ ಸ್ವರ್ಗಾದಪಿ ಗರೀಯಸೀ' ಎಂದು ಹೇಳುವ ನಮಗೆ ವಿದೇಶಗಳಲ್ಲಿನ ಸೌಕರ್ಯಗಳು, ಅವಕಾಶಗಳು ಕೈಬೀಸಿ ಕರೆಯುತ್ತಿರುವುದು ಆಕರ್ಷಣೆಯಾಗಿ ಕಾಣುತ್ತಿರಬಹುದು. ವಿದೇಶಗಳಲ್ಲಿರುವ ನಮ್ಮವರಿಗೆ ತಾಯಿನಾಡಿನ ಹಂಬಲ, ಪ್ರೀತಿ ಎದೆಯಾಳದಲ್ಲಿ ಅಚ್ಚೊತ್ತಿರುತ್ತದೆ. ಏನೇ ಸೌಲಭ್ಯಗಳಿದ್ದರೂ, ಸುಖ-ಸಂತೋಷಗಳಿದ್ದರೂ ತಾಯಿನಾಡಿನ ಸೆಳೆತ ಅಷ್ಟು ಸುಲಭವಾಗಿ ಹೋಗುವಂತಹುದಲ್ಲ. ತಾಯಿ ಹೇಗಿದ್ದರೂ ತಾಯಿಯೇ ಅಲ್ಲವೇ?
     ೧೦. ಅಸೂಯಾಪರರು, ದುರಾಸೆಯವರು, ಅತೃಪ್ತರು, ಶೀಘ್ರಕೋಪಿಗಳು, ಪ್ರತಿಯೊಂದನ್ನೂ ಸಂಶಯ ದೃಷ್ಟಿಯಿಂದ ನೋಡುವವರು, ಇತರರ ಗಳಿಕೆಯಿಂದ ಬಾಳುವವರು- ಈ ಆರು ಗುಣಗಳುಳ್ಳವರು ನಿತ್ಯ ದುಃಖಿಗಳೆಂಬುದು ವಿದುರನ ನುಡಿ. ಮತ್ಸರಿಗಳು ಕೊಟ್ಟಿಗೆಯಲ್ಲಿ ಇರುವ ನಾಯಿಯಂತಹವರು. ನಾಯಿ  ಹುಲ್ಲು ತಿನ್ನುವುದಿಲ್ಲ, ಆದರೆ ಹಸು ಹುಲ್ಲು ತಿನ್ನಲು ಹೋದರೆ ಬೊಗಳಿ ಹಸುವಿಗೂ ಹುಲ್ಲು ತಿನ್ನಲು ಬಿಡುವುದಿಲ್ಲ. ದೇಶ, ಸಮಾಜವನ್ನೇ ಕೊಳ್ಳೆ ಹೊಡೆದು ನೂರಾರು, ಸಾವಿರಾರು ಕೋಟಿ ಹಣವನ್ನು ಅಕ್ರಮವಾಗಿ ಕೂಡಿಟ್ಟುಕೊಂಡವರಿಗೆ ಇನ್ನೂ ಸಾಲದೆಂಬ ಹಪಹಪಿ ಹೋಗುವುದೇ ಇಲ್ಲ. ಜೊತೆಗೆ ಅಕ್ರಮ ಸಂಪತ್ತನ್ನು ಉಳಿಸಿಕೊಳ್ಳುವುದರಲ್ಲೇ ಆಯಷ್ಯ ಸವೆಸಿಬಿಡುತ್ತಾರೆ. ಕೋಪಿಷ್ಟರು, ಸಂಶಯಿಗಳು ಮತ್ತು ಪರಾವಲಂಬಿಗಳಿಗೆ ನೆಮ್ಮದಿ ಅನ್ನುವುದು ಕನಸೇ ಸರಿ.
     ವಿದುರ ಹೇಳಿರುವ ಮೇಲಿನ ಸಂಗತಿಗಳಲ್ಲದೇ ಇಂತಹ ಆರು ಅಂಶಗಳ ಬಗ್ಗೆ ಸಾಕಷ್ಟು ಹೇಳಲ್ಪಟ್ಟಿವೆ. ಉದಾಹರಣೆಗೆ ಹೇಳಬೇಕೆಂದರೆ 'ಷಟ್ಧರ್ಮಯುಕ್ತ' ಪತ್ನಿ ಆದರ್ಶಪ್ರಾಯವೆಂಬ  ಉಕ್ತಿ ಇದೆ. ಆದರ್ಶ ಪತ್ನಿ  ರೂಪದಲ್ಲಿ ಲಕ್ಷ್ಮಿ,  ಊಟಕ್ಕಿಡುವಲ್ಲಿ ತಾಯಿ,  ಶಯ್ಯಾಗೃಹದಲ್ಲಿ ರಂಭೆ, ಸಲಹೆ ನೀಡುವಲ್ಲಿ ಮಂತ್ರಿ, ಭೂಮಿಯಂತೆ ಕ್ಷಮಾಗುಣವುಳ್ಳವಳು, ಕೆಲಸ ಕಾರ್ಯಗಳಲ್ಲಿ ದಾಸಿಯಂತೆ ಇರಬೇಕೆನ್ನುತ್ತದೆ ಆ ಉಕ್ತಿ! ಈಗ ಇದನ್ನು ನಿರೀಕ್ಷಿಸಲಾಗದು.
-ಕ.ವೆಂ. ನಾಗರಾಜ್.
***************
ದಿನಾಂಕ 10.8.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: