ಹಿರಿಯರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ನಮ್ಮ ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಕರಾಗಿ, ಪೋಷಕರಾಗಿ ಹಿರಿಯಣ್ಣನಂತೆ ಹರಿದುಂಬಿಸುತ್ತಲೇ ಬಂದಿದ್ದಾರೆ. ವೇದಭಾರತಿಗೂ ಅವರೇ ಪೋಷಕರು. ನಮ್ಮ ಕೆಳದಿ ಕವಿಮನೆತನದವರ ಕುಟುಂಬ ಸಮಾವೇಶಕ್ಕೆ ಅವರ ಶಾಲೆಯ ಆವರಣ ಬಿಟ್ಟುಕೊಟ್ಟಿದ್ದರು, ಅಗತ್ಯದ ಸಹಕಾರವನ್ನೂ ನೀಡಿದ್ದವರು. ನನ್ನ ಆದರ್ಶದ ಬೆನ್ನು ಹತ್ತಿ . . ಪುಸ್ತಕದ ಬಿಡುಗಡೆಯೂ ಅವರ ಶಾಲಾ ಸಭಾಂಗಣದಲ್ಲೇ ನಡೆದಿತ್ತು. ಪುಸ್ತಕದ ಬೆನ್ನುಡಿ ಬರೆದು ನನ್ನ ಬೆನ್ನು ತಟ್ಟಿದವರು. ಆ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರೆಲ್ಲರನ್ನೂ ಸೇರಿಸಿ ಸಮಾವೇಶ ನಡೆಸಲು ಪ್ರೇರಿಸಿದ್ದಲ್ಲದೆ ಅಂದಿನ ಊಟೋಪಚಾರದ ಹೊಣೆಯನ್ನೂ ವಹಿಸಿಕೊಂಡಿದ್ದವರು. ಹಾಸನದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದವರನ್ನು ಸನ್ಮಾನಿಸಿದವರು. ಇವರು ನೂರಾರು ಜನರಿಗೆ ಪ್ರೋತ್ಸಾಹ, ಸಹಕಾರ ನೀಡಿದವರು. ದಿನಾಂಕ ೨೭.೦೮.೨೦೧೬ರಂದು ಇವರ ಅಭಿಮಾನಿ ಬಳಗದವರು ಹಾಸನದ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ ಸಪ್ತಪದಿ ಸಭಾಂಗಣದಲ್ಲಿ ಇವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ತುಂಬಿ ತುಳುಕಿದ್ದ ಸಭೆಯಲ್ಲಿ ಎಲ್ಲರೂ ಅವರನ್ನು ಹಾಡಿಹೊಗಳಿದವರೇ. ಅದರಲ್ಲಿ ಉತ್ಪ್ರೇಕ್ಷೆಯಾಗಲೀ, ತೋರಿಕೆಯಾಗಲೀ ಇರದೆ ನೈಜ ಅಭಿಮಾನ ಪ್ರಕಟವಾಗಿತ್ತು. ಸ್ವಾಮಿ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಾದ ಪೂರ್ವಕ ಸಂದೇಶ ನೀಡಿದರು. ಆ ಸಂದರ್ಭದಲ್ಲಿ ನಾ ಕಂಡ ಸಿಎಸ್ಕೆ ಎಂಬ ಅಭಿನಂದನಾ ಗ್ರಂಥದ ಬಿಡುಗಡೆಯಾಯಿತು. ಅಭಿನಂದನಾ ಗ್ರಂಥದ ಲೇಖನಗಳ ಸಂಗ್ರಹ, ಪ್ರಸ್ತುತಿ, ಪ್ರಕಟಣೆ, ಸಮಾರಂಭದ ಆಯೋಜನೆಯ ಪ್ರಮುಖ ರೂವಾರಿ ಬಾಲಾಜಿ ಪ್ರಿಂಟರ್ಸಿನ ಮಾಲಿಕ ಮಿತ್ರ ಶ್ರೀ ಎಂ.ಜೆ. ಪಾಂಡುರಂಗರವರು. ೩೮ ಲೇಖನಗಳಿರುವ ಈ ಗ್ರಂಥದಲ್ಲಿ ನನ್ನ ಲೇಖನವೂ ಇದ್ದು, ಅದನ್ನು ಇಲ್ಲಿ ಪ್ರಕಟಿಸಿರುವೆ. ಅನಾರೋಗ್ಯದ ನಡುವೆಯೂ ಮರುದಿನ ವೇದಭಾರತಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ನನ್ನ "ಸಾಧನಾ ಸೋಪಾನಗಳು" ಪುಸ್ತಕದ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಹರಸಿದ್ದರು ಸಿಎಸ್ಕೆ. ಅವರಿಗೆ ನಾನು ಆಭಾರಿ.
ಸಮಷ್ಟಿ ಹಿತಚಿಂತಕ ಸಿ.ಎಸ್. ಕೃಷ್ಣಸ್ವಾಮಿ
ದುದ್ದ ರಸ್ತೆಯ ದುರವಸ್ಥೆಯಿಂದ ದಶಕಗಳಿಂದ ಜನರು ಬಸವಳಿದು ಹೈರಾಣಾಗಿದ್ದಾಗ, ರಾಜಕೀಯ ಮೇಲಾಟಗಳು, ಅಧಿಕಾರಿಗಳ ಅಸಡ್ಡೆಯಿಂದ ಪರಿಹಾರ ಮರೀಚಿಕೆಯೆಂದು ಕಂಡುಬಂದಾಗ ಈ ವ್ಯಕ್ತಿ ಹೋರಾಟದ ಮುಂಚೂಣಿಗೆ ಬಂದು ಜನರನ್ನು ಕೂಡಿಸಿ ಪ್ರತಿಭಟನೆ ಮಾಡುತ್ತಾರೆ, ರಸ್ತೆ ತಡೆ ಚಳುವಳಿ ಮಾಡುತ್ತಾರೆ, ಉರಿಬಿಸಿಲಿನಲ್ಲೇ ಧರಣಿ ಕೂರುತ್ತಾರೆ. ೮೭ ವರ್ಷಗಳ ಈ ವಾಮನಮೂರ್ತಿಯ ಛಲ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಕೋಟ್ಯಾಂತರ ರೂ. ವೆಚ್ಚದಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಸಾಹಿತ್ಯಿಕ ಚಟುವಟಿಕೆಗಳ ಅಭಿವೃದ್ಧಿ ಚಿಂತನೆಗೆ ಉಪಯೋಗಿಸುವ ಬದಲು, ಹಾಸನ ಜಿಲ್ಲೆಯವರೇ ಆದ ಮಹಾನ್ ಸಾಹಿತಿ ಎಸ್.ಎಲ್. ಭೈರಪ್ಪನವರನ್ನು ದೂಷಿಸಲು ಗೌರಿಲಂಕೇಶ್ ಮತ್ತಿತರರು ದುರುಪಯೋಗಪಡಿಸಿಕೊಂಡದ್ದನ್ನು ವಿರೋಧಿಸಿ ಜನರನ್ನು ಸಂಘಟಿಸಿ ಪ್ರತಿಭಟನೆಯ ನೇತೃತ್ವ ವಹಿಸುತ್ತಾರೆ. ಹಾಸನದ ಹೊಸ ಬಸ್ ನಿಲ್ದಾಣದ ಹತ್ತಿರದ ರೈಲು ಹಳಿಗಳ ಮೇಲೆ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯಿಸುವ ಸಲುವಾಗಿ ಚರ್ಚಿಸೋಣ ಬನ್ನಿ ಎಂದು ಹಲವರಿಗೆ ದೂರವಾಣಿ ಮೂಲಕ ಆಹ್ವಾನಿಸುತ್ತಾರೆ. ಇವರು ಮತ್ಯಾರೂ ಅಲ್ಲ, ಎಲ್ಲರೂ ಗುರುಗಳು ಎಂದು ಆತ್ಮೀಯವಾಗಿ ಸಂಬೋಧಿಸುವ ಸಿ.ಎಸ್. ಕೃಷ್ಣಸ್ವಾಮಿಯವರು! ಇಲ್ಲಿ ಉಲ್ಲೇಖಿಸಿರುವುದು ಕೇವಲ ಉದಾಹರಣೆಗಳಷ್ಟೆ. ಇಂತಹ ಅದೆಷ್ಟು ಜನಪರ ಹೋರಾಟಗಳನ್ನು ಇವರು ನಡೆಸಿದ್ದಾರೋ ಲೆಕ್ಕವಿಟ್ಟವರಿಲ್ಲ.
ಇವರ ವಯಸ್ಸಿನ ಇತರ ಹಿರಿಯರನ್ನು ಗಮನಿಸಿದರೆ ಇವರ ಹಿರಿಮೆ ಗೊತ್ತಾಗುತ್ತದೆ. ಇತರ ವಯೋವೃದ್ಧರು ಕಾಯಿಲೆ, ಕಸಾಲೆಗಳಿಂದ ಬಸವಳಿದು, ಸಂಸಾರ ತಾಪತ್ರಯಗಳಿಂದ ನೊಂದು ಬೆಂದು ಮೂಲೆ ಹಿಡಿದಿರುವವರೇ ಹೆಚ್ಚಾಗಿ ಕಂಡುಬರುತ್ತಾರೆ. ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೂ ಇತರರನ್ನು ಆಶ್ರಯಿಸುವ ಸ್ಥಿತಿ ಅವರದಾಗಿರುತ್ತದೆ. ಆದರೆ ಸಿಎಸ್ಕೆಯವರು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಕೊಂಡೇ ಇರುವುದು ವಿಶೇಷ. ಇವರು ಮನೆಯಲ್ಲಿರಲಿ, ಎಲ್ಲೇ ಇರಲಿ, ಒಬ್ಬರಲ್ಲಾ ಒಬ್ಬರು, ಸಂಘ-ಸಂಸ್ಥೆಗಳವರು ಏನಾದರೂ ವಿಷಯದ ಬಗ್ಗೆ ಇವರೊಡನೆ ಚರ್ಚಿಸುತ್ತಿರುವುದು, ಸಲಹೆ, ಸಹಕಾರ ಪಡೆಯುವುದು ಸಾಮಾನ್ಯ ಸಂಗತಿಯಾಗಿದೆ. ಸಾವಿರಾರು ವಿದ್ಯಾರ್ಥಿಗಳು ಓದುತ್ತಿರುವ ಶ್ರೀ ರಾಮಕೃಷ್ಣ ವಿದ್ಯಾಲಯದ ಸ್ಥಾಪಕ ಮತ್ತು ಮುಖ್ಯಸ್ಥರಾಗಿ ಅದರ ಎಲ್ಲಾ ಆಗು-ಹೋಗುಗಳನ್ನು ನೋಡಿಕೊಳ್ಳುವುದರ ಜೊತೆಗೆ ಹತ್ತು-ಹಲವಾರು ಸಂಘ-ಸಂಸ್ಥೆಗಳ ಮುಖ್ಯಸ್ಥರು, ಮಾರ್ಗದರ್ಶಕರಾಗಿರುವುದು ಹೆಗ್ಗಳಿಕೆಯೇ ಸರಿ. ತಮಗೆ ಒಳ್ಳೆಯದೆಂದು, ಸರಿ ಎಂದು ಕಂಡು ಬರುವ ಸಂಗತಿಗಳೆಲ್ಲದಕ್ಕೂ ಇವರು ಹಿಂದೆ ಮುಂದೆ ನೋಡದೆ ಸಹಕಾರ ಕೊಡುತ್ತಾರೆ, ನಾನಿದ್ದೇನೆ, ಮುಂದುವರೆಯಿರಿ ಎಂದು ಹುರಿದುಂಬಿಸುತ್ತಾರೆ. ಇವರ ಈ ಸ್ವಭಾವವನ್ನು ದುರುಪಯೋಗಪಡಿಸಿಕೊಂಡವರೂ ಇರುವುದು ವಿಷಾದದ ಸಂಗತಿ. ಸಾಮಾನ್ಯ ಜನರ ಹಿತದ ಪ್ರಶ್ನೆಗಳು ಎದುರಾದಾಗ ಇವರು ಮೈಕೊಡವಿಕೊಂಡು ಎದ್ದುನಿಂತುಬಿಡುತ್ತಾರೆ, ಇತರರನ್ನೂ ಪ್ರೇರೇಪಿಸಿ ಹೋರಾಟಕ್ಕೆ ಅಣಿ ಮಾಡಿಬಿಡುತ್ತಾರೆ. ಇಂತಹವರು ಇದೀಗ ಅನಾರೋಗ್ಯದಿಂದ ನರಳಿ ಚಿಕಿತ್ಸೆ ಪಡೆಯತ್ತಿದ್ದರೂ ಜಿಲ್ಲೆಯ, ಶಾಲೆಯ ಚಟುವಟಿಕೆಗಳ ಕುರಿತೇ ಅವರ ಮನ ತುಡಿಯುತ್ತಿರುತ್ತದೆ. ತಮ್ಮ ಕಷ್ಟಗಳಿಗಿಂತ ಬಂದವರ ಕಷ್ಟ-ಸುಖಗಳನ್ನು ಕಿವಿಗೊಟ್ಟು ಕೇಳುವ ಮತ್ತು ಸ್ಪಂದಿಸುವ ಇವರ ಗುಣ ಇವರನ್ನು ದೊಡ್ಡವರನ್ನಾಗಿಸಿದೆಯೆಂದರೆ ತಪ್ಪಲ್ಲ.
ಹಲವು ದಶಕಗಳಿಂದ ಇವರ ಮನೆ ಹಾಸನ ಜಿಲ್ಲೆಗೆ ಆಗಮಿಸುವ ಹಲವಾರು ಸಾಧು-ಸಂತರುಗಳಿಗೆ ಆಶ್ರಯ ನೀಡಿದೆ. ಅವರುಗಳು ಬಂದು ಹೋಗುವವರೆಗೆ ಅವರ ಊಟ-ಉಪಚಾರ-ವಸತಿಗಳು ಅಚ್ಚುಕಟ್ಟಾಗಿರುವಂತೆ ವ್ಯವಸ್ಥೆಗೆ ಆಧಾರವಾಗಿರುವ ಇವರು ಅವರುಗಳನ್ನು ಹತ್ತಿರದಿಂದ ಗಮನಿಸಿದ್ದಾರೆ. ಅನೇಕರ ಸ್ವಭಾವ, ನಡವಳಿಕೆಗಳ ಬಗ್ಗೆ ಇವರಿಗೆ ಬೇಸರವಿದೆ. ಆದರೂ ಇವರ ಕೈಂಕರ್ಯಕ್ಕೆ ಬಾಧಕ ಬಂದಿಲ್ಲ. ಅನೇಕ ಸಂಘ-ಸಂಸ್ಥೆಗಳು, ಸಂಘಟನೆಗಳಿಗೆ ಇವರು ಆಧಾರಪ್ರಾಯರಾಗಿದ್ದಾರೆ, ಪೋಷಕರಾಗಿದ್ದಾರೆ. ಒಂದು ಸುಂದರವಾದ ಕಟ್ಟಡವನ್ನು ಕಂಡವರು ಅದರ ಅಂದ-ಚೆಂದಗಳಿಗೆ ಮಾರು ಹೋಗುತ್ತಾರೆ. ಆದರೆ ಆ ಕಟ್ಟಡದ ಆಧಾರವಾದ ಅಡಿಪಾಯ ಮಾತ್ರ ಹೊರಗಣ್ಣುಗಳಿಗೆ ಕಾಣುವುದೇ ಇಲ್ಲ. ಇಂದು ಉಚ್ಛ್ರಾಯ ಸ್ಥಿತಿಯಲ್ಲಿರುವ ಹಲವಾರು ಸಂಸ್ಥೆಗಳು, ಸಂಘಟನೆಗಳ ಕಥೆಯೂ ಇದೇ ಆಗಿದೆ. ಇವುಗಳ ಇಂದಿನ ಸ್ಥಿತಿಗೆ ಸಿಎಸ್ಕೆಯಂತಹವರ ಅಡಿಪಾಯದ ರೀತಿಯ ಸಹಕಾರ, ಪ್ರೋತ್ಸಾಹಗಳು ಕಾರಣವೆಂಬುದನ್ನು ಮರೆಯಬಾರದು. ಸಂಸ್ಥೆಗಳು ಪ್ರಾರಂಭವಾಗಿದ್ದಾಗ ಇದ್ದ ಕಾರ್ಯಕರ್ತರುಗಳ ಜಾಗದಲ್ಲಿ ಹೊಸಬರ ಪ್ರವೇಶವಾಗಿರುವುದು, ಅವರುಗಳಿಗೆ ಹಿರಿಯರ ಕಾರ್ಯದ ಅರಿವು ಇಲ್ಲದಿರುವುದೂ ಒಂದು ಕಾರಣವಿರಬಹುದು. ಇಂದಿನ ರಾಜಕೀಯದಲ್ಲಿ ಯೋಗ್ಯರುಗಳಿಗೆ ಮುಂದೆ ಬರಲು ಅವಕಾಶ ಸೀಮಿತವಾಗಿರುವುದರ ಕುರಿತು ಅವರಿಗೆ ವಿಷಾದವಿದೆ.
ಹಾಸನದ ವೇದಭಾರತೀ ಸಂಸ್ಥೆ ನಾಲ್ಕು ವರ್ಷಗಳ ಹಿಂದೆ ಇವರ ಅಧ್ಯಕ್ಷತೆಯಲ್ಲೇ ಉದ್ಘಾಟಿಸಲ್ಪಟ್ಟಿತು. ಯಾವುದೇ ಜಾತಿ, ಮತ, ಪಂಥ, ಲಿಂಗ ಬೇಧವಿಲ್ಲದೆ ವೇದವನ್ನು ಕಲಿಯಬಯಸುವ ಎಲ್ಲರಿಗೂ ವೇದಾಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟಿರುವ ವೇದಭಾರತಿ ಜೊತೆಜೊತೆಗೆ ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದೆ. ಕಳೆದ ವರ್ಷದಿಂದ ಪ್ರತಿನಿತ್ಯ ಅಗ್ನಿಹೋತ್ರವನ್ನೂ ಸಾಮೂಹಿಕವಾಗಿ ಮಾಡಲಾಗುತ್ತಿದ್ದು, ಇದನ್ನು ರಾಜ್ಯದ ಹಲವೆಡೆ ಜನಪ್ರಿಯಗೊಳಿಸುವ ಕಾರ್ಯ ಸಹ ಆಗುತ್ತಿದೆ. ವೇದಭಾರತಿಯ ಎಲ್ಲಾ ಚಟುವಟಿಕೆಗಳಿಗೆ ಪೋಷಕರಲ್ಲೊಬ್ಬರಾಗಿ ಎಲ್ಲಾ ರೀತಿಯ ಸಹಕಾರವನ್ನು ಸಿಎಸ್ಕೆಯವರು ನೀಡುತ್ತಿರುವುದಕ್ಕೆ ವೇದಭಾರತಿಯ ಕಾರ್ಯಕರ್ತರು ಆಭಾರಿಯಾಗಿದ್ದಾರೆ. ವೇದಭಾರತಿಯ ಯಾವುದೇ ಚಟುವಟಿಕೆಗಳಿಗೆ ಅವರ ಶಾಲಾ ಆವರಣ ಮತ್ತು ಸೌಲಭ್ಯಗಳನ್ನು ಉಚಿತವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದೇ ಅಲ್ಲದೆ ಆರ್ಥಿಕ ಸಹಾಯವನ್ನೂ ಅಗತ್ಯ ಸಂದರ್ಭಗಳಲ್ಲಿ ಮಾಡಿರುತ್ತಾರೆ. ಇವರ ಈ ರೀತಿಯ ಅವರ ಸಹಕಾರ ಕೇವಲ ವೇದಭಾರತಿಗೆ ಅಲ್ಲದೆ ಯಾವುದೇ ಒಳ್ಳೆಯ ಕಾರ್ಯಗಳಿಗೆ ಇರುವುದು ಅವರ ದೊಡ್ಡತನವಾಗಿದೆ. ನಮ್ಮ ಕೆಳದಿ ಕವಿಮನೆತನದ ವಾರ್ಷಿಕ ಸಮಾವೇಶವನ್ನು ಇವರ ಶಾಲಾ ಆವರಣದಲ್ಲೇ ನಡೆಸಲು ಮುಕ್ತ ಅವಕಾಶ ಕಲ್ಪಿಸಿ ಸಹಕರಿಸಿದ್ದು ಒಂದು ಉದಾಹರಣೆಯಷ್ಟೇ.
೧೯೭೫-೭೭ರ ತುರ್ತು ಪರಿಸ್ಥಿತಿ ಕಾಲದ ನನ್ನ ಅನುಭವಗಳ ಮತ್ತು ಹೋರಾಟದಲ್ಲಿ ಹಾಸನ ಜಿಲ್ಲೆಯ ಪಾತ್ರ ಕುರಿತ ನನ್ನ ಪುಸ್ತಕ ಆದರ್ಶದ ಬೆನ್ನು ಹತ್ತಿ . . ಕರಡನ್ನು ಮುದ್ರಣಕ್ಕೆ ಕೊಡುವ ಮುನ್ನ ಅವರಿಗೆ ತೋರಿಸಿ ಆಶೀರ್ವಾದಪೂರ್ವಕವಾಗಿ ಕೆಲವು ನುಡಿಗಳನ್ನು ದಾಖಲಿಸಲು ವಿನಂತಿಸಿದ್ದೆ. ಪುಸ್ತಕ ಓದಿದ ಅವರು ನನಗೆ ಕರೆಕಳುಹಿಸಿ ನನ್ನನ್ನು ಅಪ್ಪಿಕೊಂಡು ಆಶೀರ್ವದಿಸಿದ್ದ ಘಳಿಗೆ ಮರೆಯಲಾರೆ. ಅದರಲ್ಲಿ ಕೃತಕತೆಯ ಲವಲೇಶವೂ ಇರಲಿಲ್ಲ. ರಕ್ಷಾಪುಟದಲ್ಲಿ ಅವರ ಅಭಿಪ್ರಾಯದೊಂದಿಗೆ ಪುಸ್ತಕ ಬಿಡುಗಡೆಯಾಯಿತು. ಬಿಡುಗಡೆಯ ಸಮಾರಂಭದಲ್ಲೇ ೩೦೦ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ಪುಸ್ತಕ ಬಿಡುಗಡೆಯಾದ ರೀತಿಯೂ ವಿಭಿನ್ನವೇ! ಸಂಘದ ಅಖಿಲ ಭಾರತ ಮಟ್ಟ ಶ್ರೀ ಸು. ರಾಮಣ್ಣನವರ ಮತ್ತು ಶ್ರೀ ಸಿಎಸ್ಕೆಯವರ ಆಶಯದಂತೆ ಹಾಸನ ಜಿಲ್ಲೆಯ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಬಂಧನಕ್ಕೊಳಗಾಗಿದ್ದವರ ಸಮಾವೇಶ ಏರ್ಪಾಡಾಗಿ, ಅವರುಗಳ ಸ್ಮರಣೆ, ಸನ್ಮಾನಗಳ ನಡುವೆ ಪುಸ್ತಕ ಬಿಡುಗಡೆಯಾದದ್ದು ವಿಶೇಷ. ಅದೂ ಸಹ ಇವರ ಶಾಲೆಯ ಆವರಣದಲ್ಲಿಯೇ! ಸಮಾರಂಭದ ಅಧ್ಯಕ್ಷತೆ ವಹಿಸಿ ಬೆನ್ನು ತಟ್ಟಿದ್ದ ಇವರ ಗುಣವನ್ನು ಸ್ಮರಿಸಲೇಬೇಕು.
ಆರೋಗ್ಯದ ಸಮಸ್ಯೆ, ವಯಾಧಿಕ್ಯದ ಕಾರಣಗಳಿಂದಾಗಿ ಅಡೆತಡೆಗಳಿದ್ದರೂ ಸಮಷ್ಟಿ ಹಿತದ ಪ್ರಶ್ನೆಗಳು ಬಂದರೆ ಎಲ್ಲವನ್ನೂ ಮರೆತು ಕಿರಿಯರನ್ನೂ ನಾಚಿಸುವಂತೆ ಮುಂದೆ ನಿಂತು ಮಾರ್ಗದರ್ಶನ ಮಾಡುವ ಸಿಎಸ್ಕೆಯವರು ದೀರ್ಘಾಯುಷಿಗಳಾಗಿ, ಆರೋಗ್ಯವಂತರಾಗಲಿ, ಜನಮಾನಸದಲ್ಲಿ ಸದಾ ಉಳಿಯಲಿ ಎಂಬುದು ನನ್ನ ಪ್ರಾರ್ಥನೆಯಾಗಿದೆ.
-ಕ.ವೆಂ.ನಾಗರಾಜ್.
*****************
ಕೆಳದಿ ಕವಿಮನೆತನದವರ ಕುಟುಂಬ ಸಮಾವೇಶದಲ್ಲಿ ಸಿಎಸ್ಕೆ
ನನ್ನ "ಆದರ್ಶದ ಬೆನ್ನು ಹತ್ತಿ . . ." ಪುಸ್ತಕಕ್ಕೆ ಬೆನ್ನುಡಿ ಬರೆದು ಬೆನ್ನು ತಟ್ಟಿದ ಸಿಎಸ್ಕೆ
ತುರ್ತು ಪರಿಸ್ಥಿತಿಯ ಮೆಲುಕು - ಸತ್ಯಾಗ್ರಹಿಗಳಿಗೆ ಸನ್ಮಾನ ಆಯೋಜಿಸಿದ್ದ ಸಿಎಸ್ಕೆ - (10.08.2015)
ನನ್ನ "ಸಾಧನಾ ಸೋಪಾನಗಳು" ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ
ಪುಸ್ತಕ ಬಿಡುಗಡೆ ಮಾಡಿದ ಸಿಎಸ್ಕೆ(28.08.2016)