ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಅಕ್ಟೋಬರ್ 22, 2017

ಕಥೆಯ ಕಥೆ (Story of a story)


     ಮಗುವೊಂದು ರಚ್ಚೆ ಹಿಡಿದು ಅಳುತ್ತಿತ್ತು. ಏನು ಮಾಡಿದರೂ, ಏನು ಕೊಟ್ಟರೂ ಅದಕ್ಕೆ ಸಮಾಧಾನವಾಗುತ್ತಿರಲಿಲ್ಲ. ಯಾರೆಷ್ಟೇ ಪ್ರಯತ್ನಿಸಿದರೂ ಅದಕ್ಕೆ ಏನು ಬೇಕೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ, ಹೇಳಲು ತಿಳಿಯದ ಮಗುವೂ ಅಳು ನಿಲ್ಲಿಸುತ್ತಿರಲಿಲ್ಲ. ಪೇಪರ್ ಓದುತ್ತಾ ಕುಳಿತಿದ್ದ ಮಗುವಿನ ತಾತ ಪೇಪರ್ ತೆಗೆದಿಟ್ಟು, 'ಒಂದೂರಲ್ಲಿ ಒಂದು ಪಾಪ ಇತ್ತಂತೆ, ಆ ಪಾಪು ಏನ್ ಮಾಡ್ತೂ ಅಂದರೆ . .' ಎಂದು ಹೇಳತೊಡಗಿದಾಗ ಮಗು ಅಳು ನಿಲ್ಲಿಸಿ ತಾತನ ಕಡೆಗೆ ಗಮನ ಹರಿಸಿತ್ತು. ತಾತ ಮಗುವನ್ನು ಎತ್ತಿಕೊಂಡು ತೊಡೆಯ ಮೇಲೆ ಕೂರಿಸಿಕೊಂಡು ಕಥೆ ಮುಂದುವರೆಸಿದಾಗ ನಗುತ್ತಾ ಪ್ರತಿಕ್ರಿಯಿಸುತ್ತಿತ್ತು. ಕಥೆ ಕೇಳುತ್ತಾ ಇದ್ದಾಗ ಅಮ್ಮ ಅದಕ್ಕೆ ತುತ್ತು ತಿನ್ನಿಸುತ್ತಿದ್ದರೂ ಗಮನಿಸದೆ ತಿನ್ನುತ್ತಾ ಕಥೆ ಕೇಳುತ್ತಿತ್ತು. ಮಗುವಿನ ಹಸಿವೂ ಹಿಂಗಿತ್ತು, ಮನಸ್ಸಿಗೂ ಹಿತವಾಗಿತ್ತು, ಅಳು ಮರೆತೇ ಹೋಗಿತ್ತು. ತಾತ ಹೇಳಿದ್ದ ಕಥೆಗೆ ತುದಿಯೂ ಇರಲಿಲ್ಲ, ಬುಡವೂ ಇರಲಿಲ್ಲ. ಮಗುವಿಗೆ ಹಿತವಾಗುವ, ಇಷ್ಟಪಡುವ ಸಂಗತಿಗಳು ಮಾತ್ರ ಇದ್ದವು ಅಷ್ಟೆ. ಕಥೆಗಳು ಮಕ್ಕಳಿಗಿರಲಿ, ಎಲ್ಲರಿಗೂ ಇಷ್ಟವಾಗುವುದು ಈ ಕಾರಣಕ್ಕಾಗಿಯೇ, ತಾವು ಇಷ್ಟಪಡುವ ವಿಚಾರ ಅಲ್ಲಿ ಸಿಗುತ್ತದೆ, ಸಿಗಬಹುದು ಎಂಬ ಕಾರಣಕ್ಕಾಗಿ. ನನ್ನ ಚಿಕ್ಕಂದಿನಲ್ಲಿ ಸೋದರಮಾವನೊಬ್ಬ ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಧಾರಾವಾಹಿಯಾಗಿ ಕಟ್ಟುಕಥೆಯನ್ನು ಕಲ್ಪಿಸಿಕೊಂಡು ಸ್ವಾರಸ್ಯಕರವಾಗಿ ಹೇಳುತ್ತಿದ್ದರೆ ದೊಡ್ಡವರೂ ಸಹ ಗುಂಪುಕೂಡಿ ಕೇಳುತ್ತಿದ್ದರು. ಅದನ್ನೇ ಅವನು ಹರಿಕಥೆ ರೂಪದಲ್ಲೂ ಹೇಳುತ್ತಿದ್ದ. ಕಥೆಯನ್ನು ಸ್ವಾರಸ್ಯಕರ ಘಟ್ಟದಲ್ಲಿ ನಿಲ್ಲಿಸಿ, ತನ್ನ ಬಟ್ಟೆ ಇಸ್ತ್ರಿ ಮಾಡುವುದು ಮುಂತಾದ ಸಣ್ಣ ಪುಟ್ಟ ಕೆಲಸಗಳನ್ನು ಮಕ್ಕಳಿಂದಲೇ ಮಾಡಿಸಿಕೊಂಡು ನಂತರ ಕಥೆ ಮುಂದುವರೆಸುತ್ತಿದ್ದ. ಮಕ್ಕಳೂ ಕಥೆ ಕೇಳುವ ಕುತೂಹಲಕ್ಕೆ ದಡಬಡನೆ ಕೆಲಸ ಮುಗಿಸಿ ಓಡಿ ಬಂದು ಕೂರುತ್ತಿದ್ದವು. ಕಥೆಯಲ್ಲಿ ಹುರುಳಿರದಿದ್ದರೂ, ತಿರುಳಿರುತ್ತಿತ್ತು, ಒಳ್ಳೆಯವರಿಗೆ ಮೊದಲು ಕಷ್ಟವಾದರೂ ಕೊನೆಗೆ ಒಳ್ಳೆಯದಾಗುತ್ತದೆ ಎಂಬುದೇ ತಿರುಳು. ಹೇಳುವ ರೀತಿಯಲ್ಲಿ ಆಕರ್ಷಣೆಯಿರುತ್ತಿತ್ತಷ್ಟೆ.
     ಮೇಲಿನ ಉದಾಹರಣೆ ಕೊಡುವುದಕ್ಕೂ ಕಾರಣವಿದೆ. ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಕುರಾನ್ ಇರುವಂತೆ ಹಿಂದೂಗಳ ಪವಿತ್ರ ಗ್ರಂಥ ಯಾವುದು ಎಂದರೆ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ, ಭಗವದ್ಗೀತೆ ಅನ್ನುತ್ತಾರೆ, ರಾಮಾಯಣ ಅನ್ನುತ್ತಾರೆ, ಮಹಾಭಾರತವೆನ್ನುತ್ತಾರೆ, ಶಿವಪುರಾಣ ಅನ್ನುತ್ತಾರೆ, ಹೀಗೆಯೇ ಇನ್ನೇನೋ ಹೇಳುತ್ತಾರೆ. ಆದರೆ ನಿಜವಾಗಿ ಹೇಳಬೇಕೆಂದರೆ ವೇದಗಳು ನಮ್ಮ ಪವಿತ್ರ ಗ್ರಂಥವೆನ್ನಬೇಕು. 5000 ವರ್ಷಗಳ ಹಿಂದೆ ವೇದವ್ಯಾಸರು ವೇದಗಳನ್ನು ಲಿಖಿತರೂಪದಲ್ಲಿ ಲೋಕದ ಮುಂದಿಟ್ಟಿದ್ದು, ಇಂದಿಗೂ ಅದರಲ್ಲಿನ ಸಂಗತಿಗಳಲ್ಲಿ ಒಂದಕ್ಕೊಂದು ವಿರೋಧಾಭಾಸವಾದ ಅಂಶಗಳಿಲ್ಲ, ಲೋಕವಿರೋಧಿ ತತ್ವಗಳಿಲ್ಲ, ಸಕಲ ಜೀವರಾಶಿಯ ಹಿತ, ಶಾಂತಿ ಬಯಸುವ ಸಂಗತಿಗಳೇ ಸೂತ್ರ ರೂಪದಲ್ಲಿವೆ. ಹೀಗೆ ಲಿಖಿತ ರೂಪದಲ್ಲಿ ಬರುವ ಮುನ್ನ ವೇದ ಇರಲಿಲ್ಲವೇ? ಖಂಡಿತ ಇತ್ತು, ಋಷಿಮುನಿಗಳು, ದಾರ್ಶನಿಕರು ಅದನ್ನು ಮೌಖಿಕವಾಗಿ ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಮುಂದುವರೆಸಿಕೊಂಡು ಬರುತ್ತಿದ್ದರು. ಅದನ್ನೇ ವೇದವ್ಯಾಸರು ಜಗತ್ತಿಗೆ ಲಿಖಿತರೂಪದಲ್ಲಿ ಅರ್ಪಿಸಿದ್ದರು. ವೇದಗಳ ನಂತರದ ಸಾಹಿತ್ಯಗಳೇ, ಉಪನಿಷತ್ತುಗಳು, ಪುರಾಣಗಳು, ಪುಣ್ಯಕಥೆಗಳು, ರಾಮಾಯಣ, ಮಹಾಭಾರತದಂತಹ ಇತಿಹಾಸಗಳು, ಇತ್ಯಾದಿ. ಇವುಗಳು ವೇದದ ಸಾರವನ್ನು ಕಥೆ, ಪುರಾಣಗಳ ರೂಪದಲ್ಲಿ ತಿಳಿಸುವ ಪ್ರಯತ್ನಗಳು. ಅದನ್ನು ಹೇಳುವವರ, ಅರ್ಥೈಸುವವರ ಅನುಸಾರವಾಗಿ ಕೆಲವೊಮ್ಮೆ ವಿರೋಧಾಭಾಸಗಳೂ ಕಂಡುಬರುತ್ತವೆ. ಆದರೆ, ಮೂಲವೇದಗಳಲ್ಲಿ ಅಂತಹ ವಿರೋಧಾಭಾಸಗಳಿಲ್ಲ. ಆದ್ದರಿಂದ ವೇದಗಳೇ ಹಿಂದೂಗಳ ಧರ್ಮಗ್ರಂಥವೆಂದು ಕರೆಯಲ್ಪಡಲು ಅರ್ಹವಾಗಿದೆ. ವೈಚಾರಿಕತೆಗೆ ಮುಕ್ತ ಅವಕಾಶವಿರುವ ಚಲನಶೀಲ ಸನಾತನ ಧರ್ಮ, ಸ್ವಂತ ಅಧ್ಯಯನದಿಂದ ಸತ್ಯಾನ್ವೇಷಣೆಗೆ ಪ್ರೇರಿಸುವ ಧರ್ಮ ಬಹುಷಃ ಜಗತ್ತಿನಲ್ಲಿ ಇದೊಂದೇ ಆಗಿದೆ.
     ಅನೇಕ ಪುರಾಣಗಳಲ್ಲಿ ನಂಬಲು ಅಸಾಧ್ಯವೆನಿಸುವ, ಅರ್ಥರಹಿತವೆನಿಸುವ ಕೆಲವು ಘಟನೆಗಳ ಉಲ್ಲೇಖ ಕಂಡುಬರುತ್ತದೆ. ಇತರರು ಅದನ್ನು ಕುರಿತು ಗೇಲಿ ಮಾಡಿದರೆ, ಅದನ್ನು ಸಮರ್ಥಿಸಲು ಪಂಡಿತರು ಸಕಾರಣಗಳನ್ನು ಮುಂದಿಟ್ಟರೆ, ಸಾಮಾನ್ಯರು ಸುಮ್ಮನಾಗುವ ಸಂಗತಿಗಳೂ ಇವೆ. ಈ ಪುರಾಣ, ಪುಣ್ಯಕಥೆಗಳನ್ನು ಆಧರಿಸಿ ಅನೇಕ ಸಂಪ್ರದಾಯ, ಹಬ್ಬಗಳನ್ನೂ ಆಚರಿಸಲಾಗುತ್ತಿದೆ. ತಲೆ ತಲಾಂತರದಿಂದ ಆಚರಿಸಿಕೊಂಡು ಬರುವ ಸಂಪ್ರದಾಯಗಳ ಅರ್ಥಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಂದುವರೆಸಿಕೊಂಡು ಬರುವವರ ಸಂಖ್ಯೆ ಎಲ್ಲಾ ಧರ್ಮ, ಜಾತಿಗಳಲ್ಲೂ ಕಂಡುಬರುತ್ತದೆ. ಇಲ್ಲಿ ಇನ್ನೊಂದು ಅಂಶವನ್ನೂ ಪರಿಗಣಿಸಬೇಕಿದೆ. ವೇದದ ಸ್ಪಷ್ಟ, ನೇರ ವಿಚಾರಗಳು ಅಷ್ಟು ಸುಲಭವಾಗಿ ಜನರಿಗೆ ತಲುಪಲಾರವು. ಅಲ್ಲದೆ ಅಂತಹ ಸಂಗತಿಗಳು ಜನರಿಗೆ ರುಚಿಸುವುದೂ ಸುಲಭವಲ್ಲ. ಹಾಗಾಗಿ ರಂಜನೀಯವಾಗಿ ಕಥೆ, ಪುರಾಣಗಳ ರೂಪದಲ್ಲಿ ಹೇಳಿದರೆ ಜನರಿಗೆ ಪ್ರಿಯವೆನಿಸುವುದಲ್ಲದೆ, ಆ ಮೂಲಕ ವಿಚಾರಗಳನ್ನು ತಲುಪಿಸಬಹುದೆಂಬುದು ಇದರ ಉದ್ದೇಶವಿರಬಹುದು. ಕಥೆಗಳನ್ನು ಕೇಳುವವರ ಮನೋಸ್ಥಿತಿ, ಇಷ್ಟಾನಿಷ್ಟಗಳನ್ನು ಅನುಸರಿಸಿ ಹೇಳಬೇಕಾಗುತ್ತದೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೂ, ಪದವಿ ಮಟ್ಟದಲ್ಲಿ ಓದುವ ವಿದ್ಯಾರ್ಥಿಗೂ ಒಂದೇ ರೀತಿಯಲ್ಲಿ ಪಾಠ ಹೇಳಿಕೊಡಬಹುದೆ? ಪುರಾಣಗಳು ಇತ್ಯಾದಿ ವೇದೋತ್ತರ ಕಾಲದ ರಚನೆಗಳನ್ನು ಒತ್ತಟ್ಟಿಗಿಟ್ಟರೆ, ಮೂಲವೇದಗಳಲ್ಲಿ ಸಕಲರ ಹಿತವೇ ಪ್ರಧಾನವಾಗಿರುವ ಸಂಗತಿಗಳಷ್ಟೇ ಕಂಡುಬರುತ್ತವೆ. ವೇದಗಳು ಸಾರುವ ಮಾನವಧರ್ಮದ ಸಾರ ಅರ್ಥ ಮಾಡಿಕೊಂಡರೆ ಯಾವ ಬೇರೆ ಧರ್ಮವೂ, ಹೊಸತಿರಲಿ, ಹಳೆಯದಿರಲಿ ಅಗತ್ಯವಿರುವುದಿಲ್ಲ.
     ಪುರಾಣ, ಪುಣ್ಯಕಥೆಗಳ ವಿಚಾರದಲ್ಲಿ ಹೇಳಬೇಕೆಂದರೆ, ಅವು ಸಾರುವ ತಿರುಳಿನ ಕಡೆಗೆ ಲಕ್ಷ್ಯವಹಿಸಬೇಕೇ ಹೊರತು, ಅಲ್ಲಿ ಬರುವ ಕೆಲವು ಸಂಗತಿಗಳ ಕುರಿತು ಅದು ಏಕೆ, ಹೇಗೆ ಎಂದು ಚರ್ಚಿಸಹೊರಟರೆ ನಾವು ಎಲ್ಲಿಗೂ ತಲುಪಲಾರೆವು. ಮಕ್ಕಳಿಗೆ ವರ್ಣಮಾಲೆ ಕಲಿಸುವಾಗ ಅ-ಅಗಸ, ಆ-ಆನೆ ಇತ್ಯಾದಿ ಹೇಳಿಕೊಡುತ್ತೇವೆ. ಇಂಗ್ಲಿಷಿನಲ್ಲಾದರೆ ಎ ಫಾರ್ ಆಪಲ್, ಬಿ ಫಾರ್ ಬಾಲ್, ಹೀಗೆ ಕಲಿಸುತ್ತೇವೆ. ಅಗಸ, ಆನೆಗಳಿಗೂ, ಅಆಇಈಗೂ, ಆಪಲ್, ಬಾಲ್‌ಗಳಿಗೂ ಎಬಿಸಿಡಿಗೂ ಏನಾದರೂ ಸಂಬಂಧವಿದೆಯೇ? ಮಕ್ಕಳಿಗೆ ಕಲಿಯುವ ಆಸಕ್ತಿ ಬರುವ ಸಲುವಾಗಿ ಹೀಗೆಲ್ಲಾ ಮಾಡುತ್ತೇವೆ. ಪುರಾಣ, ಪುಣ್ಯಕಥೆಗಳೂ ಅಷ್ಟೆ, ನಮ್ಮ ಸಾಧನೆಗೆ ಮೆಟ್ಟಲುಗಳಷ್ಟೆ. ಅಲ್ಲಿಂದ ಮುಂದಕ್ಕೆ ಹೋಗಬೇಕು. ಮೆಟ್ಟಲುಗಳಲ್ಲಿಯೇ ಕುಳಿತು ಬಿಟ್ಟರೆ ಮೇಲೇರುವುದಾದರೂ ಹೇಗೆ?
     ಭಗವದ್ಗೀತೆಯೂ ಒಂದು ಕಥೆಯೇ! ಮಹಾಭಾರತದ ಒಂದು ಭಾಗವಾದ ಇದು ಪಾಂಡವರು ಮತ್ತು ಕೌರವರ ನಡುವೆ ರಣರಂಗದಲ್ಲಿ ಏನು ನಡೆಯುತ್ತಿದೆಯೆಂಬುದನ್ನು ತನ್ನ ದಿವ್ಯದೃಷ್ಟಿಯಿಂದ ಸಂಜಯ ಧೃತರಾಷ್ಟ್ರನಿಗೆ ವಿವರಿಸುವ ಕಥೆ! ಅದರಲ್ಲಿ ಬರುವ ಅನೇಕ ಸಂಗತಿಗಳು, ವಿಚಾರಗಳು ಮೌಲ್ಯವನ್ನು ಪ್ರತಿಪಾದಿಸುವಂತಹವು, ಉತ್ತಮ, ಉನ್ನತ ಸ್ಥಿತಿಗೆ ಏರಲು ಪ್ರಚೋದಿಸುವಂತಹವು. ನಾವು ಆರಿಸಿಕೊಳ್ಳಬೇಕಾದುದು, ಅಳವಡಿಸಿಕೊಳ್ಳಬೇಕಾದುದು ಇವುಗಳನ್ನೇ ಹೊರತು, ಹಾಗೆ ನಡೆಯಿತೋ, ಇಲ್ಲವೋ, ಅದು ಸಾಧ್ಯವೇ, ಇತ್ಯಾದಿ ಒಣತರ್ಕದಲ್ಲಿ ತೊಡಗಿದರೆ ಪ್ರಯೋಜನ ಶೂನ್ಯ. ಋಗ್ವೇದದ ಈ ಮಂತ್ರ ನಾವು ಸಾಗಬಹುದಾದ ದಾರಿಯನ್ನು ತೋರಿಸುತ್ತಿದೆ: 'ಯತ್ ಪೂರ್ವ್ಯಂ ಮರುತೋ ಯಚ್ಛ ನೂತನಂ ಯದುದ್ಯತೇ ವಸವೋ ಯಚ್ಚ ಶಸ್ಯತೇ| ವಿಶ್ವಸ್ಯ ತಸ್ಯ ಭವಥಾ ನವೇದಸಃ ಶುಭಂ ಯಾತಾಮನು ರಥಾ ಅವೃತ್ಸತ||' ಹೇ ಮಾನವರೇ, ಯಾವುದು ಪ್ರಾಚೀನವೋ ಅದನ್ನು ಗಮನಿಸಿರಿ. ಇತಿಹಾಸದಿಂದ ಪಾಠ ಕಲಿಯಿರಿ. ಯಾವುದು ನೂತನವೋ ಅದನ್ನೂ ಕೇಳಿರಿ. ಯಾವುದು ಶಾಸ್ತ್ರ ರೂಪದಲ್ಲಿ ಹೇಳಿದೆಯೋ ಅದನ್ನೂ ಕೇಳಿ. ನಿಮ್ಮ ಅಂತರಂಗ ನಿಮಗೆ ಏನು ಹೇಳುತ್ತದೋ ಅದನ್ನೂ ಕೇಳಿ. ಯಾರು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿದ್ದಾರೋ ಅವರ ಹಿಂದೆಯೇ ನಿಮ್ಮ ಜೀವನ ರಥಗಳೂ ಸಾಗಲಿ ಎಂಬುದು ಇದರ ಅರ್ಥ. ವಿವೇಚಿಸಿ ಮುನ್ನಡೆಯುವ ಉದಾತ್ತತೆ ನಮ್ಮಲ್ಲಿ ಒಡಮೂಡಲಿ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ